Saturday, 18 December 2021

ನನಗೂ ಆತ್ಮವಿದೆ ಆ ಪುಣ್ಯಾತ್ಮನ ನಾಲಿಗೆಯಲ್ಲಿ ಮಚ್ಚೆ ಇತ್ತಾ ?

 ನನಗೂ ಆತ್ಮವಿದೆ 


ಆ ಪುಣ್ಯಾತ್ಮನ ನಾಲಿಗೆಯಲ್ಲಿ ಮಚ್ಚೆ ಇತ್ತಾ ?


ಯಾವ ಶುಭ ಘಳಿಗೆಯಲ್ಲಿ ಆ ಪುಣ್ಯಾತ್ಮ ಆ ಮಾತನ್ನು ಆಡಿದರೋ ಏನೋ..ಅಸ್ತು ದೇವತೆಗಳು ಅಸ್ತು ಎಂದಿರಬೇಕು ಖಂಡಿತಾ

2008-09 ರ ಶೈಕ್ಷಣಿಕ ವರ್ಷದಲ್ಲಿ ನಾವು ಬೆಂಗಳೂರಿನ ಬ್ಯಾಂಕ ಕಾಲನಿಯ  ಬಾಡಿಗೆ ಮನೆಯಿಂದ ಈಗಿರುವ ಮನೆಗೆ ವಾಸ್ತವ್ಯವವನ್ನು ಬದಲಾಯಿಸಿದೆವು.ಮೊದಲು ಕೆಲಸ ಮಾಡುತ್ತಿದ್ದ ಕಾಲೇಜು ಮನೆಯಿಂದ ಬಹಳ ದೂರ ಆಯಿತು 

ಹಾಗಾಗಿ ಮನೆಗೆ ಸಮೀಪದ ಕಾಲೇಜುಗಳಲ್ಲಿ ಕನ್ನಡ ಖಾಲಿ ಹುದ್ದೆ ಇದೆಯಾ ಎಂದು ವಿಚಾರಿಸುತ್ತಿದ್ದೆ.

ಇಲ್ಲಿಯೇ ಉಳ್ಳಾಲು ಕ್ರಾಸ್ ಸಮೀಪದ ಐಶ್ವರ್ಯ ಕಾಲೇಜಿನಲ್ಲಿ  ( ಈಗ ಇದು ಮುಚ್ಚಿದೆ) ಕನ್ನಡ ಹುದ್ದೆ ಇರುವುದು ತಿಳಿಯಿತು.

ಅರ್ಜಿ ಬರೆದುಕೊಂಡು ಸರ್ಟಿಪಿಕೇಟ್ ಗಳ ಜೆರಾಕ್ಸ್ ಇರಿಸಿಕೊಂಡು ಹೋದೆ.ಅದು ನಾಗರಾಜ ಎಂಬ ವೈದ್ಯರು ನಡೆಸುತ್ತಿದ್ದ ಕಾಲೇಜಾಗಿತ್ತು.ಶ್ರೀ ಲಕ್ಷ್ಮೀ ಎಂಬವರು  ನಾಮಕಾವಸ್ತೆ ಪ್ರಿನ್ಸಿಪಾಲರಾಗಿದ್ದರು.ಅಲ್ಲಿ ಎಂ ಡಿ ಎಂಬ ಬೋರ್ಡ್ ಹಾಕಿಕೊಂಡಿದ್ದ ಪ್ರಸಾದ್ ಎಂಬವರ ಮಾತೇ ಅಂತಿಮ.ಅವರನ್ನೇ ಭೇಟಿ ಮಾಡಿದೆ.ಮಾರ್ಕ್ಸ್ ಕಾರ್ಡನ್ನೆಲ್ಲ ನೋಡಿದರು.ಫಿಎಚ್ ಡಿ ಮಾಡ್ತಿದ್ದೀರಾ ,ಎಲ್ಲಿ ತನಕ ಬಂದಿದೆ ಎಂದು ಕೇಳಿದರು.ಪ್ರಬಂಧ ಸಿದ್ದವಾಗಿದೆ.ಇನ್ನು ಸಲ್ಲಿಸಿ ಮೌಖಿಕ ಪರೀಕ್ಷೆ ಎದುರಿಸಿದರೆ ಆಯಿತು ಎಂದೆ..ಸರ್ಟಿಪೀಕೇಟ್ ಗಳನ್ನು ನೋಡುತ್ತಾ..ಓ ಎನ್ ಇ ಟಿಯೂ ಪಾಸ್ ಮಾಡಿದ್ದೀರಿ..ನೀವೆಲ್ಲ ಇಲ್ಲಿ ಎಷ್ಟು ದಿನ ನಿಲ್ತೀರಾ ? ಸರ್ಕಾರಿ ಕೆಲಸ ಸಿಕ್ಕು ಬಿಟ್ಟು ಹೋಗ್ತೀರಿ ಎಂದರು.ಅವರು ಹಾಗೆ ಅಂದ ಘಳಿಗೆ ನಿಜಕ್ಕೂ ಶುಭ ಘಳಿಗೆಯೇ ಇರಬೇಕು.ಅಸ್ತು ದೇವತೆಗಳು ಆಶೀರ್ವದಿಸಿರಬೇಕು

ಆ ಕಾಲದಲ್ಲಿ ಪಿಯು ಡಿಗ್ತಿ ಕಾಲೇಜಿನ ಉಪನ್ಯಾಸಕ ಹುದ್ದೆಗೆ ಸಂದರ್ಶನ  ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದ್ದರು.ಸಂದರ್ಶನ ಇರುವಲ್ಲಿ ಎಲ್ಕೆಡೆ ದುಡ್ಡೇ ಮಾನದಂಡ..ಇನ್ಪ್ಲೂಯೆನ್ಸೇ ಅರ್ಹತೆ..ಹಾಗಾಗಿ ಇವೆರಡು ಇಲ್ಲದ ನನ್ನಂತಹವರಿಗೆ ಸರ್ಕಾರಿ ಕಾಲೇಜು ಉಪನ್ಯಾಸಕ ಕೆಲಸ ಗಗನ ಕುಸುಮವಾಗಿತ್ತು.

ಆದರೆ ಅವರು ಆ ಮಾತನ್ನು ಹೇಳಿದ ದಿನವೇ ಲಿಖಿತ  ಪರೀಕ್ಷೆ ಮೂಲಕ ಪಿಯು ಕಾಲೇಜಿಗೆ ಉಪನ್ಯಾಸಕರ ಅಯ್ಕೆ ಎಂದು ಆದೇಶವಾಯಿತು.ಅದಕ್ಕೂ ಮೊದಲು ತುಂಬಾ ಸಮಯದಿಂದ ಅನೇಕರು ಈ ಬೇಡಿಜೆಯನ್ನು ಇರಿಸಿದ್ದರು.ನಾನೂ ಪತ್ರಿಕೆಯಲ್ಲಿ ಬರೆದು ಪತ್ರಾಂದೋಲನ ಮಾಡಿದ್ದೆ.ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೆ.ಯಾವುದೂ ಪ್ರಯೋಜನ ಆಗಿರಲಿಲ್ಲ


ಅಂದು ಅನೇಕರ ಬೇಡಿಕೆಗೆ ಸರ್ಕಾರ ಸ್ಪಂದಿಸಿ ಲಿಖಿತ ಪರೀಕ್ಷೆ ಮೂಲಕ ಅಯ್ಕೆ ಎಂದು ಆದೇಶ ಮಾಡಿತು.ನಂತರ  ಪರೀಕ್ಷೆ ದಿನಾಂಕದ ಘೋಷಣೆ ಅಯಿತು

ಆ ಕಾಲೇಜಿಗೆ ಸೇರಿ ಹೆಚ್ಚು ಸಮಯ ಆಗಿರಲಿಲ್ಲ.ಪರೀಕ್ಷೆಯ ದಿನಾಂಕ ಘೋಷಣೆಯಾದ ಕೂಡಲೇ ಕಾಲೇಜಿಗೆ ರಾಜೀನಾಮೆ ಕೊಟ್ಟು ಹಗಲು ರಾತ್ರಿ ಓದಿದೆ.ಉತ್ತಮ ಅಂಕಗಳು ಬಂದು ಯಾರ ಪ್ರಭಾವ ದುಡ್ಡು ಇಲ್ಲದೆ ಸರ್ಕಾರಿ ಕಾಲೇಜು ಉಪನ್ಯಾಸಕ ಹುದ್ದೆಗೆ ಆಯ್ಕೆಯಾದೆ.

ಈಗಲೂ ಇದು ನಿಜವಾ ? ಕನಸಾ ಎಂದೆನಿಸುತ್ತದೆ.

ದುಡ್ಡು ಪ್ರಬಾವ ಇಲ್ಲದ ಸಾಮಾನ್ಯ ಜನರಿಗೆ ದುರ್ಲಭವಾಗಿದ್ದ ಸರ್ಕಾರಿ ಕಾಲೇಜು ಉಪನ್ಯಾಸಕ ಹುದ್ದೆ ನನಗೆ ಸಿಕ್ಕಿದ್ದು ನಿಜಕ್ಕೂ ಪವಾಡವೇ ಸರಿ‌.

ಇದು ನೆನಪಾದಾಗೆಲ್ಲ ಐಶ್ವರ್ಯ ಕಾಲೇಜಿನ ಎಂಡಿ ಆಗಿದ್ದ  ಸತ್ಯ ಪ್ರಸಾದ್ ಅವರು ಹೇಳಿದ ಮಾತು ನೆನಪಾಗುತ್ತದೆ.

ಈಗ ಅವರೆಲ್ಲಿದ್ದಾರೆ ಎಂದು ಗೊತ್ತಿಲ್ಲ.ಆ ಕಾಲೇಜು ಮುಚ್ಚಿದೆ.ಎಂದಾದರು ಒಂದಿನ ಅವರನ್ನು ಭೇಟಿ ಮಾಡಿ ನಿಮ್ಮ ನಾಲಿಗೆಯಲ್ಲಿ ಮಚ್ಚೆ ಇದೆಯಾ ಎಂದು ಕೇಳಿ ಸ್ವೀಟ್ ಕೊಡಬೇಕೆಂದಿರುವೆ.ನಾಲಿಗೆಯಲ್ಲಿ ಮಚ್ಚೆ ಇರುವ ವ್ಯಕ್ತಿಗಳು ಹೇಳುವ ಮಾತು ನಿಜವಾಗುತ್ತದೆ ಎಂಬ ನಂಬಿಕೆ ಪ್ರಚಲಿತವಿದೆ.ಏನೇ ಆದರೂ ಅರ್ಹತೆಯನ್ನು ನೋಡಿ ಮೆಚ್ಚಿ ಅವರಾಡಿದ ಮಾತುಗಳನ್ನು ಮರೆಯಲಾಗದು ಖಂಡಿತಾ 

ಡಾ.ಲಕ್ಷ್ಮೀ ಜಿ ಪ್ರಸಾದ್ 


No comments:

Post a Comment