ಕೆರೆಕೋಡಿಯ ಸುರಂಗದ ನೀರು ಮತ್ತು ಅಣ್ಣ ತಂದು ಕೊಡುತ್ತಿದ್ದ ಚಾಕೊಲೇಟ್ ನ ಸವಿ
ನಾನು ಹೆಚ್ಚು ಅಜ್ಜನ ಮನೆಯಲ್ಲಿ ಬೆಳೆದವಳು.ನನ್ನ ಅಜ್ಜ ಹೊಸಮನೆ ಈಶ್ವರ ಭಟ್ಟರಿಗೆ ನನ್ನ ಅಮ್ಮ ಮತ್ತು ದೊಡ್ಡಮ್ಮ ಇಬ್ಬರೇ ಮಕ್ಕಳು.
ದೊಡ್ಡಮ್ಮನ ಮಗಳು ಅಕ್ಕ ಪಾರ್ವತಿ ,ಅಣ್ಣ ರಾಧಾ ಕೃಷ್ಣ ಭಟ್,ದೊಡ್ಡಮ್ಮನ ಎರಡನೇ ಮಗಳು ಜಯಲಕ್ಷ್ಮಿ ( ಶಶಿ) ,ದೊಡ್ಡಮ್ಮನ ಮೂರನೇ ಮಗಳು ರಾಜೇಶ್ವರಿ ಮತ್ತು ನಾನು ಅಜ್ಜನ ಮನೆಯಿಂದ ಶಾಲೆಗೆ ಹೋಗುತ್ತಿದ್ದೆವು.
ನಮ್ಮ ಅಜ್ಜನ ಮನೆಯಲ್ಲಿ ಎಮ್ಮೆ ,ದನಗಳನ್ನು ಸಾಕುತ್ತಿದ್ದರು.ಸಾಕಷ್ಟು ಹಾಲು ಸಿಗುತ್ತಿತ್ತು .ಮನೆವಾರ್ತೆಗೆ ಮಿಕ್ಕಿದ್ದನ್ನು ಮುಂದಿಲದವರ ಹೋಟೆಲ್ ಗೆ ಮಾರಾಟ ಮಾಡುತ್ತಿದ್ದರು.
ಬೆಳಗ್ಗೆ ಶಾಲೆಗೆ ಹೋಗುವಾಗ ಹಾಲು ತಗೊಂಡು ಅಣ್ಣ ಹೋಟೆಲ್ ಗೆ ಕೊಡುತ್ತಿದ್ದ.ನಮಗೆ ಶಾಲೆಗೆ ಹೋಗಲು ಎರಡು ದಾರಿ ಇತ್ತು.ಒಂದು ಗುಡ್ಡದಲ್ಲಿ ಹೋಗಿ ಕೆರೆಕೋಡಿ ಮಾಸ್ಟ್ರ ಗುಡ್ಡೆಯ ದಾರಿಯಲ್ಲಿ ಸಾಗಿ ಮೀಯಪದವು ತಲುಪುದು.ಇನ್ನೊಂದು ಶೇಡಿ ಗುಡ್ಡೆ ಹತ್ತಿ ಮೀಯಪದವು ತಲುಪುದು
ನಾವು ಬೆಳಗ್ಗೆ ಹೋಗುವಾಗ ಕೆರೆ ಕೋಡಿ ಗುಡ್ಡೆಯ ದಾರಿ ಆಯ್ಕೆ ಮಾಡುತ್ತಿದ್ದೆವು.ಈ ಕೆರೆಕೋಡಿ ಮಾಸ್ಟ್ರ ಜಾಗದಲ್ಲಿ ಇರುವ ಗುಡ್ಡೆಯಲ್ಲಿ ಒಂದು ಸುರಂಗ ಇತ್ತು.ಈಗಲೂ ಇರಬಹುದೋ ಏನೋ.
ಅದರಲ್ಲಿ ವರ್ಷದ ಎಲ್ಲಾ ದಿನಗಳಲ್ಲಿ ಕೂಡ ಸ್ವಚ್ಛವಾದ ನೀರು ಬರುತ್ತಿತ್ತು.ಅದನ್ನು ಒಂದು ಗುಂಡಿಗೆ ಬಂದು ಬೀಳುವಂತೆ ಮಾಡಿದ್ದರು.ಅಲ್ಲಿಂದ ಪೈಪಿನ ಮೂಲಕ ಅವರ ಮನೆಗೆ ನೀರು ಹೋಗುತ್ತಾ ಇತ್ತು.
ಈ ನೀರು ಬಹಳ ರುಚಿ.ನೋಡಿದ ತಕ್ಷಣವೇ ಕುಡಿಯಬೇಕು ಎನಿಸುವಷ್ಟು ಸ್ವಚ್ಛ.
ನಾವು ಬೆಳಗ್ಗೆ ಶಾಲೆಗೆ ಹೋಗುವಾಗ ಇಲ್ಲಿ ಬರುತ್ತಿದ್ದೆವು.ನೀರು ಕುಡಿಯಲು ಅಲ್ಲ.ಅದಕ್ಕೆ ಬೇರೆಯೇ ಕಾರಣ ಇದೆ.ಈಗ ನೆನಪಾಗಿ ನಗು ಬರುತ್ತದೆ.
ನಮ್ಮ ಅಜ್ಜಿ ಬಹಳ ಪ್ರಾಮಾಣಿಕ ಮಹಿಳೆ.ಹಾಗಾಗಿ ಹೋಟೆಲಿಗೆ ಕೊಡುವ ಹಾಲಿನ ಒಂದು ತೊಟ್ಟು ಕೂಡ ನೀರು ಸೇರಿಸುತ್ತಿರಲಿಲ್ಲ..
ನಾವು ಮಕ್ಕಳು ಮಾತ್ರ ಚಾಕೊಲೇಟ್ ನ ಆಸೆಗೆ ದ್ರೋಹ ಮಾಡುತ್ತಿದ್ದೆವು.ದಾರಿಯಲ್ಲಿ ಸಿಗುವ ಈ ಸುರಂಗದ ನೀರನ್ನು ತೆಗೆದು ಅಜ್ಜಿ ಅಳೆದು ಕೊಟ್ಟ ಹಾಲಿನ ಪಾತ್ರೆಗೆ ಒಂದು ಕುಡ್ತೆಯಷ್ಟು ಹಾಕುತ್ತಿದ್ದೆವು.
ಅಜ್ಜಿ ಹಾಲು ತುಂಬಿಸಿ ಕೊಡುವ ಅಲ್ಯೂಮಿನಿಯಂ ಬುತ್ತಿ ಪಾತ್ರದ ಮುಚ್ಚಳದಲ್ಲಿ ಎಂಟು ಸಲ ನೀರು ತುಂಬಿ ಹಾಕಿದರೆ ಒಂದು ಕುಡ್ತೆ ಆಗುತ್ತಿತ್ತು.ಇದನ್ನು ಮನೆಯಲ್ಲಿ ಅಳೆದು ದೊಡ್ಡಮ್ಮನ ಮಗ ಅಣ್ಣ ಕಂಡುಕೊಂಡಿದ್ದ.
ನಾವು ಹತ್ತು ಮುಚ್ಚಳ ನೀರು ಹಾಕುತ್ತಿದ್ದೆವು.ಹೋಟೆಲಿಗೆ ಹಾಲು ಕೊಡುವಾಗ ಅಜ್ಜಿ ಹೇಳಿದ ಅಳತೆಗೆ ಒಂದು ಕುಡ್ತೆ ಹೆಚ್ಚು ಸೇರಿಸಿ ಹೇಳುತ್ತಿದ್ದೆವು.ಆಗ ಹಾಲು ಕೊಟ್ಟ ತಕ್ಷಣವೇ ದುಡ್ಡು ಕೊಡುತ್ತಿದ್ದರು.ಅವರು ಅಳೆದು ನೋಡಿದರೆ ನಾವು ಹೇಳಿದ್ದಕ್ಕಿಂತ ಸ್ವಲ್ಪ ಜಾಸ್ತಿಯೇ ಹಾಲು ಇರ್ತಿತ್ತು.ಯಾಕೆಂದರೆ ನಾವು ಎಂಟು ಮುಚ್ಚಳದ ಬದಲು ಹತ್ತು ಮುಚ್ಚಳ ನೀರು ಸೇರಿಸುತ್ತಿದ್ದೆವಲ್ಲ.
ಹೀಗೆ ಒಂದು ಕುಡ್ತೆ ಹೆಚ್ಚು ಮಾಡಿದಾಗ ನಮಗೆ ಒಂದು ಕುಡ್ತೆ ಹಾಲಿನ ದುಡ್ಡು ಹೆಚ್ಚುವರಿಯಾಗಿ ಸಿಗುತ್ತಿತ್ತು. ಈ ದುಡ್ಡಿನಲ್ಲಿ ಅಣ್ಣ ಚಾಕೊಲೇಟ್ ಬಿಸ್ಕತ್ತು ಗಳನ್ನು ಅಂಗಡಿಯಿಂದ ಖರೀದಿಸಿ ಸಮಪಾಲು ಮಾಡಿ ಒಂದು ಪಾಲು ತಾನಿಟ್ಟುಕೊಂಡು ಉಳಿದದ್ದನ್ನು ನಮಗೆ ಹಂಚುತ್ತಿದ್ದ.ಹಂಚುವಾಗ ಅಣ್ಣನಲ್ಲಿ ಸ್ವಲ್ಪವೂ ಪಕ್ಷಪಾತ ಇರಲಿಲ್ಲ ತನ್ನ ಸ್ವಂತ ಅಕ್ಕ ತಂಗಿಯರಂತೆಯೇ ನನ್ನನ್ನು ಕಾಣುತ್ತಿದ್ದ.ಆಟದಲ್ಲಿ ಇರಬಹುದು ,ತಿಂಡಿಕೊಡುವಾಗ ಇರಬಹುದು.. ಅಣ್ಣನಿಗೆ ನಮ್ಮ ನಡುವೆ ಒಂದಿನಿತು ಬೇಧ ಭಾವವಿರಲಿಲ್ಲ(.ಅವರು ಅಂದು ಬಾಲಕನಿದ್ದಾಗ ಹೇಗೆಯೋ ಇಂದು ಕೂಡ ಹಾಗೆಯೇ ಇದ್ದಾರೆ .ಅವರ ಸ್ವಂತ ಅಕ್ಕ ತಂಗಿಯರಲ್ಲಿ ಇರುವಂತಹದೇ ಪ್ರೀತಿ ಚಿಕ್ಕಮ್ಮನ ಮಕ್ಕಳಾದ ನಮ್ಮಲ್ಲಿ ಕೂಡ)
ಮನೆಯಲ್ಲಿ ಅಜ್ಜಗೆ ಅಜ್ಜನಿಗೆ ಈ ವಿಚಾರ ತಿಳಿಯದಂತೆ ನಾವು ಜಾಗ್ರತೆ ವಹಿಸಿದ್ದೆವು.ಅಜ್ಜಿ ಗಟ್ಟಿಯಾದ ಹಾಲನ್ನೇ ಕೊಡುತ್ತಿದ್ದರು.ಹದಿನೈದು ಇಪ್ಪತ್ತು ಕುಡ್ತೆ ಗಟ್ಟಿ ಹಾಲಿಗೆ ಒಂದು ಕುಡ್ತೆ ನೀರು ಸೇರಿಸಿದ್ದು ಹೋಟೆಲಿನವರ ಗಮನಕ್ಕೂ ಬರುತ್ತಿರಲಿಲ್ಲ ಯಾಕೆಂದರೆ ಎಮ್ಮೆ ಹಾಲು ತುಂಬಾ ದಪ್ಪ ಇರುತ್ತದೆ.ಒಂದು ಲೀಟರ್ ಗೆ ಒಂದು ಕುಡ್ತೆ ನೀರು ಹಾಕಿದರೂ ಕೂಡ ನೀರು ಹಾಕುದ್ದಾರೆ ಎಂದು ಗೊತ್ತಾಗದಷ್ಟು ಗಟ್ಟಿ ಹಾಲು ಅದು.ಇನ್ನೂ ನಮ್ಮ ಅಜ್ಜಿ ದಿನಕ್ಕೆ ಎರಡು ಎರಡೂವರೆ ಲೀಟರ್ ಹಾಲು ಹೋಟೆಲಿಗೆ ಮಾರುತ್ತಿದ್ದರು.ಅವರು ಒಂದು ತೊಟ್ಟು ನೀರು ಹಾಕುತ್ತಿರಲಿಲ್ಲ.ಹಾಗಾಗಿ ನಾವು ಒಂದು ಕುಡ್ತೆ ನೀರು ಸೇರಿಸುದರಿಂದ ಹಾಲು ತೆಳು ಎಂದೆನಿಸುತ್ತಿರಲಿಲ್ಲ.ಕೆರೆಕೋಡಿಯ ಸುರಂಗದ ಶುದ್ದ ನೀರನ್ನು ಸೇರಿಸುತ್ತಿದ್ದ ಕಾರಣ ಆರೋಗ್ಯ ಹಾಳಾಗುವ ಸಾಧ್ಯತೆಯೇ ಇರಲಿಲ್ಲ.
.ನಾನು ಅಜ್ಜನ ಮನೆಯಲ್ಲಿ ದೊಡ್ಡಮ್ಮನ ಮಕ್ಕಳ ಜೊತೆಗೆ ಬೆಳೆದ ಕಾರಣ ನನಗೂ ಅವರಲ್ಲಿ ನನ್ನ ಸ್ವಂತ ಅಣ್ಣ ಅಕ್ಕ ತಮ್ಮಂದಿರಲ್ಲಲಿ ಇರುವಷ್ಟೇ ಫ್ರೀತಿ ಸೆಳೆತ.
ಅದರಲ್ಲೂ ದೊಡ್ಡಮ್ಮನ ಮೂರನೇ ಮಗಳು ರಾಜೇಶ್ವರಿ ಮತ್ತು ನಾನು ಗಳಸ್ಯ ಕಂಠಸ್ಯ..
ಒಂದೇ ಒಂದು ಸಲ ನಮ್ಮೊಳಗೆ ಯಾವುದೇ ವಿಚಾರಕ್ಕೆ ಜಗಳವಾದದ್ದಿಲ್ಲ..ನಾವಿಬ್ಬರೂ ದೊಡ್ಡ ಕಸಂಟುಗಳು.ಜಗಳಗಂಟಿಯರು.ಆದರೆ ನಮ್ಮೊಳಗೆ ಬಹಳ ಸ್ನೇಹ.ಒಗ್ಗಟ್ಟು.. ನಾವು ಅಣ್ಣ ಅಕ್ಕ ತಮ್ಮ ತಂಗಿಯರ ಜೊತೆಗೆ ಜಗಳವಾಡದ ದಿನವೇ ಇಲ್ಲ..ಅಷ್ಟು ಕುಖ್ಯಾತರು.
ಎಲ್ಲೇ ಹೋಗಲಿ, ನಾವು ಇಬ್ಬರು ಜೊತೆಗೆ ಹೋಗುದು ಬರುವುದು ಮಾಡುತ್ತಿದ್ದೆವು.
ನಾನು ಪಿಯುಸಿ ಓದುತ್ತಿದ್ದಾಗ ಅಜ್ಜ ತೀರಿ ಹೋದರು.ನಮ್ಮ ಮನೆಗಳ ನಡುವೆ ಆಸ್ತಿ ವುವಾದ ಹುಟ್ಟಿತು.ಒಂದಷ್ಟು ಜನರು ನ್ಯಾಯವಾಗಿ ಪರಿಹರಿಸುವ ಬದಲು ಸಣ್ಣ ಬೆಂಕಿಗೆ ತುಪ್ಪ ಎರೆದು ಗಾಳಿ ಹಾಕಿ ದೊಡ್ಡದು ಮಾಡಿದರು..
ಆದರೆ ಅದು ತುಂಬಾ ಸಮಯ ನಡೆಯಲಿಲ್ಲ ನಾವು ಮತ್ತೆ ರಾಜಿಯಾದೆವು.
ಈ ನಡುವಿನ ಸಮಯದಲ್ಲಿ ನಮಗೆ ಹೋಗುದು ಬರುವ ಸಂಬಂಧ ಇರಲಿಲ್ಲ. ಅದರೆ ನಾವಿಬ್ಬರು ( ನಾನು ಮತ್ತು ರಾಜೇಶ್ವರಿ) ಎಂದಿನಂತೆ ಕಾಲೇಜಿನಲ್ಲಿ ಸಿಕ್ಕಾಗ ಪಟ್ಟಾಂಗ ಹೊಡೆಯುತ್ತಿದ್ದೆವು.
ಮನೆಗಳ ನಡುವಿನ ಆಸ್ತಿಯ ವುವಾದ ನಮ್ಮ ಮನಗಳನ್ನು ಒಡೆಯುವಷ್ಟು ಗಟ್ಟಿಯಾಗಿರಲಿಲ್ಲ.ಅಥವಾ ನಮ್ಮ ಮನಸ್ಸನ್ನು ಒಡೆಯುವುದು ಸುಲಭದ ವಿಚಾರವಾಗಿರಲಿಲ್ಲ.ಅಷ್ಟೂ ಸಾಂಗತ್ಯ ನಮ್ಮೊಳಗೆ..ಮತ್ತೆ ಬಾಲ್ಯಕ್ಕೆ ಇಳಿದು ಮಕ್ಕಳಾಗಿ ನಲಿಯಬೇಕೆನಿಸುತ್ತದೆ ನನಗೆ.
ಇನ್ನೂ ಅನೇಕ ಹೇಳಲು ಇದೆ.ಇನ್ನೊಂದು ದಿನ ಬರೆಯುವೆ
ಲಕ್ಷ್ಮೀ ಜಿ ಪ್ರಸಾದ
No comments:
Post a Comment