ಜೀವನ ದೇವರು ಕೊಟ್ಟ ಕೊಡುಗೆ ಬದುಕನ್ನು ಕೊನೆಗೊಳಿಸುವ ಆತ್ಮಹತ್ಯೆ ಈ ಮಾನವ ಜಗಕ್ಕಂಟಿದ ಶಾಪ ಇದನ್ನು ಸದಾ ಪ್ರತಿಪಾದಿಸುತ್ತಲೇ ಬಂದವಳು ನಾನು .ನನ್ನ ವಿದ್ಯಾರ್ಥಿಗಳಿಗೂ ಸದಾ ಈ ಬಗ್ಗೆ ಬುದ್ಧಿವಾದ ಹೇಳುತ್ತಲೇ ಇರುತ್ತೇನೆ.
ವರ್ಷದ ಕೊನೆಯಲ್ಲಿ ಪರೀಕ್ಷೆ ಹತ್ತಿರ ಬಂದಾಗ " ನೀವೆಲ್ಕರೂ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಬೇಕೆಂಬುದೇ ನನ್ನ ಹಾರೈಕೆ,ಆದರೆ ಪ್ರತಿ ವರ್ಷ 40% ದಷ್ಟು ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಾರೆ ಅವರಲ್ಲಿ ಕೆಲವರು ನೀವೂ ಸೇರಿರಬಹುದು ಹೇಳಲಾಗದು ,ಎಲ್ಲರೂ ಉತ್ತೀರ್ಣರಾಗುವವುದಿಲ್ಲ ಹಾಗೊಂದು ವೇಳೆ ನಿಮ್ಮ ಸತತ ಓದಿನ ಯತ್ಸನದ ನಂತರವೂ ಅನುತ್ತೀರ್ಣರಾದರೆ ಕಂಗಾಲಾಗಬೇಡಿ ಮತ್ತೆ ಮರು ಪರೀಕ್ಷೆ ಇದೆ ಕಟ್ಟಿ ಪಾಸ್ ಮಾಡಬಹುದು ಹಾಗೂ ಆಗದಿದ್ದರೆ ತಲೆಕೆಡಿಸಿಕೊಳ್ಳಬೇಡಿ ಅಂಕಗಳು ಮಾತ್ರ ಬದುಕಿಗೆ ಮಾನದಂಡ ವಲ್ಲ ಅದೂ ಒಂದು ಮಾನದಂಡ ಅಷ್ಟೇ ಹಾಗಾಗಿ ಒಳ್ಳೆಯ ಅಂಕ ತೆಗೆಯಲು ಯತ್ನ ಮಾಡಿ ಸಿಗದಿದ್ದರೆ ಚಿಂತಿಸಬೇಡಿ ನಿಮ್ಮೊಂದಿಗೆ ಸದಾ ನಾನಿರುತ್ತೇನೆ" ಎಂಬ ಮಾತನ್ನು ಪ್ರತಿ ವರ್ಷ ಪ್ರತಿ ತರಗತಿ ಯಲ್ಲಿ ಹೇಳುತ್ತೇನೆ. ಅನುತ್ತೀರ್ಣ ಗೊಂಡ ಮಕ್ಕಳನ್ನು ತೀರಾ ಹಿಂಸಿಸುವ ಬಗ್ಗೆ ಗೊತ್ತಾದರೆ ಅಂತ ಮಕ್ಕಳ ತಂದೆ ತಾಯಿಗಳ ನ್ನು ಕಂಡು ಅವರ ಮಕ್ಕಳ ಜೀವಕ್ಕಿಂತ ಹೆಚ್ಚು ಅಂಕಗಳು ಅಲ್ಲ ಎಂದು ಅವರಿಗೆ ಮನವರಿಕೆ ಮಾಡಿ ನನ್ನ ವಿದ್ಯಾರ್ಥಿಗಳ ಪರ ನಿಂತು ಮತ್ತೆ ಅವರು ಪರೀಕ್ಷೆ ಗೆ ಕಟ್ಟಿ ಉತ್ತೀರ್ಣರಾಗುವಂತೆ ಬೆಂಬಲ ನೀಡುತ್ತೇನೆ .ಅವರ ಓದಿಗೆ ಅನುಗುಣವಾಗಿ ಎಲ್ಲಾದರೂ ಕೆಲಸ ಇರುವುದು ಗೊತ್ತಾದರೆ ಅದನ್ನು ತಿಳಿಸಿ ಅವರಿಗೆ ಕೆಲಸ ಕೊಡಿಸಲೂ ಯತ್ನ ಮಾಡುತ್ತೇನೆ
ಇಂತಹ ನಾನು ಬೆಳ್ಳಾರೆಯ ಪ್ರಿನ್ಸಿಪಾಲ್ ಮತ್ತು ಸಹೋದ್ಯೋಗಿಗಳ ತೀವ್ರ ಕಿರುಕುಳ,ಹಾಗೂ ಸುಳ್ಯ ಪೋಲೀಸ್ ರ ನಿಷ್ಕ್ರಿಯತೆ ಬಗ್ಗೆ ನೊಂದು ಕಳೆದ ಜುಲೈ ಯಲ್ಲಿ ಆತ್ಮಹತ್ಯೆ ಗೆ ಯತ್ನಿಸಿದ್ದೆ .ಪೇಸ್ ಬುಕ್ ಹಾಗೂ ವಾಟ್ಸಪ್ ನಲ್ಲಿ ನನ್ನ ಸಾವಿನ ಕಾರಣದ ಬಗ್ಗೆ ಬರೆದ ಕಾರಣ ಅದು ಕ್ಷಣಮಾತ್ರದಲ್ಲಿ ಹರಡಿ ಸ್ನೇಹಿತರ ಸಹಾಯದಿಂದ ಬದುಕುಳಿದೆ
ಆಗಲೇ ನನಗೆ ಕಾಡಿದ್ದು ತೀವ್ರ ಕೀಳರಿಮೆ.ಸದಾ ಆತ್ಮವಿಶ್ವಾಸ ದಿಂದಿದ್ದ ನನಗೆ ಸಮಾಜವನ್ನು ಎದುರಿಸುವುದು ತುಂಬಾ ಕಷ್ಟ ಎನಿಸಿತು ಯಾರೊಂದಿಗೂ ಮುಖ ಕೊಟ್ಟು ಮಾತನಾಡಲಾರದ ಕೀಳರಿಮೆ ಬಹುಶಃ ನನ್ನ ಸಾಮಾಜಿಕ ಬದುಕು ನಿಂತೇ ಹೋಗುತ್ತದೆ ಎಂದು ಕೊಂಡಿದ್ದೆನಾನು .
ಇದಕ್ಕೆ ಮೊದಲು ಭರತ್ ರಾಜ್ ಬಂಡಿಮಾರರು ಕುಡ್ಲ ತುಳು ಪತ್ರಿಕೆ ಯ ನೇತೃತ್ವದಲ್ಲಿ ಮೂಲ್ಕಿಯಲ್ಲಿ ತುಳು ಸಮ್ಮೇಳನ ಆಯೋಜಿಸಿದ್ದು " ನಿಮಗೆ ಸನ್ಮಾನ ಮಾಡುತ್ತೇವೆ ಬರಬೇಕು " ಎಂದು ಹೇಳಿದ್ದು ಅದಕ್ಕೆ ಒಪ್ಪಿದ್ದೆ ನಾನು .ನಾನು ಯಾರಲ್ಲೂ ನನಗೆ ಪ್ರಶಸ್ತಿ ಕೊಡಿ ಅಭಿನಂದನೆ ಮಾಡಿ ಎಂದು ಕೇಳುವುದಿಲ್ಲ ಅರ್ಜಿ ಸಲ್ಲಿಸುವುದೂ ಇಲ್ಲ ಒಂದೊಮ್ಮೆ ಯಾರಾದರೂ ಅವರಾಗಿಯೇ ಗುರುತಿಸಿ ಕರೆದರೆ ಅವರ ಅಭಿನಂದನೆ ಯನ್ನು ಅತ್ಯಂತ ಕೃತಜ್ಞತೆ ಯಿಂದ ಸ್ವೀಕರಿಸುತ್ತೇನೆ ಹಾಗಾಗಿ ಇವರಿಗೂ ಬರುತ್ತೇನೆ ಎಂದು ಒಪ್ಪಿದ್ದೆ
ಅದಾದ ನಂತರ ನಾನು ಆತ್ಮಹತ್ಯೆ ಗೆ ಯತ್ನ ಮಾಡಿದ್ದು ಅದಾಗಿ ಕೆಲವು ದಿನಗಳಲ್ಲಿ ತುಳು ಸಮ್ಮೇಳನ ಇತ್ತು .ನಾನು ಆತ್ಮಹತ್ಯೆ ಯಂತ ಮಹಾ ಅಪರಾಧಕ್ಕೆ ಯತ್ನ ಮಾಡಿದ ಕಾರಣ ಅವರು ನನ್ನನ್ನು ಅಭಿನಂದನೆ ಮಾಡಲಾರರು ಮೊದಲಿನ ಯೋಚನೆ ಬದಲಿಸಿರಬಹುದು ಎಂದು ಆಲೋಚಿಸಿದ್ದೆ ನಾನು
ಆದರೆ ಹಾಗಾಗಲಿಲ್ಲ ಭರತ್ ಅವರು ಆಹ್ವಾನ ಪತ್ರಿಕೆ ಕಳುಹಿಸಿ ಅಭಿನಂದನೆ ಸ್ವೀಕರಿಸಲು ಬನ್ನಿ ಎಂದು ಕರೆದರು.
ಈಗ ನಾನು ಇಕ್ಕಟ್ಟಿಗೆ ಸಿಲುಕಿದೆ .ಹೇಗೆ ಹೋಗಲಿ ? ಹೇಗೆ ಜನರಿಗೆ ಮುಖ ತೋರಲಿ ? ಜನರು ನನ್ನಲ್ಲಿ ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾತಾಡಿದರೆ ಏನು ಹೇಳಲಿ ? ಹೇಗೆ ಹೋಗಲಿ ಎಂದು.
ಮಾತಿನ ನಡುವೆ ನನ್ನ ಅಮ್ಮನಲ್ಲಿಯೂ ಹೀಗೆ ಹೇಳಿದೆ .ನನ್ನ ಅಮ್ಮ ತುಂಬಾ ಗಟ್ಟಿಗೆತ್ತಿ ,ಬಹಳ ದೃಢ ಮನಸಿನವರು .ತಕ್ಷಣವೇ " ನೀನೇನು ಬೇರೆಯವರನ್ನು ಕೊಂದಿಲ್ಲ ನಿನ್ನನ್ನು ನೀನು ಸಾಯಿಸಲು ಹೊರಟಿದ್ದೆ ಅಷ್ಟೇ ಕೊಲೆ ಮಾಡಿದವರೇ ತಲೆ ಎತ್ತಿ ತಿರುಗಾಡುತ್ತಾರೆ ನೀನು ಯಾಕೆ ಅಳುಕಬೇಕು ? ತುಳು ಸಮ್ಮೇಳನಕ್ಕೆ ಹೋಗು ಅವರು ನೀಡುವ ಸನ್ಮಾನ ಸ್ವೀಕರಿಸು ನಾನು ಜೊತೆಗೆ ಬರುತ್ತೇನೆ ಯಾರು ಏನು ಹೇಳುತ್ತಾರೆ ನೋಡುವ" ಎಂದು ಹೇಳಿ ನನ್ನಲ್ಲಿ ಆತ್ಮವಿಶ್ವಾಸ ತುಂಬುವ ಯತ್ನ ಮಾಡಿದರು.ಅಂತೂ ಮನಸಿಲ್ಲದ ಮನಸಿನಲ್ಲಿ ಅಮ್ಮನ ಜೊತೆಯಲ್ಲಿ ಮೂಲ್ಕಿಯಲ್ಲಿ ನಡೆದ ತುಖು ಸಮ್ಮೇಳನಕ್ಕೆ ಹೋದೆ .ಅಲ್ಲಿಗೆ ಉದಯ ಧರ್ಮಸ್ಥಳ ಬಂದಿದ್ದರು.ಅವರನ್ನು ನನಗೆ ಮೊದಲೇ ಪರಿಚಯ ಇತ್ತು ನಮ್ನ ತುಳು ಸಂಸ್ಕೃತಿ ಕುರಿತಾದ ಅಧ್ಯಯನ ಕ್ಕೆ ಅವರು ಬೆಂಬಲ ನೀಡಿದ್ದರು ಆದರೂ ಅದಕ್ಕೆ ಸ್ವಲ್ಪ ದಿನಮೊದಲು ತಿಗಳಾರಿ ಮತ್ತು ತುಳು ಲಿಪಿ ಒಂದೇ ಎಂಬ ವಿಚಾರದಲ್ಲಿ ಅವರೊಂದಿಗೆ ಸಾಕಷ್ಟು ಚರ್ಚೆ ವಾಗ್ಯುದ್ಧ ನಡೆದಿತ್ತು .ಹಾಗಾಗಿ ಅವರನ್ನು ಕಂಡಾಗ ಇನ್ನಷ್ಟು ಕೀಳರಿಮೆಗೆ ಒಳಗಾದೆ ಆದರೆ ಅವರು ನನ್ನನ್ನು ಅವರ ಬಳಿಗೆ ಕರೆದು ಬಳಿಯಲ್ಲಿ ಕೂರಿಸಿಕೊಂಡು " ನಾನು ಕೂಡ ಈ ಹಿಂದೆ ಆತ್ಮಹತ್ಯೆ ಗೆ ಯತ್ನ ಮಾಡಿ ಮೂರು ದಿನ ಕೋಮಾದಲ್ಲಿದ್ದೆ .ನಾವು ಸತ್ಯವನ್ನು ಹೇಳಿದಾಗ ಸಮಾಜ ಅದನ್ನು ಅಪನಂಬಿಕೆ ಯಿಂದ ಕಂಡಾಗ ನಮಗೆ ಬದುಕು ಬೇಡ ಅನಿಸುವುದು ಸಹಜ ಆಗಿ ಹೋದ್ದಕ್ಕೆ ಚಿಂತಿಸಬೇಡಮ್ಮ ನಾವೆಲ್ಲರೂ ನಿಮ್ಮ ಜೊತೆಗಿದ್ದೇವೆ " ಎಂದು ಹಿರಿಯಣ್ಣನಂತೆ ನನ್ನನ್ನು ಸಂತೈಸಿದರು .ಅಲ್ಲಿಂದ ಮತ್ತೆ ನಾನು ಕೀಳರಿಮೆಯಿಂದ ಹೊರಬಂದು ಮತ್ತೆ ಹಿಂದಿನ ಆತ್ಮ ವಿಶ್ವಾಸ ವನ್ನು ಮರಳಿ ಪಡೆದೆ.ಹಿರಿಯರಾದ ಅವರು ನಿಜಕ್ಕೂ ಹಿರಿಯಣ್ಣನ ಸ್ಥಾನದಲ್ಲಿ ನಿಂತು ಆತ್ಮವಿಶ್ವಾಸ ತುಂಬಿದ ನನ್ನ ಸಂಶೋಧನಾ ಕಾರ್ಯಕ್ಕೆ ತುಂಬಾ ಬೆಂಬಲ ನೀಡಿದ ಅವರನ್ನು ಹೇಗೆ ತಾನೆ ಮರೆಯಲಿ ? ಅಂತೆಯೇ ನಾನು ಆತ್ಮಹತ್ಯೆ ಗೆ ಯತ್ನ ಮಾಡಿದ್ದರೂ ತಮ್ಮ ಹಿಂದಿನ ಯೋಜನೆಯನ್ನು ಬದಲಾಯಿಸದೆ ನನ್ನ ನ್ನು ಅಭಿನಂದನೆ ಮಾಡಿದ ಕುಡ್ಲ ಪತ್ರಿಕೆ ಬಳಗದ ಭರತ್ ಬಂಡಿಮಾರ್ ಹಾಗೂ ಇತರರನ್ನು ಮರೆಯಲಾಗದು .ಅಂದು ಕಾರ್ಯಕ್ರಮ ಕ್ಕೆ ಬಂದು ನನಗೆ ಸಾಂತ್ವನ ಹೇಳಿದ ಸರೋಜಾ ಅವರೂ ಸ್ಮರಣೀಯರಾಗಿದ್ದಾರೆ ಇವರೆಲ್ಲರಿಗೆ ಯಾವ ರೀತಿಯಲ್ಲಿ ಧನ್ಯವಾದಗಳನ್ನು ಅರ್ಪಿಸಲಿ ? ತಿಳಿಯುತ್ತಾ ಇಲ್ಲ © ಡಾ ಲಕ್ಷ್ಮೀ ಜಿ ಪ್ರಸಾದ ಕನ್ನಡ ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ ಬೆಂಗಳೂರು ಗ್ರಾಮಾಂತರ ಜಿಲ್ಲೆ
No comments:
Post a Comment