Tuesday, 29 December 2020

ನನಗೂ ಆತ್ಮವಿದೆ..ಅದಕ್ಕೂ ಒಂದು ಕತೆಯಿದೆ: ತಾಯಿಯನ್ನೂ ಅಪಶಕುನ ಎಂದಿದ್ದರು

 ಸತೀ ಪದ್ದತಿ ಮುಸ್ಲಿಂ ಅಕ್ರಮಣಕಾರರಿಂದಾಗಿ ಬಂತು.ಅವರ ದೌರ್ಜನ್ಯಕ್ಕೆ ಹೆದರಿ ವಿಧವೆಯರು ಗಂಡನ ಚಿತೆಗೆ ಹಾರಿ ಸಾಯುತ್ತಿದ್ದರು ಇತ್ಯಾದಿಯಾಗಿ ನಾನೂ ಓದಿದ್ದೆ.ನಂತರ ಅದು ಸಂಪ್ರದಾಯವಾಯಿತು ಎಂದು


ಇಲ್ಲೊಂದು ಪ್ರಶ್ನೆ ಇದೆ.ಮುಸ್ಲಿಂ ಅಕ್ರಮಣಗಾರರು ವಿಧವೆಯರನ್ನು ಮಾತ್ರ ಹೊತ್ತೊಯ್ಯುತ್ತಿದ್ದರೇ? ಸೋತ ಅರಸನ ಪಾಳಯದ ಗಂಡನಿರುವ ಸ್ತ್ರೀಯರನ್ನು ,ವಿವಾಹ ವಾಗದ ಹುಡುಗಿಯರನ್ನು ಸೆಳೆದೊಯ್ಯುತ್ತಿರಲಿಲ್ಲವೇ? ಅವರುಗಳೇಕೆ ವಿದವಾ ಸ್ತ್ರೀಯರಂತೆ ಚಿತೆಗೆ ಹಾರಿ ಸಾಯಲಿಲ್ಲ? 

ತಮ್ಮ ತಮ್ಮ ಹೆಂಡತಿಯರನ್ನು ಗಂಡ ಕಾಯುತ್ತಿದ್ದನೇ ? ಹಾಗಾದರೇಕೆ ಗಂಡನನ್ನು ಕಳೆದುಕೊಂಡ ತಮ್ಮ ಅಕ್ಕ ತಂಗಿಯರನ್ನು ಕಾಯಲಿಲ್ಲ.ತಮ್ಮ ಹೆಂಡತಿ‌ಮಕ್ಕಳನ್ನು ಕಾಯುವ ಸಾಮರ್ಥ್ಯ ಇರುವವರಿಗೆ ತಮ್ಮ‌ ಅಕ್ಕ ತಂಗಿಯರನ್ನು ಮುಸ್ಲಿಂ ಅಕ್ರಮಣಗಾರರು ಸೆಳೆದೊಯ್ಯದಂತೆ ಕಾಪಾಡುವ ಸಾಮರ್ಥ್ಯ ಇರಲಿಲ್ಲವೇ? ಮನಸ್ಸಿರಲಿಲ್ಲವೇ ? 

ಹೆಣ್ಣನ್ನು ಕದ್ದೊಯ್ಯುವಾಗ ತಡೆದು ಯುದ್ದ ಮಾಡಿ ಮರಣವನ್ನಪ್ಪಿದ ವೀರರ ಬಗ್ಗೆ ಉಲ್ಲೇಖಗಳಿವೆ.ಇವರು ವಿಧವೆಯರ ರಕ್ಷಣೆಗಾಗಿ ಹೋರಾಡಿದವರೇ ? ಈ ಬಗ್ಗೆ ಸ್ಪಷ್ಟತೆ ಇಲ್ಲ.

ಈ  ಪೆಣ್ಣುಬ್ಬಯಲ್,ತರುಗೋಳ್  ಗಳ ಉಲ್ಲೇಖ ಇತಿಹಾಸದಲ್ಲಿದೆ.

ಇದನ್ನು ಗಮನಿಸುವಾಗ ಸತಿ ಪದ್ದತಿಗೆ ಕೇವಲ‌ ಮುಸ್ಲಿಂ ಆಕ್ರಮಣಕಾರರು ಮಾತ್ರ ಕಾರಣವಲ್ಲ ಎಂದೆನಿಸುತ್ತದೆ.

ವಿಧವೆಯರಿಗೆ ಸಮಾಜದಲ್ಲಿ ಭದ್ರತೆ ಇರಲಿಲ್ಲ.ಒಂದೊಮ್ಮೆ ಸತಿಯಾಗದೆ ಉಳಿದರೆ ತಲೆಬೋಳಿಸಿ‌ ವಿರೂಪಗೊಳಿಸಿ  ಕೆಂಪು ಮಡಿ ಬಟ್ಟೆ ಉಡಿಸುತ್ತಿದ್ದರು.

ಇದಕ್ಕೆ ಅವಳ ಮೇಲೆ ಯಾರ ಕಾಮುಕರ ಕಣ್ಣು ಬೀಳದಿರಲಿ ಮಾಡುದು ಎಂಬ ಸಮರ್ಥನೆಯ ಮಾತುಗಳನ್ನೂ ಕೇಳಿದ್ದೇವೆ.

ಕಾಮುಕರ ಕಣ್ಣು ವಿಧವಾ ಸ್ತ್ರೀಯರ ಮೇಲೆ ಮಾತ್ರ ಬೀಳುತ್ತದೆಯಾ ? ಇತರ ಮುತ್ತೈದೆಯರ ಮೇಲೇಕೆ ಬೀಳುವುದಿಲ್ಲ.ಯಾಕೆಂದರೆ ವಿಧವೆಯರನ್ನು ಏನು ಮಾಡಿದರೂ ಕೇಳುವವರಿರಲಿಲ್ಲ ಅಷ್ಟೇ.

ಕಾಮುಕರು ಎಲ್ಲೋ ದೂರದ ದೇಶದಿಂದ ಬಂದವರಲ್ಲ.

ಅದೇ ಊರಿನವರು ಅದೇ ಮನೆಯವರು.

ತಪ್ಪು ಕಾಮದ ಕಾಮಾಲೆ ಹತ್ತಿದ ಗಂಡಸಿದು‌.ಶಿಕ್ಷೆ ಹೆಣ್ಣಿಗೆ

ಇನ್ನು ವಿಧವಾ ಸ್ತ್ರೀ ಕೂಡ ಮನುಷ್ಯಳೇ..ಸಣ್ಣ ವಯಸ್ಸಿಗೆ ಗಂಡನನ್ನು ಕಳೆದುಕೊಂಡ ಹೆಣ್ಣಿಗೂ ದೈಹಿಕ ವಾಂಛೆಗಳಿರುತ್ತವೆ.ಹಾಗಾಗಿ ಕೆಲವು ವಿಧವಾ ಸ್ತ್ರೀಯೂ   ಎಡವಿರಬಹುದು.

ಮರು ಮದುವೆಯ ಮುಕ್ತ ಅವಕಾಶ ಇದ್ದಿದ್ದರೆ ಈ ಯಾವ ಸಮಸ್ಯೆಗಳೂ ಇರುತ್ತಿರಲಿಲ್ಲ.

ಇಂದಿಗೂ ಮರು ಮದುವೆಯಾದ ಹೆಣ್ಣನ್ನು ಕುಹಕದಿಂದ ನೋಡುವವರಿದ್ದಾರೆ ಎಂಬುದು ದುರಂತ.

ರಾಜಾರಮ ಮೋಹನ ರಾಯರ ಸತತ ಯತ್ನದುಂದಾಗಿ ಸತಿ ಪದ್ದತಿ ನಿಷೇಧದ ನಂತರ ವಿಧವೆಯರ ಪರಿಸ್ಥಿತಿ ಕಾಲಾಂತರದಲ್ಲಿ ಸುಧಾರಿಸುತ್ತಾ ಬಂತು.

ಸತಿಯಾಗದೆ ಇದ್ದವರು ತಲೆ ಬೋಳಿಸಿ ಮಡಿ ಅಜ್ಜಿಯಾಗಿ ಯಾರ್ಯಾರ ಸೇವೆ ಮಾಡುತ್ತಾ ಒಪ್ಪೊತ್ತು ಸಪ್ಪೆ ಊಟ ಉಂಡು ಬದುಕಬೇಕಾಗಿತ್ತು.ಇಂತಹ ಎರಡು ಮೂರು ಮಡಿ ಅಜ್ಜಿಯರನ್ನು ನಾನು ಸಣ್ಣಾಗಿರುವಾಗ ನೋಡಿದ್ದೆ‌ ಎಂದರೆ ಮೂವತ್ತು ಮುವತ್ತೈದು ವರ್ಷಗಳ ಹಿಂದೆ ಕೂಡ ಇಂತಹ ಹೀನಾಯ ಸ್ಥಿತಿ ವಿಧವಾ ಸ್ತ್ರೀಗೆ ಇತ್ತು. 

ಕಾಲಕ್ರಮೇಣ ತಲೆ ಬೋಳಿಸಿ ಮಡಿ ಮಾಡುದು ಕಡಿಮೆಯಾಯಿತು.

ಆದರೆ ವಿದವಾ ಸ್ತ್ರೀಯನ್ನು ಅಪಶಕುನ ಎಂದು ಭಾವಿಸುತ್ತಿದ್ದರು.ಈ ಬಗ್ಗೆ ಪ್ರಸಾದ್ ಹೇಳಿದ ಒಂದು ವಿಚಾರ ನೆನಪಾಗುತ್ತದೆ.

ಅದನ್ನು ಕೇಳಿ ಎಷ್ಟೋ ದಿನ ಅ ಪಾಪದ ಅಜ್ಜಿಗಾಗಿ ಮನ ಮರುಗಿತ್ತು.

ಪ್ರಸಾದರ ಹತ್ತಿರದ ಸಂಬಂಧಿಕರ ಮನೆಯಲ್ಲಿ ನಡೆದ ವಿಚಾರ ಇದು.

ಅ ತಾಯಿಗೆ ಗಂಡ ಸಣ್ಣ ವಯಸ್ಸಿನಲ್ಲಿಯೇ ತೀರಿ ಹೋಗಿದ್ದರು.ಗಂಡನ ಆಸ್ತಿ ಇತ್ತು.ಹಾಗಾಗಿ ಹೇಗೋ ನಾಲ್ಕು ಗಂಡು ಮಕ್ಕಳನ್ನು ಮೂರು ಹೆಣ್ಣು ಮಕ್ಕಳನ್ನು ದೊಡ್ಡ ಮಾಡಿದ್ದರು.

ಮಕ್ಕಳು ದೊಡ್ಡವರಾಗಿ ಪಾಲು ಪಂಚಾಯತಿಗೆ ಆಗಿ ಆಸ್ತಿ ಪಾಲಾಯಿತು.ತಾಯಿಗೆಂದು ಒಂದು ತುಂಡು ಭೂಮಿ ಇಡಲಿಲ್ಲ.ನಂತರ ಆ ವೃದ್ಧ ತಾಯಿ ಸಣ್ಣ ಮಗನ ಜೊತೆ ಇದ್ದರು.ಸಣ್ಣ ಮಗನ ಮದುವೆಯಾದ ನಂತರ ಸೊಸೆ ಉಪೇಕ್ಷೆ ಮಾಡಿದಳೋ ಅಥವಾ

ಅ ತಾಯಿಗೆ ದೊಡ್ಡ ಮಗನ ಮನೆಯಲ್ಲಿ ಸಾಯಬೇಕೆಂಬ  

ಹಂಬಲವೋ ಗೊತ್ತಿಲ್ಲ.ಅಲ್ಲೇ ಒಂದುವರೆ ಕಿಮೀ ದೂರದ ದೊಡ್ಡ ಮಗನ ಜೊತೆ ಇದ್ದರು.

ದೊಡ್ಡಮಗನಿಗೆ ಹೆಣ್ಣು ಗಂಡು ಮಕ್ಕಳಾಗಿ ಹೆಣ್ಣು ಮಕ್ಕಳು ಮದುವೆಯ ವಯಸ್ಸಿಗೆ ಬಂದರು.

ಹಾಗೆ ಮಗನ ಮಗಳನ್ನು ನೋಡಲು ಗಂಡಿನ ಕಡೆಯವರು ನೋಡಲು ಬರುವವರಿದ್ದರು.

ಮನೆಯಲ್ಲಿ ಸಂಭ್ರಮದ ವಾತಾವರಣ.

ಈ ಬಿಳಿಸೀರೆ ಉಡುವ ವಿಧವೆ ವೃದ್ದತಾಯಿಗೂ ಅದು ಸಂಭ್ರಮದ ವಿಚಾರವೇ.ಆಕೆಯೂ ಸಂಭ್ರಮದಿಂದ ಮನೆಯನ್ನು ಸ್ವಚ್ಛ ಮಾಡಿ ಸಿದ್ಧಪಡಿಸುತ್ತಿದ್ದರು.

ಆಗ ಮಗ ಬಂದವನೇ ತಾಯಿಯನ್ನು ಎಳೆದುಕೊಂಡು ಹೋಗಿ ಒಂದು ಬೇಡದ ಸಾಮಾನುಗಳನ್ನು ತುಂಬುವ ಕತ್ತಲೆಯ  ಕೊಠಡಿಯಲ್ಲಿ ಕೂಡು ಹಾಕಿ ಬಾಗಿಲು ಹಾಕಿ ಹೊರಗಿನಿಂದ ಬೀಗ ಹಾಕಿದ.

ವಿಧವೆ ತಾಯಿ ಹೊರಗೆ ಬಂದು ಕಾಣಿಸಿದರೆ ಅಪಶಕುನವಂತೆ.ಅದಕ್ಕಾಗಿ ಕೂಡಿ ಹಾಕಿದ..

ಯಾರೋ ಅಪಶಕುನ ಎಂದು ಅವಮಾನಿಸುದು ಬೇರೆ.ತಾನು ಹೊತ್ತು ಹೆತ್ತ ಮಗನೇ ಅಪಶಕುನ ಎಂದಾಗ ಆ ತಾಯಿಗೆ ಹೇಗಾದೀತು..ಅಬ್ಬಾ ಕ್ರೌರ್ಯವೇ.

ಆ ಹುಡುಗಿಯನ್ನು ನೋಡಲು ಬಂದವರು ತಾಯಿ ಎಲ್ಲಿ ಎಂದು ವಿಚಾರಿಸಿದಾಗ ಕೂಡಿ ಹಾಕಿದ ಕತ್ತಲೆಯ ಕೋಣೆಯಿಂದ ವೃದ್ಧ ತಾಯಿಯನ್ನು ಹೊರಗೆ ಕರೆದುಕೊಂಡು ಬಂದರು.

ಅ ಮಗಳಿಗೆ ಮದುವೆಯಾಯಿತು‌

ನಂತರದ ಮಗಳಿಗೂ ಮದುವೆಯಾಯಿತು.ಆ ತಾಯಿಯ ನಿಟ್ಟುಸಿರಿನ ಬಿಸಿ ತಾಗಿತೋ,ಆತನ ಪಾಪದ ಕೊಡ ತುಂಬಿತೋ,ಆ ಹೆಣ್ಣು ಮಗಳ ದುರದೃಷ್ಟವೋ ಏನೋ ತಿಳಿಯದು.

ಆಕೆಗೆ ಮದುವೆಯಾಗಿ ವರ್ಷದೊಳಗೆ ಗಂಡ ತೀರಿ ಹೋದ.ಅ ಸಮಯಕ್ಕೆ ಆಕೆ ತುಂಬು ಗರ್ಭಿಣಿ.ಹಾಗಾಗಿ ಅವಳಿಗೆ ವಿಷಯವನ್ನು ತಿಳಿಸಲಿಲ್ಲ.ಒಂದೆರಡು ದಿನಕ್ಕೆ ಹೆಣ್ಣು‌ಮಗು ಹುಟ್ಟಿತು.ತಂದೆಯ ಮುಖವನ್ನೇ ಕಾಣದ ಆ ಮೊಮ್ಮಗುವನ್ನು ,ಸಣ್ಣ ವಯಸ್ಸಿಗೆ ಗಂಡನನ್ನು ಕಳೆದುಕೊಂಡ ಮಗಳನ್ನು ಯಾವ ಕೊರತೆಯೂ ಕಾಡದಂತೆ  ಸಾಕಿದರು.

ತಾಯಿಯನ್ನು ವಿಧವೆ ಅಪಶಕುನ ಎಂದು ಕೀಳಾಗಿ ಕಂಡವನಿಗೆ ದಿನಾಲೂ ಗಂಡನನ್ನು ಕಳೆದುಕೊಂಡು ದುಃಖಿಸುವ ಮಗಳನ್ನು ಕಾಣುವ ದುರಂತ ಬಂದೊದಗಿತ್ತು.

ಅವಳ ಮಗಳೂ ಈಗ ದೊಡ್ಡವಳಾಗಿದ್ದಾಳೆ.ಅಜ್ಜನ ನಂತರ ಸೋದರ ಮಾವಂದಿರು ತಮ್ಮ ಮಕ್ಕಳಿಗಿಂತ ಪ್ರೀತಿಯಿಂದ ಇವಳನ್ನು ಸಾಕಿದ್ದಾರೆ.ಆದರೂ ಅವಳ ಮದುವೆಯಂದು ಅವಳ ತಂದೆ ತಾಯಿಯ ಸ್ಥಾನದಲ್ಲಿ ಕುಳಿತವರು ಆಕೆಯ ವಿದ್ಯಾರ್ಥಿಯ ತಂದೆ ತಾಯಿ.

ಯಾರೋ ಆಕೆಯನ್ನು ಧಾರೆ ಎರೆದುಕೊಡಬೇಕಾಗಿ ಬಂದುದರ ಹಿನ್ನೆಲೆ ನನಗೆ ಗೊತ್ತಿಲ್ಲ.ಅವರೊಳಗೆ ಏನಿತ್ತೋ ಗೊತ್ತಿಲ್ಲ.

ಈಕೆ ಈಗ ವಿದೇಶದಲ್ಲಿ ಗಂಡ ಮತ್ತು ಎರಡು ಮಕ್ಕಳ ಜೊತೆಗಿದ್ದಾಳೆ‌.ಆಕೆಯ ತಾಯಿ ಮತ್ತೆ ತಂದೆಯ ಮನೆಯಲ್ಲೇ ಇದ್ದಾರೆ.ಅಣ್ಣಂದಿರೂ ಈಗ ಅಳಿದಿದ್ದಾರೆ.

ಅಣ್ಣಂದಿರ ಮಕ್ಕಳು ಮತ್ತು ಅವಿವಾಹಿತ ತಂಗಿಯ ಜೊತೆಗಿದ್ದಾರೆ.

ಇರುವುದರಲ್ಲಿ ಒಳ್ಳೆಯ ಗುಣದ ಮಗಳಿರುವುದು ಒಂದು ಸಂತಸದ ವಿಚಾರ.ಒಂದೊಮ್ಮೆ ಮಗಳೂ ಇಲ್ಲದಿರುತ್ತಿದ್ದರೆ ಅವರ ಪರಿಸ್ಥಿತಿ ಹೇಗಿರುತ್ತಿತ್ತು..

ಮಕ್ಕಳೂ ಇಲ್ಲದ ,ಸಣ್ಣ ವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡು ಅಣ್ಣ ತಮ್ಮಂದಿರ ಆಶ್ರಯದಲ್ಲಿರುವ  ಅನೇಕ ವಿಧವಾ ಸ್ತ್ರೀಯರು ಈಗಲೂ ಇದ್ದಾರೆ.

ಇತ್ತೀಚೆಗೆ ಗಂಡನನ್ನು ಕಳೆದುಕೊಂಡ ಸಣ್ಣ ವಯಸ್ಸಿ‌ ಹುಡುಗಿಯರಿಗೆ ಮತ್ತೆ ಮದುವೆ ಮಾಡುತ್ತಿರುವುದು ನಮಾಜ ಪರಿವರ್ತನೆಯ ಒಂದು ಧನಾತ್ಮಕ ಅಂಶವಾಗಿದೆ.


 



No comments:

Post a Comment