ಸುಮನ್ ಚಿತ್ರ ಒದಗಿಸಿದವರು ವಿದ್ಯಾ
ಕಾಲೇಜು ಡೇ ಸಮಯದಲ್ಲಿ ತೆಗೆದ ಫೋಟೋವನ್ನು ಗೆಳತಿ ಪೂರ್ಣಿಮಾ ಕಳಹಿಸಿಕೊಟ್ಟಿದ್ದಾರೆ( ಎಡಭಾಗದಿಂದ ಮೊದಲಿನವಳು ಸಲೀಲಾ,ನಂತರ ವೀಣಾ,ಪೂರ್ಣಿಮಾ, ನಾನು,ವಿದ್ಯಾ,ಸಂಧ್ಯಾ,ಸುಮನ್
ದೊಡ್ಡವರ ದಾರಿ25 ಹೂ ಮನಸಿನ ಹುಡುಗಿ ಸುಮನ್
ದೊಡ್ಡವರು ಎಂದರೆ ವಯಸ್ಸಾದವರು ಮಾತ್ರವಲ್ಲ, ದೊಡ್ಡ ಗುಣವನ್ನು ಪ್ರದರ್ಶಿಸಿದ ಎಳೆಯರೂ ದೊಡ್ಡವರೇ.ಅಂತಹ ಓರ್ವ ಹೂ ಮನಸಿನ ಹುಡುಗಿ ಸುಮನ್.ಃಃಉವರಳಿ ಪರಿಮಳವ ಪಸರಿಸುವ ಮೊದಲೇ ಭಗವಂತನ ಪಾದ ಸೇರಿದ ಪ್ರತಿಭಾನ್ವತೆ ಅವಳು
ಆಗಷ್ಟೇ ಪಿಯುಸಿಯನ್ನು ಮುಗಿಸಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆಯಲ್ಲಿ ಬಿಎಸ್ ಸಿ ಗೆ ಸೇರಿದ್ದೆ.ಹಾಸ್ಟೆಲ್ ನಲ್ಲಿ ಸೀಟು ಸಿಗದ ಕಾರಣ ಅದೇ ಸಂಸ್ಥೆಯ ಪ್ರೌಢಶಾಲೆಯ ಇಂಗ್ಲಿಷ್ ಮಾಸ್ಟ್ರು ವೆಂಕಟರಮಣ ಭಟ್ ಮನೆಯಲ್ಲಿ ನಡೆಸುತ್ತಿದ್ದ ಮೆಸ್ ನಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯನ್ನು ಅಲ್ಲಿ ನನಗೆ ಸೀಟು ಕೊಡಿಸಿದ ಭೌತ ಶಾಸ್ತ್ರ ಉಪನ್ಯಾಸಕರಾದ ನಮ್ಮ ಸಂಬಂಧಿಕರೂ ಆದ ಗಣಪಯ್ಯ ಭಟ್ ಮಾಡಿ ಕೊಟ್ಟಿದ್ದರು.
ಅಲ್ಲಿ ನನ್ನಂತೆ ಏಳೆಂಟು ಬಡ ಮಧ್ಯಮ ವರ್ಗದಿಂದ ಬಂದ ಕಾಲೇಜು ಓದುವ ಹುಡುಗಿಯರು ಇದ್ದರು.ಇವರಲ್ಲಿ ವಿದ್ಯಾ ನಾಪೋಕ್ಲು ನಿಂದ ಬಂದ ಹುಡುಗಿ ಎರಡನೇ ವರ್ಷ ಬಿಕಾಮ್ ಓದುತ್ತಿದ್ದು ನಮಗಿಂತ ಒಂದು ವರ್ಷ ಸೀನಿಯರ್ ಆಗಿದ್ದರು.ಸಂಧ್ಯಾ ಮತ್ತು ಸಲೀಲ ನಮಗಿಂತ ಚಿಕ್ಕವರು ಪಿಯುಸಿ ಓದುತ್ತಾ ಇದ್ದರು
ನಾನು ಪೂರ್ಣಿಮ,ವೀಣಾ ,ಸುಮನ್ ಪದವಿ ಮೊದಲ ವರ್ಷ ಓದುವ ಹುಡುಗಿಯರು.ನಾನು ವೀಣಾ ಪೂರ್ಣಿಮಾ ವಿಜ್ಞಾನ ಪದವಿಗೆ ಸೇರಿದ್ದರೆ ಸುಮನ್ ಪತ್ರಿಕೋದ್ಯಮ ವಿಭಾಗ ಕ್ಕೆ ಸೇರಿದ್ದಳು.
ಸುಮನ್ ತಂದೆ ತಾಯಿ ಒಳ್ಳೆಯ ಉದ್ಯೋಗದಲ್ಲಿ ಇದ್ದು ಸಾಕಷ್ಟು ಸಿರಿವಂತರಾಗಿದ್ದರು.ವಿದ್ಯಾವಂತರು ಕೂಡ. ಉಳಿದವರೆಲ್ಲ ಮಧ್ಯಮ ವರ್ಗದವರೇ ಆಗಿದ್ದೆವು.ಒಂದು ಪೆಟ್ಟಿಗೆಯಲ್ಲಿ ನಮ್ಮ ಕೆಲವು ಬಟ್ಟೆ ಬರೆಗಳನ್ನು ತುಂಬಿ ತಂದಿದ್ದ ನಾವುಗಳು
ಸುಮನ್ ಜೊತೆಗೆ ತಂದ ಡನ್ ಲಪ್(?) ಹಾಸಿಗೆಯನ್ನು ಚೆಂದದ ಸೂಟ್ ಕೇಸನ್ನು ನೋಡಿ ನಾವೆಲ್ಲರೂ ಬೆರಗಾಗಿದ್ದೆವು.
ಸಿರಿವಂತರ ಮಗಳಾದರೂ ಸುಮನ್ ಅತ್ಯಂತ ನಿಗರ್ವಿಯಾಗಿದ್ದಳು.ಹಳ್ಳಿ ಹುಡುಗಿಯಾದ ನನಗೆ ಪಟ್ಟಣದ ನಯ ನಾಜೂಕು ತನದ ಬಗ್ಗೆ ತಿಳಿಸಿಕೊಟ್ಟವಳು ಅವಳು.ಹಳ್ಳಿ ಹುಡುಗಿಯಾದ ನನಗೆ ಪೀರಿಯಡ್ ಸಮಯದಲ್ಲಿ ಬಳಕೆ ಮಾಡುವ ಸ್ಯಾನಿಟರಿ ಪ್ಯಾಡ್ ಗಳ ಬಳಕೆ ತಿಳಿದಿರಲಿಲ್ಲ. ಅದನ್ನು ಬಳಕೆ ಮಾಡಲು ಹೇಳಿ ಕೊಟ್ಟ ಸುಮನ್ ನನ್ನನ್ನು ದೊಡ್ಡ ಕಷ್ಟದಿಂದ ಪಾರು ಮಾಡಿದ್ದಳು.ಅಷ್ಟರ ತನಕ ನಾನು ಅನುಭವಿಸಿದ ನೋವು ಅಸಹ್ಯ ಕೆರೆತಗಳ ಬಗ್ಗೆ ಹೇಳಲು ಸಾಧ್ಯವಿಲ್ಲ.
ಸುಮನ್ ತುಂಬಾ ಜಾಣ ವಿದ್ಯಾರ್ಥಿನಿ .ಕಲಿಕೆಯ ಭಾಷಣ,ನಾಟಕ, ಚರ್ಚೆ ಮೂಕಾಭಿನಯ ಮೊದಲಾದ ಪಠ್ಯೇತರ ಚಟುವಟಿಕೆಗಳಲ್ಲೂ ಮುಂದಿದ್ದು ,ಕಾಲೇಜು ಸೇರಿದ ಕೆಲವೇ ವಾರಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿ ನಿಯಾಗಿ ಗುರುತಿಸಿ ಕೊಂಡಿದ್ದಳು.
ಆಗ ಉಜಿರೆಯಲ್ಲಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾಗಿದ್ದ ನಿರಂಜನ ವಾನಳ್ಳಿಯವರು ವಿದ್ಯಾರ್ಥಿಗಳ ಅಭಿವ್ಯಕ್ತಿ ಗಾಗಿ ಭಿತ್ತಿ ಪತ್ರಿಕೆ ನಡೆಸುತ್ತಾ ಇದ್ದರು.ನಮ್ಮ ಸುಮನ್ ಕೂಡ ಅದಕ್ಕೆ ಬರೆಯುತ್ತಾ ಇದ್ದಳು.ನಮ್ಮಲ್ಲೂ ಬರೆಯಲು ಹೇಳಿದ್ದಳು.ಹಾಗೆ ನಾನೂ ಒಂದು ಲೇಖನ ( ಕನ್ನಡದ ಬಗ್ಗೆ ಎಂದು ನೆನಪು)ಬರೆದು ನೀಡಿದೆ.ಅದನ್ನು ತೆಗೆದುಕೊಂಡು ಹೋಗಿ ಅವಳು ಉಪನ್ಯಾಸಕರಿಗೆ ಅಥವಾ ಪತ್ರಿಕೆಯ ಜವಾಬ್ದಾರಿ ಹೊತ್ತಿದ್ದ ಹಿರಿಯ ವಿದ್ಯಾರ್ಥಿಗಳಿಗೆ ನೀಡಿ ಭಿತ್ತಿ ಪತ್ರಿಕೆಯಲ್ಲಿ ಪ್ರಟಸಿಸಲು ಕೋರಿದ್ದಳು.ಆ ಲೇಖನ ಭಿತ್ತಿ ಪತ್ರಿಕೆಯಲ್ಲಿ ಪ್ರಕಟವಾಗಲಿಲ್ಲ .ಆಗ ಅವಳು "ನಿನ್ನ ಲೇಖನ ಚೆನ್ನಾಗಿದೆ ಆದರೆ ಅದು ಕನ್ನಡದ ಬಳಕೆ ಕುರಿತಾಗಿದ್ದು ನವೆಂಬರ್ ತಿಂಗಳಲ್ಲಿ ಆಗಿದ್ದರೆ ಭಿತ್ತಿ ಪತ್ರಿಕೆಯಲ್ಲಿ ಹಾಕುತ್ತಿದ್ದರು" ಎಂದು ಸಮಾಧಾನ ಹೇಳಿದ್ದಳು.
ಅವಳು ಶ್ರೀಮಂತ ಮನೆಯ ,ವಿದ್ಯಾವಂತ ಕುಟುಂಬದ ಹುಡುಗಿಯಾಗಿದ್ದದು ಮಾತ್ರವಲ್ಲದೆ ಬಹುಮುಖಿ ಪ್ರತಿಭಾವಂತೆಯಾದ ಕಾರಣ ನಮ್ಮ ಮೆಸ್ ನಲ್ಲಿ ಅವಳಿಗೆ ಸಹಜವಾಗಿಯೇ ಹೆಚ್ಚಿನ ಮನ್ನಣೆ ಇತ್ತು. ಜೊತೆಗೆ ಎಲ್ಲರಲ್ಲೂ ಹೊಂದಿಕೊಳ್ಳುವ ಅವಳ ಸ್ವಭಾವ ಕೂಡ ಮನಸೆಳೆಯುವದ್ದೇ ಆಗಿತ್ತು. ಅವಳು ಕಥೆ ಕವನ ಲೇಖನಗಳನ್ನು ಬರೆದು ಭಿತ್ತಿ ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು.ಒಂದೆರಡು ಲೇಖನ ಹೊಸದಿಗಂತ ಪತ್ರಿಕೆ ಹಾಗೂ ಆಕಾಶವಾಣಿಯಲ್ಲಿಯೂ ಪ್ರಕಟವಾದವು.
ನಾನು ಏಳನೇ ತರಗತಿ ಓದುತ್ತಿದ್ದಾಗಲೇ ಒಂದು ಹವ್ಯ ಭಾಷೆಯಲ್ಲಿ ಸುಬ್ಬಿ ಇಂಗ್ಲಿಷ್ ಕಲ್ತದು ಎಂಬ ನಾಟಕ ಬರೆದಿದ್ದೆ.ನಂತರ ಒಂಬತ್ತನೇ ತರಗತಿ ಓದುವಾಗ ಒಂದು ಕಥೆಯನ್ನು ಬರೆದು ಅಮ್ಮನಿಗೆ ತೋರಿಸಿ ಮೆಚ್ಚುಗೆ ಪಡೆದಿದ್ದೆ.ಹತ್ತನೇ ತರಗತಿ ತನಕ ಕನ್ನಡ ಮಾಧ್ಯಮದಲ್ಲಿ ಓದಿದ ನಾನು ತರಗತಿಯಲ್ಲಿ ಜಾಣೆ ಹುಡುಗಿಯಾಗಿ ಗುರುತಿಸಿಕೊಂಡಿದ್ದೆ.
ಪಿಯುಸಿಗೆ ಸೇರಿ ವಿಜ್ಞಾನ ವಿಭಾಗದಲ್ಲಿ ಓದುವಾಗ ಇಂಗ್ಲಿಷ್ ಭಾಷೆಯಲ್ಲಿ ಮಾಡಿದ ಪಾಠ ಅರ್ಥವಾಗದೆ ಕಲಿಕೆಯಲ್ಲಿ ಹಿಂದೆ ಬಿದ್ದು ಮೊದಲ ಬೆಂಚಿನ ಹುಡುಗಿಯಾಗಿದ್ದವಳು ಹಿಂದಿನ ಬೆಂಚಿನ ಹುಡುಗಿಯಾಗಿದ್ದೆ.ಇಲ್ಲಿ ನಾನು ಆತ್ಮವಿಶ್ವಾಸವನ್ನು ಕಳೆದು ಕೊಂಡಿದ್ದೆ.ಅಂತೂ ಇಂತೂ ಪಿಯುಸಿ ಪಾಸ್ ಆಗಿ ಬಿಎಸ್ ಸಿಗೆ ಸೇರಿದ್ದೆ.ಅಲ್ಲಿಯೂ ನಾನು ಕೊನೆ ಬೆಂಚಿನ ಹುಡುಗಿಯೇ ಆಗಿದ್ದೆ( ಹಾಗಾಗಿಯೆ ಏನೋ ಈಗಲೂ ನನಗೆ ಕಲಿಕೆಯಲ್ಲಿ ಹಿಂದೆ ಬಿದ್ದಿರುವ ಕೊನೆ ಬೆಂಚಿನ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಪ್ರೀತಿ).
ಸುಮನ್ ಬರೆಯುತ್ತಾ ಇದ್ದ ಕಥೆ ಕವನ ಬರಹಗಳನ್ನು ಓದುತ್ತಾ ನಾನೂ ಇಂತಹ ವನ್ನು ಬರೆಯಬಲ್ಲೆ ಎಂದೆನಿಸಿ ನಾನು ನನ್ನಷ್ಟಕ್ಕೆಸಣ್ಣ ಪುಟ್ಟ ಕಥೆ ಕವನ ಲೇಖನ ಬರೆದು ಯಾರಿಗೂ ತೋರಿಸದೆ ನನ್ನೊಳಗೆ ಅಡಗಿಸಿ ಇಟ್ಟಿದ್ದೆ.ಅದನ್ನು ಬೇರೆಯವರಿಗೆ ಅಥವಾ ಸ್ನೇಹಿತೆಯರಾದ ವೀಣಾ,ಪೂರ್ಣಿಮಾ, ಸುಮನ್ ಗೆ ತೋರಿಸುವಷ್ಟು ಆತ್ಮವಿಶ್ವಾಸ ನನ್ನಲ್ಲಿ ಇರಲಿಲ್ಲ. ತನ್ನ ಬರವಣಿಗೆಯ ಕಾರಣಕ್ಕೆ ಗಮನ ಸೆಳೆವ ವ್ಯಕ್ತಿತ್ವ ಹೊಂದಿದ್ದ ಸುಮನ್ ಬರೆಯಲು ನನಗೆ ಪ್ರೇರಣೆಯಾಗಿದ್ದಳು.ಅವಳ ಬಗ್ಗೆ ಒಳಗಿನಿಂದ ಕಾಡುತ್ತಿದ್ದ ಮತ್ಸರ ಕೂಡ ಇದಕ್ಕೆ ಕಾರಣವಾಗಿರಬಹುದು ಎಂದು ನನಗೆ ಈಗ ಅನಿಸುತ್ತದೆ.ಸುಮನ್ ಸಿರಿವಂತರ ಮನೆಯ ಜಾಣ ಹುಡುಗಿಯಾಗಿದ್ದರೂ ಯಾವುದೇ ಅಹಂಕಾರ ಅವಳಿಗಿರಲಿಲ್ಲ .ಕಲಿಕೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಅತ್ಯುತ್ಸಾಹದಿಂದ ಭಾಗವಹಿಸುತ್ತಿದ್ದಳು.ಅವಳಿಗೆ ಸಿಕ್ಕ ಬಹುಮಾನ,ಮನ್ನಣೆಗಳು ನನಗೂ ಏಕಪಾತ್ರಾಭಿನಯ,ಭಾಷಣ ಮೊದಲಾದವುಗಳಲ್ಲಿ ಭಾಗವಹಿಸಿ ಬಹುಮಾನ ಪಡೆಯಲು ಪ್ರೇರಣೆಯಾಯಿತು.
ಮುಂದೆ ಸುಮನ್ ದೊಡ್ಡ ಪತ್ರಕರ್ತೆಯಾಗಬಹುದು ಇಲ್ಲವೇ ತುಂಬಾ ಓದಿ ಒಳ್ಳೆಯ ಕೆಲಸ ಪಡೆದು ಉನ್ನತ ಸ್ಥಾನಮಾನವನ್ನು ಪಡೆಯಬಹುದು ಎಂದೇ ನಾವೆಲ್ಲರೂ ಊಹಿಸಿದ್ದೆವು.
ಆದರೆ ಬದುಕು ನಾವಂದುಕೊಂಡಂತೆ ಇರುವುದಿಲ್ಲ. ಅವಳಿಗೆ ಮೊದಲ ವರ್ಷ ಪದವಿ ಪರೀಕ್ಷೆ ಮುಗಿಯುತ್ತಿದ್ದಂತೆ ದೊಡ್ಡ ಕಾಫಿ ಎಸ್ಟೇಟ್ ಉದ್ಯಮಿ ಜೊತೆಗೆ ಮದುವೆಯಾಯಿತು. ಮುಂದೆ ರೆಗುಲರ್ ಆಗಿ ಓದು ಮುಂದುವರಿಸಲಾಗಲಿಲ್ಲ .ಖಾಸಗಿಯಾಗಿ ಓದಿರಬಹುದೇನೋ ಗೊತ್ತಿಲ್ಲ, ನಂತರ ಅವಳ ಕಥೆ ಕವನಗಳು ಬರಹಗಳು ಪ್ರಕಟವಾಗಿದೆಯೋ ಇಲ್ಲವೋ ನನಗೆ ತಿಳಿಯದು ಆದರೂ ಅವಳಿಗೆ ಹೆಚ್ಚೇನು ಬರೆಯಲಾಗಿಲ್ಲ ಎಂದು ಅನಂತರ ತಿಳಿಯಿತು. ಅವಳ ಮದುವೆಯಾದ ಕೆಲ ತಿಂಗಳಲ್ಲಿ ಪೂರ್ಣಿಮಾ ಕೂಡ ಮದುವೆಯಾಗಿ ಶ್ರೀಮಂತರ ಮನೆ ಸೇರಿದಳು .ನಂತರ ಎರಡನೇ ವರ್ಷ ಪೂರ್ವ ಸಿದ್ದತಾ ಪರೀಕ್ಷೆ ಆಗುತ್ತಿದ್ದಂತೆ ನನಗೂ ಮದುವೆಯಾಯಿತು, ನಾನು ವಿವಾಹಾನಂತರವೂ ಮನೆ ಮಂದಿ ಸಮಾಜವನ್ನು ಎದುರು ಹಾಕಿಕೊಂಡು ಓದಿದೆ..ಬಿಎಸ್ಸಿ ಮುಗಿಯುತ್ತಲೇ ವಿಜ್ಞಾನ ವನ್ನು ಬಿಟ್ಟು ಸಂಸ್ಕೃತ ಎಂಎ ಗೆ ಸೇರಿ ಮತ್ತೆ ಮೊದಲ ಬೆಂಚಿನ ವಿದ್ಯಾರ್ಥಿನಿಯಾಗಿ ಮೊದಲ ರ‌್ಯಾಂಕ್ ಪಡೆದು ನಂತರದ ದಿನಗಳಲ್ಲಿ ಉಪನ್ಯಾಸಕಿಯಾದೆ.
ಎಷ್ಟೋ ವರ್ಷಗಳ ನಂತರ ಉಜಿರೆಯಲ್ಲಿ ವಿಶ್ವ ತುೞು ಸಮ್ಮೇಳನದಲ್ಲಿ ಭಾಗವಹಿಸಲು ಹೋದವಳು ನಾನಿದ್ದ ಮೆಸ್ ಗೂ ಹೋಗಿದ್ದೆ.ಅವರ ಮೂಲಕ ಸುಮನ್ ಗೆ ಕ್ಯಾನ್ಸರ್ ಬಂದಿದ್ದು ತಿಳಿದು ಫೋನ್ ಮಾಡಿ ಮಾತಾಡಿದ್ದೆ.ಆಗ ಅವಳಿಗೆ ಮೊದಲಿಗೆ ಬ್ರೆಸ್ಟ್ ಕ್ಯಾನ್ಸರ್ ಬಂದು ಗುಣವಾಗಿ ಮತ್ತೆ ಎಲುಬಿನಲ್ಲಿ ಕ್ಯಾನ್ಸರ್ ಕಾಣಿಸಿಕೊಂಡಿತ್ತು.ಅವಳಿಗೆ ಮಕ್ಕಳಾಗದ ಕಾರಣ ಒಂದು ಮಗುವನ್ನು ದತ್ತು ಪಡೆದು ಸಾಕುತ್ತಿದ್ದು ಆ ಮಗುವಿಗೆ ಮೂರು ನಾಲ್ಕು ವರ್ಷ ಅಗಿದೆ ಎಂದು ತಿಳಿಸಿದ್ದಳು.ತುಂಬಾ ನಿರಾಶೆಯಲ್ಲಿದ್ದ ಅವಳಿಗೆ ಏನೆಂದು ಧೈರ್ಯ ಹೇಳಬೇಕೋ ನನಗೂ ಗೊತ್ತಾಗಲಿಲ್ಲ. ಆದರೂ ನಾವು ಎಷ್ಟು ಸಮಯ ಬದುಕುತ್ತೇವೆ ಎಂಬುದು ಮುಖ್ಯವಲ್ಲ ಹೇಗೆ ಬದುಕಿದ್ದೇವೆ ಹೇಳುವುದು ಮುಖ್ಯ. ಯಾರ ಆಯುಷ್ಯ ಕ್ಕೂ ಗ್ಯಾರಂಟಿ ಇಲ್ಲ,ಸಾಯಲು ಕ್ಯಾನ್ಸರ್ ಇರಬೇಕೆಂದೇನೂ ಇಲ್ಲ .ರಸ್ತೆ ಆಕ್ಸಿಡೆಂಟ್ ನಲ್ಲು ಜನರು ಸಾಯುತ್ತಾರೆ.ಏನೂ ಸಮಸ್ಯೆ ಇಲ್ಲದೆ ಇರುವ ಜನರೂ ಇದ್ದಕ್ಕಿದ್ದಂತೆ ಕುಸಿದು ಕುಳಿತು ಸಾಯುತ್ತವೆ. ಹೃದಯ ಕಾಯಿಲೆ, ಏಡ್ಸ್ ,ಕ್ಯಾನ್ಸರ್ ನಂತ ರೋಗಗಳು ಬಂದರೂ ನೂರು ವರ್ಷ ಬದುಕಿದವರು ಇದ್ದಾರೆ.ನೀನು ಸಾಧ್ಯವಾದರೆ ಪುಸ್ತಕ ಪ್ರಕಟಿಸು ಎಂದು ಹೇಳಿ ಧೈರ್ಯ ಹೇಳಿದ್ದೆ.ಇದಾಗಿ ಕೆಲವು ತಿಂಗಳ ನಂತರ ಕ್ಯಾನ್ಸರ್ ಗುಣಮುಖ ವಾಗಿದೆ, ಎರಡು ಪುಸ್ತಕ ಪ್ರಕಟಿಸಲು ಸಿಧ್ದ ಮಾಡುತ್ತಿದ್ದೇನೆ,ಪ್ರಕಟವಾದ ಮೇಲೆ ಕಳಹಿಕೊಡುತ್ತೇನೆ ಎಂದು ನನ್ನ ವಿಳಾಸ ಪಡೆದುಕೊಂಡಿದ್ದಳು.
ಅದಾಗಿ ಕೆಲ ತಿಂಗಳ ನಂತರ ಅವಳ ಸಾವಿನ ದಾರುಣೆ ವಾರ್ತೆ ಸಿಕ್ಕಿ ಮನಸ್ಸು ಭಾರವಾಗಿ ಬಿಕ್ಕಿ ಬಿಕ್ಕಿ ಅತ್ತಿದ್ದೆ.ಅವಳಿಗೆ ಮತ್ತೆ ಮೆದುಳಿಗೆ ಕ್ಯಾನ್ಸರ್ ಹರಡಿತಂತೆ. ಯಮರಾಯ ಇಂತಹ ಪ್ರತಿಭಾನ್ವಿತೆ ಸ್ವರ್ಗದಲ್ಲಿರಲಿ ಎಂದು ಎಳೆದೊಯ್ದು ಸ್ವರ್ಗ ಕ್ಕೆ ಸೇರಿಸಿಬೇಕು. ಅವಳ ಎರಡು ಪುಸ್ತಕಗಳು ಅವಳಿದ್ದಾಗಲೇ ಪ್ರಕಟವಾಗಿವೆ ಎಂದು ಸ್ನೇಹಿತೆ ವಿದ್ಯಾ ತಿಳಿಸಿದ್ದರು.
ಅವಳ ನೇತೃತ್ವದಲ್ಲಿ ನಾವು ಕಾಲೇಜು ಡೇಯಲ್ಲಿ "ನೋಡವಳಂದಾವಾ ಮುತ್ತಿನ ಮಾಲೆ ಚಂದಾವಾ" ಹಾಡಿಗೆ ಸಮೂಹ ನೃತ್ಯ ಮಾಡಿದ್ದೆವು. ಅವಳನ್ನು ಹೇಗೆ ತಾನೇ ಮರೆಯಲಿ?
ಒಂದು ದಿನ ಸಂಜೆ ಅವಳು ಬೇಕರಿಯಿಂದ ಪಪ್ಸ್ ತಂದು ತಿನ್ನೋಣವಾ ಎಂದು ಕೇಳಿದಳು.ಹಾಗೆಂದರೇನು ಎಂದು ನಾವು ಕೇಳಿದೆವು.ಅದು ಬ್ರೆಡ್ ಒಳಗಡೆ ಪಲ್ಯ ಹಾಕಿ ಹುರಿದು ಮಾಡುತ್ತಾರೆ.ತುಂಬಾ ರುಚಿಯಿರುತ್ತದೆ ಎಂದು ಹೇಳಿದಳು.ಹಾಗೆ ನಾವೆಲ್ಲಾ ಉಜಿರೆ ಪೇಟೆಗೆ ಬಂದು ಅಲ್ಲಿದ್ದ ಒಂದೇ ಒಂದು ಬೇಕರಿಯಲ್ಲಿ ಪಪ್ಪ್ ಬೇಕೆಂದು ಕೇಳಿದೆವು. ಹಳ್ಳಿಯ ಬೇಕರಿ ಮಾಲಕನಿಗೆ ಪಪ್ಸ್ ದು ಹೆಸರು ಕೂಡ ಕೇಳಿ ಗೊತ್ತಿರಲಿಲ್ಲ.! ವರು ನಾವು ಕೇಳಿದ ವಸ್ತುವೇನೆಂದು ತಿಳಿಯದೆ ಮಿಕ ಮಿಕ ನೋಡಿದ್ದರು! ಅಲ್ಲಂದ ನಾನು ಪಪ್ಸ್ ತಿನ್ಬಲೇ ಬೇಕೆಂದು ಕೊಂಡಿದ್ದೆ.ಇದಾಗಿ ಸುಮಾರು ಒಂದು ವರ್ಷದ ನಂತರ ನನಗೆ ಮದುವೆಯಾಯಿತು, ಪ್ರಸಾದ್ ಆಗಲೂ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು ನಾನು ರಜೆಯಲ್ಲಿ ಬೆಂಗಳೂರಿಗೆ ಬಂದೆ.ಆಗ ಪ್ರಸಾದ್ ನಿನಗೇನು ತಿನ್ನಲು ತರಬೇಕು ಎಂದು ಕೇಳಿದಾಗ ನಾನು ಪಪ್ ಬೇಕೆಂದು ಹೇಳಿದೆ! ಆರಂಭದಲ್ಲಿ ಅವರಿಗೆ ನಾನೇನು ಕೇಳುತ್ತಿದ್ದೇನೆ ಗೊತ್ತಾಗಲಿಲ್ಲ, ನಂತರ ಸುಮನ್ ಹೇಳಿದ್ದನ್ನು ನೆನಪಿಸಿಕೊಂಡು ಬ್ರೆಡ್ ಒಳಗೆ ಪಲ್ಯ ಹಾಕಿ ಹುರಿದ ತಿಂಡಿ ಎಂದು ವಿವರಿಸಿದೆ,ಓ ಅದಾ ಅದು ಪಪ್ಸ್ ಮಾರಾಯ್ತಿ ಈಗ ತಂದೆ ಎಂದು ಹೇಳಿ ಐದು ನಿಮಿಷದಲ್ಲಿ ಬೇಕರಿಯಂದ ತಂದು ಕೊಟ್ಟರುಹೌದು ಸುಮನ್ ಹೇಳಿದ್ದು ನಿಜ ಅದು ತುಂಬಾ ರುಚಿಕರ, ನನಗೆ ಈಗಲೂ ಅದು ತುಂಬಾ ಇಷ್ಟ!
No comments:
Post a Comment