Wednesday, 23 December 2020

ನನಗೂ ಆತ್ಮವಿದೆ

 ಹೆಚ್ಚಿನ ಬಡ್ಡಿಯ ಆಸೆಗೆ ಹೋದರೆ ಬಡ್ಡಿ ಮಾತ್ರವಲ್ಲ‌ ಅಸಲನ್ನು ಕೂಡಾ ಕಳೆದುಕೊಳ್ಳಬೇಕಾಗುತ್ತದೆ


ಎರಡು ವರ್ಷದ ಮೊದಲು‌ ಐ ಎಂ ಎ ವಂಚನೆ ಬೆಳಕಿಗೆ ಬಂದ ಸಂದರ್ಭದಲ್ಲಿ  ನೆಲಮಂಗಲ ಕಾಲೇಜಿನ ಸಹೋದ್ಯೋಗಿಗಳಾದ ಸಯೀದಾ ಮೇಡಂ ಮತ್ತು ಜಗದೀಶ್ ಮುಂದಿನದು ಕಣ್ವ ಎಂದು ಭವಿಷ್ಯ ನುಡಿದಿದ್ದರು..

ಈಗ ಹಾಗೆಯೇ ಆಗಿದೆ..

ಪದೇ ಪದೇ ವಂಚನೆಯ ಪ್ರಕರಣಗಳು ಕಾಣುತ್ತಿದ್ದರೂ ಮತ್ತೆ ಮತ್ತೆ ಅತಿಯಾಸೆಗೆ ಬಲಿಯಾಗಿ ಇದ್ದುದನ್ನು ಜನ ಕಳೆದುಕೊಳ್ಳುತ್ತಾರೆ

ಈ ವಿಚಾರ ಬಂದಾಗ ಇನ್ನೊಂದು ವಿಷಯ ನೆನಪಾಯ್ತು

ಬಹುಶಃ 2001-2002 ನೇ ಇಸವಿ ಎಂದು ನೆನಪು

ಪ್ರಸಾದ್ ಮಣಿಪಾಲ ಪೈನಾನ್ಸ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು.


ಕಂಪೆನಿಯ ಆಗು ಹೋಗುಗಳನ್ನು ಗಮನಿಸುತ್ತಿದ್ದ ಅವರಿಗೆ ಅಪಾಯದ ಸೂಚನೆ ಸಿಕ್ಕಿತ್ತು.

ಹಾಗಾಗಿ ಅವರ ಮೇಲಿನ ನಂಬಿಕೆಯಲ್ಲಿ ಮಣಿಪಾಲ್ ಪೈನಾನ್ಸ್ ನಲ್ಲಿ ದುಡ್ಡು ಕಟ್ಟಿದವರಿಗೆ ತೆಗೆಸಿಕೊಟ್ಟರು.


ಇನ್ನು ಅನೇಕ ಪರಿಚಿತರು ಅವರಾಗಿಯೇ ಬಂದು ಕಟ್ಟಿದವರಿದ್ದರು.ಅವರುಗಳಿಗೂ ಸೂಕ್ಷ್ಮವಾಗಿ ಠೇವಣಿ ಹಿಂತೆಗೆಯುವಂತೆ ಸಲಹೆ ನೀಡಿದರು.


ನನ್ನ ಮಾವ ಮೈದುನರೂ ಕೂಡ ಮಣಿಪಾಲ್ ಪೈನಾನ್ಸ್ ಹಾಗೂ ಮಣಿಪಾಲ್ ಅಪೆಕ್ಸ್ ? ನಲ್ಲಿ ದುಡ್ಡಿಟ್ಟದ್ದು ನಮಗೆ ಗೊತ್ತಿತ್ತು.ಹಾಗಾಗಿ ಅವರಿಗೂ ಹಿಂತೆಗೆಯುವಂತೆ  ಪ್ರಸಾದ್ ಹೇಳಿದ್ದರು.ಇನ್ನು ಅನೇಕ ಬಂಧುಗಳಿಗೂ ಹೇಳಿದ್ದರು.

ಅವರೆಲ್ಲ ಅವರು ದುಡ್ಡು ಇಟ್ಟಿದ್ದ ಮಣಿಪಾಲ್ ಪೈನಾನ್ಸ್,ಅಪೆಕ್ಸ್ ನ ಬ್ರಾಂಚ್ ಮ್ಯಾನೇಜರ್ ಅಲ್ಲಿ,ಇದು ಮುಳುಗುತ್ತದೆಯಂತೆ ಹೌದೇ ಎಂದು ಹೋಗಿ ಕೇಳಿದರು.

ಹೌದೆಂದು ಹೇಳಿದರೆ ಅವರುಗಳ ಕೆಲಸ ಉಳಿಯುತ್ತದಾ? ಯಾರಾದರೂ ಹಾಗೆ ಹೇಳುವರೇ? ಛೆ..ಛೆ ಇಲ್ಲ ಎಂದು ಹೇಳಿದರು.


ಇತ್ತ ಪ್ರಸಾದ್ ಕೆಲಸಕ್ಕೆ ರಾಜಿನಾಮೆ ನೀಡಿದರು.

ಅಗ ಮನೆ ಮಂದಿ ಬಂಧು ಬಳಗದವರೆಲ್ಲ‌ ಅವನನ್ನು ಕೆಲಸದಿಂದ ತೆಗೆದಿರಬೇಕು.ಅದಕ್ಕೆ ಅ ಕಂಪೆನಿ ಮುಳುಗುತ್ತದೆ ಎಂದಿದ್ದಾನೆ..ಪೈಗಳು ಹಾಗೆಲ್ಲಜನರಿಗೆ ಮೋಸ ಮಾಡುವವರಲ್ಲ ಎಂದು ನಮ್ಮ ಕಿವಿಗೆ ಬೀಳುವಂತೆ ಆಡಿಕೊಂಡರು.

ರಾಜಿನಾಮೆ ನೀಡಿದ ತಿಂಗಳೊಳಗೆ ಪ್ರಸಾದ್ ಗೆ ಬರಬೇಕಾದ ಪಿ ಎಪ್ ಇನ್ನಿತರ ದುಡ್ಡು ಕೈ ಸೆರಿತು.

ಅದೇ ಸಮಯದಲ್ಲಿ ಮಣಿಪಾಲ್ ಪೈನಾನ್ಸ್ ನಲ್ಲಿ ರೀಜನಲ್ ಮ್ಯಾನೇಜರರಾಗಿದ್ದ ನನ್ನ ತಂದೆಯ ಶಿಷ್ಯ ವರ್ಗದವರೊಬ್ಬರು ನಮ್ಮ ತಂದೆ ಮನೆಗೆ ಬಂದಿದ್ದರು.


ಆಗ ನನ್ನ ಅಮ್ಮಮಣಿಪಾಲ್ ಪೈನಾನ್ಸ್ ಮುಳುಗುವ ಲಕ್ಷಣ ಉಂಟಂತೆ ಅಲ್ವಾ? ನನ್ನ ಅಳಿಯ ಹಾಗಾಗಿ ರಾಜಿನಾಮೆ ಕೊಟ್ಟಿದ್ದಾನೆ ಎಂದರು.

ಆಗ ಅವರು ಇಲ್ಲವೇ ಇಲ್ಲ ಎಂದು ಪ್ರಸಾದರಿಗೆ ಕೆಲಸ ಹೋದದ್ದು ಎಂಬಂತೆ ನಗಾಡಿದರಂತೆ

ಇದಾಗಿ ಎರಡು ತಿಂಗಳೊಳಗೆ ಒಂದಿನ ಇದ್ದಕ್ಕಿದ್ದಂತೆ ಯಾವ ಸೂಚನೆಯೂ ಇಲ್ಲ ಮಣಿಪಾಲ್ ಪೈನಾನ್ಸ್ ಬಾಗಿಲು ಹಾಕಿತ್ತು.

ಠೇವಣಿ ಇಟ್ಟವರಿಗೆ ಪಂಗ ನಾಮ.

ಜೊತೆಗೆ ಅಲ್ಲಿ ಕೆಲಸ ಮಾಡುತ್ತಿದ್ದವರಿಗೆ ಕೆಲಸ ಹೋಯಿತು ಜೊತೆಗೆ  ಪಿಎಪ್ ಇನ್ನಿತರ  ದುಡ್ಡೂ ಬರಲಿಲ್ಲ. ಆ ರೀಜನಲ್ ಮ್ಯಾನೇಜರ್ ಗೂ ಕೂಡಾ.


ನಮ್ಮ ಮಾವ ಮೈದುನರಿಗೂ ಹೋಯಿತು.ನಮ್ಮ ಬಂಧುಗಳಲ್ಲಿ ಅನೇಕರು ದುಡ್ಡು ಕಳಕೊಂಡಿದ್ದರು.

ಇಷ್ಟೆಲ್ಲ ಆಗುವಾಗ ಇದರ ಸೂಚನೆ ಆರು ತಿಂಗಳ ಮೊದಲೇ ಪ್ರಸಾದ್ ಗೆ ಹೇಗೆ ಗೊತ್ತಾಯಿತು ಎಂದು ನನಗೆ ಕುತೂಹಲ ಉಂಟಾಯಿತು‌.

ಕೇಳಿದೆ.

" ವೆರಿ ಸಿಂಪಲ್..ದೊಡ್ಡ ದೊಡ್ಡ ವ್ಯಕ್ತಿಗಳಿಗೆ ಯಾವುದೇ ಸರಿಯಾದ ದಾಖಲೆ ಇಲ್ಲದೇ ಕೋಟಿ ಗಟ್ಟಲೆ ಸಾಲ ಕೊಡುತ್ತಿದ್ದರು.ಅದರಲ್ಲಿ ಅರ್ಧಾಂಶ ಮ್ಯಾನೇಜ್ ಮೆಂಟಿನವರ ಮನೆಗೆ ಹೋಗುತ್ತಾ ಇತ್ತು.ಅದು ಹಿಂದೆ ವಸೂಲಿ ಮಾಡಲಿರುವ ಸಾಲವಲ್ಲ.ಕೊಡುದು ಜನರ ದುಡ್ಡು. ಮ್ಯಾನೆಜ್ ಮೆಂಟಿನರ ಮನೆಗೆ ಬರುವ ಅರ್ಧಾಂಶ ದುಡ್ಡು ಅವರ ಸ್ವಂತಕ್ಕೆ.ಇನ್ನರ್ಧ ಸಾಲ ತಗೊಂಡವರಿಗೆ..ಜನರಿಗೆ ಚೆಂಬು " ಎಂಬುದು ಗೊತ್ತಾಗಿ ಬಾಗಿಲು ಹಾಕುವ ಮೊದಲೇ ಕೆಲಸಕ್ಕೆ ರಾಜಿನಾಮೆ ನೀಡಿ ನನಗೆ ಬರಬೇಕಾದ ಎಲ್ಲವನ್ನು ಪಡೆದುಕೊಂಡೆ ಅಷ್ಟೇ ಎಂದರು

ಮತ್ತೇನೋ ಜನರು ದೂರು ಕೊಟ್ಟು ಕೋರ್ಟಿಗೆ ಹೋಗಿದ್ದರು.ದುಡ್ಡು ಸಿಕ್ಕಿತೋ ಏನೋ ಗೊತ್ತಿಲ್ಲ

ಹೆಚ್ಚಿನ ಬಡ್ಡಿಯ ಆಸೆಗೆ ಹೋದರೆ ಬಡ್ಡಿ ಮಾತ್ರವಲ್ಲ‌ ಅಸಲನ್ನು ಕೂಡಾ ಕಳೆದುಕೊಳ್ಳಬೇಕಾಗುತ್ತದೆ ಎಂದು ಜನರಿಗೇಕೆ ಅರ್ತವಾಗುದಿಲ್ಲವೋ ಗೊತ್ತಾಗುತ್ತಿಲ್ಲ.

ವಿದ್ಯಾವಂತರಾದ ಸರ್ಕಾರಿ ಕಾಲೇಜಿನ ಉಪನ್ಯಾಸಕರೇ ಚೀಟಿಗೆ ದುಡ್ಡು ಕಟ್ಟುದನ್ನು ನೋಡಿದ್ದೇನೆ.

ಇನ್ನು ಇತರರನ್ನು ಹೇಳುದೆಂತ? 



Saturday, 12 December 2020

ದೊಡ್ಡವರ ದಾರಿ- ನಿತ್ಯೋತ್ಸಾಹಿ ಶಕುಂತಲಾ ಸಾಂತ್ರಾಯ

 ದೊಡ್ಡವರ ದಾರಿ 


ನನಗೆಂದೂ ಕೆಲಸ ಕಷ್ಟದ್ದು ಎನಿಸಲಿಲ್ಲ ಎಂದ ನಿತ್ಯೋತ್ಸಾಹಿ ಶಕುಂತಲಾ ಶಾಂತ್ರಾಯ


ನನಗೆಂದೂ ಕೆಲಸ ಕಷ್ಟದ್ದು  ಎನಿಸಲಿಲ್ಲ  ಎಂದರು ಅವರು..ಹೌದು ಅದಕ್ಕೆ ಅವರು ವಿಶೇಷ ವ್ಯಕ್ತಿ.

ಶಿಕ್ಷಕರು ವರ್ಗಾವಣೆಯಾಗಿ ಹೋಗುವಾಗ ಮಕ್ಕಳು ಬಿಗಿದಪ್ಪಿ ಹೋಗಬೇಡಿ ಎಂದು ಅತ್ತದ್ದನ್ನು ನಾವುಗಳು ನೋಡಿರ್ತೇವೆ..ನೆಲಮಂಗಲದಿಂದ ವರ್ಗವಾಗಿ ಬೆಂಗಳೂರಿನ ಬ್ಯಾಟರಾಯನಪುರ ಸರ್ಜಾರಿ ಪಿಯು ಕಾಲೇಜಿಗೆ ಬಂದಾಗ ನಮ್ಮ ವಿದ್ಯಾರ್ಥಿಗಳು ಅತ್ತು ನನ್ನನ್ನು ಕಂಗಾಲು ಮಾಡಿದ್ದರು.ಮಕ್ಕಳು ಹಾಗೆಯೇ .ಶಿಕ್ಷಕರನ್ನು ತುಂಬಾ ಹಚ್ಚಿಕೊಳ್ತಾರೆ.ನಾವು ನಮ್ಮ ಅನುಕೂಲಕ್ಕಾಗಿ ವರ್ಗಾವಣೆ ಪಡೆದು  ಬೇರೆಡೆ ಹೋಗುವಾಗ ನಮ್ಮನ್ನು ಬಹಳ ಪ್ರೀತಿಸುವ ಮಕ್ಕಳು ದುಃಖಿಸುತ್ತಾರೆ..ಇದರ ಅನುಭವ ನನ್ನಂತೆ ಅನೇಕ ಶಿಕ್ಷಕರಿಗೆ ಅಗಿರುತ್ತದೆ.


ಆದರೆ ಶಾಲೆಯ ಮುಖ್ಯಸ್ಥರೊಬ್ಬರು ನಿವೃತ್ತರಾದಾಗ ಸಹೋದ್ಯೋಗಿಗಳು ಅತ್ತು ದುಃಖಿಸಿದ  ಪ್ರಕರಣ ಬಹಳ ಅಪರೂಪದ್ದು.ಮುಖ್ಯಸ್ಥರಲ್ಲಿ  ತನ್ನ ಕೈ ಕೆಳಗಿನವರಿಗೆ ವಿನಾಕಾರಣ ತೊಂದರೆ ಕೊಡುವವರೇ ಹೆಚ್ಚು.ಅದರಲ್ಲೂ ನನ್ನಂತೆ ಇತರ ಕ್ಷೇತ್ರಗಳಲ್ಲಿ ಹೆಸರು ಮಾಡುತ್ತಿದ್ದರೆ ಮತ್ಸರ ಪಟ್ಟು ಕಿರುಕುಳ ನೀಡುತ್ತಾರೆ‌

ಆದರೆ ಈ ಮುಖ್ಯಸ್ಥರು ಹಾಗಲ್ಲ..ಪ್ರತಿಬೆ ಯಾರಲ್ಲಿದ್ದರೂ ಗುರುತಿಸುವವರೇ ಆಗಿದ್ದರು‌.ತನ್‌ನ ಸಹೋದ್ಯೋಗಿಗಳನ್ನು ಮನೆಯ ಸದಸ್ಯರಂತೆ ಪ್ರೀತಿಯಿಂದ ಗೌರವದಿಂದ ಕಾಣ್ತಿದ್ದರು.ಅವರೇ ಶಕುಂತಲಾ ಸಾಂತ್ರಾಯ.

ಮಂಗಳೂರಿನ ಚಿನ್ಮಯ ವಿದ್ಯಾಸಂಸ್ಥೆ ಹುಟ್ಟಿ ಅಂದಾಜು ನಲುವತ್ತು ವರ್ಗಳಾಗಿದೆ .

ನಾನು ಅಲ್ಲಿ 2000-2004 ತನಕ ನಾಲ್ಕು ವರ್ಷ ಸಂಸ್ಕೃತ ಶಿಕ್ಷಕಿಯಾಗಿ ಕೆಲಸ ಮಾಡಿದ್ದೆ‌

ಆಗ ಮಂಗಳೂರಿನಲ್ಲಿ ಹೆಚ್ಚು ಶಿಕ್ಷಣ ಸಂಸ್ಥೆಗಳಿರಲಿಲ್ಲ.ಅಲೋಷಿಯಸ್,ಕೆನರಾ,ಅಗ್ನೆಸ್ ಬಹು ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳನ್ನು ಬಿಟ್ಟರೆ ಇವಕ್ಕೆ ಸಡ್ಡು ಹೊಡೆವಂತೆ ತನ್ನದೇ ಆದ ಹೆಜ್ಜೆಗುರುತು ಮೂಡಿಸಿದ ಶಿಕ್ಷಣ ಸಂಸ್ಥೆ ಚಿನ್ಮಯ ಶಾಲೆ.

ಇದನ್ನು ಪ್ರಾರಂಭಿಸಿದವರು ಯಾರೆಂದು ನನಗೆ ಸರಿಯಾಗಿ ಗೊತ್ತಿಲ್ಲ.ಇಲ್ಲಿನ ಅರುಣಾ ಮಿಸ್ ತಿಳಿಸಿದಂತೆ ಯಾವುದೋ ಸೋರುವ ಹಳೆಯ ಕಟ್ಟಡದಲ್ಲಿ ಈ ಶಾಲೆ ಸುರು ಅಗಿತ್ತು.ಮಳೆ ಬರುವಾಗ ಅಲ್ಲಲ್ಲಿ ನೀರು ಸೋರುತ್ತಿತ್ತು.ಆಗ ಶಿಕ್ಷಕರು ಅಲ್ಲೆಲ್ಲ ಬಕೆಟ್ ಪಾತ್ರ ಚೊಂಬು ಇಡುತ್ತಿದ್ದರಂತೆ..ಮಂಗಳೂರಿಗೂ ಮಳೆಗೂ ಬಿಡಲಾಗದ ನಂಟು..ವರ್ಷದ ಆರು ತಿಂಗಳ ಕಾಲ ..

ಸುರಿವ ಮಳೆಯ ನಡುವೆ ಸೋರುವ ಹಳೆಯ ಕಟ್ಟಡದಲ್ಲಿ ಇದ್ದುಕೊಂಡೇ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿದ ಹೆಗ್ಗಳಿಕೆ ಈ ಶಾಲೆಯ ಶಿಕ್ಷಕರದು.

ಈ ಶಾಲೆ ಒಂದು ಟ್ರಸ್ಟ್ ಮೂಲಕ ನಡೆಯುತ್ತಿದೆ.ಟ್ರಸ್ಟ್ ನ ಸಸಸ್ಯರಿಗೇನೂ ಶಾಲೆಯ ಪ್ರಗತಿ ಬಗ್ಗೆ ವೈಯುಕ್ತಿಕ ಕಾಳಜಿ ಇರಲಿಲ್ಲ


ಆದರೂ ಈ ಶಿಕ್ಷಣ ಸಂಸ್ಥೆ ಸ್ವಂತ ಕಟ್ಟಡಕ್ಕೆ ಬರುವಷ್ಟು ಆದಾಯವನ್ನು ಗಳಿಸಿದೆ.ಬಹುಶಃ ಇದಕ್ಕೆ ಜಾಗ ಒದಗಿಸಿದವರು ಗಣೇಶ ಬೀಡಿಯ ಗಣಪತಿ ಪೈ ಗಳಿರಬೇಕು.(ಈ ಬಗ್ಗೆ ಸರಿಯಾಗಿ ಗೊತ್ತಿಲ್ಲ‌)

ಇಲ್ಲಿ ಶಿಕ್ಷಕರಿಗೆ ವೇತನ ಕಡಿಮೆ ಇತ್ತು.ಹೆಚ್ಚು ಕೊಡುವಷ್ಟು ಅದಾಯ ಇರಲಿಲ್ಲ 

ಡೊನೇಶನ್ ಹಾವಳಿ ಈ ಸಂಸ್ಥೆಯಲ್ಲಿ ಇರಲಿಲ್ಲ.ಫೀಸ್ ಕೂಡಾ ತುಂಬಾ ಇರಲಿಲ್ಲ.ಬರುತ್ತಿದ್ದವರೆಲ್ಲ ಬಡ ಮಧ್ಯಮ ವರ್ಗದ ಮಕ್ಕಳೇ.

ಕೆ ಜಿ ತರಗತಿಯಿಂದ ಶುರುವಾಗಿ ಹತ್ತನೇ ತರಗತಿ ತನಕ ತಲುಪಿ ಸತತವಾಗಿ ಉತ್ತಮ ಫಲಿತಾಂಶ ಪಡೆದು ಚಿನ್ಮಯ ಶಾಲೆ ಹೆಸರಾಗಿತ್ತು.ಬಡ ಮದ್ಯಮ ವರ್ಗಕ್ಕೆ ಕೂಡಾ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಕೈ ಗೆಟುಕುವಂತೆ ಮಾಡಿತ್ತು


ಈ ಶಾಲೆಯನ್ನು ಆರಂಭದಿಂದ ಇಪ್ಪತ್ತೈದು ವರ್ಷಗಳಕಾಲ ಸಮರ್ಥವಾಗಿ ಸಮತೋಲನದಿಂದ ನಡೆಸಿದವರು ಶಕುಂತಲಾ ಸಾಂತ್ರಾಯ ಅವರು.

ಆರಂಭದಲ್ಲಿ ವಿಮಲಾ ಮೇಡಂ ಮುಖ್ಯೋಪಾಧ್ಯಾಯಿನಿ ಆಗಿದ್ದರು.ನಂತರ ಅವರು ಬೇಡ ಎಂದ ಕಾರಣ ಶಕುಂತಲಾ ಸಾಂತ್ರಾಯ ಮುಖ್ಯೋಪಾಧ್ಯಾಯಿನಿ ಆಗಿದ್ದರು.

ಖಾಸಗಿ ಶಾಲಾ ಕಾಲೇಜುಗಳ ಮುಖ್ಯಸ್ಥರಾಗುವುದು ಸುಲಭದ ಕೆಲಸವಲ್ಲ.ಅದು ತಂತಿ ಮೇಲಿ‌ನ ನಡಿಗೆ‌

ಒಂದೆಡೆ ಮ್ಯಾನೇಜ್ ಮೆಂಟಿನವರ ಕಿರಿಕಿರಿ,ಮತ್ತೊಂದೆಡೆ ಹೆತ್ತವರ ಕಿರಿಕಿರಿ..ಮಗದೊಂದೆಡೆ ಶಿಕ್ಷಣ ಇಲಾಕೆಯ ತರಹಾವರಿ ನಿಯಮಾವಳಿಗಳು.ಜೊತೆಗೆ ಶಿಕ್ಷಕರ ಸಮಸ್ಯೆಗಳು.

ಇವೆಲ್ಲವನ್ನೂ ಬಹಳ ಸಮರ್ಥವಾಗಿ ನಿಭಾಯಿಸುತ್ತಾ ದೀರ್ಘ ಕಾಲ ಎಂದರೆ ಇಪ್ಪತ್ತೈದು ವರ್ಷಗಳ ಕಾಲ ಮುಖ್ಯೋಪಾಧ್ಯಾಯಿನಿಯಾಗಿ ಆ ಸಂಸ್ಥೆಗಾಗಿ ಹಗಲು ರಾತ್ರಿ ದುಡಿದವರು ಶ್ರೀಮತಿ ಶಕುಂತಲಾ ಸಾಂತ್ರಾಯ.ಇವರ ಜೊತೆ ಕೈ ಜೋಡಿಸಿದವರು ಹಿರಿಯ ಶಿಕ್ಷಕರಾದ ಶ್ರೀಮತಿ  ಅರುಣಾ,ಶ್ರೀಮತಿ ಶಾಂತಾ,ಶ್ರೀಮತಿ ಮೋಹಿನಿ,ಕು ಶೋಭಾ,ಶ್ರಿಮತಿ ಪೂರ್ಣಿಮಾ ಶ್ರೀಮತಿ ಶುಭಾ ,ಶ್ರೀಮತಿ  ಅನುರಾಧಾ ಶ್ರಿಮತಿ ವಿಜಯಲಕ್ಷ್ಮೀ  , ಸ್ರೀಮತಿ ಶ್ರೀಮತಿ ಲ್ಯಾನೆಟ್ ,ಶೈಲಜಾ ,ಪ್ರತಿಮ್ ಕುಮಾರ, ,ಸುಜಾತಾ,ಕೃಷ್ಣ ಉಪಾಧ್ಯಾಯ( ಈಗ ಮಧುಸೂದನ್ ಕುಶೆ ಕಾಲೆಜಿನಲ್ಲಿ ಪ್ರಿನ್ಸಿಪಾಲರಾಗಿದ್ದಾರೆ) ಮೊದಲಾದ ಶಿಕ್ಷಕರು.ಜೊತೆಗೆ ಶಾಲೆಯ ಅಭಿವೃದ್ಧಿಗೆ ಕೈ ಜೋಡಿಸಿದವರು  ಬೋಧಕೇತರ ಸಿಬ್ಬಂದಿಗಳಾಗಿದ್ದ ಶ್ರೀಮತಿ ವೀಣಾ,ಮತ್ತು ಶ್ರೀಮತಿ ಸಂಧ್ಯಾ. 

ನಾನು  ಸರ್ರ್ಕಾರಿ ಉದ್ಯೋಗಕ್ಕೆ ಸೇರುವ ಮೊದಲು ಶ್ರೀರಾಮ ಶಾಲೆ ಕಲ್ಲಡ್ಕ,ಕೆನರಾ ಪ್ರೌಢ ಶಾಲೆ,ಅಲೋಷಿಯಸ್ ಕಾಲೇಜು,ಎವಿಎಸ್ ಕಾಲೇಜು, ಕಮಲಾ ಕಾಲೇಜು ಗಳಲ್ಲಿ ಕೆಲಸ ಮಾಡಿರುವೆ‌.ಜೂನಿಯರ್ ಕಾಲೇಜಿನಲ್ಲಿ ಸ್ವಲ್ಪ ಕಾಲ ಪ್ರಿನ್ಸಿಪಾಲ್ ಆಗಿಯೂ ಕೆಲಸ ಮಾಡಿರುವೆ‌

ಸರ್ಕಾರಿ ಉದ್ಯೋಗ ದೊರೆತಾಗ ಬೆಳ್ಳಾರೆ ಸರ್ಕಾರಿ ಪಿಯು ಕಾಲೇಜು,ನೆಲಮಂಗಲ ಸರ್ಕಾರಿ ಪಿಯು ಕಾಲೇಜಗಳಲ್ಲಿ ಕೆಲಸ ಮಾಡಿ ಪ್ರಸ್ತುತ ಬ್ಯಾಟರಾಯನ ಪುಟ ಸರ್ಕಾರಿ ಪಿಯು ಕಾಲೇಜಿನಲ್ಲಿ ಕೆಲಸ ಮಾಡಿರುವೆ.


ಬೇರೆಡೆ ನನಗೆ ಹೆಚ್ಚಿನ ವೇತನ ಇತ್ತು.ಅದರೆ ಯಾವತ್ತಿಗು ಮರೆಯಲಾಗದಂತೆ ನನ್ನ ಮನಸ್ಸಿನಲ್ಲಿ ನನಗೆ ಅಚ್ಚೊತ್ತಿ ನಿಂತದ್ದು ಚಿನ್ಮಯ ಶಾಲೆಯ ವಾತಾವರಣ.

ಇಲ್ಲಿನ ಶಿಕ್ಷಕರು ಯಾರೂ ಸಿರಿವಂತರಲ್ಲ..ಹೆಚ್ಚು ಕಡಿಮೆ ಎಲ್ಲರೂ ಒಂದೇ ದೋಣಿಯ ಪಯಣಿಗರಾಗಿದ್ದೆವು.ಇಲ್ಲಿನ ವೇತನ ಕೂಡಾ ಅಷ್ಟಕ್ಕಷ್ಟೇ ಹೇಳುವಂತೆ ಇರಲಿಲ್ಲ.ಆದರೆ ಇಲ್ಲಿನ ಶಿಕ್ಷಕರ ಅನುವಿನ ಬಾಂಧವ್ಯ ಪರಸ್ಪರ ಹೊಂದಾಣಿಕೆ ಯಾರೂ ಕೂಡ ಮೆಚ್ಚುವದ್ದು.

ಇವರೆಲ್ಲರಿಗೆ ಶಾಲೆಯ ಮೇಲೆ ಇದ್ದ ಪ್ರೀತಿ,ಶಾಲೆಯನ್ನು ಅಭಿವೃದ್ಧಿ ಮಾಡುವ ಉತ್ಸಾಹ  ಅಪ್ರತಿಮವಾದುದು.

ಈ ಶಾಲೆಯ ವಾರ್ಷಿಕೋತ್ಸವ ನೋಡಿದರೆ ಇಲ್ಲಿನ ಶಿಕ್ಷಕರ ತಾದಾತ್ಮ್ಯತೆ ಗೊತ್ತಾಗುತ್ತದೆ.ಪ್ರತಿ ತರಗತಿಯ ಶಿಕ್ಷಕರು ತಮ್ಮ‌ಮಕ್ಕಳಿಗೆ ಹೇಳಿ ಕೊಟ್ಟು ಡ್ಯಾನ್ಸ್,ನಾಟಕ ಮಾಡಿಸುತ್ತಿದ್ದರು.ಒಂದಕ್ಕೊಂದು ಒಳ್ಳೆಯ ಕಾರ್ಯಕ್ರಮಗಳು ಇರುತ್ತಿದ್ದವು.

ಇವರಲ್ಲಿ ಬಹಳ ನೆನಪಾಗುವವರು ಅರುಣಾ ಮತ್ತು ಶಾಂತಾ ಅಚಾರ್..ಅರುಣಾ ಮೇಡಂ ಪ್ರತಿ ವರ್ಷ ನಾಟಕ ಮಾಡಿಸುವ ಜವಾಬ್ದಾರಿ ಹೊರುತ್ತಿದ್ದರು.ಮಕ್ಕಳನ್ನು ಸಿದ್ದ ಪಡಿಸುತ್ತಿದ್ದರು.ವಿವಿಧ ಸ್ಪರ್ಧೆಗಳಿಗೆ ಮಕ್ಕಳನ್ನು ಸಜ್ಜು ಗೊಳಿಸುವ ಕೆಲಸ ಇವರದು.ಇವರಿಗೆ ಹಾಡುಗಳನ್ನು ಹೇಳಿ ಕೊಡುತ್ತಾ ಇದ್ದವರು ಶಾಂತಾ ಆಚಾರ್.ಇವರು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸೀನಿಯರ್ ಪರೀಕ್ಷೆ ಪಾಸಾದ ಸಂಗೀತ ವಿದ್ವಾಂಸರು.

ಇವರಿಬ್ಬರಿಂದಾಗಿ ಚಿನ್ಮಯ ಶಾಲೆಯ ಮಕ್ಕಳು ಎಲ್ಲೆಡೆ ಬಹುಮಾನ ಗಳಿಸುತ್ತಿದ್ದರು.ಇದರಿಂದಾಗಿ ಶಾಲೆಗೆ ಹೆಸರು ಬಂತು.ಜೊತೆಗೆ ಎಲ್ಲ ಶಿಕ್ಷಕರೂ ಅಹರ್ನಿಶ ದುಡಿಯುತ್ತಿದ್ದ ಕಾರಣ ಉತ್ತಮ ಫಲಿತಾಂಶ ಕೂಡಾ ಬರ್ತಿತ್ತು ಹೆಚ್ಚಾಗಿ 100% ರಿಸಲ್ಟ್ ಬರ್ತಿತ್ತು.ಶಕುಂತಲಾ ಸಾಂತ್ರಾಯರಿಗೆ ಕುಡಾ ಬರೆಯುವ ಹವ್ಯಾಸವಿದ್ದು ಒಳ್ಳೊಳ್ಳೆಯ ಕವಿತೆಗಳನ್ನು ಬರೆಯುತ್ತಿದ್ದರು‌.ಅವರ ಕವಿತೆಗಳಿಗೆ ರಾಗ ಹಾಕಿ ಶಾಂತಾ ಆಚಾರ್ ಮಕ್ಕಳಿಗೆ ಹೇಳಿಕೊಡ್ತಾ ಇದ್ದರು.


ಇದರಿಂದಾಗಿ ಬಹು ಖ್ಯಾತಿ ಪಡೆದ ಅಲೋಷಿಯಸ್,ಕೆನರಾ ಅಗ್ನೆಸ್ ಶಿಕ್ಷಣ ಸಂಸ್ಥೆಗಳಂತೆ ಚಿನ್ಮಯ ಶಾಲೆ ಕೂಡಾ ತನ್ನದೇ ಅಸ್ತಿತ್ವವನ್ನು ಪಡೆಯಿತು.

 ಇದಕ್ಕೆ ಶಿಕ್ಷಕರ ಸಾಮೂಹಿಕ ಯತ್ನದ ಜೊತೆಗೆ ಶಕುಂತಲಾ ಸಾಂತ್ರಾಯರ ಸಮರ್ಥ ನಾಯಕತ್ವ ಕೂಡ ಕಾರಣವಾಗಿದೆ.ಈ ಶಾಲೆಯಲ್ಲಿ ದುಡಿಯುತ್ತಿದ್ದ ಹೆಚ್ಚಿನ ಶಿಕ್ಷಕರು ಆರ್ಥಿಕವಾಗಿ ಬಲಿಷ್ಟರಾಗಿರಲಿಲ್ಲ.ನಮಗೆ ದುಡಿಯುವುದು ಅನಿವಾರ್ಯ ಆಗಿತ್ತು.ಆದರೆ ಶಕುಂತಲಾ ಸಾಂತ್ರಾಯರ ಪತಿ ಚಾರ್ಟೆಡ್ ಅಕೌಂಟೆಂಟ್ ಆಗಿದ್ದು ಆರ್ಥಿಕವಾಗಿ ಬಲಿಷ್ಠರಾಗಿದ್ದರು.ಹಾಗಾಗಿ ಶಕುಂತಲಾ ಸಾಂತ್ರಾಯರಿಗೆ ದುಡಿಯುವ ಅಗತ್ಯ ಇರಲಿಲ್ಲ.

2004 ರಲ್ಲಿ ಸುದೀರ್ಘ ಇಪ್ಪತ್ತೈದು ವರ್ಷಗಳ ನಂತರ ನಿವೃತ್ತರಾದರು‌ಆಗ ನಾವೆಲ್ಲರೂ ಅವರನ್ನು ಮತ್ತೆ ಒಂದೆರಡು ವರ್ಷಮುಂದುವರಿಸುವಂತೆ ಶಾಲಾ ಟ್ರಸ್ಟ್ ನಲ್ಲಿ ಕೇಳಿದ್ದೆವು.ಅದಕ್ಕೆ ಅವರುಗಳು ಒಪ್ಪಿರಲಿಲ್ಲ.

2004 ರಲ್ಲಿ ಸಾಂತ್ರಾಯ ಅವರು ನಿವೃತ್ತರಾದಾಗ ಅಲ್ಲಿ‌ ವಿದ್ಯಾರ್ಥಿಗಳು ಮಾತ್ರವಲ್ಲ ನಾನು ಸೇರಿದಂತೆ ಶಿಕ್ಷಕಿಯರು ಕೂಡ ಬಿಕ್ಕಿ ಬಿಕ್ಕಿ ಅತ್ತಿದ್ದರು .ನಮ್ಮಲ್ಲಿ  ಅಷ್ಡು ಅಟ್ಯಾಚ್ ಮೆಂಟ್ ಆದರೆ ಶಕುಂತಲಾ ಸಾಂತ್ರಾಯ ಅವರು ಮಾತ್ರ ತಮ್ಮ ಕರ್ತವ್ಯವನ್ನು ನಿರ್ವಂಚನೆಯಿಂದ ನಿರ್ವಹಿಸಿದ ಸಂತೃಪ್ತಿಯಿಂದ  ಇದ್ದರು.

ಬೇರೆಯವರಲ್ಲಿನ ಗುಣವನ್ನು ಮೆಚ್ಚುವ,ಪ್ರೋತ್ಸಾಹಿಸುವ ಗುಣ ಶಕುಂತಲಾ ಸಾಂತ್ರಾಯರಲ್ಲಿ ಇತ್ತು.

ಆಗ ಮಂಗಳೂರಿನ ಖಾಸಗಿ ಸಿಟಿ ಚಾನೆಲ್ ಬಹಲ ಪ್ರಸಿದ್ದವಾಗಿದ್ದು ಪ್ರತಿ ಅದಿತ್ಯವಾರ ಉದಯವಾಣಿಯ ಮನೋಹರ ಪ್ರಸಾದ್ ಜನಮನ ಎಂಬ ಶೀರ್ಷಿಕೆಯಡಿ 

ಬೇರೆ ಬೇರೆ ಕ್ಷೇತ್ರದಲ್ಲಿ ಪರಿಣತರಾದವರನ್ನು ಅತಿಥಿಯಾಗಿ ಕರೆದು ಎರಡು ಗಂಟೆಯ ನೇರ ಪ್ರಸಾರ ಕಾರ್ಯಕ್ರಮ ನಡೆಸುತ್ತಿದ್ದರು.ಇದರಲ್ಲಿ ಪೋನ್ ಮೂಲಕ ಪ್ರೇಕ್ಷಕರು ಭಾಗವಹಿಸುತ್ತಿದ್ದರು.ಆಗಿನ ಕಾಲಕ್ಕೆ ಬಹು ಖ್ಯಾತವಾದ ಕಾರ್ಯಕ್ರಮ ಅದು‌.

2003 ಮಾರ್ಚ್ ಮೊದಲ ವಾರ  ಮಕ್ಕಳನ್ನು ಪರೀಕ್ಷೆಗೆ ಸಿದ್ದ  ಪಡಿಸುವುದು ಹೇಗೆ ಎಂಬ ಬಗ್ಗೆ ಕಾರ್ಯಕ್ರಮ ಮಾಡುವ ಉದ್ದೇಶದಿಂದ ಚಿನ್ಮಯಾ ಶಾಲೆಯ ಹಿರಿಯ ಶಿಕ್ಷಕರ ಬಗ್ಗೆ ಶಕುಂತಲಾ ಸಾಂತ್ರಾಯ ಅವರಲ್ಲಿ ವಿಚಾರಿಸಿದರು.ಆಗ ನಾನು ಕಿರಿಯಳಾಗಿದ್ದರೂ ಕೂಡಾ ಬರವಣಿಗೆಯ ಹವ್ಯಾಸವಿದ್ದ,ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿ ಅನೇಕ ಲೇಖನಗಳನ್ನು ಬರೆದಿದ್ದ ನನ್ನ  ಹೆಸರನ್ಬು ಸೂಚಿಸಿದ್ದರು.

ನಂತರ ನಾನು ಮತ್ತು ನಮ್ಮ ಶಾಲೆಯ ಗಣಿತ ಮೇಸ್ಟ್ರಾಗಿದ್ದ ಕೃಷ್ಣ ಉಪಾಧ್ಯಾಯರು ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದೆವು.ನಮಗಾದ ಮಟ್ಟಿಗೆ ಮಾಹಿತಿ ನೀಡಿದೆವು.ಕಾರ್ಯಕ್ರಮ ಚೆನ್ನಾಗಿ ಬಂದಿದೆ ಎಂದುನೋಡಿದ ಅನೇಕರು ಮೆಚ್ಚುಗೆ ಸೂಚಿಸಿದ್ದರು.

ಈ ಕಾರ್ಯಕ್ರಮಕ್ಕೆ ನನ್ನನ್ನು ಕರೆದಾಗ ಆರಂಭದಲ್ಲಿ ನಾನು ಹಿಂದೇಟು ಹಾಕಿದ್ದೆ.ಆಗ ಶಕುಂತಲಾಸಾಂತ್ರಾಯ ಅವರೇ ನನಗೆ ನಿಮ್ಮ ಬಗ್ಗೆ ನಂಬಿಕೆ ಇದೆ..ಯಾವ ರೀತಿ ಬರೆಯುತ್ತೀರಿ ಅದೇ ರೀತಿ ಮಾತನಾಡಿದರಾಯಿತು ಹೋಗಿ ಭಾಗವಹಿಸಿ.ಇಂತಹ  ಅವಕಾಶಕ್ಕಾಗಿ ತುಂಬಾ ಜನ ಕಾಯ್ತಾರೆ .ಅವಕಾಶ ಬಂದಾಗ ಹಿಂದೇಟು ಹಾಕಬಾರದು.ದೈರ್ಯವಾಗಿ ಹೋಗಿ ಎಂದು ಬೆಂಬಲ ನೀಡಿದ್ದರು.

ಅವರು ನಿವೃತ್ತರಾದ ಮೇಲೆ ಅವರನ್ನು ನಾನು ಭೇಟಿ ಮಾಡಿಲ್ಲ.ತುಂಬಾ ದಿನಗಳಿಂದ ಅವರಲ್ಲಿ ಮಾತನಾಡಬೇಕು ಎಂದು ಅಲೋಚಿಸುತ್ತಿದ್ದೆ.ಅದರೆ ಅವರ ಪೋನ್ ನಂಬರ್ ಸಿಗಲಿಲ್ಲ.


ಈವತ್ತು ಒಂದು ಯೋಚನೆ ತಲೆಗೆ ಹೊಳೆಯಿತು.ಅವರ ಸಣ್ಣಮಗ ಮಹೇಶ್ ಇ ಎನ್ ಟಿ ಡಾಕ್ಟರ್.ಅವರ ಹೆಸರು ಹಾಕಿ ಗೂಗಲ್ ಸರ್ಚ್ ಕೊಟ್ಟೆ.ಅವರ ನಂಬರ್ ಸಿಕ್ತು.ಪೋನ್ ಮಾಡಿದಾಗ 

ಅವರ ಪತ್ನಿ ( ಅವರು ಕುಡಾ ಇ ಎನ್ ಟಿ ತಜ್ಞವೈದ್ಯೆ) ಕರೆ ಸ್ವೀಕರಿಸಿದರು.ನನ್ನ ಸಂಕ್ಷಿಪ್ತ ಪರಿಚಯ ಹೇಳಿ ಶಕುಂತಲಾ ಸಾಂತ್ರಾಯರ ನಂಬರ್ ಕೇಳಿದೆ.ಅವರು ಕೊಟ್ಟರು .ತಕ್ಷಣವೇ ಪೋನ್ ಮಾಡಿದೆ.ಶಕುಂತಲಾ ಮೇಡಂ ಅವರಲ್ಲಿ ಸುಮಾರು ಹೊತ್ತು ಮಾತನಾಡಿದೆ

ಮಾತಿನ ನಡುವೆ " ನಿಮಗೆ ಕೆಲಸ ಮಾಡುವ ಅನಿವಾರ್ಯತೆ ಇರಲಿಲ್ಲ‌.ಯಾಕೆ ಕಡಿಮೆ ವೇತನದಲ್ಲಿ ಮುಖ್ಯೋಪಾಧ್ಯಾಯಿನಿಯಾಗಿ ಕೆಲಸ ಮಾಡಿದ್ದಿರಿ ಎಂದು ಕೇಳಿದೆ.ಅಗ ಅವರು ಬದುಕಿಗೆ ದುಡ್ಡೆ ಮುಖ್ಯವಲ್ಲ.ನಮಗೆ ನಮ್ಮದೇ ಆದ ಅಸ್ತಿತ್ವ ಬೇಕು.ಹಾಗಾಗಿ ನಾನು ಶಿಕ್ಷಕಿಯಾಗಿ ಕೆಲಸ ಮಾಡಿದೆ.ಮುಖ್ಯೋಪಾಧ್ಯಾಯಿನಿ ಜವಾಬ್ದಾರಿ ಬಂದಾಗ ದೈರ್ಯವಾಗಿ ಸ್ವೀಕರಿಸಿದೆ,ಯಶಸ್ಸು ಕೂಡಾ ಸಿಕ್ಕಿತು.ಈ ಯಶಸ್ಸಿನಲ್ಲಿ ಅಹರ್ನಿಶ ದುಡಿದ ಶಿಕ್ಷಕ ಶಿಕ್ಷಕಿಯರ  ,ಸಿಬ್ಬಂದಿಗಳ ಪಾಲೂ ಇದೆ.ಎಲ್ಲಕ್ಕಿಂತ ಹೆಚ್ಚಾಗಿ ದೇವರ ದಯೆ " ಎಂದರು.

ಒಂದೆಡೆ ಮ್ಯಾನೆಜ್ ಮೆಂಟ್ ನವರ ಕಿರಿಕಿರಿ,ಇನ್ನೊಂದೆಡೆ ಹೆತ್ತವರ ಕಿರಿಕಿರಿ,ಇಲಾಖೆಯ ನೀತಿ ನಿಯಮಗಳ ಪಾಲನೆ ಇವೆಲ್ಲವನ್ನು ನಿಬಾಯಿಸುದು ಕಷ್ಟ ಎನಿಸಲಿಲ್ವಾ ಎಂದು ಕೇಳಿದೆ.ಅಗ ಅವರು " ಸಮಸ್ಯೆಗಳು ಎದುರಾಗುತ್ತಿದ್ದವು.ಇಲ್ಲವೆಂದಲ್ಲ ಅದರೆ ನನಗೆ ಮುಖ್ಯೋಪಾಧ್ಯಾಯಿನಿಯಾಗಿ ಕೆಲಸ ನಿರ್ವಹಿಸುವುದು ಕಷ್ಟ ಎಂದು ಒಮ್ಮೆ ಕೂಡ ಅನಿಸಿಯೇ ಇಲ್ಲ ' ಎಂದರು

ಹೌದು,ಕೆಲಸವನ್ನು ಇಷ್ಟ ಪಟ್ಟು ಮಾಡಿದರೆ ಎಷ್ಟೇ ಕಷ್ಟದ ಕೆಲಸ ಕೂಡಾ ಕಷ್ಟ ಎನಿಸುದಿಲ್ಲ.ಅದಕ್ಕಾಗಿಯೇ ಶಕುಂತಲಾ ಸಾಂತ್ರಾಯರು ವಿಶಿಷ್ಟರಾಗಿ ಕಾಣ್ತಾರೆ.ಈಗಲೂ ಕೂಡಾ ಅದೇ ಉತ್ಸಾಹ ಅವರ ಮಾತಿನಲ್ಲಿ ಎದ್ದು ಕಾಣುತ್ತಿತ್ತು.


(ಚಿತ್ರ: ಚಿನ್ಮಯ ಶಾಲೆಯಲ್ಲಿ ಬಹುಮಾನ ಪಡೆದ ಸಂದರ್ಭ ,ಇದರಲ್ಲಿರುವವರು ಅತಿಥಿಯಾಗಿ ಬಂದವರು ಮತ್ತು ನಾನು,ಶಕುಂತಲಾ ಸಾಂತ್ರಾಯ ಚಿತ್ರ ನನ್ನಲ್ಲಿ ಇಲ್ಲ‌,ಮುಂದಿನ ಬಾರಿ ಊರಿಗೆ ಬಮದಾಗ ಅವರ ಮನೆಗೆ ಬರಲು ಕರೆದಿದ್ದಾರೆ.ಅಗ ಹೋಗಿ ಅವರೊಂದಿಗೆ ಪೋಟೋಹಿಡಿದು ಬರ್ತೇನೆ)


Sunday, 8 November 2020

ನಿಜವಾಗಿಯೂ ನಡೆದದ್ದೇನು?

 ನಿಜವಾಗಿಯೂ  ನಡೆದದ್ದೇನು?


 ನಾನು ಎರಡನೇ ವರ್ಷ ಬಿಎಸ್ಸಿ ಓದುತ್ತಿರುವಾಗಲೇ ನನಗೆ ಮದುವೆ ಆಯಿತು.ಮುಂದಿನ ಓದಿನ ಕಾರಣಕ್ಕಾಗಿ ಮನೆ ಮಂದಿಯ ವಿರೋಧ ಇತ್ತು.ಹಾಗಾಗಿ ಎಲ್ಲರನ್ನೂ ಎದುರು ಹಾಕಿಕೊಂಡು ಮನೆ ಬಿಟ್ಟು ಹೊರ ನಡೆದಿದ್ದವು.

ಅನೆನ ಏಳು ಬೀಳುಗಳ ಜೊತೆಗೆ ಒಂದು ಕೆಲಸ ಹಿಡಿದು ಮನೆ ಖರೀದಿಸಿ ಮಂಗಳೂರಿನಲ್ಲಿ ನಾವು ಬದುಕುತ್ತಿದ್ದೆವು.

ಈ ನಡುವೆ ಅತ್ತೆಯವರ ಕಣ್ಣೀರಿಗೆ ಸೋತು ಮನೆ ಮಂದಿಯ ಜೊತೆಗೆ ರಾಜಿ ಮಾಡಿಕೊಂಡಿದ್ದೆವು.ಆದರೆ ಇದೆಲ್ಲ ಹೊರ ಜಗತ್ತಿನ ಕಣ್ಣಿಗೆ ಮಣ್ಣು ಹಾಕುವದ್ದು ಅಷ್ಟೇ, 

ಒಳಗಿನಿಂದ ಹೊಟ್ಟೆ ಕಿಚ್ಚು ಆರೋಪಗಳು ಇದ್ದದ್ದೇ..ನಮ್ಮ ಕುಟುಂಬದಲ್ಲಿ ಓದಿ ಸರಿಯಾದ ಕೆಲಸ ಹಿಡಿದವರಿರಲಿಲ್ಲ.ಪ್ರಸಾದ್ ಮತ್ತು ನಾನು ಇಬ್ಬರೂ ಕೂಡ ಓದಿ ಒಳ್ಳೆಯ ಕೆಲಸ ಹಿಡಿದು ಮಂಗಳೂರಿನಲ್ಲಿ ಮನೆ ತಗೊಂಡದ್ದು ಉಳಿದವರ ಕಣ್ಣು ಕೆಂಪಾಗಲು ಕಾರಣವಾಗಿತ್ತು.

ನನ್ನ ಮಗನಿಗೆ ಒಂದು ಅಂದಾಜು ಎರಡು ಎರಡೂವರೆ ವರ್ಷ..ಅಗಷ್ಟೇ ಬಾಲ ಭಾಷೆಯಲ್ಲಿ ಮಾತನಾಡಲು ಕಲಿತಿದ್ದ.

ಇಂತಹ ಸಮಯದಲ್ಲಿ ನಮ್ಮ ಮನೆಯಲ್ಲಿ ನಾಗ ಪ್ರತಿಷ್ಠೆ ನಂತರ ಇನ್ನೇನೋ ಕಾರ್ಯಕ್ರಮ ಇತ್ತು.ಹಾಗಾಗಿ ಎರಡು ದಿನಗಳ ಮೊದಲೇ ಊರಿಗೆ ಹೋದೆವು.

ಕಾರ್ಯಕ್ರಮದ ಹಿಂದಿನ ದಿನವೇ ಸಂಬಂಧಿಕರು ,ಕುಟುಂಬದವರೆಲ್ಲ ಬಂದು ಸೇರಿದ್ದರು.ಎಲ್ಲರೂ ಏನೇನೋ ಕೆಲಸ ಹಚ್ಚಿಕೊಂಡು ಮರುದಿನದ ಕಾರ್ಯಕ್ರಮಕ್ಕೆ ಸಜ್ಜು ಮಾಡುತ್ತಿದ್ದರು.ನನಗೆ ಮಗನನ್ನು ಕಾಯುವುದೇ ಕೆಲಸ ಆಗಿತ್ತು.ವಿಪರೀತ ತುಂಟ.ಹಳ್ಳಿ ಅಲ್ವಾ? ಕೆರೆ ಬಾವಿಗಳಿವೆ‌

ಇವನೆಲ್ಲಿ ಅಲ್ಲಿ ಹೋಗಿ ಬಗ್ಗಿದರೆ ಎಂಬ ಆತಂಕ..

ಬೆಳಗ್ಗೆ ಹತ್ತು ಗಂಟೆ ಹೊತ್ತಿಗೆ ಮಕ್ಕಳೆಲ್ಲ ಆಟ ಅಡುತ್ತಿದ್ದರು‌‌.

ನನ್ನ ಮಗನೂ ಕೂಡ ಅವರ ಜೊತೆ ಇದ್ದ‌.ಆ ಗುಂಪಿನಲ್ಲಿ ಸ್ವಲ್ಪ ಹಿರಿಯಳಾದ ಬಾವನವರ ಮಗಳಿಗೆ ಅರವಿಂದನ ಮೇಲೆ ಒಂದು ಕಣ್ಣು ಇರುವಂತೆ ತಿಳಿಸಿ ಸ್ನಾನಕ್ಕೆ ಹೋಗಿದ್ದೆ..

ಸೋಪು ಹಚ್ಚಿಕೊಳ್ಳುವಷ್ಟರಲ್ಲಿ ಮಗ ಬೇಡಾ ಬೇಡಾ..ಅಮ್ಮಾ ಎಂದು ದೊಡ್ಡಕ್ಕೆ ಬೊಬ್ಬೆ ಹೊಡೆಯಿವುದು ಕೇಳಿಸಿತು.

ಗಾಬರಿಯಲ್ಲಿ ಹಾಗೆಯೇ ಬಟ್ಟೆ ಹಾಕಿಕೊಂಡು ಹೊರಗೆ ಅರವಿಂದ್ ಎಂತಾತು ಎಂದು ದೊಡ್ಡದಾಗಿ  ಓಡಿ ಅಂಗಳಕ್ಕೆ ಬಂದೆ..ಆಗ ಒಬ್ಬರು ಹತ್ತಿರದ ನೆಂಟರು ಬಾವಿ ಕಟ್ಟೆ ಕಡೆಯಿಂದ ವೇಗವಾಗಿ ಓಡಿದ್ದು ನೋಡಿದೆ.ಮಗ ಅಲ್ಲಿ ಅಳುತ್ತಾ ಇದ್ದ.ಏನೆಂದು ಕೇಳಿದೆ.ಅವನು ತನ್ನದೇ ಬಾಲ ಭಾಷೆಯಲ್ಲಿ ಯಾರೋ ಅವನನ್ನು ಎತ್ತಿ ಬಾವಿಗೆ ಹಾಕಲು ಹೊರಟದ್ದನ್ನು ಹೇಳಿದ..

ನಂಬಲು ಅಸಾಧ್ಯವಾದ ವಿಚಾರ.. ಆದರೆ ಸಣ್ಣ ಮಗು ಸುಳ್ಳು ಹೇಳಲು ಸಾಧ್ಯವೇಇಲ್ಲ..ಹಾಗೆಂದು ಸಣ್ಣ ‌ಮಗುವಿನ ಮಾತಿನ ಮೇಲೆ ಈ ಬಗ್ಗೆ ಯಾರನ್ನಾದರೂ ಆಕ್ಷೇಪ ಮಾಡಲು ಸಾಧ್ಯವೇ? 

ನನ್ನ ಅಮ್ಮ ನನಗೆ "ನೋಡು ದಾಯಾದಿ‌ ಮತ್ಸರ ಎಂಬುದು ಬಹಳ ಅಪಾಯಕಾರಿ.ಊರ ಕಡೆ ಬಂದರೆ ಮಗನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯಬೇಕು" ಎಂದು ಸದಾ ಹೇಳುತ್ತಿದ್ದರು.

ಅಲ್ಲಿ ಬಾವಿ ಕಟ್ಟೆ ಕಡೆಯಿಂದ ಓಡಿ ಬಂದವರೂ ದಾಯಾದಿಗಳೇ‌..ನಿಜಕ್ಕೂ ಮಗನನ್ನು ಎತ್ತಿ ಬಾವಿಗೆ ಹಾಕಲು ಹೊರಟರೇ.ಅಲ್ಲಿ ಯಾರೂ ಇರಲಿಲ್ಲ.

ಮನೆ ಮಂದಿ ಮಕ್ಕಳೆಲ್ಲ ತೆಂಕ ಜಾಲಿನಲ್ಲಿ ಇದ್ದರು.ಅಲ್ಲದೆ ಚಪ್ಪರ ಹಾಕಿ ಬದಿ ಕಟ್ಟಿದ ಕಾರಣ ಬಾವಿ ಇರುವ ಜಾಗ ಯಾರಿಗೂ ಕಾಣುವಂತೆ ಇರಲಿಲ್ಲ. ನಾನು ಸ್ನಾನಕ್ಕೆ ಹೋಗುತ್ತಲೇ ಅಡುವ ಮಕ್ಕಳ‌ ನಡುವಿನಿಂದ ಇವನನ್ನು ಎತ್ತಿಕೊಂಡು ಹೋದರೇ..? 

ಇಲ್ಲೊಂದು ಗೊಂದಲವಿದೆ‌.ಅರವಿಂದ ಬಾವಿಗೆ ಎತ್ತಿ ಹಾಕಲು ಹೊರಟದ್ದು ಎಂದು ಒಬ್ಬರ ಹೆಸರನ್ನು ಹೇಳಿದ್ದ‌‌.ನಾನು ಹೊರಬರುವಾಗ ನೋಡಿದ  ಬಾವಿ ಕಟ್ಟೆ ಕಡೆಯಿಂದ ಓಡಿ ಬಂದ ವ್ಯಕ್ತಿ ಆ ಹೆಸರಿನವರಲ್ಲ.ಮತ್ತು ಅಡುತ್ತಿರುವ ಮಕ್ಕಳ ನಡುವಿನಿಂದ ತಿಂಡಿ ಕೊಡ್ತೇನೆ ಬಾ ಎಂದು ಎತ್ತಿಕೊಂಡು ಹೋದ ವ್ಯಕ್ತಿ ಮತ್ತು ಅಲ್ಲಿ ಓಡಿ ಬಂದ ವ್ಯಕ್ತಿ ಬೇರೆ ಬೆರೆಯವರಾಗಿದ್ದರು. .ಅದರೆ ಅರವಿಂದ ಹೆಸರು  ಹೇಳಿದ ವ್ಯಕ್ತಿ ಯೇ ಅವನನ್ನು ಮಕ್ಕಳ ನಡುವಿನಿಂದ ಎತ್ತಿಕೊಂಡು ಹೋದ ಬಗ್ಗೆ ನಂತರ ನಾನು ಮಕ್ಕಳಿಂದ ಮೆಲ್ಲಗೆ ಕೇಳಿ ಕನ್ಫರ್ಮ್ ಮಾಡಿದ್ದೆ.ಹಾಗಾಗಿ ಅಲ್ಲಿ ಇಬ್ಬರು ಸೇರಿ ಇವನನ್ನು ಎತ್ತಿ ಬಾವಿಗೆ ಹಾಕಲು ಟ್ರೈ ಮಾಡಿದರೇ..ಅ ಇನ್ನೊಬ್ಬ ನಾನು ನೊಡುವ ಮೊದಲೇ ಅಲ್ಲಿಂದ ಓಡಿ ಹೋಗಿದ್ದರೇ‌‌..? ದೇವರೊಬ್ಬರಿಗೇ ಗೊತ್ತು...

ಅದೇ ಕೊನೆ..ನಾನು ಅರವಿಂದ ದೊಡ್ಡವನಾಗುವ ತನಕ ಎಲ್ಲೇ ಹೋದರೂ ಅದರಲ್ಲೂ ನಮ್ಮ ಸ್ವಂತ ಊರಿಗೆ ಹೋದರೆ ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದೆ.ಸ್ನಾಕ್ಕೆ ಹೋಗುವಾಗ ಮಗನನ್ನು ಪ್ರಸಾದರ ಸುಪರ್ದಿಗೆ ಕೊಟ್ಡೇ ಹೋಗುತ್ತಿದ್ದೆ.ಯಾರಲ್ಲೂ ಹೇಳಲೂ ಆಗದ ಹೇಳದೇ ಇರಲೂ ಆಗದ ಪರಿಸ್ಥಿತಿ ಅದು..

ಮಕ್ಕಳನ್ನು ದೊಡ್ಡ ಮಾಡುವುದೆಂದರೆ ಸಣ್ಣ ಮಾತಲ್ಲ..ಅವರಾಗಿ ಬಾವಿಗೋ ಕೆರೆಗೊ ಬಿದ್ದರೂ ಬೇರೆಯವರು ಹೊಟ್ಟೆಕಿಚ್ಚಿನಿಂದ ಎತ್ತಿ ಹಾಕಿದರೂ ಅಪಾಯವೇ..

ಆಟ ಆಡುವಾಗ ಸಂಪಿಗೆ ,ಕೆರೆ ಬಾವಿಗೆ ಬಿದ್ದು ಸತ್ತ ಮಕ್ಕಳ ಬಗ್ಗೆ ಕೇಳುವಾಗೆಲ್ಲ ಈ ವಿಚಾರ ನನಗೆ ನೆನಪಾಗುತ್ತದೆ. ಹೆಚ್ಚಿನದು ಅಕಸ್ಮಿಕ ಅಗಿರಬಹುದು‌ .ಕೆಲವೊಂದು ಯಾರೋ ಹೊಟ್ಟೆ ಕಿಚ್ಚಿನವರು ದೂಡಿ ಹಾಕಿದ್ದೂ ಇರಬಹುದು ಅಲ್ವಾ? .ದಾಯಾದಿ ಮತ್ಸರವಂತೂ ಬಹಳ ಅಪಾಯಕಾರಿ.

ಅಂದು ಭೀಮಸೇನನಿಗೆ ವಿಷದ ಲಡ್ಡು ಕೊಟ್ಟ ಕಥೆ ,ಅರಗಿನ ಮನೆಯನ್ನು ಸುಟ್ಟ ಕಥೆ ಮಹಾಭಾರತದಲ್ಲಿ ಓದಿರ್ತೇವೆ..ಅಲ್ಲಿ ಇಲ್ಲಿ ಇಂತಹ ವಿಚಾರಗಳು ನಡೆದಿರುತ್ತವೆ.

ಕಥೆಗಳೆಲ್ಲ ನೂರಕ್ಕೆ ನೂರು ಕಾಲ್ಪನಿಕವಲ್ಲ.

ಎಲ್ಲೋ ನಡೆದ ನಡೆಯಬಹುದಾದ ವಿಚಾರಗಳ ಎಳೆ ಅದರಲ್ಲಿ ಇರುತ್ತದೆ.

ಅಂದು ನಿಜಕ್ಕೂ ನಮ್ಮ ಮನೆಯಲ್ಲಿ ನಡೆದದ್ದೇನು ಎಂದು ಇಂದಿಗೂ ನನಗೆ ಗೊಂದಲದಲ್ಲಿಯೇ ಇದೆ.ಸಣ್ಣ ಮಗು ಸುಳ್ಳು ಹೇಳಲು ಸಾಧ್ಯವೇ ಇರಲಿಲ್ಲ. ಮತ್ತು ಇವನು ಕೊಸರಾಡಿದ್ದಕ್ಕೆ ಸಾಕ್ಷಿಯಾಗಿ ಅಂಗಿ ಹರಿದಿತ್ತು.ಚಡ್ಡಿ ಜಾರಿತ್ತು ಬೇಡಾ ಎಂದು .ಬೊಬ್ಬೆ ಹಾಕಿದ್ದು ನನಗೂ ಕೇಳಿಸಿಯೇ ಓಡಿ ಬಂದದ್ದು ನಾನು


ಹುಗ್ಗಾಟದ ಸಂಭ್ರಮ ಜಾರಿ ಹನಿಗಣ್ಣಾದ ಕ್ಷಣ

 ಹುಗ್ಗಾಟದ ಸಂಭ್ರಮ ಜಾರಿ ಹನಿಗಣ್ಣಾದ ಕ್ಷಣ 


ಮನೆ ಹಿಂದಿನ ರಸ್ತೆಯಲ್ಲಿ ಖಾಲಿ ಜಾಗದಲ್ಲಿ ನಾಲ್ಕೈದು ಮಕ್ಕಳು ಐ ಸ್ಪೈಸ್ ? ಆಟ ಅಡುದನ್ನು ನೋಡಿದೆ‌ನಾವೂ ಹುಗ್ಗಾಟ ಆಡುತ್ತಿದ್ದ, ನಂತರ ನಿಜವಾಗಿ ನಡೆದ  ಕಥೆಯೊಂದನ್ನು  ಕೇಳಿ ಆಸಕ್ತಿ ಕಳೆದುಕೊಂಡ ವಿಚಾರ ನೆನಪಾಯಿತು‌


ನಾನು ಅಜ್ಜನ ಮನೆಯಲ್ಲಿ ಬೆಳೆದವಳು.

ನಮ್ಮ ಅಜ್ಜನ ಮನೆ ಕಾಸರಗೋಡಿನ ಮೀಯಪದವು ಸಮೀದ ಹೊಸಮನೆ.ಸುಮಾರು ಇನ್ನೂರು ವರ್ಷಗಳ ಹಳೆಯ ಮನೆ ಇದು.ಆಗಿನ ಕಾಲಕ್ಕೆ ಎರಡು ಅಂತಸ್ತಿನ ಉಪ್ಪರಿಗೆ ಮನೆ( ಎರಡು ಮಾಳಿಗೆಯ ಮನೆ) ಇದರಲ್ಲಿ ಮೇಲಿನ ಮಾಡಿನಲ್ಲಿ( ಮಾಳಿಗೆ ಯಲ್ಲಿ) ಒಂದು ದೋಣಿಯಾಕಾರದ ಮರದ ದೊಡ್ಡ ವಸ್ತು ಇತ್ತು‌ ಬಹುಶ ಃ ಹಳೆಯ ದೋಣಿ ಇರಬಹುದೋ ಏನೋ. ಅದರಲ್ಲಿ ಏನೇನೋ ಪುಸ್ತಕಗಳು ಇದ್ದವು.ಕೆಲವು ತಾಳೆ ಗರಿ ಗ್ರಂಥಗಳು ಕೂಡ ಇದ್ದವೆಂದು ಅನಿಸುತ್ತದೆ. ಆಗ ಅದರ ಬಗ್ಗೆ ನಮಗೆ ಏನೇನೂ ಗೊತ್ತಿರಲಿಲ್ಲ. ಈಗ ಇವು ಒರಳೆ ಹಿಡಿದು ಹಾಳಾಗಿದೆಯೋ ಇದೆಯೋ ಇಲ್ಲವೋ ಎಂದು ಗೊತ್ತಿಲ್ಲ.

ನಾವು ಹುಗ್ಗಾಟ ಆಡಲು ಇಲ್ಲಿ ಅಡಗಿ ಕುಳಿತುಕೊಳ್ಳುತ್ತಾ ಇದ್ದೆವು.ಈ ಮಾಳಿಗೆಯಲ್ಲಿ ದೊಡ್ಡ ದೊಡ್ಡ  ಮಣ್ಣಿನ ಹಂಡೆಗಳಿದ್ದವು.

ಈ ಹಂಡೆಗಳಲ್ಲಿ ನಾವು ಅಡಗಿ ಕುಳಿತುಕೊಳ್ಳುತ್ತಿದ್ದೆವು..

ಇದನ್ನು ಗಮನಿಸಿದ ಅಜ್ಜಿ ನಮಗೆ ಜೋರು ಮಾಡಿ ಹಂಡೆಗಳನ್ನೆಲ್ಲ ಕವುಚಿ ಹಾಕಿದ್ದರು ನಮ್ಮನ್ನು ಎರಡನೆಯ ಮಾಳುಗೆಗೆ ಹೋಗದ ಹಾಗೆ ಜೋರು ಮಾಡಿದ್ದರು‌

.ಬಹುಶಃ ನಾವು ಒಡೆದು ಹಾಕಬಹುದು ಎಂದು ಹೀಗೆ ಮಾಡಿರಬಹುದು ಎಂದು ನಾವು ಊಹಿಸಿದ್ದೆವು.


ಆದರೆ ಅದಕ್ಕೆ ಬೇರೆಯೇ ಒಂದು ದೊಡ್ಡ ದುಃಖದ ದುರಂತದ ಕಾರಣವಿತ್ತು‌.ಅದರ ಹಿಂದೆ ಒಂದು ದುರಂತದ ಕಥೆ ಇತ್ತು 

ಇದನ್ನು ನಮ್ಮ ಅಜ್ಜನ ತಂಗಿ ಪೆಲತ್ತಡ್ಕದ ಅಜ್ಜಿ ಒಮ್ಮೆ ಹೇಳಿದ್ದರು.

ನಮ್ಮ ಹಳ್ಳಿಗಳಲ್ಲಿ ಆಗ ಹೀಗೇ ಅಲ್ಲೊಂದು ಇಲ್ಲೊಂದು ಮಾಳಿಗೆ ಮನೆಗಳಿರುತ್ತಿದ್ದವು.

ಇಂತಹದ್ದೇ ಒಂದು ಮನೆಯಲ್ಲಿ ಮಕ್ಕಳೆಲ್ಲ ಸೇರಿ   ಹುಗ್ಗಾಟ  ಆಡುತ್ತಿದ್ದರು.ಹುಗ್ಗಾಟ ಎಂದರೆ ಹುಡುಕುವ ಆಟ.ಇದರಲ್ಲಿ ಮನೆಯ ಅಂಗಳ ಒಂದು ತುದಿಯಲ್ಲಿ ಒಬ್ಬರು  ಕಣ್ಣನ್ನು ಕೈಯಲ್ಲಿ ಮುಚ್ಚಿ ಕುಳಿತಿರುತ್ತಾರೆ‌.ಉಳಿದವರೆಲ್ಲ ಓಡಿ ಹೋಗಿ ಅಡಗಿ ಕುಳಿತುಕೊಳ್ಳುತ್ತಾರೆ.ಅಡಗಿದ ನಂತರ ಇಲ್ಲಿ ಕಣ್ಣು ಮುಚ್ಚಿದವರು ಕಣ್ಣಾ ಮುಚ್ಚೆ ಗಾಡೇ ಗೂಡೇ ಉದ್ದಿನ ಮೂಟೆ ಉರುಳೇ ಹೋಯ್ತು ನಿಮ್ಮಯ ಹಕ್ಕಿ ಬಿಟ್ಟೇ ಬಿಟ್ಟೆ ನಿಮ್ಮಯ ಹಕ್ಕಿ ಹಿಡಿದುಕೊಳ್ಳಿ ಇತ್ಯಾದಿ ದೊಡ್ಡದಾಗಿ ಹಾಡುತ್ತಿದ್ದರು.ಅಡಗಿದವರು ಕೂ ಹಾಕಿ ರೆಡಿ ಎಂಬುದನ್ನು ಸೂಚಿಸುತ್ತಿದ್ದರು.ಆ ಹುಡುಗಿ/ ಗ ಒಬ್ಬೊಬ್ಬರನ್ನೇ ಹುಡುಕಿ ಹಿಡಿಯಬೇಕು‌.ಸಿಕ್ಕಿದವರು ಉಳಿದವರನ್ನು ಹುಡುಕಲು ಸಹಾಯ ಮಾಡುತ್ತಾರೆ‌.ಇವರು ಆಗಾಗ ಕೂ ಹಾಕುತ್ತಾರೆ‌.ಅಡಗಿ ಕುಳಿತವರು ಕೂಡ ಹುಡುಕುವವರು ದೂರ ಹೋದಾಗ ಕೂ ಹಾಕಿ ತಮ್ಮ ಇರವನ್ನು ಸೂಚಿಸುತ್ತಾರೆ.ಮತ್ತೆ ಅವರು ಹುಡುಕುತ್ತಾರೆ‌ ಹೀಗೇ ಎಲ್ಲರನ್ನೂ ಹಿಡಿದ ನಂತರ ಶರುವಿಗೆ ಸಿಕ್ಕವನು ಈಗ ಮತ್ತೆ ಕಣ್ಣು ಮುಚ್ಚಿ ಕುಳಿತುಕೊಳ್ಳಬೇಕು.ಉಳಿದವರೆಲ್ಲ ಅಡಗಿ ಕುಳಿತುಕೊಳ್ಳುತ್ತಾರೆ‌

ಹೀಗೇ ಒಂದು ದೊಡ್ಡ ಎರಡು ಮಾಳಿಗೆಯ ಮನೆಯಲ್ಲಿ ಅಕ್ಕ ಪಕ್ಕದ ಮಕ್ಕಳು ಅ ಮನೆಯ ಏಳೆಂಟು ಮಕ್ಕಳ ಜೊತೆಗೆ ಸೇರಿ ಹುಗ್ಗಾಟ ಆಡುತ್ತಿದ್ದರು.

ಆಟದ ನಡುವೆಯೇ ಮನೆ ಮಂದಿ ತಿಂಡಿಗೋ ಊಟಕ್ಕೋ ಕರೆದರು.ತಿಂದು ಬೇರೆ ಏನೆನೋ ಆಟ ಆಡಿದರು‌ .ರಾತ್ರಿಯಾಗುತ್ತಲೇ ಎಲ್ಲರೂ ಅವರರವ ಮನೆ ಸೇರಿಕೊಂಡರು.ಆಟ ಆಡುವಾಗ  ಆ ಮನೆಯ ಐದು ವರ್ಷದ ಚಿಕ್ಕ ಹುಡುಗಿ ಕೂಡ ಇದ್ದಳು.

ರಾತ್ರಿ ಹೊತ್ತು ಊಟದ ವೇಳೆಯಲ್ಲಿ ಈ ಹುಡುಗಿ ಇಲ್ಲದ್ದು ಮನೆಯವರ ಗಮನಕ್ಕೆ ಬಂತು.ಅಕ್ಕ ಪಕ್ಕದ ಸ್ನೆಹಿತರ ಮನೆಗೆ ಹೋಗಿರಬಹುದು ಎಂದು ಮನೆ ಮಂದಿ ಅಲ್ಲೆಲ್ಲ ಹೋಗಿ ಹುಡುಕಾಡಿದರು.ಎಲ್ಲೂ ಇಲ್ಲ.ಕೆರೆ ಬಾವಿ ಎಲ್ಲ ಬಗ್ಗಿ ನೋಡಿದರು.ಎಲ್ಲಾದರೂ ಕಾಲು ಜಾರಿ ಬಿದ್ದಿರಬಹುದೋ ಏನೋ ಎಂದು.. ಎಲ್ಲೂ ಇಲ್ಲ..

ಊರ ಜನರೆಲ್ಲಾ ಸೇರಿ ಹುಡುಕಾಡಿದರೂ ಸಿಗಲಿಲ್ಲ.

ಹುಡುಗಿ ಕಾಣೆ ಆದಳು..ಆಗೆಲ್ಲ  ನಿತ್ಯ ಕರ್ಮಕ್ಕೆ ಗುಡ್ಡೆಗೆ ಇಲ್ಲವೇ ತೋಡಿಗೆ ಹೋಗುತ್ತಿದ್ದರು‌ ಹಾಗೆ ಈ ಹುಡುಗಿ ಗುಡ್ಡೆಗೆ ಹೋಗಿದ್ದು ಹುಲಿಯೋ ಕತ್ತೆ ಕಿರುಬನೋ ಹಿಡಿರಬಹುದೇ ಎಂದು ಹುಡುಕಾಡಿದರು.ಅಥವಾ ತೋಡನ ನೀರಿಗೆ ಕೊಚ್ಚಿಕೊಂಡು ಹೋದಳೇ ಎಂದು ಹುಡುಕಿದರು.ಎಲ್ಲೂ ಅವಳ ದೇಹ ಕೂಡ ಸಿಗಲಿಲ್ಲ.

ಅನೇಕ ದಿನಗಳ ಕಾಲ ಮನೆಯವರು ಹುಡುಕಾಡಿದರು..ಸಿಗಲಿಲ್ಲ ‌ನಿದಾನಕ್ಕೆ ಈ ವಿಚಾರವನ್ನು ಊರವರು ಮರೆತರು‌.ಹೆತ್ತ ತಂದೆ ತಾಯಿಗೆ ಮರೆಯಲಾದೀತೇ..ಆದರೂ ಉಳಿದ ಮಕ್ಕಳಿಗಾಗಿ ನೋವು ನುಂಗಿ ಎಂದಿನಂತೆ ಕೆಲಸದಲ್ಲಿ ತೊಡಗಿಕೊಂಡರು.

ಇದಾಗಿ ಎಷ್ಟೋ ವರ್ಷಗಳ  ಮೂವತ್ತು ನಲುವತ್ತು ವರ್ಷಗಳ  ನಂತರ   ಮೇಲಿನ ಎರಡನೇ ಮಾಳಿಗೆಯಲ್ಲಿ ಇರಿಸಿದ್ದ ದೊಡ್ಡ ದೊಡ್ಡ ಹಂಡೆಗಳನ್ನು ಬಟ್ಟೆ ತುಂಬಿಸಿ ಇಡುವ ಸಲುವಾಗಿ ತೊಳೆದು ಇಡಬೇಕೆಂದು ಕೆಳಗೆ ತಂದರು

ಅಲ್ಲಿದ್ದ ನಾಲ್ಕೈದು ಹಂಡೆಗಳು ತೆರೆದೇ ಇದ್ದವು‌.ಒಂದರ ಮುಚ್ಚಳ ಗಟ್ಟಿಯಾಗಿ ಹಾಕಿತ್ತಂತೆ.ಮುಚ್ಚಳ ತೆಗೆಯಲು ಆಗದಷ್ಟು ಗಟ್ಟಿ ಇತ್ತಂತೆ‌‌ ಕೆಳಗೆ ತಂದು ನೋಡುವಾ ಎಂದು ಮುಚ್ಚಳ ಸಹಿತವಾಗಿ ಆ ಹಂಡೆಯನ್ನು ಹೊತ್ತು ಕೆಳಗೆ ತಂದರಂತೆ.ಏನು ಮಾಡಿದರೂ ಅದರ ಮುಚ್ಚಳ ತೆರೆಯಲು ಆಗಲಿಲ್ಲ

ಈ ಹಂಡೆಯನ್ನು ತರುವಾಗ ಅದರೊಳಗೆ ಏನೋ ಇದ್ದ ಹಾಗೆ ಅನಿಸಿತ್ತು‌.ಹಾಗಾಗಿ ಕುತೂಹಲದಿಂದ ಆ ಮುಚ್ಚಳವನ್ನು ಒಡೆದು ತೆಗೆದರಂತೆ..

ಏನು ಹೇಳುದು ? ಅದರೊಳಗೆ ಒಂದು ಮನುಷ್ಯನ ಕುಳಿತ ಭಂಗಿಯ  ಅಸ್ತಿಪಂಜರ ಇತ್ತಂತೆ.ಅದು ಆ ಕಾಣೆಯಾದ ಹುಡುಗಿಯದಾಗಿತ್ತು..

ಹುಗ್ಗಾಟ ಆಡುವಾಗ ಈ ಹುಡುಗಿ ಹಂಡೆಯ ಒಳಗೆ ಕುಳಿತುಕೊಂಡು ಮುಚ್ಚಳ ಹಾಕಿಕೊಂಡಿರಬಹುದು ಅಥವಾ ಇವಳನ್ನು ಬೇರೆ ಮಕ್ಕಳು ಒಳಗೆ ಕುಳಿತುಕೊಳ್ಳಿಸಿ ಹೊರಗಿನಿಂದ ಮುಚ್ಚಳ ಹಾಕಿದ್ದು ಮರೆತಿರಬಹುದು..

ಏನಾಯಿತು.. ದೇವರೊಬ್ಬನೇ ಬಲ್ಲ..ಆ ಹುಡಿಗಿ ಕುಳಿತಿದ್ದ ಹಂಡೆಯ ಮುಚ್ಚಳ ಬಹಳ ಗಟ್ಟಿಯಾಗಿ ಕುಳಿತಿದ್ದು ಹುಡುಗಿ ಕೂ ಹಾಕಿದ್ದು ಯಾರಿಗೂ ಕೇಳಿಸಿರಲಾರದು.ಅ ಅದರೊಳಗೆ ಗಾಳಿ ಸಾಲದೆ ಕೂಡಲೇ ಸತ್ತಿರಲೂ ಸಾಕು.

ಎರಡನೇ ಮಾಳಿಯಲ್ಲಿ ಹಳೆಯ ಸಾಮಾನುಗಳ ಜೊತೆ ಇದ್ದ ಕಾರಣ ಇವಳಲ್ಲಿ ಅವಿತಿರಬಹುದು ಎಂಬ ಊಹೆ ಯಾರಿಗೂ ಬಂದಿರಲಾರದು.ಅಥವಾ ಹೀಗೊಂದು ಆಗಬಹುದು ಎಂದು ಯಾರೂ ಊಹೆ ಮಾಡಿರಲಾರರು.

ಒಟ್ಟಿನಲ್ಲಿ ಆ ಹುಡುಗಿ ಸತ್ತದ್ದು ನಿಜವಂತೆ.

ಎರಡನೆಯ ಮಾಳಿಗರಯಲ್ಲಿ ಇದ್ದ ಕಾರಣ ,ಅಲ್ಲಿಗೆ ಯಾರೂ ಹೋಗದಿರುವ ಕಾರಣ ಹೆಣ ಕೊಳೆತಾಗಲೂ ಗಮನಕ್ಕೆ ಬರಲಿಲ್ಲವೆನೋ ಅಥವಾ ಹಳ್ಳಿ ಮನೆಗಳಲ್ಲಿ ಕೆಲವೊಮ್ಮೆ ಹೆಗ್ಗಣ ,ಹಾವುಗಳು ಕೊಳೆತು ವಾಸನೆ ಬರುತ್ತಿದ್ದುದು ಸಾಮಾನ್ಯ ವಿಚಾರ ‌ಹಾಗೆಯೇ ಎಂದು ಭಾವಿಸಿರಬಹುದೋ ಏನೋ..

ಇದು ನಮ್ಮ ಅಜ್ಜನ ಪಿಜ್ಜನ ( ಅಜ್ಜನ ಅಜ್ಜನ ತಂದೆ)ಕಾಲದಲ್ಲಿ ಅವರ ಸಂಬಂಧಿಕರ ಮನೆಯಲ್ಲಿ ನಡೆದ ವಿಚಾರ ಎಂದು ಪೆಲತ್ತಡ್ಕದ  ಅಜ್ಜಿ ನಮಗೆ ಹೇಳಿದ್ದರು‌

ಈ ನಿಜ ಘಟನೆ ಎಲ್ಲೋ ನಡೆದದ್ದು ನಮ್ಮ ಅಜ್ಜಿಗೂ ಗೊತ್ತಿದ್ದಿರಬೇಕು‌ ಅದಕ್ಕಾಗಿ ನಮ್ಮನ್ನು ಎರಡನೇ ಮಾಳಿಗೆಗೆ ಹತ್ತಲು ಬಿಡುತ್ತಿರಲಿಲ್ಲ.ಹಂಡೆಯನ್ನೆಲ್ಲ ಕವುಚಿ ಹಾಕಿದ್ದರು.

ನಮ್ಮ ಪೆಲತ್ತಡ್ಕದ ಅಜ್ಜಿ ಈ ಕಥೆ ಹೇಳಿದ ಮೇಲೆ  .ಮತ್ತು ಈ ಆಟದಲ್ಲಿ ನಾವು ಆಸಕ್ತಿ ಕಳೆದುಕೊಂಡಿದ್ದೆವು.ಯಾವಾಗಾದರೊಮ್ಮೆ ಆಡುವಾಗ 

 ಸಣ್ಣ ಮಕ್ಕಳ ಬಗ್ಗೆ ತುಂಬಾ ಜಾಗ್ರತೆ ವಹಿಸುತ್ತಿದ್ದೆವು‌.

ಪಾಪ ಹಂಡೆಯೊಳಗೆ ಸತ್ತ ಆ ಹುಡುಗಿ ಎಷ್ಟು ಭಯ ಪಟ್ಟಿದ್ದಳೋ,ಬೊಬ್ಬೆ ಹಾಕಿದ್ದಳೋ ಹಸಿವು ಬಾಯಾರಿಕೆಯಿಂದ ನರಳಿದಳೋ,ಗಾಳಿ ಸಾಲದೆ ಒದ್ದಾಡಿದಳೋ..ಅಜ್ಜಿ ಈ ನಿಜವದ  ಕಥೆ ಹೇಳಿದಾಗ ಅಂದು ನಾವೆಲ್ಲ ದುಃಖಿಸಿ ದುಃಖಿಸಿ ಅತ್ತಿದ್ದೆವು.ನಮ್ಮ ಜೊತೆಗೆ ಅಜ್ಜಿ ಕೂಡ ಕಣ್ಣೀರು ಹಾಕಿದ್ದರು‌. ನೆನೆದರೆ ಈಗಲೂ ಕಣ್ಣು ಹನಿಗೂಡುತ್ತದೆ‌.

ಮಕ್ಕಳ ಬಗ್ಗೆ ತುಂಬಾ ಜಾಗ್ರತೆ ವಹಿಸಬೇಕು .ಇತ್ತೀಚೆಗೆ ಮಾಳಿಗೆಯಿಂದ ಮಗುವೊಂದು ಬಿದ್ದು ಸಾವನ್ನಪ್ಪಿದ ವಿಚಾರ ಓದಿದ್ದೆ‌‌..ನಾನು ಚಿನ್ಮಯ ಶಾಲೆಯಲ್ಲಿ ಶಿಕ್ಷಕಿ ಆಗಿದ್ದಾಗ ಐದನೆಯ ತರಗತಿಯ ಮಗುವೊಂದು ಐದು ಫ್ಲೋರ್ ನ ಫ್ಲಾಟ್ ನಿಂದ ಆಡುತ್ತಾ ಅಡುತ್ತಾ ಬಿದ್ದ ಚೆಂಡನ್ನು ತೆಗೆಯಲು ನೆರಳಿಗಾಗಿ ಹಾಸಿದ್ದ ಶೀಟ್ ಮೇಲೆ ಕಾಲಿಟ್ಟು ಬಿದ್ದು ಸಾವನ್ನಪ್ಪಿದ ದುರಂತ ನಡೆದಿತ್ತು.ನೀರಿನ ಸಂಪಿಗೆ ಬೀಳುದು,ಆಡಲು ಹೋಗಿ ಕೆರೆ ನದಿಯಲ್ಲಿ ಮುಳಗುವ ವಿಚಾರಗಳನ್ನು ಕೇಳುತ್ತಲೇ ಇರ್ತೇವೆ‌.ಅದಕ್ಕಾಗಿ ನಾವು ಸದಾ ಜಾಗ್ರತೆಯಿಂದ ಇರಬೇಕು.

https://shikshanaloka.blogspot.com/2020/11/blog-post_7.html?m=1

ಚಿತ್ರ : ಇಂಟರ್ನೆಟ್ ನಿಂದ

Saturday, 7 November 2020

ಹುಗ್ಗಾಟದ ಸಂಭ್ರಮ ಜಾರಿ ಹನಿಗಣ್ಣಾದ ಕ್ಷಣ

 

ಹುಗ್ಗಾಟದ ಸಂಭ್ರಮ ಜಾರಿ ಹನಿಗಣ್ಣಾದ ಕ್ಷಣ 

ಮನೆ ಹಿಂದಿನ ರಸ್ತೆಯಲ್ಲಿ ಖಾಲಿ ಜಾಗದಲ್ಲಿ ನಾಲ್ಕೈದು ಮಕ್ಕಳು ಐ ಸ್ಪೈಸ್ ? ಆಟ ಅಡುದನ್ನು ನೋಡಿದೆ‌ನಾವೂ ಹುಗ್ಗಾಟ ಆಡುತ್ತಿದ್ದ, ನಂತರ ನಿಜವಾಗಿ ನಡೆದ  ಕಥೆಯೊಂದನ್ನು  ಕೇಳಿ ಆಸಕ್ತಿ ಕಳೆದುಕೊಂಡ ವಿಚಾರ ನೆನಪಾಯಿತು‌


ನಾನು ಅಜ್ಜನ ಮನೆಯಲ್ಲಿ ಬೆಳೆದವಳು.

ನಮ್ಮ ಅಜ್ಜನ ಮನೆ ಕಾಸರಗೋಡಿನ ಮೀಯಪದವು ಸಮೀದ ಹೊಸಮನೆ.ಸುಮಾರು ಇನ್ನೂರು ವರ್ಷಗಳ ಹಳೆಯ ಮನೆ ಇದು.ಆಗಿನ ಕಾಲಕ್ಕೆ ಎರಡು ಅಂತಸ್ತಿನ ಉಪ್ಪರಿಗೆ ಮನೆ( ಎರಡು ಮಾಳಿಗೆಯ ಮನೆ) ಇದರಲ್ಲಿ ಮೇಲಿನ ಮಾಡಿನಲ್ಲಿ( ಮಾಳಿಗೆ ಯಲ್ಲಿ) ಒಂದು ದೋಣಿಯಾಕಾರದ ಮರದ ದೊಡ್ಡ ವಸ್ತು ಇತ್ತು‌ ಬಹುಶ ಃ ಹಳೆಯ ದೋಣಿ ಇರಬಹುದೋ ಏನೋ. ಅದರಲ್ಲಿ ಏನೇನೋ ಪುಸ್ತಕಗಳು ಇದ್ದವು.ಕೆಲವು ತಾಳೆ ಗರಿ ಗ್ರಂಥಗಳು ಕೂಡ ಇದ್ದವೆಂದು ಅನಿಸುತ್ತದೆ. ಆಗ ಅದರ ಬಗ್ಗೆ ನಮಗೆ ಏನೇನೂ ಗೊತ್ತಿರಲಿಲ್ಲ. ಈಗ ಇವು ಒರಳೆ ಹಿಡಿದು ಹಾಳಾಗಿದೆಯೋ ಇದೆಯೋ ಇಲ್ಲವೋ ಎಂದು ಗೊತ್ತಿಲ್ಲ.

ನಾವು ಹುಗ್ಗಾಟ ಆಡಲು ಇಲ್ಲಿ ಅಡಗಿ ಕುಳಿತುಕೊಳ್ಳುತ್ತಾ ಇದ್ದೆವು.ಈ ಮಾಳಿಗೆಯಲ್ಲಿ ದೊಡ್ಡ ದೊಡ್ಡ  ಮಣ್ಣಿನ ಹಂಡೆಗಳಿದ್ದವು.

ಈ ಹಂಡೆಗಳಲ್ಲಿ ನಾವು ಅಡಗಿ ಕುಳಿತುಕೊಳ್ಳುತ್ತಿದ್ದೆವು..

ಇದನ್ನು ಗಮನಿಸಿದ ಅಜ್ಜಿ ನಮಗೆ ಜೋರು ಮಾಡಿ ಹಂಡೆಗಳನ್ನೆಲ್ಲ ಕವುಚಿ ಹಾಕಿದ್ದರು ನಮ್ಮನ್ನು ಎರಡನೆಯ ಮಾಳುಗೆಗೆ ಹೋಗದ ಹಾಗೆ ಜೋರು ಮಾಡಿದ್ದರು‌

.ಬಹುಶಃ ನಾವು ಒಡೆದು ಹಾಕಬಹುದು ಎಂದು ಹೀಗೆ ಮಾಡಿರಬಹುದು ಎಂದು ನಾವು ಊಹಿಸಿದ್ದೆವು.


ಆದರೆ ಅದಕ್ಕೆ ಬೇರೆಯೇ ಒಂದು ದೊಡ್ಡ ದುಃಖದ ದುರಂತದ ಕಾರಣವಿತ್ತು‌.ಅದರ ಹಿಂದೆ ಒಂದು ದುರಂತದ ಕಥೆ ಇತ್ತು 

ಇದನ್ನು ಒಮ್ಮೆ ನಮ್ಮ ಅಜ್ಜನ ತಂಗಿ ಪೆಲತ್ತಡ್ಕದ ಅಜ್ಜಿ ಒಮ್ಮೆ ಹೇಳಿದ್ದರು.

ನಮ್ಮ ಹಳ್ಳಿಗಳಲ್ಲಿ ಆಗ ಹೀಗೇ ಅಲ್ಲೊಂದು ಇಲ್ಲೊಂದು ಮಾಳಿಗೆ ಮನೆಗಳಿರುತ್ತಿದ್ದವು.

ಇಂತಹದ್ದೇ ಒಂದು ಮನೆಯಲ್ಲಿ ಮಕ್ಕಳೆಲ್ಲ ಸೇರಿ   ಹುಗ್ಗಾಟ  ಆಡುತ್ತಿದ್ದರು.ಹುಗ್ಗಾಟ ಎಂದರೆ ಹುಡುಕುವ ಆಟ.ಇದರಲ್ಲಿ ಮನೆಯ ಅಂಗಳ ಒಂದು ತುದಿಯಲ್ಲಿ ಒಬ್ಬರು  ಕಣ್ಣನ್ನು ಕೈಯಲ್ಲಿ ಮುಚ್ಚಿ ಕುಳಿತಿರುತ್ತಾರೆ‌.ಉಳಿದವರೆಲ್ಲ ಓಡಿ ಹೋಗಿ ಅಡಗಿ ಕುಳಿತುಕೊಳ್ಳುತ್ತಾರೆ.ಅಡಗಿದ ನಂತರ ಇಲ್ಲಿ ಕಣ್ಣು ಮುಚ್ಚಿದವರು ಕಣ್ಣಾ ಮುಚ್ಚೆ ಗಾಡೇ ಗೂಡೇ ಉದ್ದಿನ ಮೂಟೆ ಉರುಳೇ ಹೋಯ್ತು ನಿಮ್ಮಯ ಹಕ್ಕಿ ಬಿಟ್ಟೇ ಬಿಟ್ಟೆ ನಿಮ್ಮಯ ಹಕ್ಕಿ ಹಿಡಿದುಕೊಳ್ಳಿ ಇತ್ಯಾದಿ ದೊಡ್ಡದಾಗಿ ಹಾಡುತ್ತಿದ್ದರು.ಅಡಗಿದವರು ಕೂ ಹಾಕಿ ರೆಡಿ ಎಂಬುದನ್ನು ಸೂಚಿಸುತ್ತಿದ್ದರು.ಆ ಹುಡುಗಿ/ ಗ ಒಬ್ಬೊಬ್ಬರನ್ನೇ ಹುಡುಕಿ ಹಿಡಿಯಬೇಕು‌.ಸಿಕ್ಕಿದವರು ಉಳಿದವರನ್ನು ಹುಡುಕಲು ಸಹಾಯ ಮಾಡುತ್ತಾರೆ‌.ಇವರು ಆಗಾಗ ಕೂ ಹಾಕುತ್ತಾರೆ‌.ಅಡಗಿ ಕುಳಿತವರು ಕೂಡ ಹುಡುಕುವವರು ದೂರ ಹೋದಾಗ ಕೂ ಹಾಕಿ ತಮ್ಮ ಇರವನ್ನು ಸೂಚಿಸುತ್ತಾರೆ.ಮತ್ತೆ ಅವರು ಹುಡುಕುತ್ತಾರೆ‌ ಹೀಗೇ ಎಲ್ಲರನ್ನೂ ಹಿಡಿದ ನಂತರ ಶರುವಿಗೆ ಸಿಕ್ಕವನು ಈಗ ಮತ್ತೆ ಕಣ್ಣು ಮುಚ್ಚಿ ಕುಳಿತುಕೊಳ್ಳಬೇಕು.ಉಳಿದವರೆಲ್ಲ ಅಡಗಿ ಕುಳಿತುಕೊಳ್ಳುತ್ತಾರೆ‌

ಹೀಗೇ ಒಂದು ದೊಡ್ಡ ಎರಡು ಮಾಳಿಗೆಯ ಮನೆಯಲ್ಲಿ ಅಕ್ಕ ಪಕ್ಕದ ಮಕ್ಕಳು ಅ ಮನೆಯ ಏಳೆಂಟು ಮಕ್ಕಳ ಜೊತೆಗೆ ಸೇರಿ ಹುಗ್ಗಾಟ ಆಡುತ್ತಿದ್ದರು.

ಆಟದ ನಡುವೆಯೇ ಮನೆ ಮಂದಿ ತಿಂಡಿಗೋ ಊಟಕ್ಕೋ ಕರೆದರು.ತಿಂದು ಬೇರೆ ಏನೆನೋ ಆಟ ಆಡಿದರು‌ .ರಾತ್ರಿಯಾಗುತ್ತಲೇ ಎಲ್ಲರೂ ಅವರರವ ಮನೆ ಸೇರಿಕೊಂಡರು.ಆಟ ಆಡುವಾಗ  ಆ ಮನೆಯ ಐದು ವರ್ಷದ ಚಿಕ್ಕ ಹುಡುಗಿ ಕೂಡ ಇದ್ದಳು.

ರಾತ್ರಿ ಹೊತ್ತು ಊಟದ ವೇಳೆಯಲ್ಲಿ ಈ ಹುಡುಗಿ ಇಲ್ಲದ್ದು ಮನೆಯವರ ಗಮನಕ್ಕೆ ಬಂತು.ಅಕ್ಕ ಪಕ್ಕದ ಸ್ನೆಹಿತರ ಮನೆಗೆ ಹೋಗಿರಬಹುದು ಎಂದು ಮನೆ ಮಂದಿ ಅಲ್ಲೆಲ್ಲ ಹೋಗಿ ಹುಡುಕಾಡಿದರು.ಎಲ್ಲೂ ಇಲ್ಲ.ಕೆರೆ ಬಾವಿ ಎಲ್ಲ ಬಗ್ಗಿ ನೋಡಿದರು.ಎಲ್ಲಾದರೂ ಕಾಲು ಜಾರಿ ಬಿದ್ದಿರಬಹುದೋ ಏನೋ ಎಂದು.. ಎಲ್ಲೂ ಇಲ್ಲ..

ಊರ ಜನರೆಲ್ಲಾ ಸೇರಿ ಹುಡುಕಾಡಿದರೂ ಸಿಗಲಿಲ್ಲ.

ಹುಡುಗಿ ಕಾಣೆ ಆದಳು..ಆಗೆಲ್ಲ  ನಿತ್ಯ ಕರ್ಮಕ್ಕೆ ಗುಡ್ಡೆಗೆ ಇಲ್ಲವೇ ತೋಡಿಗೆ ಹೋಗುತ್ತಿದ್ದರು‌ ಹಾಗೆ ಈ ಹುಡುಗಿ ಗುಡ್ಡೆಗೆ ಹೋಗಿದ್ದು ಹುಲಿಯೋ ಕತ್ತೆ ಕಿರುಬನೋ ಹಿಡಿರಬಹುದೇ ಎಂದು ಹುಡುಕಾಡಿದರು.ಅಥವಾ ತೋಡನ ನೀರಿಗೆ ಕೊಚ್ಚಿಕೊಂಡು ಹೋದಳೇ ಎಂದು ಹುಡುಕಿದರು.ಎಲ್ಲೂ ಅವಳ ದೇಹ ಕೂಡ ಸಿಗಲಿಲ್ಲ.

ಅನೇಕ ದಿನಗಳ ಕಾಲ ಮನೆಯವರು ಹುಡುಕಾಡಿದರು..ಸಿಗಲಿಲ್ಲ ‌ನಿದಾನಕ್ಕೆ ಈ ವಿಚಾರವನ್ನು ಊರವರು ಮರೆತರು‌.ಹೆತ್ತ ತಂದೆ ತಾಯಿಗೆ ಮರೆಯಲಾದೀತೇ..ಆದರೂ ಉಳಿದ ಮಕ್ಕಳಿಗಾಗಿ ನೋವು ನುಂಗಿ ಎಂದಿನಂತೆ ಕೆಲಸದಲ್ಲಿ ತೊಡಗಿಕೊಂಡರು.

ಇದಾಗಿ ಎಷ್ಟೋ ವರ್ಷಗಳ  ಮೂವತ್ತು ನಲುವತ್ತು ವರ್ಷಗಳ  ನಂತರ   ಮೇಲಿನ ಎರಡನೇ ಮಾಳಿಗೆಯಲ್ಲಿ ಇರಿಸಿದ್ದ ದೊಡ್ಡ ದೊಡ್ಡ ಹಂಡೆಗಳನ್ನು ಬಟ್ಟೆ ತುಂಬಿಸಿ ಇಡುವ ಸಲುವಾಗಿ ತೊಳೆದು ಇಡಬೇಕೆಂದು ಕೆಳಗೆ ತಂದರು

ಅಲ್ಲಿದ್ದ ನಾಲ್ಕೈದು ಹಂಡೆಗಳು ತೆರೆದೇ ಇದ್ದವು‌.ಒಂದರ ಮುಚ್ಚಳ ಗಟ್ಟಿಯಾಗಿ ಹಾಕಿತ್ತಂತೆ.ಮುಚ್ಚಳ ತೆಗೆಯಲು ಆಗದಷ್ಟು ಗಟ್ಟಿ ಇತ್ತಂತೆ‌‌ ಕೆಳಗೆ ತಂದು ನೋಡುವಾ ಎಂದು ಮುಚ್ಚಳ ಸಹಿತವಾಗಿ ಆ ಹಂಡೆಯನ್ನು ಹೊತ್ತು ಕೆಳಗೆ ತಂದರಂತೆ.ಏನು ಮಾಡಿದರೂ ಅದರ ಮುಚ್ಚಳ ತೆರೆಯಲು ಆಗಲಿಲ್ಲ

ಈ ಹಂಡೆಯನ್ನು ತರುವಾಗ ಅದರೊಳಗೆ ಏನೋ ಇದ್ದ ಹಾಗೆ ಅನಿಸಿತ್ತು‌.ಹಾಗಾಗಿ ಕುತೂಹಲದಿಂದ ಆ ಮುಚ್ಚಳವನ್ನು ಒಡೆದು ತೆಗೆದರಂತೆ..

ಏನು ಹೇಳುದು ? ಅದರೊಳಗೆ ಒಂದು ಮನುಷ್ಯನ ಅಸ್ತಿಪಂಜರ ಇತ್ತಂತೆ.ಅದು ಆ ಕಾಣೆಯಾದ ಹುಡುಗಿಯದಾಗಿತ್ತು..

ಹುಗ್ಗಾಟ ಆಡುವಾಗ ಈ ಹುಡುಗಿ ಹಂಡೆಯ ಒಳಗೆ ಕುಳಿತುಕೊಂಡು ಮುಚ್ಚಳ ಹಾಕಿಕೊಂಡಿರಬಹುದು ಅಥವಾ ಇವಳನ್ನು ಬೇರೆ ಮಕ್ಕಳು ಒಳಗೆ ಕುಳಿತುಕೊಳ್ಳಿಸಿ ಹೊರಗಿನಿಂದ ಮುಚ್ಚಳ ಹಾಕಿದ್ದು ಮರೆತಿರಬಹುದು..

ಏನಾಯಿತು.. ದೇವರೊಬ್ಬನೇ ಬಲ್ಲ..ಆ ಹುಡಿಗಿ ಕುಳಿತಿದ್ದ ಹಂಡೆಯ ಮುಚ್ಚಳ ಬಹಳ ಗಟ್ಟಿಯಾಗಿ ಕುಳಿತಿದ್ದು ಹುಡುಗಿ ಕೂ ಹಾಕಿದ್ದು ಯಾರಿಗೂ ಕೇಳಿಸಿರಲಾರದು.ಅ ಅದರೊಳಗೆ ಗಾಳಿ ಸಾಲದೆ ಕೂಡಲೇ ಸತ್ತಿರಲೂ ಸಾಕು.

ಎರಡನೇ ಮಾಳಿಯಲ್ಲಿ ಹಳೆಯ ಸಾಮಾನುಗಳ ಜೊತೆ ಇದ್ದ ಕಾರಣ ಇವಳಲ್ಲಿ ಅವಿತಿರಬಹುದು ಎಂಬ ಊಹೆ ಯಾರಿಗೂ ಬಂದಿರಲಾರದು.ಅಥವಾ ಹೀಗೊಂದು ಆಗಬಹುದು ಎಂದು ಯಾರೂ ಊಹೆ ಮಾಡಿರಲಾರರು.

ಒಟ್ಟಿನಲ್ಲಿ ಆ ಹುಡುಗಿ ಸತ್ತದ್ದು ನಿಜವಂತೆ.

ಎರಡನೆಯ ಮಾಳಿಗೆಯಲ್ಲಿ ಇದ್ದ ಕಾರಣ ,ಅಲ್ಲಿಗೆ ಯಾರೂ ಹೋಗದಿರುವ ಕಾರಣ ಹೆಣ ಕೊಳೆತಾಗಲೂ ಗಮನಕ್ಕೆ ಬರಲಿಲ್ಲವೆನೋ ಅಥವಾ ಹಳ್ಳಿ ಮನೆಗಳಲ್ಲಿ ಕೆಲವೊಮ್ಮೆ ಹೆಗ್ಗಣ ,ಹಾವುಗಳು ಕೊಳೆತು ವಾಸನೆ ಬರುತ್ತಿದ್ದುದು ಸಾಮಾನ್ಯ ವಿಚಾರ ‌ಹಾಗೆಯೇ ಎಂದು ಭಾವಿಸಿರಬಹುದೋ ಏನೋ..

ಇದು ನಮ್ಮ ಅಜ್ಜನ ಪಿಜ್ಜನ ಕಾಲದಲ್ಲಿ ಅವರ ಸಂಬಂಧಿಕರ ಮನೆಯಲ್ಲಿ ನಡೆದ ವಿಚಾರ ಎಂದು ಪೆಲತ್ತಡ್ಕದ  ಅಜ್ಜಿ ನಮಗೆ ಹೇಳಿದ್ದರು‌

ಈ ನಿಜ ಘಟನೆ ಎಲ್ಲೋ ನಡೆದದ್ದು ನಮ್ಮ ಅಜ್ಜಿಗೂ ಗೊತ್ತಿದ್ದಿರಬೇಕು‌ ಅದಕ್ಕಾಗಿ ನಮ್ಮನ್ನು ಎರಡನೇ ಮಾಳಿಗೆಗೆ ಹತ್ತಲು ಬಿಡುತ್ತಿರಲಿಲ್ಲ.ಹಂಡೆಯನ್ನೆಲ್ಲ ಕವುಚಿ ಹಾಕಿದ್ದರು.

ನಮ್ಮ ಪೆಲತ್ತಡ್ಕದ ಅಜ್ಜಿ ಈ ಕಥೆ ಹೇಳಿದ ಮೇಲೆ  ಈ ಆಟದಲ್ಲಿ ನಾವು ಆಸಕ್ತಿ ಕಳೆದುಕೊಂಡಿದ್ದೆವು.ಯಾವಾಗಾದರೊಮ್ಮೆ ಆಡುವಾಗ 

 ಸಣ್ಣ ಮಕ್ಕಳ ಬಗ್ಗೆ ತುಂಬಾ ಜಾಗ್ರತೆ ವಹಿಸುತ್ತಿದ್ದೆವು‌.


ಪಾಪ ಹಂಡೆಯೊಳಗೆ ಸತ್ತ ಆ ಹುಡುಗಿ ಎಷ್ಟು ಭಯ ಪಟ್ಟಿದ್ದಳೋ,ಬೊಬ್ಬೆ ಹಾಕಿದ್ದಳೋ ಹಸಿವು ಬಾಯಾರಿಕೆಯಿಂದ ನರಳಿದಳೋ,ಗಾಳಿ ಸಾಲದೆ ಒದ್ದಾಡಿದಳೋ..ಅಜ್ಜಿ ಈ ನಿಜವಾದ  ಕಥೆ ಹೇಳಿದಾಗ ಅಂದು ನಾವೆಲ್ಲ ದುಃಖಿಸಿ ದುಃಖಿಸಿ ಅತ್ತಿದ್ದೆವು.ನಮ್ಮ ಜೊತೆಗೆ ಅಜ್ಜಿ ಕೂಡ ಕಣ್ಣೀರು ಹಾಕಿದ್ದರು‌. ನೆನೆದರೆ ಈಗಲೂ ಕಣ್ಣು ಹನಿಗೂಡುತ್ತದೆ‌.

ಮಕ್ಕಳ ಬಗ್ಗೆ ತುಂಬಾ ಜಾಗ್ರತೆ ವಹಿಸಬೇಕು .ಇತ್ತೀಚೆಗೆ ಮಾಳಿಗೆಯಿಂದ ಮಗುವೊಂದು ಬಿದ್ದು ಸಾವನ್ನಪ್ಪಿದ ವಿಚಾರ ಓದಿದ್ದೆ‌‌..ನಾನು ಚಿನ್ಮಯ ಶಾಲೆಯಲ್ಲಿ ಶಿಕ್ಷಕಿ ಆಗಿದ್ದಾಗ ಐದನೆಯ ತರಗತಿಯ ಮಗುವೊಂದು ಐದು ಫ್ಲೋರ್ ನ ಫ್ಲಾಟ್ ನಿಂದ ಆಡುತ್ತಾ ಅಡುತ್ತಾ ಬಿದ್ದ ಚೆಂಡನ್ನು ತೆಗೆಯಲು ನೆರಳಿಗಾಗಿ ಹಾಸಿದ್ದ ಶೀಟ್ ಮೇಲೆ ಕಾಲಿಟ್ಟು ಬಿದ್ದು ಸಾವನ್ನಪ್ಪಿದ ದುರಂತ ನಡೆದಿತ್ತು.ನೀರಿನ ಸಂಪಿಗೆ ಬೀಳುದು,ಆಡಲು ಹೋಗಿ ಕೆರೆ ನದಿಯಲ್ಲಿ ಮುಳಗುವ ವಿಚಾರಗಳನ್ನು ಕೇಳುತ್ತಲೇ ಇರ್ತೇವೆ‌.ಅದಕ್ಕಾಗಿ ನಾವು ಸದಾ ಜಾಗ್ರತೆಯಿಂದ ಇರಬೇಕು.

ಡಾ.ಲಕ್ಷ್ಮೀ ಜಿ ಪ್ರಸಾದ 

Thursday, 5 November 2020

ಕೆರೆಕೋಡಿಯ ಸುರಂಗದ ನೀರು ಮತ್ತು ಅಣ್ಣ ತಂದು ಕೊಡುತ್ತಿದ್ದ ಚಾಕೊಲೇಟ್ ನ ಸವಿ

 ಕೆರೆಕೋಡಿಯ ಸುರಂಗದ ನೀರು ಮತ್ತು ಅಣ್ಣ ತಂದು  ಕೊಡುತ್ತಿದ್ದ ಚಾಕೊಲೇಟ್ ನ ಸವಿ 


ನಾನು ಹೆಚ್ಚು ಅಜ್ಜನ ಮನೆಯಲ್ಲಿ ಬೆಳೆದವಳು.ನನ್ನ ಅಜ್ಜ ಹೊಸಮನೆ  ಈಶ್ವರ ಭಟ್ಟರಿಗೆ ನನ್ನ ಅಮ್ಮ ಮತ್ತು ದೊಡ್ಡಮ್ಮ ಇಬ್ಬರೇ ಮಕ್ಕಳು.

ದೊಡ್ಡಮ್ಮನ ಮಗಳು  ಅಕ್ಕ ಪಾರ್ವತಿ ,ಅಣ್ಣ ರಾಧಾ ಕೃಷ್ಣ ಭಟ್,ದೊಡ್ಡಮ್ಮನ ಎರಡನೇ ಮಗಳು ಜಯಲಕ್ಷ್ಮಿ ( ಶಶಿ) ,ದೊಡ್ಡಮ್ಮನ ಮೂರನೇ ಮಗಳು ರಾಜೇಶ್ವರಿ ಮತ್ತು ನಾನು  ಅಜ್ಜನ ಮನೆಯಿಂದ ಶಾಲೆಗೆ ಹೋಗುತ್ತಿದ್ದೆವು.

ನಮ್ಮ ಅಜ್ಜನ‌ ಮನೆಯಲ್ಲಿ ಎಮ್ಮೆ ,ದನಗಳನ್ನು ಸಾಕುತ್ತಿದ್ದರು.ಸಾಕಷ್ಟು ಹಾಲು ಸಿಗುತ್ತಿತ್ತು .ಮನೆವಾರ್ತೆಗೆ ಮಿಕ್ಕಿದ್ದನ್ನು ಮುಂದಿಲದವರ ಹೋಟೆಲ್ ಗೆ ಮಾರಾಟ ಮಾಡುತ್ತಿದ್ದರು.

ಬೆಳಗ್ಗೆ ಶಾಲೆಗೆ ಹೋಗುವಾಗ ಹಾಲು ತಗೊಂಡು ಅಣ್ಣ ಹೋಟೆಲ್ ಗೆ ಕೊಡುತ್ತಿದ್ದ.ನಮಗೆ ಶಾಲೆಗೆ ಹೋಗಲು ಎರಡು ದಾರಿ ಇತ್ತು.ಒಂದು ಗುಡ್ಡದಲ್ಲಿ ಹೋಗಿ ಕೆರೆಕೋಡಿ ಮಾಸ್ಟ್ರ ಗುಡ್ಡೆಯ ದಾರಿಯಲ್ಲಿ ಸಾಗಿ ಮೀಯಪದವು ತಲುಪುದು.ಇನ್ನೊಂದು ಶೇಡಿ ಗುಡ್ಡೆ ಹತ್ತಿ ಮೀಯಪದವು ತಲುಪುದು

ನಾವು ಬೆಳಗ್ಗೆ ಹೋಗುವಾಗ ಕೆರೆ ಕೋಡಿ ಗುಡ್ಡೆಯ ದಾರಿ ಆಯ್ಕೆ ಮಾಡುತ್ತಿದ್ದೆವು.ಈ ಕೆರೆಕೋಡಿ ಮಾಸ್ಟ್ರ ಜಾಗದಲ್ಲಿ ಇರುವ ಗುಡ್ಡೆಯಲ್ಲಿ ಒಂದು ಸುರಂಗ ಇತ್ತು.ಈಗಲೂ ಇರಬಹುದೋ ಏನೋ.

ಅದರಲ್ಲಿ ವರ್ಷದ ಎಲ್ಲಾ ದಿನಗಳಲ್ಲಿ ಕೂಡ ಸ್ವಚ್ಛವಾದ ನೀರು ಬರುತ್ತಿತ್ತು.ಅದನ್ನು ಒಂದು ಗುಂಡಿಗೆ ಬಂದು ಬೀಳುವಂತೆ ಮಾಡಿದ್ದರು.ಅಲ್ಲಿಂದ ಪೈಪಿನ ಮೂಲಕ ಅವರ ಮನೆಗೆ ನೀರು ಹೋಗುತ್ತಾ ಇತ್ತು.

ಈ ನೀರು ಬಹಳ ರುಚಿ.ನೋಡಿದ ತಕ್ಷಣವೇ ಕುಡಿಯಬೇಕು ಎನಿಸುವಷ್ಟು ಸ್ವಚ್ಛ.

ನಾವು ಬೆಳಗ್ಗೆ ಶಾಲೆಗೆ ಹೋಗುವಾಗ ಇಲ್ಲಿ ಬರುತ್ತಿದ್ದೆವು.ನೀರು ಕುಡಿಯಲು ಅಲ್ಲ.ಅದಕ್ಕೆ ಬೇರೆಯೇ ಕಾರಣ ಇದೆ.ಈಗ ನೆನಪಾಗಿ  ನಗು ಬರುತ್ತದೆ.

ನಮ್ಮ ಅಜ್ಜಿ ಬಹಳ ಪ್ರಾಮಾಣಿಕ ಮಹಿಳೆ.ಹಾಗಾಗಿ ಹೋಟೆಲಿಗೆ ಕೊಡುವ ಹಾಲಿನ ಒಂದು ತೊಟ್ಟು ಕೂಡ ನೀರು ಸೇರಿಸುತ್ತಿರಲಿಲ್ಲ..

ನಾವು ಮಕ್ಕಳು ಮಾತ್ರ ಚಾಕೊಲೇಟ್ ನ ಆಸೆಗೆ  ದ್ರೋಹ ಮಾಡುತ್ತಿದ್ದೆವು.ದಾರಿಯಲ್ಲಿ ಸಿಗುವ ಈ ಸುರಂಗದ ನೀರನ್ನು ತೆಗೆದು ಅಜ್ಜಿ ಅಳೆದು ಕೊಟ್ಟ ಹಾಲಿನ ಪಾತ್ರೆಗೆ ಒಂದು ಕುಡ್ತೆಯಷ್ಟು ಹಾಕುತ್ತಿದ್ದೆವು.

ಅಜ್ಜಿ ಹಾಲು ತುಂಬಿಸಿ ಕೊಡುವ ಅಲ್ಯೂಮಿನಿಯಂ ಬುತ್ತಿ ಪಾತ್ರದ ಮುಚ್ಚಳದಲ್ಲಿ‌ ಎಂಟು ಸಲ ನೀರು ತುಂಬಿ ಹಾಕಿದರೆ ಒಂದು ಕುಡ್ತೆ ಆಗುತ್ತಿತ್ತು.ಇದನ್ನು ಮನೆಯಲ್ಲಿ ಅಳೆದು  ದೊಡ್ಡಮ್ಮನ ಮಗ ಅಣ್ಣ ಕಂಡುಕೊಂಡಿದ್ದ. 

ನಾವು ಹತ್ತು ಮುಚ್ಚಳ ನೀರು ಹಾಕುತ್ತಿದ್ದೆವು.ಹೋಟೆಲಿಗೆ ಹಾಲು ಕೊಡುವಾಗ ಅಜ್ಜಿ ಹೇಳಿದ ಅಳತೆಗೆ ಒಂದು ಕುಡ್ತೆ ಹೆಚ್ಚು ಸೇರಿಸಿ ಹೇಳುತ್ತಿದ್ದೆವು.ಆಗ ಹಾಲು ಕೊಟ್ಟ ತಕ್ಷಣವೇ ದುಡ್ಡು ಕೊಡುತ್ತಿದ್ದರು.ಅವರು ಅಳೆದು ನೋಡಿದರೆ ನಾವು ಹೇಳಿದ್ದಕ್ಕಿಂತ ಸ್ವಲ್ಪ ಜಾಸ್ತಿಯೇ ಹಾಲು ಇರ್ತಿತ್ತು‌.ಯಾಕೆಂದರೆ ನಾವು ಎಂಟು ಮುಚ್ಚಳದ ಬದಲು ಹತ್ತು‌ ಮುಚ್ಚಳ ನೀರು ಸೇರಿಸುತ್ತಿದ್ದೆವಲ್ಲ.

ಹೀಗೆ ಒಂದು ಕುಡ್ತೆ ಹೆಚ್ಚು ಮಾಡಿದಾಗ ನಮಗೆ ಒಂದು ಕುಡ್ತೆ ಹಾಲಿನ ದುಡ್ಡು ಹೆಚ್ಚುವರಿಯಾಗಿ ಸಿಗುತ್ತಿತ್ತು. ಈ ದುಡ್ಡಿನಲ್ಲಿ  ಅಣ್ಣ ಚಾಕೊಲೇಟ್ ಬಿಸ್ಕತ್ತು ಗಳನ್ನು ಅಂಗಡಿಯಿಂದ ಖರೀದಿಸಿ ಸಮಪಾಲು ಮಾಡಿ ಒಂದು ಪಾಲು ತಾನಿಟ್ಟುಕೊಂಡು ಉಳಿದದ್ದನ್ನು ನಮಗೆ ಹಂಚುತ್ತಿದ್ದ‌‌‌.ಹಂಚುವಾಗ ಅಣ್ಣನಲ್ಲಿ ಸ್ವಲ್ಪವೂ ಪಕ್ಷಪಾತ ಇರಲಿಲ್ಲ ‌ತನ್ನ ಸ್ವಂತ  ಅಕ್ಕ ತಂಗಿಯರಂತೆಯೇ ನನ್ನನ್ನು ಕಾಣುತ್ತಿದ್ದ.ಆಟದಲ್ಲಿ ಇರಬಹುದು ,ತಿಂಡಿಕೊಡುವಾಗ ಇರಬಹುದು.. ಅಣ್ಣನಿಗೆ ನಮ್ಮ ನಡುವೆ ಒಂದಿನಿತು ಬೇಧ ಭಾವವಿರಲಿಲ್ಲ(.ಅವರು ಅಂದು ಬಾಲಕನಿದ್ದಾಗ  ಹೇಗೆಯೋ ಇಂದು ಕೂಡ ಹಾಗೆಯೇ ಇದ್ದಾರೆ .ಅವರ ಸ್ವಂತ ಅಕ್ಕ ತಂಗಿಯರಲ್ಲಿ ಇರುವಂತಹದೇ ಪ್ರೀತಿ ಚಿಕ್ಕಮ್ಮನ ಮಕ್ಕಳಾದ ನಮ್ಮಲ್ಲಿ ಕೂಡ)

ಮನೆಯಲ್ಲಿ ಅಜ್ಜಗೆ ಅಜ್ಜನಿಗೆ ಈ ವಿಚಾರ ತಿಳಿಯದಂತೆ ನಾವು ಜಾಗ್ರತೆ ವಹಿಸಿದ್ದೆವು.ಅಜ್ಜಿ ಗಟ್ಟಿಯಾದ ಹಾಲನ್ನೇ ಕೊಡುತ್ತಿದ್ದರು.ಹದಿನೈದು ಇಪ್ಪತ್ತು ಕುಡ್ತೆ ಗಟ್ಟಿ ಹಾಲಿಗೆ ಒಂದು ಕುಡ್ತೆ ನೀರು ಸೇರಿಸಿದ್ದು ಹೋಟೆಲಿನವರ ಗಮನಕ್ಕೂ ಬರುತ್ತಿರಲಿಲ್ಲ ‌ಯಾಕೆಂದರೆ  ಎಮ್ಮೆ ಹಾಲು ತುಂಬಾ ದಪ್ಪ ಇರುತ್ತದೆ.ಒಂದು ಲೀಟರ್ ಗೆ ಒಂದು ಕುಡ್ತೆ ನೀರು ಹಾಕಿದರೂ ಕೂಡ ನೀರು ಹಾಕುದ್ದಾರೆ ಎಂದು ಗೊತ್ತಾಗದಷ್ಟು ಗಟ್ಟಿ ಹಾಲು ಅದು.ಇನ್ನೂ ನಮ್ಮ ಅಜ್ಜಿ ದಿನಕ್ಕೆ ಎರಡು ಎರಡೂವರೆ ಲೀಟರ್ ಹಾಲು ಹೋಟೆಲಿಗೆ ಮಾರುತ್ತಿದ್ದರು.ಅವರು ಒಂದು ತೊಟ್ಟು ನೀರು ಹಾಕುತ್ತಿರಲಿಲ್ಲ.ಹಾಗಾಗಿ ನಾವು ಒಂದು ಕುಡ್ತೆ ನೀರು ಸೇರಿಸುದರಿಂದ ಹಾಲು ತೆಳು ಎಂದೆನಿಸುತ್ತಿರಲಿಲ್ಲ‌.ಕೆರೆಕೋಡಿಯ ಸುರಂಗದ ಶುದ್ದ ನೀರನ್ನು ಸೇರಿಸುತ್ತಿದ್ದ ಕಾರಣ ಆರೋಗ್ಯ ಹಾಳಾಗುವ ಸಾಧ್ಯತೆಯೇ ಇರಲಿಲ್ಲ.


.ನಾನು ಅಜ್ಜನ ಮನೆಯಲ್ಲಿ ದೊಡ್ಡಮ್ಮನ ಮಕ್ಕಳ ಜೊತೆಗೆ ಬೆಳೆದ ಕಾರಣ ನನಗೂ ಅವರಲ್ಲಿ ನನ್ನ ಸ್ವಂತ ಅಣ್ಣ ಅಕ್ಕ ತಮ್ಮಂದಿರಲ್ಲಲಿ ಇರುವಷ್ಟೇ ಫ್ರೀತಿ ಸೆಳೆತ.

ಅದರಲ್ಲೂ ದೊಡ್ಡಮ್ಮನ ಮೂರನೇ ಮಗಳು ರಾಜೇಶ್ವರಿ ಮತ್ತು ನಾನು ಗಳಸ್ಯ ಕಂಠಸ್ಯ..

ಒಂದೇ ಒಂದು ಸಲ ನಮ್ಮೊಳಗೆ ಯಾವುದೇ ವಿಚಾರಕ್ಕೆ ಜಗಳವಾದದ್ದಿಲ್ಲ..ನಾವಿಬ್ಬರೂ ದೊಡ್ಡ ಕಸಂಟುಗಳು.ಜಗಳಗಂಟಿಯರು.ಆದರೆ ನಮ್ಮೊಳಗೆ ಬಹಳ ಸ್ನೇಹ‌.ಒಗ್ಗಟ್ಟು.. ನಾವು ಅಣ್ಣ ಅಕ್ಕ ತಮ್ಮ ತಂಗಿಯರ ಜೊತೆಗೆ ಜಗಳವಾಡದ ದಿನವೇ ಇಲ್ಲ..ಅಷ್ಟು ಕುಖ್ಯಾತರು.

ಎಲ್ಲೇ ಹೋಗಲಿ, ನಾವು ಇಬ್ಬರು ಜೊತೆಗೆ ಹೋಗುದು ಬರುವುದು ಮಾಡುತ್ತಿದ್ದೆವು‌.

ನಾನು ಪಿಯುಸಿ ಓದುತ್ತಿದ್ದಾಗ ಅಜ್ಜ ತೀರಿ ಹೋದರು.ನಮ್ಮ ಮನೆಗಳ ನಡುವೆ ಆಸ್ತಿ ವುವಾದ ಹುಟ್ಟಿತು.ಒಂದಷ್ಟು ಜನರು ನ್ಯಾಯವಾಗಿ ಪರಿಹರಿಸುವ ಬದಲು ಸಣ್ಣ ಬೆಂಕಿಗೆ ತುಪ್ಪ ಎರೆದು ಗಾಳಿ ಹಾಕಿ ದೊಡ್ಡದು ಮಾಡಿದರು..

ಆದರೆ ಅದು ತುಂಬಾ ಸಮಯ ನಡೆಯಲಿಲ್ಲ ನಾವು ಮತ್ತೆ ರಾಜಿಯಾದೆವು.

ಈ ನಡುವಿನ ಸಮಯದಲ್ಲಿ ನಮಗೆ ಹೋಗುದು ಬರುವ ಸಂಬಂಧ ಇರಲಿಲ್ಲ. ಅದರೆ ನಾವಿಬ್ಬರು ( ನಾನು ಮತ್ತು ರಾಜೇಶ್ವರಿ) ಎಂದಿನಂತೆ ಕಾಲೇಜಿನಲ್ಲಿ ಸಿಕ್ಕಾಗ ಪಟ್ಟಾಂಗ ಹೊಡೆಯುತ್ತಿದ್ದೆವು.

ಮನೆಗಳ ನಡುವಿನ ಆಸ್ತಿಯ ವುವಾದ ನಮ್ಮ ಮನಗಳನ್ನು ಒಡೆಯುವಷ್ಟು ಗಟ್ಟಿಯಾಗಿರಲಿಲ್ಲ.ಅಥವಾ ನಮ್ಮ ಮನಸ್ಸನ್ನು ಒಡೆಯುವುದು ಸುಲಭದ ವಿಚಾರವಾಗಿರಲಿಲ್ಲ.ಅಷ್ಟೂ ಸಾಂಗತ್ಯ ನಮ್ಮೊಳಗೆ..ಮತ್ತೆ ಬಾಲ್ಯಕ್ಕೆ ಇಳಿದು ಮಕ್ಕಳಾಗಿ ನಲಿಯಬೇಕೆನಿಸುತ್ತದೆ ನನಗೆ‌.

ಇನ್ನೂ ಅನೇಕ ಹೇಳಲು ಇದೆ.ಇನ್ನೊಂದು ದಿನ ಬರೆಯುವೆ‌

ಲಕ್ಷ್ಮೀ ಜಿ ಪ್ರಸಾದ


Friday, 30 October 2020

ನನಗೂ ಆತ್ಮವಿದೆ ..ಅದಕ್ಕೂ ಒಂದು ಕಥೆ ಇದೆ - ಬಿ ಸೀರೆಯ ಹಿಂದೆಯೂ ಒಂದು ಕಥೆ ಇದೆ - ಡಾ.ಲಕ್ಷ್ಮೀ ಜಿ ಪ್ರಸಾದ್


 ಬಿಳಿ ಸೀರೆಯ ಹಿಂದೆಯೂ ಒಂದು ಕಥೆ ಇದೆ


ಅದು ನಮ್ಮ ಬದುಕಿನ ಸಂಕ್ರಮಣ. ಕಾಲ..ಆಗಷ್ಟೇ ಸಂಸ್ಕೃತ ಎಂಎ ಓದು ಮುಗಿಸಿ ಶ್ರೀ ರಾಮ ಪ್ರಾಥಮಿಕ ಶಾಲೆಯಲ್ಲಿ ಸಂಸ್ಕೃತ ಟೀಚರ್ ಆಗಿ ಸೇರಿಕೊಂಡಿದ್ದೆ‌

ಆಗ ನಮ್ಮ ಎಂಎ ರಿಸಲ್ಟ್ ಬಂತು.ನಾನು ಮೊದಲ ರ‌್ಯಾಂಕ್ ಪಡೆದಿದ್ದೆ.

ಮತ್ತೆ ಸ್ವಲ್ಪ ಸಮಯ ಕಳೆದಾಗ ಘಟಿಕೋತ್ಸವ ಬಂತು.

ರ‌್ಯಾಂಕ್ ಪಡೆದವರಿಗೆ ಯುನಿವರ್ಸಿಟಿ ಯಿಂದ ವಿಶೇಷ ಅಹ್ವಾನ ಬರುತ್ತದೆ.ಹಾಗೆಯೇ ನನಗೂ ಬಂತು.


ನಮ್ಮ ಶಿಕ್ಷಣ ವ್ಯವಸ್ಥೆಯ ದುರಂತ ನೋಡಿ..

ರ‌್ಯಾಂಕ್ ತೆಗೆದವರು ಪ್ರಮಾಣ  ಪತ್ರ ಪಡೆಯಲು 400-500₹ ಪ್ರತ್ಯೇಕ ಶುಲ್ಕ ನೀಡಬೇಕು. ಆಗ ನನಗೆ ತಿಂಗಳಿಗೆ ಸಿಗುತ್ತಿದ್ದ ವೇತನ 750₹.

ಅದರಲ್ಲಿ ಮಂಗಳೂರಿನಿಂದ ಕಲ್ಲಡ್ಕಕ್ಕೆ ಹೋಗಿ ಬರುವ ಚಾರ್ಜ್ ಕಳೆದರೆ ನನಗೆ ಉಳಿಯುತ್ತಿದ್ದದು 300₹ .

ಪ್ರಸಾದರಿಗೂ ಸಣ್ಣ ಸಂಬಳದ ಕೆಲಸ ಇದ್ದದ್ದು

ಸ್ನಾತಕೋತ್ತರ. ಪದವಿ ಪ್ರಮಾಣ ಪತ್ರ  ರ‍್ಯಾಂಕ್  ಪ್ರಮಾಣ ಪತ್ರ  ಮತ್ತು ಚಿನ್ನದ ಪದಕ ಪಡೆಯಕು ಪಡೆಯಲು ನಾನು 900₹ ತುಂಬಬೇಕಿತ್ತು.

ಇದನ್ನು ಹೊಂದಿಸಲು ನಾವು ಬಹಳ ಕಷ್ಟ ಪಡಬೇಕಾಯಿತು.

ಅಂತೂ ರ‌್ಯಾಂಕ್ ಪಡೆದ ಸಂಭ್ರಮದಲಿ ಈ ಕಷ್ಟವನ್ನು ಸಹಿಸಿಕೊಂಡೆವು.ಚಿನ್ನದ ಪದಕ ಪಡೆಯುವ ಸುವರ್ಣ ಕ್ಷಣವನ್ನು ಕಾಯುತ್ತಾ ಇದ್ದೆ‌.

ಘಟಿಕೋತ್ಸವಕ್ಕೆ ಒಂದು ವಾರ ಇರುವಾಗ ನನಗೆ ವಿಶೇಷ ಆಹ್ವಾನ ಪತ್ರ ಬಂತು.ಅದರಲ್ಲಿ ಬಿಳಿ ಸೀರೆ/ ಚೂಡಿದಾರ್ ಧರಿಸಿ ಬರಬೇಕು ಎಂದು ತಿಳಿಸಿದ್ದರು.

ತಲೆಗೆ ಬಂಡೆ ಕಲ್ಲು ಬಿದ್ದ ಅನುಭವ ಆಯಿತು.ಯಾಕೆಂದರೆ ನನ್ನಲ್ಲಿ ಬಿಳಿ ಸೀರೆ ಇರಲಿಲ್ಲ. ಅಮ್ಮ ಅಕ್ಕನಲ್ಲೂ ಇರಲಿಲ್ಲ. ಅನ್ಯರ ಬಳಿ ಕೇಳಲು ಸ್ವಾಭಿಮಾನ ಬಿಡಲಿಲ್ಲ.ಒಂದೊಮ್ಮೆ ಸೀರೆ ಸಿಕ್ಕರೂ  ಲಂಗ,ರವಿಕೆ ಹೊಲಿಸಿಕೊಳ್ಬೇಕು.ಅದಕ್ಕೂ ದುಡ್ಡು ಬೇಕು‌‌ಹೊಸ ಸೀರೆ ತೆಗೆಯಲೂ ದುಡ್ಡು ಬೇಕು..ದುಡ್ಡಿಗೆ ಎಲ್ಲಿ  ಹೋಗುದು ? 

ಏನು ಮಾಡುದು ? ನನ್ನದೊಂದು ಹಳೆಯ ಸೀರೆ ಇತ್ತು.ಅದು ಬಿಳಿ ಯಲ್ಲಿ ಕಡು ಗುಲಾಬಿ ಬಣ್ಣದ ಹೂವುಗಳಿದ್ದ ಸೀರೆ.ಅದು ಎರಡು ಕಡೆ ಹರಿದಿತ್ತು.

ಸರಿ ಅದನ್ನು ಉಡುವ ಎಂದು ಹರಿದ ಭಾಗದಲ್ಲಿ ಕೈಯಿಂದ ಹೊಲಿಗೆ ಹಾಕಿದೆ.

ಅದಕ್ಕೆ ರವಿಕೆ ಕಡು ಗುಲಾಬಿ ಬಣ್ಣದ್ದೇ ಇದ್ದದ್ದು‌

ಬೇರೆ ದಾರಿ ಇಲ್ಲದೇ ಅದೇ ಸೀರೆ ರವಿಕೆ ಉಟ್ಟುಕೊಂಡು ಹೋದೆ

ಅಲ್ಲಿ ಮೊದಲು ನಾವು ಬಂದದ್ದನ್ನು ರಿಜಿಸ್ಟರ್ ಮಾಡಬೇಕಿತ್ತು.ಆಗ ಅಲ್ಲಿ ಬಿಳಿ ಸೀರೆ ಉಟ್ಟುಕೊಂಡು ಬಂದರೆ ಮಾತ್ರ ಸ್ಟೇಜ್ ಗೆ ಬಿಡುವುದು ಎಂದರು.

ನನ್ನಲ್ಲಿ ಬೇರೆ ಬಿಳಿ ಸೀರೆ ಇಲ್ಲ ಎಂದೆ.ಅದೆಲ್ಲ ನಮಗೆ ಗೊತ್ತಿಲ್ಲ.ಇದು ಯುನಿವರ್ಸಿಟಿ ನಿಯಮ ಎಂದರು.

ನಂತರ ನನ್ನ ಹೆಸರು ಅಂಟಿಸಿ ಕಾದಿರಿಸಿದ  ಕುರ್ಚಿ ಬಳಿ ಹೋದೆ.ಅಲ್ಲಿ ಮೇಲ್ವಿಚಾರಣೆ ಮಾಡುತ್ತಾ ಇದ್ದವರು.ಬಿಳಿ ಸೀರೆ ಉಡದ ಕಾರಣ. ನನ್ನನ್ನು ಅಲ್ಲಿ ಕೂರಲು ಬಿಡಲಿಲ್ಲ.

ಬಡವಾ ನೀ ಮಡುಗಿದಾಂಗೆ ಇರಬೇಕು ಎಂದು ಸಾಮಾನ್ಯರು ಹಾಕಿದ ಖುರ್ಚಿಯಲ್ಲಿ  ಹೋಗಿ ಕುಳಿತೆ.

ಹೆಸರು ಕರೆದರೆ ವೇದಿಕೆಗೆ ಹೋಗಿ ರ‌್ಯಾಂಕ್ ಸರ್ಟಿಫಿಕೇಟ್  ಮತ್ತು ಚಿನ್ನದ ಪದಕ ತಗೊಳ್ಳಲು ವೇದಿಕೆಗೆ ಹೋಗುದು ಬಿಡದೇ ಇದ್ದರೆ ಹಿಂದೆ ಬರುವುದು ಎಂದು ನಿರ್ಧಾರ ಮಾಡಿದ್ದೆ.ಆದರೂ ಗಣ್ಯರಿಂದ ಗೋಲ್ಡ್ ಮೆಡಲ್  ಪಡೆಯಲು ಆಗದೇ ಹೋಗಬಹುದು ಎಂಬ ಆತಂಕ ಇತ್ತು.

ಒಬ್ಬರಾಗಿ ಒಬ್ಬರ ರ‌್ಯಾಂಕ್ ಮತ್ತು ಚಿನ್ನದ ಪದಕ ವಿಜೇತರ ಹೆಸರು ಕರೆಯತೊಡಗಿದರು.ನನಗೆ ವೇದಿಕೆ ಏರಲು ಬಿಡಲಾರರು ಎಂಬ ಆತಂಕದಿಂದ ಎದೆ ಬಡಬಡ ಹೊಡೆದುಕೊಳ್ತಾ ಇತ್ತು.

ನನ್ನ ಹೆಸರನ್ನು ಕೂಡ ಕರೆದರು.ಕೂಡಲೇ ಕುಳಿತಲ್ಲಿಂದ ಎದ್ದು ವೇದಿಕೆ ಕಡೆಗೆ ಧಾವಿಸಿದೆ.ಅಲ್ಲಿ ವೇದಿಕೆ ಏರುವ ಜಾಗದ ಬಳಿ ಇದ್ದವರು ನನ್ನನ್ನು ಬಿಳಿ ಸೀರೆ ಯಾಕೆ ಉಟ್ಟಿಲ್ಲ ಎಂದು ತಡೆದರು.ಆಗ ನನಗೆ ನನ್ನ ಶೋಚನೀಯ ಸ್ಥಿತಿಗೆ ಅಳು ಬಂತು.ಆಗ ವೇದಿಕೆ ಮೇಲೆ ಇದ್ದ ಅತಿಥಿಗಳೊಬ್ಬರು ಇರಲಿ ಅಡ್ಡಿಯಿಲ್ಲ..ನಾವು ಸೀರೆಗೆ ಮೆಡಲ್ ಕೊಡುವುದಲ್ಲ..ಅವರ ಪರಿಶ್ರಮ ಕ್ಕೆ ಕೊಡುವ ಪುರಸ್ಕಾರ ..ಮೇಲೆ ಬಿಡಿ..ಎಂದರು‌

ಮೇಲೆ ಹೋದೆ.ನನಗೆ ಭಾವನೆಗಳನ್ನು ನಿಯಂತ್ರಿಸಲು ಬಹಳ ಕಷ್ಟ ಆಗುತ್ತಿತ್ತು.

ಮೆಡಲ್ ಅನ್ನು ಅಳುತ್ತಲೇ ಪಡೆದೆ..ಆಗ ನನ್ನನ್ನು ವೇದಿಜೆಗೆ ಕರೆದ ಆ ಗಣ್ಯ ವ್ಯಕ್ತಿ ಅಳುವ ಕ್ಷಣವಲ್ಲ.ಇದು ಹೆಮ್ಮೆ ಪಡಬೇಕಾದ ಘಳಿಗೆ ,ಶುಭವಾಗಲಿ ಎಂದು ಹಾರೈಸಿದರು..

ಆಗ ನಮ್ಮಲ್ಲಿ ಕೆಮರಾ ಎಲ್ಲಿ ಇತ್ತು? ಫೋಟೋ ಗ್ರಾಫರ್ ಗೆ ಮೊದಲೇ ದುಡ್ಡು ಕೊಟ್ಟು ವ್ಯವಸ್ಥೆ ಮಾಡದರೆ ಪೋಟೋ ತೆಗೆದು ಕಲುಹಿಸುವ ವ್ಯವಸ್ಥೆ ಅಲ್ಲಿತ್ತು.ಆದರೆ ಅದಕ್ಕೂ ದುಡ್ಡು ಬೇಕಲ್ಲ..ಹಾಗಾಗಿ ನನಗೆ ಯಾರ ಕೈಯಿಂದ ರ‌್ಯಾಂಕ್ ಸರ್ಟಿಫಿಕೇಟ್  ಮತ್ತು ಗೋಲ್ಡ್ ಮೆಡಲ್ ಪಡೆದೆ,ನನ್ನನ್ನು ಸಹೃದಯತೆಯಿಮದ ವೇದಿಕೆಗೆ ಕರೆದ ಗಣ್ಯ ವ್ಯಕ್ತಿ ಯಾರೆಂದು ನನಗೆ ತಿಳಿದಿಲ್ಲ.

ಶಿಕ್ಷಣ ಸಚಿವರಾಗಿದ್ದ ವಿಶ್ವನಾಥ ? ಎಂಬವರಿಂದ ಗೋಲ್ಡ್ ಮೆಡಲು ಪಡೆದದ್ದು ಎಂದು ನೆನಪು.

ದೇವರು ದೊಡ್ಡವನು..ಮುಂದೆ ಒಳ್ಳೆಯ ಕಾಲವನ್ನು ಒದಗಿಸಿಕೊಟ್ಟ.

ಇದಾಗಿ ಹದಿಮೂರು ವರ್ಷಗಳ ನಂತರ  ಮೊದಲ ಡಾಕ್ಟರೇಟ್  ಪದವಿಯನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯ ದಿಂದ ಪಡೆದೆ.ಆಗಲೂ ಬಿಳಿ ಸೀರೆ ಉಡಬೇಕಿತ್ತು.ಅದಕ್ಕಾಗಿ ಒಂದು ಬಿಳಿ ಸೀರೆ ಖರೀದಿಸಿ ರವಿಕೆ ಹೊಲಿಸಿ ಉಟ್ಟುಕೊಂಡು ಹೋಗಿದ್ದೆ..

 ಅನೇಕರು ಡಾಕ್ಟರೇಟ್ ಹಾಗೂ ರ‌್ಯಾಂಕ್ ಗೋಲ್ಡ್ ಮೆಡಲು ಪಡೆಯಲು ಬಂದಿದ್ದರು


ಅದರಲ್ಲಿ ಅನೇಕರು ಬಿಳಿ ರೇಷ್ಮೆ ಸೀರೆ ಉಟ್ಟು ಕೊಂಡು ಅದಕ್ಕೆ ಮ್ಯಾಚಿಂಗ್ ಆಗಿ ಮುತ್ತಿನ ಬಳೆ ಸರ. ನೆಕ್ಲೆಸ್ ಧರಿಸಿ ಬಂದಿದ್ದರು..

ಆಗ ನನಗೂ ಹಾಗೆಯೆ ಮಾಡಬಹುದಿತ್ತು ಎನಿಸಿತು.. ಆಗ ನಾನು ಎರಡನೇ ಡಾಕ್ಟರೇಟ್  ಪದವಿಗಾಗಿ ಪ್ರಬಂಧ ಸಿದ್ಷತೆ ಮಾಡುತ್ತಾ ಇದ್ದೆ‌.

ಮುಂದಿನ ಬಾರಿ ಪಿ ಎಚ್ ಡಿ ಪಡೆಯುವಾಗ ಅದಕದಕಾಗಿಯೇ ಚೆಂದದ ಬಿಳಿ ರೇಷ್ಮೆ ಸೀರೆ ಖರೀದಿಸಿ,ಮುತ್ತಿನ ಬಳೆ ಮುತ್ತಿನ ಹಾರ ಧರಿಸಿಕೊಂಡು ಹೋಗಬೇಕು ಎಂದು ನಿರ್ಧರಿಸಿದೆ

ಆ ಅವಕಾಶ ನನಗೆ ತಪ್ಪಿ ಹೋಯಿತು. ಕುಪ್ಒಂ ದ್ರಾವಿಡ ಯುನಿವರ್ಸಿಟಿ ಯ ಘಟಿಕೋತ್ಸವದ ದಿನ ನಾನು ಬಿ ಎಡ್ ಪರೀಕ್ಷೆ ಬರೆಯಬೇಕಿತ್ತು.ಹಾಗಾಗಿ ನನಗೆ ಹೋಗಕಾಗಲಿಲ್ಲ.

ನಾನು ಸಜ್ಜನ ರಾಜಕಾರಣಿ ಡಾ.ವಿ ಎಸ್ ಆಚಾರ್ಯರಿಂದ ಮೊದಲ ಡಾಕ್ಟರೇಟ್ ಪದವಿ ಪಡೆದದ್ದು,ಅವರು ನನ್ನನ್ನು ತುಳು ಭಾಷೆಯಲ್ಲಿ ಮಾತನಾಡಿಸಿದ್ದು ಇನ್ನೂ  ಕಣ್ಣಿಗೆ ಕಟ್ಟುತ್ತಿದೆ ನನಗೆ.

- ಡಾ.ಲಕ್ಷ್ಮೀ ಜಿ ಪ್ರಸಾದ