ವಿಶ್ವ ರಂಗಭೂಮಿ ದಿನಾಚರಣೆಯ ಶುಭಾಶಯಗಳು
ನನ್ನ ಮೊದಲ ನಾಟಕ ಸುಬ್ಬಿ ಇಂಗ್ಲಿಷ್ ಕಲ್ತದು.
ಇದು ಹವ್ಯಕ ಕನ್ನಡದ ಮೊದಲ ನಾಟಕಕಾರ್ತಿ ಎಂಬ ಐತಿಹಾಸಿಕ ಗರಿಮೆಯನ್ನು ಕೂಡ ನನಗೆ ತಂದು ಕೊಟ್ಟಿದೆ.
ತೀರ ಸಣ್ಣ ವಯಸ್ಸಿನಲ್ಲಿ( ಏಳನೆಯ ತರಗತಿಯಲ್ಲಿ ರಚಿಸಿ ಎಂಟನೆಯ ತರಗತಿಯಲ್ಲಿ) ಅಭಿನಯಿಸಿ ಬಹುಮಾನ ಪಡೆದ ನಾಟಕವೊಂದು ಮಹಿಳೆ ರಚಿಸಿದ ಹವ್ಯಕ ಕನ್ನಡದ ಮೊದಲ ನಾಟಕವಾಗಬಹುದೆಂಬ ಊಹೆಯನ್ನು ಕೂಡ ಮಾಡಲು ನನಗೆ ಅಸಾಧ್ಯವಾಗಿತ್ತು .
ಗಡಿನಾಡಿನ ಕನ್ನಡತಿಯಾಗಿ ತುಸು ಹೆಚ್ಚೇ ಎನಿಸುವಷ್ಡು ಕನ್ನಡಾಭಿಮಾನದ ಜೊತೆಗೆ ಹುಡುಗಿಯರನ್ನು ಮುಂದೆ ಓದಿಸುವುದಿಲ್ಲವೆಂಬ ಆತಂಕದ ನಡುವೆ ಹುಟ್ಟಿದ ಹಾಸ್ಯಮಯ ನಾಟಕವದು.
ಮೂವತ್ತೇಳು ವರ್ಷಗಳ ಹಿಂದೆ ನಾನು ಸಾಹಿತ್ಯ ಲೋಕಕ್ಕೆ ಪ್ರವೇಶ ಮಾಡಿದ್ದು ಸುಬ್ಬಿ ಇಂಗ್ಲಿಷ್ ಕಲ್ತದು ನಾಟಕದ ಮೂಲಕ .
ಅದು ವಾಣಿವಿಜಯ ಪ್ರೌಢಶಾಲೆಯಲ್ಲಿ ಯುವಜನೋತ್ಸದ ಸ್ಪರ್ಧೆಯಲ್ಲಿ ಮೊದಲ ಬಾರಿ ವೇದಿಕೆಗೆ ಬಂತು ಮತ್ತು ನಮಗೆ ಮೊದಲ ಬಹುಮಾನವನ್ನು ತಂದುಕೊಟ್ಟಿತು
ಎಂಬತ್ತರ ದಶಕದ ಆ ಕಾಲದಲ್ಲಿ ನಾಟಕ ಮಾಡಲು ಹುಡುಗಿಯರಿಗೆ ಅಷ್ಟೇನೂ ಪೂರಕವಾದ ವಾತಾವರಣ ಇರಲಿಲ್ಲ ನಾನು ನನ್ನ ನಾಟಕದಲ್ಲಿ ಅಭಿನಯಿಸಲು ಅನೇಕ ಹುಡುಗಿಯರಿಗೆ ದಮ್ಮಯ್ಯ ಹಾಕಬೇಕಾಗಿ ಬಂದಿತ್ತು ಸ್ಟೇಜ್ ಏರುದು ಹುಡುಗಿಯರಿಗೆ ಘನತೆಗೆ ಧಕ್ಕೆ ತರುವ ವಿಚಾರವಾಗಿತ್ತು.
ಹಾಗಾಗಿ ಸುಮಂಗಲ ಉಮಾ ,ವಿಜಯಾ ನಿಶಾ ಮೊದಲಾದ ಜಾಣ ಹುಡುಗಿಯರಾರೂ ಮುಂದೆ ನಾಟಕದಲ್ಲಿ ಭಾಗವಹಿಸಲು ಮುಂದೆ ಬರಲಿಲ್ಲ
ಅಂತೂ ಇಂತೂ ನನ್ನ ಹಾಗೆ ತುಸು ಗಂಡು ಬೀರಿಗಳಾಗಿದ್ದ ಶೋಭಾ ಹೇಮಾ ಮೊದಲಾದ ಆರೇಳು ಹುಡುಗಿಯರನ್ನು ಮನವೊಲಿಸಿ ನಾಟಕ ಸ್ಪರ್ಧೆಗೆ ಹೆಸರು ಕೊಟ್ಟು ತಯಾರಾದೆವು
ತಯಾರಾಗಲು ನಮಗೆ ಶಾಲೆಯ ಅವಧಿಯಲ್ಲಿ ಸಮಯ ಇಲ್ಲ.ತರಗತಿ ತಪ್ಪಿಸಿ ತಾಲೀಮು ನಡೆಸುವ ಕಲ್ಪನೆ ಕೂಡ ಇಲ್ಲದ ಕಾಲವದು..
ಸ್ಥಳವಾದರೂ ಇದೆಯೇ ? ಅದೂ ಇಲ್ಲ.ನಾಲ್ಕು ಗಂಟೆಗೆ ಶಾಲೆ ಮುಗಿಯುತ್ತಿತ್ತು.ನಂತರ ಎಲ್ಲ ತರಗತಿಗಳ ಬಾಗಿಲು ಮುಚ್ಚಿ ಬೀಗ ಹಾಕುತ್ತಿದ್ದರು.ನಂತರ ಶಾಲಾ ಅವರಣದಲ್ಲಿ ಇರುವಂತೆ ಇರಲಿಲ್ಲ.
ನಾನು ಹೇಗೋ ಈ ಸಹಪಾಠಿಗಳ ಮನ ಒಲಿಸಿ ಶಾಲೆಯಿಂದ ನಮ್ಮ ಮನೆಗೆ ಹೋಗುವ ದಾರಿಯಲ್ಲಿದ್ದ ಬಯಲು ಪ್ರದೇಶದಲ್ಲಿ ತಾಲೀಮು ನಡೆಸುತ್ತಿದ್ದೆ.
ನಾಟಕ ಬರೆದದ್ದು ನಾನೇ ಆದಕಾರಣ ಎಲ್ಲ ಪಾತ್ರಗಳ ಸಂಭಾಷಣೆ ನನಗೆ ಬಾಯಿಗೆ ಬರುತ್ತಿತ್ತು.
ಎಲ್ಲರ ಸಂಭಾಷಣೆಯನ್ನು ಪ್ರತ್ಯ ಪ್ರತ್ಯೇಕವಾಗಿ ಬರೆದುಕೊಟ್ಟಿದ್ದೆ
ನಂತರ ಅದನ್ನು ಹೇಳುತ್ತಾ ಅಭಿನಯ ಮಾಡಿ ತೋರಿಸುತ್ತಿದ್ದೆ.
ಅದನ್ನವರು ಅನುಸರಿಸುತ್ತಿದ್ದರು.
ಈ ನಡುವೆ ಯಾರಾದರೂ ಜನರು ಅ ದಾರಿಯಲ್ಲಿ ಬಂದರೆ ಅವರು ಕಣ್ಣಿಗೆ ಕಾಣದಷ್ಟು ದೂರದವರೆಗೆ ಸುಮ್ಮನಿರುತ್ತಿದ್ದೆವು.
ಬಯಲೇ ನಮಗೆ ಅಭಿನಯ ಕಲಿಸುವ ರಂಗ ಭೂಮಿಯಾಗಿತ್ತು.
ನಿರ್ದೇಶನ ಮಾಡುವವರು ಯಾರೂ ಇರಲಿಲ್ಲ.
ಹೋಗಲಿ..ನಾಟಕ ನೋಡಿ ಕೂಡಾ ನಮಗೆ ಗೊತ್ತಿರಲಿಲ್ಲ.
ಆದರೆ ನಮಗೆಲ್ಲ ಯಕ್ಷಗಾನ ನೋಡಿ ಅಭಿನಯದ ಮೂಲ ಮಂತ್ರ ತಿಳಿದಿತ್ತು
ಶುದ್ಧ ಭಾಷೆಯ ಬಳಕೆ ತಿಳಿದಿತ್ತು.
ಈ ನಡುವೆ ಮನೆಗೆ ಸರಿಯಾದ ಸಮಯಕ್ಕೆ ಬಾರದೆ ಇದ್ದಾಗ ಮಗಳಂದಿರನ್ನು ಹುಡುಕಿಕೊಂಡು ಬಂದು ಶಾಲಾ ಅವರಣದಲ್ಲಿಯೂ ಕಾಣದೆ ಆತಂಕದಿಂದ ಬಂದವರಿಗೆ ಬಯಲಿನಲ್ಲಿ ನಮ್ಮನಾಟಕದ ಅಭ್ಯಾಸ ನೋಡಿ ಸಿಟ್ಟು ನೆತ್ತಿಗೇರಿ ಎರಡೆರಡು ಕೊಟ್ಟು ಹೆತ್ತವರು ಎಳಕೊಂಡು ಹೋಗಿದ್ದರು.ಅದೃಷ್ಟಕ್ಕೆ ಅವರವರ ಮಕ್ಕಳಿಗೆ ಮಾತ್ರ ಪೆಟ್ಟು ಬಿದ್ದಿತ್ತು.
ಅವರುಗಳಿಗೆ ಎರಡೆರಡು ಬಿಟ್ಟು ಎಳೆದೊಯ್ಯುವಾಗ ಬಲಿ ಕೊಡಲು ತಗೊಂಡು ಹೋಗುವ ಕುರಿಯ ಮಾದರಿಯಲ್ಲಿ ಅವರು ಅಳುತ್ತಾ ನಮ್ಮನ್ನು ದಯನೀಯವಾಗಿ ನೋಡುತ್ತಿದ್ದರು.
ಅವರು ನಮಗೂ ಎರಡೆರಡು ಕೊಟ್ಟರೆ ಎಂಬ ಭಯ ನಮಗೂ ಕಾಡುತ್ತಿತ್ತು.ಅಲ್ಲಿಂ ಓಡಿ ಬಿಡಬೇಕು ಅನಿಸ್ತಾ ಇತ್ತು.ಆದರೆ ಓಡಲೂ ಸಾಧ್ಯವಾಗದೆ ಕಾಲು ಥರಥರನೆ ನಡುಗುತ್ತಿತ್ತು.ಜೊತೆಗೆ ನನ್ನಿಂದಾಗಿ ಅನ್ಯಾಯವಾಗಿ ಅವರು ಪೆಟ್ಟು ತಿನ್ನಬೇಕಾಗಿ ಬಂತಲ್ಲ ಎಂಬ ಅಪರಾಧಿ ಪ್ರಜ್ಞೆ ಬೇರೆ ನನ್ನನ್ನು ಕಾಡುತ್ತಿತ್ತು
ಹೀಗೆ ಎಳೆದೊಯ್ಯಲ್ಪಟ್ಟವರು ಮತ್ತೆ ನಾಟಕಾಭ್ಯಾಸಕ್ಕೆ ಬರ್ತಿರಲಿಲ್ಲ.ಸುಮಾರಾಗಿ ಸಂಭಾಷಣೆ ಬಾಯಿ ಪಾಠವಾಗಿ ಒಂದು ಹದಕ್ಕೆ ಬಂದ ನಾಟಕದ ಅಭ್ಯಾಸಕ್ಕೆ ಮತ್ತೆ ಬೇರೆಹುಡುಗಿಯರನ್ನು ಹೇಗೋ ಪುಸಲಾಯಿಸಿ ಒಪ್ಪಿಸಬೇಕಿತ್ತು
ನನ್ನ ಮನೆ ತುಂಬಾ ದೂರದಲ್ಲಿರುವ ಕಾರಣ ಹೆತ್ತವರು ಹುಡುಕಿಕೊಂಡು ಬಂದು ಎಳೆದೊಯ್ಯುವ ಸಾಹಸ ಮಾಡಿರಲಿಲ್ಲ
ಅಲ್ಲದೇ ಅಮ್ಮನಿಗೆ ನಮ್ಮ ನಾಟಕ ಅಭ್ಯಾಸವನ್ನು ಸಂಜೆ ಹೊತ್ತು ಮಾಡುವ ಬಗ್ಗೆ ನಾನು ತಿಳಿಸಿದ್ದೆ.
ಹಾಗಾಗಿ ನಾನು ಬಚಾವಾಗಿದ್ದೆ.
ನಾಟಕಕ್ಕೆ ಎರಡು ದಿನ ಇರುವಾಗ ಪ್ರಧಾನ ಪಾತ್ರ ಸುಬ್ಬಿಯನ್ನು ಮಾಡಲು ತಯಾರಾಗಿದ್ದ ಸಹಪಾಠಿ ಮನೆಯವರಿಗೆ ನಮ್ಮ ನಾಟಕದ ಸಂಗತಿ ಗೊತ್ತಾಗಿ ಅವಳಿಗೆ ಚೆನ್ನಾಗಿ ಎರಡು ಕೊಟ್ಟರು .ಹಾಗಾಗಿ ಮುಖ್ಯ ಪಾತ್ರ ಸುಬ್ಬಿಯ ಪಾತ್ರಕ್ಕೆ ಈಗ ಬೇರೆ ಹುಡುಗಿಯನ್ನು ಹುಡುಕಬೇಕಿತ್ತು. ಅದೃಷ್ಟವಶಾತ್ ಸ್ನೇಹಿತರ ಪಾತ್ರ ಮಾಡುತ್ತಿದ್ದ ಹೇಮಾಳಿಗೆ ಸುಬ್ಬಿಯ ಸಂಭಾಷಣೆ ಬಾಯಿ ಪಾಠ ಬರುತ್ತಿತ್ತು ಹಾಗಾಗಿ ಸ್ನೇಹಿತನ ಪಾತ್ರಕ್ಕೆ ಮಾಡಲು ಇನ್ನೊಬ್ಬ ಹುಡುಗಿ ತ್ರಿವೇಣಿ ( ನನಗಿಂತ ಚಿಕ್ಕವಳು ಬಹುಷ ಆರನೇ ತರಗತಿ ಇದ್ದಿರ ಬೇಕು ನಾನು ಎಂಟನೇ ತರಗತಿಯಲ್ಲಿದ್ದೆ,ಈಗ ನಮ್ಮೂರಿನ ಸುಂಕದ ಕಟ್ಟೆ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಾ ಶಿಕ್ಷಕಿಯಾಗಿದ್ದಾರೆ ) ಸಿದ್ದಳಾದಳು
ಅಂತೂ ಸ್ಪರ್ಧೆ ಯ ದಿನ ಬಂತು ನಾಟಕ ಆರಂಭವಾಯಿತು ಒಂದು ದೃಶ್ಯದಲ್ಲಿ ಸುಬ್ಬನ ಸ್ನೇಹಿತರು ಬರ್ತಾರೆ ಆಗ ಸುಬ್ಬ ಸ್ನೇಹಿತರನ್ನು welcome my friends please be seated ಅಂತ ಕುರ್ಚಿ ತೋರಿಸುತ್ತಾನೆ. ಅಲ್ಲಿ ಒಂದೇ ಕುರ್ಚಿ ಇತ್ತು ಎರಡು ಕುರ್ಚಿ ಇಡಲು ನನಗೆ ಮರೆತು ಹೋಗಿತ್ತು. ಇಬ್ಬರು ಸ್ನೇಹಿತರು ಕೂಡ ಒಂದೇ ಕುರ್ಚಿಯಲ್ಲಿ ಕುಳಿತರು.ನಂತರ ಎದ್ದು ಮಾತನಾಡುವ ಸನ್ನಿವೇಶ ಇಬ್ಬರೂ ಒಂದೇ ಕುರ್ಚಿಯಲ್ಲಿ ಕುಳಿತು ಟೈಟ್ ಆಗಿ ಇವರಿಗೆ ಏಳಲಾಗುತ್ತಿಲ್ಲ ಸಭೆಯಲ್ಲಿ ನಗು ಈ ಸ್ನೇಹಿತ ಪಾತ್ರಧಾರಿಗಳು ನಗಾಡುತ್ತಿವೆ ನಾನೋ ಏನು ಮಾಡಬೇಕೆಂದು ತಿಳಿಯದೆ ಕಂಗಾಲು! ತಕ್ಷಣವೇ ಎಚ್ಚತ್ತುಕೊಂಡು ಕುರ್ಚಿ ಹಿಂಭಾಗದಿಂದ ಅದನ್ನು ಗಟ್ಟಿಯಾಗಿ ಹಿಡಿದು ಒಬ್ಬಳ ಬೆನ್ನಿಗೆ ಕುಟ್ಟಿದೆ .ಈ ಗೊಂದಲದ ನಡುವೆಯೂ ಅವಳು ಉರು ಹೊಡೆದ ಸಂಭಾಷಣೆ ಯನ್ನು ಚಾಚೂ ತಪ್ಪದೆ ಹೇಳಿದ್ದಳು ಅದೂ ಅವರು ವಿದೇಶದಿಂದ ಬಂದ ಸ್ನೇಹಿತರಾಗಿದ್ದು ಸಂಭಾಷಣೆ ಇಂಗ್ಲಿಷ್ ನಲ್ಲಿ ಮಾತನಾಡಬೇಕಿತ್ತು.ಆದರೂ ಚಾಚೂ ತಪ್ಪದೆ ಒಂದಿನಿತು ತಪ್ಪಿಲ್ಲದೆ ಅಭಿನಯಿಸಿದ್ದರು.
ನಾಟಕ ಮುಂದುವರಿಯಿತು. ಮುಗಿದಾಗ ಕೇಳಿಸಿದ ಅಬ್ಬರದ ಚಪ್ಪಾಳೆ ಸದ್ದು ಇನ್ನೂ ನನ್ನ ಕಿವಿಯಲ್ಲಿ ಅನುರಣಿಸುತ್ತಿದೆ.
ಆ ದಿನ ಕೊನೆಗೆ ಸಮಾರೋಪ ಸಮಾರಂಭಕ್ಕೆ ಅತಿಥಿಗಳಾಗಿ ವಾಣೀ ವಿಜಯ ಪ್ರೌಢ ಶಾಲೆಯನಿವೃತ್ತ ಸಿಕ್ಷಕರಾದ ಕವಿ ವಿಶ್ವೇಶ್ವರ ಭಟ್ ಬಂದಿದ್ದರು.ಬಾಷಣ ಮಾಡುತ್ತಾ ನಮ್ಮ ನಾಟಕದ ಬಗ್ಗೆ ಮೆಚ್ಚುಗೆಯನ್ನು ಸೂಸಿ ಸುಬ್ಬನ ಪಾತ್ರ ಮಾಡಿದ ಹುಡುಗಿಗೆ ಬಹಳ ಒಳ್ಳೆಯ ಭವಿಷ್ಯವಿದೆ ಎಂದು ತಮ್ಮ ದೀರ್ಘ ಅನುಭವದ ಹಿನ್ನೆಲೆಯಲ್ಲಿ ಭವಿಷ್ಯ ನುಡಿದಿದ್ದರು.
ಕೂಸು ಎಂತ ಓದಿದರೆಂತ ಒಲೆ ಬೂದಿ ಒಕ್ಕುದು ತಪ್ಪ ( ಹುಡುಗಿ ಏನು ಓದಿದರೇನು ? ಒಲೆಯ ಬೂದಿ ಗೋರುವುದು ತಪ್ಪದು) ಎಂಬ ಗಾದೆ ಮಾತೇ ಪ್ರಚಲಿತವಾಗಿದ್ದ ಕಾಲದ ನಾನು ಹಿರಿಯ ಶಿಕ್ಷಕರಾದ ವಿಶ್ವೇಶ್ವರ ಭಟ್ಟರ ಮಾತನ್ನು ನಂಬಿದೆ.ಹೌದು..ಸುಬ್ಬನಪಾತ್ರ ಮಾಡಿದ ನನಗೆ ಒಳ್ಳೆಯಭವಿಷ್ಯವಿದೆ." ಎಂದು ನಂಬಿದೆ.ಹೆಣ್ಣಾಗಿ ಹುಟ್ಟಿದ ನಾನು ಒಲೆ ಬೂದಿ ಗೋರುವುದಕ್ಕೆ ಮಾತ್ರ ಮೀಸಲಾಗಲಾರೆ ಎಂದು ನಿರ್ಧರಿಸಿದೆ.
ಅವರು ನುಡಿದಂತೆ ಬಹಳ ದೊಡ್ಡ ಭವಿಷ್ಯವೇನೂ ನನ್ನ ಪಾಲಿಗೆ ಸಿಗಲಿಲ್ಲ.ಆದರೂ ನಾನು ನನ್ನದೇ ಆದ ಗುರುತನ್ನು ಹೊಂದಿರುವೆ ಎಂಬ ಆತ್ಮ ತೃಪ್ತಿ ನನಗಿದೆ.
ಅದಕ್ಕೆ ಮೊದಲು ನಾನು ಮೀಯಪದವು ವಿದ್ಯಾವರ್ಧಕ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ದಲ್ಲಿ ಯಮ ಗರ್ವ ಭಂಗ ನಾಟಕದ ಬಲರಾಮನಾಗಿ ಅಭಿನಯಿಸಿದ್ದೆ ಆದರೆ ಅದು ಗುರುಗಳ ನಿರ್ದೇಶನದಂತೆ ಅಭಿನಯಿಸಿದ ನಾಟಕ
ಅದರ ನಂತರದ ವರ್ಷ ವಾಣಿವಿಜಯ ಶಾಲೆಯಲ್ಲಿ ಮಾಡಿದ್ದು ನನ್ನ ಸ್ವಂತ ರಚನೆಯ ನಾಟಕ ಅಭಿನಯ ನಿರ್ದೇಶನ ರಂಗ ಸಜ್ಜಿಕೆ ? ಎಲ್ಲವೂ ನನ್ನದೇ .ಈ ನಾಟಕ ಅನೇಕ ರಂಗ ಪ್ರದರ್ಶನ ಕಂಡಿದ್ದು ನಾನೂ ಮೂರು ನಾಲ್ಕು ಬಾರಿ ಅಭಿನಯಿಸಿರುವೆ ಆದರೆ ಮೊದಲನೆಯ ಅನುಭವ ಮಾತ್ರ ಚಿರಸ್ಥಾಯಿ ಅಲ್ಲವೇ ?
No comments:
Post a Comment