Wednesday, 31 December 2025

ದೈವ ಕೃಪೆಗೆ ಶರಣು 🙏

 ದೈವ ಕೃಪೆಗೆ ಶರಣು 🙏


ಆತ್ಮ ಕಥೆಯನ್ನು ಹೇಗೆ ತಾನೇ ಬರೆಯದಿರಲಿ ? ಆತ್ಮ‌ಕಥೆಯೆಂದರೆ ಬರೀ ಗೋಳಿನ ಪ್ರವರವಲ್ಲ .ಯಶಸ್ಸಿನ ದಾರಿಯ ಹಿನ್ನೋಟ ಕೂಡಾ..


ನಗರದ ಬಸದಿಕೇರಿಯಲ್ಲಿರುವ ಪೂಜಾ ಮಂಟದ ಬಳಿ ನಡೆತುವ ಜಟ್ಟಿಗರ ಪೂಜೆಯನ್ನು ಕಾದಂಬರಿಯ ಪ್ರಮುಖ ವಸ್ತುವಾಗಿರಿಸಿಕೊಂಡು  ಬರೆಯುವ ಉದ್ದೇಶದಿಂದ ವಿಷಯಕ್ಕಾಗಿ ಹುಡುಕಾಡುತ್ತಿದ್ದೆ.ಡಾ.ಲಕ್ಷ್ಮೀ ಜಿ ಪ್ರಸಾದ ಎಂಬವರು ಬ್ಲಾಗೊಂದರಲ್ಲಿ ಬರೆದ ಜಟ್ಟಿಗ ಭೂತಾರಾಧನೆಯ ವಿವರಗಳು ನಾನು ಕಲ್ಪಿಸಿದ್ದ ಕೊಂಡಿ ಕೇವಲ ಊಹೆಯಲ್ಲ ಎನ್ನುವುದಕ್ಕೆ ಪ್ರಮುಖ ಆಧಾರ ದೊರಕಿಸುವುದರ ಜೊತೆಗೆ ಭೂತಾರಾಧನೆಯನ್ನು ಚರಿತ್ರೆ ಹೇಳುವ ಮಾಧ್ಯಮವಾಗಿ ಬಳಸಲು ಅನುವು ಮಾಡಿಕೊಟ್ಟವು ಕೂಡಾ.ತಕ್ಷಣ ಭೂತಾರಾಧನೆಯ ಬಗ್ಗೆಯೇ ಅಧ್ಯಯನ ಮಾಡಿ ಪಿಎಚ್ ಡಿ ಪಡೆದಿರುವ ಹಲವು ಪುಸ್ತಕಗಳನ್ನೂ ಬರಹಗಳನ್ನೂ ಬರೆದಿರುವ ಭೂತಾರಾಧನೆಯ ಲಕ್ಷ್ಮೀ ಎಂದೇ ಗುರುತಿಸಲ್ಪಟ್ಟಿರುವ ಲಕ್ಷ್ಮೀ ಪ್ರಸಾದರನ್ನು ಸಂಪರ್ಕಿಸಿ ಹೆಚ್ಚಿನ ವಿವರಗಳಿಗಾಗಿ ಚರ್ಚಿಸಲು ಸಮಯ ಕೋರಿದಾಗ ತಾವಾಗಿಯೇ ಮನೆಗೆ ಬಂದು ತಮ್ಮ ಸಂಶೋಧನೆಯ ಹತ್ತಾರು ಅನುಭವಗಳನ್ನು  ನೋವು ನಲಿವುಗಳನ್ನು ಹಂಚಿಕೊಳ್ಳುತ್ತಿದ್ದಂತೆ ಅವರೇ ಕಾದಂಬರಿಯ ಒಂದು ಪ್ರಮುಖ ಪಾತ್ರವಾಗಿ ರೂಪುಗೊಳ್ಳತೊಡಗಿದರು.ಹಾಗೆಂದೇ ಅವರು ಡಾ.ಲಕ್ಷ್ಮೀ ಪೋದ್ದಾರ್ ಆಗಿ ಕಾಣಿಸಿಕೊಂಡರು.ನಂತರ ಅವರು ಹಲವಾರು ಸಲಹೆಗಳನ್ನೂ ಪಾಡ್ದನಗಳ ತುಳು ಕನ್ನಡ ರೂಪಾಂತರವನ್ನೂ ನೇತ್ರಾಣಿ ಜಟ್ಟಿಗರ ಫೋಟೋವನ್ನೂ ಒದಗಿಸಿಕೊಟ್ಟಿದ್ದರಿಂದ ಕಾದಂಬರಿಗೆ ಹೊಸ ಆಯಾಮವೇ ದೊರೆಯಿತು.ಬಳ್ಳಿ ಕಾಳ ಮೆಣಸು ಸಂಪೂರ್ಣವಾಗಿ ಸಂಸ್ಕಾರಗೊಂಡು ಬಿಳಿಯ ಮೆಣಸಾಯಿತು- ಡಾ.ಕೆ ಎನ್ ಗಣೇಶಯ್ಯ ( ತಮ್ಮ ಬಳ್ಳಿ ಕಾಳ ಬಳ್ಳಿ ಕಾದಂಬರಿಯ ಕುರಿತಾಡಿದ ಮಾತುಗಳ ಉದೃತ ಭಾಗ) 


ನಾನು ಕನಸಲ್ಲೂ ಊಹಿಸದೇ ಇರುವ ವಿಚಾರವದು..ಬಹು ಪ್ರಸಿದ್ಧ ಕಾದಂಬರಿಕಾರರಾದ ಡಾ.ಕೆ ಎನ್  ಗಣೇಶಯ್ಯನವರ ಪ್ರಸಿದ್ಧ ಕಾದಂಬರಿಯಲ್ಲಿ ನಾನೊಂದು ಜೀವಂತ ಪ್ರಮುಖ ಪಾತ್ರವಾಗಿ ಬಂದಿರುವೆ ಎಂಬುದು ನಾನೆಂದಿಗೂ ಮರೆಯಲಾಗದ ರೋಮಾಂಚನ ನೀಡಿದ ವಿಚಾರ


ಯಾರಿಗೆ ತಾನೇ ಕಥಾ ನಾಯಕಿಯಾಗುವುದು,ಕಥೆಯ ಕೇಂದ್ರವಾಗುವುದು ಇಷ್ಟವಾಗದ ವಿಚಾರ?..ಎಲ್ಲರೂ ಇಷ್ಟ ಪಡುವ ಬಯಸುವ ವಿಚಾರವಿದು..ನನ್ನ ವಿಚಾರದಲ್ಲಿ ಇದು ಸಂಭವಿಸಿದೆ..


ಯಾಕೋ ಗೊತ್ತಿಲ್ಲ..ನನ್ನ ಬದುಕಿನಲ್ಲಿ ಇಂತಹ ಅನೇಕ ಅನೂಹ್ಯ ವಿಚಾರಗಳು ಘಟಿಸಿವೆ..ಅದಕ್ಕಾಗಿಯೇ ಆತ್ಮಕಥೆ ಬರೆಯಲು ನಿರ್ಧರಿಸಿ ಶುರು ಮಾಡಿರುವೆ.


ಅದಿರಲಿ ನಾನು ಲಕ್ಷ್ಮೀ ಪೋದ್ದಾರ್ ಆದದ್ದನ್ನು ಡಾ.ಕೆ ಎನ್ ಗಣೇಶಯ್ಯನವರು ಹೀಗೆ ವಿವರಿಸಿದ್ದಾರೆ..ಇನ್ನು ಪೂರ್ಣ ಮಾಹಿತಿಗೆ ಅವರ ಬಳ್ಳಿ ಕಾಳ ಬೆಳ್ಳಿ ಕಾದಂಬರಿ ಓದಬಹುದು.


"


ಲಕ್ಷ್ಮೀ ಪೋದ್ದಾರ್ ಆದ ನನ್ನನ್ನು ಗಣೇಶಯ್ಯನವರ ಕಾದಂಬರಿ ಮೂಲಕ ಸಾವಿರಾರು ಜನ ಗುರುತಿಸಿದ್ದಾರೆ.

ನನ್ನ ತುಳು ಅಧ್ಯಯನದ ಫಲಿತವನ್ನು ಪಡೆದಿದ್ದಾರೆ ಎಂಬುದು ನನಗೆ ನಿಜಕ್ಕೂ ಹೆಮ್ಮೆ ತರುವ ವಿಚಾರ..ಅದೂ ನಾವು ಲೆಕ್ಕಕ್ಕಿಡುವುದಿಲ್ಲ ಎಂದು ತುಳು ಅಧ್ಯಯನಗಾರನೊಬ್ಬನಿಂದ ನಿಂದಿಸಲ್ಪಟ್ಟ ಮಹಿಳೆಯ ಮಾತೇ ಕಾದಂಬರಿಗೆ ಪ್ರಮುಖ ಆಧಾರ ಆಗುದು..ಹಿರಿಯ ವಿದ್ವಾಂಸರಾದ ಡಾ.ಕೆ ಎನ್ ಗಣೇಶಯ್ಯ ಆ ಮಹಿಳೆಯ ಬರಹವನನ್ನು ಗೌರವದಿಂದ ಕಂಡು ಅದರೊಳಗಿನ ಸತ್ಯವನ್ನು ಪರಿಗಣಿಸಿ ಚಾರಿತ್ರಿಕ  ಕಾದಂಬರಿ ಬರೆಯುದು ಎಲ್ಲವೂ ಕಾಕತಾಳೀಯವೇ..ಕಾಲನ ಅನೂಹ್ಯ ನಡೆಯೇ..ನನಗೂ ಗೊತ್ತಿಲ್ಲ..ತೇ ನ ವಿನಾ ತೃಣಮಪಿ ನ ಚಲತಿ( ದೇವರ ಆಶಯದ ಹೊರತಾಗಿ ಹುಲುಕಡ್ಡಿಯೂ ಅಲುಗಾಡುವುದಿಲ್ಲ) 

ಈವತ್ತು ಕೂಡ ಬಸ್ಸಿನಲ್ಲಿ ರಿಟೈರ್ಡ್  ಪ್ರೊಫೆಸರ್ ರಾಜ ಗೋಪಾಲ್ ಎಂಬವರು ನನ್ನನ್ನು ಲಕ್ಷ್ಮೀ ಪೋದ್ದಾರ್ ಎಂದು ಗುರುತಿಸಿ ಮಾತನಾಡಿಸಿದರು..ಲಕ್ಷ್ಮೀ ಪೋದ್ದಾರ್  ಅನ್ನು ಸಾವಿರಾರು ಮಂದಿ ಗುರುತಿಸಿದ್ದಾರೆ  ನಿನ್ನೆ ಬೆಂಗಳೂರು ಸಿಟಿ ಯೂನಿವರ್ಸಿಟಿ ಕಾನ್ಫರೆನ್ಸ್ ನಲ್ಲಿ ಕೂಡ ಅನೇಕರು    ಕರಾವಳಿಯ ಸಾವಿರದೊಂದು ದೈವಗಳು - ಸಾವಿರದೊಂದು ದೈವಗಳು ಪುಸ್ತಕದ ಲೇಖಕಿ ಎಂದು ಗುರುತಿಸಿ ಮಾತನಾಡಿದ್ದಾರೆ.ಪುಸ್ತಕಕ್ಕೆ ಇರುವ ಶಕ್ತಿ ಅಪಾರವಾದುದೆನಿಸ್ತು ..

ಬದುಕಿನ ಸೊಬಗಿನ ಬಗ್ಗೆ ಅಚ್ಚರಿಯ ಬಗ್ಗೆ ಇನ್ನೇನು ಹೇಳಲಿ..

ಅವಹೇಳನಕ್ಕೆ ಗುರಿಯಾಗಿಸಿ ಅಳಿಸಿ ಕಾಡುವವನೂ ಅವನೇ..ಪುರಸ್ಕರಿಸಿ ಚಂದ ನೋಡುವವನೂ ಅವನೇ ಅಲ್ಲವೇ..ಮುಂದೇನು ಕಾಡುವನೋ ಇಲ್ಲ ಅನುಗ್ರಹಿಸುವನೋ ಗೊತ್ತಿಲ್ಲ..ತ್ವಮೇವ  ಶರಣಂ ಮಮ‌ 🙏

No comments:

Post a Comment