Tuesday, 4 January 2022

ನನಗೂ ಆತ್ಮವಿದೆ ಅದಕ್ಕೂ ಒಂದು ಕಥೆ ಇದೆ. ಕಟೀಲಿನ ಉಚಿತ ಊಟವೂ ಮತ್ರು ಸಂಸ್ಕೃತ ಪಾಠವೂ

 ನನಗೂ ಆತ್ಮವಿದೆ ಅದಕ್ಕೂ ಒಂದು ಕಥೆ ಇದೆ.


ಕಟೀಲಿನ  ಉಚಿತ ಊಟವೂ ಸಂಸ್ಕೃತ  ಪಾಠವೂ

ನನ್ನ ಜೀವನದಲ್ಲಿ ಎಂದಿಗೂ ಮರೆಯಲಾಗದ ಅನುಭವಗಳಿವು

1994 ರ ಅಗಸ್ಟ್ ನಲ್ಲಿ ಕಟೀಲಿನಲ್ಲಿ ಸಂಸ್ಕೃತ ಎಂಎಗೆ ಸೇರಿದ್ದೆ.ಅದಾಗಲೇ ನನಗೆ ಪ್ರಸಾದರೊಂದಿಗೆ ಮದುವೆಯಾಗಿ ಒಂದೂವರೆ ವರ್ಷವಾಗಿತ್ತು

ನನ್ನ ಕಲಿಕೆಗೆ ಮನೆ ಮಂದಿಯಿಂದ ತೀವ್ರ ವಿರೋಧ ಬಂದಕಾರಣ ಎಲ್ಲರನ್ನೂ ಎದುರು ಹಾಕಿಕೊಂಡು ಕಟೀಲಿನಲ್ಲಿ ಸಂಸ್ಕೃತ ಎಂಎ ಗೆ ಸೇರಿದ್ದೆ

ಕಟೀಲು ಕಾಲೇಜು ಪ್ರಿನ್ಸಿಪಾಲರಾಗಿದ್ದ ಡಾ.ಜಿ ಎನ್ ಭಟ್ ಅವರಿಂದಾಗಿ ಎಕ್ಕಾರಿನ ನಾಗವೇಣಿ‌ ಅಮ್ಮ ನಮಗೊಂದು ಬಾಡಿಗೆ ಮನೆ ಒದಗಿಸಿದ್ದರು.ಅದು ಮೋಟು ಗೋಡೆಯ ಮಣ್ಣಿನ‌ಮನೆ

ಪೂರ್ತಿ ಒರಳೆ ಹತ್ತಿದ ಮನೆ.ನಮಗೋ ನಮ್ಮ ಆದಾಯಕ್ಕೆ ಒಂದು ಮನೆಯಂತಹದ್ದು ಸಿಕ್ಕಿದರೆ ಸಾಕಿತ್ತು

ಬೆಂಗಳೂರಿನಲ್ಲಿದ್ದ ಕೆಲಸವನ್ನು ಬಿಟ್ಟು ಪ್ರಸಾದ್ ಊರಿಗೆಬಂದಿದ್ದರು.ನಂತರ ನನ್ನ ಕಲಿಕೆಯ ಕಾರಣಕ್ಕೆ ಮನೆಯಲ್ಲಿ ವಿವಾದ ಉಂಟಾದಾಗ ಮತ್ತೆ ಮಂಗಳೂರಿನ ವೆಟರ್ನರಿ ಶಾಪೊಂದರಲ್ಲಿ ತಿಂಗಳಿಗೆ 800₹ ವೇತನಕ್ಕೆ ಅರೆಕಾಲಿಕ ಕೆಲಸಕ್ಕೆ ಸೇರಿದ್ದರು

ಕಟೀಲಿನಿಂದ ಮಂಗಳೂರಿಗೆ ಹೋಗಿಬರಲು ತಿಂಗಳಿಗೆ 300₹ ಖರ್ಚಾಗುತ್ತಿತ್ತು.ಉಳಿದ ಐದು ನೂರು ರುಪಾಯಿಗಳಲ್ಲಿ ಮನೆ ಬಾಡಿಗೆ ಕಟ್ಟಿಉಳಿದ ಊಟ ತಿಂಡಿಯಖರ್ಚನ್ನು ನಿಭಾಯಿಸಬೇಕಿತ್ತು

ನಮ್ಮ‌ ಅದೃಷ್ಟಕ್ಕೆ ಎಕ್ಕಾರಿನ ಮನೆಯನ್ನು ನಾಗವೇಣಿ‌ ಅಮ್ಮ 150₹ ಬಾಡಿಗೆಗೆ ಕೊಟ್ಟರು.

800₹ ನಲ್ಲಿ 30+-150=450  ಕಳೆದು ಉಳಿದ 350 ರಲ್ಲಿ ಇಡೀ ತಿಂಗಳು ಕಳೆಯಬೇಕಿತ್ತು.ಅದರಲ್ಲಿ ದಿನಕ್ಕೆ ಒಂದೂವರೆ ರುಪಾಯಿಯಂತೆ ತಿಂಗಳಿಗೆ  37.50₹ ನನಗೆ ಎಕ್ಕಾರಿನಿಂದ ಕಟೀಲಿಗೆ ಹೋಗಿ ಬರಲು ಬಸ್ಸಿಗೆ ಖರ್ಚಾಗುತ್ತಿತ್ತು.

ಈ ಕಷ್ಟಕಾಲದಲ್ಲಿ ನನಗೆ ಸಹಾಯಕ್ಕೆ ಬಂದದ್ದು ಕಟೀಲಿನ ಮಧ್ಯಾಹ್ನದ ಊಟ

ಕಟೀಲು ವಿದ್ಯಾ ಸಂಸ್ಥೆಯಲ್ಲಿ ಓದುವ ಎಲ್ಲ ಮಕ್ಕಳಿಗೂ ಉಚಿತ ಊಟದ ವ್ಯವಸ್ಥೆ ಇತ್ತು

ಇದಲ್ಲದೆ ಕಟೀಲು ದೇವಾಲಯದಲ್ಲಿಯೂ ನಮಗೆ ಊಟ ಮಾಡಲು ಅವಕಾಶವಿತ್ತು.ಸಂಸ್ಕೃತ ಓದುತ್ತಿದ್ದವರಲ್ಲಿ ಒಬ್ಬಿಬ್ಬರನ್ನು ಹೊರತು ಪಡಿಸಿದರೆ ಉಳಿದವರೆಲ್ಲರೂ ಬ್ರಾಹ್ಮಣರಾಗಿದ್ದು ದೇವಾಲಯದಲ್ಲಿನ ಬ್ರಾಹ್ಮಣರ ಪಂಕ್ತಿಗೆ ಹೋಗಬಹುದಿತ್ತು.ನಿತ್ಯವೂ ಪಾಯಸದ ಊಟ.ಆಗಾಗ ಯಾರಾದರೂ ಚಂಡಿಕಾ ಹೋಮವನ್ನೋ ಇನ್ನೇನೋ ವಿಶೇಷ ಪೂಜೆಗಳಿದ್ದರೆ ಪಾಯಸ ಮಾತ್ರವಲ್ಲದೆ ಹೋಳಿಗೆ ಲಾಡು ಮೊದಲಾದ ಸಿಹಿ ಭಕ್ಷ್ಯಗಳೂ ಇರುತ್ತಿದ್ದವು.ಜೊತೆಗೆ ನಮಗೆ ಎರಡು ರುಪಾಯಿ ಐದು ರುಪಾಯಿ ಊಟ ದಕ್ಷಿಣೆ ಸಿಗುತ್ತಿತ್ತು.ವಾರಕ್ಕೊಂದಾದರೂ ಇಂತಹ ಊಟ ದಕ್ಷಿಣೆ ಸಿಗುತ್ತಿತ್ತು.ನಮಗೆ ಬಹಳ ಖುಷಿ ಆಗುತ್ತಿತ್ತು.ಆಗಿನ ಐದು ರುಪಾಯಿಗೆ ತುಂಬಾ ಬೆಲೆ ಇತ್ತು.ಸಂಸ್ಕೃತ ಓದಲು ಬಂದ ನಾವ್ಯಾರೂ ಸಿರಿವಂತರಾಗಿರಲಿಲ್ಲ.ಒಂದೇ ದೋಣಿಯ ಪಯಣಿಗರಾಗಿದ್ದೆವು.ಹಾಗಾಗಿ ಚಂಡಿಕಾ ಹೋಮ‌ಇದ್ದ ದಿನ ನಮಗಾಗುತ್ತಿದ್ದ ಸಂತೋಷ ವರ್ಣನಾತೀತ

ಅದರೆ ಅದನ್ನು ತೋರಿಸಿಕೊಳ್ಳುತ್ತಿರಲಿಲ್ಲ.ಈ ಮಧ್ಯಾಹ್ನದ ಊಟದ ವ್ಯವಸ್ಥೆ ನಮಗೆ ಬಹಳಷ್ಟು ಉಪಕಾರ ಮಾಡಿತ್ತು.ಒಂದು ಹೊತ್ತು ಹೊಟ್ಟೆ ತುಂಬಾ ಉಣ್ಣುದಕ್ಕೆ ಅಡ್ಡಿ ಇರಲಿಲ್ಲ.ಅಲ್ಲಿ ಅಸ್ರಣ್ಣರು ಮತ್ತಿತರರು ನಮಗೆ ಒತ್ತಾಯ ಮಾಡಿ ಪಾಯಸ ಇನ್ನಿತರ ಊಟದ ವಸ್ತುಗಳನ್ನು ಬಡಿಸುತ್ತಿದ್ದರು.ಅವರ ಪ್ರೀತಿಯನ್ನು ಮರೆಯಲಾಗದು

ಕಟೀಲಿನ ಸಾರಿನ ಪರಿಮಳ ನೆನಪಾದರೆ ನನಗೆ ಮನೆಯಲ್ಕಿ ಮಾಡಿದ ಸಾರು ಸಾಂಬಾರಿನ ರುಚಿ ಪೇಲವೆನಿಸುತ್ತದೆ.ಅಲ್ಲಿ ಒಂದು ಉಪ್ಪಿನಕಾಯಿ ರೀತಿಯ ವ್ಯಂಜನ ಬಡಿಸುತ್ತಿದ್ದರು.ಅದ್ಭುತ ರುಚಿ ಅದು.ಅಷ್ಡು ರುಚಿಯಾದ ವಸ್ತುವನ್ನು ನಾನು ಬೇರೆಲ್ಲೂ ತಿಂದಿಲ್ಲ.ಇನ್ನು ಪ್ರತಿ ಶುಕ್ರವಾರ ಗಂಜಿ ಪ್ರಸಾದ ಇರುತ್ತಿತ್ತು.ಇದನ್ನು ಗೋದಿಯಿಂದ ಹಾಲು ಹಾಕಿ ಬೇಯಿಸಿ ತಯಾರಿಸುತ್ತಿದ್ದರೆಂದು ನೆನಪು.ಬಹಳ ರುಚಿಯಾದ ಗಂಜಿ ಇದು.ಇದಕ್ಕಾಗಿ ಶುಕ್ರವಾರ ಆಗುವುದನ್ನೇ ನಾನು ಕಾಯುತ್ತಿದ್ದೆ

ದೇವಾಲಯದ ಉಟದ ಸಮಯ ಒಂದೇ ಇರುತ್ತಿರಲಿಲ್ಲ.ಶುಕ್ರವಾರ ತಡ ಆಗುತ್ತಿತ್ತು.ನಮ್ಮ ಉಪನ್ಯಾಸಕರಾದ ಪದ್ಮನಾಭ ಮರಾಠೆ ಮತ್ತು ನಾಗರಾಜರೂ ದೇವಾಲಯಕ್ಕೆ ಊಟಕ್ಕೆಬರುತ್ತಿದ್ದರು.ಹಾಗಾಗಿ ಉಟದ ಸಮಯಕ್ಕೆ ಸರಿಯಾಗಿ ಪಾಠದ ಸಮಯ ಹೊಂದಾಣಿಕೆ ಆಗುತ್ತಿತ್ತು.ಕೆಲವೊಮ್ಮೆ ಹೊಟ್ಟೆ ಬಿರಿವಷ್ಟು ಉಂಡ ದಿನ ನಮಗೆ ತರಗತಿಗೆ ಹೋಗಲು ಇಷ್ಟವಿರುತ್ತಿರಲಿಲ್ಲ.ಅಂತಹ ಸಂದರ್ಭದಲ್ಲಿ ನಮ್ಮನ್ನು ಬಿಟ್ಡು ಬಿಡುತ್ತಿದ್ದರು‌.ನಾನುಮನೆಗೆ ಬಂದು ಗಡದ್ದಾಗಿ ನಿದ್ರೆ ಹೊಡೆಯುತ್ತಿದ್ದೆ

ನಾನು ಬಿಎಸ್ಸಿ ಮಾಡಿ ನಂತರ ಸಂಸ್ಕೃತ ಎಂಎ ಗೆ ಸೇರಿದ್ದು.ವಿಜ್ಣಾನದ ಕಷ್ಟದ ಪಾಠಗಳು ಶಿಸ್ತನ್ನು ಬಯಸುವ ಪ್ರಯೋಗ ತರಗತಿಗಳಿಂದ ನಾನು ಸೋತು ಸುಣ್ಣವಾಗಿದ್ದೆ.ನಂತರ ಎಂಎ ಗೆ ಸೇರಿದಾಗ ಕಲಿಕೆ ಎಷ್ಟು ಸುಲಭದ್ದು ಎನಿಸಿತ್ತು.ಡಾ.ಕೆ ನಾರಾಯಣ ಭಟ್ಟರು ಅದ್ವಿತೀಯ ವಿದ್ವಾಂಸರು‌.ಪ್ರಗಲ್ಭ ಪಂಡಿತರು.ಅವರ ಪಾಠ ಕೇಳುದೊಂದು ಭಾಗ್ಯವೇ ಸರಿ..ಜೊತೆಗೆ ಪದ್ಮನಾಭ ಮರಾಠೆಯವರು ಆಗಷ್ಟೇ ಎಂ ಎ ಮುಗಿಸಿದ ಎಳೆಯರಾಗಿದ್ದರೂ ಪಾಂಡಿತ್ಯಕ್ಕೆ ಕೊರತೆ ಇರಲಿಲ್ಲ.ಡಾ.ಜಿ ಎನ್ ಭಟ್ಟರೂ ಅದ್ವಿತೀಯ ವಿದ್ವಾಂಸರು.ಆದರೆ ಅಲಂಕಾರ ಶಾಸ್ತ್ರ( ಕಾವ್ಯ ಮೀಮಾಂಸೆ) ಪಾಠ ಮಾಡುತ್ತಿದ್ದರು.ವೇದಾಂತವನ್ನು ಐಚ್ಛಿಕ ವಿಷಯವಾಗಿ ತಗೊಮಡಿದ್ದ ಕಾರಣ ನನಗೆ ಕಾವ್ಯ ಮೀಮಾಂಸೆ ಒರಲಿಲ್ಲ.ಹಾಗಾಗಿ ಡಾ.ಜಿ ಎನ್ ಭಟ್ಟರ ಪಾಠ ಕೇಳುವ ಅವಕಾಶ ನನಗಿರಲಿಲ್ಲ

ಬಹುಶಃ ಇಲ್ಲಿನ ಉತ್ತಮ ಉಪನ್ಯಾಸಕರಿಂದಾಗಿ ಸಂಸ್ಕೃತವನ್ನು ನಾನು ಬಹಳಷ್ಟು ಇಷ್ಟ ಪಟ್ಟು ಕಲಿತೆ.ಪದವಿಯಲ್ಲಿ ಐಚ್ಛಿಕ ವಿಷಯವಾಗಿ ಸಂಸ್ಕೃತ ಕಲಿತು Rank ಪಡೆದಿದ್ದ ರಮಿತಾ ಶ್ರೀದೇವಿ‌ ಮೊದಲಾದವರು ನನ್ನ ಸಹಪಾಠಿಗಳಾಗಿದ್ದರು.ಪದವಿಯಲ್ಲಿ ಎರಡು ವರ್ಷ ದ್ವಿತೀಯ ಭಾಷೆಯಾಗಿ ಸಂಸ್ಕೃತ ಕಲಿತ ನನಗೆ ಎಂಎ ಯಲ್ಲಿ ಈ Rank ವಿಜೇತರ ಜೊತೆಗಿನ ಸ್ಪರ್ಧೆ ಸುಲಭದ್ದಾಗಿರಲಿಲ್ಲ.ಆದರೆ ನಾನು ಓದಿ Rank ತೆಗೆದು ಒಳ್ಳೆಯ ಕೆಲಸವನ್ನು ಗಳಿಸಲೇ ಬೇಕೆಂದು ನಿರ್ಧರಿಸಿ ಎಂಎ ಗೆ ಸೇರಿದವಳು.ಹಾಗಾಗಿ ದಿನಕ್ಕೆ ಕಡಿಮೆ ಎಂದರೂ ಎಂಟು ಗಂಟೆ ಓದುತ್ತಿದ್ದೆ.ಆದ್ದರಿಂದ ನನಗೆ ಮೊದಲ Rank ಪಡೆಯಲು ಸಾಧ್ಯವಾಯಿತು

ಇಂದಿಗೂ ನಾನೇನಾದರೂ ನನ್ನ ಭಾಷಣ ಚಂದ ಆದರೆ ಅದಕ್ಕೆ ಕಾರಣ ಇಲ್ಲಿನ ಸಂಸ್ಕೃತ ಕಲಿಕೆ ಮತ್ತು ಉಪನ್ಯಾಸಕರು‌.ನಮ್ಮಲ್ಲಿ ಸೆಮಿನಾರ್ ಮಾಡಿಸಿ ಹೊರ ಜಗತ್ತನ್ನು ಸಮರ್ಥವಾಗಿ ಎದುರಿಸಿ ಗೆಲ್ಲವಂತೆ ನಮ್ಮನ್ನು ತಯಾರು .ಮಾಡಿದ್ದರು.

ಪ್ರಸಾದರ ವೇತನದಲ್ಲಿ ನಮಗೆ ಒಂದು ಹೊತ್ತು ಮಾತ್ರ ಊಟ ಮಾಡಲು ಸಾಧ್ಯವಿತ್ತು

ಆದರೆ ಕಟೀಲಿನ ಮದ್ಯಾಹ್ನದ ಊಟ ಎರಡು ಹೊತ್ತೂ ಊಟ ಸಿಗುವಂತೆ ಮಾಡಿತ್ತು.ಮತ್ತು ಅದು ಬಹಳ ರುಚಿಕರವಾದ ಊಟ ಕೂಡ.ಹಾಗಾಗಿ ನಾನು ಕಟೀಲಿನಲ್ಲಿ ಎರಡು ವರ್ಷ ಹೊಟ್ಟೆ ತುಂಬಾ ಉಂಡದ್ದನ್ನೂ ಪಾಠ ಕೇಳಿದ್ದನ್ನೂ ಜೀವನವಿಡೀ ಮರೆಯಲಾಗದು.

ನಾನು ಎರಡನೇ ವರ್ಷ ಎಂಎಗೆ ಬರುವಷ್ಟರಲ್ಲಿ ಪ್ರಸಾದರಿಗೆ ಮಂಗಳೂರಿನಲ್ಲಿ ಒಳ್ಳೆಯ ಕೆಲಸ ಸಿಕ್ಕಿತ್ತು.ಹಾಗಾಗಿ ಮುಂದೆ ಅಂತಹ ಸಮಸ್ಯೆ ಏನೂ ಆಗಲಿಲ್ಲ

ಉಚಿತ ಊಟ ತಿಂಡಿಗಳು ಮಕ್ಕಳನ್ನು ಹಾಳು ಮಾಡುವುದಿಲ್ಲ

ಬದಲಿಗೆ ಮಕ್ಕಳೆಡೆಗಿನ ಉದಾರತೆ ತರಗತಿಗೆ ಹಾಜರಾಗದೇ ಇದ್ದರೂ ಪೃಇಕ್ಷೆ ಬರೆಯಲು ಬಿಡುವುದು,ಫಲಿತಾಂಶಕ್ಕಾಗಿ ತೀರಾ ಉದಾರವಾಗಿ‌ಮೌಲ್ಯ ಮಾಪನ ಮಾಡುದು.ಪಾಸ್ ಮಾಡುದು ಶಿಕ್ಷಣದ ಗುಣಮಟ್ಟ ಕುಸಿಯಲು ಕಾರಣವಾಗಿ

ಉಚಿತ ಉಟ ಕೊಟ್ಟರೆ ಹಾಲಾಗುವುದಾದರೆ ನಾವೆಲ್ಲ ಹಾಳಾಗಿ ಎಕ್ಕುಟ್ಟಿ ಹೋಗಿರುತ್ತಿದ್ದೆವು

ಆದರೆ ನಾವ್ಯಾರೂ ಉಚಿತ ಊಟ ಸಿಕ್ಕ ಕಾರಣಕ್ಕೆ ಹಾಳಾಗಿಲ್ಲ.ನನ್ನ ಸಹಪಾಠಿಗಳೆಲ್ಲರೂ ಅವರವರ ಕ್ಷೇತ್ರದಲ್ಲಿ ಯಶಸ್ವಿಯಾಗಿದ್ದಾರೆ.ಅವಿನಾಶ ಪುತ್ತೂರಿನಲ್ಲಿ ಸರಸ್ವತಿ ವಿದ್ಯಾಮಂದಿರ ಎಂಬ ವಿದ್ಯಾ ಸಂಸ್ಥೆಯನ್ನು ನಡೆಸುತ್ತಿದ್ದಾರೆ.ಗಜಾನನ ಮರಾಠೆ ,ರಮೇಶ ಆಚಾರ್ಯ ಡಾ.ಈಶ್ವರ ಪ್ರಸಾದ್  ಕಮಲಾಯಿನಿಯರು ಉತ್ತಮ ಶಿಕ್ಷಕ/ ಉಪನ್ಯಾಸಕರಾಗಿ ಹೆಸರು ಗಳಿಸಿದ್ದಾರೆ

ರಮಿತಾ ಭಾಷೆಯೇ ತಿಳಿಯದ ಊರು ವಯನಾಡಿನ ಮಲೆಯಾಳ ಕಲಿತು ತನ್ನದೇ ಅದ ಸಣ್ಣ ಉದ್ಯಮ‌ನಡೆಸುತ್ತಿದ್ದಾರೆ.

ನನ್ನ ಸಹಪಾಠಿ ನೀತಾ ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ.ಆದರೆ ಮುಂದೆ ತುಂಬಾ ಓದಿ ಉತ್ತಮ ಕೆಲಸದಲ್ಲಿದ್ದಾರೆ ಎಂದು ಕೇಳಿರುವೆ.

ಉಚಿತ ಊಟ ಬಡ ಮಕ್ಕಳಿಗೆ ಅಗತ್ಯವಾಗಿ ನೀಡಬೇಕಾದದ್ದೇ..ಆದರೆ ಪಾಠಕ್ಕಿಂತ ಊಟ ಉಪಾಹಾರ ಹಾಲು ಮೊಟ್ಟೆ ಸಕಾಲದಲ್ಲಿ ಬೇಯಿಸಿ ಕೊಡುವ ಕೆಲಸದಲ್ಲಿ ಮುಳುಗಿ ಹೋಗುವ ಶಿಕ್ಷಕರಿಗೆ ಪಾಠ ಮಾಡಲು ಸಮಯವಿಲ್ಲದಂತಾಗಬಾರದು ಅಷ್ಟೇ..

ದಿನೇ ದಿನೇ ಶಿಕ್ಷಣ ಮಟ್ಟ ಕುಸಿಯುತ್ತಿದೆ.ಮೊದಲು ಕಾಗುಣಿತ ಗೊತ್ತಿಲ್ಲದ ಹತ್ತನೆಯ ತರಗತಿಯಮಕ್ಕಳು ಪಾಸಾಗಿ ಪಿಯು ಗೆ ಬರುತ್ತಿದ್ದರೆ ಈಗ ಅಕ್ಷರ ಮಾಲೆಯ ಬರವಣಿಗೆಯನ್ನೇ ಅರಿಯದವರು ಬರುತ್ತಿದ್ದಾರೆ.ಸರಳವಾಕ್ಯಗಳನ್ನು ಮಾಡಲು ಬರೆಯಲು ತಿಳಿಯದವೇ ಹೆಚ್ಚಾಗಿದ್ದಾರೆ

ಊಟ ತಿಂಡಿ ಹಾಲು ಹಣ್ಣು ನೀಡುವಷ್ಟೇ ಕಾಳಜಿಯಲ್ಲಿ ಗುಣ ಮಟ್ಟದ ಶಿಕ್ಷಣವನ್ನು ನೀಡುವ ಅಗತ್ಯವಿದೆ ಎಂದು ನನಗನಿಸುತ್ತದೆ

- ಡಾ.ಲಕ್ಷ್ಮೀ ಜಿ ಪ್ರಸಾದ್ .


No comments:

Post a Comment