ಎಪ್ರಿಲ್ ಹತ್ತರ ಪಾಸು ಫೇಲಿನ ದಿನವೆಂಬ ಭಯ ಆತಂಕದ ದಿನ
ಹೌದು..ಪ್ರತಿವರ್ಷ ಎಪ್ರಿಲ್ ಹತ್ತಕ್ಕೆ ನಮ್ಮ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಶಾಲೆಯ ಬೋರ್ಡ್ ನಲ್ಲಿ ಹಾಕ್ತಿದ್ದರು.ಎಪ್ರಿಲ್ ಮೊದಲ ದಿನಾಂಕದಿಂದಲೇ ಎದೆಯಲ್ಲಿ ಅವಲಕ್ಕಿ ಕುಟ್ಟಲು ಶುರುವಾಗುತ್ತಿತ್ತು.ಪಾಸ್ ಪೇಲ್ ದಿನ ಹತ್ತಿರ ಬಂದ ಹಾಗೇ ಊಟ ತಿಂಡಿ ಸೇರುತ್ತಿರಲಿಲ್ಲ.ನಮ್ಮಂತೆಯೇ ನಮ್ಮ ಹೆತ್ತವರಿಗೂ ಇದೇ ಆತಂಕ.
ಚೆನ್ನಾಗಿ ಕಲಿಯದವರನ್ನು ಫೇಲಾದವರನ್ನು "ಹೋಗು ಬಜೆಂಟ್ ಹೆರ್ಕು " ಎಂದು ಬೈಉವ ವಾಡಿಕೆ ಇತ್ತು.ಆದರೆ ಪಾಸಾಗುತ್ತಿದ್ದ ನಾವು ಕೂಡ ಬೇಸಗೆಯಲ್ಲಿ ಬಜಂಟ್ ಹೆಕ್ಕುತ್ತಿದ್ದೆವು.
ಬಜಂಟು ಎಂದರೆ ಒಣ ಸೆಗಣಿ.ಬೇಸಗೆಯ ಸಮಯದಲ್ಲಿ ನಾವುಮಕ್ಕಳೆಲ್ಲ ಗುಡ್ಡವೆಲ್ಲ ಬಜೆಂಟಿಗಾಗಿ ಹುಡುಕುತ್ತಿದ್ದೆವು.ಮೇಯಲು ಬಿಟ್ಟ ಹಸುಗಳು ಹಾಕಿದ ಒಣ ಸೆಗಣಿ ಸಿಕ್ತಾ ಇತ್ತು.
ಇದನ್ನು ಮಳೆಗಾಲದಲ್ಲಿ ಒಲೆ ಉರಿಸಲು ಬಳಸುತ್ತಾ ಇದ್ದರು.
ನಾವು ಏಳೆಂಟು ಸಮ ವಯಸ್ಸಿನ ಮಕ್ಕಳು ಒಂದೊಂದು ಗೋಣಿ ಚೀಲ ಹಿಡಿದುಕೊಂಡು ಬಜಂಟು ಹೆಕ್ಕಲು ಹೋಗುತ್ತಿದ್ದೆವು.ಅದು ನಮಗೆ ಬೇಸರ ತರುವ ಕೆಲಸವಾಗಿರಲಿಲ್ಲ.ಗುಡ್ಡಗಾಡಿಬ ಕಾಡು ಹಣ್ಣುಗಳನ್ನು ಅಯ್ದು ತಿಂದುಕೊಂಡು ಕಾಡು ಹರಟೆ ಹೊಡೆದುಕೊಂಡು ಬಹಳ ಖುಷಿಯಿಂದ ಈ ಕೆಲಸ ಮಾಡ್ತಿದ್ದೆವು ಎಂಬುದು ಬೇರೆ ವಿಚಾರ.ಅದರೂ ಫೇಲಾದವರು ಬಜಂಟು ಹೆಕ್ಕಲು ಲಾಯಕ್ಕು ಎಂಬ ಮಾತು ಆಗ ಇತ್ತು
ಆಗೆಲ್ಲ ಫೇಲ್ ಆದರೆ ಮರು ಪರೀಕ್ಷೆ ಇರುತ್ತಿರಲಿಲ್ಲ.ಮತ್ತೆ ಒಂದು ವರ್ಷ ಅದೇ ತರಗತಿಯಲ್ಲಿ ಇರಬೇಕು.ಅದು ನಮಗೆ ಬಹಳ ಅವಮಾನಕರ ವಿಚಾರ.ಹಾಗಾಗಿ ಪಾಸಾಗದಿದ್ದರೆ ಎಂಬ ಆತಂಕ ಕಾಡುತ್ತಿತ್ತು.
ಕೆಲವೊಮ್ಮೆ ಜಾಣ ಮಕ್ಕಳಿಗೆ ಏನಾದರೂ ಆರೋಗ್ಯ ಸಮಸ್ಯೆ ಉಂಟಾಗಿ ವಾರ್ಷಿಕ ಪರೀಕ್ಷೆಗೆ ಹಾಜರಾಗಲು ಆಗದಿದ್ದರೆ ಅವರೂ ಕೂಡ ಫೇಲ್ .ನಂತರದ ಒಂದು ವರ್ಷ ಅದೇ ತರಗತಿಯಲ್ಲಿ ಕುಳಿತುಕೊಳ್ಳಬೇಕು.
ಈ ಅವಮಾನ ಸ್ವೀಕರಿಸಲು ತಯಾರಿಲ್ಲದ ಮಕ್ಕಳ ವಿದ್ಯಾಭ್ಯಾಸ ಇದೇ ಕಾರಣಕ್ಕಾಗಿ ಅಲ್ಲಿಗೇ ನಿಂತು ಹೋಗುತ್ತಿತ್ತು.
ನನಗೆ ನೆನಪಿನಲ್ಲಿರುವಂತೆ ನನ್ನ ಸಹಪಾಠಿಗಳಾಗಿದ್ದ ಇಬ್ಬರು ಜಾಣ ವಿದ್ಯಾರ್ಥಿಗಳ ಶಿಜ್ಷಣ ಹೀಗೆ ಅರ್ಧದಲ್ಲಿಯೇ ಮೊಟಕಾಗಿತ್ತು
ಒಂದು ನನ್ನ ಬಾಲ್ಯ ಸ್ನೇಹಿತೆ ಯಶೋದಾಳದು.ಅವಳು ಎಂಟನೇ ತರಗತಿಯ ಅಂತಿಮ /ವಾರ್ಷಿಕ ಪರೀಕ್ಷೆಯಲ್ಲಿ ಒಂದೆರಡು ವಿಷಯಗಳಿಗೆ ಗೈರು ಹಾಜರಾಗಿದ್ದಳು.
ಅವಳೂ ನಾನೂ ಒಟ್ಟಿಗೆ ಕೋಳ್ಯೂರಿನಿಂದ ಕೊಡ್ಲಮೊಗರಿನ ವಾಣಿವಿಜಯ ಪ್ರೌಢಶಾಲೆಗೆ ನಡೆದುಕೊಂಡು ಹೋಗಿ ಬರುತ್ತಿದ್ದೆವು.ಎರಡು ಗುಡ್ಡ ಹತ್ತಿ ಇಳಿಯಬೇಕು.ಸುಮಾರು ನಾಲ್ಕೈದು ಮೈಲು ನಡೆಯಬೇಕಿತ್ತು.
ಅಗಿನ್ನೂ ನನಗೆ ಸರಿಯಾಗಿ ನೆನಪಿದೆ
ಸುಮಾರು ಎಂಟು ಎಂಟೂವರೆ ಗಂಟೆ ಹೊತ್ತಿಗೆ ಅವಳು ನಮ್ಮ ಮನೆಗೆ ಬರ್ತಿದ್ದಳು.ಅವಳನ್ನೇ ಕಾಯುತ್ತಿರುವ ನಾನು ಕೂಡಲೇ ಮೆಟ್ಟಿಳಿದು ಮನೆಯ ಗದ್ದೆಯ ಬದುವಿನಲ್ಲಿ ಸಾಗಿ.ತೋಡಿನ ಸಂಕ ದಾಟಿ ಅಂಗಡಿ ಎದುರು ಎತ್ತರಕ್ಕೆ ಹತ್ತಿ ಸಾಗುತ್ತಿದ್ದೆವು.
1986 ಮಾರ್ಚ್ ಕೊನೆಯ ವಾರ.ಪ್ರೌಢ ಶಾಲೆಯಲ್ಲಿ ಅಂತಿಮ ಪರಿಕ್ಷೆಗಳು ನಡೆಯುತ್ತಿದ್ದವು.
.ನಮಗೆ ಆಗ ಹನ್ನೆರಡು ಪರೀಕ್ಷೆಗಳಿದ್ದವು.ಕನ್ನಡ ಎರಡು ಪತ್ರಿಕೆಗಳು,ವಿಜ್ಞಾನ ಮೂರು ಪತ್ರಿಕೆಗಳು,ಗಣಿತ ಎರಡು ಪತ್ರಿಕೆಗಳು ,ಸಮಾಜ ಶಾಸ್ತ್ರ ಎರಡು ಪತ್ರಿಕೆಗಳು ,ಹಿಂದಿ ಒಂದು ಪತ್ರಿಕೆ.
ಕೊನೆಯ ಒಂದೆರಡು ಪರೀಕ್ಷೆಗಳು ಉಳಿದಿದ್ದವು
ಆ ದಿನ ಯಶೋಧಾ ಎಂಟೂವರೆ ಕಳೆದರೂ ನಮ್ಮಮನೆಗೆ ಬಂದಿರಲಿಲ್ಲ.ಅವಳ ಮನೆಯಿಂದ ಶಾಲೆಗೆ ಹೋಗುವ ದಾರಿಯಲ್ಲಿ ನಮ್ಮ ಮನೆ ಇತ್ತು.
ಅವಳು ಬಾರದ ಕಾರಣ ನಾನೇ ಅವಳ ಮನೆಗೆ ಹೋದೆ.ಅವಳು ಚಳಿಗೆ ನಡುಗುತ್ತಾ ಕಂಬಳಿ ಹೊದ್ದು ಮಲಗಿದ್ದಳು.
"ನಮ್ಮ ಯಶೋಧೆಗೆ ಮೈಯಲ್ಲಿ ಬಿದ್ದಿದೆ( ಚಿಕನ್ ಪಾಕ್ಸ್ ) .ಅವಳು ಪರೀಕ್ಷೆಗೆ ಬರುದಿಲ್ಲ.ನೀನು ಹೋಗು ವಿದ್ಯಾ ,( ನನ್ನನ್ನು ಮನೆಯಲ್ಲಿ,ಊರಲಿ ವಿದ್ಯಾ ಎಂದು ಕರೆಯುತ್ತಾರೆ )ಒಂದು ವಾರ ಮನೆಗೆ ಬರಬೇಡ.ನಿನಗೂ ಹರಡುತ್ತದೆ " ಎಂದು ಹೇಳಿದರು
ಆಗ ಅಯ್ಯೋ..ಅವಳು ಫೇಲ್ ಆಗ್ತಾಳಲ್ಲ ಎಂದು ನನಗೆ ಆತಂಕ ಆಯಿತು.
ನಂತರ ಒಬ್ಬಳೇ ನಡೆದುಕೊಂಡು ಶಾಲೆಗೆ ಬಂದು ಪರೀಕ್ಷೆ ಬರೆದೆ.
ನಿರೀಕ್ಷೆಯಂತೆಯೇ ಯಶೋಧಾ ಫೇಲ್ ಆಗಿದ್ದಳು.
ಅದರ ಪರಿಣಾಮವಾಗಿ ಜಾಣೆಯಾಗಿದ್ದ ಅವಳ ಓದು ಅಲ್ಲಿಗೇ ನಿಂತಿತು.ಅವಳು ಮುಂದೆ ಓದಲಿಲ್ಲ.
ನಂತರ ದೊಡ್ಡವಳಾಗಿ ಮದುವೆಯಾದ ನಂತರ ಕಾಸಗಿಯಾಗಿ ಕಟ್ಟಿ ಎಸ್ ಎಸ್ ಎಲ್ ಸಿ ಪಿಯುಸಿ ಡಿಗ್ರಿ ಮಾಡಿದ್ದಾಳೆ.
ಇದೇ ರೀತಿಯಲ್ಲಿ ನಾನು ಒಂಬತ್ತನೇ ತರಗತಿ ಓದುತ್ತಿರುವಾಗ ರವೀಂದ್ರ ಎಂಬ ಹುಡುಗನಿಗೂ ಆರೋಗ್ಯ ಸಮಸ್ಯೆ ಬಂದುಪರೀಕ್ಷೆ ಬರೆಯಲಾಗಲಿಲ್ಲ.ಫೇಲಾದ ಕಾರಣ ನಂತರ ಅವನೂ ವಿದ್ಯಾಭ್ಯಾಸ ಮುಂದುವರಿಸಲಿಲ್ಲ
ಈಗ ಒಂದರಿಂದ ಒಂಬತ್ತರ ತನಕ ಫೇಲ್ ಮಾಡುದೇ ಇಲ್ಲ.ಹಾಗಾಗಿ ನಮ್ಮಷ್ಟು ಆತಂಕ ಈಗಿನಮಕ್ಕಳಿಗೆ ಇರಲಾರದೋ ಏನೋ
ನನಗೆ ಈಗ ನಗು ಬರುವ ವಿಚಾರ ಒಂದಿದೆ.ನಾನು ಸಾಮಾನ್ಯವಾಗಿ ತರಗತಿಯಲ್ಲಿ ಮೊದಲ ಇಲ್ಲವೇ ಎರಡನೇ Rank ತೆಗೆಯುತ್ತಿದ್ದೆ.ನನ್ನನ್ನೂ ಫೇಲ್ ಮಾಡಿದರೆ ಮತ್ತೆ ಶಿಕ್ಷಕರು ಎಂತ ಮಾಡುದು ? ಪಾಠ ಮಾಡಲು ವಿದ್ಯಾರ್ಥಿಗಳು ಬೇಡವೇ?
ಆದರೆ ನನಗೆ ಆಗ ಈ ವಿಚಾರ ಎಲ್ಲ ಗೊತ್ತಿರಲಿಲ್ಲ.ಇತರ ಸಾಮಾನ್ಯ ಮಾರ್ಕ್ಸ್ನ ವಿದ್ಯಾರ್ಥಿಗಳಂತೆ ಪಾಸ್ ಫೇಲಿನ ದಿನವನ್ನು ಆತಂಕದಿಂದ ಎದುರು ನೋಡುತ್ತಿದ್ದೆ.
ಎಪ್ರಿಲ್ ಹತ್ತನೆಯ ತಾರೀಕಿನಂದು ಎಲ್ಲ ದೇವರುಗಳೂ ನೆನಪಿಗೆ ಬರ್ತಿದ್ದರು.ಅವರನ್ನೆಲ್ಲ ನೆನೆದು ನನ್ನನ್ನು ಪಾಸು ಮಾಡಿಸು ಎಂದು ಬೇಡಿಕೊಳ್ಳುತ್ತಿದ್ದೆ
ಎಂದಿಗಿಂತ ಬೇಗನೆ ಎದ್ದು ದೇವರಿಗೆ ಹೆಚ್ಚು ಹೂ ಕೊಯ್ದು ಇಡುತ್ತಿದ್ದೆ.ನಂತರ ಸ್ನಾನ ಮಾಡಿ ದೇವರಿಗೆ ಹೊಡಾಡಿ( ನಮಸ್ಕರಿಸಿ) ಶಾಲೆಗೆ ಹೋಗುತ್ತಿದ್ದೆ.ಅಲ್ಲಿ ಬೋರ್ಡ್ ನಲ್ಲಿ ಫೇಲಾದವರ ಹೆಸರನ್ನು ಹಾಕ್ತಾ ಇದ್ದರು.
ಶಾಲೆ ಸಮೀಪಿಸಿದಂತೆಲ್ಲ ಎದೆ ಇತರರಿಗೆ ಕೇಳುವಷ್ಡು ದೊಡ್ಡದಾಗಿ ಡಬ್ ಡಬ್ ಬಡಿಯುತ್ತಾ ಇತ್ತು.ಹೇಗೋ ಹೋಗಿ ಫೇಲಾದವರ ಲಿಸ್ಟ್ ಅನ್ನು ಎರಡೆರಡು ಸಲ ಓದಿ ನನ್ನ ಹೆಸರು ಅದರಲ್ಲಿ ಇಲ್ಲದಿರುವುದನ್ನು ನೋಡಿ ಖಚಿತ ಗೊಳಿಸಿ ಬದುಕಿದೆಯಾ ಬಡಜೀವವೇ..ನಾನು ಪಾಸು ಎಂದು ಕುಣಿದಾಡಿಕೊಂಡು ಮನೆಗೆ ಬರ್ತಾ ಇದ್ದೆ.ಪಾಸಾದ ಇತರರೂ ಹೀಗೇ ಸಂಭ್ರಮದಿಂದ ಜೊತೆಯಾಗುತ್ತಿದ್ದರು.
ಫೇಲ್ ಆದವರು ಬಿಕ್ಕಿ ಬಿಕ್ಕಿ ಅಳ್ತಾ ಇದ್ದದ್ದು ಈಗಲೂ ನನ್ನ ಕಣ್ಣಿಗೆ ಕಟ್ತಿದೆ.ಅವರ ಬಗ್ಗೆ ನನಗೆ ಪಾಪ ಎನಿಸುತ್ತಿತ್ತು.ಯಾಕೆಂದರೆ ಫೇಲಾದ ಮಕ್ಕಳಿಗೆ ಮನೆಯಲ್ಲು ಕೂಡ ಪೆಟ್ಡು ಕಾದಿರ್ತಾ ಇದ್ದದ್ದು ನನಗೆ ಗೊತ್ತಿತ್ತು
ಇನ್ನು ಹತ್ತನೇ ತರಗತಿಯ ಫಲಿತಾಂಸದ ದಿನದ ಬಗ್ಗೆ ಹೇಳುದೇ ಬೇಡ..ಅಷ್ಡು ಆತಂಕದ ಕ್ಷಣಗಳವು.ಆ ಬಗ್ಗೆ ಇನ್ನೊಂದಿನ ಬರೆಯುವೆ
ಡಾ.ಲಕ್ಷ್ಮೀ ಜಿ ಪ್ರಸಾದ್
No comments:
Post a Comment