Sunday, 27 December 2020

 ನನಗೂ ಆತ್ಮವಿದೆ..ಅದಕ್ಕೂ ಒಂದು ಕಥೆ ಇದೆ.

ಮನೆ  ಮನೆ ಕಥೆ ..

1994 ಸೆಪ್ಟಂಬರಿನಲ್ಲಿ ನನ್ನ ಓದಿನ ವಿಚಾರದಲ್ಲಿ ಮನೆ ಮಂದಿಯನ್ನು ಎದುರು ಹಾಕಿಕೊಂಡು ಖಾಲಿ ಕೈಯಲ್ಲಿ‌ ಮನೆ ಬಿಟ್ಟು ಕಟೀಲಿಗೆ ಬಂದಿದ್ದೆವು.ಆ ದಿನ ಅಮವಾಸ್ಯೆ ಆಗಿತ್ತು  ಆದರೆ ಅಮವಾಸ್ಯೆ ಕೂಡಾ ನಮಗೆ ಅಮೃತ ಗಳಿಗೆ ಫಲ ನೀಡಿತ್ತು. 


1998 ರಲ್ಲಿ ಮಂಗಳೂರಿನಲ್ಲಿ ನಾವೊಂದು ಪ್ಲಾಟ್ ತಗೊಂಡಿದ್ದೆವು.ನೋಡಲು ತುಂಬಾ ಚೆನ್ನಾಗಿತ್ತು‌


ಆ ಪ್ಲಾಟನ್ನು ಮೊದಲು ಬುಕ್ ಮಾಡಿದವರ ತಾಯಿಗೆ ಕ್ಯಾನ್ಸರ್ ಬಂತು ಹಾಗೆ ದುಡ್ಡು ಹೊಂದಿಸಲಾಗಲಿಲ್ಲ ಎಂದು ನಮಗೆ ಮಾರಿದ್ದರು. ಈ ವಿಚಾರ ನಮಗೆ ಮತ್ತೆ ಗೊತ್ತಾಯಿತು.

ಅದಕ್ಕೆ ಸರಿಯಾಗಿ ನಮಗೆ ಈ ಮನೆ  ತಗೊಂಡ ಮೇಲೆ ತುಂಬಾ ನಷ್ಟ ಬಂತು.ಅದು ದಕ್ಷಿಣ ದಿಕ್ಕಿನ ಬಾಗಿಲಿನ ಮನೆ.ಅದು ದೋಷಕರ ಎಂದು ಯಾರೊ ಹೇಳಿದರು.ಅದು ಗ್ರೌಂಡ್ ಪ್ಲೋರ್ ಅಗಿದ್ದು ಅದಕ್ಕೆ ಇನ್ನೊಂದು ಹಿಂದಿನ ಬಾಗಿಲು ಇತ್ತು 

ನಡುವೆ ಒಂದೆಡೆ ಬಾಗಿಲು ಹಾಕಿ ಮುಚ್ಚಿದರೆ ಹಾಲು ಮತ್ತು ಒಂದು ರೂಮು ,ಒಂದು ಡೈನಿಂಗ್ ಹಾಲ್ ಕಿಚನ್ ಮತ್ತು ರೂಮು,ಬಾತ್ ರೂಮು  ಬೇರೆ ಮಾಡುವ ಹಾಗೆ ಇತ್ತು.ನಾವು ಹಾಗೆ ಮಾಡಿ ಎದುರಿನ ಭಾಗ ಓದುವ ಹುಡುಗರಿಗೆ ಬಾಡಿಗೆಗೆ ಕೊಟ್ಟೆವು.


ಈ ಮನೆ ತಗೊಳ್ಳುವಾಗಲೇ ಇದನ್ನು ಎರಡು ಭಾಗ ಮಾಡಿ ಬಾಡಿಗೆ ಕೊಡಬಹುದು ಎಂದು ಯೋಚಿಸಿಯೇ ತಗೊಂಡಿದ್ದೆವು.

ಈ ಮನೆ ತಗೊಂಡಾಗ ಇಷ್ಟು ದೊಡ್ಡ ಮನೆಯ ಅಗತ್ಯ ಇರಲಿಲ್ಲ ಎಂದು ಕೊಂಕಾಡಿದ ನೆಂಟರೂ ಇದ್ದರು.


ಅವರು ನಮ್ಮ ಈಗಿನ ಮನೆ ನೋಡಿದರೆ ಏನನ್ನುತ್ತಿದ್ದರೊ ಗೊತ್ತಿಲ್ಲ.ಅವರಿನ್ನು ನೋಡಿಲ್ಲ.


ನಮ್ಮನ್ನು ಯಾವುದಕ್ಕು ಆಗದವರೆಂದುಕೊಂಡಿದ್ದರೋ ಏನೋ ಗೊತ್ತಿಲ್ಲ.

ಒಮ್ಮೆ ಮಾತಿನ ನಡುವೆ ನಾದಿನಿ ಕೈಯಲ್ಲಿ ಸಣ್ಣ ಪೋರ್ಟೆಬಲ್ ಟಿವಿಯನ್ನು ತೋರಿಸಿ ಸಣ್ಣ ಟಿವಿ ಕೂಡ ಇದೆ ಕಡಿಮೆಗೆ ಸಿಗುತ್ತದೆ ಎಂದು ಸಲಹೆ ನೀಡಿದ್ದಳು.ನಮಗೆ ದೊಡ್ಡ ಟಿವಿ ಖರೀದಿಸಲು ಸಾದ್ಯವಾಗಲಾರದು ಎಂದು ಕೊಂಡಿದ್ದರೋ ಏನೊ‌


ಇರಲಿ

ವಾಸ್ತು ದೋಷ ಇದೆಯೋ ಇಲ್ಲವೋ ಗೊತ್ತಿಲ್ಲ..ನಮ್ಮ ಅರಿವಿಗೆಟುಕದ ಅನೇಕ ವಿಚಾರಗಳಿರುತ್ತದೆ.ಇವನ್ನೆಲ್ಲ ಇದೆಯೋ ಇಲ್ಲವೊ ಎಂದು ಪರೀಕ್ಷಿಸುವ ಜಿದ್ದು ನಮಗಿಲ್ಲ.ನಮ್ಮ ಬದುಕು ಪ್ರಯೋಗ ಶಾಲೆಯಲ್ಲ.ಹಾಗಾಗಿ ನಾವು ಹಿಂದಿನ ಉತ್ತರ ದಿಕ್ಕಿನ ಬಾಗಿಲಿನಿಂದ ಓಡಾಡಿದೆವು.


ನಂತರ ಕಾಕತಾಳೀಯವೋ ಎಂಬಂತೆ  ನಾವು ಸುಧಾರಿಸಿದೆವು.

ಆದರೆ ಅ ಅಪಾರ್ಟ್ ಮೆಂಟು ಕಟ್ಟಿಸಿ ಮಾರಿದವರು   ಬಹಳ ಕಳಪೆ ಮಾಡಿ ದ್ರೋಹ ಮಾಡಿದ್ದರು.( ಈ ಬಗ್ಗೆ ದೊಡ್ಡ ಕಥೆಯೇ ಇದೆ.ಜನ್ನೊಂದಿನ ತಿಳಿಸುವೆ ) 


ನೆಲಕ್ಕೆ ಬಿಳಿಯ ಬಣ್ಣದ ಮೊಸಾಯಿಕ್ ಹಾಸಿದ್ದರು.ಅದರ ಅಡಿಯಿಂದ ನೀರೆಳೆದು ಅಥವಾ ಇನ್ನೇನೋ ಕಾರಣಕ್ಕೆ ಕಪ್ಪು ಕಲೆ ಹರಡಿ ಕೊಳಕು ಕಾಣುತ್ತಿತ್ತು.


 ಆ ಮನೆಯ ಕರೆಂಟ್ ಸ್ವಿಚ್ ಗಳೆಡೆಯಿಂದ ಒರಳೆ / ಗೆದ್ದಲು ಬರಲು ಶುರು ಆಯಿತು.ಹಾಗಾಗಿ ಅದನ್ನು ನಾವು ತಗೊಂಡ ಬೆಲೆಗೆ ಮಾರಾಟ ಮಾಡಿದ್ದೆವು.( ಆದರೆ ಅಷ್ಟು ಸಮಯ ನಮಗೆ ಬಾಡಿಗೆ ಬಂದದ್ದರಿಮದ ಒಟ್ಟಾರೆರೆಯಾಗಿ ಲೆಕ್ಕ ಹಾಕುವಾಗ ಲಾಭವೇ ಅಗಿತ್ತು )ಇರುವ ವಿಚಾರವನ್ನು ನಾವು ಮುಚ್ಚಿಟ್ಟಿರಲಿಲ್ಲ.ಅವರಿಗೆ ವಾಸ್ತು ಬಗ್ಗೆ ನಂಬಿಕೆ ಇರಲಿಲ್ಲ.

ಮೊಸಾಯಿಕ್ ಮೇಲೆ ಟೈಲ್ಸ್ ಅತವಾ ಗ್ರಾನೈಟ್ ಹಾಸಿ ನೆಲದ ಕಲೆಯ ಸಮಸ್ಯೆಯನ್ನು ಬಗೆಹರಿಸಬಹುದೆಂದು ಕಡಿಮೆ ಬೆಲೆಗೆ ಸಿಕ್ಕ ಮನೆಯನ್ನು  ಅವರು ಖರೀದಿಸಿದ್ದರು.


ಆದರೆ ಅವರು ಕೂಡಾ ಅದನ್ನು ಬೇರೆಯವರಿಗೆ ಮಾರಾಟ ಮಾಡಿದರು.ಅವರ ಕೈಯಿಂದ ತಗೊಂಡವರು ಮತ್ತೆ ಮಾರಾಟ ಮಾಡಿದ್ದರು.ಯಾಕೆಂದು ಗೊತ್ತಿಲ್ಲ.


ಆಗ ತಗೊಂಡವರ ಮಗಳ ಗಂಡ ಅಕ್ಸಿಡೆಂಟ್ ನಲ್ಲಿ ತೀರಿ ಹೋದರು..


ಆ ಮನೆಯ ದಕ್ಷಿಣ ಬಾಗಿಲಿಗೆ ಏನು ದೋಷವೋ ಗೊತ್ತಿಲ್ಲ.

ಆದರೆ ನಮ್ಮ‌ಮನೆಗೆ ಸೇರಿದ ಇನ್ನೊಂದು ಮನೆ ಇದೆ.ಅದು ದಕ್ಷಿಣ ಬಾಗಿಲಿನ ಮನೆಯಲ್ಲ.

ಅಲ್ಲಿ ಕೂಡಾ ದುರಂತಗಳ ಸರಮಾಲೆಯೇ ನಡೆದಿದೆ.

ಅದನ್ನು ಮೊದಲು ತಗೊಂಡವರು ಬೇರೊಬ್ಬರಿಗೆ ಮಾರಾಟ ಮಾಡಿದ್ದರು.ಅಲ್ಲಿ ತಗೊಂಡವರ ವಯಸ್ಸಾದ ತಂದೆ ತಾಯಿ ಇದ್ದರು .ಅವರ ಇಬ್ಬರು ಮಕ್ಕಳು ಒಬ್ಬರಾದ ನಂತರ ಇನ್ನೊಬ್ಬರು ಸಣ್ಣ ವಯಸ್ಸಿನಲ್ಲಿಯೇ ಈ ವೃದ್ದ ತಂದೆ ತಾಯಿಯರ ಕಣ್ಣೆದುರೇ ಸಾವನ್ನಪ್ಪಿದ್ದರು.

.ಇಷ್ಟೆಲ್ಲ ನೋಡಿದ ಮೇಲೂ ವಾಸ್ತುವನ್ನು ತೀರಾ ಅಲ್ಲಗಳೆಯುವುದು ಹೇಗೆ ಅಲ್ವಾ ?

ಅದರೆ ನಮ್ಮ ಮನೆಯ ಅರ್ಧ ಭಾಗದಲ್ಲಿ  ಬಾಡಿಗೆಗೆ ಇದ್ದ ಹುಡುಗರಿಗೆ ಯಾವುದೇ ಸಮಸ್ಯೆ ಬಂದಿರಲಿಲ್ಲ .

ಅವರ ನಂತರ ಒಂದು  ದಂಪತಿಗಳು ಒಂದು ವರ್ಷ ಇದ್ದರು.ಅವರಿಗೂ ಏನೂ ಸಮಸ್ಯೆ ಆಗಲಿಲ್ಲ


ಹಾಗಾಗಿ ವಾಸ್ತುದೋಷ ಎಂಬುದನ್ನು ಹೇಗೆ ನಂಬುದು ? ಏನೇ ಅದರೂ ವಿಷ ಪರೀಕ್ಷೆ ಯಾಕೆ ? ವಾಸ್ತು ಪ್ರಕಾರ ಕಟ್ಟಿಸಿದರೆ ಸಮಸ್ಯೆ ಇಲ್ಲ ಹಾಗಾಗಿ ನಾವು ಈಗಿನ ಮನೆಯನ್ನು ವಾಸ್ತು ಪ್ರಕಾರ ಕಟ್ಟಿಸಿದ್ದೇವೆ .

ನಮಗೆ ವಾಸ್ತುವುನ ಬಗ್ಗೆ ಸಲಹೆ ಕೊಟ್ಟವರು ನೆಲಮಂಗಲ ಕಾಲೇಜಿನ ಹಿರಿಯ ಸಹೊದ್ಯೋಗಿ ಪ್ರಭಾಕರ ಸರ್.

ಇದು ಪಶ್ಚಿಮದಿಂದ ಪೂರ್ವಕ್ಕೆ ತಗ್ಗಾಗಿರುವ ,ಉತ್ತರದಿಮದ ದಕ್ಷಿಣಕ್ಕೆ ನೀರು ಹರಿದು ಹೋಗುವ ಸೈಟ್.ಬಹಳ ಅದೃಷ್ಟ ತರುತ್ತದೆ.ಇದನ್ನು ಎಂದಿಗೂ ಮಾರಾಟಮಾಡಬೇಡಿ ಎಂದೂ ಅವರು ಹಿತನುಡಿದಿದ್ದರು.

ನಾವು ಈ ಜಾಗವನ್ನು ಮಾರಾಟ ಮಾಡಿ ನೆಲಮಂಗಲ ಸಮೀಪ ಜಾಗ ಕೊಂಡು ಮನೆ ಕಟ್ಟಿಸುವ ಬಗ್ಗೆ ಅಲೋಚಿಸುತ್ತಿದ್ದೆವು.ಈ ಸಮಯದಲ್ಲಿ ನಮ್ಮ ಸೈಟಿನ ವಾಸ್ತುವನ್ನು ನೋಡಿ ಮಾರಾಟ ಮಾಡಬೇಡಿ,ಕೆಳಗೆ ಕಮರ್ಷಿಯಲ್ ಮಾಡಿ ಮೇಲ್ಭಾಗ ಮನೆ ಕಟ್ಟಲು ಪ್ರಭಾಕರ ಸರ್ ತಿಳಿಸಿದ್ದರು.

ಹಾಗೆ ಅವರ ಸಲಹೆಯಂತೆ ವಾಸ್ತುವಿಗೂ ಧಕ್ಕೆ ಆಗದಂತೆ ನಾನೇ ಪ್ಲಾನ್ ಹಾಕಿ ಅದಕ್ಕನುಗುಣವಾಗಿ ಕಟ್ಟಿಸಿದೆವು..

ವಾಸ್ತುವೋ,ದೇವರ ದಯವೋ ಗೊತ್ತಿಲ್ಲ ಈ ಸೈಟಿನಲ್ಲಿ 2003 ರಲ್ಲಿ ನಾವು ಮಂಗಳೂರಿನಲ್ಲಿ ಇದ್ದಾಗಲೇ ಮನೆ ಕಟ್ಟದಿದ್ದರೆ ಜಾಗ ಹೋಗುತ್ತದೆ ಎಂದು ಸಣ್ಣದೊಂದು ಎರಡು ಕೊಠಡಿಯ ಮನೆ ಕಟ್ಟಿದ್ದೆವು.ಅದಕ್ಕೆ ಎರಡು  ಬಾಗಿಲು ಗಳಿದ್ದವು.ಒಂದು ಉತ್ತರ ದಿಕ್ಕಿಗೆ ,ಮುಖ್ಯ ಬಾಗಿಲು ಪೂರ್ವ - ದಕ್ಷಿಣ ದಿಕ್ಕಿನಲ್ಲಿತ್ತು‌

ಆ ಮನೆಯನ್ನು ಕೆಡವದೆ ಸುತ್ತ ಪಿಲ್ಲರ್ ಹಾಕಿ ಎತ್ತರಿಸಿ  ಈಗಿನ ಮನೆ ಕಟ್ಟಿದೆವು.ಆ ಮನೆಯ  ಪೂರ್ವ ಬಾಗಿಲನ್ನು ತೆಗೆದು ಗೋಡೆ ಹಾಕಿ ಉತ್ತರದ ಬಾಗಿಲನ್ನು ಪ್ರವೇಶ ದ್ವಾರ ಮಾಡಿದೆವು.

 ಈ ಮನೆಗೆ ಬಂದ  ನಂತರ ನಮಗೆ  ಯಾವುದಕ್ಕೂ  ಕೊರತೆ  ಕಾಡಿಲ್ಲ..

ಕೊನೆ ತನಕ ದೇವರು ಇದೇ ರೀತಿ ನಡೆಸಿದರೆ ಸಾಕು ಎಂಬ ಪ್ರಾರ್ಥನೆ ನಮ್ಮದು‌.

No comments:

Post a Comment