Sunday, 9 May 2021

ದೊಡ್ಡವರ ದಾರಿ 76 : ಡಾ.ಜನಾರ್ದನ ಭಟ್

 


ದೊಡ್ಡವರ ದಾರಿ 76 : ಡಾ.ಜನಾರ್ದನ ಭಟ್ Janardana Bhat

ಸೋಂಕು ತಗುಲಿದಾಗ ನಿಮಗೆ ಮೊದಲು ನೆನಪಿಗೆ ಬಂದದ್ದು ಯಾರು ? ಇದು ಅನೇಕರು ನನ್ನಲ್ಲಿ ಕೇಳಿದ ಪ್ರಶ್ನೆ

ಕೊರೊನಾ ಲಕ್ಷಣ ಕಾಣಿಸಿಕೊಂಡಾಗ ನನಗೆ ಮೊದಲು ನೆನಪಾದದ್ದು ಅಮ್ಮ.
ನನಗೇನಾದರೂ ಆದರೆ ಅಮ್ಮನಿಗೆ ತಡೆಯಲಾಗದು ಎನಿಸಿತು.
ಜೊತೆಗೆ ಇನ್ನೊಂದು ವಿಚಾರ ತಲೆಗೆ ಬಂತು
ಕಳೆದ ಇಪ್ಪತ್ತು ವರ್ಷಗಳಿಂದ ಕ್ಷೇತ್ರ ಕಾರ್ಯ ಅಧ್ಯಯನ ಮಾಡಿ ಸಾವಿರಕ್ಕು ಹೆಚ್ಚಿನ ದೈವಗಳ ಮಾಹಿತಿ ಸಂಗ್ರಹ ಮಾಡಿದ್ದೆ.ಪ್ರಕಟಿಸುವುದಕ್ಕಾಗಿ ಬರೆದು ಕೂಡ ಆಗಿದೆ.ಅದರೆ ಅದಕ್ಕೆ ಅದನ್ನು ತಿದ್ದಿ ವ್ಯವಸ್ಥಿತವಾಗಿ ಜೋಡಿಸಿ ಸೂಕ್ತ ಫೋಟೋಗಳನ್ನು ಹಾಕುವ ಕೆಲಸ ಉಳಿದಿತ್ತು
ಜೊತೆಗೆ A4size ನ ಸಾವಿರದಷ್ಟು ಪುಟಗಳುಳ್ಳ ಪುಸ್ತಕದ ಪ್ರಕಟಣೆಗೆ ಎಂಟು ಹತ್ತು ಲಕ್ಷ ಖರ್ಚಿದೆ‌.

ಒಂದೊಮ್ಮೆ ನಾನಿಲ್ಲವಾದರೆ
ಇವನ್ನೆಲ್ಲ ಮಾಡಲು ಮಗ ಅರವಿಂದನಿಂದ ಸಾಧ್ಯವಿಲ್ಲ.
ನನ್ನ ಇಷ್ಡು ಸಮಯದ ಅಧ್ಯಯನ  ಮುಂದಿನ ತಲೆಮಾರಿಗೆ ತಲುಪದೇ ವ್ಯರ್ಥವಾಗುತ್ತದಲ್ಲ ಎಂಬ ಚಿಂತೆ ಕಾಡಿತು.
ಯಾವುದಕ್ಕೂ ಇರಲಿ ಎಂದು ಬರೆದಿಟ್ಟಿರುವ ವರ್್ಡ್ ಫೈಲನ್ನು ಮಗನಿಗೆ ಇ ಮೇಲ್ ಮಾಡಿದೆ.
ಆಗ ನನಗೆ ನಾನಿಲ್ಲದಿದ್ದರೂ ಈ ಕೆಲಸವನ್ನು ನಿಸ್ವಾರ್ಥದಿಂದ ಸಮರ್ಪಕವಾಗಿ ಹಿರಿಯ ಸಂಶೋಧಕರಾದ ನಿವೃತ್ತ ಪ್ರಾಾಂಶುಪಾಲರೂ ಐವತ್ತಕ್ಕಿಂತ. ಹೆಚ್ಚು ಪುಸ್ತಕಗಳನ್ನು ರಚಿಸಿ ಪ್ರರಕಟಿಸಿರು  ಡಾ.ಜನಾರ್ಧನ ಭಟ್ ಅವರು ಮಾಡಬಲ್ಲರು ಎಂದೆನಿಸಿತು.
ಅವರೊಂದು ಅದ್ಭುತ ವ್ಯಕ್ತಿ.ಹೇಗೆ ಅಷ್ಟನ್ನು ಬರೆಯುವರೊ ನನಗೆ ಗೊತ್ತಾಗುದಿಲ್ಲ.ಕೆಲವರಿಗೆ ದೇವರು ಹೆಚ್ಚಿನ ಸಾಮರ್ಥ್ಯ ಕೊಟ್ಟಿರ್ತಾನೆ
ಹಾಗೆ ಹಾಸ್ಪಿಟಲ್ ಗೆ ದಾಖಲಾಗಲು ಹೋಗುವ ಮೊದಲು‌ಡಾ.ಜನಾರ್ದನ ಭಟ್ ರಿಗೆ ಕರೆ ಮಾಡಿ ನನಗೆ ಕೊರೊನಾ ಪಾಸಿಟಿವ್ ಬಂದಿದ್ದು ಅಸ್ಪತ್ರೆಗೆ ದಾಖಲಾಗಬೇಕಿರುವ ಬಗ್ಗೆ ತಿಳಿಸಿದೆ.ಅಲ್ಲಿ‌ಮೊಬೈಲ್ ತಗೊಂಡು ಹೋಗಲು ಬಿಡುವರೊ ಇಲ್ಲವೊ ಗೊತ್ತಿಲ್ಲ.ಹಾಗಾಗಿ ಈಗಲೇ ರಿಕ್ವೆಷ್ಟ್ ಮಾಡುವೆ ಸರಗ,ಒಂದೊಮ್ಮೆ ನಾನು ಆಸ್ಪತ್ರೆಯಿಂದ ಜೀವಂತ ಬಾರದೇ ಇದ್ದರೆ ನನ್ನ ಪುಸ್ತಕವನ್ನು ಎಡಿಟ್ ಮಾಡಿ  ದುಡ್ಡು ಹೊಂದಿಸಿ ಪ್ರಕಟಿಸುವಿರಾ ? ಎಂದು ಕೇಳಿದೆ..ನೀವು ಹುಷಾರಾಗಿ ಬರ್ತೀರಿ ಎಂದು ದೃಢವಾಗಿ ಹೇಳಿದರು  ,ಒಂದೊಮ್ಮೆ ಬಾರದಿದ್ದರೆ ಪ್ರಕಟಿಸುತ್ತೀರಾ ಕೇಳಿದೆ  ಎಂದು ಹೇಳಿದೆ.ಆಗ ಅಯಿತು ಖಂಡಿತಾ ಪ್ರಕಟಿಸುತ್ತೇನೆ ,ಆದರೆ ಹಾಗಾಗುದಿಲ್ಲ‌‌.ಹುಷಾರಾಗು ಬಂದು ನೀವೇ ಅದನ್ನು ಪ್ರಕಟಿಸುತ್ತೀರಿ ಎಂದರು
ಅಬ್ಬಾ.. ಭಾರ ಇಳಿಸಿದ ಅನುಭವ ಆಯಿತು
ಮನಸ್ಸು ನಿರಾಳವಾಯಿತು.
ನೆಮ್ಮದಿಯಿಂದ ಆಸ್ಪತ್ರೆಗೆ ಹೋಗಿ ದಾಖಲಾಗಿ ಚಿಕಿತ್ಸೆ ಪಡೆದು ಹುಷಾರಾಗಿ ಬಂದೆ
ಈಗ ಬರೆದದ್ದನ್ನು ತಂಗಿಯಂತೆ ಇರುವ ಸ್ನೇಹಿತೆ ಶ್ರೀನಿಧಿ ಕರೆಕ್ಷನ್ ಹಾಕುತ್ತಿದ್ದಾರೆ.
ನಾನು ಅಲ್ಲಲ್ಲಿ ಬಿಟ್ಟು ಹೋಗಿರುದನ್ನು ತುಂಬಿಸುತ್ತಿದ್ದೇನೆ ನಾಗರಾಜ ಭಟ್ ,ರಾಜೇಂದ್ರ ಕುಮಾರ್ ಜೈನ್ ಗೌತಮ್ ಜೈನ್ ,ವಿಜಯ್ ಮೊದಲಾದವರು ಅಪರೂಪದ ಪೋಟೋಗಳನ್ನು ಒದಗಿಸಿದ್ದಾರೆ‌.ಇನ್ನು ಕೆಲವರಲ್ಲಿ ಕೇಳಿರುವೆ
ಇದನ್ನಲ್ಲ ಜೋಡಿಸುವಾಗ ಈ ಪುಸ್ತಕವನ್ನು ನಾನು ಪ್ರಕಟಿಸುವ ಬದಲು ಜನಾರ್ದನ ಭಟ್ ಅವರು ಪ್ರಕಟಿಸಿದರೆ ತುಂಬಾ ಚೆನ್ನಾಗಿ ಬರ್ತಿತ್ತು ಎಂದು ನನಗೆ ಅನಿಸಿದೆ.ಅವರ ಅನುಭವ ,ಕೌಶಲ ಬಹಳ ಹೆಚ್ಚಿನದು.
ಅವರಲ್ಲಿ ಸಲಹೆ ಪಡೆಯುವೆ
ನನ್ನ ಅಧ್ಯಯನಾತ್ಮ ಸಂಗ್ರಹ ಸಾವಿರಕ್ಕಿಂತ ಹೆಚ್ಚಿನ ದೈವಗಳ ಮಾಹಿತಿ ಇರುವ ಪುಸ್ತಕ ಪ್ರಕಟಿಸುವ ಮುನ್ನವೇ ನಾನು ಸತ್ತರೆ ಇದನ್ನಾರು ಪ್ರಕಟಿಸುವರು ಎಂಬ ಆತಂಕ ಕಾಡಿದಾಗ ದೃಡವಾಗಿ ಪ್ರಕಟಿಸುವೆ ಎಂದು ಲಕ್ಷ ಗಟ್ಟಲೆ ಖರ್ಚಿನ ತಲೆನೋವಿನ ಜವಾಬ್ದಾರಿಯನ್ನು ಹೊರಲು ಸಿದ್ದರಾಗಿದ್ದ ಜನಾರ್ದನ ಭಟ್ಟರ ಔನ್ನತ್ಯಕ್ಕೆ ಹಿರಿತನಕ್ಕೆ ಸಹೃದಯತೆಗೆ ನಾನು ಆಭಾರಿಯಾಗಿದ್ದೇನೆ

Saturday, 10 April 2021

ನನಗೂ ಆತ್ಮವಿದೆ..ಪಾಸು ಫೇಲೆಂಬ ಆತಂಕದ ದಿನದಂದು

 ಎಪ್ರಿಲ್ ಹತ್ತರ  ಪಾಸು ಫೇಲಿನ ದಿನವೆಂಬ ಭಯ ಆತಂಕದ ದಿನ 


ಹೌದು..ಪ್ರತಿವರ್ಷ ಎಪ್ರಿಲ್ ಹತ್ತಕ್ಕೆ ನಮ್ಮ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಶಾಲೆಯ ಬೋರ್ಡ್ ನಲ್ಲಿ ಹಾಕ್ತಿದ್ದರು.ಎಪ್ರಿಲ್  ಮೊದಲ ದಿನಾಂಕದಿಂದಲೇ ಎದೆಯಲ್ಲಿ ಅವಲಕ್ಕಿ ಕುಟ್ಟಲು ಶುರುವಾಗುತ್ತಿತ್ತು.ಪಾಸ್ ಪೇಲ್ ದಿನ ಹತ್ತಿರ ಬಂದ ಹಾಗೇ ಊಟ ತಿಂಡಿ ಸೇರುತ್ತಿರಲಿಲ್ಲ.ನಮ್ಮಂತೆಯೇ ನಮ್ಮ ಹೆತ್ತವರಿಗೂ ಇದೇ ಆತಂಕ.

ಚೆನ್ನಾಗಿ ಕಲಿಯದವರನ್ನು ಫೇಲಾದವರನ್ನು "ಹೋಗು ಬಜೆಂಟ್ ಹೆರ್ಕು " ಎಂದು ಬೈಉವ ವಾಡಿಕೆ ಇತ್ತು.ಆದರೆ ಪಾಸಾಗುತ್ತಿದ್ದ ನಾವು ಕೂಡ ಬೇಸಗೆಯಲ್ಲಿ ಬಜಂಟ್ ಹೆಕ್ಕುತ್ತಿದ್ದೆವು.

ಬಜಂಟು ಎಂದರೆ ಒಣ ಸೆಗಣಿ.ಬೇಸಗೆಯ ಸಮಯದಲ್ಲಿ ನಾವು‌ಮಕ್ಕಳೆಲ್ಲ ಗುಡ್ಡವೆಲ್ಲ ಬಜೆಂಟಿಗಾಗಿ ಹುಡುಕುತ್ತಿದ್ದೆವು.ಮೇಯಲು ಬಿಟ್ಟ ಹಸುಗಳು ಹಾಕಿದ ಒಣ ಸೆಗಣಿ ಸಿಕ್ತಾ ಇತ್ತು.

ಇದನ್ನು ಮಳೆಗಾಲದಲ್ಲಿ ಒಲೆ ಉರಿಸಲು ಬಳಸುತ್ತಾ ಇದ್ದರು.

ನಾವು ಏಳೆಂಟು ಸಮ ವಯಸ್ಸಿನ ಮಕ್ಕಳು ಒಂದೊಂದು ಗೋಣಿ ಚೀಲ ಹಿಡಿದುಕೊಂಡು ಬಜಂಟು ಹೆಕ್ಕಲು ಹೋಗುತ್ತಿದ್ದೆವು.ಅದು ನಮಗೆ ಬೇಸರ ತರುವ ಕೆಲಸವಾಗಿರಲಿಲ್ಲ.ಗುಡ್ಡಗಾಡಿಬ ಕಾಡು ಹಣ್ಣುಗಳನ್ನು ಅಯ್ದು ತಿಂದುಕೊಂಡು ಕಾಡು ಹರಟೆ ಹೊಡೆದುಕೊಂಡು ಬಹಳ ಖುಷಿಯಿಂದ ಈ ಕೆಲಸ ಮಾಡ್ತಿದ್ದೆವು ಎಂಬುದು ಬೇರೆ ವಿಚಾರ.ಅದರೂ ಫೇಲಾದವರು ಬಜಂಟು ಹೆಕ್ಕಲು ಲಾಯಕ್ಕು ಎಂಬ ಮಾತು ಆಗ ಇತ್ತು 


ಆಗೆಲ್ಲ ಫೇಲ್ ಆದರೆ ಮರು ಪರೀಕ್ಷೆ ಇರುತ್ತಿರಲಿಲ್ಲ.ಮತ್ತೆ ಒಂದು ವರ್ಷ ಅದೇ ತರಗತಿಯಲ್ಲಿ ಇರಬೇಕು.ಅದು ನಮಗೆ ಬಹಳ ಅವಮಾನಕರ ವಿಚಾರ.ಹಾಗಾಗಿ ಪಾಸಾಗದಿದ್ದರೆ ಎಂಬ ಆತಂಕ ಕಾಡುತ್ತಿತ್ತು.


ಕೆಲವೊಮ್ಮೆ ಜಾಣ ಮಕ್ಕಳಿಗೆ ಏನಾದರೂ ಆರೋಗ್ಯ ಸಮಸ್ಯೆ ಉಂಟಾಗಿ ವಾರ್ಷಿಕ ಪರೀಕ್ಷೆಗೆ ಹಾಜರಾಗಲು ಆಗದಿದ್ದರೆ ಅವರೂ ಕೂಡ ಫೇಲ್ .ನಂತರದ ಒಂದು ವರ್ಷ ಅದೇ ತರಗತಿಯಲ್ಲಿ ಕುಳಿತುಕೊಳ್ಳಬೇಕು.


ಈ ಅವಮಾನ ಸ್ವೀಕರಿಸಲು ತಯಾರಿಲ್ಲದ ಮಕ್ಕಳ ವಿದ್ಯಾಭ್ಯಾಸ ಇದೇ ಕಾರಣಕ್ಕಾಗಿ ಅಲ್ಲಿಗೇ ನಿಂತು ಹೋಗುತ್ತಿತ್ತು.


ನನಗೆ ನೆನಪಿನಲ್ಲಿರುವಂತೆ ನನ್ನ ಸಹಪಾಠಿಗಳಾಗಿದ್ದ  ಇಬ್ಬರು ಜಾಣ ವಿದ್ಯಾರ್ಥಿಗಳ ಶಿಜ್ಷಣ ಹೀಗೆ ಅರ್ಧದಲ್ಲಿಯೇ ಮೊಟಕಾಗಿತ್ತು


ಒಂದು ನನ್ನ ಬಾಲ್ಯ ಸ್ನೇಹಿತೆ ಯಶೋದಾಳದು.ಅವಳು ಎಂಟನೇ ತರಗತಿಯ ಅಂತಿಮ /ವಾರ್ಷಿಕ ಪರೀಕ್ಷೆಯಲ್ಲಿ ಒಂದೆರಡು ವಿಷಯಗಳಿಗೆ ಗೈರು ಹಾಜರಾಗಿದ್ದಳು.


ಅವಳೂ ನಾನೂ ಒಟ್ಟಿಗೆ ಕೋಳ್ಯೂರಿನಿಂದ ಕೊಡ್ಲಮೊಗರಿನ ವಾಣಿವಿಜಯ ಪ್ರೌಢಶಾಲೆಗೆ  ನಡೆದುಕೊಂಡು ಹೋಗಿ ಬರುತ್ತಿದ್ದೆವು.ಎರಡು ಗುಡ್ಡ ಹತ್ತಿ ಇಳಿಯಬೇಕು.ಸುಮಾರು ನಾಲ್ಕೈದು ಮೈಲು ನಡೆಯಬೇಕಿತ್ತು.


ಅಗಿ‌ನ್ನೂ ನನಗೆ ಸರಿಯಾಗಿ ನೆನಪಿದೆ

ಸುಮಾರು ಎಂಟು ಎಂಟೂವರೆ ಗಂಟೆ ಹೊತ್ತಿಗೆ ಅವಳು ನಮ್ಮ ಮನೆಗೆ ಬರ್ತಿದ್ದಳು.ಅವಳನ್ನೇ ಕಾಯುತ್ತಿರುವ ನಾನು ಕೂಡಲೇ ಮೆಟ್ಟಿಳಿದು ಮನೆಯ ಗದ್ದೆಯ ಬದುವಿನಲ್ಲಿ ಸಾಗಿ.ತೋಡಿನ ಸಂಕ ದಾಟಿ ಅಂಗಡಿ ಎದುರು ಎತ್ತರಕ್ಕೆ ಹತ್ತಿ ಸಾಗುತ್ತಿದ್ದೆವು.

 1986 ಮಾರ್ಚ್ ಕೊನೆಯ ವಾರ.ಪ್ರೌಢ ಶಾಲೆಯಲ್ಲಿ ಅಂತಿಮ ಪರಿಕ್ಷೆಗಳು ನಡೆಯುತ್ತಿದ್ದವು.

.ನಮಗೆ ಆಗ ಹನ್ನೆರಡು ಪರೀಕ್ಷೆಗಳಿದ್ದವು.ಕನ್ನಡ ಎರಡು ಪತ್ರಿಕೆಗಳು,ವಿಜ್ಞಾನ ಮೂರು ಪತ್ರಿಕೆಗಳು,ಗಣಿತ ಎರಡು ಪತ್ರಿಕೆಗಳು ,ಸಮಾಜ ಶಾಸ್ತ್ರ ಎರಡು ಪತ್ರಿಕೆಗಳು ,ಹಿಂದಿ ಒಂದು ಪತ್ರಿಕೆ.


ಕೊನೆಯ ಒಂದೆರಡು ಪರೀಕ್ಷೆಗಳು ಉಳಿದಿದ್ದವು

ಆ ದಿನ ಯಶೋಧಾ ಎಂಟೂವರೆ ಕಳೆದರೂ ನಮ್ಮ‌ಮನೆಗೆ ಬಂದಿರಲಿಲ್ಲ.ಅವಳ ಮನೆಯಿಂದ ಶಾಲೆಗೆ ಹೋಗುವ ದಾರಿಯಲ್ಲಿ ನಮ್ಮ ಮನೆ ಇತ್ತು.


ಅವಳು ಬಾರದ ಕಾರಣ ನಾನೇ ಅವಳ ಮನೆಗೆ ಹೋದೆ.ಅವಳು ಚಳಿಗೆ ನಡುಗುತ್ತಾ ಕಂಬಳಿ ಹೊದ್ದು ಮಲಗಿದ್ದಳು.

"ನಮ್ಮ ಯಶೋಧೆಗೆ  ಮೈಯಲ್ಲಿ ಬಿದ್ದಿದೆ( ಚಿಕನ್ ಪಾಕ್ಸ್ ) .ಅವಳು ಪರೀಕ್ಷೆಗೆ ಬರುದಿಲ್ಲ‌.ನೀನು ಹೋಗು ವಿದ್ಯಾ ,( ನನ್ನನ್ನು ಮನೆಯಲ್ಲಿ,ಊರಲಿ ವಿದ್ಯಾ ಎಂದು ಕರೆಯುತ್ತಾರೆ )ಒಂದು ವಾರ ಮನೆಗೆ ಬರಬೇಡ.ನಿನಗೂ ಹರಡುತ್ತದೆ " ಎಂದು ಹೇಳಿದರು


ಆಗ ಅಯ್ಯೋ..ಅವಳು ಫೇಲ್ ಆಗ್ತಾಳಲ್ಲ ಎಂದು ನನಗೆ ಆತಂಕ ಆಯಿತು.

ನಂತರ ಒಬ್ಬಳೇ ನಡೆದುಕೊಂಡು ಶಾಲೆಗೆ ಬಂದು ಪರೀಕ್ಷೆ ಬರೆದೆ.

ನಿರೀಕ್ಷೆಯಂತೆಯೇ ಯಶೋಧಾ ಫೇಲ್ ಆಗಿದ್ದಳು.

ಅದರ ಪರಿಣಾಮವಾಗಿ ಜಾಣೆಯಾಗಿದ್ದ ಅವಳ ಓದು ಅಲ್ಲಿಗೇ ನಿಂತಿತು.ಅವಳು ಮುಂದೆ ಓದಲಿಲ್ಲ.

ನಂತರ ದೊಡ್ಡವಳಾಗಿ ಮದುವೆಯಾದ ನಂತರ ಕಾಸಗಿಯಾಗಿ ಕಟ್ಟಿ ಎಸ್ ಎಸ್ ಎಲ್ ಸಿ ಪಿಯುಸಿ ಡಿಗ್ರಿ ಮಾಡಿದ್ದಾಳೆ.


ಇದೇ ರೀತಿಯಲ್ಲಿ ನಾನು ಒಂಬತ್ತನೇ ತರಗತಿ ಓದುತ್ತಿರುವಾಗ ರವೀಂದ್ರ ಎಂಬ ಹುಡುಗನಿಗೂ ಆರೋಗ್ಯ ಸಮಸ್ಯೆ ಬಂದು‌ಪರೀಕ್ಷೆ ಬರೆಯಲಾಗಲಿಲ್ಲ.ಫೇಲಾದ ಕಾರಣ ನಂತರ ಅವನೂ ವಿದ್ಯಾಭ್ಯಾಸ ಮುಂದುವರಿಸಲಿಲ್ಲ


ಈಗ ಒಂದರಿಂದ ಒಂಬತ್ತರ ತನಕ ಫೇಲ್ ಮಾಡುದೇ ಇಲ್ಲ.ಹಾಗಾಗಿ ನಮ್ಮಷ್ಟು ಆತಂಕ ಈಗಿನ‌ಮಕ್ಕಳಿಗೆ ಇರಲಾರದೋ ಏನೋ

ನನಗೆ ಈಗ ನಗು ಬರುವ ವಿಚಾರ ಒಂದಿದೆ.ನಾನು ಸಾಮಾನ್ಯವಾಗಿ ತರಗತಿಯಲ್ಲಿ‌ ಮೊದಲ‌ ಇಲ್ಲವೇ ಎರಡನೇ Rank ತೆಗೆಯುತ್ತಿದ್ದೆ.ನನ್ನನ್ನೂ ಫೇಲ್ ಮಾಡಿದರೆ ಮತ್ತೆ ಶಿಕ್ಷಕರು ಎಂತ ಮಾಡುದು ? ಪಾಠ ಮಾಡಲು ವಿದ್ಯಾರ್ಥಿಗಳು ಬೇಡವೇ?


ಆದರೆ ನನಗೆ ಆಗ ಈ ವಿಚಾರ ಎಲ್ಲ ಗೊತ್ತಿರಲಿಲ್ಲ.ಇತರ ಸಾಮಾನ್ಯ ಮಾರ್ಕ್ಸ್ನ ವಿದ್ಯಾರ್ಥಿಗಳಂತೆ ಪಾಸ್ ಫೇಲಿನ ದಿನವನ್ನು ಆತಂಕದಿಂದ ಎದುರು ನೋಡುತ್ತಿದ್ದೆ.

ಎಪ್ರಿಲ್ ಹತ್ತನೆಯ ತಾರೀಕಿನಂದು ಎಲ್ಲ ದೇವರುಗಳೂ ನೆನಪಿಗೆ ಬರ್ತಿದ್ದರು.ಅವರನ್ನೆಲ್ಲ ನೆನೆದು ನನ್ನನ್ನು ಪಾಸು ಮಾಡಿಸು ಎಂದು ಬೇಡಿಕೊಳ್ಳುತ್ತಿದ್ದೆ

ಎಂದಿಗಿಂತ ಬೇಗನೆ ಎದ್ದು ದೇವರಿಗೆ ಹೆಚ್ಚು ಹೂ ಕೊಯ್ದು ಇಡುತ್ತಿದ್ದೆ.ನಂತರ ಸ್ನಾನ ಮಾಡಿ ದೇವರಿಗೆ ಹೊಡಾಡಿ( ನಮಸ್ಕರಿಸಿ) ಶಾಲೆಗೆ ಹೋಗುತ್ತಿದ್ದೆ.ಅಲ್ಲಿ ಬೋರ್ಡ್ ನಲ್ಲಿ ಫೇಲಾದವರ ಹೆಸರನ್ನು ಹಾಕ್ತಾ ಇದ್ದರು.

ಶಾಲೆ ಸಮೀಪಿಸಿದಂತೆಲ್ಲ‌ ಎದೆ ಇತರರಿಗೆ  ಕೇಳುವಷ್ಡು ದೊಡ್ಡದಾಗಿ ಡಬ್ ಡಬ್ ಬಡಿಯುತ್ತಾ ಇತ್ತು.ಹೇಗೋ ಹೋಗಿ ಫೇಲಾದವರ ಲಿಸ್ಟ್  ಅನ್ನು ಎರಡೆರಡು ಸಲ ಓದಿ‌ ನನ್ನ ಹೆಸರು ಅದರಲ್ಲಿ ಇಲ್ಲದಿರುವುದನ್ನು ನೋಡಿ ಖಚಿತ ಗೊಳಿಸಿ ಬದುಕಿದೆಯಾ ಬಡಜೀವವೇ..ನಾನು ಪಾಸು ಎಂದು ಕುಣಿದಾಡಿಕೊಂಡು ಮನೆಗೆ ಬರ್ತಾ ಇದ್ದೆ.ಪಾಸಾದ ಇತರರೂ ಹೀಗೇ ಸಂಭ್ರಮದಿಂದ ಜೊತೆಯಾಗುತ್ತಿದ್ದರು.

ಫೇಲ್ ಆದವರು ಬಿಕ್ಕಿ ಬಿಕ್ಕಿ ಅಳ್ತಾ ಇದ್ದದ್ದು ಈಗಲೂ ನನ್ನ ಕಣ್ಣಿಗೆ ಕಟ್ತಿದೆ.ಅವರ ಬಗ್ಗೆ ನನಗೆ ಪಾಪ ಎನಿಸುತ್ತಿತ್ತು.ಯಾಕೆಂದರೆ ಫೇಲಾದ ಮಕ್ಕಳಿಗೆ ಮನೆಯಲ್ಲು ಕೂಡ ಪೆಟ್ಡು ಕಾದಿರ್ತಾ ಇದ್ದದ್ದು ನನಗೆ ಗೊತ್ತಿತ್ತು


ಇನ್ನು ಹತ್ತನೇ ತರಗತಿಯ ಫಲಿತಾಂಸದ ದಿನದ ಬಗ್ಗೆ ಹೇಳುದೇ ಬೇಡ..ಅಷ್ಡು ಆತಂಕದ ಕ್ಷಣಗಳವು.ಆ ಬಗ್ಗೆ ಇನ್ನೊಂದಿನ ಬರೆಯುವೆ

ಡಾ.ಲಕ್ಷ್ಮೀ ಜಿ ಪ್ರಸಾದ್ 

Tuesday, 30 March 2021

 ಸತ್ಯನಾಪುರದ ಸಿರಿಯನ್ನು ನೆನಪಿಸಿದ ಮಾದರಿ ಮಹಿಳೆ ಮಹಾಲಕ್ಷ್ಮಿ ಮೇಡಂ ದಿಟ್ಟತನಕ್ಕೆ ನಮೋನ್ನಮಃ 


ಹೌದು . ಸುಮಾರು  ಒಂದು ಸಾವಿರದ ಅರುನೂರು ವರ್ಷಗಳ ಹಿಂದೆಯೇ ಅನ್ಯ ಸ್ತ್ರೀಯ ಹಿಂದೆ ಹೋದ ಗಂಡನಿಗೆ ವಿಚ್ಚೇದನ ನೀಡಿ ಮರು ಮದುವೆಯಾಗಿ ತುಳುನಾಡಿನ ಮಹಿಳೆಯರಿಗೆ ಮಾತ್ರವಲ್ಲ‌ ಇಡೀ ಜಗತ್ತಿನ ಸ್ತ್ರೀಯರಿಗೇ ಮಾದರಿಯಾದ ಮಹಾನ್ ಚೇತನ ಸತ್ಯನಾಪುರದ ಬಾಲಕ್ಕೆ ಸಿರಿಯದು.

ಸಿರಿಗೆ ಮದುವೆಯಾಗಿ ಒಬ್ಬ ಮಗನಿದ್ದ .ಸಿರಿ ಎರಡನೆ ಮದುವೆಯಾಗುವ ತೀರ್ಮಾನಕ್ಕೆ ಬರುವಷ್ಟರಲ್ಲಿ ಆತನೂ ದುರಂತವನ್ನಪ್ಪಿದ‌. 

ಸಿರಿ ಕೂಡ  ದೈಹಿಕ ಕಾಮನೆಗಳಿಗಾಗಿ ಇನ್ನೊಂದು ವಿವಾಹವಾಗುದಿಲ್ಲ.ತುಳುವ ಸ್ತ್ರೀಯರ ಸ್ವಾಭಿಮಾನದ ರಕ್ಷಣೆಗಾಗಿ ಅಕೆ ದುರುಳ ಗಂಡನನ್ನು ಧಿಕ್ಕರಿಸಿ ಮರು ಮದುವೆಯಾಗುತ್ತಾಳೆ.ಒಂಟಿ ಮಹಿಳೆಯಾಗಿದ್ದ ಆಕೆಗೆ ಆಶ್ರಯವೂ ಬೇಕಿದ್ದಿರಬಹುದು.ವಿವಾಹದ ನಂತರ ಮಡದಿಯಾಗಿ ತನ್ನ ಕರ್ತವ್ಯವವನ್ನು ನಿರ್ವಹಿಸಿದ ಸಿರಿ ಹೆಣ್ಣು ಮಗುವೊಂದಕ್ಕೆ ಜನ್ಮವಿತ್ತು ದೈವತ್ವ ಪಡೆದು ಅರಾದಿಸಲ್ಪಡುತ್ತಾಳೆ

ಸ್ವಾಭಿಮಾನದ ಕಾರಣಕ್ಕಾಗಿಯೇ ನನಗೆ ಸತ್ಯನಾಪುರದ ಸಿರಿ ದೈವತ ಬಹಳ ಹತ್ತಿರವಾದವಳು.

ಮತ್ತೆ ಇಂದು ಅಕೆಯನ್ನು ನೆನಪಿಸಿದರು ಮೈಸೂರಿನ ನಿವೃತ್ತ ಶಿಕ್ಷಕಿ ಎಪ್ಪತ್ತಮೂರರ ಜೀವನೋತ್ಸಾಹಿ‌ ಮಹಾಲಕ್ಷ್ಮೀ ಮೇಡಂ 

ಕೆಲ ದಿನಗಳ ಹಿಂದೆ ನಿವೃತ್ತ ಶಿಕ್ಷಕಿಗೆ 73 ಕ್ಕಿಂತ ಹೆಚ್ಚಿನ ವಯಸ್ಸಿನ ಅರೋಗ್ಯವಂತ ಬ್ರಾಹ್ಮಣ  ವರ ಬೇಕಾಗಿದ್ದಾನೆ ಎಂಬ ಜಾಹಿರಾತು ಪ್ರಕಟವಾಯಿತು.

ಇದನ್ನೋದಿದ ಅನೇಕ ಬುದ್ದಿ ಹೀನರು ನಕ್ಕದ್ದೇನು ? ಅವಹೇಳನ ಮಾಡಿದ್ದೇನು..ಅಬ್ಬಬ್ಬಾ ಇವರೆಲ್ಲ ಮನುಷ್ಯ ವರ್ಗಕ್ಕೆ ಸೇರಿದವರಾ ಎನಿಸಿತ್ತು ನನಗೆ‌.

ಅಗಲೇ ಮಂಜುನಾಥ ಕೊಳ್ಳೇಗಾಲ ಜೆ ಬಿ ಅರ್ ಮೊದಲಾದವರು ಅವಹೆಳನ ಮಾಡಿದವರನ್ನು ವಿರೋಧಿಸಿ ವಾಸ್ತವಿಕತೆಯ ಅರಿವು ಮುಡಿಸುವ ಬರಹ ಬರೆದಿದ್ದರು.


ಇಂದು ನಾನು ಅ ಜಾಹಿರಾತು ನೀಡಿದ ಮಹಿಳೆ ಮಹಾಲಕ್ಷ್ಮೀ ಮೇಡಂ ಗೆ ಕರೆ ಮಾಡಿದೆ.ಆರಂಭದಲ್ಲಿ ಅವರು ಕರೆ ಸ್ವೀಕರಿಸಲಿಲ್ಲ.ಅದನ್ನು ನಾನು ನಿರೀಕ್ಷಿಸಿದ್ದೆ ಕೂಡ.


ಈಗಾಗಲೇ ಅವರಿಗೆ ಅನೆಕರು ಕರೆ ಮಾಡಿ ಅವಹೇಳನ ಮಾಡರ್ತಾರೆ.ಈಗ ಕರೆ ಮಾಡಿದ ನನ್ನ ಕರೆ ಕೂಡ ಅಂತಹದೇ ಒಂದು ಎಂದು ಭಾವಿಸಿ ಕರೆ ಸ್ವೀಕರಿಸಲಿಲ್ಲ.


ಹಾಗಾಗಿ ನಾನವರಿಗೆ ಹೀಗೆ ಮೆಸೇಜ್ ಮಾಡಿದೆ.

ನಮಸ್ತೆ ಮೇಡಂ

"ನಾನು ಡಾ.ಲಕ್ಷ್ಮೀ ಜಿ ಪ್ರಸಾದ್

ಕನ್ನಡ ಉಪನ್ಯಾಸಕಿ

ಸರ್ಕಾರಿ ಪದವಿ ಪೂರ್ವ ಕಾಲೇಜು,ಬ್ಯಾಟರಾಯನಪುರ,ಬೆಂಗಳೂರು


ನನಗೆ ನಿಮ್ಮ ಬಗ್ಗೆ ಅತೀವ ಹೆಮ್ಮೆ ಎನಿಸಿದೆ.ಹಾಗಾಗಿ ನಿಮ್ಮಲ್ಲಿ ಒಮ್ಮೆ ಮಾತನಾಡಬೇಕೆನಿಸಿ ಕರೆ ಮಾಡಿದೆ.,ತೊಂದರೆಯಾಗಿದ್ದಲ್ಲಿ ಕ್ಷಮಿಸಿ"

ನಂತರ ಅವರು ಕರೆ ಸ್ವೀಕರಿಸಿದರು.

ಎಲ್ಲರೂ ಕರೆ ಮಾಡಿ  ತಿರಸ್ಕಾರದಿಂದ ಏನೇನೋ ಹೇಳಿದರು ಲಕ್ಷ್ಮೀ.ನೀವೊಬ್ಬರೇ ನನ್ನನ್ನು ಅರ್ಥ ಮಾಡಿಕೊಂಡು ಮಾತನಾಡಿದಿರಿ ಎಂದುಬಹಳ ಪ್ರೀತಿಯಿಂದ ಮಾತನಾಡಿದರು.

ನಿದಾನಕ್ಕೆ ತಮ್ಮ ಬದುಕಿನ ದುರಂತ ಕಥೆಯನ್ನು ಬಹಳ ದುಃಖದಿಂದ ಹಂಚಿಕೊಂಡರು

ಬಹಳ ಬಡ ಕುಟುಂಬದಲ್ಲಿ ಹಿರಿಯಕ್ಕನಾಗಿ ಹುಟ್ಟಿದ್ದು ನನ್ನ ತಪ್ಪೇ ? ಎಂದು ತಮ್ಮ ಅಂತರಂಗವನ್ನು ತೆರೆದಿಟ್ಟರು

ಬಡ ಬ್ರಾಹ್ಮಣ ದಂಪತಿಯ ಮೂರನೆಯ ಮಗಳಾಗಿ ಹುಟ್ಟಿದವರು ಮಹಾಲಕ್ಷ್ಮೀ.

ಅವರಿಗಿಂತ ಮೊದಲು ಅಕ್ಕ ಅಣ್ಣ ಹುಟ್ಟಿದ್ದರೂ ಸಣ್ಣ ವಯಸ್ಸಿನಲ್ಲಿ‌ ಮರಣವನ್ನಪ್ಪಿದ್ದು ಮನೆಯಲ್ಲಿ ಇವರೇ ಹಿರಿಯರಾಗಿದ್ದರು.

ಇವರ ನಂತರ ಒಂಬತ್ತು ಜನ ತಮ್ಮ ತಂಗಿಯರು ಹುಟ್ಟಿದರು.ಇವರುಗಳು ಹುಟ್ಟಿದಾಗ ತಾಯಿಯ ಬಾಣಂತನವನ್ನು ಮಾಡುವ ಕಷ್ಟವೂ ಇವರ ಪಾಲಿಗೆ ಬಂದೊದಗಿತ್ತು.

ತಂದೆ ಇವರು ಐದನೆ ತರಗತಿಯಲ್ಲಿ ಓದುವಾಗಲೇ ಶಾಲೆ ಬಿಡಿಸಲು ಸಿದ್ದರಾಗಿದ್ದರು.ಮುಂದೆ ಗಂಡನಿಗೆ ಪತ್ರ ಬರೆವಷ್ಟು ಬಂದ ಪತ್ರ ಓದುವಷ್ಟು ಬಂದರೆ ಸಾಕು ಎಂದಿದ್ದರು.

ಅದರೆ ಇವರ ದೊಡ್ಡಮ್ಮನ ಒತ್ತಾಸೆಯಿಂದ ಜಾಣೆಯಾಗಿದ್ದ ಮಹಾ ಲಕ್ಷ್ಮೀಯವರು  ಹೇಗೋ ಹತ್ತನೆ ತರಗತಿ ತನಕ ಓದಿ ಟಿಸಿಎಚ್ / ಸಮಾನಾಂತರ ಓದು ಓದಿ ಸರ್ಕಾರಿ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿದರು.


ಅದರಿಮದ ಇವರಿಗೇನೂ ಲಾಭವಾಗಲಿಲ್ಲ.ಇವರ ವೇತನ ಎಲ್ಲವೂ ತಮ್ಮ ತಂಗಿಯರನ್ನು ಬೆಳಸಲೇ ಖರ್ಚಾಗುತ್ತಿತ್ತು.

 ಇವರೂ ಸ್ವಾರ್ಥವಿಲ್ಲದೆ ತಮ್ಮ ತಂಗಿಯರನ್ನು ದೊಡ್ಡವರನ್ನಾಗಿ ಮಾಡಿ ಮದುವೆ ಮಾಡಿ ಅವರರವ ಕಾಲ ಮೇಲೆ ನಿಲ್ಲುವಂತೆ ಮಾಡಿದರು.


ಅಷ್ಟಾಗುವಾಗ ಇವರಿಗೆ ವಯಸ್ಸು ನಲುವತ್ತೆರಡು ಕಳೆಯಿತು.

ಬಹಳ ತಡವಾಗಿಯಾಗಿ ಮದುವೆಯಾಯಿತು.ಗಂಡ ಪೊಲೀಸ್ ಇಲಾಕೆಯ ವಯರ್ಲೆಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು.


ಇಲ್ಲೂ ಹುಟ್ಟಿನಿಂದ ಕಾಡಿದ ದುರಾದರಷ್ಟ ಇಲ್ಲೂ ಇವರ ಬಾಳಿನಲ್ಲಿ ಆಟವಾಡಿತು.ಆತನಿಗೆ ಮೊದಲೇ ಮದುವೆಯಾಗಿತ್ತು.ಸರ್ಕಾರಿ ಕೆಲಸದಲ್ಲಿದ್ದ  ಇವರ ದುಡ್ಡಿನ ಮೇಲಿನ ಆಸೆಯಿಂದ ಅತ ಮೊದಲ‌ಮದುವೆಯನ್ನು ಮುಚ್ಚಿಟ್ಟು ಇವರನ್ನು ಮದುವೆಯಾಗಿದ್ದ.ಅತನಿಗೆ ಇವರ ಮೇಲೆ ಯಾವ ಮೋಹವೂ ಇರಲಿಲ್ಲ‌.ಕೆವಲ ಇವರ ದುಡ್ಡು ಮಾತ್ರ ಬೇಕಿತ್ತು

ಹಾಗೂ ಹೀಗೂ ಅತನೊಡನೆ ಇವರು ಎರಡು ವರ್ಷ ಸಂಸಾರ ಮಾಡಿದರು.ಕೊನೆಗೂ ಆತನ ವರ್ತನೆಯಿಂದ ಬೇಸತ್ತು ಬೇರೆಯಾಗಿ ಡೈವರ್ಸ್ ಪಡೆದರು.

ಇಷ್ಟೆಲ್ಲಾ ಅಗುವಾಗ ಕಾಲ ನಿಲ್ಲಲಿಲ್ಲ.ಇವರಿಗು ವಯಸ್ಸು ಐವತ್ತಾಯಿತು.ಅಷ್ಟರಲ್ಲಿ ಬ್ರೈನ್ ಟ್ಯೂಮರ್ ಸಮಸ್ಯೆ ಕಾಡಿ  ವಾಲಂಟರಿ ರಿಟೈರ್ಮೆಂಟ್ ತಗೊಂಡರು

ದುಬಾರಿ ಚಿಕಿತ್ಸೆಯ ನಂತರ ಆರೋಗ್ಯ ಸಮಸ್ಯೆ ಸರಿ ಹೋಯಿತು

ತಮ್ಮ ತಂಗಿಯರು ಅವರವರ ಸಂಸಾರ ತಾಪತ್ರಯದಲ್ಲಿ ಮುಳುಗಿದರು.

ಇವರ ಸಾಂಗತ್ಯಕ್ಕೆ ಯಾರೂ ಇಲ್ಲ.ಒಬ್ಬರೇ ಮನೆಯಲ್ಲಿ ಮಲಗಲು ಆತಂಕ.ಒಬ್ಬರೆ ಇರಲು ಭಯ ಏಕಾಂಗಿತನ ಕಾಡತೊಡಗಿತು.


ಅಗಿನ ಕಾಲದಲ್ಲೇ ಓದಿ ಶಿಜ್ಷಕಿತಾಗಿದ್ದ ಇವರೊಂದು ದಿಟ್ಟ ನಿರ್ಧಾರಕ್ಕೆ ಬಂದರು.ತಮ್ಮ ಬದುಕಿನ ಏಕಾಂಗತನವನ್ನು ಹೋಗಲಾಡಿಸಲು, ತಮ್ಮ ಕಷ್ಟ ಸುಖವನ್ನು ಹಂಚಿಕೊಲ್ಲುವ ಜೀವ ಒಂದಿರಬೆಕೆನಿಸಿತು.


ಹಾಗಾಗಿ ತಮ್ಮಂತೆಯೇ ವಯಸ್ಸಾದ ಅರೋಗ್ಯವಂತ ವ್ಯಕ್ತಿಯನ್ನು ಬಾಳ ಸಂಗಾತಿಯನ್ನಾಗಿ ಪಡೆಯಲು ಇಚ್ಛಿಸಿ ಈ ಬಗ್ಗೆ ಪತ್ರಿಕೆಯಲ್ಲಿ ಜಾಹಿರಾತು ನೀಡಿದರು

ಅವರಿಗೆ ಗಂಡಿನ ಕುರಿತಾದ ಯಾವ ದೈಹಿಕ ಸೆಳೆತವೂ ಇಲ್ಲ.ಅವರಿಗೊಂದು ಅತ್ಮೀಯತೆಯನ್ನು ತೋರುವ ಸಂಗಾತಿ ಬೇಕಿದೆ ಅಷ್ಟೇ.

ಅಷ್ಟಕ್ಕೇ ಜನಬಾಯಿಗೆ ಬಂದ ಹಾಗೆ ಅವಹೇಳನ ಮಾಡಿದ್ದು ಅವರಿಗೆ ಬಹಳ ನೋವನ್ನುಂಟು ಮಾಡಿದೆ.ಬ್ರಾಹ್ಮಣನೇ ಆಗಬೇಕಾ ? ಬೇರೆ ಜಾತಿಯವರು ಗಂಡಸಲ್ಲವೇ ಎಂದವರೂ ಇದ್ದಾರಂತೆ

ಹುಟ್ಟನಿಂದ ಬ್ರಾಹ್ಮಣರಾಗಿ‌ ಮದು ಮಾಂಸ ತಿನ್ನದೆ ಸಸ್ಯಾಹಾರಿಯಾಗಿ ಬ್ಎಅಹ್ಮಣರ ಸಂಸ್ಕಾರ ಸಂಪ್ರದಾಯದೊಳಗೆ ಬೆಳದ ಇವರು ಬ್ರಾಹ್ಮಣ ವರನನ್ನು ಅಪೇಕ್ಷಿಸಿದ್ದರಲ್ಲಿ ತಪ್ಪೇನಿದೆ.? 

ಇಂದಿಗೂ ಹೆಚ್ಚಿನ ವಿವಾಹಗಳು ಸಜಾತಿಯರಲ್ಲೇ ನಡೆಯುತ್ತಿದೆ ಹಾಗಿರುವಾಗ ಇವರು ಕೂಡ ಸಜಾತಿಯ ಸಂಗಾತಿಯನ್ನು ಅಪೇಕ್ಷಿಸಿದ್ದರಲ್ಲಿ ನನಗೆ ಯಾವ ತಪ್ಪೂ ಕಂಡಿಲ್ಲ.


ಈ ಎಲ್ಲದರ ನಡುವೆ  ಒಂದು ನಾವೆಲ್ಲ ಸಂತಸ ಪಡುವ ವಿಚಾರ ನಡೆದಿದೆ.ಅವರಿಷ್ಟ ಪಟ್ಟಂತಹ ವ್ಯಕ್ತಿ  ಸಿಕ್ಕಿದ್ದಾರೆ‌.ಈಗ ಅವರ ಬಾಳ ಸಂಗಾತಿಯಾಗಲು ಒಪ್ಪಿದ್ದಾರೆ.

ಎಪ್ಪತ್ತರ ಹರೆಯದಲ್ಲಿ ಇವರು ತಗೊಂಡ ದಿಟ್ಟನಿರ್ಧಾರಕ್ಕೆ ,ದಿಟ್ಟ ನಿಲುವಿಗೆ ನಾನು ಶರಣಾಗಿದ್ದೇನೆ.

ಈ ಬಗ್ಗೆ ನನ್ನ ತುಂಬು ಮೆಚ್ಚುಗೆಯನ್ನು ತಿಳಿಸಿದಾಗ ತಮ್ಮನ್ನು ಅವಹೇಳನ ಮಾಡಿದವರ ಬಗ್ಗೆ ತಿಳಿಸಿತಮ್ಮ ಬೇಸರವನ್ನು ಹೊರ ಹಾಕಿದರು

ಆಗ ನಾನು ಆನೆರಾಜಮಾರ್ಗದಲ್ಲಿ ಹೋಗುವಾಗ ನಾಯಿಗಳು ಬೊಗಳುತ್ತವೆ.ಹಿಂದಿನಿಂದ ಬೊಗಳುವುದುನಾಯಿಗಳ ಸ್ವಭಾವ.ಅನೆಗೆ ಅದು ಗೊತ್ತು‌ಹಾಗಾಗಿ ಅದು ತಿರುಗಿಯೂ ನೋಡುವುದಿಲ್ಲ.ಒಂದೊಮ್ಮೆ ಅದು ಒಮ್ಮೆ ಸೊಂಡಿಲು ಬೀಸಿದರೆ ನಾಯಿಗಳ ಎಲುಬೂ ಕಾಣಲು ಸಿಗಲಾರದು

ನೀವು ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬೇಡಿ.ನಿಮ್ಮನಿರ್ದಾರ ಸರಿಯಾಗಿದೆ.ಮುಂದುವರಿಯಿರಿ.ಮುಂದಿನ ದಿನಗಳು ಶುಭವನ್ನು ತರಲಿವೆ ಎಂದು ಶುಭಹಾರೈಸಿ ಪೋನಿಟ್ಟೆ.

ನಿಜಕ್ಕೂ ಮಹಾಲಕ್ಷ್ಮೀಯವರದು ಮಾದರಿ ನಡೆ.ಅವರ ನಿಲುವಿನ ಬಗ್ಗೆ ನನಗೆ ಅಪಾರ ಗೌರವ ಅಭಿಮಾನ ಮೂಡಿದೆ.

ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು‌

ಡಾ.ಲಕ್ಷ್ಮೀ ಜಿ‌ ಪ್ರಸಾದ್ 


(ಇವರ ಬಗ್ಗೆ ಒಂದಕ್ಷರ ಕೆಟ್ಟದಾಗಿ ಕಮೆಮಟ್ ಮಾಡಿದರೂ ಅವರು ನನಗೆ ಎಷ್ಟೇ ಸ್ನೆಹಿತರಾಗಿದ್ದರೂ ಬ್ಲಾಕ್ ಮಾಡಿ ಬಿಸಾಕುವೆ )

-

Saturday, 27 March 2021

 ವಿಶ್ವ ರಂಗಭೂಮಿ ದಿನಾಚರಣೆಯ ಶುಭಾಶಯಗಳು 


ನನ್ನ ಮೊದಲ ನಾಟಕ  ಸುಬ್ಬಿ ಇಂಗ್ಲಿಷ್ ಕಲ್ತದು.

ಇದು ಹವ್ಯಕ ಕನ್ನಡದ ಮೊದಲ ನಾಟಕಕಾರ್ತಿ ಎಂಬ ಐತಿಹಾಸಿಕ ಗರಿಮೆಯನ್ನು ಕೂಡ ನನಗೆ ತಂದು ಕೊಟ್ಟಿದೆ.

ತೀರ ಸಣ್ಣ ವಯಸ್ಸಿನಲ್ಲಿ( ಏಳನೆಯ ತರಗತಿಯಲ್ಲಿ  ರಚಿಸಿ ಎಂಟನೆಯ ತರಗತಿಯಲ್ಲಿ‌) ಅಭಿನಯಿಸಿ ಬಹುಮಾನ ಪಡೆದ ನಾಟಕವೊಂದು ಮಹಿಳೆ ರಚಿಸಿದ  ಹವ್ಯಕ ಕನ್ನಡದ ಮೊದಲ ನಾಟಕವಾಗಬಹುದೆಂಬ ಊಹೆಯನ್ನು ಕೂಡ ಮಾಡಲು ನನಗೆ  ಅಸಾಧ್ಯವಾಗಿತ್ತು .

ಗಡಿನಾಡಿನ ಕನ್ನಡತಿಯಾಗಿ ತುಸು ಹೆಚ್ಚೇ ಎನಿಸುವಷ್ಡು ಕನ್ನಡಾಭಿಮಾನದ ಜೊತೆಗೆ ಹುಡುಗಿಯರನ್ನು ಮುಂದೆ ಓದಿಸುವುದಿಲ್ಲವೆಂಬ ಆತಂಕದ ನಡುವೆ ಹುಟ್ಟಿದ ಹಾಸ್ಯಮಯ ನಾಟಕವದು.


ಮೂವತ್ತೇಳು  ವರ್ಷಗಳ ಹಿಂದೆ ನಾನು ಸಾಹಿತ್ಯ ಲೋಕಕ್ಕೆ ಪ್ರವೇಶ ಮಾಡಿದ್ದು ಸುಬ್ಬಿ ಇಂಗ್ಲಿಷ್ ಕಲ್ತದು ನಾಟಕದ ಮೂಲಕ .

ಅದು ವಾಣಿವಿಜಯ ಪ್ರೌಢಶಾಲೆಯಲ್ಲಿ ಯುವಜನೋತ್ಸದ ಸ್ಪರ್ಧೆಯಲ್ಲಿ ಮೊದಲ ಬಾರಿ ವೇದಿಕೆಗೆ ಬಂತು ಮತ್ತು ನಮಗೆ ಮೊದಲ ಬಹುಮಾನವನ್ನು ತಂದುಕೊಟ್ಟಿತು


ಎಂಬತ್ತರ ದಶಕದ ಆ ಕಾಲದಲ್ಲಿ ನಾಟಕ ಮಾಡಲು ಹುಡುಗಿಯರಿಗೆ ಅಷ್ಟೇನೂ ಪೂರಕವಾದ ವಾತಾವರಣ ಇರಲಿಲ್ಲ ನಾನು ನನ್ನ ನಾಟಕದಲ್ಲಿ ಅಭಿನಯಿಸಲು ಅನೇಕ ಹುಡುಗಿಯರಿಗೆ ದಮ್ಮಯ್ಯ ಹಾಕಬೇಕಾಗಿ ಬಂದಿತ್ತು ಸ್ಟೇಜ್ ಏರುದು ಹುಡುಗಿಯರಿಗೆ ಘನತೆಗೆ ಧಕ್ಕೆ ತರುವ ವಿಚಾರವಾಗಿತ್ತು.

ಹಾಗಾಗಿ ಸುಮಂಗಲ ಉಮಾ ,ವಿಜಯಾ ನಿಶಾ ಮೊದಲಾದ ಜಾಣ ಹುಡುಗಿಯರಾರೂ ಮುಂದೆ ನಾಟಕದಲ್ಲಿ ಭಾಗವಹಿಸಲು  ಮುಂದೆ ಬರಲಿಲ್ಲ 


ಅಂತೂ ಇಂತೂ ನನ್ನ ಹಾಗೆ ತುಸು ಗಂಡು ಬೀರಿಗಳಾಗಿದ್ದ ಶೋಭಾ ಹೇಮಾ ಮೊದಲಾದ   ಆರೇಳು ಹುಡುಗಿಯರನ್ನು ಮನವೊಲಿಸಿ ನಾಟಕ ಸ್ಪರ್ಧೆಗೆ ಹೆಸರು ಕೊಟ್ಟು ತಯಾರಾದೆವು 


ತಯಾರಾಗಲು ನಮಗೆ ಶಾಲೆಯ ಅವಧಿಯಲ್ಲಿ ಸಮಯ ಇಲ್ಲ.ತರಗತಿ ತಪ್ಪಿಸಿ ತಾಲೀಮು ನಡೆಸುವ ಕಲ್ಪನೆ ಕೂಡ ಇಲ್ಲದ ಕಾಲವದು..


ಸ್ಥಳವಾದರೂ ಇದೆಯೇ ? ಅದೂ ಇಲ್ಲ.ನಾಲ್ಕು ಗಂಟೆಗೆ ಶಾಲೆ ಮುಗಿಯುತ್ತಿತ್ತು.ನಂತರ ಎಲ್ಲ ತರಗತಿಗಳ ಬಾಗಿಲು ಮುಚ್ಚಿ ಬೀಗ ಹಾಕುತ್ತಿದ್ದರು.ನಂತರ ಶಾಲಾ ಅವರಣದಲ್ಲಿ ಇರುವಂತೆ ಇರಲಿಲ್ಲ.


ನಾನು ಹೇಗೋ ಈ ಸಹಪಾಠಿಗಳ‌ ಮನ ಒಲಿಸಿ ಶಾಲೆಯಿಂದ ನಮ್ಮ ಮನೆಗೆ ಹೋಗುವ ದಾರಿಯಲ್ಲಿದ್ದ ಬಯಲು ಪ್ರದೇಶದಲ್ಲಿ ತಾಲೀಮು ನಡೆಸುತ್ತಿದ್ದೆ.


ನಾಟಕ ಬರೆದದ್ದು ನಾನೇ ಆದಕಾರಣ ಎಲ್ಲ ಪಾತ್ರಗಳ ಸಂಭಾಷಣೆ ನನಗೆ ಬಾಯಿಗೆ ಬರುತ್ತಿತ್ತು.


ಎಲ್ಲರ ಸಂಭಾಷಣೆಯನ್ನು ಪ್ರತ್ಯ ಪ್ರತ್ಯೇಕವಾಗಿ ಬರೆದುಕೊಟ್ಟಿದ್ದೆ

ನಂತರ ಅದನ್ನು ಹೇಳುತ್ತಾ ಅಭಿನಯ ಮಾಡಿ ತೋರಿಸುತ್ತಿದ್ದೆ.

ಅದನ್ನವರು ಅನುಸರಿಸುತ್ತಿದ್ದರು.

ಈ ನಡುವೆ ಯಾರಾದರೂ ಜನರು ಅ ದಾರಿಯಲ್ಲಿ ಬಂದರೆ ಅವರು ಕಣ್ಣಿಗೆ ಕಾಣದಷ್ಟು ದೂರದವರೆಗೆ ಸುಮ್ಮನಿರುತ್ತಿದ್ದೆವು.


ಬಯಲೇ ನಮಗೆ ಅಭಿನಯ ಕಲಿಸುವ  ರಂಗ ಭೂಮಿಯಾಗಿತ್ತು.

ನಿರ್ದೇಶನ ಮಾಡುವವರು ಯಾರೂ ಇರಲಿಲ್ಲ.

ಹೋಗಲಿ..ನಾಟಕ ನೋಡಿ ಕೂಡಾ ನಮಗೆ ಗೊತ್ತಿರಲಿಲ್ಲ.

 ಆದರೆ ನಮಗೆಲ್ಲ ಯಕ್ಷಗಾನ ನೋಡಿ ಅಭಿನಯದ ಮೂಲ ಮಂತ್ರ ತಿಳಿದಿತ್ತು

ಶುದ್ಧ ಭಾಷೆಯ ಬಳಕೆ ತಿಳಿದಿತ್ತು.

ಈ ನಡುವೆ ಮನೆಗೆ ಸರಿಯಾದ ಸಮಯಕ್ಕೆ ಬಾರದೆ ಇದ್ದಾಗ ಮಗಳಂದಿರನ್ನು ಹುಡುಕಿಕೊಂಡು ಬಂದು ಶಾಲಾ ಅವರಣದಲ್ಲಿಯೂ ಕಾಣದೆ ಆತಂಕದಿಂದ ಬಂದವರಿಗೆ ಬಯಲಿನಲ್ಲಿ ನಮ್ಮನಾಟಕದ ಅಭ್ಯಾಸ ನೋಡಿ ಸಿಟ್ಟು ನೆತ್ತಿಗೇರಿ ಎರಡೆರಡು ಕೊಟ್ಟು ಹೆತ್ತವರು ಎಳಕೊಂಡು ಹೋಗಿದ್ದರು.ಅದೃಷ್ಟಕ್ಕೆ ಅವರವರ ಮಕ್ಕಳಿಗೆ ಮಾತ್ರ ಪೆಟ್ಟು ಬಿದ್ದಿತ್ತು.


ಅವರುಗಳಿಗೆ  ಎರಡೆರಡು ಬಿಟ್ಟು ಎಳೆದೊಯ್ಯುವಾಗ ಬಲಿ ಕೊಡಲು ತಗೊಂಡು ಹೋಗುವ ಕುರಿಯ ಮಾದರಿಯಲ್ಲಿ ಅವರು ಅಳುತ್ತಾ   ನಮ್ಮನ್ನು ದಯನೀಯವಾಗಿ ನೋಡುತ್ತಿದ್ದರು.

ಅವರು ನಮಗೂ ಎರಡೆರಡು ಕೊಟ್ಟರೆ ಎಂಬ ಭಯ ನಮಗೂ ಕಾಡುತ್ತಿತ್ತು.ಅಲ್ಲಿಂ ಓಡಿ ಬಿಡಬೇಕು ಅನಿಸ್ತಾ ಇತ್ತು‌.ಆದರೆ ಓಡಲೂ ಸಾಧ್ಯವಾಗದೆ ಕಾಲು ಥರಥರನೆ ನಡುಗುತ್ತಿತ್ತು.ಜೊತೆಗೆ ನನ್ನಿಂದಾಗಿ ಅನ್ಯಾಯವಾಗಿ ಅವರು ಪೆಟ್ಟು ತಿನ್ನಬೇಕಾಗಿ ಬಂತಲ್ಲ  ಎಂಬ ಅಪರಾಧಿ ಪ್ರಜ್ಞೆ ಬೇರೆ ನನ್ನನ್ನು ಕಾಡುತ್ತಿತ್ತು


ಹೀಗೆ ಎಳೆದೊಯ್ಯಲ್ಪಟ್ಟವರು ಮತ್ತೆ ನಾಟಕಾಭ್ಯಾಸಕ್ಕೆ ಬರ್ತಿರಲಿಲ್ಲ.ಸುಮಾರಾಗಿ ಸಂಭಾಷಣೆ ಬಾಯಿ ಪಾಠವಾಗಿ ಒಂದು ಹದಕ್ಕೆ ಬಂದ  ನಾಟಕದ ಅಭ್ಯಾಸಕ್ಕೆ ಮತ್ತೆ ಬೇರೆಹುಡುಗಿಯರನ್ನು ಹೇಗೋ ಪುಸಲಾಯಿಸಿ ಒಪ್ಪಿಸಬೇಕಿತ್ತು


ನನ್ನ ಮನೆ ತುಂಬಾ ದೂರದಲ್ಲಿರುವ  ಕಾರಣ ಹೆತ್ತವರು ಹುಡುಕಿಕೊಂಡು ಬಂದು ಎಳೆದೊಯ್ಯುವ ಸಾಹಸ ಮಾಡಿರಲಿಲ್ಲ

ಅಲ್ಲದೇ ಅಮ್ಮನಿಗೆ ನಮ್ಮ ನಾಟಕ ಅಭ್ಯಾಸವನ್ನು ಸಂಜೆ ಹೊತ್ತು ಮಾಡುವ ಬಗ್ಗೆ ನಾನು ತಿಳಿಸಿದ್ದೆ.

ಹಾಗಾಗಿ ನಾನು ಬಚಾವಾಗಿದ್ದೆ.


ನಾಟಕಕ್ಕೆ ಎರಡು ದಿನ ಇರುವಾಗ ಪ್ರಧಾನ ಪಾತ್ರ ಸುಬ್ಬಿಯನ್ನು ಮಾಡಲು ತಯಾರಾಗಿದ್ದ ಸಹಪಾಠಿ ಮನೆಯವರಿಗೆ ನಮ್ಮ ನಾಟಕದ ಸಂಗತಿ ಗೊತ್ತಾಗಿ ಅವಳಿಗೆ ಚೆನ್ನಾಗಿ ಎರಡು ಕೊಟ್ಟರು .ಹಾಗಾಗಿ ಮುಖ್ಯ ಪಾತ್ರ ಸುಬ್ಬಿಯ ಪಾತ್ರಕ್ಕೆ ಈಗ ಬೇರೆ ಹುಡುಗಿಯನ್ನು ಹುಡುಕಬೇಕಿತ್ತು. ಅದೃಷ್ಟವಶಾತ್ ಸ್ನೇಹಿತರ ಪಾತ್ರ ಮಾಡುತ್ತಿದ್ದ ಹೇಮಾಳಿಗೆ ಸುಬ್ಬಿಯ ಸಂಭಾಷಣೆ ಬಾಯಿ ಪಾಠ ಬರುತ್ತಿತ್ತು ಹಾಗಾಗಿ ಸ್ನೇಹಿತನ ಪಾತ್ರಕ್ಕೆ ಮಾಡಲು ಇನ್ನೊಬ್ಬ ಹುಡುಗಿ ತ್ರಿವೇಣಿ  ( ನನಗಿಂತ ಚಿಕ್ಕವಳು  ಬಹುಷ ಆರನೇ ತರಗತಿ ಇದ್ದಿರ ಬೇಕು ನಾನು ಎಂಟನೇ ತರಗತಿಯಲ್ಲಿದ್ದೆ,ಈಗ  ನಮ್ಮೂರಿನ ಸುಂಕದ ಕಟ್ಟೆ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಾ  ಶಿಕ್ಷಕಿಯಾಗಿದ್ದಾರೆ ) ಸಿದ್ದಳಾದಳು 

ಅಂತೂ ಸ್ಪರ್ಧೆ ಯ ದಿನ ಬಂತು ನಾಟಕ ಆರಂಭವಾಯಿತು ಒಂದು ದೃಶ್ಯದಲ್ಲಿ ಸುಬ್ಬನ ಸ್ನೇಹಿತರು ಬರ್ತಾರೆ ಆಗ ಸುಬ್ಬ ಸ್ನೇಹಿತರನ್ನು welcome my friends please be seated ಅಂತ ಕುರ್ಚಿ ತೋರಿಸುತ್ತಾನೆ. ಅಲ್ಲಿ ಒಂದೇ ಕುರ್ಚಿ ಇತ್ತು ಎರಡು ಕುರ್ಚಿ ಇಡಲು ನನಗೆ ಮರೆತು ಹೋಗಿತ್ತು. ಇಬ್ಬರು ಸ್ನೇಹಿತರು ಕೂಡ ಒಂದೇ ಕುರ್ಚಿಯಲ್ಲಿ ಕುಳಿತರು.ನಂತರ ಎದ್ದು ಮಾತನಾಡುವ ಸನ್ನಿವೇಶ ಇಬ್ಬರೂ ಒಂದೇ ಕುರ್ಚಿಯಲ್ಲಿ ಕುಳಿತು ಟೈಟ್ ಆಗಿ ಇವರಿಗೆ ಏಳಲಾಗುತ್ತಿಲ್ಲ ಸಭೆಯಲ್ಲಿ ನಗು ಈ ಸ್ನೇಹಿತ ಪಾತ್ರಧಾರಿಗಳು ನಗಾಡುತ್ತಿವೆ ನಾನೋ ಏನು ಮಾಡಬೇಕೆಂದು ತಿಳಿಯದೆ  ಕಂಗಾಲು! ತಕ್ಷಣವೇ ಎಚ್ಚತ್ತುಕೊಂಡು ಕುರ್ಚಿ ಹಿಂಭಾಗದಿಂದ ಅದನ್ನು ಗಟ್ಟಿಯಾಗಿ ಹಿಡಿದು ಒಬ್ಬಳ ಬೆನ್ನಿಗೆ ಕುಟ್ಟಿದೆ .ಈ ಗೊಂದಲದ ನಡುವೆಯೂ ಅವಳು ಉರು ಹೊಡೆದ ಸಂಭಾಷಣೆ ಯನ್ನು ಚಾಚೂ ತಪ್ಪದೆ ಹೇಳಿದ್ದಳು ಅದೂ ಅವರು ವಿದೇಶದಿಂದ ಬಂದ ಸ್ನೇಹಿತರಾಗಿದ್ದು ಸಂಭಾಷಣೆ ಇಂಗ್ಲಿಷ್ ನಲ್ಲಿ ಮಾತನಾಡಬೇಕಿತ್ತು.ಆದರೂ ಚಾಚೂ ತಪ್ಪದೆ ಒಂದಿನಿತು ತಪ್ಪಿಲ್ಲದೆ ಅಭಿನಯಿಸಿದ್ದರು.


 ನಾಟಕ ಮುಂದುವರಿಯಿತು. ಮುಗಿದಾಗ ಕೇಳಿಸಿದ ಅಬ್ಬರದ ಚಪ್ಪಾಳೆ ಸದ್ದು ಇನ್ನೂ ನನ್ನ ಕಿವಿಯಲ್ಲಿ ಅನುರಣಿಸುತ್ತಿದೆ.

ಆ ದಿನ ಕೊನೆಗೆ ಸಮಾರೋಪ ಸಮಾರಂಭಕ್ಕೆ ಅತಿಥಿಗಳಾಗಿ ವಾಣೀ ವಿಜಯ ಪ್ರೌಢ ಶಾಲೆಯನಿವೃತ್ತ ಸಿಕ್ಷಕರಾದ ಕವಿ ವಿಶ್ವೇಶ್ವರ ಭಟ್ ಬಂದಿದ್ದರು.ಬಾಷಣ ಮಾಡುತ್ತಾ ನಮ್ಮ ನಾಟಕದ ಬಗ್ಗೆ ಮೆಚ್ಚುಗೆಯನ್ನು ಸೂಸಿ ಸುಬ್ಬನ ಪಾತ್ರ ಮಾಡಿದ ಹುಡುಗಿಗೆ ಬಹಳ ಒಳ್ಳೆಯ ಭವಿಷ್ಯವಿದೆ ಎಂದು ತಮ್ಮ ದೀರ್ಘ ಅನುಭವದ ಹಿನ್ನೆಲೆಯಲ್ಲಿ ಭವಿಷ್ಯ ನುಡಿದಿದ್ದರು.


‌ಕೂಸು ಎಂತ ಓದಿದರೆಂತ ಒಲೆ ಬೂದಿ ಒಕ್ಕುದು ತಪ್ಪ ( ಹುಡುಗಿ ಏನು ಓದಿದರೇನು ? ಒಲೆಯ ಬೂದಿ ಗೋರುವುದು ತಪ್ಪದು) ಎಂಬ ಗಾದೆ ಮಾತೇ ಪ್ರಚಲಿತವಾಗಿದ್ದ ಕಾಲದ ನಾನು ಹಿರಿಯ ಶಿಕ್ಷಕರಾದ ವಿಶ್ವೇಶ್ವರ ಭಟ್ಟರ ಮಾತನ್ನು ನಂಬಿದೆ.ಹೌದು..ಸುಬ್ಬನಪಾತ್ರ ಮಾಡಿದ ನನಗೆ ಒಳ್ಳೆಯಭವಿಷ್ಯವಿದೆ." ಎಂದು ನಂಬಿದೆ.ಹೆಣ್ಣಾಗಿ ಹುಟ್ಟಿದ ನಾನು ಒಲೆ ಬೂದಿ ಗೋರುವುದಕ್ಕೆ ಮಾತ್ರ ಮೀಸಲಾಗಲಾರೆ ಎಂದು ನಿರ್ಧರಿಸಿದೆ.

‌ಅವರು ನುಡಿದಂತೆ ಬಹಳ ದೊಡ್ಡ ಭವಿಷ್ಯವೇನೂ  ನನ್ನ ಪಾಲಿಗೆ  ಸಿಗಲಿಲ್ಲ.ಆದರೂ ನಾನು ನನ್ನದೇ ಆದ ಗುರುತನ್ನು ಹೊಂದಿರುವೆ ಎಂಬ ಆತ್ಮ ತೃಪ್ತಿ ನನಗಿದೆ.

ಅದಕ್ಕೆ ‌ಮೊದಲು ನಾನು ಮೀಯಪದವು ವಿದ್ಯಾವರ್ಧಕ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ದಲ್ಲಿ ಯಮ ಗರ್ವ ಭಂಗ ನಾಟಕದ ಬಲರಾಮನಾಗಿ ಅಭಿನಯಿಸಿದ್ದೆ ಆದರೆ ಅದು ಗುರುಗಳ ನಿರ್ದೇಶನದಂತೆ ಅಭಿನಯಿಸಿದ ನಾಟಕ 

ಅದರ ನಂತರದ ವರ್ಷ ವಾಣಿವಿಜಯ ಶಾಲೆಯಲ್ಲಿ ಮಾಡಿದ್ದು ನನ್ನ ಸ್ವಂತ ರಚನೆಯ ನಾಟಕ ಅಭಿನಯ ನಿರ್ದೇಶನ ರಂಗ ಸಜ್ಜಿಕೆ ? ಎಲ್ಲವೂ ನನ್ನದೇ .ಈ ನಾಟಕ ಅನೇಕ ರಂಗ ಪ್ರದರ್ಶನ ಕಂಡಿದ್ದು ನಾನೂ ಮೂರು ನಾಲ್ಕು ಬಾರಿ ಅಭಿನಯಿಸಿರುವೆ ಆದರೆ ಮೊದಲನೆಯ ಅನುಭವ ಮಾತ್ರ ಚಿರಸ್ಥಾಯಿ ಅಲ್ಲವೇ ?

Tuesday, 23 March 2021

ಹಾವಿನ ಬಾಯಿಗೆ ಬಡುದು ಹದ್ದಿಗೆ ಹಾಕುದೆಂತಕ?.

 ಹಾವಿನ ಬಾಯಿಗೆವಬಡುದು ಹದ್ದಿಂಗೆ ಹಾಕುದೆಂತಕ? 


ಹೆರಿಯೋರು ಒಟ್ಟಿಂಗೆ ಇದ್ದದೆ ಇಂತ ಗಾದೆ ಮಾತುಗಳ ಸುರಿಮಳೆ ಸುರಿತಾ ಇರ್ರು.ಹೆರ್ಕಿ ತುಂಬಿಸಿ ಮಡುಗುದು ನಮ್ಮ‌ಜವಾಬ್ದಾರಿ‌ ಅಷ್ಟೇ


ಅಮ್ಮನತ್ತರೆ ಏನೋ‌ಮಾತಾಡುವಾಗ‌ ಎಂಗಳ ಊರಿನ ಆಸ್ರಿಯ ವಿಚಾರ ಬಂತು

ಆಲ್ಲ ಮಾವನೋರಿಂಗೂ ಅವರ ಅಷ್ಷಂಗೂ ಯಾವುದೋ ಞಾಯ ಆಗಿ ಕೋರ್ಟಿಂಗೆ ಹೋ್ಇತ್ತಿದಬು.ಇದೆಲ್ಲ ಎಂಗಳ‌ಗಳ‌ಮದುವೆ ಹಿಂದಣವಿಚಾರ‌ 

ಎಲ್ಲೊರೂ ಅವರ ಕುಟುಂಬಂದ ಹೆರ ಬಹಿಷ್ಕಾರ ಹಾಕಿತ್ತಿದವು.ಅಬದರ ಕ್ಯಾರೇ ಮಾಡದ್ದೆ ಮುಂದುವರುದ್ದವು.ಅವರಲ್ಲಿ ಒಬ್ಬ ಜಡ್ಜ್ ,ಲೆಕ್ಚರ್ ಎಲ್ಲ ಆಗಿರೆಕ್ಕು.ಈಗ ರಿಟೈರ್ ಆದಿಪ್ಪಲೂ ಸಾಕು

ಆ ಸಮಯದಲ್ಲಿ‌ಮಾವನೋರ ಹೆಸರಿಲಿ ಆಸ್ತಿ ಇಪ್ಪಲಾಗ ಹೇಳಿ ಪಾಲು ಮಾಡಿದ್ದವು.ಅದರಲ್ಲಿ ಹೆಚ್ಚಿನ ಬೆಳೆ ಬೆಳವ ಭೂಮಿ‌ಬೋರ್ವೆಲ್ ಇಪ್ಪ ಜಾಗೆ ಪ್ರಸಾದ್ ಹೆಸರಿಲಿ ಇದ್ದು.

ಅವರ  ರೀತಿ ಎಂಗಳುದೆ ಮನೆಂದೆ ಹರವೇ ಇದ್ದೆಯ..ಬಹುಷ್ಕಾರ ಹೇಳಿ ಆಯಿದಿಲ್ಲೆ.ಆದರೆ ಎಂಗ ಹಪದು ಬಪ್ಪದರ ಎಂದೋ ನಿಲ್ಸಿದ್ದೆಯ.ಗೌರವ ಪ್ರೊತಿ‌ಮನ್ನಣೆ  ಇಲ್ಲದ್ದಲ್ಲಿಹೋಯಕ್ಕಾಗದ ಅವಶ್ಯಕತೆ ಎಂಗೊಗೆ ಎಂದಿಂಗೂ ಬಯಿಂದಿಲ್ಲೆ.

ಅಮ್ಮ ಬೆಂಗಳೂರು ಬಯಿಂದ


ಅಮ್ಮ ಒಂದು ಬಂತಕ್ಕೆ ಸಿರಿವಂತಿಕೆ ಪಡದಪ್ಪದ ಅಜ್ಜನ ಮನೆಯ ಆಸ್ತಿಯ ಪೂರ್ತಿ ದೊಡ್ಡಮ್ಮನ ಮಗಂಗೆ ಬಿಟ್ಟುಕೊಟ್ಟ.

ಎಂಗಳಲಿ‌ಎಂತಾತೂ ಹೇಳಿರೆ ಮನೆ ಮಕ್ಕದ ಹದಿನೈದು ಇಪ್ಪತ್ತು ಎಕರೆ ಜಾಗ ಖರೀದಿಸಿಸವು.ಅಣ್ಣಂದ ದೊಡ್ಡ ತಮ್ಮಂದೆ ಅಮೇರಿಕಕ್ಕೆ ಹೋಗಿ ಕೈ ತುಂಬ ದುಡುದು ದಮಸ್ವಂತ ಮನೆ ಮಾಡಿ ಸೆಟಲ್ಆದವು.ಅಕ್ಕನ‌ಮಗಸೊಸೆ ಮಗಳು ಅಳಿಯಂದೆ‌ಅಮೇರಿಕಲ್ಲಿ‌‌ಒಳ್ಳೆ ಕೆಲಸ ಹಿಡುದವು.ಅಕ್ಕನ ಮಗ ವಿಜ್ಞಾನಿ ಆದ.

ಎನಗೆ ಸರ್ಕಾರಿ ಕೆಲಸ ಸಿಕ್ಕಿತ್ತು.ಪ್ರಸಾದರಿಂಗೂ ಒಳ್ಳೆಯ ಕೆಲಸ


ಅಮ್ಮನ ಅಪ್ಪ ಅಜ್ಜಂಗೆ ಎನ್ನ ಅಮ್ಮಂಗೆ ದೊಸ್ಡಮ್ಮಂದೆ ಎರಡೇ ಮಕ್ಕ.ದೊಡ್ಡಮ್ಮನ ಕುಟುಂಬ ಅಜದಜನ ಒಟ್ಟಿಂಗೆ ಇತ್ತು


ಅಜ್ಜಿ ರೀರಿ ಹೋಪದ್ದದ್ದೆ ಆಸ್ತಿ ವಿವಾದ ಬಂತು

.ಅಂಬಗ ಎಂಗೊಗೆ ಬಡತನ ಎಂಗ ಐದು ಮಕ್ಕಳ ಓದುಸುಲೆ ಮದುವೆ ಮಾಡುವೆ ..ಆಸ್ತಿಯ/ ಪೈಸೆಯ ಅಗತ್ತ ಇತ್ತು

ಹಾಂಗಾಗಿ ಅರ್ಧ ಪಾಲಿಂಗಾಗಿ ಅಮ್ಮ ಕೋರ್ಟಿಗೆ ಹೋದ

ಕೋರ್ಟ್ ಕಛೇರಿ ಹೇಳಿರೆ ಗೊಂತಿದ್ದಲ್ಲ..

ಸುಮಾರು ವರ್ಷ ಮುಂದೆ ಹೋತು.ಕೊನೆಗೂ ಅಮ್ಮನ ಪರ ತೀರ್ಪು ಬಂತು.ಆ ಕಾಲಕ್ಕಪ್ಪಗ ಎಂಗ ಎಲ್ಲ ಸೆಟಲ್ ಆಯಿದೆಯ.ಇಪ್ಪ ಆಸ್ತಿಯನ್ನೇ ನೋಡಿಕೊಂಬದು ಕಷ್ಟ ಹೇಳುವ ಪರಿಸ್ಥಿತಿ‌ ಮುಟ್ಟಿತ್ತು

ದೊಡ್ಡಮ್ಮನ ಮಗಾಣ್ಣ ಅದೇ ಭೂಮಿಲಿಯೇ ಇತ್ತಿದೆ

ಹಾಂಗೆ ಅಮ್ಮಾಸ್ತಿಯ ದಾನಪತ್ರ ಮಾಡಿ ಅಕ್ಕನ/ ದೊಡ್ಡಮ್ಮನ  ಮಗಂಗೆ ಬಿಟ್ಟುಕೊಟ್ಟ.


ಇದೇ ಸಂದಿಗ್ದ ಎಂಗೊಗೂ ಈಗ ಬಯಿಂದು

ಎಂಗ ಒಳ್ಳೆಯ ಕೆಲಸ ಹಿಡುದು ಮನೆ ಕಟ್ಟಿ ಸಣ್ಣದೊಂದು  ಕಮರ್ಷಿಯಲ್ ಕಾಂಫ್ಲೆಕ್ಸ್ ದೆ ಕಟ್ಟಿಕೊಂಡೆಯ

ಇನ್ನು ಎಂಗೊಗೂ ಊರಿನ ಆಸ್ತಿ ಬೇಡ.

ಈಗ ಕಾಲ ಬದಲಾಯಿದು.ಹೊಟ್ಟೆಕಿಚ್ಚಿಂದ ಗಾಳಿ ಹಾಕುತ್ತಿದ್ದ  ದೊಡ್ಡ ಮಾವನವರ ಮಕ್ಕ ಬಾವಂದಿರು  ದೊಡ್ಡ ಮಾವನವರ ಮಗ ಮೈದುನ ಎಲ್ಲ ಅಕಾಲಿಕ‌ಮರಣಕ್ಕೆ ಈಡಾಯಿದವು.

ತುಂಅ ಚಾಡಿ ದುರ್ಬೋಧನೆ ಮಾಡಿ ಮಾಡಿ‌ಮನೆ ಕೆಡಿಸ್ತಿದ್ದ ಸೋದರ ಅತ್ತೊಗೆಯ ಮಗಂಗೆ ಅಳಯಂದೆ ಅಕಾಲಿಕವಾಗಿ ತೀರಿ ಹೋಗಿ ನೊಂದಿದವು


ಹಾಂಗಾಗಿ ಮನೆಂದಿಗೆ ಕೇಡು ಬುದ್ದಿ ಹೇಳಿಕೊಸುವವರು ಇಲ್ಲೆ.

ಈಗ ಎಂಗ ಆಸ್ತಿಯ ಅಧಿಕೃತವಾಗಿ ರಿಕಿಸ್ಟರ್ ಮಾಡಿ ದಾನಪತ್ರದ ಮೂಲಕ‌ ಬಿಟ್ಟುಕೊಡಕ್ಕು.ಇಲ್ಲವೇ ಹತ್ತರಣ ಬ್ಯಾರಿಗ ಈ ಹಿಂದೆ ಎಂಗಳತ್ರೆ ಆ ಹ

ಜಾಗ ಕೇಳಿದ್ದು ಅವು ಕೊಟ್ಟ ಪುಡಿಕಾಸಿಂಗೆ ಮಾರಕ್ಮು.

ಈ ವಿಷಯದ ಮಾತು ಬಪ್ಪಗ ಅಮ್ಮ ಹಾವಿಂಗೆ ಬಡುದು ಹದ್ದಿಗೆ ಹಾಕುದೆಂದಕೆ ಹೇಳಿದ.

ಇವನ ಕೈಯಿಂದ ಎಳದು ಆರಿಂಗೋ ತಿನ್ಸುವ  ಎಂಗ ಇದ್ದು.ಅಪ್ಪನ ವಾರಿಸುದಾರ ಅವ..ದುಡ್ಡದ್ದಂದೆ ಆ ಭೂಮಿಲಿ


ಈ ಹಿಂದೆ ಏನೇ ಅನ್ಯಾಯ ಮಾಡಿರಲಿ..ಅದರ ಅವಕ್ಕೇ ಬಿಟ್ಟುಕೊಡಿ ಅತ್ಲಗಿ ಎಂದ

ಎನಗೂ ಸರಿ ಎನಿಸಿ ಮೈದುನನ ಮಗಳಿಂಗೆ ಫೋನ್ ಮಾಡಿ‌ ಎಲ್ಲ ವ್ವಯಸ್ಥೆ ಮಾಡ್ಸು ಬಂದು ಸಹಿ ಮಾಡ್ತೆಯೆ ಹೇಳಿದೆ


ಅದಿರಲಿ‌ಮತ್ತೆ ಗಾದೆಗೆ ಬಪ್ಪ.ಹಾವಿನ ಬಡುದು ಹದ್ದಿಂಗೆ ಹಾಕುದೆಂದತಕೆ ಹೇಳಿರೆ ಹಾವು ತಿಂಬಲಾಗಿ ಕೆಪ್ಪೆಯನ್ನೋ ಇನ್ನೆನನ್ನೋ ಬೇಟಯಾಡಿ ಹಿಡುದಿರುತ್ತು.ಹಾವಿಂಗೆ ಬಡುದು ಅದರ ಬಿಡಿಸಿ ಅಪ್ಪಗ ಅಲ್ಲಿ ಕಾದುಕೂದುಕೊಂಡು ಇದ್ದ ಹದ್ದು ಅದರ ತೆಕ್ಕೊಂಡು ಹೋವುತ್ತು 

ಹಾವಿನ ಆಹಾರವ ಅದರ ಬಾಯಿಂ ಎಳದು ತೆಗೆದು ಹದ್ದಿಗೆ ಸಿಕ್ಕುವಾಂಗೆ ಮಾಡುದೆಂತಕರ? ಕಷ್ಟಪಟ್ಟು ಹೊಂಚುಹಾಕಿ ಬೇಟೆ ಮಾಡಿ ಹಿಡುದು ಹಾವೇ ತಿನ್ಲಿ


ಭೂಮಿಉ ವಿಚಾರಕ್ಕೆ ಬಂದರೆ ಕಷ್ಟ ಪಟ್ಟು ದುಡುದೋರೇ ತಿನ್ನಲಿ.ಆರೋ ಒಪ್ಪ ಕಮ್ಮಿಗೆ ಹೊಡದು ಲಾಭಮಾಡುವಾಂಗೆ ಮಾಡುದೆಂಥಕೆ ಅಲ್ಲಾದಾ


ಬಹಳ ಒಳ್ಳೆಯ ಸಂದೇಶವ ಈ ಗಾದೆ ಕೊಡ್ತು

ನಿಂಗಳ ಕಡೆಲಿದೆ ಇದು ಬಳಕೆಲಿ ಇದ್ದಾ ತಿಳುಸಿ ಆತಾ?

ಡಾ.ಲಕ್ಷ್ಮೀ‌ ಜಿ‌ ಪ್ರಸಾದ್ 


Sunday, 21 March 2021

ಬದುಕ ಬಂಡಿಯಲಿ‌‌- ಇವರಿಗೆಲ್ಲ ಏನು ಸಿಗುತ್ತದೆ?- ಡಾ.ಲಕ್ಷ್ಮೀ ಜಿ ಪ್ರಸಾದ್

 ಇವರಿಗೆಲ್ಲ ಏನು ಸಿಗುತ್ತದೆ ?


ಕೆಲ ಸಮಯದ ಮೊದಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಏರ್ಪಡಿಸಿದ್ದ ರಾಜ್ಯ ಮಟ್ಟದ ನಾಟಕ ಸ್ಪರ್ಧೆಗೆ ತೀರ್ಪುಗಾರಳಾಗಿ ಯವನಿಕೆಗೆ ಹೋಗಿದ್ದೆ..ಅಲ್ಲಿ ಯುವ ರಂಗ ಕರ್ಮಿ ..ಮತ್ತು ಹಿರಿಯ ನಾಟಕ ನಿರ್ದೇಶಕರಾದ ..

 ಇನ್ನಿಬ್ಬರು ತೀರ್ಪುಗಾರರಾಗಿ ಆಗಮಿಸಿದ್ದರು

( ಇವರಿಬ್ಬರ ಹೆಸರನ್ನು ಉದ್ದೇಶ ಪೂರ್ವಕವಾಗಿ ಅಡಗಿಸಿಟ್ಟಿರುವೆ.ಇನ್ನು ನಾಟಕ ರಂಗಮಂದಿರಗಳ ಒಳಗನ್ನು ಹೇಳಿದ್ದಾರೆಂದು ಇವರಿಗೆ ಮುಂದೆ ಅವಕಾಶವನ್ನೇ ಕೊಡದೆ ಸತಾಯಿಸಿದರೆ ಕಷ್ಟ)


ಫ್ರೀ ಸಿಕ್ಕ ಸಮಯದಲ್ಲಿ ನಾಟಕ ಮನೆಯ ಒಳಗು ಹೊರಗಿನ ಬಗ್ಗೆ ಮಾತನಾಡಿದೆವು.ರಂಗ ಶಂಕರ ಮತ್ತಿತರ ಕಡೆ ನಾಟಕ ಪ್ರದರ್ಶನಕ್ಕೆ ಮೊದಲೇ ಅರ್ಜಿ ಸಲ್ಲಿಸಬೇಕು.ಅಲ್ಲಿ ಮಾರಾಟವಾಗುವ ಟಿಕೇಟ್ ಗಳ‌25%  ಆಯಾಯ ರಂಗಮಂದಿರಗಳಿಗೆ ಹೋಗುತ್ತದೆ.ಅದಲ್ಲದೆ ಒಂದಷ್ಡು ಉಚಿತ ಟಿಕೇಟ್ ಗಳನ್ನು ಕೊಡಬೇಕಾಗುತ್ತದೆ.


ನೆರಳು ಬೆಳಕು ಇನ್ನಿತರ ವ್ಯವಸ್ಥೆಯನ್ನು ಇವರುಗಳೇ ಮಾಡಿಕೊಳ್ಳಬೇಕು.

ಇಲ್ಲಿನ ಅವ್ಯವವಸ್ಥೆ ಬಗ್ಗೆ ಕಮಕ್ ಕಿಮಕ್ ಎನ್ನದೇ ಮೌನವಾಗಿರಬೇಕು.ಒಂದಿನಿತೇನಾದರೂ ಅಸಮಧಾನ ಸೂಚಿಸಿದರೆ ಮುಗಿಯಿತು.ಮುಂದೆ ಇವರ ತಂಡಕ್ಕೆ ಅವಕಾಶವೇ ಕೊಡುವುದಿಲ್ವಂತೆ.

ಇವೆಲ್ಲದರ ನಡುವೆ ತುಂಬ ಜನ ಬಂದರೆ ಅಡ್ಡಿ ಇಲ್ಲ.


ಕಲಾವಿದರನ್ನು ಒಟ್ಟು ಹಾಕಿ ಅಭ್ಯಾಸ ಮಾಡಿಸುದು ಒಂದು ಸಾಹಸವೇ ಸರಿ.

ದಾಕ್ಷಾಯಿಣಿ ಭಟ್ ಅವರು ಪ್ರತಿಜ್ಞಾ ಯೌಗಂಧರಾಯಣ ನಾಟಕದ ಅಭ್ಯಾಸ ಮಾಡಿಸುವುದನ್ನು‌ ನಾನು ನೋಡಿದ್ದೆ.ಯಾವುದೋ ಪಾರ್ಕಿನ ಬದಿಯಲ್ಕಿ ಸೊಳ್ಳೆಗಳ ಕಾಟದ ನಡುವೆ  ಒಂದಷ್ಟು ಕಲಾಸಕ್ತರನ್ನು ಸೇರಿಸಿ ಅಭ್ಯಾಸ ಮಾಡಿಸುತ್ತಿದ್ದರು.

ಇಷ್ಟೆಲ್ಲಾ ಕಷ್ಟದಿಂದ ತಾಲೀಮು ನಡೆಸಿ ಹಿಂದಿನ ದಿನ ಕೈಕೊಡುವ ಕಲಾವಿದರೂ ಇರುತ್ತಾರಂತೆ.ಅಥವಾ ಹಿಂದಿನ ದಿನ ದುಡ್ಡಿನ ಬೇಡಿಕೆ ಇಡುವವರೂ ಇರ್ತಾರಂತೆ.


ಅದು ಸರಿ ಇಷ್ಟೆಲ್ಲ ಕಷ್ಟ ಪಡುವ ನಿಮಗೆ ಸ್ವಲ್ಪವಾದರೂ ಲಾಭ ಬರುತ್ತದಾ? ಎಂದು ಕೇಳಿದೆ ನಾನು.ಆಗ ಅವರಿಬ್ಬರು ಮುಖ ಮುಖ ನೋಡಿಕೊಂಡರು.ಒಂದು ವಿಷಾದದ ನಗು ಅವರ ಮುಖದಲ್ಲಿ ಸಣ್ಣಕೆ ಕಾಣಿಸಿಕೊಂಡಿತು


ಎಂತ ? ಯಾಕೆ ನಗು ? ನಾನೇನಾದರೂ ತಪ್ಪು ಕೇಳಿದೆನಾ? ಸುಮ್ಮನೆ ಕುತೂಹಲಕ್ಕಾಗಿ ಕೇಳಿದೆ ಸಷ್ಟೇ ಎಂದೆ..


'ನೀವು ಕೇಳಿದ್ದರಲ್ಲಿ‌ . ತಪ್ಪೇನೂ‌ ಇಲ್ಲ ಮೇಡಂ.ನಮಗೆ ಲಾಭ ಬರುದು ಬಿಡಿ.ಖರ್ಚಾದ ದುಡ್ಡು ಬಂದರೆ ಅದೇ ನಮ್ಮ‌ಪುಣ್ಯ ಎಂದು ಒಟ್ಟಿಗೇ ಇಬ್ಬರೂ ಹೇಳಿದರು.


ಮತ್ತೆ ಕೈಯಿಂದ ದುಡ್ಡು ಹಾಕಿ ನೀವ್ಯಾಕೆ ನಾಟಕ ಮಾಡಿಸ್ರೀರಿ ಎಂದು ನಾನು ಕೇಳಿದೆ.ಅಷ್ಟರಲ್ಲಿ ನಮ್ಮನ್ನು ಆಯೋಜಕರು ಕರೆದರು.ಮಾತು ಬೇರೆ ದಿಕ್ಕಿಗೆ ಸಾಗಿತು.

ಒಂದೊಮ್ಮೆ ಮಾತು ಅದೇ ದಿಕ್ಕಿನಲ್ಲಿ ಇದ್ದರೂ ಅವರಿಗೆ ಹೇಳಲು ಉತ್ತರ ಇರಲಿಲ್ಲ

ಆದರೆ ನನಗದರ ಉತ್ತರ ಗೊತ್ತಾಗಿದೆ.ಅದುವೇ ತೀರದ ಸೆಳೆತ.ಇವರೆಲ್ಲ‌ ನಷ್ಟ ಮಾಡಿಕೊಂಡಾದರೂ ಒಳ್ಳೊಳ್ಳೆಯ ನಾಟಕ ಪ್ರದರ್ಶನಗಳನ್ನು‌ ಮಾಡುತ್ತಾರೆ.


ಆ ದಿನ ಮನೆಗೆ ಬಂದು ಪ್ರಸಾದ್ ಹತ್ರ  ಇವರೆಲ್ಲ ಕೈಯಿಂದ ದುಡ್ಡು ಹಾಕಿ ನಾಟಕ ಪ್ರದರ್ಶನ ಮಾಡಿಸುವ ವಿಚಾರವನ್ನು ನಾನು ಹೇಳಿದೆ.ಕೈಯಿಂದ ದುಡ್ಡು ಹಾಕಿ ಕಷ್ಟ ಪಡುದು ಯಾಕೆ ? ಕಲೆ ಸಂಸ್ಕೃತಿಯ ಉಳಿಕೆಯ ಜವಾಬ್ದಾರಿ ಇವರದು ಮಾತ್ರವಾ ? ಸರಕಾರಕ್ಕೆ ಯಾವುದೂ ಇಲ್ಲವೇ ? ಎಂದು ವಿಷಾದದಿಂದ ಹೇಳಿದೆ


ಅರವಿಂದ್ ಸುಮ್ಮನೇ ಮೊಬೈಲ್ ಗುರುಟಿಕೊಂಡು ಇದ್ದ.ನನ್ನೆಡೆಗೆ ನೋಡಿ ನಕ್ಕು ಮತ್ತೆ ನೀನೆಂತಕೆ ಹಗಲು ರಾತ್ರೆ ಊಟ ತಿಂಡಿ ಬಿಟ್ಟುಊರೂರು ಅಲೆದು  ಕೈಯಿಂದ ಖರ್ಚು ಮಾಡಿ ,ಕಲಾವಿದರಿಗೆ ಸಂಭಾವನೆ ಕೊಟ್ಡು ಭೂತಕೋಲ‌ ಪಾಡ್ದನ ಜನಪದ ಹಾಡುಗಳನ್ನು ರೆಕಾರ್ಡ್ಮಾಡಿದ್ದು.? ಅದನ್ನು ಸಾವಿರ ಸಲ ಕೇಳಿ ಬರೆದದ್ದು( ಲಿಪ್ಯಂತರ ಮಾಡಿದ್ದು) ಅನುವಾದಿಸಿ ಸ್ವತಃ ಪ್ರಕಟಿಸಿದ್ದು.ನಿನಗೆ ಹಾಕುದ ದುಡ್ಡು ಬಂದಿದೆಯಾ ? ಎಂದ.


ಹ್ಹೂ..ಅದೂ ಹೌದು..ಇದೂ ಒಂದು ಸೆಳೆತ..ತೀರದ ದಾಹ..ಯಾರೋ ಓದಿ  ಮೆಚ್ಚುತ್ತಾರೆಂದು ಮಾಡುದಲ್ಲ.ನನಗಾಗಿಯೇ ಮಾಡಿದ್ದು.ಹಾಗಾಗಿ ಯುನಿವರ್ಸಿಟಿಯಾಗಲೀ ಅಕಾಡೆಮಿಗಳಾಗಲೀ ಸಹಾಯ ಮಾಡಿಲ್ಲ ಎಂದು ಹೇಳುವಂತೆ ಇಲ್ಲ.ಅವರ್ಯಾರೂ ಕಷ್ಟ ಪಟ್ಟು ಇದನ್ನು ಮಾಡು ಎಂದಿಲ್ಲ..


ನಾನಾಗಿಯೇ ಇಷ್ಟ ಪಟ್ಟು ಮಾಡಿದ್ದು.ಅದರ  ನೋವು ನಲಿವು ಕಷ್ಟ ನಷ್ಟ ಎಲ್ಲವೂ ನನ್ನದೇ..ಕೃತಿ ಚೋರರಿಗೆ ಮತ್ತದರ ಸಮರ್ಥಕರಿಗೆ ಇದರ ಹಿಂದಿನ ಬವಣೆಯ ಅರಿವಾಗದು


ನಮ್ಮಲ್ಲಿ ಸೃಜನ ಶೀಲತೆ ,ವಿಷಯ ಸಂಗ್ರಹ ಬರವಣಿಗೆಯ ಕೌಶಲ ಇದ್ದರೆ ಒಂದು ಕಥೆ ಕಾದಂಬರಿ ಲೇಖನವನ್ನು ಮನೆಯಲ್ಲಿ ಫ್ಯಾನ್ ಅಡಿಯಲ್ಲಿ ಕುಳಿತು ಬರೆಯಬಹುದು .ಅದಕ್ಕೆ ಒಂದು ಪೆನ್ ಕೆಲವು ಹಾಳೆಗಳ ಖರ್ಚು ಮಾತ್ರ ಬೀಳುತ್ತದೆ


ಆದರೆ ಭೂತಗಳ ಬಗ್ಗೆ ಅಧ್ಯಯನವೆಂದರೆ ಹಾಗಲ್ಲ.ಭೂತಕೋಲ ನಡೆಯುವ ಸಮಯಕ್ಕೇ ಹೋಗಿ ಅನೇಕ ವಿಧಿನಿಷೇದಗಳನ್ನು ಅನುಸರಿಸಿನಿಯಮಗಳಿಗೆ ಚ್ಯುತಿಯಾಗದಂತೆ,ಜನರ ಧಾರ್ಮಿನ ಭಾವನೆಗಳಿಗೆ ಘಾಸಿಯಾಗದಂತೆ  ಸದ್ದುಗದ್ದಲದ ನಡುವೆಯೇ ರೆಕಾರ್ಡ್ ಮಾಡಬೇಕು.


ಕಲಾವಿದರಿಗೆ ಸಂಭಾವನೆ ಕೊಡಬೇಕು.ಇಷ್ಟಾಗಿಯೂ ಅವರಲ್ಲಿ‌ ಮಾಹಿತಿ ಸಿಗುತ್ತದೆ ಎಂಬ ಖಾತರಿ ಇಲ್ಲ.ಆಧುನಿಕತೆಯ ಪ್ರಭಾವ ಅವರ ಮೇಲೂ ಆಗಿದೆ.ಹೆಚ್ಚಿನ ಯುವ ಕಲಾವಿದರಿಗೆ ಅಬ್ಬರದ ಕುಣಿತ ಮಾತ್ರ ಗೊತ್ತು.ಮೂಲ ವೇಷಭೂಷಣವಾಗಲೀ ಪಾಡ್ದನವಾಗಲೀ ಮೂಲ ಕಥೆಯಾಗಲೀ ತಿಳಿದಿಲ್ಲ.ಯಾರೋ ಚಾಣಾಕ್ಷರು ಕಟ್ಟದ ಪುರಾಣಮೂಲದ ಕಥೆಯನ್ನೇ ಅವರುಗಳೂ ಹೇಳುತ್ತಾರೆ.


ಇನ್ನು ಪಾಡ್ದನ ರೆಕಾರ್ಡಿಂಗ್ ಲಿಪ್ಯಂತರ ಅನುವಾದ ಸಾಂಸ್ಕೃತಿಕ‌ ಪದಕೋಶ ತಯಾರಿ‌ ಮತ್ತು ಪ್ರಕಟಣೆ ತುಂಬಾ ಪರಿಶ್ರಮ ಬೇಡುವ ಕಾರ್ಯ.

  

ಪಾಡ್ದನಗಾರರು ಅಭ್ಯಾಸ ಬಲದಿಂದ ಹಾಡುತ್ತಾರೆ ಮೊದಲು ನೇಜಿ‌ನೆಡುವಾಗ ಹಾಕುವಾಗ ಇನ್ನಿತರ ಸಂದರ್ಭದಲ್ಲಿ ಹಾಡುತ್ತಿದ್ದರು.ಈಗ ಅದೆಲ್ಲ ಬಿಟ್ಡು ಹೋಗಿ ಇವರಿಗೂ ಪಾಡ್ದನ ಹಾಡುವ ಅಭ್ಯಾಸ ಬಿಟ್ಟು ಹೋಗಿರುತ್ತದೆ.ನೆನಪು ಮಾಡಿಕೊಂಡು ಹಾಡುತ್ತಾರೆ.ನಡುವೆ ಸಣ್ಣ ಸದ್ದು ( ಡಿಸ್ಟರ್ಬೆನ್ಸ್) ಬಂದರೂ ಅವರಿಗೆ ಹಾಡುತ್ರಿರುವ ಭಾಗ ಮರೆತು ಹೋಗುತ್ತದೆ.

ಅದಕ್ಕಾಗಿ ನಾನು ಪಾಡ್ದನಗಾರರನ್ನು ಮನೆಗೆ ಕರೆಸಿ ,ಮನೆ ಮಂದಿಯನ್ನೆಲ್ಲಾ ಹೊರಗೆ ಕಳುಹಿಸಿ ಮನೆಯಲ್ಲಿ ಅಘೋಷಿತ ಕರ್ಫ್ಯೂ ಹಾಕಿ ಹಾಡಿಸಿ ರೆಕಾರ್ಡ ಮಾಡುತ್ತೇನೆ.

ಪಾಡ್ದನಗಾರರಿಗೆ ತಾವು ಹಾಡಿರುವುದರಲ್ಲಿ ಅನೇಕ ಪದಗಳ ಸ್ಪಷ್ಟತೆ ಇರುವುದಿಲ್ಲ.ಅವುಗಳ ಅರ್ಥವೂ ತಿಳಿದಿರುವುದಿಲ್ಲ


ಹಾಗಾಗಿಯೇ ಲಿಪ್ಯಂತರ ದೊಡ್ಡ ಸವಾಲು ಅದಕ್ಕಾಗಿಯೇ ಪಾಡ್ದನ ಸಂಗ್ರಹ ಮಾಡಿ ಅನುವಾದಿಸಿ ಪ್ರಕಟಿಸುವ ಯತ್ನಕ್ಕೆ  ಯಾರೂ ಕೈ ಹಾಕುದಿಲ್ಲ


ಅನೇಕ ಬಾರಿ ಹಾಕಿಕೇಳಿ ಅರ್ಥ ಮಾಡಿಕೊಂಡು ಅರ್ಥವಾಗದ ಅಸಗಪಷ್ಟಪದಗಳಿರುವಲ್ಲಿ ಊಹಾ ಪಾಠ ಸೇರಿಸಿ ಅನುವಾದಿಸಿ ಸಾಂಸ್ಕೃತಿಕ ಪದಕೋಶ ತಯಾರಿಸುವಲ್ಲಿ ಸಾಕಾಗಿ ಹೋಗಿರುತ್ತದೆ.ಇವನ್ನು ಪ್ರಕಾಶಕರು ಯಾರೂ ಪ್ರಕಟಿಸಲು ಮುಂದಾಗುವುದಿಲ್ಲ. ಪ್ರಕಟಿಸಿದರೆ ಕೊಂಡುಕೊಳ್ಳುವವರೂ ಇಲ್ಲ

ಒಂದಷ್ಟು ಪ್ರತಿಗಳನ್ನು ಗ್ರಂಥಾಲಯ ಕೊಂಡುಕೊಳ್ಳುತ್ರದೆ.ಅಲ್ಲಾದರೂ ಇವನ್ನು ಓದುವವರಿದ್ದಾರೆಯೇ ದೇವರೇ ಬಲ್ಲ


ನಾನು ಇಷ್ಟರ ತನಕ ಎಲ್ಲೂ ದಾಖಲಾಗದ ಚಂದ ಬಾರಿ ರಾಧೆ ಗೋಪಾಲ,ರುಕ್ಮುಣಿ ಬಾಲೆ ಗೋಪಾಕ,ಬಾಲೆ ಪದ್ಮಕಗಕ,ಬಾಲೆ ಚಂದಕ್ಕ ,,ಬಾಲೆ ರಂಗಮೆ ,ಕರಿಯ ಕನ್ಯಾ ಮದನು ,ಶಿರಾಡಿ ದೈವದ ಪಾಡ್ದನ ಚಾಮುಂಡಿ ಪಾಡ್ದನ ಈಶ್ವರ ದೇವರ ಪಾಡ್ದನ,ಬಾಕುಡತಿ ಪಾಡ್ದನ ಸೇರಿದಂತೆ ನೂರಕ್ಕೂ ಹೆಚ್ಚಿನ ಅಪರೂಪದ ಪಾಡ್ದನಗಳನ್ನು ಸಂಗ್ರಹಿಸಿರುವೆ.‌ಐವತ್ತರಷ್ಡು ಪಾಡ್ದನಗಳನ್ನು‌ ಲಿಪ್ಯಂತರ ಮಾಡಿ ಅನುವಾದಿಸಿ ಸಾಂಸ್ಕೃತಿಕ ಪದಕೋಶ ತಯಾರಿಸಿ ಪ್ರಕಟಿಸಿರುವೆ.

ಇಲ್ಲೆಲ್ಲ ನನಗೆ ದೈಹಿಕ ಮಾನಸಿಕ ಶ್ರಮದ ಜೊತೆಗೆ ಆರ್ಥಿಕವಾಗಿಯೂ ಸಾಕಷ್ಟು ದುಡ್ಡು ಖರ್ಚಾಗಿದೆ.


ಕೆಲವೊಮ್ಮೆ ಇದೆಲ್ಲ ಯಾಕೆ ಬೇಕಿತ್ತು ? ಎಲ್ಲರಂತೆ ಸೀರೆ ಚಿನ್ನ ಹಾಕಿ ಮದುವೆ ಉಪನಯನ ಆರತಕ್ಷತೆ ಮನೆ ಮಕ್ಕಳು‌ ಎಂದು ಎಂಜಾಯ್ ಮಾಡಬಹುದಿತ್ತು ಎಂದೆನಿಸುತ್ತದೆ.ಆಗ ನನ್ನ ಬರಹವನ್ನು ಕದಿಯುದು ಅದನ್ನು ಆಕ್ಷೇಪ ಮಾಡಿದರೆ ನಮ್ಮನ್ನೇ ನಿಂಸಿಸುದು ಅದಕ್ಕಾಗಿ ಕೋರ್ಟ್ ಕಛೇರಿ ಅಲೆದಾಟ ಇವ್ಯಾವುದೂ ಇರ್ತಿರಲಿಲ್ಲ.ಬರೆದರೆ ತಾನೇ ಕದಿಯುದು ? 


ಆದರೆ ಈ ಪರಿಶ್ರಮದಲ್ಲಿ ಸಿಗುವ ಸಂತೃಪ್ತಿ ನನಗೆ ಬೇರೆ ಯಾವುದರಲ್ಲಿಯೂ ಸಿಗುತ್ತಿರಲಿಲ್ಲ ಎಂಬುದು ಖಂಡಿತಾ .

ನನಗೆ ಸರ್ಕಾರಿ ಕೆಲಸ ಸಿಕ್ಕಾಗ ಅಮ್ಮ' ಕೆಲಸ ಆಯ್ತು ಪಿಎಚ್ ಡಿ ಆಗಿದೆ.ಇನ್ನು ಭೂತ ಕೋಲ‌ ಪಾಡ್ದನ ಅದು ಇದು ಬಿಟ್ಟು ನೆಮ್ಮದಿಯಿಂದ ಇರು‌ ಹಾಗೂ ಬೇಕಿದ್ದರೆ ಕಥೆಕಾದಂಬರಿ ನಾಟಕ ಬರೆದರೆ ಸಾಕು" ಎಂದಿದ್ದರು


ಆದರೆ ನನಗೆ ನೆಮ್ಮದಿ ಇದರಲ್ಲಿಯೇ ಇದ್ದರೆ ಎಂತ ಮಾಡುದು ?ಹಾಗೆ ನೋಡಿದರೆ ನನಗೆ ಕಥೆ ಲೇಖನಗಳನ್ನು ಬರೆಯುವ ಅಭ್ಯಾಸ ಇತ್ತು.ನನ್ನ ನಲುವತ್ತರಷ್ಟು ಕಥೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.ಮನೆಯಂಗಳದಿ ಹೂ ಎಂಬ ಕಥಾ ಸಂಕಲನ ಕೂಡ ಪ್ರಕಟವಾಗಿದೆ

ಇನ್ನೂರರಷ್ಟು ಲೇಖನಗಳು ಕೂಡ ಪ್ರಕಟವಾಗಿವೆ.


ಆದರೆ ತುಳು ಅಧ್ಯಯನದೆಡೆಗೆ ನನ್ನ ಗಮನವನ್ನು ಕೇಂದ್ರೀಕರಿಸಿ ಇವನ್ನೆಲ್ಲ ಬಿಟ್ಟುಬಿಟ್ಟೆ.


ನಾನಿಟ್ಟ ಹೆಜ್ಜೆ ತಪ್ಪೋ ಸರಿಯೋ..ನನಗೂ ಗೊತ್ತಿಲ್ಲ.

  ಡಾ.ಜಿ ಎಸ್ ಶಿವ ರುದ್ರಪ್ಪನವರು ಹೇಳಿದಂತೆ " ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ.ಅದು ಅನಿವಾರ್ಯ ಕರ್ಮ ಎನಗೆ'

 ಆದರೂ ಬ್ಗಾಗನ್ನು ತೆರೆದಾಗ ಮೂರೂವರೆ ನಾಲ್ಕು ಲಕ್ಷದಷ್ಟು ದೇಶ ವಿದೇಶಗಳ ಜನರು ಓದಿದ್ದಾರೆಂದು ತಿಳಿವಾಗ ನನ್ನ ಕೆಲಸ ಒಂದಿನಿತು ಸಾರ್ಥಕತೆಯನ್ನು ಪಡೆದಿದೆ ಎಂಬ ಆತ್ಮತೃಪ್ತಿ,ಸಂತಸ ಉಂಟಾಗುದಂತೂ ನಿಜ.


ಯಾರೋ ನಮ್ಮ ಬರಹಗಳನ್ನು ಓದಿದರೆ ನಮಗೆ ಸ್ವರ್ಗ ಸಿಗುತ್ತದಾ? ಇಲ್ಲ..ಆದರೂ ಏನೋ ಸಂತಸ ಅಷ್ಟೇ


ಬಹುಶಃ ಕೈಯಿಂದ ಖರ್ಚು ಮಾಡಿ ಮಾಡುವ ಎಲ್ಲ‌ ಕಲಾವಿದರಿಗೂ ನಾಟಕಕಾರರಿಗೂ ಸಮಾಜ ಸೇವಕರಿಗೂ  ಇದೇ ಸಂತಸ ಸಿಗುತ್ತದೆ ಅಷ್ಟೇ..ಬೇರೇನೂ ಇಲ್ಲ..


 '

Tuesday, 29 December 2020

ನನಗೂ ಆತ್ಮವಿದೆ..ಅದಕ್ಕೂ ಒಂದು ಕತೆಯಿದೆ: ತಾಯಿಯನ್ನೂ ಅಪಶಕುನ ಎಂದಿದ್ದರು

 ಸತೀ ಪದ್ದತಿ ಮುಸ್ಲಿಂ ಅಕ್ರಮಣಕಾರರಿಂದಾಗಿ ಬಂತು.ಅವರ ದೌರ್ಜನ್ಯಕ್ಕೆ ಹೆದರಿ ವಿಧವೆಯರು ಗಂಡನ ಚಿತೆಗೆ ಹಾರಿ ಸಾಯುತ್ತಿದ್ದರು ಇತ್ಯಾದಿಯಾಗಿ ನಾನೂ ಓದಿದ್ದೆ.ನಂತರ ಅದು ಸಂಪ್ರದಾಯವಾಯಿತು ಎಂದು


ಇಲ್ಲೊಂದು ಪ್ರಶ್ನೆ ಇದೆ.ಮುಸ್ಲಿಂ ಅಕ್ರಮಣಗಾರರು ವಿಧವೆಯರನ್ನು ಮಾತ್ರ ಹೊತ್ತೊಯ್ಯುತ್ತಿದ್ದರೇ? ಸೋತ ಅರಸನ ಪಾಳಯದ ಗಂಡನಿರುವ ಸ್ತ್ರೀಯರನ್ನು ,ವಿವಾಹ ವಾಗದ ಹುಡುಗಿಯರನ್ನು ಸೆಳೆದೊಯ್ಯುತ್ತಿರಲಿಲ್ಲವೇ? ಅವರುಗಳೇಕೆ ವಿದವಾ ಸ್ತ್ರೀಯರಂತೆ ಚಿತೆಗೆ ಹಾರಿ ಸಾಯಲಿಲ್ಲ? 

ತಮ್ಮ ತಮ್ಮ ಹೆಂಡತಿಯರನ್ನು ಗಂಡ ಕಾಯುತ್ತಿದ್ದನೇ ? ಹಾಗಾದರೇಕೆ ಗಂಡನನ್ನು ಕಳೆದುಕೊಂಡ ತಮ್ಮ ಅಕ್ಕ ತಂಗಿಯರನ್ನು ಕಾಯಲಿಲ್ಲ.ತಮ್ಮ ಹೆಂಡತಿ‌ಮಕ್ಕಳನ್ನು ಕಾಯುವ ಸಾಮರ್ಥ್ಯ ಇರುವವರಿಗೆ ತಮ್ಮ‌ ಅಕ್ಕ ತಂಗಿಯರನ್ನು ಮುಸ್ಲಿಂ ಅಕ್ರಮಣಗಾರರು ಸೆಳೆದೊಯ್ಯದಂತೆ ಕಾಪಾಡುವ ಸಾಮರ್ಥ್ಯ ಇರಲಿಲ್ಲವೇ? ಮನಸ್ಸಿರಲಿಲ್ಲವೇ ? 

ಹೆಣ್ಣನ್ನು ಕದ್ದೊಯ್ಯುವಾಗ ತಡೆದು ಯುದ್ದ ಮಾಡಿ ಮರಣವನ್ನಪ್ಪಿದ ವೀರರ ಬಗ್ಗೆ ಉಲ್ಲೇಖಗಳಿವೆ.ಇವರು ವಿಧವೆಯರ ರಕ್ಷಣೆಗಾಗಿ ಹೋರಾಡಿದವರೇ ? ಈ ಬಗ್ಗೆ ಸ್ಪಷ್ಟತೆ ಇಲ್ಲ.

ಈ  ಪೆಣ್ಣುಬ್ಬಯಲ್,ತರುಗೋಳ್  ಗಳ ಉಲ್ಲೇಖ ಇತಿಹಾಸದಲ್ಲಿದೆ.

ಇದನ್ನು ಗಮನಿಸುವಾಗ ಸತಿ ಪದ್ದತಿಗೆ ಕೇವಲ‌ ಮುಸ್ಲಿಂ ಆಕ್ರಮಣಕಾರರು ಮಾತ್ರ ಕಾರಣವಲ್ಲ ಎಂದೆನಿಸುತ್ತದೆ.

ವಿಧವೆಯರಿಗೆ ಸಮಾಜದಲ್ಲಿ ಭದ್ರತೆ ಇರಲಿಲ್ಲ.ಒಂದೊಮ್ಮೆ ಸತಿಯಾಗದೆ ಉಳಿದರೆ ತಲೆಬೋಳಿಸಿ‌ ವಿರೂಪಗೊಳಿಸಿ  ಕೆಂಪು ಮಡಿ ಬಟ್ಟೆ ಉಡಿಸುತ್ತಿದ್ದರು.

ಇದಕ್ಕೆ ಅವಳ ಮೇಲೆ ಯಾರ ಕಾಮುಕರ ಕಣ್ಣು ಬೀಳದಿರಲಿ ಮಾಡುದು ಎಂಬ ಸಮರ್ಥನೆಯ ಮಾತುಗಳನ್ನೂ ಕೇಳಿದ್ದೇವೆ.

ಕಾಮುಕರ ಕಣ್ಣು ವಿಧವಾ ಸ್ತ್ರೀಯರ ಮೇಲೆ ಮಾತ್ರ ಬೀಳುತ್ತದೆಯಾ ? ಇತರ ಮುತ್ತೈದೆಯರ ಮೇಲೇಕೆ ಬೀಳುವುದಿಲ್ಲ.ಯಾಕೆಂದರೆ ವಿಧವೆಯರನ್ನು ಏನು ಮಾಡಿದರೂ ಕೇಳುವವರಿರಲಿಲ್ಲ ಅಷ್ಟೇ.

ಕಾಮುಕರು ಎಲ್ಲೋ ದೂರದ ದೇಶದಿಂದ ಬಂದವರಲ್ಲ.

ಅದೇ ಊರಿನವರು ಅದೇ ಮನೆಯವರು.

ತಪ್ಪು ಕಾಮದ ಕಾಮಾಲೆ ಹತ್ತಿದ ಗಂಡಸಿದು‌.ಶಿಕ್ಷೆ ಹೆಣ್ಣಿಗೆ

ಇನ್ನು ವಿಧವಾ ಸ್ತ್ರೀ ಕೂಡ ಮನುಷ್ಯಳೇ..ಸಣ್ಣ ವಯಸ್ಸಿಗೆ ಗಂಡನನ್ನು ಕಳೆದುಕೊಂಡ ಹೆಣ್ಣಿಗೂ ದೈಹಿಕ ವಾಂಛೆಗಳಿರುತ್ತವೆ.ಹಾಗಾಗಿ ಕೆಲವು ವಿಧವಾ ಸ್ತ್ರೀಯೂ   ಎಡವಿರಬಹುದು.

ಮರು ಮದುವೆಯ ಮುಕ್ತ ಅವಕಾಶ ಇದ್ದಿದ್ದರೆ ಈ ಯಾವ ಸಮಸ್ಯೆಗಳೂ ಇರುತ್ತಿರಲಿಲ್ಲ.

ಇಂದಿಗೂ ಮರು ಮದುವೆಯಾದ ಹೆಣ್ಣನ್ನು ಕುಹಕದಿಂದ ನೋಡುವವರಿದ್ದಾರೆ ಎಂಬುದು ದುರಂತ.

ರಾಜಾರಮ ಮೋಹನ ರಾಯರ ಸತತ ಯತ್ನದುಂದಾಗಿ ಸತಿ ಪದ್ದತಿ ನಿಷೇಧದ ನಂತರ ವಿಧವೆಯರ ಪರಿಸ್ಥಿತಿ ಕಾಲಾಂತರದಲ್ಲಿ ಸುಧಾರಿಸುತ್ತಾ ಬಂತು.

ಸತಿಯಾಗದೆ ಇದ್ದವರು ತಲೆ ಬೋಳಿಸಿ ಮಡಿ ಅಜ್ಜಿಯಾಗಿ ಯಾರ್ಯಾರ ಸೇವೆ ಮಾಡುತ್ತಾ ಒಪ್ಪೊತ್ತು ಸಪ್ಪೆ ಊಟ ಉಂಡು ಬದುಕಬೇಕಾಗಿತ್ತು.ಇಂತಹ ಎರಡು ಮೂರು ಮಡಿ ಅಜ್ಜಿಯರನ್ನು ನಾನು ಸಣ್ಣಾಗಿರುವಾಗ ನೋಡಿದ್ದೆ‌ ಎಂದರೆ ಮೂವತ್ತು ಮುವತ್ತೈದು ವರ್ಷಗಳ ಹಿಂದೆ ಕೂಡ ಇಂತಹ ಹೀನಾಯ ಸ್ಥಿತಿ ವಿಧವಾ ಸ್ತ್ರೀಗೆ ಇತ್ತು. 

ಕಾಲಕ್ರಮೇಣ ತಲೆ ಬೋಳಿಸಿ ಮಡಿ ಮಾಡುದು ಕಡಿಮೆಯಾಯಿತು.

ಆದರೆ ವಿದವಾ ಸ್ತ್ರೀಯನ್ನು ಅಪಶಕುನ ಎಂದು ಭಾವಿಸುತ್ತಿದ್ದರು.ಈ ಬಗ್ಗೆ ಪ್ರಸಾದ್ ಹೇಳಿದ ಒಂದು ವಿಚಾರ ನೆನಪಾಗುತ್ತದೆ.

ಅದನ್ನು ಕೇಳಿ ಎಷ್ಟೋ ದಿನ ಅ ಪಾಪದ ಅಜ್ಜಿಗಾಗಿ ಮನ ಮರುಗಿತ್ತು.

ಪ್ರಸಾದರ ಹತ್ತಿರದ ಸಂಬಂಧಿಕರ ಮನೆಯಲ್ಲಿ ನಡೆದ ವಿಚಾರ ಇದು.

ಅ ತಾಯಿಗೆ ಗಂಡ ಸಣ್ಣ ವಯಸ್ಸಿನಲ್ಲಿಯೇ ತೀರಿ ಹೋಗಿದ್ದರು.ಗಂಡನ ಆಸ್ತಿ ಇತ್ತು.ಹಾಗಾಗಿ ಹೇಗೋ ನಾಲ್ಕು ಗಂಡು ಮಕ್ಕಳನ್ನು ಮೂರು ಹೆಣ್ಣು ಮಕ್ಕಳನ್ನು ದೊಡ್ಡ ಮಾಡಿದ್ದರು.

ಮಕ್ಕಳು ದೊಡ್ಡವರಾಗಿ ಪಾಲು ಪಂಚಾಯತಿಗೆ ಆಗಿ ಆಸ್ತಿ ಪಾಲಾಯಿತು.ತಾಯಿಗೆಂದು ಒಂದು ತುಂಡು ಭೂಮಿ ಇಡಲಿಲ್ಲ.ನಂತರ ಆ ವೃದ್ಧ ತಾಯಿ ಸಣ್ಣ ಮಗನ ಜೊತೆ ಇದ್ದರು.ಸಣ್ಣ ಮಗನ ಮದುವೆಯಾದ ನಂತರ ಸೊಸೆ ಉಪೇಕ್ಷೆ ಮಾಡಿದಳೋ ಅಥವಾ

ಅ ತಾಯಿಗೆ ದೊಡ್ಡ ಮಗನ ಮನೆಯಲ್ಲಿ ಸಾಯಬೇಕೆಂಬ  

ಹಂಬಲವೋ ಗೊತ್ತಿಲ್ಲ.ಅಲ್ಲೇ ಒಂದುವರೆ ಕಿಮೀ ದೂರದ ದೊಡ್ಡ ಮಗನ ಜೊತೆ ಇದ್ದರು.

ದೊಡ್ಡಮಗನಿಗೆ ಹೆಣ್ಣು ಗಂಡು ಮಕ್ಕಳಾಗಿ ಹೆಣ್ಣು ಮಕ್ಕಳು ಮದುವೆಯ ವಯಸ್ಸಿಗೆ ಬಂದರು.

ಹಾಗೆ ಮಗನ ಮಗಳನ್ನು ನೋಡಲು ಗಂಡಿನ ಕಡೆಯವರು ನೋಡಲು ಬರುವವರಿದ್ದರು.

ಮನೆಯಲ್ಲಿ ಸಂಭ್ರಮದ ವಾತಾವರಣ.

ಈ ಬಿಳಿಸೀರೆ ಉಡುವ ವಿಧವೆ ವೃದ್ದತಾಯಿಗೂ ಅದು ಸಂಭ್ರಮದ ವಿಚಾರವೇ.ಆಕೆಯೂ ಸಂಭ್ರಮದಿಂದ ಮನೆಯನ್ನು ಸ್ವಚ್ಛ ಮಾಡಿ ಸಿದ್ಧಪಡಿಸುತ್ತಿದ್ದರು.

ಆಗ ಮಗ ಬಂದವನೇ ತಾಯಿಯನ್ನು ಎಳೆದುಕೊಂಡು ಹೋಗಿ ಒಂದು ಬೇಡದ ಸಾಮಾನುಗಳನ್ನು ತುಂಬುವ ಕತ್ತಲೆಯ  ಕೊಠಡಿಯಲ್ಲಿ ಕೂಡು ಹಾಕಿ ಬಾಗಿಲು ಹಾಕಿ ಹೊರಗಿನಿಂದ ಬೀಗ ಹಾಕಿದ.

ವಿಧವೆ ತಾಯಿ ಹೊರಗೆ ಬಂದು ಕಾಣಿಸಿದರೆ ಅಪಶಕುನವಂತೆ.ಅದಕ್ಕಾಗಿ ಕೂಡಿ ಹಾಕಿದ..

ಯಾರೋ ಅಪಶಕುನ ಎಂದು ಅವಮಾನಿಸುದು ಬೇರೆ.ತಾನು ಹೊತ್ತು ಹೆತ್ತ ಮಗನೇ ಅಪಶಕುನ ಎಂದಾಗ ಆ ತಾಯಿಗೆ ಹೇಗಾದೀತು..ಅಬ್ಬಾ ಕ್ರೌರ್ಯವೇ.

ಆ ಹುಡುಗಿಯನ್ನು ನೋಡಲು ಬಂದವರು ತಾಯಿ ಎಲ್ಲಿ ಎಂದು ವಿಚಾರಿಸಿದಾಗ ಕೂಡಿ ಹಾಕಿದ ಕತ್ತಲೆಯ ಕೋಣೆಯಿಂದ ವೃದ್ಧ ತಾಯಿಯನ್ನು ಹೊರಗೆ ಕರೆದುಕೊಂಡು ಬಂದರು.

ಅ ಮಗಳಿಗೆ ಮದುವೆಯಾಯಿತು‌

ನಂತರದ ಮಗಳಿಗೂ ಮದುವೆಯಾಯಿತು.ಆ ತಾಯಿಯ ನಿಟ್ಟುಸಿರಿನ ಬಿಸಿ ತಾಗಿತೋ,ಆತನ ಪಾಪದ ಕೊಡ ತುಂಬಿತೋ,ಆ ಹೆಣ್ಣು ಮಗಳ ದುರದೃಷ್ಟವೋ ಏನೋ ತಿಳಿಯದು.

ಆಕೆಗೆ ಮದುವೆಯಾಗಿ ವರ್ಷದೊಳಗೆ ಗಂಡ ತೀರಿ ಹೋದ.ಅ ಸಮಯಕ್ಕೆ ಆಕೆ ತುಂಬು ಗರ್ಭಿಣಿ.ಹಾಗಾಗಿ ಅವಳಿಗೆ ವಿಷಯವನ್ನು ತಿಳಿಸಲಿಲ್ಲ.ಒಂದೆರಡು ದಿನಕ್ಕೆ ಹೆಣ್ಣು‌ಮಗು ಹುಟ್ಟಿತು.ತಂದೆಯ ಮುಖವನ್ನೇ ಕಾಣದ ಆ ಮೊಮ್ಮಗುವನ್ನು ,ಸಣ್ಣ ವಯಸ್ಸಿಗೆ ಗಂಡನನ್ನು ಕಳೆದುಕೊಂಡ ಮಗಳನ್ನು ಯಾವ ಕೊರತೆಯೂ ಕಾಡದಂತೆ  ಸಾಕಿದರು.

ತಾಯಿಯನ್ನು ವಿಧವೆ ಅಪಶಕುನ ಎಂದು ಕೀಳಾಗಿ ಕಂಡವನಿಗೆ ದಿನಾಲೂ ಗಂಡನನ್ನು ಕಳೆದುಕೊಂಡು ದುಃಖಿಸುವ ಮಗಳನ್ನು ಕಾಣುವ ದುರಂತ ಬಂದೊದಗಿತ್ತು.

ಅವಳ ಮಗಳೂ ಈಗ ದೊಡ್ಡವಳಾಗಿದ್ದಾಳೆ.ಅಜ್ಜನ ನಂತರ ಸೋದರ ಮಾವಂದಿರು ತಮ್ಮ ಮಕ್ಕಳಿಗಿಂತ ಪ್ರೀತಿಯಿಂದ ಇವಳನ್ನು ಸಾಕಿದ್ದಾರೆ.ಆದರೂ ಅವಳ ಮದುವೆಯಂದು ಅವಳ ತಂದೆ ತಾಯಿಯ ಸ್ಥಾನದಲ್ಲಿ ಕುಳಿತವರು ಆಕೆಯ ವಿದ್ಯಾರ್ಥಿಯ ತಂದೆ ತಾಯಿ.

ಯಾರೋ ಆಕೆಯನ್ನು ಧಾರೆ ಎರೆದುಕೊಡಬೇಕಾಗಿ ಬಂದುದರ ಹಿನ್ನೆಲೆ ನನಗೆ ಗೊತ್ತಿಲ್ಲ.ಅವರೊಳಗೆ ಏನಿತ್ತೋ ಗೊತ್ತಿಲ್ಲ.

ಈಕೆ ಈಗ ವಿದೇಶದಲ್ಲಿ ಗಂಡ ಮತ್ತು ಎರಡು ಮಕ್ಕಳ ಜೊತೆಗಿದ್ದಾಳೆ‌.ಆಕೆಯ ತಾಯಿ ಮತ್ತೆ ತಂದೆಯ ಮನೆಯಲ್ಲೇ ಇದ್ದಾರೆ.ಅಣ್ಣಂದಿರೂ ಈಗ ಅಳಿದಿದ್ದಾರೆ.

ಅಣ್ಣಂದಿರ ಮಕ್ಕಳು ಮತ್ತು ಅವಿವಾಹಿತ ತಂಗಿಯ ಜೊತೆಗಿದ್ದಾರೆ.

ಇರುವುದರಲ್ಲಿ ಒಳ್ಳೆಯ ಗುಣದ ಮಗಳಿರುವುದು ಒಂದು ಸಂತಸದ ವಿಚಾರ.ಒಂದೊಮ್ಮೆ ಮಗಳೂ ಇಲ್ಲದಿರುತ್ತಿದ್ದರೆ ಅವರ ಪರಿಸ್ಥಿತಿ ಹೇಗಿರುತ್ತಿತ್ತು..

ಮಕ್ಕಳೂ ಇಲ್ಲದ ,ಸಣ್ಣ ವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡು ಅಣ್ಣ ತಮ್ಮಂದಿರ ಆಶ್ರಯದಲ್ಲಿರುವ  ಅನೇಕ ವಿಧವಾ ಸ್ತ್ರೀಯರು ಈಗಲೂ ಇದ್ದಾರೆ.

ಇತ್ತೀಚೆಗೆ ಗಂಡನನ್ನು ಕಳೆದುಕೊಂಡ ಸಣ್ಣ ವಯಸ್ಸಿ‌ ಹುಡುಗಿಯರಿಗೆ ಮತ್ತೆ ಮದುವೆ ಮಾಡುತ್ತಿರುವುದು ನಮಾಜ ಪರಿವರ್ತನೆಯ ಒಂದು ಧನಾತ್ಮಕ ಅಂಶವಾಗಿದೆ.