Sunday, 19 November 2017

ದೊಡ್ಡವರ ದಾರಿ 25 ಹೂ ಮನಸಿನ ಹುಡುಗಿ ಸುಮನ್© ಡಾ ಲಕ್ಷ್ಮೀ ಜಿ ಪ್ರಸಾದ




ಸುಮನ್ ಚಿತ್ರ ಒದಗಿಸಿದವರು ವಿದ್ಯಾ  

ಕಾಲೇಜು ಡೇ ಸಮಯದಲ್ಲಿ ತೆಗೆದ ಫೋಟೋವನ್ನು ಗೆಳತಿ ಪೂರ್ಣಿಮಾ ಕಳಹಿಸಿಕೊಟ್ಟಿದ್ದಾರೆ( ಎಡಭಾಗದಿಂದ ಮೊದಲಿನವಳು ಸಲೀಲಾ,ನಂತರ ವೀಣಾ,ಪೂರ್ಣಿಮಾ, ನಾನು,ವಿದ್ಯಾ,ಸಂಧ್ಯಾ,ಸುಮನ್
ದೊಡ್ಡವರ ದಾರಿ25 ಹೂ ಮನಸಿನ  ಹುಡುಗಿ ಸುಮನ್
ದೊಡ್ಡವರು ಎಂದರೆ ವಯಸ್ಸಾದವರು ಮಾತ್ರವಲ್ಲ, ದೊಡ್ಡ ಗುಣವನ್ನು ಪ್ರದರ್ಶಿಸಿದ ಎಳೆಯರೂ ದೊಡ್ಡವರೇ.ಅಂತಹ ಓರ್ವ ಹೂ ಮನಸಿನ ಹುಡುಗಿ ಸುಮನ್.ಃಃಉವರಳಿ ಪರಿಮಳವ ಪಸರಿಸುವ ಮೊದಲೇ ಭಗವಂತನ ಪಾದ ಸೇರಿದ ಪ್ರತಿಭಾನ್ವತೆ ಅವಳು
ಆಗಷ್ಟೇ ಪಿಯುಸಿಯನ್ನು ಮುಗಿಸಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆಯಲ್ಲಿ ಬಿಎಸ್ ಸಿ ಗೆ ಸೇರಿದ್ದೆ.ಹಾಸ್ಟೆಲ್ ನಲ್ಲಿ ಸೀಟು ಸಿಗದ ಕಾರಣ ಅದೇ ಸಂಸ್ಥೆಯ ಪ್ರೌಢಶಾಲೆಯ ಇಂಗ್ಲಿಷ್ ಮಾಸ್ಟ್ರು  ವೆಂಕಟರಮಣ ಭಟ್ ಮನೆಯಲ್ಲಿ ನಡೆಸುತ್ತಿದ್ದ ಮೆಸ್ ನಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯನ್ನು ಅಲ್ಲಿ ನನಗೆ ಸೀಟು ಕೊಡಿಸಿದ ಭೌತ ಶಾಸ್ತ್ರ ಉಪನ್ಯಾಸಕರಾದ ನಮ್ಮ ಸಂಬಂಧಿಕರೂ ಆದ ಗಣಪಯ್ಯ ಭಟ್ ಮಾಡಿ ಕೊಟ್ಟಿದ್ದರು.
ಅಲ್ಲಿ ನನ್ನಂತೆ ಏಳೆಂಟು ಬಡ ಮಧ್ಯಮ ವರ್ಗದಿಂದ ಬಂದ ಕಾಲೇಜು ಓದುವ  ಹುಡುಗಿಯರು ಇದ್ದರು.ಇವರಲ್ಲಿ ವಿದ್ಯಾ ನಾಪೋಕ್ಲು ನಿಂದ ಬಂದ ಹುಡುಗಿ ಎರಡನೇ ವರ್ಷ ಬಿಕಾಮ್ ಓದುತ್ತಿದ್ದು ನಮಗಿಂತ ಒಂದು ವರ್ಷ ಸೀನಿಯರ್ ಆಗಿದ್ದರು.ಸಂಧ್ಯಾ ಮತ್ತು ಸಲೀಲ ನಮಗಿಂತ ಚಿಕ್ಕವರು ಪಿಯುಸಿ ಓದುತ್ತಾ ಇದ್ದರು‌
ನಾನು ಪೂರ್ಣಿಮ,ವೀಣಾ ,ಸುಮನ್ ಪದವಿ ಮೊದಲ ವರ್ಷ ಓದುವ ಹುಡುಗಿಯರು.ನಾನು ವೀಣಾ ಪೂರ್ಣಿಮಾ ವಿಜ್ಞಾನ ಪದವಿಗೆ ಸೇರಿದ್ದರೆ ಸುಮನ್ ಪತ್ರಿಕೋದ್ಯಮ ವಿಭಾಗ ಕ್ಕೆ ಸೇರಿದ್ದಳು.
ಸುಮನ್ ತಂದೆ ತಾಯಿ ಒಳ್ಳೆಯ ಉದ್ಯೋಗದಲ್ಲಿ ಇದ್ದು ಸಾಕಷ್ಟು ಸಿರಿವಂತರಾಗಿದ್ದರು.ವಿದ್ಯಾವಂತರು ಕೂಡ. ಉಳಿದವರೆಲ್ಲ  ಮಧ್ಯಮ ವರ್ಗದವರೇ ಆಗಿದ್ದೆವು.ಒಂದು ಪೆಟ್ಟಿಗೆಯಲ್ಲಿ ನಮ್ಮ ಕೆಲವು ಬಟ್ಟೆ ಬರೆಗಳನ್ನು ತುಂಬಿ ತಂದಿದ್ದ ನಾವುಗಳು
ಸುಮನ್ ಜೊತೆಗೆ ತಂದ ಡನ್ ಲಪ್(?) ಹಾಸಿಗೆಯನ್ನು ಚೆಂದದ ಸೂಟ್ ಕೇಸನ್ನು ನೋಡಿ ನಾವೆಲ್ಲರೂ ಬೆರಗಾಗಿದ್ದೆವು.
ಸಿರಿವಂತರ ಮಗಳಾದರೂ ಸುಮನ್ ಅತ್ಯಂತ ನಿಗರ್ವಿಯಾಗಿದ್ದಳು.ಹಳ್ಳಿ ಹುಡುಗಿಯಾದ ನನಗೆ ಪಟ್ಟಣದ ನಯ ನಾಜೂಕು ತನದ ಬಗ್ಗೆ ತಿಳಿಸಿಕೊಟ್ಟವಳು ಅವಳು.ಹಳ್ಳಿ ಹುಡುಗಿಯಾದ ನನಗೆ ಪೀರಿಯಡ್ ಸಮಯದಲ್ಲಿ ಬಳಕೆ ಮಾಡುವ ಸ್ಯಾನಿಟರಿ ಪ್ಯಾಡ್ ಗಳ ಬಳಕೆ ತಿಳಿದಿರಲಿಲ್ಲ. ಅದನ್ನು ಬಳಕೆ ಮಾಡಲು ಹೇಳಿ ಕೊಟ್ಟ ಸುಮನ್ ನನ್ನನ್ನು ದೊಡ್ಡ ಕಷ್ಟದಿಂದ ಪಾರು ಮಾಡಿದ್ದಳು.ಅಷ್ಟರ ತನಕ ನಾನು ಅನುಭವಿಸಿದ ನೋವು ಅಸಹ್ಯ ಕೆರೆತಗಳ ಬಗ್ಗೆ ಹೇಳಲು ಸಾಧ್ಯವಿಲ್ಲ.
ಸುಮನ್ ತುಂಬಾ ಜಾಣ ವಿದ್ಯಾರ್ಥಿನಿ .ಕಲಿಕೆಯ ಭಾಷಣ,ನಾಟಕ, ಚರ್ಚೆ ಮೂಕಾಭಿನಯ ಮೊದಲಾದ ಪಠ್ಯೇತರ ಚಟುವಟಿಕೆಗಳಲ್ಲೂ ಮುಂದಿದ್ದು ,ಕಾಲೇಜು ಸೇರಿದ ಕೆಲವೇ ವಾರಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿ ನಿಯಾಗಿ ಗುರುತಿಸಿ ಕೊಂಡಿದ್ದಳು.
ಆಗ ಉಜಿರೆಯಲ್ಲಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾಗಿದ್ದ ನಿರಂಜನ ವಾನಳ್ಳಿಯವರು ವಿದ್ಯಾರ್ಥಿಗಳ ಅಭಿವ್ಯಕ್ತಿ ಗಾಗಿ ಭಿತ್ತಿ ಪತ್ರಿಕೆ ನಡೆಸುತ್ತಾ ಇದ್ದರು.ನಮ್ಮ ಸುಮನ್ ಕೂಡ ಅದಕ್ಕೆ ಬರೆಯುತ್ತಾ ಇದ್ದಳು.ನಮ್ಮಲ್ಲೂ ಬರೆಯಲು ಹೇಳಿದ್ದಳು.ಹಾಗೆ ನಾನೂ ಒಂದು ಲೇಖನ (  ಕನ್ನಡದ ಬಗ್ಗೆ ಎಂದು ನೆನಪು)ಬರೆದು ನೀಡಿದೆ.ಅದನ್ನು ತೆಗೆದುಕೊಂಡು ಹೋಗಿ ಅವಳು ಉಪನ್ಯಾಸಕರಿಗೆ ಅಥವಾ ಪತ್ರಿಕೆಯ ಜವಾಬ್ದಾರಿ ಹೊತ್ತಿದ್ದ ಹಿರಿಯ ವಿದ್ಯಾರ್ಥಿಗಳಿಗೆ ನೀಡಿ ಭಿತ್ತಿ ಪತ್ರಿಕೆಯಲ್ಲಿ ಪ್ರಟಸಿಸಲು ಕೋರಿದ್ದಳು.ಆ ಲೇಖನ ಭಿತ್ತಿ ಪತ್ರಿಕೆಯಲ್ಲಿ ಪ್ರಕಟವಾಗಲಿಲ್ಲ .ಆಗ ಅವಳು "ನಿನ್ನ ಲೇಖನ ಚೆನ್ನಾಗಿದೆ ಆದರೆ ಅದು ಕನ್ನಡದ ಬಳಕೆ ಕುರಿತಾಗಿದ್ದು ನವೆಂಬರ್ ತಿಂಗಳಲ್ಲಿ ಆಗಿದ್ದರೆ ಭಿತ್ತಿ ಪತ್ರಿಕೆಯಲ್ಲಿ ಹಾಕುತ್ತಿದ್ದರು" ಎಂದು ಸಮಾಧಾನ ಹೇಳಿದ್ದಳು.
ಅವಳು ಶ್ರೀಮಂತ ಮನೆಯ ,ವಿದ್ಯಾವಂತ ಕುಟುಂಬದ ಹುಡುಗಿಯಾಗಿದ್ದದು ಮಾತ್ರವಲ್ಲದೆ ಬಹುಮುಖಿ ಪ್ರತಿಭಾವಂತೆಯಾದ ಕಾರಣ ನಮ್ಮ ಮೆಸ್ ನಲ್ಲಿ ಅವಳಿಗೆ ಸಹಜವಾಗಿಯೇ ಹೆಚ್ಚಿನ ಮನ್ನಣೆ ಇತ್ತು. ಜೊತೆಗೆ ಎಲ್ಲರಲ್ಲೂ ಹೊಂದಿಕೊಳ್ಳುವ ಅವಳ ಸ್ವಭಾವ ಕೂಡ ‌ಮನಸೆಳೆಯುವದ್ದೇ ಆಗಿತ್ತು. ಅವಳು ಕಥೆ ಕವನ ಲೇಖನಗಳನ್ನು ಬರೆದು ಭಿತ್ತಿ ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು‌.ಒಂದೆರಡು ಲೇಖನ ಹೊಸದಿಗಂತ ಪತ್ರಿಕೆ ಹಾಗೂ ಆಕಾಶವಾಣಿಯಲ್ಲಿಯೂ ಪ್ರಕಟವಾದವು.
ನಾನು ಏಳನೇ ತರಗತಿ ಓದುತ್ತಿದ್ದಾಗಲೇ ಒಂದು ಹವ್ಯ ಭಾಷೆಯಲ್ಲಿ ಸುಬ್ಬಿ ಇಂಗ್ಲಿಷ್ ಕಲ್ತದು ಎಂಬ ನಾಟಕ ಬರೆದಿದ್ದೆ.ನಂತರ ಒಂಬತ್ತನೇ ತರಗತಿ ಓದುವಾಗ ಒಂದು ಕಥೆಯನ್ನು ಬರೆದು ಅಮ್ಮನಿಗೆ ತೋರಿಸಿ ಮೆಚ್ಚುಗೆ ಪಡೆದಿದ್ದೆ.ಹತ್ತನೇ ತರಗತಿ ತನಕ ಕನ್ನಡ ಮಾಧ್ಯಮದಲ್ಲಿ ಓದಿದ ನಾನು ತರಗತಿಯಲ್ಲಿ ಜಾಣೆ ಹುಡುಗಿಯಾಗಿ ಗುರುತಿಸಿಕೊಂಡಿದ್ದೆ.
ಪಿಯುಸಿಗೆ ಸೇರಿ ವಿಜ್ಞಾನ ವಿಭಾಗದಲ್ಲಿ ಓದುವಾಗ ಇಂಗ್ಲಿಷ್ ಭಾಷೆಯಲ್ಲಿ ಮಾಡಿದ ಪಾಠ ಅರ್ಥವಾಗದೆ ಕಲಿಕೆಯಲ್ಲಿ ಹಿಂದೆ ಬಿದ್ದು ಮೊದಲ ಬೆಂಚಿನ ಹುಡುಗಿಯಾಗಿದ್ದವಳು ಹಿಂದಿನ ಬೆಂಚಿನ ಹುಡುಗಿಯಾಗಿದ್ದೆ.ಇಲ್ಲಿ ನಾನು ಆತ್ಮವಿಶ್ವಾಸವನ್ನು ಕಳೆದು ಕೊಂಡಿದ್ದೆ.ಅಂತೂ ಇಂತೂ ಪಿಯುಸಿ ಪಾಸ್ ಆಗಿ ಬಿಎಸ್ ಸಿಗೆ ಸೇರಿದ್ದೆ.ಅಲ್ಲಿಯೂ ನಾನು ಕೊನೆ ಬೆಂಚಿನ ಹುಡುಗಿಯೇ ಆಗಿದ್ದೆ( ಹಾಗಾಗಿಯೆ ಏನೋ ಈಗಲೂ ನನಗೆ ಕಲಿಕೆಯಲ್ಲಿ ಹಿಂದೆ ಬಿದ್ದಿರುವ ಕೊನೆ ಬೆಂಚಿನ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಪ್ರೀತಿ).
ಸುಮನ್ ಬರೆಯುತ್ತಾ ಇದ್ದ ಕಥೆ ಕವನ ಬರಹಗಳನ್ನು ಓದುತ್ತಾ ನಾನೂ ಇಂತಹ ವನ್ನು ಬರೆಯಬಲ್ಲೆ ಎಂದೆನಿಸಿ ನಾನು ನನ್ನಷ್ಟಕ್ಕೆಸಣ್ಣ ಪುಟ್ಟ  ಕಥೆ ಕವನ ಲೇಖನ  ಬರೆದು ಯಾರಿಗೂ ತೋರಿಸದೆ ನನ್ನೊಳಗೆ ಅಡಗಿಸಿ ಇಟ್ಟಿದ್ದೆ.ಅದನ್ನು ಬೇರೆಯವರಿಗೆ ಅಥವಾ ಸ್ನೇಹಿತೆಯರಾದ ವೀಣಾ,ಪೂರ್ಣಿಮಾ, ಸುಮನ್ ಗೆ ತೋರಿಸುವಷ್ಟು ಆತ್ಮವಿಶ್ವಾಸ ನನ್ನಲ್ಲಿ ಇರಲಿಲ್ಲ. ತನ್ನ ಬರವಣಿಗೆಯ ಕಾರಣಕ್ಕೆ ಗಮನ ಸೆಳೆವ ವ್ಯಕ್ತಿತ್ವ ಹೊಂದಿದ್ದ ಸುಮನ್ ಬರೆಯಲು ನನಗೆ ಪ್ರೇರಣೆಯಾಗಿದ್ದಳು.ಅವಳ ಬಗ್ಗೆ ಒಳಗಿನಿಂದ ಕಾಡುತ್ತಿದ್ದ ಮತ್ಸರ ಕೂಡ ಇದಕ್ಕೆ ಕಾರಣವಾಗಿರಬಹುದು ಎಂದು ನನಗೆ ಈಗ ಅನಿಸುತ್ತದೆ.ಸುಮನ್ ಸಿರಿವಂತರ ಮನೆಯ ಜಾಣ ಹುಡುಗಿಯಾಗಿದ್ದರೂ ಯಾವುದೇ ಅಹಂಕಾರ ಅವಳಿಗಿರಲಿಲ್ಲ .ಕಲಿಕೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಅತ್ಯುತ್ಸಾಹದಿಂದ ಭಾಗವಹಿಸುತ್ತಿದ್ದಳು.ಅವಳಿಗೆ ಸಿಕ್ಕ ಬಹುಮಾನ,ಮನ್ನಣೆಗಳು ನನಗೂ ಏಕಪಾತ್ರಾಭಿನಯ,ಭಾಷಣ ಮೊದಲಾದವುಗಳಲ್ಲಿ ಭಾಗವಹಿಸಿ ಬಹುಮಾನ ಪಡೆಯಲು ಪ್ರೇರಣೆಯಾಯಿತು.
ಮುಂದೆ ಸುಮನ್ ದೊಡ್ಡ ಪತ್ರಕರ್ತೆಯಾಗಬಹುದು ಇಲ್ಲವೇ ತುಂಬಾ ಓದಿ ಒಳ್ಳೆಯ ಕೆಲಸ ಪಡೆದು ಉನ್ನತ ಸ್ಥಾನಮಾನವನ್ನು ಪಡೆಯಬಹುದು ಎಂದೇ ನಾವೆಲ್ಲರೂ ಊಹಿಸಿದ್ದೆವು.
ಆದರೆ ಬದುಕು ನಾವಂದುಕೊಂಡಂತೆ ಇರುವುದಿಲ್ಲ. ಅವಳಿಗೆ ಮೊದಲ ವರ್ಷ ಪದವಿ  ಪರೀಕ್ಷೆ ಮುಗಿಯುತ್ತಿದ್ದಂತೆ ದೊಡ್ಡ ಕಾಫಿ ಎಸ್ಟೇಟ್ ಉದ್ಯಮಿ ಜೊತೆಗೆ ಮದುವೆಯಾಯಿತು. ಮುಂದೆ ರೆಗುಲರ್ ಆಗಿ ಓದು ಮುಂದುವರಿಸಲಾಗಲಿಲ್ಲ .ಖಾಸಗಿಯಾಗಿ ಓದಿರಬಹುದೇನೋ ಗೊತ್ತಿಲ್ಲ, ನಂತರ ಅವಳ ಕಥೆ ಕವನಗಳು ಬರಹಗಳು ಪ್ರಕಟವಾಗಿದೆಯೋ ಇಲ್ಲವೋ ನನಗೆ ತಿಳಿಯದು ಆದರೂ ಅವಳಿಗೆ ಹೆಚ್ಚೇನು ಬರೆಯಲಾಗಿಲ್ಲ ಎಂದು ಅನಂತರ ತಿಳಿಯಿತು. ಅವಳ ಮದುವೆಯಾದ ಕೆಲ ತಿಂಗಳಲ್ಲಿ ಪೂರ್ಣಿಮಾ ಕೂಡ ಮದುವೆಯಾಗಿ ಶ್ರೀಮಂತರ ಮನೆ ಸೇರಿದಳು‌ .ನಂತರ ಎರಡನೇ ವರ್ಷ ಪೂರ್ವ ಸಿದ್ದತಾ ಪರೀಕ್ಷೆ ಆಗುತ್ತಿದ್ದಂತೆ ನನಗೂ ಮದುವೆಯಾಯಿತು, ನಾನು ವಿವಾಹಾನಂತರವೂ ಮನೆ ಮಂದಿ ಸಮಾಜವನ್ನು ಎದುರು ಹಾಕಿಕೊಂಡು ಓದಿದೆ..ಬಿಎಸ್ಸಿ ‌ಮುಗಿಯುತ್ತಲೇ ವಿಜ್ಞಾನ ವನ್ನು ಬಿಟ್ಟು ಸಂಸ್ಕೃತ ಎಂಎ ಗೆ ಸೇರಿ ಮತ್ತೆ ಮೊದಲ ಬೆಂಚಿನ ವಿದ್ಯಾರ್ಥಿನಿಯಾಗಿ ಮೊದಲ ರ‌್ಯಾಂಕ್ ಪಡೆದು ನಂತರದ ದಿನಗಳಲ್ಲಿ ಉಪನ್ಯಾಸಕಿಯಾದೆ.
ಎಷ್ಟೋ ವರ್ಷಗಳ ನಂತರ ಉಜಿರೆಯಲ್ಲಿ ವಿಶ್ವ ತುೞು ಸಮ್ಮೇಳನದಲ್ಲಿ ಭಾಗವಹಿಸಲು ಹೋದವಳು ನಾನಿದ್ದ ಮೆಸ್ ಗೂ ಹೋಗಿದ್ದೆ.ಅವರ ಮೂಲಕ ಸುಮನ್ ಗೆ ಕ್ಯಾನ್ಸರ್ ಬಂದಿದ್ದು ತಿಳಿದು ಫೋನ್ ಮಾಡಿ ಮಾತಾಡಿದ್ದೆ.ಆಗ ಅವಳಿಗೆ ಮೊದಲಿಗೆ ಬ್ರೆಸ್ಟ್ ಕ್ಯಾನ್ಸರ್ ಬಂದು ಗುಣವಾಗಿ ಮತ್ತೆ ಎಲುಬಿನಲ್ಲಿ ಕ್ಯಾನ್ಸರ್ ಕಾಣಿಸಿಕೊಂಡಿತ್ತು‌.ಅವಳಿಗೆ ಮಕ್ಕಳಾಗದ ಕಾರಣ ಒಂದು ಮಗುವನ್ನು ದತ್ತು ಪಡೆದು ಸಾಕುತ್ತಿದ್ದು ಆ ಮಗುವಿಗೆ ಮೂರು ನಾಲ್ಕು ವರ್ಷ ಅಗಿದೆ ಎಂದು ತಿಳಿಸಿದ್ದಳು.ತುಂಬಾ ನಿರಾಶೆಯಲ್ಲಿದ್ದ ಅವಳಿಗೆ ಏನೆಂದು ಧೈರ್ಯ ಹೇಳಬೇಕೋ ನನಗೂ ಗೊತ್ತಾಗಲಿಲ್ಲ. ಆದರೂ ನಾವು ಎಷ್ಟು ಸಮಯ ಬದುಕುತ್ತೇವೆ ಎಂಬುದು ಮುಖ್ಯವಲ್ಲ ಹೇಗೆ ಬದುಕಿದ್ದೇವೆ ಹೇಳುವುದು ಮುಖ್ಯ. ಯಾರ ಆಯುಷ್ಯ ಕ್ಕೂ ಗ್ಯಾರಂಟಿ ಇಲ್ಲ,ಸಾಯಲು ಕ್ಯಾನ್ಸರ್ ಇರಬೇಕೆಂದೇನೂ ಇಲ್ಲ .ರಸ್ತೆ ಆಕ್ಸಿಡೆಂಟ್ ನಲ್ಲು ಜನರು ಸಾಯುತ್ತಾರೆ.ಏನೂ ಸಮಸ್ಯೆ ಇಲ್ಲದೆ ಇರುವ ಜನರೂ ಇದ್ದಕ್ಕಿದ್ದಂತೆ ಕುಸಿದು ಕುಳಿತು ಸಾಯುತ್ತವೆ. ಹೃದಯ ಕಾಯಿಲೆ, ಏಡ್ಸ್ ,ಕ್ಯಾನ್ಸರ್ ನಂತ ರೋಗಗಳು ಬಂದರೂ ನೂರು ವರ್ಷ ಬದುಕಿದವರು ಇದ್ದಾರೆ.ನೀನು ಸಾಧ್ಯವಾದರೆ ಪುಸ್ತಕ ಪ್ರಕಟಿಸು ಎಂದು ಹೇಳಿ ಧೈರ್ಯ ಹೇಳಿದ್ದೆ.ಇದಾಗಿ ಕೆಲವು ತಿಂಗಳ ನಂತರ ಕ್ಯಾನ್ಸರ್ ಗುಣಮುಖ ವಾಗಿದೆ, ಎರಡು ಪುಸ್ತಕ ಪ್ರಕಟಿಸಲು ಸಿಧ್ದ ಮಾಡುತ್ತಿದ್ದೇನೆ,ಪ್ರಕಟವಾದ ಮೇಲೆ ಕಳಹಿಕೊಡುತ್ತೇನೆ ಎಂದು ನನ್ನ ವಿಳಾಸ ಪಡೆದುಕೊಂಡಿದ್ದಳು.
ಅದಾಗಿ ಕೆಲ ತಿಂಗಳ ನಂತರ ಅವಳ ಸಾವಿನ ದಾರುಣೆ ವಾರ್ತೆ ಸಿಕ್ಕಿ ಮನಸ್ಸು ಭಾರವಾಗಿ ಬಿಕ್ಕಿ ಬಿಕ್ಕಿ ಅತ್ತಿದ್ದೆ.ಅವಳಿಗೆ ಮತ್ತೆ ಮೆದುಳಿಗೆ ಕ್ಯಾನ್ಸರ್ ಹರಡಿತಂತೆ. ಯಮರಾಯ ಇಂತಹ ಪ್ರತಿಭಾನ್ವಿತೆ ಸ್ವರ್ಗದಲ್ಲಿರಲಿ ಎಂದು ಎಳೆದೊಯ್ದು ಸ್ವರ್ಗ ಕ್ಕೆ ಸೇರಿಸಿಬೇಕು. ಅವಳ ಎರಡು ಪುಸ್ತಕಗಳು ಅವಳಿದ್ದಾಗಲೇ ಪ್ರಕಟವಾಗಿವೆ ಎಂದು ಸ್ನೇಹಿತೆ ವಿದ್ಯಾ ತಿಳಿಸಿದ್ದರು.

ಅವಳ ನೇತೃತ್ವದಲ್ಲಿ ನಾವು ಕಾಲೇಜು ಡೇಯಲ್ಲಿ "ನೋಡವಳಂದಾವಾ ಮುತ್ತಿನ ಮಾಲೆ ಚಂದಾವಾ" ಹಾಡಿಗೆ ಸಮೂಹ ನೃತ್ಯ ಮಾಡಿದ್ದೆವು‌. ಅವಳನ್ನು ಹೇಗೆ ತಾನೇ ಮರೆಯಲಿ?
ಒಂದು ದಿನ ಸಂಜೆ  ಅವಳು ಬೇಕರಿಯಿಂದ ಪಪ್ಸ್ ತಂದು ತಿನ್ನೋಣವಾ ಎಂದು ಕೇಳಿದಳು.ಹಾಗೆಂದರೇನು ಎಂದು ನಾವು ಕೇಳಿದೆವು.ಅದು ಬ್ರೆಡ್ ಒಳಗಡೆ ಪಲ್ಯ ಹಾಕಿ ಹುರಿದು ಮಾಡುತ್ತಾರೆ.ತುಂಬಾ ರುಚಿಯಿರುತ್ತದೆ ಎಂದು ಹೇಳಿದಳು.ಹಾಗೆ ನಾವೆಲ್ಲಾ ಉಜಿರೆ ಪೇಟೆಗೆ ಬಂದು ಅಲ್ಲಿದ್ದ ಒಂದೇ ಒಂದು ಬೇಕರಿಯಲ್ಲಿ ಪಪ್ಪ್ ಬೇಕೆಂದು ಕೇಳಿದೆವು‌. ಹಳ್ಳಿಯ ಬೇಕರಿ ಮಾಲಕನಿಗೆ ಪಪ್ಸ್ ದು ಹೆಸರು ಕೂಡ ಕೇಳಿ ಗೊತ್ತಿರಲಿಲ್ಲ.! ವರು ನಾವು ಕೇಳಿದ ವಸ್ತುವೇನೆಂದು ತಿಳಿಯದೆ ಮಿಕ ಮಿಕ ನೋಡಿದ್ದರು! ಅಲ್ಲಂದ ನಾನು ಪಪ್ಸ್ ತಿನ್ಬಲೇ ಬೇಕೆಂದು ಕೊಂಡಿದ್ದೆ.ಇದಾಗಿ ಸುಮಾರು ಒಂದು ವರ್ಷದ ನಂತರ ನನಗೆ ಮದುವೆಯಾಯಿತು, ಪ್ರಸಾದ್ ಆಗಲೂ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು ನಾನು ರಜೆಯಲ್ಲಿ ಬೆಂಗಳೂರಿಗೆ ಬಂದೆ.ಆಗ ಪ್ರಸಾದ್ ನಿನಗೇನು  ತಿನ್ನಲು ತರಬೇಕು ಎಂದು  ಕೇಳಿದಾಗ ನಾನು ಪಪ್ ಬೇಕೆಂದು ಹೇಳಿದೆ! ಆರಂಭದಲ್ಲಿ ಅವರಿಗೆ ನಾನೇನು ಕೇಳುತ್ತಿದ್ದೇನೆ ಗೊತ್ತಾಗಲಿಲ್ಲ, ನಂತರ ಸುಮನ್ ಹೇಳಿದ್ದನ್ನು ನೆನಪಿಸಿಕೊಂಡು ಬ್ರೆಡ್ ಒಳಗೆ ಪಲ್ಯ ಹಾಕಿ ಹುರಿದ ತಿಂಡಿ ಎಂದು ವಿವರಿಸಿದೆ,ಓ ಅದಾ ಅದು ಪಪ್ಸ್ ಮಾರಾಯ್ತಿ ಈಗ ತಂದೆ ಎಂದು ಹೇಳಿ ಐದು ನಿಮಿಷದಲ್ಲಿ ಬೇಕರಿಯಂದ ತಂದು ಕೊಟ್ಟರು‌ಹೌದು ಸುಮನ್ ಹೇಳಿದ್ದು ನಿಜ ಅದು ತುಂಬಾ ರುಚಿಕರ, ನನಗೆ ಈಗಲೂ ಅದು ತುಂಬಾ ಇಷ್ಟ!

Tuesday, 14 November 2017

ಬದುಕೆಂಬ ಬಂಡಿಯಲಿ 2 ಮುನಿಯಮ್ಮ

ಮುನಿಯಮ್ಮನ ಕಥೆಯಲ್ಲ ವ್ಯಥೆ ಇದು

ಪರೀಕ್ಷಾ ಕಾರ್ಯ ಮುಗಿಸಿ ನಾನು ಮತ್ತು ನನ್ನ ಸಹೋದ್ಯೋಗಿಗಳಾದ ಶ್ರೀಶ ,ಗೀತಾ ಬೇಗನೆ ಬಸ್ ನಿಲ್ದಾಣಕ್ಕೆ ಬಂದು ಆಗಷ್ಟೇ ಹೊರಟು ನಿಂತ ಬಸ್ ಗೆ ಹತ್ತಿದೆವು.ಮುಂದೆ ಸೀಟ್ ಇಲ್ಲದ ಕಾರಣ ಬಸ್ ನ ಹಿಂದಿನ ಸೀಟ್ ಗಳಲ್ಲಿ ಕುಳಿತಿದ್ದೆವು.ಜಾಲ ಹಳ್ಳಿ ಕ್ರಾಸ್ ಸಮೀಪ ಬಂದಾಗ ಮುಂದೆ ಒಂದೆರಡು ಸೀಟ್ ಗಳು ಖಾಲಿಯಾದವು.ನಾನು ಮುಂದೆ ಬಂದು ಒಬ್ಬ ಅಜ್ಜಿಯ ಪಕ್ಕ ಖಾಲಿ ಸೀಟಿನಲ್ಲಿ ಕುಳಿತೆ.ಅಜ್ಜೆ ಕಡೆ ನೋಡಿ  ನಗು ಬೀರಿದೆ.ಅಜ್ಜಿ ಮಾತನಾಡಲು ಶುರು ಮಾಡಿದರು.ಅವರ ಹೆಸರು ಮುನಿಯಮ್ಮ .ಗಂಡ ಮಕ್ಕಳು ಯಾರೂ ಇಲ್ಲ. ಇವರ ಗಂಡನ ಹೊಲವನ್ನು ಯಾರೋ ಸಂಬಂಧಿಗಳು ಒಳಗೆ ಹಾಕಿಕೊಂಡು ಮಾರಾಟ ಮಾಡಿದ್ದಾರೆ.ಕೂಲಿ‌ಕೆಲಸ ಮಾಡಿ ಬದುಕುತ್ತಾ ಇದ್ದರು.ಈಗ ವಯಸ್ಸಾಗಿ ಕೂಲಿ ಕೆಲಸ ಮಾಡಲು ಶಕ್ತಿ ಇಲ್ಲ‌.ಇದರಿಂದಾಗಿ ಈಗ ಇವರಿಗೆ ಊಟಕ್ಕೆ ಗತಿಯಿಲ್ಲದಾಗಿ ಭಿಕ್ಷೆ ಬೇಡುತ್ತಾರಂತೆ.ಏನೋ ಚಿಕಿತ್ಸೆ ಗಾಗಿ ನೆಲಮಂಗಲ ದಿಂದ ಎಂಟು‌ಮೈಲು ದೂರದ ಎಣ್ಸಿಗೇರಿ ಯಿಂದ ಬೆಂಗಳೂರಿಗೆ ಬಸ್ ನಲ್ಲಿ ಹೋಗುತ್ತಿದ್ದೇನೆ ಎಂದು ಹೇಳಿ ಕಣ್ಣೀರು ಹಾಕಿದರು.ನನ್ನ ಪರ್ಸ್ ನಲ್ಲಿ ಇದ್ದ ಐನೂರು ರುಪಾಯಿ ದುಡ್ಡು ಕೊಟ್ಟು ಇನ್ನೇನಾದರು ಸಹಾಯ ಬೇಕಾದರೆ ಕಾಲೇಜಿಗೆ ಬರುವಂತೆ ಹೇಳಿ ಒಂದು ಕಾಗದದಲ್ಲಿ ನನ್ನ ಮೊಬೈಲ್ ನಂಬರ್ ಕಾಲೇಜು ವಿಳಾಸ ಬರೆದು ನೀಡಿದೆ.
ಇಂತಹ ಎಷ್ಟು ಮುನಿಯಮ್ಮರು ನಮ್ಮ ದೇಶದಲ್ಲಿ ಒಂದು ಹೊತ್ತಿನ ಊಟಕ್ಕಿಲ್ಲದೆ ಒದ್ದಾಡುತ್ತಿದ್ದಾರೋ ಏನೋ,ದೇವರೇ ಬಲ್ಲ

Sunday, 12 November 2017

ದೊಡ್ಡವರ ದಾರಿ 24ಅನಾಥ ಮಕ್ಕಳ ಪೊರೆವ ತಾಯಿ ಪದ್ಮಾ ಭಟ್ ©ಡಾ.ಲಕ್ಷ್ಮೀ ಜಿ ಪ್ರಸಾದ

 ದೊಡ್ಡವರ ದಾರಿ24 - ಅನಾಥ ಮಕ್ಕಳ ಪೊರೆವ ತಾಯಿ ಪದ್ಮಾ ಭಟ್ ©ಡಾ ಲಕ್ಷ್ಮೀ ಜಿ ಪ್ರಸಾದ




ಸಾಲು ಸಾಲು  ಸೈಟ್ ಗಳು, ಮನೆಯ ಮೇಲೆ ಮನೆ ಕಟ್ಟುಸುತ್ತಾ ಈ ಜನ್ಮದಲ್ಲಿ ಮಾತ್ರವಲ್ಲ ಮುಂದಿನ ಹತ್ತು ಜನ್ಮದಲ್ಲೂ ಉಂಡು ಮುಗಿಯದಷ್ಟು ಸಂಪತ್ತನ್ನು ಅಡ್ಡ ಮಾರ್ಗದಲ್ಲಿ ಅಥವಾ ನೇರ ಮಾರ್ಗದಲ್ಲಿ ಗಳಿಸಿ ಇನ್ನೂ ಇನ್ನೂ ಸಾಲದು  ಸಾಲದೆಂದು ತುಂಬಿಡುವ ಜನರೇ ತುಂಬಿದ ಸ್ವಾರ್ಥಿಗಳ ಜಗತ್ತಿನಲ್ಲಿ , ತಮ್ಮ ಮನೆ  ಸೈಟನ್ನು ಮಾರಾಟ ಮಾಡಿ ಅನಾಥ ಮಕ್ಕಳನ್ನು ವೃದ್ಧರನ್ನು ಪೊರೆಯುವ ಮಹತ್ಕಾರ್ಯ ಮಾಡುತ್ತಿರುವ ಪದ್ಮಾ ಭಟ್ ಬಲು ಎತ್ತರದ ಸ್ಥಾನದಲ್ಲಿ ನಿಲ್ಲುತ್ತಾರೆ

ಫೇಸ್ ಬುಕ್ ನನಗೆ ಹೊರ ಜಗತ್ತಿನ ಅನೇಕ ಮಹನೀಯರನ್ನು ಪರಿಚಯಿಸಿದೆ.ಗುಡ್ಡೆಯಿಂದ ಗುಡ್ಡೆ ಅಡ್ಡ ಎಂಬಂತೆ ವಿಶಿಷ್ಠವಾದ ಸಾಧನೆ ಮಾಡಿದವರ ಬಗ್ಗೆ ನನಗೆ ತಿಳಿದದ್ದು ಫೇಸ್ ಬುಕ್ ಮೂಲಕ.ಅನೇಕರು ಪೇಸ್ ಬುಕ್ ಸೇರಿದಂತೆ ಅಂತರ್ಜಾಲ ಬಳಕೆ ಬಹಳ ಕೆಡುಕುಂಟು ಮಾಡುತ್ತದೆ ಎಂದು ಹೇಳುವುದು ಕೇಳಿದ್ದೆ.ಆದರೆ ನನಗೇನೂ ಅದು ಕೆಟ್ಟದು ಎನಿಸಿಲ್ಲ ಅದೆಲ್ಲ ನಾವು ಹೇಗೆ ಬಳಕೆ ಮಾಡುತ್ತೇವೆ ಎಂಬುದರ ಮೇಲೆ ನಿಂತಿದೆ.
ಅದಿರಲಿ.ನನಗೆ ಪೇಸ್ ಬುಕ್ ಮೂಲಕ ಪರಿಚಿತರಾಗಿ‌ನಂತರ ಬಹಳ ಆತ್ಮೀಯರಾಗಿರುವ ಪದ್ಮಾ ಭಟ್ ಅವರ ಮಹತ್ತರ ಕಾರ್ಯದ ಬಗ್ಗೆ ಇಲ್ಲಿ ಹೇಳಲು ಹೊರಟಿರುವೆ.ಅಲ್ಲೊಂದು ಇಲ್ಲೊಂದು ಪತ್ರಿಕೆಗಳಲ್ಲಿ ಅನಾಥ ಮಕ್ಕಳನ್ನು ಸಾಕಿ ಬದುಕು ಕೊಟ್ಟ ಮಹನೀಯರ ಸೇವೆಯ ಬಗ್ಗೆ ಓದಿ ಅಬ್ಬಾ ಅವರು ನಿಜಕ್ಕೂ ಗ್ರೇಟ್ ಎಂದು ಕೊಳ್ಳುತ್ತೇವೆ.ಆದರೆ ನಮ್ಮ ಸುತ್ತ ಮುತ್ತಲೂ ಅಂತಹ ಕೆಲವರು ಇದ್ದಾರೆ.ಅಂತಹವರ ಸಾಧನೆಯನ್ನು ಗುರುತಿಸಲು ಆಂತರ್ಯದ ಕಣ್ಣು ತೆರೆದಿರಬೇಕು ಅಷ್ಟೇ.
ಬೆಂಗಳೂರಿನ ನಾಗದೇವನಹಳ್ಳಿಯಲ್ಲಿ ಒಂದು  ಚಿಕ್ಕ ಮನೆಯಲ್ಲಿ ವಾಸಿಸುವ ಪದ್ಮಾ ಭಟ್ ಹೆಚ್ಚಾಗಿ ಇರುವುದು ಅವರೇ ಸ್ಥಾಪಿಸಿರುವ  ಸತ್ಯ ಭಾರತಿ  ಆಶ್ರಮದಲ್ಲಿ.
ಪಿಯುಸಿ ಆಗಿ  telecommunicationsಡಿಪ್ಲೋಮಾ ಮುಗಿಸಿ ಬೆಂಗಳೂರಿಗೆ ಬಂದು ಸಣ್ಣ ವಯಸಿನಲ್ಲಿಯೇ ಸ್ವಂತ ಇಂಡಸ್ಟ್ರಿ ಪ್ರಾರಂಭ ಮಾಡಿದ ಪದ್ಮಾ ಭಟ್ ಸಾಗಿದ ಹಾದಿ ಕಲ್ಲುಮುಳ್ಳಿನದು.ಆದರೆ ನೀಡಿದ್ದು ಅಮೃತ .
ಎಲ್ಲಾ ಸವಾಲುಗಳನ್ನು ಎದುರಿಸುತ್ತಾ ಅವರು ಮಾಡಿದ ಮಹತ್ಕಾರ್ಯ ಅತ್ಯಂತ ಶ್ಲಾಘನೀಯ. ಚಿಕ್ಕಂದಿನಲ್ಲಿ ತಮ್ಮ ಓರ್ವ ತಂಗಿಯ ಅಸಹಜ ಸಾವು,ಹಾಗೂ ತಂಗಿಯರಿಗೆ  ಬೇರೆಯವರ ಮನೆಯಲ್ಲಿದ್ದು ಓದಬೇಕಾಗಿ ಬಂದ ಸಂದರ್ಭದಲ್ಲಿ ಕಾಡಿದ ಅಭದ್ರತೆ ಅವರಿಗೆ ಈ ಕಾರ್ಯ ಮಾಡಲು ಪ್ರೇರಣೆ ಎಂದು ಅವರು ಹೇಳುತ್ತಾರೆ.  ಬೇರೆ ಬಡ ಹೆಣ್ಣು ಮಕ್ಕಳಿಗೆ ಅಭದ್ರತೆ ಕಾಡಬಾರದೆಂಬ ಸದುದ್ದೇಶದಿಂದ ಅವರು ಅನಾಥ ಮಕ್ಕಳ ಆಶ್ರಮ ತೆರೆದಿದ್ದಾರೆ
ಬೆಂಗಳೂರಿನ ಚಳ್ಳೆಕೆರೆಯಲ್ಲಿ  ಸುಮಾರು ನಲುವತ್ತು ಅನಾಥ ಬಡ ಮಕ್ಕಳಿಗೆ ಉಚಿತ  ಊಟ ವಸತಿ  ಶಿಕ್ಷಣ ಒದಗಿಸುವ ಮಹತ್ಕಾರ್ಯ ಮಾಡುತ್ತಿದ್ದಾರೆ. ಜೊತೆಗೆ ಕೆಂಗೇರಿಯ ನಾಗದೇವನ ಹಳ್ಳಿಯಲ್ಲಿ ಒಂದು ಉಚಿತ ವೃದ್ಧಾಶ್ರಮವನ್ನು ನಡೆಸುತ್ತಿದ್ದಾರೆ.ಇಲ್ಲಿ ಒಂಬತ್ತು ಜನ ಹಿರಿಯರು ಇದ್ದಾರೆ.
ಇಷ್ಟಕ್ಕೂ ಪದ್ಮ ಭಟ್ ಕೋಟ್ಯಧಿಪತಿಯಲ್ಲ ,ದುಡ್ಡು ಹೆಚ್ಚಾಗಿ ಅಥವಾ ಕಪ್ಪು ಹಣವನ್ನು ಬಿಳಿ ಮಾಡಲು ಆಶ್ರಮ ತೆರೆದವರಲ್ಲ.ಯಾವುದೇ ಸರಕಾರದ ಸೌಲಭ್ಯ ಪಡೆಯುವುದಕ್ಕಾಗಿಯೂ ಇದನ್ನು ಮಾಡಿಲ್ಲ .
ಅವರ ಆಂತರ್ಯದ ಉದಾರ ಹೃದಯ ಬಡ ಮಕ್ಕಳ ಕಡೆಗಿರುವ ಒಲವೇ ಅವರನ್ನು ಈ ಮಹತ್ಕಾರ್ಯದಲ್ಲಿ ತೊಡಗಿಸಿದೆ.
ಇವರಿಗೆ ದಿನಕ್ಕೆ ಕಡಿಮೆ ಎಂದರೆ ಹನ್ನೆರಡು ಸಾವರ ರುಗಳಷ್ಟು ಖರ್ಚು ಬರುತ್ತದೆ.ಕೆಲವು ದಾನಿಗಳು ಆಗಾಗ ತಮ್ಮ ಮಕ್ಕಳ ಹುಟ್ಟು ಹಬ್ಬದ ಸಂದರ್ಭದಲ್ಲಿ ಅಥವಾ ಇನ್ ಯಾವುದೋ ಸಂದರ್ಭದಲ್ಲಿ ಇಲ್ಲಿನ ಮಕ್ಕಳಿಗೆ ಅನ್ನದಾನದ ಕಾರ್ಯ ಮಾಡುತ್ತಾರೆ.ಆದರೆ ಬೇರೆ ಯಾವುದೇ ರೀತಿಯ ಸಹಾಯ ಧನ ಸಿಗದೆ ಇರುವ ಕಾರಣ ಪದ್ಮ ಭಟ್ ಅವರೇ ಈ ಎಲ್ಲ ಖರ್ಚನ್ನು ನಿಭಾಯಿಸುತ್ತಾರೆ.ಇದಕ್ಕಾಗಿ ತನ್ನ ಒಂದು ಮನೆ ಮತ್ತು ಎರಡು ಸೈಟುಗಳನ್ನು ಮಾರಾಟ ಮಾಡಿದ್ದಾರೆ.
ಸೈಟಿನ‌ಮೇಲೆ ಸೈಟ್ ಮನೆಯ ಮೇಲೆ ಮನೆ ಕಟ್ಟುಸುತ್ತಾ ಈ ಜನ್ಮದಲ್ಲಿ ಮಾತ್ರವಲ್ಲ ಮುಂದಿನ ಹತ್ತು ಜನ್ಮದಲ್ಲೂ ಉಂಡು ಮುಗಿಯದಷ್ಟು ಸಂಪತ್ತನ್ನು ಅಡ್ಡ ಮಾರ್ಗದಲ್ಲಿ ಅಥವಾ ನೇರ ಮಾರ್ಗದಲ್ಲಿ ಗಳಿಸಿ ಇನ್ನೂ ಇನ್ನೂ ಸಾಲದು  ಸಾಲದೆಂದು ತುಂಬಿಡುವ ಜನರೇ ತುಂಬಿದ ಸ್ವಾರ್ಥಿಗಳ ಜಗತ್ತಿನಲ್ಲಿ , ತಮ್ಮ ಮನೆ  ಸೈಟನ್ನು ಮಾರಾಟ ಮಾಡಿ ಅನಾಥ ಮಕ್ಕಳನ್ನು ವೃದ್ಧರನ್ನು ಪೊರೆಯುವ ಮಹತ್ಕಾರ್ಯ ಮಾಡುತ್ತಿರುವ ಪದ್ಮಾ ಭಟ್ ಬಲು ಎತ್ತರದ ಸ್ಥಾನದಲ್ಲಿ ನಿಲ್ಲುತ್ತಾರೆ( ಲತಿಕಾ ಭಟ್ ಎಂಬ ಇನ್ನೋರ್ವ ಫೇಸ್ ಬುಕ್ ಸ್ನೇಹಿತರು ಕೂಡ ಇಂತಹ ಮಹತ್ಕಾರ್ಯ ಆರಂಭಿಸಿದ್ದಾರೆ ).ಅವರ ಈ ಮಹತ್ಕಾರ್ಯ ದಲ್ಲಿ ನಾವೂ ಸ್ವಲ್ಪ ಅಳಿಲ ಸೇವೆ ಮಾಡಿ ಕೃತಾರ್ಥರಾಗೋಣ ಏನಂತೀರಾ ?
(ಸ್ನೇಹಿತರೇ.. ನಮ್ಮ ಮಕ್ಕಳ ಆಶ್ರಮದ ಕಟ್ಟಡದ ಮುಂಭಾಗದ 1000 ಚ ಅಡಿ ವಿಸ್ತೀರ್ಣದ ಹಾಲ್ ಪ್ರಸ್ತುತ ಶೀಟ್ ಹಾಸಿದೆ . ಪೂರ್ಣವಾಗಿ ಟೇರೆಸ್ ಮಾಡಬೇಕಿದ್ದರೆ ಮೂವತ್ತು ನಲವತ್ತು ಲಕ್ಷ ಖರ್ಚಿದೆ.
ನಿಮ್ಮಲ್ಲಿ ಯಾರಿಗಾದರೂ ಈ ಪುಣ್ಯಕಾರ್ಯದಲ್ಲಿ ಭಾಗಿಯಾಗುವ ಮನಸ್ಸಿದ್ದಲ್ಲಿ ಈ ಕೆಳಗಿನ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಬಹುದು. ಖುದ್ದಾಗಿ ಭೇಟಿ ನೀಡಿಯೂ ಸಹಾಯ ಮಾಡಬಹುದು. ನಿಮ್ಮ ದೇಣಿಗೆಗೆ ಆದಾಯ ತೆರಿಗೆ ಕಾಯ್ದೆ 80g ಪ್ರಕಾರ ತೆರಿಗೆ ವಿನಾಯಿತಿ ಇದೆ.
ನಿಮ್ಮ ಸಹಕಾರದ ನಿರೀಕ್ಷೆಯಲ್ಲಿ.
..ಪದ್ಮಾ ಭಟ್

Sri Satya Sai Mahila Charitable Trust (R)
SB a/c no..520101021856601
IFSC Code: CORP0000744
Corporation Bank, KS Town Branch
Bangalore-560060.
Web: www.srisaimahila.org
Email: smct189@gmail.com

Mobile: 9986014189/9844540380 Sri Satya Bharathi Ashrama vidyalaya, behind Ekadantha layout, Saibaba temple road, Challagatta)
 http://shikshanaloka.blogspot.in/2017/11/24.html?m=1




)

Saturday, 4 November 2017

ದೊಡ್ಡವರ ದಾರಿ 23 ಜೀವನ್ಮುಖಿ ಗೆಳತಿ ನಿರ್ಮಲ © ಡಾ.ಲಕ್ಷ್ಮೀ ಜಿ ಪ್ರಸಾದ

ಬದುಕಿನಲ್ಲಿ ನಾವು ಬೇರೆ ಬೇರೆ ಕಾರಣಗಳಿಗಾಗಿ ಹಲವಾರು ಜನರನ್ನು ಭೇಟಿ ಮಾಡುತ್ತೇವೆ.ಅಂತೆಯೇ ನನ್ನ ಮತ್ತು ನಿರ್ಮಲಾ ಭೇಟಿ ಆಕಸ್ಮಿಕ. ನಿರ್ಮಲಾ ಸುಮಾರಾಗಿ ನನ್ನದೇ ವಯಸ್ಸಿನ ಮಹಿಳೆ .ಆದರೆ ನನಗಿಂತ ಹೆಚ್ಚು ಅನುಭವ ಇದ್ದವರು.ಯಾರದೇ ಬೆಂಬಲ ಇಲ್ಲದೇ ಇದ್ದರೂ ಕೂಡ ಸಾಲ ಮಾಡಿ ಕಂಪ್ಯೂಟರ್ ತೆಗೆದು ಡಿಟಿಪಿ ಮಾಡಿಕೊಡುವ ಸ್ವ ಉದ್ಯೋಗ ಮಾಡುತ್ತಿದ್ದರು.ಈಗ ಅವರು ಮಿಥಿಕ್ ಸೊಸೈಟಿಯ ಉದ್ಯೋಗಿಯಾಗಿದ್ದಾರೆ.ಬಿಡುವಿನ ವೇಳೆಯಲ್ಲಿ ಡಿಟಿಪಿ ಮಾಡಿ ಕೊಡುತ್ತಾರೆ.ಈಗಿವರು ನನಗೆ ಒಳ್ಳೆಯ ಸ್ನೇಹಿತೆ.
ನಾವು ಆಗಷ್ಟೇ ಬೆಂಗಳೂರಿಗೆ ಮನೆ ಬದಲಾಯಿಸಿದ್ದೆವು.ಅದೇ ಸಮಯದಲ್ಲಿ ನನಗೆ ಬೆಂಗಳೂರಿನ ಬಿಎಂಶ್ರೀ ಪ್ರತಿಷಟಾನದ ಮೂಲಕ ಹಂಪಿ ಯುನಿವರ್ಸಿಟಿ ಯಲ್ಲಿ ಪಿಎಚ್ ಡಿ ಅಧ್ಯಯನಕ್ಕೆ ಅವಕಾಶ ದೊರೆತಿತ್ತು.ಆಗ ನನಗೆ ಕಂಪ್ಯೂಟರ್ ನ ಗಂಧ ಗಾಳಿ ಗೊತ್ತಿರಲಿಲ್ಲ. ನಮ್ಮ ಪ್ರಬಂಧವನ್ನು ಡಿಟಿಪಿ ಯಾರಲ್ಲಿ ಮಾಡಿಸುವುದು ಹೇಳಿ ಆಲೋಚಿಸುವಾಗ ಬಿಎಂಶ್ರೀ ಪ್ರತಿಷ್ಠಾನದಲ್ಲಿ ಉದ್ಯೋಗಿಯಾಗಿದ್ದ ರಾಜಮ್ಮ ಅವರು ನನಗೆ ನಿರ್ಮಲಾರನ್ನು ಪರಿಚಯಿಸಿದರು.
ನಿರ್ಮಲಾ ಅದಾಗಲೇ ಅನೇಕರ‌ ಪಿಎಚ್ ಡಿ ಪ್ರಬಂಧಗಳನ್ನು ಡಿಟಿಪಿ ಮಾಡಿದ್ದರು.ಹಾಗಾಗಿ ಸಂಶೋಧನಾ ವಿದಿವಿಧಾನಗಳ ಬಗ್ಗೆ ಅವರಿಗೆ ಸಾಕಷ್ಟು ತಿಳುವಳಿಕೆ ಇತ್ತು.ಅವರು ಇತಿಹಾಸ ಅಕಾಡೆಮಿಯ ಸಕ್ರಿಯ ಸದಸ್ಯೆಯಾಗಿದ್ದು ಅವರಿಗೆ ಇತಿಹಾಸಕ್ಕೆ ಸಂಬಂಧಿಸಿದ ಸಂಶೋಧನಾ ವಿಚಾರಗಳ ಬಗ್ಗೆ ತುಂಬಾ ತಿಳುವಳಿಕೆ ಇತ್ತು
ಪಿಎಚ್ ಡಿ ಪ್ರಬಂಧಗಳನ್ನು ಡಿಟಿಪಿ ಮಾಡುವಾಗ ಫಾಂಟ್ ಸೈಜ್ ಉದ್ದ ಅಗಲಗಳ ಬಗ್ಗೆ ಅವರಿಗೆ ಗೊತ್ತಿತ್ತು.
ಅದೆಷ್ಟೋ ದಿನಗಳು ಅವರ ಮನೆಯಲ್ಲಿ ರಾತ್ರಿ ಉಳಿದುಕೊಂಡು ನನ್ನ ಪ್ರಬಂಧದ ತಿದ್ದುವಿಕೆಯ ಕಾರ್ಯವನ್ನು ನಾನು ಮಾಡಿದ್ದೆವು.ಅದರಲ್ಲೂ ನನ್ನ ಪ್ರಬಂಧ ದಲ್ಲಿ ನೂರರಷ್ಟು ಭಾವಚಿತ್ರಗಳಿದ್ದವು.ಇವನ್ನು ಫೋಟೋ ಶಾಪ್ ಮಾಡಿ ಹಾಕಲು ಅವರ ಕಂಪ್ಯೂಟರ್ ನಲ್ಲಿ ಕಷ್ಟವಾದಾಗ ಅವರ ಸ್ನೇಹಿತರಾದ ಹರಿಹರ ಶ್ರೀನಿವಾಸರ ಮನೆಗೆ ಹೋಗಿ ರಾತ್ರಿ ಇಡೀ ಕುಳಿತು ಈ ಕೆಲಸವನ್ನು ಮುಗಿಸಿದ್ದೆವು.
ನನ್ನ ಮೊದಲ ಪಿಎಚ ಡಿ ಪ್ರಬಂಧ ತುಳು ನಾಡಿನ ನಾಗ ಬ್ರಹ್ಮ ಮತ್ತು ಕಂಬಳ - ಒಂದು ವಿಶ್ಲೇಷಣಾತ್ಮಕ ಅಧ್ಯಯನ ತುಂಬಾ ಪರಿಶ್ರಮವನ್ನು ಕೇಳುವ ವಿಷಯ .ಇದಕ್ಕಾಗಿ ವ್ಯಾಪಕ ಕ್ಷೇತ್ರ ಕಾರ್ಯ ಮಾಡಬೇಕಿತ್ತು.ಕಾಲೇಜಿನ ಕೆಲಸದೊಂದಿಗೆ ಸಮಯ ಹೊಂದಾಣಿಕೆಯೂ ಸಮಸ್ಯೆಯದೇ ಆಗಿತ್ತು
ನನ್ನ ಮಾರ್ಗದರ್ಶಕರಾದ ಡಾ.ಎಸ್ ನಾಗರಾಜು ಅವರು ನನ್ನಿಂದ ಉತೃಷ್ಟ ಮಟ್ಟದ ಸಂಶೋಧನಾ ಪ್ರಬಂಧ ವನ್ನು ನಿರೀಕ್ಷಿಸುತ್ತಾ ಇದ್ದರು.ಅವರು ತುಂಬಾ ದೊಡ್ಡ ಸಂಶೋಧಕರು.ಅವರ ಮಟ್ಟಕ್ಕೆ ಏರುವುದು ನನಗೆ ಸುಲಭಸಾಧ್ಯವಾಗಿರಲಿಲ್ಲ ಅವರಿಗೆ ತೃಪ್ತಿ ಆಗದಿದ್ದರೆ ಅವರು ನನ್ನ ವಾರ್ಷಿಕ ವರದಿಗೆ ಸಹಿ ಮಾಡುತ್ತಾ ಇರಲಿಲ್ಲ. ಮೊದಲು ವರದಿಯನ್ನು ಕೈಯಲ್ಲಿ ಬರೆದು ನಿರ್ಮಲಾ ಮನೆಗೆ ಬಂದು ಡಿಟಿಪಿ ಮಾಡಿ ಗುರುಗಳ‌ಮನೆಗೆ ಹೋಗಿ ನನ್ನ ಅಧ್ಯಯನ ವನ್ನು ತಿಳಿಸಿ ಅದರ ಸಾರವನ್ನು ಬರೆದಿರುವ ವರದಿಯನ್ನು ನೀಡುತ್ತಿದ್ದೆ.ಅವರು ಅದರಲ್ಲಿ ಅನೇಕ ಬದಲಾವಣೆಗಳನ್ನು ಸೂಚಿಸುತ್ತಾ ಇದ್ದರು.ಮತ್ತೆ ನಿರ್ಮಲಾ ಮನೆಗೆ ಬಂದು ವರದಿಯನ್ನು ‌ತಿದ್ದಿ ಮತ್ತೆ ಗುರುಗಳ‌ಮನೆಗೆ ಹೋಗುತ್ತಾ ಇದ್ದೆ.ಕೆಲವೊಮ್ಮೆ ಮೂರು ನಾಲ್ಕು ಬಾರಿ ತಿದ್ದು ಪಡಿ ಆಗುತ್ತಾ ಇತ್ತು
ನನ್ನ ಮನೆಯಿಂದ ನಿರ್ಮಲಾ ‌ಮನೆಗೆ ಸುಮಾರು ಅರೇಳು‌ ಕಿಮೀ ದೂರು.ನಿರ್ಮಲಾ ‌ಮನೆಯಿಂದ  ಗುರುಗಳ ಮನೆಗೆ ಹತ್ತು ಕಿಮೀ ನಷ್ಟು ದೂರ..ನನ್ನಲ್ಲಿ ಒಂದು ಸ್ಕೂಟಿ ಇದ್ದ ಕಾರಣ ಹೇಗೋ ನಡೆಯುತ್ತಾ ಇತ್ತು
ಕೆಲವೊಮ್ಮೆ ನನಗೂ ಗುರುಗಳಿಗೂ ಅಭಿಪ್ರಾಯ ವ್ಯತ್ಯಾಸ ಬರುತ್ತಾ ಇತ್ತು.ಒಂದು ಬಾರಿ ವರದಿ ತಯಾರು ಮಾಡಿ ನಿರ್ಮಲಾ ಮನೆಗೆ ಹೊಗಿ ಡಿಟಿಪಿ ಮಾಡಿಸಿ ತಿದ್ದು ಪಡಿ ಮಾಡಲು ಬರುತ್ತೇನೆ ಎಂದು ಹೇಳಿ ಗುರುಗಳ‌ಮನೆಗೆ ಹೋಗಿದ್ದೆ  ಗುರುಗಳ ಮನೆಗೆ ಹೋದಾಗ ಕೆಲವು ತಿದ್ದು ಪಡಿ ಹೇಳಿದ್ದರು ಅದರಲ್ಲಿ ಕೆಲವನ್ನು ನಾನು ಒಪ್ಪಲು ತಯಾರಿರಲಿಲ್ಲ
ಅವರು ಹೇಳಿದಂತೆ ಬದಲಾವಣೆ ಮಾಡದಿದ್ದರೆ ಅವರು ವರದಿಗೆ ಸಹಿ ಹಾಕುವುದಿಲ್ಲ ( ವರ್ಷಕ್ಕೆ ಎರಡು ಬಾರಿ ವರದಿ ಸಲ್ಲಿಸಲು ಇದೆ)
ಹೇಗೋ ಒಂದು ಪಿಎಚ್ ಡಿ ಪದವಿ ಪಡೆಯುವ ಉದ್ದೇಶ ನನಗಿರಲಿಲ್ಲ .ನಾನು ಮಾಡಿತ್ತಿರುವ ಅಧ್ಯಯನ ಸರಿ ಇದೆಯೇ ಎಂಬುದನ್ನು ನಾನು ಡಾ.ಅಮೃತ ಸೋಮೇಶ್ವರರಲ್ಲಿ ಚರ್ಚಿಸಿ ನಂತರ ಬರೆಯಿತ್ತಾ ಇದ್ದೆ.ಹಾಗಾಗಿ ಕೆಲವು ನನ್ನದೇ ಆದ ನಿಲುವುಗಳನ್ನು ಬದಲಾಯಿಸಲು ಸಾಧ್ಯಗುವುದಿಲ್ಲ ನನಗೆ.
ಮೊದಲೇ ಕಾಲೇಜು ಕೆಲಸ ,ಆಗ ಮಗ ಚಿಕ್ಕವನಿದ್ದು ಇವನ ಓದು ಹೋಂ್ ವರ್ಕ್ ,ಜೊತೆಗೆ ಕ್ಷೇತ್ರ ಕಾರ್ಯ ಇವೆಲ್ಲದರ ನಡುವೆ ನನಗೂ ಗುರುಗಳಿಗೂ ಅಭಿಪ್ರಾಯ ವ್ಯತ್ಯಾಸ ಎಲ್ಲದರಿಂತ ಸೋತು ಸೊರಗಿ ಹೋಗಿದ್ದ ನನಗೆ ಪಿಎಚ ಡಿ ಪದವಿಯು ಬೇಡ ಏನೂ ಬೇಡ ಎನಿಸಿತ್ತು.ಗುರುಗಳಲ್ಲಿ ತಿದ್ದು ಪಡಿ ಮಾಡಿ ತರುತ್ತೇನೆ ಎಂದು ಹೇಳಿದವಳು ನಿರ್ಮಲಾ ಮನೆಗೆ ಹೋಗದೆ ಸೀದಾ ನನ್ನ ‌ಮನೆಗೆ ಬಂದು ಬರೆದ ಅಧ್ಯಯನ ದ ವರದಿಯನ್ನೆಲ್ಲಾ ಅಲ್ಲೆ ಮೆಜಿನ‌ಮೇಲೆ ಎಸೆದು ಟೇರೆಸ್ ಹತ್ತಿ ಆಕಾಶ ನೋಡುತ್ತಾ ದಿಙ್ಮೂಢಳಾಗಿ ಕುಳಿದಿದ್ದೆ.ಹಾಗೆಯೇ ಎಷ್ಟು ಹೊತ್ತು ಕುಳಿತಿದ್ದನೋ ಗೊತ್ತಿಲ್ಲ. ಪೋನ್ ರಿಂಗಾಗಿ ಇಹ ಲೋಕಕ್ಕೆ ಬಂದೆ .ನಿರ್ಮಲಾ ಪೋನ್ ಮಾಡಿ ಡಿಟಿಪಿ ಮಾಡಿಸಲು ಯಾಕೆ ಬಂದಿಲ್ಲ ಎಂದು ಕೇಳಿದರು.
ಅಯ್ಯೋ ಬಿಡಿ ನಿರ್ಮಲಾ ನಾನಿನ್ನು ಬರೋದಿಲ್ಲ ಪಿಎಚ್ ಡಿ ಮಾಡಿ ಉದ್ಧಾರ ಆಗ್ಲಿಕೆ ಏನಿದೆ ? ಜಗತ್ತಿನಲ್ಲಿ ಪಿಎಚ್ ಡಿ ಮಾಡದ ಯಾರೂ ಬದುಕುತ್ತಾ ಇಲ್ಲವಾ ? ಇತ್ಯಾದಿಯಾಗಿ ಹೇಳುತ್ತಾ ಹೋದೆ ಎಲ್ಲವನ್ನೂ ತಾಳ್ಮೆಯಿಂದ ಕೇಳಿಸಿಕೊಂಡ ಅವರು " ಎಂತ ಲಕ್ಷ್ಮೀ ಇದು ? ಈಗಾಗಲೇ ಕ್ಷೇತ್ರ ಕಾರ್ಯ ಮುಗಿದಿದೆ ಪ್ರಬಂಧ ಕೂಡ ಎಂಬತ್ತು ಶೇಕಡಾ ಸಿದ್ದವಾಗಿದೆ.ಈ ಹಂತದಲ್ಲಿ ಕೈ ಬಿಟ್ಟರೆ ನೀವು ಇಷ್ಟು ಸಮಯ ಕಷ್ಟ ಬಂದದ್ದಕ್ಕೆ ಏನು ಸಿಕ್ಕಂತಾಯಿತು.ಎಂತೆಂಥವರೆಲ್ಲಾ ಪಿಎಚ್ ಡಿ ಮಾಡಿದ್ದಾರೆ ಗೊತ್ತಾ ? ನಾಳೆ ಬೆಳಿಗ್ಗೆ ಬನ್ನಿ ,ಡಿಟಿಪಿ ಮಾಡಿ‌ಕೊಡುತ್ತೇನೆ ಗೈಡ್ ಮನೆಗೆ ಹೋಗಿ ಸಹಿ ಹಾಕಿಸಿವರದಿ ಸಲ್ಲಿಸಿ ಫೀಸ್ ಕಟ್ಟಿ, ಎಲ್ಲರಿಗೂ ಪಿಎಚ್ ಡಿ ಮಾಡಲು ಅವಕಾಶ ಸಿಗುವುದಿಲ್ಲ ಸಿಕ್ಕ ಅವಕಾಶ ಬಿಟ್ಟರೆ ಅದಕ್ಕಿಂತ ದೊಡ್ಡ ಮೂರ್ಖತನ ಬೇರೆ ಇಲ್ಲ ಎಂದು ಹಿತ ನುಡಿದರು.ಸ್ವಲ್ಪ ಸಮಾಧಾನವಾಗಿ ಮನೆಯೊಳಗೆ ಬಂದೆ.ಚಕ್ ದೇ ಇಂಡಿಯಾ ಸಿನಿಮಾ ಟಿವಿ ಯಲ್ಲಿ ಬರ್ತಾ ಇತ್ತು.
ಅದೊಂದು ಅದ್ಭುತ ಸಿನಿಮಾ. ಅದು ಮುಗಿಯುವಷ್ಟರಲ್ಲಿ ಹತಾಶೆಯನ್ನು ತೊಡೆದು ಹಾಕಿ ಎಂದಿನ ಲಕ್ಷ್ಮೀ ಆದೆ.ಒಂದಿನಿತು ಗುರುಗಳು ಹೇಳಿದಂತೆ ತಿದ್ದುಪಡಿ ಪಡಿ ಮಾಡಿ ಬರೆದೆ.ಕೆಲವನ್ನು ಬದಲಾಯಿಸದೆ ಹಾಗೆಯೇ ಬಿಟ್ಟೆ.ಮರು ದಿನ ಬೆಳಗ್ಗಿನ ಜಾವವೇ ನಿರ್ಮಲಾ ‌ಮನೆಗೆ ಹೋಗಿ ಟೈಪ್ ಮಾಡಿಸಿ ಗುರುಗಳ ಮನೆಗೆ ಹೋದೆ.ಕೆಲವನ್ನು ತಿದ್ದುಪಡಿ ಮಾಡದೆ ಹಾಗೆ ಬಿಟ್ಟದ್ದೇಕೆ ಎಂದು ಕೇಳಿದರು.ಅದು ನಾನು ಬರೆದದ್ದು ಸರಿ ಎಂದು ವಾದಿಸಿದೆ.ಸಾಕಷ್ಟು ಚರ್ಚೆ ಆಯಿತು. ಕೊನೆಗೆ ಅಮೃತ ಸೋಮೇಶ್ವರರಿಗೆ ಪೋನ್ ಮಾಡಿ ವಿಷಯ ತಿಳಿಸಿ ನನ್ನ ಗುರುಗಳ ಕೈಗೆ ಕೊಟ್ಟೆ.ಅಮೃತ ಸೋಮೇಶ್ವರರು ನಾನು ಹೇಳಿರುವುದನ್ನು ಸಮರ್ಥಿಸಿ ಮನವರಿಕೆ ಮಾಡಿದರು.
ಗುರುಗಳು ಸಹಿ ಮಾಡಿದರು ನಾನು ವರದಿ ಸಲ್ಲಿಸಿ ಪೀಸ್ ಕಟ್ಟಿದೆ ಅಂತೂ ಇಂತೂ ಪಿಎಚ್ ಡಿ ಪದವಿ ಸಿಕ್ತು

ಈ ನಡುವೆ ನಾನು ಒಂದಷ್ಟು ಕಥೆಗಳನ್ನು ಬರೆದಿದ್ದು ಪತ್ರಿಕೆಗಳಲ್ಲಿ ಪ್ರಕಟವಾಗಿವದ್ದವು.ಅದೇ ರೀತಿ ಅನೇಕ ಲೇಖನಗಳು ಪ್ರಕಟವಾಗಿದ್ದವು. ಹಾಗಾಗಿ ಇವನ್ನು ಸೇರಿಸಿ ಕಥಾ ಸಂಕಲನ ‌ಮತ್ತು ಲೇಖನ ಸಂಕಲನ ಪ್ರಕಟಿಸಬೇಕೆಂಬ ಕನಸು ನನಗಿತ್ತು.ಆದರೆ ಹೇಗೆ ಏನು ಎತ್ತ ಎಂಬುದು ಗೊತ್ತಿರಲಿಲ್ಲ. ಅದೇ ಸಮಯದಲ್ಲಿ ನಿರ್ಮಲಾ ಅವರು ಯಾವುದೋ ಒಂದು ಪುಸ್ತಕ ವನ್ನು( ಬಹುಶ ಹಾವನೂರು ಅವರದಿರಬೇಕು) ಜವಾಬ್ದಾರಿ ವಹಿಸಿ ಪ್ರಕಟಿಸಿಕೊಟ್ಟದ್ದು ಗೊತ್ತಾಯಿತು. ಹಾಗಾಗಿ ಅವರಲ್ಲಿ ನನ್ನ ಎರಡು ಪುಸ್ತಕಗಳನ್ನು ಪ್ರಕಟಮಾಡುವುದು ಹೇಗೆ ? ಪ್ರಿಂಟರ್ ಅನ್ನು ಪರಿಚಯಿಸಿ ಎಂದು ಕೇಳಿದೆ.ಆರಂಭದಲ್ಲಿ ಪುಸ್ತಕ ಪ್ತಕಟಣೆಯ ಬವಣೆ ಗಳನ್ನು ಅವರು ತಿಳಿಸಿದರು.ಆದರೆ ನನಗೆ ಪುಸ್ತಕ ಪ್ರಕಟಿಸಬೇಕೆಂಬ‌ ಮರ್ಲು ತುಂಬಾ ಇತ್ತು.
ಸರಿ ನಿರ್ಮಲಾ ನನ್ನ ಆಯ್ದ ಕಥೆ ಲೇಖನಗಳನ್ನು ಡಿಟಿಪಿ ಮಾಡಿ ಶಾರದಾ ಪ್ರೆಸ್ ಮಾಲಕರ ಬಳಿಗೆ ಕರೆದುಕೊಂಡು ಹೋಗಿ ಅವರಲ್ಲಿ ಚರ್ಚಿಸಿ ನನಗೆ ಸಾಧ್ಯವಾದಷ್ಟು ಕಡಿಮೆ ಖರ್ಚಿನಲ್ಲಿ ಪುಸ್ತಕ ಪ್ರಿಂಟ್ ಮಾಡಲು ಸಹಾಯ ಮಾಡಿದರು.ಇಲ್ಲಿಂದ ಪುಸ್ತಕ ಪ್ರಕಟಿಸು ಬಗ್ಗೆ ನನಗೆ ಗೊತ್ತಾಯಿತು.ನನ್ನ ಪುಸ್ತಕಗಳ ಪ್ರಕಟಣೆಗೆ ಇವರು ಭದ್ರ ಬುನಾದಿಯನ್ನು ಹಾಕಿ ಕೊಟ್ಟರು ಈಗ ಇಪ್ಪತ್ತು ಪುಸ್ತಕಗಳು ಪ್ರಕಟವಾಗಿವೆ ಇವುಗಳಲ್ಲಿ ನನ್ನ ಹದಿನಾಲ್ಕು ಪುಸ್ತಕಗಳನ್ನು ನಾನು ಸ್ವತಃ ಪ್ರಕಟಿಸಿರುವೆ
ನಿರ್ಮಲಾ ಜೀವನೋತ್ಸಾಹಿ ಮತ್ತು ತನ್ನಿಂದ ಆದ ಸಹಾಯವನ್ನು ಮಾಡುವ ಸಹೃದಯಿ,ನನ್ನ ಕಷ್ಟದ ಸಮಯದಲ್ಲಿ ನನಗೆ ಪೂರ್ಣ ಬೆಂಬಲ ನೀಡಿರುವುದನ್ನು ನಾನೆಂದಿಗೂ ಮರೆಯಲಾರೆ.
ಅನೇಕರ ಪಿಎಚ್ ಡಿ ಪ್ರಬಂಧಗಳನ್ನು ಡಿಟಿಪಿ ಮಾಡಿ ಸೆಟ್ ಮಾಡಿ‌ಕೊಟ್ಟಿರುವ ನಿರ್ಮಲಾ ಈಗ ಸ್ವತಃ ಪಿಎಚ್ ಡಿ ಅಧ್ಯಯನ ಮಾಡುತ್ತಿದ್ದಾರೆ.ಹಲವು ಅಡ ತಡೆಗಳ ನಡುವೆಯೂ ಅವರ ಕಲಿಕೆಯ ಉತ್ಸಾಹ ಮೆಚ್ಚುವದ್ದು.ಆದಷ್ಟು ಬೇಗನೆ ಅವರಿಗೆ ಪಿಎಚ್ ಡಿ ಪದವಿ ಸಿಗಲೆಂದು ಹಾರೈಸುವೆ.