Saturday, 21 July 2018

ದೊಡ್ಡವರ ದಾರಿ 59 ವಾಸ್ತವತೆಯ ಅರಿವು ಮೂಡಿಸಿದ ಶ್ರೀಮತಿ ಶಾಂತಾ ಆಚಾರ್ © ಡಾ.ಲಕ್ಷ್ಮೀ ಜಿ ಪ್ರಸಾದ

ಸುಮಾರು ಹದಿನೈದು ಹದಿನೆಂಟು ವರ್ಷಗಳ ಹಿಂದೆ ನಾನು ಮಂಗಳೂರಿನ ಚಿನ್ಮಯ ಪ್ರೌಢ ಶಾಲೆಯಲ್ಲಿ ಸಂಸ್ಕೃತ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದೆ.ಇಲ್ಲಿ ಕಳೆದ ಮೂರು ನಾಲ್ಕು ವರ್ಷಗಳು ನನ್ನ ಪಾಲಿಗೆ ಅವಿಸ್ಮರಣೀಯವಾದುದು.ಇಲ್ಲಿ ಕೆಲಸ ಮಾಡುವ ಎಲ್ಲರೂ ಒಂದೇ ದೋಣಿಯ ಪಯಣಿಗರಾಗಿದ್ದೆವು.ಆರ್ಥಿಕವಾಗಿ ಅಷ್ಟೇನೂ ಬಲಾಢ್ಯರಲ್ಲದೇ ಇದ್ದರೂ ಎಲ್ಲರಲ್ಲೂ ಅಪಾರ ಜೀವನೋತ್ಸಾಹವಿತ್ತು.ಕರ್ತವ್ಯವೆಂಬಂತೆ ಕಾಟಾಚಾರಕ್ಕೆ ಪಾಠ ಮಾಡದೆ ವಿದ್ಯಾರ್ಥಿಗಳಿಗೆ ಪಠ್ಯ ಮತ್ತು ಪಠ್ಯೇತರ ವಿಷಯಗಳಲ್ಲೂ ತರಬೇತಿ ನೀಡುತ್ತಿದ್ದೆವು. ನಮ್ಮಲ್ಲಿ ಶ್ರೀಮತಿ ಶಾಂತಾ ಆಚಾರ್ ಎಂಬ ಶಿಕ್ಷಕಿ ಇದ್ದರು.ಇವರ ಪತಿ ಬ್ಯಾಂಕ್ ಮ್ಯಾನೇಜರ್ ಆಗಿದ್ದು ಇವರಿಗೆ ಕೆಲಸ ಮಾಡುವ ದುಡಿದು ಗಳಿಸುವ ಅನಿವಾರ್ಯತೆ ಏನೂ ಇರಲಿಲ್ಲ. ಇಬ್ಬರೂ ಮಕ್ಕಳು ಪ್ರತಿಭಾವಂತರಾಗಿದ್ದು ದೊಡ್ಡ ಮಗ ಅಶ್ವಿನ್ ಮಂಗಳೂರಿನ ಕಸ್ತೂರಬಾ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪರಾಗಿದ್ದರೆ ಇನ್ನೊಬ್ಬ ಮಗ ವಿದೇಶದಲ್ಲಿ ಇಂಜಿನಿಯರ್ ಆಗಿದ್ದರು.ಆದರೂ ಒಂದಿನಿತೂ ಅಹಂಕಾರ ಮೇಲರಿಮೆ ಶಾಂತಾ ಆಚಾರ್ ಅವರಿಗಿರಲಿಲ್ಲ.ನಮ್ಮಲ್ಲಿ ಒಂದಾಗಿ ಎಲ್ಲರಂತೆ ದುಡಿಯುತ್ತಿದ್ದರು.ಇವರು ಸಂಗೀತ ವಿದುಷಿಯಾಗಿದ್ದರು.ಇವರು ಇವರಿಗೆ ನಿಗಧಿತವಾಗಿರುವ ಪಾಠದ ಅವಧಿಯಲ್ಲಿ ಪಾಠ ಮಾಡಿ ಕೊನೆಯಲ್ಲಿ ಒಂದು ಗಂಟೆ ಶಾಲೆಯ ಮಕ್ಕಳಿಗೆ ಉಚಿತವಾಗಿ ಸಂಗೀತ ಹೇಳಿಕೊಡುತ್ತಾ ಇದ್ದರು.ಪ್ರತಿಭಾ ಕಾರಂಜಿ ಸೇರಿದಂತೆ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಮಕ್ಕಳನ್ನು ತಯಾರು ಮಾಡಿ ಬಹುಮಾನ ಬರುವಂತೆ ಮಾಡಿ ತಾನು ದುಡಿಯುವ ಚಿನ್ಮಯ ವಿದ್ಯಾಸಂಸ್ಥೆಗೆ ಕೀರ್ತಿಯನ್ನು ತಂದು ಕೊಟ್ಟಿದ್ದರು.ಇವರೊಂದಿಗೆ ಅರುಣಾ ಟೀಚರ್ ಮೋಹಿನಿ ಟೀಚರ್ ಉಷಾ ಟೀಚರ್ ಮೊದಲಾದವರು ಕೈಜೋಡಿಸಿ ಮಕ್ಕಳನ್ನು ಸಿದ್ಧಪಡಿಸುತ್ತಿದ್ದರು.ನಾನು ಈ ಶಾಲೆಗೆ ಶಿಕ್ಷಕಿಯಾಗಿ ಬಂದಾಗ ನನ್ನ ಅಭಿವ್ಯಕ್ತಗೂ ಇಲ್ಲಿ ಸೂಕ್ತ ವೇದಿಕೆ ದೊರೆಯಿತು. ಚಿಕ್ಕಂದಿನಲ್ಲಿಯೇ ನಾಟಕ ರಚನೆ ಅಭಿನಯದಲ್ಲಿ ಆಸಕ್ತಿ ಇದ್ದ ನಾನು ಇಲ್ಲಿನ ಮಕ್ಕಳಿಗಾಗಿ ಹಸಿರು ಕರಗಿದಾಗ,ನೀರಕ್ಕನ ಮನೆ ಕಣಿವೆ ಮೊದಲಾದ ನಾಟಕಗಳನ್ನು ರಚಿಸಿದೆ.ಇವುಗಳನ್ನು ವೇದಿಕೆಗೆ ತರುವಲ್ಲಿ ಅನುಭವೀ ಶಿಕ್ಷಕಿ ಅರುಣಾ ಸಹಾಯ ಮಾಡಿದ್ದರು ‌.ನನ್ನ ನಾಟಕಗಳಲ್ಲಿ ಅಲ್ಲಲ್ಲಿ ಹಾಡುಗಳು ಬರುತ್ತವೆ.ಇವಕ್ಕೆ ರಾಗ ಸಂಯೋಜನೆ ಮಾಡಿ ವಿದ್ಯಾರ್ಥಿಗಳಿಗೆ ಹೇಳಿಕೊಡುವುದು ಒಂದು ಸವಾಲಿನ ವಿಷಯವಾಗಿತ್ತು.ಈ ಸಂದರ್ಭದಲ್ಲಿ ನನಗೆ ಪೂರ್ಣ ಬೆಂಬಲವಿತ್ತವರು ಸಂಗೀತಜ್ಞರಾದ ಶಾಂತಾ ಆಚಾರ್.ನನ್ನ ನಾಟಕಗಳ ಹಾಡುಗಳನ್ನು ರಾಗಕ್ಕೆ ಅನುಗುಣವಾಗಿ ಸಣ್ಣ ಪುಟ್ಟ ಬದಲಾವಣೆ ಮಾಡಿ ಅದಕ್ಕೆ ರಾಗ ಸಂಯೋಜನೆ ಮಾಡಿ ವಿದ್ಯಾರ್ಥಿಗಳಿಗೆ ಹೇಳಿಕೊಟ್ಟು ನಾಟಕಕ್ಕೆ ಒಂದು ವಿಶಿಷ್ಠವಾದ ಮೆರುಗನ್ನು ತಂದು ಕೊಟ್ಟಿದ್ದರು.ಇಲ್ಲಿ ಮುಖ್ಯೋಪಾಧ್ಯಾಯಿನಿಯಾಗಿದ್ದ ಶಕುಂತಲಾ ಸಾಂತ್ರಾಯ ಸ್ವತಃ ಓರ್ವ ಕವಯಿತ್ರಿ ಆಗಿದ್ದರು.ಪ್ರತಿ ವರ್ಷ ಶಾಲಾ ವಾರ್ಷಿಕೋತ್ಸವಕ್ಕೆ ಅವರೊಂದು ಹಾಡು ಬರೆದು ಕೊಡುತ್ತಿದ್ದರು.ಅದಕ್ಕೆ ಕೂಡ ಶಾಂತಾ ಅಚಾರ್ ಅವರು ರಾಗ ಸಂಯೋಜನೆ ಮಾಡಿ ಮಕ್ಕಳಲ್ಲಿ ಹಾಡಿಸುತ್ತಾ ಇದ್ದರು.ಇಂತಹ ಸಂದರ್ಭದಲ್ಲಿ ಒಂದು ದಿನ ನಾನು ಆತ್ಮೀಯರಾದ ಶಾಂತಾ ಮೇಡಂ ಅವರಲ್ಲಿ " ನನಗೆ ರಾಗ ಸಂಯೋಜನೆ ಮಾಡಿ ಹಾಡಲು ಬರುವುದಿಲ್ಲ .ಇದರಿಂದಾಗಿ ನನಗೆ ನನ್ನ  ನಾಟಕಗಳನ್ನು ರಂಗದಲ್ಲಿ ಪ್ರಸ್ತಿತಿ ಗೊಳಿಸಲು ಕಷ್ಟವಾಗುತ್ತದೆ. ಇದಕ್ಕಾಗಿ ಬೇರೆಯವರನ್ನು ಅವಲಂಭಿಸಬೇಕಾಗುತ್ತದೆ‌.ನನಗೂ ನಿಮ್ಮಂತೆ ರಾಗ ಸಂಯೋಜನೆ ಮಾಡಿ ಹಾಡಲು ಬಂದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಹೇಳಿದೆ.ಆಗ ಅವರು" ಎಲ್ಲವೂ ತನಗೇ ಬೇಕೆಂಬ ಸ್ವಾರ್ಥ ಇರಬಾರದು ಲಕ್ಷ್ಮೀ,ನೀವು ರ‍್ಯಾಂಕ್ ವಿಜೇತೆ ನಿಮಗೆ ಒಳ್ಳೆಯ ಬುದ್ದಿವಂತಿಕೆ ಇದೆ,ಬರವಣಿಗೆಯ ಶಕ್ತಿ ಇದೆ.ನಿಮ್ಮ ಅನೇಕ ಲೇಖನಗಳು ಪ್ರಕಟವಾಗಿವೆ. ಅನೇಕ ಕಥೆಗಳು ಕೂಡ ಪ್ರಕಟವಾಗಿವೆ‌.ಒಳ್ಳೆಯ ಮನೆ  ಗಂಡ ಮಗ ಸಂಸಾರ ಇದೆ.ಇರುವುದನ್ನು ಬಿಟ್ಟು ಇಲ್ಲದೇ ಇರುವ ಕಡೆ ಚಿಂತಿಸಬಾರದು.ಎಲ್ಲವನ್ನೂ ದೇವರು  ನಿಮಗೇ ಕೊಟ್ಟರೆ ಬೇರೆಯವರಿಗೇನೂ ಬೇಡವೇ ? ಇರುವುದರಲ್ಲಿ ತೃಪ್ತಿ ಪಟ್ಟು ನೆಮ್ಮದಿಯಿಂದ ಬದುಕಬೇಕು " ಎಂದು ತಿಳಿಸಿ ಹೇಳಿದರು.ತಕ್ಷಣವೇ ನಾನು ಬದಲಾದೆ.ಅವರು ವಾಸ್ತವದ ಅರಿವನ್ನು ಮೂಡಿಸಿದ್ದರು‌.ಎಲ್ಲದರಲ್ಲೂ ಎಲ್ಲರೂ ಪರಿಣತಿ ಸಾಧಿಸಲು ಸಾಧ್ಯವಿಲ್ಲ ‌ಎಲ್ಲದರಲ್ಲೂ ತಾನೇ ಮುಂದಿರಬೇಕೆಂದು ಬಗೆದರೆ ಯಾವುದೊಂದರಲ್ಲೂ ಪರಿಣತಿ ಸಾಧಿಸಲು ಸಾಧ್ಯವಾಗುವುದಿಲ್ಲ ಎಂಬ ವಾಸ್ತವದ ಅರಿವು ಮೂಡಿತು ‌.ಮತ್ತು ತಮಗೇ ಎಲ್ಲವೂ ಬೇಕೆಂಬ ಸ್ವಾರ್ಥ ಒಳ್ಳೆಯದಲ್ಲ ಎಂಬುದು ಮನವರಿಕೆಯಾಗಿ ನನಗೆ ಒಲಿಯದ ವಿಚಾರಗಳ ಸುದ್ದಿ ಬಿಟ್ಟು ನನಗೊಲಿದ ವಿದ್ಯೆಯಲ್ಲಿ ಪರಿಣತಿ ಪಡೆಯಲು ಯತ್ನ ಮಾಡಿದೆ‌.ಎಲ್ಲವೂ ತನಗೇ ಬೇಕೆಂಬ ಸ್ವಾರ್ಥ ಇರಬಾರದು ಎಂಬ ಮಾತನ್ನು ಸದಾ ನೆನಪಿನಲ್ಲಿ ಇಟ್ಟು ಕೊಂಡಿರುವೆ‌.

1 comment:

  1. Very nice article Shanthakka deserve all appreciatiation kudos to her.

    ReplyDelete