Tuesday, 9 December 2014

ಹದಗೆಟ್ಟ ಶಿಕ್ಷಣದ ಮನೆಯಲ್ಲಿ ವಿದ್ಯಾರ್ಥಿಗಳ ಬಾಳು ಹಸನಾದೀತೇ ?(ಕನ್ನಡ ಪ್ರಭ 28 ಅಕ್ಟೋಬರ್ 2014 )-ಡಾ.ಲಕ್ಷ್ಮೀ ಜಿ ಪ್ರಸಾದ



ಹದಗೆಟ್ಟ ಶಿಕ್ಷಣದ ಮನೆಯಲ್ಲಿ ವಿದ್ಯಾರ್ಥಿಗಳ ಬಾಳು ಹಸನಾದೀತೇ ?(ಕನ್ನಡ ಪ್ರಭ 28 ಅಕ್ಟೋಬರ್ 2014 )-ಡಾ.ಲಕ್ಷ್ಮೀ ಜಿ ಪ್ರಸಾದ

“ಆತನಿನ್ನೂ ತನ್ನ ಪಿಎಚ್.ಡಿ ಸಂಶೋಧನಾ ಅಧ್ಯಯನವನ್ನು ಮುಗಿಸುತ್ತಾ ಇದ್ದಾನೆ.ಅವನಿಗೆ ವಿಶ್ವ ವಿದ್ಯಾಲಯವೊಂದರಿಂದ ತಮ್ಮಲ್ಲಿ ಪೋಸ್ಟ್ ಡಾಕ್ಟೊರಲ್ ಅಧ್ಯಯನ ಮಾಡುವಂತೆ ಆಹ್ವಾನ ಬರುತ್ತದೆ.ಈತನಿನ್ನೂ ಸಂಶೋಧನಾ ಅಧ್ಯಯನ ಮುಂದುವರಿಸುವುದೇ ಅಥವಾ ಉದ್ಯೋಗ ಹಿಡಿಯುವುದೇ ಎಂದು ಆಲೋಚಿಸುತ್ತಾ ಇರುತ್ತಾನೆ.ಅಷ್ಟರಲ್ಲಿ ಅದೇ ವಿಶ್ವ ವಿದ್ಯಾಲಯದಿಂದ “ನೀವೊಮ್ಮೆ ನಮ್ಮ ವಿಶ್ವ ವಿದ್ಯಾಲಯಕ್ಕೆ ಬಂದು ನಮ್ಮಲ್ಲಿನ  ಪ್ರಯೋಗಾಲಯವನ್ನುಹಾಗೂ ಇತರ ಸೌಲಭ್ಯಗಳನ್ನು ಪರಿಶೀಲಿಸಿ ನೋಡಿ ,ನಿಮಗೆ ಇಷ್ಟವಾದರೆ ನಮ್ಮಲ್ಲಿ ಪೋಸ್ಟ್ ಡಾಕ್ಟೊರಲ್ ಅಧ್ಯಯನ ಮಾಡಿ ಎಂಬ ಒಕ್ಕಣಿಕೆ ಯುಳ್ಳ ಮತ್ತೊಂದು ಆಹ್ವಾನ ಪತ್ರ ಬರುತ್ತದೆ...”
ಎಂತ ಇದು? ಆಶ್ಚರ್ಯವಾಯಿತೇ?! ನಾನು ಕನಸು ಕಾಣುತ್ತಾ ಏನೇನೋ ಕನವರಿಸುತ್ತಿಲ್ಲ , ಇದು ಸತ್ಯ.ಆದರೆ ನಮ್ಮ ದೇಶದಲ್ಲಿ ಅಲ್ಲ !
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ  ತಾಲೂಕಿನ ಕುಗ್ರಾಮ ಮಾಣಿಲದಲ್ಲಿ  ಹುಟ್ಟಿ ಬೆಳೆದು, ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿ ಮುಂದೆ ಬಯೋ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ಉನ್ನತ ಶಿಕ್ಷಣಕ್ಕಾಗಿ ಯು.ಎಸ್ .ಎ ಗೆ ತೆರಳಿ ಎಂ.ಎಸ್ ಮಾಡಿ ಪ್ರಸ್ತುತ ಟೆಕ್ಸಾಸ್ ಯೂನಿವರ್ಸಿಟಿಯ ರಿಸರ್ಚ್ ಸೆಂಟರ್ ನಲ್ಲಿ  ಪಿಎಚ್.ಡಿ ಸಂಶೋಧನಾ ಅಧ್ಯಯನದ  ಅಂತಿಮ ಹಂತದಲ್ಲಿರುವ ಭಾರತೀಯ ಯುವಕ ರಾಜೇಶ ರುಪಾಯಿಮೂಲೆ ಇವರಿಗೆ ವಿಶ್ವ ಪ್ರಸಿದ್ಧ ಹಾರ್ವರ್ಡ್ ಯೂನಿವರ್ಸಿಟಿಯಿಂದ ಇಂಥಹ ಒಂದು ಆಹ್ವಾನ ಬಂದಿದೆ.ಅಲ್ಲಿ ಅರ್ಹತೆಯೇ ಮಾನದಂಡ.ಅರ್ಹರನ್ನು ಗುರುತಿಸಿ ತಮ್ಮಲ್ಲಿ ಸಂಶೋಧನೆ ಮಾಡುವಂತೆ ವಿಶ್ವ ವಿದ್ಯಾಲಯ ಸ್ಕಾಲರ್ ಶಿಪ್ ನೀಡಿ   ಆಹ್ವಾನಿಸುತ್ತದೆ. ಮುಂದೊಂದು ದಿನ ಈತ ನೋಬಲ್ ನಂಥಹ ಉನ್ನತ ಸಂಶೋಧನಾ ಪ್ರಶಸ್ತಿಗಳನ್ನು ಪಡೆಯಲೂ ಬಹುದು .
 ರಾಜೇಶ ರುಪಾಯಿಮೂಲೆ
ವಿದೇಶಕ್ಕೆ ಹೋಗಿ ಕಲಿತು  ಅಲ್ಲಿಯೇ ಉದ್ಯೋಗಕ್ಕೆ ಸೇರಿ ಅನೇಕ ಮಹತ್ವದ ಸಾಧನೆಗಳನ್ನು ಮಾಡುವ ,ಅತ್ಯುನ್ನತ ಪ್ರಶಸ್ತಿ ಪುರಸ್ಕಾರಗಳನ್ನು ಪಡೆಯುವ ಅನೇಕ ಭಾರತೀಯರ ಸುದ್ದಿಯನ್ನು ನಾವು ಆಗಾಗ ಕೇಳುತ್ತೇವೆ.ಆದರೆ ನಮ್ಮಲ್ಲೇ ಕಲಿತು ಇಂಥಹ ಸಾಧನೆಗಳನ್ನು ಮಾಡಲು ಯಾಕೆ ಸಾಧ್ಯವಾಗುತ್ತಿಲ್ಲ ?ಈ ಬಗ್ಗೆ ಉತ್ತರ  ಬೇಕಿದ್ದರೆ “ನಮ್ಮಲ್ಲಿನ ವಿಶ್ವ ವಿದ್ಯಾಲಯಗಳು ಹೇಗಿವೆ” ಎಂಬುದನ್ನು  ನೋಡಬೇಕಾಗಿದೆ.
ನಮ್ಮ ವಿಶ್ವ ವಿದ್ಯಾಲಯಗಳು ಹೇಗಿವೆ?
ಇತ್ತೀಚಿಗೆ ಬೆಂಗಳೂರು ಯೂನಿವರ್ಸಿಟಿ ಪಿಎಚ್.ಡಿ ಅಧ್ಯಯನ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿತ್ತು .ನನ್ನ ಬುದ್ಧಿವಂತ ಹಳೆ ವಿದ್ಯಾರ್ಥಿನಿ ಒಬ್ಬಳಿಗೆ ಪಿಎಚ್.ಡಿ ಮಾಡುವ ಹಂಬಲ ಇತ್ತು .ಹಾಗೆ ಅವಳಲ್ಲಿ ಅರ್ಜಿ ಸಲ್ಲಿಸಿದೆಯ? ಎಂದು ವಿಚಾರಿಸಿದೆ .ಇಲ್ಲವೆಂದು ತಲೆ ಆಡಿಸಿದಳು ,ಯಾಕೆ ?ಎಂದು ಕೇಳಿದೆ.ಏನೂ ಹೇಳದೆ ತಲೆ ತಗ್ಗಿಸಿದಳು.ನನಗೆ ಅರ್ಥವಾಯಿತು.
ನಮ್ಮ ದೇಶದ ಯೂನಿವರ್ಸಿಟಿಗಳಲ್ಲಿ ಅಧ್ಯಯನ ಮಾಡುವುದು ಸುಲಭದ ವಿಚಾರವಲ್ಲ .ಬಡವರ ಪಾಲಿಗೆ  ಅದು ಮೃಗ ಮರೀಚಿಕೆಯೇ ಸರಿ. ನಮ್ಮ ವಿಶ್ವ ವಿದ್ಯಾಲಯಗಳಲ್ಲಿ .ಡಾಕ್ಟರೇಟ್ ಅಧ್ಯಯನ ಮಾಡಲು ಇಚ್ಚಿಸಿದರೆ ಆರಂಭದಲ್ಲಿಯೇ ಅರ್ಜಿ ಶುಲ್ಕ ಮತ್ತು ಪರೀಕ್ಷಾ ಶುಲ್ಕ ಎರಡು ಎರಡೂವರೆ ಸಾವಿರ ರು ಗಳಷ್ಟು ದುಡ್ಡು ಕಟ್ಟಬೇಕು.ಎಲ್ಲ ವಿಷಯಗಳಲ್ಲಿ ಸೇರಿ  ಒಂದು ಸಾವಿರದಷ್ಟು ವಿದ್ಯಾರ್ಥಿಗಳಿಗೆ ಗೆ ಅಧ್ಯಯನಕ್ಕೆ ಅವಕಾಶವಿದ್ದರೆ ಅರ್ಜಿ ಸಲ್ಲಿಸುವವರು ಸಾವಿರಾರು ಮಂದಿ ಇರುತ್ತಾರೆ.ಕನಿಷ್ಠ ಹತ್ತು ಸಾವಿರ ಮಂದಿ ಅರ್ಜಿ ಸಲ್ಲಿಸಿದರೂ ಸಂಗ್ರಹವಾಗುವ ದುಡ್ಡು  ಎರಡು ಮೂರು ಕೋಟಿ.ಆಯ್ಕೆಯಾದ ಒಂದು ಸಾವಿರ ವಿದ್ಯಾರ್ಥಿಗಳಿಂದ ನೋಂದಣಿ ಶುಲ್ಕ ,ಟ್ಯೂಶನ್ ಶುಲ್ಕ,ಪ್ರಯೋಗಾಲಯ ಶುಲ್ಕ ,ವಾರ್ಷಿಕ ನಿರ್ವಹಣಾ ಶುಲ್ಕ ಇತ್ಯಾದಿಯಾಗಿ ಪ್ರತಿ ವರ್ಷ ಸಂಗ್ರಹವಾಗುವ ದುಡ್ಡು ಎರಡೂವರೆ ಮೂರು ಕೋಟಿ ರು.
ಅದೆಷ್ಟೋ ಬಡ ಪ್ರತಿಭಾವಂತರಿಗೆ ಡಾಕ್ಟರೇಟ್ ಓದುವ ಮನಸಿದ್ದರೂ ಅರ್ಜಿ ಸಲ್ಲಿಸುವಾಗಲೇ ಕಟ್ಟ ಬೇಕಾಗಿರುವ ದುಬಾರಿ ಶುಲ್ಕ ನೋಡಿಯೇ ಗಾಬರಿಯಾಗಿ ಅಸಾಧ್ಯವೆನಿಸಿ ಕೈ ಚೆಲ್ಲಿರುತ್ತಾರೆ.ಒಂದು ವೇಳೆ ಆಯ್ಕೆಯಾದರೂ ನೋಂದಣಿ ಶುಲ್ಕ ,ಟ್ಯೂಶನ್ ಶುಲ್ಕ ಮತ್ತೊಂದು ಮೊದಲೊಂದು ಹೇಳಿ ಕಡಿಮೆ ಎಂದರೆ ಇಪ್ಪತ್ತು ಮೂವತ್ತು ಸಾವಿರ ತುಂಬ ಬೇಕು.ವಿದ್ಯಾರ್ಥಿ ಸಹಾಯ ಧನ ಸಿಕ್ಕದವರಿಗೆ ಮಾತ್ರವಲ್ಲ ಸಿಕ್ಕವರಿಗೆ ಕೂಡ ಇದು ತುಂಬಾ ಭಾರವೆನಿಸುತ್ತದೆ.ಸಹಾಯಧನ ಸಿಕ್ಕದೆ ಇರುವ ಬಡ ಅಭ್ಯರ್ಥಿಗಳಿಗಂತೂ ಇದನ್ನು ಭರಿಸುವುದು ಅಸಾಧ್ಯವೇ ಸರಿ.
ವಿದ್ಯಾರ್ಥಿಗಳ ಕಲಿಕೆಗೆ ಬ್ಯಾಂಕ್ ಗಳು ಸಾಲ ಕೊಡುತ್ತವೆ.ಆದರೆ ಭದ್ರತೆಗೆ ಏನೂ ಇಡಲು ಇಲ್ಲದವರಿಗೆ ಅಲ್ಲೂ ಸಾಲ ಸಿಕ್ಕುವುದಿಲ್ಲ.ನಾಲ್ಕು ಲಕ್ಷ ತನಕದ ಸಾಲಕ್ಕೆ ಯಾವುದೇ ಭದ್ರತೆ ಕೇಳಬಾರದು ಎಂಬ ನಿಯಮವೇನೂ ಇದೆ.ಆದರೆ ಎಷ್ಟರ ಮಟ್ಟಿಗೆ ಅನ್ವಯವಾಗುತ್ತಿದೆ?ನೋಡಿದವವರಿಲ್ಲ. ಅನುಭವಿಸಿದವರಿಗೆ ಮಾತ್ರ ಇದರ ಕಷ್ಟ  ಗೊತ್ತಾಗುತ್ತದೆ.
ಮೇಲೆ ಉಲ್ಲೇಖಿಸಿದ ಯುವಕ ರಾಜೇಶ್ ಗೆ ವಿದೇಶಕ್ಕೆ ಉನ್ನತ ಅಧ್ಯಯನಕ್ಕೆ ಅವಕಾಶ ಸಿಕ್ಕಾಗ ಆರಂಭದಲ್ಲಿ ದಾಖಲೆಗಳನ್ನು ಪರಿಶೀಲಿಸಿ ,ಭದ್ರತೆ ಎಲ್ಲ ಕೇಳಿ “ಸಾಲ ಕೊಡುತ್ತೇವೆ” ಎಂದು ಒಪ್ಪಿದ ಬ್ಯಾಂಕ್ ಕೊನೆಯ ಕ್ಷಣದಲ್ಲಿ ಸರಿಯಾದ ಕಾರಣವಿಲ್ಲದೇ ಇದ್ದಾಗಲೂ ಯಾವುದೋ ಒಂದು ಕುಂಟು ನೆಪ ಹೇಳಿ ಸಾಲ ಕೊಡಲು ನಿರಾಕರಿಸಿತ್ತು . ಮತ್ತೆ ಅವರ ಬಂಧು ಬಳಗದವರೆಲ್ಲ ಸೇರಿ ಒಮ್ಮೆಗೆ ಹೇಗೋ ದುಡ್ಡು ಹೊಂದಿಸಿ ಕೊಟ್ಟರು ,ಮುಂದೆ ಆತನಿಗೆ ವಿದ್ಯಾರ್ಥಿ ಸಹಾಯ ಧನ ಸಿಕ್ಕ ಕಾರಣ ಸಮಸ್ಯೆಯಾಗಲಿಲ್ಲ.ಆದರೆ ಎಲ್ಲರ ವಿಚಾರವೂ  ಹೀಗೆ ಸುಗಮವಾಗಲು ಸಾಧ್ಯವಿಲ್ಲ.
ಅದಿರಲಿ,ನಮ್ಮ ವಿಶ್ವ ವಿದ್ಯಾಲಯಗಳಲ್ಲಿ ಇಷ್ಟು ಕೋಟಿಗಟ್ಟಲೆ ದುಡ್ಡು ವಿದ್ಯಾರ್ಥಿಗಳಿಂದ ವಸೂಲಿ ಮಾಡುವ ಯೂನಿವರ್ಸಿಟಿಗಳಿಗೆ  ಯುಜಿಸಿ ಹಾಗೂ ಸರಕಾರದಿಂದಲೂ ಸಹಾಯ ಧನ ಸಿಗುತ್ತದೆ.ಹಾಗಿದ್ದರೂ ಯಾಕೆ ನಮ್ಮ ದೇಶದ ಒಂದೇ ಒಂದು ಯೂನಿವರ್ಸಿಟಿ ಕೂಡಾ ವಿಶ್ವದ ಶ್ರೇಷ್ಠ ಇನ್ನೂರೈವತ್ತು ಯೂನಿವರ್ಸಿಟಿಗಳಲ್ಲಿ ಒಂದೇ ಒಂದು ಸ್ಥಾನ ಪಡೆದಿಲ್ಲ?ನಮ್ಮ ದೇಶದ ವಿದ್ಯಾರ್ಥಿಗಳಲ್ಲಿ ಪ್ರತಿಭೆಗೇನೂ ಕೊರತೆಯಿಲ್ಲ.ಆದರೆ ಬಡ ಪ್ರತಿಭಾವಂತರಿಗೆ ಯೂನಿವರ್ಸಿಟಿ ಪ್ರವೇಶವೇ ಮೃಗ ಮರೀಚಿಕೆಯಾಗಿದೆ.ಪ್ರವೇಶ ಪಡೆದವರಿಗೂ ಗುಣಮಟ್ಟದ ಮಾರ್ಗ ದರ್ಶನ ,ತರಬೇತಿಗಳು ಸಿಗುತ್ತಿಲ್ಲ.,ಗ್ರಂಥಾಲಯ ಸೌಲಭ್ಯ,ಪ್ರಯೋಗಾಲಯ ಸೇರಿದಂತೆ ಅಗತ್ಯ ಸೌಲಭ್ಯಗಳು ಕೂಡ ಸರಿಯಾಗಿ ಸಿಗುತ್ತಿಲ್ಲ.ವಿದ್ಯಾರ್ಥಿಗಳು ಕೊಡುವ ದುಡ್ಡು ,ಸಿಗುವ ಸಹಾಯ ಧನ ಎಲ್ಲ ಎಲ್ಲಿ ಹೋಗುತ್ತವೆ?ಉಚಿತವಾಗಿ ಅಥವಾ ಕಡಿಮೆ ಶುಲ್ಕದಲ್ಲಿ ಉನ್ನತ ಶಿಕ್ಷಣ ಸಿಗುತ್ತಿದ್ದರೆ ಅದೆಷ್ಟೋ ಬಡ ಪ್ರತಿಭಾವಂತರಿಗೆ ಕಲಿಯಲು ಸಾಧ್ಯವಾಗುತ್ತಿತ್ತು .
ಇಷ್ಟೆಲ್ಲಾ ದುಡ್ಡು ಕಟ್ಟಿ ಸೇರಿದ ಅನೇಕ ವಿದ್ಯಾರ್ಥಿಗಳ ಪರಿಸ್ಥಿತಿ ಬಹಳ ಶೋಚನೀಯವಾಗಿರುತ್ತದೆ ವಿದ್ಯಾರ್ಥಿಗಳನ್ನು ದುಡ್ಡಿಗಾಗಿ ಶೋಷಣೆ ಮಾಡುವ ಮಾರ್ಗ ದರ್ಶಕರೂ ಇದ್ದಾರೆ.ಸುಮ್ಮಗೇ ದರ್ಪ ತೋರಿ ಶೋಷಿಸುವವರೂ ಇದ್ದಾರೆ.ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಒಳಗಾದವರೂ ಇದ್ದಾರೆ.ಒಂದೆಡೆ ವರ್ಷ ಗಟ್ಟಲೆ  ಪ್ರಾಮಾಣಿಕವಾಗಿ ಅಧ್ಯಯನ ಮಾಡಿ ಪ್ರಬಂಧ ಸಿದ್ಧ ಪಡಿಸಿದವರಿಗೆ ಯಾವಾವುದೋ ಕುಂಟು ನೆಪಗಳನ್ನು ಹೇಳಿ ಸಲ್ಲಿಸಲು ಅನುಮತಿ ನೀಡದೆ ಇರುವ ಅನೇಕ ಪ್ರಕರಣಗಳಿವೆ.ಒಂದೊಮ್ಮೆ ಪ್ರಬಂಧ ಸಲ್ಲಿಸಿದರೂ ಸಕಾಲದಲ್ಲಿ ಮೌಲ್ಯ ಮಾಪನ ಮಾಡಿಸಿ ,ಮೌಖಿಕ ಪರೀಕ್ಷೆ ಏರ್ಪಡಿಸಿ ಪದವಿ ನೀಡದೆ ಇರುವ ಅನೇಕ ಪ್ರಕರಣಗಳೂ ಇವೆ. ಮಹಾ ಪ್ರಬಂಧ ಸಲ್ಲಿಸಿ ಎರಡು ಮೂರು ವರ್ಷ ಕಳೆದರೂ ಪಿಎಚ್.ಡಿ ಪದವಿ ಸಿಗದವರು ಇರುವಂತೆಯೇ ಪಿಎಚ್.ಡಿ ಅಧ್ಯಯನಕ್ಕೆ ಪ್ರವೇಶ ಪಡೆದ ಏಳೆಂಟು ತಿಂಗಳುಗಳಲ್ಲಿಯೇ  ಪಿಎಚ್.ಡಿ ಪದವಿ ಪಡೆದವರೂ ಇದ್ದಾರೆ! .ಕೆಲ ವರ್ಷಗಳ ಹಿಂದೆ ತುಮಕೂರು ಯೂನಿವರ್ಸಿಟಿ ಯಲ್ಲಿ ಕಾನೂನು ಬಾಹಿರವಾಗಿ ಏಳೆಂಟು ತಿಂಗಳುಗಳಲ್ಲಿಯೇ ಪಿಎಚ್.ಡಿ ಪದವಿ ನೀಡಿದ ಬಗ್ಗೆ ಸುದ್ದಿಯಾಗಿತ್ತು.
ಇಂಥ ಅವ್ಯವಸ್ಥೆಗಳು ಪಿಎಚ್.ಡಿ ಗೆ ಮಾತ್ರ ಸೀಮಿತವಲ್ಲ.ಸ್ನಾತಕ .ಸ್ನಾತಕೋತ್ತರ,ವೈದ್ಯಕೀಯ ,ತಾಂತ್ರಿಕ ಹಾಗೂ ವೃತ್ತಿ ಶಿಕ್ಷಣಗಳನ್ನು ಕೂಡ ಬಿಟ್ಟಿಲ್ಲ.ಒಂದೆರಡು ತಿಂಗಳ ಹಿಂದೆ ಮೈಸೂರು ಯೂನಿವರ್ಸಿಟಿಯ ಬಿ.ಎಡ್ ಮೊದಲ ಸೆಮಿಸ್ಟರ್ ಫಲಿತಾಂಶ ಪ್ರಕಟವಾಯಿತು. ಅಲ್ಲಿನ ವಿದ್ಯಾರ್ಥಿಗಳು ಗಳಿಸಿದ ಅಂಕಗಳನ್ನು ಕೇಳಿದರೆ ಎಂಥವರ ಎದೆ ಕೂಡಾ ದಸಕ್ ಎನ್ನಲೇ ಬೇಕು! ಅನೇಕ ವಿದ್ಯಾರ್ಥಿಗಳಿಗೆ 100% ಅಂಕಗಳು ಬಂದಿವೆ ಎಂದರೆ ಎಲ್ಲ ಪತ್ರಿಕೆಗಳಲ್ಲಿಯೂ ಅಂತರ್ ಮೌಲ್ಯ ಮಾಪನ ಹಾಗೂ  ಲಿಖಿತ ಪರೀಕ್ಷೆಯಲ್ಲಿ  ಪೂರ್ಣ ಅಂಕಗಳು /ನೂರಕ್ಕೆ ನೂರಷ್ಟು ಅಂಕಗಳು ಲಭಿಸಿವೆ!!ಪ್ರಾಜೆಕ್ಟ್ ವರ್ಕ್ .ಅಣು ಬೋಧನೆ ,ಪ್ರಬಂಧ ಮಂಡನೆ ,ಆಂತರಿಕ ಲಿಖಿತ  ಪರೀಕ್ಷೆ ,ಹಾಗೂ ಅಂತಿಮ ಲಿಖಿತ ಪರೀಕ್ಷೆ ಎಲ್ಲದರಲ್ಲಿಯೂ ನೂರಕ್ಕೆ ನೂರು ಅಂಕಗಳನ್ನು  ಗಳಿಸಿದರೆ ಮಾತ್ರ ಇದು ಸಾಧ್ಯವಾಗುತ್ತದೆ. ಎಲ್ಲೆಡೆ ಪೂರ್ಣ ಅಂಕಗಳನ್ನು ಗಳಿಸುವುದು ಅಸಾಧ್ಯವಾದ ವಿಚಾರ.ಬೇರೆ ಯೂನಿವರ್ಸಿಟಿಗಳಲ್ಲಿ 94-95 % ಗರಿಷ್ಠ ಅಂಕಗಳು ಬಂದಿವೆ .ಹಾಗಿರುವಾಗ  ಒಂದು ಯೂನಿವರ್ಸಿಟಿಯ ವ್ಯಾಪ್ತಿಯ ಬಿ.ಎಡ್  ಕಾಲೇಜ್ ಗಳಲ್ಲಿ ಮಾತ್ರ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಂಥಹ 100 % ಅಂಕ ಗಳಿಕೆಯ ಅಸಾಧರಣ ಸಾಧನೆ ಮಾಡಿದ್ದಾರೆ ಎಂದರೆ ಅಲ್ಲಿನ ವ್ಯವಸ್ಥೆ ಬಗ್ಗೆಯೇ ಸಂಶಯವಾಗುತ್ತದೆ !.
ಕೆಲ ದಿನಗಳ ಹಿಂದೆ ಕರ್ನಾಟಕ ರಾಜ ಮುಕ್ತ ವಿಶ್ವ ವಿದ್ಯಾಲಯಗಳ ಅವ್ಯವಸ್ಥೆಯ ಬಗ್ಗೆ ಸುದ್ದಿ ಬಂದಿತ್ತು.ಒಬ್ಬರಿಗೆ ಒಂದು ಪತ್ರಿಕೆಯಲ್ಲಿ 34 ಅಂಕ ಬಂದಿದೆಯೆಂದು ಮರು ಮೌಲ್ಯ ಮಾಪನಕ್ಕೆ ಹಾಕಿದರೆ ಮರು ಮಾಪನದಲ್ಲಿ 4 ಅಂಕಗಳು ಬಂದುವಂತೆ.ಅದು ಯಾಕೆ ಹೀಗೆ ಎಂದು ಗಾಬರಿಯಾಗಿ ಕೇಳಿದರೆ ಮರು ಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸುವುದು ಮಾತ್ರ ನಿಮ್ಮ ಜವಾಬ್ದಾರಿ .ಅಂಕ ಕೊಡುವುದು ಮೌಲ್ಯ ಮಾಪಕರು ಅದನ್ನು ಕೇಳುವಂತಿಲ್ಲ ಎಂಬ ಉಡಾಫೆಯ ಉತ್ತರವನ್ನು ಅಧಿಕಾರಿಗಳು ಕೊಟ್ಟರೆಂದು ಓದಿದೆ.ಈ ವಿಶ್ವ ವಿದ್ಯಾಲಯದಲ್ಲಿ ಮೌಲ್ಯ ಮಾಪನವೇ ಮಾಡದೆ ಸುಮ್ಮನೆ ಅಂಕಗಳನ್ನು ಕೊಡುತ್ತಾರೇನೋ ಎಂಬ ಸಂಶಯ ನನಗೂ ಇದೆ.ನಾನು ಇದೇ ಯೂನಿವರ್ಸಿಟಿ ಯಲ್ಲಿ ಕನ್ನಡ ಎಂ.ಎ ಮಾಡಿದ್ದು ನನಗೆ ಮೊದಲ ವರ್ಷ ಫಲಿತಾಂಶ ಬಂದಾಗ ಅಚ್ಚರಿ ಕಾಡಿತ್ತು.ನಾನು ಛಂದಸ್ಸು ಮತ್ತು ಭಾಷಾ ವಿಜ್ಞಾನ ಪತ್ರಿಕೆಯಲ್ಲಿ ಬಹಳ ಚೆನ್ನಾಗಿ ಉತ್ತರಿಸಿದ್ದೆ. ನಾನು 85 -88 ಅಂಕಗಳನ್ನು  ನಿರೀಕ್ಷಿಸಿದ್ದೆ.ಆದರೆ ನನಗೆ ಆ ಪತ್ರಿಕೆಯಲ್ಲಿ ಕೇವಲ 54 (46+9) ಅಂಕ ಬಂದಿತ್ತು .ಹಾಗಾಗಿ ನಾನು ನನ್ನ ಎಲ್ಲ ಉತ್ತರ ಪತ್ರಿಕೆಗಳ ಜೆರಾಕ್ಸ್ ಪ್ರತಿಗೆ ಅರ್ಜಿ ಸಲ್ಲಿಸಿದೆ ಮತ್ತು ನಿ ರೀಕ್ಷಿಸಿದ್ದಕ್ಕಿಂತ ತೀರ ಕಡಿಮೆ ಅಂಕಗಳು ಬಂದಿದ್ದ ಎರಡು ಪತ್ರಿಕೆಗಳನ್ನು ಮರು ಮೌಲ್ಯ ಮಾಪನ ಮಾಡಲು ಕೋರಿ ಶುಲ್ಕ ತುಂಬಿ ಅರ್ಜಿ ಸಲ್ಲಿಸಿದ್ದೆ. ಅದೃಷ್ಟವಶಾತ್ ಮರು ಮೌಲ್ಯ ಮಾಪನದಲ್ಲಿ ನನಗೆ ಛಂದಸ್ಸು ಮತ್ತು ಭಾಷಾ ವಿಜ್ಞಾನದಲ್ಲಿ 30 ಅಂಕಗಳು ಹೆಚ್ಚು ಬಂದು 76+8 = 84 ಅಂಕಗಳು ಸಿಕ್ಕವು .ಇನ್ನೊಂದರಲ್ಲಿಯೂ  20 ಅಂಕಗಳು ಹೆಚ್ಚು ಲಭಿಸಿದ್ದು 52 ಇದ್ದಲ್ಲಿ 72 ಅಂಕಗಳು ಸಿಕ್ಕವು .
ನನ್ನ ಎಲ್ಲ ಉತ್ತರ ಪತ್ರಿಕೆಗಳ ಜೆರಾಕ್ಸ್ ಪ್ರತಿಗಳು ಕೈಗೆ ಬಂದಾಗ ನನಗೆ ಆಘಾತವಾಗಿತ್ತು ! ಸ್ನಾತಕೋತ್ತರ ಪದವಿಗಳ ಉತ್ತರ ಪತ್ರಿಕೆಯನ್ನು ಇಬ್ಬರು ಮೌಲ್ಯ ಮಾಪನ ಮಾಡುವುದು ಎಲ್ಲೆಡೆ ಇರುವ ಕ್ರಮ.ಆದರೆ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಲ್ಲಿ ಒಂದು ಮೌಲ್ಯ ಮಾಪನ ಮಾತ್ರ ಮಾಡುವ ಪದ್ಧತಿ ಇದೆ ಎಂದೆನಿಸುತ್ತದೆ.ಆ ಒಂದು ಮೌಲ್ಯ ಮಾಪನವನ್ನೂ ಸರಿಯಾಗಿ ಮಾಡದೆ ಸುಮ್ಮಗೆ ಒಮ್ಮೆ ತಿರುವಿ ಹಾಕಿ ಅಥವಾ ಒಳಭಾಗ ತೆರೆದು ನೋಡದೆಯೇ ಅಂಕಗಳನ್ನು ಅಂಕ ಪತ್ರಿಕೆಯಲ್ಲಿ ನಮೂದಿಸದೆಯೇ ನೇರವಾಗಿ ಅಂಕ ಕೊಡುತ್ತಾರೆ.ಎಂದು ನನ್ನ ಉತ್ತರ ಪತ್ರಿಕೆಗಳ ಪ್ರತಿಯನ್ನು ಗಮನಿಸಿದಾಗ ನನಗೆ ಅರಿವಾಯಿತು.ಎರಡು ಮೌಲ್ಯ ಮಾಪ ಇರುವ ಕಾರಣ ಸ್ನಾತಕೋತ್ತರ ಪದವಿಗಳಲ್ಲಿ ಉತ್ತರ ಪತ್ರಿಕೆಯಲ್ಲಿ ಒಳಭಾಗದಲ್ಲಿ ಅಂಕಗಳನ್ನು ನಮೂದಿಸುವುದಿಲ್ಲ.ಆದರೆ ಉತ್ತರ ಪತ್ರಿಕೆಯ ಎರಡನೆಯ ಅಥವಾ ಮೂರನೆಯ ಪುಟದಲ್ಲಿ ಎಲ್ಲ ಪ್ರಶ್ನೆ ಸಂಖ್ಯೆಗಳನ್ನು ಮುದ್ರಿಸಿರುತ್ತಾರೆ.ವಿದ್ಯಾರ್ಥಿ ಯಾವ ಪ್ರಶ್ನೆಗಳಿಗೆ ಉತ್ತರಿಸಿದ್ದಾನೆ ಅದಕ್ಕೆ ಎಷ್ಟು  ಅಂಕಗಳು ಬಂದಿವೆ ಎಂಬುದನ್ನು ಆಯಾಯ ಪ್ರಶ್ನೆ ಸಂಖ್ಯೆ ಕೆಳಭಾಗದಲ್ಲಿ ತುಂಬಲು ಜಾಗ ಇಡುತ್ತಾರೆ .ಕೊನೆಯಲ್ಲಿ ಒಟ್ಟು ಅಂಕಗಳನ್ನು ಬರೆಯಲು ಸ್ಥಳಾವಕಾಶ ಇರುತ್ತದೆ . ಅದರ ಕೆಳಭಾಗದಲ್ಲಿ ಮೌಲ್ಯ ಮಾಪಕರ ಸಹಿ ಮಾಡುವ ಜಾಗ ಇರುತ್ತದೆ .ಎಡ ಭಾಗದಲ್ಲಿ ಮೌಲ್ಯ ಮಾಪಕರ ಹೆಸರು ಬರೆಯಲು ಜಾಗ ವಿರುತ್ತದೆ.ಮೌಲ್ಯ ಮಾಪಕರು ಇವೆಲ್ಲವನ್ನೂ ತುಂಬಿ ಯಾವ ಪ್ರಶ್ನೆಗೆ ಎಷ್ಟು ಅಂಕಗಳು ಎಂಬುದನ್ನು ನಮೂದಿಸಿ ಟೋಟಲ್ ಹಾಕಿ ಸಹಿ ಮಾಡಬೇಕು.ಆದರೆ ನನ್ನ ಉತ್ತರ ಪತ್ರಿಕೆಗಳ ಜೆರಾಕ್ಸ್ ಪ್ರತಿಗಳಲ್ಲಿ ಒಂದರಲ್ಲಿ ಮಾತ್ರ  ಉತ್ತರಿಸಿದ ಪ್ರಶ್ನೆಗಳ ಕೆಳಭಾಗದಲ್ಲಿ ಅಂಕಗಳನ್ನು ತುಂಬಿ ಒಟ್ಟು ಮೊತ್ತವನ್ನು ಹಾಕಿದ್ದು ಅದರಲ್ಲಿ  ಮೌಲ್ಯ ಮಾಪಕರ ಸಹಿ ಮತ್ತು ಹೆಸರು ಇದೆ.ಆ ಪತ್ರಿಕೆಯಲ್ಲಿ ನನಗೆ 68 ಅಂಕಗಳು ಬಂದಿದ್ದು ಅಂತರ್ ಮೌಲ್ಯ ಮಾಪನದ 8 ಅಂಕಗಳು ಸೇರಿಸಿ ಒಟ್ಟು 76 ಅಂಕಗಳು ಬಂದಿತ್ತು.ಇದು ನಾನು ಸುಮಾರಾಗಿ ನಿರೀಕ್ಷಿಸಿದ ಅಂಕವೇ ಆಗಿತ್ತು. ಉಳಿದ ಎಲ್ಲ ಪತ್ರಿಕೆಗಳಲ್ಲಿ  ಮೌಲ್ಯ ಮಾಪಕರ ಸಹಿ ಮಾತ್ರ ಇದೆ .ಉತ್ತರಿಸಿದ ಪ್ರಶ್ನೆ ಸಂಖ್ಯೆಗಳಿಗನುಗುಣವಾಗಿ ಅಂಕಗಳನ್ನು ನಮೂದಿಸುವುದು ಬಿಡಿ,ಒಟ್ಟು ಅಂಕಗಳು ಎಷ್ಟು ಎಂದು ಕೂಡ ಹಾಕಿಲ್ಲ !ಮೌಲ್ಯ ಮಾಪಕರ ಹೆಸರು ಕೂಡ ಇಲ್ಲ.ಸಹಿ ಮಾತ್ರ ಇದೆ. ಹಾಗಾಗಿ ನನಗನ್ನಿಸಿದ್ದು ಇಲ್ಲಿ ಮೌಲ್ಯ ಮಾಪನ ಮಾಡುವುದೇ ಇಲ್ಲವೋ ಏನೋ ಎಂದು. ಉತ್ತರ ಪತ್ರಿಕೆಯನ್ನೇ ಸರಿಯಾಗಿ ಮೌಲ್ಯ ಮಾಪನ ಮಾಡದೇ ಇರುವವರು ಇನ್ನು ಆಂತರಿಕ ನಿಬಂಧಗಳನ್ನು ಮೌಲ್ಯ ಮಾಪನ ಮಾಡುತ್ತಾರೆಯೇ ?ತಮಗೆ  ಮನಸಿಗೆ ಬಂದಷ್ಟು ಅಂಕಗಳನ್ನು ಕೊಡುತ್ತಾರೆ ಅಷ್ಟೇ !
ಈ ಮೊದಲು ಮರು ಮೌಲ್ಯ ಮಾಪನವನ್ನು ಸ್ವಲ್ಪ ಜಾಗರೂಕತೆಯಿಂದ ನೋಡಿ ಸರಿಯಾಗಿಯೇ ಮಾಡುತ್ತಿದ್ದರು.ಈಗ ಅದೂ ಇಲ್ಲವಾಗಿದೆ.ಲಕ್ಷಾಂತರ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಲ್ಲಿ  ಓದುತ್ತಾರೆ.ಇವರ ಮೂಲಕ ಯೂನಿವರ್ಸಿಟಿ ಗೆ ಕೊಟ್ಯಂತರ ರು ದುಡ್ಡು ಬರುತ್ತದೆ.ಆದರೆ ಅದಕ್ಕೆ ತಕ್ಕನಾದ ವ್ಯವಸ್ಥೆ ಅಲ್ಲಿಲ್ಲ.ಇರುವುದರಲ್ಲಿಯೇ  ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವ ಯತ್ನ ಮಾಡುವ  ಎಂಬ ಮನೋಭಾವವೂ ಅಲ್ಲಿಲ್ಲ.ಯಾವುದನ್ನೂ ಹೇಳುವವರು ಕೇಳುವವರು  ಯಾರೂ ಇಲ್ಲ.
 ಯಾಕೆ ಹೀಗೆ ?
ಅಂಗೈ ಹುಣ್ಣಿಗೆ ಕನ್ನಡಿ ಬೇಡ .ಮೊನ್ನೆಯಷ್ಟೇ ನೇಮಕಾತಿಯಲ್ಲಿನ ಭ್ರಷ್ಟಾಚಾರ ಸೇರಿದಂತೆ ಅನೇಕ ಆರೋಪಗಳಿಗೆ ಈಡಾಗಿರುವ ಕರ್ನಾಟಕ ವಿಶ್ವ ವಿದ್ಯಾಲಯದ ಕುಲಪತಿಯ ಬಂಧನವಾಗಿದೆ.ಇತ್ತೀಚೆಗಿನ ನಾಲ್ಕೈದು ವರ್ಷಗಳಿಂದ ಶಿಕ್ಷಣದ ಮನೆಯಲ್ಲಿ ಭ್ರಷ್ಟಾಚಾರದ್ದೇ ಯಜಮಾನಿಕೆ ನಡೆಯುತ್ತಿದೆ .ಇತ್ತೀಚೆಗೆ ಮೈಸೂರು  ಯೂನಿವರ್ಸಿಟಿಯಲ್ಲಿ 2006 ರಲ್ಲಿ ನಡೆದ ಅಕ್ರಮ ನೇಮಕಾತಿಯನ್ನು ರದ್ದು ಪಡಿಸಿ ಸರಕಾರ ಆದೇಶ ಹೊರಡಿಸಿತ್ತು. ವಿಶ್ವ ವಿದ್ಯಾಲಯಗಳ ವೀಸಿಗಳಿಗೆ,ಪ್ರೊಫೆಸ್ಸರ್ ಗಳಿಗೆ ತಿಂಗಳಿಗೆ ಒಂದು ಲಕ್ಷಕ್ಕಿಂತಲೂ ಹೆಚ್ಚು ವೇತನ ಸಿಗುತ್ತದೆ.ಶಿಕ್ಷಣ ಕ್ಷೇತ್ರಕ್ಕೆ ಪ್ರತಿಭಾವಂತರು ಬರಬೇಕು ಕೊನೆಯ ಪಕ್ಷ ವಿಶ್ವ ವಿದ್ಯಾಲಯಗಳಾದರೂ ಭ್ರಷ್ಟಾಚಾರ ಮುಕ್ತವಾಗಿರಬೇಕು ಎಂಬುದೇ ಇವರುಗಳಿಗೆ ಹೆಚ್ಚಿನ ವೇತನ ನೀಡಿರುವುದರ ಮೂಲ ಉದ್ದೇಶ . ಅಷ್ಟಿದ್ದರೂ ಇವರಿಗೆ ದುರಾಸೆಯೇಕೆ ?ಸ್ವಾಭಿಮಾನವನ್ನು,ವಿಶ್ವ ವಿದ್ಯಾಲಯದ ಗೌರವವನ್ನೂ ಅಡವಿಟ್ಟು  ಭ್ರಷ್ಟ ದುಡ್ಡಿಗೆ ಕೈಚಾಚುತ್ತಾರಲ್ಲ! ನಿಜಕ್ಕೂ ನೋವಾಗುತ್ತದೆ.ಒಂದು ಕಾಲದಲ್ಲಿ ನಮ್ಮ ದೇಶದ ತಕ್ಷ ಶಿಲಾ ,ನಲಂದಾ ವಿಶ್ವ ವಿದ್ಯಾಲಯಗಳು ಜಗತ್ತಿನಲ್ಲಿಯೇ ಅತ್ಯುನ್ನತ ಸ್ಥಾನಗಳನ್ನು ಪಡೆದಿದ್ದವು ಆದರೆ ಇಂದು   ನಮ್ಮ  ನೆಲದಲ್ಲಿ ಕುಲಪತಿಯೊಬ್ಬರು ಭ್ರಷ್ಟಾಚಾರ ಮಾಡಿ ಬಂಧನಕ್ಕೆ ಒಳಗಾಗಿದ್ದಾರೆ.ಇದು ವಿಶ್ವ ವಿದ್ಯಾಲಯಗಳ ಘನತೆಗೆ ನಿಜಕ್ಕೂ ಒಂದು ಕಪ್ಪು ಚುಕ್ಕಿ .ಆದರೆ ಕರ್ನಾಟಕ ವಿಶ್ವ ವಿದ್ಯಾಲಯ ಮಾತ್ರವಲ್ಲ ,ನಮ್ಮಲ್ಲಿನ ಹೆಚ್ಚಿನ ಯೂನಿವರ್ಸಿಟಿಗಳಲ್ಲಿ ಅವ್ಯವಹಾರ ,ಭ್ರಷ್ಟಾಚಾರ ನಡೆದಿರುವ ಬಗ್ಗೆ ಸುದ್ದಿ ಸದಾ ಕೇಳುತ್ತಲೇ ಇರುತ್ತೇವೆ .
ಕಳೆದ ನವೆಂಬರ್ ತಿಂಗಳಿನಲ್ಲಿ ಮಂಗಳೂರು ಯೂನಿವರ್ಸಿಟಿಯಲ್ಲಿ ನಡೆದ ಬೋಧಕ ಸಿಬ್ಬಂದಿ ನೇಮಕಾತಿಯಲ್ಲಿ ಯುಜಿಸಿ ನಿಯಮಗಳ ಉಲ್ಲಂಘನೆ ಹಾಗೂ ವ್ಯಾಪಕ ಅವ್ಯವಹಾರ ನಡೆದ ಬಗ್ಗೆ ಸಾಕಷ್ಟು ಸುದ್ದಿಯಾಗಿದೆ.ಅದಕ್ಕೂ ಹಿಂದೆ ಬೆಳಗಾವಿ ,ಗುಲ್ಬರ್ಗ ವಿಶ್ವ ವಿದ್ಯಾಲಯಗಳಲ್ಲಿ ಆದ ನೇಮಕಾತಿ ಹಾಗೂ ಇತರ ವಿಚಾರಗಳ ಬಗ್ಗೆ ಕೂಡ ಅಪಸ್ವರಗಳಿವೆ.ರಾಜೀವ ಗಾಂಧಿ ವಿಶ್ವ ವಿದ್ಯಾಲಯ ಸೇರಿದಂತೆ ಕರ್ನಾಟಕದ ಇಪ್ಪತ್ತು ವಿಶ್ವ ವಿದ್ಯಾಲಯಗಳ ಮೇಲೆ ಭ್ರಷ್ಟಾಚಾರ ಅವ್ಯವಹಾರಗಳ ಆರೋಪಗಳಿವೆ.
ಶಿಕ್ಷಣದ ಮನೆಯೇ ಭ್ರಷ್ಟವಾದರೆ ದೇಶದ ಮಕ್ಕಳಿಗೆ ಪ್ರಾಮಾಣಿಕತೆ,ಸಚ್ಚಾರಿತ್ರ್ಯದ ಪಾಠ ಹೇಳುವವರು ಯಾರು ?ಸ್ವಯಂ ಭ್ರಷ್ಟರಾದವರು  ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ಸಾಧ್ಯವೇ ಇಲ್ಲ .
ಏನು ಪರಿಹಾರ ?
2006 ರಲ್ಲಿ ಮೈಸೂರು  ವಿಶ್ವ ವಿದ್ಯಾಲಯಗಳಲ್ಲಿ ಅಕ್ರಮ ನೇಮಕಾತಿ ನಡೆದ ಬಗ್ಗೆ ತನಿಖೆಯಾಗಿದ್ದು ಸರಕಾರ ನೇಮಕಾತಿ ರದ್ದು  ಪಡಿಸಿ ಆದೇಶ ಹೊರಡಿಸಿ ಒಂದು ದಿಟ್ಟ ಹೆಜ್ಜೆ ಇಟ್ಟಿದೆ .ಮೊನ್ನೆ ಕರ್ನಾಟಕ ವಿಶ್ವ ವಿದ್ಯಾಲಯದ ಕುಲಪತಿ ಡಾ.ಎಚ್.ಬಿ ವಾಲೀಕಾರ ಅವರು  ಭ್ರಷ್ಟಾಚಾರದ ಆರೋಪದಡಿಯಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಹೀಗೆ ಎಲ್ಲ ವಿಶ್ವ ವಿದ್ಯಾಯಗಳಲ್ಲಿನ ಅವ್ಯವಹಾರಗಳ ಬಗ್ಗೆಯೂ  ತನಿಖೆಯಾಗಿ ತಪ್ಪಿತಸ್ಥರಿಗೆ ಶೀಘ್ರವಾಗಿ ಶಿಕ್ಷೆಯಾದರೆ ತುಸುವಾದರೂ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಬಹುದು.ಭ್ರಷ್ಟಾಚಾರಿಗಳ ಭಂಡೆದೆ ತುಸುವಾದರೂ ಕಂಪಿಸೀತು.ನಮ್ಮ ವಿಶ್ವ ವಿದ್ಯಾಲಯಗಳು ಭ್ರಷ್ಟಾಚಾರದಿಂದ ಸಂಪೂರ್ಣ ಮುಕ್ತವಾದರೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ .ಗುಣಮಟ್ಟದ ವೃದ್ಧಿಯ ಮೂಲಕ ನಮ್ಮ ವಿಶ್ವ ವಿದ್ಯಾಲಯಗಳೂ ಕೂಡ ಮುಂದೊಂದು ದಿನ  ಖಂಡಿತವಾಗಿಯೂ ಅಂದಿನ ನಲಂದಾ ತಕ್ಷ ಶಿಲೆಗಳಂತೆ  ಜಗತ್ತಿನಲ್ಲಿ  ಉಕೃಷ್ಟ ಸ್ಥಾನವನ್ನು ಮತ್ತೊಮ್ಮೆ ಗಳಿಸಬಹುದು. ಆದ್ದರಿಂದ ಶಿಕ್ಷಣದ ಮನೆ ಮೊದಲು ಸ್ವಚ್ಛವಾಗಲಿ.
ಡಾ.ಲಕ್ಷ್ಮೀ ಜಿ ಪ್ರಸಾದ
samagramahithi@gmail.com

No comments:

Post a Comment