Tuesday, 12 April 2016

ವಿದ್ಯೆ ಕಲಿಸುವ ಗುರುವಿಗೆ ಮೋಸ ಮಾಡಬಹುದೇ ?(ವಿಶ್ವವಾಣಿ,13 ಏಪ್ರಿಲ್2016 ಪುಟ 7 )-ಡಾ.ಲಕ್ಷ್ಮೀ ಜಿ ಪ್ರಸಾದ

ಜಗತ್ತಿನಲ್ಲಿ ಪದೋನ್ನತಿಯೇ ಇಲ್ಲದೆ ಇರುವ ಹುದ್ದೆ  ಪಿಯು ಉಪನ್ಯಾಸಕರದ್ದು ಮಾತ್ರ ಇರಬೇಕು! ಉಪನ್ಯಾಸಕನಾಗಿ ಕೆಲಸಕ್ಕೆ ಸೇರಿ ಉಪನ್ಯಾಸಕನಾಗಿಯೇ ನಿವೃತ್ತನಾಗಬೇಕು. ಪಿಯು ಉಪನ್ಯಾಸಕರ ವೇತನ ತಾರತಮ್ಯ ನಿವಾರಣೆ ಮಾಡಿದರೆ ಬೊಕ್ಕಸಕ್ಕೆ ಹೊರೆಯಾಗುತ್ತದೆ. ಇತರರಿಗೆ ಹೆಚ್ಚಿನ ವೇತನ ಕೊಟ್ಟರೆ ಹೊರೆ ಆಗುವುದಿಲ್ಲವೇ? https://www.vishwavani.news/epaper.html
ಧಿಕ್ಕಾರ ಧಿಕ್ಕಾರ! ಇಂಥವರನ್ನು ಇನ್ನೂ ಸಹಿಸಿಕೊಂಡಿರುವ ಈ ಸರಕಾರಕ್ಕೂ ದಿಕ್ಕಾರ, ಅವರು ತಮ್ಮ ಸ್ವಂತದ ಮೌಲ್ಯಮಾಪನ ಮಾಡ್ತಾ ಇದ್ದಾರೆ ಮಕ್ಕಳಿಗೆ ಗೊತ್ತಿರೋದುಕ್ಕಿಂತ ಕಡಿಮೆ ತಿಳಿವಳಿಕೆ ಇರೊ ಮೌಲ್ಯಮಾಪನ ಮಾಡೊ ಅಧ್ಯಾಪಕರಿಗೆ ನನ್ನ ಧಿಕ್ಕಾರ. ಮೌಲ್ಯಮಾಪನಕ್ಕೆ ಹಾಜರಾಗದೆ ಮಕ್ಕಳ ಭವಿಷ್ಯದ ಜತೆ ಚೆಲ್ಲಾಟ ಆಡಲು ನಿಂತಿರುವ ಉಪನ್ಯಾಸಕರಿಗೆ ಧಿಕ್ಕಾರವಿರಲಿ. ಪಿಯು ಉಪನ್ಯಾಸಕರ ಕುರಿತಾಗಿ ಇಂತಹ ಮಾತುಗಳನ್ನು ಕೆಲವು ದಿನಗಳಿಂದ ಫೇಸ್‌ಬುಕ್ ಟ್ವಿಟ್ಟರ್‌ಗಳಂಥ ಸಾಮಾಜಿಕ ತಾಣಗಳಲ್ಲಿ ಕೇಳುತ್ತಿದ್ದೇವೆ.
ಪಿಯು ಉಪನ್ಯಾಸಕರ ಸಮಸ್ಯೆಗಳ ಅರಿವು  ಪ್ರಜ್ಞಾವಂತ  ಬರಹಗಾರರಿಗೂ ಗೊತ್ತಿಲ್ಲವೆಂದಾದರೆ ಇನ್ನು ಜನಸಾಮಾನ್ಯರಿಗೆ ಹೇಗೆ ಅರ್ಥವಾಗಲು ಸಾಧ್ಯ?ಒಂದು ವಿಷಯವನ್ನು ನಾನು ಮೊದಲಿಗೆ ಹೇಳುತ್ತೇನೆ. ಈಗ ನಡೆಯುತ್ತಿರುವ ಮೌಲ್ಯ ಮಾಪನ ಬಹಿಷ್ಕಾರ ಮತ್ತು ಪ್ರತಿಭಟನೆ ಏಕಾ ಏಕಿ ದಿನ ಬೆಳಗಾಗುವಷ್ಟರಲ್ಲಿ ನಿರ್ಣಯವಾಗಿ ಆರಂಭವಾದದ್ದಲ್ಲ. ಈ ಬಗ್ಗೆ ಮೂರು ನಾಲ್ಕು ತಿಂಗಳ ಮೊದಲೇ ನಿರ್ಧಾರವಾಗಿತ್ತು, ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಉಪನ್ಯಾಸಕರ ಸಂಘ ಅನೇಕ ಬಾರಿ ಮನವಿ ಮಾಡಿತ್ತು. ಈ ಬಗ್ಗೆ ಆಗಾಗ ಪತ್ರಿಕೆಗಳಲ್ಲಿ ವರದಿ ಬರುತ್ತಲೇ ಇತ್ತು. ಇಷ್ಟಕ್ಕೂ ಉಪನ್ಯಾಸಕರ ಹಲವು ವರ್ಷಗಳ ಬೇಡಿಕೆ ಅನ್ಯಯವಾದದ್ದಲ್ಲ. ಅದು ನ್ಯಾಯಯುತವಾದ ಬೇಡಿಕೆಯೇ ಆಗಿದೆ. ವೇತನ ಹೆಚ್ಚಿಸುವಂತೆ ಪ್ರತಿಭಟನೆ ಮಾಡುತ್ತಿಲ್ಲ. ಬದಲಿಗೆ ವೇತನ ತಾರತಮ್ಯ ನಿವಾರಿಸುವಂತೆ ಕೇಳುತ್ತಿದ್ದಾರೆ. ಈ ಹಿಂದೆಯೇ ಅನೇಕ ಬಾರಿ ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದ್ದಾರೆ ಕೂಡ. ಆದರೆ, ಯಾವುದೇ ಬೇಡಿಕೆಗೆ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ಆದಕ್ಕೆ ಮೌಲ್ಯ ಮಾಪನ ಬಹಿಷ್ಕಾರದ ದಾರಿಯನ್ನು ಹಿಡಿದಿದ್ದಾರೆ. ಮೌಲ್ಯ ಮಾಪನ ಬಹಿಷ್ಕಾರ ಸರಿಯಲ್ಲ,
ಬೇರೆ ಸಮಯದಲ್ಲಿ ಪ್ರತಿಭಟನೆ ಮಾಡಿ ಎಂದು ಅನೇಕರ ಅಭಿಪ್ರಾಯ. ಬೇರೆ ಸಮಯದಲ್ಲಿ ಪಾಠ ಪ್ರವಚನ ಮಾಡದೆ ಇದ್ದರೆ ಕೇವಲ ಕಾಲೇಜ್‌ನಲ್ಲಿ ಮಾಡುವ ಪಾಠವನ್ನು ಮಾತ್ರ ಅವಲಂಭಿಸಿರುವ ವಿದ್ಯಾರ್ಥಿಗಳಿಗೆ ಅಪಾರ ನಷ್ಟವಾಗುತ್ತದೆ. ಪ್ರತಿ ತಿಂಗಳು ಇಷ್ಟಿಟ್ಟು ಪಾಠವನ್ನು ಮುಗಿಸಲೇ ಬೇಕಾಗುತ್ತದೆ. ಕೆಲವೊಮ್ಮೆ ಸಮಯ ಸಾಕಾಗದೆ ಹೆಚ್ಚಿನ ಉಪನ್ಯಾಸಕರು ಹೆಚ್ಚುವರಿಯಾಗಿ ಶನಿವಾರ ಮಧ್ಯಾಹ್ನ ಮೇಲೆ ಹಾಗೂ ಆದಿತ್ಯವಾರ ತರಗತಿಗಳನ್ನು ತೆಗೆದುಕೊಳ್ಳುತ್ತಾರೆ. ಹೀಗಿರುವಾಗ ಪಾಠ ಮಾಡುವ ಅವಧಿಯಲ್ಲಿ ಪಾಠ ಮಾಡದೆ ಪ್ರತಿಭಟಿಸಿದರೆ ನಷ್ಟ ಯಾರಿಗೆ ಅಂತ ಈಗ ಅರ್ಥವಾಗಬಹುದು ಅಲ್ಲವೇ?ಮತ್ತೊಂದು ಆಕ್ಷೇಪ ಏನೆಂದರೆ ಈಗ ಮೌಲ್ಯಮಾಪನ ಮಾಡದೆ ಅನಂತರ ಹರಿ ಬರಿಯಾಗಿ ಮನಸ್ಸಿಲ್ಲದ ಮನಸಿನಿಂದ ಮೌಲ್ಯ ಮಾಪನ ಮಾಡಿದರೆ ಮಕ್ಕಳಿಗೆ ಅಂಕ ಕೊಡುವಾಗ ಒಂದೆರಡು ಅಂಕ ವ್ಯತ್ಯಾಸ ಬಂದರೆ ಏನು ಮಾಡುವುದು? ಮನಸ್ಸಿಲ್ಲದೆ ಮೌಲ್ಯ ಮಾಪನ ಮಾಡುವಾಗ ಅಂಕ ವ್ಯತ್ಯಾಸ ಬರುವುದಾದರೆ ಮನಸ್ಸಿಲ್ಲದೆ ಪಾಠ ಮಾಡಿದರೆ ಹೇಗಾಗಬಹುದು?ಇಷ್ಟಕ್ಕೂ ಪ್ರತಿಭಟನೆ ಯಾಕಾಗಿ? ಎಷ್ಟು ವರ್ಷಗಳ ಬೇಡಿಕೆ ಎಂಬುದು ತಿಳಿದಿದೆಯೇ ?ಸಮಾನ ಕೆಲಸಕ್ಕೆ ಸಮಾನ ವೇತನ ಎಂಬುದು ನಮ್ಮಲ್ಲಿನ ಸಾಮಾನ್ಯ ನಿಯಮ. ತಹಸೀಲ್ದಾರ್, ಪಶು ವೈದ್ಯರು, ಕಿರಿಯ ಎಂಜಿನಿಯರ್‌ಗಳು, ಸಬ್ ಇನ್ಸ್‌ಪೆಕ್ಟರ್, ವೈದ್ಯಾಧಿಕಾರಿಗಳು ಹಾಗೂ ಉಪನ್ಯಾಸಕರು ಒಂದೇ ಗ್ರೇಡ್‌ನ ಸರ್ಕಾರಿ ಉದ್ಯೋಗಿಗಳು.
ಹಾಗಾಗಿ ಇವರೆಲ್ಲರಿಗೂ ಒಂದೇ ರೀತಿಯ ವೇತನ ಶ್ರೇಣಿ ಇರುತ್ತದೆ. 1996ನೆಯ ಇಸವಿ ತನಕ ಇವರೆಲ್ಲರಿಗೂ ಒಂದೇ ರೀತಿಯ ವೇತನ ಇತ್ತು. ನಂತರ ಮಾತ್ರ ಉಪನ್ಯಾಸಕರನ್ನು ಹೊರತು ಪಡಿಸಿ ಉಳಿದವರಿಗೆ ಕಾಲ ಕಾಲಕ್ಕೆ ವೇತನವನ್ನು ಹೆಚ್ಚಿಸಲಾಯಿತು. ಉಪನ್ಯಾಸಕರಿಗೆ ಮಾತ್ರ ಹೆಚ್ಚಿಸಲಿಲ್ಲ. ಹೀಗಾಗಿ ಉಪನ್ಯಾಸಕರ ಹಾಗೂ ಸಮಾನ ಶ್ರೇಣಿಯ ಇತರ ಸರಕಾರಿ ಉದ್ಯೋಗಿಗಳ ಆರಂಭಿಕ ಮೂಲ ವೇತನದಲ್ಲಿ ಸುಮಾರು ಎಂಟು ಸಾವಿರ ರುಪಾಯಿಗಳಷ್ಟು ವ್ಯತ್ಯಾಸವಿದೆ. ಇಷ್ಟು ಅಂತರವನ್ನು ಸರಿ ಪಡಿಸಿ ಉಪನ್ಯಾಸಕರಿಗೆ ಇತರರಂತೆ ವೇತನ ನೀಡಿದರೆ ಸರಕಾರದ ಬೊಕ್ಕಸಕ್ಕೆ ತುಂಬಾ ನಷ್ಟವಾಗುತ್ತದೆ ಎಂದು ಸರಕಾರ ಕೆಲ ವರ್ಷಗಳ ಮೊದಲು ಕುಮಾರ ನಾಯಕ್ ಅವರ ನೇತೃತ್ವದಲ್ಲಿ ಒಂದು ಸಮಿತಿ ಮಾಡಿತು. ಸಮಿತಿಯು ಸಾಕಷ್ಟು ಅಧ್ಯಯನ ಮಾಡಿ ಸರಕಾರಕ್ಕೆ ವರದಿ ನೀಡಿತು. ಸಮಿತಿಯು ಮಾಡಿದ ಸಲಹೆಯನ್ನು ಜಾರಿಗೆ ತಂದರೆ ತಾರತಮ್ಯ ಪೂರ್ಣ ನಿವಾರಣೆ ಆಗದಿದ್ದರೂ ಒಂದಿನಿತು ಅಂದರೆ ಸುಮಾರು ಮೂರು ಸಾವಿರ ರೂಪಾಯಿಗಳಷ್ಟು ವೇತನ ಹೆಚ್ಚಳವಾಗುತ್ತದೆ. ನಾಲ್ಕು ವರ್ಷ ಕಳೆದರೂ ಸಮಿತಿಯ ವರದಿಯನ್ನು ಜಾರಿಗೆ ತಂದಿಲ್ಲ .
ಈ ಬಗ್ಗೆ ಅನೇಕ ಬಾರಿ ಪ್ರತಿಭಟನೆ ಆಗಿದೆ. ಆದರೆ ಮೌಲ್ಯ ಮಾಪನಈ ಲೇಖನಕ್ಕೆ ಪ್ರತಿಕ್ರಿಯೆಗಳನ್ನು ಆಹ್ವಾನಿಸಲಾಗಿದೆ.ಸಮಯದಲ್ಲಿ ಬಿಟ್ಟು ಬೇರೆ ಸಮಯದಲ್ಲಿ ಮಾಡುವ ಪ್ರತಿಭಟನೆಗೆ ಯಾವುದೇ ಬೆಲೆ ಬರುವುದಿಲ್ಲ. ಅದು ಹೆತ್ತವರ ಗಮನಕ್ಕೂ ಬರುವುದಿಲ್ಲ! ಹೇಗೂ ಉಪನ್ಯಾಸಕರು ವಿಶೇಷ ತರಗತಿ ಮಾಡಿ ಪಾಠ ಮುಗಿಸುತ್ತಾರೆ. ಹಾಗಿರುವಾಗ ಉಪನ್ಯಾಸಕರ ಸಮಸ್ಯೆ ಬಗ್ಗೆ ಯಾರೇಕೆ ತಲೆಕೆಡಿಸಿಕೊಳ್ಳುತ್ತಾರೆ? ಮೊನ್ನೆ ಮಾತಿಗೆ ಸಿಕ್ಕ ಎಂಜಿನಿಯರ್ ಒಬ್ಬರು ಉಪನ್ಯಾಸಕರಿಗೆ ಈಗಾಗಲೇ ತುಂಬಾ ವೇತನ ಇದೆ. ದಿನಕ್ಕೆ ನೂರು ರುಪಾಯಿ ವೇತನಕ್ಕೆ ದುಡಿಯುವವರು ಇಲ್ಲವೇ? ಎಂದು ಕೇಳಿದ್ದರು. ಉಪನ್ಯಾಸಕರ ಬಗ್ಗೆ ಜನರಿಗಿರುವ ಭಾವನೆ ಇದರಿಂದ ಗೊತ್ತಾಯಿತು ನನಗೆ. ನಾನು ತಕ್ಷಣ ಕೇಳಿದೆ ನಿಮ್ಮಲ್ಲಿ ಜವಾನರಿಗೆ ಎಷ್ಟು ವೇತನ? ಅಬ್ಬಬ್ಬ ಅಂದ್ರೆ ಏಳು ಎಂಟು ಸಾವಿರ ತಾನೇ? ನೀವು ಯಾಕೆ ಒಂದು ಲಕ್ಷ ರುಪಾಯಿ ವೇತನ ಪಡೆಯುತ್ತೀರಿ? ನಿಮಗೇಕೆ ಅಷ್ಟು ವೇತನ? ಎಂದು. ಅದು ನಮ್ಮ ಕಲಿಕೆಗೆ ಅರ್ಹತೆಗೆ ಅನುಭವಕ್ಕೆ ಸಿಗುವ ವೇತನ ಎಂದರು. ಆಗ ನಾನು ಕೇಳಿದೆ. ನೀವು ಹೆಚ್ಚಿನ ಕಲಿಕೆ ಅರ್ಹತೆ ಹೊಂದಿದ್ದರೆ ಹೆಚ್ಚಿನ ವೇತನ ಪಡೆಯಬಹುದು,
ಉಪನ್ಯಾಸಕರು ಹೆಚ್ಚಿನ ಕಲಿಕೆಯನ್ನು ಅರ್ಹತೆಯನ್ನು ಅನುಭವವನ್ನು ಹೊಂದಿದ್ದಾರೆ. ಅವರು ಹೆಚ್ಚಿನ ವೇತನ ಪಡೆಯಬಾರದೇ? ತಾರತಮ್ಯ ಮಾಡಿದರೆ ಪ್ರತಿಭಟಿಸಬಾರದೆ? ಎಂದು. ಮರುಮಾತಾಡದೆ ಸುಮ್ಮನಾದರು. ಕೆಲ ವರ್ಷಗಳ ಹಿಂದಿನ ತನಕ ಪದವಿ ಪೂರ್ವ ಶಿಕ್ಷಣ ಉನ್ನತ ಶಿಕ್ಷಣ ಇಲಾಖೆಯ ಜತೆಗಿತ್ತು. ಇದರಿಂದ ಪದವಿ ಕಾಲೇಜ್ ಮತ್ತು ಪದವಿ ಪೂರ್ವ ಕಾಲೇಜ್ ಉಪನ್ಯಾಸಕರಿಗೆ ಒಂದೇ ರೀತಿಯ ವೇತನ ಇತ್ತು. ಕೆಲ ವರ್ಷಗಳ ಹಿಂದೆ ಪದವಿ ಪೂರ್ವ ಶಿಕ್ಷಣ ಇಲಾಖೆ ಉನ್ನತ ಶಿಕ್ಷಣ ಇಲಾಖೆಯಿಂದ ಬೇರೆಯಾಗಿ ಸ್ವತಂತ್ರವಾಯಿತು.
ಈಗ ಪದವಿ ಕಾಲೇಜ್ ಉಪನ್ಯಾಸಕರಿಗೆ ಯುಜಿಸಿ ವೇತನವಿದ್ದು, ಪಿಯು ಉಪನ್ಯಾಸಕರ ದುಪ್ಪಟ್ಟು ವೇತನ ಪಡೆಯುತ್ತಾರೆ. ಪದವಿ ಪೂರ್ವ ಉಪನ್ಯಾಸಕರು ಪದವಿ ಕಾಲೇಜ್ ಉಪನ್ಯಾಸಕರಷ್ಟೇ ಅರ್ಹತೆ ಹೊಂದಿದ್ದರೂ ಕೂಡ ಅವರ ಅರ್ಧದಷ್ಟು ವೇತನಕ್ಕೆ ತೃಪ್ತಿ ಹೊಂದಬೇಕು. ಒಟ್ಟಿನಲ್ಲಿ ಇವರು ಹೆಸರಿಗೆ ಉಪನ್ಯಾಸಕರು ಅಷ್ಟೇ, ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಅತಂತ್ರರಾಗಿದ್ದಾರೆ. ಪದವಿ ಕಾಲೇಜ್ ಉಪನ್ಯಾಸಕರಿಗೆ ಸಂಶೋಧನಾ ಕಮ್ಮಟಗಳಲ್ಲಿ, ವಿಚಾರ ಸಂಕಿರಣಗಳಲ್ಲಿ ಭಾಗವಹಿಸಲು ಓಓಡಿ ಸೌಲಭ್ಯವಿರುತ್ತದೆ. ಯುಜಿಸಿ ಪ್ರಾಯೋಜಿತ ವಿಚಾರ ಸಂಕಿರಣಗಳು ಆಗಾಗ ಅಲ್ಲಲ್ಲಿ ಕಾಲೇಜ್‌ಗಳಲ್ಲಿ ಯೂನಿವರ್ಸಿಟಿಗಳಲ್ಲಿ ಆಯೋಜನೆ ಆಗುತ್ತಲೇ ಇರುತ್ತದೆ. ಪದವಿ ಪೂರ್ವ ಕಾಲೇಜು ಉಪನ್ಯಾಸಕರಿಗೆ ಇಂಥಹ ಯಾವುದೇ ಸೌಲಭ್ಯವಿಲ್ಲ, ನಾನು ಅನೇಕ ಯೂನಿವರ್ಸಿಟಿಗಳಿಗೆ ಸಂಶೋಧನಾ ಪ್ರಬಂಧ ಮಂಡಿಸಲು ನನ್ನ ಖಾತೆಯಲ್ಲಿರುವ ಸಿಎಲ್, ಇಎಲ್‌ಗಳನ್ನೂ ಹಾಕಿ ಹೋಗಿದ್ದೇನೆ.
ಅಲ್ಲಿಗೆ ಅನೇಕ ಪದವಿ ಕಾಲೇಜ್ ಹಾಗೂ ಯೂನಿವರ್ಸಿಟಿಗಳ ಉಪನ್ಯಾಸಕರು ಓಓಡಿ ಸೌಲಭ್ಯ ಪಡೆದುಕೊಂಡು ಹಾಜರಾಗಲು ಬಂದಿರುವುದನ್ನು ನೋಡಿ ಛೆ! ನನಗೆ ಪ್ರಬಂಧ ಮಂಡಿಸಲು ಕೂಡ ಈ ಸೌಲಭ್ಯವಿಲ್ಲವಲ್ಲ ಎಂದು ಅನೇಕ ಬಾರಿ ನೊಂದುಕೊಂಡಿದ್ದೇನೆ ಕೂಡ!ಪದವಿ ಪೂರ್ವ ಕಾಲೇಜ್ ಉಪನ್ಯಾಸಕರಲ್ಲಿ ಅನೇಕರು ಉಪನ್ಯಾಸಕರ ಅರ್ಹತಾ ಪರೀಕ್ಷೆಗಳಾದ NET, SLET ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ. ಅನೇಕರು ಸಂಶೋಧನಾ ಅಧ್ಯಯನ ಮಾಡಿ ಪಿಚ್‌ಡಿಯಂಥ ಉನ್ನತ ಪದವಿಗಳನ್ನು ಪಡೆದಿದ್ದಾರೆ. ಆದರೆ ಇವರಾರಿಗೂ ಒಂದಿನಿತು ಮನ್ನಣೆ ಇಲ್ಲ. ಪಿಎಚ್‌ಡಿ ಪಡೆದವರಿಗೆ ನಾಲ್ಕು- ಐದು ಇನ್ಕ್ರಿಮೆಂಟ್ ಕೊಡಿ ಎಂಬ ಬೇಡಿಕೆ ಹಲವು ದಿನಗಳಿಂದ ಇಟ್ಟಿದ್ದರೂ ಅದಕ್ಕೆ ಯಾವುದೇ ಮನ್ನಣೆ ದೊರೆತಿಲ್ಲ. ಅರ್ಹತೆ ಗಳಿಸಿದ ಪಿಯು ಉಪನ್ಯಾಸಕರನ್ನು ಪದವಿ ಕಾಲೇಜ್‌ಗೆ ಭಡ್ತಿ/ ಪದೋನ್ನತಿ ಕೊಡಿ ಎಂದು ಕೇಳಿದರೆ ಅದಕ್ಕೆ ಸಾವಿರ ತಾಂತ್ರಿಕ ಕಾರಣಗಳನ್ನು ಮುಂದೊಡ್ಡಲಾಗುತ್ತದೆ.ಬಹುಶ ಜಗತ್ತಿನಲ್ಲಿ ಒಂದು ಹುದ್ದಾಗೆ ಸೇರಿದ ಮೇಲೆ ಪದೋನ್ನತಿಯೇ ಇಲ್ಲದೆ ಇರುವ ಹುದ್ದಾ ಪಿಯು ಉಪನ್ಯಾಸಕರದ್ದು ಮಾತ್ರ ಇರಬೇಕು! ಉಪನ್ಯಾಸಕನಾಗಿ ಕೆಲಸಕ್ಕೆ ಸೇರಿ ಉಪನ್ಯಾಸಕನಾಗಿಯೇ ನಿವೃತ್ತನಾಗಬೇಕು.
ಎ ಒಂದಷ್ಟು ಬೆರಳೆಣಿಕೆಯಷ್ಟು ಮಂದಿಗೆ ಪ್ರಿನ್ಸಿಪಾಲ್ ಆಗಿ ಭಡ್ತಿ ಹೊಂದುವ ಅವಕಾಶ ಸಿಗುತ್ತದೆ ಅಷ್ಟೇ! ಹೆಚ್ಚಿನವರು ಸೇರಿದ ಹುದ್ದಾಯ ನಿವೃತ್ತರಾಗಬೇಕು. ಪ್ರಾಥಮಿಕ ಶಾಲೆ ಶಿಕ್ಷಕರಾಗಿ ಸೇರಿಕೊಂಡವರು ಪದವಿ ಶಿಕ್ಷಣ ಪಡೆದು ಬಿಎಡ್ ಪದವಿ ಗಳಿಸಿದರೆ ಪ್ರೌಢ ಶಾಲೆ ಶಿಕ್ಷಕರಾಗಿ ಪದೋನ್ನತಿ ಹೊಂದಲು ಅವಕಾಶವಿದೆ. ಪ್ರೌಢ ಶಾಲೆ ಶಿಕ್ಷಕರು ಸ್ನಾತಕೋತ್ತರ ಪದವಿ ಪಡೆದು ಪಿಯು ಉಪನ್ಯಾಸಕರಾಗಿ ಭಡ್ತಿ ಪಡೆಯುತ್ತಾರೆ.
ಆದರೆ ಪಿಯು ಉಪನ್ಯಾಸಕರು ಎನ್‌ಇಟಿ, ಪಿಎಚ್‌ಡಿ ಪದವಿಗಳನ್ನು ಪಡೆದರೂ ಯಾವುದೇ ಪ್ರಯೋಜನವಿಲ್ಲದ ಕಾರಣ ಹೆಚ್ಚಿನ ಅಧ್ಯಯನಕ್ಕೆ, ಪದವಿ ಗಳಿಕೆಗೆ ಮುಂದಾಗುವುದೇ ಇಲ್ಲ. ಅದ್ದರಿಂದ ಪದವಿ ಪೂರ್ವ ಶಿಕ್ಷಣ ಇಲಾಖೆ ನಿಂತ ನೀರಾಗುತ್ತಿದೆ!ಪ್ರಸ್ತುತ ಸರಕಾರಿ ಪದವಿ ಪೂರ್ವ ಕಾಲೇಜ್‌ಗಳಲ್ಲಿ ಸಾಕಷ್ಟು ಅನುಭವ ಇರುವ ಅರ್ಹ ಪ್ರತಿಭಾವಂತ ಉಪನ್ಯಾಸಕರೇ ಇದ್ದಾರೆ. ಆದರೆ ಇವರ ಸಮಸ್ಯೆಗಳು ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಅರ್ಹರಾರೂ ಉಪನ್ಯಾಸಕರಾಗಲು ಮುಂದೆ ಬರಲಾರರು ಖಂಡಿತ. ಈಗಂತೂ ಪಿಯು ಉಪನ್ಯಾಸಕರಾಗಲು ಸ್ನಾತಕೋತ್ತರ ಪದವಿ ಜತೆಗೆ ಬಿಎಡ್ ಕಡ್ಡಾಯವಾಗಿದೆ.
2013ನೇ ವರ್ಷದಲ್ಲಿ ಆಯ್ಕೆಯಾದವರಲ್ಲಿ ಬಿಎಡ್ ಪದವಿ ಇಲ್ಲದ ಸುಮಾರು 800 ಮಂದಿ ಉಪನ್ಯಾಸಕರ ಭವಿಷ್ಯ ಅತಂತ್ರವಾಗಿದೆ. ತಮ್ಮ ಭವಿಷ್ಯದ ಅಭದ್ರತೆ ಕಾಡುತ್ತಿರುವಾಗಲೂ ತನ್ಮಯತೆಯಿಂದ ಪಾಠ ಮಾಡಿ ಉತ್ತಮ ಫಲಿತಾಂಶ ತರುತ್ತಿರುವ ಇವರುಗಳು ನಿಜಕ್ಕೂ ಶ್ಲಾಘ್ಯರು. ಒಂದು ಕಡೆ ಕಡಿಮೆ ವೇತನ, ಇನ್ನೊಂದು ಕಡೆ ವೇತನ ತಾರತಮ್ಯ, ಮತ್ತೊಂದೆಡೆ ಉನ್ನತ ಕಲಿಕೆಗೊಂದಿಷ್ಟೂ ಮನ್ನಣೆ ಇಲ್ಲದ, ಪದೋನ್ನತಿಯ ನಿರೀಕ್ಷೆಯೇ ಇಲ್ಲದ, ಭರವಸೆಯೇ ಇಲ್ಲದ ಯಾಂತ್ರಿಕತೆ, ಯಾವ ಬೇಡಿಕೆಗಳಿಗೂ ಇಲ್ಲದ ಸ್ಪಂದನೆ. ಇನ್ನು ಪ್ರತಿಭಟಿಸದೇ ಏನು ಮಾಡಬೇಕು ಹೇಳಿ? ಉಪನ್ಯಾಸಕರ ಸಮಸ್ಯೆಗಳ ಬಗ್ಗೆ ಗಮನ ಕೊಟ್ಟರೆ ಅವರುಗಳ ಪ್ರತಿಭಟನೆ, ಮೌಲ್ಯ ಮಾಪನ ಬಹಿಷ್ಕಾರಗಳು ಇರುವುದೇ ಇಲ್ಲ ಅಲ್ಲವೇ? ಪಿಯು ಉಪನ್ಯಾಸಕರ ವೇತನ ತಾರತಮ್ಯ ನಿವಾರಣೆ ಮಾಡಿದರೆ ಬೊಕ್ಕಸಕ್ಕೆ ಹೊರೆಯಾಗುತ್ತದೆ. ಇತರರಿಗೆ ಹೆಚ್ಚಿನ ವೇತನ ಕೊಟ್ಟರೆ ಹೊರೆ ಆಗುವುದಿಲ್ಲವೇ? ಇದಕ್ಕೆ ಉತ್ತರಿಸುವವರು ಯಾರು?
(ಲೇಖಕರು ಕನ್ನಡ ಉಪನ್ಯಾಸಕರು ಮತ್ತು ಸಂಶೋಧಕರು)

No comments:

Post a Comment