Sunday, 5 September 2021

 

ನನ್ನ ಆತ್ಮಕ್ಕೂ ಕಥೆಯಿದೆ 

ಕೊನೆಯ ಚೆಂಚಿನ ಮಕ್ಕಳ ಕಷ್ಟ ಒಂದೆರಡಲ್ಲ.


 ನಾನು ಹತ್ತನೆಯ ತರಗತಿ ತನಕ ಜಾಣ ವಿದ್ಯಾರ್ಥಿನಿ ಎಂದೇ ಹೆಸರು ಮಾಡಿದ್ದೆ.ಶಾಲೆಗೆ ಎರಡನೆಯವಳಾಗಿ ಹತ್ತನೆಯ ತರಗತಿಯಲ್ಲಿ ಪ್ರಥಮ ಪಾಸಾಗಿದ್ದೆ .ಆಗಿನ ಕಾಲಕ್ಕೆ ಅದು ಒಳ್ಳೆಯ ಅಂಕಗಳೇ.ಹಾಗಾಗಿ ಅಲ್ಕಿಯ ತನಕ ನನಗೆ ಕೊನೆಯ ಚೆಂಚಿನ‌ಮಕ್ಕಳ ಕಷ್ಟದ ಅರಿವು ಇರಲಿಲ್ಲ.

ಪ್ರೌಢ ಶಾಲೆಯಲ್ಲಿ ಓದುವಾಗ ವಿಜ್ಞಾನ ನನ್ನ ಆಸಕ್ತಿಯ ವಿಷಯವಾಗಿತ್ತು.ಹಾಗಾಗಿ ಪಿಯುಸಿಯಲ್ಲಿ ವಿಜ್ಞಾನ ತೆಗೆದುಕೊಂಡೆ

ನಾನು ಮಂಗಳೂರು ಸರ್ಕಾರಿ ಕಾಲೇಜಿಗೆ( ಈಗಿನ ಯುನಿವರ್ಸಿಟಿ ಕಾಲೇಜು) ಪಿಯುಸಿಗೆ ಸೇರಿದ್ದೆ.ಅಲೋಷಿಯಸ್ ಕಾಲೇಜಿನಲ್ಲಿ ಸೀಟು ಪಡೆಯಲು ಯತ್ನ ಮಾಡಿದ್ದು ಸಿಕ್ಕಿರಲಿಲ್ಲ.

ನಾನು ಕಾಸರಗೋಡಿನ ಗಡಿನಾಡ ಕನ್ನಡತಿ.ಸಹಜವಾಗಿ ಕನ್ನಡದ ಬಗ್ಗೆ ಒಲುಮೆ ಇತ್ತು.ಆದರೂ ಐದರಿಂದ ಏಳನೆಯತರಗತಿ ತನಕ ಓದಿದ್ದ ಸಂಸ್ಕೃತವೂ ಪ್ರಿಯವಾದ ಭಾಷೆ ಆಗಿತ್ತು.ಹಾಗಾಗಿ ಪಿಯುಸಿಯಲ್ಲಿ ಎರಡನೆಯ ಭಾಷೆಯಾಗಿ ಸಂಸ್ಕೃತ ತೆಗೆದುಕೊಂಡಿದ್ದೆ


ಕಾಸರಗೋಡಿನ ಕಾಲೇಜಿನಲ್ಲಿ ಮಲೆಯಾಲ ಭಾಷೆಯಲ್ಲಿ 

ಪಾಠ ಮಾಡುತ್ತಾರೆ.ಒಂದು ಭಾಷೆಯಾಗಿ ಕೂಡ ಮಲೆಯಾಳವನ್ನು ಕಲಿಯದ ನಮಗೆ ಕಷ್ಟವಾಗಬಹುದೆಂಬ ಕಾರಣಕ್ಕೆ ನಾವೆಲ್ಲ ಹತ್ತನೆಯ ತರಗತಿಯ ನಂತರ ಓದಲು ಮಂಗಳೂರಿಗೆ ಹೋಗುತ್ತಿದ್ದೆವು.

ಇಲ್ಲಿ ಕನ್ನಡದಲ್ಲಿ ಪಾಠ ಮಾಡುತ್ತಾರೆ ಎಂದು ನಾನು ಊಹಿಸಿದ್ದೆ..

ಅಬ್ಬಾ‌.ಇಲ್ಲಿನ ಉಪನ್ಯಾಸಕರ ಹೃದಯ ಹೀನತೆಯೇ ಎಂದು ಈಗಲೂ ನನಗನಿಸುತ್ತದೆ.

..ನಾವು ವಿದ್ಯಾರ್ಥಿಗಳೆಲ್ಲರೂ ಕನ್ನಡ ಮಾಧ್ಯಮದಲ್ಲಿ ಓದಿದವರಾಗಿದ್ದೆವು.ಆದರೂ ಒಂದಕ್ಷರ ಕೂಡ ಕನ್ನಡದಲ್ಲಿವಿವರಣೆ ನೀಡುತ್ತಿರಲಿಲ್ಲ‌.ನಮ್ಮ ಸಂಸ್ಕೃತದ ಉಪನ್ಯಾಸಕರಾಗಿದ್ದ ಲಕ್ಷ್ಮೀ ನಾರಾಯಣ ಭಟ್ಟರು ಮಾತ್ರ ಕನ್ನಡದಲ್ಲಿ ವಿವರಿಸುತ್ತಿದ್ದರು‌.ಹಾಗಾಗಿ ಸಂಸ್ಕೃತದಲ್ಲಿ ನಾನು ಉತ್ತಮ ಅಂಕಗಳನ್ನು ಗಳಿಸಿದ್ದೆ.

 ಒಬ್ಬಿಬ್ಬರು ಪಾಸಾದರೆ ಅದೇ ದೊಡ್ಡ ವಿಚಾರ.

ಮನೆಯಲ್ಲಿ ರುಬ್ಬು ಕಲ್ಲು ಇಲ್ವಾ ? ಅದೇ ಕೆಲಸ ಮಾಡಲು ಲಾಯಕ್ಕು ಎಂದು ಬೈಯುವಾಗ ಮಾತ್ರ ಕನ್ನಡ ಭಾಷೆ ಬಳಕೆ ಇತ್ತು.ಮಾತನಾಡುತ್ತಿರಲಿಲ್ಲ.ಇದರ ಪರಿಣಾಮವಾಗಿ ಹೆಚ್ಚು ಕಡಿಮೆ ಎಲ್ಲರೂ ಪೈಲ್ ಆಗ್ತಿದ್ದೆವು.ಈ ತರಹ 1% ಕ್ಕಿಂತಲೂ ಕಡಿಮೆ ಪಲಿತಾಂಶ ಬಂದರೂ ಇಲ್ಲಿನ ಉಪನ್ಯಾಸಕರನ್ನು ಕೇಳುವವರು ಯಾರೂ ಇರುತ್ತಿರಲಿಲ್ಲವೇ ? ಇವರಂತೆಯೇ ನಾನು ಕೂಡ ಈಗ ಸರ್ಕಾರಿ ಕಾಲೇಜಿನ ಉಪನ್ಯಾಸಕಿ.ನಾವೆಲ್ಲ ಸಹೊದ್ಯೋಗಿಗಳು ಒಂದೇ ಒಂದು ವಿದ್ಯಾರ್ಥಿ ಫೈಲ್ ಆಗಬಾರದೆಂದು 100% ಪಲಿತಾಂಶಕ್ಕಾಗಿ ಹರಸಾಹಸ ಪಡ್ತೇವೆ.ಕೇವಲ100% ನ ಹೆನ್ಮೆಗಾಗಿಯಲ್ಲ.ಕಲಿಕೆಯಲ್ಲಿ ಹಿಮದುಳಿಯುವ ಮಗು ಕೂಡ ಪಾಸಾಗಿ ಎಲ್ಲರಮತೆ ಕಲಿತು ಒಳ್ಳೆಯ ಉದ್ಯೋಗ ಪಡೆಯಬೇಕು ಎಂಬುದೇ ನಮ್ಮ ಆಶಯವಾಗಿದೆ.ಹಾಗಾಗಿ ಯಾರು ಕಲಿಕೆಯಲ್ಲಿ ಹಿಂದೆ ಇದ್ದಾರೆ ಎಮಬುದನ್ನು ಗಮನಿಸಿ ಅವರಿಗೆ ವಿಶೇಷ ಗಮನ ಕೊಡ್ತೇವೆ.ಜೊತೆಗೆ ಎಲ್ಲ ಮಕ್ಕಲೂ ಹೆಚ್ಚು ಅಂಕಗಳನ್ನು ಗಳಿಸುವಂತೆ ಮಾಡಲು ಇಡೀ ವರ್ಷ ಯತ್ನ ಮಾಡುತ್ತೇವೆ.

ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯನ್ನು ಕನ್ನಡದಲ್ಲಿಯೂ ಬರೆಯಲು ಅವಕಾಶವಿದೆ.ಇದು ಗೊತ್ತಾದದ್ದು ನನಗೆ ದ್ವಿತೀಯ ಪಿಯುಸಿ ಅಂತಿಮಪರಿಕ್ಷೆಯ ಪ್ರಶ್ನೆ ಪತ್ರಿಕೆ ಕನ್ನಡದಲ್ಲಿ ಕೂಡ ಇದ್ದಾಗ.

ನಾವೇನೊ ವಿದ್ಯಾರ್ಥಿಗಳು..ನಮಗಿದು ಗೊತ್ತಿರಲಿಲ್ಲ.ಆದರೆ ಉಪನ್ಯಾಸಕರಿಗೆ  ಗೊತ್ತಿತ್ತು ತಾನೇ ? 

ಪ್ರಥಮ ಪಿಯುಸಿ ಕಿರು ಪರೀಕ್ಷೆ ಇರಬೇಕು‌.ಕೆಮೆಷ್ಟ್ರಿಯಲ್ಲಿ ಒಂದು ಪ್ರಶ್ನೆ ಗೆ ಅರ್ಥವನ್ನು ನಾನು ಕನ್ನಡದಲ್ಲಿ ಹೇಳಲು ಕೇಳಿದೆ.ಹೇಳಲಾಗುವುದಿಲ್ಲ‌.ಅಷ್ಟೂ ಗೊತ್ತಾಗದಿದ್ದರೆ ಕಲಿಯಲು ಯಾಕೆ ಬರುದು? ಮನೆಯಲ್ಲಿ ರುಬ್ಬು ಕಲ್ಲು ಇಲ್ವಾ ಎಂದು ಅವಹೇಳನ ಮಾಡಿದ್ದರು.ಅವರ ಹೆಸರು ನನಗೆ ನೆನಪಿದೆ.ಹೇಳುದಿಲ್ಲ ಅಷ್ಟೇ.

ಇಷ್ಟು ಮಕ್ಕಳ ಭವಿಷ್ಯ ಹಾಳಾಗುದನ್ನು ನೋಡುತ್ತಾ ಇದ್ದರೂ ಸ್ವಲ್ಪ ಕನ್ನಡದಲ್ಲಿಯೂ ವಿವರಿಸಿ ನಮ್ಮನ್ನು ಪಾಸಾಗುವಂತೆ ಮಾಡುವ ಯತ್ನವನ್ನು ಇಲ್ಲಿ‌ ಉಪನ್ಯಾಸಕರು ಮಾಡಲೇ ಇಲ್ಲ.ದ್ವಿತೀಯ ಪಿಯುಸಿಯಲ್ಲಿ ಕಿರು ಪರೀಕ್ಷೆ ಮದ್ಯವಾರ್ಷಿಕ ಪರೀಕ್ಷೆ ಪ್ರಿಪರೇಟರಿ ಯಾವುದೂ ಮಾಡಿಯೇ ಇಲ್ಲ.ನಾವು ನೇರವಾಗಿ ಅಂತಿಮ ಪರೀಕ್ಷೆಯನ್ನು ಬರೆದಿದ್ದೆವು.ಒಬ್ಬಿಬ್ಬರು ಬಿಟ್ಟರೆ ಉಳಿದವರೆಲ್ಲರೂ ಪೈಲ್ ಆಗಿದ್ದೆವು.ಹಾಗೆಂದು ನಾವು ಯಾರೂ ದಡ್ಡರಾಗಿರಲಿಲ್ಲ.ಹತ್ತನೆಯ ತರಗತಿ ತನಕ ಜಾಣರೆಂದೇ ಗುರುತಿಸಲ್ಪಟ್ಟವರು ನಾವು.ಇಲ್ಲಿ ಇಂತಹ ದುರಂತಕ್ಕೆಡೆಯಾದೆವು. ಒಬ್ಬಿಬ್ಬರು ಮತ್ತೆ ಪರೀಕ್ಷೆಗೆ ಕಟ್ಟಿ ಪಾಸಾಗಿ ಡಿಗ್ರಿ ಓದಿದ್ದಾರೆ.ಹೆಚ್ಚಿನವರ ವಿದ್ಯಾಭ್ಯಾಸ ಅಲ್ಲಿಗೇ ಮೊಟಕಾಗಿತ್ತು‌‌.

ಹತ್ತನೆಯ ತರಗತಿಯಲ್ಲಿ ಡಿಸ್ಟಿಂಕ್ಷನ್ ತೆಗೆದ ಅನೇಕರು ಪಿಯುಸಿಯಲ್ಲಿ ಫೇಲಾಗಿ ಮತ್ತೆ ಕಟ್ಟಿಯೂ ಪಾಸ್ ಮಾಡಲಾಗದೆ ಗ್ಯಾರೇಜ್ ಗಳಲ್ಲಿ ಪಿಟ್ಟರ್ ಗಳಾಗಿದ್ದರು.ಹುಡುಗಿಯರನ್ನು ಹೆತ್ತವರು ಮದುವೆ ಮಾಡಿ ಕೈ ತೊಳೆದುಕೊಂಡಿದ್ದರು.

ಪಿಯು ನಂತರ ನಾನು ಬಿಎ ಓದಲು ಬಯಸಿ ಕೆನರಾ ಕಾಲೇಜಿಗೆ ಅರ್ಜಿ ಸಲ್ಲಿಸಿದೆ.ನಾನು ತಂದೆಯ ಜೊತೆಗೆ ಕಾಲೇಜಿಗೆ ಹೋಗಿ ಪ್ರಿನ್ಸಿಪಾಲರಲ್ಲಿ ಮಾತನಾಡಲು ಹೋದೆ.ಆಗ ಅವರೆಷ್ಟೋ( 40,000₹?) ಡೊನೇಶನ್  ಕೇಳಿದರು

ಆಗ ನಮ್ಮ ತಂದೆಯವರು ನಮಗೆ ಎರಡು ಖಂಡಿ ಅಡಿಗೆ ಆಗುದು.ಅಷ್ಟು ಡೊನೇಶನ್ ಕೊಡಲು ಕಷ್ಟವಾಗುತ್ತದೆ ಎಂದರು.ಅಗ ಎರಡು ಖಂಡಿಯೋ ಇಪ್ಪತ್ತು ಖಂಡಿಯೋ ಎಂದವರು ಗದರಿ ಮಾತನಾಡಿದರು.ಆ ಪ್ರಿನ್ಸಿಪಾಲ್ ಹೆಸರು ಉಪಾಧ್ಯಾಯ ಎಂದೇನೋ ಇತ್ತೆಂದು ನೆನಪು.ಆಗ ಸರ್ಕಾರಿ ಉದ್ಯೋಗಿಗಳಿಗೆ ಬಹಳ ಅಹಂಕಾರವಿತ್ತೆಂದು ತೋರುತ್ತದೆ‌.ನಂತರದ ದಿನಗಳಲ್ಲಿ ಸಾಪ್ಟ್ವೇರ್ ಇಂಜನಿಯರ್ ಗಳ ದಂಡು ಹರಿದು ಬಂದು ಲಕ್ಷ ಗಟ್ಟಲೆ ಸಂಬಳ ಪಡೆದಾಗ ಇವರದೆಲ್ಲ ಅಟ್ಟಹಾಸ ಸ್ವಲ್ಪ ಕಡಿಮೆಯಾಯಿತೆನಿಸುತ್ತದೆ.ಮೊದಲೆಲ್ಲ ಅನುದಾನಿತ ಶಾಲೆಯ ಶಿಕ್ಷಕರು,ಬ್ಯಾಮಕಿನ ಸಿಬ್ಬಂದಿಗಳು ಇತರ ಸರ್ಕಾರಿ ಉದ್ಯೋಗಿಗಳು ತಾವು ಇತರರಿಗಿಂತ ಭಿನ್ನವಾಗಿ ಸ್ವರ್ಗದಲ್ಲಿ ಇರುವವರಂತೆ ವರ್ತಿಸುತ್ತಿದ್ದರು.ಇದು ನನ್ನೊಬ್ಬಳ ಮಾತಲ್ಲ.ಆ ಕಾಲದ ಅನೇಕರು ಹೀಗೆಯೇ ಅಭಿಪ್ರಾಯ ಪಟ್ಟಿದ್ದಾರೆ.ನಾನು‌ಮದುವೆತಾದ ಸಮಯದಲ್ಲಿ ಯಾವುದೊ ನೆಂಟರ ಮದುವೆಗೆ ಹೋಗಿದ್ದೆ.ಅಲ್ಲಿಗೆ ಅನುದಾನಿತ  ವಿಟ್ಲ ಪಿಯು ಕಾಲೇಜಿನ ಉಪನ್ಯಾಸಕರ ಮಡದಿ ಬಂದಿದ್ದರು.ಆಗ ಅವರು ಲೆಕ್ಚರ್ ನ ಹೆಂಡತಿ  ಎಂದು ಬಹಳ ಗೌರವದಿಮದ ಹೆಂಗಸರು ಅವರಿಗೆ ಕುಳಿತುಕೊಳ್ಳಲು ಜಾಗ ಬಿಟ್ಟು ಕೊಟ್ಟಿದ್ದರು.ಅದನ್ನು ನೋಡಿಯೇ ನಾನೂ ಉಪನ್ಯಾಸಕಿಯಾಗುದೆಂದು ನಿರ್ಧರಿಸಿದ್ದೆ.


ಇರಲಿ

 ಹಳ್ಳಿಯ ಜನರನ್ನು ತಿರಸ್ಕಾರದಿಂದ ಕಾಣುವ ಕೆನರಾ ಕಾಲೇಜು ಬೇಡವೆನಿಸಿ ಮತ್ತೆ ಸರ್ಕಾರಿ ಕಾಲೆಜಿಗೇ ಹೋಗುವುದರಲ್ಲಿದ್ದೆ.ಅಷ್ಟರಲ್ಲಿ ನನ್ನ ತಮ್ಮ ಈಶ್ವರ ಭಟ್ ಗೆ ಉಜಿರೆ ಕಾಲೇಜಿನಲ್ಲಿ ನಮ್ಮ ಸಂಬಂಧಿಕರಾದ ಅಲ್ಲಿನ ಭೌತಶಾಸ್ತ್ರ ಉಪನ್ಯಾಸಕರಾಸ   ಗಣಪಯ್ಯಾವರು ಸೀಟ್ ಕೊಡಿಸಿದ್ದರು.ಇವನ ಅಡ್ಮಿಷನ್ ಗೆ ಹೋಗಿದ್ದಾಗ ನಮ್ಮ ತಂದೆಯವರಲ್ಲಿ ನಾನೇನು ಮಾಡಿತ್ತಿರುವೆ ಎಂದು ಕೇಳಿ ಅವರಾಗಿ ಉಜಿರೆ ಕಾಲೆಜಿನಲ್ಲಿ ಬಿಎಸ್ಸಿಗೆ ಸೀಟು ಕೊಡಿಸಿದ್ದರು.ನಾನು ಬಿಎಗೆ ಸೇರುತ್ತೇನೆ ಎಂದಾಗ ಇಲ್ಲಿ ಒಳ್ಳೆಯ ಉಪನ್ಯಾಸಕರಿದ್ದಾರೆ.ಸಮಸ್ಯೆ ಆಗದು ಎಂದಯ ಬಿಎಸ್ಸಿಗೆ ಸೇರಿಸಿದರು

ಪಿಯು ಪಾಠಗಳ ಬೇಸ್ ಅರ್ಥವಾಗದ ಕಾರಣ ಬಿಎಸ್ಸಿಯ ಪಾಠಗಳೂ ನನಗೆ ಸರಿಯಾಗಿ ಅರ್ಥವಾಗಲಿಲ್ಲ.ಜೊತೆಗೆ ಇಂಗ್ಲಿಷ್ ಭಾಷೆಯ ಸಮಸ್ಯೆ

ಒಮ್ಮೆ ಫಿಸಿಕ್ಸ್ ಪ್ರಾಕ್ಟಿಕಲ್ ಮಾಡುತ್ತಾ ಕೇಶವ ಭಾರತಿ ಎಂಬ ಉಪನ್ಯಾಸಕರು ಬಿಎಸ್ಸಿ ಅಷ್ಟು ಕಷ್ಟವೆನಿಸುದಾದರೆ ಮುಂದೆ ಡಿಗ್ರಿಯಲ್ಲಿ ಕಲಿತ ಭಾಷೆಗಳಲ್ಲಿ ಎಂಎ ಮಾಡಲು ಆಗುತ್ತದೆ ಎಂದು ತಿಳಿಸಿದ್ದರು

ಕೊನೆಯ ಬೆಂಚಿನ ಹುಡುಗಿಯಾದಾಗ ಎದುರಿಸಿದ ಅವಮಾನ ,ಹೀಯಾಳಿಕೆ ಕೀಳರಿಮೆ ನನ್ನನ್ನು ಹದಗೆಡಿಸಿದ್ದವು.

ಈಗ ಸಂಸ್ಕೃತ ಎಂಎ ಮಾಡಲು ಆಗುತ್ತದೆ ಎಂಬ ವಿಚಾರ ಗೊತ್ತಾಗಿ ಮತ್ತೆ ಭರವಸೆ ಹುಟ್ಟಿತು.

ಹೇಗೋ ಬಿಎಸ್ಸಿ ಪಾಸಾಗಿ ಮುಂದೆ ಎಂಎ ಮಾಡಬಹುದೆನಿಸಿತು.ಆಗ ಅಲ್ಲಿಯೇ ಇದ್ದ ಸಹಪಾಠ ರವಿರಾಜನಲ್ಲಿ ನಾನು ಮುಂದೆ ಈ ಸಯನ್ಸ್ ಓದಿ ಜಸ್ಟ್ ಪಾಸಾಗುವ ಬದಲಯ ಎಂಎಗೆ ಸೇರಿ ರ‌್ಯಾಂಕ್ ತೆಗೆಯುತ್ತೇನೆ ಎಂದಿದ್ದೆ.ಅದನ್ನು ಕೇಳಿಸಿಕೊಂಡಿದ್ದ ಕೇಶವ ಭಾರತಿಯವರು ಗುಡ್ ಲಕ್ಷ್ಮೀ,ಯು ಕ್ಯಾನ್ ಎಂದು ಬೆಂಬಲದ  ಮಾತನಾಡಿದ್ದರು

ಅಂತೂ ಇಂತೂ ಬಿಎಸ್ಸಿ ಮುಗಿಸಿ ಸಂಸ್ಕೃತ ಎಂಎಗೆ ಓದಿ ಮೊದಲ ರ‌್ಯಾಂಕ್ ತೆಗೆದು ಯಶಸ್ಸನ್ನು ಗಳಿಸಿದ್ದೆ.ಮತ್ತೆ ಕೊನೆಯ ಬೆಂಚಿನಿಂದ ಮೊದಲ ಬೆಂಚಿಗೆ ಬಂದಿದ್ದೆ

ಕೊನೆಯ ಬೆಂಚಿನವರು ಎದುರಿಸುವ ಅವಮಾನ ಕಷ್ಟಗಳು ಒಂದೆರಡಲ್ಲ.ನೊಟ್ಸಿಗೆ ಇತರರನ್ನು ಗೋಗರೆಯಬೇಕು.ಅವರಿಗೆ ಸದಾ ಡೊಂಕು ಸಲಾಮು ಹಾಕಬೇಕು ಪ್ರಾಕ್ಟಿಕಲ್ ಗಳಿಗೂ ಅವರದೇ ಸಹಾಯ ಬೇಕು‌

ಅದಕ್ಕಾಗಿ ನಾನು ಜಾಣ ಮಕ್ಕಳಿಗೆ ಅಗಾಗ ಸ್ವಿಟ್ಸ್ ಹೂವನ್ನೆಲ್ಲ ತಗೊಂಡು ಹೋಗಿ ಕೊಟ್ಟು ಸಂತೋಷಪಡಿಸುತ್ತಿದ್ದೆ

ಇನ್ನು ಉಪನ್ಯಾಸಕರ ಅವಜ್ಞೆಯನ್ನು ಎದುರಿಸಬೇಕು.ನಾವೆಲ್ಲ ಏನಿದ್ದರೂ ಮದುವೆಯಾಗಿ ಎರಡು ಮಕ್ಕಳ ಹೆತ್ತು ಅಡಿಗೆ ಮಾಡಲು ಮಾತ್ರ ಯೋಗ್ಯರೆಂದು ಭಾವಿಸಿದ್ದು ಅವರ ನಿರ್ಲಕ್ಷ್ಯದ ನೋಟ ನಮಗೆ ಅರಿವಿಗೆ ಬರುತ್ತಿತ್ತು.ಪ್ರಶ್ನೆ ಕೇಳಿದಾಗ ಉತ್ತರ ಗೊತ್ತಿದ್ದರೂ ಹೇಳಲಾಗದ ಕೀಳರಿಮೆ ಕಾಡುತ್ತಿತ್ತು.ಏನು ಮಾಡುದು

.ಅನುಭವಿಸಲೇ ಬೇಕಿತ್ತು

ನನ್ನ ಈ ಅನುಭವವೇ ಕಾರಣವೋ ಏನೊ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಬಗ್ಗೆ ನನಗೆ ವಿಶೇಷ ಒಲವು.ಅವರನ್ನು ಹೇಗಾದರೂ ಮಾಡಿ ಪಾಸಾಗುವಂತೆ,ಒಳ್ಳೆಯ ಅಂಕ ಗಳಿಸುಂತೆ ,ಅವರಲ್ಲಿ ಆತ್ಮ ವಿಶ್ವಾಸ ಹುಟ್ಟುವಂತೆ ಮಾಡುತ್ತೇನೆ .

ಮಕ್ಕಳು ಸಣ್ಣ ಪುಟ್ಟ ತಪ್ಪುಗಳನ್ನು ಮಾಡುವುದು ಸಹಜ.ಚೀಟಿ ಇಟ್ಟು ಬರೆಯುವುದು,ಪುಸ್ತಕ ಪೆನ್ನು ಕಳ್ಳತನ ಮಾಡುವ ಕೆಲವು ಮಕ್ಕಳೂ ಇರ್ತಾರೆ.ಅವರ ತಪ್ಪನ್ನು ಅವರಿಗೆ ಮನವರಿಕೆ ಮಾಡಿ ಸರಿ ದಾರಿಯಲ್ಲಿ ನಡೆಸುತ್ತೇನೆಯೇ ಹೊರತು ಅವರನ್ನು ಕಳ್ಳ ಕಾರನ್ನು ರೌಡಿಗಳನ್ನು ಕಾಣುವಂತೆ ಕಂಡು ಅವರು ಇನ್ನಷ್ಟು ಉಡಾಫೆಗಳಾಗುವಂತೆ ಮಾಡುವುದಿಲ್ಲ.ಸಣ್ಣ ತಪ್ಪು ಮಾಡಿದವರಿಗೆ ಹೆಚ್ಚು ಗಮನ ಕೊಡುವ ಅಗತ್ಯವಿರುತ್ತದೆ ಕೆಲವರು ಗಮನ ಸೆಳೆಯುವ ಸಲುವಾಗಿಯೇ ಉಡಾಫೇ ಮಾಡುತ್ತಾರೆ.ಎಂತಹ ಉಡಾಫೆ ಮಕ್ಕಳೂ ನನ್ನ ತರಗತಿಯಲ್ಲಿ ಒಂದೆರಡು ವಾರಗಳಲ್ಲಿ ಎಲ್ಲರಂತಾಗುತ್ತಾರೆ.ಅಗತ್ಯವಾದಲ್ಲಿ ತೋರಿಕೆಯ ಕಠಿಣತೆಯನ್ನೂ  ತೋರಿಸಬೇಕಾಗುತ್ತದೆ.ನಂತರ ಪ್ರೀತಿಯಿಂದ ಮಕ್ಕಳ‌ಮನಸನ್ನು ಗೆಲ್ಲಬೇಕಾಗುತ್ತದೆ ಎಂಬುದನ್ನು ಅನುಭವದಿಂದ ಕಂಡುಕೊಂಡಿರುವೆ‌



No comments:

Post a Comment