Wednesday, 1 September 2021

ಬದುಕ ಬಂಡಿ,ನಾನು ಹೀಗಿದ್ದಿರಬಹುದೇ ?

 ನಾನು ಹೀಗಿದ್ದಿರಬಹುದೇ ?

ಕೃಷ್ಣಾಷ್ಟಮಿಯಂದು ರಾತ್ರಿ ಕೃಷ್ಣ ಕಾಣಿಸುತ್ತಾನೆಂದೇ ನಾನು ನಂಬಿದ್ದೆ..

ನಮ್ಮಲ್ಲಿ ಕೃಷ್ಣಾಷ್ಟಮಿ ಬಗ್ಗೆ ಒಂದು ನಂಬಿಕೆ ಪ್ರಚಲಿತವಿತ್ತು‌.ಅಂದು ಕೃಷ್ಣನಿಗಾಗಿ ಪಾಯಸ ಉಂಡೆ ಮಾಡಿಕೊಂಡು ರಾತ್ರಿ ಚಂದ್ರನಿಗಾಗಿ ಕಾಯುತ್ತಾ ಇದ್ದರು‌.ರಾತ್ರಿ ಚಂದ್ರನಲ್ಲಿ ಕೃಷ್ಣ ಕೊಳಲನೂದುತ್ತಾ ಕಾಣಿಸುತ್ತಾನೆ ಎಂದು ಹಿರಿಯರು ಹೇಳುತ್ತಾ ಇದ್ದರು.ಚಿಕ್ಕಂದಿನಲ್ಲಿ ನಾನದನ್ನು ನಂಬಿದ್ದೆ.ಚಂದ್ರನಲ್ಲಿ ಕೃಷ್ಣ ಕೊಳಲನೂದುತ್ತಾ ಬರುವುದನ್ನು ನೋಡಬೇಕೆಂಬ ಆಸೆಯಿಂದ ರಾತ್ರಿ ಸುಮಾರು ಹೊತ್ತಿನವರೆಗೆ ಎಚ್ಚರದಿಂದ ಇರುತ್ತಿದ್ದೆ‌.ಆದರೆ ಹನ್ನೆರಡು ಗಂಟೆ ಆಗುವಷ್ಟರಲ್ಲಿ ನನಗೆ ನಿದ್ದೆ ಬಂದಿರುತ್ತಿತ್ತು.ಮತ್ತೆ ಮರುದಿನ ಬೆಳಿಗ್ಗೆ ಎದ್ದು"  ಛೇ ಕೃಷ್ಣನನ್ನು ನೋಡಲಾಗಲಿಲ್ಲವಲ್ಲ! ಮುಂದಿನ ವರ್ಷ ಕಾದು ಕುಳಿತು ನೋಡಬೇಕೆಂದು ನಿರ್ಧಾರ ಮಾಡುತ್ತಾ ಇದ್ದೆ..ಮತ್ತೆ ಇದೇ ಕಥೆ ಪುನರಾವರ್ತನೆ ಆಗುತ್ತಾ ಇತ್ತು.

ನಾನು ಏಳನೇ ತರಗತಿಯಲ್ಲಿ ಓದುತ್ತಿದ್ದಾಗ ಬಾಲಕಲೋತ್ಸವದಲ್ಲಿ ನೃತ್ಯ ಸ್ಪರ್ಧೆಯಲ್ಲಿ  ನಮ್ಮ ಮೀಯಪದವು ವಿದ್ಯಾ ವರ್ಧಕ ಹಿರಿಯ ಪ್ರಾಥಮಿಕ ಶಾಲೆಯ ತಂಡ ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದಿರಿ ಹಾಡಿಗೆ ನೃತ್ಯ ಮಾಡಿದ್ದು ಅದರಲ್ಲಿ ಗೋಪಿಕಾ ಸ್ತ್ರೀಯರೊಂದಿಗಿನ ತುಂಟ ಕೃಷ್ಣನಾಗಿ ನಾನು ಹೆಜ್ಜೆ ಹಾಕಿದ್ದೆ.ನೃತ್ಯ ಹೇಳಿಕೊಡುವಾಗ ನಮ್ಮ ಶಿಕ್ಷಕರಾದ ವಸಂತ ಮಾಸ್ಟರ್ ಮತ್ತು ಸರೋಜಾ ಟೀಚರ್ ಕೃಷ್ಣ ನಗುತ್ತಾ ಇರಬೇಕೆಂದು ಹೇಳುತ್ತಿದ್ದರು..ನಾನು ಕೃತಕವಾಗಿ ನನ್ನ ಚೆಟ್ಟು ಹಲ್ಲು ಪೂರ್ತಿಯಾಗಿ ಕಾಣುವಂತೆ ಹಲ್ಲು ಬಿಡುತ್ತಿದ್ದೆ.ಸ್ಪರ್ಧೆಯ ದಿನ ಸರೋಜಾ ಟೀಚರ್ ಹಾಗಲ್ಲ ಕೃಷ್ಣನಂತೆ ಮುಗುಳು ನಗು ಬರಬೇಕೆಂದು ಹೇಳಿದರು.. ಆಗ ಮತ್ತೆ ನಾನು ಒಮ್ಮೆಯೂ ಕೂಡ ಕೃಷ್ಣಾಷ್ಟಮಿಯಂದು ರಾತ್ರಿ ಕಾದು ಕುಳಿತು ಕೃಷ್ಣ ಹೇಗೆ ನಗುತ್ತಾನೆಂದು ನೋಡದ ಬಗ್ಗೆ ಪೇಚಾಡಿದ್ದೆ.ಮತ್ತೆ ಟೀಚರೇ ನಮಗೆ ಸ್ವಲ್ಪ ತುಟಿಯಗಲಿಸಿ ಹಲ್ಲು ಕಾಣದಂತೆ ಹೇಗೆ ಮುಗುಳು ನಗು ಬರಬೇಕೆಂದು ಹೇಳಿಕೊಟ್ಟರು..ಅಂತೂ ಇಂತೂ ನಮ್ಮ ಶಾಲೆಯ ತಂಡಕ್ಕೆ ಬಾಲಕಲೋತ್ಸವದಲ್ಲಿ ಬಹುಮಾನ ಬಂದಿತ್ತು...

ಏಳನೇ ತರಗತಿಯ ವಿದ್ಯಾರ್ಥಿನಿಗೆ ಅಷ್ಟೂ ಗೊತ್ತಿರಲ್ವಾ ? ಅಂತ ಆಕ್ಷೇಪ ಮಾಡಬೇಡಿ..ಮೂವತ್ತೆರಡು ಮೂವತ್ತಮೂರು ವರ್ಷದ ಹಿಂದೆ ನಮ್ಮ ಬಾಲ್ಯ ಹಾಗೆಯೇ ಇತ್ತು..ಆ ಮುಗ್ಧತನ ,ಆ ನಂಬಿಕೆ ಹಾಗೆಯೇ ಉಳಿದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಈಗ ಅನಿಸುತ್ತದೆ ..

ಅದು ಸರಿ  ನೃತ್ಯ ದಲ್ಲಿ ಕೃಷ್ಣನಾಗಿ ಹೆಜ್ಜೆ ಹಾಕಿದಾಗ ನಾನು ಹೇಗೆ ಕಾಣಿಸುತ್ತಿದ್ದೆ ? ಎರಡು ಬಾರಿ ನಾನು ಈ ನೃತ್ಯವನ್ನು ಮಾಡಿದ್ದೆ,ಮೊದಲನೆಯ ಐಲ ಶಾಲೆಯಲ್ಲಿ ನಡೆದ ಬಾಲಕಲೋತ್ಸವದಲ್ಲಿ, ಎರಡನೆಯ ಬಾರಿ ಅದೇ ವರ್ಷ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ .

ಆದರೆ ಎರಡು ಬಾರಿ ಕೃಷ್ಣನ ವೇಷ ಧರಿಸಿದಾಗ ಕೂಡ ನಾನು ಕನ್ನಡಿಯಲ್ಲಿ ನನ್ನ ಮುಖವನ್ನು ನೋಡಿಕೊಂಡಿರಲಿಲ್ಲ..ಆ ಕಾಲದಲ್ಲಿ ಫೋಟೋ ತೆಗೆಯುದೆಲ್ಲ  ಇರಲಿಲ್ಲ.. ಹಾಗಾಗಿ ಕೃಷ್ಣನಾಗಿ ನಾನು ಹೇಗಿದ್ದೆ ? ವಾರ್ಷಿಕೋತ್ಸವದಲ್ಲಿ ಆ ನೃತ್ಯ ನೋಡಿದ ನನ್ನಣ್ಣ  ಕೃಷ್ಣ ಭಟ್ ವಾರಣಾಸಿ( ಪ್ರಸ್ತುತ ಅಮೇರಿಕಾನಿವಾಸಿ)" ಕೊನೆಯಲ್ಲಿ ನೀನು ಕೊಳಲು ಹಿಡಿದು ಗೋಪಿಕಾ ಸ್ತ್ರೀ ಯರ ನಡುವೆ ನಿಂತಿದ್ದೆಯಲ್ಲ..ತುಂಬಾ ಚಂದ ಕಂಡಿದ್ದೆ ಎಂದು ಹೇಳಿದ್ದು ನನಗೆ ಯಾವಾಗಲೂ ನೆನಪಾಗುತ್ತದೆ.ಕೃಷ್ಣ ವೇಷ ಭೂಷಣ ಧರಿಸಿದ ಮುದ್ದು ಪುಟಾಣಿಗಳನ್ನು ನೋಡುವಾಗ ನಾನು ಹೀಗಿದ್ದರಬಹುದಾ ? ಎಂದು ಕಲ್ಪಿಸಿಕೊಳ್ಳುತ್ತೇನೆ‌‌..ಮತ್ತೆ ನಾನು ಇಷ್ಟು ಮುದ್ದಾಗಿರಲಿಕ್ಕಿಲ್ಲ ಎಂದುಕೊಳ್ಳುತ್ತೇನೆ‌..ನಮ್ಮ ಶಾಲೆಯ ಮದಂಗಲ್ಲು ಶ್ರೀನಿವಾಸ ಮಾಸ್ಟರ್ ಸಿಕ್ಕಾಗೆಲ್ಲ  ಕೊಳಲು ಹಿಡಿದ ಕೃಷ್ಣನ ಮುದ್ರೆಯನ್ನು ತೋರುತ್ತಾ ಎಂತ ಕೃಷ್ಣ ಕೂಸು ಎಂತ ಮಾಡುತ್ತಾ ಇದ್ದೆ ಈಗ ಎಂದು ಕೇಳುತ್ತಿದ್ದರು ..ಅವರು ಕೂಡ ನಮಗೆ ನೃತ್ಯ ,ನಾಟಕಾಭಿಯ ಮೊದಲಾದವುಗಳನ್ನು ಹೇಳಿಕೊಟ್ಟಿದ್ದರು‌.ನನಗೆ ಮುಖಕ್ಕೆ ಬಣ್ಣ ಹಾಕಿ ಕೃಷ್ಣನನ್ನಾಗಿ ಮಾಡಿದವರು ಕೂಡ ಅವರೇ 


No comments:

Post a Comment