ಚಿತ್ರ ಕೃಪೆ : ಅಂತರ್ಜಾಲ
ಸುಮಾರು ಇಪ್ಪತ್ತಮೂರು ವರ್ಷಗಳ ಹಿಂದಿನ ಮಾತಿದು.ನನ್ನ ಓದಿನ ಕಾರಣಕ್ಕೆ ಮನೆ ಮಂದಿಯನ್ನೆಲ್ಲಾ ಎದುರು ಹಾಕಿಕೊಂಡು ಎಕ್ಕಾರಿನ ಒಂದು ರೂಮಿನ ಮೋಟು ಗೋಡೆಯ ಗೆದ್ದಲು ಹಿಡಿದ ಮಣ್ಣಿನ ಮನೆಯನ್ನು ನೂರ ಐವತ್ತು ರುಪಾಯಿ ಬಾಡಿಗೆಗೆ ಹಿಡಿದಿದ್ದೆವು.ಅದಕ್ಕಿಂತ ಒಳ್ಳೆಯ ಮನೆ ನಮ್ಮ ಬಜೆಟ್ ಗೆ ಸಿಕ್ಕಲು ಸಾಧ್ಯವಿರಲಿಲ್ಲ. ಈ ಮನೆಯಲ್ಲಿ ಇದ್ದದ್ದು ಒಂದು ಕೊಠಡಿ ಸುಮಾರು ಎಂಟಡಿ ಅಗಲ ಹತ್ತು ಹನ್ನೆರಡಡಿ ಉದ್ದ ಇದ್ದಿರಬಹುದು. ಅದರ ಒಂದು ತುದಿಯಲ್ಲಿ ಮೂರಡಿ ಎತ್ತರಕ್ಕೆ ಒಂದು ಸಣ್ಣ ಗೋಡೆ.ಅದರ ಆಕಡೆ ಅಡಿಗೆ ಮನೆ,ಅದಕ್ಕೆ ತಾಗಿಕೊಂಡು ಸ್ನಾನದ ಮನೆ.ಇದು ಮೂರುಅಡಿ ಉದ್ದ ಮೂರಡಿ ಅಗಲ ಇದ್ದಿರಬಹುದು.
ನಮ್ಮ ಈ ಮನೆಯ ಎತ್ತರ ಸುಮಾರು ಎಂಟು ಹತ್ತಡಿ ಇದ್ದಿರಬಹುದು. ಆದರೆ ಗೋಡೆ ಮಾತ್ರ ಆರಡಿ ಎತ್ತರ ಇತ್ತು.ಒಂದು ಕುರ್ಚಿ ತಗೊಂಡು ಹತ್ತಿ ಆಕಡೆಗೆ ಇಣುಕಿದರೆ ಆ ಕಡೆಯ ಇಳಿಸಿ ಕಟ್ಟಿದ ಜೋಪಡಿ ಕಾಣುವಂತೆ ಇತ್ತು.ಆದರೆ ಹತ್ತಿ ನೊಡಲು ನಮ್ಮಲ್ಲಿ ಖುರ್ಚಿಯಾಗಲಿ ಮಂಚವಾಗಲೀ ಇರಲಿಲ್ಲ. ಹಾಗಾಗಿ ಅಲ್ಲಿ ಏನಿದೆ ಎಂದು ಸುಮಾರು ಸಮಯ ಗೊತ್ತಿರಲಿಲ್ಲ. ಅಲ್ಲಿ ಒಂದು ಅಜ್ಜಿ ಮತ್ತು ಅವರ ಬುದ್ಧಿ ಮಾಂದ್ಯ ಮಗ ವಾಸಮಾಡುತ್ತಿದ್ದರು.ಆ ಮಗನಿಗೆ ಅಮವಾಸ್ಯೆ ಹತ್ತಿರ ಬಂದಂತೆಲ್ಲ ಕೋಪ ಆಕ್ರೋಶ ಹೆಚ್ಚಾಗುತ್ತಾ ಇತ್ತು ಏನೇನೋ ಕೂಗಾಡುತ್ತಾ ಇದ್ದ.
ಅದಿರಲಿ.ನಮ್ಮದು ಅರ್ಧ ಗೋಡೆಯ ಮನೆ ಆದ ಕಾರಣ ಸಣ್ಣ ಸದ್ದಾದರೂ ಆ ಕಡೆಗೆ ಕೇಳುವಂತೆ ಇತ್ತು..ನಾವು ಅಲ್ಲಿಗೆ ಬಂದು ಒಕ್ಕಲಾದ ಒಂದೆರಡು ದಿನಗಳಲ್ಲೇ ಅಕ್ಕಮ್ಮಜ್ಜಿ ತನ್ನ ಸರಳ ಸಜ್ಜನಿಕೆಯ ನಡೆ ನುಡಿಯಿಂದ ಬಹಳ ಇಷ್ಟವಾದರು.ಅವರು ಮಾತನಾಡುತ್ತಾ ನನಗೆ ಕಿವಿ ಕೇಳಿಸುವುದಿಲ್ಲ ಮಗಾ.ಇನ್ನು ನನ್ನ ಮಗ ಮಲಗಿದ ತಕ್ಷಣ ನಿದ್ದೆ ಮಾಡುತ್ತಾನೆ.ಅವನಿಗೇನೂ ಗೊತ್ತಿಲ್ಲ ಸಣ್ಣ ಮಗುವಿನ ಬುದ್ಧಿ ಅವನದು( ಇದು ಸತ್ಯದ ವಿಚಾರವೇ ಆಗಿತ್ತು) ಆದರೆ ಕಿವಿ ಕೇಳಿಸುವುದಿಲ್ಲ ಎಂದು ಹೇಳಿದ್ದು ಶುದ್ಧ ಸುಳ್ಳು.ಆದರೆ ಹೊಸತಾಗಿ ಮದುವೆಯಾಗಿ ಬಂದು ಸಂಸಾರ ಹೂಡಿದ ನಮಗೆ ಸಂಕೋಚವಾಗಬಾರದೆಂಬ ಸದುದ್ದೇಶದಿಂದ ಅವರು ಹಾಗೆ ಹೇಳಿದ್ದರು.
ಅಕ್ಕಮ್ಮಜ್ಜಿ ಬಹಳ ಸಹೃದಯಿ. ಆಗಾಗ ನಮ್ಮ ಮನೆ ಅಂಗಳ ಗುಡಿಸಿ ಮನೆಗೆ ಹತ್ತಿದ ಗೆದ್ದಲು ತೆಗೆಯಲು ಸಹಾಯ ಮಾಡುತ್ತಿದ್ದರು .ನಮ್ಮ ಮನೆಯ ಓನರ್ ನಾಗವೇಣಿ ಅಮ್ಮನವರ ಮನೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು.ಅವರ ಮೊದಲ ಮಗ ಬುದ್ಧಿ ಮಾಂದ್ಯ.ಆದರೆ ಎರಡನೇ ಮಗ ಮುಂಬಯಿಯಲ್ಲಿ ಒಳ್ಳೆಯ ಕೆಲಸದಲ್ಲಿ ಇದ್ದ ,ಒಳ್ಳೆಯ ಆದಾಯವೂ ಇತ್ತು.ಆತ ತನ್ನ ತಾಯಿಯನ್ನು ಎಂದರೆ ಅಕ್ಕಮ್ಮಜ್ಜಿ ಯನ್ನು ಮುಂಬಯಿಗೆ ಕರೆದುಕೊಂಡು ಹೋಗಲು ತಯಾರಿದ್ದ ಆದರೆ ಬುದ್ಧಿ ಮಾಂದ್ಯನಾದ ಅಣ್ಣನನ್ನು ಕರೆದುಕೊಂಡು ಹೋಗಲು ತಯಾರಿರಲಿಲ್ಲ.ಆತನನ್ನು ನೋಡಿಕೊಳ್ಳುವ ಸಲುವಾಗಿ ಅಕ್ಕಮ್ಮಜ್ಜಿ ಎಕ್ಕಾರಿನಲ್ಲಿ ಕೂಲಿ ಮಾಡುತ್ತ ಇಳಿಸಿ ಕಟ್ಟಿದ ಅಡಿಕೆ ಮರದ ಸೋಗೆಯ ಜೋಡಿಯಲ್ಲಿ ದೊಡ್ಡ ಮಗನೊಂದಿಗೆ ಬದುಕುತ್ತಾ ಇದ್ದರು.ನಾನಿರುವ ತನಕ ಮಗನನ್ನು ಬೀದಿ ಪಾಲಾಗಲು ಬಿಡುವುದಿಲ್ಲ ,ಮುಂದೆ ದೇವರು ಇಟ್ಟಂತೆ ಆಗುತ್ತದೆ ಎಂದು ಹೇಳುತ್ತಾ ಇದ್ದರು.ಆದರೆ ಒಂದು ರಾತ್ರಿ ಇದ್ದಕ್ಕಿದ್ದಂತೆ ದೊಡ್ಡದಾಗಿ ನೋವಿನಿಂದ ನರಳಿದ ದೊಡ್ಡ ಮಗ ಅಲ್ಲಿಯೇ ಪ್ರಾಣ ಬಿಟ್ಟಿದ್ದ.ಅದೇ ಜೋಪಡಿಯ ಈ ಕಡೆ ಇದ್ದ ನಾವು ಅಲ್ಲಿಗೆ ಹೋಗಿ ನೋಡುವಷ್ಟರಲ್ಲಿ ಎದೆ ಬಡಿತ ,ಮತ್ತು ನಾಡಿ ಬಡಿತ ನಿಂತಿತ್ತು. ಆರಂಭದಲ್ಲಿ ಎದೆ ಬಡಿದು ಅತ್ತ ಅಕ್ಕಮ್ಮಜ್ಜಿ ನಂತರ ನಾನು ಇರುವಾಗಲೇ ಮಗ ಸತ್ತಿದ್ದು ಒಳ್ಳೆದಾಯಿತು.ಇಲ್ಲವಾದರೆ ನನ್ನ ನಂತರ ಊಟ ತಿಂಡಿ,ಸ್ನಾನ ಆಸರೆ ಇಲ್ಲದೆ ಹುಣ್ಣಾಗಿ ಸಾಯಬೇಕಿತ್ತು.ನನ್ನನ್ನು ಸಣ್ಣ ಮಗ ನೋಡಿಕೊಂಡಾನು ಎಂದು ಸಮಾಧಾನ ಮಾಡಿಕೊಂಡಿದ್ದರು.ನಂತರ ದೊಡ್ಡ ಮಗನ ಅಂತ್ಯ ಸಂಸ್ಕಾರಕ್ಕೆ ಬಂದ ಸಣ್ಣ ಮಗ ಎಕ್ಕಾರು ನಾಗವೇಣಿ ಅಮ್ಮನವರಿಗೆ " ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ " ಎಂದು ಮಾತು ಕೊಟ್ಟು ಮುಂಬಯಿಗೆ ಕರೆದುಕೊಂಡು ಹೋಗಿದ್ದ.ಮುಂದೇನಾತು ತಿಳಿಯದು.ಬಹುಶಃ ಮಗ ಚೆನ್ನಾಗಿ ನೋಡಿಕೊಂಡಿರಬಹುದು.ಕೆಲ ತಿಂಗಳ ಹಿಂದೆ ಹೊಸತಾಗಿ ಸಂಸಾರ ಹೂಡಿದ ಆತ್ಮೀಯರಾದ ಪರಶುರಾಮ ಯತ್ನಾಳ್( ಹೈ ಕೋರ್ಟ್ ನ್ಯಾಯವಾದಿ) ಮನೆಗೆ ಹೋಗಬೇಕೆಂದು ಕೊಂಡಾಗ ಅಕ್ಕಮ್ಮಜ್ಜಿ ಮತ್ತು ತೀರಾ ಕಡಿಮೆ ಬಾಡಿಗೆಗೆ ಮನೆ ಕೊಟ್ಟ ನಾಗವೇಣಿ ಅಮ್ಮನವರ ಸಹೃದಯತೆ ನೆನಪಾಗಿಇದನ್ನು ಬರೆದಿದ್ದೆ,ಈಗ ಆತ್ಮಕಥೆ ಗೆ ಜೋಡಿಸಿರುವೆ - ಡಾ.ಲಕ್ಷ್ಮೀ ಜಿ ಪ್ರಸಾದ, ಕನ್ನಡ ಉಪನ್ಯಾಸಕಿ, ಸರ್ಕಾರಿ ಪದವಿ ಪೂರ್ವ ಕಾಲೇಜು
No comments:
Post a Comment