Saturday, 25 August 2018

ಬದುಕ ಬಂಡಿಯಲಿ‌23 :ನನ್ನ ‌ಮೊದಲ ಉಪನ್ಯಾಸ ಡಾ.ಲಕ್ಷ್ಮೀ ಜಿ ಪ್ರಸಾದ ‌


ನನ್ನ ‌ಮೊದಲ‌ ಉಪನ್ಯಾಸ ..
ನಾನು ಸುಮಾರು ಇನ್ನೂರೈವತ್ತು   ಇನ್ನೂರೆಂಬತ್ತು ಉಪನ್ಯಾಸಗಳನ್ನು ಬೇರೆ ಬೇರೆ ವಿಷಯಗಳ ಬಗ್ಗೆ  ನೀಡಿದ್ದೇನೆ‌.
ನನ್ನ ಮೊದಲ ಉಪನ್ಯಾಸ ರಕ್ಷಾ ಬಂಧನ ದ ಕುರಿತು  ಕಲ್ಲಡ್ಕ ಶಾಲೆಯಲ್ಲಿ ಆಗಿತ್ತು .ಆಗ ಕೊಲ್ಲುವ ದೇವರಿಗಿಂತ ಕಾಯುವ ದೇವರು ದೊಡ್ಡವನು ಎಂಬ ಬಗ್ಗೆ ,ರಕ್ಷಾ ಬಂಧನದ ಮಹತ್ವದ ಬಗ್ಗೆ ಮಾತನಾಡಿದ್ದೆ‌.

ಸುಮಾರು ಇಪ್ಪತ್ತು ವರ್ಷಗಳ ಹಿಂದೆ ರಕ್ಷಾ ಬಂಧನ ಹಬ್ಬದ ಸಂದರ್ಭದಲ್ಲಿ ನಾನು ಕಲ್ಲಡ್ಕ ಶ್ರೀರಾಮ ಪ್ರಾಥಮಿಕ ಶಾಲೆಯಲ್ಲಿ ಸಂಸ್ಕೃತ ಶಿಕ್ಷಕಿಯಾಗಿ ಕೆಲಸ ಮಾಡುತ್ತಾ ಇದ್ದೆ‌.ಆಗಷ್ಟೇ ಎರಡನೇ ವರ್ಷದ ಎಂಎ ಪರೀಕ್ಷೆ ಮುಗಿಸಿ ಕೆಲಸಕ್ಕೆ ಸೇರಿದ್ದೆ‌.ಫಲಿತಾಂಶ ಇನ್ನೂ ಬಂದಿರಲಿಲ್ಲ.
 ಶ್ರೀರಾಮ ಪ್ರಾಥಮಿಕ ಶಾಲೆಯಲ್ಲಿ ರಕ್ಷಾ ಬಂಧನ ನಿಮಿತ್ತ ಸಭಾ ಕಾರ್ಯಕ್ರಮ ಆಯೋಜಿಸಿದ್ದರು.ಉಪನ್ಯಾಸ ನೀಡಲು ಯಾರನ್ನೋ ಆಹ್ವಾನಿಸಿದ್ದು ,ಆ ದಿನ ಬೆಳಗ್ಗೆ ಅವರಿಗೆ ಬರಲಾಗುವುದಿಲ್ಲ ಎಂದು ಯಾರಲ್ಲೋ ಹೇಳಿಕಳುಹಿಸಿದ್ದರು.ಆಗ ಸಭಾ ಕಾರ್ಯಕ್ರಮದಲ್ಲಿ ಭಾಷಣ ಮಾಡುವುದು ಯಾರು ಎಂಬ ಸಮಸ್ಯೆ ಉಂಟಾಯಿತು‌.ಆಗ ಅಲ್ಲಿ ಮುಖ್ಯೋಪಾಧ್ಯಾಯ ರಾಗಿದ್ದ ಗೋಪಾಲ್ ರಾವ್ ಅವರು ನನ್ನಲ್ಲಿ ರಕ್ಷಾ ಬಂಧನದ ಬಗ್ಗೆ ಅರ್ಧ ಗಂಟೆ ಮಾತನಾಡಿ ಎಂದು ಹೇಳಿದರು‌.ಆರಂಭದಲ್ಲಿ ನಾನು ಹಿಂದೇಟು ಹಾಕಿದೆ‌.ಆಗ ಅಲ್ಲಿ ಶಿಕ್ಷಕಿಯಾಗಿದ್ದ ಸಂಧ್ಯಾ ಮಾತಾಜಿ ಹಾಗೂ ಐತಪ್ಪ ಮಾಸ್ಟರ್ ಅವರು ಒತ್ತಾಸೆಯಾಗಿ ನಿಂತು ಧೈರ್ಯ ತುಂಬಿದರು‌."ನೀವು‌ಮುಂದೆ ಕಾಲೇಜು ಉಪನ್ಯಾಸಕರಾಗಲಿರುವವರು. ಮೈಕ್ ಹಿಡಿದು ನಾಲ್ಕು ಮಾತಾಡಲು ಹಿಂದೇಟು ಹಾಕಿದರೆ ಹೇಗೆ? ಬರೆಯುವ ಹವ್ಯಾಸ ನಿಮಗಿದೆ.ಅಂತೆಯೇ ಉಪನ್ಯಾಸ ನೀಡುವುದಕ್ಕೂ ಅಭ್ಯಾಸಮಾಡಿಕೊಳ್ಳಿ.ಇದರಿಂದ ನಿಮಗೆ ಒಳ್ಳೆಯದಾಗುತ್ತದೆ ಎಂದು ಸಂಧ್ಯಾ ಮಾತಾಜಿ ಹೇಳಿದ್ದು ಈಗಲೂ ಕಿವಿಯಲ್ಲಿ ಅನುರಣಿಸುತ್ತದೆ.ನಂತರ ರಕ್ಷಾ ಬಂಧನಕ್ಕೆ ಸಂಬಂಧಿಸಿದ ಎರಡು ‌ಮೂರು ಕಥೆಗಳನ್ನು ನನಗೆ ಹೇಳಿಕೊಟ್ಟು ಭಾಷಣಕ್ಕೆ ತಯಾರಾಗಲು ನನಗೆ ಸಹಾಯ ಮಾಡಿದರು .
ಅಂತೂ ಇಂತೂ ಸಭಾ ಕಾರ್ಯಕ್ರಮದಲ್ಲಿ ಇಪ್ಪತ್ತು ನಿಮಿಷ ಮಾತನಾಡಿದೆ‌.ನಾನು ನೀಡಿದ  ಮೊದಲ ಉಪನ್ಯಾಸವದು.ಚೆನ್ನಾಗಿ ಮಾತನಾಡಿದ್ದೇನೆ ಎಂದು ಮುಖ್ಯೋಪಾಧ್ಯಾಯರು ಮತ್ತು ಉಳಿದ ಅಧ್ಯಾಪಕರು ಮೆಚ್ಚುಗೆಯನ್ನು ತಿಳಿಸಿ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದರು.
ಅದಕ್ಕೂ ಮೊದಲು ನಾನು ಶಾಲಾ ಕಾಲೇಜುಗಳಲ್ಲಿ ಸ್ಪರ್ಧೆಯಲ್ಲಿ ಭಾಷಣ ಮಾಡಿ ಬಹುಮಾನ ಪಡೆದುಕೊಂಡಿದ್ದೆ‌.ಆದರೆ ಸ್ಪರ್ಧೆಯಲ್ಲಿ ಐದು ಹತ್ತು ನಿಮಿಷ ಮಾತನಾಡುವುದಕ್ಕೂ ತುಂಬಿದ ಸಭೆಯಲ್ಲಿ ಭಾಷಣ ಮಾಡುವುದಕ್ಕೂ ತುಂಬಾ ವ್ಯತ್ಯಾಸವಿದೆ.
ಈ ನಿಟ್ಟಿನಲ್ಲಿ ನನಗೆ ಉಪನ್ಯಾಸ ನೀಡಲು ಅವಕಾಶ ನೀಡಿ,ನಾನು ಕೂಡ ಉಪನ್ಯಾಸ ನೀಡಬಲ್ಲೆ ಎಂಬ ಧೈರ್ಯವನ್ನು ತುಂಬಿದ ಶ್ರೀರಾಮ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ  ಗೋಪಾಲ್ ರಾವ್ ಮತ್ತು ಅಧ್ಯಾಪಕರನ್ನು ನಾನು ಸದಾ ನೆನಪಿನಲ್ಲಿ ಇಟ್ಟುಕೊಂಡಿರುವೆ .
ಇದಕ್ಕೂ ಒಂದು ವರ್ಷದ  ಮೊದಲು ನಮ್ಮ ಊರು ಕೋಡಪದವಿನಲ್ಲಿ ಕೃಷ್ಣಾಷ್ಟಮಿ  ಮತ್ತು ರಕ್ಷಾ ಬಂಧನ ಹಬ್ಬದ ನಿಮಿತ್ತ ಒಂದು ಸಭಾ ಕಾರ್ಯಕ್ರಮ ಆಯೋಜಿಸಿದ್ದರು.ಅದರಲ್ಲಿ ಒಂದು ಉಪನ್ಯಾಸ ನೀಡುವಂತೆ ಮಾತಾಜಿಯವರು ತಿಳಿಸಿದ್ದರು.ಆದರೆ  ಸ್ಥಳೀಯರಾಗಿ  ಬಲಿಷ್ಠರಾಗಿದ್ದ  ನಮ್ಮ ಹತ್ತಿರದ ಸಂಬಂಧಿಯೊಬ್ಬರು ( ಪ್ರಸಾದರ ದೊಡ್ಡಪ್ಪನ ಮಗ) ಇದು ಗೊತ್ತಾಗಿ ಹೊಟ್ಟಿಕಿಚ್ಚಿನಿಂದ ನನಗೆ ಅಲ್ಲಿ  ನೀಡಿದ ಅವಕಾಶ ವನ್ನು ತಪ್ಪಿಸಿ ,ಆ ದಿನ ಉಪನ್ಯಾಸ ನೀಡಲು ಬೇರೆ ಯಾರನ್ನೋ ಕರೆಸಿದ್ದರು. ಈ ಬಗ್ಗೆ ನನ್ನ ಅತ್ತೆಯವರೇ "ಅಬ್ಬಾ ಇವರುಗಳ ಮತ್ಸರವೇ !ಎಂದು ಉದ್ಗರಿಸಿದ್ದರು. ಸಾಮಾನ್ಯವಾಗಿ ನನ್ನ ಅತ್ತೆಯವರು ಅವರ ಕಡೆಯವರನ್ನು(  ನನ್ನ ಗಂಡನ ಮನೆ ಸಂಬಂಧಿಕರನ್ನು ) ಬಿಟ್ಟುಕೊಡುತ್ತಿರಲಿಲ್ಲ.ಆದರೆ ಈ ವಿಷಯದಲ್ಲಿ ಅವರಿಗೆ ಕೂಡ ನಮ್ಮ ಸಂಬಂಧಿಕರ ಹೊಟ್ಟೆಕಿಚ್ಚಿನ ಅರಿವಾಗಿತ್ತು.
ಇಲ್ಲಿ ತಪ್ಪಿದ ಅವಕಾಶ ಮತ್ತೆ ನನಗೆ ಕಲ್ಲಡ್ಕ ಶಾಲೆಯಲ್ಲಿ ದೊರೆತಿತ್ತು .ಜಗತ್ತು ಬಹಳ ವಿಶಾಲವಾಗಿದೆ‌.ಕೊಲ್ಲುವ ಶಕ್ತಿಗಿಂತ ಕಾಯುವ ದೇವರು ಬಲಿಷ್ಠನಾಗಿರುತ್ತಾನೆ.ಕಾಲೆಳೆಯುವ ಮಂದಿ ಕೆಲವರಿದ್ದರೆ ಬೆಂಬಲಕೊಡುವವರು ನೂರಾರು ಜನರಿರುತ್ತಾರೆ ಎಂಬುದು ಮೊದಲ ಬಾರಿಗೆ ನನಗೆ ಇಲ್ಲಿಯೇ ಅರಿವಾದದ್ದು.ಹಾಗಾಗಿಯೇ ಕೊಲ್ಲುವ ದೇವರಿಗಿಂತ ಕಾಯುವ ದೇವರು ದೊಡ್ಡವನು ಎಂಬ ನಿಲುವನ್ನು ಆಧರಿಸಿ ಉಪನ್ಯಾಸ ನೀಡಿದ್ದೆ .

Saturday, 11 August 2018

ದೊಡ್ಡವರ ದಾರಿ 61 ಅತುಲ ಆತ್ಮ ವಿಶ್ವಾಸದ ತರುಣ ಹನುಮಂತ ನಾಯಕ್© ಡಾ.ಲಕ್ಷ್ಮೀ ಜಿ ಪ್ರಸಾದ

ನೋಡ್ತಾ ಇರಿ ಮೇಡಂ, ಒಂದಲ್ಲ ಒಂದಿನ ನಾನು ಒಳ್ಳೆಯ ಕೆಲಸ ಪಡೆಯುತ್ತೇನೆ..ಎಂದ ಇಪ್ಪತ್ತೈದರ ತರುಣ ಹನುಮಂತ ನಾಯಕ್ ನ ಆತ್ಮವಿಶ್ವಾಸದ ಮಾತು ನನಗೆ ಬಹಳ ಇಷ್ಟವಾಯಿತು.ದಿನಾಲು ಬೆಂಗಳೂರಿನ ನಮ್ಮ ಮನೆಯಿಂದ ನೆಲಮಂಗಲದ ಕಾಲೇಜಿಗೆ ಓಲಾ ಅಥವಾ ಉಬರಚ ಕ್ಯಾಬ್ ನಲ್ಲಿ ಹೋಗಿ ಬರುತ್ತೇನೆ.ಸಾಮಾನ್ಯವಾಗಿ ಮುಂದಿನ ಸೀಟಿನಲ್ಲೇ ಕುಳಿತುಕೊಳ್ಳುತ್ತೇನೆ‌.ಹೆಚ್ಚಾಗಿ ಕಾರಿನಲ್ಲಿ ಕುಳಿತ ತಕ್ಷಣವೇ ಫೇಸ್ ಬುಕ್, ವಾಟ್ಸಪ್ ,ಬ್ಲಾಗ್ ಗಳಲ್ಲಿ ಮುಳುಗಿ ಹೋಗುತ್ತೇನೆ.ಒಳ್ಳೆಯ ಮೂಡ್ ಇದ್ದ ದಿನ ಕ್ಯಾಬ್ ಡ್ರೈವರ್ ಗಳ ಸ್ಥತಿ ಗತಿ ಬಗ್ಗೆ ಮಾತನಾಡುವುದೂ ಇದೆ.ಹೆಚ್ಚಿನ ಕ್ಯಾಬ್ ಡ್ರೈವರ್ ಗಳು ನಮಗೇನೂ ಅಸಲಾಗುವುದಿಲ್ಲ ಮೇಡಂ. ಇಪ್ಪತ್ತಾರು ಸೆಕಡಾ ಕಮಿಷನ್ ಕೊಟ್ಟ ಮೇಲೆ ನಮಗೇನೂ ಉಳಿಯುವುದಿಲ್ಲ‌. ಕಾರಿನ  ಸಾಲದ ತಿಂಗಳ ಕಂತು ಕಟ್ಟಲಾಗದೆ
ತುಂಬಾ ಜನರ ಕಾರುಗಳು ಸೀಸ್ ಆಗಿವೆ ಇತ್ಯಾದಿಯಾಗಿ ಹೇಳುತ್ತಾ ಇರುತ್ತಾರೆ.
ನಮ್ಮ ಕಾಲೇಜಿನಲ್ಲಿ ಮೊದಲ‌ ಕಿರು ಪರೀಕ್ಷೆ ಮುಗಿಸಿ ಉತ್ತರ ಪತ್ರಿಕೆ ತಿದ್ದಲು ಮನೆಗೆ ತಗೊಂಡು ಬಂದೆ.ಬರುವಾಗ   ನೆಲಮಂಗಲದಿಂದ ಮನೆಗೆ ಉಬರ್ ಕ್ಯಾಬ್ ನಲ್ಲಿ ಬಂದೆ.ನನ್ನ ಕೈಯಲ್ಲಿ ಇದ್ದ ಉತ್ತರ ಪತ್ರಿಕೆಗಳ ದೊಡ್ಡ ಕಟ್ಟನ್ನು ನೋಡಿದ ಕ್ಯಾಬ್ ಡ್ರೈವರ್ ನೀವು ಟೀಚರಾ ಮೇಡಂ ಎಂದು ಕೇಳಿದರು.ಹೌದು,ನಾನು ನೆಲಮಂಗಲ ಸರ್ಕಾರಿ ಪಿಯು ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿದ್ದೇನೆ ಎಂದು ಹೇಳಿದೆ.
ಆಗ ಅವರು "ನಾನು ಕೂಡ ಡಿಎಡ್ ಮಾಡಿದ್ದೇನೆ ಮೇಡಂ" ಎಂದು ಹೆಮ್ಮೆಯಿಂದ ಹೇಳಿದರು.ಮತ್ಯಾಕೆ ಶಿಕ್ಷಕರಾಗಲಿಲ್ಲ ಎಂದು ಕೇಳಿದೆ.ಆಗ ನಾನು ಖಾಸಗಿಯಾಗಿ ಒಂದೆರಡು ಶಾಲೆಗಳಲ್ಲಿ ಕೆಲಸ ಮಾಡಿದೆ ಮೇಡಂ. ಎಂಟು ಹತ್ತು ಸಾವಿರ ಸಂಬಳ ಕೊಡ್ತಾರೆ.ಅದು ಎಲ್ಲಿಗೂ ಸಾಕಾಗುವುದಿಲ್ಲ.ಅದಕ್ಕೆ ಸರಿಯಾದ ಕೆಲಸ ಸಿಗೋ ತನಕ ಇರಲಿ ಅಂತ ಕಾರು ಓಡಿಸುತ್ತಿದ್ದೇನೆ ಎಂದು ಹೇಳಿದರು. ಆಗ ಇದರಲ್ಲಿ ಅಸಲಾಗುತ್ತಾ ಬರುತ್ತಾ ?   ನಿಮಗೆ ಎಷ್ಟು ಆದಾಯ ಬರುತ್ತದೆ ಎಂದು ಕೇಳಿದೆ.ಆಗ ಅವರು ನಮಗೆ ವಾರಕ್ಕೆ  ಇಪ್ಪತ್ತೈದು ಮೂವತ್ತು  ಸಾವಿರದಷ್ಟು ಬ್ಯುಸಿನೆಸ್‌ ಸಿಗುತ್ತದೆ. ಕಮಿಷನ್, ಡೀಸೆಲ್ ಬೆಲೆ ಬಿಟ್ಟು ವಾರಕ್ಕೆ ಇಪ್ಪತ್ತು ಸಾವಿರದಷ್ಟು ಆದಾಯ ಬರುತ್ತದೆ .ತಿಮಗಳಿಗೆ ಹದಿನೆಂಟು ಸಾವಿರ ಕಾರಿನ ಸಾಲದ ಕಂತು ಇರುತ್ತದೆ.ಉಳಿದ ಐವತ್ತು ಅರುವತ್ತು ಸಾವಿರ ನಮಗೆ ಉಳಿಯುತ್ತದೆ ಎಂದು ಹೇಳಿದರು. ಅರೇ! ಎಲ್ರೂ ವರಗಕ್ ಒಔಟ್ ಆಗಲ್ಲ ಎಂದು ಅಲವತ್ತುಕೊಳ್ತ್ತಾ ಇದ್ದರೆ ಇವರು ಇಷ್ಟು ಅದಾಯ ಗಳಿಸುವ ಬಗ್ಗೆ ಹೇಳುತ್ತಾರಲ್ಲ ಎಂದು ಸಂತಸವಾಯಿತು ಜೊತೆಗೆ ಒಂಚೂರು ಆಶ್ಚರ್ಯ ಕೂಡ ಅಯಿತು.ಮತ್ತೆ ತುಂಬಾ ಜನ ನಮಗೆ ಲಾಸ್ ಆಗುತ್ತಿದೆ, ಎಂದು ಹೇಳುತ್ತಾರಲ್ಲ ? ಎಂದು ಕೇಳಿದೆ.ಸೋಮಾರಿಗಳು ಮೇಡಂ ಅವರು.ಬೆಳಗ್ಗಿನಿಂದ ಸಂಜೆ ತನಕ ಮೈಗಳ್ಳತನ ಬಿಟ್ಟು ದುಡಿದರೆ ಇಲ್ಲೂ ದುಡ್ಡು ಬರುತ್ತೆ ಮೇಡಂ. ಕೆಲವೊಮ್ಮೆ ಮನೆಯಿಂದ ಹೊರಟು ಒಂದೆರಡು ಗಂಟೆ ಕಳೆದರೂ ಡ್ಯೂಟಿ ಬೀಳಲ್ಲ .ಆಗೆಲ್ಲ ತಾಳ್ಮೆಯಿಂದ ಕಾಯಬೇಕಾಗುತ್ತದೆ‌. ಬಿದ್ದ ಡ್ಯೂಟಿನ ಮಾಡಬೇಕು  ಅದು ಬಿಟ್ಟು ಕಂಪೆನಿನ ಬೈಕೊಂಡು ಮನೆಗೆ ಹೋಗಿ ಮಲಕ್ಕೊಂಡರೆ ದುಡ್ಡು ಎಲ್ಲಿಂದ ಬರುತ್ತೆ ಮೇಡಂ ? ಎಂದು ಹೇಳಿದರು.ಹೌದು.ಅವರು ಟೊಯೋಟಾ ಇಟಿಯೋಸ್ ಕಾರನ್ನು ಖರೀದಿಸಿ ಉಬರ್ ಗೆ ಕನೆಕ್ಟ್ ಮಾಡಿಕೊಂಡಿದ್ದಾರೆ.ಹನುಮಂತ ನಾಯಕ್  ಮತ್ತು ಅವರ ತಮ್ಮ ಒಗ್ಗಟ್ಟಿನಂದ ಕೆಲಸ ಮಾಡುತ್ತಾರೆ. ಇವರು ಹಗಲು ಹೊತ್ತಿನಲ್ಲಿ ಕಾರು ಓಡಿಸುತ್ತಾರೆ.ಇವರ ಸಹೋದರ ರಾತ್ರಿ ಹೊತ್ತು ಇದೇ ಕಾರನ್ನು ಓಡಿಸುತ್ತಾರೆ.ದಿವಸಕ್ಕೆ ಮೂರು ನಾಲ್ಕುಸಾವಿರ ದುಡಿಯಲೇ ಬೇಕೆಂಬ ಗುರಿ ಇಟ್ಟುಕೊಂಡು ರಸ್ತೆಗೆ ಇಳಿಯುತ್ತಾರೆ‌ಟಾರ್ಗೆಟ್ ತಲುಪಿದ ನಂತರವೇ ಮನೆಗೆ ಹಿಂದಿರುಗುತ್ತಾರೆ‌.ಅವರು ಗುರಿ ತಲುಪುವಲ್ಲಿಯವರೆಗೆ ಡ್ಯೂಟಿಗಾಗಿ ತಾಳ್ಮೆಯಿಂದ ಕಾಯುತ್ತಾರೆ‌.ಹಾಗಾಗಿ ಸಾಕಷ್ಟು ಸಂಪಾದನೆ ಕೂಡ ಮಾಡುತ್ತಾರೆ.ಮಾತಿನ ನಡುವೆ ಅವರು ಡಿಎಡ್ ಮಾಡಿದ ನಂತರ ಬಿಎ ಓದಿ ನಂತರ ಎಂ್ ಎಸ್ ಡಬ್ಯು ಕೂಡ ಓದಿರುವುದು ತಿಳಿಯಿತು. ಕಾರು ಓಡಿಸುವ ಕಾಯಕ ಮಾಡುತ್ತಲೇ ಒಳ್ಳೆಯ ಕೆಲಸಕ್ಕಾಗಿ ಕೂಡ ಪ್ರಯತ್ನ ಮಾಡುತ್ತಿದ್ದಾರೆ‌.ಅಗ ಮಾತಿನ ನಡುವೆ ನೋಡುತ್ತಿರಿ ಮೇಡಂ, ಒಂದಲ್ಲ ಒಂದು ದಿನ ನಾನು ಒಳ್ಳೆಯ ಕೆಲಸ ಪಡೆದೇ ಪಡೆಯುತ್ತೇನೆ ಎಂದು ಬಹಳ ಆತ್ಮವಿಶ್ವಾಸದಿಂದ ಹೇಳಿದರು‌.ನನಗೂ ಕೂಡ ಅವರು ಅದನ್ನು ಸಾಧಿಸಿಯಾರು ಎನಿಸಿತು.ಅಥವಾ ಸ್ವ ಉದ್ಯೋಗ ಮಾಡುತ್ತಲೇ ಈ ಇಬ್ಬರು ಯುವಕರು ಉನ್ನತ ಮಟ್ಟದ ಸಾಧನೆಯನ್ನು ಮಾಡಬಹುದು ಎನಿಸಿತು‌.ಧನಾತ್ಮಕ ಚಿಂತನೆ,ಪ್ರಾಮಾಣಿಕತೆ ಮತ್ತು ಪರಿಶ್ರಮ ಇದ್ದರೆ ಜಗತ್ತಿನಲ್ಲಿ ಏನನ್ನು ಬೇಕಾದರೂ ಸಾಧಿಸಲು ಸಾಧ್ಯ.ಈ ಯುವಕರಲ್ಲಿ ಈ ಮೂರೂ ಗುಣಗಳಿವೆ. ಇವುಗಳ ಮೂಲಕ ಉನ್ನತ ಸಾಧನೆಯನ್ನು ಮಾಡಲಿ ಎಂದು ಹಾರೈಸುವೆ
ಡಾ.ಲಕ್ಷ್ಮೀ ಜಿ ಪ್ರಸಾದ, ಕನ್ನಡ ಉಪನ್ಯಾಸಕರು, ಸರ್ಕಾರಿ ಪಿಯು ಕಾಲೇಜು,ನೆಲಮಂಗಲ ,ಬೆಂಗಳೂರು ಗ್ರಾಮಾಂತರ ಜಿಲ್ಲೆ 

Saturday, 28 July 2018

ನಮಗಾಗಿ ...ನಮ್ಮ ಮುಂದಿನ ಜನಾಂಗಕ್ಕಾಗಿ ಬೊಗಸೆ ನೀರು ಉಳಿಸೋಣ‌.ಬನ್ನಿ...ಡಾ. ಲಕ್ಷ್ಮೀ ಜಿ ಪ್ರಸಾದ


ನಮಗಾಗಿ ...ನಮ್ಮ ಮುಂದಿನ ಜನಾಂಗಕ್ಕಾಗಿ ಬೊಗಸೆ  ನೀರು ಉಳಿಸೋಣ‌.ಬನ್ನಿ...ಡಾ. ಲಕ್ಷ್ಮೀ ಜಿ ಪ್ರಸಾದ

.ಇದಕ್ಕಾಗಿ ಹೆಚ್ಚುವರಿ  ಖರ್ಚು ಆಗುವುದಿಲ್ಲ
ಬೋರ್ ವೆಲ್ ಗೆ ಮಳೆ ನೀರು ಇಂಗಿಸುವ ವ್ಯವಸ್ಥೆ ...

ಇಷ್ಟರ ತನಕ ಬೋರ್ ವೆಲ್ ಸುತ್ತ ಹತ್ತಡಿ ಮಣ್ಣು ತೆಗೆದು ಕಲ್ಲು ಜಲ್ಲಿ ಕಲ್ಲು, ಮರಳು ಇದ್ದಿಲು ತುಂಬಿ ಮಳೆ ನೀರನ್ನು ಹರಿಸಿ ನೀರು ಇಂಗಿಸುತ್ತಾ ಇದ್ದೆವು,ಈಗ ಮನೆ ವಿಸ್ತರಿಸುವುದರಿಂದ ಕಟ್ಟಡದ ಅಡಿ ಭಾಗದಲ್ಲಿ ಬೋರ್ ವೆಲ್ ಬರುವ ಕಾರಣ ಹಿಂದಿನಂತೆ ನೇರವಾಗಿ ನೀರನ್ನು ಇಂಗಿಸಲು ಆಗುವುದಿಲ್ಲ. ಅದಕ್ಕಾಗಿ ಮಳೆ ನೀರಿನ ಸಂಗ್ರಹಕ್ಕಾಗಿ ಏಳುಸಾವಿರ ಲೀಟರ್ ನ ಸಂಪನ್ನು ನಿರ್ಮಿಸಿ ಅದರ ಕೆಳಭಾಗದಲ್ಲಿ ಒಂದು ಇಂಚಿನ ಪೈಪ್ ಇರಿಸಿದ್ದೇವೆ‌.  ಇನ್ನೊಂದು ತುದಿಯನ್ನು ಬೋರ್ ವೆಲ್ ಕೇಸಿಂಗ್ ಪೈಪಿನಲ್ಲಿ ಒಂದಿಂಚಿನ ರಂಧ್ರ ಮಾಡಿ ಅದಕ್ಕೆ ಜೋಡಿಸಿದ್ದೇವೆ.ಮಳೆ ನೀರು ತೊಟ್ಟಿ/ ಸಂಪಿನಲ್ಲಿ ಸಂಗ್ರಹವಾಗಿ ಒಂದಿಂಚಿನ ಪೈಪಿನ ಮೂಲಕ ನಿದಾನವಾಗಿ ಬೋರ್ ವೆಲ್ ಒಳಗೆ ಹೋಗುತ್ತದೆ.ಮಳೆ ನೀರನ್ನು ಸಂಪಿಗೆ ಬಿಡುವ ಮೊದಲೇ ಪೈಪಿಗೆ ಫಿಲ್ಟರ್ ಜೋಡಿಸಿ ಶುದ್ದೀಕರಿಸಿ ಬಿಡುವ ವ್ಯವಸ್ಥೆ ಮಾಡಬೇಕಾಗುತ್ತದೆ.1000-1200 ಅಡಿಯ ಚಾವಣಿಯಲ್ಲಿ ಬೀಳುವ ಮಳೆ ನೀರನ್ನು ಶುದ್ದೀಕರಿಸಲು  ಮೂರು ಇಂಚಿನ ಫಿಲ್ಟರ್ ಸಾಕಾಗುತ್ತದೆ ,ಇದರ ಬೆಲೆ ಸುಮಾರು ನಾಲ್ಕು ನಾಲ್ಕೂವರೆ ಸಾವಿರ ₹ .ಸಂಪು ಹೇಗಾದರೂ ಮಾಡಬೇಕಾಗುತ್ತದೆ. ಒಂದೊಮ್ಮೆ ಕಾವೇರಿ ನೀರನ್ನು ಕೂಡ ಬಳಸುವುದಾದರೆ ಹನ್ನೆರಡು ಹದಿನೈದು ಸಾವಿರ ಲೀಟರ್ ನ ಸಂಪನ್ನು ಮಾಡಿ ನಡುವೆ ಒಂದು ಗೋಡೆ ಹಾಕಿ ಎರಡು ಭಾಗ ಮಾಡಿ ಒಂದರಲ್ಲಿ ಕಾವೇರಿ ನೀರು,ಇನ್ನೊಂದರಲ್ಲಿ ಮಳೆ ನೀರು ಸಂಗ್ರಹ ಮಾಡಬಹುದು, ಹೆಚ್ಚಾದ ಮಳೆ ನೀರನ್ನು ಮೇಲೆ ಹೇಳಿದ ರೀತಿಯಲ್ಲಿ ಬೋರ್ ವೆಲ್ ಗೆ ತುಂಬಬಹುದು.

ಆರಂಭದಿಂದಲೂ ಬೋರ್ ವೆಲ್ ಗೆ ನೀರು ಇಂಗಿಸಿರುವ ಕಾರಣವೋ ಏನೋ ಸುತ್ತ‌ಮುತ್ತ ಎಂಟುನೂರು ಅಡಿ ತೋಡಿದರೂ ನೀರು ಸಿಗದೇ ಇದ್ದರೂ ನಮ್ಮ ಬೋರ್ ವೆಲ್ ನಲ್ಲಿ ನೂರಿಪ್ಪತ್ತು ಅಡಿಯಲ್ಲಿ ನೀರಿದೆ
ನಮ್ಮ ಮನೆ ಬೋರ್ ವೆಲ್ ಗೆ ಮಳೆ ನೀರು ಇಂಗಿಸುವಲ್ಲಿ ಮಾಹಿತಿ ನೀಡಿ ಸಹಕರಿಸಿದ Subrahmanya Shagrithaya Shivaprasad Shagrithaya     Nataraj C Nagadala, Shivaprasad Bhat   Lakkanna TR sridevi vishwanath ಶ್ರೀನಿವಾಸ್ ,ಡೇವಿಡ್ ಕೊಕ್ಕಡ,ರಾಮ್ ಪ್ರತೀಕ್ ಪುತ್ತೂರು, ಶ್ರೀಪಡ್ರೆ ಯವರಿಗೆ  ಹಾಗೂ ಇದನ್ನು ಸಮರ್ಪಕವಾಗಿ ಅಳವಡಿಸಿಕೊಟ್ಟ ನಮ್ಮ ಮನೆ ನಿರ್ಮಾಣದ  ಕಾಂಟ್ರಾಕ್ಟರ್ ಕಮ್ ಮೇಸ್ತ್ರಿ Likitha  constructions ನ  ವೇಣುಗೋಪಾಲ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು
ಹೆಚ್ಚಿನ ಮಾಹಿತಿಗಾಗಿ http://shikshanaloka.blogspot.com/2016/05/c.html?m=1
ಮಂತ್ರಕ್ಕೆ ಮಾವಿನಕಾಯಿ ಉದುರುವುದಿಲ್ಲ !ಹಾಗೆಯೇ ಅಂತರ್ಜಲ ಸುಮ್ಮನೆ ತುಂಬುವುದಿಲ್ಲ (c)ಡಾ.ಲಕ್ಷ್ಮೀ ಜಿ ಪ್ರಸಾದ

ಮಂತ್ರಕ್ಕೆ ಮಾವಿನಕಾಯಿ ಉದುರುವುದಿಲ್ಲ !ಹಾಗೆಯೇ ಅಂತರ್ಜಲ ಸುಮ್ಮನೆ ತುಂಬುವುದಿಲ್ಲ
8 ವರ್ಷಗಳ ಹಿಂದೆ ನಾವು ನಮ್ಮ ಬೆಂಗಳೂರಿನ ಮನೆಯ ಬೋರ್ ವೆಲ್ ಗೆ ಛಾವಣಿ ನೀರು ಇಂಗಿಸುವ ವ್ಯವಸ್ಥೆ ಮಾಡಿದೆವು ...
2003 ರಲ್ಲಿ ನಾವು ಈ ಬೋರ್ ವೆಲ್ ಕೊರೆದಾಗ ಸುಮಾರು 60 -70 ಅಡಿಗಳಲ್ಲಿಯೇ ನೀರು ಸಿಕ್ಕಿತು ,ಎಂತಕ್ಕೂ ಇರಲಿ ಅಂತ 120 ಅಡಿ ಆಳ ತೋಡಿದೆವು ಅದಕ್ಕಿಂತ ಹೆಚ್ಚ್ಚು ತೋಡಲು ಸಾಧ್ಯವಾಗಲಿಲ್ಲ .ಆಗ ನಾವಿನ್ನೂ ಬೆಂಗಳೂರಿಗೆ ವಲಸೆ ಬಂದಿರಲಿಲ್ಲ ..ನಾನು ಮಂಗಳೂರು ಸಂತ ಅಲೋಶಿಯಸ್ ಕಾಲೇಜ್ ನಲಿ ಸಂಸ್ಕೃತ ಉಪನ್ಯಾಸಕಿಯಾಗಿ ಕೆಲಸ ಮಾಡುತಿದ್ದೆ ... ನಾನು ಶ್ರೀ ಪಡ್ರೆ ಹಾಗೂ ಇತರರ ಸಂಗ್ರಹಿಸುವ ನೀರು ಇಂಗಿಸುವ ನಾನಾ ವಿಧಾನಗಳ ಬಗೆಗಿನ ಲೇಖನಗಳನ್ನು ಓದುತ್ತ ಇದ್ದೆ ಹಾಗೆ ಬೆಂಗಳೂರು ಸುತ್ತ ಮುತ್ತ ನೀರಿನ ಸಮಸ್ಯೆಯನ್ನು ಓದುತ್ತಾ ಇದ್ದೆ ,ಅಗಲೆ ಅಂದುಕೊಂಡಿದ್ದೆ ನಮ್ಮ ಬಾವಿಗೆ ನೀರು ಇಂಗಿಸುವ ವ್ಯವಸ್ಥೆ ಮಾಡಬೇಕು ಎಂದು ಇಲ್ಲವಾದಲ್ಲಿ ನೀರು ಆರಿ ಹೋಗಬಹುದು ಎಂದು ಎನಿಸಿತ್ತು ನನಗೆ
2008 ರಲ್ಲಿ ನಾವು ನಮ್ಮ ಈ ಪುಟ್ಟ ಮನೆಗೆ ಒಕ್ಕಲಾದೆವು ,ಆಗ ಮೊದಲು ನಾವು ಮಾಡಿದ ಕೆಲಸ ನಮ್ಮ ಕೊಳವೆ ಬಾವಿಗೆ ನೀರು ಇಂಗಿಸುವ ವ್ಯವಸ್ಥೆ ಯನ್ನು ಮಾಡಿದ್ದು
ಹೇಗೆ ಇನ್ಗಿಸುವುದು ಬೆಂಗಳೂರಿನ ಕೊಳಚೆ ನೀರು ಕೂಡ ಇಂಗಿದರೆ ಎಂಬ ಭಯ ಕಾಡಿತ್ತು
ಈ ಬಗ್ಗೆ ಶ್ರೀ ಪದ್ರೆಯವರನ್ನು ಸಂಪರ್ಕಿಸಿ ನಮ್ಮ ಬಾವಿಗೆ ನೀರು ಇಂಗಿಸುವ ಬಗ್ಗೆ ಸಲಹೆ ಕೇಳಿದೆ ಅವರು ಗ್ರೀನ್ ಅರ್ಥ್ ಫೌಂಡೇಶನ್ ರವಿ ಅವರ ಸಲಹೆ ಪಡೆಯಲು ತಿಳಿಸಿದರು 

ಫೋನ್ ಮೂಲಕ ಅವರನ್ನು ಈ ಬಗ್ಗೆ ಸಲಹೆ ಕೇಳಿದೆ.ಅವರ ಸಲಹೆಯಂತೆ ಬೋರೆವೇಲ್ ಸುತ್ತ ಆರಡಿ ಅಗಲ ಹತ್ತು ಅಡಿ ಆಳ ಗುಂಡಿ ತೋಡಿಸಿದೆವು,ನಂತರ ಆಳದಲ್ಲಿ ಒಂದು ಅಡಿ ಮರಳು ತುಂಬಿದೆವು ನಂತರ ಎರಡು ಅಡಿ ಜಲ್ಲಿ ಕಲ್ಲು ತುಂಬಿದೆವು ನಂತರ ಎರಡು ಅಡಿ ದೊಡ್ಡ ಬೋರ್ಡೊ ಕಲ್ಲುಗಳನ್ನು ತುಂಬಿಸಿದೆವು ನಂತರ ಒಂದು ಅಡಿ ಮರಳು ತುಂಬಿದೆವು ನಂತರ ಮತ್ತೆ ಒಂದಡಿ ಜಲ್ಲಿ ಕಲ್ಲು ಅದರ ಮೇಲೆ ಒಂದಷ್ಟು ಇದ್ದಿಲು ತುಂಬಿ ಮೇಲ್ಭಾಗ ಮತ್ತೆ ಒಂದಷ್ಟು ಮರಳು ತುಂಬಿ ಒಂದಡಿಯಷ್ಟು ಆಳ ನೀರು ತುಂಬಲು ಬಿಟ್ಟು ಬಿಟ್ಟೆವು .ಅಲ್ಲಿಗೆ ತಾರಸಿ ನೀರು ಬರುವ ಹಾಗೆ ಮಾಡಿದೆವು 
ಮತ್ತು ಛಾವಣಿ ನೀರು ಜೊತೆಗೆಅಂಗಳದ ನೀರು ಕೂಡ ಇಂಗಲಿ ಎಂಬ ಉದ್ದೇಶದಿಂದ ಅಂಗಳವನ್ನು ಸಮತಟ್ಟು ಮಾಡದೆ ಎಲ್ಲ ಕಡೆಯಿಂದ ಬಾವಿಯೆಡೆಗೆ ನೀರು ಬರುವಂತೆ ಚಾರೆಯಾಗಿ ಮಾಡಿ ಹಾಗೆ ಬಿಟ್ಟು ಬಿಟ್ಟೆವು ,ಜೊತೆಗೆ ಒಂದಷ್ಟು ಪಾರಿಜಾತ ಮೀಸೆ ಹೂ /ರತ್ನ ಗ್ರಂಥಿ ಸೇರಿದಂತೆ ಕೆಲವು ಸಸಿಗಳನ್ನು ಹಾಕಿದೆವು .ಅದರಲ್ಲಿ ಒಂದು ಪೇರಳೆ ಹಣ್ಣಿನ ಗಿಡವೂ ಇದೆ ಈಗ ಇವೆಲ್ಲ ಎತ್ತರಕ್ಕೆ ಬೆಳೆದು ನಿಂತು ಮನೆಗೆ ನೆರಳನ್ನೂ ತಂಪನ್ನೂ ತಂದು ಕೊಟ್ಟಿವೆ ಹಕ್ಕಿಗಳು ಚಿಟ್ಟೆಗಳು ಸ್ವಚ್ಚಂದವಾಗಿ ಬಂದು ಅಲ್ಲಿನ ಮೀಸೆ ಹೂವಿನ ಕಾಯಿಗಳನ್ನು ಒಡೆದು ತಿನ್ನುತ್ತವೆ ಪೇರಳೆ ಹಣ್ಣನ್ನೂ ಬಿಡುವುದಿಲ್ಲ ಅವು ತಿಂದು ಬಿಟ್ಟ ಕೆಲವು ಹಣ್ಣುಗಳು ನಮಗೂ ದಕ್ಕುವುದಿದೆ .ಜೊತೆಗೆ ಒಂದಷ್ಟು ಕಸ ಕಡ್ಡಿ ಬಿದ್ದು ಉಪದ್ರ ಕೂಡ ಆಗುತ್ತದೆ ,ಹಳ್ಳಿಯಲ್ಲಿ ಬೆಳೆದ ನನಗೆ ತೀರ ಸಿನೆಮಾ ಸೆಟ್ ಮಾದರಿಯ ಮನೆ ಬೇಕೆಂಬ ಭ್ರಮೆ ನನಗಿಲ್ಲ ಹಕ್ಕಿಗಳ ಕಲರವದೊಂದಿಗೆ ಬದುಕುವುದೇ ಅಪ್ಯಾಯಮಾನವಾಗುತ್ತದೆ ,ಆದರೂ ಬಂದ ಹೋದ ಜನರೆಲ್ಲಾ ಇದನ್ನು ಆಕ್ಷೇಪಿಸಿ ಒಂದು ಐನೂರು ರುಪಾಯಿ ಕೊಟ್ಟು ಇದನ್ನೆಲ್ಲಾ ಕಡಿಸಿ ಸ್ವಚ್ಚ ಮಾಡಬಾರದೇ?ಇದರಲ್ಲಿ ಹಾವು ಇರಬಹುದು ಎಂದು ಸಲಹೆ ಕೊಟ್ಟದ್ದೂ ಉಂಟು ..ಆಗೆಲ್ಲ ನಾನು ಹೇಳುತ್ತೇನೆ" ಹಾವು ಇದ್ದರೆ ಇರಲಿ ಬಿಡಿ ಈ ಪೇಟೆಯ ಕಾಂನ್ಕ್ರೀಟ್ ಕಾಡಿನಲ್ಲಿ ಅವಕ್ಕೆ ಬದುಕಲು ಜಾಗವಿಲ್ಲ.ಎಂದು" ಬಾಯಿಯಲ್ಲಿ ಹಾಗೆ ಹೇಳಿದರೂ ಮನದೊಳಗೆ ತುಸು ಆತಂಕವಾಗುವುದುಂಟು ,ನಮ್ಮ ಮನೆ ಸುತ್ತ ಮುತ್ತಲಿನ ಮಂದಿ ನಿಮ್ಮ ತೋಟದಲ್ಲಿ (ತೋಟ ಎನ್ನುವಷ್ಟು ಜಾಗವಿಲ್ಲ ಕೇವಲ 500 ಅಡಿ ಜಾಗವಿದೆ ಅಷ್ಟೇ )ಹಾವುಗಳು ಹರಿದಾಡುತ್ತಿವೆ ನಾವು ಕಣ್ಣಾರೆ ನೋಡಿದ್ದೇವೆ ಆ ಗಿಡಮರಗಳನ್ನು ಕಡಿಸಿ ಬಿಡಿ ಎಂದು ಆಗಾಗ ಹೇಳುತ್ತಿರುತಾರೆ .ಆದರೆ ನಾವು ಮನೆ ಮಂದಿ ಒಮ್ಮೆ ಕೂಡ ಇಲ್ಲಿ ಹಾವು ಹರಿದಾಡಿದ್ದನ್ನು ನೋಡಿಲ್ಲ ಆಗಾಗ ಹುಲ್ಲು ಕೀಳಿಸಿ ಸ್ವಚ್ಛ ಮಾಡುವಾಗ ಎಲ್ಲೂ ಹಾವಿನ ಮೊಟ್ಟೆಗಳು ನಮಗೆ ಕಾಣಸಿಕ್ಕಿಲ್ಲ ಆಗ ನಾನು ನಮ್ಮ ಹಳ್ಳಿಯ ತೋಟವನ್ನು ಕಾಲು ದಾರಿಯನ್ನು ನೆನಪಿಸಿಕೊಳ್ಳುತ್ತೇನೆ "ಅಲ್ಲೆಲ್ಲ ಹಸಿರು ಕಸಕಡ್ಡಿ ಇರುತ್ತದೆ ಅಲ್ಲಿ ಹಾವು ಇರುವುದಿಲ್ಲವೇ ?ಎಂದು"
ಇಂದಿನ ಆಕ್ಸಿಡೆಂಟ್ ಹೃದಯಾಘಾತ ಸಾವುಗಳನ್ನು ಗಮನಿಸಿದರೆ ಹಾವು ಕಡಿದು ಸಾಯುವ ಮಂದಿ ತೀರ ಕಡಿಮೆ ಅಲ್ಲವೇ ಎಂದು!
ಅದು ಏನೇ ಇರಲಿ ನಮ್ಮ ಮನೆಯ ಆಸುಪಾಸಿನಲ್ಲಿ ಉಲ್ಲಾಳು ಉಪನಗರ, ಜ್ಞಾನ ಭಾರತಿ ,ನಾಗರಭಾವಿ ಸೇರಿದಂತೆ ಸುತ್ತ ಮುತ್ತ ಅಂತರ್ಜಲ ಮಟ್ಟ ತೀರಾ ಕುಸಿದಿದೆ ಒಂದು ಸಾವಿರ ಅಡಿ ತೋಡಿದರೂ ನೀರು ಸಿಗುತ್ತಿಲ ಸಿಗುವ ನೀರಿನಲ್ಲಿ ಕೂಡ ಫ್ಲೋರೈಡ್ ಮೊದಲಾದ ರಾಸಾಯನಿಕಗಳ ಅಂಶ ತುಂಬಾ ಜಾಸ್ತಿ ಇದೆ
ಆದರೆ ನಮ್ಮ ಬಾವಿಯಲ್ಲಿ ಇಂದಿಗೂ 120 ಅಡಿ ಆಳದಲ್ಲಿಯೇ ನೀರಿದೆ ,ಇಲ್ಲಿ ಅಕ್ಕ ಪಕ್ಕ ಅನೇಕರು ಬೋರ್ ವೆಲ್ ಕೊರೆದಿದ್ದಾರೆ 800 -1000 ಅಡಿ ತೋಡಿದ್ದಾರೆ ಕೆಲವರಿಗೆ ಅಷ್ಟಾದರೂ ನೀರು ಸಿಕ್ಕಿಲ್ಲ ಆಗೆಲ್ಲ ನನಗೆ ನಮ್ಮ ಬಾವಿಯ ನೀರು ಬೇರೆ ಬಾವಿಗೆ ಹೋಗಬಹುದೇನೋ ಎಂಬ ಆತಂಕ ಕಾಡುತ್ತದೆ ಆದರೆ ಇಂಗಿಸಿದ ನೀರು ಸಾಮಾನ್ಯವಾಗಿ ಬೇರೆ ಬಾವಿಗೆ ಹೋಗುವುದಿಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ .
ನಮ್ಮ ಮನೆ ಮುಖ್ಯ ರಸ್ತೆಯ ಬದಿಯಲ್ಲಿದೆ .ಕೆಲ ವರ್ಷಗಳಲ್ಲಿ ಇಲ್ಲಿ ವಾಣಿಜ್ಯ ಕಟ್ಟಡ ಹಾಕಿ ನಾವು ಬೇರೆಡೆ ಮನೆ ಮಾಡುವುದು ಅನಿವಾರ್ಯವಾಗಬಹುದು ಏಕೆಂದರೆ ಈಗಾಗಲೇ ರಸ್ತೆಯಲ್ಲಿ ಹೋಗುವ ವಾಹನಗಳ ಸದ್ದು ಅಕ್ಕ ಪಕ್ಕದ ಸಾ ಮಿಲ್ ,ಮೆಕ್ಯಾನಿಕ್ ಶಾಪ್ ಗಳಿಂದ ಹೊರಡುವ ಧೂಳು ಸದ್ದು ನಮ್ಮನ್ನು ಕಂಗೆಡಿಸುತ್ತವೆ.ಸುತ್ತ ಮುತ್ತ ದೊಡ್ಡ ದೊಡ್ಡ ವಾಣಿಜ್ಯ ಕಟ್ಟಡಗಳು ತಲೆ ಎತ್ತುತ್ತಿವೆ
ಮುಂದೊಂದು ದಿನ ನಾವು ಇಲ್ಲಿ ವಾಣಿಜ್ಯ ಕಟ್ಟಡ ಹಾಕಬೇಕಾಗಿ ಬಂದರೆ ಬೋರ್ ವೆಲ್ ಗೆ ನೀರು ಇಂಗಿಸಲು ಸಾಧ್ಯವೇ ?ಗೊತ್ತಿಲ್ಲ ಈ ಬಗ್ಗೆ ಆಗ ತಜ್ಞರ ಸಲಹೆ ಕೇಳಿದರಾಯಿತು ಎಂದು ಕೊಂಡಿದ್ದೇನೆ ಅಷ್ಟರ ತನಕ ಹೀಗೆ ಬಾವಿಗೆ ನೀರು ತುಂಬುತ್ತಾ ಇರಲಿ ಎಂದು..
ಒಂದು ಮಾತು ಮಾತ್ರ ಸತ್ಯವಾದುದು
ಮಂತ್ರಕ್ಕೆ ಮಾವಿನಕಾಯಿ ಉದಿರುವುದಿಲ್ಲ ಎಂಬುದು .ಮಾವಿನ ಕಾಯಿ ಬೀಳಬೇಕಾದರೆ ಕಲ್ಲು ಎಸೆಯಬೇಕು, ಒಂದು ಎಸೆತಕ್ಕೆ ಬೀಳುತ್ತದೆ ಎಂದೇನಿಲ್ಲ ಬೀಳುವ ತನಕ ಎಸೆಯುತ್ತಾ ಇರಬೇಕು ,ಅಂತರ್ಜಲ ಕುಸಿತ ನೀರಿನ ಬರದ ಬಗ್ಗೆ ಆತಂಕದ ಕಾಳಜಿಯ ಮಾತುಗಳನ್ನು ಆಡಿದರೆ ಸಾಲದು ಅದನ್ನು ಕಾರ್ಯ ರೂಪಕ್ಕೆ ತರಬೇಕು .ಸಾವಿರ ಮಾತಿಗಿಂತ ಒಂದು ಕೃತಿ ಮೇಲೆ ಎಂಬುದು ನನ್ನ ಸ್ಪಷ್ಟ ನಿಲುವು ಇದಕ್ಕೆ ನೀವೇನಂತೀರಿ ?
ಅಂದ ಹಾಗೆ ನಮ್ಮಬಾವಿಗೆ ಚಾವಣಿ ನೀರು ಇಂಗಿಸಲು ನಮಗೆ ಆದ ಖರ್ಚು ನಾಲ್ಕು ಐದು ಸಾವಿರ ರೂಪಾಯಿಗಳು ಅಷ್ಟೇ ,ಇದನ್ನು ನಮಗೆ ನಾವು ಹೇಳಿದಂತೆ ಮಣ್ಣು ಅಗೆದು ಮರಳು ಕಲ್ಲು ತುಂಬಿ ನೀರು ಇಂಗಿಸುವ ಕೆಲಸವನ್ನುಒಂದು ಆದಿತ್ಯವಾರ ಬಂದು ,ಕೇವಲ ಕೂಲಿಗಾಗಿ ಮಾಡದೆ ,ಅತ್ಯಂತ ಶ್ರದ್ಧೆಯಿಂದ , ಅತ್ಯುತ್ಸಾಹದಿಂದ ಮಾಡಿಕೊಟ್ಟು ನಾವು ಮೊದಲ ಬಾರಿಗೆ ನೀರು ಉಳಿಸುವ ಕೆಲಸವನ್ನು ಮಾಡಿದ್ದೇವೆ ಅಕ್ಕ ಎಂದು ಸಂಭ್ರಮಿಸಿದ ರವಿ ಮತ್ತು ಸುಜಾತ (ಹೆಸರು ಸರಿಯಾಗಿ ನೆನಪಿಲ್ಲ )ದಂಪತಿಗಳಿಗೆ ನಾವು ಆಭಾರಿಯಾಗಿದ್ದೇವೆ .

ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಸಂಪರ್ಕಿಸಿ 9480516684 ಡಾ.ಲಕ್ಷ್ಮೀ ಜಿ ಪ್ರಸಾದ, ಕನ್ನಡ ಉಪನ್ಯಾಸಕರು,ಸರ್ಕಾರಿ ಪದವಿ ಪೂರ್ವ ಕಾಲೇಜು, ಬೆಂಗಳೂರು.

Saturday, 21 July 2018

ದೊಡ್ಡವರ ದಾರಿ 60 ಎಳೆಯರಿಗೆ ಸ್ಫೂರ್ತಿಯಾಗಿರುವ ಸ್ಪೂರ್ತಿ ಎಸ್ ಸಮರ್ಥ್© ಡಾ‌.ಲಕ್ಷ್ಮೀ ಜಿ ಪ್ರಸಾದ

 ದೊಡ್ಡವರ ದಾರಿಯಲ್ಲಿ ಸಾಗುವವರೆಲ್ಲ ವಯಸ್ಸಿನಲ್ಲಿ ದೊಡ್ಡವರಾಗಿರಬೇಕಾಗಿಲ್ಲ.ದೊಡ್ಡತನವನ್ನು ಮೆರೆಯುವವರೆಲ್ಲ ದೊಡ್ಡವರೇ .  ನೆಲಮಂಗಲ ಸರ್ಕಾರಿ ಪಿಯು ಕಾಲೇಜಿಗೆ ವರ್ಗಾವಣೆಯಾಗಿ ಬಂದು ಮೂರು ವರ್ಷಗಳು ಆಗುತ್ತಾ ಬಂತು.ನಮ್ಮ ವೇತನ ಇಲ್ಲಿನ UCO Bank ನಲ್ಲಿ ಆಗುತ್ತಿರುವ ಕಾರಣ ನೆಲಮಂಗಲಕ್ಕೆ  ಬಂದ ಒಂದೆರಡು ವಾರದ ಒಳಗೆ ಬ್ಯಾಂಕ್ ಗೆ ಹೋಗಿ ಎಸ್ ಬಿ ಅಕೌಂಟ್ ಮಾಡಿಕೊಂಡು ಬಂದಿದ್ದೆ.ಅದು ಬಿಟ್ಟರೆ ಬ್ಯಾಂಕ್ ಗೆ ಹೋಗಿದ್ದು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಬಾರಿ!
ಈಗೆಲ್ಲಾ ಎಟಿಎಂ ಹಾಗೂ ಅಂತರ್ಜಾಲದ ಮೂಲಕ ಬ್ಯಾಂಕ್ ವ್ಯವಹಾರ ಮಾಡಲಾಗುವ ಕಾರಣ ಬ್ಯಾಂಕ್ ಗೆ ಹೋಗಬೇಕಾದ ಪ್ರಸಂಗ ಬಂದಿರಲಿಲ್ಲ.
ಇತ್ತೀಚೆಗೆ ಮನೆ ವಿಸ್ತರಿಸುವ ಸಲುವಾಗಿ ದುಡ್ಡು ಹೊಂದಿಸುವುದು ಅನಿವಾರ್ಯವಾಗಿತ್ತು. ಹಾಗಾಗಿ ನಮಗೆ ಯಾವೆಲ್ಲಾ ರೀತಿಯ ಸಾಲ ಸಿಗುತ್ತವೆ? ಅದಕ್ಕೆ ಬಡ್ಡಿ ದರ ಎಷ್ಟು  ಇತ್ಯಾದಿಗಳ ಬಗ್ಗೆ ತಿಳಿಯಲು ಯುಕೋ ಬ್ಯಾಂಕ್ ಗೆ ಹೋಗಿ ಅಲ್ಲಿನ ಮ್ಯಾನೇಜರ್ ಅನ್ನು ಕಂಡು ಮಾಹಿತಿ ಪಡೆದಿದ್ದೆ‌.ಎಲ್ಲ ಮಾಹಿತಿ ಪಡೆದು ಹಿಂತಿರುಗುವಷ್ಟರಲ್ಲಿ ಒಬ್ಬರು ಚಿನ್ನದ ಮೇಲೆ ಸಾಲ ಪಡೆಯಲು ಬಂದರು.ಆಗ ನಾನು ಚಿನ್ನದ ಮೇಲಿನ ಸಾಲಕ್ಕೆ ಬಡ್ಡಿ ದರವೆಷ್ಟು ಎಂದು ವಿಚಾರಿಸಿದಾಗ ವಾರ್ಷಿಕ ಏಳು ಶೇಕಡಾ ಎಂದೂ,ಒಂದು ವರ್ಷದೊಳಗೆ ಕಟ್ಟದೆ ಇದ್ದರೆ 1.65 ಶೇಕಡ ಹೆಚ್ಚು ಬಡ್ಡಿ ದರವೆಂದು ತಿಳಿಯಿತು. ( ಕೃಷಿಗಾಗಿ ಚಿನ್ನದ ಮೇಲೆ ಸಾಲ ತೆಗೆದರೆ ಮೂರು ಶೇಕಡಾ ಸಬ್ಸಿಡಿ ಇರುತ್ತದೆ.)ನಮಗಿನ್ನೂ ಮನೆ ಕಟ್ಟುವ ಸಾಲ ಸಿಕ್ಕಿಲ್ಲ.ಆದರೂ ಮನೆ ಕಟ್ಟಲು ಶುರು ಮಾಡಿದ್ದು, ದುಡ್ಡಿನ ಹೊಂದಿಸುವ ಸಲುವಾಗಿ
ಎರಡು ದಿನಗಳ ಹಿಂದೆ ಸ್ವಲ್ಪ ಚಿನ್ನ ತೆಗೆದುಕೊಂಡು ಯುಕೋ  ಬ್ಯಾಂಕ್ ಗೆ ಹೋದೆ.ಬಹಳ ಸೌಜನ್ಯತೆಯಿಂದ ವರ್ತಿಸಿದ ಸಿಬ್ಬಂದಿ ನನ್ನ ಚಿನ್ನವನ್ನು ತೆಗೆದುಕೊಂಡು ತೂಗಿ  ತೀರಾ ಕಡಿಮೆ ಅವಧಿಯಲ್ಲಿ ಯಾವುದೇ ಕಿರಿ ಕಿರಿ ಮಾಡದೆ  ಸಾಲ ನೀಡಿದರು.ನಾನದನ್ನು ನನ್ನ ಖಾತೆಗೆ ಜಮೆ ಮಾಡಲು ತಿಳಿಸಿದೆ‌.ನಂತರ ನಾನು ಇಲ್ಲಿ ಚಿನ್ನವನ್ನು ಇಟ್ಟದ್ದಕ್ಕೆ ದಾಖಲೆ ಕೊಡಿ ಎಂದು ಕೇಳಿದೆ.ಆಗ ಗೋಲ್ಡ್ ಕಾರ್ಡ್ ನೀಡುತ್ತೇವೆ.ಒಂದೆರಡು ಗಂಟೆ ಕಾಯಬೇಕಾಗುತ್ತದೆ‌ ಅಥವಾ ನಾಳೆ ಬನ್ನಿ ,ನಾಳೆ ಕೊಡುತ್ತೇವೆ ಎಂದು ಹೇಳಿದರು.ತರಗತಿ ನಡುವೆ ಬಿಡುವು ಇದ್ದ ಸಮಯವನ್ನು ಹೊಂದಾಣಿಕೆ ಮಾಡಿಕೊಂಡು ನಾನು ಬ್ಯಾಂಕ್ ಗೆ ಹೋಗಿದ್ದು,ನನಗೆ ಒಂದೆರಡು ಗಂಟೆ ಕಾಯಲು ಸಾಧ್ಯವಿರಲಿಲ್ಲ. ಹಾಗಾಗಿ ಒಂದಿನಿತು ಅಳುಕಿನಿಂದಲೇ ಹಿಂತಿರುಗಿದೆ.
ಮರುದಿನ ಬೆಳಗ್ಗೆ ಮತ್ತೆ ಬ್ಯಾಂಕ್ ಗೆ ಹೋಗಿ ಚಿನ್ನವನ್ನು ಇಟ್ಟಿರುವುದಕ್ಕೆ ದಾಖಲೆ ಕೇಳಿದೆ‌.ಆಗ ಅಲ್ಲಿನ ಹಿರಿಯ ಸಿಬ್ಬಂದಿ ಒಂದು ಕಾರ್ಡ್ ನೀಡಿದರು.ಅದರಲ್ಲಿ ನನ್ನ ಅಕೌಂಟ್ ನಂಬರ್ ‌ಮತ್ತು ಹೆಸರು ಇತ್ತು.ಸಾಲದ ಪ್ರಮಾಣ ನಮೂದಿಸಿತ್ತು.ಅದರ ಕೆಳಗೆ ಯಾವುದೇ ಸಹಿ, ಮೊಹರು ಇರಲಿಲ್ಲ. ಆಗ ನಾನು ಸಹಿ,ಮೊಹರು ಇರುವ ಸರಿಯಾದ ದಾಖಲೆ ಬೇಕೆಂದು ಕೇಳಿದೆ‌.ಅವರು ಯಾವುದೋ ಪುಸ್ತಕ ತೋರಿಸಿ ಅದರಲ್ಲಿ ನನ್ನ ಅಕೌಂಟ್ ನಂಬರ್ ಹೆಸರು ಮತ್ತು ಸಾಲದ ಪ್ರಮಾಣ ಬರೆದಿರುವುದನ್ನು ತೋರಿಸಿದರು‌.ಮತ್ತು ಹದಿನೈದು ಇಪ್ಪತ್ತು ಲಕ್ಷದಷ್ಟು ಸಾಲವನ್ನು ಚಿನ್ನ ಇಟ್ಟು ಬೇರೆಯವರು ಪಡೆದಿರುವುದನ್ನು ತೋರಿಸಿದರು.ಇದು ನಿಮ್ಮಲ್ಲಿ ಇರುವ ದಾಖಲೆ,ನನಗೆ ನಿಮ್ಮಲ್ಲಿ ಚಿನ್ನ ಇಟ್ಟಿರುವುದಕ್ಕೆ ದಾಖಲೆ ಬೇಕು ಎಂದು ಕೇಳಿದೆ.ಆಗ ಅವರು ಮೊದಲು ನೀಡಿದ ಕಾರ್ಡ್ ಗೆ ಮೊಹರು ಹಾಕಿ ನೀಡಿದರು ‌.ಈ ಕಾರ್ಡಿನ ಹಿಂಭಾಗದಲ್ಲಿ ನಾನು ಇಟ್ಟ ಚಿನ್ನದ ಭಾರವನ್ನು ಗ್ರಾಮ್ ಗಳಲ್ಲಿ ಬರೆದು gross weight ಮತ್ತು net weight ಗಳನ್ನು ಬರೆದಿದ್ದರು.ಇದಕ್ಕೆ ಸಹಿ ಮಿಹರು ಯಾವುದೂ ಇರಲಿಲ್ಲ ‌.ಹಾಗಾಗಿ ಅದಾಗದು,ನನಗೆ ಸರಿಯಾದ ದಾಖಲೆ ಬೇಕೆಂದು ಕೇಳಿದೆ.ಆಗ ಅವರು ರಾಷ್ಟ್ರೀಕೃತ ಬ್ಯಾಂಕ್ ಮೇಡಂ, ನಂಬಿಕೆ ಇದ್ದರೆ ಸಾಲ ತೆಗೆದುಕೊಳ್ಳಿ ಇಲ್ಲವಾದರೆ ಬೇರೆಡೆ ಚಿನ್ನ ಇಟ್ಟು ಸಾಲ ತೆಗೆದುಕೊಳ್ಳಿ ಎಂದು ಹೇಳಿದರು ‌.ಅವರಿಗೆ ಕನ್ನಡ ಬರುತ್ತಿರಲಿಲ್ಲ. ಹಾಗಾಗಿ ನಾನೇನು ಕೇಳುತ್ತಿರುವೆ,ನನ್ನ ಆಶಯವೇನು ಎಂದು ಅರ್ಥವಾಗಿಲ್ಲ ಎಂದು ತಿಳಿಯಿತು ‌.
ಹಾಗಾಗಿ ಅವರಲ್ಲಿ ಚರ್ಚಿಸದೆ ನೇರವಾಗಿ ಬ್ಯಾಂಕ್ ಮ್ಯಾನೇಜರ್ ಸ್ಫೂರ್ತಿ ಯವರನ್ನು ಭೇಟಿ ಮಾಡಿದೆ.ತುಂಬಾ ಚಿಕ್ಕ ವಯಸಿನ ಮಹಿಳಾ ಮ್ಯಾನೇಜರ್ ಹೇಗಿರುತ್ತಾರೋ ? ನಾನು ಹೇಳುವುದನ್ನು ಕೇಳಿಸಿಕೊಂಡು ನಾನು ಇಟ್ಟ ಚಿನ್ನಕ್ಕೆ ಸರಿಯಾದ ದಾಖಲೆ ನೀಡುತ್ತಾರೋ ಇಲ್ಲವೋ ? ತಮ್ಮ  ಬ್ಯಾಂಕ್ ನ ಹಿರಿಯ  ಸಿಬ್ಬಂದಿಯನ್ನು ಸಮರ್ಥಿಸಿಕೊಳ್ಳುವರೋ ಏನೋ ಎಂದು ತುಸು ಆತಂಕ ಇತ್ತು ಕೂಡ. ಆದರೆ ಚಿಕ್ಕ ವಯಸ್ಸೇ ಆಗಿದ್ದರೂ ಕೂಡ ಬಹಳ ಸಮರ್ಥ ಬ್ಯಾಂಕ್ ಮ್ಯಾನೇಜರ್ ಅವರಾಗಿದ್ದರು.ನಾನು ಚಿನ್ನ ಇಟ್ಟ ಬಗ್ಗೆ ದಾಖಲೆ ಬೇಕೆಂದು ಹೇಳಿದಾಗ ಈ ಬಗ್ಗೆ ಒಂದು ದಾಖಲೆ ಸಹಿ ಮಾಡಿಸಿ ಕೊಡುತ್ತೇನೆ ಎಂದು ಹೇಳಿ ಮ್ಯಾನೇಜರ್ ಕ್ಯಾಬಿನ್ ನಲ್ಲಿ ಒಂದೆರಡು ನಿಮಿಷ ಕುಳಿತುಕೊಳ್ಳಲು ಹೇಳಿ ,ನನಗೆ ಸಾಲ ನೀಡಿದ ಸಿಬ್ಬಂದಿ ಬಳಿಗೆ ಹೋಗಿ‌ ಮಾತಾಡಿದರು.ಕೆಲವೇ ನಿಮಿಷಗಳಲ್ಲಿ ನಾನು ಇಟ್ಟ ಚಿನ್ನಕ್ಕೆ ಸೂಕ್ತ ದಾಖಲೆ ನೀಡಿದರು.ಹಿರಿಯ ಸಿಬ್ಬಂದಿ ಪರ ನಿಲ್ಲದೆ ಗ್ರಾಹಕರಿಗೆ ನೀಡಬೇಕಾದ ದಾಖಲೆಯನ್ನು ಕ್ಷಣಮಾತ್ರದಲ್ಲಿ ಒದಗಿಸಿದ  ಚಿಕ್ಕ ವಯಸ್ಸಿನಲ್ಲೇ ಮ್ಯಾನೇಜರ್ ಆಗಿರುವ ಸ್ಫೂರ್ತಿಯವರ ಬಗ್ಗೆ ಮೆಚ್ಚುಗೆ ಮೂಡಿ,ನನ್ನ ಪರಿಚಯ ಹೇಳಿ‌ ಅವರನ್ನು ಪರಿಚಯಿಸಿಕೊಂಡೆ.  ಅವರ ಬಗ್ಗೆ ಸಂಕ್ಷಿಪ್ತ ಮಾಹಿತಿ ಕಲೆ ಹಾಕಿದೆ
ಅವರು  ವಿಜ್ಞಾನ  ಪದವಿ ಮುಗಿಯುತ್ತಲೇ ಬ್ಯಾಂಕ್ ನಡೆಸುವ IBPS ಪರೀಕ್ಷೆಗೆ ಕಟ್ಟಿ ಉತ್ತೀರ್ಣರಾಗಿ ಯುಕೋ ಬ್ಯಾಂಕ್ ನ ಸಂದರ್ಶನ ಎದುರಿಸಿ ಪ್ರೊಬೆಷನರಿ ಆಫೀಸರ್ ಆಗಿ ಆಯ್ಕೆಯಾದರು. ಮೂರು ವರ್ಷಗಳು ಮುಗಿಯುತ್ತಲೇ ಮ್ಯಾನೇಜರ್ ಹುದ್ದೆಗೆ ಮತ್ತೆ ಪರೀಕ್ಷೆ ಬರೆದು ಅಯ್ಕೆಯಾದರು‌.ಆರು ವರ್ಷಗಳಲ್ಲಿ ಏಳು ಜಿಲ್ಲೆಗಳಲ್ಲಿ ಕೆಲಸ ಮಾಡಿ ಅನುಭವ ಪಡೆದು ಪ್ರಸ್ತುತ ಸ್ವ ಸಾಮರ್ಥ್ಯದಿಂದ ನೆಲಮಂಗಲದ ಯುಕೊ ಬ್ಯಾಂಕ್ ಗೆ ಮ್ಯಾನೇಜರ್ ಆಗಿ ಒಂದು ವಾರದ ಹಿಂದೆಯಷ್ಟೇ ವರ್ಗಾವಣೆ ಹೊಂದಿ ಬಂದಿದ್ದಾರೆ‌. ಎಂಬಿಎ ಓದಿರುವ, ಒಬ್ಬ ಚಿಕ್ಕ ‌ಮಗಳು‌ ಮತ್ತು ಪತಿಯೊಂದಿಗಿನ ಸುಖೀ ಸಂಸಾರವನ್ನು ನಿಭಾಯಿಸುತ್ತಲೇ ಮೂವತ್ತೊಂದರ ಎಳೆಯ ವಯಸ್ಸಿನಲ್ಲಿಯೇ ಬ್ಯಾಂಕ್ ಮ್ಯಾನೇಜರ್ ಆಗಿರುವ ಸಾಮರ್ಥ್ಯವಂತೆ ಸ್ಪೂರ್ತಿ ಎಸ್ ಸಮರ್ಥ ನಿಜಕ್ಕೂ ಇಂದಿನ ಎಳೆಯರಿಗೆ ಸ್ಫೂರ್ತಿಯಾಗಿದ್ದಾರೆ.


ದೊಡ್ಡವರ ದಾರಿ 59 ವಾಸ್ತವತೆಯ ಅರಿವು ಮೂಡಿಸಿದ ಶ್ರೀಮತಿ ಶಾಂತಾ ಆಚಾರ್ © ಡಾ.ಲಕ್ಷ್ಮೀ ಜಿ ಪ್ರಸಾದ

ಸುಮಾರು ಹದಿನೈದು ಹದಿನೆಂಟು ವರ್ಷಗಳ ಹಿಂದೆ ನಾನು ಮಂಗಳೂರಿನ ಚಿನ್ಮಯ ಪ್ರೌಢ ಶಾಲೆಯಲ್ಲಿ ಸಂಸ್ಕೃತ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದೆ.ಇಲ್ಲಿ ಕಳೆದ ಮೂರು ನಾಲ್ಕು ವರ್ಷಗಳು ನನ್ನ ಪಾಲಿಗೆ ಅವಿಸ್ಮರಣೀಯವಾದುದು.ಇಲ್ಲಿ ಕೆಲಸ ಮಾಡುವ ಎಲ್ಲರೂ ಒಂದೇ ದೋಣಿಯ ಪಯಣಿಗರಾಗಿದ್ದೆವು.ಆರ್ಥಿಕವಾಗಿ ಅಷ್ಟೇನೂ ಬಲಾಢ್ಯರಲ್ಲದೇ ಇದ್ದರೂ ಎಲ್ಲರಲ್ಲೂ ಅಪಾರ ಜೀವನೋತ್ಸಾಹವಿತ್ತು.ಕರ್ತವ್ಯವೆಂಬಂತೆ ಕಾಟಾಚಾರಕ್ಕೆ ಪಾಠ ಮಾಡದೆ ವಿದ್ಯಾರ್ಥಿಗಳಿಗೆ ಪಠ್ಯ ಮತ್ತು ಪಠ್ಯೇತರ ವಿಷಯಗಳಲ್ಲೂ ತರಬೇತಿ ನೀಡುತ್ತಿದ್ದೆವು. ನಮ್ಮಲ್ಲಿ ಶ್ರೀಮತಿ ಶಾಂತಾ ಆಚಾರ್ ಎಂಬ ಶಿಕ್ಷಕಿ ಇದ್ದರು.ಇವರ ಪತಿ ಬ್ಯಾಂಕ್ ಮ್ಯಾನೇಜರ್ ಆಗಿದ್ದು ಇವರಿಗೆ ಕೆಲಸ ಮಾಡುವ ದುಡಿದು ಗಳಿಸುವ ಅನಿವಾರ್ಯತೆ ಏನೂ ಇರಲಿಲ್ಲ. ಇಬ್ಬರೂ ಮಕ್ಕಳು ಪ್ರತಿಭಾವಂತರಾಗಿದ್ದು ದೊಡ್ಡ ಮಗ ಅಶ್ವಿನ್ ಮಂಗಳೂರಿನ ಕಸ್ತೂರಬಾ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪರಾಗಿದ್ದರೆ ಇನ್ನೊಬ್ಬ ಮಗ ವಿದೇಶದಲ್ಲಿ ಇಂಜಿನಿಯರ್ ಆಗಿದ್ದರು.ಆದರೂ ಒಂದಿನಿತೂ ಅಹಂಕಾರ ಮೇಲರಿಮೆ ಶಾಂತಾ ಆಚಾರ್ ಅವರಿಗಿರಲಿಲ್ಲ.ನಮ್ಮಲ್ಲಿ ಒಂದಾಗಿ ಎಲ್ಲರಂತೆ ದುಡಿಯುತ್ತಿದ್ದರು.ಇವರು ಸಂಗೀತ ವಿದುಷಿಯಾಗಿದ್ದರು.ಇವರು ಇವರಿಗೆ ನಿಗಧಿತವಾಗಿರುವ ಪಾಠದ ಅವಧಿಯಲ್ಲಿ ಪಾಠ ಮಾಡಿ ಕೊನೆಯಲ್ಲಿ ಒಂದು ಗಂಟೆ ಶಾಲೆಯ ಮಕ್ಕಳಿಗೆ ಉಚಿತವಾಗಿ ಸಂಗೀತ ಹೇಳಿಕೊಡುತ್ತಾ ಇದ್ದರು.ಪ್ರತಿಭಾ ಕಾರಂಜಿ ಸೇರಿದಂತೆ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಮಕ್ಕಳನ್ನು ತಯಾರು ಮಾಡಿ ಬಹುಮಾನ ಬರುವಂತೆ ಮಾಡಿ ತಾನು ದುಡಿಯುವ ಚಿನ್ಮಯ ವಿದ್ಯಾಸಂಸ್ಥೆಗೆ ಕೀರ್ತಿಯನ್ನು ತಂದು ಕೊಟ್ಟಿದ್ದರು.ಇವರೊಂದಿಗೆ ಅರುಣಾ ಟೀಚರ್ ಮೋಹಿನಿ ಟೀಚರ್ ಉಷಾ ಟೀಚರ್ ಮೊದಲಾದವರು ಕೈಜೋಡಿಸಿ ಮಕ್ಕಳನ್ನು ಸಿದ್ಧಪಡಿಸುತ್ತಿದ್ದರು.ನಾನು ಈ ಶಾಲೆಗೆ ಶಿಕ್ಷಕಿಯಾಗಿ ಬಂದಾಗ ನನ್ನ ಅಭಿವ್ಯಕ್ತಗೂ ಇಲ್ಲಿ ಸೂಕ್ತ ವೇದಿಕೆ ದೊರೆಯಿತು. ಚಿಕ್ಕಂದಿನಲ್ಲಿಯೇ ನಾಟಕ ರಚನೆ ಅಭಿನಯದಲ್ಲಿ ಆಸಕ್ತಿ ಇದ್ದ ನಾನು ಇಲ್ಲಿನ ಮಕ್ಕಳಿಗಾಗಿ ಹಸಿರು ಕರಗಿದಾಗ,ನೀರಕ್ಕನ ಮನೆ ಕಣಿವೆ ಮೊದಲಾದ ನಾಟಕಗಳನ್ನು ರಚಿಸಿದೆ.ಇವುಗಳನ್ನು ವೇದಿಕೆಗೆ ತರುವಲ್ಲಿ ಅನುಭವೀ ಶಿಕ್ಷಕಿ ಅರುಣಾ ಸಹಾಯ ಮಾಡಿದ್ದರು ‌.ನನ್ನ ನಾಟಕಗಳಲ್ಲಿ ಅಲ್ಲಲ್ಲಿ ಹಾಡುಗಳು ಬರುತ್ತವೆ.ಇವಕ್ಕೆ ರಾಗ ಸಂಯೋಜನೆ ಮಾಡಿ ವಿದ್ಯಾರ್ಥಿಗಳಿಗೆ ಹೇಳಿಕೊಡುವುದು ಒಂದು ಸವಾಲಿನ ವಿಷಯವಾಗಿತ್ತು.ಈ ಸಂದರ್ಭದಲ್ಲಿ ನನಗೆ ಪೂರ್ಣ ಬೆಂಬಲವಿತ್ತವರು ಸಂಗೀತಜ್ಞರಾದ ಶಾಂತಾ ಆಚಾರ್.ನನ್ನ ನಾಟಕಗಳ ಹಾಡುಗಳನ್ನು ರಾಗಕ್ಕೆ ಅನುಗುಣವಾಗಿ ಸಣ್ಣ ಪುಟ್ಟ ಬದಲಾವಣೆ ಮಾಡಿ ಅದಕ್ಕೆ ರಾಗ ಸಂಯೋಜನೆ ಮಾಡಿ ವಿದ್ಯಾರ್ಥಿಗಳಿಗೆ ಹೇಳಿಕೊಟ್ಟು ನಾಟಕಕ್ಕೆ ಒಂದು ವಿಶಿಷ್ಠವಾದ ಮೆರುಗನ್ನು ತಂದು ಕೊಟ್ಟಿದ್ದರು.ಇಲ್ಲಿ ಮುಖ್ಯೋಪಾಧ್ಯಾಯಿನಿಯಾಗಿದ್ದ ಶಕುಂತಲಾ ಸಾಂತ್ರಾಯ ಸ್ವತಃ ಓರ್ವ ಕವಯಿತ್ರಿ ಆಗಿದ್ದರು.ಪ್ರತಿ ವರ್ಷ ಶಾಲಾ ವಾರ್ಷಿಕೋತ್ಸವಕ್ಕೆ ಅವರೊಂದು ಹಾಡು ಬರೆದು ಕೊಡುತ್ತಿದ್ದರು.ಅದಕ್ಕೆ ಕೂಡ ಶಾಂತಾ ಅಚಾರ್ ಅವರು ರಾಗ ಸಂಯೋಜನೆ ಮಾಡಿ ಮಕ್ಕಳಲ್ಲಿ ಹಾಡಿಸುತ್ತಾ ಇದ್ದರು.ಇಂತಹ ಸಂದರ್ಭದಲ್ಲಿ ಒಂದು ದಿನ ನಾನು ಆತ್ಮೀಯರಾದ ಶಾಂತಾ ಮೇಡಂ ಅವರಲ್ಲಿ " ನನಗೆ ರಾಗ ಸಂಯೋಜನೆ ಮಾಡಿ ಹಾಡಲು ಬರುವುದಿಲ್ಲ .ಇದರಿಂದಾಗಿ ನನಗೆ ನನ್ನ  ನಾಟಕಗಳನ್ನು ರಂಗದಲ್ಲಿ ಪ್ರಸ್ತಿತಿ ಗೊಳಿಸಲು ಕಷ್ಟವಾಗುತ್ತದೆ. ಇದಕ್ಕಾಗಿ ಬೇರೆಯವರನ್ನು ಅವಲಂಭಿಸಬೇಕಾಗುತ್ತದೆ‌.ನನಗೂ ನಿಮ್ಮಂತೆ ರಾಗ ಸಂಯೋಜನೆ ಮಾಡಿ ಹಾಡಲು ಬಂದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಹೇಳಿದೆ.ಆಗ ಅವರು" ಎಲ್ಲವೂ ತನಗೇ ಬೇಕೆಂಬ ಸ್ವಾರ್ಥ ಇರಬಾರದು ಲಕ್ಷ್ಮೀ,ನೀವು ರ‍್ಯಾಂಕ್ ವಿಜೇತೆ ನಿಮಗೆ ಒಳ್ಳೆಯ ಬುದ್ದಿವಂತಿಕೆ ಇದೆ,ಬರವಣಿಗೆಯ ಶಕ್ತಿ ಇದೆ.ನಿಮ್ಮ ಅನೇಕ ಲೇಖನಗಳು ಪ್ರಕಟವಾಗಿವೆ. ಅನೇಕ ಕಥೆಗಳು ಕೂಡ ಪ್ರಕಟವಾಗಿವೆ‌.ಒಳ್ಳೆಯ ಮನೆ  ಗಂಡ ಮಗ ಸಂಸಾರ ಇದೆ.ಇರುವುದನ್ನು ಬಿಟ್ಟು ಇಲ್ಲದೇ ಇರುವ ಕಡೆ ಚಿಂತಿಸಬಾರದು.ಎಲ್ಲವನ್ನೂ ದೇವರು  ನಿಮಗೇ ಕೊಟ್ಟರೆ ಬೇರೆಯವರಿಗೇನೂ ಬೇಡವೇ ? ಇರುವುದರಲ್ಲಿ ತೃಪ್ತಿ ಪಟ್ಟು ನೆಮ್ಮದಿಯಿಂದ ಬದುಕಬೇಕು " ಎಂದು ತಿಳಿಸಿ ಹೇಳಿದರು.ತಕ್ಷಣವೇ ನಾನು ಬದಲಾದೆ.ಅವರು ವಾಸ್ತವದ ಅರಿವನ್ನು ಮೂಡಿಸಿದ್ದರು‌.ಎಲ್ಲದರಲ್ಲೂ ಎಲ್ಲರೂ ಪರಿಣತಿ ಸಾಧಿಸಲು ಸಾಧ್ಯವಿಲ್ಲ ‌ಎಲ್ಲದರಲ್ಲೂ ತಾನೇ ಮುಂದಿರಬೇಕೆಂದು ಬಗೆದರೆ ಯಾವುದೊಂದರಲ್ಲೂ ಪರಿಣತಿ ಸಾಧಿಸಲು ಸಾಧ್ಯವಾಗುವುದಿಲ್ಲ ಎಂಬ ವಾಸ್ತವದ ಅರಿವು ಮೂಡಿತು ‌.ಮತ್ತು ತಮಗೇ ಎಲ್ಲವೂ ಬೇಕೆಂಬ ಸ್ವಾರ್ಥ ಒಳ್ಳೆಯದಲ್ಲ ಎಂಬುದು ಮನವರಿಕೆಯಾಗಿ ನನಗೆ ಒಲಿಯದ ವಿಚಾರಗಳ ಸುದ್ದಿ ಬಿಟ್ಟು ನನಗೊಲಿದ ವಿದ್ಯೆಯಲ್ಲಿ ಪರಿಣತಿ ಪಡೆಯಲು ಯತ್ನ ಮಾಡಿದೆ‌.ಎಲ್ಲವೂ ತನಗೇ ಬೇಕೆಂಬ ಸ್ವಾರ್ಥ ಇರಬಾರದು ಎಂಬ ಮಾತನ್ನು ಸದಾ ನೆನಪಿನಲ್ಲಿ ಇಟ್ಟು ಕೊಂಡಿರುವೆ‌.

Friday, 15 June 2018

ಬದುಕ ಬಂಡಿಯಲಿ 22 ನಾನು‌ ಮತ್ತು ಮಗ ಬಚಾವಾಗಿದ್ದೆವು!

ನಾನು‌ ಮತ್ತು ಮಗ ಬಚಾವಾಗಿದ್ದೆವು!

ಇದನ್ನು ಓದುತ್ತಿದ್ದಂತೆ ಸುಮಾರು ವರ್ಷಗಳ ಹಿಮದಿನ ಘಟನೆ ನೆನಪಾಯಿತು!
.ಸುಮಾರು ಹದಿನೇಳು ವರ್ಷಗಳ ಹಿಂದಿನ‌ಕಥೆಯಿದು.ಮಗ ಅರವಿಂದ್ ಇನ್ನೂ ಎರಡು ಮೂರು ವರ್ಷದ ಮಗು.
ನಾವಾಗ ಮಂಗಳೂರಿನಲ್ಲಿ ಇದ್ದೆವು.ಒಂದು ದಿನ ತಾಯಿ ಮನೆಗೆ ಮಗನ ಜೊತೆ ಹೊರಟಿದ್ದೆ.ಹಾಗಾಗಿ ಮಂಗಳೂರಿನಿಂದ ಕಾಸರಗೋಡಿಗೆ ಹೋಗುವ ಖಾಸಗಿ ವೇಗದೂತ ಬಸ್ಸನ್ನು ಹತ್ತಿದ್ದೆ.
ಬಸ್ ಪಂಪ್ ವೆಲ್ ತಲುಪಿದಾಗ ಬಸ್ ಹತ್ತಿದ ಒಬ್ಬ ವ್ಯಕ್ತಿ ಮತ್ತು ಡ್ರೈವರ್ ನಡುವೆ ಜಗಳ ಶುರುವಾಯಿತು‌.ಒಬ್ಬರಿಗೊಬ್ಬರು ಬೈದಾಡುತ್ತಿದ್ದರು‌.ಜಗಳವಾಡುತ್ತಲೇ ಡ್ರೈವರ್ ಬಸ್ಸನ್ನು ಯದ್ವಾ ತದ್ವಾ ಚಾಲನೆ ಮಾಡುತ್ತಿದ್ದರು‌.ಬಸ್ ನ ಕಂಡಕ್ಟರ್ ಅನ್ನು ಕರೆದು " ಅವರ ಜಗಳವನ್ನು ನಿಲ್ಲಿಸಿ,ಜಗಳ ನಿಂತ ನಂತರ ಬಸ್ಸು ಚಾಲನೆ ಮಾಡಲು ಹೇಳಿ" ಎಂದು ವಿನಂತಿಸಿದೆ‌.ಆತ ಒಮ್ಮೆ ಅವರಿಗೆ ತಿಳಿ ಹೇಳಲು ಯತ್ನ ಮಾಡಿದನಾದರೂ ಪ್ರಯೋಜನವಾಗದೆ ಕೊನೆಗೆ ಹಿಂದೆ ಹೋಗಿ ನಿಂತರು
ಆಗ ಅಲ್ಲಿದ್ದ ಸ್ವಲ್ಪ ವಿದ್ಯಾವಂತರಂತೆ ಕಾಣುತ್ತಿದ್ದ ಪ್ರಯಾಣಿಕರಾದ ಒಬ್ಬರಲ್ಲಿ " ನೋಡಿ ಇವರು ಹೀಗೆ ಡ್ರೈವ್ ಮಾಡಿದರೆ ನಾವು‌ಮನೆ ತಲುಪಲಾರೆವು .ಅವರಿಗೆ ಬಸ್ ಸೈಡಿಗೆ ಹಾಕಲು ಹೇಳಿ ಎಂದು ತಿಳಿಸಿದರ ಆಗ ಅವರು ಒಮ್ಮೆ ಎದ್ದು ನಿಂತರಾದರೂ‌ ಮತ್ತೆ ಅಳುಕಿ ಪೇಪರ್ ಓದತೊಡಗಿದರು.ಅಷ್ಟರಲ್ಲಿ ತೊಕ್ಕೋಟು ಬಂತು.ಅಲ್ಲಿ ಬಸ್ ಸ್ಟಾಪ್ ಇದೆ‌ಬಸ್ ನಿಂತ ತಕ್ಷಣ ನಾನು‌ಮಗನನ್ನು ಎತ್ತಿಕೊಂಡು ಇಳಿದೆ .
ನಾನು ಹೊಸಂಗಡಿ ತನಕ ಟಿಕೆಟ್ ತೆಗೆದುಕೊಂಡಿದ್ದೆ‌.ಆದರೆ ಆ ಬಸ್ ನಲ್ಲಿ ಮುಂದುವರಿಯುವುದು ಅಪಾಯ ಎನಿಸಿ ಅರ್ಧದಲ್ಲಿಯೇ ಇಳಿದೆ‌ನಂತರ ಬಂದ ಬಸ್ ಹತ್ತಿ ಮತ್ತೆ ಹೊಸಂಗಡಿಗೆ ಟಿಕೆಟ್ ತೆಗೆದೆ.ನಾನಿದ್ದ ಬಸ್ ತಲಪಾಡಿ ಸಮೀಪಿಸುವಷ್ಟರಲ್ಲಿ ರಸ್ತೆ ಇಡೀ ಜಾಮ್ ಅಗಿತ್ತು‌ .ಜನರೆಲ್ಲ ಗಾಭರಿಯಿಂದ ಅತ್ತ ಇತ್ತ‌ಓಡಾಡುತ್ತಿದ್ದರು.
ಹೌದು‌ ಮೊದಲು ನಾನಿದ್ದ ಬಸ್ ಭೀಕರ ಅಫಘಾತಕ್ಕೆ ಈಡಾಗಿತ್ತು .ರಸ್ತೆಯಿಂದ ಉರುಳಿ ಗದ್ದೆಗೆ ಬಿದ್ದಿತ್ತು‌.ಅ ಬಸ್ ನಲ್ಲಿ ಇದ್ದಿದ್ದೇ ಹತ್ತು ಹದಿನೈದು ಜನರು‌.ಅವರಲ್ಲಿ ಏಳೆಂಟು ಜನರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು.ಎಲ್ಲರಿಗೂ ಗಾಯವಾಗಿತ್ತು‌
ಸದ್ಯ ನನ್ನನ್ನು ‌ಮತ್ತು ಮಗನನ್ನು ದೇವರೇ ಕಾಪಾಡಿರಬೇಕು ನಾವು ತೊಕ್ಕೋಟಿನಲ್ಲಿ ಇಳಿಯದೆ ಅದೇ ಬಸ್ಸಿನಲ್ಲಿ ಮುಂದುವರಿದಿದ್ದರೆ ನಮಗೂ ಇದೇ ಗತಿ ಆಗಿರುತ್ತಿತ್ತು‌.ನನಗೆ ಇಳಿಯುವಂತೆ ಪ್ರೇರಣೆ ಎಲ್ಲಿಂದ ಬಂತೋ ತಿಳಿಯದು‌.ಇದು ಸಮಯ ಪ್ರಜ್ಞೆಯೇ ಆಯುರ್ಬಲವೋ ನನಗೆ ತಿಳಿಯದು .ಅದೇನೇ ಇದ್ದರೂ ನಾವು ಆ ದಿನ ಅಪಾಯದಿಂದ ಬಚಾವಾಗಿದ್ದೆವು.

Tuesday, 12 June 2018

ಬದುಕ ಬಂಡಿಯಲಿ 21- ನಾನು ತುಳುನಾಡಿನವಳು © ಡಾನಾನು ತುಳುನಾಡಿನವಳು © ಡಾ ಲಕ್ಷ್ಮೀ ಜಿ ಪ್ರಸಾದ

ನಾನು ತುಳುನಾಡಿನವಳು © ಡಾನಾನು ತುಳುನಾಡಿನವಳು © ಡಾ ಲಕ್ಷ್ಮೀ ಜಿ ಪ್ರಸಾದ

ನಾನ್ಯಾವ ನಾಡಿನವಳು ?
ಹೀಗೊಂದು ಜಿಜ್ಞಾಸೆ ಸದಾ ನನ್ನನ್ನು ಕಾಡುತ್ತಾ ಇರುತ್ತದೆ .ನನ್ನ ಊರು ಯಾವುದು ಎಂದು ಕೇಳಿದಾಗ ನಾನು ಹೇಳುವುದು

" ನನ್ನ ತಂದೆ ಮನೆ ಕಾಸರಗೋಡು ಜಿಲ್ಲೆಯ  ಕೋಳ್ಯೂರು ಎಂಬ ಪುಟ್ಟ ಗ್ರಾಮದ ವಾರಣಾಸಿ ಮನೆ ಬಗ್ಗೆ "

ಕೇಳುವವರಲ್ಲಿ ನನ್ನ ಗಂಡನ ಮನೆ ಯಾವುದು ಎಂಬ ಕುತೂಹಲ ಕಂಡರೆ ನಾನು ಅದನ್ನು ನೇರವಾಗಿ ಹೇಳುತ್ತೇನೆ ನನ್ನ ಗಂಡ ಪ್ರಸಾದ್ ಮನೆ ಬಂಟ್ವಾಳ ತಾಲೂಕಿನ  ಕೋಡಪದವಿನ ಸರವು ಎಂಬ ಮನೆ ಇದು ನಮ್ಮ ಕುಟುಂಬದ ಮನೆಯ ಹೆಸರಲ್ಲ ನನ್ನ ಪತಿಯ ಅಜ್ಜ ಎಲ್ಲಿಂದಲೋ ಬಂದು ಕೋಡಪದವು ಸಮೀಪದ ಪಂಜಿಗದ್ದೆ ಎಂಬ ಪರಿಸರದ ಒಂದಷ್ಟು ಜಾಗ ಖರೀದಿಸಿ ನೆಲೆಯಾದವರು ಅವರು ತೀರ ಸಣ್ಣ ವಯಸ್ಸಿನಲ್ಲಿ ತೀರಿ ಹೋದ ಕಾರಣ ಅವರ ಮಕ್ಕಳಿಗೆ ಅವರ ಮೂಲ ಯಾವುದು ಎಂದು ತಿಳಿದಿಲ್ಲ ಮನೆದೇವರು ಕೂಡ ಯಾರೆಂದು ತಿಳಿದಿಲ್ಲ ಅಲ್ಲಿಂದ ಆಸ್ತಿ ಭಾಗವಾಗಿ ಅಲ್ಲಿಂದ ಎರಡು ಕಿಮೀ ದೂರದ ಸರವು ಎಂಬ ಪ್ರದೇಶದಲ್ಲಿ ಸ್ವಲ್ಪ ಜಾಗ ಪಡೆದು ನೆಲೆಯಾದವರು ನನ್ನ ಪ್ರಸಾದ ತಂದೆಯವರು ನಾನು ಮದುವೆಯಾಗಿ ಬಂದದ್ದು ಇದೇ ಮನೆಗೆ ಬಂದದ್ದು ಮಾತ್ರ ಅಲ್ಲಿ ಬದುಕಿದ್ದು ಬೆರಳೆಣಿಕೆಯಷ್ಟು ದಿನಗಳು
ಇಪ್ಪತ್ತೈದು ವರ್ಷಗಳ ಹಿಂದೆ ಮದುವೆಯಾದ ಮೇಲೆ ಓದಿಸುವ ಮನಸ್ಥಿತಿ ನಮ್ಮ ಸಮಾಜದಲ್ಲಿ ಇರಲಿಲ್ಲ ನಮ್ಮ ಕುಟುಂಬದ ಮಂದಿಯೂ ಅದಕ್ಕೆ ಹೊರತಾಗಿ ಇರಲಿಲ್ಲ ಇದೇ ಕಾರಣಕ್ಕೆ ನಾನು ಪ್ರಸಾದ ಒಂದಿಗೆ ಮನೆ ಬಿಟ್ಟು ಹೊರ ನಡೆದು ನಾನು ಓದುವ ಕಟೀಲು ಕಾಲೇಜು ಬಳಿ ಮನೆ ಮಾಡಿ ಸಂಸಾರ ಪ್ರಾರಂಭಿಸಿದೆವು ಅನೇಕ ಏಳು ಬೀಳುಗಳನ್ನೂ ಕಂಡೆವು ಅಲ್ಲಿದ್ದದ್ದು ಒಂದೇ ವರುಷ ಅಲ್ಲಿಂದ ಮತ್ತೆ ಮಂಗಳೂರಿನಲ್ಲಿ ಹತ್ತು ವರ್ಷ ಬದುಕಿದೆವು ಹೊಟ್ಟೆಪಾಡಿಗಾಗಿ ಉದ್ಯೋಗ ಅರಸುತ್ತಾ ಪ್ರಸಾದ ಬೆಂಗಳೂರಿಗೆ ಸಪ್ಟೆಂಬರ್ 2004 ರಲ್ಲಿ ಬಂದಾಗ ನಾನು ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನಲ್ಲಿ ತಾತ್ಕಾಲಿಕ ನೆಲೆಯಲ್ಲಿ ಸಂಸ್ಕೃತ ಉಪನ್ಯಾಸಕಿಯಾಗಿದ್ದೆ
ಶೈಕ್ಷಣಿಕ ವರ್ಷದ ಮಡುವೆ ಕೆಲಸ ಬಿಡುವುದು ಸರಿಯಲ್ಲ ವೆಂದು ಮಾರ್ಚ್ 2005 ರ ತನಕ ಕೆಲಸದಲ್ಲಿ ಮುಂದುವರಿದು ಪ್ರಥಮ ಪಿಯುಸಿ ಮೌಲ್ಯ ಮಾಪನ ಮಾಡಿ‌ಕೊಟ್ಟು ಕಾಲೇಜು  ಮ್ಯಾಗಜೀನ್ ಕೆಲಸವನ್ನು ಮುಗಿಸಿಕೊಟ್ಟು ಗೌರವದಿಂದ ಅಲ್ಲಿಂದ ರಿಲೀವ್ ಆಗಿ ಬೆಂಗಳೂರಿಗೆ ಬಂದೆ ಬಂದ ಮರುದಿನವೇ ಎಪಿಎಸ್ ಕಾಲೇಜಿನ ಕನ್ನಡ ಉಪನ್ಯಾಸಕ ಹುದ್ದೆಗೆ walk in interview ಇದ್ದದ್ದು ಗೊತ್ತಾಗಿ ಮಗನನ್ನು ಗಾಡಿಯಲ್ಲಿ ಕೂರಿಸಕೊಂಡು ವಿಳಾಸ ಹುಡುಕುತ್ತಾ ಎನ್ ಆರ್ ಕಾಲೋನಿಗೆ ತಡವಾಗಿ ಬಂದು ಕೊನೆಯ ಅಭ್ಯರ್ಥಿಯಾಗಿ ಸಂದರ್ಶನ ಎದುರಿಸಿ ಆಯ್ಕೆಯಾದೆ
ಬನಶಂಕರಿ ತೃತೀಯ ಬಡಾವಣೆಯಲ್ಲಿ ಬಾಡಿಗೆ ಮನೆ ಹಿಡಿದಿದ್ದೆವು
ಅಲ್ಲಿಂದ 2008 ರಲ್ಲಿ ಈಗಿನ  ಅಂಗೈ ಅಗಲದ ನಮ್ಮ ಪುಟ್ಟದಾದ ಸ್ವಂತ ಮನೆಗೆ ಬಂದೆವು ಮತ್ತೆ 2009 ರಲ್ಲಿ ಬೆಳ್ಳಾರೆಗೆ ಉಪನ್ಯಾಸಕಿಯಾಗಿ ಹೋದೆ 2015 ರಲ್ಲಿ ಮತ್ತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಕಾಲೇಜಿಗೆ ವರ್ಗಾವಣೆ ಪಡೆದು ಬಂದೆ
ಹಾಗಾಗಿ ನಮಗೆ ನಾವೆಲ್ಲಿಯವರುಎಂದು ಕೇಳಿದರೆ ಒಂದಿನಿತು ತಬ್ಬಿಬ್ಬಾಗುತ್ತೇನೆ ಕೊನೆಯಲ್ಲಿ ನಾನು "ತುಳುನಾಡಿನ ವರು "  ಎನ್ನುತ್ತೇನೆ
ಯಾಕೆಂದರೆ ನನ್ನ ಮಾತೃಭಾಷೆ ಹವ್ಯಕ ಕನ್ನಡ ವೃತ್ತಿ ಕನ್ನಡ ಉಪನ್ಯಾಸಕಿಯಾಗಿ, ಆದರೂ ನನ್ನನ್ನು ಸೆಳೆದದ್ದು ತುಳು ಸಂಸ್ಕೃತಿ ಕೈ ಹಿಡಿದು ಸಲಹಿದವಳು ತುಳುವಪ್ಪೆ
ಇಷ್ಟಾಗಿಯೂ ಇತ್ತೀಚೆಗೆ ಕನ್ನಡ ಜಾನಪದ ಪರಿಷತ್ ಮೈಸೂರು ವಿಭಾಗದಿಂದ ದಕ್ಷಿಣ ಕನ್ನಡ ಜಿಲ್ಲೆಯಿಂದ ನನ್ನನ್ನು ಜಾನಪದ ಪ್ರಪಂಚ ಪ್ರಶಸ್ತಿ ಗೆ ಆಯ್ಕೆಮಾಡಿದಾಗ ಅವರು ಕಾಸರಗೋಡಿನವರು ದಕ್ಷಿಣ ಕನ್ನಡ ಜಿಲ್ಲೆಯಿಂದ ಅವರನ್ನು ಆಯ್ಕೆ ಮಾಡಿದ್ದು ಸರಿಯಲ್ಲ ಎಂದು ಆಕ್ಷೇಪ ಮಾಡಿದ್ದು ತಿಳಿಯಿತು ತಕ್ಷಣವೇ ನಾನು ದಕ್ಷಿಣ ಕನ್ನಡ ಜಿಲ್ಲೆಯ  ಬಂಟ್ವಾಳ ತಾಲೂಕಿನ  ಮದುವೆಯಾಗಿ ಬಂದ ಮನೆಯ ನನ್ನ ಪತಿ ಪ್ರಸಾದ ಮನೆ ವಿಳಾಸ ಮತ್ತು ಇನ್ನೂ ಅಲ್ಲಿಯೇ ಓಟಿನ ಹಕ್ಕು ಇರುವ ಬಗ್ಗೆ ವೋಟರ್ಸ ಕಾರ್ಡಿನ ದಾಖಲೆ ಒದಗಿಸಿ ದಾಖಲೆ ಪ್ರಕಾರ ನಾನು ದಕ್ಷಿಣ ಕನ್ನಡ ಜಿಲ್ಲೆಯ ವಳು ಆದರೆ ಮಾನಸಿಕವಾಗಿ ನಾನು ಅಲ್ಲಿಯವಳಲ್ಲ ಅವರೆಂದೂ ನನ್ನನ್ನು ಸೊಸೆಯಾಗಿ ಸ್ವೀಕರಿಸಲಿಲ್ಲ ಅದನ್ನು ತಪ್ಪು ಎಂದು ದೂಷಿಸಲಾರೆ .ಸೆರಗು ತಲೆಗೆ ಹೊದ್ದು ಬೆಳಗ್ಗೆ ಎದ್ದು ಹೊಸಿಲಿ ಬರೆದು ಮನೆಯೊಳಗೆ ಗೃಹಿಣಿಯಾಗಿರುವ ಸೊಸೆಯನ್ನು ನಿರೀಕ್ಷಿಸಿದ ಸಂಪ್ರದಾಯ ವಾದಿ ಬ್ರಾಹ್ಮಣ ಕುಟುಂಬದ ಜನ ನಡು ರಾತ್ರಿ ನಢಯುವ ಭೂತಕೋಲವನ್ನು ರೆಕಾರ್ಡ್  ಕ್ಯಾಮರಾ ಹಿಡಿದುಕೊಂಡು ಜಾತಿ ನೀತಿ ಧರ್ಮದ ಗಡಿ ದಾಟಿ ಸಾಗುವ ನನ್ನಂಥ ಟಪೋರಿಯನ್ನು ಸೊಸೆಯಾಗಿ ಹೇಗೆ ತಾನೆ ಸ್ವೀಕರಿಸಿಯಾರು ಅಲ್ಲವೇ ?
ಬೆಂಗಳೂರು ಅನ್ನವನ್ನು ಕೊಟ್ಟ ಊರು ಎಂಬ ಕೃತಜ್ಞತೆ ಇರುವುದಾದರೂ ನಾನು ಬೆಂಗಳೂರಿನವಳು ಎಂಬ ಭಾವ ನನಗಿನ್ನೂ ಬಂದಿಲ್ಲ ಬಾರದೆ ಇರುವುದನ್ನು ಹೇಗೆ ಒಪ್ಪಲಿ ?
ಹಾಗಾಗಿ ನಾನು ಎಲ್ಲಿಯವಳು ಕೇಳಿದರೆ ಇಂದಿಗೂ ಹೇಳುವುದು ನಾನು ತುಳುನಾಡಿನವಳು ಗಡಿನಾಡಿನವಳು ಎಂದು .ಬೆಳ್ಳಾರೆಯಲ್ಲಿ ನಾಲ್ಕು ವರ್ಷಗಳ ಕಾಲ ಇದ್ದ ಕಾರಣ ನಾನು ಅಲ್ಲಿಯವಳೆಂದು ಅನೇಕರು ಭಾವಿಸಿದ್ದಾರೆ ಅದು ಕೂಡ ನನಗೆ ಅನ್ನ ಕೊಟ್ಟ ಊರು ಸಂಶೋಧನೆ ಗೆ ಇಂಬು ಕೊಟ್ಟ ಊರು ನನಗೊಂದು ಅಸ್ತಿತ್ವ ತಂದು ಕೊಟ್ಟ ಬೀಡು ಎಂಬ ಕೃತಜ್ಞತೆ ನಮಗಿದೆಯಾದರೂ ನಾನು ಅಲ್ಲಿಯವಳಲ್ಲ  ಕೆಲವರು ಡೆಲ್ಲಿ,ಮುಂಬೈ ಮಧುರೆ ಚೆನೈ ಯಲ್ಲಿ ಓದಿದ ಕೆಲಸ ಮಾಡಿ ಕಾರಣಕ್ಕೆ ಹೊರನಾಡಿವರು ಎಂದು ಕರೆಯಲ್ಪಡುತ್ತಾರೆ ಹಾಗೆ ನೋಡಿದರೆ   ನಾನು ಅಂದ್ರ ಪ್ರದೇಶದ ಕುಮಪ್ಪಂನಲ್ಲಿರುವ ದ್ರಾವಿಡ ವಿಶ್ವ ವಿದ್ಯಾಲಯದ ತುಳು ವಿಭಾಗದ ಮೊದಲ ವಿದ್ಯಾರ್ಥಿನಿ ನಾನು ಎರಡನೇಯ ಡಾಕ್ಟರೇಟ್ ಪಡೆದದ್ದು ಅಲ್ಲಿಂದಲೇ ಆ ಬಗ್ಗೆ ಯೂ ನನಗೆ ಕೃತಜ್ಞತೆ ಇದೆಯೇ ಹೊರತು ನಾನು ಹೊರನಾಡಿನವಳು ಎಂದು ಕರೆಸಿಕೊಳ್ಳಲಾರೆ  ಹಾಗಾಗಿಯೇ ನಾನು ತುಳುನಾಡಿನವಳು ಎಂದು ಹೆಮ್ಮೆಯಿಂದ ಹೇಳುವೆ
ಇದೆಲ್ಲಾ ಯಾಕೆ ನೆನಪಾಯಿತೆಂದರೆ ನಿನ್ನೆವೇದಿಕೆಯಲ್ಲಿ  ವಸಂತಕುಮಾರ್ ಪೆರ್ಲ ಅವರು ಗಡಿನಾಡಿನ ಆರುನೂರು ಬರಹಗಾರರ ಒಂದು ಪಟ್ಟಿಯನ್ನು ಮಾಡಿದ್ದು ಪ್ರಕಟವಾಗಿರುವ ಬಗ್ಗೆ ತಿಳಿಸಿದರು ಈ ಪಟ್ಟಿಯಲ್ಲಿ ನಾನು ಸೇರದೆ ಇದ್ದ ಬಗ್ಗೆ ನನಗೆ ಈ ಹಿಂದೆಯೇ ಮಾಹಿತಿ ಇತ್ತು(ಇದು ಅವರು ಮಾಡಿದ ಪಟ್ಟಿಯಲ್ಲ, ವಿವರಗಳು ನನಗೆ ಮರೆತು ಹೋಗಿವೆ)ಜೊತೆಗೆ ತುಳುನಾಡ ಬರಹಗಾರರ ಒಂದು ಪಟ್ಟಿ ಕೂಡ ಪ್ರಕಟವಾಗಿದ್ದು ಅದರಲ್ಲೂ ನಾನು ಸೇರಿಲ್ಲವಂತೆ
ಹಾಗಾಗಿ ನಾನೆಲ್ಲಿಯವಳು ಎಂದು ಕಾಡುತ್ತಿದ್ದ ಜಿಜ್ಞಾಸೆ ಇಂದು ಮತ್ತೆ ಕಾಡುತ್ತಿದೆ  ಹೆಚ್ಚಿನ  ಓದಿಗಾಗಿ http://shikshanaloka.blogspot.in/2017/05/blog-post.html?m=1
(ಚಿತ್ರ -ತುಳುನಾಡಿನಲ್ಲಿ ದೈವವಾಗಿ ಆರಾಧಿಸಲ್ಪಡುವ ಕೆಳದಿ ಅರಸಿ ಚನ್ನಮ್ಮ ನ ಮಹಾ ಮಾಂಡಳಿಕನಾಗಿದ್ದ  ಕಾಸರಗೋಡು ತಿಮ್ಮಣ್ಣ ನಾಯಕನ ಕುರಿತಾದ ಕ್ಷೇತ್ರ ಕಾರ್ಯದ ಅಧ್ಯಯನ ದಲ್ಲಿ ಕುಂಬಳೆ ಕೋಟೆ ಗೆ ಬಂದಾಗಿನದು ) ಲಕ್ಷ್ಮೀ ಜಿ ಪ್ರಸಾದ

ನಾನ್ಯಾವ ನಾಡಿನವಳು ?
ಹೀಗೊಂದು ಜಿಜ್ಞಾಸೆ ಸದಾ ನನ್ನನ್ನು ಕಾಡುತ್ತಾ ಇರುತ್ತದೆ .ನನ್ನ ಊರು ಯಾವುದು ಎಂದು ಕೇಳಿದಾಗ ನಾನು ಹೇಳುವುದು

" ನನ್ನ ತಂದೆ ಮನೆ ಕಾಸರಗೋಡು ಜಿಲ್ಲೆಯ  ಕೋಳ್ಯೂರು ಎಂಬ ಪುಟ್ಟ ಗ್ರಾಮದ ವಾರಣಾಸಿ ಮನೆ ಬಗ್ಗೆ "

ಕೇಳುವವರಲ್ಲಿ ನನ್ನ ಗಂಡನ ಮನೆ ಯಾವುದು ಎಂಬ ಕುತೂಹಲ ಕಂಡರೆ ನಾನು ಅದನ್ನು ನೇರವಾಗಿ ಹೇಳುತ್ತೇನೆ ನನ್ನ ಗಂಡ ಪ್ರಸಾದ್ ಮನೆ ಬಂಟ್ವಾಳ ತಾಲೂಕಿನ  ಕೋಡಪದವಿನ ಸರವು ಎಂಬ ಮನೆ ಇದು ನಮ್ಮ ಕುಟುಂಬದ ಮನೆಯ ಹೆಸರಲ್ಲ ನನ್ನ ಪತಿಯ ಅಜ್ಜ ಎಲ್ಲಿಂದಲೋ ಬಂದು ಕೋಡಪದವು ಸಮೀಪದ ಪಂಜಿಗದ್ದೆ ಎಂಬ ಪರಿಸರದ ಒಂದಷ್ಟು ಜಾಗ ಖರೀದಿಸಿ ನೆಲೆಯಾದವರು ಅವರು ತೀರ ಸಣ್ಣ ವಯಸ್ಸಿನಲ್ಲಿ ತೀರಿ ಹೋದ ಕಾರಣ ಅವರ ಮಕ್ಕಳಿಗೆ ಅವರ ಮೂಲ ಯಾವುದು ಎಂದು ತಿಳಿದಿಲ್ಲ ಮನೆದೇವರು ಕೂಡ ಯಾರೆಂದು ತಿಳಿದಿಲ್ಲ ಅಲ್ಲಿಂದ ಆಸ್ತಿ ಭಾಗವಾಗಿ ಅಲ್ಲಿಂದ ಎರಡು ಕಿಮೀ ದೂರದ ಸರವು ಎಂಬ ಪ್ರದೇಶದಲ್ಲಿ ಸ್ವಲ್ಪ ಜಾಗ ಪಡೆದು ನೆಲೆಯಾದವರು ನನ್ನ ಪ್ರಸಾದ ತಂದೆಯವರು ನಾನು ಮದುವೆಯಾಗಿ ಬಂದದ್ದು ಇದೇ ಮನೆಗೆ ಬಂದದ್ದು ಮಾತ್ರ ಅಲ್ಲಿ ಬದುಕಿದ್ದು ಬೆರಳೆಣಿಕೆಯಷ್ಟು ದಿನಗಳು
ಇಪ್ಪತ್ತೈದು ವರ್ಷಗಳ ಹಿಂದೆ ಮದುವೆಯಾದ ಮೇಲೆ ಓದಿಸುವ ಮನಸ್ಥಿತಿ ನಮ್ಮ ಸಮಾಜದಲ್ಲಿ ಇರಲಿಲ್ಲ ನಮ್ಮ ಕುಟುಂಬದ ಮಂದಿಯೂ ಅದಕ್ಕೆ ಹೊರತಾಗಿ ಇರಲಿಲ್ಲ ಇದೇ ಕಾರಣಕ್ಕೆ ನಾನು ಪ್ರಸಾದ ಒಂದಿಗೆ ಮನೆ ಬಿಟ್ಟು ಹೊರ ನಡೆದು ನಾನು ಓದುವ ಕಟೀಲು ಕಾಲೇಜು ಬಳಿ ಮನೆ ಮಾಡಿ ಸಂಸಾರ ಪ್ರಾರಂಭಿಸಿದೆವು ಅನೇಕ ಏಳು ಬೀಳುಗಳನ್ನೂ ಕಂಡೆವು ಅಲ್ಲಿದ್ದದ್ದು ಒಂದೇ ವರುಷ ಅಲ್ಲಿಂದ ಮತ್ತೆ ಮಂಗಳೂರಿನಲ್ಲಿ ಹತ್ತು ವರ್ಷ ಬದುಕಿದೆವು ಹೊಟ್ಟೆಪಾಡಿಗಾಗಿ ಉದ್ಯೋಗ ಅರಸುತ್ತಾ ಪ್ರಸಾದ ಬೆಂಗಳೂರಿಗೆ ಸಪ್ಟೆಂಬರ್ 2004 ರಲ್ಲಿ ಬಂದಾಗ ನಾನು ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನಲ್ಲಿ ತಾತ್ಕಾಲಿಕ ನೆಲೆಯಲ್ಲಿ ಸಂಸ್ಕೃತ ಉಪನ್ಯಾಸಕಿಯಾಗಿದ್ದೆ
ಶೈಕ್ಷಣಿಕ ವರ್ಷದ ಮಡುವೆ ಕೆಲಸ ಬಿಡುವುದು ಸರಿಯಲ್ಲ ವೆಂದು ಮಾರ್ಚ್ 2005 ರ ತನಕ ಕೆಲಸದಲ್ಲಿ ಮುಂದುವರಿದು ಪ್ರಥಮ ಪಿಯುಸಿ ಮೌಲ್ಯ ಮಾಪನ ಮಾಡಿ‌ಕೊಟ್ಟು ಕಾಲೇಜು  ಮ್ಯಾಗಜೀನ್ ಕೆಲಸವನ್ನು ಮುಗಿಸಿಕೊಟ್ಟು ಗೌರವದಿಂದ ಅಲ್ಲಿಂದ ರಿಲೀವ್ ಆಗಿ ಬೆಂಗಳೂರಿಗೆ ಬಂದೆ ಬಂದ ಮರುದಿನವೇ ಎಪಿಎಸ್ ಕಾಲೇಜಿನ ಕನ್ನಡ ಉಪನ್ಯಾಸಕ ಹುದ್ದೆಗೆ walk in interview ಇದ್ದದ್ದು ಗೊತ್ತಾಗಿ ಮಗನನ್ನು ಗಾಡಿಯಲ್ಲಿ ಕೂರಿಸಕೊಂಡು ವಿಳಾಸ ಹುಡುಕುತ್ತಾ ಎನ್ ಆರ್ ಕಾಲೋನಿಗೆ ತಡವಾಗಿ ಬಂದು ಕೊನೆಯ ಅಭ್ಯರ್ಥಿಯಾಗಿ ಸಂದರ್ಶನ ಎದುರಿಸಿ ಆಯ್ಕೆಯಾದೆ
ಬನಶಂಕರಿ ತೃತೀಯ ಬಡಾವಣೆಯಲ್ಲಿ ಬಾಡಿಗೆ ಮನೆ ಹಿಡಿದಿದ್ದೆವು
ಅಲ್ಲಿಂದ 2008 ರಲ್ಲಿ ಈಗಿನ  ಅಂಗೈ ಅಗಲದ ನಮ್ಮ ಪುಟ್ಟದಾದ ಸ್ವಂತ ಮನೆಗೆ ಬಂದೆವು ಮತ್ತೆ 2009 ರಲ್ಲಿ ಬೆಳ್ಳಾರೆಗೆ ಉಪನ್ಯಾಸಕಿಯಾಗಿ ಹೋದೆ 2015 ರಲ್ಲಿ ಮತ್ತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಕಾಲೇಜಿಗೆ ವರ್ಗಾವಣೆ ಪಡೆದು ಬಂದೆ
ಹಾಗಾಗಿ ನಮಗೆ ನಾವೆಲ್ಲಿಯವರುಎಂದು ಕೇಳಿದರೆ ಒಂದಿನಿತು ತಬ್ಬಿಬ್ಬಾಗುತ್ತೇನೆ ಕೊನೆಯಲ್ಲಿ ನಾನು "ತುಳುನಾಡಿನ ವರು "  ಎನ್ನುತ್ತೇನೆ
ಯಾಕೆಂದರೆ ನನ್ನ ಮಾತೃಭಾಷೆ ಹವ್ಯಕ ಕನ್ನಡ ವೃತ್ತಿ ಕನ್ನಡ ಉಪನ್ಯಾಸಕಿಯಾಗಿ, ಆದರೂ ನನ್ನನ್ನು ಸೆಳೆದದ್ದು ತುಳು ಸಂಸ್ಕೃತಿ ಕೈ ಹಿಡಿದು ಸಲಹಿದವಳು ತುಳುವಪ್ಪೆ
ಇಷ್ಟಾಗಿಯೂ ಇತ್ತೀಚೆಗೆ ಕನ್ನಡ ಜಾನಪದ ಪರಿಷತ್ ಮೈಸೂರು ವಿಭಾಗದಿಂದ ದಕ್ಷಿಣ ಕನ್ನಡ ಜಿಲ್ಲೆಯಿಂದ ನನ್ನನ್ನು ಜಾನಪದ ಪ್ರಪಂಚ ಪ್ರಶಸ್ತಿ ಗೆ ಆಯ್ಕೆಮಾಡಿದಾಗ ಅವರು ಕಾಸರಗೋಡಿನವರು ದಕ್ಷಿಣ ಕನ್ನಡ ಜಿಲ್ಲೆಯಿಂದ ಅವರನ್ನು ಆಯ್ಕೆ ಮಾಡಿದ್ದು ಸರಿಯಲ್ಲ ಎಂದು ಆಕ್ಷೇಪ ಮಾಡಿದ್ದು ತಿಳಿಯಿತು ತಕ್ಷಣವೇ ನಾನು ದಕ್ಷಿಣ ಕನ್ನಡ ಜಿಲ್ಲೆಯ  ಬಂಟ್ವಾಳ ತಾಲೂಕಿನ  ಮದುವೆಯಾಗಿ ಬಂದ ಮನೆಯ ನನ್ನ ಪತಿ ಪ್ರಸಾದ ಮನೆ ವಿಳಾಸ ಮತ್ತು ಇನ್ನೂ ಅಲ್ಲಿಯೇ ಓಟಿನ ಹಕ್ಕು ಇರುವ ಬಗ್ಗೆ ವೋಟರ್ಸ ಕಾರ್ಡಿನ ದಾಖಲೆ ಒದಗಿಸಿ ದಾಖಲೆ ಪ್ರಕಾರ ನಾನು ದಕ್ಷಿಣ ಕನ್ನಡ ಜಿಲ್ಲೆಯ ವಳು ಆದರೆ ಮಾನಸಿಕವಾಗಿ ನಾನು ಅಲ್ಲಿಯವಳಲ್ಲ ಅವರೆಂದೂ ನನ್ನನ್ನು ಸೊಸೆಯಾಗಿ ಸ್ವೀಕರಿಸಲಿಲ್ಲ ಅದನ್ನು ತಪ್ಪು ಎಂದು ದೂಷಿಸಲಾರೆ .ಸೆರಗು ತಲೆಗೆ ಹೊದ್ದು ಬೆಳಗ್ಗೆ ಎದ್ದು ಹೊಸಿಲಿ ಬರೆದು ಮನೆಯೊಳಗೆ ಗೃಹಿಣಿಯಾಗಿರುವ ಸೊಸೆಯನ್ನು ನಿರೀಕ್ಷಿಸಿದ ಸಂಪ್ರದಾಯ ವಾದಿ ಬ್ರಾಹ್ಮಣ ಕುಟುಂಬದ ಜನ ನಡು ರಾತ್ರಿ ನಢಯುವ ಭೂತಕೋಲವನ್ನು ರೆಕಾರ್ಡ್  ಕ್ಯಾಮರಾ ಹಿಡಿದುಕೊಂಡು ಜಾತಿ ನೀತಿ ಧರ್ಮದ ಗಡಿ ದಾಟಿ ಸಾಗುವ ನನ್ನಂಥ ಟಪೋರಿಯನ್ನು ಸೊಸೆಯಾಗಿ ಹೇಗೆ ತಾನೆ ಸ್ವೀಕರಿಸಿಯಾರು ಅಲ್ಲವೇ ?
ಬೆಂಗಳೂರು ಅನ್ನವನ್ನು ಕೊಟ್ಟ ಊರು ಎಂಬ ಕೃತಜ್ಞತೆ ಇರುವುದಾದರೂ ನಾನು ಬೆಂಗಳೂರಿನವಳು ಎಂಬ ಭಾವ ನನಗಿನ್ನೂ ಬಂದಿಲ್ಲ ಬಾರದೆ ಇರುವುದನ್ನು ಹೇಗೆ ಒಪ್ಪಲಿ ?
ಹಾಗಾಗಿ ನಾನು ಎಲ್ಲಿಯವಳು ಕೇಳಿದರೆ ಇಂದಿಗೂ ಹೇಳುವುದು ನಾನು ತುಳುನಾಡಿನವಳು ಗಡಿನಾಡಿನವಳು ಎಂದು .ಬೆಳ್ಳಾರೆಯಲ್ಲಿ ನಾಲ್ಕು ವರ್ಷಗಳ ಕಾಲ ಇದ್ದ ಕಾರಣ ನಾನು ಅಲ್ಲಿಯವಳೆಂದು ಅನೇಕರು ಭಾವಿಸಿದ್ದಾರೆ ಅದು ಕೂಡ ನನಗೆ ಅನ್ನ ಕೊಟ್ಟ ಊರು ಸಂಶೋಧನೆ ಗೆ ಇಂಬು ಕೊಟ್ಟ ಊರು ನನಗೊಂದು ಅಸ್ತಿತ್ವ ತಂದು ಕೊಟ್ಟ ಬೀಡು ಎಂಬ ಕೃತಜ್ಞತೆ ನಮಗಿದೆಯಾದರೂ ನಾನು ಅಲ್ಲಿಯವಳಲ್ಲ  ಕೆಲವರು ಡೆಲ್ಲಿ,ಮುಂಬೈ ಮಧುರೆ ಚೆನೈ ಯಲ್ಲಿ ಓದಿದ ಕೆಲಸ ಮಾಡಿ ಕಾರಣಕ್ಕೆ ಹೊರನಾಡಿವರು ಎಂದು ಕರೆಯಲ್ಪಡುತ್ತಾರೆ ಹಾಗೆ ನೋಡಿದರೆ   ನಾನು ಅಂದ್ರ ಪ್ರದೇಶದ ಕುಮಪ್ಪಂನಲ್ಲಿರುವ ದ್ರಾವಿಡ ವಿಶ್ವ ವಿದ್ಯಾಲಯದ ತುಳು ವಿಭಾಗದ ಮೊದಲ ವಿದ್ಯಾರ್ಥಿನಿ ನಾನು ಎರಡನೇಯ ಡಾಕ್ಟರೇಟ್ ಪಡೆದದ್ದು ಅಲ್ಲಿಂದಲೇ ಆ ಬಗ್ಗೆ ಯೂ ನನಗೆ ಕೃತಜ್ಞತೆ ಇದೆಯೇ ಹೊರತು ನಾನು ಹೊರನಾಡಿನವಳು ಎಂದು ಕರೆಸಿಕೊಳ್ಳಲಾರೆ  ಹಾಗಾಗಿಯೇ ನಾನು ತುಳುನಾಡಿನವಳು ಎಂದು ಹೆಮ್ಮೆಯಿಂದ ಹೇಳುವೆ
ಇದೆಲ್ಲಾ ಯಾಕೆ ನೆನಪಾಯಿತೆಂದರೆ ನಿನ್ನೆವೇದಿಕೆಯಲ್ಲಿ  ವಸಂತಕುಮಾರ್ ಪೆರ್ಲ ಅವರು ಗಡಿನಾಡಿನ ಆರುನೂರು ಬರಹಗಾರರ ಒಂದು ಪಟ್ಟಿಯನ್ನು ಮಾಡಿದ್ದು ಪ್ರಕಟವಾಗಿರುವ ಬಗ್ಗೆ ತಿಳಿಸಿದರು ಈ ಪಟ್ಟಿಯಲ್ಲಿ ನಾನು ಸೇರದೆ ಇದ್ದ ಬಗ್ಗೆ ನನಗೆ ಈ ಹಿಂದೆಯೇ ಮಾಹಿತಿ ಇತ್ತು(ಇದು ಅವರು ಮಾಡಿದ ಪಟ್ಟಿಯಲ್ಲ, ವಿವರಗಳು ನನಗೆ ಮರೆತು ಹೋಗಿವೆ)ಜೊತೆಗೆ ತುಳುನಾಡ ಬರಹಗಾರರ ಒಂದು ಪಟ್ಟಿ ಕೂಡ ಪ್ರಕಟವಾಗಿದ್ದು ಅದರಲ್ಲೂ ನಾನು ಸೇರಿಲ್ಲವಂತೆ
ಹಾಗಾಗಿ ನಾನೆಲ್ಲಿಯವಳು ಎಂದು ಕಾಡುತ್ತಿದ್ದ ಜಿಜ್ಞಾಸೆ ಇಂದು ಮತ್ತೆ ಕಾಡುತ್ತಿದೆ  ಹೆಚ್ಚಿನ  ಓದಿಗಾಗಿ http://shikshanaloka.blogspot.in/2017/05/blog-post.html?m=1
(ಚಿತ್ರ -ತುಳುನಾಡಿನಲ್ಲಿ ದೈವವಾಗಿ ಆರಾಧಿಸಲ್ಪಡುವ ಕೆಳದಿ ಅರಸಿ ಚನ್ನಮ್ಮ ನ ಮಹಾ ಮಾಂಡಳಿಕನಾಗಿದ್ದ  ಕಾಸರಗೋಡು ತಿಮ್ಮಣ್ಣ ನಾಯಕನ ಕುರಿತಾದ ಕ್ಷೇತ್ರ ಕಾರ್ಯದ ಅಧ್ಯಯನ ದಲ್ಲಿ ಕುಂಬಳೆ ಕೋಟೆ ಗೆ ಬಂದಾಗಿನದು )