Saturday, 21 July 2018

ದೊಡ್ಡವರ ದಾರಿ 60 ಎಳೆಯರಿಗೆ ಸ್ಫೂರ್ತಿಯಾಗಿರುವ ಸ್ಪೂರ್ತಿ ಎಸ್ ಸಮರ್ಥ್© ಡಾ‌.ಲಕ್ಷ್ಮೀ ಜಿ ಪ್ರಸಾದ

 ದೊಡ್ಡವರ ದಾರಿಯಲ್ಲಿ ಸಾಗುವವರೆಲ್ಲ ವಯಸ್ಸಿನಲ್ಲಿ ದೊಡ್ಡವರಾಗಿರಬೇಕಾಗಿಲ್ಲ.ದೊಡ್ಡತನವನ್ನು ಮೆರೆಯುವವರೆಲ್ಲ ದೊಡ್ಡವರೇ .  ನೆಲಮಂಗಲ ಸರ್ಕಾರಿ ಪಿಯು ಕಾಲೇಜಿಗೆ ವರ್ಗಾವಣೆಯಾಗಿ ಬಂದು ಮೂರು ವರ್ಷಗಳು ಆಗುತ್ತಾ ಬಂತು.ನಮ್ಮ ವೇತನ ಇಲ್ಲಿನ UCO Bank ನಲ್ಲಿ ಆಗುತ್ತಿರುವ ಕಾರಣ ನೆಲಮಂಗಲಕ್ಕೆ  ಬಂದ ಒಂದೆರಡು ವಾರದ ಒಳಗೆ ಬ್ಯಾಂಕ್ ಗೆ ಹೋಗಿ ಎಸ್ ಬಿ ಅಕೌಂಟ್ ಮಾಡಿಕೊಂಡು ಬಂದಿದ್ದೆ.ಅದು ಬಿಟ್ಟರೆ ಬ್ಯಾಂಕ್ ಗೆ ಹೋಗಿದ್ದು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಬಾರಿ!
ಈಗೆಲ್ಲಾ ಎಟಿಎಂ ಹಾಗೂ ಅಂತರ್ಜಾಲದ ಮೂಲಕ ಬ್ಯಾಂಕ್ ವ್ಯವಹಾರ ಮಾಡಲಾಗುವ ಕಾರಣ ಬ್ಯಾಂಕ್ ಗೆ ಹೋಗಬೇಕಾದ ಪ್ರಸಂಗ ಬಂದಿರಲಿಲ್ಲ.
ಇತ್ತೀಚೆಗೆ ಮನೆ ವಿಸ್ತರಿಸುವ ಸಲುವಾಗಿ ದುಡ್ಡು ಹೊಂದಿಸುವುದು ಅನಿವಾರ್ಯವಾಗಿತ್ತು. ಹಾಗಾಗಿ ನಮಗೆ ಯಾವೆಲ್ಲಾ ರೀತಿಯ ಸಾಲ ಸಿಗುತ್ತವೆ? ಅದಕ್ಕೆ ಬಡ್ಡಿ ದರ ಎಷ್ಟು  ಇತ್ಯಾದಿಗಳ ಬಗ್ಗೆ ತಿಳಿಯಲು ಯುಕೋ ಬ್ಯಾಂಕ್ ಗೆ ಹೋಗಿ ಅಲ್ಲಿನ ಮ್ಯಾನೇಜರ್ ಅನ್ನು ಕಂಡು ಮಾಹಿತಿ ಪಡೆದಿದ್ದೆ‌.ಎಲ್ಲ ಮಾಹಿತಿ ಪಡೆದು ಹಿಂತಿರುಗುವಷ್ಟರಲ್ಲಿ ಒಬ್ಬರು ಚಿನ್ನದ ಮೇಲೆ ಸಾಲ ಪಡೆಯಲು ಬಂದರು.ಆಗ ನಾನು ಚಿನ್ನದ ಮೇಲಿನ ಸಾಲಕ್ಕೆ ಬಡ್ಡಿ ದರವೆಷ್ಟು ಎಂದು ವಿಚಾರಿಸಿದಾಗ ವಾರ್ಷಿಕ ಏಳು ಶೇಕಡಾ ಎಂದೂ,ಒಂದು ವರ್ಷದೊಳಗೆ ಕಟ್ಟದೆ ಇದ್ದರೆ 1.65 ಶೇಕಡ ಹೆಚ್ಚು ಬಡ್ಡಿ ದರವೆಂದು ತಿಳಿಯಿತು. ( ಕೃಷಿಗಾಗಿ ಚಿನ್ನದ ಮೇಲೆ ಸಾಲ ತೆಗೆದರೆ ಮೂರು ಶೇಕಡಾ ಸಬ್ಸಿಡಿ ಇರುತ್ತದೆ.)ನಮಗಿನ್ನೂ ಮನೆ ಕಟ್ಟುವ ಸಾಲ ಸಿಕ್ಕಿಲ್ಲ.ಆದರೂ ಮನೆ ಕಟ್ಟಲು ಶುರು ಮಾಡಿದ್ದು, ದುಡ್ಡಿನ ಹೊಂದಿಸುವ ಸಲುವಾಗಿ
ಎರಡು ದಿನಗಳ ಹಿಂದೆ ಸ್ವಲ್ಪ ಚಿನ್ನ ತೆಗೆದುಕೊಂಡು ಯುಕೋ  ಬ್ಯಾಂಕ್ ಗೆ ಹೋದೆ.ಬಹಳ ಸೌಜನ್ಯತೆಯಿಂದ ವರ್ತಿಸಿದ ಸಿಬ್ಬಂದಿ ನನ್ನ ಚಿನ್ನವನ್ನು ತೆಗೆದುಕೊಂಡು ತೂಗಿ  ತೀರಾ ಕಡಿಮೆ ಅವಧಿಯಲ್ಲಿ ಯಾವುದೇ ಕಿರಿ ಕಿರಿ ಮಾಡದೆ  ಸಾಲ ನೀಡಿದರು.ನಾನದನ್ನು ನನ್ನ ಖಾತೆಗೆ ಜಮೆ ಮಾಡಲು ತಿಳಿಸಿದೆ‌.ನಂತರ ನಾನು ಇಲ್ಲಿ ಚಿನ್ನವನ್ನು ಇಟ್ಟದ್ದಕ್ಕೆ ದಾಖಲೆ ಕೊಡಿ ಎಂದು ಕೇಳಿದೆ.ಆಗ ಗೋಲ್ಡ್ ಕಾರ್ಡ್ ನೀಡುತ್ತೇವೆ.ಒಂದೆರಡು ಗಂಟೆ ಕಾಯಬೇಕಾಗುತ್ತದೆ‌ ಅಥವಾ ನಾಳೆ ಬನ್ನಿ ,ನಾಳೆ ಕೊಡುತ್ತೇವೆ ಎಂದು ಹೇಳಿದರು.ತರಗತಿ ನಡುವೆ ಬಿಡುವು ಇದ್ದ ಸಮಯವನ್ನು ಹೊಂದಾಣಿಕೆ ಮಾಡಿಕೊಂಡು ನಾನು ಬ್ಯಾಂಕ್ ಗೆ ಹೋಗಿದ್ದು,ನನಗೆ ಒಂದೆರಡು ಗಂಟೆ ಕಾಯಲು ಸಾಧ್ಯವಿರಲಿಲ್ಲ. ಹಾಗಾಗಿ ಒಂದಿನಿತು ಅಳುಕಿನಿಂದಲೇ ಹಿಂತಿರುಗಿದೆ.
ಮರುದಿನ ಬೆಳಗ್ಗೆ ಮತ್ತೆ ಬ್ಯಾಂಕ್ ಗೆ ಹೋಗಿ ಚಿನ್ನವನ್ನು ಇಟ್ಟಿರುವುದಕ್ಕೆ ದಾಖಲೆ ಕೇಳಿದೆ‌.ಆಗ ಅಲ್ಲಿನ ಹಿರಿಯ ಸಿಬ್ಬಂದಿ ಒಂದು ಕಾರ್ಡ್ ನೀಡಿದರು.ಅದರಲ್ಲಿ ನನ್ನ ಅಕೌಂಟ್ ನಂಬರ್ ‌ಮತ್ತು ಹೆಸರು ಇತ್ತು.ಸಾಲದ ಪ್ರಮಾಣ ನಮೂದಿಸಿತ್ತು.ಅದರ ಕೆಳಗೆ ಯಾವುದೇ ಸಹಿ, ಮೊಹರು ಇರಲಿಲ್ಲ. ಆಗ ನಾನು ಸಹಿ,ಮೊಹರು ಇರುವ ಸರಿಯಾದ ದಾಖಲೆ ಬೇಕೆಂದು ಕೇಳಿದೆ‌.ಅವರು ಯಾವುದೋ ಪುಸ್ತಕ ತೋರಿಸಿ ಅದರಲ್ಲಿ ನನ್ನ ಅಕೌಂಟ್ ನಂಬರ್ ಹೆಸರು ಮತ್ತು ಸಾಲದ ಪ್ರಮಾಣ ಬರೆದಿರುವುದನ್ನು ತೋರಿಸಿದರು‌.ಮತ್ತು ಹದಿನೈದು ಇಪ್ಪತ್ತು ಲಕ್ಷದಷ್ಟು ಸಾಲವನ್ನು ಚಿನ್ನ ಇಟ್ಟು ಬೇರೆಯವರು ಪಡೆದಿರುವುದನ್ನು ತೋರಿಸಿದರು.ಇದು ನಿಮ್ಮಲ್ಲಿ ಇರುವ ದಾಖಲೆ,ನನಗೆ ನಿಮ್ಮಲ್ಲಿ ಚಿನ್ನ ಇಟ್ಟಿರುವುದಕ್ಕೆ ದಾಖಲೆ ಬೇಕು ಎಂದು ಕೇಳಿದೆ.ಆಗ ಅವರು ಮೊದಲು ನೀಡಿದ ಕಾರ್ಡ್ ಗೆ ಮೊಹರು ಹಾಕಿ ನೀಡಿದರು ‌.ಈ ಕಾರ್ಡಿನ ಹಿಂಭಾಗದಲ್ಲಿ ನಾನು ಇಟ್ಟ ಚಿನ್ನದ ಭಾರವನ್ನು ಗ್ರಾಮ್ ಗಳಲ್ಲಿ ಬರೆದು gross weight ಮತ್ತು net weight ಗಳನ್ನು ಬರೆದಿದ್ದರು.ಇದಕ್ಕೆ ಸಹಿ ಮಿಹರು ಯಾವುದೂ ಇರಲಿಲ್ಲ ‌.ಹಾಗಾಗಿ ಅದಾಗದು,ನನಗೆ ಸರಿಯಾದ ದಾಖಲೆ ಬೇಕೆಂದು ಕೇಳಿದೆ.ಆಗ ಅವರು ರಾಷ್ಟ್ರೀಕೃತ ಬ್ಯಾಂಕ್ ಮೇಡಂ, ನಂಬಿಕೆ ಇದ್ದರೆ ಸಾಲ ತೆಗೆದುಕೊಳ್ಳಿ ಇಲ್ಲವಾದರೆ ಬೇರೆಡೆ ಚಿನ್ನ ಇಟ್ಟು ಸಾಲ ತೆಗೆದುಕೊಳ್ಳಿ ಎಂದು ಹೇಳಿದರು ‌.ಅವರಿಗೆ ಕನ್ನಡ ಬರುತ್ತಿರಲಿಲ್ಲ. ಹಾಗಾಗಿ ನಾನೇನು ಕೇಳುತ್ತಿರುವೆ,ನನ್ನ ಆಶಯವೇನು ಎಂದು ಅರ್ಥವಾಗಿಲ್ಲ ಎಂದು ತಿಳಿಯಿತು ‌.
ಹಾಗಾಗಿ ಅವರಲ್ಲಿ ಚರ್ಚಿಸದೆ ನೇರವಾಗಿ ಬ್ಯಾಂಕ್ ಮ್ಯಾನೇಜರ್ ಸ್ಫೂರ್ತಿ ಯವರನ್ನು ಭೇಟಿ ಮಾಡಿದೆ.ತುಂಬಾ ಚಿಕ್ಕ ವಯಸಿನ ಮಹಿಳಾ ಮ್ಯಾನೇಜರ್ ಹೇಗಿರುತ್ತಾರೋ ? ನಾನು ಹೇಳುವುದನ್ನು ಕೇಳಿಸಿಕೊಂಡು ನಾನು ಇಟ್ಟ ಚಿನ್ನಕ್ಕೆ ಸರಿಯಾದ ದಾಖಲೆ ನೀಡುತ್ತಾರೋ ಇಲ್ಲವೋ ? ತಮ್ಮ  ಬ್ಯಾಂಕ್ ನ ಹಿರಿಯ  ಸಿಬ್ಬಂದಿಯನ್ನು ಸಮರ್ಥಿಸಿಕೊಳ್ಳುವರೋ ಏನೋ ಎಂದು ತುಸು ಆತಂಕ ಇತ್ತು ಕೂಡ. ಆದರೆ ಚಿಕ್ಕ ವಯಸ್ಸೇ ಆಗಿದ್ದರೂ ಕೂಡ ಬಹಳ ಸಮರ್ಥ ಬ್ಯಾಂಕ್ ಮ್ಯಾನೇಜರ್ ಅವರಾಗಿದ್ದರು.ನಾನು ಚಿನ್ನ ಇಟ್ಟ ಬಗ್ಗೆ ದಾಖಲೆ ಬೇಕೆಂದು ಹೇಳಿದಾಗ ಈ ಬಗ್ಗೆ ಒಂದು ದಾಖಲೆ ಸಹಿ ಮಾಡಿಸಿ ಕೊಡುತ್ತೇನೆ ಎಂದು ಹೇಳಿ ಮ್ಯಾನೇಜರ್ ಕ್ಯಾಬಿನ್ ನಲ್ಲಿ ಒಂದೆರಡು ನಿಮಿಷ ಕುಳಿತುಕೊಳ್ಳಲು ಹೇಳಿ ,ನನಗೆ ಸಾಲ ನೀಡಿದ ಸಿಬ್ಬಂದಿ ಬಳಿಗೆ ಹೋಗಿ‌ ಮಾತಾಡಿದರು.ಕೆಲವೇ ನಿಮಿಷಗಳಲ್ಲಿ ನಾನು ಇಟ್ಟ ಚಿನ್ನಕ್ಕೆ ಸೂಕ್ತ ದಾಖಲೆ ನೀಡಿದರು.ಹಿರಿಯ ಸಿಬ್ಬಂದಿ ಪರ ನಿಲ್ಲದೆ ಗ್ರಾಹಕರಿಗೆ ನೀಡಬೇಕಾದ ದಾಖಲೆಯನ್ನು ಕ್ಷಣಮಾತ್ರದಲ್ಲಿ ಒದಗಿಸಿದ  ಚಿಕ್ಕ ವಯಸ್ಸಿನಲ್ಲೇ ಮ್ಯಾನೇಜರ್ ಆಗಿರುವ ಸ್ಫೂರ್ತಿಯವರ ಬಗ್ಗೆ ಮೆಚ್ಚುಗೆ ಮೂಡಿ,ನನ್ನ ಪರಿಚಯ ಹೇಳಿ‌ ಅವರನ್ನು ಪರಿಚಯಿಸಿಕೊಂಡೆ.  ಅವರ ಬಗ್ಗೆ ಸಂಕ್ಷಿಪ್ತ ಮಾಹಿತಿ ಕಲೆ ಹಾಕಿದೆ
ಅವರು  ವಿಜ್ಞಾನ  ಪದವಿ ಮುಗಿಯುತ್ತಲೇ ಬ್ಯಾಂಕ್ ನಡೆಸುವ IBPS ಪರೀಕ್ಷೆಗೆ ಕಟ್ಟಿ ಉತ್ತೀರ್ಣರಾಗಿ ಯುಕೋ ಬ್ಯಾಂಕ್ ನ ಸಂದರ್ಶನ ಎದುರಿಸಿ ಪ್ರೊಬೆಷನರಿ ಆಫೀಸರ್ ಆಗಿ ಆಯ್ಕೆಯಾದರು. ಮೂರು ವರ್ಷಗಳು ಮುಗಿಯುತ್ತಲೇ ಮ್ಯಾನೇಜರ್ ಹುದ್ದೆಗೆ ಮತ್ತೆ ಪರೀಕ್ಷೆ ಬರೆದು ಅಯ್ಕೆಯಾದರು‌.ಆರು ವರ್ಷಗಳಲ್ಲಿ ಏಳು ಜಿಲ್ಲೆಗಳಲ್ಲಿ ಕೆಲಸ ಮಾಡಿ ಅನುಭವ ಪಡೆದು ಪ್ರಸ್ತುತ ಸ್ವ ಸಾಮರ್ಥ್ಯದಿಂದ ನೆಲಮಂಗಲದ ಯುಕೊ ಬ್ಯಾಂಕ್ ಗೆ ಮ್ಯಾನೇಜರ್ ಆಗಿ ಒಂದು ವಾರದ ಹಿಂದೆಯಷ್ಟೇ ವರ್ಗಾವಣೆ ಹೊಂದಿ ಬಂದಿದ್ದಾರೆ‌. ಎಂಬಿಎ ಓದಿರುವ, ಒಬ್ಬ ಚಿಕ್ಕ ‌ಮಗಳು‌ ಮತ್ತು ಪತಿಯೊಂದಿಗಿನ ಸುಖೀ ಸಂಸಾರವನ್ನು ನಿಭಾಯಿಸುತ್ತಲೇ ಮೂವತ್ತೊಂದರ ಎಳೆಯ ವಯಸ್ಸಿನಲ್ಲಿಯೇ ಬ್ಯಾಂಕ್ ಮ್ಯಾನೇಜರ್ ಆಗಿರುವ ಸಾಮರ್ಥ್ಯವಂತೆ ಸ್ಪೂರ್ತಿ ಎಸ್ ಸಮರ್ಥ ನಿಜಕ್ಕೂ ಇಂದಿನ ಎಳೆಯರಿಗೆ ಸ್ಫೂರ್ತಿಯಾಗಿದ್ದಾರೆ.


No comments:

Post a Comment