ರೈಲ್ವೆ ಬಡ್ಜೆಟ್ ಕುರಿತಾಗಿ ಓದುತ್ತಿದ್ದಂತೆ ನೆನಪಿಗೆ ಬಂತು ಮೊನ್ನೆ ಮೊನ್ನೆಯಷ್ಟೇ ನನ್ನ
ಕಣ್ಣೆದುರೇ ನಡೆದ ದಾರುಣ ಘಟನೆ .ಜನವರಿ ತಿಂಗಳ ಒಂಬತ್ತನೇ ತಾರೀಕಿನಂದು ನಾನು ಬೆಳ್ಳಾರೆಯಿಂದ
ಬೆಂಗಳೂರಿಗೆ ಮಂಗಳೂರು –ಬೆಂಗಳೂರು ಟ್ರೈನ್
ನಲ್ಲಿ ಬರುತ್ತಾ ಬೆಳಗ್ಗೆ
ಏಳೂವರೆ ಏಳೂ ಮುಕ್ಕಾಲು ಹೊತ್ತಿಗೆ ಕೆಂಗೇರಿಯಲ್ಲಿ ಇಳಿದಿದ್ದೆ .ಅದೇ ಸಮಯದಲ್ಲಿ ಅಲ್ಲಿ ಮೈಸೂರ್ ಗೆ ಹೋಗುವ ಒಂದು ರೈಲು ಜನರನ್ನು ಹತ್ತಿಸಿಕೊಂಡು ಹಾದು ಹೋಯಿತು .ಒಂದೆರಡು ಕ್ಷಣ
ಕಳೆಯುವಷ್ಟರಲ್ಲಿ ಜನರೆಲ್ಲ ರೈಲ್ವೆ ಟ್ರ್ಯಾಕ್ ಕಡೆ ಬಗ್ಗಿ ನೋಡ ತೊಡಗಿದರು .ಎಲ್ಲರ ಮುಖದಲ್ಲಿ
ಗಾಭರಿ !ನಾನೂ ಬಾಗಿ ನೋಡಿದೆ.ಅಲ್ಲಿ 26-29 ವರ್ಷ ಪ್ರಾಯದ ಯುವಕನೊಬ್ಬ ರೈಲು ಹಳಿಯಲ್ಲಿ ತೀವ್ರವಾಗಿ ಗಾಯಗೊಂಡು ಬಿದ್ದಿದ್ದ .ಟ್ರೈನ್
ಚಲಿಸಲು ಆರಂಭಿಸಿದ ಮೇಲೆ ಆತ ಓಡಿ ಬಂದು ರೈಲು ಹತ್ತಲು ಯತ್ನಿಸಿದ್ದ .ಆಯತಪ್ಪಿ ಜಾರಿ ಹಳಿಗೆ
ಬಿದ್ದಿದ್ದ . ರೈಲಿನ ಚಕ್ರ ಹರಿದು ಆತನ ಕಾಲುಗಳು ಚಿಂದಿ ಚಿಂದಿಯಾಗಿ ಹಳಿಗೆ
ಅಂಟಿಕೊಂಡಿದ್ದವು .ರಕ್ತದ ಮಡುವಿನಲ್ಲಿದ್ದ ಆತನಿಗೆ ಇನ್ನೂ ಎಚ್ಚರವಿತ್ತು .ಸಾವಿನ ಭಯದಿಂದ
ತತ್ತರಿಸಿ ಹೋಗಿದ್ದ ಆತನಿಗೆ ನೋವಿನ ಅನುಭವವಿನ್ನೂ ಉಂಟಾಗಿರಲಿಲ್ಲ .ತಕ್ಷಣ ಆತನಿಗೆ ವೈದ್ಯಕೀಯ
ಸಹಾಯದ ಅಗತ್ಯವಿತ್ತು .ಈ ಬಗ್ಗೆ ಯಾರನ್ನು ಹೇಗೆ ಸಂಪರ್ಕಿಸುವುದು?ಎಂದು ಅಲ್ಲಿರುವ ಯಾರಿಗೂ ತಲೆಗೆ
ಹೋಗಲಿಲ್ಲ.ಫ್ಲಾಟ್ ಫಾರಂ ನಲ್ಲಿ ಇಂಥ ಆಪತ್ತಿನ ಸಂದರ್ಭದಲ್ಲಿ ಸಂಪರ್ಕಿಸುವುದಕ್ಕಾಗಿ ಯಾವುದಾದರೂ
ನಂಬರ್ ಅನ್ನು ಬರೆದಿದೆಯೇ ಎಂದು ಸುತ್ತ ಮುತ್ತ ನೋಡಿದರೆ ಎಲ್ಲೂ ಏನೂ ಕಾಣಿಸಲಿಲ್ಲ.ಒಬ್ಬನೇ ಒಬ್ಬ
ರೈಲ್ವೆ ಅಧಿಕಾರಿ ಅಥವಾ ಕೆಲಸಗಾರರೂ ಕಣ್ಣಿಗೆ ಕಾಣಿಸಲಿಲ್ಲ .ಹಾಗಾಗಿ ಕೂಡಲೇ 108 ಕ್ಕೆ ಡಯಲ್
ಮಾಡಿ ಆಂಬುಲೆನ್ಸ್ ಗೆ ಬರಹೇಳಿದೆ .ನಂತರ 100 ಡಯಲ್ ಮಾಡಿ ಪೋಲಿಸ್ ಕಂಟ್ರೋಲ್ ರೂಂ ಗೆ ಮಾಹಿತಿ ನೀಡಿ ಆತನನನ್ನು ರಕ್ಷಿಸುವಂತೆ ಕೇಳಿಕೊಂಡೆ . ನಂತರ .”ಪ್ರಥಮ
ಚಿಕಿತ್ಸೆಗಾದರೂ ಏನಾದರು ವ್ಯವಸ್ಥೆ ಇದೆಯೇ ?”ಎಂದು ಹುಡುಕಾಡಿದೆ.ಅಲ್ಲಿ ಏನೊಂದೂ ಮಾಹಿತಿ ಅಥವಾ ವ್ಯವಸ್ಥೆ ಇದ್ದದ್ದು ಗೊತ್ತಾಗಲಿಲ್ಲ
.ಇದು ಕೆಂಗೇರಿ ರೈಲ್ವೆ ಸ್ಟೇಷನ್ ಕಥೆ ಮಾತ್ರವಲ್ಲ ,ಎಲ್ಲೆಡೆ ಇದೇ ಕಥೆ-ವ್ಯಥೆ !
ಈ ಯುವಕನ ವಿಚಾರದಲ್ಲಿ ಅದೃಷ್ಟ ಕೈ ಹಿಡಿಯಿತು ,ಆತನಿಗೆ ಸಕಾಲದಲ್ಲಿ ವೈದ್ಯಕೀಯ ಸಹಾಯ ದೊರೆತು ಬದುಕಿ ಉಳಿದಿದ್ದಾನೆ . ಹಾಗಂತ ಎಲ್ಲರ ವಿಚಾರದಲ್ಲಿಯೂ
ಹೀಗೆ ಆಗಲು ಸಾಧ್ಯವೇ ?ಇಂಥ ಸಂದರ್ಭಗಳಲ್ಲಿ
ಸಕಾಲಕ್ಕೆ ಚಿಕಿತ್ಸೆ ದೊರೆಯದೆ ಲಕ್ಷಾಂತರ ಅಮಾಯಕ ಜನರು ಪ್ರಾಣ ಕಳೆದುಕೊಳುತ್ತಿದ್ದಾರೆ .
ಸುಮಾರು 20 ವರ್ಷ ಮೊದಲು ನಾನು
ಪಿಯುಸಿ ಓದುತ್ತಿರುವ ಸಂದರ್ಭದಲ್ಲಿ ನನ್ನದೇ ಕಾಲೇಜ್ ನ ವಿದ್ಯಾರ್ಥಿನಿ ಒಬ್ಬಳು ಹೊಸಂಗಡಿಯ
ರೈಲ್ವೆ ಕ್ರಾಸಿಂಗ್ ನಲ್ಲಿ ರಸ್ತೆ ದಾಟುವಾಗ ರೈಲು ಹಳಿಯ ಎಡೆಯಲ್ಲಿ ಕಾಲು ಸಿಲುಕಿ ಅಪಘಾತಕ್ಕೀಡಾಗಿ ಪ್ರಾಣ
ಕಳೆದುಕೊಂಡ ದೃಶ್ಯ ಇನ್ನೂ ನನಗೆ ಅಚ್ಚಳಿಯದೆ ಉಳಿದಿದೆ .ಆಗ ಅವಳಿಗೆ ಕೂಡಲೇ ವೈದ್ಯಕೀಯ ಸಹಾಯ
ದೊರೆತಿರಲಿಲ್ಲ .ಬಹುಶ ದೊರೆತಿದ್ದರೆ ಕೆಂಗೇರಿಯ ಯುವಕನಂತೆ ಆಕೆಯೂ ಬದುಕಿ ಉಳಿಯುತ್ತಿದ್ದಳೋ ಏನೋ
!
ಇಲಾಖೆಯ ದಿವ್ಯ ನಿರ್ಲಕ್ಷ್ಯ
ಚಲಿಸುವ ರೈಲು ಗಾಡಿಗಳನ್ನು ಹತ್ತುವ ಇಳಿಯುವ ಸಮಯದಲ್ಲಿ ಅನೇಕ
ಅವಘಡಗಳು ಆಗಾಗ ಆಗುತ್ತಿರುವುದು ಅಲ್ಲಲ್ಲಿ ಕಂಡು ಬರುತ್ತದೆ .ಅದೇ ರೀತಿ ಹಳಿಗಳನ್ನು ದಾಟುವ
ವೇಳೆ ಪದೇ ಪದೇ ದುರಂತಗಳು ನಡೆಯುತ್ತಾ ಇರುತ್ತವೆ .ರೈಲ್ವೆ ಕ್ರಾಸಿಂಗ್ ಗಳಲ್ಲಿ ಕೂಡ ಆಗಾಗ
ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ .ಇನ್ನು ಟ್ರೈನ್ ಹಳಿ ತಪ್ಪುವುದು ,ಢಿಕ್ಕಿಯಾಗುವುದು ,ಬೆಂಕಿ ಹಿಡಿಯುವುದು ಯಾವಾಗಲೂ ಕೇಳಿ ಬರುವ ದುರಂತ ವಿಚಾರಗಳೇ ಆಗಿವೆ .ದಿನಾ ಸಾಯೋರಿಗೆ
ಅಳುವವರು ಯಾರು ಎಂಬಂತೆ ಇಂಥ ವಿಚಾರಗಳ ಬಗ್ಗೆ ರೈಲ್ವೆ ಇಲಾಖೆ ದಿವ್ಯ ನಿರ್ಲಕ್ಷ್ಯ ತೋರುತ್ತದೆ
.ಅಪಘಾತ ಸಂಭವಿಸಿದಾಗ ಸುರಕ್ಷತೆ ಬಗ್ಗೆ ಮಾತಾಡುವ ಮಂತ್ರಿಗಳು ಅಧಿಕಾರಿಗಳು ಒಂದಷ್ಟು ಪರಿಹಾರ ಧನ
ಘೋಷಿಸಿ ಕೈ ತೊಳೆದುಕೊಂಡು ಬಿಡುತ್ತಾರೆ .
ಅಧ್ಯಯನ ಸಮಿತಿಯ
ವರದಿ
ಎರಡು ಮೂರು ವರ್ಷಗಳ ಮೊದಲು ರೈಲ್ವೆ ದುರಂತಗಳನ್ನು ತಪ್ಪಿಸಲು
ಕೇಂದ್ರ ಸರ್ಕಾರ ಒಂದು ಅಧ್ಯಯನ ಸಮಿತಿಯನ್ನು ನೇಮಿಸಿ ವರದಿಯನ್ನು ನೀಡುವಂತೆ ಆದೇಶಿಸಿತ್ತು . 2012 ರಲ್ಲಿ ಈ ಸಮಿತಿಯು ತನ್ನ ವರದಿಯನ್ನು ರೈಲ್ವೆ ಇಲಾಖೆಗೆ
ನೀಡಿತ್ತು .ಈ ವರದಿಯಲ್ಲಿ ಮುಖ್ಯವಾಗಿ ರೈಲ್ವೆ ಅಧಿಕಾರಿಗಳ ನಿರ್ಲ್ಯಕ್ಷದ ಕುರಿತಾಗಿ ಹೇಳಲಾಗಿದೆ
.”ರೈಲ್ವೆ ಅಧಿಕಾರಿಗಳ
ನಿರ್ಲ್ಯಕ್ಷ್ಯ ದಿಂದಾಗಿ ಸಾವಿರಾರು ಪ್ರತಿವರ್ಷ ಮಂದಿ ಸಾವನ್ನಪ್ಪುತ್ತಿದ್ದಾರೆ. ರೈಲ್ವೆ ಹಳಿ ದಾಟುವಾಗ ,ಹಾಗೂ ರೈಲ್ವೆ ಕ್ರಾಸಿಂಗ್ ನಲ್ಲಿ ಅಪಘಾತಗಳಾಗಿ ಪ್ರತಿ ವರ್ಷ
ಹದಿನೈದು ಸಾವಿರಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದು ಕೊಳ್ಳುತ್ತಿದ್ದಾರೆ . ಹಳಿ ದಾಟುವಾಗ
ಹೆಚ್ಚಿನ ಅಪಘಾತಗಳು ಸಂಭವಿಸುತ್ತವೆ .ರಸ್ತೆಗಳಲ್ಲಿ ರೈಲು ಹಳಿ ದಾಟಿ ಹೋಗುವುದು ,ಜನರಿಗೆ ರೈಲು ಬರುವ ಬಗ್ಗೆ ಸೂಕ್ತ ಮಾಹಿತಿ ದೊರೆಯದೆ ಇರುವುದು
,ಹಳಿಗಳ ಗುಣಮಟ್ಟ
ಕೆಟ್ಟದಾಗಿದ್ದು ,ಹಳಿಗಳ ನಡುವೆ
ಕಾಲುಗಳು ಸಿಲುಕಿಕೊಂಡು
ಅಪಘಾತವಾಗುವುದು ,ಸಿಗ್ನಲ್ ಗಳ
ಅವ್ಯವಸ್ಥೆ ,ಸಿಬ್ಬಂದಿಗಳ
ನಿರ್ಲ್ಯಕ್ಷ್ಯ ಇತ್ಯಾದಿ ಲೋಪ ದೋಷಗಳನ್ನು ಸರಿ ಪಡಿಸುವ ಯತ್ನವೇ ಮಾಡದೆ ಇರುವುದರಿಂದ ರೈಲ್ವೆ
ಅಪಘಾತಗಳು ಆಗಾಗ ಸಂಭವಿಸುತ್ತವೆ” ಎಂದು ಈ ಸಮಿತಿಯ ವರದಿಯಲ್ಲಿದೆ .
“ಇತ್ತೀಚಿನ ವರ್ಷಗಳಲ್ಲಿ ನಿರಂತರವಾಗಿ ರೈಲ್ವೆ ಅಪಘಾತಗಳಿಂದ ನೂರಾರು ಪ್ರಯಾಣಿಕರ ಜೀವಗಳನ್ನು
ಬಲಿ ತೆಗೆದು ಕೊಳ್ಳುವುದನ್ನು ನೋಡಿದರೆ ದಿಗ್ಭ್ರಮೆಯಾಗುತ್ತದೆ “ಎಂದು ಎಸ್‌ಯುಸಿಐ ಆತಂಕ ವ್ಯಕ್ತಡಿಸಿದೆ. ರೈಲ್ವೆ ದುರಂತಗಳು
ಪದೇ ಪದೇ ನಡೆಯುತ್ತಿದ್ದರೂ ರೈಲ್ವೆ ಪ್ರಾಧಿಕಾರವು ಪ್ರಯಾಣಿಕರ ಸುರಕ್ಷತೆ ಬಗ್ಗೆ ಪ್ರಾಮು ಖ್ಯತೆ
ನೀಡುತ್ತಿಲ್ಲ. ಅಪಘಾತ ತಡೆಯುವ ಉಪಕರಣಗಳನ್ನು ಅಳವಡಿಸಲು ಹಾಗೂ ಸಿಗ್ನಲ್ ವ್ಯವಸ್ಥೆ ಸುಧಾರಿಸಿ
ಅಪಘಾತಗಳ ನಿಯಂತ್ರಿಬೇಕು” ಎಂದು ಎಸ್‌ಯುಸಿಐಯು
ಆಗ್ರಹಿಸಿದೆ.
ಯಾಕೆ ಹೀಗೆ ?
ಇದಕ್ಕೆಲ್ಲ ಕೇವಲ ರೈಲ್ವೆ ಸಿಬ್ಬಂದಿಗಳನ್ನು ಮಾತ್ರ ದೂರಿ ಪ್ರಯೋಜನವಿಲ್ಲ .ಈ ಬಗ್ಗೆ
ರೈಲ್ವೆ ಇಲಾಖೆ ಹಾಗೂ ಸಚಿವರು ಕಾಳಜಿ ವಹಿಸಬೇಕಾಗಿದೆ.ರೈಲ್ವೆ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ
ಇದೆ.
ರೈಲ್ವೆಯಲ್ಲಿ ಸುಮಾರು ಎರಡು ಲಕ್ಷ ಹುದ್ದೆಗಳು
ಖಾಲಿಯಿವೆ.ಅವುಗಳ ಪೈಕಿ ಒಂದು ಲಕ್ಷ ಭದ್ರತಾ ಸಂಬಂಧಿ ಹುದ್ದೆ ಗಳು.ಮೆಂಬರ್ ಟ್ರಾಫಿಕ್ ಮತ್ತು
ಮೆಂಬರ್ ಇಲೆಕ್ಟ್ರಿಕಲ್ ಮುಂತಾದ ಹಲವು ಪ್ರಮುಖ ಹುದ್ದೆಗಳು ಖಾಲಿಯಿವೆ. ವಿವಿಧ ವಲಯಗಳ ಜನರಲ್
ಮ್ಯಾನೇಜರ್ ಮಟ್ಟದ ಹುದ್ದೆಗಳನ್ನೂ ಸರಿಯಾಗಿ ಭರ್ತಿ ಮಾಡಿಲ್ಲ. ಸುರಕ್ಷಾ ವಿಭಾಗದ ಸಿಬ್ಬಂದಿ
ನೇಮಕದಲ್ಲೂ ಇಲಾಖೆ ವಿಫಲವಾಗಿದೆ.ಇಲಾಖೆಯಲ್ಲಿ ಎಲ್ಲೆಡೆ ಇಚ್ಚಾ ಶಕ್ತಿಯ ಕೊರತೆ ಕಾಡುತ್ತಿದೆ ಎಂಬ
ವಿಚಾರ ಇಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ . “ಭಾರತೀಯ ರೈಲ್ವೆಯು ಕಾರ್ಪೊರೇಟ್ ಸುರಕ್ಷಾ ಯೋಜನೆ ಮತ್ತು ಜಾರಿಯ ಒಂದನೆಯ ಹಂತದ ಗುರಿಯನ್ನು
ಕೂಡಾ ತಲುಪಿಲ್ಲ “ಎಂದು ಸಿಎಜಿಯು
ತನ್ನ 2010-11ರ ವರದಿಯಲ್ಲಿ ಹೇಳಿದೆ.”ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಲ್ಲಿ ರೈಲ್ವೆಯ
ರಿಸರ್ಚ್ ಡಿಸೈನ್ ಆ್ಯಂಡ್ ಸ್ಟಾಂಡರ್ಡ್ ಆರ್ಗನೈಸೇಶನ್ ಹಿಂದುಳಿದಿದೆ ಹಾಗೂ ಇದು ರೈಲ್ವೆ
ಬಳಕೆದಾರರ ಜೀವಕ್ಕೆ ಅಪಾಯವೊಡ್ಡಿದೆ ಎಂದು ಅದು ಹೇಳಿದೆ.ಚಾಲಕ ಸಿಬ್ಬಂದಿಗೆ ಸುಧಾರಿತ
ಸೌಲಭ್ಯಗಳನ್ನು ನೀಡುವಲ್ಲಿ ಹಾಗೂ ತರಬೇತಿ ಸೌಕರ್ಯಗಳನ್ನು ಆಧುನೀಕರಣಗೊಳಿಸುವಲ್ಲಿ ಹಾಗೂ
ಅಭಿವೃದ್ಧಿಪಡಿಸುವಲ್ಲಿ ರೈಲ್ವೆ ವಿಫಲವಾಗಿದೆ”ಎಂದು ಸಿಎಜಿ ಆಕ್ಷೇಪ ಮಾಡಿದೆ ಸುರಕ್ಷತೆಗೆ
ಸಿಕ್ಕದ ಆದ್ಯತೆ
ಭಾರತದಲ್ಲಿ ಮೊದಲಬಾರಿಗೆ ರೈಲ್ವೇ ಸಾರಿಗೆ ವ್ಯವಸ್ಥೆಯು 1853 ಜಾರಿಗೆ ಬಂತು. ಭಾರತದಲ್ಲಿ ರೈಲ್ವೇ ಮಾರ್ಗಕ್ಕಾಗಿ 1832 ರಲ್ಲಿ ಮೊಟ್ಟಮೊದಲ ಬಾರಿ ಯೋಜನೆ ಹಾಕಿದರೂ, ಮುಂದಿನ ಹತ್ತು ವರ್ಷ ಅದು ನೆನೆಗುದಿಯಲ್ಲಿಯೇ ಉಳಿಯಿತು. 1844ರಲ್ಲಿ ಅಂದಿನ ಗವರ್ನರ್ ಜನರಲ್ ಲಾರ್ಡ್ ಹಾರ್ಡಿಂಜ್ ಖಾಸಗೀ
ಉದ್ಯಮಿಗಳು ರೈಲ್ವೇ ವ್ಯವಸ್ಥೆಯನ್ನು ಪ್ರಾರಂಭಿಸಲು ಅನುಮತಿ ನೀಡಿದನು. 1951ರಲ್ಲಿ ರೈಲುಗಳನ್ನು ರಾಷ್ಟ್ರೀಕರಿಸಿ ಒಂದುಗೂಡಿಸಲಾಯಿತು ಪ್ರಸ್ತುತ ಭಾರತೀಯ ರೈಲ್ವೆಯು
ಭಾರತದಾದ್ಯಂತ ಆರೂವರೆ ಸಾವಿರ ಕಿಲೋ ಮೀಟರ್ ಗಳಷ್ಟು
ಉದ್ದಕ್ಕೆ ಚಾಚಿಕೊಂಡಿದೆ. ಪ್ರತಿ ದಿನ ಸುಮಾರು ಒಂಬತ್ತು ಸಾವಿರ ಪ್ರಯಾಣಿಕ ರೈಲುಗಳನ್ನು ಸೇರಿದಂತೆ, ಒಟ್ಟು ಸುಮಾರು ಹದಿನೈದು ಸಾವಿರ ರೈಲುಗಳು ಓಡುತ್ತವೆ.ಸುಮಾರು
ಒಂದು ಕೋಟಿ ಎಂಬತ್ತು ಲಕ್ಷ ಜನರು ಪ್ರತಿನಿತ್ಯ
ರೈಲುಗಳಲ್ಲಿ ಓಡಾಡುತ್ತಾರೆ . ಹೀಗೆ ಭಾರತೀಯ ರೈಲ್ವೆಯು
ಜಗತ್ತಿನಲ್ಲಿಯೇ ಅತಿದೊಡ್ದ ರೈಲ್ವೇಜಾಲಗಳಲ್ಲಿ ಒಂದಾಗಿದೆ ಆದರೆ ಒಂದೂವರೆ ಶತಮಾನದ ಹಿಂದೆಯೇ ಅಂದರೆ 14 ಏಪ್ರಿಲ್1853 ರಲ್ಲಿಯೇ ಪ್ಯಾಸೆಂಜರ್ ರೈಲು ಓಡಾಟ ನಮ್ಮ ದೇಶದಲ್ಲಿ ಆರಂಭವಾಗಿದ್ದರೂ ಸುರಕ್ಷತೆಯ
ವಿಚಾರದಲ್ಲಿ ಇನ್ನೂ ಒಂದು ಶತಮಾನದಷ್ಟು ಕಾಲ ಹಿಂದೆ ಬಿದ್ದಿದೆ , ಸುರಕ್ಷತೆಗೆ ಇನ್ನೂ ಸಾಕಷ್ಟು
ಆದ್ಯತೆ ಸಿಕ್ಕಿಲ್ಲ ಎನ್ನುವುದು ವಿಷಾದಕರ ವಿಚಾರವಾಗಿದೆ .
ಪ್ರಸ್ತುತ ನಿನ್ನೆ ಮಂಡನೆಯಾದ ರೈಲ್ವೆ ಬಜೆಟ್ ನಲ್ಲಿ ಭದ್ರತೆ
ಮತ್ತು ಸುರಕ್ಷತೆಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದೆ.ಆದರೆ ಇದರ ಪಾಲು ಎಷ್ಟು ?ಹೇಗೆ ಎಂಬುದು ಸ್ಪಷ್ಟವಾಗಿಲ್ಲ . ರೈಲ್ವೆ ಅಪಘಾತಗಳು ನಡೆದಾಗ ಸಂಪರ್ಕಿಸುವುದಕ್ಕಾಗಿ 24/7 ಸಹಾಯವಾಣಿ ಸ್ಥಾಪಿಸುವುದಾಗಿ ಹೇಳಲಾಗಿದೆ . ಸಬ್ ಅರ್ಬನ್ ಕೋಚ್ ಗಳಲ್ಲಿ ಮಹಿಳಾ ಪ್ರಯಾಣಿಕರ
ಸುರಕ್ಷತೆಗೆ ಸಿ.ಸಿ ಕ್ಯಾಮೆರಾ ಅಳವಡಿಕೆ ಮಾಡುವ ಬಗ್ಗೆ ತಿಳಿಸಿದೆ. ಆದರೆ ಕೋಟಿಗಟ್ಟಲೆ ಜನ
ಓಡಾಡುವ ರೈಲುಗಳ ಸುರಕ್ಷತೆಗೆ ಇಷ್ಟು ಸಾಕಾಗಲಾರದು.
ಏನೇನು ಅಗತ್ಯವಿದೆ ?
ಬೆಂಕಿ ದುರಂತ ಸಂಭವಿಸಿದಾಗ ಬೆಂಕಿ ನಂದಿಸಲು ರೈಲಿನ
ಬೋಗಿಗಳಲ್ಲಿ ಯಾವುದೊಂದೂ ವ್ಯವಸ್ಥೆ ಕಾಣಿಸುವುದಿಲ್ಲ ,ಇದಕ್ಕಾಗಿ ಪ್ರತಿ ಬೋಗಿಯಲ್ಲಿ ಬೆಂಕಿ ನಂದಿಸುವ ಉಪಕರಣದ ಅಳವಡಿಕೆ ಮಾಡಬೇಕು.
ದುರಂತಗಳು ಸಂಭವಿಸಿದಾಗ ಯಾರನ್ನು ಹೇಗೆ ಸಂಪರ್ಕಿಸಬೇಕು? ಎಂಬ ಮಾಹಿತಿಯನ್ನು ಪ್ರತಿ ಬೋಗಿಯಲ್ಲಿ ಹಾಕಬೇಕು .ಪ್ರತಿ
ಬೋಗಿಯಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇರಬೇಕು .ಆಪತ್ಕಾಲದ ಕಿಟಕಿಗಳನ್ನು ಸುಲಭದಲ್ಲಿ
ತೆರೆಯುವಂತೆ ಇರಬೇಕು (ಪ್ರಸ್ತುತ ಹೆಚ್ಚಿನ ರೈಲುಗಳಲ್ಲಿ ಸರಳುಗಳು ಬಾಗಿ ಅಪತ್ಕಾಲದಲ್ಲಿ ಬಿಡಿ
ಸಾವಧಾನವಾಗಿ ಯತ್ನಿಸಿದರೂ ಇದನ್ನು ತೆರೆಯಲುಲು ಸಾಧ್ಯವಾಗುತ್ತಿಲ್ಲ !)
ರೈಲ್ವೆ ದುರಂತಗಳು ಸಂಭವಿಸಿದಾಗ ಕ್ಷಣಾರ್ಧದಲ್ಲಿ ಪ್ರಯಾಣಿಕರ
ರಕ್ಷಣೆಗೆ ಧಾವಿಸಿ ಬರುವ ವಿಶಿಷ್ಟ ಸೇವೆಯನ್ನು ಒದಗಿಸುವ ರೈಲುಗಳು ಪ್ರತಿ
ನಿಲ್ದಾಣದಲ್ಲಿರಬೇಕು.ಇದರಲ್ಲಿ ತರಬೇತಿ ಪಡೆದ ಅರೋಗ್ಯ ಸಿಬ್ಬಂದಿಗಳು ಮತ್ತು ವೈದ್ಯರ ತಂಡ
ತಂಡವಿರಬೇಕು.ಆಕ್ಸಿಜನ್ ಸೇರಿದಂತೆ ಜೇವರಕ್ಷಣೆಗೆ ಬೇಕಾದ ಎಲ್ಲ ಪರಿಕರಗಳು ಇದರಲ್ಲಿರಬೇಕು.
ರೈಲು ಬರುವುದಕ್ಕೆ ಕನಿಷ್ಠ ಹತ್ತು ನಿಮಿಷಗಳ ಮೊದಲೇ ಟಿಕೆಟ್
ಕೊಡುವುದನ್ನು ನಿಲ್ಲಿಸಬೇಕು (ಪ್ರಸ್ತುತ ರೈಲು ಹೋದ ನಂತರ ಕೂಡ ಟಿಕೆಟ್ ನೀಡಿ ಆಗಾಗ ಗಲಾಟೆ
ಆಗುತ್ತಿರುತ್ತದೆ ! )ಆಗ ರೈಲು ಚಲಿಸಲಾರಂಭಿಸಿದ ನಂತರ ಓಡಿ ಬಂದು ಹತ್ತುವಾಗ ಉಂಟಾಗುವ
ಅನಾಹುತಗಳನ್ನು ಸ್ವಲ್ಪ ಮಟ್ಟಿಗೆ ತಡೆಯಲು ಸಾಧ್ಯ.
ರೈಲು
ಚಲಿಸಲಾರಂಭಿಸುವ ಮೊದಲೇ ತನ್ನಿಂತಾನಾಗಿಯೇ ಮುಚ್ಚಿಕೊಳ್ಳುವ ಬಾಗಿಲುಗಳ ವ್ಯವಸ್ಥೆಯಿಂದ ಕೂಡಾ
ಚಲಿಸುವ ಗಾಡಿಗಳನ್ನು ಹತ್ತುವಾಗ ಅಥವಾ ಇಳಿಯುವಾಗ ಆಗುವ ದುರಂತಗಳನ್ನು ತಪ್ಪಿಸಲು ಸಾಧ್ಯ.
ರೈಲುಗಾಡಿಗಳ ಇಂಪ್ಯಾಕ್ಟ್ ವೆಲೋಸಿಟಿ ತುಂಬಾ ಹೆಚ್ಚಿರುತ್ತದೆ
.ಉದಾಹರಣೆಗೆ ಹೇಳುವುದಾದರೆ 6 ಟನ್
ದ್ರವ್ಯರಾಶಿಯುಳ್ಳ ಲಾರಿ ಯೊಂದು ಗಂಟೆಗೆ 40 ಕಿಲೋಮೀಟರ್ ವೇಗದಲ್ಲಿ ಬಂದರೂ ಅದರ ಇಂಪ್ಯಾಕ್ಟ್ ವೆಲೋಸಿಟಿ 6 x 40 =240 km/h ಮಾತ್ರ
ಆಗಿರುತ್ತದೆ.ಅದೇ 10 -15 ಬೋಗಿಗಳ ಒಂದು
ಟ್ರೈನ್ ನ ದ್ರವ್ಯರಾಶಿ ಸುಮಾರು 600 ಟನ್ ಎಂದಿಟ್ಟುಕೊಂಡರೆ ಅದು ಗಂಟೆಗೆ 40 ಕಿಲೋಮೀಟರ್ ವೇಗದಲ್ಲಿ ಬಂದರೂ ಅದರ ಇಂಪ್ಯಾಕ್ಟ್ ವೆಲೋಸಿಟಿ 600x 40 =24000km/h ಆಗಿರುತ್ತದೆ .ಇದು ಸುಮಾರು ಒಂದು ಒಂದೂವರೆ ಮೀಟರ್ ದೂರದಲ್ಲಿ ನಿಂತಿರುವವರನ್ನು ಸೆಳೆಯುವಷ್ಟು ಬಲವಾಗಿರುತ್ತದೆ.ಇದರಿಂದಾಗಿಯೇ
ಆಯತಪ್ಪಿ ಬೀಳುವ ಜನರು ನೇರವಾಗಿ ಟ್ರ್ಯಾಕ್ ನೊಳಗೆ ಜಾರಿ ಬೀಳುತ್ತಾರೆ. ಇಂಪ್ಯಾಕ್ಟ್
ವೆಲೋಸಿಟಿ ಹೆಚ್ಚಿರುವ ಕಾರಣ ರೈಲು ಗಾಡಿಗಳನ್ನು ತಕ್ಷಣ ಬ್ರೇಕ್ ಹಾಕಿ ನಿಲ್ಲಿಸಲು ಆಗುವುದಿಲ್ಲ.ಇಂಪ್ಯಾಕ್ಟ್ ವೆಲೋಸಿಟಿ ಹೆಚ್ಚಿರುವ ಕಾರಣದಿಂದ ರೈಲು ಅಪಘಾತವಾದರೆ ಲಾರಿ ಅಪಘಾತಕ್ಕಿಂತ
ನೂರು ಪಟ್ಟು ಹೆಚ್ಚು ಬಲಯುತವಾಗಿರುತ್ತದೆ.ಪರಿಣಾಮ ಕೂಡ ಭೀಕರವಾದ್ದೇ ಆಗುತ್ತದೆ.
ಆದ್ದರಿಂದ ಈ ಬಗ್ಗೆ ಜನರಿಗೆ ಹೆಚ್ಚಿನ
ಮಾಹಿತಿ ಕೊಡುವ ವ್ಯವಸ್ಥೆ ಮಾಡಬೇಕಿದೆ .ರೈಲ್ವೆ ನಿಲ್ದಾಣಗಳಲ್ಲಿ ಹಳದಿ ಗೆರೆಯನ್ನು ಯಾರೂ
ದಾಟದಂತೆ ಎಚ್ಚರಿಕೆ ನೀಡಬೇಕು ಒಂದೊಮ್ಮೆ ಪ್ಲಾಟ್ ಫಾರಂ ನಿಂದ ಜಾರಿ ಬಿದ್ದರೂ ಟ್ರ್ಯಾಕ್ ಗೆ ಬೀಳದಂತೆ ಸಾಕಷ್ಟು
ಅಂತರವನ್ನು ಮಾಡಿದರೆ ಒಳ್ಳೆಯದು ಅಥವಾ ಅಂತರವೇ ಇಲ್ಲದಂತೆ ಮಾಡಿದರೂ ಜನರು ಜಾರಿ ಟ್ರ್ಯಾಕ್ ಮೇಲೆ
ಬೀಳುವ ಸಾಧ್ಯತೆಗಳು
ಇರುವುದಿಲ್ಲ .
ಎಲ್ಲ ರೈಲ್ವೆ
ಕ್ರಾಸಿಂಗ್ ಗಳಲ್ಲಿ ಕೂಡ ಮೇಲ್ಸೇತುವೆ ನಿರ್ಮಿಸಬೇಕು.
ರೈಲು ನಿಲ್ದಾಣಗಳಲ್ಲಿ ಹಳಿಗಳ ಮೇಲೆ ದಾಟದಂತೆ ಎಚ್ಚರಿಕೆ
ನೀಡಬೇಕು .ಜೊತೆಗೆ ಫ್ಲಾಟ್ ಫಾರಂ ನ ಎತ್ತರವನ್ನು ಎರಡಡಿಗಳಷ್ಟು ಎತ್ತರಿಸಿದರೆ ಜನರಿಗೆ
ಸುಲಭದಲ್ಲಿ ಹತ್ತಿ ಇಳಿಯಲು ಸಾಧ್ಯವಾಗಲಾರದು .ಸುರಕ್ಷತೆ ಬಗ್ಗೆ ಸಾಕಷ್ಟು ಮಾಹಿತಿ ನೀಡಬೇಕು
.ಒಟ್ಟಿನಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ಸಿಗಬೇಕಾಗಿದೆ.
ಡಾ.ಲಕ್ಷ್ಮೀ ಜಿ ಪ್ರಸಾದ
ಕನ್ನಡ ಉಪನ್ಯಾಸಕಿ
ಸರ್ಕಾರಿ ಪದವಿಪೂರ್ವ ಕಾಲೇಜ್
ಬೆಳ್ಳಾರೆ ಸುಳ್ಯ ತಾಲೂಕು ,ದ.ಕ ಜಿಲ್ಲೆ
samgramahithi@gmail.com
No comments:
Post a Comment