Sunday, 25 August 2019

ನನ್ನೊಳಗೂ ಒಂದು ಆತ್ಮವಿದೆ..13 ..ಒಂದು ಕಾಶಿ ಇನ್ನೊಂದು ಕಾಶಿಗೆ ಹೊರಟದ್ದನ್ನು ನೋಡಿದ್ದೀರಾ ?



ಒಂದು ಕಾಶಿ ಇನ್ನೊಂದು ಕಾಶಿಯನ್ನು ನೋಡಲು ಹೋಗುವ ಬಗ್ಗೆ ಕೇಳಿದ್ದೀರಾ ?
“ಕಾಸಿಗಿ ಹೋಗುದಕ ಏಸೊಂದು ದಿನಬೇಕು/
, ತಾಸ್ ಹೊತ್ತಿನ ಹಾದಿ ತೌರೂರು ಮನೆಯಲ್ಲಿ/
ಕಾಶಿ ಕುಂತವಳೆ ... ಕಾಸಿ ಕುಂತವ್ಳೆ ಹಡೆದವ್ವ
ನನ್ನಮ್ಮನೇ ಒಂದು ಕಾಶಿ..ಅವರೀಗ ಕಾಶಿಗೆ ಹೋಗಿದ್ದಾರೆ
ನನ್ನಮ್ಮ ,ಅಣ್ಣ ಅಕ್ಕ ಬಾವ ,ತಮ್ಮ ತಮ್ಮನ ಹೆಂಡತಿ ಮಕ್ಕಳು ಮೊನ್ನೆ ಕಾಶಿಗೆ ಹೊರಟರು.ಅಕ್ಕ ಬಾವ ತಮ್ಮ ತಮ್ಮನ ಮಡದಿ ಮಕ್ಕಳು ಮಂಗಳೂರಿನಿಂದ ವಿಮಾನ ಹತ್ತಿ ಇಪ್ಪತ್ತೆರಡನೆಯ ತಾರೀಕಿನಂದು ಸಂಜೆ ಬೆಂಗಳೂರಿನ ನಮ್ಮ ಮನೆಗೆ ಬಂದರು.ಅಮ್ಮ ಹದಿನೈದು ದಿನ ಮೊದಲೇ ನಮ್ಮ ಮನೆಗೆ ಬಂದಿದ್ದರು.ಮಗ ಊರಿಗೆ ಹೋದವನು ಒತ್ತಾಯ ಮಾಡಿ ಅಮ್ಮನನ್ನು ನಮ್ಮನೆಗೆ ಕರೆದುಕೊಂಡು ಬಂದಿದ್ದ.
ಇಪ್ಪತ್ತಮೂರನೇ ತಾರೀಕಿನಂದು ಬೆಳಗೆ ಎಂಟೂವರೆಯ ವಿಮಾನದಲ್ಲಿ ಕಾಶಿಗೆ( ವಾರಾಣಸಿ) ಹೋಗಲು ಸೀಟ್ ಬುಕ್ ಆಗಿತ್ತು.
ಅಕ್ಕ ಬಾವ ತಮ್ಮ ಮಕ್ಕಳೆಲ್ಲ ಸೇರಿದ್ದರಿಂದ ಬಹಳ ಸಂಭ್ರಮದ ವಾತಾವರಣ.
ತಮ್ಮನ ಮಕ್ಕಳಿಗೆ ಪಿಜ್ಜಾ ತಿನ್ನುವ ಆಸೆ ಅಯಿತು.ಆದರೆ ಮರುದಿನದಿಂದ ಐದು ದಿನಗಳ ಕಾಲ ಪ್ರಯಾಣ ಇದ್ದ ಕಾರಣ ತಮ್ಮ ಬೇಡ ಎಂದು ಹೇಳಿದರು.ಸೊಸೆಯ ಮುಖ ಚಿಕ್ಕದಾಯಿತು.ಆಗ ನಾನು ಮುಂದಿನ ಬೇಸಗೆ ರಜೆಯಲ್ಲಿ ಹದಿನೈದು ದಿನ ಇರುವಂತೆ ಬಾ..ಇಡೀ ಬೆಂಗಳೂರು ಸುತ್ತಿಸುತ್ತೇನೆ ಬೇಕಾದ್ದು ತೆಗೆದು ಕೊಡುತ್ತೇನೆ ಎಂದು ಸಮಾಧಾನ ಮಾಡಿದೆ.
‌ಮರುದಿವಸ ನಾಲ್ಕೂವರೆಗೆ ವಿಮಾನ ನಿಲ್ದಾಣಕ್ಕೆ ಹೋಗಲು ಕಾರನ್ನು ಬರುವಂತೆ ಹೇಳಿದ್ದೆವು.
‌ಮರು ದಿನದ ತಿಂಡಿ ಎಲ್ಲ ಮೊದಲೇ ಸಿದ್ಧ ಪಡಿಸಿದ್ದೆವು..
‌ಮರು ದಿನ ಮೂರು ಗಂಟೆಗೆ ಏಳ ಬೇಕಿದ್ದರಿಂದ ಬೇಗ ಬೇಗನೆ ಊಟ ಮಾಡಿ ಮಲಗಿ ಎಂದು ಅಮ್ಮ ಗದರಿದರೂ ನಮ್ಮ ಅಕ್ಕ ತಮ್ಮಂದಿರ ಮಾತು ಹರಟೆ ತಮಾಷೆ ಸುಲಭಕ್ಕೆ ಕೊನೆಗಾಣುವಂತಿರಲಿಲ್ಲ.ಅಂತೂ ಇಂತೂ ಒಮಬತ್ತೂವರೆಗೆ ಎಲ್ಲರಿಗೆ ಚಾಪೆ ಹಾಸಿ ಮಲಗಲು ವ್ಯವಸ್ಥೆ ಮಾಡಿದೆ, ಎಲ್ಲರೂ ಬೆಳಕು ನಂದಿಸಿ ಹಾಸಿಗೆಯಲ್ಲಿ ಬಿದ್ದು ಕೊಂಡೆವು.ಅವರಿಗೆಲ್ಲಾ ಪ್ರಯಾಣ ಮಾಡಿ ಬಂದು ಸುಸ್ತಾಗಿ ನಿದ್ರೆ ಬಂದಿರಬಹುದು
‌ಆದರೆ ನನಗೆ ಮಾತ್ರ ಒಂದಿನಿತು ನಿದ್ದೆ ಕಣ್ಣಿಗೆ ಹತ್ತಲಿಲ್ಲ..ಕಣ್ಣಿಗೆ ಕಾಣುತ್ತಾ ಇದ್ದದ್ದು ಒಂದೇ ದೃಶ್ಯ... ನಾನೂ ಕಾಶಿಗೆ ಬರುತ್ತೇನೆ ಎಂದು ದುಃಖಿಸಿ ದುಃಖಿಸಿ ಅಳುತ್ತಿದ್ದ ಮೂರು ನಾಲ್ಕು ವರ್ಷದ ಸಣ್ಣ ಹುಡುಗಿಯ ಚಿತ್ರ...ಆ ಹುಡುಗಿ ಬೇರೆ ಯಾರೂ ಅಲ್ಲ..ನಾನೇ ಆಗಿದ್ದೆ.
‌ನಾನು ಚಿಕ್ಕವಳಿದ್ದಾಗ ಅಂದರೆ ಸುಮಾರು ನಲುವತ್ತೆರಡು ವರ್ಷಗಳ ಮೊದಲು ನಮ್ಮ ಕುಟುಂಬವಿಡೀ ಕಾಶಿಗೆ ಹೋಗಿತ್ತು.ಸಂಸಾರದ ಜವಾಬ್ದಾರಿ ಹಾಗೂ ಎಳೆಯ ಮಕ್ಕಳಿರುವ ಕಾರಣದಿಂದಾಗಿ ನನ್ನ ತಂದೆ ತಾಯಿ ಮತ್ತು ನಾವು ಐದು ಜನ ಮಕ್ಕಳು ಮಾತ್ರ ಹೋಗಿರಲಿಲ್ಲ..
‌ನನಗೆ ಬೇರೆ ಯಾರು ಹೊದರೂ ಅಷ್ಟೊಂದು ದುಃಖ ಆಗುತ್ತಿರಲಿಲ್ಲವೋ ಏನೋ..ನನ್ನ ಜೊತೆ ಜೊತೆಗೇ ಬೆಳೆದ ನನಗಿಂತ ಕೆವಲ ಐದಾರು ತಿಂಗಳು ದೊಡ್ಡವಳಾದ ಚಿಕ್ಕಪ್ಪನ ಮಗಳು ಸಂಧ್ಯಾ ನನ್ನನ್ನು ಬಿಟ್ಟು  ಕಾಶಿಗೆ ಹೋಗುವುದು ಸಹಿಸಲಾಗದ ವಿಚಾರವಾಗಿತ್ತು.ಚಿಕ್ಕಪ್ಪ ಚಿಕ್ಕಮ್ಮ ಹೋಗುವ ಕಾರಣ ಅವಳನ್ನು ಕರೆದುಕೊಂಡು ಹೋಗಿದ್ದರು ಅದೇನು ಅಸಹಜ ವಿಚಾರವಲ್ಲ
‌ಆದರೆ ಅಷ್ಟೆಲ್ಲ ಯೋಚಿಸುವಷ್ಟು ನಾನು ದೊಡ್ಡವಳಾಗಿರಲಿಲ್ಲ.ಹಾಗಾಗಿ ಒಂದೇ ಸಮನೆ ನಾನೂ ಕಾಶಿಗೆ ಬರುತ್ತೇನೆ ಎಂದು ಹಠ ಮಾಡುತ್ತಿದ್ದೆ
ನನ್ನಲ್ಲಿ ಇರುವುದರಲ್ಲಿ ಒಂದು ಚಂದದ  ಕೆಂಪುಬಣ್ಣದ ಫ್ರಾಕ್ ಹಾಕಿ ಸಿದ್ಧಳಾಗಿದ್ದೆ.ಯಾರೇನೂ ಹೇಳಿ ಸಮಾಧಾನ ಮಾಡಿದರೂ ನಾನು ಕೇಳುವ ಪರಿಸ್ಥಿತಿ ಯಲ್ಲಿ ಇರಲಿಲ್ಲ ಯಾಕೆಂದರೆ ಸಂಧ್ಯಾ ಹೋಗುತ್ತಿದ್ದಾಳಲ್ಲ‌! ಮತ್ತೆ ನನ್ನನ್ಯಾಕೆ ಕರೆದುಕೊಂಡು ಹೋಗಬಾರದು ಎಂಬುದೊಂದೇ ಪ್ರಶ್ನೆ ನನ್ನದು‌ಆಗ ಅಜ್ಜಿ ಅವಳ ತಂದೆ ತಾಯಿ ಹೋಗುತ್ತಾರೆ ಹಾಗಾಗಿ ಅವಳನ್ನು ಕರೆದುಕೊಂಡು ಹೋಗುತ್ತಾರೆ...ನೀನು ನಿನ್ನ ತಂದೆ ತಾಯಿ ಹೋದಾಗ ಅವರ ಜೊತೆಯಲ್ಲಿ ಹೋಗು ಕಾಶಿಗೆ ಹೋಗುದೆಂದರೆ ಸಣ್ಣ ವಿಚಣರವಲ್ಲ..ಅದಕ್ಕೆ ಪುಣ್ಯ ಬೇಕು ಎಂದು ಏನೇನೋ ಹೇಳಿದರು...ಅದೆಲ್ಲ ಅರ್ಥ ಆಗುವ ವಯಸ್ಸು ನನ್ನದಲ್ಲ.ನನಗೆ ಕಾಶಿ ಎಂದರೇನು ? ಎಂದು ಕೂಡ ಗೊತ್ತಿರಲಿಲ್ಲ. ನನ್ನ ಒಬ್ಬ ಚಿಕ್ಕಪ್ಪ ರಾಮಕೃಷ್ಣ ಭಟ್ ಕಾಶಿಯಲ್ಲಿ ಪ್ರೊಫೆಸರ್ ಆಗಿದ್ದರು‌.ಅವರೆಂದರೆ ನನಗೆ ತುಂಬಾ ಇಷ್ಟ ಹಾಗಾಗಿ ಇವರೆಲ್ಲ ಅವರ ಮನೆಗೆ ಹೋಗುತ್ತಾರೆ ಎಂದು ಭಾವಿಸಿದ್ದೆ.ಹಾಗಾಗಿ ಸಂಧ್ಯನ ಜೊತೆಗೆ ನನಗೂ ಕಾಶಿ ಅಪ್ಪಚ್ಚಿ ಮನೆಗೆ ಹೋಗಬೇಕೆಂದಿತ್ತು.
ಬಹುಶಃ ಇವರೆಲ್ಲ ಬೆಳಗಿನ ಜಾವ ಮನೆ ಬಿಟ್ಟಿರಬಹುದು ಮಂಗಳೂರು ತನಕ ಕಾರು ಅಥವಾ ಜೀಪಿನಲ್ಲಿ ಹೋಗಿ ಅಲ್ಲಿಂದ ರೈಲಿನಲ್ಲಿ ಹೋಗಿದ್ದಿರಬಹುದು.
ಇವರನ್ನು ಕಳಹಿಸಿಕೊಡುವುದಕ್ಕಾಗಿ ಇರಬಹುದು ನನ್ನ ಸೋದರತ್ತೆ ಮುಂಡ್ರಕಜೆ ಅತ್ತೆ ಬಂದಿದ್ದರು.ಇವರೆಲ್ಲ ಹೊರಡುವಾಗ ನಾನು ಅತ್ತು ಕರೆದು ಗಲಾಟೆ ಮಾಡುತ್ತೇನೆಂದು ಇರಬಹುದು, ಅತ್ತೆ ನನ್ನನ್ನು ಮುದ್ದು ಮಾಡಿ ನಾನು ನೀನು ಒಟ್ಟಿಗೆ ಕಾಶಿಗೆ ಹೋಗುವ ಆಯ್ತಾ ಎಂದು ಮುದ್ದು ಮಾಡಿ ಕೈ ಹಿಡಿದು ಗುಡ್ಡ ಹತ್ತಿ ಎಲ್ಲಿಗೋ ಕರೆದುಕೊಂಡು ಹೋದರು.ಅಲ್ಲಿ ನಾಯಿ ಬೆಕ್ಕುಗಳ ಕಥೆ ಹೇಳಿದರು.ಇಲ್ಲಿ ನನ್ನ ಅತ್ತೆ ಬಗ್ಗೆ ಒಂದೆರಡು ಮಾತು ಬರೆಯಲೇ ಬೇಕು.ನನ್ನತ್ತೆ ಹೆಚ್ಚೇನೂ ಓದಿದವರಲ್ಲ..ಆದರೆ ಹಳ್ಳಿ ಮದ್ದುಗಳ ಕುರಿತು ಅಪಾರ ಜ್ಣಾನವಿದೆ.ಅವರ ಮನೆಗೆ ಬಂದು ಅನೆಕರು ಔಷಧಿ ತಗೊಂಡು ಹೋಗಿ ಗುಣಮುಖರಾಗುತ್ತಿದ್ದರು.ಬಂದವರಿಗೆಲ್ಲ ಉಚಿತವಾಗಿ ಔಷಧ ಕೊಡುತ್ತಿದ್ದದಲ್ಲದೆ ಊಟ ತಿಂಡಿಯನ್ನು ಕೂಡ ಬಡಿಸುತ್ತಿದ್ದರು.ಆ ಬಗ್ಗೆ ಅವರಿಗೆ ಒಂದಿನಿತು ಬೇಸರವಿರಲಿಲ್ಲ.ಅವರಿಗೆ ಅನೇಕ ಕಥೆಗಳು ಗೊತ್ತಿದ್ದವು. ಹೆಣ್ಣು ನಾಯಿ ಎರಡು ಮನುಷ್ಯ ಶಿಶುಗಳನ್ನು ಮರಿ ಹಾಕುವುದು ,ಅವರು ದೊಡ್ಡವರಾದ ಮೇಲೆ ದೊಡ್ಡವಳು ತಾಯಿ ನಾಯಿ ಬಾಗಿಲಿಗೆ ಬಂದಾಗ ಕಲ್ಲು ಬಿಸಾಡಿ ಓಡಿಸುವುದು,ಚಿಕ್ಕವಳು ಆದರದಿಂದ ನೋಡಿಕೊಳ್ಳುವುದು ಅವಳಿಗೆ ತಾಯಿ ನಾಯಿ ನಿಧಿಯನ್ನು ತೋರಿಸುವುದು..ಇತ್ಯಾದಿ ಅನೇಕ ಜಾನಪದ ಕಥೆಗಳ ಭಂಡಾರವೇ ಅತ್ತೆಯ ಬಾತಿಯೊಳಗೆ ಅಡಗಿತ್ತು.
ಹೀಗೆ ಅತ್ತೆ ಕಥೆ ಹೇಳುತ್ತಾ ನನ್ನನ್ನು ಮಂಗಡಿಸಿ( ಸಮಾಧಾನ ) ಮಾಡಿ ಮನೆಗೆ ಹಿಂದಿರುಗುವಷ್ಟರಲ್ಲಿ ಮನೆ ಇಡೀ ಖಾಲಿ ಆಗಿತ್ತು.ಎಲ್ಲರೂ ಕಾಶಿಗೆ ಹೋಗಿ ಆಗಿತ್ತು.ನಾನು ಮಂಗ ಆದ್ದು ಗೊತ್ತಾಗಿ ಮತ್ತೆ ಅತ್ತು ಗೋಳಾಡಿದೆ.ಆಗ ಅಮ್ಮ ನಾವು ಕೂಡ ಮುಂದೆ ಕಾಶಿಗೆ ಹೋಗುವ ಎಂದು ಸಮಾಧಾನ ಮಾಡಿದರು.
ಅವರೆಲ್ಲ ಕಾಶಿಗೆ ಹೋಗಿ ಬಂದರು..ಅಮ್ಮನಿಗೊಂದು ಪಟ್ಟೆ ಸೀರೆ ತಂದಿದ್ದರು..ನನಗೂ ಏನಾದರೂ ಹೊಸ ಅಂಗಿ ತಂದಿರಬಹುದೇ ಎಂದು ಆಸೆ ಗಣ್ಣಿನಿಂದ ತಂದ ವಸ್ತುಗಳನ್ನು ನೊಡುತ್ತಾ ಕಾಯುತ್ತಿದ್ದೆ..ಕಾದದ್ದೇ ಬಂತು ಅಷ್ಟೇ !
ಕಾಲ ಒಂದೇ ತರಹ ಇರುವುದಿಲ್ಲ..1996 ,ರಲ್ಲಿ ನಾನು ಕಾಶಿ ಹರಿದ್ವಾರ ಹೃಶೀಕೇಶ ಮೊದಲಾದೆಡೆ ಹೋಗಿ ಬಂದೆ ಆಗಲೂ ನನಗೆ ನನ್ನನ್ನು ಬಿಟ್ಟು ಹೊದ ನೆನಪು ಕಾಡಿತ್ತು.
ತಂದೆ ಇರುವಾಗಲೇ ನಮಗೆಲ್ಲ ಕಾಶಿಗೆ ಹೋಗಿ ಬರಬೇಕೆಂದು ಇತ್ತು‌..ಆದರೆ ಯಾಕೋ ಕಾಲ ಕೂಡಿ ಬರಲಿಲ್ಲ.. ತಂದೆಯವರು ಅನಿರೀಕ್ಷಿತವಾಗಿ ಸಡನ್ ಆಗಿ ತೀರಿ ಹೋದರು‌.ಆಗ ಅವರ ಅಸ್ಥಿಯನ್ನು ಗಂಗೆಯಲ್ಲಿ ಹಾಕುವ ಸಲುವಾಗಿ ಶುದ್ಧೀಕರಿಸಿ ಎತ್ತಿಟ್ಟಿದ್ದೆವು.
ನಿನ್ನೆ ತಂದೆಯವರ ಏಳನೇ ವರ್ಷದ ತಿಥಿ ಇದನ್ನು ಪ್ರಯೋಗದಲ್ಲಿ ಮಾಡಿದರು.( ನನಗೆ ಇವರೊಂದಿಗೆ ಕಾಶಿಗೆ ಹೋಗಲಾಗಲಿಲ್ಲ)
ಈ ಬಾರಿ ಕಾಶಿಗೆ ಹೊರಡುವಾಗ ಅಮ್ಮ ಬಹಳ ಭಾವುಕರಾಗಿದ್ದರು.ಹಿಂದೆ ತಾನನುಭವಿಸಿದ ಅವಮಾನ ತಿರಸ್ಕಾರಗಳು ಮಾಡಿರಬಹುದು ಜೊತೆಗೆ ಅಪ್ಪನ ನೆನಪೂ ಆಗಿರಬಹುದು.
ಮೊದಲೊಂದು ಕಾಲವಿತ್ತು‌ಜನರು ನಡೆದು ಕೊಂಡು ಕಾಶಿಗೆ ಹೋಗುತ್ತಿದ್ದರು‌
ನನ್ನ  ಅಜ್ಜಿ ಚಿಕ್ಕಪ್ಪ ನವರೆಲ್ಲ  ರೈಲಿನಲ್ಲಿ ಕಾಶಿಗೆ ಹೋಗಿದ್ದರೆ ಇಂದು ಅಮ್ಮ ವಿಮಾನದಲ್ಲಿ ಹೋಗಿದ್ದಾರೆ.
ಕಾಲ ಎಲ್ಲರ ಕಾಲನ್ನೂ ಎಳೆಯುತ್ತದೆ ,ಯಾರನ್ನೂ ಬಿಡುವುದಿಲ್ಲ..ಕಾಲದ ಚಕ್ರ ಮೇಲೆ ಕೆಳಗೆ ಹೋಗುತ್ತಲೇ ಇರುತ್ತದೆ.ಕಷ್ಟ ಬಂದಾಗ ಕುಗ್ಗದೆ ಸಿರಿ ಬಂದಾಗ ಹಿಗ್ಗದೆ ಬಾಳನ್ನು ಹದದಿಂದ ಬಾಳುವುದು ಮನುಷ್ಯ ಧರ್ಮ.ನನ್ನಮ್ಮ ಕಾಶಿಗೆ ಹೋಗುವ ಮುನ್ನ ಎರಡು ಸಾವಿರ ರುಪಾಯಿ ನನ್ನ ಕೈಗಿತ್ತು ಮೊನ್ನೆಯಷ್ಟೇ ಆಕ್ಸಿಡೆಂಟ್ ಆಗಿ ಆಸ್ಪತ್ರೆಯಲ್ಲಿ ಇರುವ ಮನೆ ಕೆಲಸದ ಅಜ್ಜಿಗೆ ಕೊಡು ಎಂದು ಹೇಳಿ ಕೊಟ್ಟರು.
ಮಾನವೀಯತೆಗಿಂತ ದೊಡ್ಡ ಧರ್ಮ ಬೇರೆ ಇಲ್ಲ ..ಕಾಶಿಗೆ ಹೋದದ್ದಕ್ಕಿಂತ ಸಾವಿರ ಪಟ್ಟು ಪುಣ್ಯ ಸಂಚಯವನ್ನು ಅಮ್ಮ ಇಲ್ಲಿಯೇ ಗಳಿಸಿ ಹೋದರು.ಸದಾ ಕಷ್ದಲ್ಲಿರುವವರಿಗಾಗಿ ಮರುಗುವ ತನ್ನ ಕೈಲಾದ ಸಹಾಯ ಮಾಡುವ ಅಮ್ಮನಿಗೆ ಕಾಶಿಗೆ ಹೋಗಿ ಆಗಬೇಕಾದ್ದು ಏನೂ ಇಲ್ಲ..ಅಮ್ಮನೇ ಒಂದು ಕಾಶಿ ..ಅದೇನೇ ಇರಲಿ  ಅಲ್ಲಿವಿಶ್ವನಾಥನ ದರ್ಶನದಿಂದ ಬದುಕು ಸಾರ್ಥಕವಾಗಲಿ ಎಂದು ಆಶಿಸುವೆ

No comments:

Post a Comment