Thursday, 28 December 2017

ದೊಡ್ಡವರ ದಾರಿ : 29- ನನಗೆ ಸಂಸ್ಕೃತ ಕಲಿಸಿದ ಯಶೋದಾ ಭಗಿನಿ© ಡಾ.ಲಕ್ಷ್ಮೀ ಜಿ ಪ್ರಸಾದ

ದೊಡ್ಡವರ ದಾರಿ : 29- ನನಗೆ ಸಂಸ್ಕೃತ ಕಲಿಸಿದ ಯಶೋದಾ ಭಗಿನಿ© ಡಾ.ಲಕ್ಷ್ಮೀ ಜಿ ಪ್ರಸಾದ

ಸಾವಿರಾರು ಮಂದಿಗೆ ಸಂಸ್ಕೃತ ಕಲಿಸಿದ  ಯಶೋದಾ ಭಗಿನಿ ಸಂಸ್ಕೃತ ಭಾರತಿ? ಯಿಂದ ಸಂಸ್ಕೃತ ಕಲಿಸಲು ನೇಮಿಸಲ್ಪಟ್ಟ ಸಂಸ್ಕೃತ ಶಿಕ್ಷಕಿ.ಮಂಗಳೂರು ಸುತ್ತಮುತ್ತಲಿನ ಪ್ರದೇಶಗಳಿಗೆ ಶಾಲಾ ಕಾಲೇಜುಗಳಿಗೆ ಹೋಗಿ ಹತ್ತು ದಿನದ ಸಂಸ್ಕೃತ ಸಂಭಾಷಣಾ ಶಿಬಿರ ನಡೆಸುವುದು ,ಸಂಸ್ಕೃತ ಪ್ರಚಾರ ಮಾಡುವ ಕೆಲಸ ಅವರದು.ಯಶೋದಾ ಭಗಿನಿಯಂತೆ ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ಪ್ರಶಿಕ್ಷಕರನ್ನು ನೇಮಿಸಿದ್ದರು.ಆದರೆ ಯಶೋದಾ ಭಗಿನಿಯ ಸಂಸ್ಕೃತ ಪ್ರೀತಿ,ಅದನ್ನು ಪ್ರಚುರ ಪಡಿಸಲು ಯತ್ನಿಸಿದ ಪರಿ ಅನನ್ಯವಾದುದು.
ಭಾಷೆಯನ್ನು ಹೇಳಿಕೊಡುವುದೊಂದು ಕೌಶಲ್ಯ. ಇದು ಎಲ್ಲರಿಗೆ ಒಲಿಯುವುದಿಲ್ಲ.ಮತ್ತು ಇದನ್ನು ಯತ್ನ ಪೂರ್ವಕವಾಗಿ ಕಲಿಯಬೇಕಾಗುತ್ತದೆ.ಕಲಿಸುವ ಶಿಕ್ಷಕರಿಗೂ ಆ ಕೌಶಲ್ಯವಿರಬೇಕು.
ನಾನು ಪಿಯುಸಿ ,ಡಿಗ್ರಿಯಲ್ಲಿ ಸಂಸ್ಕೃತ ವನ್ನು ಒಂದು ಭಾಷೆಯಾಗಿ ಕಲಿತಿದ್ದೆ.ಸಂಸ್ಕೃತ ಎಂಎ ಪದವಿಯನ್ನು ಕೂಡ ಮೊದಲ ರ‍್ಯಾಂಕ್ ಮತ್ತು ಸುವರ್ಣ ಪದಕಗಳೊಂದಿಗೆ ಪಡೆದಿದ್ದೆ.ಆದರೂ ಸಂಸ್ಕೃತ ಭಾಷೆಯಲ್ಲಿ ವ್ಯವಹರಿಸಲು,ಮಾತನಾಡಲು ತಿಳಿದಿರಲಿಲ್ಲ. ಯಾಕೆಂದರೆ  ಪಿಯುಸಿ ಮತ್ತು ಪದವಿಯ ಸಂಸ್ಕೃತ ಭಾಷೆಯ ಪರೀಕ್ಷೆ ಯಲ್ಲಿ ಹೆಚ್ಚಿನ ಭಾಗವನ್ನು ಕನ್ನಡದಲ್ಲಿ ಉತ್ತರಿಸಲು ಅವಕಾಶವಿತ್ತು.ಸಂಸ್ಕೃತ ಎಂಎ ಯಲ್ಲಂತೂ ಪೂರ್ತಿಯಾಗಿ ಕನ್ನಡ, ಇಂಗ್ಲಿಷ್ ಭಾಷೆಯಲ್ಲಿ ಬರೆಯಲು ಅವಕಾಶವಿತ್ತು. ಇಲ್ಲೆಲ್ಲೂ ನಮಗೆ ಭಾಷೆಯನ್ನು ಕಲಿಸುವ ಯತ್ನ ನಡೆಯಲೇ ಇಲ್ಲ.ಕೇವಲ ಪಠ್ಯ ಓದಿ ಉತ್ತರಿಸಿದರೆ ಭಾಷೆ ಒಲಿಯುವುದಿಲ್ಲ .ಉದಾಹರಣೆಗೆ ಹೇಳುವುದಾದರೆ ಒಂದನೆಯ ತರಗತಿಯಿಂದಲೇ ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಕಲಿಯುವ  ಹೆಚ್ಚಿನ ಮಕ್ಕಳಿಗೆ ಹತ್ತನೇ ತರಗತಿ ಕಳೆದರೂ,ಪಿಯುಸಿ,ಡಿಗ್ರಿ, ಎಂಎ ಆದರೂ ಇಂಗ್ಲಿಷ್ ಮಾತನಾಡಲು ಬರುವುದಿಲ್ಲ.ಕಾರಣವೇನೆಂದರೆ ಇಲ್ಲೆಲ್ಲೂ ಇಂಗ್ಲಿಷ್ ಮಾತನಾಡಲು ,ವ್ಯವಹರಿಸಲು ಹೇಳಿಕೊಡುವುದಿಲ್ಲ
ಅದೇ ಪರಿಸ್ಥಿತಿ ಸಂಸ್ಕೃತ ಎಂಎ ಓದಿದವರದ್ದು.
ಯಶೋದಾ ಭಗಿನಿ ನನಗೆ ಸಂಸ್ಕೃತದಲ್ಲಿ ಮಾತನಾಡಲು ,ಸಂಭಾಷಣಾ ಶಿಬಿರವನ್ನು ನಡೆಸಲು  ಅತ್ಯಂತ ಪ್ರೀತಿಯಿಂದ ತಾಳ್ಮೆಯಿಂದ  ಹೇಳಿಕೊಡದೆ ಇದ್ದರೆ ನಾನು ಕೂಡ ಹಾಗೆಯೇ ಇರುತ್ತಿದ್ದೆನೋ ಏನೋ.
ನಾವು ಸಂಸ್ಕೃತ ಎಂಎ ಅಂತಿಮ ಪರೀಕ್ಷೆ ಬರೆದ ನಂತರ ಎರಡು ವಾರಗಳ ಕಾಲ ನಮಗೆ ಸಂಸ್ಕೃತ ಭಾರತಿಯಿಂದ ಪ್ರಶಿಕ್ಷಣ ಶಿಬಿರ ನಡೆಸಿದರು.ಇದರ ಸಂಚಾಲಕಿ ಯಶೋದಾ ಭಗಿನಿ ಆಗಿದ್ದರು.ಎರಡು ವಾರಗಳಲ್ಲಿ ನಾವುಗಳು ಸಂಸ್ಕೃತ ಭಾಷೆಯಲ್ಲಿ ವ್ಯವಹರಿಸುವುದನ್ನು ಕಲಿತೆವು .ಇಲ್ಲಿ ಬೇರೆಯವರಿಗೆ ಸಂಸ್ಕೃತ ಸಂಭಾಷಣಾ ಶಿಬಿರ ಮಾಡಿ ಸಂಸ್ಕೃತ ಕಲಿಸುವ ವಿಧಾನವನ್ನು ಹೇಳಿಕೊಟ್ಟರು‌.ಯಶೋದಾ ಭಗಿನಿಯ ಮಾರ್ಗದರ್ಶನದಂತೆ ನಾನು ಕೂಡ ಅನೇಕ ಸಂಸ್ಕೃತ ಸಂಭಾಷಣಾ ಶಿಬಿರಗಳನ್ನು  ಉಚಿತವಾಗಿ ನಡೆಸಿದೆ.ಯಶೋದಾ ಭಗಿನಿ ಮಂಗಳೂರಿನಲ್ಲಿದ್ದ ಎರಡು ಮೂರು ವರ್ಷಗಳಲ್ಲಿ ಸುಮಾರು  ಮುನ್ನೂರು  ಸಂಸ್ಕೃತ ಸಂಭಾಷಣಾ ಶಿಬಿರಗಳನ್ನು ಮಾಡಿ ಸಾವಿರಾರು ಮಂದಿಗೆ ಸಂಸ್ಕೃತ ವನ್ನು ಹೇಳಿಕೊಟ್ಟಿದ್ದರು.ನಿಜಕ್ಕೂ ಅವರು ಸಂಸ್ಕೃತದ ಸೇವೆಯನ್ನು ನಿರ್ವಂಚನೆಯಿಂದ ಮಾಡಿದ್ದರು.
ನಮ್ಮ ಸಂಸ್ಕೃತ ಪ್ರಶಿಕ್ಷಣ ಶಿಬಿರದ ಕೊನೆಯ ಸಮಾರೋಪ ಸಮಾರಂಭದಲ್ಲಿ ಸ್ವಾಗತ,ಧನ್ಯವಾದ,ಕಾರ್ಯಕ್ರಮ ನಿರೂಪಣೆಗಳ ಜವಾಬ್ದಾರಿಯನ್ನು ಪ್ರಶಿಕ್ಷಣಾರ್ಥಿಗಳಾದ ನಮಗೇ ನೀಡಿದ್ದರು.ನಾನು ನಿರೂಪಣೆ ಮಾಡುತ್ತೇನೆ ಎಂದಾಗ ನಮ್ಮಂತೆಯೇ ಪ್ರಶಿಕ್ಷಣಾರ್ಥಿಗಳಾಗಿ ಬಂದಿದ್ದ ನಮ್ಮ ಎಂ ಎ ತರಗತಿ ಉಪನ್ಯಾಸಕರೊಬ್ಬರು ಲಕ್ಷ್ಮೀ ಸ್ವಾಗತ ಮಾಡಲಿ,ನಿರೂಪಣೆ ಗಜಾನನ ಮರಾಠೆ ( ನನ್ನ ಸಹಪಾಠಿ)ಮಾಡಲಿ ಎಂದು ಹೇಳಿದರು‌.ಆಗ ಯಶೋದಾ ಭಗಿನಿ ಯಾಕೆ ಸ್ತ್ರೀಯರು ನಿರೂಪಣೆ ಮಾಡಿದರೆ ಆಗುವುದಿಲ್ಲವಾ ?ಎಂದು ಪ್ರಶ್ನಿಸಿದ್ದರು.
ನಂತರ ನಾನು ಸ್ವಾಗತ ನಿರೂಪಣೆ ಎರಡೂ ಬೇಡವೆಂದು ಹೇಳಿ ,ಪ್ರಶಿಕ್ಷಣ ಶಿಬಿರದ ಕುರಿತಾಗಿ ಅಭಿಪ್ರಾಯ ಮಂಡನೆಯ ಜವಾಬ್ದಾರಿಯನ್ನು ಪಡೆದೆ.
ಆಗಿನ್ನೂ ನನಗೆ ಇಪ್ಪತ್ತ ಮೂರು ವರ್ಷ.ಪ್ರೌಢಿಮೆ ತಾಳ್ಮೆ ಇಲ್ಲದ ವಯಸ್ಸದು‌ಮೊದಲೇ ಸ್ವಲ್ಪ ಕೋಪಿಷ್ಟೆ ನಾನು.ನಿರೂಪಣೆಯನ್ನು ನಾನು ಮಾಡುವುದು ಬೇಡವೆಂದು ಆ ಉಪನ್ಯಾಸಕರು ಹೇಳಿದ್ದು ನನ್ನ ಆತ್ಮಾಭಿಮಾನಕ್ಕೆ ಧಕ್ಕೆ ಆಗಿತ್ತು. ನನ್ನ ಅಭಿಪ್ರಾಯ ಹೇಳುವಾಗ ಇದರ ಛಾಯೆ ಸ್ವಲ್ಪ ಮಾತಿನಲ್ಲಿ ಕಾಣಿಸಿತ್ತು!
ಪೂರ್ಣ ಕುಂಭ ಸದ್ದು ಮಾಡುವುದಿಲ್ಲ .ಅಪೂರ್ಣಕುಂಭಗಳು  ಸದ್ದು ಮಾಡುತ್ತವೆ ಎಂದು ಹೇಳಿ ನನ್ನ ಕೋಪವನ್ನು ಹೊರ ಹಾಕಿದ್ದೆ. ಈ ಕಾರ್ಯಕ್ರಮದ ನಂತರ ಈ ಬಗ್ಗೆ ಪ್ರಸ್ತಾಪಿಸಿದ ಯಶೋದಾ ಭಗಿನಿ ಲಕ್ಷ್ಮೀ ನಿಮಗೆ ಅವಮಾನವಾಗಿದ್ದರೆ ಅದಕ್ಕೆ ಮಾತಿನಲ್ಲಿ ಉತ್ತರಕೊಡಬಾರದು.ಕೃತಿಯ ಮೂಲಕ ಉತ್ತರ ಕೊಡಬೇಕು, ನಿಮ್ಮಲ್ಲಿ ಅಪಾರ ಉತ್ಸಾಹವಿದೆ,ಸಾಮರ್ಥ್ಯವಿದೆ.ಇದನ್ನು ಬಳಸಿಕೊಂಡು ಬದುಕಿನಲ್ಲಿ ಯಶಸ್ಸು ಪಡೆಯಬೇಕು.ಸ್ತ್ರೀ ಯರು ಇಂತಹ ನೂರಾರು ಅವಮಾನಗಳನ್ನು ಎದುರಿಸುವುದು ಅನಿವಾರ್ಯ, ಯಾಕೆಂದರೆ ನಮ್ಮದು  ಪುರುಷ ಪ್ರಧಾನ ಸಮಾಜ,ಇಲ್ಲಿ ಮಹಿಳೆಯರಿಗೆ ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಕೂಡ ಹೋರಾಡಬೇಕಾಗುತ್ತದೆ.ಧೈರ್ಯದಿಂದ ಮುಂದಡಿ ಇಡಿ,ನಿಮ್ಮ ಒಳ್ಳೆಯ ಕಾರ್ಯಕ್ಕೆ ದೇವರ ಬೆಮಬಲ ಇರುತ್ತದೆ.ಎಲ್ಲೆಡೆ ಸಂಸ್ಕೃತ ಸಂಭಾಷಣಾ ಶಿಬಿರಗಳನ್ನು ಮಾಡಿ ,ಸಂಸ್ಕೃತ ಭಾಷೆ ನಿಮ್ಮ ಕೈ ಹಿಡಿಯುತ್ತದೆ,ಸ್ಥಾನಕ್ಕೆ ಚ್ಯುತಿ ಬರಬಹುದು ಆದರೆ ಜ್ಞಾನಕ್ಕೆ ಎಂದೂ ಚ್ಯುತಿ ಬರಬಾರದು  ಎಂದು ತಿಳುವಳಿಕೆಯನ್ನು ನೀಡಿದ್ದರು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಂಸ್ಕೃತ ಭಾರತಿಯ ಮೀಟಿಂಗ್ ಒಂದರಲ್ಲಿ ಅದರ ನಿರ್ದೇಶಕರೊಬ್ಬರು " ಅವರು ಉಪನ್ಯಾಸಕರು, ಅವಳು ಯಃಕಶ್ಚಿತ್ ಲಕ್ಷ್ಮೀ, ನೀನು ಲಕ್ಷ್ಮೀ ಪರವಾಗಿ ನಿಂತದ್ದು ಸರಿಯಲ್ಲ ಎಂದು ಹೇಳಿದರಂತೆ.ಇದು ತಿಳಿದಾಗ ಯಶೋದಾ ಭಗಿನಿ ನನ್ನಿಂದಾಗಿ ಅವರ ಮೇಲಧಿಕಾರಿಗಳಿಂದ ಹೇಳಿಸಿಕೊಳ್ಳುವ ಹಾಗಾಯ್ತಲ್ಲಾ ಎಂದು ತುಂಬಾ ಬೇಸರವಾಗಿತ್ತು ನನಗೆ.ಅದರೆ ಯಶೋದಾ ಭಗಿನಿ ನನಗೆ ಈ ಬಗ್ಗೆ ಬೇಸರವಿಲ್ಲ ಯಾಕೆಂದರೆ ನಾನು ನ್ಯಾಯದ ಪರ ನಿಂತಿರುವೆ.ಆದರೂ ರ‍್ಯಾಂಕ್ ತೆಗೆಯುವ ಸಂಭವನೀಯ ವಿದ್ಯಾರ್ಥಿನಿ ನಿಮ್ಮ ಬಗ್ಗೆ ಯಃಕಶ್ಚಿತ್ ಲಕ್ಷ್ಮೀ ಎಂದು ಹೇಳಿ ನಿಮಗೆ ಹಿಂದಿನಿಂದ ಅವಹೇಳನ ಮಾಡಿದ್ದು ನನಗೆ ತುಂಬಾ ಬೇಸರವಾಗಿದೆ.ಲಕ್ಷ್ಮೀ ನೀವು ಪ್ರತಿಭಾವಂತರು. ನನ್ನಂತಾಗಬೇಡಿ.ಸ್ವ ಸಾಮರ್ಥ್ಯದಿಂದ,ಪ್ರಯತ್ನದಿಂದ ಮೇಲೆ ಬನ್ನಿ, ಇಂದು ನಿಮ್ಮನ್ನು ಯಃಕಶ್ಚಿತ್ ಅಂದವರೇ ಭೇಷ್ ಎಂದು ಮೆಚ್ಚುವಂತೆ ಸಾಧನೆ ಮಾಡಿ ತೋರಿಸಬೇಕು ಎಂದು ನನ್ನನ್ನು ಸಾಧನೆಯ ಹಾದಿಯತ್ತ ಹುರಿದುಂಬಿಸಿದ್ದರು‌.
ನಂತರ ಇದೇ ಪ್ತಕರಣದ ಕಾರಣ ಅವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿದರಂತೆ.ನಂತರ ಅವರು ಅದನ್ನು ಬಿಟ್ಟು ಯೋಗ್ಯ ವರನನ್ನು ಮದುವೆಯಾಗಿ ಇಬ್ಬರು ಅವಳಿ ಮಕ್ಕಳ ತಾಯಿಯಾಗಿ ಸಂತಸದ ಬದುಕನ್ನು ನಡೆಸುತ್ತಿದ್ದಾರೆ ಎಂದು ಯಾರೋ ಹೇಳಿದರು.ಅವರ ಪತಿ ವಿಧಾನ ಸೌಧದಲ್ಲಿ ಉದ್ಯೋಗಿಯಂತೆ.ಆದರೆ ಅವರನ್ನು ಈ ಇಪ್ಪತ್ತು ವರ್ಷಗಳಿಂದ ನನಗೆ ಭೇಟಿಯಾಗಲು ಅಗಿಲ್ಲ,ಅವರೆಲ್ಲಿದ್ದಾರೆ ಎಂದು ತಿಳಿದಿಲ್ಲ ನನಗೆ.
ಅವರಂದಂತೆ ನನ್ನನ್ನು ತುಂಬಿದ ಸಭೆಯಲ್ಲಿ ಯಃಕಶ್ಚಿತ್ ಎಂದು ಹೀಯಾಳಿಸಿದವರ ಬಾಯಿಂದಲೇ ಮೆಚ್ಚುಗೆಯ ಮಾತುಗಳನ್ನು ಪಡೆದಿದ್ದೇನೆ.
ಅವರನ್ನು ಭೇಡಿಯಸಗಬೇಕೆಂಬ ಆಸೆ ಇದೆ ಆದರೆ ಅವರು ಎಲ್ಲಿದ್ದಾರೆ ಎಂದು ತಿಳಿಯದಾಗಿದೆ.
ನಾಡಿದ್ದು ಶನಿವಾರ ಭಾಸ ಮಹಾಕವಿಯ ಪ್ರತಿಜ್ಞಾ ಯೌಗಂಧರಾಯಣಂ ಎಂಬ ಸಂಸ್ಕೃತ ನಾಟಕದ ಬಗ್ಗೆ ಉಪನ್ಯಾಸ ಕೊಡಲು ದಾಕ್ಷಾಯಿಣಿ ಭಟ್ ಅವರು ಕೇಳಿದ್ದಾರೆ.
‌ನಾನು 1997-2003 ತನಕ ಸಂಸ್ಕೃತ ಉಪನ್ಯಾಸಕಿಯಾಗಿ ಕೆಲಸ ಮಾಡಿದ್ದೆ.ನಂತರ  ಕಳೆದ ಹದಿನಾಲ್ಕು ವರ್ಷಗಳಿಂದ ನಾನು ಕನ್ನಡ ಉಪನ್ಯಾಸಕಿ ಯಾಗಿ ಕೆಲಸ ಮಾಡುತ್ತಿದ್ದೇನೆ,ಹಾಗಾಗಿ ಸಂಸ್ಕೃತ ದ ಸಂಸರ್ಗವೇ ತಪ್ಪಿ ಹೋಗಿದೆ. ನನಗೆ ಸಂಸ್ಕೃತ ಭಾಷೆ ಮರೆತು ಹೋಗಿರಬಹುದೇನೋ ಎಂಬ ಸಂಶಯ ಕಾಡಿತ್ತು.ಆದರೆ ಭಾಸನ ಪ್ರತಿಜ್ಞಾ ಯೌಗಂಧರಾಯಣಂ ಓದುತ್ತಿದ್ದಂತೆ ನನಗೆ ಸಂಸ್ಕೃತ ಮರೆತು ಹೋಗಿಲ್ಲ ಎಂದು ಸ್ಪಷ್ಟವಾಯಿತು. ಬಹುಶಃ ಸಂಸ್ಕೃತ ಇಷ್ಟು ಗಟ್ಟಿಯಾಗಿ ನನ್ನಲ್ಲಿ ಉಳಿಯಲು ಯಶೋದಾ ಭಗಿನಿಯೆ ಕಾರಣವೆನಿಸಿ ಅವರ ನೆನಪಾಯಿತು.ಅವರನ್ನು ಎಂದಿಗೂ ಮರೆಯಲಾಗದು ನನಗೆ.

No comments:

Post a Comment