Monday, 25 April 2016

ಶಿಕ್ಷಕರನ್ನು ಪಾಠ ಮಾಡಿಕೊಂಡಿರಲು ಬಿಟ್ಟು ಬಿಡಿ(26 ಏಪ್ರಿಲ್ 2016 ವಿಶ್ವವಾಣಿ) -ಡಾ.ಲಕ್ಷ್ಮೀ ಜಿ ಪ್ರಸಾದ

 
ಹತ್ತನೇ ತರಗತಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯುತ್ತಿದೆ. ಅನೇಕ ವಿದ್ಯಾರ್ಥಿಗಳು ಅಸಂಬಂದ್ಧ ಉತ್ತರಗಳನ್ನು ಬರೆದಿರುವ ಬಗ್ಗೆ ಓದಿದೆ. ಸಂಗ್ರಹ ಮೂಲ ವಿನಿಮಯ ಮೂಲಗಳ ನಡುವಿನ ಎರಡು ವ್ಯತ್ಯಾಸಗಳನ್ನು ಬರೆಯಿರಿ ಎಂಬ ಒಂದು ಪ್ರಶ್ನೆಗೆ ‘ಅನಿಸುತಿದೆ ಏಕೋ ಇಂದು ನೀನೇನೆ ನನ್ನವನೆಂದು ಆಹಾ ಎಂಥ ಮಧುರ ಯಾತನೆ, ಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೆ ಸುಮ್ಮನೆ’ ಎಂದು ಒಬ್ಬ ಬರೆದಿದ್ದಾನೆ.ಇನ್ನೊಬ್ಬ ‘ಕಿಂಗ್’ ಎಂಬುದರ ಕನ್ನಡ ಭಾವಾರ್ಥ ಬರೆಯಿರಿ ಎಂಬ ಪ್ರಶ್ನೆಗೆ ಸಿಗರೇಟ್ ಎಂದು ಉತ್ತರಿಸಿದ್ದ. ಮತ್ತೊಬ್ಬ ವಿದ್ಯಾರ್ಥಿ ‘ನಾನು ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದುತ್ತಿದ್ದಾ. ಆದರೆ ಅಲ್ಲಿ ಗಣಿತ ಶಿಕ್ಷಕರು ಇಲ್ಲದ ಕಾರಣ ಇಂಗ್ಲಿಷ್ ಮಾಧ್ಯಮ ಶಾಲೆಗೆ ಸೇರಿದೆ. ಅಲ್ಲಿ ಇಂಗ್ಲಿಷ್‌ನಲ್ಲಿ ಪಾಠ ಮಾಡಿದ್ದು ನನಗೆ ಅರ್ಥವಾಗಿಲ್ಲ. ಆದ್ದರಿಂದ ನನಗೆ ದಯವಿಟ್ಟು ಅರುವತ್ತು ಅಂಕಗಳನ್ನು ಕೊಡಿ’ ಎಂದು ವಿನಂತಿಸಿದ್ದಾನೆ.ನೆಹರೂ ಮೊದಲ  ಕಾನೂನು ಸಚಿವರನ್ನಾಗಿ ಅಂಬೇಡ್ಕರರನ್ನು ಏಕೆ ನೇಮಿಸಿದರು ಎಂಬ ಪ್ರಶ್ನೆಗೆ ‘ಐ ಅಮ್ ಸಾರೀ, ಮತ್ತೆ ಬನ್ನಿ ಪ್ರೀತಿಸೋಣ, ಐಮಿಸ್ ಯು ಎಂದು ಉತ್ತರ ಬರೆದಿದ್ದಾನೆ.
ಮತ್ತೊಬ್ಬ ‘ನನಗೆ ಗಣಿತ ಅರ್ಥವಾಗುವುದಿಲ್ಲ. ನಾನು ನನ್ನ ಮನೆ ಮಂದಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ನನಗೆ ಅರುವತ್ತು ಅಂಕ ಕೊಡಿ ನಿಮಗೆ ಪುಣ್ಯ ಬರುತ್ತದೆ’ ಎಂದು ಬರೆದಿದ್ದಾನೆ.. ಕಳೆದ ವರ್ಷ ಗಣಿತ ಉತ್ತರ ಪತ್ರಿಕೆಯಲ್ಲಿ ಕೋಳಿ ಸಾರು ಮಾಡುವ ವಿವರಣೆ ಇದ್ದ ಬಗ್ಗೆ ವರದಿಯಾಗಿತ್ತು.ಕಿಂಗ್ ಎಂದರೆ ಕಿಂಗ್ ಸಿಗರೇಟ್ ನೆನಪಿಗೆ ಬರುತ್ತದೆ ಆದರೆ ಅರಸನ ನೆನಪು ಯಾಕಿಲ್ಲ? ಪಾಠದ ನಡುವೆ ಕಿಂಗ್ /ಅರಸನ ಕಥೆಯನ್ನೂ ಹೇಳಿದ್ದರೆ ಈ ಮಕ್ಕಳು ‘ಕಿಂಗ್’ ಎಂದರೆ ಅರಸ ಎಂದು ನೆನಪಿಟ್ಟುಕೊಳ್ಳುತ್ತಿದ್ದರು. ಆದರೆ ಇಂದಿನ ಶಿಕ್ಷಕರ ಜವಾಬ್ದಾರಿ, ಅವರ ಕರ್ತವ್ಯಗಳ ಬಗ್ಗೆ ನೋಡಿದರೆ ಅವರು ಪೂರಕ ಕಥೆ ಹೇಳುವುದು ಬಿಡಿ ಪಾಠದಲ್ಲಿರುವುದನ್ನು ಹೇಳಲೂ ಅವರಿಗೆ ಸಮಯ ಸಿಗುವುದಿಲ್ಲ. ಇಂದಿನ ಪಾಠ ಕ್ರಮದಲ್ಲಿ ಅವುಗಳಿಗೆಲ್ಲ ಅವಕಾಶವೂ ಇಲ್ಲ !ಇತ್ತೀಚಿಗೆ ಒಬ್ಬರು ಮೇಷ್ಟ್ರು ಸಿಕ್ಕರು. ಸುಮ್ಮನೆ ಮಾತನಾಡಿಸಿದೆ. ಅದಕ್ಕೆ ಅವರು ‘ಅಯ್ಯೋ ನಮ್ಮ ಅವಸ್ಥೆ ಏನು ಹೇಳುವುದು ಮೇಡಂ.
ಪಾಠ ಮಾಡಲು ನಮಗೆ ಸಮಯವೇ ಇಲ್ಲ ಉಳಿದ ಕೆಲಸವೇ ಆಯ್ತು. ಹಾಗಾಗಿ ಪಾಠ ಮುಗಿದಿಲ್ಲ. ಅದಕ್ಕೆ ಮಕ್ಕಳಿಗೆ ಆದಿತ್ಯವಾರವೂ ತರಗತಿ ತಗೊಳ್ಳುತ್ತೇನೆ. ನಮ್ಮಲ್ಲಿ ಶಾಲೆಗೆ ಬಾರದ ಮಕ್ಕಳನ್ನು ಹುಡುಕಿ ತರುವುದು, ಅವರ ಹೆತ್ತವರನ್ನು ಕಂಡು ಮನ ಒಲಿಸುವುದು ಇದೇ ಆಯ್ತು. ಇವೆಲ್ಲದರ ನಡುವೆ ನಮಗೆ ಪಾಠ ಮಾಡಲು ಸಮಯವೆಲ್ಲಿದೆ? ಶಾಲೆಗೆ ಬಾರದ ಮಕ್ಕಳ ಬಗ್ಗೆ ಓಡಾಡಿ ಮಾಹಿತಿ ಸಂಗ್ರಹಿಸಿ ಅವರನ್ನು ಶಾಲೆಗೆ ಸೇರಿಸುವ, ಅವರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸುವ ಭರದಲ್ಲಿ ಶಾಲೆಗೆ ಬಂದ ಮಕ್ಕಳಿಗೆ ಅನ್ಯಾಯವಾಗುತ್ತಿದೆ ಎಂದು ನಿಟ್ಟುಸಿರುಬಿಟ್ಟರು!
ಇತ್ತೀಚಿಗೆ ವಾಟ್ಸಪ್ ನಲ್ಲಿ ಒಂದು ಮೆಸೇಜ್ ಬಂದಿತ್ತು
"ಅಕ್ಷರ ದಾಸೋಹ, ಕ್ಷೀರಭಾಗ್ಯ, ಸೈಕಲ್ ವಿತರಣೆ, ಪಠ್ಯಪುಸ್ತಕ, ಬ್ಯಾಗ್ ವಿತರಣೆ, ಚಿಣ್ಣರ ಅಂಗಳ, ಕೂಲಿಯಿಂದ ಶಾಲೆಗೆ, ಬಾ ಬಾಲೆ ಶಾಲೆಗೆ, ಬಾ ಮರಳಿ ಶಾಲೆಗೆ, ಶಾಲೆ ಬಿಟ್ಟ ಮಕ್ಕಳ ಮನೆಭೇಟಿ, ಎಸ್‌ಡಿಎಂಸಿ ರಚನೆ, ಶೌಚಾಲಯ ನಿರ್ವಹಣೆ, ಕಟ್ಟಡ ಕಾಮಗಾರಿ, ಸಮುದಾಯದತ್ತ ಶಾಲೆ, ವಾರ್ಷಿಕೋತ್ಸವ, ಪ್ರಗತಿಪತ್ರ ತುಂಬವುದು, ಮಕ್ಕಳಿಗೆ ಬ್ಯಾಂಕ್ ಖಾತೆ ತರೆಯುವುದು, ವಿದ್ಯಾರ್ಥಿವೇತನ ಸಮನ್ವಯ, ಶಿಕ್ಷಣ ಜನಗಣತಿ, ಮಕ್ಕಳ ಗಣತಿ, ಜಾತಿಗಣತಿ, ಚುನಾವಣಾಕಾರ್ಯ, ಪಲ್ಸ ಪೋಲಿಯೋ, ಎಸ್‌ಡಿಎಂಸಿ ಸಭೆ, ಪಾಲಕರ ಸಭೆ, ಪುನಶ್ಚೇತನ ತರಬೇತಿ, ಸೇತುಬಂಧ, ನಲಿ ಕಲಿ ಕಲಿ ನಲಿ, ಪ್ರತಿಭಾ ಕಾರಂಜಿ, ರಾಷ್ಟ್ರೀಯ ಹಬ್ಬಗಳು, ದಿನಾಚರಣೆಗಳು, ಒಂದಷ್ಟು ಜಯಂತಿಗಳು... ಇಷ್ಟೆಲ್ಲ ಕೆಲಸ ಕಾರ್ಯಗಳನ್ನು ಶಿಕ್ಷಕರು ಮಾಡಿ ಮುಗಿಸಿದಾಗ ಅವರಿಗೆ ಗಾಂಧಿ ಹುಟ್ಟಿದ ಇಸವಿ ಬಿಡಿ ತಾವು ಹುಟ್ಟಿದ ದಿನವೇ ನೆನಪಿರಲ್ಲ! @ಎಸ್ಕೆ
ಇದನ್ನು ಓದಿದಾಗ ಆರಂಭದಲ್ಲಿ ತುಸು ನಗು ಬಂದಿತ್ತು ಆದರೆ ಇದು ಇದು ವಾಸ್ತವ. ಇದನ್ನು ಓದಿದಾಗ ಇಷ್ಟೆ ಕೆಲಸಗಳನ್ನು ಮಾಡಿಕೊಂಡು ಶಿಕ್ಷಕರು ಮಕ್ಕಳಿಗೆ ಯಾವಾಗ ಪಾಠ ಮಾಡುತ್ತಾರೆ ಎಂದು ನನಗೆ ಸಂಶಯ ಬಂದಿತ್ತು.
ಸರ್ಕಾರಿ ಶಾಲೆಗಳಲ್ಲಿ ಪಾಠ ಪ್ರವಚನಗಳಿಗಿಂತ ಉಳಿದದ್ದೇ ಹೆಚ್ಚು ನಡೆಯುತ್ತವೆ. ಇಷ್ಟೆ ಕೆಲಸಗಳ ನಡುವೆ ಪಾಠ ಮಾಡಲು ಎಷ್ಟು ಸಮಯ ಸಿಗುತ್ತದೆ? ಏನೋ ಅವಸರವಸರದಿಂದ ಹರಿ ಬರಿಯಾಗಿ ಪಾಠ ಮಾಡಿದ್ದರೆ ಅದು ಮಕ್ಕಳ ತಲೆಗೆ ಒಂದಿನಿತೂ ಹೋಗುವುದಿಲ್ಲ.

ಒಂದೆಡೆ ಅನೇಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ. ಇನ್ನೊಂದೆಡೆ ಪ್ರತಿಭಾವಂತರನ್ನು ಶಿಕ್ಷಣ ಕ್ಷೇತ್ರ ಆಕರ್ಷಿಸುತ್ತಿಲ್ಲ. ಪ್ರತಿಭಾವಂತರು ಇಂಜಿನಿಯರ್, ಮೆಡಿಕಲ್ ಕ್ಷೇತ್ರಕ್ಕೆ ಹೋಗುತ್ತಿದ್ದಾರೆ. ಬಿಕಾಂ, ಎಂಕಾಂ ಮಾಡಿದವರೂ ಒಳ್ಳೆ ವೇತನ ಸಿಗುವ ಖಾಸಗಿ ಕಂಪನಿಗಳ ಕೆಲಸಕ್ಕೆ ಹೋಗುತ್ತಿದ್ದಾರೆ. ಕೆಲವರು ಮಾತ್ರ ಬೇರೆ ದಾರಿ ಇಲ್ಲದೆ ಶಿಕ್ಷಕರಾಗುತ್ತಿದ್ದಾರೆ. ಈ ಸಮಸ್ಯೆ ಕೇವಲ ಸರ್ಕಾರಿ ಶಾಲೆಗಳಿಗೆ ಮಾತ್ರ ಸಂಬಂಧಿಸಿದ್ದಲ್ಲ. ಲಕ್ಷ ಗಟ್ಟಲೆ ಡೊನೇಶನ್ ಹಾಗೂ ಶುಲ್ಕ ವಸೂಲಿ ಮಾಡುವ ಶಿಕ್ಷಣ ಸಂಸ್ಥೆಗಳು ಕೂಡ ಶಿಕ್ಷಕರಿಗೆ ಒಳ್ಳೆಯ ವೇತನ ಕೊಡುವುದಿಲ್ಲ.ಕಲಿಕೆಗೆ ಕನಿಷ್ಠ ಒತ್ತಡ ಅತ್ಯಗತ್ಯ. ಆದರೆ ಇಂದು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಜೋರು ಮಾಡುವಂತಿಲ್ಲ.
 ನನ್ನ ಜೊತೆ ಕೆಲಸ ಮಾಡುತ್ತಿದ್ದ ಶಿಕ್ಷಕಿ ಒಬ್ರು ಅವರ ಅನುಭವವನ್ನು ಹೀಗೆ ಹೇಳಿದ್ದರು... ಅವರು ತರಗತಿಯಲ್ಲಿ ಪಾಠ ಮಾಡುತ್ತಿರುವಾಗ ಒಬ್ಬ ಹುಡುಗ ಕಡಲೇಕಾಯಿ ತಿನ್ನುತ್ತಾ ಇದ್ದ. ಆಗ ಇವರು ‘ಪಾಠ ಮಾಡುವಾಗ ತಿನ್ನುವುದು ಸಭ್ಯತೆಯಲ್ಲ’ ಎಂದು ಬುದ್ಧಿ ಹೇಳಿದರು. ಆಗ ಹುಡುಗ ನಾನು ತಿಂತೇನೆ ಏನು ಮಾಡುತ್ತೀರಾ? ಹೊಡೀತೀರ? ಹೊಡೆದರೆ ನಾನು ನಾಳೆಯಿಂದ ಶಾಲೆಗೆ ಬರುವುದಿಲ್ಲ. ಆಗ ನಾನು ಶಾಲೆ ಬಿಟ್ಟದ್ದಕ್ಕೆ ನಿಮ್ಮನ್ನೇ ಬೈತಾರೆ ಗೊತ್ತಾ? ಎಂದು ಹೇಳಿ ಕಡಲೆ ಕಾಯಿ ತಿನ್ನುವುದು ಮುಂದುವರಿಸಿದ. ಜೋರು ಮಾಡಿದರೆ ತಕ್ಷಣವೇ ಬಿಇಒಗೆ ದೂರು ಹೋಗುತ್ತದೆ. ಮಾಧ್ಯಮಗಳು ಬರುತ್ತವೆ. ನನ್ನನ್ನು ಖಳನಾಯಕಿ ಸ್ಥಾನದಲ್ಲಿ ನಿಲ್ಲಿಸಿ ಬಾಯಿಗೆ ಬಂದ ಹಾಗೆ ಆಡಿಕೊಳ್ಳುತ್ತಾರೆ. ಹಾಗಾಗಿ ನಾನು ಆತನನ್ನು ಸುಮ್ಮಗೆ ಬಿಟ್ಟೆ ಎಂದರು.ಖಾಸಗಿ ಶಾಲೆಗಳಲ್ಲಿನ ಪರಿಸ್ಥಿತಿ ಕೂಡಾ ಇದಕ್ಕಿಂತ ಭಿನ್ನವಾಗಿಲ್ಲ. ಮಕ್ಕಳಿಗೆ ಗದರುವಂತಿಲ್ಲ. ಪಾಠಕ್ಕೆ ಪೂರಕ ವಿಚಾರಗಳ ಬಗ್ಗೆ, ನೈತಿಕ ಮೌಲ್ಯಗಳ ಬಗ್ಗೆ, ದೈನಂದಿನ ವಿಶೇಷ ವಿಚಾರಗಳ ಬಗ್ಗೆ ಮಾತನಾಡುವ ಹಾಗೆಯೇ ಇಲ್ಲ. ಕೇವಲ ಪಾಠದಲ್ಲಿರುವುದನ್ನು ಮಕ್ಕಳಿಗೆ ಬಾಯಿಪಾಠ ಮಾಡಿಸಬೇಕು. ಉಸಿರು ಕಟ್ಟುವ ವಾತಾವರಣದಲ್ಲಿ ಸ್ವತಂತ್ರವಾಗಿ ಪಾಠ ಮಾಡಲು ಸಾಧ್ಯವಿಲ್ಲ. ದೇಶ ಭಕ್ತರ, ತ್ಯಾಗಿಗಳ ರೋಮಾಂಚಕ ಕಥೆಗಳು, ಬದುಕಿನಲ್ಲಿ ಭರವಸೆ ಮೂಡಿಸುವ ಸಾಧಕರ ವಿಚಾರಗಳು, ಮೌಲಿಕ ವಿಚಾರಗಳು ಪಾಠದಲ್ಲಿ ಇಲ್ಲ. ಬದುಕಿಗೆ ಒಂದಿನಿತು ಸಹಕಾರಿಯಾಗಿರದ, ಮಕ್ಕಳ ಸಾಮರ್ಥ್ಯಕ್ಕೆ ಮೀರಿದ ಶುಷ್ಕ ವಿಚಾರಗಳೇ ತುಂಬಿವೆ.
ಗುಣಮಟ್ಟ ಹೆಚ್ಚಿಸುವುದೆಂದರೆ ಅತಿ ಹೆಚ್ಚು ವಿಚಾರಗಳನ್ನು ಮಕ್ಕಳ ತಲೆಗೆ ತುಂಬಿಸುವುದು ಎಂಬ ಭ್ರಮೆಯಲ್ಲಿ ತಯಾರಾದ ಪಾಠಗಳು ಮಕ್ಕಳಿಗೆ ಓದಲು ಪ್ರೇರೇಪಿಸುತ್ತಿಲ್ಲ.ಮೊದಲು ಶಾಲೆಗಳಲ್ಲಿ ಪ್ರತಿ ದಿನ ಒಂದು ಅವಧಿ ಆಟಕ್ಕೆ ಮೀಸಲು. ಗ್ರಂಥಾ ಲಯ ಅವಧಿಯೂ ಇತ್ತು. ಅದರಲ್ಲಿ ನಾವು ಕಥೆ, ಕಾದಂಬರಿಗಳನ್ನು ಓದುತ್ತಿ ದ್ದಾವು. ಆಟದಿಂದ ಮನಸಿಗೆ ವಿಶ್ರಾಂತಿ ದೊರೆಯುತ್ತದೆ. ಉತ್ಸಾಹ ಮೂಡುತ್ತದೆ. ಶಿಕ್ಷಕರು ಪಾಠದ ನಡುವೆ ಕಥೆ, ಬೇರೆ ವಿಚಾರಗಳನ್ನು ಹೇಳುತ್ತಿದ್ದರು. ಒಗಟುಗಳನ್ನುಬಿಡಿಸುತ್ತಿದ್ದರು. ಇದೆಲ್ಲದರಿಂದ ಶಾಲೆ ಮುಗಿಸಿ ಬರುವಾಗಲೂ ನಾವು ಉತ್ಸಾಹದಿಂದ ಇರುತ್ತಿದ್ದಾವು. ಲೇಖಕಿ ಸಾರಾ ಅಬೂಬಕ್ಕರ್ ಆಟ ಆಡುವುದಕ್ಕಾಗಿಯೇ ಶಾಲೆಗೆ ಹೋಗುತ್ತಿದ್ದರಂತೆ!


ಈಗ ಮಕ್ಕಳಿಗೆ ಆಟ ಆಡಲು ಮೈದಾನ ಬಿಡಿ ಹತ್ತು ಅಡಿ ಜಾಗ ಕೂಡ ಇಲ್ಲ. ಶಾಲೆಗಳಲ್ಲಿ ಇಡೀ ದಿನ ನೀರಸ ಪಾಠ ಕೇಳಿ ಉತ್ಸಾಹ ಕಳೆದುಕೊಂಡು, ಸುಸ್ತಾಗಿ ಜೋಲು ಮುಖ ಹಾಕಿಕೊಂಡು, ಮಣಗಟ್ಟಲೆ ಭಾರದ ಚೀಲ ಹಿಡಿದುಕೊಂಡು ಶಾಲೆ ಬಿಟ್ಟು ಮನೆಗೆ ಬರುವ ಮಕ್ಕಳನ್ನು ನೋಡಿದರೆ ನಿಜಕ್ಕೂ ಅಯ್ಯೋ ಎನಿಸುತ್ತದೆ. ಗುಣಮಟ್ಟದ ಶಿಕ್ಷಣ ನೀಡುವುದೊಂದೇ ಇದಕ್ಕೆಲ್ಲ ಇರುವ ಪರಿಹಾರ. ಇದಕ್ಕಾಗಿ ಅರ್ಹ ಶಿಕ್ಷರನ್ನು ಆಯ್ಕೆ ಮಾಡಬೇಕು. ,ಒಳ್ಳೆಯ ವೇತನ ನೀಡಬೇಕು. ಮುಖ್ಯವಾಗಿ ಶಿಕ್ಷಕರನ್ನು ಬೇರೆ ಜವಾಬ್ದಾರಿಗಳಿಂದ ಮುಕ್ತಗೊಳಿಸಿ, ಪಾಠಕ್ಕೆ ಗಮನ ನೀಡಲು ಬಿಡಬೇಕು.

No comments:

Post a Comment