ನನ್ನ ಆತ್ಮಕ್ಕೂ ಒಂದು ಕಥೆಯಿದೆ
ಆಕೆ ಅವಳೇ ಇರಬಹುದಾ?
ಬೆಳಗ್ಗೆ ಕಾಲೇಜಿಗೆ ಹೋಗ್ತಾ ರಾಜರಾಜೇಶ್ವರಿ ದ್ವಾರದ ಬಳಿಯ ಸಿಗ್ನಲ್ ಬಳಿ ಓರ್ವ ನನ್ನದೇ ವಯಸ್ಸಿನ ಮಹಿಳೆಯನ್ನು ನೋಡಿದೆ..ತಕ್ಷಣವೇ ಅವರನ್ನು ಎಲ್ಲೋ ನೋಡಿದ ಹಾಗೆ ಅನಿಸ್ತು.ಯಾರು ಏನೆಂದು ನೆನಪಾಗಲಿಲ್ಲ..ಈವತ್ತು ನನಗೆ ಪರೀಕ್ಷಾ ಕಾರ್ಯ ಇರಲಿಲ್ಲ.ಹಾಗಾಗಿ ಆಕೆ ಯಾರೆಂಬ ವಿಚಾರ ಕಾಡ್ತಾ ಇತ್ತು.
ಯಾಕೋ ಆ ಮುಖ ತುಂಬಾ ಪರಿಚಿತ ಎಂದೆನಿಸುತ್ತಿತ್ತು.ಆದರೆ ಯಾರೆಂದು ನೆನಪಾಗುತ್ತಾ ಇಲ್ಲ.ಮನೆಗೆ ಬಂದು ಏನೋ ಓದುತ್ತಿರುವಾಗ ವಿಚಾರಗಳ ಬಗ್ಗೆ ಸುರೇಶ್ ಎಂಬವರು ಫೋನ್ ಮಾಡಿ ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ,ಸಂಸ್ಕೃತಿ ಬಗ್ಗೆ ಮಾಹಿತಿ ಕೇಳಿದರು.ಆಗ ಅವರು ರೆಫರ್ ಮಾಡಲು ಪುಸ್ತಕಗಳ ಹೆಸರನ್ನು ತಿಳಿಸಿ ಎಂದರು.ಆಗ ಗಣಪತಿರಾವ ಐಗಳ ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ಕೃತಿಯನ್ನು ಸೂಚಿಸಿದೆ.
ಹಾಗೆ ಆ ಪುಸ್ತಕವನ್ನು ಇನ್ನೊಮ್ಮೆ ಓದಬೇಕೆಂದು ನನಗನಿಸಿತು.ಅಷ್ಟೇ..ನನಗೆ ತಕ್ಷಣ ಪವಿತ್ರ ? ನೆನಪಾದಳು..ಹೌದು ಬೆಳಗ್ಗೆ ನೋಡಿದ ಮಹಿಳೆ ಪವಿತ್ರಾಳಂತಿದ್ದರು.ಪವಿತ್ರ ನನ್ನದೇ ವಯಸ್ಸಿನವರು.ಒಂದೆರಡು ವರ್ಷ ದೊಡ್ಡವರು.ನಾನು ಪ್ರಥಮ ಪಿಯುಸಿ ಓದುತ್ತಿರುವಾಗ ಭೇಟಿಯಾದ ಹುಡುಗಿ.ಬಹುಶಃ ಅವಳಾಗ ಪದವಿ ಓದುತ್ತಾಇದ್ದಳು.ಕೆನರಾ ಕಾಲೇಜಿನ ವಿದ್ಯಾರ್ಥಿನಿ ಎಂದ ನೆನಪು..
ನಾನು ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ( ಈಗಿನ ವಿಶ್ವ ವಿದ್ಯಾಲಯ ಕಾಲೇಜು) ಪಿಯುಸಿ ಓದಿದ್ದೆ.ಆಗ ಮಂಜೇಶ್ವರ ತನಕ ಬಸ್ಸಿನಲ್ಲಿ ಬಂದು ಅಲ್ಲಿಂದ ರೈಲಿನಲ್ಲಿ ಮಂಗಳೂರಿಗೆ ಹೋಗುತ್ತಿದ್ದೆ.ಮಂಜೇಶ್ವರ ಕಾಸರಗೋಡು ಕುಂಬಳೆ ಉಪ್ಪಳ ಮೊದಲಾದ ಪ್ರದೇಶಗಳಿಂದ ಅನೇಕ ವಿದ್ಯಾರ್ಥಿಗಳು ಮಂಗಳೂರಿಗೆ ಅದೇ ರೈಲಿನಲ್ಲಿ ಓದಲು ಬರುತ್ತಿದ್ದರು
ಒಂದಿನ ನನಗೆ ರೈಲಿನಲ್ಲಿ ಪರಿಚಿತಳಾದವಳು ಆ ಹುಡುಗಿ.ಆಕೆಯ ಹೆಸರು ಪವಿತ್ರ ಎಂದು ನೆನಪು.ಒಂದಿನ ಮಾತನಾಡುತ್ತಾ ತಾನು ಬಹು ದೊಡ್ಡ ವಿದ್ವಾಂಸರಾದ ಗಣಪತಿರಾವ್ ಐಗಳ ಹತ್ತಿರದ ಸಂಬಂಧಿ.ಅವರು ನನಗೆ ಮುತ್ತಜ್ಜನಾಗ ಬೇಕು ಎಂದಿದ್ದಳು
ನನಗೆ ಗಣಪತಿರಾವ ಐಗಳ ಹೆಸರು ಕೂಡ ಕೇಳಿ ಗೊತ್ತಿರಲಿಲ್ಲ.ಹಾಗಾಗಿ ಯಾರು ಅವರು ಎಂದು ಕೇಳಿದೆ.ಆಗ ಅವಳು ಅವರು ಶಾಲೆಯಲ್ಲಿ ಮೇಷ್ಟ್ರಾಗಿದ್ದರು.ಅವರು ತುಂಬಾ ಪುಸ್ತಕಗಳನ್ನು ಬರೆದಿದ್ದಾರೆ.ದೊಡ್ಡ ಇತಿಹಾಸಜ್ಞರು ಅವರು.ಅವರ ಜ್ಞಾನಕ್ಕೆ ಅವರಿಗೆ ಯಾವುದೇ ಸರಿಯಾದ ಮನ್ನಣೆ ಸೂಕ್ತ ಸ್ಥಾನಮಾನ ಸಿಗಲಿಲ್ಲ ಎಂದು ಬಹಳ ಬೇಸರದಿಂದ ಹೇಳಿದ್ದಳು.ಅವಳಿಗೆ ಆ ಬಗ್ಗೆ ಬಹಳ ಬೇಸರ ಇತ್ತು
ನನಗೆ ಆಗ ಅದೆಲ್ಲ ಅರ್ಥ ಆಗಲಿಲ್ಲ.ಅರ್ಹತೆಗೆ ಮನ್ನಣೆ ಯಾಕೆ ಸಿಗಲಿಲ್ಲ ಎಂಬ ವಿಚಾರವೆಲ್ಲ ಅರ್ಥವಾಗುವಷ್ಟು ಪ್ರೌಢತೆ ನನ್ನಲ್ಲಿರಲಿಲ್ಲ.ಅಲ್ಲದೇ ಆಗ ನಾನು ವಿಜ್ಞಾನದ ವಿದ್ಯಾರ್ಥಿನಿಯಾಗಿದ್ದು ಇತಿಹಾಸದ ಬಗ್ಗೆ ಆಸಕ್ತಿಯಾಗಲೀ ತಿಳುವಳಿಕೆಯಾಗಲೀ ನನಗೆ ಇರಲಿಲ್ಲ.
ಇದಾಗಿ ಸುಮಾರು ಹದಿನೈದು ವರ್ಷಗಳ ನಂತರ ಗಣಪತಿರಾವ ಐಗಳ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ ಎಂಬ ಗ್ರಂಥವನ್ನು ಓದಿದೆ.ಆಗ ಅವರ ವಿದ್ವತ್ ಬಗ್ಗೆ ತಿಳಿಯಿತು.ಇಂದಿಗೂ ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸವನ್ನು ತಿಳಿಯಲು ಇದೇ ಪುಸ್ತಕ ಪ್ರಮುಖ ಆಕರವಾಗಿದೆ.ಅಷ್ಟು ಮಾಹಿತಿ ಸಂಗ್ರಹಕ್ಕಾಗಿ ಬಸ್ ಕಾರುಗಳೂ ಇಲ್ಲದ ಆ ಕಾಲದಲ್ಲಿ ಎಷ್ಟು ಕಷ್ಟ ಪಟ್ಟಿರಬಹುದೆಂದು ಊಹಿಸಿದರೆ ಅಬ್ಬಾ ಎನಿಸುತ್ತದೆ.ಅವರು ಬಂಟ್ವಾಳದ ಶಾಲೆಯಲ್ಲಿ ಮೇಷ್ಟ್ರಾಗಿದ್ದರು.ಇವರ ಕಾಲ 1881-1944
ಅವರ ಕಾಲದಲ್ಲಿ ಅವರ ಅಧ್ಯಯನಕ್ಕೆ ಆ ಹುಡುಗಿ ಹೇಳಿದಂತೆ ಸೂಕ್ತ ಮನ್ನಣೆ ದೊರೆತಿರಲಿಲ್ಲವೇ ?
ಈ ಬಗ್ಗೆ ನನಗೆ ತಿಳಿದಿಲ್ಲ.ಅವರ ಕಾಲದಲ್ಲಿ ಅವರ ಅಧ್ಯಯನಕ್ಕೆ ಸೂಕ್ತ ಮನ್ನಣೆ ಸಿಕ್ಕೋ ಇಲ್ಲವೋ ಗೊತ್ತಿಲ್ಲ ಆದರೆ ಈಗ ಮಾತ್ರ ಅವರ ಕೃತಿಯನ್ನು ಓದದೆಯೇ ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸವನ್ನು ಅರಿಯಲು ಸಾಧ್ಯವಿಲ್ಲ.
ಹಾಗಾಗಿ ಗಣಪತಿರಾವ ಐಗಳು ಅಜರಾಮರ
ನನಗೆ ಬೆಳಗ್ಗೆ ಆ ಮಹಿಳೆಯನ್ನು ನೋಡಿದಾಗ ಅವರಾರೆಂದು ನೆನಪಿಗೆ ಬರುತ್ತಿದ್ದರೆ ನಾನು ಖಂಡಿತವಾಗಿಯೂ ಕಾರು ನಿಲ್ಲಿಸಿ ಇಳಿದು ಮಾತನಾಡುತ್ತಿದ್ದೆ
ಗಣಪತಿರಾವ ಐಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಬಹುದಿತ್ತು.ಆಗ ನೆನಪೇ ಬಾರದ ಬಗ್ಗೆ ಈಗ ಬೇಸರವಾಗುತ್ತಿದೆ..
ಕಾಯಕ್ಕಳಿವುಂಟು ಕಾಯಕಕ್ಕೆ ಅಳಿವಿಲ್ಲ..ಕಾಯ ಇರುವಷ್ಟು ಸಮಯ ನಮ್ಮಲ್ಲಿ ಹೊಟ್ಟೆಕಿಚ್ಚಿನಿಂದ ಸೂಕ್ತ ಸ್ಥಾನಮಾನ ಸಿಗದಂತೆ ತಡೆಯುವವರೂ ಕಿರುಕುಳ ಕೊಡುವವರು,ತುಳಿಯುವವರೂ ಇರುತ್ತಾರೆ.ನಮ್ಮ ನಂತರ ನಮಗೆ ಕಿರುಕುಳ ಕೊಟ್ಟವರೂ ಇಲ್ಲವಾಗುತ್ತಾರೆ.ನಂತರದ ತಲೆಮಾರು ಬರುವಾಗ ನಮ್ಮ ಅದ್ಯಯನದ ಕೃತಿಗಳು ಮಾತ್ರ ಮಾತನಾಡುತ್ತವೆ ಅಲ್ಲವೇ..
No comments:
Post a Comment