Saturday, 6 July 2019

ನನ್ನೊಳಗೂ ಒಂದು ಅತ್ಮವಿದೆ : 12 ಮನೆಯಲ್ಲಿ ರುಬ್ಬುವ ಕಲ್ಲಿದೆಯಾ ?

ಮನೆಯಲ್ಲಿ ರುಬ್ಬುವ ಕಲ್ಲು ಇದೆಯಾ ?
ಪ್ರತಿ ದಿವಸ ಹಿಂದಿನ ತರಗತಿಗಳಲ್ಲಿ ಆದ ಪಾಠಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳುವುದು ನನ್ನ ಅಭ್ಯಾಸ,ಇಂದು ಕೂಡ ನಿನ್ನೆಯ ಆದ ಪಾಠಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಿದೆ.ಕೆಲವರು ಉತ್ತರಿಸಲಿಲ್ಲ.,ಪ್ರಶ್ನೆ ಕೇಳಿದಾಗ ಉತ್ತರಿಸದೆ ಇದ್ದರೆ ಒಂಚೂರು ಗದರಬೇಕಾಗುತ್ತದೆ ಇಲ್ಲವಾದಲ್ಲಿ ‌ಮರುದಿನ ಕೂಡ ಹಾಗೆಯೇ ಪಠ್ಯವನ್ನು ಓದದೆಯೇ ಬರುತ್ತಾರೆ.ಮಕ್ಕಳನ್ನು ಏನಂತ ಜೋರು ಮಾಡುದು ?  ಯಾವಾಗಲೂ ಒಂದೇ ರೀತಿಯಲ್ಲಿ ಗದರಲು ಆಗುತ್ತಾ ? ಇವತ್ತು ಉತ್ತರಿಸದೆ ಇದ್ದವರು ಹುಡುಗಿಯರು.ಅವರಲ್ಲಿ ಮನೆಯಲ್ಲಿ ರುಬ್ಬುವ ಕಲ್ಲಿದೆಯಾ ಕೇಳಿದೆ, ಇಲ್ಲವೆಂದರು ! ಇದೆ  ಎಂದಿದ್ದರೆ  ಹೋಗಿ ರುಬ್ಬಿ ಅದೇ ಒಳ್ಳೆದು ಅದಕ್ಕೆ ಓದಿ ಬರೆದು ಮಾಡಬೇಕಿಲ್ಲ ಎಂದು ಜೋರು ಮಾಡಬಹುದಿತ್ತು..ಇನ್ನೆಂತ ಮಾಡುದು ? ಏನೋ ಒಂದು ಹೇಳಿ ಒಂಚೂರು ಗದರಿದೆ.
ಒಬ್ಬಿಬ್ಬರಿಗೆ  ಒಂಚೂರು ಅವಮಾನ ಎನಿಸಿ ಕಣ್ಣಲ್ಲಿ ಸ್ವಲ್ಪ ನೀರು ಬಂತು..ಅಂತಹವರು ಮರುದಿನ ಚೆನ್ನಾಗಿ ಓದಿಕೊಂಡು ಬರ್ತಾರೆ..ಜೋರು ಮಾಡಿದರೂ ಏನೂ ಆಗದ ಭಂಡತನ ಇರುವವರು ಇರ್ತಾರಲ್ಲ..ಇವರನ್ನು ಓದಿಸುವುದೇ ಕಷ್ಟದ ವಿಚಾರ..ಹಾಗಂತ ಬೈದ ಮಾತ್ರಕ್ಕೆ ಅವಮಾನ ಆದ ಮಾತ್ರಕ್ಕೆ ವಿದ್ಯಾರ್ಥಿಗಳು ಓದಿ ಒಳ್ಳೆಯ ಅಂಕ ಗಳಿಸುತ್ತಾರೆಂದೇನೂ ಇಲ್ಲ..ಅದಕ್ಕೆ ನಾನೇ ಪ್ರತ್ಯಕ್ಷ ಸಾಕ್ಷಿಯಾಗಿರುವುದು ನನಗೆ ನೆನಪಾಯಿತು..
ನಾನಾಗ ದ್ವಿತೀಯ ಪಿಯುಸಿ ಯಲ್ಲಿ ಓದುತ್ತಾ ಇದ್ದೆ‌.ನಮ್ಮಮಂಗಳೂರಿನ  ಸರ್ಕಾರಿ ಪಿಯು ಕಾಲೇಜಿನಲ್ಲಿ ( ಈಗಿನ ಯುನಿವರ್ಸಿಟಿ ಕಾಲೇಜು) ವಿಜ್ಞಾನದ ಉಪನ್ಯಾಸಕರು ಒಂದಿನಿತೂ ಕನ್ನಡದಲ್ಲಿ ಪಾಠ ಮಾಡುತ್ತಿರಲಿಲ್ಲ.. ಸಾಕ್ಷಾತ್ ಲಂಡನ್ ನಿಂದ ಉದುರಿದವರಂತೆ ಒಂದು ಪದ ಕನ್ನಡ ಬಳಸದೆ ಇಂಗ್ಲಿಷ್ ನಲ್ಲಿ ಪಾಠ ಮಾಡುತ್ತಿದ್ದರು. ಆದರೆ ಬೈಗಳು ಮಾತ್ರ ಕನ್ನಡದಲ್ಲಿ ಇರುತ್ತಾ ಇತ್ತು.ಹಾಗಾಗಿ ನನಗೆ ಹೆಬ್ಬಾರರು ಬೈದದ್ದು ನೆನಪಿದೆ..ಅವರೇನು ಪಾಠ ಮಾಡಿದ್ದರು ? ಏನು ಪ್ರಶ್ನೆ ಕೇಳಿದ್ದರು ಎಂದು ಗೊತ್ತಿಲ್ಲ.. ಇಂಗ್ಲಿಷ್ ‌ನಲ್ಲಿ ಪಾಠ ಮಾಡಿದ್ದು ಅರ್ಥ ಆಗಿದ್ದರೆ ತಾನೇ ಅವರೇನು ಕೇಳಿದ್ದರು ಎಂದು ಗೊತ್ತಾಗುವುದು !
ಒಂದು ದಿನ ನಮ್ಮ ಭೌತಶಾಸ್ತ್ರ ಉಪನ್ಯಾಸಕರಾದ ಹೆಬ್ಬಾರರು( ಅವರ ಪೂರ್ತಿ ಹೆಸರು ನೆನಪಾಗುತ್ತಾ ಇಲ್ಲ,ಅವರನ್ನು ಅವರ ಸರ್ ನೇಮ್ ನಲ್ಲಿ  ಹೆಬ್ಬಾರರು ಎಂದೇ ಕರೆಯುತ್ತಿದ್ದರು) ಏನೋ ಪ್ರಶ್ನೆ ಕೇಳಿದರು.ಎಲ್ಲರಂತೆ ನಾನು ಕೂಡ ನನ್ನ ಸರದಿ ಬಂದಾಗ ತಲೆ ತಗ್ಗಿಸಿ ನಿಂತೆ..ಆಗ ಹೆಬ್ಬಾರರು ಮನೆಯಲ್ಲಿ ರುಬ್ಬುವ ಕಲ್ಲಿದೆಯಾ  ಎಂದು  ಕನ್ನಡ ಭಾಷೆಯಲ್ಲಿ ಕೇಳಿದರು. ಇದೆ ಎಂದು ತಲೆಯಾಡಿಸಿದೆ‌..ಹಾಗಾದರೆ ಮನೆಗೆ ಹೋಗಿ ರುಬ್ಬಲು ಕಲಿ ಎಂದರು..ನನಗೆ ಆಗಲೇ ರುಬ್ಬಲು ಬರುತ್ತ ಇತ್ತು..ಹಾಗೆಂದು ನಾನು ಹೇಳಲಿಲ್ಲ.. ನಂತರ ಅವರು ಅವರ ಮಗನ ಬಗ್ಗೆ ಹೇಳಿದರು.ಅವರ ಮಗ ಕೂಡ ಪಿಯುಸಿ ಓದುತ್ತಾ ಇದ್ದ.ಸಂತ ಅಲೋಶಿಯಸ್ ಕಾಲೇಜಿನಲ್ಲಿ ವಿಜ್ಞಾನ ಓದುತ್ತಾ ಇದ್ದ.ಆ ಬಗ್ಗೆ ತಿಳಿಸಿ  ಆ ಕಾಲೇಜಿನ  ಸ್ವರ್ಗ ಸದೃಶ ವಾತಾವರಣ, ಶಿಕ್ಷಣದ ಗುಣಮಟ್ಟದ ಬಗ್ಗೆ ಹೊಗಳಿದರು.
ಆಗ ನಾನು ಸಂತ ಅಲೋಶಿಯಸ್ ಕಾಲೇಜು ಹೇಳಿರಬಹುದು ? ಅಲ್ಲಿಯ ಶಿಕ್ಷಕರು ಹೇಳಿರಬಹುದು ? ಎಂದು ಆಲೋಚಿಸುತ್ತಾ ಇದ್ದೆ.ಆದರೆ ಅಲ್ಲಿಯ ಶಿಕ್ಷಕರ ಬಗ್ಗೆ ನನಗೆ ಊಹಿಸಲು ಸಾಧ್ಯವಾಗುತ್ತಾ ಇರಲಿಲ್ಲ. ನನಗೆ ಕೂಡ ಅಲ್ಲಿ ಪಿಯುಸಿಗೆ ಸೇರಬೇಕೆಂದಿದ್ದರೂ ಸೀಟು ದೊರೆತಿರಲಿಲ್ಲ.ಅವರು ಅಲೋಶಿಯಸ್ ಕಾಲೇಜನ್ನು ಹೊಗಳಿದಾಗ ನನಗೆ  ಸೀಟು ಸಿಗದ ಬಗ್ಗೆ ತುಂಬಾ ಬೇಸರ ಎನಿಸಿತ್ತು. "ಆ ಸ್ವರ್ಗ ಸದೃಶ ಕಾಲೇಜನ್ನು, ಅಲ್ಲಿನ ಶಿಕ್ಷಕರನ್ನು, ಪಾಠ ಮಾಡುವ ವಿಧಾನವನ್ನು ಒಮ್ಮೆಯಾದರೂ ನೋಡಬೇಕು" ಎಂದು ಆಸೆಯಾಗಿತ್ತು.
ಆಗ ಹೆಬ್ಬಾರರು ಬೈದಾಗ ನನಗೆ ಮರ್ಯಾದೆ ಹೋಗಿ ಕಣ್ಣೀರು ಬಂದಿತ್ತು‌.ಚೆನ್ನಾಗಿ ಓದಿ ಒಳ್ಳೆಯ ಅಂಕಗಳನ್ನು ತೆಗೆದು, ಡಿಗ್ರಿ ಆದರೂ ಅಲೋಶಿಯಸ್ ಕಾಲೇಜಿನಲ್ಲಿ ಓದಬೇಕು ಎಂದೆನಿಸಿತ್ತು ಆದರೆ ಅವರು ಹಾಗೂ ಇತರ ಉಪನ್ಯಾಸಕರು ಇಂಗ್ಲಿಷ್ ನಲ್ಲಿ ಮಾಡಿದ ವಿಜ್ಞಾನ ಪಾಠಗಳು ಅರ್ಥವೇ ಆಗಿರದ ಕಾರಣ ಉತ್ತಮ ಅಂಕಗಳನ್ನು ಗಳಿಸಲು ನನಗೆ ಸಾಧ್ಯವಾಗಿರಲಿಲ್ಲ.. ನಮ್ಮ ತರಗತಿಯಲ್ಲಿ 99% ವಿದ್ಯಾರ್ಥಿಗಳು ಕನ್ನಡ ಮಾಧ್ಯಮ ದಲ್ಲಿ ಓದಿದವರೇ ಆಗಿದ್ದರು.ಆದರೂ ಕೂಡ ನಮಗೆ ಒಂದು ಪದ ಕೂಡ ಕನ್ನಡ ದಲ್ಲಿ ವಿವರಿಸದೆ ಇಂಗ್ಲಿಷ್ ನಲ್ಲಿ ಯಾಕೆ ಪಾಠ ಮಾಡುತ್ತಿದ್ದರು ? ಅದರ ಪರಿಣಾಮವಾಗಿ ಹತ್ತು ಶೇಕಡಾದಷ್ಟು ಫಲಿತಾಂಶ ಕೂಡ ಬರುತ್ತಿರಲಿಲ್ಲ.. ನಮ್ಮ ತರಗತಿಯಲ್ಲಿ ದ್ವಿತೀಯ ಪಿಯುಸಿ ಯಲ್ಲಿ ಒಬ್ಬಿಬ್ಬರು ಪಾಸಾಗಿದ್ದರು.ಆದರೂ ಇವರನ್ನು ಹೇಳುವವರು ಕೇಳುವವರು ಯಾರೂ ಇರಲಿಲ್ಲವೇ ? ನನಗಂತೂ ಅರ್ಥವಾಗುತ್ತಿಲ.ಈಗ ನಮ್ಮ ಕಾಲೇಜು ಹಾಗೂ ಇತರ ಸರ್ಕಾರಿ ಕಾಲೇಜುಗಳಲ್ಲಿ ವಿಜ್ಞಾನ ಪಾಠ ಮಾಡುವಾಗ ಕನ್ನಡದಲ್ಲಿ ಕೂಡ ವಿವರಿಸಿ ಅರ್ಥ ಮಾಡಿಸುತ್ತಾರೆ.( ನಮ್ಮ ಕಾಲೇಜಿನ ವಿಜ್ಞಾನ ಉಪನ್ಯಾಸಕರು ಪಾಠ ಮಾಡುವಾಗ ಅವರು ಕನ್ನಡದಲ್ಲಿ ಕೂಡ ವಿವರಿಸುವುದನ್ನು ಕೇಳಿಸಿಕೊಂಡಿದ್ದೇನೆ)
ನಾನೇನೋ ಮುಂದೆ  ಹೇಗೋ ಬಿಎಸ್ಸಿ  ಓದಿದೆ.ನಂತರ ಸಂಸ್ಕೃತ ಎಂಎ ಓದಿ ಮೊದಲ ರ‍‍್ಯಾಂಕ್ ತೆಗೆದೆ.ನಂತರ ನಮ್ಮ ಉಪನ್ಯಾಸಕರಾದ  ಹೆಬ್ಬಾರರ ಮಗ ಓದಿದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕಿಯಾಗಿ ಆಯ್ಕೆಯಾಗಿ ಮೂರು ನಾಲ್ಕು ವರ್ಷ ಕೆಲಸ ಮಾಡಿದೆ.ಹೌದು ಹೆಬ್ಬಾರರು ಹೇಳಿದ್ದು ನಿಜ ಅದು ವಿದ್ಯಾರ್ಥಿಗಳ ಪಾಲಿಗೆ ಸ್ವರ್ಗ ಸದೃಶ ವಾಗಿತ್ತು.ಆದರೆ
ಕಾಲೇಜು ಎಂದರೆ ನಾಲ್ಕು ಗೋಡೆಗಳ ಕಟ್ಟಡ ಮಾತ್ರವಲ್ಲ. ಉತ್ತಮ ಕಾಲೇಜು ಎಂದು ಹೆಸರು ಪಡೆಯಲು ಅಲ್ಲಿ‌ ಉಪನ್ಯಾಸಕರೇ ಕಾರಣ. ಸಂತ ಅಲೋಶಿಯಸ್ ಕಾಲೇಜಿಗೆ ಸೇರಿದ ತನ್ಮ ಮಗನ ಬಗ್ಗೆ ,ಕಾಲೇಜು ಬಗ್ಗೆ ಹೊಗಳಿ, ನಮ್ಮನ್ನು ಹೀಯಾಳಿಸುವ ಬದಲು  ನಮ್ಮ ಸರ್ಕಾರಿ ಕಾಲೇಜನ್ನು ಕೂಡ ಉಪನ್ಯಾಸಕರು ಮನಸ್ಸು ಮಾಡಿದ್ದರೆ ಸಂತ ಅಲೋಶಿಯಸ್ ಕಾಲೇಜಿಗೆ ಸಮನಾಗಿಸಲು ಸಾಧ್ಯವಿತ್ತು. ಬೈದದ್ದು,ರುಬ್ಬಲು ಯೋಗ್ಯ ಎಂದು ಹೀಯಾಳಿಸಿದ್ದು ತಪ್ಪಲ್ಲ.ವಿದ್ಯಾರ್ಥಿಗಳಲ್ಲಿ ಕೆಚ್ಚನ್ನು ಹುಟ್ಟಿಸಲು ಒಂಚೂರು ಅವಮಾನ ಮಾಡುದು ಅನಿವಾರ್ಯ. ಆದರೆ ಹೀಯಾಳಿಸುವುದರ ಜೊತೆಯಲ್ಲಿ ಹತ್ತನೇ ತರಗತಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳು ಇಲ್ಲೇಕೆ ಕಲಿಕೆಯಲ್ಲಿ ಹಿಂದೆ ಬಿದ್ದಿದ್ದಾರೆ ಎಂದು ಕೂಡ ಆಲೋಚಿಸಿ,ನಮಗೆ ಅರ್ಥವಾಗುವಂತೆ ಕನ್ನಡದಲ್ಲಿಯು ವಿವರಿಸಿದ್ದರೆ ನಾವುಗಳು ಕೂಡ ಅವರ ಮಗನಂತೆಯೆ ಉತ್ತಮ ಅಂಕಗಳನ್ನು ಗಳಿಸುತ್ತಿದ್ದೆವು .ನಾನೇನೋ ಮುಂದೆ ನನ್ನ ಕ್ಷೇತ್ರವನ್ನು ಬದಲಿಸಿ,ಇಂಗ್ಲಿಷ್ ನ ಹಂಗಿಲ್ಲದ ಸಂಸ್ಕೃತ ಎಂಎ ಓದಿ ಯಶಸ್ಸು ಗಳಿಸಿದೆ..ಆದರೆ ಎಲ್ಲರೂ ಹಾಗಾಗಲು ಸಾಧ್ಯವೇ ? ದ್ವಿತೀಯ ಪಿಯುಸಿ ಯಲ್ಲಿ ನಮಗೆ ಅಂತಿಮ ಪರೀಕ್ಷೆ ಹೊರತು ಪಡಿಸಿದರೆ ಕಿರು ಪರೀಕ್ಷೆ, ಮಧ್ಯವಾರ್ಷಿಕ ಪರೀಕ್ಷೆ, ಪೂರ್ವ ಸಿದ್ಧತಾ ಪರೀಕ್ಷೆ ಯಾವದೂ ಇರಲಿಲ್ಲ.. ಪ್ರಥಮ ಪಿಯುಸಿಯಲ್ಲಿ ಮಧ್ಯವಾರ್ಷಿಕ ಪರೀಕ್ಷೆ ಮಾಡಿದ್ದರು. ಅದರಲ್ಲಿ ಕೆಮೆಷ್ಟ್ರಿಯಲ್ಲಿ ಒಂದು ಪ್ರಶ್ನೆ ಯ ಅರ್ಥವನ್ನು ಕನ್ನಡದಲ್ಲಿ ತಿಳಿಸಲು ನಾನು ನಮ್ಮ ಕೆಮೆಷ್ಟ್ರಿ ಉಪನ್ಯಾಸಕ ರಾಗಿದ್ದ ಶಿವರಾಮ ಭಟ್ ಅವರಲ್ಲಿ ಕೇಳಿದೆ‌.ಹಾಗೆ ಹೇಳಲು ಆಗುವುದಿಲ್ಲ ಎಂದವರು ನಿರಾಕರಿಸಿದ್ದರು. ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಕನ್ನಡ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಇರುತ್ತವೆ ಹಾಗಿರುವಾಗ ಪ್ರಥಮ ಪಿಯುಸಿಯಲ್ಲಿ ಒಂದು ಪ್ರಶ್ನೆಯ  ಕನ್ನಡ ಅನುವಾದ ತಿಳಿಸಿದ್ದರೆ ಅಪರಾಧವಾಗುತ್ತಿತ್ತೇ ? ಒಟ್ಟಿನಲ್ಲಿ ಹತ್ತನೆಯ ತರಗತಿಯಲ್ಲಿ ಉತ್ತಮ ಅಂಕ ಗಳಿಸಿದ ಬಡ ಮಕ್ಕಳ ಪಾಲಿಗೆ ಇವರುಗಳು ಕಂಟಕರೇ ಆಗಿದ್ದರು ಎಂಬುದು ವಾಸ್ತವ
ಈವತ್ತು ಮಕ್ಕಳನ್ನು ಉತ್ತರ ಹೇಳದ್ದಕ್ಕೆ ಗದರಿದಾಗ ಇದು ನೆನಪಾಯಿತು. ನಾನು ಉತ್ತರ ಹೇಳದ ಮಕ್ಕಳಿಗೆ ಗದರಿದರೂ ಅವರು ಸೋಮಾರಿತನದಿಂದ ಓದದೆ ಬರುವ ಕಾರಣ ಉತ್ತರ ಹೇಳುತ್ತಿಲ್ಲವೋ ಅಥವಾ ನನ್ನ ಪಾಠ ಅರ್ಥವಾಗುತ್ತಿಲ್ಲವೋ ಎಂಬುದನ್ನು ಗಮನಿಸುತ್ತೇನೆ,ಉತ್ತರಿಸದ ಮಕ್ಕಳಿಗೆ ಮತ್ತೊಮ್ಮೆ ಹೇಳಿಕೊಟ್ಟು ಮರುದಿನ ಕಲಿತುಕೊಂಡು ಬರಬೇಕೆಂದು ತಾಕೀತು ಮಾಡುತ್ತೇನೆ..ಆ ಕಾರಣವೋ ಅಥವಾ ಈಗಿನ ಮಕ್ಕಳು ಓದುತ್ತಾರೋ ಗೊತ್ತಿಲ್ಲ ನನ್ನ ವಿಷಯದಲ್ಲಿ ಉತ್ತಮ ಫಲಿತಾಂಶ ಬರುತ್ತಿದೆ ಎಂಬುದು ಮಾತ್ರ ಸತ್ಯ.
ಕೆಲವೊಮ್ಮೆ ನಮಗೆ  ಅರ್ಥವಾಗದ  ಭಾಷೆಯಲ್ಲಿ ಪಾಠ ಮಾಡಿ ಕಡಿಮೆ ಫಲಿತಾಂಶ ಬಂದಾಗ ನಿಮಗೆ ಒಂದು ಕ್ಷಣವಾದರೂ ನಮ್ಮಗಳ ಭವಿಷ್ಯ ಹಾಳಾಗುವ ಬಗ್ಗೆ ಒಂದು ಕ್ಷಣವಾದರೂ ಪಶ್ಚಾತ್ತಾಪ ಕಾಡಿಲ್ಲವೇ ಎಂದು ಕೇಳಬೇಕು ಎನಿಸುತ್ತದೆ. ಈಗ ಅವರುಗಳು ಎಲ್ಲಿದ್ದಾರೂ ತಿಳಿಯದು.
ಕೇಳಿ ಮಾಡುವುದಕ್ಕದರೂ ಏನಿದೆ ಅಂತ ಸುಮ್ಮನಾಗುತ್ತೇನೆ

No comments:

Post a Comment