Tuesday, 27 August 2019

ನನ್ನೊಳಗೂ ಒಂದು ಆತ್ಮವಿದೆ..ಮೊದಲಬಾರಿಗೆ ಸಿಡಿದೆದ್ದ ಸ್ವಾಭಿಮಾನ© ಡಾ.ಲಕ್ಷ್ಮೀ ಜಿ ಪ್ರಸಾದ


ಮೊದಲ ಬಾರಿಗೆ ಸಿಡಿದೆದ್ದ ಸ್ವಾಭಿಮಾನ
ನನಗೊತ್ತು.. ಇದನ್ನು ಬರೆದರೆ ಅದು ಅವರದೇ ಸಂಗತಿ ಎಂದು ಅವರಿಗೆ ಗೊತ್ತಾಗುತ್ತದೆ ಅಂತ..ಅವರಿಗೆ ಬೇಸರವಾಗಬಹುದೋ ನನ್ನ ಬಗ್ಗೆ ಕೋಪ ಉಕ್ಕಿ ಬಂದೀತೋ ಗೊತ್ತಿಲ್ಲ.. ಅದೇನೇ ಇದ್ದರೂ ಅವರ ತೇಜೋವಧೆ ಮಾಡುವುದು ನನ್ನ ಉದ್ದೇಶವಲ್ಲ.. ಹಾಗಾಗಿ ಅವರ ಹೆಸರನ್ನು ಮತ್ತು ನನಗೆ ಮತ್ತು ಅವರಿಗಿರುವ ಹತ್ತಿರದ ಸಂಬಂಧವನ್ನು ಇಲ್ಲಿ ಮುಚ್ಚಿಡುತ್ತೇನೆ‌.ಹಾಗೆಂದು ಈ ವಿಚಾರವನ್ನೇ ಮುಚ್ಚಿಟ್ಟರೆ ಆತ್ಮ ಸಾಕ್ಷಿಯಾಗಿ ಬರೆಯುವ ಆತ್ಮಕಥೆಗೆ ಅರ್ಥ ಇಲ್ಲ
ಸಣ್ಣ ಮಕ್ಕಳಿಗೂ ಭಾವನೆಗಳಿರುತ್ತವೆ..ಅವರಿಗೂ ಸ್ವಾಭಿಮಾನ ಇರುತ್ತದೆ..ಅವರವರ ಭಾವನೆಗಳನ್ನು ಹಿರಿಯರು ಕೂಡ ಗೌರವಿಸಬೇಕು.ಮಕ್ಕಳಲ್ಲಿ ಬೇಧ ಮಾಡಬಾರದು..ಮಾಡಿದರೆ ಅದೆಂದೂ ಮಕ್ಕಳ ಮನಸಿನಿಂದ ಅಳಿಸಿ ಹೋಗುವುದಿಲ್ಲ..ಇದಕ್ಕೆ ನಾನೇ ಸಾಕ್ಷಿ
ಅದ್ಯಾಕೋ ಏನೋ ಗೊತ್ತಿಲ್ಲಪ್ಪ..ನಾನು ಚಿಕ್ಕಂದಿನಿಂದಲೇ ತಾರತಮ್ಯದ ಬಿಸಿಯನ್ನು ಅನುಭವಿಸುತ್ತಲೇ ಬೆಳೆದು ಬಂದೆ.ನಾನು ಚಿಕ್ಕವಳಿದ್ದಾಗ ನಮ್ಮದು ಕೂಡು ಕುಟುಂಬ. ಅಜ್ಜಿ ,ನಮ್ಮ ತಂದೆ,ತಾಯಿ ನಾವು ನಾಲ್ಕು ಜನ ಮಕ್ಕಳು ( ಕೊನೆಯ ತಮ್ಮ ಆಸ್ತಿ ಪಾಲಾದ ನಂತರನಮ್ಮ  ಹೊಸ ಮನೆಯಲ್ಲಿಯೇ ಬೆಳೆದವನು),ದೊಡ್ಡ ಚಿಕ್ಕಪ್ಪ,ಚಿಕ್ಕಮ್ಮ ಅವರ ಮಗಳು ಸಂಧ್ಯಾ ಸಣ್ಣ ಚಿಕ್ಕಪ್ಪ ಒಟ್ಟಿಗೆ ಇದ್ದೆವು.ದೊಡ್ಡ ಚಿಕ್ಕಪ್ಪನವರಿಗೆ ಒಬ್ಬಳೇ ಮಗಳು ಸಂಧ್ಯಾ. ನನಗಿಂತ ಐದಾರು ತಿಂಗಳು ದೊಡ್ಡವಳು. ನನಗ್ಯಾಕೋ ಮನೆ ಮಂದಿ ಎಲ್ಲ ಅವಳನ್ನೇ ಮುದ್ದು ಮಾಡುತ್ತಿದ್ದರು ಎಂದು ನನಗೆ ಅನಿಸುತ್ತಾ ಇತ್ತು.
ನನಗೆ ಐದು ವರ್ಷ ಆಗುವಾಗ
ನಮ್ಮ ಮನೆಯಲ್ಲಿ ಆಸ್ತಿ ಪಾಲಾಗಿ ನಮ್ಮ ತಂದೆ ಮಣ್ಣಿನ ಮನೆಯೊಂದನ್ನು ಕಟ್ಟಿ ಬೇರೆ ಬಿಡಾರ ಹೂಡಿದ್ದೆವು
ನಮ್ಮ ಹತ್ತಿರದ ಸಂಬಂಧಿ ದೊಡ್ಡ ವಿದ್ವಾಂಸರು ಆಗಿದ್ದರು. ಅವರೆಂದರೆ ನನಗೆ ಜೀವ ಆಗಿತ್ತು.ನನ್ನ ತಂದೆಯವರಿಗೂ ತುಂಬಾ ಪ್ರೀತಿ‌ಅವರ ಹೆಸರು ಹೇಳಿದರೆ ಮತ್ತೆ ನಮ್ಮ ತಂದೆಯವರಿಗೆ ಬಾಯಾರಿಕೆಗೆ ನೀರು ಬೇಡ. ಅಷ್ಟು ಅಭಿಮಾನ ಅವರ ಬಗ್ಗೆ. ಹಾಗಾಗಿಯೋ ಏನೋ ನಮಗೂ ಅವರ ಬಗ್ಗೆ ತುಂಬಾ ಪ್ರೀತಿ. ಅವರು ಯಾವಾಗ ಊರಿಗೆ ಬರುತ್ತಾರೆ ಎಂಬುದನ್ನು ಜಾತಕ ಪಕ್ಷಿಯಂತೆ ಕಾಯುತ್ತಾ ಇದ್ದೆವು.ಬರುವಾಗ ಏನಾದರೂ ತಿಂಡಿ ತರುತ್ತಿದ್ದರೋ ಏನೋ ನನಗೆ ಈಗ ನೆನಪಾಗುತ್ತಿಲ್ಲ..
ಒಂದು ಬಾರಿ ಬಂದಾಗ ನನಗೆ ಒಂದು ಉಣ್ಣೆಯ ಫ್ರಾಕ್ ತಂದು ಕೊಟ್ಟಿದ್ದರು‌.ಅಕ್ಕನಿಗೆ ಒಂದು ಉಣ್ಣೆಯ ರವಕೆ ,ಅಣ್ಣನಿಗೆ ಒಂದು ಸ್ವೆಟರ್ ತಂದಿದ್ದರು. ತಮ್ಮಂದಿರು ತೀರಾ ಚಿಕ್ಕವರು ಹಾಗಾಗಿ ಏನೂ ತಂದಿರಲಿಲ್ಲ.ಅವರು ಕೊಟ್ಟ ಉಣ್ಣೆಯ ಹಳದಿ ಬಣ್ಣದ ಕೆಂಪು ಅಂಚಿನ ಉದ್ದ ಕೈ ಯ ಫ್ರಾಕ್ ತುಂಬಾ ಚಂದ ಇತ್ತು‌‌.ಬಡವರಾಗಿದ್ದ ನಮಗೆ ಹೊಸ ಅಂಗಿ ತೆಗೆಯುತ್ತಿದ್ದುದು ಕೋಳ್ಯೂರು  ಜಾತ್ರೆಗೆ ಮಾತ್ರ.ಇನ್ನೂ ಬೆಲೆ ಬಾಳುವ ಉಣ್ಣೆಯ ಅಂಗಿಯನ್ನು ನಾವು ಕಂಡೇ ಇರಲಿಲ್ಲ. ಹಾಗಾಗಿ ನನಗೆ ಬಹಳ ಸಂತಸವಾಗಿತ್ತು.....ಅವರು ತಂದು ಕೊಟ್ಟ ಅಂಗಿ ಎಂದು ಬಹಳ ಹೆಮ್ಮೆಯಿಂದ ಹಾಕಿ ತಿರುಗಾಡಿದ್ದೆ.
ಆ ಸಮಯದಲ್ಲಿ ನಮಗೆ ಮತ್ತು ದೊಡ್ಡ ಚಿಕ್ಕಪ್ಪನವರಿಗೆ ಯಾವುದೋ ವಿಷಯಕ್ಕೆ ವಿವಾದ ಆಗಿ ಹೋಗಿ ಬರುವುದು ಇರಲಿಲ್ಲ. ಇದಾಗಿ ಎರಡು ವರ್ಷಗಳ ನಂತರ ನಮಗೆ ರಾಜಿಯಾಯಿತು.ಎರಡೂ ಮನೆಗಳ ಮಂದಿ ಹೋಗಿ ಬರುತ್ತಿದ್ದೆವು.
ಇಂತಹ ಒಂದು ದಿನ ನಾನು ಆ ಉಣ್ಣೆಯ ಫ್ರಾಕ್ ಅನ್ನು ಧರಿಸಿದ್ದೆ‌.ಅದನ್ನು ನೋಡಿದ ನನ್ನ ಚಿಕ್ಕಪ್ಪನ ಮಗಳು ಸಂಧ್ಯಾ " ಇದು ..ಅವರು ನನಗೆ ತಂದು ಕೊಟ್ಟ ಅಂಗಿ,ಆದರೆ ನನ್ನ ತಂದೆ ಅದನ್ನು ಬೇಡ ಎಂದು ಹೇಳಿ ಹಿಂದೆ ಕೊಟ್ಟರು.( ಆ ಸಮಯದಲ್ಲಿ  ಸಂಧ್ಯಾಳ ತಂದೆ( ನನ್ನದೊಡ್ಡ ಚಿಕ್ಕಪ್ಪ) ಮತ್ತು ಅವರ ನಡುವೆ ಏನೋ ವೈಮನಸ್ಸು ಇತ್ತು )ಅದನ್ನು ನಾವು ಬೇಡ ಎಂದು ಹಿಂದೆ ಕೊಟ್ಟ ನಂತರ ನಿನಗೆ ಕೊಟ್ಟಿದ್ದಾರೆ " ಎಂದು ಹೇಳಿದಳು.
ಓಹ್ ಎದೆಗೆ ಬೆಂಕಿ ಬಿದ್ದ ಅನುಭವ...ನಾಚಿಕೆ ಅವಮಾನದಿಂದ ಕುಗ್ಗಿ ಹೋದೆ‌.ಬೇರೆಯವರು ಬೇಡ ಎಂದದ್ದನ್ನು ,ಬಿಸಾಡುವ ಬದಲು ನನಗೆ ಕೊಟ್ಟರೇ ? ಸಂಧ್ಯಾ ಮತ್ತು ನಾನು ಹೆಚ್ಚು ಕಡಿಮೆ ಒಂದೇ ವಯಸ್ಸಿನವರು.ಅವರಿಗೆ ನಾವಿಬ್ಬರೂ ಸಮಾನ ಹತ್ತಿರದ ಸಂಬಂಧಿಗಳು.ಇಬ್ಬರೂ ಅಣ್ಣನ ಮಕ್ಕಳೇ.
ಹಾಗಿರುವಾಗ ಅವಳಿಗೆ ಮಾತ್ರ ಫ್ರಾಕ್ ತಂದರೇ ? ನಾನು ಲೆಕ್ಕಕ್ಕಿಲ್ಲದವಳಾಗಿದ್ದೆನೇ ? ಈ ಪ್ರಶ್ನೆಗೆ ನನಗೆ ಅಂದು ಉತ್ತರ ಸಿಕ್ಕಿರಲಿಲ್ಲ...ಇಂದೂ ಉತ್ತರ ಸಿಕ್ಕಿಲ್ಲ...ಆ ಕ್ಷಣಕ್ಕೆ ನಾನೇಕೆ ಆ ಫ್ರಾಕ್ ಅನ್ನು ತಗೊಂಡೆನೋ ಎಂದು ಪಶ್ಚಾತ್ತಾಪವಾಗಿ ಬಿಕ್ಕಿ ಬಿಕ್ಕಿ ಅತ್ತಿದ್ದೆ‌ .ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿತ್ತು ನನಗೆ ಹಳೆಯ ಅಂಗಿ ಯಲ್ಲಿ ಇರುವುದು ಎಂದಿಗೂ ಅವಮಾನ ಎನಿಸಿರಲಿಲ್ಲ..
ಆದರೆ ನಮ್ಮಿಬ್ಬರ ನಡುವೆ ತಾರತಮ್ಯ ಮಾಡಿ ಚಿಕ್ಕಪ್ಪನ ಮಗಳಿಗೆ ಮಾತ್ರ ಫ್ರಾಕ್ ತಂದದ್ದು ಮಾತ್ರವಲ್ಲದೆ ಅವರು ಬೇಡವೆಂದು ನಿರಾಕರಿಸಿದ್ದನ್ನು ಕೊಟ್ಟದ್ದನ್ನು ನಾನು ಗೊತ್ತಿಲ್ಲದೆ ತೊಟ್ಟೆನಲ್ಲ ಎಂಬುದನ್ನು ಇಂದಿಗೂ ನೆನೆದರೆ ನನ್ನ ಎದೆಯಲ್ಲಿ ಬೆಂಕಿ ಏಳುತ್ತದೆ.
ಅದು ಅವಳು ನಿರಾಕರಿಸಿದ್ದನ್ನು ನನಗೆ ಕೊಟ್ಟದ್ದು ಎಂದು ಗೊತ್ತಿದ್ದರೆ ನಾನು ಖಂಡಿತವಾಗಿಯೂ ತೆಗೆದುಕೊಳ್ಳುತ್ತಿರಲಿಲ್ಲ.ನನ್ನ ತಂದೆ ತಾಯಿ ಗೂ ಈ ವಿಚಾರ ಗೊತ್ತಿರಲಿಲ್ಲ. ಗೊತ್ತಾಗಿದ್ದರೆ ಅವರು ಕೂಡ ಬೇಡ ಎಂದು ನಿರಾಕರಿಸುತ್ತಿದ್ದರು.
ನನಗೆ ಈಗಲೂ ಅರ್ಥವಾಗದ ವಿಚಾರ ಇದು.ನಾನು ಅವಳು ಒಂದೇ ವಯಸ್ಸಿನವರಾದರೂ ನನಗೇಕೆ ಫ್ರಾಕ್ ತರಲಿಲ್ಲ ? ನಾನು ಲೆಕ್ಕಕ್ಕಿಲ್ಲದವಳಾಗಿದ್ದೆನೇ ? ಇನ್ನೂ ನನ್ನ ಮೇಲೆ ಏನಾದರೂ ಕೋಪ ಇತ್ತಾ ಎಂದರೆ ನನಗಿನ್ನೂ ಆಗ ಆರು ವರ್ಷ,ನನ್ನ ‌ಮೇಲೆ ಏನು ದ್ವೇಷ ಇರಲು ಸಾಧ್ಯ ? ಅಥವಾ ನಾನೇನು ಅನ್ಯಾಯ ಮಾಡಿರಲು ಸಾಧ್ಯ ?
ಇದನ್ನು ಗಮನಿಸುವಾಗ ಅವಳನ್ನು ಹೆಚ್ಚು ಮುದ್ದು ಮಾಡುತ್ತಿದ್ದರೆಂದು ನನಗೆ ಅನಿಸುತ್ತಾ ಇದ್ದದ್ದು ಸತ್ಯವಿರಬೇಕೆಂದು ನನಗೆ ಅನಿಸುತ್ತದೆ. ಒಂದು ಸಣ್ಣ ಫ್ರಾಕ್ ತರುವಲ್ಲಿ ತಾರತಮ್ಯ ಮಾಡಿದವರು ಇತರ ವಿಚಾರಗಳಲ್ಲಿ ತಾರತಮ್ಯ ಮಾಡಿದ್ದರೆ ಅದರಲ್ಲಿ ಅಸಹಜವಾದ್ದು ಏನೂ ಇಲ್ಲ.
ಆದರೆ ಈ ತಾರತಮ್ಯ ನನ್ನನ್ನು ಚಿಕ್ಕಂದಿನಿಂದಲೇ ಕಾಡಿದ್ದು ಸತ್ಯ.ಈ ಘಟನೆ ನನ್ನ ಸ್ವಾಭಿಮಾನವನ್ನು ಬಡಿದೆಬ್ಬಿಸಿದ್ದು ಕೂಡ ಅಷ್ಟೇ ಸತ್ಯವಾದ ವಿಚಾರ.ಅಂದೇ ಅಂದುಕೊಂಡಿದ್ದೆ ನಾನು ಓದಿ ಒಳ್ಳೆಯ ಸ್ಥಾನ ಪಡೆದು ಎಲ್ಲರೆದುರು ತಲೆಯೆತ್ತಿ ನಡೆಯಬೇಕು ಎಂದು.
ದೇವರ ದಯೆಯಿಂದ ಇಂದಿಗೆ ಅದು ಸಾಧ್ಯವಾಗಿದೆ ಕೂಡ .ಅದಕ್ಕಾಗಿ ನಾನು ನನಗೆ ವಿದ್ಯೆ ಕೊಡಿಸಿ ಸ್ವಂತ ಕಾಲಮೇಲೆ ನಿಂತು, ಸ್ವಾಭಿಮಾನದಿಂದ ಬದುಕುವಂತೆ ಮಾಡಿದ ನನ್ನ ಹೆತ್ತವರಿಗೆ ನಾನು ಯಾವತ್ತಿಗೂ ಋಣಿಯಾಗಿದ್ದೇನೆ.
ಈ ತಾರತಮ್ಯ ನಾನು ದೊಡ್ಡವಳಾದ ನಂತರ ಇತ್ತೀಚೆಗೆ  ಅವರ ಮಗಳ ಮದುವೆ ಸಮಯದಲ್ಲೂ ಕೂಡ ಅವರಿಂದಲೇ ಮತ್ತೆ  ನಡೆದಿದೆ.ಈಗ ನನಗೆ ಬೇಸರವಿಲ್ಲ ಯಾಕೆಂದರೆ ಕೊಟ್ಟವರ ಕೈ ಯಾವಾಗಲೂ ಮೇಲೆ,ತಗೊಂಡವರ ಕೈ ಯಾವಾಗಲೂ ಕೆಳಗೆ,ನನಗೆ ಏನೂ ಕೊಡದೇ ಇದ್ದರೆ ನನಗೆ ಸಂತಸ ಯಾಕೆಂದರೆ ನನ್ನ ಕೈ ಕೆಳಗಾಗುವುದಿಲ್ಲ ಅಲ್ವಾ ?

No comments:

Post a Comment