Friday, 30 January 2015

ಪ್ಲಾಸ್ಟಿಕ್ ಎಂಬ ಬಹುವಿಧ ಮಾರಿ,ಸರಿಯಾಗಿದೆ ನಿಷೇಧ ಜಾರಿ :ಕನ್ನಡ ಪ್ರಭ 30 ಜನವರಿ 2015 ಪುಟ 7






ನಮ್ಮಲ್ಲಿ  ಎಲ್ಲಿ ನೋಡಿದರೂ ಅಲ್ಲಿ ಕಸದ ರಾಶಿ ಕಾಣಿಸುತ್ತದೆ.ಅದರಲ್ಲಿ ಎಂಬತ್ತು ಶೇಕಡಾ ಪ್ಲಾಸ್ಟಿಕ್ ತ್ಯಾಜ್ಯವೇ ಇರುತ್ತದೆ  .ಕಸದ ನಿರ್ವಹಣೆಗೆ ದೊಡ್ಡ ತೊಡಕೇ ಪ್ಲಾಸ್ಟಿಕ್ .ಸ್ವಚ್ಛ ಭಾರತ ಅಭಿಯಾನ ಯಶಸ್ವಿಯಾಗಲು ಕೂಡಾ ಕೇವಲ ಗುಡಿಸಿದರೆ ,ಸ್ವಚ್ಛ ಗೊಳಿಸಿದರೆ ಸಾಲದು ,ಪ್ಲಾಸ್ಟಿಕ್ ಬಳಕೆಯ ಮೇಲೆ ಹಿಡಿತ ಕೂಡಾ ಅತ್ಯಗತ್ಯ .ಪ್ಲಾಸ್ಟಿಕ್ ಬಳಕೆಯ ಮೇಲೆ ನಿರ್ಬಂಧ ಹೇರುವ ತನಕ ಸ್ವಚ್ಚ ಭಾರತ ಕನಸೇ ಆಗಿ ಉಳಿಯುತ್ತದೆ .ಪ್ಲಾಸ್ಟಿಕ್ ಅನ್ನು ನೂರಕ್ಕೆ ನೂರರಷ್ಟು ನಿಷೇಧಿಸಲು ಸಾಧ್ಯವಿಲ್ಲ .ಆದರೆ ಪ್ಲಾಸ್ಟಿಕ್ ಕೈ ಚೀಲಗಳ ಬಳಕೆಯನ್ನು  ಬಳಸಿ ಬಿಸಾಡುವ ಪ್ಲಾಸ್ಟಿಕ್ ತಟ್ಟೆ ಲೋಟಹಾಗೂ ಇತರ ವಸ್ತುಗಳ ಬಳಕೆಯನ್ನು ನಿಯಂತ್ರಿಸಬಹುದು ,ಪ್ಲಾಸ್ಟಿಕ್ ಧ್ವಜಗಳ ಬಳಕೆ ,ಪ್ಲಾಸ್ಟಿಕ್ ನ ಬಣ್ಣದ ಅಲಂಕಾರಿಕ ಕಾಗದಗಳ ಬಳಕೆಯನ್ನು  ನಿಯಂತ್ರಿಸಲು ಖಂಡಿತಾ ಸಾಧ್ಯ.
ಪ್ಲಾಸ್ಟಿಕ್ನ ಹುಟ್ಟು ಆಕಸ್ಮಿಕವಾಗಿ ಆಯಿತು. ಆದರೆ ಅದರ ನಾಶ ಮಾತ್ರ ಅಸಾಧ್ಯವಾಗಿದೆ.
ಹಿಂದೆ ಬಿಲಿಯರ್ಡ್ಸ್ ಚೆಂಡನ್ನು ದಂತದಿಂದ ತಯಾರಿಸುತ್ತಿದ್ದರು. ದಂತ ತುಂಬಾ ದುಬಾರಿಯಾದ ಕಾರಣ ಬಿಲಿಯರ್ಡ್ಸ್ ಚೆಂಡನ್ನು ತಯಾರಿಸಲು ಯೋಗ್ಯವಾದಂತ ಬೇರೆ ವಸ್ತುವನ್ನು ಕಂಡುಹಿಡಿದವರಿಗೆ ಹತ್ತು ಸಾವಿರ ಡಾಲರ್ ಬಹುಮಾನ ನೀಡುವುದಾಗಿ ಅಮೆರಿಕದ ಸಂಸ್ಥೆಯೊಂದು ಸಾವಿರದ ಎಂಟು ನೂರ ಅರುವತ್ತಮೂರರಲ್ಲಿ ಪ್ರಕಟಿಸಿತು.
ಜಾನ್ ವೆಸ್ಲಿ ಹ್ಯಾಟ್ ಎಂಬ ಹೆಸರಿನ ಹದಿನಾರು ವರ್ಷದ ಯುವಕ ಮುದ್ರಣಾಲಯದಲ್ಲಿ ಕೆಲಸ ಮಾಡುತ್ತಿದ್ದ. ಒಮ್ಮೆ ಅಚ್ಚುಮೊಳೆ ಜೋಡಿಸುವಾಗ ಅವನ ಬೆರಳಿಗೆ ಗಾಯವಾಯಿತು. ತಕ್ಷಣಕ್ಕೆ ಯಾವ ಔಷಧಿಯೂ ಸಿಗದಿದ್ದುದರಿಂದ ವೆಸ್ಲಿ ಹ್ಯಾಟ್, ಕೈಗೆ ಸಿಕ್ಕಿದ ಕೊಲೋಡಿಯನ್ ದ್ರಾವಣವನ್ನು ಗಾಯದ ಮೇಲೆ ಸವರುತ್ತಾನೆ . ಹೀಗೆ ಸವರಿದ ದ್ರಾವಣ ಸ್ವಲ್ಪ ಹೊತ್ತಿನಲ್ಲೇ ಒಣಗಿ ಹಗುರವಾದ ತೆಳು ಪೊರೆ ಉಂಟಾಯಿತು. ಇದೇ ಮೊತ್ತಮೊದಲ ಪ್ಲಾಸ್ಟಿಕ್  !  ನಂತರದ ದಿನಗಳಲ್ಲಿ ನಾನಾ ವಿಧವಾದ ಪ್ಲಾಸ್ಟಿಕ್ ನ ಉತ್ಪಾದನೆ ಮತ್ತು ಬಳಕೆ ಜಾರಿಗೆ ಬಂತು .ಜಾನ್ ವೆಸ್ಲಿ ಪ್ಲಾಸ್ಟಿಕ್ ಅನ್ನು ಉಪಯೋಗಿಸಿ ಬಿಲಿಯರ್ಡ್ಸ್ ಚೆಂಡು ಅನ್ನು ತಯಾರಿಸಿ ಬಹುಮಾನ ಗೆಲ್ಲದಿದ್ದರೂ ಪ್ಲಾಸ್ಟಿಕ್ ಜನಕ ಎಂಬ ಖ್ಯಾತಿಯನ್ನು ಪಡೆಯುತ್ತಾನೆ .
ಕೊಲೋಡಿಯನ್ ದ್ರಾವಣವೆಂಬುದು ನೈಟ್ರೊಸೆಲ್ಯುಲೋಸ್, ಮದ್ಯಸಾರ ಮತ್ತು ಈಥರ್‌ಗಳ ಮಿಶ್ರಣ. ಇದನ್ನು ಗಾಳಿಗೆ ತೆರೆದಿಟ್ಟರೆ ಮದ್ಯಸಾರ ಮತ್ತು ಈಥರ್ ಆವಿಯಾಗಿ ಅದು ಹಗುರವಾದ ತೆಳು ಪೊರೆಯಂತಾಗುತ್ತದೆ.
ಕೆಲವು ಸಣ್ಣ ಸಣ್ಣ ಅಣುಗಳು ರಾಸಾಯನಿಕ ಬಂಧಗಳಿಗೆ ಸಿಲುಕಿ ಬೃಹತ್ ಅಣುಗಳಾಗುತ್ತವೆ. ಇವುಗಳನ್ನು ಪಾಲಿಮರುಗಳೆಂದು ಕರೆಯುತ್ತಾರೆ. ಅಣುರಚನೆಯನ್ನು ಬದಲಿಸಿ ಬೇಕಾದಂತ ಪಾಲಿಮರನ್ನು ತಯಾರಿಸಬಹುದು. ಈ ಪಾಲಿಮರುಗಳೇ ಪ್ಲಾಸ್ಟಿಕ್ಕುಗಳು. ಪಾಲಿಮರುಗಳ ಗುಣಲಕ್ಷಣಗಳು ವಿಶೇಷವಾಗಿ ಅವುಗಳ ಅಣುರಚನೆಯನ್ನು ಅವಲಂಬಿಸಿವೆ.
.
 ಪ್ಲಾಸ್ಟಿಕ್ ನಿಂದಾಗುವ ಹಾನಿಗಳು  
ಪ್ಲಾಸ್ಟಿಕ್ ಹುಟ್ಟು ಹಾಕುವ ಅಪಾಯಗಳು  ಒಂದೆರಡಲ್ಲ ,ಅದು ನಾನಾ ವಿಧವಾದ ಅಡ್ಡಿ ಆತಂಕಗಳನ್ನೂ ದುಷ್ಪರಿಣಾಮಗಳನ್ನು ಉಂಟುಮಾಡುತ್ತದೆ .
ಪ್ಲಾಸ್ಟಿಕ್ ತಯಾರಿಕಾ ಹಂತದಲ್ಲಿಯೇ ಇದು ದೊಡ್ಡ ಮಟ್ಟದ  ಮಾಲಿನ್ಯವನ್ನು  ಉಂಟುಮಾಡುತ್ತದೆ .ಇದು  ನೇರವಾಗಿ ಮನುಷ್ಯ ಮತ್ತು ಪ್ರಾಣಿಗಳ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರುತ್ತದೆ. ಅಮೆರಿಕದ ಪರಿಸರ ಸಂರಕ್ಷಣಾ ಸಂಸ್ಥೆ 1986 ರಲ್ಲಿ ತೀರ ಅಪಾಯಕಾರಿ ತ್ಯಾಜ್ಯವನ್ನು ಉತ್ಪಾದಿಸುವ ಇಪ್ಪತ್ತು ರಾಸಾಯನಿಕಗಳ  ಪಟ್ಟಿಯೊಂದನ್ನು ತಯಾರಿಸಿತ್ತು. ಅದರಲ್ಲಿ ಮೊದಲ ಐದು ರಾಸಾಯನಿಕಗಳು ಪ್ಲಾಸ್ಟಿಕ್ ಕಾರ್ಖಾನೆಗಳಲ್ಲಿ ಸಾಮಾನ್ಯವಾಗಿ ಉಪಯೋಗಿಸುವಂಥವುಗಳಾಗಿವೆ.
ಪ್ಲಾಸ್ಟಿಕ್ ತಯಾರಿಕೆಗೆ ಕ್ಯಾಡ್ಮಿಯಂ, ಟೈಟಾನಿಯಂ ಡೈ ಆಕ್ಸೈಡ್, ಫಾಸ್ಟೇಟ್, ಥಾಲೈಟ್ಸ್, ಪಾಲಿಕ್ಲೋನಿನೇಟೆಡ್ ಬೈಫಿನೈಲ್, ಆರ್ತೋ ಟೈಕ್ರಿಸಾಯಿನ್, ಎಥಿಲಿನ್, ಪೊಲಿವಿನೈಲ್ ಕ್ಲೋರೈಡ್, ಡಯಾಕ್ಸಿನ್ ಹಾಗೂ ಸೀಸದಿಂದ ಕೂಡಿದ ಅನೇಕ ರಾಸಾಯನಿಕಗಳನ್ನು ಬಳಸುತ್ತಾರೆ. ಇವುಗಳೆಲ್ಲ ತಮ್ಮದೇ ಆದ ರೀತಿಯಲ್ಲಿ ವಿಷದ ತುತ್ತುಗಳು. ಇವು ಮಕ್ಕಳ ಎಲುಬುಗಳನ್ನು ವಿರೂಪಗೊಳಿಸಬಲ್ಲ ವಿಷಕಾರಿ ವಸ್ತುಗಳಾಗಿವೆ. ಇವು ಕ್ಯಾನ್ಸರ್ ರೋಗಕ್ಕೆ ಕಾರಣವಾಗಬಹುದು. ನರಮಂಡಲಕ್ಕೆ ಧಕ್ಕೆಯುಂಟುಮಾಡಿ ಮೆದುಳು ಮತ್ತು ಕಣ್ಣುಗಳಿಗೆ ಹಾನಿಯುಂಟುಮಾಡಬಲ್ಲವು.
 ಪ್ಲಾಸ್ಟಿಕ್ ವಸ್ತುಗಳು ಸಾಮಾನ್ಯವಾಗಿ ಯಾವುದೇ ಒಂದು ವಸ್ತುವಿನೊಂದಿಗೂ ವರ್ತಿಸುವುದಿಲ್ಲ ಆದರೆ ಪ್ಲಾಸ್ಟಿಕ್ಕಿನಲ್ಲಿರುವ ಕೆಲವೊಂದು ವಿಷಕಾರಿ ರಾಸಾಯನಿಕಗಳು ದೀರ್ಘಕಾಲದ ಸಂಪರ್ಕದಲ್ಲಿ ಆಹಾರ ಪದಾರ್ಥಗಳೊಂದಿಗೆ ವರ್ತಿಸುವ ಸಾಮರ್ಥ್ಯವನ್ನು ಹೊಂದಿವೆ.
ಉಪ್ಪಿನಕಾಯಿಯಂಥಹ ತೇವಾಂಶವಿರುವ ಆಹಾರ ಪದಾರ್ಥಗಳು ದೀರ್ಘಕಾಲ ಪ್ಲಾಸ್ಟಿಕ್ಕಿನೊಂದಿಗೆ ಇದ್ದಾಗ ಅಲ್ಲಿ ರಾಸಾಯನಿಕ ಪ್ರಕ್ರಿಯೆ ಉಂಟಾಗಿ ಅವು ವಿಷವಾಗಿ ಪರಿವರ್ತನೆಗೊಳ್ಳುತ್ತವೆ.

ಜನರು ಪ್ಲಾಸ್ಟಿಕ್ ಚೀಲಗಳಲ್ಲಿ ಹಸಿ ತ್ಯಾಜ್ಯವನ್ನು ತುಂಬಿ ಬಿಸಾಡುತ್ತಾರೆ.ಇದರಿಂದಾಗಿ ಆ ಹಸಿ ತ್ಯಾಜ್ಯ ನೆಲದ ಸಂಪರ್ಕವನ್ನು ಪಡೆಯದೇ ಅಲ್ಲಿ ಕೊಳೆತು ನಾರುತ್ತದೆ.ಮಣ್ಣಿನಲ್ಲಿ ಸೇರಿ ಹೋಗುವ ಅವಕಾಶ ಅದಕ್ಕೆ ಇರುವುದೇ ಇಲ್ಲ .
.ಪ್ಲಾಸ್ಟಿಕ್ ಚೀಲಗಲ್ಲಿ ತುಂಬಿ ಬಿಸಾಕಿದ ಆಹಾರ ವಸ್ತುಗಳನ್ನು ತಿನ್ನ ಬಯಸುವ ಪ್ರಾಣಿ ಪಕ್ಷಿಗಳು ಅದನು ಪ್ಲಾಸ್ಟಿಕ್ ನೊಂದಿಗೆ ನುಂಗಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತವೆ .ನಮ್ಮ ದೇಶದಲ್ಲಿ ವರ್ಷಕ್ಕೆ ಸುಮಾರು ಇಪ್ಪತ್ತು ಸಾವಿರ ಜಾನುವಾರುಗಳು ಪ್ಲಾಸ್ಟಿಕ್  ನುಂಗಿ ಪ್ರಾಣವನ್ನು ಕಳೆದುಕೊಳುತ್ತವೆ !
.ಪ್ಲಾಸ್ಟಿಕ್ ವಸ್ತುಗಳು ಮಣ್ಣಿನಲ್ಲಿರುವ ಎರೆಹುಳಗಳ ಜೀವಕ್ಕೆ ಮಾರಕವಾಗಿವೆ ಇದರಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತದೆ .
ಪ್ಲಾಸ್ಟಿಕ್ ಮಣ್ಣಿನಲ್ಲಿ ಸಸಿಗಳ ಬೇರು ಇಳಿಯದಂತೆ ತಡೆಯುತ್ತದೆ .ಇದರಿಂದಾಗಿ ಪ್ಲಾಸ್ಟಿಕ್  ಇರುವಲ್ಲಿ ಒಂದು ಹುಲ್ಲು ಕಡ್ಡಿ ಕೂಡ ಹುಟ್ಟುವುದಿಲ್ಲ.ನೀರು ಮಣ್ಣಿನಲ್ಲಿ ಇಂಗದಂತೆ ಪ್ಲಾಸ್ಟಿಕ್ ತಡೆಯುತ್ತದೆ. ಹೀಗೆ   ಅಂತರ್ಜಲದ ಮಟ್ಟ ಕುಸಿಯಲು ಪ್ಲಾಸ್ಟಿಕ್ ಕಾರಣವಾಗುತ್ತದೆ
ಉಪಯೋಗಿಸಿ ಬಿಸಾಡುವ ಪ್ಲಾಸ್ಟಿಕ್ ತಟ್ಟೆ ಲೋಟಗಳಲ್ಲಿ  ನೀರು ನಿಲ್ಲುತ್ತದೆ .ಇಲ್ಲಿ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡುತ್ತವೆ .ಆದ್ದರಿಂದ ಇವು  ಮಲೇರಿಯಾ ,ಫೈಲೆರಿಯಾ(ಆನೆಕಾಲು ರೋಗ ),ಡೆಂಗ್ಯೂ ,ಚಿಕುನ್ ಗುನ್ಯಾ ದಂತ ಮಾರಕ ರೋಗಗಳ ಆಶ್ರಯತಾಣವಾಗುತ್ತವೆ.
ಪ್ಲಾಸ್ಟಿಕ್ ನೂರು  ವರ್ಷ ಕಳೆದರೂ ಮಣ್ಣಿನಲ್ಲಿ ಸೇರಿ ಹೋಗುವುದಿಲ್ಲ .ಇದನ್ನು ಉರಿಸಿದಾಗ ಅದು ಮುದ್ದೆಯಾಗುತ್ತದೆಯೇ ಹೊರತು ನಾಶವಾಗುವುದಿಲ್ಲ .ಇದನ್ನು ಉರಿಸಿದಾಗ ದೊಡ್ಡ ಪ್ರಮಾಣದ  ವಿಷಕಾರಿ ಅನಿಲ ಬಿಡುಗಡೆಯಾಗುತ್ತದೆ .ಇದು ಮಾನವನ ಆರೋಗ್ಯಕ್ಕೆ  ಹಾನಿಕರವಾಗಿದೆ ಮತ್ತು ಪರಿಸರವನ್ನು ಮಲಿನಗೊಳಿಸುತ್ತದೆ .

ಮಹಾಪೂರಕ್ಕೂ ಪ್ಲಾಸ್ಟಿಕ್ ಕಾರಣವಾಗುತ್ತದೆ! 26 ಜುಲೈ 2005 ರಂದು ಮುಂಬೈ ಯಲ್ಲಿ ಜೋರಾಗಿ ಮಳೆ ಬಂದು ಮಹಾಪ್ರಳಯ ಉಂಟಾಗಿತ್ತು .ಇದಕ್ಕೆ ಅನೇಕ ಕಾರಣಗಳಿದ್ದರೂ “ಪ್ಲಾಸ್ಟಿಕ್ ಚೀಲದ ಬಳಕೆಯೂ ಇದಕ್ಕೆ ಒಂದು ಬಲವಾದ ಕಾರಣವಾಗಿತ್ತು” ಎಂದು ಮಿಲಿಂದ ಮುರುಗಕರ ,ಮಹೇಶ ಶೆಲಾರ ಮೊದಲಾದವರು ಅಭಿಪ್ರಾಯಪಟ್ಟಿದ್ದಾರೆ .”ಪ್ರತಿ ಬಾರಿ ಮಳೆ ಬಂದಾಗಲೂ ಚರಂಡಿ ಕಟ್ಟಿಕೊಂಡು ನೀರು ಉಕ್ಕಿ ಹರಿಯಲು ಪ್ಲಾಸ್ಟಿಕ್ ತ್ಯಾಜ್ಯವೂ ಒಂದು ಮುಖ್ಯ ಕಾರಣ” ಎಂಬುದು ಕಣ್ಣಿಗೆ ಕಾಣುವ ಸತ್ಯವೇ ಆಗಿದೆ .

“ಪ್ಲಾಸ್ಟಿಕ್  ವಿಭಜನೆಯಾಗುವಾಗ ದೊಡ್ಡ ಪ್ರಮಾಣದ ರಾಸಾಯನಿಕ  ಘಟಕ ಹೊರ ಬೀಳುತ್ತದೆ ಇದರಿಂದ  ಭೂಮಿ ಬಂಜರಾಗುತ್ತದೆ”ಎಂದು ಅರವಿಂದ ಜಾಧವ ಅವರು ಹೇಳಿದ್ದಾರೆ .ಪ್ಲಾಸ್ಟಿಕ್ ಜಲಾಶಯಗಳಿಗೆ ಸೇರಿದಾಗ ಅದರಲ್ಲಿನ ರಾಸಾಯನಿಕ ಘಟಕಗಳು ನೀರಿಗೆ ಸೇರುತ್ತವೆ.ಆ ನೀರನ್ನು ಬೆಳೆ ಬೆಳೆಯಲು ಬಳಕೆ ಮಾಡುವುದರಿಂದ ಭೂಮಿಯ ಧಾರಣೆ ಕ್ಷಮತೆ ಮೇಲೆ ಪರಿಣಾಮ ಬೀರುತ್ತದೆ ,ಹಾಗೆಯೇ ಉತ್ಪನ್ನದ ಮೇಲೂ ಪರಿಣಾಮ ಉಂಟಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ .
ಹೀಗೆ ನಾನಾ ವಿಧವಾದ ದುಷ್ಪರಿಣಾಮಗಳನ್ನುಂಟು ಮಾಡುವ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಈ ಹಿಂದೆ ಲಯನ್ಸ್ ಸಂಸ್ಥೆ  ಹೆಕ್ಕಿಕೋ ಚಳವಳಿ/ಆಂದೋಲನ  ಹುಟ್ಟು ಹಾಕಿತ್ತು .ಅನೇಕರು ಈ ನಿಟ್ಟಿನಲ್ಲಿ ಯತ್ನಿಸಿದರಾದರೂ ಅದು ದೊಡ್ಡ ಯಶಸ್ಸನ್ನು ಪಡೆಯಲಿಲ್ಲ .
ಈ ಬಗ್ಗೆ ಒಂದು ವಿಚಾರ ನೆನಪಾಗುತ್ತದೆ .ಪ್ಲಾಸ್ಟಿಕ್ ಬಳಕೆಯ ನಿಯಂತ್ರಣ ಹಾಗೂ ಹಾನಿಯನ್ನು ತಡೆಗಟ್ಟುವ ಸಲುವಾಗಿ ಸಂಸ್ಥೆಯೊಂದು ಮಂಗಳೂರಿನಲ್ಲಿ  ಪ್ರತಿವರ್ಷ ಪ್ಲಾಸ್ಟಿಕ್ ಹೆಕ್ಕುವ/ ಸಂಗ್ರಹಿಸುವ ಒಂದು ಸ್ಪರ್ಧೆ ಏರ್ಪಡಿಸುತ್ತಾ ಇತ್ತು ,(ಈಗಲೂ ಇರಬಹುದೋ ಏನೋ ?)ಪ್ಲಾಸ್ಟಿಕ್ ಹೆಕ್ಕಿಕೋ ಆಂದೋಲನದಲ್ಲಿ ಸಕ್ರಿಯವಾಗಿದ್ದ ಸಾಮಾಜಿಕ ಕಾರ್ಯ ಕರ್ತೆ ಒಬ್ಬರ ಪರಿಚಯ  ನನಗೆ ಇತ್ತು .ಅವರ ಮನೆ ಕೆಲಸದ ಹುಡುಗಿ ಅಂಗಡಿಗೆ ಹೋದಾಗೆಲ್ಲ ಪ್ರತಿಯೊಂದು ವಸ್ತುವಿಗೂ ಬೇರೆ ಬೇರೆ ಪ್ಲಾಸ್ಟಿಕ್ ಕೈಚೀಲ ಕೇಳಿ ತುಂಬಿ ತರುತ್ತಿರುವುದನ್ನು ಗಮನಿಸಿ ಈ ಬಗ್ಗೆ ವಿಚಾರಿಸಿದ್ದೆ.ಆಗ ಮುಗ್ಧಳಾಗಿದ್ದ ಅವಳು ನಮ್ಮ ಮೇಡಂ ಪ್ಲಾಸ್ಟಿಕ್ ಸಂಗ್ರಹ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ .ಬಹುಮಾನ ಬರಲು ತುಂಬಾ ಪ್ಲಾಸ್ಟಿಕ್ ಸಂಗ್ರಹ ಆಗಬೇಕು ಅದಕ್ಕೆ ಸಾಧ್ಯವಾದಷ್ಟು ಹೆಚ್ಚು ಪ್ಲಾಸ್ಟಿಕ್ ಚೀಲಗಳನ್ನು ಅಂಗಡಿಗಳಿಂದ ತರುತ್ತೇವೆ” ಎಂದು ಪ್ರಾಮಾಣಿಕವಾಗಿ ಹೇಳಿದಳು .ಬಹುಮಾನಕ್ಕಾಗಿ ಹೆಚ್ಚು ಹೆಚ್ಚು ಪ್ಲಾಸ್ಟಿಕ್ ಬಳಕೆ ಮಾಡುವ ಇವರುಗಳ ಸಾಮಾಜಿಕ ಕಾಳಜಿ ಬಗ್ಗೆ ಹೇಳುವುದಕ್ಕೇನು ಉಳಿದಿದೆ ?!
ಆ ಸಮಯದಲ್ಲಿ ಹೆಕ್ಕಿಕೋ ಅಂದೋಲನದ ಪ್ರೇರಣೆ ಪಡೆದ ಮಂಗಳೂರು ಹವ್ಯಕ ಸಭಾ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಪ್ಲಾಸ್ಟಿಕ್ ಕೈ ಚೀಲದ ಬದಲು ಹಟ್ಟಿ ಬಟ್ಟೆಯ ಕೈ ಚೀಲಗಳನ್ನು ಬಳಕೆಗೆ ತಂದು ಪ್ಲಾಸ್ಟಿಕ್ ನಿಯಂತ್ರಣಕ್ಕೆ ಯತ್ನಿಸಿದ್ದವು ,ಆದರೆ ಜನರ ಇಚ್ಚಾ ಶಕ್ತಿಯ ಕೊರತೆ ,ಕಾಳಜಿ ಇಲ್ಲದಿರುವಿಕೆಯ ಕಾರಣದಿಂದ ಕ್ರಮೇಣ ಇವೆಲ್ಲ ಅವಜ್ಞೆಗೆ ಒಳಗಾಗಿ ದೂರ ಸರಿದವು.
ನಾನೂ ಕೂಡ  ನಾನು ಕೆಲಸ ಮಾಡುತ್ತಿದ್ದ ಶಾಲೆಯ ಅವರಣದಲ್ಲಿ ಬಳಸಿ ಬಿಸಾಡುವ ತಟ್ಟೆ ಲೋಟಗಳನ್ನು ಬಳಕೆಯನ್ನು ತಡೆಯುವ ವಿಫಲ ಯತ್ನ ಮಾಡಿದ್ದೆ !ಒಳ್ಳೆ ಕಾರ್ಯಕ್ಕೆ ಬೆಂಬಲ ಸಿಗುವುದು ಬಿಡಿ ಎಲ್ಲರ ವಿರೋಧ ಎದುರಿಸಬೇಕಾಯಿತು ಎನ್ನುವುದು ವಾಸ್ತವ !ಹೋಟೆಲ್ ಗಳಲ್ಲಿ ಸ್ಟೀಲ್ ತಟ್ಟೆ ಲೋಟಗಳನ್ನು ಬಳಸುವ ಶಾಲಾ ಶಿಕ್ಷಕರಿಗೆ ಶಾಲೆಯ ಕಾರ್ಯಕ್ರಮಗಳಲ್ಲಿ ಸ್ಟೀಲ್ ತಟ್ಟೆ ಲೋಟಗಳು ಅಶುಚಿ ಎನಿಸಿದವು !ಉಪಯೋಗಿಸಿ ಬಿಸಾಡುವ ಪ್ಲಾಸ್ಟಿಕ್ ತಟ್ಟೆ ಲೋಟಗಳು ಹೈಜೆನಿಕ್ ಎನಿಸಿದವು !ದೊಡ್ಡವರ ಸಹಕಾರ ಸಿಕ್ಕದೆ ಇದ್ದರೂ   ವಿದ್ಯಾರ್ಥಿಗಳು ಈ ಕಾರ್ಯದಲ್ಲಿ ಸಕ್ರಿಯವಾಗಿ ಕೈ ಜೋಡಿಸಿದ್ದರು ಎನ್ನುವುದು ನಿಜಕ್ಕೂ ಸಂತಸದ ವಿಚಾರ.ಪ್ಲಾಸ್ಟಿಕ್ ಕೈ ಚೀಲಗಳ ಬಳಕೆಯನ್ನು ತುಂಬಾ ಕಡಿಮೆ ಮಾಡಿದ್ದರು .ಪ್ಲಾಸ್ಟಿಕ್ ನ ಹಾನಿಯ ಬಗ್ಗೆ ಅರ್ಥ ಮಾಡಿಕೊಂಡ ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಹಾಗೂ ಸುತ್ತು ಮುತ್ತಲಿನ ಮಂದಿಗೆ ತಿಳಿ ಹೇಳುವ ಪ್ರಯತ್ನವನ್ನು ಮಾಡಿದ್ದರು ಕೂಡಾ !
ಹದಿನೈದು ಇಪ್ಪತ್ತು ವರ್ಷಗಳ ಹಿಂದೆಯೇ ಪಾಠ ಪುಸ್ತಕದಲ್ಲಿ ಪರಿಸರ ಮಾಲಿನ್ಯದ ಬಗ್ಗೆ ಹೇಳುವಾಗ ಪ್ಲಾಸ್ಟಿಕ್ ನ ದುಷ್ಪರಿಣಾಮಗಳ ಬಗ್ಗೆ ಕೂಡ ಮಾಹಿತಿ ನೀಡಲಾಗಿದೆ .ಆದರೆ ಇವೆಲ್ಲ ಬಾಯಿ ಪಾಠ ಮಾಡಿ ಅಂಕಗಳಿಸಲು ಮಾತ್ರ ಸಹಾಯಕಾವಗುತ್ತವೆ .ಇದರ ಆನ್ವಯಿಕತೆಯ ಬಗ್ಗೆ ಯಾರೂ ಹೇಳಿ ಕೊಡುವುದೇ ಇಲ್ಲ ಎನ್ನುವುದು ನಿಜಕ್ಕೂ ನಮ್ಮ ಶಿಕ್ಷಣದ ದುರಂತವೇ ಸರಿ!
ಪರಿಸರ ದಿನಾಚರಣೆ ನಿಮಿತ್ತ ಉಪನ್ಯಾಸ ,ಜಾಥಾ ಮೆರವಣಿಗೆಗಳನ್ನು ಮಾಡಿ ಕೊನೆಗೆ ಉಪಯೋಗಿಸಿ ಬಿಸಾಡುವ ತಟ್ಟೆ ಲೋಟಗಳಲ್ಲಿ ತಿಂದು ಅವನ್ನು ಎಲ್ಲೆಂದರಲ್ಲಿ ಬಿಸಾಡಿ ಇನ್ನಷ್ಟು ಪರಿಸರಕ್ಕೆ ಹಾನಿ ಮಾಡುವ ಶಾಲಾ ಕಾಲೇಜ್ ,ಸಂಘ ಸಂಸ್ಥೆಗಳನ್ನು ನಾವು ಅಲ್ಲಲ್ಲಿ ಕಾಣಬಹುದು .
ಪ್ಲಾಸ್ಟಿಕ್ ಬಳಕೆಯ ಮೇಲೆ ನಿಷೇಧ ಹೇರಿರುವ ಬಗ್ಗೆ ಅಲ್ಲಲ್ಲಿ ಆಗಾಗ ಕೇಳುತ್ತೇವೆ ,ಒಂದೆರಡು ವರ್ಷ ಮೊದಲು ಮಂಗಳೂರಿನಲ್ಲಿಯೂ ಪ್ಲಾಸ್ಟಿಕ್ ಗೆ ನಿಷೇಧ ಹೇರಿದ ಬಗ್ಗೆ ನನಗೆ ಓದಿದ ನೆನಪಿದೆ .ನಲುವತ್ತು ಮೈಕ್ರೊನ್ ಗಿಂತ ಕಡಿಮೆಯ ಪ್ಲಾಸ್ಟಿಕ್  ಚೀಲಗಳನ್ನು ನಿಷೇಧಿಸಲಾಗಿತ್ತು .ಆದರೆ ಯಾವುದೂ ಜಾರಿಗೆ ಬರಲಿಲ್ಲ ಎನ್ನುವುದು ವಾಸ್ತವಕ್ಕೆ ಹಿಡಿದ ಕೈಗನ್ನಡಿ ಯಾಗಿದೆ !
ಇದೀಗ ನಮ್ಮ ಸರ್ಕಾರ ಬೆಂಗಳೂರಿನಲ್ಲಿ ಮೊದಲಿಗೆ ನಂತರ ಇಡೀ ರಾಜ್ಯದಲ್ಲಿ ಪ್ಲಾಸ್ಟಿಕ್ ಚೀಲ ಹಾಗೂ ಫ್ಲೆಕ್ಸ್ ಗಳನ್ನು ನಿಷೇಧಿಸಲು ಚಿಂತನೆ ನಡೆಸಿದೆ ,ನಿಜಕ್ಕೂ ಇದು ಅಗತ್ಯವಾಗಿ ಆಗಬೇಕಾದ ಕಾರ್ಯವಾಗಿದೆ .ಆದರೆ ಇದು ಕೇವಲ ಘೋಷಣೆಯಾಗಿ ಉಳಿಯದೆ ಕಟ್ಟು ನಿಟ್ಟಾಗಿ ಜಾರಿಗೆ ಬರಬೇಕಾದ್ದು ಇಂದಿನ ಅಗತ್ಯವಾಗಿದೆ .ತ್ಯಾಜ್ಯ ನಿರ್ವಹಣೆಯ ಸಮಸ್ಯೆ ,ಸ್ವಚ್ಛತೆ,ಪರಿಸರ ಮಾಲಿನ್ಯದ ಸಮಸ್ಯೆಗಳನ್ನು  ಸ್ವಲ್ಪ ಮಟ್ಟಿಗೆ  ಇದು ಪರಿಹರಿಸಬಲ್ಲದು.
ಯುರೋಪ್ ಹಾಗೂ  ಸಂಯುಕ್ತ ಅಮೇರಿಕಾ ದೇಶಗಳಲ್ಲಿ ಪ್ಲಾಸ್ಟಿಕ್ ಕುರಿತಾದ ಜಾಗೃತಿ ಇದೆ ಆದ್ದರಿಂದ ಅಲ್ಲಿ ಇದರ ಬಳಕೆ ಹಿಡಿತದಲ್ಲಿದೆ .
ಸಂಯುಕ್ತ ಅರಬ್ ರಾಷ್ಟ್ರಗಳಲ್ಲಿ ಪ್ಲಾಸ್ಟಿಕ್ ಬಳಕೆ ಮೇಲೆ ನಿರ್ಬಂಧ ಹೇರಿದ್ದು ಅಲ್ಲಿ ಪ್ಲಾಸ್ಟಿಕ್ ಚೀಲಗಳ ಬಳಕೆ ಇಲ್ಲವೇ ಇಲ ಎನ್ನುವಷ್ಟು ಕಡಿಮೆಯಾಗಿದೆ .
ಹಾಗೆಯೇ ನಮ್ಮಲ್ಲೂ ಪ್ಲಾಸ್ಟಿಕ್ ಬಳಕೆಯ ಮೇಲೆ ನಿಯಂತ್ರಣ ಉಂಟಾಗಬೇಕಾದ ಅಗತ್ಯವಂತೂ ಖಂಡಿತಾ ಇದ್ದೇ ಇದೆ .ಈ ನಿಟ್ಟಿನಲ್ಲಿ ಸರ್ಕಾರದ ನಡೆ ಭರವಸೆಯನ್ನುಂಟು ಮಾಡುತ್ತಿದೆ !
ಡಾ.ಲಕ್ಷ್ಮೀ ಜಿ ಪ್ರಸಾದ
ಕನ್ನಡ ಉಪನ್ಯಾಸಕಿ
ಸರ್ಕಾರಿ ಪದವಿ ಪೂರ್ವ ಕಾಲೇಜ್
ಬೆಳ್ಳಾರೆ ,ಸುಳ್ಯ ತಾ,ದ.ಕ ಜಿಲ್ಲೆ

No comments:

Post a Comment