Saturday, 28 July 2018

ನಮಗಾಗಿ ...ನಮ್ಮ ಮುಂದಿನ ಜನಾಂಗಕ್ಕಾಗಿ ಬೊಗಸೆ ನೀರು ಉಳಿಸೋಣ‌.ಬನ್ನಿ...ಡಾ. ಲಕ್ಷ್ಮೀ ಜಿ ಪ್ರಸಾದ


ನಮಗಾಗಿ ...ನಮ್ಮ ಮುಂದಿನ ಜನಾಂಗಕ್ಕಾಗಿ ಬೊಗಸೆ  ನೀರು ಉಳಿಸೋಣ‌.ಬನ್ನಿ...ಡಾ. ಲಕ್ಷ್ಮೀ ಜಿ ಪ್ರಸಾದ

.ಇದಕ್ಕಾಗಿ ಹೆಚ್ಚುವರಿ  ಖರ್ಚು ಆಗುವುದಿಲ್ಲ
ಬೋರ್ ವೆಲ್ ಗೆ ಮಳೆ ನೀರು ಇಂಗಿಸುವ ವ್ಯವಸ್ಥೆ ...

ಇಷ್ಟರ ತನಕ ಬೋರ್ ವೆಲ್ ಸುತ್ತ ಹತ್ತಡಿ ಮಣ್ಣು ತೆಗೆದು ಕಲ್ಲು ಜಲ್ಲಿ ಕಲ್ಲು, ಮರಳು ಇದ್ದಿಲು ತುಂಬಿ ಮಳೆ ನೀರನ್ನು ಹರಿಸಿ ನೀರು ಇಂಗಿಸುತ್ತಾ ಇದ್ದೆವು,ಈಗ ಮನೆ ವಿಸ್ತರಿಸುವುದರಿಂದ ಕಟ್ಟಡದ ಅಡಿ ಭಾಗದಲ್ಲಿ ಬೋರ್ ವೆಲ್ ಬರುವ ಕಾರಣ ಹಿಂದಿನಂತೆ ನೇರವಾಗಿ ನೀರನ್ನು ಇಂಗಿಸಲು ಆಗುವುದಿಲ್ಲ. ಅದಕ್ಕಾಗಿ ಮಳೆ ನೀರಿನ ಸಂಗ್ರಹಕ್ಕಾಗಿ ಏಳುಸಾವಿರ ಲೀಟರ್ ನ ಸಂಪನ್ನು ನಿರ್ಮಿಸಿ ಅದರ ಕೆಳಭಾಗದಲ್ಲಿ ಒಂದು ಇಂಚಿನ ಪೈಪ್ ಇರಿಸಿದ್ದೇವೆ‌.  ಇನ್ನೊಂದು ತುದಿಯನ್ನು ಬೋರ್ ವೆಲ್ ಕೇಸಿಂಗ್ ಪೈಪಿನಲ್ಲಿ ಒಂದಿಂಚಿನ ರಂಧ್ರ ಮಾಡಿ ಅದಕ್ಕೆ ಜೋಡಿಸಿದ್ದೇವೆ.ಮಳೆ ನೀರು ತೊಟ್ಟಿ/ ಸಂಪಿನಲ್ಲಿ ಸಂಗ್ರಹವಾಗಿ ಒಂದಿಂಚಿನ ಪೈಪಿನ ಮೂಲಕ ನಿದಾನವಾಗಿ ಬೋರ್ ವೆಲ್ ಒಳಗೆ ಹೋಗುತ್ತದೆ.ಮಳೆ ನೀರನ್ನು ಸಂಪಿಗೆ ಬಿಡುವ ಮೊದಲೇ ಪೈಪಿಗೆ ಫಿಲ್ಟರ್ ಜೋಡಿಸಿ ಶುದ್ದೀಕರಿಸಿ ಬಿಡುವ ವ್ಯವಸ್ಥೆ ಮಾಡಬೇಕಾಗುತ್ತದೆ.1000-1200 ಅಡಿಯ ಚಾವಣಿಯಲ್ಲಿ ಬೀಳುವ ಮಳೆ ನೀರನ್ನು ಶುದ್ದೀಕರಿಸಲು  ಮೂರು ಇಂಚಿನ ಫಿಲ್ಟರ್ ಸಾಕಾಗುತ್ತದೆ ,ಇದರ ಬೆಲೆ ಸುಮಾರು ನಾಲ್ಕು ನಾಲ್ಕೂವರೆ ಸಾವಿರ ₹ .ಸಂಪು ಹೇಗಾದರೂ ಮಾಡಬೇಕಾಗುತ್ತದೆ. ಒಂದೊಮ್ಮೆ ಕಾವೇರಿ ನೀರನ್ನು ಕೂಡ ಬಳಸುವುದಾದರೆ ಹನ್ನೆರಡು ಹದಿನೈದು ಸಾವಿರ ಲೀಟರ್ ನ ಸಂಪನ್ನು ಮಾಡಿ ನಡುವೆ ಒಂದು ಗೋಡೆ ಹಾಕಿ ಎರಡು ಭಾಗ ಮಾಡಿ ಒಂದರಲ್ಲಿ ಕಾವೇರಿ ನೀರು,ಇನ್ನೊಂದರಲ್ಲಿ ಮಳೆ ನೀರು ಸಂಗ್ರಹ ಮಾಡಬಹುದು, ಹೆಚ್ಚಾದ ಮಳೆ ನೀರನ್ನು ಮೇಲೆ ಹೇಳಿದ ರೀತಿಯಲ್ಲಿ ಬೋರ್ ವೆಲ್ ಗೆ ತುಂಬಬಹುದು.

ಆರಂಭದಿಂದಲೂ ಬೋರ್ ವೆಲ್ ಗೆ ನೀರು ಇಂಗಿಸಿರುವ ಕಾರಣವೋ ಏನೋ ಸುತ್ತ‌ಮುತ್ತ ಎಂಟುನೂರು ಅಡಿ ತೋಡಿದರೂ ನೀರು ಸಿಗದೇ ಇದ್ದರೂ ನಮ್ಮ ಬೋರ್ ವೆಲ್ ನಲ್ಲಿ ನೂರಿಪ್ಪತ್ತು ಅಡಿಯಲ್ಲಿ ನೀರಿದೆ
ನಮ್ಮ ಮನೆ ಬೋರ್ ವೆಲ್ ಗೆ ಮಳೆ ನೀರು ಇಂಗಿಸುವಲ್ಲಿ ಮಾಹಿತಿ ನೀಡಿ ಸಹಕರಿಸಿದ Subrahmanya Shagrithaya Shivaprasad Shagrithaya     Nataraj C Nagadala, Shivaprasad Bhat   Lakkanna TR sridevi vishwanath ಶ್ರೀನಿವಾಸ್ ,ಡೇವಿಡ್ ಕೊಕ್ಕಡ,ರಾಮ್ ಪ್ರತೀಕ್ ಪುತ್ತೂರು, ಶ್ರೀಪಡ್ರೆ ಯವರಿಗೆ  ಹಾಗೂ ಇದನ್ನು ಸಮರ್ಪಕವಾಗಿ ಅಳವಡಿಸಿಕೊಟ್ಟ ನಮ್ಮ ಮನೆ ನಿರ್ಮಾಣದ  ಕಾಂಟ್ರಾಕ್ಟರ್ ಕಮ್ ಮೇಸ್ತ್ರಿ Likitha  constructions ನ  ವೇಣುಗೋಪಾಲ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು
ಹೆಚ್ಚಿನ ಮಾಹಿತಿಗಾಗಿ http://shikshanaloka.blogspot.com/2016/05/c.html?m=1
ಮಂತ್ರಕ್ಕೆ ಮಾವಿನಕಾಯಿ ಉದುರುವುದಿಲ್ಲ !ಹಾಗೆಯೇ ಅಂತರ್ಜಲ ಸುಮ್ಮನೆ ತುಂಬುವುದಿಲ್ಲ (c)ಡಾ.ಲಕ್ಷ್ಮೀ ಜಿ ಪ್ರಸಾದ

ಮಂತ್ರಕ್ಕೆ ಮಾವಿನಕಾಯಿ ಉದುರುವುದಿಲ್ಲ !ಹಾಗೆಯೇ ಅಂತರ್ಜಲ ಸುಮ್ಮನೆ ತುಂಬುವುದಿಲ್ಲ
8 ವರ್ಷಗಳ ಹಿಂದೆ ನಾವು ನಮ್ಮ ಬೆಂಗಳೂರಿನ ಮನೆಯ ಬೋರ್ ವೆಲ್ ಗೆ ಛಾವಣಿ ನೀರು ಇಂಗಿಸುವ ವ್ಯವಸ್ಥೆ ಮಾಡಿದೆವು ...
2003 ರಲ್ಲಿ ನಾವು ಈ ಬೋರ್ ವೆಲ್ ಕೊರೆದಾಗ ಸುಮಾರು 60 -70 ಅಡಿಗಳಲ್ಲಿಯೇ ನೀರು ಸಿಕ್ಕಿತು ,ಎಂತಕ್ಕೂ ಇರಲಿ ಅಂತ 120 ಅಡಿ ಆಳ ತೋಡಿದೆವು ಅದಕ್ಕಿಂತ ಹೆಚ್ಚ್ಚು ತೋಡಲು ಸಾಧ್ಯವಾಗಲಿಲ್ಲ .ಆಗ ನಾವಿನ್ನೂ ಬೆಂಗಳೂರಿಗೆ ವಲಸೆ ಬಂದಿರಲಿಲ್ಲ ..ನಾನು ಮಂಗಳೂರು ಸಂತ ಅಲೋಶಿಯಸ್ ಕಾಲೇಜ್ ನಲಿ ಸಂಸ್ಕೃತ ಉಪನ್ಯಾಸಕಿಯಾಗಿ ಕೆಲಸ ಮಾಡುತಿದ್ದೆ ... ನಾನು ಶ್ರೀ ಪಡ್ರೆ ಹಾಗೂ ಇತರರ ಸಂಗ್ರಹಿಸುವ ನೀರು ಇಂಗಿಸುವ ನಾನಾ ವಿಧಾನಗಳ ಬಗೆಗಿನ ಲೇಖನಗಳನ್ನು ಓದುತ್ತ ಇದ್ದೆ ಹಾಗೆ ಬೆಂಗಳೂರು ಸುತ್ತ ಮುತ್ತ ನೀರಿನ ಸಮಸ್ಯೆಯನ್ನು ಓದುತ್ತಾ ಇದ್ದೆ ,ಅಗಲೆ ಅಂದುಕೊಂಡಿದ್ದೆ ನಮ್ಮ ಬಾವಿಗೆ ನೀರು ಇಂಗಿಸುವ ವ್ಯವಸ್ಥೆ ಮಾಡಬೇಕು ಎಂದು ಇಲ್ಲವಾದಲ್ಲಿ ನೀರು ಆರಿ ಹೋಗಬಹುದು ಎಂದು ಎನಿಸಿತ್ತು ನನಗೆ
2008 ರಲ್ಲಿ ನಾವು ನಮ್ಮ ಈ ಪುಟ್ಟ ಮನೆಗೆ ಒಕ್ಕಲಾದೆವು ,ಆಗ ಮೊದಲು ನಾವು ಮಾಡಿದ ಕೆಲಸ ನಮ್ಮ ಕೊಳವೆ ಬಾವಿಗೆ ನೀರು ಇಂಗಿಸುವ ವ್ಯವಸ್ಥೆ ಯನ್ನು ಮಾಡಿದ್ದು
ಹೇಗೆ ಇನ್ಗಿಸುವುದು ಬೆಂಗಳೂರಿನ ಕೊಳಚೆ ನೀರು ಕೂಡ ಇಂಗಿದರೆ ಎಂಬ ಭಯ ಕಾಡಿತ್ತು
ಈ ಬಗ್ಗೆ ಶ್ರೀ ಪದ್ರೆಯವರನ್ನು ಸಂಪರ್ಕಿಸಿ ನಮ್ಮ ಬಾವಿಗೆ ನೀರು ಇಂಗಿಸುವ ಬಗ್ಗೆ ಸಲಹೆ ಕೇಳಿದೆ ಅವರು ಗ್ರೀನ್ ಅರ್ಥ್ ಫೌಂಡೇಶನ್ ರವಿ ಅವರ ಸಲಹೆ ಪಡೆಯಲು ತಿಳಿಸಿದರು 

ಫೋನ್ ಮೂಲಕ ಅವರನ್ನು ಈ ಬಗ್ಗೆ ಸಲಹೆ ಕೇಳಿದೆ.ಅವರ ಸಲಹೆಯಂತೆ ಬೋರೆವೇಲ್ ಸುತ್ತ ಆರಡಿ ಅಗಲ ಹತ್ತು ಅಡಿ ಆಳ ಗುಂಡಿ ತೋಡಿಸಿದೆವು,ನಂತರ ಆಳದಲ್ಲಿ ಒಂದು ಅಡಿ ಮರಳು ತುಂಬಿದೆವು ನಂತರ ಎರಡು ಅಡಿ ಜಲ್ಲಿ ಕಲ್ಲು ತುಂಬಿದೆವು ನಂತರ ಎರಡು ಅಡಿ ದೊಡ್ಡ ಬೋರ್ಡೊ ಕಲ್ಲುಗಳನ್ನು ತುಂಬಿಸಿದೆವು ನಂತರ ಒಂದು ಅಡಿ ಮರಳು ತುಂಬಿದೆವು ನಂತರ ಮತ್ತೆ ಒಂದಡಿ ಜಲ್ಲಿ ಕಲ್ಲು ಅದರ ಮೇಲೆ ಒಂದಷ್ಟು ಇದ್ದಿಲು ತುಂಬಿ ಮೇಲ್ಭಾಗ ಮತ್ತೆ ಒಂದಷ್ಟು ಮರಳು ತುಂಬಿ ಒಂದಡಿಯಷ್ಟು ಆಳ ನೀರು ತುಂಬಲು ಬಿಟ್ಟು ಬಿಟ್ಟೆವು .ಅಲ್ಲಿಗೆ ತಾರಸಿ ನೀರು ಬರುವ ಹಾಗೆ ಮಾಡಿದೆವು 
ಮತ್ತು ಛಾವಣಿ ನೀರು ಜೊತೆಗೆಅಂಗಳದ ನೀರು ಕೂಡ ಇಂಗಲಿ ಎಂಬ ಉದ್ದೇಶದಿಂದ ಅಂಗಳವನ್ನು ಸಮತಟ್ಟು ಮಾಡದೆ ಎಲ್ಲ ಕಡೆಯಿಂದ ಬಾವಿಯೆಡೆಗೆ ನೀರು ಬರುವಂತೆ ಚಾರೆಯಾಗಿ ಮಾಡಿ ಹಾಗೆ ಬಿಟ್ಟು ಬಿಟ್ಟೆವು ,ಜೊತೆಗೆ ಒಂದಷ್ಟು ಪಾರಿಜಾತ ಮೀಸೆ ಹೂ /ರತ್ನ ಗ್ರಂಥಿ ಸೇರಿದಂತೆ ಕೆಲವು ಸಸಿಗಳನ್ನು ಹಾಕಿದೆವು .ಅದರಲ್ಲಿ ಒಂದು ಪೇರಳೆ ಹಣ್ಣಿನ ಗಿಡವೂ ಇದೆ ಈಗ ಇವೆಲ್ಲ ಎತ್ತರಕ್ಕೆ ಬೆಳೆದು ನಿಂತು ಮನೆಗೆ ನೆರಳನ್ನೂ ತಂಪನ್ನೂ ತಂದು ಕೊಟ್ಟಿವೆ ಹಕ್ಕಿಗಳು ಚಿಟ್ಟೆಗಳು ಸ್ವಚ್ಚಂದವಾಗಿ ಬಂದು ಅಲ್ಲಿನ ಮೀಸೆ ಹೂವಿನ ಕಾಯಿಗಳನ್ನು ಒಡೆದು ತಿನ್ನುತ್ತವೆ ಪೇರಳೆ ಹಣ್ಣನ್ನೂ ಬಿಡುವುದಿಲ್ಲ ಅವು ತಿಂದು ಬಿಟ್ಟ ಕೆಲವು ಹಣ್ಣುಗಳು ನಮಗೂ ದಕ್ಕುವುದಿದೆ .ಜೊತೆಗೆ ಒಂದಷ್ಟು ಕಸ ಕಡ್ಡಿ ಬಿದ್ದು ಉಪದ್ರ ಕೂಡ ಆಗುತ್ತದೆ ,ಹಳ್ಳಿಯಲ್ಲಿ ಬೆಳೆದ ನನಗೆ ತೀರ ಸಿನೆಮಾ ಸೆಟ್ ಮಾದರಿಯ ಮನೆ ಬೇಕೆಂಬ ಭ್ರಮೆ ನನಗಿಲ್ಲ ಹಕ್ಕಿಗಳ ಕಲರವದೊಂದಿಗೆ ಬದುಕುವುದೇ ಅಪ್ಯಾಯಮಾನವಾಗುತ್ತದೆ ,ಆದರೂ ಬಂದ ಹೋದ ಜನರೆಲ್ಲಾ ಇದನ್ನು ಆಕ್ಷೇಪಿಸಿ ಒಂದು ಐನೂರು ರುಪಾಯಿ ಕೊಟ್ಟು ಇದನ್ನೆಲ್ಲಾ ಕಡಿಸಿ ಸ್ವಚ್ಚ ಮಾಡಬಾರದೇ?ಇದರಲ್ಲಿ ಹಾವು ಇರಬಹುದು ಎಂದು ಸಲಹೆ ಕೊಟ್ಟದ್ದೂ ಉಂಟು ..ಆಗೆಲ್ಲ ನಾನು ಹೇಳುತ್ತೇನೆ" ಹಾವು ಇದ್ದರೆ ಇರಲಿ ಬಿಡಿ ಈ ಪೇಟೆಯ ಕಾಂನ್ಕ್ರೀಟ್ ಕಾಡಿನಲ್ಲಿ ಅವಕ್ಕೆ ಬದುಕಲು ಜಾಗವಿಲ್ಲ.ಎಂದು" ಬಾಯಿಯಲ್ಲಿ ಹಾಗೆ ಹೇಳಿದರೂ ಮನದೊಳಗೆ ತುಸು ಆತಂಕವಾಗುವುದುಂಟು ,ನಮ್ಮ ಮನೆ ಸುತ್ತ ಮುತ್ತಲಿನ ಮಂದಿ ನಿಮ್ಮ ತೋಟದಲ್ಲಿ (ತೋಟ ಎನ್ನುವಷ್ಟು ಜಾಗವಿಲ್ಲ ಕೇವಲ 500 ಅಡಿ ಜಾಗವಿದೆ ಅಷ್ಟೇ )ಹಾವುಗಳು ಹರಿದಾಡುತ್ತಿವೆ ನಾವು ಕಣ್ಣಾರೆ ನೋಡಿದ್ದೇವೆ ಆ ಗಿಡಮರಗಳನ್ನು ಕಡಿಸಿ ಬಿಡಿ ಎಂದು ಆಗಾಗ ಹೇಳುತ್ತಿರುತಾರೆ .ಆದರೆ ನಾವು ಮನೆ ಮಂದಿ ಒಮ್ಮೆ ಕೂಡ ಇಲ್ಲಿ ಹಾವು ಹರಿದಾಡಿದ್ದನ್ನು ನೋಡಿಲ್ಲ ಆಗಾಗ ಹುಲ್ಲು ಕೀಳಿಸಿ ಸ್ವಚ್ಛ ಮಾಡುವಾಗ ಎಲ್ಲೂ ಹಾವಿನ ಮೊಟ್ಟೆಗಳು ನಮಗೆ ಕಾಣಸಿಕ್ಕಿಲ್ಲ ಆಗ ನಾನು ನಮ್ಮ ಹಳ್ಳಿಯ ತೋಟವನ್ನು ಕಾಲು ದಾರಿಯನ್ನು ನೆನಪಿಸಿಕೊಳ್ಳುತ್ತೇನೆ "ಅಲ್ಲೆಲ್ಲ ಹಸಿರು ಕಸಕಡ್ಡಿ ಇರುತ್ತದೆ ಅಲ್ಲಿ ಹಾವು ಇರುವುದಿಲ್ಲವೇ ?ಎಂದು"
ಇಂದಿನ ಆಕ್ಸಿಡೆಂಟ್ ಹೃದಯಾಘಾತ ಸಾವುಗಳನ್ನು ಗಮನಿಸಿದರೆ ಹಾವು ಕಡಿದು ಸಾಯುವ ಮಂದಿ ತೀರ ಕಡಿಮೆ ಅಲ್ಲವೇ ಎಂದು!
ಅದು ಏನೇ ಇರಲಿ ನಮ್ಮ ಮನೆಯ ಆಸುಪಾಸಿನಲ್ಲಿ ಉಲ್ಲಾಳು ಉಪನಗರ, ಜ್ಞಾನ ಭಾರತಿ ,ನಾಗರಭಾವಿ ಸೇರಿದಂತೆ ಸುತ್ತ ಮುತ್ತ ಅಂತರ್ಜಲ ಮಟ್ಟ ತೀರಾ ಕುಸಿದಿದೆ ಒಂದು ಸಾವಿರ ಅಡಿ ತೋಡಿದರೂ ನೀರು ಸಿಗುತ್ತಿಲ ಸಿಗುವ ನೀರಿನಲ್ಲಿ ಕೂಡ ಫ್ಲೋರೈಡ್ ಮೊದಲಾದ ರಾಸಾಯನಿಕಗಳ ಅಂಶ ತುಂಬಾ ಜಾಸ್ತಿ ಇದೆ
ಆದರೆ ನಮ್ಮ ಬಾವಿಯಲ್ಲಿ ಇಂದಿಗೂ 120 ಅಡಿ ಆಳದಲ್ಲಿಯೇ ನೀರಿದೆ ,ಇಲ್ಲಿ ಅಕ್ಕ ಪಕ್ಕ ಅನೇಕರು ಬೋರ್ ವೆಲ್ ಕೊರೆದಿದ್ದಾರೆ 800 -1000 ಅಡಿ ತೋಡಿದ್ದಾರೆ ಕೆಲವರಿಗೆ ಅಷ್ಟಾದರೂ ನೀರು ಸಿಕ್ಕಿಲ್ಲ ಆಗೆಲ್ಲ ನನಗೆ ನಮ್ಮ ಬಾವಿಯ ನೀರು ಬೇರೆ ಬಾವಿಗೆ ಹೋಗಬಹುದೇನೋ ಎಂಬ ಆತಂಕ ಕಾಡುತ್ತದೆ ಆದರೆ ಇಂಗಿಸಿದ ನೀರು ಸಾಮಾನ್ಯವಾಗಿ ಬೇರೆ ಬಾವಿಗೆ ಹೋಗುವುದಿಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ .
ನಮ್ಮ ಮನೆ ಮುಖ್ಯ ರಸ್ತೆಯ ಬದಿಯಲ್ಲಿದೆ .ಕೆಲ ವರ್ಷಗಳಲ್ಲಿ ಇಲ್ಲಿ ವಾಣಿಜ್ಯ ಕಟ್ಟಡ ಹಾಕಿ ನಾವು ಬೇರೆಡೆ ಮನೆ ಮಾಡುವುದು ಅನಿವಾರ್ಯವಾಗಬಹುದು ಏಕೆಂದರೆ ಈಗಾಗಲೇ ರಸ್ತೆಯಲ್ಲಿ ಹೋಗುವ ವಾಹನಗಳ ಸದ್ದು ಅಕ್ಕ ಪಕ್ಕದ ಸಾ ಮಿಲ್ ,ಮೆಕ್ಯಾನಿಕ್ ಶಾಪ್ ಗಳಿಂದ ಹೊರಡುವ ಧೂಳು ಸದ್ದು ನಮ್ಮನ್ನು ಕಂಗೆಡಿಸುತ್ತವೆ.ಸುತ್ತ ಮುತ್ತ ದೊಡ್ಡ ದೊಡ್ಡ ವಾಣಿಜ್ಯ ಕಟ್ಟಡಗಳು ತಲೆ ಎತ್ತುತ್ತಿವೆ
ಮುಂದೊಂದು ದಿನ ನಾವು ಇಲ್ಲಿ ವಾಣಿಜ್ಯ ಕಟ್ಟಡ ಹಾಕಬೇಕಾಗಿ ಬಂದರೆ ಬೋರ್ ವೆಲ್ ಗೆ ನೀರು ಇಂಗಿಸಲು ಸಾಧ್ಯವೇ ?ಗೊತ್ತಿಲ್ಲ ಈ ಬಗ್ಗೆ ಆಗ ತಜ್ಞರ ಸಲಹೆ ಕೇಳಿದರಾಯಿತು ಎಂದು ಕೊಂಡಿದ್ದೇನೆ ಅಷ್ಟರ ತನಕ ಹೀಗೆ ಬಾವಿಗೆ ನೀರು ತುಂಬುತ್ತಾ ಇರಲಿ ಎಂದು..
ಒಂದು ಮಾತು ಮಾತ್ರ ಸತ್ಯವಾದುದು
ಮಂತ್ರಕ್ಕೆ ಮಾವಿನಕಾಯಿ ಉದಿರುವುದಿಲ್ಲ ಎಂಬುದು .ಮಾವಿನ ಕಾಯಿ ಬೀಳಬೇಕಾದರೆ ಕಲ್ಲು ಎಸೆಯಬೇಕು, ಒಂದು ಎಸೆತಕ್ಕೆ ಬೀಳುತ್ತದೆ ಎಂದೇನಿಲ್ಲ ಬೀಳುವ ತನಕ ಎಸೆಯುತ್ತಾ ಇರಬೇಕು ,ಅಂತರ್ಜಲ ಕುಸಿತ ನೀರಿನ ಬರದ ಬಗ್ಗೆ ಆತಂಕದ ಕಾಳಜಿಯ ಮಾತುಗಳನ್ನು ಆಡಿದರೆ ಸಾಲದು ಅದನ್ನು ಕಾರ್ಯ ರೂಪಕ್ಕೆ ತರಬೇಕು .ಸಾವಿರ ಮಾತಿಗಿಂತ ಒಂದು ಕೃತಿ ಮೇಲೆ ಎಂಬುದು ನನ್ನ ಸ್ಪಷ್ಟ ನಿಲುವು ಇದಕ್ಕೆ ನೀವೇನಂತೀರಿ ?
ಅಂದ ಹಾಗೆ ನಮ್ಮಬಾವಿಗೆ ಚಾವಣಿ ನೀರು ಇಂಗಿಸಲು ನಮಗೆ ಆದ ಖರ್ಚು ನಾಲ್ಕು ಐದು ಸಾವಿರ ರೂಪಾಯಿಗಳು ಅಷ್ಟೇ ,ಇದನ್ನು ನಮಗೆ ನಾವು ಹೇಳಿದಂತೆ ಮಣ್ಣು ಅಗೆದು ಮರಳು ಕಲ್ಲು ತುಂಬಿ ನೀರು ಇಂಗಿಸುವ ಕೆಲಸವನ್ನುಒಂದು ಆದಿತ್ಯವಾರ ಬಂದು ,ಕೇವಲ ಕೂಲಿಗಾಗಿ ಮಾಡದೆ ,ಅತ್ಯಂತ ಶ್ರದ್ಧೆಯಿಂದ , ಅತ್ಯುತ್ಸಾಹದಿಂದ ಮಾಡಿಕೊಟ್ಟು ನಾವು ಮೊದಲ ಬಾರಿಗೆ ನೀರು ಉಳಿಸುವ ಕೆಲಸವನ್ನು ಮಾಡಿದ್ದೇವೆ ಅಕ್ಕ ಎಂದು ಸಂಭ್ರಮಿಸಿದ ರವಿ ಮತ್ತು ಸುಜಾತ (ಹೆಸರು ಸರಿಯಾಗಿ ನೆನಪಿಲ್ಲ )ದಂಪತಿಗಳಿಗೆ ನಾವು ಆಭಾರಿಯಾಗಿದ್ದೇವೆ .

ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಸಂಪರ್ಕಿಸಿ 9480516684 ಡಾ.ಲಕ್ಷ್ಮೀ ಜಿ ಪ್ರಸಾದ, ಕನ್ನಡ ಉಪನ್ಯಾಸಕರು,ಸರ್ಕಾರಿ ಪದವಿ ಪೂರ್ವ ಕಾಲೇಜು, ಬೆಂಗಳೂರು.

Saturday, 21 July 2018

ದೊಡ್ಡವರ ದಾರಿ 60 ಎಳೆಯರಿಗೆ ಸ್ಫೂರ್ತಿಯಾಗಿರುವ ಸ್ಪೂರ್ತಿ ಎಸ್ ಸಮರ್ಥ್© ಡಾ‌.ಲಕ್ಷ್ಮೀ ಜಿ ಪ್ರಸಾದ

 ದೊಡ್ಡವರ ದಾರಿಯಲ್ಲಿ ಸಾಗುವವರೆಲ್ಲ ವಯಸ್ಸಿನಲ್ಲಿ ದೊಡ್ಡವರಾಗಿರಬೇಕಾಗಿಲ್ಲ.ದೊಡ್ಡತನವನ್ನು ಮೆರೆಯುವವರೆಲ್ಲ ದೊಡ್ಡವರೇ .  ನೆಲಮಂಗಲ ಸರ್ಕಾರಿ ಪಿಯು ಕಾಲೇಜಿಗೆ ವರ್ಗಾವಣೆಯಾಗಿ ಬಂದು ಮೂರು ವರ್ಷಗಳು ಆಗುತ್ತಾ ಬಂತು.ನಮ್ಮ ವೇತನ ಇಲ್ಲಿನ UCO Bank ನಲ್ಲಿ ಆಗುತ್ತಿರುವ ಕಾರಣ ನೆಲಮಂಗಲಕ್ಕೆ  ಬಂದ ಒಂದೆರಡು ವಾರದ ಒಳಗೆ ಬ್ಯಾಂಕ್ ಗೆ ಹೋಗಿ ಎಸ್ ಬಿ ಅಕೌಂಟ್ ಮಾಡಿಕೊಂಡು ಬಂದಿದ್ದೆ.ಅದು ಬಿಟ್ಟರೆ ಬ್ಯಾಂಕ್ ಗೆ ಹೋಗಿದ್ದು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಬಾರಿ!
ಈಗೆಲ್ಲಾ ಎಟಿಎಂ ಹಾಗೂ ಅಂತರ್ಜಾಲದ ಮೂಲಕ ಬ್ಯಾಂಕ್ ವ್ಯವಹಾರ ಮಾಡಲಾಗುವ ಕಾರಣ ಬ್ಯಾಂಕ್ ಗೆ ಹೋಗಬೇಕಾದ ಪ್ರಸಂಗ ಬಂದಿರಲಿಲ್ಲ.
ಇತ್ತೀಚೆಗೆ ಮನೆ ವಿಸ್ತರಿಸುವ ಸಲುವಾಗಿ ದುಡ್ಡು ಹೊಂದಿಸುವುದು ಅನಿವಾರ್ಯವಾಗಿತ್ತು. ಹಾಗಾಗಿ ನಮಗೆ ಯಾವೆಲ್ಲಾ ರೀತಿಯ ಸಾಲ ಸಿಗುತ್ತವೆ? ಅದಕ್ಕೆ ಬಡ್ಡಿ ದರ ಎಷ್ಟು  ಇತ್ಯಾದಿಗಳ ಬಗ್ಗೆ ತಿಳಿಯಲು ಯುಕೋ ಬ್ಯಾಂಕ್ ಗೆ ಹೋಗಿ ಅಲ್ಲಿನ ಮ್ಯಾನೇಜರ್ ಅನ್ನು ಕಂಡು ಮಾಹಿತಿ ಪಡೆದಿದ್ದೆ‌.ಎಲ್ಲ ಮಾಹಿತಿ ಪಡೆದು ಹಿಂತಿರುಗುವಷ್ಟರಲ್ಲಿ ಒಬ್ಬರು ಚಿನ್ನದ ಮೇಲೆ ಸಾಲ ಪಡೆಯಲು ಬಂದರು.ಆಗ ನಾನು ಚಿನ್ನದ ಮೇಲಿನ ಸಾಲಕ್ಕೆ ಬಡ್ಡಿ ದರವೆಷ್ಟು ಎಂದು ವಿಚಾರಿಸಿದಾಗ ವಾರ್ಷಿಕ ಏಳು ಶೇಕಡಾ ಎಂದೂ,ಒಂದು ವರ್ಷದೊಳಗೆ ಕಟ್ಟದೆ ಇದ್ದರೆ 1.65 ಶೇಕಡ ಹೆಚ್ಚು ಬಡ್ಡಿ ದರವೆಂದು ತಿಳಿಯಿತು. ( ಕೃಷಿಗಾಗಿ ಚಿನ್ನದ ಮೇಲೆ ಸಾಲ ತೆಗೆದರೆ ಮೂರು ಶೇಕಡಾ ಸಬ್ಸಿಡಿ ಇರುತ್ತದೆ.)ನಮಗಿನ್ನೂ ಮನೆ ಕಟ್ಟುವ ಸಾಲ ಸಿಕ್ಕಿಲ್ಲ.ಆದರೂ ಮನೆ ಕಟ್ಟಲು ಶುರು ಮಾಡಿದ್ದು, ದುಡ್ಡಿನ ಹೊಂದಿಸುವ ಸಲುವಾಗಿ
ಎರಡು ದಿನಗಳ ಹಿಂದೆ ಸ್ವಲ್ಪ ಚಿನ್ನ ತೆಗೆದುಕೊಂಡು ಯುಕೋ  ಬ್ಯಾಂಕ್ ಗೆ ಹೋದೆ.ಬಹಳ ಸೌಜನ್ಯತೆಯಿಂದ ವರ್ತಿಸಿದ ಸಿಬ್ಬಂದಿ ನನ್ನ ಚಿನ್ನವನ್ನು ತೆಗೆದುಕೊಂಡು ತೂಗಿ  ತೀರಾ ಕಡಿಮೆ ಅವಧಿಯಲ್ಲಿ ಯಾವುದೇ ಕಿರಿ ಕಿರಿ ಮಾಡದೆ  ಸಾಲ ನೀಡಿದರು.ನಾನದನ್ನು ನನ್ನ ಖಾತೆಗೆ ಜಮೆ ಮಾಡಲು ತಿಳಿಸಿದೆ‌.ನಂತರ ನಾನು ಇಲ್ಲಿ ಚಿನ್ನವನ್ನು ಇಟ್ಟದ್ದಕ್ಕೆ ದಾಖಲೆ ಕೊಡಿ ಎಂದು ಕೇಳಿದೆ.ಆಗ ಗೋಲ್ಡ್ ಕಾರ್ಡ್ ನೀಡುತ್ತೇವೆ.ಒಂದೆರಡು ಗಂಟೆ ಕಾಯಬೇಕಾಗುತ್ತದೆ‌ ಅಥವಾ ನಾಳೆ ಬನ್ನಿ ,ನಾಳೆ ಕೊಡುತ್ತೇವೆ ಎಂದು ಹೇಳಿದರು.ತರಗತಿ ನಡುವೆ ಬಿಡುವು ಇದ್ದ ಸಮಯವನ್ನು ಹೊಂದಾಣಿಕೆ ಮಾಡಿಕೊಂಡು ನಾನು ಬ್ಯಾಂಕ್ ಗೆ ಹೋಗಿದ್ದು,ನನಗೆ ಒಂದೆರಡು ಗಂಟೆ ಕಾಯಲು ಸಾಧ್ಯವಿರಲಿಲ್ಲ. ಹಾಗಾಗಿ ಒಂದಿನಿತು ಅಳುಕಿನಿಂದಲೇ ಹಿಂತಿರುಗಿದೆ.
ಮರುದಿನ ಬೆಳಗ್ಗೆ ಮತ್ತೆ ಬ್ಯಾಂಕ್ ಗೆ ಹೋಗಿ ಚಿನ್ನವನ್ನು ಇಟ್ಟಿರುವುದಕ್ಕೆ ದಾಖಲೆ ಕೇಳಿದೆ‌.ಆಗ ಅಲ್ಲಿನ ಹಿರಿಯ ಸಿಬ್ಬಂದಿ ಒಂದು ಕಾರ್ಡ್ ನೀಡಿದರು.ಅದರಲ್ಲಿ ನನ್ನ ಅಕೌಂಟ್ ನಂಬರ್ ‌ಮತ್ತು ಹೆಸರು ಇತ್ತು.ಸಾಲದ ಪ್ರಮಾಣ ನಮೂದಿಸಿತ್ತು.ಅದರ ಕೆಳಗೆ ಯಾವುದೇ ಸಹಿ, ಮೊಹರು ಇರಲಿಲ್ಲ. ಆಗ ನಾನು ಸಹಿ,ಮೊಹರು ಇರುವ ಸರಿಯಾದ ದಾಖಲೆ ಬೇಕೆಂದು ಕೇಳಿದೆ‌.ಅವರು ಯಾವುದೋ ಪುಸ್ತಕ ತೋರಿಸಿ ಅದರಲ್ಲಿ ನನ್ನ ಅಕೌಂಟ್ ನಂಬರ್ ಹೆಸರು ಮತ್ತು ಸಾಲದ ಪ್ರಮಾಣ ಬರೆದಿರುವುದನ್ನು ತೋರಿಸಿದರು‌.ಮತ್ತು ಹದಿನೈದು ಇಪ್ಪತ್ತು ಲಕ್ಷದಷ್ಟು ಸಾಲವನ್ನು ಚಿನ್ನ ಇಟ್ಟು ಬೇರೆಯವರು ಪಡೆದಿರುವುದನ್ನು ತೋರಿಸಿದರು.ಇದು ನಿಮ್ಮಲ್ಲಿ ಇರುವ ದಾಖಲೆ,ನನಗೆ ನಿಮ್ಮಲ್ಲಿ ಚಿನ್ನ ಇಟ್ಟಿರುವುದಕ್ಕೆ ದಾಖಲೆ ಬೇಕು ಎಂದು ಕೇಳಿದೆ.ಆಗ ಅವರು ಮೊದಲು ನೀಡಿದ ಕಾರ್ಡ್ ಗೆ ಮೊಹರು ಹಾಕಿ ನೀಡಿದರು ‌.ಈ ಕಾರ್ಡಿನ ಹಿಂಭಾಗದಲ್ಲಿ ನಾನು ಇಟ್ಟ ಚಿನ್ನದ ಭಾರವನ್ನು ಗ್ರಾಮ್ ಗಳಲ್ಲಿ ಬರೆದು gross weight ಮತ್ತು net weight ಗಳನ್ನು ಬರೆದಿದ್ದರು.ಇದಕ್ಕೆ ಸಹಿ ಮಿಹರು ಯಾವುದೂ ಇರಲಿಲ್ಲ ‌.ಹಾಗಾಗಿ ಅದಾಗದು,ನನಗೆ ಸರಿಯಾದ ದಾಖಲೆ ಬೇಕೆಂದು ಕೇಳಿದೆ.ಆಗ ಅವರು ರಾಷ್ಟ್ರೀಕೃತ ಬ್ಯಾಂಕ್ ಮೇಡಂ, ನಂಬಿಕೆ ಇದ್ದರೆ ಸಾಲ ತೆಗೆದುಕೊಳ್ಳಿ ಇಲ್ಲವಾದರೆ ಬೇರೆಡೆ ಚಿನ್ನ ಇಟ್ಟು ಸಾಲ ತೆಗೆದುಕೊಳ್ಳಿ ಎಂದು ಹೇಳಿದರು ‌.ಅವರಿಗೆ ಕನ್ನಡ ಬರುತ್ತಿರಲಿಲ್ಲ. ಹಾಗಾಗಿ ನಾನೇನು ಕೇಳುತ್ತಿರುವೆ,ನನ್ನ ಆಶಯವೇನು ಎಂದು ಅರ್ಥವಾಗಿಲ್ಲ ಎಂದು ತಿಳಿಯಿತು ‌.
ಹಾಗಾಗಿ ಅವರಲ್ಲಿ ಚರ್ಚಿಸದೆ ನೇರವಾಗಿ ಬ್ಯಾಂಕ್ ಮ್ಯಾನೇಜರ್ ಸ್ಫೂರ್ತಿ ಯವರನ್ನು ಭೇಟಿ ಮಾಡಿದೆ.ತುಂಬಾ ಚಿಕ್ಕ ವಯಸಿನ ಮಹಿಳಾ ಮ್ಯಾನೇಜರ್ ಹೇಗಿರುತ್ತಾರೋ ? ನಾನು ಹೇಳುವುದನ್ನು ಕೇಳಿಸಿಕೊಂಡು ನಾನು ಇಟ್ಟ ಚಿನ್ನಕ್ಕೆ ಸರಿಯಾದ ದಾಖಲೆ ನೀಡುತ್ತಾರೋ ಇಲ್ಲವೋ ? ತಮ್ಮ  ಬ್ಯಾಂಕ್ ನ ಹಿರಿಯ  ಸಿಬ್ಬಂದಿಯನ್ನು ಸಮರ್ಥಿಸಿಕೊಳ್ಳುವರೋ ಏನೋ ಎಂದು ತುಸು ಆತಂಕ ಇತ್ತು ಕೂಡ. ಆದರೆ ಚಿಕ್ಕ ವಯಸ್ಸೇ ಆಗಿದ್ದರೂ ಕೂಡ ಬಹಳ ಸಮರ್ಥ ಬ್ಯಾಂಕ್ ಮ್ಯಾನೇಜರ್ ಅವರಾಗಿದ್ದರು.ನಾನು ಚಿನ್ನ ಇಟ್ಟ ಬಗ್ಗೆ ದಾಖಲೆ ಬೇಕೆಂದು ಹೇಳಿದಾಗ ಈ ಬಗ್ಗೆ ಒಂದು ದಾಖಲೆ ಸಹಿ ಮಾಡಿಸಿ ಕೊಡುತ್ತೇನೆ ಎಂದು ಹೇಳಿ ಮ್ಯಾನೇಜರ್ ಕ್ಯಾಬಿನ್ ನಲ್ಲಿ ಒಂದೆರಡು ನಿಮಿಷ ಕುಳಿತುಕೊಳ್ಳಲು ಹೇಳಿ ,ನನಗೆ ಸಾಲ ನೀಡಿದ ಸಿಬ್ಬಂದಿ ಬಳಿಗೆ ಹೋಗಿ‌ ಮಾತಾಡಿದರು.ಕೆಲವೇ ನಿಮಿಷಗಳಲ್ಲಿ ನಾನು ಇಟ್ಟ ಚಿನ್ನಕ್ಕೆ ಸೂಕ್ತ ದಾಖಲೆ ನೀಡಿದರು.ಹಿರಿಯ ಸಿಬ್ಬಂದಿ ಪರ ನಿಲ್ಲದೆ ಗ್ರಾಹಕರಿಗೆ ನೀಡಬೇಕಾದ ದಾಖಲೆಯನ್ನು ಕ್ಷಣಮಾತ್ರದಲ್ಲಿ ಒದಗಿಸಿದ  ಚಿಕ್ಕ ವಯಸ್ಸಿನಲ್ಲೇ ಮ್ಯಾನೇಜರ್ ಆಗಿರುವ ಸ್ಫೂರ್ತಿಯವರ ಬಗ್ಗೆ ಮೆಚ್ಚುಗೆ ಮೂಡಿ,ನನ್ನ ಪರಿಚಯ ಹೇಳಿ‌ ಅವರನ್ನು ಪರಿಚಯಿಸಿಕೊಂಡೆ.  ಅವರ ಬಗ್ಗೆ ಸಂಕ್ಷಿಪ್ತ ಮಾಹಿತಿ ಕಲೆ ಹಾಕಿದೆ
ಅವರು  ವಿಜ್ಞಾನ  ಪದವಿ ಮುಗಿಯುತ್ತಲೇ ಬ್ಯಾಂಕ್ ನಡೆಸುವ IBPS ಪರೀಕ್ಷೆಗೆ ಕಟ್ಟಿ ಉತ್ತೀರ್ಣರಾಗಿ ಯುಕೋ ಬ್ಯಾಂಕ್ ನ ಸಂದರ್ಶನ ಎದುರಿಸಿ ಪ್ರೊಬೆಷನರಿ ಆಫೀಸರ್ ಆಗಿ ಆಯ್ಕೆಯಾದರು. ಮೂರು ವರ್ಷಗಳು ಮುಗಿಯುತ್ತಲೇ ಮ್ಯಾನೇಜರ್ ಹುದ್ದೆಗೆ ಮತ್ತೆ ಪರೀಕ್ಷೆ ಬರೆದು ಅಯ್ಕೆಯಾದರು‌.ಆರು ವರ್ಷಗಳಲ್ಲಿ ಏಳು ಜಿಲ್ಲೆಗಳಲ್ಲಿ ಕೆಲಸ ಮಾಡಿ ಅನುಭವ ಪಡೆದು ಪ್ರಸ್ತುತ ಸ್ವ ಸಾಮರ್ಥ್ಯದಿಂದ ನೆಲಮಂಗಲದ ಯುಕೊ ಬ್ಯಾಂಕ್ ಗೆ ಮ್ಯಾನೇಜರ್ ಆಗಿ ಒಂದು ವಾರದ ಹಿಂದೆಯಷ್ಟೇ ವರ್ಗಾವಣೆ ಹೊಂದಿ ಬಂದಿದ್ದಾರೆ‌. ಎಂಬಿಎ ಓದಿರುವ, ಒಬ್ಬ ಚಿಕ್ಕ ‌ಮಗಳು‌ ಮತ್ತು ಪತಿಯೊಂದಿಗಿನ ಸುಖೀ ಸಂಸಾರವನ್ನು ನಿಭಾಯಿಸುತ್ತಲೇ ಮೂವತ್ತೊಂದರ ಎಳೆಯ ವಯಸ್ಸಿನಲ್ಲಿಯೇ ಬ್ಯಾಂಕ್ ಮ್ಯಾನೇಜರ್ ಆಗಿರುವ ಸಾಮರ್ಥ್ಯವಂತೆ ಸ್ಪೂರ್ತಿ ಎಸ್ ಸಮರ್ಥ ನಿಜಕ್ಕೂ ಇಂದಿನ ಎಳೆಯರಿಗೆ ಸ್ಫೂರ್ತಿಯಾಗಿದ್ದಾರೆ.


ದೊಡ್ಡವರ ದಾರಿ 59 ವಾಸ್ತವತೆಯ ಅರಿವು ಮೂಡಿಸಿದ ಶ್ರೀಮತಿ ಶಾಂತಾ ಆಚಾರ್ © ಡಾ.ಲಕ್ಷ್ಮೀ ಜಿ ಪ್ರಸಾದ

ಸುಮಾರು ಹದಿನೈದು ಹದಿನೆಂಟು ವರ್ಷಗಳ ಹಿಂದೆ ನಾನು ಮಂಗಳೂರಿನ ಚಿನ್ಮಯ ಪ್ರೌಢ ಶಾಲೆಯಲ್ಲಿ ಸಂಸ್ಕೃತ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದೆ.ಇಲ್ಲಿ ಕಳೆದ ಮೂರು ನಾಲ್ಕು ವರ್ಷಗಳು ನನ್ನ ಪಾಲಿಗೆ ಅವಿಸ್ಮರಣೀಯವಾದುದು.ಇಲ್ಲಿ ಕೆಲಸ ಮಾಡುವ ಎಲ್ಲರೂ ಒಂದೇ ದೋಣಿಯ ಪಯಣಿಗರಾಗಿದ್ದೆವು.ಆರ್ಥಿಕವಾಗಿ ಅಷ್ಟೇನೂ ಬಲಾಢ್ಯರಲ್ಲದೇ ಇದ್ದರೂ ಎಲ್ಲರಲ್ಲೂ ಅಪಾರ ಜೀವನೋತ್ಸಾಹವಿತ್ತು.ಕರ್ತವ್ಯವೆಂಬಂತೆ ಕಾಟಾಚಾರಕ್ಕೆ ಪಾಠ ಮಾಡದೆ ವಿದ್ಯಾರ್ಥಿಗಳಿಗೆ ಪಠ್ಯ ಮತ್ತು ಪಠ್ಯೇತರ ವಿಷಯಗಳಲ್ಲೂ ತರಬೇತಿ ನೀಡುತ್ತಿದ್ದೆವು. ನಮ್ಮಲ್ಲಿ ಶ್ರೀಮತಿ ಶಾಂತಾ ಆಚಾರ್ ಎಂಬ ಶಿಕ್ಷಕಿ ಇದ್ದರು.ಇವರ ಪತಿ ಬ್ಯಾಂಕ್ ಮ್ಯಾನೇಜರ್ ಆಗಿದ್ದು ಇವರಿಗೆ ಕೆಲಸ ಮಾಡುವ ದುಡಿದು ಗಳಿಸುವ ಅನಿವಾರ್ಯತೆ ಏನೂ ಇರಲಿಲ್ಲ. ಇಬ್ಬರೂ ಮಕ್ಕಳು ಪ್ರತಿಭಾವಂತರಾಗಿದ್ದು ದೊಡ್ಡ ಮಗ ಅಶ್ವಿನ್ ಮಂಗಳೂರಿನ ಕಸ್ತೂರಬಾ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪರಾಗಿದ್ದರೆ ಇನ್ನೊಬ್ಬ ಮಗ ವಿದೇಶದಲ್ಲಿ ಇಂಜಿನಿಯರ್ ಆಗಿದ್ದರು.ಆದರೂ ಒಂದಿನಿತೂ ಅಹಂಕಾರ ಮೇಲರಿಮೆ ಶಾಂತಾ ಆಚಾರ್ ಅವರಿಗಿರಲಿಲ್ಲ.ನಮ್ಮಲ್ಲಿ ಒಂದಾಗಿ ಎಲ್ಲರಂತೆ ದುಡಿಯುತ್ತಿದ್ದರು.ಇವರು ಸಂಗೀತ ವಿದುಷಿಯಾಗಿದ್ದರು.ಇವರು ಇವರಿಗೆ ನಿಗಧಿತವಾಗಿರುವ ಪಾಠದ ಅವಧಿಯಲ್ಲಿ ಪಾಠ ಮಾಡಿ ಕೊನೆಯಲ್ಲಿ ಒಂದು ಗಂಟೆ ಶಾಲೆಯ ಮಕ್ಕಳಿಗೆ ಉಚಿತವಾಗಿ ಸಂಗೀತ ಹೇಳಿಕೊಡುತ್ತಾ ಇದ್ದರು.ಪ್ರತಿಭಾ ಕಾರಂಜಿ ಸೇರಿದಂತೆ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಮಕ್ಕಳನ್ನು ತಯಾರು ಮಾಡಿ ಬಹುಮಾನ ಬರುವಂತೆ ಮಾಡಿ ತಾನು ದುಡಿಯುವ ಚಿನ್ಮಯ ವಿದ್ಯಾಸಂಸ್ಥೆಗೆ ಕೀರ್ತಿಯನ್ನು ತಂದು ಕೊಟ್ಟಿದ್ದರು.ಇವರೊಂದಿಗೆ ಅರುಣಾ ಟೀಚರ್ ಮೋಹಿನಿ ಟೀಚರ್ ಉಷಾ ಟೀಚರ್ ಮೊದಲಾದವರು ಕೈಜೋಡಿಸಿ ಮಕ್ಕಳನ್ನು ಸಿದ್ಧಪಡಿಸುತ್ತಿದ್ದರು.ನಾನು ಈ ಶಾಲೆಗೆ ಶಿಕ್ಷಕಿಯಾಗಿ ಬಂದಾಗ ನನ್ನ ಅಭಿವ್ಯಕ್ತಗೂ ಇಲ್ಲಿ ಸೂಕ್ತ ವೇದಿಕೆ ದೊರೆಯಿತು. ಚಿಕ್ಕಂದಿನಲ್ಲಿಯೇ ನಾಟಕ ರಚನೆ ಅಭಿನಯದಲ್ಲಿ ಆಸಕ್ತಿ ಇದ್ದ ನಾನು ಇಲ್ಲಿನ ಮಕ್ಕಳಿಗಾಗಿ ಹಸಿರು ಕರಗಿದಾಗ,ನೀರಕ್ಕನ ಮನೆ ಕಣಿವೆ ಮೊದಲಾದ ನಾಟಕಗಳನ್ನು ರಚಿಸಿದೆ.ಇವುಗಳನ್ನು ವೇದಿಕೆಗೆ ತರುವಲ್ಲಿ ಅನುಭವೀ ಶಿಕ್ಷಕಿ ಅರುಣಾ ಸಹಾಯ ಮಾಡಿದ್ದರು ‌.ನನ್ನ ನಾಟಕಗಳಲ್ಲಿ ಅಲ್ಲಲ್ಲಿ ಹಾಡುಗಳು ಬರುತ್ತವೆ.ಇವಕ್ಕೆ ರಾಗ ಸಂಯೋಜನೆ ಮಾಡಿ ವಿದ್ಯಾರ್ಥಿಗಳಿಗೆ ಹೇಳಿಕೊಡುವುದು ಒಂದು ಸವಾಲಿನ ವಿಷಯವಾಗಿತ್ತು.ಈ ಸಂದರ್ಭದಲ್ಲಿ ನನಗೆ ಪೂರ್ಣ ಬೆಂಬಲವಿತ್ತವರು ಸಂಗೀತಜ್ಞರಾದ ಶಾಂತಾ ಆಚಾರ್.ನನ್ನ ನಾಟಕಗಳ ಹಾಡುಗಳನ್ನು ರಾಗಕ್ಕೆ ಅನುಗುಣವಾಗಿ ಸಣ್ಣ ಪುಟ್ಟ ಬದಲಾವಣೆ ಮಾಡಿ ಅದಕ್ಕೆ ರಾಗ ಸಂಯೋಜನೆ ಮಾಡಿ ವಿದ್ಯಾರ್ಥಿಗಳಿಗೆ ಹೇಳಿಕೊಟ್ಟು ನಾಟಕಕ್ಕೆ ಒಂದು ವಿಶಿಷ್ಠವಾದ ಮೆರುಗನ್ನು ತಂದು ಕೊಟ್ಟಿದ್ದರು.ಇಲ್ಲಿ ಮುಖ್ಯೋಪಾಧ್ಯಾಯಿನಿಯಾಗಿದ್ದ ಶಕುಂತಲಾ ಸಾಂತ್ರಾಯ ಸ್ವತಃ ಓರ್ವ ಕವಯಿತ್ರಿ ಆಗಿದ್ದರು.ಪ್ರತಿ ವರ್ಷ ಶಾಲಾ ವಾರ್ಷಿಕೋತ್ಸವಕ್ಕೆ ಅವರೊಂದು ಹಾಡು ಬರೆದು ಕೊಡುತ್ತಿದ್ದರು.ಅದಕ್ಕೆ ಕೂಡ ಶಾಂತಾ ಅಚಾರ್ ಅವರು ರಾಗ ಸಂಯೋಜನೆ ಮಾಡಿ ಮಕ್ಕಳಲ್ಲಿ ಹಾಡಿಸುತ್ತಾ ಇದ್ದರು.ಇಂತಹ ಸಂದರ್ಭದಲ್ಲಿ ಒಂದು ದಿನ ನಾನು ಆತ್ಮೀಯರಾದ ಶಾಂತಾ ಮೇಡಂ ಅವರಲ್ಲಿ " ನನಗೆ ರಾಗ ಸಂಯೋಜನೆ ಮಾಡಿ ಹಾಡಲು ಬರುವುದಿಲ್ಲ .ಇದರಿಂದಾಗಿ ನನಗೆ ನನ್ನ  ನಾಟಕಗಳನ್ನು ರಂಗದಲ್ಲಿ ಪ್ರಸ್ತಿತಿ ಗೊಳಿಸಲು ಕಷ್ಟವಾಗುತ್ತದೆ. ಇದಕ್ಕಾಗಿ ಬೇರೆಯವರನ್ನು ಅವಲಂಭಿಸಬೇಕಾಗುತ್ತದೆ‌.ನನಗೂ ನಿಮ್ಮಂತೆ ರಾಗ ಸಂಯೋಜನೆ ಮಾಡಿ ಹಾಡಲು ಬಂದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಹೇಳಿದೆ.ಆಗ ಅವರು" ಎಲ್ಲವೂ ತನಗೇ ಬೇಕೆಂಬ ಸ್ವಾರ್ಥ ಇರಬಾರದು ಲಕ್ಷ್ಮೀ,ನೀವು ರ‍್ಯಾಂಕ್ ವಿಜೇತೆ ನಿಮಗೆ ಒಳ್ಳೆಯ ಬುದ್ದಿವಂತಿಕೆ ಇದೆ,ಬರವಣಿಗೆಯ ಶಕ್ತಿ ಇದೆ.ನಿಮ್ಮ ಅನೇಕ ಲೇಖನಗಳು ಪ್ರಕಟವಾಗಿವೆ. ಅನೇಕ ಕಥೆಗಳು ಕೂಡ ಪ್ರಕಟವಾಗಿವೆ‌.ಒಳ್ಳೆಯ ಮನೆ  ಗಂಡ ಮಗ ಸಂಸಾರ ಇದೆ.ಇರುವುದನ್ನು ಬಿಟ್ಟು ಇಲ್ಲದೇ ಇರುವ ಕಡೆ ಚಿಂತಿಸಬಾರದು.ಎಲ್ಲವನ್ನೂ ದೇವರು  ನಿಮಗೇ ಕೊಟ್ಟರೆ ಬೇರೆಯವರಿಗೇನೂ ಬೇಡವೇ ? ಇರುವುದರಲ್ಲಿ ತೃಪ್ತಿ ಪಟ್ಟು ನೆಮ್ಮದಿಯಿಂದ ಬದುಕಬೇಕು " ಎಂದು ತಿಳಿಸಿ ಹೇಳಿದರು.ತಕ್ಷಣವೇ ನಾನು ಬದಲಾದೆ.ಅವರು ವಾಸ್ತವದ ಅರಿವನ್ನು ಮೂಡಿಸಿದ್ದರು‌.ಎಲ್ಲದರಲ್ಲೂ ಎಲ್ಲರೂ ಪರಿಣತಿ ಸಾಧಿಸಲು ಸಾಧ್ಯವಿಲ್ಲ ‌ಎಲ್ಲದರಲ್ಲೂ ತಾನೇ ಮುಂದಿರಬೇಕೆಂದು ಬಗೆದರೆ ಯಾವುದೊಂದರಲ್ಲೂ ಪರಿಣತಿ ಸಾಧಿಸಲು ಸಾಧ್ಯವಾಗುವುದಿಲ್ಲ ಎಂಬ ವಾಸ್ತವದ ಅರಿವು ಮೂಡಿತು ‌.ಮತ್ತು ತಮಗೇ ಎಲ್ಲವೂ ಬೇಕೆಂಬ ಸ್ವಾರ್ಥ ಒಳ್ಳೆಯದಲ್ಲ ಎಂಬುದು ಮನವರಿಕೆಯಾಗಿ ನನಗೆ ಒಲಿಯದ ವಿಚಾರಗಳ ಸುದ್ದಿ ಬಿಟ್ಟು ನನಗೊಲಿದ ವಿದ್ಯೆಯಲ್ಲಿ ಪರಿಣತಿ ಪಡೆಯಲು ಯತ್ನ ಮಾಡಿದೆ‌.ಎಲ್ಲವೂ ತನಗೇ ಬೇಕೆಂಬ ಸ್ವಾರ್ಥ ಇರಬಾರದು ಎಂಬ ಮಾತನ್ನು ಸದಾ ನೆನಪಿನಲ್ಲಿ ಇಟ್ಟು ಕೊಂಡಿರುವೆ‌.