Thursday, 2 May 2019

ನನ್ನೊಳಗೂ ಒಂದು ಆತ್ಮವಿದೆ ಭಾಗ 9 ಆತ್ಮ ಕಥೆಯೆಂದರೆ ಬರಿಯ ಗೋಳಲ್ಲ


ಇತ್ತೀಚೆಗೆ ಫಲಿತಾಂಶಗಳು ಅಂತರ್ಜಾಲದ ಮೂಲಕ ಮಕ್ಕಳಿಗೆ ಸಿಗುತ್ತವೆ‌.ನಮ್ಮ ಕಾಲದಲ್ಲಿ ಹಾಗಿರಲಿಲ್ಲ.
ನಮ್ಮ ಹತ್ತನೇ ತರಗತಿಯ ಪಬ್ಲಿಕ್ ಪರೀಕೆಯ ಫಲಿತಾಂಶದ ದಿನ ಹೇಗೋ ನಮಗೆ ಗೊತ್ತಾಗುತ್ತಾ ಇತ್ತು.ನಮ್ಮ ಮನೆಗೆ ಪತ್ರಿಕೆ ತರಿಸುತ್ತಾ ಇರಲಿಲ್ಲ. ಬಹುಶಃ ಹೆಡ್ ಮಾಷ್ಟ್ರು ತರಿಸ್ತಾ ಇದ್ರೋ ಏನೋ.ಅದರ ಮೂಲಕ ನಮ್ಮ ಫಲಿತಾಂಶದ / ಪಾಸ್ ಫೈಲ್ ದಿನ ಗೊತ್ತಾಗುತ್ತಾ ಇದ್ದಿರಬಹುದು .ಬಾಯಿ ಮಾತಿನ ಮೂಲಕ ನನಗೂ ಗೊತ್ತಾಗಿತ್ತು.ನನ್ನ ತಂದೆ ತಾಯಿ ಅಕ್ಕ ಅಣ್ಣನಿಗೆ ನನ್ನ ಬಗ್ಗೆ ತುಂಬಾ ನಂಬಿಕೆ ಇತ್ತು.ಹಾಗಾಗಿ ಅವರು ನನ್ನಷ್ಟು ಆತಂಕಕ್ಕೆ ಒಳಗಾಗಿರಲಿಲ್ಲ‌.ಆದರೆ ನನಗೆ ಗಣಿತದ ಎರಡನೇ ಪತ್ರಿಕೆ  ಮತ್ತು ಇಂಗ್ಲಿಷ್ ಮೊದಲ ಪತ್ರಿಕೆ ಬಗ್ಗೆ ತುಂಬಾ ಆತಂಕ ಇತ್ತು.ವಾಸ್ತವವಾಗಿ ಗಣಿತ ನನ್ನ ಆಸಕ್ತಿಯ ವಿಚಾರ.ಆದರೆ ಒಂಬತ್ತನೇ ತರಗತಿಯಲ್ಲಿ ನಡೆದ ಒಂದು ವಿಚಾರದಿಂದ ನಾನು ಶಾಲೆಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದೆ.ಅದರ ಪರಿಣಾಮವಾಗಿ ನಾನು ಕಲಿಕೆಯಲ್ಲಿ ತುಸು ಹಿಂದೆ ಬಿದ್ದಿದ್ದೆ.ಅದರಲ್ಲೂ ಗಣಿತದಲ್ಲಿ ಹಿಂದೆ ಬಿದ್ದಿದ್ದೆ.ಬಹುಶಃ ನಾನು ಹೋಮ್ ವರ್ಕ್ ಮಾಡುತ್ತ ಇರಲಿಲ್ಲ. ಮಾಡದ ಬಗ್ಗೆ ವಿಚಾರಿಸುವ ಮೇಷ್ಟ್ರು ಗಳು ನಮ್ಮ ವಾಣಿವಿಜಯ ಹೈಸ್ಕೂಲ್ ನಲ್ಲಿ ಒಬ್ಬಿಬ್ಬರು ಮಾತ್ರ ಇದ್ದರು.ನಮ್ಮ ಕೆಮೆಷ್ಟ್ರಿ ಮಾಷ್ಟ್ರು ಅಮೈ ಸುಬ್ರಹ್ಮಣ್ಯ ಭಟ್ ಒಳ್ಳೆಯ ಶಿಕ್ಷಕರಾಗಿದ್ದರು‌.ಜೊತೆಗೆ ದಿನ ದಿನ ಕಲಿತುಕೊಂಡು ಬರುವುದು ನಮಗೆ ಅನಿವಾರ್ಯ ಆಗಿತ್ತು. ಬಹುಶಃ ಅವರ ಕೆಮೆಷ್ಟ್ರಿ ವಿಷಯದಲ್ಲಿ ಯಾರೂ ಫೈಲ್ ಅಗುತ್ತಾ ಇರಲಿಲ್ಲ ‌ಅಂತೆಯೇ ಫಿಸಿಕ್ಸ್ ಪಾಠ ಮಾಡುತ್ತಿದ್ದ ಅಮೈ ಕೃಷ್ಣ ಮಾಷ್ಡ್ರು ಕೂಡ ಶಿಸ್ತಿನ ಸಿಪಾಯಿ. ದಿನ ನಿತ್ಯ ಹಿಂದಿನ ದಿನದ ಪಾಠಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳುತ್ತಾ ಇದ್ದರು.ಅವರು ಕಷ್ಟದ ವಿಚಾರವನ್ನು ಕೂಡ ಬಹಳ ಸುಲಭ ಎನಿಸುವಂತೆ ಲೀಲಾಜಾಲವಾಗಿ ನಮಗೆ ಅರ್ಥ ಮಾಡಿಸುತ್ತಿದ್ದರು.ಹಾಗಾಗಿ ಇವೆರಡು ವಿಷಯಗಳಲ್ಲಿ ನನಗೆ ಉತ್ತಮ ಅಂಕಗಳು ಬರುತ್ತಾ ಇದ್ದವು.ಸಮಾಜ ಶಾಸ್ತ್ರಕ್ಕೆ ತೊಟ್ಟೆತ್ತೋಡಿ ಮಾಸ್ಟರ್ ಇದ್ದರು‌.ಅವರು ಪಾಪದ ಮಾಷ್ಟ್ರು ಹಾಗಾಗಿ ನಾವು ನೋಟ್ಸ್ ಬರೆಯುತ್ತಾ ಇದ್ದೇವಾ ಓದುತ್ತಾ ಇದ್ದೇವಾ ಎಂಬುದನ್ನು ಗಮನಿಸಿ ಎರಡೇಟು ಬೆನ್ನಿಗೆ ಕೊಡುತ್ತಾ ಇರಲಿಲ್ಲ ಜೊತೆಗೆ ನನಗೆ ಆಗ ಇತಿಹಾಸ ಭೂಗೋಳ ಇತ್ಯಾದಿ ಆಸಕ್ತಿಯ ವಿಚಾರಗಳು ಆಗಿರಲಿಲ್ಲ. ಇವುಗಳ ನಡುವೆ ಕಬ್ಬಿಣದ ಕಡಲೆಯಾದದ್ದು ಇಂಗ್ಲಿಷ್.ನಿಜಕ್ಕೂ ನಾನು ಸಂಸ್ಕೃತ ಉಪನ್ಯಾಸಕಿಯಾಗಿ ಅಲೋಶಿಯಸ್ ಕಾಲೇಜಿಗೆ ಸೇರುವ ತನಕವೂ is was ಗಳ ನಡುವಿನ ವ್ಯತ್ಯಾಸ ಗೊತ್ತಿರಲಿಲ್ಲ. ಅಲ್ಲಿ ಸಂಸ್ಕೃತ ವನ್ನು ಇಂಗ್ಲಿಷ್ ಮಾಧ್ಯಮ ದಲ್ಲಿ ಪಾಠ ಮಾಡಬೇಕಿತ್ತು.ಆಗ ಪ್ರಸಾದ್ ಮತ್ತು ಹಿಂದಿ ಉಪನ್ಯಾಸಕಿ ಜೂಡಿ ಮೇಡಂ ನನಗೆ ಸ್ವಲ್ಪ ಇಂಗ್ಲಿಷ್ ಹೇಳಿಕೊಟ್ಟರು .ನಮ್ಮ ಶಾಲೆಯ ಇಂಗ್ಲಿಷ್ ಶಿಕ್ಷಕರು ಕನ್ನಡದಲ್ಲಿ ಇಂಗ್ಲಿಷ್ ಅನ್ನು ಒಂದಿನಿತೂ ಕನ್ನಡದಲ್ಲಿ ಹೇಳದ ಕಾರಣ ಇಂಗ್ಲಿಷ್ ಪಾಠಗಳಲ್ಲಿ ಏನು ಕಥೆ ಇತ್ತು, ವಿಷಯ ಇತ್ತು ಎಂಬುದೇ ನನಗೆ ಗೊತ್ತಿರಲಿಲ್ಲ. ಆಗಿನ್ನೂ ಗೈಡ್ ಗಳು ಬಂದಿರಲಿಲ್ಲವೋ ಅಥವಾ ನಮಗೆ ಅಂತಹದ್ದೊಂದು ಇದೆ ಎಂದು ಗೊತ್ತಿರಲಿಲ್ಲವೋ ಏನೋ ಒಟ್ಟಿನಲ್ಲಿ ನಮಗೆ ಗೈಡ್‌ ಸಿಕ್ಕಿರಲಿಲ್ಲ.
ಇಂಗ್ಲಿಷ್ ಎರಡನೇ ಪತ್ರಿಕೆಯನ್ನು ಅಮೈ ಕೃಷ್ಣ ‌ಮಾಷ್ಟ್ರು ಪಾಠ ಮಾಡಿದ್ದರು. ಹಾಗಾಗಿ ಕಥೆ ಸುಮಾರಾಗಿ ಅರ್ಥವಾಗಿತ್ತು.ಟಾಲ್ ಸ್ಟಾಯ್ ಯ ಯಾವುದೋ ಒಂದು ನೀಳ್ಗಥೆಯನ್ನು ಎರಡನೇ ಪತ್ರಿಕೆಗೆ ಸಿಲಬಸ್ ಮಾಡಿದ್ದರು. ಕಥೆ ಅರ್ಥವಾದ ಕಾರಣ ಪ್ರಶ್ನೆಗಳಿಗೆ ಉತ್ತರ ಬರೆಯಬಲ್ಲವಳಾಗಿದ್ದೆ..ಆದರೆ ಇಂಗ್ಲಿಷ್ ಮೊದಲ ಪತ್ರಿಕೆ ಬಗ್ಗೆ ಆತಂಕ ಇತ್ತು.
ಫಲಿತಾಂಶದ ದಿನ ಬೆಳಗ್ಗೆಯೇ ನಾವೆಲ್ಲ ಹೋಗಿ ಶಾಲೆಯಲ್ಲಿ ಕಾಯುತ್ತಾ ಇದ್ದೆವು.ತರಗತಿ ಪರೀಕ್ಷೆಗಳಲ್ಲಿ ಸುಮಂಗಲ,ನಿಶಾ,ವಿಜಯ,ಸೂರ್ಯನಾರಾಯಣ, ಪ್ರಮೋದ್ ಮತ್ತು ನಾನು ಪ್ರತಿಸ್ಪರ್ಧಿ ಗಳಾಗಿದ್ದೆವು.ಸಾಮಾನ್ಯವಾಗಿ ಸುಮಂಗಲ ‌ಮೊದಲ ಸ್ಥಾನ ಪಡೆಯುತ್ತಿದ್ದಳು.ಎರಡನೇ ಸ್ಥಾನಕ್ಕಾಗಿ ನಿಶಾ ಮತ್ತು ನನ್ನೊಳಗೆ ಪೈಪೋಟಿ ಇತ್ತು.ಸುಮಂಗಲ ಸುಶಿಕ್ಷಿತರ ಮನೆ ಹುಡುಗಿಯಾಗಿದ್ದಳು.ನಿಶಾನ ತಂದೆ ಯಾವುದೋ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಹಾಗಾಗಿ ಅವರಿಗೆ ಮನೆಯಿಂದ ಕಲಿಕೆಗೆ ಹೆಚ್ಚಿನ ಬೆಂಬಲ ಇತ್ತು.
ಫಲಿತಾಂಶದ ದಿನ ನಾವೆಲ್ಲ ಹೆಡ್ ಮಾಷ್ಟ್ರು ಕೊಠಡಿಯ ಹೊರಗೆ ಜಾತಕ ಪಕ್ಷಿಗಳಂತೆ ಕಾಯುತ್ತಾ ಇದ್ದೆ.ಆಗ ಹೆಚ್ಚು ಬಸ್ ಗಳು ಇರಲಿಲ್ಲ. ನಮ್ಮ ಹೆಡ್ ಮಾಷ್ಟ್ರು ಕಾಸರಗೋಡಿಗೆ ಹೋಗಿ ಫಲಿತಾಂಶವನ್ನು ಕಟ್ಟೆತ್ತಲ ಬಸ್ಸಿನಲ್ಲಿ ತರಬಹುದು ಎಂದು ಕಾಯುತ್ತಾ ಇದ್ದೆವು.ಅದು ಬರುವಾಗ ಮಧ್ಯಾಹ್ನ ಆಗುತ್ತಾ ಇತ್ತು..
ಆ ದಿನದ ಒಂದೊಂದು ಕ್ಷಣವೂ ಒಂದೊಂದು ಯುಗದಂತೆ ಭಾಸವಾಗುತ್ತಾ ಇತ್ತು.ಅಂತೂ ಇಂತೂ ಕಟ್ಟತ್ತಲ ಬಸ್ ಬಂತು .ನಮ್ಮ ಹೆಡ್ ಮಾಷ್ಟ್ರು ಒಂದು ದೊಡ್ಡ ಫೈಲ್ ಅನ್ನು ಹಿಡಿದುಕೊಂಡು ಬಂದು ಅವರ ಕೊಠಡಿ ಹೊಕ್ಕರು.ನಮ್ಮಲ್ಲಿ ಪಿನ್ ಡ್ರಾಪ್ ಸೈಲೆನ್ಸ್.. ಒಳಗಿನಿಂದ ಸುಮಂಗಲ, ನಿಶಾ,ವಿಜಯ,ಸೂರ್ಯನಾರಾಯಣ, ಪ್ರಮೋದ್ ಮೊದಲಾದವರ ಹೆಸರುಗಳನ್ನು ಹೇಳಿದ್ದು ಕೇಳಿಸಿತು.ನನ್ನ ಹೆಸರು ಹೇಳಿದ್ದು ಕೇಳಿಸಲಿಲ್ಲ.ನನ್ನ ಎದೆ ನನಗೇ ಕೇಳಿಸುವಷ್ಟು ದೊಡ್ಡದಾಗಿ ಬಡಿದುಕೊಳ್ಳುತ್ತಾ ಇತ್ತು.ಮತ್ತೆ ಸ್ವಲ್ಪ ಹೊತ್ತಿನಲ್ಲಿ ರಿಸಲ್ಟ್ ನಲ್ಲಿ ಪಾಸಾದವರ ಪಟ್ಟಿಯನ್ನು ಹೆಡ್ ಮಾಷ್ಟ್ರು ಕೊಠಡಿಯ ಹೊರಭಾಗದ ನೋಟೀಸ್ ಬೋರ್ಡ್ ಗೆ ತಂದು ಅಂಟಿಸಿದರು.
ಅಬ್ಬಾ!ಬಚಾವ್ ನಾನು ಫಸ್ಟ್ ಕ್ಲಾಸ್ ನಲ್ಲಿ ಪಾಸಾದವರ ಪಟ್ಟಿಯಲ್ಲಿ ಇದ್ದೆ.ಆಗ ನನಗಾದ ಸಂತಸವನ್ನು ವರ್ಣಿಸಲಾರೆ.ಅದು ಶಬ್ದಾತೀತವಾದುದು! ಈಗಿನಂತೆ ಆಗ ಫಲಿತಾಂಶ ಬಂದ ದಿನವೇ ನಮಗೆ ಅಂಕಗಳು ಗೊತ್ತಾಗುತ್ತಿರಲಿಲ್ಲವೆಂದು ಕಾಣುತ್ತದೆ.ನಾನು ಫಸ್ಟ್ ಕ್ಲಾಸ್ ನಲ್ಲಿ ಪಾಸಾಗಿದ್ದರೂ ನನಗೆ ಎಷ್ಟು ಅಂಕಗಳು ಬಂದಿವೆ ಎಂದು ತಿಳಿದಿರಲಿಲ್ಲ. ಜೊತೆಗೆ ನಮ್ಮೊಳಗೆ ಸ್ಪರ್ಧೆ ಇತ್ತಲ್ಲ! ಹಾಗಾಗಿ ಯಾರು ಫಸ್ಟ್ ,ಸೆಕೆಂಡ್, ಥರ್ಡ್ ಎಂದು ತಿಳಿಯುವ ಕುತೂಹಲ ಕೂಡ ಇತ್ತು.
ಹೊರಗಡೆ ಹಾಕಿದ ಫಲಿತಾಂಶದ ಪಟ್ಟಿಯಲ್ಲಿ ಸುಮಂಗಲ, ನಿಶಾ,ವಿಜಯರ ಹೆಸರಿನ ಮುಂದೆ ಒಂದು ಸಣ್ಣ ಟಿಕ್ ಮಾರ್ಕ್ ಇತ್ತು.ಹಾಗಾಗಿ ಮೊದಲ ಮೂರು ಸ್ಥಾನ ಅವರಿಗೆ ಸಿಕ್ಕಿದೆ ಎಂದು ನಾವುಗಳು ಉಹಿಸಿದೆವು.ನನಗೊಂಚೂರು ಪೆಚ್ಚು ಕೂಡ ಆಯಿತು. ಮೊದಲ ಸ್ಥಾನ ಗಳಿಸಬೇಕೆಂದು  ಕೊನೆ ಗಳಿಗೆಯಲ್ಲಿ ಹಗಲು ರಾತ್ರಿ ಓದಿದ್ದೆ.ನನ್ನ ತಂದೆ ತಾಯಿ ಅಷ್ಟೊಂದು ಓದಿದವರಲ್ಲ ಹಾಗಾಗಿ ಗಣಿತ ಮತ್ತು ಇಂಗ್ಲಿಷ್ ಅನ್ನು ನನಗೆ ಅರ್ಥ ಮಾಡಿಸುವವರು ಇರಲಿಲ್ಲ. ಸುಮಂಗಲ, ನಿಶಾ,ವಿಜಯರಿಗೆ ಈ ಸಮಸ್ಯೆ ಇರಲಿಲ್ಲ. ಮನೆಯಲ್ಲಿ ಹೇಳಿ ಕೊಡುವವರು ಇದ್ದರು.
ಹಾಗಾಗಿ ಅವರುಗಳೇ ಮೊದಲ ಮೂರು ಸ್ಥಾನ ಗಳಿಸಿರಬಹುದೆಂದು ಊಹಿಸಿದೆ.
ಹಾಗೆಯೇ ಮನೆಗೆ ಬಂದು ಹೇಳಿದೆ ಕೂಡ. ಕೇವಲ ಟಿಕ್ ಮಾರ್ಕ್ ಇತ್ತು ಅನ್ನುವ ಕಾರಣಕ್ಕೆ ಅವರಿಗೇ ಮೊದಲ ಮೂರು ಸ್ಥಾನ ಬಂದಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ನನ್ನ ತಂದೆ ತಾಯಿ ನನಗೆ ಧೈರ್ಯ ತುಂಬಿದರು.ಮರುದಿನ ಮಾರ್ಕ್ಸ್ ತಿಳಿಸುತ್ತೇವೆ ಎಂದು ಹೇಳಿದ್ದರು. ಹಾಗೆ ಬೆಳಗ್ಗೆಯೇ ಶಾಲೆಗೆ ಹೋದೆ.
ನನ್ನ ಊಹೆ ತಪ್ಪಾಗಿತ್ತು‌.ನಿರೀಕ್ಷೆಯಂತೆ ಸುಮಂಗಲಳಿಗೆ‌ ಮೊದಲ ಸ್ಥಾನ ಬಂದಿತ್ತು.ನಾನು ಎರಡನೇ ಸ್ಥಾನ ಪಡೆದಿದ್ದೆ.ಮತ್ತು  ಆಗಿನ ಕಾಲಕ್ಕೆ ಉತ್ತಮ ಅಂಕಗಳನ್ನು (408/600) ಪಡೆದಿದ್ದೆ.ಮನೆಯಲ್ಲಿ ಸಂಭ್ರಮವೋ ಸಂಭ್ರಮ.ನನ್ನ ಫಲಿತಾಂಶವನ್ನು ಹೇಳುವ ಸಲುವಾಗಿಯೇ ನನ್ನ ತಂದೆಯವರು ಅಕ್ಕ ಪಕ್ಕದ ಮನೆಗಳಿಗೆ ಹೋಗಿ ಬಂದಿದ್ದರು!
ಕೇರಳದ ಫಲಿತಾಂಶ ತಡವಾಗಿ ಬರುತ್ತದೆ ಕರ್ನಾಟಕ ರಾಜ್ಯದ ಫಲಿತಾಂಶ ಬೇಗ ಬರುತ್ತಾ ಇತ್ತು‌.ಹಾಗಾಗಿ ನಾವು‌ ಮೊದಲೇ ಅರ್ಜಿ ತಂದು ಇಡಬೇಕಾಗಿತ್ತಂತೆ ಈ ವಿಚಾರ ನಮಗೆ ಗೊತ್ತಿರಲಿಲ್ಲ. ನನ್ನ ಭಾವ ( ದೊಡ್ಡಮ್ಮನ ಮಗಳ ಗಂಡ) ನನಗೆ ಮಂಗಳೂರಿನ ಗವರ್ನಮೆಂಟ್ ಕಾಲೇಜಿನ ಅರ್ಜಿ ತಂದು ಕೊಟ್ಟರು.ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಅಡ್ಮಿಶನ್ ಗೆ ಯತ್ನ ಮಾಡಿದೆನಾದರೂ ನನಗೆ ಅಲ್ಲಿ ಸೀಟ್ ಸಿಗಲಿಲ್ಲ. ಇದಾಗಿ ಆರೇ ವರ್ಷಗಳಲ್ಲಿ ನಾನು ಅದೇ ಸಂತ ಅಲೋಶಿಯಸ್ ಕಾಲೇಜಿನ ಸಂಸ್ಕೃತ ಉಪನ್ಯಾಸಕಿ ಹುದ್ದೆಗೆ ಅಯ್ಕೆಯಾಗಿ ಉಪನ್ಯಾಸಕಿ ಆದ್ದು ನನ್ನ ಬದುಕಿನ ಒಂದು ಅವಿಸ್ಮರಣೀಯ ಘಟನೆ ಅಂದು ಕಲಿಕೆಗೆ ಅವಕಾಶ ಸಿಗದಿದ್ದರೂ ನಂತರ ಅದೇ ಪ್ರತಿಷ್ಠಿತ ಕಾಲೇಜಿನಲ್ಲಿ ಕಲಿಸಲು ಅರ್ಹತೆ ಪಡೆದು ಕಲಿಸಿದ್ದು ಬದುಕಿನಲ್ಲಿ ಹೀಗೂ ಆಗುತ್ತದೆ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಯಿತು.
ಬೇರೆಡೆ ಸೀಟ್ ಸಿಗದ ಕಾರಣ ಗವರ್ನಮೆಂಟ್ ಕಾಲೇಜಿಗೆ( ಈಗಿನ ಯುನಿವರ್ಸಿಟಿ ಕಾಲೇಜಿಗೆ) ಸೇರಿದೆ
ನಮ್ಮ ತರಗತಿಯಲ್ಲಿ ತೊಂಬತ್ತೊಂಬತ್ತು ಶೇಕಡಾ ವಿದ್ಯಾರ್ಥಿಗಳು ಕನ್ನಡ ಮಾಧ್ಯಮ ದಲ್ಲಿ ಓದಿದವರಾಗಿದ್ದರು.ಆದರೆ ಇಲ್ಲಿನ ಉಪನ್ಯಾಸಕರು ಮಾತ್ರ ಸಾಕ್ಷಾತ್ ಇಂಗ್ಲೆಂಡ್ ನಿಂದ ಉದುರಿದವರ ಹಾಗೆ ಇದ್ದರು‌.ಒಂದಕ್ಷರ ಕನ್ನಡದಲ್ಲಿ ಹೇಳುತ್ತಿರಲಿಲ್ಲ.ಪರಿಣಾಮ ಹತ್ತನೆಯ ತರಗತಿಯಲ್ಲಿ ವಿಜ್ಞಾನ ದಲ್ಲಿ 99% ಅಂಕಗಳನ್ನು
ಗಳಿಸಿದ್ದ ನಾನು ಪಾಠ ಅರ್ಥವಾಗದೆ ಕಲಿಕೆಯಲ್ಲಿ ಹಿಂದುಳಿದೆ.
ಪ್ರಥಮ ಪಿಯುಸಿ ಕಿರು ಪರೀಕ್ಷೆಯಲ್ಲಿ ( ಕೆಮೆಷ್ಟ್ರಿ) ಯಲ್ಲಿ ನಾನೊಂದು ಪ್ರಶ್ನೆಯ ಅರ್ಥವನ್ನು ಕನ್ನಡದಲ್ಲಿ ತಿಳಿಸಲು ಅಲ್ಲಿ ಇನ್ವಿಜಲೇಷನ್ ಮಾಡುತ್ತಿದ್ದ ಪಟಿಕಲ್ ಶಿವರಾಮ ಭಟ್ ಎಂಬ ಉಪನ್ಯಾಸಕರಲ್ಲಿ ಕೇಳಿದೆ.ನಾನು ಉತ್ತರವನ್ನು ಕೇಳಿದ್ದಲ್ಲ‌.ಪ್ರಶ್ನೆಯ ಕನ್ನಡ ರೂಪವನ್ನು ಕೇಳಿದ್ದು.ಅದು ಹೇಳಲಾಗುವುದಿಲ್ಲ ಎಂದವರು ಹೇಳಿದರು! ಆದರೆ ವಿಜ್ಞಾನ ವನ್ನು ಕನ್ನಡ ಮಾಧ್ಯಮ ದಲ್ಲಿ ಕೂಡ ಬರೆಯಲು ಅವಕಾಶ ಇದೆ ಎಂದು ಗೊತ್ತಾದದ್ದು ನನಗೆ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ಬರೆದಾಗಲೇ.ಪ್ರಶ್ನೆ ಪತ್ರಿಕೆ ಇಂಗ್ಲಿಷ್ ಮತ್ತು ಕನ್ನಡ ಎರಡೂ ಮಾಧ್ಯಮದಲ್ಲಿ ಇದ್ದವು.ಪಿಯುಸಿ ಅಂತಿಮ ಪರೀಕ್ಷೆ ಯ ಪ್ರಶ್ನೆ ಪತ್ರಿಕೆ  ಕನ್ನಡ ಮತ್ತು ಇಂಗ್ಲಿಷ್  ಭಾಷೆಗಳಲ್ಲಿ ಇರುವಾಗ ಪ್ರಥಮ ಪಿಯುಸಿ ಯ ಕಿರು ಪರೀಕ್ಷೆಯಲ್ಲಿ ನಾನು ಕೇಳಿದ ಒಂದು ಪ್ರಶ್ನೆ ಯ ಕನ್ನಡ ಅನುವಾದವನ್ನು ತಿಳಿಸುವುದು ಅಪರಾಧವಾಗುತ್ತಿರಲಿಲ್ಲ.ಅರ್ಥವಾಗದ ಭಾಷೆಯಲ್ಲಿ ಪಾಠ ಕೇಳುವುದು ಎಂತ ಹಿಂಸೆ ಗೊತ್ತಾ ? ಕ್ಷಣ ಕ್ಷಣ ಕೂಡ ಯುಗವಾಗಿ ಬಿಡುತ್ತದೆ.ಪಾಠ ಯಾವಾಗ ನಿಲ್ಲಿಸುತ್ತಾರೆ ಎಂದು ಕಾಯುತ್ತಾ ಕುಳಿತುಕೊಳ್ಳುತ್ತಿದ್ದೆ.ನಿಮಿಷ ನಿಮಿಷಕ್ಕೂ ವಾಚು ನೋಡುತ್ತಾ ಇದ್ದೆ.ಸುಮ್ಮನೇ ಅರ್ಥವಾಗದ್ದನ್ನು ಕೇಳುವಾಗ ಟಾಯ್ಲೆಟ್ ಗೆ ಹೋಗಬೇಕು ಎಂದು ಅನಿಸುವುದು,ಬೆನ್ನು ನೋವಾಗುವುದು..ಹೀಗೆ ಹೊತ್ತು ಕಳೆಯಲಾಗದೆ ಒದ್ದಾಡುತ್ತಾ ಇದ್ದೆ.ನಮ್ಮ ತರಗತಿಯಲ್ಲಿ ಹೆಚ್ಚಿನವರು ಹತ್ತನೇ ತರಗತಿಯಲ್ಲಿ ವಿಜ್ಞಾನ ದಲ್ಲಿ 80% ಕ್ಕಿಂತ ಹೆಚ್ಚು ಅಂಕಗಳು ಪಡೆದವರೇ ಆಗಿದ್ದರು.
ಹೀಗೆ ಇಂಗ್ಲಿಷ್ ಭಾಷೆಯಲ್ಲಿ ಪಾಠ ಮಾಡಿದ್ದು ಅರ್ಥವಾಗದ್ದರ ಪರಿಣಾಮ
ದ್ವಿತೀಯ ಪಿಯುಸಿ ಯಲ್ಲಿ  ಹತ್ತನೇ ತರಗತಿ ತನಕ ನನ್ನ ಇಷ್ಟದ ಸಬ್ಜೆಕ್ಟ್ ಕೆಮೆಷ್ಟ್ರಿ ಮತ್ತು ಗಣಿತದಲ್ಲಿ ಫೈಲ್ ಆಗಿದ್ದೆ.ನಾನು ಮಾತ್ರವಲ್ಲ ಒಬ್ಬಿಬ್ಬರು ಬಿಟ್ಟರೆ ಉಳಿದವರೆಲ್ಲ ಫೈಲ್ ಆಗಿದ್ದರು.ಬಹುಶಃ 1% ಕ್ಕಿಂತಲೂ ಕಡಿಮೆ ಫಲಿತಾಂಶ ಇದ್ದಿರಬಹುದು. ಇಷ್ಟಾದರೂ ಅಲ್ಲಿನ ಉಪನ್ಯಾಸಕರನ್ನು ಹೇಳುವವರು ಕೇಳುವವರು ಯಾರೂ ಇರಲಿಲ್ಲವೇ? ಈಗ ನಲುವತ್ತು ಶೇಕಡಾ ಕ್ಕಿಂತ ಕಡಿಮೆ ಫಲಿತಾಂಶ ಬಂದರೆ ಅವರ ವಿಚಾರಣೆ ಇರುತ್ತದೆ,ಭಡ್ತಿ ಕಡಿತ ಮಾಡುತ್ತಾರೆ‌
ಇತ್ತ
ನನ್ನ ಮೇಲೆ ತುಂಬಾ ಭರವಸೆ ಇಟ್ಟಿದ್ದ ಹೆತ್ತವರಿಗೆ ಭ್ರಮೆ ನಿರಸನವಾಯಿತು.ಬೈಗಳ ಸುರಿ ಮಳೆಯಾಯಿತು.
ಅದೇ ಕ್ಷಣ ಓದಲು ಕುಳಿತೆ ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಹೇಗೋ ಬಾಯಿಪಾಠ ಮಾಡಿ ಎರಡೂ ವಿಷಯಗಳಲ್ಲಿ ಫಸ್ಟ್ ಕ್ಲಾಸ್ ಮಾರ್ಕ್ಸ್ ತೆಗೆದೆ.
ಡಿಗ್ರಿಗೆ ಸೇರುವಾಗ ಆರ್ಟ್ಸ್ ತೆಗೆದುಕೊಳ್ಳಬೇಕೆಂದು ಬಯಸಿ ತಂದೆಯವರ ಜೊತೆಯಲ್ಲಿ ಕೆನರಾ ಕಾಲೇಜಿಗೆ ಹೋಗಿ ಸೀಟ್ ಕೇಳಿದೆ.ಮರು ಪರೀಕ್ಷೆಗಳಲ್ಲಿ ಉತ್ತಮ ಅಂಕಗಳು ಇದ್ದವು.ಸಂಸ್ಕೃತ ದಲ್ಲಿ ಒಳ್ಳೆಯ ಅಂಕಗಳು ಇದ್ದವು ಹಾಗಾಗಿ ಸೀಟ್ ಕೊಡಲು ಫ್ರಾಂಶುಪಾಲರು ಒಪ್ಪಿದರು‌.ಎಷ್ಟೋ ಫೀಸ ನ್ನು( ಎಷ್ಟು ಕೇಳಿದ್ದರೆಂದು ನನಗೆ ನೆನಪಿಲ್ಲ) ಕೊಡಬೇಕೆಂದು ಹೇಳಿದರು.ಆಗ ನನ್ನ ತಂದೆಯವರು ನಮಗೆ ಅಷ್ಟು ಫೀಸ್ ಕೊಡಲು ಕಷ್ಟವಾಗುತ್ತದೆ. ನಮಗೆ ಎರಡು ಖಂಡಿ ಅಡಿಗೆ ಆಗುವುದು.ಇದರಲ್ಲಿ ಐದು ಜನರ ಓದು ಆಗಬೇಕು, ದೊಡ್ಡ ಮಗಳ ಮದುವೆಯ ಸಾಲ ಇದೆ ಎಂದು ಹೇಳಿ ಫೀಸ್ ಕಡಿಮೆ ಮಾಡಲು ವಿನಂತಿಸಿದರು.ಆಗ ಪ್ರಾಂಶುಪಾಲರು ನನ್ನ ತಂದೆಯವರನ್ನು ಗದರಿದ್ದು ನನಗೆ ಭಯವಾದದ್ದು ಈಗಲೂ ನೆನಪಿದೆ,ಎರಡು ಖಂಡಿಯೋ ಇಪ್ಪತ್ತು ಖಂಡಿಯೋ ಎಂದು ದೊಡ್ಡ ದನಿಯಲ್ಲಿ ದಟ್ಟಿಸಿ ಕೇಳಿದ್ದರು ಅವರು.ಅಧಿಕಾರ ದುಡ್ಡು ‌ಮನುಷ್ಯನಲ್ಲಿ ಎಂತಹ ದರ್ಪ ತರುತ್ತದೆ ಎಂಬುದರ ಪ್ರತ್ಯಕ್ಷ ಅನುಭವ ಆದದ್ದು ನನಗೆ ಆಗಲೇ..ಅವರಿಗೆ ನಮ್ಮ ತಂದೆಯವರನ್ನು ಗದರುವ ಹಕ್ಕೇನಿತ್ತು ? ಫೀಸ್ ಕಡಿಮೆ ಮಾಡಲು ಸಾಧ್ಯವಿಲ್ಲ ಎಂದಾದರೆ ಅದನ್ನು ಹಾಗೆಯೇ ಹೇಳಬಹುದಿತ್ತು.ಏನು ಮಾಡುವುದು ? ಬಡತನ ಎಲ್ಲ ಅನುಭವವನ್ನು ಮಾಡಿಸುತ್ತದೆ.ನಂತರ ನನ್ನ ತಂದೆಯವರನ್ನು ಅವಮಾನಿಸಿದ   ಆ ಕಾಲೇಜು ಬೇಡವೆಂದು  ನಾನು ನಿರ್ಧರಿಸಿದೆ. ಮತ್ತು ಗವರ್ನಮೆಂಟ್ ಕಾಲೇಜಿಗೆ ಸೇರಿ ಪದವಿಯಲ್ಲಿ ಆರ್ಟ್ಸ್ ತೆಗೆದುಕೊಂಡು ಓದುವುದೆಂದು ಆಲೋಚಿಸಿದ್ದೆ. ಆ ಪ್ರಾಂಶುಪಾಲರ ಪೂರ್ಣ ಹೆಸರು ನನಗೆ ನೆನಪಿಲ್ಲ.. ಉಪಾಧ್ಯಾಯ ಎಂದೇನೋ ಇತ್ತು‌.ಮುಂದೆ ಕಟೀಲಿನಲ್ಲಿ ನಾನು ಸಂಸ್ಕೃತ ಎಂಎ ಯಲ್ಲಿ ಮೊದಲ ರ‍‍್ಯಾಂಕ್ ತೆಗೆದಿದ್ದಾಗ ,ವಾರ್ಷಿಕೋತ್ಸವದಲ್ಲಿ ಅವರು ಅತಿಥಗಳಾಗಿ ಆಹ್ವಾನಿಸಲ್ಪಟ್ಟಿದ್ದು  ನನಗೆ ವಿಠಲ್ ರಾವ್ ಸ್ಮಾರಕ ಚಿನ್ನದ ಪದಕವನ್ನು ಕೂಡ ಕೊಟ್ಟಿದ್ದರು ಎಂದು ನೆನಪು‌.
ನಂತರ ನಾನು ಉಜಿರೆಯಲ್ಲಿ ಎಸ್ ಡಿ ಎಂ ಸಿ ಕಾಲೇಜಿನಲ್ಲಿ  ಮನಸಿಲ್ಲದ ಮನಸಿನಲ್ಲಿ ಬಿಎಸ್ಸಿ ಓದಿದೆ
ಅದು ಕೂಡ ಆಕಸ್ಮಿಕವಾಗಿ.
ನನ್ನ ತಮ್ಮ ಈಶ್ವರ ಭಟ್ ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಅಂಕಗಳನ್ನು ತೆಗೆದಿದ್ದ.ಇವನನ್ನು ಉಜಿರೆ ಕಾಲೇಜಿಗೆ ಸೇರಿಸುವ ಸಲುವಾಗಿ ಸೀಟ್ ಕೇಳಲು ನಮ್ಮ ಸಂಬಂಧಿಕರಾದ ಅಲ್ಲಿನ ಫಿಸಿಕ್ಸ್ ಪ್ರಾಧ್ಯಾಪಕರಾದ ಗಣಪಯ್ಯ ಅವರನ್ನು ಅಣ್ಣ ಹೋಗಿ ಭೇಟಿ ಮಾಡಿದ.ಆಗ ಅವರು ಅಕ್ಕ ತಂಗಿಯರು ಏನು ಮಾಡುತ್ತಿದ್ದಾರೆ ಎಂದು ವಿಚಾರಿಸಿದರು‌.ಆಗ ಅಣ್ಣ ನನ್ನ ವಿಚಾರ ಹೇಳಿದ‌.ಆಗ ಅವರು ಅವಳೂ ಇಲ್ಲಿ ಬರಲಿ ಎಂದು ಹೇಳಿದರು‌.ವಿಜ್ಞಾನಕ್ಕೆ ಹೆಚ್ಚು ಸ್ಕೋಪ್ ಇದೆ ಹಾಗಾಗಿ ಬಿಎಸ್ಸಿ ಓದು ಎಂದು ತಿಳಿಸಿ ನನಗೆ ಬಿಎಸ್ಸಿ ಗೆ ಸೀಟ್ ಕೊಡಿಸಿದರು ‌ಅಲ್ಲೂ ಭಾಷೆಯದೇ ತೊಡಕು ನನಗೆ .ಅಂತೂ ಪಾಸಾಗಿ  ಸೀಟ್ ಕೊಡಿಸಿದ ಅವರ ಮರ್ಯಾದೆ ಉಳಿಸಿದ್ದೆ‌.
ಅಲ್ಲಿಂದ ನಾನು ಸಂಸ್ಕೃತ ಎಂಎ ಗೆ ಸೇರಲು ನಿರ್ಧರಿಸಿದೆ. ಹಲವು ಅಡ್ಡಿ ಆತಂಕಗಳ ನಡುವೆಯೂ ಸಂಸ್ಕೃತ ಎಂಎಗೆ ಸೇರಿದೆ.ನನಗಲ್ಲಿ ರ‍‍್ಯಾಂಕ್ ತೆಗೆಯುವ ಗುರಿ ಇತ್ತು‌.ಆದರೆ ಅದನ್ನು ತಲುಪುವುದು ಅಷ್ಟು ಸುಲಭದ ವಿಚಾರವಾಗಿರಲಿಲ್ಲ‌.
ಅಲ್ಲಿ ಪದವಿಯಲ್ಲಿ ಸಂಸ್ಕೃತ ವನ್ನು ಮೇಜರ್ ವಿಷಯವಾಗಿ ತಗೊಂಡು ರ‍‍್ಯಾಂಕ್ ಪಡೆದ ವಿದ್ಯಾರ್ಥಿಗಳಾದ ರಮಿತಾ,ಶ್ರೀದೇವಿ ಮೊದಲಾದವರು ನನ್ನ ಸಹಪಾಠಿಗಳಾಗಿದ್ದರು.ಅವರ ಸಂಸ್ಕೃತ ಭಾಷೆ ಮತ್ತು ವಿಷಯದ ಕುರಿತಾದ ಜ್ಞಾನ ನೋಡಿ ನಾನು ಕಂಗಾಲಾಗಿದ್ದೆ.ಹಾಗಾಗಿ ಲೈಬ್ರರಿ ಯಿಂದ ಪುಸ್ತಕಗಳನ್ನು ತಂದು ದಿನಕ್ಕೆ ಕನಿಷ್ಠ ಎಂಟು ಗಂಟೆಗಳ ಕಾಲ ಅಧ್ಯಯನ ಮಾಡಿದ್ದೆ..ಕಾಲು ವಾರ್ಷಿಕ ಪರೀಕ್ಷೆಗಳಲ್ಲಿಯೇ ಇತರರಿಗಿಂತ ಹೆಚ್ಚಿನ ಅಂಕಗಳನ್ನು ಗಳಿಸಿದೆ.
ಆಗ ನನಗೆ ಮದುವೆಯಾಗಿತ್ತು.ಇತರೆ ಸಹಪಾಠಿಗಳು ಅವಿವಾಹಿತರಾಗಿದ್ದರು.ಆದರೆ ಇದೇನೂ ನಮ್ಮಲ್ಲಿ ಅಂತರ ತರಲಿಲ್ಲ. ನೀತಾ,ಕಮಲಾಯನಿ ನನಗೆ ಹೆಚ್ಚು ಆಪ್ತರಾಗಿದ್ದರು‌.ನನ್ನ ಸಹಪಾಠಿ ಗಳಿಗೆ ವಿವಾಹಾನಂತರದ ಬದುಕಿನ ಬಗ್ಗೆ ಒಂಚೂರು ‌ಕುತೂಹಲ ,ಆತಂಕ ಇತ್ತು‌.ಒಳ್ಳೆಯ ಗಂಡ ಸಿಕ್ಕಿದರೆ ಬದುಕು ಸ್ವರ್ಗ ಎಂಬುದನ್ನು ಸೂಕ್ಷ್ಮ ವಾಗಿ ತಿಳಿಸಿ ಅವರ ಕುತೂಹಲವನ್ನು ತಣಿಸಿ ಆತಂಕವನ್ನು ದೂರ ಮಾಡಿದ್ದೆ‌.ನಾನು ಸತ್ಯವನ್ನು ಹೇಳಿದ್ದೆ.ಪ್ರಸಾದ್ ಬಹಳ ಸಹೃದಯಿ ಆದ ಕಾರಣ ಬಡತನವಿದ್ದರೂ ಕೂಡ ನಮ್ಮ ಬದುಕು ಸ್ವರ್ಗ ಸದೃಶವೇ ಆಗಿತ್ತು ಆಗ.ಆಗ ಮಾತ್ರವಲ್ಲ ಈಗಲೂ ಸಿರಿವಂತಿಕೆ ಬಂದ ಮೇಲೆ ಕೂಡ, ಆದರೆ ಕಳೆದ ದಿನಗಳನ್ನು ನಾನು ಮರೆತಿಲ್ಲ ಹಾಗಾಗಿ ಬಡವರನ್ನು ಅಥವಾ ಯಾರನ್ನೂ ಕೂಡ ತಾತ್ಸಾರದಿಂದ ಕಾಣುವುದಿಲ್ಲ.
ಸಂಸ್ಕೃತ ಎಂಎ ಓದುವಾಗ ನಾವೆಲ್ಲರೂ ಒಂದೇ ದೋಣಿಯ ಪಯಣಿಗರಾಗಿದ್ದೆವು.ಎಲ್ಲರೂ ಬಡ ಮಧ್ಯಮ ಕುಟುಂಬದವರೇ ಆಗಿದ್ದೆವು.ವರ್ಷವಿಡೀ ಎರಡು ಮೂರು ಪ್ರತಿ ಡ್ರೆಸ್ ಗಳಲ್ಲೇ ಕಳೆದಿದ್ದೆವು.ಎಲ್ಲರೂ ಹಾಗೇ ಇದ್ದ ಕಾರಣ ನಮಗೆ ಅದೊಂದು ಕೊರತೆಯಾಗಿ ಕಾಣಿಸಿರಲಿಲ್ಲ.ಎಲ್ಲರಲ್ಲೂ ಸಾಧನೆಯ ಕನಸಿತ್ತು.
ನಮಗೆ ಮಧ್ಯಾಹ್ನ ಕಟೀಲಿನಲ್ಲಿ ದೇವಸ್ಥಾನದಲ್ಲಿ ಸುಗ್ರಾಸ ಭೋಜನದ ವ್ಯವಸ್ಥೆ ಇತ್ತು‌.ಎಲ್ಲಾ ವಿದ್ಯಾರ್ಥಿಗಳಿಗೂ ಮಧ್ಯಾಹ್ನ ಊಟದ ವ್ಯವಸ್ಥೆ ಇತ್ತು.ಮಧ್ಯಾಹ್ನ ಪೂಜೆಯಾದ ನಂತರದ ಊಟಕ್ಕೆ ಕಾದರೆ ಪ್ರಸಾದದ ಊಟ ಇತ್ತು‌ ಬ್ರಾಹ್ಮಣರಿಗೆ ಒಳಗೆ ಬೇರೆ ವ್ಯವಸ್ಥೆ ಇತ್ತು‌ ನಮ್ಮಲ್ಲಿ ಹೆಚ್ಚನವರು ಬ್ರಾಹ್ಮಣ ರಾದ ಕಾರಣ ನಾವು ಪೂಜೆಯ ಬಳಿಕದ ಪ್ರಸಾದದ ಊಟಕ್ಕೆ ಕಾಯುತ್ತಿದ್ದೆವು‌.ದಿನಾಲು ಪಾಯಸ ಇರುತ್ತಿತ್ತು. ಅಲ್ಲಿ ಒಂದು ಸಾರು ಮಾಡುತ್ತಿದ್ದರು.. ಅಷ್ಟು ರುಚಿಯಾದ ಸಾರನ್ನು ನಾನು ಬೇರೆಲ್ಲೂ ಉಂಡಿಲ್ಲ‌ಅಲ್ಲಿನ ಉಪ್ಪಿನಕಾಯಿಯೂ ಅಷ್ಟೇ, ಅತ್ಯದ್ಭುತ! ಪ್ರತಿ ಶುಕ್ರವಾರ ಗಂಜಿ ಇತ್ತು ಅದು ಕುಡ ಬಹಳ ರುಚಿಯಾದುದು‌ ಇನ್ನೂ ಚಂಡಿಕಾ ಹೋಮ ಏನಾದರೂ ವಿಶೇಷ ಇದ್ದರೆ ಪಾಯಸದ ಜೊತೆಗೆ ಸ್ವೀಟ್ ಕೂಡ ಇರುತ್ತಿತ್ತು ‌ಜೊತೆಗೆ ನಮಗೆ ಊಟ ದಕ್ಷಣೆಯಾಗಿ ಎರಡು ರುಪಾಯಿ ಐದು ರುಪಾಯಿ ಸಿಗುತ್ತಾ ಇತ್ತು‌.ಇಪ್ಪತ್ತೈದು ವರ್ಷಗಳ ಹಿಂದೆ ಎರಡು ರುಪಾಯಿ ಐದು ರುಪಾಯಿ ಗಳಿಗೆ ತುಂಬಾ ಬೆಲೆ ಇತ್ತು‌  ಹಾಗಾಗಿ ಆ ದಿನ ನಮಗೆ ಖುಷಿಯೋ ಖುಷಿ..ನಮ್ಮ ತರಗತಿಗಳನ್ನು ದೇವಸ್ಥಾನದ ಊಟದ ಸಮಯಕ್ಕೆ ಹೊಂದಾಣಿಕೆ ಮಾಡಿದ್ದೆವು.ಉಪನ್ಯಾಸಕರಾದ ನಾಗರಾಜ್ ಮತ್ತು ಪದ್ಮನಾಭ ಮರಾಠೆ ನಮ್ಮ ಜೊತೆಯಲ್ಲಿ ದೇವಸ್ಥಾನದಲ್ಲಿ ಊಟ ಮಾಡುತ್ತಿದ್ದರು ‌ಕೆಲವೊಮ್ಮೆ ಊಟ ಭಾರವಾಗಿ ತರಗತಿ ಬೇಡ ಎಂದರೆ ಅವರುಗಳು ಒಪ್ಪುತ್ತಿದ್ದರು‌.ಆಗ ಬಹಳ ಖುಷಿಯಿಂದ ಮನೆಗೆ ಬಂದು ನಿದ್ರೆ ಮಾಡುತ್ತಿದ್ದೆ ನಾನು,ಕಟೀಲಿನಲ್ಲಿ ಎರಡು ವರ್ಷ ಭರ್ಜರಿಯಾಗಿ  ರುಚಿಯಾದ ಸುಗ್ರಾಸ ಭೋಜನ ಸವಿದದ್ದು ನನ್ನ ಬದುಕಿನ ಸುವರ್ಣ ಗಳಿಗೆಗಳು.
ಮೊದಲ ವರ್ಷ ಎಂಎ ಯಲ್ಲೂ ಅಷ್ಟೇ, ಎಲ್ಲಾ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆಯುತ್ತಿದ್ದೆವು.ಆದಿನಗಳು ಇಂದಿಗೂ ಸ್ಮರಣೀಯವಾಗಿವೆ
ಮೊದಲ ವರ್ಷದ ಕೊನೆಯಲ್ಲಿ ಡಾ.ಜಿ ಎನ್ ಭಟ್ಟರ ಪ್ರಯತ್ನದಿಂದಾಗಿ  ನಮಗೆಲ್ಲ ಒಂದೊಂದು ಸಾವಿರ ರುಪಾಯಿ ಸ್ಕಾಲರಚ ಶಿಪ್ ಬಂದಿತ್ತು.ಆರ್ಥಿಕ ತೊಂದರೆ ಇರುವಾಗ ಇಷ್ಟು ದೊಡ್ಡ ಮೊತ್ತ ಸ್ಕಾಲರ್ ಶಿಪ್ ದುಡ್ಡು ಬಂದಾಗ ಆದ ಸಂತಸವನ್ನು ವರ್ಣಿಸಲು ನನ್ನಲ್ಲಿ ಶಬ್ದಗಳಿಲ್ಲ‌.ಅ ಒಂದು ಸಾವಿರ ರುಪಾಯಿ ಗಳನ್ನು ಕೈಯಲ್ಲಿ ಹಿಡಿದುಕೊಂಡು ಅತ್ತು ಬಿಟ್ಟಿದ್ದೆ.ಉಳಿದವರದೂ ಅದೇ ಅವಸ್ಥೆ  .ಮೊದಲ  ವರ್ಷ ಎರಡನೇ ಎರಡು ಚೂಡಿದಾರ್ ನಲ್ಲಿ ಕಳೆದಿದ್ದೆ.ಅಲ್ಲಲ್ಲಿ ಹರಿದು ತೇಪೆ ಹಾಕಿದ್ದೆ‌‌.ಹಾಗಾಗಿ ಬಂದ ದುಡ್ಡಿನಲ್ಲಿ ಎರಡು ಡ್ರೆಸ್ ತೆಗೆದುಕೊಂಡು ಉಳಿದ ಹಣದಲ್ಲಿ ಬೇಕಾದ ಪುಸ್ತಕಗಳನ್ನು ಖರೀದಿಸಿದ್ದೆ‌.ಜೊತೆಯಲ್ಲಿ ನನಗೆ ಬಹಳ ಇಷ್ಟವಾದ ಮೈಸೂರು ಪಾಕನ್ನು ಸ್ವಲ್ಪ ಖರೀದಿಸಿ ತಿಂದಿದ್ದೆವು


No comments:

Post a Comment