ಅಕ್ಕನೆಂಬ ಎರಡನೆಯ ಅಮ್ಮ
ಮನೆಯಲ್ಲಿ ಹಿರಿಯಕ್ಕ ಹಿರಿಯಣ್ಣ ಹಿರಿ ಸೊಸೆ ಆಗುದು ಬಹಳ ಕಷ್ಟದ ವಿಚಾರ.ಆದರೆ ಮೊದಲಿನ ಎರಡು ನಮ್ಮ ಕೈಯಲ್ಲಿಲ್ಲ
ಮನೆಯ ಹಿರಿಯಕ್ಕ ಎರಡನೆಯ ಅಮ್ಮನಿದ್ದಂತೆ.
ಮೊದಲೆಲ್ಲ ಕುಟುಂಬ ನಿಯಂತ್ರಣ ಉಪಾಯಗಳು ಇರಲಿಲ್ಲ.ಇಷ್ಟ ಇದ್ದೋ ಇಲ್ಲದೆಯೋ ಎಂಟು ಹತ್ತು ಮಕ್ಕಳು ಸಾಮಾನ್ಯ ವಿಚಾರ
ಇವರಲ್ಲಿ ಶುರುವಿನದ ಹುಡುಗಿಯಾಗಿದ್ದರೆ ನಂತರದವರನ್ನು ನೋಡಿಕೊಳ್ಳುವ ಜವಾಬ್ದಾರಿ ಇವಳಿಗೆ ಬೀಳುತ್ತದೆ.ಅದವಳಿಗೆಂದೂ ಹೊರೆ ಅನಿಸುವುದಿಲ್ಲ ಯಾಕೆಂದರೆ ಅವಳು ನೋಡಿಕೊಳ್ಳುವುದು ಅವಳ ಪ್ರೀತಿಯ ತಮ್ಮ ತಂಗಿಯರನ್ನು..ತಾಯಿಗಿಂತ ಹೆಚ್ಚಿನ ಪ್ರೀತಿಯಿಂದ ತಿನ್ನಿಸಿ ಉಣ್ಣಿಸಿ ಕುಂಡೆ ಕೂಡ ತೊಳೆದು ಹಾಡು ಹೇಳಿ ನಿದ್ರಿಸುವವಳು ಹಿರಿಯಕ್ಕ.ತಮ್ಮ ತಂಗಿಯರನ್ನು ನೋಡಿಕೊಳ್ಳುವ ಜವಾಬ್ದಾರಿಯಿಂದಾಗಿ ಕಲಿಕೆಯ ಅವಕಾಶವನ್ನೂ ಅನೇಕ ಅಕ್ಕಂದಿರು ಕಳೆದುಕೊಂಡಿರುತ್ತಾರೆ.ಆದರೆ ಒಂದಿನ ಮದುವೆಯಾಗಿ ಅವಳು ಗಂಡನ ಮನೆಗೆ ಹೋಗುತ್ತಾಳೆ.ನಂತರ ಅವಳು ಹುಟ್ಟಿ ಬೆಳೆದ ಮನೆ ತನ್ನದಲ್ಲ ಎಂಬ ಅರಿವು ನಿದಾನಕ್ಕೆ ಆಗುತ್ತದೆ
ತಾನು ಉಣ್ಣಿಸಿ ತಿನ್ಸಿ ತಾಯಿಯಂತೆ ಸಾಕಿದ ತಮ್ಮ ತಂಗಿಯರು ಬೆಳೆದು ದೊಡ್ಡವರಾದಾಗ ಈ ಬಡ ಅಕ್ಕನನ್ನು ಮರೆತು ಬಿಡುತ್ತಾರೆ ಅವಳು ಮನೆಗೆ ಬಂದರೆ ಭಾರವಾದಂತೆ ತೋರ್ಪಡಿಸುವ ತಮ್ಮ ತಂಗಿಯರೂ ಇದ್ದಾರೆ.ಇದು ಜೆನರಲ್ ಆಗಿ ಎಲ್ಲೆಡೆ ಕಾಣುವ ಹಿರಿಯ ಅಕ್ಕಂದಿರ ಕಥೆ
ಹಾಗಾದರೆ ನಮ್ಮ ಮನೆಯ ಹಿರಿಯಕ್ಕ ಹೇಗಿದ್ದಳು..? ಹಿರಿಗೂ ಕಿರಿಗೂ ನನಗಿರುವುದು ಒಂದೇ ಅಕ್ಕ.ಹೆಸರು ಶಾರದೆ ಮನೆಯಲ್ಲಿ ಕರೆಯುವುದು ವಾಣಿ ಎಂದು.ನನಗೂ ಅಕ್ಕನಿಗೂ ಆರು ವರ್ಷದ ಅಂತರ ದೊಡ್ಡ ತಮ್ಮನಿಗೂ ಅಕ್ಕನಿಗೂ ಹತ್ತು ವರ್ಷದ ಅಂತರ,ಸಣ್ಣ ತಮ್ಮನಿಗೂ ಅಕ್ಕನಿಗೂ ಹನ್ನೆರಡು ವರ್ಷದ ಅಂತರ.
ನಾನು ಹೆಚ್ಚಾಗಿ ಅಜ್ಜನ ಮನೆಯಲ್ಲಿ ಬೆಳೆದದ್ದು.ಮೀಯಪದವು ಶಾಲೆಯಲ್ಲಿ ಒಂದನೆ ಕ್ಲಾಸ್ ಪಾಸಾಗಿ ಎರಡನೆಯ ತರಗತಿಗೆ ಕೋಳ್ಯೂರು ಶ್ರೀ ಶಂಕರನಾರಾಯಣ ಶಾಲೆಗೆ ಸೇರಿದ್ದೆ.ಎರಡನೆಯ ತರಗತಿಗೆ ಸೇರುವ ತನಕ ಎಂದರೆ ಏಳನೆಯ ವಯಸ್ಸಿನ ತನಕ ನನಗೆ ಅಣ್ಣ ಅಕ್ಕನ ಬಗ್ಗೆ ಅವರು ಹೇಗಿದ್ದರು ಎಂಬ ಬಗ್ಗೆ ನೆನಪಿಲ್ಲ
ನಂತರವೂ ನನ್ನ ಇಬ್ಬರು ತಮ್ಮಂದಿರನ್ನು ಅತಿಯಾಗಿ ಪ್ರೀತಿಸುವ ಅಕ್ಕ ನನಗೆ ಇಷ್ಟವಾಗಿರಲಿಲ್ಲ.ನಾನು ಸ್ವಲ್ಪ ದೊಡ್ಡವಳಾದ ಕಾರಣ ಅಕ್ಕನ ಜೊಯೆಗೆ ಅಡಿಕೆ ಹೆಕ್ಕಲು ಬೇಸಿಗೆಯಲ್ಲಿ ಗದ್ದೆಯಲ್ಲಿ ಧಾನ್ಯ ಪೊರ್ಪಲು ನನ್ನನ್ನು ಕರೆದೊಯ್ಯುತ್ತಿದ್ದಳು.ನನಗೆಂದೂ ಬೈದು ಬಡಿದು ಮಾಡಿದವಳಲ್ಲ
ಸುಮಾರು ಹೈಸ್ಕೂಲಿಗೆ ಬಂದ ನಂತರ ಅಕ್ಕನ ಪ್ರೀತಿಯ ಅರಿವಾಯಿತು ನನಗೆ.
ಶಾಲೆಗೆ ಹೋಗಿ ಬಂದು ಇಬ್ಬರು ತಮ್ಮಂದಿರಿಗೆ ಬಡಿಸಿ ಉಣ್ಸಿ ತಿನ್ಸಿ ಕೈತೊಳೆಸುವ ಕೆಲಸ ಅವಳದಾಗಿತ್ತು.ಮಣ್ಣಿನ ಮನೆ.ಈ ಮಕ್ಕಳೋ ಉಣ್ಣುವಾಗ ತಿನ್ನುವಾಗ ಚೆಲ್ಲುತ್ತಿದ್ದವು.ಮೈ ಕೈಗೆ ಮಾಡಿಕೊಳ್ತಿದ್ದವು
ಇವರನ್ನು ಸ್ನಾನ ಮಾಡ್ಸಿ ತಂದು ಮಲಗಿಸುವುದು ,ನಾವು ಊಟ ಮಾಡಿದ ಬಟ್ಟಲನ್ನು ತೆಗೆದು ಬಿದ್ದದ್ದನ್ನೆಲ್ಲ ಸ್ವಚ್ಛ ಮಾಡಬೇಕಿತ್ತು
ಕೆಲವೊಮ್ಮೆ ಈ ಕೆಲಸ ಸಾಕಾಗಿ ಊಟ ಮಾಡಿದರೆ ತಮ್ಮ ತಂಗಿಯರಿಗೂ ಬಡಿಸಿ ತಿನ್ನಿಸಿ ಸ್ವಚ್ಛ ಮಾಡುವ ಕೆಲಸ ಮಾಡಬೇಕಾಗುತ್ತದೆ ಎಂದು ಹಸಿವಿಲ್ಲ ಎಂದು ಹೇಳಿ ಮಲಗುತ್ತಿದ್ದಳು.ನಂತರ ಅಮ್ಮನೇ ಎಲ್ಲರಿಗೂ ಬಡಿಸಿ ಅವಳನ್ನೂ ಎಬ್ಬಿಸಿ ಉಣ್ಣಲು ಹೇಳುತ್ತಿದ್ದರು
ತುಂಬಾ ಕೆಲಸವಿದ್ದ ದಿನ ಹೀಗೆ ಮಾಡಿದರೆ ಅಮ್ಮನಿಗೆ ಕೋಪ ಬಂದು ಅಕ್ಕನನ್ನು ಬೈದು ಎರಡು ಕೊಟ್ಟು ಜೋರು ಮಾಡುತ್ತಿದ್ದರು.ನಂತರ ಅಕ್ಕ ಅಳುತ್ತಾ ಎದ್ದು ನಮಗೆಲ್ಲ ಊಟ ಬಡಿಸಿ ತಮ್ಮಂದಿರಿಗೆ ತಿನ್ನಿಸುತ್ತಿದ್ದಳು
ಆಗ ಅಕ್ಕ ಆರನೆಯ ತರಗತಿಯಲ್ಲಿ ಓದುತ್ತಿದ್ದ ಪುಟ್ಟ ಹುಡುಗಿಯೇ..ಈಗಾದರೆ ಅಮ್ಮಂದಿರು ತಲೆ ಬಾಚಿ ಸಾಕ್ಸ್ ಹಾಕಿ ಬುತ್ತಿಗೆ ಹಾಕಿ ಬ್ಯಾಗ್ ಹೊತ್ತುಕೊಂಡು ಕೈ ಹಿಡಿದು ನಡೆಸಿ ಸ್ಕೂಲ್ ಬಸ್ ಹತ್ತಿಸುವ ವಯಸ್ಸು
ಮನೆಯ ಹಿರಿಯಕ್ಕನಿಗೆ ಬೇಗ ಪ್ರೌಢತೆ ಬರುತ್ತದೆ.ಅಕ್ಕ ಸುಮಾರು ನಾಲ್ಕೈದು ಮೈಲು ದೂರದ ಶಾಲೆಗೆ ನಡೆದುಕೊಂಡು ಹೋಗಿ ಬರಬೇಕಾಗಿತ್ತು
ಬೆಳಗ್ಗೆ ಬೇಗನೇ ಎದ್ದು ಅಡಿಕೆಹೆಕ್ಕಲು ಹೋಗುತ್ತಿದ್ದಳು.ತಡವಾದರೆ ಅಕ್ಕ ಪಕ್ಕದ ತೋಟದವರು ನಮ್ಮ ತೋಟದ ಅಡಿಕೆಯನ್ನು ಹೆಕ್ಕಿಯಾರು ಎಂಬ ಆತಂಕ.
ನನಗೆ ಐದು ವರ್ಷ ಆಗುವಾಗ ಎಂದರೆ ಅಕ್ಕನಿಗೆ ಹನ್ನೊಂದು ವರ್ಷ ಆಗುವಾಗ ಮನೆ ಆಸ್ತಿ ಪಾಲಾಗಿ ಬರಿಗೈಯಲ್ಲಿ ಬಂದು ಸಿಕ್ಕ ಅಂಗೈ ಅಗಲ ಜಾಗದಲ್ಲಿ ಬರೆ ಕಡಿದು ಸಾಲ ಮಾಡಿ ಮನೆ ಕಟ್ಟಿದ್ದರು ತಂದೆ.
ಈ ಸಾಲವನ್ನು ಮುಗಿಸುದಕ್ಕಾಗಿ ಅಪ್ಪ ಅಮ್ಮ ಹಗಲು ರಾತ್ರಿ ದುಡಿಯುತ್ತಿದ್ದರು
ಅಗ ದೊಡ್ಡ ತಮ್ಮ ಎರಡು ವರ್ಷದ ಮಗುವಾದರೆ ಸಣ್ಣವನು ಆಗಷ್ಟೇ ಹುಟ್ಟಿದ ಮಗು.ಅವನಿಗೆ ಎರಡು ತಿಂಗಳಾಗುವಾಗ ಮಣ್ಣಿನ ನೀರು ಒಸರುವ ಹೊಸ ಮನೆಗೆ ಬಂದಿದ್ದೆವು
ಸಾಲ ಬೂಟುವುದಕ್ಕಾಗಿ ಅಮ್ಮ ನಮ್ಮ ಹೊಲದ ಬತ್ತ ಕೊಯ್ತುವ ಬತ್ತ ಬಡಿಯುವ ಕೇರುವ ಬತ್ತ ಬೇಯಿಸುವ ಒಣಗಿಸುವ ಕೆಲಸವನ್ನೂ ಮಾಡುತ್ತಿದ್ದರು.ಅಳುಗಳಿಂದ ಮಾಡಿಸಿದರೆ ಸಂಬಳ ಕೊಡಬೇಕಾಗುತ್ತದೆ.ಬಂದ ಆದಾಯವೆಲ್ಲ ಅದಕ್ಕೆ ಸರಿ ಹೋಗುತ್ತದೆ.ಸಾಲ ಹಿಂದೆ ಕೊಡಲು ದುಡ್ಡು ಉಳಿಯುವುದಿಲ್ಲ.ಅಮ್ಮನ ಜೊತೆಗೆ ಅಕ್ಕ ಕೆಲಸಕ್ಕೆ ಸೇರುತ್ತಿದ್ದಳು
ಬಿದ್ದ ಅಡಿಕೆಯನ್ನು ಅಕ್ಕ ಪಕ್ಕದ ತೋಟದವರು ಹೆಕ್ಕಿಯಾರು ಎಂಬ ಆತಂಕದಿಂದ ಅಕ್ಕ ಬೆಳಗ್ಗೆ ಬೇಗನೇ ಎದ್ದು ಚಳಿಗೆ ನಡುಗುತ್ತಾ ಅಡಿಕೆ ಹೆಕ್ಕುತ್ತಿದ್ದಳು
ಅಕ್ಕ ಹತ್ತನೆಯ ತರಗತಿಗೆ ಬರುವವರೆಗೂ ನಮ್ಮ ಊರಿಗೆ ಕರೆಂಟು ಬಂದಿರಲಿಲ್ಲ.ಕಮಟು ವಾಸನೆಯ ಚಿಮುಣಿ ದೀಪದಲ್ಲಿಯೇ ಅಕ್ಕ ಓದಿದ್ದಳು
ಅಮ್ಮನಿಗೆ ಬೇರೆ ಕೆಲಸ ಇದ್ದ ಕಾರಣ ತಮ್ಮ ತಂಗಿಯರಿಗೆ ಬಡಿಸುವ ಉಣಿಸುವ ಹೇಳಿ ಕೊಡುವ ಕೆಲಸ ಅಕ್ಕನ ಪಾಲಿಗೆ ಬಿದ್ದಿತ್ತು ಈ ತಮ್ಮಂದಿರೋ ಬಿಕ್ಕಿ ತಾಕಿ ರಣ ರಂಗ ಮಾಡಿಡುತ್ತಿದ್ದರು.ಇವರನ್ನೆಲ್ಲ ಉಣ್ಣಿಸಿ ಕೈ ಕಾಲು ತೊಳೆಸಿ ಸ್ನಾನ ಮಾಡಿಸಿ ಅವರ ಬಟ್ಟೆ ಒಗೆದು ಹಾಕಿ ನೆಲ ಸಾರಿಸುವ ಕೆಲಸ ಅಕ್ಕ ಮಾಡುತ್ತಿದ್ದಳು
ಅಂತೂ ಅಪ್ಪ ಅಮ್ಮನ ಅವಿರತ ಪರಿಶ್ರಮದಿಂದ ಸಾಲ ಹಿಂದೆ ಕೊಡಲು ಸಾಧ್ಯವಾಯಿತು
ಅಕ್ಕ ಹತ್ತನೆಯ ತರಗತಿಯನ್ನು ಒಳ್ಳೆಯ ಅಂಕಗಳೊಂದಿಗೆ ಪಾಸಾಗಿದ್ದಳು.ನಂತರ ಮುಂದೆ ಓದಿಸಲು ಅಮ್ಮನಿಗೆ ಇಷ್ಟ ಇತ್ತು.ಆದರೆ ಅಪ್ಪನ, ಅಜ್ಜ( ಅಮ್ಮನ ಅಪ್ಪ) ಸೋದರತ್ತೆ ಮೊದಲಾದವರ ತೀವ್ರ ವಿರೋಧ ಇತ್ತು.ಅಕ್ಕನಿಗೆ ಕಾಮರ್ಸ್ ಅಥವಾ ಆರ್ಟ್ಸ್ ಓದಲು ಇಷ್ಟವಿರಲಿಲ್ಲ.ಇರುವುದರಲ್ಲಿ ಸಮೀಪದ ಮಂಜೇಶ್ವರ ಸರ್ಕಾರಿ ಕಾಲೇಜಿನಲ್ಲಿ ವಿಜ್ಞಾನ ಇರಲಿಲ್ಲ.ದೂರದ ಮಂಗಳೂರಿಗೆ ಹೋಗಿ ಬರಲು ಸರಿಯಾದ ಬಸ್ ಸೌಲಭ್ಯವಿರಲಿಲ್ಲ.ವಿಜ್ಞಾನ ಓದಬೇಕಾದರೆ ಉಜಿರೆ ಕಾಲೇಜಿಗೆ ಸೇರಬೇಕಿತ್ತು.ಆದರೆ ಹಾಸ್ಟೆಲ್ ಗೆ ದುಡ್ಡು ಹೊಂದಿಸುವುದೂ ಸಮಸ್ಯೆ ಆಗಿತ್ತು
ಜೊತೆಗೆ ಅಕ್ಕ ತುಂಬಾ ಚಂದ ಇದ್ದು ಇಪ್ಪತ್ತು ಇಪ್ಪತ್ತೆರಡರ ಯುವತಿಯಂತೆ ಭರ್ತಿ ಇದ್ದಳು
ಒಬ್ಬಳೇ ಕಾಲೇಜಿಗೆ ನಿರ್ಜನ ದಾರಿಯಲ್ಲಿ ಹೋಗಿ ಬರುವುದೂ ಅಪಾಯಕಾರಿ ವಿಷಯವೇ ಆಗಿತ್ತು.
ಆದರೂ ದೊಡ್ಡಮ್ಮನ ಮಗಳಂತೆ ಮಂಜೇಶ್ವರದ ಗೋವಿಂದ ಪೈ ಕಾಲೇಜಿನಲ್ಲಿ ಆರ್ಟ್ಸೋ ಕಾಮರ್ಸೋ ಓದಬಹುದಿತ್ತು.ಅವಳ್ಯಾಕೋಮನಸ್ಸು ಮಾಡಲಿಲ್ಲ.ಒಟ್ಟಿನಲ್ಲಿ ಅವಳ ಓದು ಹತ್ತನೆಯ ತರಗತಿಗೆ ನಿಂತು ಹೋಯಿತು.
ಆಗ ಸಣ್ಣ ತಮ್ಮ ಗಂಚ ( ಗಣೇಶ ಅಗ ನಾವು ಅವನನ್ನು ಮುದ್ದಿನಿಂದ ಗಂಚ ಎಂದು ಕರೆಯುತ್ತಿದ್ದೆವು)ನನ್ನು ಒಂದನೆಯ ತರಗತಿಗೆ ಸೇರಿಸಿದ್ದರು
ದಿನಾಲು ಇವನನ್ನು ಎಬ್ಬಿಸಿ ರಮಿಸಿ ಉಣ್ಸಿ ತಿನ್ಸಿ ಎತ್ತಿಕೊಂಡು ಹೋಗಿ ಶಾಲೆಗೆ ಬಿಟ್ಟು ಬರುತ್ತಿದ್ದಳು.ಸಣ್ಣಾಗಿರುವಾಗ ಶಾಲೆಗೆ ಹೋಗಲು ಗಣೇಶ ತುಂಬಾ ಹಿಂದೇಟು ಹಾಕುತ್ತಿದ್ದ.ಬಹುಶಃ ಒಂದನೇ ಎರಡನೆಯ ತರಗತಿಯ ಶಿಕ್ಷಕರು ಮಕ್ಕಳಿಗೆ ವಿಪರೀತ ಹೊಡೆಯುತ್ತಿದ್ದುದೇ ಕಾರಣ..
ನನಗೂ ಎರಡನೆ ತರಗತಿಯಲ್ಲಿ ಕೊಮ್ಮೆ ಮಾಸ್ಟ್ರು ಸಿಕ್ಕಾಪಟ್ಟೆ ಹೊಡೆಯುತ್ತಿದ್ದ ಬಗ್ಗೆ ಸ್ನೇಹಿತೆ ಯಶೋದಾ ಹೇಳ್ತಿರ್ತಾಳೆ.ನಾನು ಒಂದನೆಯ ತರಗತಿ ಮೀಯಪದವಿನ ವಿದ್ಯಾವರ್ಧಕ ಶಾಲೆಯಲ್ಲಿ ಓದಿದ್ದು.ಎರಡನೆಯ ಮೂರನೆಯ ನಾಲ್ಕನೆಯ ತರಗತಿ ಯನ್ನು ನಾನು ಶ್ರೀ ಶಂಕರನಾರಾಯಣ ಅನುದಾನಿತ ಶಾಲೆಯಲ್ಲಿ ಓದಿದ್ದು
ನಾನು ನಾಲ್ಕನೆಯ ತರಗತಿ ಓದುವಾಗ ದೊಡ್ಡ ತಮ್ಮ ಇದೇ ಶಾಲೆಯ ಒಂದನೆ ತರಗತಿಗೆ ಸೇರಿದ್ದ.ದೊಡ್ಡ ತಮ್ಮ ಕೂಡ ಶಾಲೆಗೆ ಹೋಗಲು ಕೇಳುತ್ತಿರಲಿಲ್ಲ.ನಾನು ಕೋಲು ಹಿಡಿದು ಅವನನ್ನು ಶಾಲೆಗೆ ಕರಕೊಂಡು ಹೋಗುತ್ತಿದ್ದೆ.ದಾರಿಯಲ್ಲಿ ಒಂದು ಪೊದೆ ಸಿಕ್ಕಿದರೆ ಸಾಕು ಅಲ್ಲಿ ಯು ಟರ್ನ್ ಹೊಡೆದುಮನೆಗೆ ಓಡಿ ಬರುತ್ತಿದ್ದ.ಒಂದು ಮತ್ತು ಎರಡನೆಯ ತರಗತಿಗೆ ಹೋಗುವಾಗ ಮಾತ್ರ ಈ ಸಮಸ್ಯೆ ಇದ್ದದ್ದು ಬಹುಶಃ ಈ ಶಿಕ್ಷಕರು ಮಕ್ಕಳಿಗೆ ವಿಪರೀತ ಹೊಡೆಯುತ್ತಿದ್ದುದೇ ಇದಕ್ಕೆ ಕಾರಣ..ಎಲ್ಲ ಹೆತ್ತವರು ಈ ಸಮಸ್ಯೆಯನ್ನು ಅಲ್ಲಿ ಅನುಭವಿಸಿದ್ದರು.
ಮೀಯಪದವು ಶಾಲೆಯ ಒಂದನೆಯ ತರಗತಿ ಶಿಕ್ಷಕಿ ವೇದಾವತಿ ಟೀಚರ್ ಬಹಳ ಕರುಣಾಮಯಿ.ಹೊಡೆಯುದು ಬಿಡಿ ಗಟ್ಟಿಯಾಗಿ ಬೈದವರೂ ಅಲ್ಲ.ಹಾಗಾಗಿ ನನಗೆ ಒಂದನೆಯ ತರಗತಿಗೆ ಹೋಗಲು ಬಹಳ ಇಷ್ಟ ಇತ್ತು.ಕೊಳ್ಯೂರಿನ ಶಾಲೆಗೆ ಬಂದಾಗ ನನಗೂ ಶಾಲೆ ಇಷ್ಟ ಇರಲಿಲ್ಲ.
ಇರಲಿ
ಅಂತೂ ಅಕ್ಕನ ಸತತ ಯತ್ನದಿಂದ ಸಣ್ಣ ತಮ್ಮ ಹೇಗೋ ಒಂದನೆ ತರಗತಿ ಪಾಸಾಗಿ ಎರಡನೆಯ ತರಗತಿಗೆ ಬಂದ.ಅಷ್ಟಾಗುವಾಗ ಅಕ್ಕನಿಗೆ ಮದುವೆ ಅಯಿತು
ಅಕ್ಕನ ಕಾಲಕ್ಕೆ ನಮ್ಮಲ್ಲಿ ವಧು ದಕ್ಷಿಣೆ / ಬದಿ ಪ್ರಚಲಿತವಿತ್ತು.ಸಾಕಷ್ಟು ದುಡ್ಡು ಚಿನ್ನ ಕೊಡುವುದಾದರೆ ಮಾತ್ರ ಹುಡುಗಿ ನೋಡಲು ಬರುತ್ತಿದ್ದರು
aided ಶಾಲೆಗಳಲ್ಲಿ ಶಿಕ್ಷಕರಾಗಬೇಕಿದ್ದರೆ ಆಗ ಹದಿನಾಲ್ಕು ಹದಿನೈದು ಸಾವಿರ ರುಪಾಯಿ ಡೊನೇಷನ್ ಕೊಡಬೇಕಾಗಿತ್ರು.
ಅಂತಹ ಅನುದಾನಿತ ಶಾಲೆಯ ಮೇಷ್ಟ್ರಿಗೆ ಹೆಣ್ಣು ಕೊಡಬೇಕಿದ್ದರೆ ಹೆತ್ತವರು ಆ ದುಡ್ಡನ್ನು ಕೊಡಬೇಕಾಗಿತ್ತು.ಜೊತೆಗೆ ಹತ್ತು ಹದಿನೈದು ಪವನು ಚಿನ್ನ ಕೊಟ್ಟರೆ ಮಾತ್ರ ಹುಡುಗಿರನ್ನು ಮದುವೆಯಾಗುತ್ತಿದ್ದರು.ಬ್ರಾಹ್ಮಣರಲ್ಲಿ ಈ ಕಾರಕ್ಕಾಗಿ ಮದುವೆಯಾಗದೆ ಬಾಕಿ ಉಳಿದ ಅರುವತ್ತು ವರ್ಷ ದಾಟಿದ ಮಹಿಳೆಯರು ಈಗಲೂ ಇದ್ದಾರೆ
ಈಗ ಕಾಲ ಬದಲಾಗಿದೆ.ನಿರಂತರ ನಡೆದ ಸ್ತ್ರೀ ಭ್ರೂಣ ಹತ್ಯೆಯ ಕಾರಣವೋ ,ಮಿತ ಕುಟುಂಬದ ಕಾರಣವೋ ಎನೋ ಹುಡುಗಿಯರ ಸಂಖ್ಯೆ ಕಡಿಮೆಯಾಗಿದೆ ಹಾಗಾಗಿ ಬದಿ/ ವರದಕ್ಷಿಣೆಯ ಸಮಸ್ಯೆ ಇಲ್ಲ
ನನ್ನ ಅಜ್ಜನಿಗೆ ಇಬ್ಬರು ಹೆಣ್ಣು ಮಕ್ಕಳು ಮಾತ್ರ.ಅಮ್ಮ ಮತ್ತು ದೊಡ್ಡಮ್ಮ.ದೊಡ್ಡಮ್ಮ ದೊಡ್ಡಮ್ಮತಮ್ಮ ಹಿರಿಯರಿಂದ ಬಂದ ಆಸ್ತಿಯನ್ನು ಮಾರಾಟ ಮಾಡಿ ಅಜ್ಜನ ಮನೆಗೆ ಬಂದು ನೆಲೆಸಿದರು.ಆಗ ಆಸ್ತಿ ಮಾರಾಟದಿಂದ ಸಿಕ್ಕ ದುಡ್ಡಿನಲ್ಲಿ ಅಜ್ಜನ ಆಸ್ತಿಯ ಸ್ವಲ್ಪ ಭಾಗವಾಗಿ ಅಮ್ಮನಿಗೆ ಸುಮಾರು 80,000₹ ,,( ಅಮೌಂಟ್ ಸರಿಯಾಗಿ ನೆನಪಿಲ್ಲ)/
ಕೊಟ್ಟಿದ್ದರು.ಇದು ಸುಮಾರು ನಲುವತ್ತು ವರ್ಷದ ಹಿಂದೆ ಕೊಟ್ಟದ್ದು ಆ ದುಡ್ಡಿನಲ್ಲಿ ಒಂದು ನಯ ಪೈಸೆ ಕೂಡ ಅಮ್ಮ ತನಗಾಗಿ ಬಳಸಲಿಲ್ಲ.ಎಲ್ಲವನ್ನು ಅಕ್ಕನಮದುವೆ,ಉಳಿದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಳಸಿದರು.
ಅದರಿಂದಾಗಿ ನಾನೆಲ್ಲ ಈ ಸ್ಥಿತಿಗೆ ಬಂದೆವು.ಆ ದುಡ್ಡನ್ನು ಅಮ್ಮ ಹಾಗೆಯೇ ಬ್ಯಾಂಕಿನಲ್ಲಿ ಇಡುತ್ತಿದ್ದರೆ ಅದು ಈಗ ಕಡಿಮೆ ಎಂದರೂ ನಾಲ್ಕು ಕೋಟಿ ರುಪಾಯಿ ಆಗಿರುತ್ತಿತ್ತು.
ಈ ದುಡ್ಡಿನಲ್ಲಿ ನನ್ನ ಅಮ್ಮ ತನಗಾಗಿ ಒಂದೇ ಒಂದು ಸೀರೆಯನ್ನಾಗಲೀ ಒಡವೆಯನ್ನಾಗಲೀ ತೆಗೆದುಕೊಂಡಿರಲಿಲ್ಲ
ಈ ದುಡ್ಡು ಇದ್ದ ಕಾರಣ ಆ ವರದಕ್ಷಿಣೆ ಇದ್ದ ಕಾಲದಲ್ಲಿ ಅಕ್ಕನನ್ನು ಸಾಕಷ್ಡು ಕೃಷಿ ಭೂಮಿ ಇರುವುದಲ್ಲದೆ ಅನುದಾನಿತ ಶಾಲೆಯ ಮೇಷ್ಟ್ರಾಗಿದ್ದ ಹುಡುಗನಿಗರ ಮದುವೆ ಮಾಡಿ ಕೊಡಲು ಸಾಧ್ಯವಾಯಿತು
ಬೇರಿಗೆ ಚಿಗುರಿನ ಚಿಂತೆ ಸದಾ ಇರುತ್ತದೆ.ಬೇರಿನ ಸತ್ವ ಉಂಡು ನಾವು ಬೆಳೆದೆವು ಎಂಬ ಸಂಗತಿ ಮರದ ರೆಂಬೆ ಕೊಂಬೆಗಳಿಗೆ ಗೊತ್ತೇ ಇರುವುದಿಲ್ಲ.
ಅಂದ ಹಾಗೆ
.ಬಾವ ಬಾಯಾರು ಹೆದ್ದಾರಿ ಮುಳಿಗದ್ದೆ ಅನುದಾನಿತ ಶಾಲೆಯಲ್ಲಿ ಮೇಷ್ಟ್ರಾಗಿದ್ದರು ..ಆಗ ಅಕ್ಕನಿಗೆ ಖಾಸಗಿಯಾಗಿ ಓದಬಹುದಿತ್ತು.ಯಾಕೆ ತಲೆಗೆ ಹೋಗಲಿಲ್ವೋ ಗೊತ್ತಿಲ್ಲ.ಬಾವನ ಸಣ್ಣ ತಂಗಿ ಖಾಸಗಿಯಾಗಿ ಎಂಎ ಓದಿದ್ದರು.ಆಗಲೂ ಅಕ್ಕನಿಗೆ ಓದಬಹುದೆಂದೇಕೆ ತಲೆಗೆ ಹೋಗಲಿಲ್ಲ ಗೊತ್ತಿಲ್ಲ.ಬಹುಶಃ ಮಗ ಮಗಳು ಹುಟ್ಟಿ ಅವರಲಾಲನೆ ಪಾಲನೆಯಲ್ಲಿಯೇ ದಿನಗಳೆದಿರಬೇಕು
ಅಕ್ಕನ ಮದುವೆಯಾದ ನಂತರ ನಾವೆಲ್ಲ ರಜೆಯಲ್ಲಿ ಅಕ್ಕನ ಮನೆಗೆ ಹೋಗ್ತಿದ್ದೆವು
ಅಕ್ಕ ಬಗೆ ಬಗೆಯ ತಿಂಡಿ ಮಾಡಿ ಬಡಿಸುತ್ತಿದ್ದಳು.ಅಕ್ಕನ ಅತ್ತೆ ಮಾವ ಬಹಳ ಒಳ್ಳೆಯವರಾಗಿದ್ದರು.ಮಾವ ಗಮಕ ವಾಚನ ಮಾಡಬಲ್ಲವರಾಗಿದ್ದು ಕುಮಾರ ವ್ಯಾಸನ ಕಾವ್ಯವನ್ನು ಓದಿ ನಮಗೆ ಕಥೆಯನ್ನು ಹೇಳ್ತಾ ಇದ್ದರು.ಬೇರೆ ಬೇರೆ ಕಥೆಗಳನ್ನೂ ಹೇಳ್ತಿದ್ದರು.ಸೊಸೆಯ ತಮ್ಮ ತಂಗಿಯರು ಬಂದರೆ ಭಾರ ಎಂಬ ಭಾವ ಅವರಿಗಿರಲಿಲ್ಲ.ನಮ್ಮ ಮೇಲೆ ತುಂಬಾ ಪ್ರೀತಿ ಇತ್ತು ಅವರಿಗೆ
ಇರಲಿ
ಅಕ್ಕ ಬಹುಶಃ ತನ್ನ ಜೀವನದಲ್ಲಿ ಬಣ್ಣದ ಡಿಸೈನಿನ ಬಟ್ಟೆ ತಂದು ಹೊಲಿಸಿದ ಅಂಗಿ ಹಾಕಲೇ ಇಲ್ಲ.ತಂದೆ ಪುರೋಹಿತರಾದ ಕಾರಣ ಬಿಳಿ ಮುಂಡು ಸಿಕ್ತಾ ಇತ್ತು.ಕಾಫಿ ಕಲರ್,ಗುಲಾಬಿ ಬಣ್ಣ,ನೀಲಿ ಬಣ್ಣದ ಬಣ್ಣದ ಪುಡಿಗಳನ್ನು ನೀರಿಗೆ ಹಾಕಿ ಕುದಿಸಿ ಅದರಲ್ಲಿ ಈ ಬಿಳಿ ಬಟ್ಟೆ ಮುಂಡನ್ನು ಮುಳುಗಿಸುತ್ತಾ ಇದ್ದರು.ಆಗ ಅದಕ್ಕೆ ಬಣ್ಣ ಹಿಡಿಯುತ್ತಿತ್ತು.ನಂತರ ಒಣಗಿಸಿ ಅದೇ ಮೂರು ಬಣ್ಣಗಳಲ್ಲಿ ಲಂಗ ರವಿಕೆ ಹೊಲಿಸುತ್ತಿದ್ದರು
.ನನಗೂ ಅಕ್ಕ ಅಂದು ಧರಿಸುತ್ತಿದ್ದ ರೀತಿಯ ಉದ್ದ ಲಂಗ ರವಕೆ ಧರಿಸಿದ ನೆನಪಿದೆ
ಆದರೆ ನಾನು ಅಜ್ಜನ ಮನೆಯಲ್ಲಿ ಬೆಳೆದ ಕಾರಣ ಅಜ್ಜ ನನಗೆ ಮೀಯಪದವಿನ ದಿನೇಶಣ್ಣನ ಬಟ್ಟೆ ಅಂಗಡಿಗೆ ಕರೆದುಕೊಂಡು ಹೋಗಿ ವರ್ಷಕ್ಕೆ ಒಂದೆರಡು ಹೊಸ ಬಟ್ಟೆ ತೆಗೆದು ಲಂಗ ರವಿಕೆ ಹೊಲಿಸಿಕೊಡುತ್ತಿದ್ದರು.
ಅಕ್ಕನ ಮದುವೆಗೆ ಮೊದಲ ಬಾರಿಗೆ ನನಗೆ ಪಾಲಿಸ್ಟರ್ ಬಟ್ಟೆ ತೆಗೆದು ಉದ್ದ ಲಂಗ ರವಿಕೆ ಹೊಲಿಸಿದ್ದರು
ನಿದಾನಕ್ಕೆ ಮನೆ ಪರಿಸ್ಥಿತಿ ಸುಧಾರಿಸಿತು.ಅಷ್ಟರಲ್ಲಿ ಅಕ್ಕನಿಗೆ ಮದುವೆ ಆಯಿತು.ಬಾವ ಅನುದಾನಿತ ಶಾಲೆ ಮಾಸ್ಟ್ರಾಗಿದ್ದುದಲ್ಲದೆ ಸಾಕಷ್ಟು ಕೃಷಿ ಇತ್ತು.ಹಾಗಾಗಿ ನಂತರ ಅಕ್ಕನಿಗೆ ಸೀರೆ ಚಿನ್ನ ಬಣ್ಣದ ಕೊರತೆ ಏನೂ ಇರಲಿಲ್ಲ.ಅಲ್ಲದೆ ಮದುವೆ ಮಾಡುವಾಗಲೂ ತಂದೆ ತಾಯಿ ಸಾಕಷ್ಟು ಚಿನ್ನ ,ದುಡ್ಡು ಕೊಟ್ಟಿದ್ದರು ಬಾವ ವರದಕ್ಷಿಣೆ ಅಂತ ಕೇಳಿರಲಿಲ್ಲ.ಆದರೆ ಆ ಕಾಲದಲ್ಲಿ ಅನುದಾನಿತ ಶಾಲೆಯ ಮೇಸ್ಟ್ರಿಗೆ ಹುಡುಗಿ ಕೊಡಬೇಕಿದ್ದರೆ ಆತ ತನ್ನ ಕೆಲಸಕ್ಕಾಗಿ ಶಾಲೆಗೆ ನೀಡಿದ ಡೊನೇಷನ್ ಅನ್ನು ಹುಡುಗಿ ಮನೆಯವರು ನೀಡಬೇಕಿತ್ತು
ಜೊತೆಗೆ ಅಣ್ಣ ಅಮೇರಿಕಕ್ಕೆ ಹೋದ ಮೆಲೆ ಅಕ್ಕ ತಮ್ಮ ತಂಗಿಯರಿಗೆ ಧಾರಾಳವಾಗಿ ಬೇಕು ಬೇಕಾದ್ದನ್ನು ತೆಗೆಸಿಕೊಟ್ಟ.ನನಗೆ ಮತ್ತು ಅಕ್ಕನಿಗೆ 32 ಗ್ರಾಮಿನ ಇಪ್ಪತ್ತ ನಾಲ್ಕು ಕ್ಯಾರೆಟಿನ ಚಿನ್ನದ ಬಿಸ್ಕೆಟ್ ಅನ್ನು ಕೊಟ್ಟಿದ್ದಾನೆ.
ಹಾಗಾಗಿ ನಮಗೆ ಯಾವುದೇ ಕೊರತೆ ಆಗಲೇ ಇಲ್ಲ
ನಂತರ ಅಕ್ಕನ ಮಗ ರಾಜೇಶ ರುಪಾಯಿಮೂಲೆಯೂ ಉನ್ನತ ಶಿಕ್ಷಣಕ್ಕೆ ಅಮೇರಿಕಕ್ಕೆ ಹೋದ,ಅಲ್ಲಿ ಡಾಕ್ಟರೇಟ್ ಮತ್ತು ಪೋಸ್ಟ್ಡಾಕ್ಟೋರಲ್ ಸ್ಟಡಿ ಮಾಡಿ ಒಳ್ಳೆಯ ಕೆಲಸದಲ್ಲಿದ್ದಾನೆ.ಅಲ್ಲಿ ಎರಡೆಕರೆ ಜಾಗ ತೆಗೆದು ಸ್ವಂತ ಮನೆ ಕಟ್ಟಿಕೊಂಡಿದ್ದಾನೆ.ಅವನ ಹೆಂಡತಿನಿತಾಶಾ ಎಂಬಿಬಿಎಸ್ ಓದಿ ಎಂಡಿ ಮಾಡಿದ್ದು ಅಲ್ಲಿ ಒಳ್ಳೆಯ ಕೆಲಸದಲ್ಲಿದ್ದಾಳೆ.
ಅಕ್ಕನ ಮಗಳು ಅನುಪಮಾಳೂ ಇಂಜನಿಯರಿಂಗ್ ಓದಿಮದುವೆಯಾಗಿ ಗಂಡನ ಜೊತೆ ಅಮೇರಿಕಾದಲ್ಲಿದ್ದಾಳೆ .ಇಬ್ಬರೂ ಇಂಜನಿಯರ್ಸ್ ಆಗಿದ್ದು ಒಳ್ಳೆಯ ಕೆಲಸದಲ್ಲಿದ್ದಾರೆ.
ಹಾಗಾಗಿ ಎಲ್ಲರ ಮನೆ ಕಥೆಯಂತೆ ನಮ್ಮನೆಯ ಹಿರಿಯಕ್ಕ ಬಡ ಅಕ್ಕಳಾಗಿಲ್ಲ ಬದಲಿಗೆ ಅಕ್ಷರಶಃ ಹಿಂದಿ ಭಾಷೆಯ ಬಡಾ ಅಕ್ಕ ಆಗಿದ್ದಾಳೆ
ಏನೇನೋ ವಿಶಿಷ್ಟ ಅಡುಗೆ ಮಾಡಿ ಅದನ್ನು ಫೋಟೋ ಹಿಡಿದು ತನ್ನ ಮೈದುನ ( ಸಣ್ಣ ಮಾವನ ಮಗ ,ಬಾವ ಒಬ್ಬನೇ ಮಗನಾಗಿದ್ದು ಅಕ್ಕನಿಗೆ ನೇರ ಮೈದುನಂದಿರು ಇಲ್ಲ ) ಹೆಂಡತಿ ಕಾತ್ಯಾಯನಿಗೆ ಕಳುಹಿಸುತ್ತಾಳೆ.ಅದನ್ನವರು ಅಕ್ಕನ ಹೆಸರಿನಲ್ಲಿಯೇ ಯು ಟ್ಯೂಬಿಗೆ ಹಾಕ್ತಾರೆ
ಅಕ್ಕ ಚಿಕ್ಕಂದಿನಿಂದಲೂ ಅತ್ಯುತ್ಸಾಹಿ.ಶಾಲೆಯಲ್ಲಿ ಹಾಡಿನಲ್ಲಿ ಇನ್ನೇನೋ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಬಹುಮಾನ ಪಡೆಯುತ್ತಿದ್ದಳು.ಮದುವೆಯಾದ ನಂತರ ಕೂಡ ಗಣೇಸೋತ್ಸವ ಇನ್ನಿತರ ಸಂದರ್ಭಗಳಲ್ಲಿ ಸ್ಪರ್ದೆಯಲ್ಲಿ ಭಾಗವಹಿಸಿ ಬಹುಮಾನ ಪಡೆಯುತ್ತಿದ್ದಾಳೆ.ಈಗಲೂ ಪಡೆಯುತ್ತಿರಬಹುದು
ಅಮೇರಿಕಕ್ಕೂ ಹೋಗಿ ಬಂದಿದ್ದಾಳೆ.ಬಹುಶಃ ಅಮೇರಿಕಕ್ಕೆ ಹೋದ ಮೇಲೆ ಅಕ್ಕ ಮೊದಲಿಗೆ ಬಣ್ಣದ ಡ್ರೆಸ್ ಚೂಡಿದಾರ್ ಧರಿಸಿರಬೇಕು.ಅದನ್ನು ನೋಡಿ ನನಗೆ ನಿಜಕ್ಕೂ ಖುಷಿಯಾಗಿದೆ.ಹಳ್ಳಿಯಲ್ಲಿ ಇಂದಿಗೂ ನನ್ನ ಅಥವಾ ಅಕ್ಕನ ವಯಸ್ಸಿನ ಸ್ತ್ರೀಯರು ಚೂಡಿದಾರ್ ಧರಿಸುದು ಬಹಳ ಕಡಿಮೆ.ಮನದೊಳಗೆ ಧರಿಸುವ ಆಸೆ ಇದ್ದರೂ ಧರಿಸುವಂತಿಲ್ಲ.ಅಕ್ಕನಿಗೆ ಚೂಡಿದಾರ್ ಧರಿಸುವ ಆಸೆ ಇತ್ತೋ ಇಲ್ಲವೋ ಗೊತ್ತಿಲ್ಲ.ಆದರೆ ಅವಳು ಧರಿಸಿದ್ದು ನನಗೆ ಮಾತ್ರ ಖುಷಿ ತಂದಿದೆ.ವಿವಿಧ ಅಡುಗೆಗೆಳ ಪರಿಚಯದ ಮೂಲಕ ಯು ಟ್ಯೂಬಿನಲ್ಲೂ ಅಕ್ಕ ಪ್ರಸಿದ್ಧಿ ಪಡೆದ ಬಗ್ಗೆ ನನಗೆ ಬಹಳ ಹೆಮ್ಮೆ ಸಂತಸ ಇದೆ
ತನ್ನ ಮಕ್ಕಳ ಓದಿದಾಗಿ ಸಾಲ ಮಾಡಿ ಅದನ್ನು ಕೊಡಲು ಭಹಳ ಕಷ್ಟ ಪಟ್ಟಿದ್ದಾಳೆ ನನ್ನಕ್ಕ.ಈಗಲೂ ಹಸು ಸಾಕಿ ಹಾಲು ಮಾರಾಟಮಾಡುತ್ತಿದ್ದಾಳೆ.ತೋಟದ ಮನೆಯ ಸಂಪೂರ್ಣ ಜವಾಬ್ದಾರಿ ಅವಳದೇ
ತನ್ನ ಮಾವನವರನ್ನು ಕೊನೆ ತನಕ ಬಹಳ ಪ್ರೀತಿಯಿಂದ ನೋಡಿಕೊಂಡಿದ್ದಾಳೆ.ಕೊನೆ ಕಾಲದಲ್ಲಿ ಮಾನ ಅನೇಕ ತಿಂಗಳಕಾಲ ಮಲಗಿದಲ್ಲಿಯೇ ಇದ್ದರು.ಒಂದಿನಿತು ಕೊರತೆಯಾಗದಂತೆ ನೋಡಿಕೊಂಡಿದ್ದಳು
ಎಲ್ಲ ಹೆತ್ತವರು ಮಕ್ಕಳಿಂದ ಒಂದಲ್ಲಒಂದು ದಿನ ನೇರವಾಗಿ ಅಥವಾ ಪರೋಕ್ಷವಾಗಿ ಕೇಳುವ ನೀನೇನು ಮಾಡಿದ ನನಗೆ? ನಿಮ್ಮಿಂದ ನಮ್ಮ ಸರ್ವ ನಾಶ ಆಯಿತು
ಹುಟ್ಟಿಸಿದ್ದು ಎಂತಕೆ ? ಎಂಬ ಮಾತುಗಳನ್ನು ಕೇಳದೇ ಇದ್ದರೆ ನಿಜಕ್ಕೂ ಅದೃಷ್ಟವಂತೆ
ಸ್ವಂತ ಮಕ್ಕಳಂತೆ ಲಾಲನೆ ಪಾಲನೆ ಮಾಡಿದ ತಮ್ಮಂದಿರೂಮರೆಯದಿದ್ದರೆ ಸರಿನಹಾಗೆಯೇ ತಮ್ಮಂದಿರು ಮಾಡಿದ ಸಹಾಯವನ್ನೂ ಮರೆಯದಿರಬೇಕು
ಅಕ್ಕನಮಕ್ಕಳನ್ನು ನನ್ನ ತಂದೆ ತಾಯಿ ಅಣ್ಣ ತಮ್ಮಂದಿರು ಎಂದೂ ಬೇರೆಯವರೆಂದು ಕಾಣಲೇ ಇಲ್ಲ.ಅವರ ಏಳಿಗೆಗಾಗಿ ಸತತ ಯತ್ನ ಮಾಡಿದ್ದಾರೆ.ಅಕ್ಕನ ಮಗ ರಾಜೇಶನ ವಿದೇಶದಲ್ಲಿನ ಓದು ಸುಲಭದ್ದಾಗಿರಲಿಲ್ಲ.ಅಕ್ಕನಮಗಳಬದುಕಿನ ಸಮಸ್ಯೆಗಳನ್ನೂ ಸರಿಮಾಡುವಲ್ಲಿ ತಮ್ಮ ಗಣೇಶನಪಾಲು ಬಹು ದೊಡ್ಡದು
ಮುಂದೆ
ತಾವು ಅಪ್ಪಾಮ್ಮ ಮಕ್ಕಳು ಬೇರೆ ..ಈ ಮಟ್ಟಕ್ಕೆ ಬೆಳೆಯಲುಕಾರಣವಾದ ಅಜ್ಜಿ ಅಜ್ಜಮಾವಂದಿರು ಬೇರೆ ಎಂದು ಕಾಣದಿದ್ದರೆ ಒಳಿತು
ಆದರೆ ಕಾಲಕಷ್ಟದ್ದು.ಹತ್ತಲುಮಾತ್ರ ಏಣಿ ಬೇಕು.ನಂಯರ ಅದನ್ನು ಕಿತ್ತೊಗೆಯುವವರೇ ಹೆಚ್ಚು
ಕಾಲನ ನಡೆಯೇ ಹಾಗೆ ಬಲು ವಿಚಿತ್ರವಾದದ್ದು.ತಾವು ಪಡೆದ ಸಹಾಯ ಕ್ಷಣದಲ್ಲಿ ಮರೆತು ಹೋಗುತ್ತದೆ.ತಾವುಮಾಡಿದ್ದು ಬೆಟ್ಟದಂತೆ ಭಾಸವಾಗುತ್ತದೆ
ಏನೇ ಇದ್ದರೂ ವಯಸ್ಸಾದ ತಂದೆ ತಾಯಿಯರನ್ನು ಹಂಗಿಸಿ ಭಂಗಿಸಿ ಕಣ್ಣೀರು ಹಾಕಿಸುವುದು ತಪ್ಪು
ಅದಕ್ಕೆ ಕ್ಷಮೆ ಇಲ್ಲ.
ಇಂದಿನ ಮಕ್ಕಳತಂದೆ ತಾಯಿಯಿಂದ ಎಲ್ಲವನ್ನೂ ಪಡೆದು ಕೊನೆಗೆ ನಿಮ್ಮಿಂದ ನಾನು ಸರ್ವನಾಶ ಆದೆ ಎನ್ನುವಷ್ಟು ಮುಂದುವರಿದಿದ್ದಾರೆ
ಓದಿ ಸಾಧನೆ ಮಾಡಲಾಗದ್ದಕ್ಕೆ ಕೊನೆಗೆ ಹೆತ್ತವರ ಮೇಲೆ ಗೂಬೆ ಕೂರಿಸುವದ್ದು
ಈಗೇನು..ಸಾಕಷ್ಟು ಉದ್ಯೋಗಾವಕಾಶಗಳಿವೆ
ಅನುಭವಿಗಳಿಗೆ ಅವಕಾಶವಿದೆ.ಜೊತೆಗೆ ಉನ್ನತ ಶಿಕ್ಷಣ ಪದವಿ ಕೂಡ ಬೇಕಿದೆ.ಯಾವ ವಯಸ್ಸಿನಲ್ಲಿಯೂ ಇದನ್ನು ಗಳಿಸಿಕೊಳ್ಳಬಹುದು.ಮನಸು ಬೇಕಷ್ಟೇ
No comments:
Post a Comment