ಹುಗ್ಗಾಟದ ಸಂಭ್ರಮ ಜಾರಿ ಹನಿಗಣ್ಣಾದ ಕ್ಷಣ
ಮನೆ ಹಿಂದಿನ ರಸ್ತೆಯಲ್ಲಿ ಖಾಲಿ ಜಾಗದಲ್ಲಿ ನಾಲ್ಕೈದು ಮಕ್ಕಳು ಐ ಸ್ಪೈಸ್ ? ಆಟ ಅಡುದನ್ನು ನೋಡಿದೆನಾವೂ ಹುಗ್ಗಾಟ ಆಡುತ್ತಿದ್ದ, ನಂತರ ನಿಜವಾಗಿ ನಡೆದ ಕಥೆಯೊಂದನ್ನು ಕೇಳಿ ಆಸಕ್ತಿ ಕಳೆದುಕೊಂಡ ವಿಚಾರ ನೆನಪಾಯಿತು
ನಾನು ಅಜ್ಜನ ಮನೆಯಲ್ಲಿ ಬೆಳೆದವಳು.
ನಮ್ಮ ಅಜ್ಜನ ಮನೆ ಕಾಸರಗೋಡಿನ ಮೀಯಪದವು ಸಮೀದ ಹೊಸಮನೆ.ಸುಮಾರು ಇನ್ನೂರು ವರ್ಷಗಳ ಹಳೆಯ ಮನೆ ಇದು.ಆಗಿನ ಕಾಲಕ್ಕೆ ಎರಡು ಅಂತಸ್ತಿನ ಉಪ್ಪರಿಗೆ ಮನೆ( ಎರಡು ಮಾಳಿಗೆಯ ಮನೆ) ಇದರಲ್ಲಿ ಮೇಲಿನ ಮಾಡಿನಲ್ಲಿ( ಮಾಳಿಗೆ ಯಲ್ಲಿ) ಒಂದು ದೋಣಿಯಾಕಾರದ ಮರದ ದೊಡ್ಡ ವಸ್ತು ಇತ್ತು ಬಹುಶ ಃ ಹಳೆಯ ದೋಣಿ ಇರಬಹುದೋ ಏನೋ. ಅದರಲ್ಲಿ ಏನೇನೋ ಪುಸ್ತಕಗಳು ಇದ್ದವು.ಕೆಲವು ತಾಳೆ ಗರಿ ಗ್ರಂಥಗಳು ಕೂಡ ಇದ್ದವೆಂದು ಅನಿಸುತ್ತದೆ. ಆಗ ಅದರ ಬಗ್ಗೆ ನಮಗೆ ಏನೇನೂ ಗೊತ್ತಿರಲಿಲ್ಲ. ಈಗ ಇವು ಒರಳೆ ಹಿಡಿದು ಹಾಳಾಗಿದೆಯೋ ಇದೆಯೋ ಇಲ್ಲವೋ ಎಂದು ಗೊತ್ತಿಲ್ಲ.
ನಾವು ಹುಗ್ಗಾಟ ಆಡಲು ಇಲ್ಲಿ ಅಡಗಿ ಕುಳಿತುಕೊಳ್ಳುತ್ತಾ ಇದ್ದೆವು.ಈ ಮಾಳಿಗೆಯಲ್ಲಿ ದೊಡ್ಡ ದೊಡ್ಡ ಮಣ್ಣಿನ ಹಂಡೆಗಳಿದ್ದವು.
ಈ ಹಂಡೆಗಳಲ್ಲಿ ನಾವು ಅಡಗಿ ಕುಳಿತುಕೊಳ್ಳುತ್ತಿದ್ದೆವು..
ಇದನ್ನು ಗಮನಿಸಿದ ಅಜ್ಜಿ ನಮಗೆ ಜೋರು ಮಾಡಿ ಹಂಡೆಗಳನ್ನೆಲ್ಲ ಕವುಚಿ ಹಾಕಿದ್ದರು ನಮ್ಮನ್ನು ಎರಡನೆಯ ಮಾಳುಗೆಗೆ ಹೋಗದ ಹಾಗೆ ಜೋರು ಮಾಡಿದ್ದರು
.ಬಹುಶಃ ನಾವು ಒಡೆದು ಹಾಕಬಹುದು ಎಂದು ಹೀಗೆ ಮಾಡಿರಬಹುದು ಎಂದು ನಾವು ಊಹಿಸಿದ್ದೆವು.
ಆದರೆ ಅದಕ್ಕೆ ಬೇರೆಯೇ ಒಂದು ದೊಡ್ಡ ದುಃಖದ ದುರಂತದ ಕಾರಣವಿತ್ತು.ಅದರ ಹಿಂದೆ ಒಂದು ದುರಂತದ ಕಥೆ ಇತ್ತು
ಇದನ್ನು ನಮ್ಮ ಅಜ್ಜನ ತಂಗಿ ಪೆಲತ್ತಡ್ಕದ ಅಜ್ಜಿ ಒಮ್ಮೆ ಹೇಳಿದ್ದರು.
ನಮ್ಮ ಹಳ್ಳಿಗಳಲ್ಲಿ ಆಗ ಹೀಗೇ ಅಲ್ಲೊಂದು ಇಲ್ಲೊಂದು ಮಾಳಿಗೆ ಮನೆಗಳಿರುತ್ತಿದ್ದವು.
ಇಂತಹದ್ದೇ ಒಂದು ಮನೆಯಲ್ಲಿ ಮಕ್ಕಳೆಲ್ಲ ಸೇರಿ ಹುಗ್ಗಾಟ ಆಡುತ್ತಿದ್ದರು.ಹುಗ್ಗಾಟ ಎಂದರೆ ಹುಡುಕುವ ಆಟ.ಇದರಲ್ಲಿ ಮನೆಯ ಅಂಗಳ ಒಂದು ತುದಿಯಲ್ಲಿ ಒಬ್ಬರು ಕಣ್ಣನ್ನು ಕೈಯಲ್ಲಿ ಮುಚ್ಚಿ ಕುಳಿತಿರುತ್ತಾರೆ.ಉಳಿದವರೆಲ್ಲ ಓಡಿ ಹೋಗಿ ಅಡಗಿ ಕುಳಿತುಕೊಳ್ಳುತ್ತಾರೆ.ಅಡಗಿದ ನಂತರ ಇಲ್ಲಿ ಕಣ್ಣು ಮುಚ್ಚಿದವರು ಕಣ್ಣಾ ಮುಚ್ಚೆ ಗಾಡೇ ಗೂಡೇ ಉದ್ದಿನ ಮೂಟೆ ಉರುಳೇ ಹೋಯ್ತು ನಿಮ್ಮಯ ಹಕ್ಕಿ ಬಿಟ್ಟೇ ಬಿಟ್ಟೆ ನಿಮ್ಮಯ ಹಕ್ಕಿ ಹಿಡಿದುಕೊಳ್ಳಿ ಇತ್ಯಾದಿ ದೊಡ್ಡದಾಗಿ ಹಾಡುತ್ತಿದ್ದರು.ಅಡಗಿದವರು ಕೂ ಹಾಕಿ ರೆಡಿ ಎಂಬುದನ್ನು ಸೂಚಿಸುತ್ತಿದ್ದರು.ಆ ಹುಡುಗಿ/ ಗ ಒಬ್ಬೊಬ್ಬರನ್ನೇ ಹುಡುಕಿ ಹಿಡಿಯಬೇಕು.ಸಿಕ್ಕಿದವರು ಉಳಿದವರನ್ನು ಹುಡುಕಲು ಸಹಾಯ ಮಾಡುತ್ತಾರೆ.ಇವರು ಆಗಾಗ ಕೂ ಹಾಕುತ್ತಾರೆ.ಅಡಗಿ ಕುಳಿತವರು ಕೂಡ ಹುಡುಕುವವರು ದೂರ ಹೋದಾಗ ಕೂ ಹಾಕಿ ತಮ್ಮ ಇರವನ್ನು ಸೂಚಿಸುತ್ತಾರೆ.ಮತ್ತೆ ಅವರು ಹುಡುಕುತ್ತಾರೆ ಹೀಗೇ ಎಲ್ಲರನ್ನೂ ಹಿಡಿದ ನಂತರ ಶರುವಿಗೆ ಸಿಕ್ಕವನು ಈಗ ಮತ್ತೆ ಕಣ್ಣು ಮುಚ್ಚಿ ಕುಳಿತುಕೊಳ್ಳಬೇಕು.ಉಳಿದವರೆಲ್ಲ ಅಡಗಿ ಕುಳಿತುಕೊಳ್ಳುತ್ತಾರೆ
ಹೀಗೇ ಒಂದು ದೊಡ್ಡ ಎರಡು ಮಾಳಿಗೆಯ ಮನೆಯಲ್ಲಿ ಅಕ್ಕ ಪಕ್ಕದ ಮಕ್ಕಳು ಅ ಮನೆಯ ಏಳೆಂಟು ಮಕ್ಕಳ ಜೊತೆಗೆ ಸೇರಿ ಹುಗ್ಗಾಟ ಆಡುತ್ತಿದ್ದರು.
ಆಟದ ನಡುವೆಯೇ ಮನೆ ಮಂದಿ ತಿಂಡಿಗೋ ಊಟಕ್ಕೋ ಕರೆದರು.ತಿಂದು ಬೇರೆ ಏನೆನೋ ಆಟ ಆಡಿದರು .ರಾತ್ರಿಯಾಗುತ್ತಲೇ ಎಲ್ಲರೂ ಅವರರವ ಮನೆ ಸೇರಿಕೊಂಡರು.ಆಟ ಆಡುವಾಗ ಆ ಮನೆಯ ಐದು ವರ್ಷದ ಚಿಕ್ಕ ಹುಡುಗಿ ಕೂಡ ಇದ್ದಳು.
ರಾತ್ರಿ ಹೊತ್ತು ಊಟದ ವೇಳೆಯಲ್ಲಿ ಈ ಹುಡುಗಿ ಇಲ್ಲದ್ದು ಮನೆಯವರ ಗಮನಕ್ಕೆ ಬಂತು.ಅಕ್ಕ ಪಕ್ಕದ ಸ್ನೆಹಿತರ ಮನೆಗೆ ಹೋಗಿರಬಹುದು ಎಂದು ಮನೆ ಮಂದಿ ಅಲ್ಲೆಲ್ಲ ಹೋಗಿ ಹುಡುಕಾಡಿದರು.ಎಲ್ಲೂ ಇಲ್ಲ.ಕೆರೆ ಬಾವಿ ಎಲ್ಲ ಬಗ್ಗಿ ನೋಡಿದರು.ಎಲ್ಲಾದರೂ ಕಾಲು ಜಾರಿ ಬಿದ್ದಿರಬಹುದೋ ಏನೋ ಎಂದು.. ಎಲ್ಲೂ ಇಲ್ಲ..
ಊರ ಜನರೆಲ್ಲಾ ಸೇರಿ ಹುಡುಕಾಡಿದರೂ ಸಿಗಲಿಲ್ಲ.
ಹುಡುಗಿ ಕಾಣೆ ಆದಳು..ಆಗೆಲ್ಲ ನಿತ್ಯ ಕರ್ಮಕ್ಕೆ ಗುಡ್ಡೆಗೆ ಇಲ್ಲವೇ ತೋಡಿಗೆ ಹೋಗುತ್ತಿದ್ದರು ಹಾಗೆ ಈ ಹುಡುಗಿ ಗುಡ್ಡೆಗೆ ಹೋಗಿದ್ದು ಹುಲಿಯೋ ಕತ್ತೆ ಕಿರುಬನೋ ಹಿಡಿರಬಹುದೇ ಎಂದು ಹುಡುಕಾಡಿದರು.ಅಥವಾ ತೋಡನ ನೀರಿಗೆ ಕೊಚ್ಚಿಕೊಂಡು ಹೋದಳೇ ಎಂದು ಹುಡುಕಿದರು.ಎಲ್ಲೂ ಅವಳ ದೇಹ ಕೂಡ ಸಿಗಲಿಲ್ಲ.
ಅನೇಕ ದಿನಗಳ ಕಾಲ ಮನೆಯವರು ಹುಡುಕಾಡಿದರು..ಸಿಗಲಿಲ್ಲ ನಿದಾನಕ್ಕೆ ಈ ವಿಚಾರವನ್ನು ಊರವರು ಮರೆತರು.ಹೆತ್ತ ತಂದೆ ತಾಯಿಗೆ ಮರೆಯಲಾದೀತೇ..ಆದರೂ ಉಳಿದ ಮಕ್ಕಳಿಗಾಗಿ ನೋವು ನುಂಗಿ ಎಂದಿನಂತೆ ಕೆಲಸದಲ್ಲಿ ತೊಡಗಿಕೊಂಡರು.
ಇದಾಗಿ ಎಷ್ಟೋ ವರ್ಷಗಳ ಮೂವತ್ತು ನಲುವತ್ತು ವರ್ಷಗಳ ನಂತರ ಮೇಲಿನ ಎರಡನೇ ಮಾಳಿಗೆಯಲ್ಲಿ ಇರಿಸಿದ್ದ ದೊಡ್ಡ ದೊಡ್ಡ ಹಂಡೆಗಳನ್ನು ಬಟ್ಟೆ ತುಂಬಿಸಿ ಇಡುವ ಸಲುವಾಗಿ ತೊಳೆದು ಇಡಬೇಕೆಂದು ಕೆಳಗೆ ತಂದರು
ಅಲ್ಲಿದ್ದ ನಾಲ್ಕೈದು ಹಂಡೆಗಳು ತೆರೆದೇ ಇದ್ದವು.ಒಂದರ ಮುಚ್ಚಳ ಗಟ್ಟಿಯಾಗಿ ಹಾಕಿತ್ತಂತೆ.ಮುಚ್ಚಳ ತೆಗೆಯಲು ಆಗದಷ್ಟು ಗಟ್ಟಿ ಇತ್ತಂತೆ ಕೆಳಗೆ ತಂದು ನೋಡುವಾ ಎಂದು ಮುಚ್ಚಳ ಸಹಿತವಾಗಿ ಆ ಹಂಡೆಯನ್ನು ಹೊತ್ತು ಕೆಳಗೆ ತಂದರಂತೆ.ಏನು ಮಾಡಿದರೂ ಅದರ ಮುಚ್ಚಳ ತೆರೆಯಲು ಆಗಲಿಲ್ಲ
ಈ ಹಂಡೆಯನ್ನು ತರುವಾಗ ಅದರೊಳಗೆ ಏನೋ ಇದ್ದ ಹಾಗೆ ಅನಿಸಿತ್ತು.ಹಾಗಾಗಿ ಕುತೂಹಲದಿಂದ ಆ ಮುಚ್ಚಳವನ್ನು ಒಡೆದು ತೆಗೆದರಂತೆ..
ಏನು ಹೇಳುದು ? ಅದರೊಳಗೆ ಒಂದು ಮನುಷ್ಯನ ಕುಳಿತ ಭಂಗಿಯ ಅಸ್ತಿಪಂಜರ ಇತ್ತಂತೆ.ಅದು ಆ ಕಾಣೆಯಾದ ಹುಡುಗಿಯದಾಗಿತ್ತು..
ಹುಗ್ಗಾಟ ಆಡುವಾಗ ಈ ಹುಡುಗಿ ಹಂಡೆಯ ಒಳಗೆ ಕುಳಿತುಕೊಂಡು ಮುಚ್ಚಳ ಹಾಕಿಕೊಂಡಿರಬಹುದು ಅಥವಾ ಇವಳನ್ನು ಬೇರೆ ಮಕ್ಕಳು ಒಳಗೆ ಕುಳಿತುಕೊಳ್ಳಿಸಿ ಹೊರಗಿನಿಂದ ಮುಚ್ಚಳ ಹಾಕಿದ್ದು ಮರೆತಿರಬಹುದು..
ಏನಾಯಿತು.. ದೇವರೊಬ್ಬನೇ ಬಲ್ಲ..ಆ ಹುಡಿಗಿ ಕುಳಿತಿದ್ದ ಹಂಡೆಯ ಮುಚ್ಚಳ ಬಹಳ ಗಟ್ಟಿಯಾಗಿ ಕುಳಿತಿದ್ದು ಹುಡುಗಿ ಕೂ ಹಾಕಿದ್ದು ಯಾರಿಗೂ ಕೇಳಿಸಿರಲಾರದು.ಅ ಅದರೊಳಗೆ ಗಾಳಿ ಸಾಲದೆ ಕೂಡಲೇ ಸತ್ತಿರಲೂ ಸಾಕು.
ಎರಡನೇ ಮಾಳಿಯಲ್ಲಿ ಹಳೆಯ ಸಾಮಾನುಗಳ ಜೊತೆ ಇದ್ದ ಕಾರಣ ಇವಳಲ್ಲಿ ಅವಿತಿರಬಹುದು ಎಂಬ ಊಹೆ ಯಾರಿಗೂ ಬಂದಿರಲಾರದು.ಅಥವಾ ಹೀಗೊಂದು ಆಗಬಹುದು ಎಂದು ಯಾರೂ ಊಹೆ ಮಾಡಿರಲಾರರು.
ಒಟ್ಟಿನಲ್ಲಿ ಆ ಹುಡುಗಿ ಸತ್ತದ್ದು ನಿಜವಂತೆ.
ಎರಡನೆಯ ಮಾಳಿಗರಯಲ್ಲಿ ಇದ್ದ ಕಾರಣ ,ಅಲ್ಲಿಗೆ ಯಾರೂ ಹೋಗದಿರುವ ಕಾರಣ ಹೆಣ ಕೊಳೆತಾಗಲೂ ಗಮನಕ್ಕೆ ಬರಲಿಲ್ಲವೆನೋ ಅಥವಾ ಹಳ್ಳಿ ಮನೆಗಳಲ್ಲಿ ಕೆಲವೊಮ್ಮೆ ಹೆಗ್ಗಣ ,ಹಾವುಗಳು ಕೊಳೆತು ವಾಸನೆ ಬರುತ್ತಿದ್ದುದು ಸಾಮಾನ್ಯ ವಿಚಾರ ಹಾಗೆಯೇ ಎಂದು ಭಾವಿಸಿರಬಹುದೋ ಏನೋ..
ಇದು ನಮ್ಮ ಅಜ್ಜನ ಪಿಜ್ಜನ ( ಅಜ್ಜನ ಅಜ್ಜನ ತಂದೆ)ಕಾಲದಲ್ಲಿ ಅವರ ಸಂಬಂಧಿಕರ ಮನೆಯಲ್ಲಿ ನಡೆದ ವಿಚಾರ ಎಂದು ಪೆಲತ್ತಡ್ಕದ ಅಜ್ಜಿ ನಮಗೆ ಹೇಳಿದ್ದರು
ಈ ನಿಜ ಘಟನೆ ಎಲ್ಲೋ ನಡೆದದ್ದು ನಮ್ಮ ಅಜ್ಜಿಗೂ ಗೊತ್ತಿದ್ದಿರಬೇಕು ಅದಕ್ಕಾಗಿ ನಮ್ಮನ್ನು ಎರಡನೇ ಮಾಳಿಗೆಗೆ ಹತ್ತಲು ಬಿಡುತ್ತಿರಲಿಲ್ಲ.ಹಂಡೆಯನ್ನೆಲ್ಲ ಕವುಚಿ ಹಾಕಿದ್ದರು.
ನಮ್ಮ ಪೆಲತ್ತಡ್ಕದ ಅಜ್ಜಿ ಈ ಕಥೆ ಹೇಳಿದ ಮೇಲೆ .ಮತ್ತು ಈ ಆಟದಲ್ಲಿ ನಾವು ಆಸಕ್ತಿ ಕಳೆದುಕೊಂಡಿದ್ದೆವು.ಯಾವಾಗಾದರೊಮ್ಮೆ ಆಡುವಾಗ
ಸಣ್ಣ ಮಕ್ಕಳ ಬಗ್ಗೆ ತುಂಬಾ ಜಾಗ್ರತೆ ವಹಿಸುತ್ತಿದ್ದೆವು.
ಪಾಪ ಹಂಡೆಯೊಳಗೆ ಸತ್ತ ಆ ಹುಡುಗಿ ಎಷ್ಟು ಭಯ ಪಟ್ಟಿದ್ದಳೋ,ಬೊಬ್ಬೆ ಹಾಕಿದ್ದಳೋ ಹಸಿವು ಬಾಯಾರಿಕೆಯಿಂದ ನರಳಿದಳೋ,ಗಾಳಿ ಸಾಲದೆ ಒದ್ದಾಡಿದಳೋ..ಅಜ್ಜಿ ಈ ನಿಜವದ ಕಥೆ ಹೇಳಿದಾಗ ಅಂದು ನಾವೆಲ್ಲ ದುಃಖಿಸಿ ದುಃಖಿಸಿ ಅತ್ತಿದ್ದೆವು.ನಮ್ಮ ಜೊತೆಗೆ ಅಜ್ಜಿ ಕೂಡ ಕಣ್ಣೀರು ಹಾಕಿದ್ದರು. ನೆನೆದರೆ ಈಗಲೂ ಕಣ್ಣು ಹನಿಗೂಡುತ್ತದೆ.
ಮಕ್ಕಳ ಬಗ್ಗೆ ತುಂಬಾ ಜಾಗ್ರತೆ ವಹಿಸಬೇಕು .ಇತ್ತೀಚೆಗೆ ಮಾಳಿಗೆಯಿಂದ ಮಗುವೊಂದು ಬಿದ್ದು ಸಾವನ್ನಪ್ಪಿದ ವಿಚಾರ ಓದಿದ್ದೆ..ನಾನು ಚಿನ್ಮಯ ಶಾಲೆಯಲ್ಲಿ ಶಿಕ್ಷಕಿ ಆಗಿದ್ದಾಗ ಐದನೆಯ ತರಗತಿಯ ಮಗುವೊಂದು ಐದು ಫ್ಲೋರ್ ನ ಫ್ಲಾಟ್ ನಿಂದ ಆಡುತ್ತಾ ಅಡುತ್ತಾ ಬಿದ್ದ ಚೆಂಡನ್ನು ತೆಗೆಯಲು ನೆರಳಿಗಾಗಿ ಹಾಸಿದ್ದ ಶೀಟ್ ಮೇಲೆ ಕಾಲಿಟ್ಟು ಬಿದ್ದು ಸಾವನ್ನಪ್ಪಿದ ದುರಂತ ನಡೆದಿತ್ತು.ನೀರಿನ ಸಂಪಿಗೆ ಬೀಳುದು,ಆಡಲು ಹೋಗಿ ಕೆರೆ ನದಿಯಲ್ಲಿ ಮುಳಗುವ ವಿಚಾರಗಳನ್ನು ಕೇಳುತ್ತಲೇ ಇರ್ತೇವೆ.ಅದಕ್ಕಾಗಿ ನಾವು ಸದಾ ಜಾಗ್ರತೆಯಿಂದ ಇರಬೇಕು.
https://shikshanaloka.blogspot.com/2020/11/blog-post_7.html?m=1
ಚಿತ್ರ : ಇಂಟರ್ನೆಟ್ ನಿಂದ
No comments:
Post a Comment