Friday, 2 January 2026

ಆದರ್ಶಗಳ ಬೆಂಬತ್ತಿದೆ ಕಲ್ಲಡ್ಕದ ಶ್ರೀರಾಮ ಪ್ರಾಥಮಿಕ ಶಾಲೆಯಲ್ಲಿ

 ನನಗೂ ಆತ್ಮವಿದೆ..ಅದಕ್ಕೂ ಒಂದು ಕಥೆಯಿದೆ

..ಆದರ್ಶಗಳ ಬೆಂಬತ್ತಿದೆ ಕಲ್ಲಡ್ಕದ ಶ್ರೀರಾಮ ಪ್ರಾಥಮಿಕ ಶಾಲೆಯಲ್ಲಿ 


1996ರ ಎಪ್ರಿಲ್  ಮೇ ತಿಂಗಳಿನಲ್ಲಿ ನಮ್ಮ ಅಂತಿಮ ವರ್ಷದ ಸಂಸ್ಕೃತ ಎಂಎ ಪರೀಕ್ಷೆ ನಡೆಯಿತು

ಪರೀಕ್ಷೆಗೆ ಮೊದಲೇ ಕೆಲಸದ ಹುಡುಕಾಟ ಶುರು ಮಾಡಿದ್ದೆ.ಒಂದೆಡೆ ನಮ್ಮ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲ.ಇನ್ನೊಂದೆಡೆ ಸಂಸ್ಕೃತ ಎಂಎ ಓದಲು ಹೊರಟಾಗ ಎಂಎ ಮಾಡಿದವರು ನಾಯಿ ಸಂತೆ ಇದ್ದಾರೆ..ಕೆಲಸ ಎಲ್ಲಿ ಸಿಗುತ್ತದೆ ಎಂಬ ಮಾತು ಎದುರಾಗಿತ್ತು.ಮೃತ ಭಾಷೆ ಕಲಿತೇನು ಮಾಡುತ್ತಿ ಎಂಬ ಮಾತುಗಳೂ ಬಂದಿದ್ದವು.ಜೊತೆಗೆ ಕೆಲಸ ಹಿಡಿದು ಗೆಲ್ಲಲೇಬೇಕೆಂಬ ದೃಢ ನಿರ್ಧಾರದಿಂದ ಮನೆಯಿಂದ ಕಾಲು ಹೊರಗಿಟ್ಟವಳು ನಾನು..


ಈ ಸಂದರ್ಭದಲ್ಲಿ ನಮಗೆ ಸಂಸ್ಕೃತ ಪ್ರಶಿಕ್ಷಣ ಶಿಬಿರದಲ್ಲಿ ಶಿಕ್ಷಕಿಯಾಗಿದ್ದ ಯಶೋದಾ ಭಗಿನಿ ( ಹೆಸರು ಸರಿಯಾಗಿ ನೆನಪಿಲ್ಲ) ನನಗೆ ಆತ್ಮೀಯರಾಗಿದ್ದರು.ಅವರು ಕಲ್ಲಡ್ಕ ಶ್ರೀರಾಮ ಪ್ರಾಥಮಿಕ ಶಾಲೆಯಲ್ಲಿ ಸಂಸ್ಕೃತ ಶಿಕ್ಷಕಿ ಹುದ್ದೆ ಖಾಲಿ ಇರುವ ಬಗ್ಗೆ  ತಿಳಿಸಿ ಕಲ್ಲಡ್ಕ ಪ್ರಭಾಕರ ಭಟ್ರ ಬಳಿಗೆ ಕರೆದುಕೊಂಡು ಹೋದರು.

ಕಲ್ಲಡ್ಕ ಪ್ರಭಾಕರ ಭಟ್ರ ಬಗ್ಗೆ ನಾನು ಪದವಿ ಓದುತ್ತಿರುವಾಗಲೇ ನನ್ನ ಎಳೆಯ ಗೆಳತಿ ಮಂಗಳಾಳ ಬಾಯಿಯಿಂದ ಬಹಳಷ್ಟು ಕೇಳಿದ್ದೆ.ನೂರಾರು ಕರಸೇವಕರನ್ನು ಸಾವಿನ ದವಡೆಯಿಂದ ಅವರು ಪಾರು ಮಾಡಿದ್ದು ಸೇರಿದಂತೆ ಹಲವು ಕಥೆಗಳನ್ನು ಹೇಳಿದ್ದಳು.ಜೊತೆಗೆ ನನ್ನ ಅತ್ತೆಯವರು ಪ್ರಭಾಕರ ಭಟ್ ಮತ್ತು ಕಮಲಕ್ಕನ ದೊಡ್ಡ ಅಭಿಮಾನಿಯಾಗಿದ್ದರು.ಹಾಗಾಗಿ ಸಹಜವಾಗಿಯೇ ನನಗೆಅವರ ಬಗ್ಗೆ ಭಕ್ತಿ ಗೌರವ ಇತ್ತು. 

ಆ ದಿನ ಪರಿಚಯವಾಯಿತು.ಅವರ ಕ್ಲಿನಿಕಿನಲ್ಲಿಯೇ ಒಂದೆರಡು ಪ್ರಶ್ನೆ ಕೇಳಿ  ಸಂದರ್ಶನ ಮಾಡಿ ಮರುದಿನದಿಂದ ಬರಲು ಹೇಳಿದರು.

ಮರುದಿನವೇ ಹೋಗಿ ಶ್ರೀರಾಮ ಪ್ರಾಥಮಿಕ ಶಾಲೆ ಕಲ್ಲಡ್ಕದ ಸಂಸ್ಕೃತ ಶಿಕ್ಷಕಿಯಾಗಿ ಸೇರಿದೆ.ನನ್ನ ವೇತನ ತಿಂಗಳಿಗೆ 750₹  ಅದರಲ್ಲಿ  ಕಲ್ಲಡ್ಕಕ್ಕೆ ಹೋಗಿ ಬರಲು ಬಸ್ಸಿಗೆ ಸಾಕಷ್ಟು ಖರ್ಚಾಗುತ್ತಿತ್ತು.ಖರ್ಚು  ಕಳೆದು  300₹ ನನಗೆ ಉಳಿಯುತ್ತಿತ್ತು.

ಅಲ್ಲಿ ಮುಖ್ಯೋಪಾಧ್ಯಾಯರಾಗಿ ಗೋಪಾಲರಾವ್ ಇದ್ದರು.ಬಹಳ ಸಹೃದಯಿ ಇವರು.ಸಂಧ್ಯಾ ಮಾತಾಜಿ ಸೇರಿದಂತೆ ( ಉಳಿದವರ ಹೆಸರು ನೆನಪಿಲ್ಲ) ಏಳೆಂಟು ಶಿಕ್ಷಕರಿದ್ದರು.

ನಾನು 1 ಜುಲೈ 1996 ರಂದು ಸೇರಿದೆ.ಎರಡನೇ ತಾರೀಕಿನಂದು ಅಲ್ಲಿನ ಅಷ್ಟ ಕುಟೀರಗಳ ಉದ್ಘಾಟನೆ ಇತ್ತು.ಅಲ್ಲಿ ಶಿಕ್ಷಕರಿಗೆ ಯುನಿಪಾರ್ಮ್ ಇತ್ತು.ನೀಲಿ ಸೀರೆ ಬಿಳಿ ರವಿಕೆ ತೊಡಬೇಕಿತ್ತು.ಮರುದಿನವೇ ಕಾರ್ಯಕ್ರಮ ಇದ್ದ ಕಾರಣ ನಾನು ಯುನಿಪಾರ್ಮ್ ನಲ್ಲಿಯೇ ಹೋಗಬೇಕಾಗಿತ್ತು.ಅಷ್ಟು ಬೇಗ ಒಂದೇ ದಿನದಲ್ಲಿ ಸೀರೆ ಎಲ್ಲಿಮದ ತರುದು...ಅದಕ್ಕೂ ಅಲ್ಲಿ ಪರಿಹಾರೋಪಾಯ ಸಿಕ್ಕಿತು.ಸಂಧ್ಯಾ ಮಾತಾಜಿ ಅವರ ಹಳೆಯ ಯುನಿಪಾರ್ಮ್ ನೀಲಿ ಸೀರೆ ತರ್ತೇನೆ.ಬಿಳಿ ರವಕೆ ಇದ್ದರಾಯಿತು ಎಂದರು.ಅದೃಷ್ಟಕ್ಕೆ ಬಿಳಿ ರವಿಕೆ ನನ್ನಲ್ಲಿ ಇತ್ತು.ಅಂತೂ ಬಿಳಿ ರವಿಕೆಗೆ ಹೊಂದುವ ಬೇರೆ ಸೀರೆ ಉಟ್ಡುಕೊಂಡು ಬಂದು ಶಾಲೆಯಲ್ಲಿ ಅವರು ತಂದು ಕೊಟದಟ ಹಳೆಯ ನೀಲಿ ಸೀರೆ ಉಟ್ಟು ಕಾರ್ಯಕ್ರಮದಂದು ತಯಾರಾದೆ.ಎಂದೂ ಅಕ್ಕ‌ಮತ್ತು ಅಮ್ಮನ ಹೊರತಾಗಿ ಅನ್ಯರ ಸೀರೆ ಬಟ್ಟೆ  ಉಡದ ನಾನು ಅನಿವಾರ್ಯವಾಗಿ ಕೆಲಸಕ್ಕಾಗಿ ಅನ್ಯರ ಹಳೆಯ ಸೀರೆ ಉಟ್ಟೆ.ಆದರೆ ಅದನ್ನು ಕೊಟ್ಟ ಸಂಧ್ಯಾ ಮಾತಾಜಿ ನನಗೆ ಹಿರಿಯಕ್ಕನಂತೆಯೇ ನಂತರ ಆತ್ಮೀಯರಾಗಿದ್ದು ಅನ್ಯರ ಹಳೆಯ ಸೀರೆಯುಟ್ಟೆ ಎಂಬ ನೋವನ್ನು ದೂರ ಮಾಡಿತ್ತು 

ಆಗ ಆ ಶಾಲೆಗೆ ಏನೇನೂ ಆದಾಯವಿರಲಿಲ್ಲ.ತೀರಾ ಕಡಿಮೆ ವೇತನ ಆದರೂ ಅಲ್ಲಿದ್ದ ಶಿಕ್ಷಕರ ಬದ್ದತೆ ಮರೆಯಲಾಗದ್ದು.

ಜೊತೆಗೆ ಅಲ್ಲಿನ ಶಿಸ್ತಿನ ವಾತಾವರಣ ,ಕಲ್ಲಡ್ಕ ಪ್ರಭಾಕರ ಭಟ್ ಕಮಲಕ್ಕನವರ ನಡವಳಿಕೆ ನನ್ನ ಮೇಲೆ ಅಪಾರ ಪ್ರಭಾವ ಬೀರಿದೆ.

ಇಂದಿಗೂ ನಾನು ನನ್ನ ಆದರ್ಶವನ್ನು ಬಿಟ್ಟು ಒಂದಿಂಚೂ ಕದಲದೇ ಇರುವುದಕ್ಕೆ ಕಲ್ಲಡ್ಕ ಶ್ರೀರಾಮ ಶಾಲೆಯಲ್ಲಿ ನಾಲ್ಕೈದು ತಿಂಗಳು ಕೆಲಸ ಮಾಡಿದ್ದು ಕಾರಣ.ಅಚಲ ದೇಶ ಪ್ರೇಮ ,ದೇಶ ಭಾಷೆ ಸಂಸ್ಕೃತಿ ಕುರಿತಾದ ಪ್ರೀತಿ ಅನ್ಯಾಯದ ವಿರುದ್ಧ ದ್ವನಿಯೆತ್ತುವ ಬಗೆಯೇ ಮೊದಲಾದವುಗಳ ಪಾಠವನ್ನು ನಾನಿಲ್ಲಿ ಕಲಿತೆ 

ನಂತರ 1997 ಜನವರಿಯಲ್ಲಿ ನನಗೆ ಮಂಗಳೂರಿನ ನಮ್ಮ ಮನೆ ಸಮೀಪದ  ಸೈಂಟ್ ಅಲೋಷಿಯಸ್ ಕಾಲೇಜಿನಲ್ಲಿ ಪಾರ್ಟ್ ಟೈಮ್ ಕೆಲಸ ಸಿಕ್ತು ಹಾಗಾಗಿ ನಾನು ಕಲ್ಲಡ್ಕ ಶಾಲೆಯಿಂದ ನಿರ್ಗಮಿಸಿದೆ

ನನ್ನ ಮೊದಲ ಭಾಷಣವನ್ನು ಕೂಡ ಮಾಡಿದ್ದು ನಾನು ಇಲ್ಲಿಯೇ.ನಾನಲ್ಲಿದ್ದಾಗ ರಕ್ಷಾ ಬಂಧನದಂದು ನನಗೇ ಭಾಷಣ ಮಾಡಲು ಅಲ್ಲಿನ ಮುಖ್ಯೋಪಾಧ್ಯಾಯರಾಗಿದ್ದ ಗೋಪಾಲರಾಯರು ತಿಳಿಸಿ ನನಗೊಂದು ವೇದಿಕೆಯನ್ನು ನೀಡಿದ್ದರು.

ನಾನು ಬಿಟ್ಡು ಬಂದ ಕೊನೆಯ ದಿನ ಅವರೊಂದು ಮಾತು ಹೇಳಿದರು.ನಮ್ಮ ಕಡೆಯಿಂದ ಒಂದು ತಪ್ಪಾಗಿದೆ ಕ್ಷಮಿಸಬೇಕು ಆದರೆ .ನಾನು ಅಸಹಾಯಕ ಎಂದಿದ್ದರು.ಏನಾಗಿದೆ ಕೇಳಿದೆ..ನನಗೆ ಬೇಸರ ಆಗುವ ಒಂದೇ ಒಂದು ಸಣ್ಣ ವಿಚಾರವೂ ನಡೆದಿರಲಿಲ್ಲ

ಆಗವರು ಶಿಕ್ಷಕ ದಿನಾಚರಣೆಯಂದು ಸಂಸ್ಕೃತದಲ್ಲಿ ಮೊದಲ ರ್ಯಾಂಕ್ ಪಡೆದ ನಿಮ್ಮನ್ನು ನಾವು ಅಭಿನಂದಿಸಬೇಕಿತ್ತು.ಕಾರ್ಯಕ್ರಮ‌ಇಲ್ಲಿಯೇ ನಡೆದಿದ್ದರೆ ನಾನು ಖಂಡಿತಾ ಅಭಿನಂದನಾ ಕಾರ್ಯಕ್ರಮ ಇರಿಸುತ್ತಿದ್ದೆ

ಎಂದರು.ಶಿಕ್ಷಕ ದಿನಾಚರಣೆ ವಿವೇಕಾನಂದ ಕಾಲೇಜಿನಲ್ಲಿ ನಡೆದಿತ್ತು.ಯಾಕೆಂದು ನನಗೂ ಗೊತ್ತಿಲ್ಲ


ನನಗಷ್ಟರ ತನಕ ಆ ವಿಚಾರವೇ ತಲೆಗೆ ಹೋಗಿರಲಿಲ್ಲ.ಅಲ್ಲಿ ಕೆಲಸ ಮಾಡುತ್ತಿರಯವಾಗಲೇ ನಮ್ಮ ಎಂಎ ಫಲಿತಾಂಶ ಬಂದಿದ್ದು ನನಗೆ ಮೊದಲ ರ್ಯಾಂಕ್ ಬಂದಿತ್ತು.ಶಿಕ್ಷಣ ದಿನಾಚರಣೆಗೆ ಕೆಲ ದಿನಗಳ ಮೊದಲು ಫಲಿತಾಂಶ ಬಂದಿತ್ತು

ನನಗೆ ಕೆಲಸ ಸಿಕ್ಕಿದ್ದೇ ದೊಡ್ಡ ವಿಷಯವಾಗಿತ್ತು ಹಾಗಾಗಿ ಅಭಿನಂದನೆಯನ್ನೆಲ್ಲ ನಾನು ನಿರೀಕ್ಷೆಯೇ ಮಾಡಿರಲಿಲ್ಲ

ಹಾಗಾಗಿ ಗೋಪಾಲರಾಯರು ಹೇಳುವ ತನಕ ನನಗೆ ತಲೆಗೇ ಹೋಗಿರಲಿಲ್ಲ.ನಂತರ ನನಗೂ ಹೌದಲ್ವಾ ಎನಿಸಿತು

ಸಾಧನೆ ಮಾಡಿದ ಶಿಕ್ಷಕರನ್ನು ಶಿಕ್ಷಣ ದಿನಾಚರಣೆಯಂದು ಗೌರವಿಸುವ ಪದ್ಧತಿ ಎಲ್ಲೆಡೆ ಇದೆ

ಅಂದ ಹಾಗೆ ಕಲ್ಲಡ್ಕ ಶಿಕ್ಷಣ ಸಂಸ್ಥೆಯನ್ನು ಪರಿಚಯಿಸುವ ಮೊದಲ ಲೇಖನ ಬರೆದವಳೂ ನಾನೇ..ಇಲ್ಲಿನ ವಿಶಿಷ್ಟ ಶಿಕ್ಷಣ ದ ಮಾಹಿತಿಯನ್ನು ಸಂಸ್ಕೃತಿಗೊಂದು ಆಶಾ ಕಿರಣ ಎಂಬ ಶೀರ್ಷಿಕೆಯಲ್ಲಿ ಮಂಗಳ ಮತ್ತು ಹೊಸ ದಿಗಂತ ಪತ್ರಿಕೆಗಳಿಗೆ ಲೇಖನ ಬರೆದಿದ್ದು ಪ್ರಕಟವಾಗಿದ್ದವು.

ಇರಲಿ

ನಂತರ ನಾನು ಅಲೋಷಿಯಸ್ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕಿಯಾಗಿ ಸೇರಿದೆ.ಆ ವರ್ಷ ವಾರ್ಷಿಕೋತ್ಸವದಂದು ರ್ಯಾಂಕ್ ವಿಜೇತ  ಹಾಗೂ ಇತರ ಸಾಧನೆ ಮಾಡಿದ  ಉಪನ್ಯಾಸಕರನ್ನು ಗೌರವಿಸಿದ್ದರು‌.ನನ್ನನ್ನೂ ಗೌರವಿಸಿದ್ದರು

ತಮ್ಮ ಶಿಕ್ಷಕರನ್ನು ಅಪಾರ  ಗೌರವದಿಂದ ಕಾಣುವ ಸೈಂಟ್ ಅಲೋಷಿಯಸ್ ಕಾಲೇಜು ಬಗ್ಗೆ  ಇನ್ನೊಂದು ದಿನ ಬರೆಯುವೆ ಬಾಯಿಯಲ್ಲಿ ಭಾಷಣ ಮಾಡುದು ಬೇರೆ ಕಾರ್ಯತಃ ಮಾಡಿ ತೋರಿಸುವುದು ಬೇರೆ..ಅಲೋಷಿಯಸ್ ಕಾರ್ಯತಃ ಮಾಡಿ ತೋರಿಸಿತ್ತು.

ಇಲ್ಲಿ ನನ್ನ ವೇತನ ತಿಂಗಳಿಗೆ  1500₹ ಮತ್ತು ಇದು ನಡೆದುಕೊಂಡು  ಹೋಗಿ ಬರುವಷ್ಟು ಹತ್ತಿರ ಹಾಗಾಗಿ ಹೋಗಿ ಬರಲೆಂದು 1₹ ಕೂಡಾ ಖರ್ಚಿರಲಿಲ್ಲ.ವಾರಕ್ಕೆ ಮೂರು ದಿವಸದ ಕೆಲಸಕ್ಕೆ 1500₹ ಆಗ ನನಗೆ ನಿಜಕ್ಕೂ ದೊಡ್ಡದೆನಿಸಿ ಸಂತಸವಾಗಿತ್ತು.ಜೊತೆಗೆ ಬಹಳ ಪ್ರತಿಷ್ಟಿತ ಶಿಕ್ಷಣ ಸಂಸ್ಥೆ ಅದು.ಅಲ್ಲಿನ ಉಪನ್ಯಾಸಕಿ ಎಂಬುದೇ  ಬಹಳ ಹೆಗ್ಗಳಿಕೆಯ ವಿಚಾರ..

ಪಾಠ ಮಾಡುದು ಹೇಗೆ ? ಉತ್ತಮ ಫಲಿತಾಂಶ ತರುದು ಹೇಗೆ ? ವಿದ್ಯಾರ್ಥಿಗಳನ್ನು ಹತೋಟಿಗೆ ತರುವುದು ಹೇಗೆ ಮೊದಲಾದ ವಿಚಾರಗಳನ್ನು ನಾನಿಲ್ಲಿ ಕಲಿತೆ 

ಈ ಬಗ್ಗೆ ಇನ್ನೊಂದಿನ ಬರೆಯುವೆ

Wednesday, 31 December 2025

ದೈವ ಕೃಪೆಗೆ ಶರಣು 🙏

 ದೈವ ಕೃಪೆಗೆ ಶರಣು 🙏


ಆತ್ಮ ಕಥೆಯನ್ನು ಹೇಗೆ ತಾನೇ ಬರೆಯದಿರಲಿ ? ಆತ್ಮ‌ಕಥೆಯೆಂದರೆ ಬರೀ ಗೋಳಿನ ಪ್ರವರವಲ್ಲ .ಯಶಸ್ಸಿನ ದಾರಿಯ ಹಿನ್ನೋಟ ಕೂಡಾ..


ನಗರದ ಬಸದಿಕೇರಿಯಲ್ಲಿರುವ ಪೂಜಾ ಮಂಟದ ಬಳಿ ನಡೆತುವ ಜಟ್ಟಿಗರ ಪೂಜೆಯನ್ನು ಕಾದಂಬರಿಯ ಪ್ರಮುಖ ವಸ್ತುವಾಗಿರಿಸಿಕೊಂಡು  ಬರೆಯುವ ಉದ್ದೇಶದಿಂದ ವಿಷಯಕ್ಕಾಗಿ ಹುಡುಕಾಡುತ್ತಿದ್ದೆ.ಡಾ.ಲಕ್ಷ್ಮೀ ಜಿ ಪ್ರಸಾದ ಎಂಬವರು ಬ್ಲಾಗೊಂದರಲ್ಲಿ ಬರೆದ ಜಟ್ಟಿಗ ಭೂತಾರಾಧನೆಯ ವಿವರಗಳು ನಾನು ಕಲ್ಪಿಸಿದ್ದ ಕೊಂಡಿ ಕೇವಲ ಊಹೆಯಲ್ಲ ಎನ್ನುವುದಕ್ಕೆ ಪ್ರಮುಖ ಆಧಾರ ದೊರಕಿಸುವುದರ ಜೊತೆಗೆ ಭೂತಾರಾಧನೆಯನ್ನು ಚರಿತ್ರೆ ಹೇಳುವ ಮಾಧ್ಯಮವಾಗಿ ಬಳಸಲು ಅನುವು ಮಾಡಿಕೊಟ್ಟವು ಕೂಡಾ.ತಕ್ಷಣ ಭೂತಾರಾಧನೆಯ ಬಗ್ಗೆಯೇ ಅಧ್ಯಯನ ಮಾಡಿ ಪಿಎಚ್ ಡಿ ಪಡೆದಿರುವ ಹಲವು ಪುಸ್ತಕಗಳನ್ನೂ ಬರಹಗಳನ್ನೂ ಬರೆದಿರುವ ಭೂತಾರಾಧನೆಯ ಲಕ್ಷ್ಮೀ ಎಂದೇ ಗುರುತಿಸಲ್ಪಟ್ಟಿರುವ ಲಕ್ಷ್ಮೀ ಪ್ರಸಾದರನ್ನು ಸಂಪರ್ಕಿಸಿ ಹೆಚ್ಚಿನ ವಿವರಗಳಿಗಾಗಿ ಚರ್ಚಿಸಲು ಸಮಯ ಕೋರಿದಾಗ ತಾವಾಗಿಯೇ ಮನೆಗೆ ಬಂದು ತಮ್ಮ ಸಂಶೋಧನೆಯ ಹತ್ತಾರು ಅನುಭವಗಳನ್ನು  ನೋವು ನಲಿವುಗಳನ್ನು ಹಂಚಿಕೊಳ್ಳುತ್ತಿದ್ದಂತೆ ಅವರೇ ಕಾದಂಬರಿಯ ಒಂದು ಪ್ರಮುಖ ಪಾತ್ರವಾಗಿ ರೂಪುಗೊಳ್ಳತೊಡಗಿದರು.ಹಾಗೆಂದೇ ಅವರು ಡಾ.ಲಕ್ಷ್ಮೀ ಪೋದ್ದಾರ್ ಆಗಿ ಕಾಣಿಸಿಕೊಂಡರು.ನಂತರ ಅವರು ಹಲವಾರು ಸಲಹೆಗಳನ್ನೂ ಪಾಡ್ದನಗಳ ತುಳು ಕನ್ನಡ ರೂಪಾಂತರವನ್ನೂ ನೇತ್ರಾಣಿ ಜಟ್ಟಿಗರ ಫೋಟೋವನ್ನೂ ಒದಗಿಸಿಕೊಟ್ಟಿದ್ದರಿಂದ ಕಾದಂಬರಿಗೆ ಹೊಸ ಆಯಾಮವೇ ದೊರೆಯಿತು.ಬಳ್ಳಿ ಕಾಳ ಮೆಣಸು ಸಂಪೂರ್ಣವಾಗಿ ಸಂಸ್ಕಾರಗೊಂಡು ಬಿಳಿಯ ಮೆಣಸಾಯಿತು- ಡಾ.ಕೆ ಎನ್ ಗಣೇಶಯ್ಯ ( ತಮ್ಮ ಬಳ್ಳಿ ಕಾಳ ಬಳ್ಳಿ ಕಾದಂಬರಿಯ ಕುರಿತಾಡಿದ ಮಾತುಗಳ ಉದೃತ ಭಾಗ) 


ನಾನು ಕನಸಲ್ಲೂ ಊಹಿಸದೇ ಇರುವ ವಿಚಾರವದು..ಬಹು ಪ್ರಸಿದ್ಧ ಕಾದಂಬರಿಕಾರರಾದ ಡಾ.ಕೆ ಎನ್  ಗಣೇಶಯ್ಯನವರ ಪ್ರಸಿದ್ಧ ಕಾದಂಬರಿಯಲ್ಲಿ ನಾನೊಂದು ಜೀವಂತ ಪ್ರಮುಖ ಪಾತ್ರವಾಗಿ ಬಂದಿರುವೆ ಎಂಬುದು ನಾನೆಂದಿಗೂ ಮರೆಯಲಾಗದ ರೋಮಾಂಚನ ನೀಡಿದ ವಿಚಾರ


ಯಾರಿಗೆ ತಾನೇ ಕಥಾ ನಾಯಕಿಯಾಗುವುದು,ಕಥೆಯ ಕೇಂದ್ರವಾಗುವುದು ಇಷ್ಟವಾಗದ ವಿಚಾರ?..ಎಲ್ಲರೂ ಇಷ್ಟ ಪಡುವ ಬಯಸುವ ವಿಚಾರವಿದು..ನನ್ನ ವಿಚಾರದಲ್ಲಿ ಇದು ಸಂಭವಿಸಿದೆ..


ಯಾಕೋ ಗೊತ್ತಿಲ್ಲ..ನನ್ನ ಬದುಕಿನಲ್ಲಿ ಇಂತಹ ಅನೇಕ ಅನೂಹ್ಯ ವಿಚಾರಗಳು ಘಟಿಸಿವೆ..ಅದಕ್ಕಾಗಿಯೇ ಆತ್ಮಕಥೆ ಬರೆಯಲು ನಿರ್ಧರಿಸಿ ಶುರು ಮಾಡಿರುವೆ.


ಅದಿರಲಿ ನಾನು ಲಕ್ಷ್ಮೀ ಪೋದ್ದಾರ್ ಆದದ್ದನ್ನು ಡಾ.ಕೆ ಎನ್ ಗಣೇಶಯ್ಯನವರು ಹೀಗೆ ವಿವರಿಸಿದ್ದಾರೆ..ಇನ್ನು ಪೂರ್ಣ ಮಾಹಿತಿಗೆ ಅವರ ಬಳ್ಳಿ ಕಾಳ ಬೆಳ್ಳಿ ಕಾದಂಬರಿ ಓದಬಹುದು.


"


ಲಕ್ಷ್ಮೀ ಪೋದ್ದಾರ್ ಆದ ನನ್ನನ್ನು ಗಣೇಶಯ್ಯನವರ ಕಾದಂಬರಿ ಮೂಲಕ ಸಾವಿರಾರು ಜನ ಗುರುತಿಸಿದ್ದಾರೆ.

ನನ್ನ ತುಳು ಅಧ್ಯಯನದ ಫಲಿತವನ್ನು ಪಡೆದಿದ್ದಾರೆ ಎಂಬುದು ನನಗೆ ನಿಜಕ್ಕೂ ಹೆಮ್ಮೆ ತರುವ ವಿಚಾರ..ಅದೂ ನಾವು ಲೆಕ್ಕಕ್ಕಿಡುವುದಿಲ್ಲ ಎಂದು ತುಳು ಅಧ್ಯಯನಗಾರನೊಬ್ಬನಿಂದ ನಿಂದಿಸಲ್ಪಟ್ಟ ಮಹಿಳೆಯ ಮಾತೇ ಕಾದಂಬರಿಗೆ ಪ್ರಮುಖ ಆಧಾರ ಆಗುದು..ಹಿರಿಯ ವಿದ್ವಾಂಸರಾದ ಡಾ.ಕೆ ಎನ್ ಗಣೇಶಯ್ಯ ಆ ಮಹಿಳೆಯ ಬರಹವನನ್ನು ಗೌರವದಿಂದ ಕಂಡು ಅದರೊಳಗಿನ ಸತ್ಯವನ್ನು ಪರಿಗಣಿಸಿ ಚಾರಿತ್ರಿಕ  ಕಾದಂಬರಿ ಬರೆಯುದು ಎಲ್ಲವೂ ಕಾಕತಾಳೀಯವೇ..ಕಾಲನ ಅನೂಹ್ಯ ನಡೆಯೇ..ನನಗೂ ಗೊತ್ತಿಲ್ಲ..ತೇ ನ ವಿನಾ ತೃಣಮಪಿ ನ ಚಲತಿ( ದೇವರ ಆಶಯದ ಹೊರತಾಗಿ ಹುಲುಕಡ್ಡಿಯೂ ಅಲುಗಾಡುವುದಿಲ್ಲ) 

ಈವತ್ತು ಕೂಡ ಬಸ್ಸಿನಲ್ಲಿ ರಿಟೈರ್ಡ್  ಪ್ರೊಫೆಸರ್ ರಾಜ ಗೋಪಾಲ್ ಎಂಬವರು ನನ್ನನ್ನು ಲಕ್ಷ್ಮೀ ಪೋದ್ದಾರ್ ಎಂದು ಗುರುತಿಸಿ ಮಾತನಾಡಿಸಿದರು..ಲಕ್ಷ್ಮೀ ಪೋದ್ದಾರ್  ಅನ್ನು ಸಾವಿರಾರು ಮಂದಿ ಗುರುತಿಸಿದ್ದಾರೆ  ನಿನ್ನೆ ಬೆಂಗಳೂರು ಸಿಟಿ ಯೂನಿವರ್ಸಿಟಿ ಕಾನ್ಫರೆನ್ಸ್ ನಲ್ಲಿ ಕೂಡ ಅನೇಕರು    ಕರಾವಳಿಯ ಸಾವಿರದೊಂದು ದೈವಗಳು - ಸಾವಿರದೊಂದು ದೈವಗಳು ಪುಸ್ತಕದ ಲೇಖಕಿ ಎಂದು ಗುರುತಿಸಿ ಮಾತನಾಡಿದ್ದಾರೆ.ಪುಸ್ತಕಕ್ಕೆ ಇರುವ ಶಕ್ತಿ ಅಪಾರವಾದುದೆನಿಸ್ತು ..

ಬದುಕಿನ ಸೊಬಗಿನ ಬಗ್ಗೆ ಅಚ್ಚರಿಯ ಬಗ್ಗೆ ಇನ್ನೇನು ಹೇಳಲಿ..

ಅವಹೇಳನಕ್ಕೆ ಗುರಿಯಾಗಿಸಿ ಅಳಿಸಿ ಕಾಡುವವನೂ ಅವನೇ..ಪುರಸ್ಕರಿಸಿ ಚಂದ ನೋಡುವವನೂ ಅವನೇ ಅಲ್ಲವೇ..ಮುಂದೇನು ಕಾಡುವನೋ ಇಲ್ಲ ಅನುಗ್ರಹಿಸುವನೋ ಗೊತ್ತಿಲ್ಲ..ತ್ವಮೇವ  ಶರಣಂ ಮಮ‌ 🙏

ಮರ್ಯಾದೆ ಉಳಿಸಿದ ಶಿಷ್ಯಂದಿರು.

 ಆತ್ಮ ಕಥೆಯ ಬಿಡಿ ಭಾಗಗಳು.

ನನ್ನ ಮರ್ಯಾದೆ ಉಳಿಸಿದ ಶಿಷ್ಯಂದಿರು ಯಾರು ಗೊತ್ತೇ? ಈಗಲೂ ಇವರುಗಳೇ ನನ್ನ ಸಹಾಯಕ್ಕೆ ಧಾವಿಸಿ ಬರಬೇಕಿದೆ ಎಲ್ಲ ಒಟ್ಟಾಗಿ ಬನ್ನಿ.. Ashwini Ashu Venkat Aranthady ಶ್ರೀಕಾಂತ್ ಹರಿಹರಪುರ 


ನನಗೂ ಇಂಗ್ಲಿಷ್ ಗೂ ಆಗಿ ಬರುದಿಲ್ಲ.ನನಗದು ಸದಾ ಕಬ್ಬಿಣದ ಕಡಲೆ  

ಹಾಗಾಗಿ ಅದನ್ನು ಜಗಿದು ಹಲ್ಲು ನೋಯಿಸಿಕೊಳ್ಳುದೇಕೆ ಎಂದದನ್ನು ಕಲಿಯುವ ಪ್ರಾಮಾಣಿಕ ಯತ್ನ ಮಾಡಿಯೇ ಇಲ್ಲ

ಅಥವಾ ನನಗೆ ಭಾಷಾ ಕೌಶಲ ಸಿದ್ದಿಸುವ ರೀತಿಯಲ್ಲಿ ಕಲಿಸಿಲ್ಲ

.ನಾನು ಭಾಷಾ ಕಲಿಕೆಯಲ್ಲಿ ಹಿಂದುಳಿದವಳಾ ? ಈ ಬಗ್ಗೆ ನನಗೆ ಒಂದು ದ್ವಂದ್ವ ಕಾಡುತ್ತಿರುತ್ತದೆ 

ಒಂದೊಮ್ಮೆ ಭಾಷಾ ಕಲಿಕೆಯಲ್ಲಿ ನಿದಾನಸ್ಥೆ ಆಗಿದ್ದರೆ ಸಂಸ್ಕೃತದಲ್ಲಿ  ಮಾತನಾಡಲು ಸುಲಭದಲ್ಲಿ ಅಭ್ಯಾಸ ಆಗುತ್ತಿರಲಿಲ್ಲ.

ನಾನು ಸಂಸ್ಕೃತ ಎಂಎ ಪರೀಕ್ಷೆ ಬರೆದ ನಂತರ ಇರಬೇಕು.ಸಂಸ್ಕೃತ ಭಾರತಿಯವರು ಮಂಗಳೂರಿನಲ್ಲಿ ಹತ್ತು ದಿನಗಳ  ಸಂಸ್ಕೃತ ಪ್ರಶಿಕ್ಷಣ ಶಿಬಿರ ಆಯೋಜಿಸಿದ್ದರು..

ಅದಕ್ಕೂ ಮೊದಲೇ ಸಂಭಾಷಣ ಶಿಬಿರದಲ್ಲಿ ಭಾಗವಹಿಸಿ ಸುಮಾರಾಗಿ ಸಂಸ್ಕೃತ ಮಾತನಾಡಲು ಕಲಿತಿದ್ದೆ.ಈ ಹತ್ತು ದಿನಗಳ ನಂತರ ಸರಿಯಾಗಿ ಸಂಸ್ಕೃತ ಮಾತನಾಡಲು ಕಲಿತೆ.

ಇದಾದ ನಂತರ ನಾನು ಅನೇಕ ಸಂಸ್ಕೃತ ಸಂಭಾಷಣಾ ಶಿಬಿರಗಳನ್ನು ಮಾಡಿ ಅನೇಕರಿಗೆ ಸಂಸ್ಕೃತ ಮಾತನಾಡಲು ಕಲಿಸಿದ್ದೆ.


ಕಳೆದ ಇಪ್ಪತ್ತು ವರ್ಷಗಳಿಂದ ನಾನು ಕನ್ನಡ ಉಪನ್ಯಾಸಕಿ ಯಾಗಿ ಕೆಲಸ ಮಾಡಿತ್ತಿದ್ದು ಸಂಸ್ಕೃತ ಭಾಷೆಯ ಬಳಕೆ ತಪ್ಪಿ ಹೋಗಿ ಈಗ ಮಾತನಾಡುವಾಗ ತಡವರಿಸುತ್ತೇನೆ


ಆದರೆ ಸಂಸ್ಕೃತ ವನ್ನು ಸುಲಭವಾಗಿ ಕಲಿತ ನನಗೆ ಹಿಂದಿ ಭಾಷೆ ಯಾಕೆ ಒಲಿಯಲಿಲ್ಲ ಎಂದು ಗೊತ್ತಾಗುತ್ತಿಲ್ಲ.ಹಿಂದಿ ಎಂಎ ಓದಿದ್ದು ಉತ್ತಮ ಅಂಕ ಕೂಡ ಗಳಿಸಿದ್ದೆ.

ಆದರೆ ಹಿಂದಿ ಭಾಷೆ ಮಾತನಾಡಲು ನನಗೆ ಕಷ್ಟ ಆಗುತ್ತದೆ

.

ಇನ್ನೂ ಇಂಗ್ಲಿಷ್ ಎನ್ನುದು ನನ್ನ ಪಾಲಿಗೆ ಮೃಗ ಮರೀಚಿಕೆ.

ಉಳಿದೆಲ್ಲ ವಿಷಯಗಳಲ್ಲಿ ಉತ್ತಮ ಅಂಕ ಗಳಿಸುತ್ತಿದ್ದು ಇಂಗ್ಲಿಷ್ ನಲ್ಲಿ ಫೈಲ್ ಆಗುತ್ತಿದ್ದ ನನ್ನ ಬಗ್ಗೆ ನನ್ನ ಶಾಲಾ ಶಿಕ್ಷಕರು ಗಮನ ಹರಿಸಿಲ್ಲವೇ ? ಈ ಬಗ್ಗೆ ನೆನಪಾಗುತ್ತಿಲ್ಲ.


ನಮಗೆ ಹೈ ಸ್ಕೂಲ್ ನಲ್ಲಿ ನಮಗೆ ಈರೋಡಿ ಮಾಷ್ಟ್ರು ಇಂಗ್ಲಿಷ್ ಗೆ ಇದ್ದದ್ದು.ನಾನು ನೋಟ್ಸ್ ( ಪ್ರಶ್ನೋತ್ತರ) ಬರೆಯುತ್ತಿದ್ದೆನಾ ? ಅದನ್ನೇ  ಕಲಿತು ಯಾಕೆ ಉತ್ತಮ ಅಂಕ ಅಲ್ಲದಿದ್ದರೂ ಪಾಸಾಗುವಷ್ಟು ಅಂಕ ಗಳಿಸುತ್ತಿರಲಿಲ್ಲ ಎಂದು  ನನಗೆ ನೆನಪಾಗುತ್ತಿಲ್ಲ.ಬಹುಶಃ ಅವರು ಬಹಳ ಸಾಧು ಸ್ವಭಾವದವರಾಗಿದ್ದರು.ಪ್ರಶ್ನೋತ್ತರ ಬರೆಯಿಸಿ ಕಲಿತು ಬಾರದೇ ಇದ್ದಾಗ ಎರಡೇಟು ಕೊಟ್ಟಿದ್ದರೆ ಕಲಿಯುತ್ತಿದ್ದೆನೋ ಏನೋ..

 

ನಿಜ ಹೇಳಬೇಕೆಂದರೆ ನನಗೆ is was ,ಮೊದಲಾದ prefixesಗಳ ಜ್ಞಾನ ಇರಲಿಲ್ಲ.

.ಆಗೆಲ್ಲ ಗೈಡ್ ಗಳಿದ್ದವೊ ಇಲ್ವಾ ನನಗೆ ಗೊತ್ತಿಲ್ಲ ಆದರೆ ಹಳ್ಳಿ ಶಾಲೆಯಲ್ಲಿ ಓದುವ ನಮಗೆ ಗೈಡ್ ಗಳು ಸಿಕ್ಕಿರಲಿಲ್ಲ.


ಶಾಲಾ ಕಾಲು ವಾರ್ಷಕ ಮಧ್ಯ ವಾರ್ಷಿಕ ಮುಕ್ಕಾಲು ವಾರ್ಷಿಕ ಪರೀಕ್ಷೆಗಳಲ್ಲಿ ನಾನು ಇಂಗ್ಲಿಷ್ ನಲ್ಲಿ ಪಾಸಾಗುತ್ತಿರಲಿಲ್ಲ.


ಅಂತಿಮ ಪರೀಕ್ಷೆಯಲ್ಲಿ ಒಂದಷ್ಟು ಅಂಕ ಕೊಟ್ಟು ಪಾಸ್ ಮಾಡುತ್ತಿದ್ದಿರಬಹುದು 


ಹತ್ತನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಇದ್ದದ್ದು.ಇಲ್ಲಿ ಉಳಿದ ವಿಷಯಗಳಲ್ಲಿ ಉತ್ತಮ ಅಂಕ ಗಳಿಸುವ ಬಗ್ಗೆ ಆತಗಮ ವಿಶ್ವಾಸ ಇತ್ತು ನನಗೆ.

ಆದರೆ  ಇಂಗ್ಲಿಷ್ ನಲ್ಲಿ ಪಾಸ್ ಆಗುವ ಭರವಸೆ ಇರಲಿಲ್ಲ ಹಾಗಾಗಿ ಫಲಿತಾಂಶದ ದಿನ ಬಹಳಷ್ಟು ಆತಂಕಕ್ಕೆ ಒಳಗಾಗಿದ್ದೆ.ಅದೃಷ್ಟವಶಾತ್ ಪಾಸ್ ಆಗಿದ್ದೆ.


ವಿಜ್ಞಾನ ದಲ್ಲಿ ಉತ್ತಮ ಅಂಕಗಳು ಬಂದಿದ್ದವು.ನನಗೂ ಆಸಕ್ತಿ ಇತ್ತು ಹಾಗಾಗಿ ಸರ್ಕಾರಿ ಕಾಲೇಜಿನಲ್ಲಿ ( ಈಗಿನ ವಿಶ್ವ ವಿದ್ಯಾಲಯ ಕಾಲೇಜು) ವಿಜ್ಞಾನ ವಿಭಾಗದಲ್ಲಿ ದಾಖಲಾತಿ ಪಡೆದೆ.


ಈ ಕಾಲೇಜಿನ ಉಪನ್ಯಾಸಕರೋ ಸಾಕ್ಷಾತ್ ಲಂಡನ್ ನಿಂದ ಉದುರಿದವರ ಹಾಗೆ ಆಡ್ತಿದ್ದರು.


ನಮ್ಮ‌ತರಗತಿಯಲ್ಲಿ 99% ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾ್ರಥಿಗಳಿದ್ದರು.ಆದರೂ ಇಲ್ಲಿನ ಉಪನ್ಯಾಸಕರು ಒಂದಕ್ಷರ ಕನ್ನಡ ದಲ್ಲಿ ಮಾತನಾಡುತ್ತಿರಲಿಲ್ಲ.ಪರಿಣಾಮ ಬಹಳ ಘೋರವಾದದ್ದು.ಹೆಚ್ಚು ಕಡಿಮೆ ಎಲ್ಲಾ ವಿದ್ಯಾರ್ಥಿಗಳು ಫೇಲ್..ನನಗೊಂದು ವಿಚಾರ ತಿಳಿಯುತ್ತಿಲ್ಲ.ಈಗ ನಾನೂ ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕಿ, ನಮಗೆ 100% ಫಲಿತಾಂಶ ತರುವಂತೆ ಇಲಾಖೆಯ ಒತ್ತಡ ಇದೆ .ಸದಾ 100% ಫಲಿತಾಂಶ ತರುವ ನನಗೂ ಪ್ರತಿ ವರ್ಷ ಫಲಿತಾಂಶ ದ ಭಯ ಕಾಡುತ್ತದೆ 

ಹಾಗಿರುವಾಗ 1%2% ಫಲಿತಾಂಶ ಕೂಡ ಬರದೇ ಇದ್ದಾಗ ಈ ಉಪನ್ಯಾಸಕರನ್ನು ಯಾರೂ ಕೇಳುತ್ತಿರಲಿಲ್ಲವೇ? ಇಲಾಖೆ ಕೇಳದಿದ್ದರೂ ಇವರಿಗೊಂದು ಆತ್ಮ ಸಾಕ್ಷಿ ಎಂಬುದು ಇರುತ್ತಿರಲಿಲ್ಲವೇ ? 

ಫಲಿತಾಂಶ ತರಿಸಬೇಕು ಎಂಬ ಇರಾದೆ ಇಲ್ಲಿನ ಉಪನ್ಯಾಸಕರಿಗೆ ಇದ್ದ ಹಾಗೆ ನನಗನಿಸಿಲ್ಲ.


ನಾನು ದ್ವಿತೀಯ ಪಿಯುಸಿ ಓದಿದ ವರ್ಷ 1990-91 ರಲ್ಲಿ ಕ್ಲಾಸ್ ಟೆಸ್ಟ್ ಮಿಡ್ ಟರ್ಮ್ ಪ್ರಿಪರೇಟರಿ ಯಾವುದೂ ಮಾಡಿರಲಿಲ್ಲ ನೇರವಾಗಿ ನಾವು ಅಂತಿಮ ಪರೀಕ್ಷೆ ಬರೆದಿದ್ದೆವು


ಬಹುಶಃ ಪ್ರಥಮ ಪಿಯುಸಿ ಯಲ್ಲಿ ಮಧ್ಯವಾರ್ಷಿಕ ಪರೀಕ್ಷೆ ಮಾಡಿದ್ದರು

ಆಗ ಇಂಗ್ಲಿಷ್ ನಲ್ಲಿದ್ದ  ಕೆಮೆಸ್ಟ್ರಿ ಪ್ರಶ್ನೆ ಪತ್ರಿಕೆಯ ಒಂದು ಪ್ರಶ್ನೆಯ ಅರ್ಥ ಕನ್ನಡದಲ್ಲಿ ಹೇಳಲು ನಾನು ಕೇಳಿದ್ದೆ.ಉಪನ್ಯಾಸಕರು ಕನ್ನಡದಲ್ಲಿ ಅರ್ಥ ಹೇಳಲು ನಿರಾಕರಿಸಿದ್ದರು.ವಾಸ್ತವದಲ್ಲಿ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ಯನ್ನು ವಿಜ್ಞಾನ ವಿಷಯಗಳಲ್ಲಿ ಕೂಡ ಕನ್ನಡ ಮಾಧ್ಯಮದಲ್ಲಿ ಬರೆಯಲು ಅವಕಾಶ ಇತ್ತು‌.ಪ್ರಶ್ನೆ ಪತ್ರಿಕೆ ಕೂಡ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ  ಇರುತ್ತಿತ್ತು.ಇದು ನಮಗೆ  ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ಬರೆದಾಗಲೇ ಗೊತ್ತಾದದ್ದು.ಅದಕ್ಕೂ ಮೊದಲೇ ಹಳೆ ಪ್ರಶ್ನೆ ಪತ್ರಿಕೆ ಕೊಟ್ಟು ಬರೆಸಿ ಅಥವಾ ಓದಿಕೊಂಡು ಅಭ್ಯಾಸ ಮಾಡಲು ಕೂಡ ಹೇಳಿರಲಿಲ್ಲ.


ಈ ಉಪನ್ಯಾಸಕರು ಇಂಗ್ಲಿಷ್ ನಲ್ಲಿ ಮಾತನಾಡುತ್ತಿದ್ದ ಕಾರಣ  ನಮಗೆ ಅವರಲ್ಲಿ ಮಾತನಾಡಲು ಆಗುತ್ತಿರಲಿಲ್ಲ ಪಾಠ ಅರ್ಥ ಆಗುತ್ತಿಲ್ಲ ಎಂದು ಹೇಳಲೂ ಆಗದ ಪರಿಸ್ಥಿತಿ


ಹೆಚ್ಚಿನ ವಿದ್ಯಾರ್ಥಿಗಳದೂ ನನ್ನದೇ ಪರಿಸ್ಥಿತಿ..

ಒಮ್ಮೆ ಫೇಲಾಗಿಯೂ ನಂತರ ಕಟ್ಟಿ  ಹೇಗೋ ಗೈಡ್ ನೋಡಿ ಕಲಿತು ಪಾಸಾದೆ .ಮುಂದೆ ಉಜಿರೆಯಲ್ಲಿ ಬಿಎಸ್ಸಿ ಗೆ ಸೇರಿದೆ.ಇಲ್ಲಿ ಉಪನ್ಯಾಸಕರು ಕನ್ನಡ ದಲ್ಲಿ ಪಾಠ ವಿವರಿಸದೇ ಇದ್ದರೂ ತರಗತಿಯಲ್ಲಿ ಹಾಗೂ ಹೊರಗಡೆ ಕನ್ನಡದಲ್ಲಿ ಮಾತನಾಡುತ್ತಿದ್ದರು.

ಹಾಗಾಗಿ ನಮಗೆ ಇಂಗ್ಲಿಷ್ ಉಪನ್ಯಾಸಕರಾದ ಶಂಕರ ನಾರಾಯಣ ಫಿಸಿಕ್ಸ್ ಉಪನ್ಯಾಸಕರಾದ ಕೇಶವ್ ಸಂಬಂಧಿಕರೂ ಅಲ್ಲಿ ನನಗೆ ಸೀಟ್ ಕೊಡಿಸಿರುವ ಗಣಪಯ್ಯ ಮೊದಲಾದವರಲ್ಲಿ ನಮಗೆ ಮಾತನಾಡುವಷ್ಟು ಸಲುಗೆ ಇತ್ತು.

ಬಿಎಸ್ಸಿ ಯಲ್ಲಿ ನಾನುತೀರ ಉತ್ತಮ ಅಂಕ ಗಳಿಸದಿದ್ದರೂ ಯಾವುದೇ ಸೆಮಿಷ್ಟರ್ ನಲ್ಲಿ ಫೇಲಾಗಿರಲಿಲ್ಲ.

ಇಂಗ್ಲಿಷ್ ನಲ್ಲಿ ಕೂಡ 55-60 ಅಂಕ ಗಳಿಸುತ್ತಿದ್ದೆ

ಬಿಎಸ್ಸಿ ನಂತರ ನಾನು ಸಂಸ್ಕೃತ ಎಂಎ ಗೆ ಸೇರಿದ ನಂತರ ಇಂಗ್ಲಿಷ್ ನಿಂದ ಬಚಾವಾದೆ 

ಸಂಸ್ಕೃತ ವನ್ನು ಸುಲಲಿತವಾಗಿ ಕಲಿತ ನನಗೆ ಇಂಗ್ಲಿಷ್ ಹಿಂದಿ ಭಾಷೆ ಯಾಕೆ ಒಲಿಯಲಿಲ್ಲ ಬಹುಶಃ ಸಂಸ್ಕೃತ ವನ್ನು  ಪ್ರಶಿಕ್ಷಣ ಶಿಬಿರ ಸಂಭಾಷಣಾ ಶಿಬಿರ ದಲ್ಲಿಕಲಿಸುವಂತೆ ಈ ಭಾಷೆಗಳನ್ನು ಕಲಿಸಿದ್ದರೆ ನನ್ನಂತಹ ಲಕ್ಷಾಂತರ ವಿದ್ಯಾರ್ಥಿಗಳು ಪರಿಣತಿ ಪಡೆಯುತ್ತಿದ್ದರೆನಿಸ್ತದೆ ನನಗೆ


ಸಂಸ್ಕೃಯ ಎಂಎ ಕಲಿಯುವಾಗ  ಎಲ್ಲೂ ಇಂಗ್ಲಿಷ್ ಬೇಕಾಗಿ ಬರಲಿಲ್ಲ.


ನಂತರ ಮೊದಲಿಗೆ ಶ್ರೀರಾಮ ಪ್ರಾಥಮಿಕ ಶಾಲೆ ಕಲ್ಲಡ್ಕದಲ್ಲಿ ಸಂಸ್ಕೃತ ಶಿಕ್ಷಕಿ ಆಗಿ ಸೇರಿದೆ‌‌.ನಂತರ ಸೈಂಟ್ ಅಲೋಶಿಯಸ್ ಕಾಲೇಜಿನ ಅರೆ ಕಾಲಿಕ ಸಂಸ್ಕೃತ ಉಪನ್ಯಾಸಕಿ ಯಾಗಿ ಕೆಲಸ ಸಿಕ್ತು.


ಇಲ್ಲಿ ಅನೇಕ ಕನ್ನಡೇತರ ವಿದ್ಯಾರ್ಥಿಗಳು ಇದ್ದರು.ಇವರಿಗೆ ಸಂಸ್ಕೃತ ವನ್ನು ಇಂಗ್ಲಿಷ್ ಮೂಲಕ ಹೇಳಿಕೊಡಬೇಕಾಗಿತ್ತು..

ಉಫ್..ನನ್ನ ಪರಿಸ್ಥಿತಿ ಯಾರಿಗೂ ಬೇಡ.‌.ಗೈಡ್ ನಿಂದ ಬಾಯಿಪಾಠ ಮಾಡಿಕೊಂಡು ಹೋಗಿದ್ದು ತರಗತಿಯ ಒಳಗೆ ಹೋಗುವಾಗ ಮರೆತು ಹೋಗುತ್ತಿತ್ತು..ಸಂಸ್ಕೃತ ದಲ್ಲಿ ವಿವರಿಸಿದರೆ ಮಕ್ಕಳಿಗೆ ಅರ್ಥವಾಗುತ್ತಿರಲಿಲ್ಲ‌‌.ಕನ್ನಡದಲ್ಲಿ ವಿವರಿಸಿದರೆ ಕನ್ನಡೇತರ ಮಕ್ಕಳು ಕಣ್ಣು ಬಾಯಿ ಬಿಡ್ತಿದ್ದರು.ಆಗ ನನ್ನ ಭಯಾನಕ ಇಂಗ್ಲಿಷ್ ನಲ್ಲಿ ಪಾಠ ಮಾಡಿದ್ದೆ

ಈ ಸಮಯದ ನನ್ನ ಶಿಷ್ಯೋತ್ತಮರಲ್ಲಿ 

ನನ್ನ ಹತ್ತಿರ ಸಂಬಂಧಿಕರಾದ ವೆಂಕಟೇಶ್ವರ ,ರಾಮ‌ಪ್ರಸಾದ ,ಗಣರಾಜ ಮೊದಲಾದವರು ಇದ್ದರು.ಇವರು ನನ್ನ ಮರ್ಯಾದೆಯನ್ನು ಉಳಿಸಿದವರು..ನನ್ನ ಅಮೋಘ ಇಂಗ್ಲಿಷ್  ಭಾಷೆಯ ಪಾಠದ ಬಗ್ಗೆ ಇವರೆಲ್ಲಿಯೂ ತುಟಿಕ್ ಪಿಟಕ್ ಎನ್ನದೆ  ಎಲ್ಲೂ ಹೇಳದೆ ( ಹೇಳಿಲ್ಲ ಎಂದು ಭಾವಿಸಿರುವೆ ,) ನನ್ನ ಮರ್ಯಾದೆ ಉಳಿಸಿದ್ದರು ಅಷ್ಟೇ ಅಲ್ಲ ನಾನು ಚೆನ್ನಾಗಿ ಪಾಠ ಮಾಡುತ್ತೇನೆ ಎಂದು ಸುಳ್ಳು ? ಹೇಳಿ ಇಲ್ಲದೇ ಇದ್ದ  ನನ್ನ ಘನತೆಯನ್ನು ಹೆಚ್ಚಿಸಿದ್ದರು‌.


ಒಂದೆಡೆ ಸಂಸ್ಕೃತ ಕ್ಕೆ ಸರಿಯಾದ ಉದ್ಯೋಗಾವಕಾಶ ಇಲ್ಲದಿರುದು ಇನ್ನೊಂದೆಡೆ ಇಂಗ್ಲಿಷ್ ನಲ್ಲಿ ಪಾಠ ಮಾಡಬೇಕಾದ ಅನಿವಾರ್ಯತೆ ಈ ಎರಡು ಕಾರಣಕ್ಕಾಗಿ ಸಂಸ್ಕೃತ ಬಿಟ್ಟು ಬೇರೆ ಕಲಿಯಲು ಹೊರಟೆ‌.

ಮೊದಲಿಗೆ ಹಿಂದಿ ಎಂಎ ಖಾಸಗಿ ಕಟ್ಟಿ ಓದಿದೆ.ಅಂಕ ಬಂದರೂ ಭಾಷೆ ಬರಲಿಲ್ಲ ‌ಭಾಷೆ ಬರದೆ ಹಿಂದಿ‌ಮಾತೃ ಭಾಷೆಯಾಗಿರುವ ಕೊಂಕಣಿ, ಮಾರ್ವಾಡಿ ವಿದ್ಯಾರ್ಥಿಗಳ ಎದುರು ಹೋಗಿ ವಿದೂಷಕರಂತೆ ಅತಾ ಹೆ ಕರ್ತಾ ಹೆ ಎನ್ನು ವ ಸಂಗತಿ ಅಗಲಿಕ್ಕಿಲ್ಲ 

ಎಂದು ಕನ್ನಡ ಎಂಎ ಓದಿದೆ..

ಅಬ್ಬಾ..ಕೊನೆಗೂ ಇಂಗ್ಲಿಷ್ ನ ಉರುಳಿಂದ ಬಚಾವಾದೆ .

ಕನ್ನಡ ಕೈ ಹಿಡಿಯಿತು. ತಲೆ ಎತ್ತಿ ಬದುಕುವಂತೆ ಗೌರವದ ಉದ್ಯೋಗವನ್ನು ಒದಗಿಸಿತು 

ಇಷ್ಟಾದರೂ ಇಂಗ್ಲಿಷ್ ನನ್ನನ್ನು ಬಿಡಲಿಲ್ಲ.ಎಂಪಿಲ್ ಎರಡು ಪಿಎಚ್ ಡಿಗಳ ನಂತರವೂ ತುಳು ಸಂಸ್ಕೃತಿ ದೈವಗಳ ಅಧ್ಯಯನ ಮುಂದುವರಿಸಿದೆ.ನನ್ನ ಕುತೂಹಲ ತಣಿಸಿಕೊಳ್ಳಲು ಅಧ್ಯಯನ ಮಾಡಿದ್ದಾದರೂ ನಾನು ಕಂಡುಕೊಂಡ ವಿಚಾರವನ್ನು ಆಸಕ್ತ ಜನರಿಗೆ ತಲುಪಿಸುದಕ್ಕಾಗಿ ಲೇಖನಗಳನ್ನು ಬರೆದೆ .ಪುಸ್ತಕಗಳನ್ನು ಬರೆದೆ ಪ್ರಕಟಿಸಿದೆ.


ಈಗ ಅನೇಕ ಕನ್ನಡೇತರರು ಕರೆ ಮಾಡಿ ಮೆಸೇಜ್ ಮಾಡಿ ಈ ಬಗ್ಗೆ ಇಂಗ್ಲಿಷ್ ನಲ್ಲಿ ಬರೆಯಿರಿ ನಮಗೆ ಮಾಹಿತಿ ಬೇಕೆನ್ನಲು ಶುರು ಮಾಡಿದರು.ಜೊತೆಗೆ ಇಂಗ್ಲಿಷ್ ನಲ್ಲಿ ಭೂತಾರಾದನೆ ಬಗ್ಗೆ ಸರಿಯಾದ ಪುಸ್ತಕ ಪ್ರಕಟವಾಗಿಲ್ಲ‌. ಎಸಿ ಬರ್ನೆಲ್ ಬರೆದ Devil worship of Tukuvas ಪುಸ್ತಕದ ಪ್ರಭಾವದಿಂದಾಗಿ ಹೊರ ಜಗತ್ತಿಗೆ ನಮ್ಮ ಭೂತ/ ದೈವಗಳ ಬಗ್ಗೆ ತಪ್ಪು ಅಭಿಪ್ರಾಯ ಮೂಡಿದೆ.ಹಾಗಾಗಿ ಈ ಪುಸ್ತಕವನ್ನು ಇಂಗ್ಲಿಷ್ ನಲ್ಲೂ ಪ್ರಕಟಿಸಬೇಕು ಎಂದು ನಿರ್ಧರಿಸಿದೆ.ಅಶ್ವಿನಿ ಭಟ್ ಬಹಳ ಪ್ರೀಯಿಂದ ಅನುವಾದ ಮಾಡಿ ಕೊಟ್ಟರು‌

ಇತ್ತೀಚೆಗೆ ರಣವೀರ್ ಸಿಂಗ್ ಚಾಮುಂಡಿ ದೈವವನ್ನು female ghost ಎಂದಿದ್ದನ್ನು ಕೇಳಿದ ಮೇಲೆ ಈ ಪುಸ್ತಕವನ್ನು ಪ್ರಕಟಿಸಿ  ಜನಪ್ರಿಯ ಮಾಡುವ ಅನಿವಾರ್ಯತೆ ಇದೆ ಎಂದೆನಿಸಿದೆ.ನಮ್ಮ ದೈವಗಳ ಬಗ್ಗೆ ಸರಿಯಾದ ಮಾಹಿತಿಯನ್ನು ಹರಡಲೇ ಬೇಕು ಎಂಬ ನಿರ್ಧಾರಕ್ಕೆ ಬಂದೆ


ಅದರ ಫಲಿತವಾಗಿ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ ಮೊ 9480516684 

ಈಗ ಇಂಗ್ಲಿಷ್ ನಲ್ಲಿ ಪರಿಷ್ಕೃತ ಗೊಂಡು 1259 ದೈವಗಳ ಮಾಹಿತಿ ಒಳಗೊಂಡು  ಸಾವಿರದ ನೂರ ತೊಂಬತ್ತ ನಾಲ್ಕು ಪುಟಗಳ ಬೃಹತ್ ಗ್ರಂಥವಾಗಿ The Thousand and one Daivas of Karavali- A Hiistorical cultural and Analytical study ಎಂಬ ಹೆಸರಿನಲ್ಲಿ ಪ್ರಕಟ ಆಗುತ್ತಿದೆ 

ಇಂಗ್ಲಿಷ್ ಬಾರದ ಹಳ್ಳಿ ಹುಡುಗಿಯ ಒಂದು ಸಾವಿರದ ನೂರ ತೊಂಬತ್ತೆರಡು ಪುಟಗಳ ಬೃಹತ್ ಗ್ರಂಥವೊಂದು ಇಂಗ್ಲಿಷ್ ನಲ್ಲಿ ಪ್ರಕಟವಾಗಿ ನಮ್ಮ ಸಂಸ್ಕೃತಿಯನ್ನು ನ್ನು ವಿಶ್ವಾದ್ಯಂತ ಹರಡಲು ಹೊರಟಿದೆ ಎಂಬುದು ನಿಜವೇ ಕನಸೇ ಎಂದೆನಿಸ್ತದೆ ನನಗೆ

ಏನೋ ಒಂದು ಹುಚ್ಚು ಧೈರ್ಯದಲ್ಲಿ‌ ಅಶ್ವಿನಿ ಭಟ್ Ashwini Bhat  ಜೊತೆಗೆ ಸೇರಿಕೊಂಡು ದೊಡ್ಡದೊಂದು ಸಾಹಸಕ್ಕೆ ಹೊರಟಿದ್ದೇವೆ 

ನಿಮ್ಮೆಲ್ಲರ ಬೆಂಬಲ ಎಂದಿನಂತೆ ಇರಲಿ 

ಜನ್ನ ಹೇಳಿದಂತೆ.

ಕಟ್ಟಿಯುಮೇನೋ ಪೊಸ ಭಾಸಿಂಗಮುಮ್

ಮುಡಿವ ಭೋಗಿಗಳಿಲ್ಲದೆ ಬಾಡಿ ಪೋಗದೇ?

ನನ್ನ ಇಪ್ಪತ್ತೈದು ವರ್ಷಗಳ ಪರಿಶ್ರಮ ಕ್ಕೆ ನಿಮ್ಮೆಲ್ಲರ ಬೆಂಬಲ ಇರಲಿ ಈಗ್ರಂಥದ ಬಗ್ಗೆ ನಿಮ್ಮ ಸ್ನೇಹಿತರಿಗೆ ಬಂಧು ಬಳಗದವರಿಗೆ ತಿಳಿಸಿ 

ಈಗ ಈ ಗ್ರಂಥಕ್ಕೆ pre publication offer ಕೂಡ ಲಭ್ಯವಿದೆ 

ಡುಂಡೀರಾಜ್ ಅವರು ಹೇಳಿದಂತೆ

ರಾವಣನ ಮಡದಿ ಮಂಡೋದರಿ.

ಪುಸ್ತಕವನ್ನು ಕೊಂಡೋದಿರಿ

ಧನ್ಯವಾದಗಳು 

ಮಾತೃಶ್ರೀ ಮಾತೃಶ್ರೀ ಪ್ರಕಾಶನ ಪ್ರಕಾಶನ ಬೆಂಗಳೂರು 

ಲೇಖಕರು ಡಾ‌‌.ಲಕ್ಷ್ಮೀ ಜಿ ಪ್ರಸಾದ್, ಮೊಬೈಲ್ 9480516684 

Tulunada Porludisira 

Tulunada Thudar 

Tulunada Daivalu 

Tulu Naad Baase Sanskrithi 

Tulunada Daivolu 

Dharma Chavadi Namma Tulunad 

NaMo Tulunadu 

Tulu Patherga Tulu Oripaga-Registered 

Tulunaduda Gowji Gammathu 

Tulunadu Marlara Mane 

Tulunada Daiva Shrishti 

Tulunad Daiva 

Tulu Rajya 

Namma Tulunadu 

Karnikada Daivolu Tulunad 

Kudla Tulu Pathrike K 

Daivaradhakere Koota 

Saramani Daivolu 

Muggerkala Daivasthana Mattu Katapady 

Sri Mogera Daivasthana Kodyadka 

Daivabharana Padubidri 

Daiva Rahu Guliga 

#kolam 

#daivaradhane 

#daivakola 

#bhutakola #kundapura 

#karavali #karavalikarnataka 

#daivaradane 

#daiva #theyyamkannur #theyyamkasaragod 

#theyyamphotography 

#theyyamsofmalabar


Friday, 26 December 2025

ಆತ್ಮ‌ಕಥೆಯ ಬಿಡು ಭಾಗಗಳು- ಒಂದು ಕಾಶಿ ಇನ್ನೊಂದು ಕಾಶಿಯತ್ತ ನಡೆವಾಗ

 


ಒಂದು ಕಾಶಿ ಇನ್ನೊಂದು ಕಾಶಿಯತ್ತ ನಡೆವಾಗ ..


“ಕಾಸಿಗಿ ಹೋಗುದಕ ಏಸೊಂದು ದಿನಬೇಕು/

, ತಾಸ್ ಹೊತ್ತಿನ ಹಾದಿ ತೌರೂರು ಮನೆಯಲ್ಲಿ/

 ಕಾಶಿ ಕುಂತವಳೆ ... ಕಾಸಿ ಕುಂತವ್ಳೆ ಹಡೆದವ್ವ

ನನ್ನಮ್ಮನೇ ಒಂದು ಕಾಶಿ..ಅವರೀಗ ಕಾಶಿಗೆ ಹೋಗಿದ್ದಾರೆ 

ನನ್ನಮ್ಮ ,ಅಣ್ಣ ಅಕ್ಕ ಬಾವ ,ತಮ್ಮ ತಮ್ಮನ ಹೆಂಡತಿ ಮಕ್ಕಳು ಮೊನ್ನೆ ಕಾಶಿಗೆ ಹೊರಟರು.ಅಕ್ಕ ಬಾವ ತಮ್ಮ ತಮ್ಮನ ಮಡದಿ ಮಕ್ಕಳು ಮಂಗಳೂರಿನಿಂದ ವಿಮಾನ ಹತ್ತಿ ಇಪ್ಪತ್ತೆರಡನೆಯ ತಾರೀಕಿನಂದು ಸಂಜೆ ಬೆಂಗಳೂರಿನ ನಮ್ಮ ಮನೆಗೆ ಬಂದರು.ಅಮ್ಮ ಹದಿನೈದು ದಿನ ಮೊದಲೇ ನಮ್ಮ ಮನೆಗೆ ಬಂದಿದ್ದರು.ಮಗ ಊರಿಗೆ ಹೋದವನು ಒತ್ತಾಯ ಮಾಡಿ ಅಮ್ಮನನ್ನು ನಮ್ಮನೆಗೆ ಕರೆದುಕೊಂಡು ಬಂದಿದ್ದ.

ಇಪ್ಪತ್ತಮೂರನೇ ತಾರೀಕಿನಂದು ಬೆಳಗೆ ಎಂಟೂವರೆಯ ವಿಮಾನದಲ್ಲಿ ಕಾಶಿಗೆ( ವಾರಾಣಸಿ) ಹೋಗಲು ಸೀಟ್ ಬುಕ್ ಆಗಿತ್ತು.

ಅಕ್ಕ ಬಾವ ತಮ್ಮ ಮಕ್ಕಳೆಲ್ಲ ಸೇರಿದ್ದರಿಂದ ಬಹಳ ಸಂಭ್ರಮದ ವಾತಾವರಣ.

ತಮ್ಮನ ಮಕ್ಕಳಿಗೆ ಪಿಜ್ಜಾ ತಿನ್ನುವ ಆಸೆ ಅಯಿತು.ಇದಕ್ಕೆ ನನ್ನ ಮಗನ ಕುಮ್ಮಕ್ಕು ಇತ್ತು ,ಬಹುಶಃ ಇವನೇ ಅವರಿಗೆ ಹಾಗೆ ಹೇಳುವಂತೆ ಹೇಳಿ ಕೊಟ್ಟಿರಬಹುದು ಯಾಕೆಂದರೆ ಇವನಿಗೆ ಪಿಜ್ಜಾ ತುಂಬಾ ಇಷ್ಟ !ಆದರೆ ಮರುದಿನದಿಂದ ಐದು ದಿನಗಳ ಕಾಲ ಪ್ರಯಾಣ ಇದ್ದ ಕಾರಣ ತಮ್ಮ ಬೇಡ ಎಂದು ಹೇಳಿದರು.ಸೊಸೆಯ ಮುಖ ಚಿಕ್ಕದಾಯಿತು.ಆಗ ನಾನು ಮುಂದಿನ ಬೇಸಗೆ ರಜೆಯಲ್ಲಿ ಹದಿನೈದು ದಿನ ಇರುವಂತೆ ಬಾ..ಇಡೀ ಬೆಂಗಳೂರು ಸುತ್ತಿಸುತ್ತೇನೆ ಬೇಕಾದ್ದು ತೆಗೆದು ಕೊಡುತ್ತೇನೆ ಎಂದು ಸಮಾಧಾನ ಮಾಡಿದೆ.

‌ಮರುದಿವಸ ನಾಲ್ಕೂವರೆಗೆ ವಿಮಾನ ನಿಲ್ದಾಣಕ್ಕೆ ಹೋಗಲು ಕಾರನ್ನು ಬರುವಂತೆ ಹೇಳಿದ್ದೆವು.

‌ಮರು ದಿನದ ತಿಂಡಿ ಎಲ್ಲ ಮೊದಲೇ ಸಿದ್ಧ ಪಡಿಸಿದ್ದೆವು..

‌ಮರು ದಿನ ಮೂರು ಗಂಟೆಗೆ ಏಳ ಬೇಕಿದ್ದರಿಂದ ಬೇಗ ಬೇಗನೆ ಊಟ ಮಾಡಿ ಮಲಗಿ ಎಂದು ಅಮ್ಮ ಗದರಿದರೂ ನಮ್ಮ ಅಕ್ಕ ತಮ್ಮಂದಿರ ಮಾತು ಹರಟೆ ತಮಾಷೆ ಸುಲಭಕ್ಕೆ ಕೊನೆಗಾಣುವಂತಿರಲಿಲ್ಲ.ಅಂತೂ ಇಂತೂ ಒಂಬತ್ತೂವರೆಗೆ ಎಲ್ಲರಿಗೆ ಚಾಪೆ ಹಾಸಿ ಮಲಗಲು ವ್ಯವಸ್ಥೆ ಮಾಡಿದೆ, ಎಲ್ಲರೂ ಬೆಳಕು ನಂದಿಸಿ ಹಾಸಿಗೆಯಲ್ಲಿ ಬಿದ್ದು ಕೊಂಡೆವು.ಅವರಿಗೆಲ್ಲಾ ಪ್ರಯಾಣ ಮಾಡಿ ಬಂದು ಸುಸ್ತಾಗಿ ನಿದ್ರೆ ಬಂದಿರಬಹುದು

‌ಆದರೆ ನನಗೆ ಮಾತ್ರ ಒಂದಿನಿತು ನಿದ್ದೆ ಕಣ್ಣಿಗೆ ಹತ್ತಲಿಲ್ಲ..ಕಣ್ಣಿಗೆ ಕಾಣುತ್ತಾ ಇದ್ದದ್ದು ಒಂದೇ ದೃಶ್ಯ... ನಾನೂ ಕಾಶಿಗೆ ಬರುತ್ತೇನೆ ಎಂದು ದುಃಖಿಸಿ ದುಃಖಿಸಿ ಅಳುತ್ತಿದ್ದ ಮೂರು ನಾಲ್ಕು ವರ್ಷದ ಸಣ್ಣ ಹುಡುಗಿಯ ಚಿತ್ರ...ಆ ಹುಡುಗಿ ಬೇರೆ ಯಾರೂ ಅಲ್ಲ..ನಾನೇ ಆಗಿದ್ದೆ.

‌ನಾನು ಚಿಕ್ಕವಳಿದ್ದಾಗ ಅಂದರೆ ಸುಮಾರು ನಲುವತ್ತೆರಡು ವರ್ಷಗಳ ಮೊದಲು ನಮ್ಮ ಕುಟುಂಬವಿಡೀ ಕಾಶಿಗೆ ಹೋಗಿತ್ತು.ಸಂಸಾರದ ಜವಾಬ್ದಾರಿ ಹಾಗೂ ಎಳೆಯ ಮಕ್ಕಳಿರುವ ಕಾರಣದಿಂದಾಗಿ ನನ್ನ ತಂದೆ ತಾಯಿ ಮತ್ತು ನಾವು ಐದು ಜನ ಮಕ್ಕಳು ಮಾತ್ರ ಹೋಗಿರಲಿಲ್ಲ..

‌ನನಗೆ ಬೇರೆ ಯಾರು ಹೊದರೂ ಅಷ್ಟೊಂದು ದುಃಖ ಆಗುತ್ತಿರಲಿಲ್ಲವೋ ಏನೋ..ನನ್ನ ಜೊತೆ ಜೊತೆಗೇ ಬೆಳೆದ ನನಗಿಂತ ಕೆವಲ ಐದಾರು ತಿಂಗಳು ದೊಡ್ಡವಳಾದ ಚಿಕ್ಕಪ್ಪನ ಮಗಳು ಸಂಧ್ಯಾ ನನ್ನನ್ನು ಬಿಟ್ಟು  ಕಾಶಿಗೆ ಹೋಗುವುದು ಸಹಿಸಲಾಗದ ವಿಚಾರವಾಗಿತ್ತು.ಚಿಕ್ಕಪ್ಪ ಚಿಕ್ಕಮ್ಮ ಹೋಗುವ ಕಾರಣ ಅವಳನ್ನು ಕರೆದುಕೊಂಡು ಹೋಗಿದ್ದರು ಅದೇನು ಅಸಹಜ ವಿಚಾರವಲ್ಲ 

‌ಆದರೆ ಅಷ್ಟೆಲ್ಲ ಯೋಚಿಸುವಷ್ಟು ನಾನು ದೊಡ್ಡವಳಾಗಿರಲಿಲ್ಲ.ಹಾಗಾಗಿ ಒಂದೇ ಸಮನೆ ನಾನೂ ಕಾಶಿಗೆ ಬರುತ್ತೇನೆ ಎಂದು ಹಠ ಮಾಡುತ್ತಿದ್ದೆ

ನನ್ನಲ್ಲಿ ಇರುವುದರಲ್ಲಿ ಒಂದು ಚಂದದ  ಕೆಂಪುಬಣ್ಣದ ಫ್ರಾಕ್ ಹಾಕಿ ಸಿದ್ಧಳಾಗಿದ್ದೆ.ಯಾರೇನೂ ಹೇಳಿ ಸಮಾಧಾನ ಮಾಡಿದರೂ ನಾನು ಕೇಳುವ ಪರಿಸ್ಥಿತಿ ಯಲ್ಲಿ ಇರಲಿಲ್ಲ ಯಾಕೆಂದರೆ ಸಂಧ್ಯಾ ಹೋಗುತ್ತಿದ್ದಾಳಲ್ಲ‌! ಮತ್ತೆ ನನ್ನನ್ಯಾಕೆ ಕರೆದುಕೊಂಡು ಹೋಗಬಾರದು ಎಂಬುದೊಂದೇ ಪ್ರಶ್ನೆ ನನ್ನದು‌ಆಗ ಅಜ್ಜಿ ಅವಳ ತಂದೆ ತಾಯಿ ಹೋಗುತ್ತಾರೆ ಹಾಗಾಗಿ ಅವಳನ್ನು ಕರೆದುಕೊಂಡು ಹೋಗುತ್ತಾರೆ...ನೀನು ನಿನ್ನ ತಂದೆ ತಾಯಿ ಹೋದಾಗ ಅವರ ಜೊತೆಯಲ್ಲಿ ಹೋಗು ಕಾಶಿಗೆ ಹೋಗುದೆಂದರೆ ಸಣ್ಣ ವಿಚಣರವಲ್ಲ..ಅದಕ್ಕೆ ಪುಣ್ಯ ಬೇಕು ಎಂದು ಏನೇನೋ ಹೇಳಿದರು...ಅದೆಲ್ಲ ಅರ್ಥ ಆಗುವ ವಯಸ್ಸು ನನ್ನದಲ್ಲ.ನನಗೆ ಕಾಶಿ ಎಂದರೇನು ? ಎಂದು ಕೂಡ ಗೊತ್ತಿರಲಿಲ್ಲ. ನನ್ನ ಒಬ್ಬ ಚಿಕ್ಕಪ್ಪ ರಾಮಕೃಷ್ಣ ಭಟ್ ಕಾಶಿಯಲ್ಲಿ ಪ್ರೊಫೆಸರ್ ಆಗಿದ್ದರು‌.ಅವರೆಂದರೆ ನನಗೆ ತುಂಬಾ ಇಷ್ಟ ಹಾಗಾಗಿ ಇವರೆಲ್ಲ ಅವರ ಮನೆಗೆ ಹೋಗುತ್ತಾರೆ ಎಂದು ಭಾವಿಸಿದ್ದೆ.ಹಾಗಾಗಿ ಸಂಧ್ಯನ ಜೊತೆಗೆ ನನಗೂ ಕಾಶಿ ಅಪ್ಪಚ್ಚಿ ಮನೆಗೆ ಹೋಗಬೇಕೆಂದಿತ್ತು.

ಬಹುಶಃ ಇವರೆಲ್ಲ ಬೆಳಗಿನ ಜಾವ ಮನೆ ಬಿಟ್ಟಿರಬಹುದು ಮಂಗಳೂರು ತನಕ ಕಾರು ಅಥವಾ ಜೀಪಿನಲ್ಲಿ ಹೋಗಿ ಅಲ್ಲಿಂದ ರೈಲಿನಲ್ಲಿ ಹೋಗಿದ್ದಿರಬಹುದು.

ಇವರನ್ನು ಕಳಹಿಸಿಕೊಡುವುದಕ್ಕಾಗಿ ಇರಬಹುದು ನನ್ನ ಸೋದರತ್ತೆ ಮುಂಡ್ರಕಜೆ ಅತ್ತೆ ಬಂದಿದ್ದರು.ಇವರೆಲ್ಲ ಹೊರಡುವಾಗ ನಾನು ಅತ್ತು ಕರೆದು ಗಲಾಟೆ ಮಾಡುತ್ತೇನೆಂದು ಇರಬಹುದು, ಅತ್ತೆ ನನ್ನನ್ನು ಮುದ್ದು ಮಾಡಿ ನಾನು ನೀನು ಒಟ್ಟಿಗೆ ಕಾಶಿಗೆ ಹೋಗುವ ಆಯ್ತಾ ಎಂದು ಮುದ್ದು ಮಾಡಿ ಕೈ ಹಿಡಿದು ಗುಡ್ಡ ಹತ್ತಿ ಎಲ್ಲಿಗೋ ಕರೆದುಕೊಂಡು ಹೋದರು.ಅಲ್ಲಿ ನಾಯಿ ಬೆಕ್ಕುಗಳ ಕಥೆ ಹೇಳಿದರು.ಇಲ್ಲಿ ನನ್ನ ಅತ್ತೆ ಬಗ್ಗೆ ಒಂದೆರಡು ಮಾತು ಬರೆಯಲೇ ಬೇಕು.ನನ್ನತ್ತೆ ಹೆಚ್ಚೇನೂ ಓದಿದವರಲ್ಲ..ಆದರೆ ಹಳ್ಳಿ ಮದ್ದುಗಳ ಕುರಿತು ಅಪಾರ ಜ್ಣಾನವಿದೆ.ಅವರ ಮನೆಗೆ ಬಂದು ಅನೆಕರು ಔಷಧಿ ತಗೊಂಡು ಹೋಗಿ ಗುಣಮುಖರಾಗುತ್ತಿದ್ದರು.ಬಂದವರಿಗೆಲ್ಲ ಉಚಿತವಾಗಿ ಔಷಧ ಕೊಡುತ್ತಿದ್ದದಲ್ಲದೆ ಊಟ ತಿಂಡಿಯನ್ನು ಕೂಡ ಬಡಿಸುತ್ತಿದ್ದರು.ಆ ಬಗ್ಗೆ ಅವರಿಗೆ ಒಂದಿನಿತು ಬೇಸರವಿರಲಿಲ್ಲ.ಅವರಿಗೆ ಅನೇಕ ಕಥೆಗಳು ಗೊತ್ತಿದ್ದವು. ಹೆಣ್ಣು ನಾಯಿ ಎರಡು ಮನುಷ್ಯ ಶಿಶುಗಳನ್ನು ಮರಿ ಹಾಕುವುದು ,ಅವರು ದೊಡ್ಡವರಾದ ಮೇಲೆ ದೊಡ್ಡವಳು ತಾಯಿ ನಾಯಿ ಬಾಗಿಲಿಗೆ ಬಂದಾಗ ಕಲ್ಲು ಬಿಸಾಡಿ ಓಡಿಸುವುದು,ಚಿಕ್ಕವಳು ಆದರದಿಂದ ನೋಡಿಕೊಳ್ಳುವುದು ಅವಳಿಗೆ ತಾಯಿ ನಾಯಿ ನಿಧಿಯನ್ನು ತೋರಿಸುವುದು..ಇತ್ಯಾದಿ ಅನೇಕ ಜಾನಪದ ಕಥೆಗಳ ಭಂಡಾರವೇ ಅತ್ತೆಯ ಬಾತಿಯೊಳಗೆ ಅಡಗಿತ್ತು.

ಹೀಗೆ ಅತ್ತೆ ಕಥೆ ಹೇಳುತ್ತಾ ನನ್ನನ್ನು ಮಂಗಡಿಸಿ( ಸಮಾಧಾನ ) ಮಾಡಿ ಮನೆಗೆ ಹಿಂದಿರುಗುವಷ್ಟರಲ್ಲಿ ಮನೆ ಇಡೀ ಖಾಲಿ ಆಗಿತ್ತು.ಎಲ್ಲರೂ ಕಾಶಿಗೆ ಹೋಗಿ ಆಗಿತ್ತು.ನಾನು ಮಂಗ ಆದ್ದು ಗೊತ್ತಾಗಿ ಮತ್ತೆ ಅತ್ತು ಗೋಳಾಡಿದೆ.ಆಗ ಅಮ್ಮ ನಾವು ಕೂಡ ಮುಂದೆ ಕಾಶಿಗೆ ಹೋಗುವ ಎಂದು ಸಮಾಧಾನ ಮಾಡಿದರು.

ಅವರೆಲ್ಲ ಕಾಶಿಗೆ ಹೋಗಿ ಬಂದರು..ಅಮ್ಮನಿಗೊಂದು ಪಟ್ಟೆ ಸೀರೆ ತಂದಿದ್ದರು..ನನಗೂ ಏನಾದರೂ ಹೊಸ ಅಂಗಿ ತಂದಿರಬಹುದೇ ಎಂದು ಆಸೆ ಗಣ್ಣಿನಿಂದ ತಂದ ವಸ್ತುಗಳನ್ನು ನೊಡುತ್ತಾ ಕಾಯುತ್ತಿದ್ದೆ..ಕಾದದ್ದೇ ಬಂತು ಅಷ್ಟೇ !

ಕಾಲ ಒಂದೇ ತರಹ ಇರುವುದಿಲ್ಲ..1996 ,ರಲ್ಲಿ ನಾನು ಕಾಶಿ ಹರಿದ್ವಾರ ಹೃಶೀಕೇಶ ಮೊದಲಾದೆಡೆ ಹೋಗಿ ಬಂದೆ ಆಗಲೂ ನನಗೆ ನನ್ನನ್ನು ಬಿಟ್ಟು ಹೊದ ನೆನಪು ಕಾಡಿತ್ತು.

ತಂದೆ ಇರುವಾಗಲೇ ನಮಗೆಲ್ಲ ಕಾಶಿಗೆ ಹೋಗಿ ಬರಬೇಕೆಂದು ಇತ್ತು‌..ಆದರೆ ಯಾಕೋ ಕಾಲ ಕೂಡಿ ಬರಲಿಲ್ಲ.. ತಂದೆಯವರು ಅನಿರೀಕ್ಷಿತವಾಗಿ ಸಡನ್ ಆಗಿ ತೀರಿ ಹೋದರು‌.ಆಗ ಅವರ ಅಸ್ಥಿಯನ್ನು ಗಂಗೆಯಲ್ಲಿ ಹಾಕುವ ಸಲುವಾಗಿ ಶುದ್ಧೀಕರಿಸಿ ಎತ್ತಿಟ್ಟಿದ್ದೆವು.

ನಿನ್ನೆ ತಂದೆಯವರ ಏಳನೇ ವರ್ಷದ ತಿಥಿ ಇದನ್ನು ಪ್ರಯೋಗದಲ್ಲಿ ಮಾಡಿದರು.( ನನಗೆ ಇವರೊಂದಿಗೆ ಕಾಶಿಗೆ ಹೋಗಲಾಗಲಿಲ್ಲ)

ಈ ಬಾರಿ ಕಾಶಿಗೆ ಹೊರಡುವಾಗ ಅಮ್ಮ ಬಹಳ ಭಾವುಕರಾಗಿದ್ದರು.ಹಿಂದೆ ತಾನನುಭವಿಸಿದ ಅವಮಾನ ತಿರಸ್ಕಾರಗಳು ಜೊತೆಗೆ ಅಪ್ಪನ ನೆನಪೂ ಆಗಿರಬಹುದು.

ಮೊದಲೊಂದು ಕಾಲವಿತ್ತು‌ಜನರು ನಡೆದು ಕೊಂಡು ಕಾಶಿಗೆ ಹೋಗುತ್ತಿದ್ದರು‌

ನನ್ನ  ಅಜ್ಜಿ ಚಿಕ್ಕಪ್ಪ ನವರೆಲ್ಲ  ರೈಲಿನಲ್ಲಿ ಕಾಶಿಗೆ ಹೋಗಿದ್ದರೆ ಇಂದು ಅಮ್ಮ ವಿಮಾನದಲ್ಲಿ ಹೋಗಿದ್ದಾರೆ.

ಕಾಲ ಎಲ್ಲರ ಕಾಲನ್ನೂ ಎಳೆಯುತ್ತದೆ ,ಯಾರನ್ನೂ ಬಿಡುವುದಿಲ್ಲ..ಕಾಲದ ಚಕ್ರ ಮೇಲೆ ಕೆಳಗೆ ಹೋಗುತ್ತಲೇ ಇರುತ್ತದೆ.ಕಷ್ಟ ಬಂದಾಗ ಕುಗ್ಗದೆ ಸಿರಿ ಬಂದಾಗ ಹಿಗ್ಗದೆ ಬಾಳನ್ನು ಹದದಿಂದ ಬಾಳುವುದು ಮನುಷ್ಯ ಧರ್ಮ.ನನ್ನಮ್ಮ ಕಾಶಿಗೆ ಹೋಗುವ ಮುನ್ನ ಎರಡು ಸಾವಿರ ರುಪಾಯಿ ನನ್ನ ಕೈಗಿತ್ತು ಮೊನ್ನೆಯಷ್ಟೇ ಆಕ್ಸಿಡೆಂಟ್ ಆಗಿ ಆಸ್ಪತ್ರೆಯಲ್ಲಿ ಇರುವ ಮನೆ ಕೆಲಸದ ಅಜ್ಜಿಗೆ ಕೊಡು ಎಂದು ಹೇಳಿ ಕೊಟ್ಟರು.

ಮಾನವೀಯತೆಗಿಂತ ದೊಡ್ಡ ಧರ್ಮ ಬೇರೆ ಇಲ್ಲ ..ಕಾಶಿಗೆ ಹೋದದ್ದಕ್ಕಿಂತ ಸಾವಿರ ಪಟ್ಟು ಪುಣ್ಯ ಸಂಚಯವನ್ನು ಅಮ್ಮ ಇಲ್ಲಿಯೇ ಗಳಿಸಿ ಹೋದರು.ಸದಾ ಕಷ್ದಲ್ಲಿರುವವರಿಗಾಗಿ ಮರುಗುವ ತನ್ನ ಕೈಲಾದ ಸಹಾಯ ಮಾಡುವ ಅಮ್ಮನಿಗೆ ಕಾಶಿಗೆ ಹೋಗಿ ಆಗಬೇಕಾದ್ದು ಏನೂ ಇಲ್ಲ..ಅಮ್ಮನೇ ಒಂದು ಕಾಶಿ ..ಅದೇನೇ ಇರಲಿ  ಅಲ್ಲಿವಿಶ್ವನಾಥನ ದರ್ಶನದಿಂದ ಬದುಕು ಸಾರ್ಥಕವಾಗಲಿ ಎಂದು ಆಶಿಸುವೆ


https://shikshanaloka.blogspot.com/2019/08/blog-post.html?m=1

Wednesday, 24 December 2025

ಆತ್ಮ‌ಕಥೆಯ ಬಿಡಿ ಭಾಗಗಳು.. ಆತ್ಮ‌ಕಥೆಯನ್ನು ಬರೆಯದೆ ಹೇಗೆ ಇರಲಿ ?

 ಆತ್ಮ‌ಕಥೆಯ ಬಿಡಿ ಭಾಗಗಳು..

ಆತ್ಮ‌ಕಥೆಯನ್ನು ಬರೆಯದೆ ಹೇಗೆ ಇರಲಿ ? 


ಅನುದಾನ ಕೊಡುವುದಿಲ್ಲ ಎಂದಷ್ಟೇ ಹೇಳಿದ್ದರೆ ನಾನಿದನ್ನು ಬರೆಯುವ ಪ್ರಮೇಯವೇ ಬರುತ್ತಿರಲಿಲ್ಲ.ಅದರ ಜೊತೆಗೆ ಹೇಳಿದ ಮಾತುಗಳು‌ ನನಗೆ ಬಹಳಷ್ಟು ತಾಗಿತ್ತು ..


ಈ ಜಗತ್ತಿಗೆ ಹೆಣ್ಣೆಂದರೆ ಎಷ್ಟು ಅಸಡ್ಡೆ !

ಆಕೆ ಗೃಹಿಣಿಯಾಗಿದ್ದರೇ ಶ್ರೇಷ್ಠ ಹೆಚ್ಚೆಂದರೆ ಶಿಕ್ಷಕಿಯಾಗಿ ಉಪನ್ಯಾಸಕಿಯಾಗಿ ಇತ್ತೀಚೆಗೆ ವೈದ್ಯರಾಗಿ ಇಂಜನಿಯರ್ ಆಗಬಹುದು ಅಷ್ಟೇ. ಇನ್ನೂ ಮಹಿಳಾ ಲೇಖಕರ ಬರವಣಿಗೆಯನ್ನು ಅಡುಗೆ ಮನೆ ಸಾಹಿತ್ಯ ಎಂದು ಹೀಗಳೆದವರೇ ಹೆಚ್ಚು ಮಂದಿ ಇದ್ದಾರೆ.ಕೆಲವರು ಎದುರಿನಿಂದ ಇನ್ನೂ ಹಲವರು ಹಿಂದಿನಿಂದ ಹೇಳಿದ್ದು ..

ಹಾಗೂ ಒಂದೊಮ್ಮೆ ಮಹಳೆಯರು ಬರೆದರೆ ಕಥೆ ಕಾದಂಬರಿ ಬರೆಯಲಷ್ಟೇ ಲಾಯಕ್ಕು.

ಇನ್ನೂ ಅಧ್ಯಯನ ಮಾಡುದಾದರೆ ಯಾರೋ ಕವಿಗಳ ಬಗ್ಗೆ ಕಾವ್ಯಗಳ ಬಗ್ಗೆ ಅಷ್ಟೇ ಹೊರತು ಕ್ಷೇತ್ರ ಕಾರ್ಯ ಆಧರಿತ ಅಧ್ಯಯನ ಮಾಡಲು ಆಕೆ ಫಿಟ್ ಅಲ್ಲ.

ಒಂದೊಮ್ಮೆ ಮಾಡಿದರೂ ಗಣನೆಗೆ ಬರುವದ್ದಲ್ಲ..ಈ ಹಿಂದೆ ಒಬ್ಬರು ತುಳು ಲೇಖಕರು ಆ ಪೊಂಜೋವು ಬರೆಯಿನೆನ್ ಎಂಕುಲು ಲೆಕ್ಕೊಗು ದೀಪುಜ್ಜ..ಆ ಹೆಂಗಸು ಬರೆದದ್ದನ್ನು ನಾವು ಗಣನೆಗೆ ತೆಗೆದುಕೊಳ್ಳುವುದಿಲ್ಕ ಎಂದಿದ್ದರು

ನಮಗೇ ತಿಳಿಯದ ದೈವಗಳ ಹೆಸರು ಇವರಿಗೆ ಹೇಗೆ ಸಿಕ್ತದೆ ಅದೆಲ್ಲ ಆಕೆಯ ಸೃಷ್ಟಿ ಎಂದವರೂ ಇದ್ದರು.ದೈವಗಳ ಕಥೆ ಬರೆದಾಗ ಅದು ಕಪೋಲ ಕಲ್ಪಿತ ಎಂದಿದವರೂ ಇದ್ದರು 

ಆಗುವುದೆಲ್ಲ ಒಳ್ಳೆಯದಕ್ಕೇ ಎಂದು ಹಿರಿಯರು ಹೇಳುದು ಸುಳ್ಳಲ್ಲ

ಇವರೆಲ್ಲರ ಟೀಕೆಗಳನ್ನು ಎದುರಿಸುತ್ತಲೇ ನಾನು ಅಧ್ಯಯನ ಮುಂದಯವರಿಸಿದೆ.

ಸಾವಿರದೊಂದು ದೈವಗಳು ಇಲ್ಲವೇ ಇಲ್ಲ ಎಂದವರಿಗೆ ದೈವಗಳ ಕೋಲದ  ಚಿತ್ರ ಎಲ್ಲಿ ಆರಾಧನೆ ಇದೆ ಮೂಲ ಕಥೆಗಳ ಬಗ್ಗೆ ದಾಖಲೆ ಇರಿಸಿ ವಿಶ್ಲೇಷಿಸು ಬರೆದೆ.

ಎಲ್ಲರಿಗೂ ಉಚಿತವಾಗಿ ಮಾಹಿತಿ ದೊರೆಯಲಿ ಎಂದು ಬ್ಲಾಗ್ ನಲ್ಲಿ ಬರೆಯತೊಡಗಿದೆ.

ಬ್ಲಾಗ್ ನಿಂದ ಬರಹ ಕದ್ದು ನನ್ನದೆಂದು ಹೇಳಿದಾಗ ನನ್ನನ್ನೇ ಅಕೆಗೆ ಹೆಸರಿನ ದಾಹ ವಿಕಿಪೀಡಿಯ ಎಂದರೆ ಎನೆಮದು ಗೊತ್ತಿಲ್ಲ ಇತ್ಯಾದಿ   ಬರೆದ ವಿಶ್ವ ನಾಥ ಬದಿಕಾನ  ಪವನಜ ಯುಬಿ‌ ಮೊದಲಾದವುಗಳು ಬರೆದಾಗ ಓದಲು ತಾನೇ ಬರೆಯುದು..ಜನಪದ ಯಾರ ಸೊತ್ತಲ್ಲ ಎಂದು ಒಂದಷ್ಟು ಧೂರ್ತರು ಕೃತಿ ಚೌರ್ಯವನ್ನು ಬೆಂಬಲಿಸಿದರು.ಆಗ ಇವುಗಳಿಂದ ಪಾಠ ಕಲಿತೆ . ಉಚಿತವಾಗಿ ಸಿಕ್ಕರೆ ಇಷ್ಟೇ ಬೆಲೆ ಎಂದು ಗೊತ್ತಾಯಿತು.

ಮಹತ್ವದ ಬರಹಗಳನ್ನು ಬ್ಲಾಗ್ ನಿಂದ ಹಿಂದೆ ತೆಗೆದೆ

1253 ದೈವಗಳ ಸಚಿತ್ರ ಮಾಹಿತಿ  ಇರುವ 1036 ಪುಟಗಳ ದೊಡ್ಡ ಗಾತ್ರದ ಗ್ರಂಥ ರಚಿಸಿ ಪ್ರಕಟಿಸಿದೆ.

ಉಚಿತವಾಗಿ ಸಿಕ್ಕಾಗ ಯಾರಿಗಾದರೂ ಓದಲು ತಾನೇ ಬರೆದದ್ದು ಯಾರ ಹೆಸರಿನಲ್ಲಿದ್ದರೇನು ? ಲೇಖಕರ ಹೆಸರು ಹಾಕದೇ ಇದ್ದರೇನು ಎಂದವರು ಕೂಡ ಮಾಹಿತಿ ಬೇಕಿದ್ದರೆ 2000₹ ಕೊಟ್ಟ ಖರೀದಿಸುದು ಅನಿವಾರ್ಯ ಆಯಿತು.

2000₹ ಬೆಲೆ ಇರಿಸಿದಾಗಲೂ ಆಕ್ಷೇಪ ಬಂತು.

ನನ್ನ ಅಧ್ಯಯನ ನನ್ನ ಪುಸ್ತಕ ಬೆಲೆ ಇರಿಸುದು ನನ್ನ ಇಷ್ಟ.ತಗೊಳ್ಳುದು ಬಿಡುದು ಅವರವರ ಇಷ್ಟ ಎಂದೆ.

ತಗೊಂಡವರು ಯಾರೂ ಇಂದಿನವರೆಗೂ ಬೆಲೆ ಜಾಸ್ತಿ ಆಯಿತು ಎಂದಿಲ್ಲ‌

ಇನ್ನೂ ಈ ಪುಸ್ತಕವನ್ನು ಜನ ಕೊಂಡುಕೊಳ್ಳಲಾರರು ಎಂದವರೂ ಇದ್ದರು.

ಈ ಪುಸ್ತಕ ಪ್ರಕಟಣೆಯ ಸಮಯದಲ್ಲಿ ನನ್ನ ಅನೇಕ ಹಿತೈಷಿಗಳು ನೀವು ಈ ಪುಸ್ತಕ ಪ್ರಕಟಣೆಗೆ ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರಿಂದ ಅನುದಾನ ಕೇಳಿ.ಅವರು ಎಲ್ಲರಿಗೆ ಕೊಡ್ತಾರೆ ಎಂದು ಸಲಹೆ ನೀಡಿದ್ದರು.ಆಗ ಕೊರೋನಾ ಸಮಯ .ಹೋಗಲು ಸಾಧ್ಯವಿರಲಿಲ್ಲ

ಹಾಗಾಗಿ ಇ‌ಮೇಲ್ ಮಾಡಿದ್ದೆ

ಇ ಮೇಲ್ ನೋಡ್ತಾರೆ ಉತ್ತರಿಸುತ್ತಾರೆ ಎಂಬ ನಿರೀಕ್ಷೆ ನನಗೇನೂ ಇರಲಿಲ್ಲ 

ಆದರೂ ಮರು ಉತ್ತರ ಅವರ ಆಪ್ತ ಕಾರ್ಯದರ್ಶಿ ಯಿಂದ ಬಂತು.ಈ ಪರಿಸ್ಥಿತಿಯಲ್ಲಿ 

ಪುಸ್ತಕ ಮಾರಾಟವಾಗಲಾರದು.ವಿತರಣೆಗೆ ಮುನ್ನೂರು ಜನರ ಪಟ್ಟಿ ಇರಬೇಕು.ಮರು ಮುದ್ರಣ ಮಾಡಿದೆ ಅವಶ್ಯವಾಾದಲ್ಲಿ 500 ಪ್ರತಿ ಮರುಮದ್ರಣ ಮಾಡಬಹುದು ಇತ್ಯಾದಿ ಅಸಂಬದ್ಧ ? ಎಂದೆನಿಸಿದ ಉತ್ತರ ಬಂತು.ಅನುದಾನ‌ಕೊಡುದಿಲ್ಲ ಎಂಬ ಉತ್ತರ ಬಂದಿದ್ದರೆ ಬೇಜಾರು ಏನೂ ಇರುತ್ತಿರಲಿಲ್ಲ ಅವರ ದುಡ್ಡು ಅವರ ಇಷ್ಟ ‌.ಆದರೆ ಪುಸ್ತಕ ಮಾರಾಟ ಆಗಲಾರದು.ವಿತರಣೆಗೆ ಮುನ್ನೂರು ಜನರ ಪಟ್ಟಿ ಬೇಕು ಎಂದದ್ದು ನನಗೆ ತಾಗಿತ್ತು .ನನ್ನ 21 ವರ್ಷಗಳ ಅಧ್ಯಯನ ಗ್ರಂಥದ ಬಗ್ಗೆ ಇಷ್ಟು ಅನುಮಾನವೇ ? ಹೆಂಗಸೆಂದೇ ? ಪುಸ್ತಕ ನೋಡಿ ಮೆಚ್ಚಿದ್ದರೂಅವರೇ ಹೇಳಿದಂತೆ ಮರು ಮುದ್ರಣದಲ್ಲಿ  500 ಬಿಡಿ 50 ಪ್ರತಿಗಳನ್ನೂ ಖರೀದಿಸದ ಬಗ್ಗೆ ನನಗೆ ಇಂದಿಗೂ ಅಚ್ಚರಿ ಎನಿಸುತ್ತದೆ.ಎಲ್ಲರೂ ಹೇಳುವಂತೆ ಹೆಗ್ಗಡೆಯವರು ಇಂತಹ ಕೆಲಸಕ್ಕೆ ಅನುದಾನ ನೀಡುತ್ತಾರೆ .ಅನುದಾನ ಬಿಡಿ ಪುಸ್ತಕದ ಪ್ರತಿಗಳನ್ನು ಖರೀದಿಸದೇ ಇರಲು ಕಾರಣವೇನು ? ಅಲ್ಲಿನ ಪುಸ್ತಕ ವಿಭಾಗದ ಉಸ್ತುವಾರಿ ವಹಿಸಿರುವವರ ಕುತಂತ್ರವೇ ? ಈ ಬಗ್ಗೆ ಯಾರೋ ಏನೋ ಒಂದಷ್ಟು ಹೇಳಿದ್ದರೂ ದಾಖಲೆ ಇಲ್ಲ.ಆದರೂ ಇದಕ್ಕೂ ಮೊದಲು 2015 ರಲ್ಲಿಯೇ  ಆತ ಕಾರಣವಿಲ್ಲದೆ ಹಿಂದಿನಿಂದ ಕುತಂತ್ರ ಮಾಡಿರುವದ್ದು ಸ್ಪಷ್ಟವಾಗಿ ತಿಳಿದಿರುವ ಕಾರಣ ಆತನದೇ ಕಿತಾಪತಿ ಇರಬಹುದೆನಿಸ್ತದೆ.ಈ ಬಗ್ಗೆಯೂ ನಾನು ಇ ಮೇಲ್ ಮೂಲಕ ತಿೞಿಸಿದ್ದೆ.ಆತನಾರು ಎಂಬ ಕುತೂಹಲ ಇದೆಯಾ ? ನನ್ನ ಆತ್ಮ‌ಕಥೆಯಲ್ಲಿ ಆತನ ಹೆಸರು ಹಾಕಿ ಬರೆಯುವೆ ಖಂಡಿತಾ


ಅದಿರಲಿ ..ಮತ್ತೆ ವಿಷಯಕ್ಕೆ ಬರುವೆ 

ಆಗಷ್ಟೇ ಮನೆ ಕಟ್ಟಿದ್ದ ನಮಗೂ ಒಮ್ಮೆಲೇ ಪುಸ್ತಕ ಪ್ರಕಟಣೆಗೆ ಆರೇಳು ಲಕ್ಷ ಖರ್ಚು ಮಾಡುದು ಕಷ್ಟಕರ ಎನಿಸಿತು .ದೇವರು ದೊಡ್ಡವನು ನಮ್ಮ ಕೈ ಕೆಳಗಾಗದಂತೆ ಕಾಯ್ದನು ,ಕೊಟ್ಟವರ ಕೈ ಯಾವಾಗಲೂ ಮೇಲೆ ತಗೊಂಡವರ ಕೈ ಯಾವಾಗಲೂ ಕೆಳಗೆ.ಒಂದೊಮ್ಮೆ ಹೆಗ್ಗಡೆಯವರು ಅನುದಾನ ಕೊಡ್ತಿದ್ದರೆ ನಾವು ತಗೊಳ್ತಿದ್ದೆವು ನಮ್ಮ ಕೈ ಕೆಳಗಾಗುತ್ತಿತ್ತು ಆದರೆ ಹಾಗಾಗದಂತೆ ದೇವರೇ ಕಾಯ್ದಿರಬೇಕು ನಮ್ಮನ್ನು.

ಇಂತಹ ಸಮಯದಲ್ಲಿ ಸ್ನೇಹಿತರು pre publication offer ಕೊಡಲು ಸಲಹೆ ನೀಡಿದರು.

ಈ ಉಪಾಯ ಸಾಕಷ್ಟು ಯಶಸ್ವಿ ಆಯಿತು

ಸುಮಾರು 700 ಪುಸ್ತಕ ಪ್ತಿಂಟ್ ಗೆ ಮೊದಲೇ ಬುಕ್ ಆಯಿತು.ಆರಂಭದಲ್ಲಿ ಕಡಿಮೆಗೆ ಕೊಟ್ಟ ಕಾರಣ ನನ್ನ ಮೇಲೆ ನಂಬಿಕೆ ಇರಿಸಿ ಪುಸ್ತಕಕ್ಕೆ ಮುಂಗಡವಾಗಿ ಪಾವತಿಸಿ ಕಾದಿರಿಸಿದವರಿಗೆ ಕಡಿಮೆ ಬೆಲೆಗೆ ಸಿಕ್ತು ಕೂಡ.ನಮಗೂ ಫಂಡ್ ಬಂತು

ಮುಂದೆ ಮೊದಲ ಮುದ್ರಣದ ಪ್ರತಿಗಳು ಪುಸ್ತಕ ಬಿಡುಗಡೆಯಾದ ಕೆಲ ದಿನಗಳಲ್ಲಿ ಖಾಲಿಯಾದವು.

ಇನ್ನೇನು ಮರು ಮುದ್ರಣದತ್ತ ಯೋಚಿಸುವಷ್ಟರಲ್ಲಿ ಕಾಂತಾರ ಸಿನೆಮಾ ಬಂತು

ಪರಿಷ್ಕೃತ ಗೊಳಿಸಿ ಮಾಯ ಮತ್ತು ಜೋಗದ ಪರಿಕಲ್ಪನೆ ಸೇರಿಸಿ ಇನ್ನೂ ಒಂದಷ್ಟು ದೈವಗಳ ಮಾಹಿತಿ ಸೇರಿಸಿದಾಗ ಸೃಷ್ಟಿಯಾದ ಗ್ರಂಥ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ ‌ಮೊಬೈಲ್ 9480516684

ಮೊದಲು ಪತ್ರದಲ್ಲಿ ತಿಳಿಸಿದಂತೆ ಈ ಪರಿಷ್ಕೃತ  ಮುದ್ರಣದ 500 ಪ್ರತಿಗಳನ್ನು ಖರೀದಿಸಬಹುದು ಎಂದುಕೊಂಡಿದ್ದೆ .ತಗೊಂಡಿಲ್ಲ.ಹಾಗೆಂದು ನಮಗೇನೂ ಸಮಸ್ಯೆ ಆಗಲಿಲ್ಲ ಯಾರೋ ತಗೊಂಡು ನಾವು ಉದ್ದಾರ ಆಗುತ್ತೇವೆ ಎಂದು ಅಲೋಚನೆ ಮಾಡಿ ನಾವು ಪ್ರಕಟಿಸಿದ್ದಲ್ಲ.ಆಸಕ್ತ ಜನರು ತಗೊಂಡಾರು ಎಂಬ ಭರವಸೆ ನಮಗಿತ್ತು‌.ಅದು ಹುಸಿಯಾಗಲಿಲ್ಲ.

ಈಗ ಮರು ಮುದ್ರಣದತ್ತ ದಾಪುಗಾಲು ಇಡುತ್ತಿದೆ 

ಇದರ ನಡುವೆ ಒಂದು ಗಮ್ಮತ್ತಿನ ವಿಷಯ ನಡೆಯಿತು  ಎಂತ ಗೊತ್ತುಂಟಾ?

ಲಕ್ಷಾಂತರ ಜನರಿಗೆ ದಾನ ನೀಡಿದ ನಾನಾ ದೇವಸ್ಥಾನ ದೇವಸ್ತಾನ ಗಳಿಗೆ ಕೋಟ್ಯಂತರ ರುಪಾಯಿ ಅನುದಾನ ನೀಡಿದ ವೀರೇಂದ್ರ ಹೆಗ್ಗಡೆಯವರಿಗೆ ಅವರ ಕೋರಿಕೆಯಂತೆ  ನಾನು  ಗೌರವ ಪ್ರತಿ(ಉಚಿತವಾಗಿ) ಪುಸ್ತಕವನ್ನು ನೀಡಿದ್ದೇನೆ  .

ಒಂದು ದಿನ ಅವರ ಸಹಸಯಕರಾದ ಪವನ್ ಎಂಬವರು ಕರೆ ಮಾಡಿ ಹೆಗ್ಗಡೆಯವರು ನಿಮ್ಮ ಪುಸ್ತಕ ಓದಲು ಬಯಸಿದ್ದಾರೆ ಎಲ್ಲಿ ಸಿಗುತ್ತದೆ ಎಂದು ವಿಚಾರಿಸಿದ್ದರು.ಆಗ ಈ ಪುಸ್ತಕ ಪುಸ್ತಕ ಮಳಿಗೆಗಳಲ್ಲಿ ಸಿಗುತ್ತಿರಲಿಲ್ಲ.ಹಾಗಾಗಿ ನಾವೇ ಕಳುಹಿಸ್ತೇವೆ ಎಂದು ಅಡ್ರೆಸ್ ಪಡೆದು ಗೌರವ ಪ್ರತಿ ಕಳುಹಿಸಿದೆ.ತಲುಪಿದ ನಂತರ ಪುಸ್ತಕದ ಬಗ್ಗೆ ಮೆಚ್ಚುಗೆಯ ನುಡಿ ತಿಳಿಸಿ ಪುಸ್ತಕದ ಜೊತೆಗೆ ಫೋಟೋ ವನ್ನೂ ಕಳುಹಿಸಿ ಕೊಟ್ಟಿದ್ದರು.

ಲಕ್ಷಂತರ  ಜನರಿಗೆ ದಾನ ನೀಡಿದವರಿಗೆ ಗೌರವ ಪ್ರತಿ ನೀಡಿದ ಗೌರವ ನನ್ನದಾಯಿತು .ನನ್ನ ಕೈ ಮೇಲಾಗಿಯೇ ಉಳಿಯಿತು. ಅವರು ಒಂದೊಮ್ಮೆ ಪುಸ್ತಕ ಓದಿದ ನಂತರವಾದರೂ ಮರು ಮುದ್ರಣಕ್ಕೆ ಅನುದಾನ ನೀಡಿರುತ್ತಿದ್ದರೆ ಅಥವಾ ಸವರ ಆಪ್ತ ಸಹಾಯಕರ ಪತ್ರದಲ್ಲಿ ಇರುವಂತೆ 500 ಪುಸ್ತಕ ಖರೀದಿಸುತ್ತಿದ್ದರೆ ಈ ಹೆಮ್ಮೆ ನನ್ನದಾಗಿ ಇರುತ್ತಿರಲಿಲ್ಲ

ಅದು ಸರಿ ಅವರ ಪತ್ರದಲ್ಲಿ ಒಂದು ಸಾಲು ಈವತ್ತಿಗೂ ನನಗೆ ಅರ್ಥ ಆಗುತ್ತಿಲ್ಲ.ವಿತರಣೆಗೆ ಮುನ್ನೂರು ಜನರ ಪಟ್ಟಿ ಬೇಕು ಎಂಬುದು ಆ ಸಾಲು..ಏನರ್ಥ ಈ ವಾಕ್ಯದ್ದು..ಒಂದೊಮ್ಮೆ ಅವರು ಅನುದಾನ ನೀಡಿದರೆ ಮುನ್ನೂರು ಜನರಿಗೆ ನಾವು ಕಖುಹಿಸಬೇಕೆಂದಾ ? ಯಾರಿಗೆ ವಿತರಿಸುದು ? ಯಾಕೆ ? ಅನುದಾನ ಕೊಡುದು ಪ್ರಕಟಣೆಗೆ ತಾನೇ ? ಅದಕ್ಕೆ ಮುನ್ನೂರು ಜನರ ಪಟ್ಟಿ ಯಾಕೆ ? 

ಹೆಣ್ಣು ಹೆಂಗಸು ಬರೆದ ಪುಸ್ತಕವನ್ನು ಜನ ಓದಲಾರರು.ಅದಕ್ಕೆ ಉಚಿತವಾಗಿ ವಿತರಿಸಲು ಮುನ್ನೂರು ಜನರ ಪಟ್ಟಿ ಬೇಕೆಂಬ ಭಾವ ಇದ್ದಿರಬಹುದಾ? 

ದೊಡ್ಡವರು ಏನು ಹೇಳಿದ್ದೆಂದು ನನಗೆ ಈಗಲೂ ಅರ್ಥ ಆಗುತ್ತಿಲ್ಲ ಈಗ ಮರುಮುದ್ರಣ (ಮೊದಲನೆಯದನ್ನು ಪರಿಗಣಿಸಿದರೆ ಮೂರನೆಯ ಮುದ್ರಣಕ್ಕೆ) ಸಿದ್ದವಾಗಿದೆ. ಎಲ್ಲರ ಊಹೆಯನ್ನು ಮಾತ್ರವಲ್ಲ ನನ್ನ ನಿರೀಕ್ಷೆಯನ್ನು ಕೂಡ ತಲೆಕೆಳಗು ಮಾಡಿ ಬೇಡಿಕೆಯನ್ನು ಪಡೆದಿದೆ

ಅನೇಕರು ಪುಸ್ತಕದ ಬೆಲೆ 2000₹ ಹೆಚ್ಚಾಯಿತು ಎಂದಿದ್ದರು.ಇನ್ನೂ ಕೆಲವರಿಗೆ ಪುಸ್ತಕ ಬೇಕೆಂದಿದ್ದರೂ 2000₹ ಹೊಂದಿಸುದು ಕಷ್ಟ ಆಗಿತ್ತು

ಈಗ ಈ ಸಮಸ್ಯೆ ಗೆ ಇಲ್ಲಿ ಪರಿಹಾರ ಇದೆ 

ಮರು ಮುದ್ರಣಕ್ಕೆ ಮತ್ತೆ pre publication offer ಇದೆ .ಕಡಿಮೆ ಬೆಲೆಗೆ ಉತೃಷ್ಟ ಗುಣಮಟ್ಟದ ಕನ್ನಡ ತುಳು ಮಲೆಯಾಳ ಕೊಡವ ಪರಿಸರದ 1253 ದೈವಗಳ ಮಾಹಿತಿ ಇರುವ ಪುಸ್ತಕ ಪಡೆಯಲು ಇದು ಸುವರ್ಣಾವಕಾಶ ..

ಇನ್ನೊಂದು ಸಂತಸದ ವಿಚಾರ ಏನೆಂದರೆ ಇದರ ಇಂಗ್ಲಿಷ್ ಆವೃತ್ತಿ ಕೂಡ ಪ್ರಕಟಣೆಗೆ ಸಿದ್ದವಾಗಿದೆ.ಒಂದೆರಡು ತಿಂಗಳೊಳಗೆ ಕೈಸೇರಲಿದೆ .ಇದಕ್ಕೂ pre publication offer ಲಭ್ಯವಿದೆ .

ಯಾವುದೇ ಯೂನಿವರ್ಸಿಟಿ ಸಂಘ ಸಂಸ್ಥೆಗಳ ಒಂದು ಪೈಸೆ ಅನುದಾನ ಪಡೆಯದೇ ಇಂತಹದೊಂದು ಗ್ರಂಥ ಪ್ರಕಟವಾಗಿ ಯಶಸ್ಸು ಪಡೆದುದಲ್ಲದೆ ಇಂಗ್ಲಿಷ್ ಅವತರಣಿಕೆಯೂ ಸಿದ್ದವಾಗಿ ದೆ ಎಂದರೆ ಇದು ದೈವ ದೇವರುಗಳ ಕೃಪೆ ಅಲ್ಲದೇ ಬೇರೇನೂ ಅಲ್ಲ ಎಂದು ನನಗನಿಸುತ್ತದೆ .ಇಂತಹ ಸೋಜಿಗಗಳ ಬಗ್ಗೆ ಹೇಗೆ ತಾನೇ ಬರೆಯದಿರಲಿ.ಆತ್ಮ‌ಕಥೆ ಬೆಳೆಯುತ್ತಿದೆ 

ನನ್ನಬರಹಗಳ ಅಭಿವ್ಯಕ್ತಿಯಲ್ಲಿ ಪುಸ್ತಕಕ್ಕೆ ಪ್ರಚಾರ ನೀಡುವಲ್ಲಿ ನನಗೆ ಸದಾ ಬೆಂಬಲ ನೀಡಿದ್ದು ನೇರವಾಗಿ ಎಂದೂ ನೋಡಿರದ fb ಸ್ನೇಹಿತರು.

ಹಾಗಾಗಿ ಮತ್ತೆ ನಿಮ್ಮೆಲ್ಲರ ಬೆಂಬಲ ಇರಲಿ ಎಂದು ಅಪೇಕ್ಷಿಸುವೆ - ಡಾ‌.ಲಕ್ಷ್ಮೀ ಜಿ ಪ್ರಸಾದ್, ಮೊಬೈಲ್ 9480516684:

Monday, 15 December 2025

ಆತ್ಮ‌ಕಥೆಯ ಬಿಡಿ ಭಾಗಗಳು

 ಆತ್ಮ ಕಥೆಯ ಬಿಡಿ ಭಾಗಗಳು


ಪೇಟೆಯಲ್ಲಿ ಬಾಡಿಗೆ ಮನೆಯೇ ಸಿಗುವುದಿಲ್ಲ ಎಂದಿದ್ದರು..


ಹೌದು  31 ವರ್ಷಗಳ ಹಿಂದೆ  ನಾನಿದನ್ನು ಸತ್ಯವಾಗಿಯೂ ನಂಬಿದ್ದೆ.ಬಾಡಿಗೆಗೆ ಮನೆ ಸಿಗದಿದ್ದರೇನು ಮಾಡುವುದು ಎಂದು ತುಂಬಾ ಆತಂಕಕ್ಕೆ ಒಳಗಾಗಿದ್ದೆ 

ಎರಡನೆಯ ವರ್ಷ ಪದವಿ ಓದುತ್ತಿರುವಾಗ ಮದುವೆಯಾಯಿತು‌ ಅಂತಿಮ ವರ್ಷ ಅಂತೂ ಆಡಿಕೂಡಿ ಡೋಲಾಯಮಾನ ಸ್ಥಿತಿಯಲ್ಲಿಯೇ ಕಳೆಯಿತು

ಮುಂದೇನು ? ಎಂಬ ಪ್ರಶ್ನೆ ನನ್ನೆದುರು ಬೃಹದಾಕಾರವಾಗಿ ಬೆಳೆದು ನಿಂತು ಕಾಡುತ್ತಿತ್ತು

ಬಿಎಸ್ ಸಿ ಓದುವಾಗ ಅಂತಹ ಜಾಣೆ ನಾನಾಗಿರಲಿಲ್ಲ.ಆದರೆ ಹತ್ತನೆಯ ತರಗತಿ ತನಕ ಜಾಣ ವಿದ್ಯಾರ್ಥಿನಿಯೆಂದೇ ಗುರುತಿಸಿಕೊಂಡವಳು ನಾನು

ನಂತರ ವಿಜ್ಣಾನ ನನಗೆ ಕಷ್ಟವಾಯಿತೋ ಇಂಗ್ಲಿಷ್ ಬಾರದೆ ಪಾಠ ತಲೆಗೇ ಹೋಗದೆ ಕಲಿಕೆಯಲ್ಲಿ ಹಿಂದುಳಿದೆನೋ ಗೊತ್ತಿಲ್ಲ

ಆದರೂ ಬಿಎಸ್ ಸಿಯಲ್ಲಿ ಒಂದೇ ಒಂದು ವಿಷಯದಲ್ಲಿ ಅನುತ್ತೀರ್ಣಳಾಗಿರಲಿಲ್ಲ

ಮುಂದೆ ಎಂ ಎಸ್ಸಿ ಆಗದೆಂದು ಅನಿಸಿತ್ತು.ಮತ್ತೆ ಆರ್ಟ್ಸ್ ತಗೊಂಡರೆ ರ‌್ಯಾಂಕ್ ತೆಗೆದು ಯಶಸ್ವಿಯಾದೇನೆಂಬ ಆತ್ಮವಿಶ್ವಾಸ ನನಗಿತ್ತು

ಹಾಗಾಗಿಯೇ ಕಟೀಲಿನಲ್ಲಿ ಸಂಸ್ಕೃತ ಎಂಎ ಗೆ ಸೇರಲು ನಿರ್ಧರಿಸಿದೆ

ಕೋಡ ಪದವು ಸಮೀಪದ ನಮ್ಮ ಮನೆಯಿಂದ ಕಟೀಲಿಗೆ ನಿತ್ಯ ಹೋಗಿ ಬರುವದ್ದು ಆಗದ ಮಾತು ಜೊತೆಗೆ ಉನ್ನತ ಕಲಿಕೆಗೆ ಮನೆ ಮಂದಿ ಬಂಧು ಬಳಗದವರಿಂದ ತೀವ್ರ ವಿರೋಧವಿತ್ತು

ಆದರೂ ನಾನು ನನ್ನ ಮೈದುನನಿಗೆ ' ನಾನು ಓದಿ ಒಳ್ಳೆಯ ಕೆಲಸ ಹಿಡಿದರೆ ನಮಗೆ ಆಸ್ತಿಯಲ್ಲಿ ಪಾಲು ಬೇಕಾಗಿ ಬರಲಾರದು.ಇಲ್ಲಿಯೇ ಇದ್ದು ಇರುವ ತುಂಡು ಭೂಮಿಯನ್ನು ಹಂಚಿಕೊಂಡು ತಲೆಗೆಳೆದರೆ ಕಾಲಿಗೆ ಬರದಂತಹ ಬದುಕು ಯಾಕೆ ? ಹಾಗಾಗಿ ನನ್ನ ಕಲಿಕೆಗೆ ವಿರೋಧವೇಕೆ ಎಂದಿದ್ದೆ

ಆಗಿನ ಕಾಲಘಟ್ಟ.ಹೇಳಿಕೊಡುವವರು ಅನೇಕರಿದ್ದರು

ಹಾಗಾಗಿ ವಿರೋಧ ಶಮನವಾಗಲಿಲ್ಲ.ಮನೆ ಮಂದಿ ಬಂಧು ಬಳಗವನ್ನು ಎದುರು ಹಾಕಿಕೊಂಡು ಮುಂದೆ ಓದಲು ನಿರ್ಧರಿಸಿದೆ

ಪ್ರಸಾದರನ್ನು ಒಪ್ಪಿಸಿದೆ

ಆಗ ಮೊದಲ ಬಾರಿಗೆ ಬಾಡಿಗೆ ಮನೆಗೆ ಹೋಗಬೇಕಾದ ಪ್ರಸಂಗ ಬಂತು.ಆಗ ನಮ್ಮ ನೆರೆಕರೆಯ ಮಂದಿಯ ಮಕ್ಕಳು ಮಂಗಳೂರಿನಲ್ಲಿದ್ದರು.ಅವರೆಲ್ಲ ಪೇಟೆಯಲ್ಲಿ ಬಾಡಿಗೆಗೆ ಮನೆಯೇ ಸಿಗುವುದಿಲ್ಲ ಎಂದಿದ್ದರು.ಪೇಟೆಯ ಅರಿವಿಲ್ಲದ ನಾನೂ ಇದು ಇರಬಹುದೇನೋ ಎಂದು ಭಯ ಪಟ್ಟಿದ್ದೆ

ಅದೃಷ್ಟವಶಾತ್ ನಮ್ಮ ಆದಾಯಕ್ಕೆ ಸರಿ ಹೊಂದುವ ಮಣ್ಣಿನ ಮೋಟು ಗೋಡೆಯ ಒಂದು ಕೊಠಡಿಯ ಮನೆ ನಮಗೆ ಕಟೀಲು ಸಮೀಪದ ಎಕ್ಕಾರಿನ ನಾಗವೇಣಿ ಅಮ್ಮನವರು ಒದಗಿಸಿದರು.

ನಂತರ ಒಂದು ವರ್ಷದೊಳಗೆ ಪ್ರಸಾದರಿಗೆ ಒಳ್ಳೆಯ ಕೆಲಸ ಸಿಕ್ತು. ನನ್ನ ಸೋದರ ಮಾವಂದಿರ ಪರಿಚಯದಲ್ಲಿ ಮಂಗಳೂರಿನ ವಿಜಯ ಪೆನ್ ಮಾರ್ಟ್ ( ಪೆನ್ನಿನ ಅಂಗಡಿಯ )ಶಾಮಣ್ಣನ  ಸಹಾಯದಿಂದ ಮಂಗಳೂರಿನ ವಿಜಯ ನಿವಾಸದ ಬಾಡಿಗೆ ಮನೆ ಸಿಕ್ತು 


ಮತ್ತೊಂದು ವರ್ಷದಲ್ಲಿ ಬಿಜೈ ಯಲ್ಲಿ ಶ್ರೇಯಸ್ ಅಪಾರ್ಟ್ ಮೆಂಟಿನಲ್ಲಿ ಒಂದು ಮನೆಯನ್ನು ಖರೀದಿಸಿದೆವು.

ಮುಂದೆ ಬೆಂಗಳೂರಿಗೆ ಶಿಪ್ಟ್ ಆಗುವಾಗ ಇದನ್ನು ಮಾರಾಟ ಮಾಡಿದೆವು


ಮಂಗಳೂರಿನಲ್ಲಿರುವಾಗಲೇ 2002-03 ರಲ್ಲಿ ಬೆಂಗಳೂರಿನ ಈಗಿನ ಸೈಟಿನಲ್ಲಿ ಸಣ್ಣದೊಂದು ಮನೆ ಕಟ್ಟಿಸಿದ್ದೆವು

2007 ರಿಂದ 2019 ರ ವರೆಗೆ ಅದೇ ಸಣ್ಣ ಮನೆಯಲ್ಲಿ ಇದ್ದೆವು‌ ನಂತರ ಅದನ್ನು ರಿನೊವೇಟ್ ಮಾಡಿ ಈಗಿನ ಮನೆಯ ಸ್ವರೂಪಕ್ಕೆ ತಂದೆವು.


ಇಷ್ಟಾಗಿಯೂ ಊರಲ್ಲಿ ನನಗೆ ಮನೆ ಇಲ್ಲ ಎಂಬ ಕೊರಗು ಸದಾ  ಕಾಡುತ್ತಿತ್ತು.ಹಾಗಾಗಿ ನವ ಚೇತನ ಟೌನ್ ಶಿಪ್ ನಲ್ಲಿ ಸಣ್ಣದೊಂದು ಮನೆ ತಗೊಂಡು  ಒಕ್ಕಲು ಮಾಡಿದೆವು.


ಸಧ್ಯಕ್ಕೆ ಊರ ಕಡೆ ಶಿಪ್ಟ್ ಆಗುವ ಯೋಚನೆ ಇಲ್ಲ.ಎಂದಾದರೂ ಹೋಗುವುದಾದರೆ ಇರಲಿ ಎಂದೆನಿಸ್ತು.ನವ ಚೇತನ ಟೌನ್ ಶಿಪ್ ನ ಸುವ್ಯವಸ್ಥೆ ನೋಡಿ ಖುಷಿಯಾಗಿ ತಗೊಂಡೆವು


ನಾವು ಮನೆ ಬಿಟ್ಟು ಹೊರ ನಡೆದ ನಂತರ ತಗೊಂಡ/ ಕಟ್ಟಿಸಿದ ನಾಲ್ಕನೆಯ ಮನೆ ಇದು.


ಯಾಕೋ 30  ವರ್ಷಗಳ ಹಿಂದೆ ನಮ್ಮ ನೆರೆಕರೆಯವರೊಬ್ಬರು ಪೇಟೆಯಲ್ಲಿ ಮನೆ ಬಾಡಿಗೆಗೇ ಸಿಗುವುದಿಲ್ಲ ಎಂದು ಹೆದರಿಸಿದ್ದು ನೆನಪಾಯಿತು 


ಬಾಡಿಗೆಗೆ ಮಾತ್ರವಲ್ಲ.ಇರಲು ಅಂಗೈ ಅಗಲದಷ್ಟಾದರೂ  ಮನೆ ಎಂಬ ಸ್ವಂತ ಸೂರನ್ನು ಒದಗಿಸಿದ ದೈವ ದೇವರುಗಳ ಕೃಪೆ ಅಪಾರ 🙏


 ಗಂಡ ಹೆಂಡತಿ ಇಬ್ಬರೂ ದುಡಿದು ಆಡಂಬರವಿಲ್ಲದೆ ಸರಳವಾಗಿ ಬದುಕಿದರೆ ಸಣ್ಣದೊಂದು ಮನೆ ಕಟ್ಟಿಕೊಳ್ಳುದು ತೀರ ಅಸಾಧ್ಯವಾದುದಲ್ಲ

.ಆದರೆ ಹೆಚ್ಚಿನ ಜನರು ತುಸು ಆದಾಯ ಬರುವಷ್ಟರಲ್ಲಿ ಆಡಂಬರದ ಬದುಕಿಗೆ ಮಾರು ಹೋಗಿ ಬೆಲೆಬಾಳುವ  ಕಾರು ಗೀರು ರಾಯಲ್ ಎನ್ಪೀಲ್ಡ್ ಬೈಕು ಐಫೋನ್ ಮೊದಲಾದವುಗಳ ಅಗತ್ಯವಿಲ್ಲದೇ ಇದ್ದಾಗಲೂ ಅವರಿವರಲ್ಲಿ ಇದೆ ಎಂದು ತಗೊಳ್ತಾರೆ.ಬಾಹ್ಯಾಡಂಬರದ ಶೋಕಿಯ ದೊಡ್ಡ ಬಾಡಿಗೆ ಮನೆಗೆ ಹೋಗ್ತಾರೆ .ವಿಪರೀತ ಸೀರೆ ಡ್ರೆಸ್ ಗಳನ್ನು ತಗೊಳ್ತಾರೆ ಆಗ ಅವರಲ್ಲಿ ದುಡ್ಡು ಉಳಿಯುವುದೇ ಇಲ್ಲ. 


ನನ್ನ ಕೆಲವು ವಿದ್ಯಾರ್ಥಿಗಳು 30-35,000₹ ವೇತನದ ಕೆಲಸ ಸಿಗುತ್ತಲೇ ಹೆಚ್ಚು ಬೆಲೆಯ ಕಾರು  ಐಫೋನ್ ತೆಗೆದುಕೊಳ್ಳುದನ್ನು ಗಮನಿಸಿದ್ದೇನೆ.ಹೀಗೆ ಬಾಹ್ಯಾಡಂಬರದ ವಸ್ತುಗಳ ಹಿಂದೆ ಹೋದರೆ ಇವರು ಮನೆ ತಗೊಳ್ಳಲು ದುಡ್ಡು ಉಳಿಸುದು ಹೇಗೆ ಎಂದೆನಿಸಿತ್ತು ನನಗೆ‌


ಬದಲಿಗೆ ಸಣ್ಣ ಮನೆಯಲ್ಲಿದ್ದುಕೊಂಡು ಸರಳವಾಗಿ ಬದುಕಿ ವ್ಯವಸ್ಥಿತವಾಗಿ ಉಳಿತಾಯ ಮಾಡಿಕೊಂಡು ಬಂದರೆ ಒಂದಷ್ಟು ಸಾಲ ಮಾಡಿ ಮನೆ ಕಟ್ಟಿಕೊಳ್ಳಬಹುದು‌.

ಇರಲು ಮನೆ ಆದರೆ ನಂತರ ನಿದಾನಕ್ಕೆ ಕಾರು ಗೀರಿನಂಥಹ ಆಡಂಬರದ ವಸ್ತುಗಳನ್ನು ತೆಗೆದುಕೊಳ್ಳಬಹುದು

ಇದು ನನ್ನ ಅಭಿಪ್ರಾಯ 

ಎಲ್ಲರೂ ಹೀಗೆಯೇ ಯೋಚಿಸಬೇಕಿಲ್ಲ..ಲೋಕೋ ಭಿನ್ನರುಚಿಃ ಅಲ್ಲವೇ

.ಅಂದ ಹಾಗೆ ನಾನು ಅಂದು ಹೇಳಿದ  ಕಲಿತು ಒಳ್ಳೆಯ ಕೆಲಸ ಸಿಕ್ಕರೆ ನಮಗೆ ಪಿತ್ರಾರ್ಜಿತವಾಗಿ ಬಂದ ಆಸ್ತಿಯಲ್ಲಿ ಪಾಲು ಬೇಡ ಹಂಚಿಕೊಂಡು ತುಂಡು ಮಾಡುವುದೇಕೆ ಎಂಬ ಮಾತಿಗೆ ಈಗಲೂ ಬದ್ಧಳಿದ್ದೇನೆ ,ನಾವು ಪಾಲು ತೆಗೆದುಕೊಂಡಿಲ್ಲ.

ಆತ್ಮ‌ಕಥೆಯ ಬಿಡಿ ಭಾಗಗಳು 50

 ಆತ್ಮ‌ಕಥೆಯ ಬಿಡಿ ಭಾಗಗಳು


ಯಾರೆಲ್ಲ ಸಣ್ಣಾಗಿರುವಾಗ ಬಜೆಂಟು  ಹೆಕ್ಕಿದ್ದೀರಿ? 


ಪಾಸಾದರೆ ಶಾಲೆ ಇಲ್ಲವಾದರೆ ಬಜಂಟು ಹೆಕ್ಕುವ ಖಾಯಂ ಕಾಯಕ 


ಎಪ್ರಿಲ್ ಹತ್ತರ  ಪಾಸು ಫೇಲಿನ ದಿನವೆಂಬ ಭಯ ಆತಂಕದ ದಿನ ಇದರ ನಿರ್ಧಾರ ಆಗುತ್ತಿತ್ತು‌.


ಹೌದು..ಪ್ರತಿವರ್ಷ ಎಪ್ರಿಲ್ ಹತ್ತಕ್ಕೆ ನಮ್ಮ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಶಾಲೆಯ ಬೋರ್ಡ್ ನಲ್ಲಿ ಹಾಕ್ತಿದ್ದರು.ಎಪ್ರಿಲ್  ಮೊದಲ ದಿನಾಂಕದಿಂದಲೇ ಎದೆಯಲ್ಲಿ ಅವಲಕ್ಕಿ ಕುಟ್ಟಲು ಶುರುವಾಗುತ್ತಿತ್ತು.ಪಾಸ್ ಪೇಲ್ ದಿನ ಹತ್ತಿರ ಬಂದ ಹಾಗೇ ಊಟ ತಿಂಡಿ ಸೇರುತ್ತಿರಲಿಲ್ಲ.ನಮ್ಮಂತೆಯೇ ನಮ್ಮ ಹೆತ್ತವರಿಗೂ ಇದೇ ಆತಂಕ.

ಚೆನ್ನಾಗಿ ಕಲಿಯದವರನ್ನು ಫೇಲಾದವರನ್ನು "ಹೋಗು ಬಜೆಂಟ್ ಹೆರ್ಕು " ಎಂದು ಬೈಉವ ವಾಡಿಕೆ ಇತ್ತು.ಆದರೆ ಪಾಸಾಗುತ್ತಿದ್ದ ನಾವು ಕೂಡ ಬೇಸಗೆಯಲ್ಲಿ ಬಜಂಟ್ ಹೆಕ್ಕುತ್ತಿದ್ದೆವು.

ಬಜಂಟು ಎಂದರೆ ಒಣ ಸೆಗಣಿ.ಬೇಸಗೆಯ ಸಮಯದಲ್ಲಿ ನಾವು‌ಮಕ್ಕಳೆಲ್ಲ ಗುಡ್ಡವೆಲ್ಲ ಬಜೆಂಟಿಗಾಗಿ ಹುಡುಕುತ್ತಿದ್ದೆವು.ಮೇಯಲು ಬಿಟ್ಟ ಹಸುಗಳು ಹಾಕಿದ ಒಣ ಸೆಗಣಿ ಸಿಕ್ತಾ ಇತ್ತು.

ಇದನ್ನು ಮಳೆಗಾಲದಲ್ಲಿ ಒಲೆ ಉರಿಸಲು ಬಳಸುತ್ತಾ ಇದ್ದರು.

ನಾವು ಏಳೆಂಟು ಸಮ ವಯಸ್ಸಿನ ಮಕ್ಕಳು ಒಂದೊಂದು ಗೋಣಿ ಚೀಲ ಹಿಡಿದುಕೊಂಡು ಬಜಂಟು ಹೆಕ್ಕಲು ಹೋಗುತ್ತಿದ್ದೆವು.ಅದು ನಮಗೆ ಬೇಸರ ತರುವ ಕೆಲಸವಾಗಿರಲಿಲ್ಲ.ಗುಡ್ಡಗಾಡಿನ ಚೂರಿ ಮುಳ್ಳಿನ ಹಣ್ಣ ಮುಳ್ಳಣ್ಣು ಕಿಸ್ಕಾರದ ಹಣ್ಣು ಚಬುಳಕ ಮೊದಲಾದ  ಕಾಡು ಹಣ್ಣುಗಳನ್ನು ಅಯ್ದು ತಿಂದುಕೊಂಡು ಕಾಡು ಹರಟೆ ಹೊಡೆದುಕೊಂಡು ಬಹಳ ಖುಷಿಯಿಂದ ಈ ಕೆಲಸ ಮಾಡ್ತಿದ್ದೆವು ಎಂಬುದು ಬೇರೆ ವಿಚಾರ.

ಅಕಸ್ಮಾತ್ತಾಗಿ ಐರೋಳು ಬಳ್ಳಿ ,ಕಾನಕಲ್ಲಡೆ ಕಾಯಿ ಸಿಕ್ಕರೆ ಬಹಳ ಸಂಭ್ರಮ ನಮಗೆ

ಅದರೂ ಫೇಲಾದವರು ಬಜಂಟು ಹೆಕ್ಕಲು ಲಾಯಕ್ಕು ಎಂಬ ಮಾತು ಆಗ ಇತ್ತು ಈಗ ಈ ಬಜೆಂಟಿಗೆ cow dung cake ಎಂಬ ಚಂದದ ಹೆಸರಿದೆ.ಸಿಕ್ಕಾಪಟ್ಟೆ ಬೆಲೆಯೂ ಇದೆ 


ಇರಲಿ


ಆಗೆಲ್ಲ ಫೇಲ್ ಆದರೆ ಮರು ಪರೀಕ್ಷೆ ಇರುತ್ತಿರಲಿಲ್ಲ.ಮತ್ತೆ ಒಂದು ವರ್ಷ ಅದೇ ತರಗತಿಯಲ್ಲಿ ಇರಬೇಕು.ಅದು ನಮಗೆ ಬಹಳ ಅವಮಾನಕರ ವಿಚಾರ.ಹಾಗಾಗಿ ಪಾಸಾಗದಿದ್ದರೆ ಎಂಬ ಆತಂಕ ಕಾಡುತ್ತಿತ್ತು.


ಕೆಲವೊಮ್ಮೆ ಜಾಣ ಮಕ್ಕಳಿಗೆ ಏನಾದರೂ ಆರೋಗ್ಯ ಸಮಸ್ಯೆ ಉಂಟಾಗಿ ವಾರ್ಷಿಕ ಪರೀಕ್ಷೆಗೆ ಹಾಜರಾಗಲು ಆಗದಿದ್ದರೆ ಅವರೂ ಕೂಡ ಫೇಲ್ .ನಂತರದ ಒಂದು ವರ್ಷ ಅದೇ ತರಗತಿಯಲ್ಲಿ ಕುಳಿತುಕೊಳ್ಳಬೇಕು.


ಈ ಅವಮಾನ ಸ್ವೀಕರಿಸಲು ತಯಾರಿಲ್ಲದ ಮಕ್ಕಳ ವಿದ್ಯಾಭ್ಯಾಸ ಇದೇ ಕಾರಣಕ್ಕಾಗಿ ಅಲ್ಲಿಗೇ ನಿಂತು ಹೋಗುತ್ತಿತ್ತು.


ನನಗೆ ನೆನಪಿನಲ್ಲಿರುವಂತೆ ನನ್ನ ಸಹಪಾಠಿಗಳಾಗಿದ್ದ  ಇಬ್ಬರು ಜಾಣ ವಿದ್ಯಾರ್ಥಿಗಳ ಶಿಕ್ಷಣ ಹೀಗೆ ಅರ್ಧದಲ್ಲಿಯೇ ಮೊಟಕಾಗಿತ್ತು


ಒಂದು ನನ್ನ ಬಾಲ್ಯ ಸ್ನೇಹಿತೆ ಯಶೋದಾಳದು.ಅವಳು ಎಂಟನೇ ತರಗತಿಯ ಅಂತಿಮ /ವಾರ್ಷಿಕ ಪರೀಕ್ಷೆಯಲ್ಲಿ ಒಂದೆರಡು ವಿಷಯಗಳಿಗೆ ಗೈರು ಹಾಜರಾಗಿದ್ದಳು.


ಅವಳೂ ನಾನೂ ಒಟ್ಟಿಗೆ ಕೋಳ್ಯೂರಿನಿಂದ ಕೊಡ್ಲಮೊಗರಿನ ವಾಣಿವಿಜಯ ಪ್ರೌಢಶಾಲೆಗೆ  ನಡೆದುಕೊಂಡು ಹೋಗಿ ಬರುತ್ತಿದ್ದೆವು.ಎರಡು ಗುಡ್ಡ ಹತ್ತಿ ಇಳಿಯಬೇಕು.ಸುಮಾರು ನಾಲ್ಕೈದು ಮೈಲು ನಡೆಯಬೇಕಿತ್ತು.


ಅಗಿ‌ನ್ನೂ ನನಗೆ ಸರಿಯಾಗಿ ನೆನಪಿದೆ

ಸುಮಾರು ಎಂಟು ಎಂಟೂವರೆ ಗಂಟೆ ಹೊತ್ತಿಗೆ ಅವಳು ನಮ್ಮ ಮನೆಗೆ ಬರ್ತಿದ್ದಳು.ಅವಳನ್ನೇ ಕಾಯುತ್ತಿರುವ ನಾನು ಕೂಡಲೇ ಮೆಟ್ಟಿಳಿದು ಮನೆಯ ಗದ್ದೆಯ ಬದುವಿನಲ್ಲಿ ಸಾಗಿ.ತೋಡಿನ ಸಂಕ ದಾಟಿ ಅಂಗಡಿ ಎದುರು ಎತ್ತರಕ್ಕೆ ಹತ್ತಿ ಸಾಗುತ್ತಿದ್ದೆವು.

 1986 ಮಾರ್ಚ್ ಕೊನೆಯ ವಾರ.ಪ್ರೌಢ ಶಾಲೆಯಲ್ಲಿ ಅಂತಿಮ ಪರಿಕ್ಷೆಗಳು ನಡೆಯುತ್ತಿದ್ದವು.

.ನಮಗೆ ಆಗ ಹನ್ನೆರಡು ಪರೀಕ್ಷೆಗಳಿದ್ದವು.ಕನ್ನಡ ಎರಡು ಪತ್ರಿಕೆಗಳು,ವಿಜ್ಞಾನ ಮೂರು ಪತ್ರಿಕೆಗಳು,ಗಣಿತ ಎರಡು ಪತ್ರಿಕೆಗಳು ,ಸಮಾಜ ಶಾಸ್ತ್ರ ಎರಡು ಪತ್ರಿಕೆಗಳು ,ಹಿಂದಿ ಒಂದು ಪತ್ರಿಕೆ.


ಕೊನೆಯ ಒಂದೆರಡು ಪರೀಕ್ಷೆಗಳು ಉಳಿದಿದ್ದವು

ಆ ದಿನ ಯಶೋಧಾ ಎಂಟೂವರೆ ಕಳೆದರೂ ನಮ್ಮ‌ಮನೆಗೆ ಬಂದಿರಲಿಲ್ಲ.ಅವಳ ಮನೆಯಿಂದ ಶಾಲೆಗೆ ಹೋಗುವ ದಾರಿಯಲ್ಲಿ ನಮ್ಮ ಮನೆ ಇತ್ತು.


ಅವಳು ಬಾರದ ಕಾರಣ ನಾನೇ ಅವಳ ಮನೆಗೆ ಹೋದೆ.ಅವಳು ಚಳಿಗೆ ನಡುಗುತ್ತಾ ಕಂಬಳಿ ಹೊದ್ದು ಮಲಗಿದ್ದಳು.

"ನಮ್ಮ ಯಶೋಧೆಗೆ  ಮೈಯಲ್ಲಿ ಬಿದ್ದಿದೆ( ಚಿಕನ್ ಪಾಕ್ಸ್ ) .ಅವಳು ಪರೀಕ್ಷೆಗೆ ಬರುದಿಲ್ಲ‌.ನೀನು ಹೋಗು ವಿದ್ಯಾ ,( ನನ್ನನ್ನು ಮನೆಯಲ್ಲಿ,ಊರಲಿ ವಿದ್ಯಾ ಎಂದು ಕರೆಯುತ್ತಾರೆ )ಒಂದು ವಾರ ಮನೆಗೆ ಬರಬೇಡ.ನಿನಗೂ ಹರಡುತ್ತದೆ " ಎಂದು ಹೇಳಿದರು


ಆಗ ಅಯ್ಯೋ..ಅವಳು ಫೇಲ್ ಆಗ್ತಾಳಲ್ಲ ಎಂದು ನನಗೆ ಆತಂಕ ಆಯಿತು.

ನಂತರ ಒಬ್ಬಳೇ ನಡೆದುಕೊಂಡು ಶಾಲೆಗೆ ಬಂದು ಪರೀಕ್ಷೆ ಬರೆದೆ.

ನಿರೀಕ್ಷೆಯಂತೆಯೇ ಯಶೋಧಾ ಫೇಲ್ ಆಗಿದ್ದಳು.

ಅದರ ಪರಿಣಾಮವಾಗಿ ಜಾಣೆಯಾಗಿದ್ದ ಅವಳ ಓದು ಅಲ್ಲಿಗೇ ನಿಂತಿತು.ಅವಳು ಮುಂದೆ ಓದಲಿಲ್ಲ.

ನಂತರ ದೊಡ್ಡವಳಾಗಿ ಮದುವೆಯಾದ ನಂತರ ಕಾಸಗಿಯಾಗಿ ಕಟ್ಟಿ ಎಸ್ ಎಸ್ ಎಲ್ ಸಿ ಪಿಯುಸಿ ಡಿಗ್ರಿ ಮಾಡಿದ್ದಾಳೆ.


ಇದೇ ರೀತಿಯಲ್ಲಿ ನಾನು ಒಂಬತ್ತನೇ ತರಗತಿ ಓದುತ್ತಿರುವಾಗ ರವೀಂದ್ರ ಎಂಬ ಹುಡುಗನಿಗೂ ಆರೋಗ್ಯ ಸಮಸ್ಯೆ ಬಂದು‌ಪರೀಕ್ಷೆ ಬರೆಯಲಾಗಲಿಲ್ಲ.ಫೇಲಾದ ಕಾರಣ ನಂತರ ಅವನೂ ವಿದ್ಯಾಭ್ಯಾಸ ಮುಂದುವರಿಸಲಿಲ್ಲ


ಈಗ ಒಂದರಿಂದ ಒಂಬತ್ತರ ತನಕ ಫೇಲ್ ಮಾಡುದೇ ಇಲ್ಲ.ಹಾಗಾಗಿ ನಮ್ಮಷ್ಟು ಆತಂಕ ಈಗಿನ‌ಮಕ್ಕಳಿಗೆ ಇರಲಾರದೋ ಏನೋ


ನನಗೆ ಈಗ ನಗು ಬರುವ ವಿಚಾರ ಒಂದಿದೆ.ನಾನು ಸಾಮಾನ್ಯವಾಗಿ ತರಗತಿಯಲ್ಲಿ‌ ಮೊದಲ‌ ಇಲ್ಲವೇ ಎರಡನೇ Rank ತೆಗೆಯುತ್ತಿದ್ದೆ.ನನ್ನನ್ನೂ ಫೇಲ್ ಮಾಡಿದರೆ ಮತ್ತೆ ಶಿಕ್ಷಕರು ಎಂತ ಮಾಡುದು ? ಪಾಠ ಮಾಡಲು ವಿದ್ಯಾರ್ಥಿಗಳು ಬೇಡವೇ?ಮಕ್ಕಳೇ ಇಲ್ಲದಿದ್ದರೆ ಶಾಲೆಯಲ್ಲು ಅವರೆಂತ ಬಜೆಂಟ್ ಹೆಕ್ಕುದಾ ? ಆದರೆ ನನಗೆ ಆಗ ಈ ವಿಚಾರ ಎಲ್ಲ ಗೊತ್ತಿರಲಿಲ್ಲ.ಇತರ ಸಾಮಾನ್ಯ ಮಾರ್ಕ್ಸ್ನ ವಿದ್ಯಾರ್ಥಿಗಳಂತೆ ಪಾಸ್ ಫೇಲಿನ ದಿನವನ್ನು ಆತಂಕದಿಂದ ಎದುರು ನೋಡುತ್ತಿದ್ದೆ.


ಎಪ್ರಿಲ್ ಹತ್ತನೆಯ ತಾರೀಕಿನಂದು ಎಲ್ಲ ದೇವರುಗಳೂ ನೆನಪಿಗೆ ಬರ್ತಿದ್ದರು.ಅವರನ್ನೆಲ್ಲ ನೆನೆದು ನನ್ನನ್ನು ಪಾಸು ಮಾಡಿಸು ಎಂದು ಬೇಡಿಕೊಳ್ಳುತ್ತಿದ್ದೆ

ಎಂದಿಗಿಂತ ಬೇಗನೆ ಎದ್ದು ದೇವರಿಗೆ ಹೆಚ್ಚು ಹೂ ಕೊಯ್ದು ಇಡುತ್ತಿದ್ದೆ.ನಂತರ ಸ್ನಾನ ಮಾಡಿ ದೇವರಿಗೆ ಹೊಡಾಡಿ( ನಮಸ್ಕರಿಸಿ) ಶಾಲೆಗೆ ಹೋಗುತ್ತಿದ್ದೆ.ಅಲ್ಲಿ ಬೋರ್ಡ್ ನಲ್ಲಿ ಫೇಲಾದವರ ಹೆಸರನ್ನು ಹಾಕ್ತಾ ಇದ್ದರು.

ಶಾಲೆ ಸಮೀಪಿಸಿದಂತೆಲ್ಲ‌ ಎದೆ ಇತರರಿಗೆ  ಕೇಳುವಷ್ಡು ದೊಡ್ಡದಾಗಿ ಡಬ್ ಡಬ್ ಬಡಿಯುತ್ತಾ ಇತ್ತು.ಹೇಗೋ ಹೋಗಿ ಫೇಲಾದವರ ಲಿಸ್ಟ್  ಅನ್ನು ಎರಡೆರಡು ಸಲ ಓದಿ‌ ನನ್ನ ಹೆಸರು ಅದರಲ್ಲಿ ಇಲ್ಲದಿರುವುದನ್ನು ನೋಡಿ ಖಚಿತ ಗೊಳಿಸಿ ಬದುಕಿದೆಯಾ ಬಡಜೀವವೇ..ನಾನು ಪಾಸು ಎಂದು ಕುಣಿದಾಡಿಕೊಂಡು ಮನೆಗೆ ಬರ್ತಾ ಇದ್ದೆ.ಪಾಸಾದ ಇತರರೂ ಹೀಗೇ ಸಂಭ್ರಮದಿಂದ ಜೊತೆಯಾಗುತ್ತಿದ್ದರು.

ಫೇಲ್ ಆದವರು ಬಿಕ್ಕಿ ಬಿಕ್ಕಿ ಅಳ್ತಾ ಇದ್ದದ್ದು ಈಗಲೂ ನನ್ನ ಕಣ್ಣಿಗೆ ಕಟ್ತಿದೆ.ಅವರ ಬಗ್ಗೆ ನನಗೆ ಪಾಪ ಎನಿಸುತ್ತಿತ್ತು.ಯಾಕೆಂದರೆ ಫೇಲಾದ ಮಕ್ಕಳಿಗೆ ಮನೆಯಲ್ಲು ಕೂಡ ಪೆಟ್ಡು ಕಾದಿರ್ತಾ ಇದ್ದದ್ದು ನನಗೆ ಗೊತ್ತಿತ್ತು


ಇನ್ನು ಹತ್ತನೇ ತರಗತಿಯ ಫಲಿತಾಂಸದ ದಿನದ ಬಗ್ಗೆ ಹೇಳುದೇ ಬೇಡ..ಅಷ್ಡು ಆತಂಕದ ಕ್ಷಣಗಳವು.ಆ ಬಗ್ಗೆ ಇನ್ನೊಂದಿನ ಬರೆಯುವೆ