Friday, 12 April 2019

ದೊಡ್ಡವರ. ದಾರಿ : 68 ಸಜ್ಜನಿಕೆಯ ಸಾಕಾರ ಮೂರ್ತಿ ಡಾ.ಕೆ ಗೋಕುಲನಾಥ್ ©. ಡಾ.ಲಕ್ಷ್ಮೀ ಜಿ ಪ್ರಸಾದ

ದೊಡ್ಡವರ ಹಾದಿ  ಪೂರ್ಣ ಬೆಂಬಲವಿತ್ತ ಡಾ.ಕೆ ಗೋಕುಲನಾಥ
ನನ್ನ ಬದುಕಿನಲ್ಲಿ ಬಹುದೊಡ್ಡ ತಿರುವು ನೀಡಿದವರು ಎಪಿಎಸ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದ ಡಾ.ಕೆ ಗೋಕಲುನಾಥರು
ಪ್ರಸಾದರಿಗೆ 2005 ಸೆಪ್ಟೆಂಬರ್ ತಿಂಗಳಲ್ಲಿ ಬೆಂಗಳೂರಿನ iic ltd ಎಂಬ ಒಂದು ಒಳ್ಳೆಯ ಕಂಪೆನಿಯಲ್ಲಿ ನನ್ನ ಅಣ್ಣ ಕೃಷ್ಣ ಭಟ್ ವಾರಣಾಸಿಯರ ಸಹಾಯದಿಂದ ಅಕೌಂಟ್ಸ್ ಆಫೀಸರ್ ಆಗಿ ಒಳ್ಳೆಯ ಕೆಲಸ ಸಿಕ್ಕಿತ್ತು. ಅವರು ಆಗಲೇ ಬೆಂಗಳೂರಿನಲ್ಲಿ ಬಂದು ಸ್ವಲ್ಪ ಸಮಯ ನನ್ನ ತಮ್ಮ ಈಶ್ವರ ಭಟ್ ವಾರಣಾಸಿಯ ಬಾಡಿಗೆ ಮನೆಯಲ್ಲಿ ಅವರೊಂದಿಗೆ ಇದ್ದರು.ಆಗ ನನ್ನ ತಮ್ಮ ಮತ್ತು ತಮ್ಮನ ಮಡದಿ ತೋರಿದ ಪ್ರೀತಿ ಕಾಳಜಿ  ಆದರ ಆತಿಥ್ಯ ವನ್ನು  ಪ್ರಸಾದ ಸದಾ ಸ್ಮರಿಸುತ್ತಾ ಇರುತ್ತಾರೆ.
ನಾನಾಗ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕಿ ಆಗಿ ಕೆಲಸ ಮಾಡುತ್ತಿದ್ದೆ.ಶೈಕ್ಷಣಿಕ ವರ್ಷದ ನಡುವೆ ಕೆಲಸ ಬಿಡುವುದು ಸರಿಯಲ್ಲ,ನನ್ನನ್ನು ಕರೆದು ಕೆಲಸ ಕೊಟ್ಟ ಪ್ರಾಂಶುಪಾರಾದ ಸ್ವಿಬರ್ಟ್ ಡಿ ಸಿಲ್ವ ಅವರು ನನ್ನ ಮೇಲೆ ಇಟ್ಟ ನಂಬಿಕೆಗೆ ಧಕ್ಕೆಯಾಗುತ್ತದೆ( ನಾನಲ್ಲಿ ಕನ್ನಡ ಹುದ್ದೆಗೆ ಅರ್ಜಿ ಸಲ್ಲಿಸಿದ್ದು ಅದರಲ್ಲಿ ಸಂಸ್ಕೃತ ಎಂಎ ಯನ್ನು ಮೊದಲ ರ‍್ಯಾಂಕಿನನೊಂದಿಗೆ   ಪಡೆದ  ಬಗ್ಗೆ ಮಾಹಿತಿ ಹಾಕಿದ್ದೆ.ಅದನ್ನು ನೋಡಿ ಅವರು ನನ್ನನ್ನು ಫೋನ್ ಮಾಡಿ ಕರೆಸಿ  ಅಲೋಶಿಯಸ್ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕಿ ಆಗಿ ಕೆಲಸ ನೀಡಿದ್ದರು‌)ಅಲ್ಲದೇ ಮಗ ಒಂದನೇ ತರಗತಿಯಲ್ಲಿ ಓದುತ್ತಿದ್ದ. ಹಾಗಾಗಿ ಶೈಕ್ಷಣಿಕ ವರ್ಷ ಮುಗಿಯುವ ತನಕ ನಾನು ಮಂಗಳೂರಿನಲ್ಲಿ ಇದ್ದೆ.ಅಲೋಶಿಯಸ್ ಕಾಲೇಜಿನಲ್ಲಿ ಕೆಲಸ ಮುಂದುವರಿಸಿದ್ದೆ.
ನಂತರ ನಾವಿದ್ದ  ಸ್ವಂತ ಮನೆಯನ್ನು ಮಾರಾಟ ಮಾಡುವ ವ್ಯವಸ್ಥೆ ಮಾಡಿ ಅದರ ವ್ಯವಹಾರ ಮುಗಿಸಿ ತಂದೆ ಮನೆಗೆ ಬಂದು ಒಂದು ತಿಂಗಳು ಇದ್ದು ಮತ್ತೆ ಬೆಂಗಳೂರಿಗೆ ಬಂದೆ,ಅದೇ ದಿನ ಪ್ರಸಾದ್ ಮನೆ ಬದಲಾಯಿಸಿ ಕತ್ತರಿಗುಪ್ಪೆ ವಿವೇಕನಗರದಲ್ಲಿ ಒಂದು ಬಾಡಿಗೆ ಮನೆ ಗೆ ಬಂದಿದ್ದರು.ಬರುವಾಗ ನನ್ನ ಬಜಾಜ್ ಸ್ಪಿರಿಟ್ ಟು ವೀಲರ್ ಕೂಡ ಜೊತೆಯಲ್ಲಿ ಬಂದಿತ್ತು.ಎಳೆಯ ಮಗನೂ ಜೊತೆಯಲ್ಲಿ ಇದ್ದ.
ಅದೇ ದಿನದ ಪತ್ರಿಕೆ ನೋಡಿದೆ‌ ಅದರಲ್ಲಿ ಎನ್ ಆರ್ ಕಾಲೋನಿಯ ಎಪಿಎಸ್    ಕಾಲೇಜಿಗೆ ಕನ್ನಡ ಉಪನ್ಯಾಸ ಹುದ್ದೆಗೆ ವಾಕ್ ಇನ್ ಇಂಟರ್ವೂ ಗೆ ಜಾಹೀರಾತು ನೀಡಿದ್ದರು‌.ತಕ್ಷಣವೇ ಮನೆಯ ಓನರಲ್ಲಿ ಇದು ಎಲ್ಲಾಗುತ್ತದೆ ? ಹತ್ತಿರವಾ ? ಎಂದು ವಿಚಾರಿಸಿದೆ.ಇದು ಇಲ್ಲೇ ನಾಲ್ಕು ಕಿಮೀ ದೂರ ಎಂದು ತಿಳಿಸಿ ಹೋಗುವ ದಾರಿ ತಿಳಿಸಿದರು.ಅದಾಗಲೇ ಸಮಯ ಒಂಬತ್ತೂವರೆ ಗಂಟೆ ಆಗಿತ್ತು. ಪ್ರಸಾದ್ ನಮ್ಮನ್ನು ಮನೆ ತಲುಪಿಸಿ ಅರ್ಜೆಂಟ್ ಕೆಲಸ ಇದೆ ಎಂದು ಹೋಟೆಲಿನಿಂದ ತಿಂಡಿ ತರಿಸಿ ಇಟ್ಟು ಆಫೀಸ್ ಗೆ ಹೋಗಿ ಆಗಿತ್ತು.
ಬೇಗ ಬೇಗನೆ ಮಗನಿಗೆ ಸ್ನಾಮಾಡಿಸಿ ಡ್ರೆಸ್ ಹಾಕಿ ನಾನೂ ಮಿಂದು ಸೀರೆ ಉಟ್ಟು ಒಂದು ಅರ್ಜಿ ಬರೆದು ಗಾಡಿ ಸ್ಟಾರ್ಟ್ ಮಾಡಿ ಮಗನನ್ನು ಮುಂದೆ ಕೂರಿಸಿಕೊಂಡು ಹೊರಟೆ.ಹೋಗುವಾಗ ದಾರಿ ಗೊಂದಲ ಆಗಲಿಲ್ಲ.. ಮನೆ ಓನರ್ ಹೇಳಿದಂತೆ ಸೀದಾ ಎನ್ ಆರ್ ಕಾಲೋನಿಯ ಎಪಿಎಸ್ ಟ್ರಸ್ಟ್‌ ಆಪೀಸ್ ಗೆ ತಲುಪಿದೆ.ಬಂದ ಎಲ್ಲರ ಸಂದರ್ಶನ ಮುಗಿದಿತ್ತು..ಇನ್ನೇನು ಅವರೆಲ್ಲ ಹೊರ ಬರುತ್ತಾರೆ ಅನ್ನುವಷ್ಟರಲ್ಲಿ ನಾನು ಅಲ್ಲಿಗೆ ತಲುಪಿ ನನ್ನ ಅರ್ಜಿ ನೀಡಿದೆ..
ಏನಮ್ಮಾ  ಸಂದರ್ಶನ ಒಂಬತ್ತುವರೆಗೆ ಎಂದು ಹಾಕಿದ್ದೆವಲ್ಲ ..ನೀವು ಹತ್ತೂವರೆಗೆ ಬಂದಿದ್ದೀರಲ್ಲ ಎಂದು ಅಲ್ಲಿ ಯಾರೋ ನನ್ನನ್ನು ಆಕ್ಷೇಪ ಮಾಡಿದರು. ಅವರು ಡಾ.ಕೆ ಗೋಕುಲನಾಥರೆಂದು ಅನಂತರ ತಿಳಿಯಿತು..
ನಾನು ಆ ದಿನ ಬೆಳಗಷ್ಟೇ ಬೆಂಗಳೂರಿಗೆ ಬಂದು ತಲುಪಿದ್ದು ಮತ್ತು ಬೆಂಗಳೂರು ನನಗೆ ಅಪರಿಚಿತ ಪ್ರದೇಶ ,ದಾರಿ ಕೇಳಿಕೊಂಡು ಬರುವಷ್ಟರಲ್ಲಿ ತಡವಾಯಿತು ಎಂದು ಸಮಜಾಯಿಸಿ ಕೊಟ್ಟೆ.ಸರಿ ಈಗಲೇ ಸಂದರ್ಶನ ಶುರು ಮಾಡುವುದಾ ಅಥವಾ ನಿಮಗೆ ಸುಧಾರಿಸಿಕೊಳ್ಳಲು ಹತ್ತು ನಿಮಿಷ ಸಮಯ ಬೇಕಾದರೆ ತೆಗೆದುಕೊಳ್ಳಿ ಎಂದು ಹೇಳಿ ಅಟೆಂಡರ್ ಒಬ್ಬರನ್ನು ಕರೆದು ನನ್ನ ಮಗನನ್ನು ನೋಡಿಕೊಳ್ಳಲು ತಿಳಿಸಿದರು.ನಮಗೆ ಸಮಯ ಬೇಡ ಸರ್ ಈಗಲೇ  ಸಂದರ್ಶನ ಮಾಡಬಹುದು ನಾನು ತಯಾರಿದ್ದೇನೆ ಎಂದು ತಿಳಿಸಿದೆ.ಕನ್ನಡ ಸಾಹಿತ್ಯ,ವ್ಯಾಕರಣಗಳ ಬಗ್ಗೆ ಕೆಲವು ಪ್ರಶ್ನೆಗಳನ್ನು ಅಲ್ಲಿ ಇದ್ದ ಗೋಕುಲನಾಥರು ಹಸಗೂ ಇತರರು ಕೇಳಿದರು.ಅಲ್ಲಿ ಕನ್ನಡ ಉಪನ್ಯಾಸಕರಾದ ಕೆ ಎಸ್‌ಮದುಸೂದನರು ಕೂಡ ಇದ್ದರೆಂದು ನಂತರ ತಿಳಿಯಿತು. ಸಂಸ್ಕೃತ ಎಂಎ ಓದಿ ಅನೇಕ ವರ್ಷ ಪಾಠ ಮಾಡಿದ ನನಗೆ ಛಂದಸ್ಸು, ವ್ಯಾಕರಣ ಗಳ ಬಗ್ಗೆ ಉತ್ತರಿಸುವಿದು ಬಹಳ ಸುಲಭವಾಯಿತು.ಕೇಳಿದ ಎಲ್ಲಾ ಪ್ರಶ್ನೆ ಗಳಿಗೂ ಸಮಪರ್ಕಪ ಉತ್ತರ ನೀಡಿ ಗುಡ್ ಗುಡ್ ಎಂದು ಹೇಳಿಸಿಕೊಂಡೆ.ನಂತರ ಮರು ದಿನ ಬಂದು ಡೆಮೋ ನೀಡಲು ತಿಳಿಸಿದರು.ಸರಿ ಎಂದು ಒಪ್ಪಿ ಅಲ್ಲಿದ್ದವರಿಗೆ ಧನ್ಯವಾದಗಳನ್ನು ತಿಳಿಸಿ ಮಗನನ್ನು ಕರೆದು ಕೊಂಡು ಗಾಡಿ ಹತ್ತಿ ಹಿಂದೆ ಹೊರಟೆ.ಹಿಂದೆ ಬರುವಾಗ ಒನ್ ವೇ ಇತ್ತು.ಮಂಗಳೂರಿನಲ್ಲಿ ಆಗಿನ್ನೂ ಒನ್ ವೇ ಬಂದಿರಲಿಲ್ಲ. ಹಾಗಾಗಿ ಒನ್ ವೆ ಯಲ್ಲಿ ಹೋಗಿ‌ಮತ್ತೆ ಮೂಲ ದಾರಿಯನ್ನು ಹಿಡಿಯು ಬಗೆ ನನಗೆ ತಿಳಿದಿರಲಿಲ್ಲ .
ಹಾಗಾಗಿ ದಾರಿ ತಪ್ಪಿ ಎಲ್ಲೆಲ್ಲೋ ಅಲೆ ದಾಡಿದೆ.ಕೊನೆಗೆ ಓರ್ವ ಅಟೋಡ್ರೈವರ್ ನನ್ನನ್ನು ಫಾಲೋ‌ಮಾಡಿ ವಿವೇಕ ನಗರಕ್ಕೆ ನನಗೆ ಹೋಗಲಿದೆ ಅಲ್ಲಿಂದ ನಿಮಗೆ ಹೋಗಲು ದಾರಿ ಗೊತ್ತಾಗಬಹುದು ಎಂದು ಹೇಳಿದರು.ಹಾಗೆಯೇ ಅವರ ಹಿಂದೆಯೇ ಸಾಗಿ ವಿವೇಕಾನಂದ ನಗರ ತಲುಪಿ ಅವರಿಗೆ ಸ್ವಲ್ಪ ದುಡ್ಡು ಕೊಟ್ಟು ಧನ್ಯವಾದಗಳನ್ನು ಹೇಳಿ ಸುಲಭವಾಗಿ ಮನೆ ತಲುಪಿದೆವು.ಮನೆ ತಲುಪುವಾಗ ಸಂಜೆ ಆರು ಗಂಟೆ ಆಗಿತ್ತು.ಉಪ್ಪಿಟ್ಟು  ಚಾಯ ಮಾಡಿ  ತಿಂದು ತಕ್ಷಣದ ಹಸಿವು ಪರಿಹಾರ ಮಾಡಕೊಂಡೆವು.ಇಷ್ಟಾದರೂ ಏನೊಂದೂ ತಕರಾರು ಮಾಡದ ನನ್ನ ಮುದ್ದು ಮಗ ಸುಸ್ತಾಗಿ ಮಲಗಿದ.ರಾತ್ರಿಗೆ ಪ್ರಸಾದ್ ಹೋಟೆಲಿನಿಂದ ಊಟ ತಿಂಡಿ ಕಟ್ಟಿಸಿಕೊಂಡು ಬಂದರು..ನನಗೂ ಸುಸ್ತಾಗಿದ್ದು ಊಟ ಮಾಡಿ ಮಲಗಿಕೊಂಡೆ. ಸುಸ್ತಾಗಿ ಮಲಗಿದ್ದ ನನಗೆ ಮರುದಿನ ಬೇಗನೆ ಎಚ್ಚರ ಆಗಿರಲಿಲ್ಲ. ಪ್ರಸಾದ್ ‌ಅನ್ನ ಸಾರು ಮಾಡಿಟ್ಟು ಆಪೀಸ್ ಗೆ ಹೋಗಿದ್ದರು.ನಾನು ಎದ್ದು ಸ್ನಾನ ಮಾಡಿ ಮಗನನ್ನು ಎಬ್ಬಿಸಿ ಸ್ನಾನ ಮಾಡಿಸಿ ಡ್ರೆಸ್ ಹಾಕಿಸಿ  ಕೈಗೆ ಸಿಕ್ಕ ಒಂದು ಪುಸ್ತಕ ಹಿಡಿದುಕೊಂಡು ಗಾಡಿ ಸ್ಟಾರ್ಟ್ ಮಾಡಿ ಎನ್ ಆರ್ ಕಾಲೋನಿಯಲ್ಲಿ ಇರುವ ಎಪಿಎಸ್ ಕಾಲೇಜಿಗೆ ಬಂದೆ.ಪುಸ್ತಕ ತೆರೆದು ಯಾವುದನ್ನು ಪಾಠ ಮಾಡಲಿ ಎಂದು ನೋಡಿದಾಗ ಮಾಸ್ತಿಯವರ ಮದಲಿಂಗನ ಕಣಿವೆ ಎಂಬ ಕಥನ ಕಾವ್ಯ ಕಾಣಿಸಿತು.ಅದರ ಬಗ್ಗೆ ಈ ಹಿಂದೆ ಒಮ್ಮೆ ಎಲ್ಲೋ ಉಪನ್ಯಾಸ ನೀಡಿದ್ದೆ.ಹಾಗಾಗಿ ಒಂದಿನಿತು ತಯಾರಿ ಇಲ್ಲದಿದ್ದರೂ ಧೈರ್ಯವಾಗಿ ಅದನ್ನು ಪಾಠ ಮಾಡಲು ಸಿದ್ಧಳಾದೆ.ಒಂದಷ್ಟು ಪ್ರಶ್ನೆ ಕೇಳಿ ನನ್ನನ್ನು ಗಲಿಬಲಿ ಗೊಳಿಸಬೇಕೆಂದಿದ್ದ ಅಲ್ಲಿ ಕುಳಿತಿದ್ದ ವಿದ್ಯಾರ್ಥಿಗಳು ಮಾಸ್ತಿಯವರ ಮದಲಿಂಗನ ಕಣಿವೆಯ ಕಥಾನಕ ಕಾವ್ಯ ಶೈಲಿಯನ್ನು ಕೇಳುತ್ತಾ ಸಮಯದ ಪರಿವೆಯನ್ನು ನನ್ನನ್ನು ಪ್ರಶ್ನಿಸಬೇಕೆಂದಿದ್ದುದನ್ನು ಮರೆತು ಮಂತ್ರಮುಗ್ಧರಾಗಿ ಕುಳಿತು ಆಲಿಸಿದ್ದರು..ನನಗೂ ಅಲ್ಲಿ ನನ್ನ ಪಾಠ ಮಾಡುವ ವಿಧಾನವನ್ನು ಪರೀಕ್ಷಿಸುವ ಸಲುವಸಗಿ ಪ್ರಾಂಶುಪಾಲರೂ ಕನ್ನಡ ವಿಭಾಗದ ಮುಖ್ಯಸ್ಥ ರೂ ಅಗಿದ್ದ ಡಾ.ಕೆ ಗೋಕುಲ ನಾಥ ಹಾಗೂ ಇತರ ಕನ್ನಡ ಉಪನ್ಯಾಸಕರು ಅಲ್ಲಿ ಇದ್ದುದು ಮರೆತು ಹೋಗಿತ್ತು.ಮಾಸ್ತಿಯವರ ಕಥನ ಕಾವ್ಯದಲ್ಲಿ ನಾನು ಕೂಡ ವಿದ್ಯಾರ್ಥಿಗಳ ಜೊತೆ ತನ್ಮಯಳಾಗಿ ಹೋಗಿದ್ದೆ..ಸಾಕಿನ್ನು ನಿಲ್ಲಿಸಿ ಮೇಡಂ ಎಂದು ಡಾ.ಕೆ ಗೋಕಲುನಾಥರು ಹೇಳಿದಾಗಲೇ ನಾನು ಇಹ‌ಲೋಕಕ್ಕೆ ಬಂದದ್ದು.ಉಪನ್ಯಾಸಕ ವೃತ್ತಿ  ಮತ್ತು ವಿದ್ಯಾರ್ಥಿಗಳನ್ನು ತುಂಬಾ ಇಷ್ಟ ಪಡುವ ನನಗೆ ಪಾಠ ಮಾಡುವುದೆಂದಿಗೂ ಕಷ್ಟದ ವಿಚಾರ ಎನಿಸಿಸಿಯೇ ಇಲ್ಲ..
ಎರಡು ದಿನಗಳಲ್ಲಿ ಬಹಳ ಪ್ರತಿಷ್ಠಿತ ಜೈನ್ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕ ಹುದ್ದೆಯ ಸಂದರ್ಶನಕ್ಕೆ ಹೋಗಿ ಅಲ್ಲಿ ಆಯ್ಕೆ ಆದೆ...ಅಲ್ಲಿ ಉತ್ತಮ ವೇತನ ಹಾಗೂ ಸೌಲಭ್ಯ ಗಳು ಇದ್ದವು..ಆದರೆ ನಾನು ಸಂಸ್ಕೃತ ಬಿಟ್ಟು ಕನ್ನಡಕ್ಕೆ ಬರಬೇಕಿಂದಿದ್ದೆ...ಹಾಗಾಗಿ ಜೈನ್ ಕಾಲೇಜು( ಈಗ ಜೈನಗ ಯುನಿವರ್ಸಿಟಿ ಆಗಿದೆ) ಅಪಾಯಿಂಟ್ಮೆಂಟ್ ಆರ್ಡರ್ ಕಳುಹಿಸಿ ಒಂದು ವಾರದ ಒಳಗೆ ಬಂದು ಕೆಲಸಕ್ಕೆ ಹಾಜರಾಗಿ ವರದಿ ಮಾಡಲು ತಿಳಿಸಿದ್ದರೂ ಹೋಗಿ ವರದಿ ಮಾಡಿರಲಿಲ್ಲ..ಕೊನೆಯ ದಿನದವರೆಗೆ ಎಪಿಎಸ್ ಕಾಲೇಜಿನಿಂದ ಕರೆ ಬಾರದಿದ್ದರೆ ಹೋಗಿ ಜೈನ್ ಕಾಲೇಜಿನಲ್ಲಿ ಕೆಲಸಕ್ಕೆ ಹಾಜರಾಗಿ ವರದಿ ಮಾಡಿಕೊಳ್ಳುವುದು ಎಂದು ನಿರ್ಧರಿಸಿದೆ.
ಇನ್ನೇನು ಒಂದು ದಿನ ಮಾತ್ರ ಇದೆ ಅನ್ನುವ ಷ್ಟರಲ್ಲಿ ಎಪಿಎಸ್ ಕಾಲೇಜು ಪ್ರಾಂಶುಪಾಲರಾದ ಡಾ.ಕೆ ಗೋಕುಲನಾಥರು ಫೋನ್ ಮಾಡಿ ನೀವು ಅಯ್ಕೆ ಆಗಿದ್ದೀರಿ ,ಬಂದು  ಕೆಲಸದ ಆದೇಶ ಪತ್ರ ಪಡೆಯುತ್ತೀರಾ? ಅಥವಾ ಪೋಸ್ಟ್‌ ನಲ್ಲಿ ಕಳುಹಿಕೊಡಲಾ ಎಂದು ಕೇಳಿದರು.
ಅದನ್ನೇ ಕಾಯುತ್ತಾ ಇದ್ದ ನಾನು ಈಗಲೇ ಬರುತ್ತೇನೆ ಸರ್ ಪೋಸ್ಟ್‌ ಮಾಡುವುದು ಬೇಡ ಎಂದು ಹೇಳಿದೆ.ಮತ್ತೆ ಮಗನನ್ನು ಹೊರಡಿಸಿಕೊಂಡು ಗಾಡಿ ಹತ್ತಿ ಎಪಿಎಸ್ ಕಾಲೇಜಿಗೆ ಹೋಗಿ‌ ಆದೇಶ ಪತ್ರ ಪಡೆದು ಅದೇ ದಿನ ಕರ್ತವ್ಯಕ್ಕೆ ಹಾಜರಾಗಿ ವರದಿ ಮಾಡಕೊಂಡೆ.ಆಗ ನನಗೆ ಜೈನ್ ಕಾಲೇಜಿನಿಂದಲೂ ಆದೇಶ ಬಂದ ಬಗ್ಗೆ ತಿಳಿಸಿದೆ.ಆಗ ಗೋಕುಲನಾಥರು " ನೋಡಿ ಲಕ್ಷ್ಮೀ ನಿಮ್ಮಂತ ಮೂರು ಎಂಎ ಗಳನ್ನು ಮಾಡಿದ ರ‍‍್ಯಾಂಕ್ ಪಡೆದ ಅನುಭವಿ ಉಪನ್ಯಾಸಕರು ನಮ್ಮ ಸಂಸ್ಥೆಗೆ ಬೇಕು ಖಂಡಿತ.. ಆದರೆ ನಮ್ಮ  ಸಂಸ್ಥೆ ಗಿಂತ ಜೈನ್ ಕಾಲೇಜಿನಲ್ಲಿ ಹೆಚ್ಚಿನ ವೇತನ ಹಗೂ ಸೌಲಭ್ಯಗಳು ಸಿಗುತ್ತವೆ.
ಆಲೋಚಿಸಿ ನೋಡಿ" ಎಂದು ಹಿತ ನುಡಿದರು.ಅದಾಗಲೇ ಡಾ.ಕೆ ಗೋಕುಲನಾಥರ ಸೌಜನ್ಯ, ಸಜ್ಜನಿಕೆಯ ಅರಿವಾಗಿತ್ತು ನನಗೆ.ಇಂತಹವ ಕೈ ಕೆಳಗೆ ಕೆಲಸ ಮಾಡಲು ಕೂಡ ಯೋಗ ಬೇಕು.
ಅಲ್ಲದೇ ನಾನು ಅದಾಗಲೇ ಸಂಸ್ಕೃತ ಬಿಟ್ಟು  ಕನ್ನಡದಲ್ಲಿ ಮುಂದುವರಿಯಲು ನಿರ್ಧರಿಸಿದ್ದೆ .ಹಾಗಾಗಿ ನಿರ್ಧರಾತ್ಮಕವಾಗಿ " ಇಲ್ಲ ಸರ್ ನನಗೆ ವೇತನಕ್ಕಿಂತ ವಾತಾವರಣ ಮುಖ್ಯ.
ಅಲ್ಲಿಗೆ ಬತುವ ಸಿರಿವಂತ ‌ಮಕ್ಕಳಿಗಿಂತ‌ಇಲ್ಲಿ ಬರುವ ಬಡ ಮಧ್ಯಮ ವರ್ಗದ ಮಕ್ಕಳಿಗೆ ಕನ್ನಡ ಪಾಠ ಮಾಡಲು ಅವರಿಗೆ ಪಾಠದೊಂದಿಗೆ ಪಠ್ಯೇತರ ಚಟುವಟಿಕೆಗಳನ್ನು ಹೇಳಿಕೊಡಲು ನನಗೆ ಇಷ್ಟವಿದೆ..ಹಾಗಾಗಿ ನಿಮ್ಮ ಕೈ ಕೆಳಗೆ ಕೆಲಸ‌ಮಾಡಿ ಅನುಭವ ಪಡೆಯಲು ನಿರ್ಧರಿಸಿದ್ದೇನೆ.ಹಾಗಾಗಿ ಇಲ್ಲಿಯೇ ಸೇರುತ್ತೇನೆ ಎಂದು ಕೆಲಸಕ್ಕೆ ಹಾಜರಾಗಿ ವರದಿ ಮಾಡಕೊಂಡೆ .ಆಗ ಅವರು : ನೀವು ಮೂರು ಎಂಎ ಪದವಿಗಳನ್ನು ಪಡೆದಿದ್ದೀರಿ,ಪಿಎಚ್ ಡಿ ಯಾಕೆ ಮಾಡಿಲ್ಲ ? ಎಂದು ಕೇಳಿದರು..ಈ ಹಿಂದೆ ನಾನು ಎರಡನೇ ಬಿಎಸ್ಸಿ ವಿದ್ಯಾರ್ಥಿನಿ ಆಗಿದ್ದಾಗ ನಮ್ಮ ಕಾಲೇಜಿಗೆ ಹೊಸದಾಗಿ ಒಬ್ಬರು ಮೇಡಂ ಬಂದಿದ್ದರು.ಅವರಾಗ ಪಿಎಚ್ ಡಿ ಮಾಡುತ್ತಾ ಇದ್ದರು..ಪಿಎಚ್ ಡಿ ಅಂದರೆ ಏನು ಹೇಗೆ ಮಾಡುವುದು ಎಂಬ ಕುತೂಹಲದಿಂದ ನಾನು ಮತ್ತು ಸ್ನೇಹಿತೆ ಗಾಯತ್ರಿ ಅವರಲ್ಲಿ ಈ ಬಗ್ಗೆ ಹೋಗಿ ಮಾತನಾಡಿದ್ದೆವು..ಅದು ತುಂಬಾ ಕಷ್ಟದ ವಿಚಾರ..ತುಂಬಾ ಶ್ರದ್ಧೆ ಏಕಾಗ್ರತೆ ಬೇಕು.ಅದಕ್ಕಾಗಿ ದಿನಾಲು ಬೆಳಗ್ಗೆ ನಾಲ್ಕು ಗಂಟೆಗೆ ಎದ್ದಯ ಯೋಗ ಪ್ರಾಣಯಾಮ ಮಾಡಬೇಕೆಂದು ಹೇಳಿದ್ದನ್ನು ಕೇಳಿ ನಾವು ಗಾಭರಿಯಾಗಿದ್ದೆವು.ನಾನಂತೂ ಸೂರ್ಯವಂಶದವದವಳು! ಸೂರ್ಯ ಹುಟ್ಟಿ ಬೆನ್ನಿಗೆ ಬಿಸಿಲು ಬಿದ್ದು ಕರಚಿ ಇನ್ನೇನು ಮಲಗಲಾರದು ಎಂದಾದ ಮೇಲೆ ಚಾಪೆ ಬಿಟ್ಟು ಏಳುವವಳು..ಹಾಗಾಗಿ ಉಳಿದ ಎಲ್ಲಕ್ಕಿಂತ ಅವರು ಹೇಳಿದ " ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ತಣ್ಣೀರಲ್ಲಿ ಮಿಂದು ಯೋಗ ಪ್ರಾಣಯಾಮ ಮಾಡಬೇಕೆಂಬ ಮಾತು ನನ್ನಲ್ಲಿ ಅಚ್ಚೊತ್ತಿ ಕುಳಿತಿದ್ದು ಪಿಎಚ್ಡಿ ಮಾಡುವುದು ಬಿಡಿ ಆ ಬಗ್ಗೆ ಊಹೆ ಕೂಡ ಮಾಡಿರಲಿಲ್ಲ
.ಓಗ ಡಾ.ಕೆ ಗೋಕುಲನಾಥರು ಈ ಬಗ್ಗೆ ಪ್ರಶ್ನಿಸಿದಾಗ " ನನ್ನಿಂದ ಅದು ಸಾಧ್ಯವಿಲ್ಲ ಸರ್ ಅದು ತುಂಬಾ ಕಷ್ಟ ಅಂತೆ..ದಿನಾಲು ಬೆಳಗ್ಗೆ ಎದ್ದು ಪ್ರಾಣಾಯಾಮ ಯೊಗ ಮಾಡಿ ಏಕಾಗ್ರತೆ ಗಳಿಸಬೇಕಂತೆ " ಎಂದು ಮೆಲ್ಲನೆ ಕ್ಷೀಣ ಧ್ವನಿಯಲ್ಲಿ ಹೇಳಿದೆ.ಅವರಿಗೇನನಿಸಿತೋ ಗೊತ್ತಿಲ್ಲ ನಮ್ನ ಉಡಾಫೆಗೆ ಕೋಪ ಬಂದಿರಬಹುದು.. ಬೆಳ್ಳನೆ ಚಂದ ಇದ್ದ‌ಅವರ ಮುಖ ಕೋಪದಿಂದ ಕೆಂಪಾಯಿತು.
ಸರಿ,ಈಗ ಹೋಗಿ ನಾಳೆಯಿಂದ ರೆಗುಲರ್ ಬರಬೇಕು ಎಂದು ಹೇಳಿದರು.ನಾನು ಮನೆಗೆ ಬಂದೆ.ಇತ್ತ‌ಮಗಗನ್ನು ಸಮೀಪದ ಶಾಲೆಯಲ್ಲಿ ಎರಡನೇ ತರಗತಿಗೆ ಸೇರಿಸಿದೆ.
ಮರುದಿನ ಎಪಿಎಸ್ ಕಾಲೇಜಿನಲ್ಲಿ ಒಂದೆರಡು ಅವಧಿ ಮಾತ್ರ ತರಗತಿ ಇತ್ತು..ಇನ್ನೇನು ನಾನು ಮನೆಗೆ ಹೊರಡಬೇಕಿಂದಿದ್ದಾಗ ಇಂಟರ್ ಕಾಮ್ ಮೂಲಕ ಪ್ರಿನ್ಸಿಪಾಲ್ ಚೇಂಬರಿಗೆ ಬರಲು ತಿಳಿಸಿದರು. ಶುರುವಿನ ದಿನವೇ ಏನಾದರೂ ತಪ್ಪಾಗಿದೆಯಾ ಎಂದು ಆತಂಕದಿಂದ ಬಡ ಬಡ ಬಡಿಯುತ್ತಿರುವ ಎದೆಯನ್ನು ಸಮಸ್ಥಿತಿಗೆ ತರಲು ಯತ್ನಿಸುತ್ತಾ ಪ್ರಿನ್ಸ್ಇಪಾಲ್ ಕೊಠಡಿಗೆ ಹೋಗಿ ಅವರಿಗೆ ವಂದಿಸಿದೆ.ಅವರು ಕುಳಿತುಕೊಳ್ಳಲು ಸೂಚಿಸಿದರು.ಅವರು ಎಂದಿಗೂ ಅವರ ಸಹೋದ್ಯೋಗಿಗಳನ್ನು ನಿಲ್ಲಿಸಿಕೊಂಡು ಮಾತಾಡುತ್ತಿರಲಿಲ್ಲ.ಒಳಗೆ ಬಂದ ತಕ್ಷಣವೇ ಕುಳಿತುಕೊಳ್ಳಲು ಹೇಳುತ್ತಿದ್ದರು.ಕುಳಿತ ನಂತರವೇ ಮಾತು ಶುರು ಮಾಡುತ್ತಿದ್ದರು.ಅವರ ಆ ಸೌಜನ್ಯವೇ ನನಗೆ ತುಂಬಾ ಮೆಚ್ಚಿಕೆಯಾದದ್ದು.
ಅದಿರಲಿ.ನಾನು ಕುಳಿತ ನಂತರ ತಮ್ಮ ಟೇಬಲ್ ನಲ್ಲಿ ಇದ್ದ ಹತ್ತು ಹನ್ನೆರಡು ಪುಸ್ತಕಗಳನ್ನು ನೀಡಿ ಇವನ್ನು ಒಂದು ತಿಂಗಳಲ್ಲಿ ಓದಿ ತಂದು ಕೊಡಿ ಎಂದು ಹೇಳಿದರು.
ಅವೆಲ್ಲವೂ ಪ್ರಕಟಿತ  ಪಿ ಎಚ್ ಡಿ ಸಂಶೋಧನಾ ಪ್ರಬಂಧಗಳಾಗಿದ್ದವು..ನನಗೆ ಪಿಎಚ್ ಡಿ ಮಾಡಲು ಸಾಧ್ಯವಿಲ್ಲ ಎಂದು ನಾನು ಹೇಳಿದ್ದಕ್ಕೇ ಅವನ್ನು ನನಗೆ ಓದಲು ನೀಡಿದ್ದಾರೆಂದು ನನಗೆ ಅರ್ಥ ವಾಗಿತ್ತು .ಸರಿ ಸರ್ ಎಂದು ಹೇಳಿ ಧನ್ಯವಾದ ತಿಳಿಸಿ ಮನೆಗೆ ಬಂದೆ.ಒಂದೊಂದೇ ಪುಸ್ತಕಗಳನ್ನು ಓದಲು ಶುರು ಮಾಡಿದೆ‌.ವಾರದೊಳಗೆ ಅಷ್ಟೂ ಸಂಶೋಧನಾ ಮಹಾ ಪ್ರಬಂಧಗಳನ್ನು ಓದಿ‌ ಮುಗಿಸಿ ಅವರಿಗೆ ಹಿಂದೆ ಕೊಟ್ಟೆ‌.ಎಲ್ಲವನ್ನು ಇಷ್ಟು ಬೇಗ ಓದಿ‌ಮುಗಿಸಿದಿರಾ ಎಂದು ಕೇಳಿದರು.ಹೌದೆಂದು ಗೋಣು ಅಲ್ಲಾಡಿಸಿ ಸೂಚಿಸಿದೆ.ನೋಡಿ ಲಕ್ಷ್ಮೀ ನೀವೊಬ್ಬ ರ‍್ಯಾಂಕ್ ಸ್ಟೂಡೆಂಟ್. ಮೂರು ಎಂಎ ಪದವಿಗಳನ್ನು ಪಡೆದಿದ್ದೀರಿ.ಅನೇಕ ಕಥೆ, ಲೇಖನಗಳನ್ನು ಬರೆದಿದ್ದೀರಿ.
ಇಂತಹ ಒಂದು ಪಿಎಚ್ ಡಿ ಸಂಶೋಧನಾ ಮಹಾ ಪ್ರಬಂಧ ಬರೆಯಲು ಸಾಧ್ಯವಿಲ್ಲವೇ ? ನಿಮಗೆ ಖಂಡಿತಾ ಸಾಧ್ಯ ಎಂದು ನನಗನಿಸುತ್ತದೆ.ಹಂಪಿ ಕನ್ನಡ ವಿಶ್ವವಿದ್ಯಾಲಯದ ಪಿಎಚ್ ಡಿ ಅಧ್ಯಯನ ಕೇಂದ್ರ ಇಲ್ಲಿಯೇ ಹತ್ತಿರ ಬಿಎಮ್ ಶ್ರೀ ಪ್ರತಿಷ್ಠಾನ ದಲ್ಲಿ ಇದೆ.ಅಲ್ಲಿ ಹೋಗಿ ವಿಚಾರಿಸಿ ಎಂದು ಹೇಳಿದರು.ಅವರು ಹೇಳಿದಂತೆ ಅಲ್ಲಿ ಹೋಗಿ ವಿಚಾರಿಸಿದೆ.ಕೆಲವೇ ದಿನಗಳಲ್ಲಿ ಪಿಎಚ್ ಡಿ ಅಧ್ಯಯನಾರ್ಥಿಗಳಿಂದ ಅರ್ಜಿ ಆಹ್ವಾನಿಸುತ್ತಾರೆ ಆಗ ಅರ್ಜಿ ಸಲ್ಲಿಸಿ ಎಂದು ಮಾಹಿತಿ ನೀಡಿದ ಅಲ್ಲಿ ಕೆಲಸ ಮಾಡುತ್ತಿದ್ದ ರಾಜಮ್ಮ ತಿಳಿಸಿದರು
ಅವರು ಹೇಳಿದಂತೆ ಒಂದು ಒಂದೂವರೆ ತಿಂಗಳ‌ಒಳಗೆ ಅರ್ಜಿ ಆಹ್ವಾನಿಸಿದರು. ಅರ್ಜಿ ಹಾಕಿದೆ ನಂತರ ಲಿಖಿತ ಪರೀಕ್ಷೆ ಇತ್ತು ಅದರಲ್ಲಿ ಆಯ್ಕೆಯಾಗಿ ಮೌಖಿಕ‌ಪರೀಕ್ಷೆಗೆ ಹಾಜರಾದೆ.ಅಲ್ಲಿದ್ದವರು ನನಗೆ ಯಾರೂ‌ ಪರಿಚಿತರಲ್ಲ.ಯಾವುದೇ ಇನ್ ಫ್ಲೂ ಯೆನ್ಸ್ ನಮಗಿರಲಿಲ್ಲ‌..ಆದರೂ ಅಲ್ಲಿ ನಿಷ್ಪಾಕ್ಷಿಕಿಕ ಆಯ್ಕೆ ನಡೆದ ಕಾರಣ ನಾನು ಆಯ್ಕೆ ಆದೆ.ನಾನು ಡಾ.ಎಸ್ ನಾಗರಾಜು ಅವರ ಮಾರ್ಗದರ್ಶನದಲ್ಲಿ ಪಿಎಚ್ ಡಿ ಮಾಡಲು ನಿರ್ಧರಿಸಿದೆ..ಮುಂದಿನದೆಲ್ಲಾ ಕನಸಿನಂತೆ ಈಗ ಭಾಸವಾಗುತ್ತದೆ ನನಗೆ
ಎಲ್ಲಿಯ ಕೋಳ್ಯೂರು ? ಏನೂ ಅರಿಯದ ಯಾರದೇ ಪ್ರಭಾವ ಇಲ್ಲದ ದೂರದ ಗಡಿನಾಡಿನ ಹಠಮಾರಿ ಪೆದ್ದು ಹುಡುಗಿ ಲಕ್ಷ್ಮೀ ಡಾ.ಲಕ್ಷ್ಮೀ ಆಗಿ ಬಿಟ್ಟಳು..ಎರಡನೇ ಡಾಕ್ಟರೇಟ್ ಪದವಿ ಕೂಡ ಒಲಿದು ಬಂತು..

ಅದರೆ ಇವೆಲ್ಲದರ ಹಿಂದೆ ಡಾ.ಕೆ ಗೋಕುಲನಾಥರ ಪ್ರೇರಣೆ ಇತ್ತೆಂಬುದನ್ನು ಎಂದು ನಾನು ಎಂದಿಗೂ ‌ಮರೆಯಲಾರೆ.ಡಾ.ಕೆ ಗೋಕುಲನಾಥರು ಅಂದು ಬೆಂಬಲ ನೀಡದಿದ್ದರೆ ನಾನು ಡಾಕ್ಟರೇಟ್/ ಪಿಎಚ್ ಡಿ ಪದವಿ‌ಪಡೆಯುವುದು ಬಹುಶಃ  ನನ್ನ ಪಾಲಿಗೆ ಗಗನ ಕುಸುಮವೇ ಆಗಿರುತ್ತಿತ್ತು  .
ಮೂರು ನಾಲ್ಕು ದಿನಗಳ ಹಿಂದೆ ವೆಂಕಟೇಶ ಎಂಬವರು ಪೋನ್ ಮಾಡಿ " ನಾನು ಪಿಎಚ್ ಡಿ ಮಾಡುತ್ತಿದ್ದೇನೆ..ನನಗೆ ನಿಮ್ಮ ಸಹಾಯ ಬೇಕಾಗಿತ್ತು.ನಾನು ಡಾ.ಉದಯ ಧರ್ಮಸ್ಥಳ ‌ಮೊದಲಾದ ಅನೇಕರನ್ನು ಸಂಪರ್ಕಿಸಿದೆ.ಅವರೆಲ್ಲ ನೀವು ಇದಕ್ಕೆ ಸೂಕ್ತ ವ್ಯಕ್ತಿ ಎಂದು ಹೇಳಿ ನಿಮ್ಮ ಮೊಬೈಲ್ ನಂಬರ್ ಕೊಟ್ಟರು..ನನಗೆ ಎಂಟು ಹತ್ತು ಪುಟಗಳಷ್ಟು ಕನ್ನಡ ಪದಗಳನ್ನು ತುಳುವಿಗೆ ಅನುವಾದಿಸಿ ಕೊಡುವಿರಾ ಎಂದು ಕೇಳಿದರು.ಮತ್ತು ಪಿಎಚ್ ಡಿ ಮಹಾ ಪ್ರಬಂಧ ಸಲ್ಲಿಸಲು ಎರಡು ದಿನ ಮಾತ್ರ ಇದೆ .ಬೇಗ ಬೇಕಿತ್ತು ಎಂದು ಹೇಳಿದರು.ಪಿಎಚ ಡಿ ವಿದ್ಯಾರ್ಥಿಗಳಿಗೆ ಎಂತಹ ಒತ್ತಡ ಇರುತ್ತದೆ ಎಂಬುದರ ಅರಿವು ನನಗಿತ್ತು..ಆದರೆ ನಾನು ಸ್ವಲ್ಪ ಆರೋಗ್ಯ ಸಮಸ್ಯೆಯಿಂದಾಗಿ ವಿಕ್ರಮ ಹಾಸ್ಪಿಟಲ್ ಗೆ ದಾಖಲಾಗಿದ್ದೆ .ಹಾಗಾಗಿ ಸ್ವಲ್ಪ ಹಿಂದೇಟು ಹಾಕಿದೆ.ನಂತರ ಅವರ ವಿನಂತಿ ಮೇರೆಗೆ ಆಸ್ಪತ್ರೆಯಲ್ಲಿ ಇದ್ದಕೊಂಡೇ ತುಳುವಿಗೆ ಅನುವಾದಿಸಿ ನೀಡಿದೆ..ಕೊನೆಯಲ್ಲಿ ನಿಮ್ಮ ಗೈಡ್  ಯಾರೆಂದು ಕೇಳಿದೆ.ಆಗ ಅವರು ಎಪಿಎಸ್ ಕಾಲೇಜು ನಿವೃತ್ತ ಪ್ರಾಂಶುಪಾಲರಾದ ಡಾ.ಕೆ ಗೋಕಲುನಾಥರು ಎಂದು ತಿಳಿಸಿದರು..ವೆಂಕಟೇಶ ನಿಜಕ್ಕೂ ಅದೃಷ್ಟವಂತರು..ಗೋಕುಲನಾಥರ ಬಳಿ‌ಪಿಎಚ್ ಡಿ ಮಾಡಲು ಪೂರ್ವಜನ್ಮದ ಪುಣ್ಯ ಬೇಕು ಅಷ್ಟು ಸಜ್ಜನಿಕೆಯ ಸಾಕಾರ ಮೂರ್ತಿ ಅವರು.
ಈ ವೃತ್ತಾಂತದಿಂದ ನೆನಪಾಗಿ ಡಾ
ಕೆ ಗೋಕುಲನಾಥರ ಬಗ್ಗೆ ದೊಡ್ಡವರ ದಾರಿ ಅಂಕಣದಲ್ಲಿ ಬರೆದೆ 

Thursday, 21 March 2019

ಬದುಕ ಬಂಡಿಯಲಿ : ನನ್ನ ಕೃತಿಯ ಅನುವಾದಿತ ಭಾಗವನ್ನು ಪಡೆಯಲು ನಾನು ಯಾರದ್ದೋ ಅನುಮತಿ ಪಡೆಯಬೇಕಂತೆ

ನನ್ನ ಕೃತಿಯ ಅನುವಾದಿತ ಭಾಗವನ್ನು ಪಡೆಯಲು ನಾನು ಯಾರದ್ದೋ ಅನುಮತಿ ಪಡೆಯಬೇಕಂತೆ

ಬದುಕಿನ ಬಂಡಿಯಲ್ಲಿ ಹೀಗೂ ಆಗುತ್ತದೆ..
ಇದಕ್ಕೆ ಏನನ್ನಬೇಕು ?

ವಸುಧೇಂದ್ರ ಚಂದ್ರ ಅವರ ಕೆಂಪು ಗಿಣಿ ಕಥೆಯನ್ನು ಇವರ ಅನುಮತಿ ಪಡೆಯದೆ ತಮಿಳಿಗೆ ಯಾರೊ ಅನುವಾದಿಸಿ ಇವರ ಹೆಸರನ್ನು ಹಾಕಿ ಮಾರಾಟ ಮಾಡುತ್ತಿದ್ದಾರಂತೆ..
ಇದನ್ನು ಓದುತ್ತಲೇ ನನಗೊಂದು ವಿಚಾರ ನೆನಪಿಗೆ ಬಂತು..
ಎರಡು ಮೂರು ವರ್ಷಗಳ ಮೊದಲು ನನ್ನ ಆತ್ಮೀಯರೊಬ್ಬರನ್ನು ಸಾಹಿತ್ಯ ಸಮ್ಮೇಳನದಲ್ಲಿ ಭೇಟಿಯಾದೆ‌..ಆಗ ಅವರು ನನ್ನ ಪ್ರಕಟಿತ ಪಿಎಚ್ ಡಿ ಪ್ರಬಂಧ ತುಳುನಾಡಿನ ನಾಗಬ್ರಹ್ಮ ಮತ್ತು ಕಂಬಳ- ಒಂದು ವಿಶ್ಕೇಷಣಾತ್ಮಕ ಅಧ್ಯಯನ ಕೃತಿಯನ್ನು ಅವರ ಪರಿಚಿತ ವಿದೇಶೀ ವಿದ್ವಾಂಸರು ತಗೊಂಡಿದ್ದು,ಅದರಲ್ಲಿನ ಎರಡು ಅಧ್ಯಾಯವನ್ನು ಇವರ ಮಗಳು ಅನುವಾದಿಸಿ ಆ ವಿದೇಶೀ ವಿದ್ವಾಂಸರಿಗೆ ನೀಡಿ ಸಹಾಯ ಮಾಡಿದ್ದನ್ನು ತಿಳಿಸಿದರು..ನನ್ನ ಅಧ್ಯಯನ  ವಿಚಾರ ವಿದೇಶೀ ವಿದ್ವಾಂಸರಿಗೆ ತಲುಪಿದ್ದು ತಿಳಿದು ಖುಷಿ ಆಯಿತು ನನಗೆ‌.ನನ್ನನ್ನು ಈ ಮೇಲ್ ಮೂಲಕ ಪೋನ್ ಮೂಲಕ ಅನೇಕ ವಿದೇಶೀ ವಿದ್ವಾಂಸರು ಆಗಾಗ ಸಂಪರ್ಕಿಸಿ ನನ್ನ ಬರಹಗಳನ್ನು ಕೃತಿಗಳನ್ನು ಇಂಗ್ಲಿಷ್ ‌ನಲ್ಲಿ ಪಬ್ಲಿಷ್ ಮಾಡಿ ..ನಮಗೆ ಸಹಾಯವಾಗುತ್ತದೆ ಎಂದು ಕೇಳುತ್ತಾ ಇರ್ತಾರೆ...ಆದರೆ ಇಂಗ್ಲಿಷ್ ಗೆ ಅನುವಾದಿಸುವಷ್ಡು ಇಂಗ್ಲಿಷ್ ಜ್ಞಾನ ನನ್ನಲ್ಲಿ ಇಲ್ಲ..ಮಗ ಒಂದಷ್ಟು ಲೇಖನಗಳನ್ನು ಅನುವಾದಿಸಿದ್ದನಾದರೂ ಅವನಿನ್ನೂ ವಿದ್ಯಾರ್ಥಿ, ಅವನ ಓದಿನ ನಡುವೆ ಅನುವಾದ ಕಷ್ಟ ಆಗುತ್ತದೆ..
ನನ್ನ ಆತ್ಮೀಯರ ಮಗಳು ನನ್ನ ಪಿಎಚ್ ಡಿ ಪ್ರಬಂಧದ ಎರಡು ಅಧ್ಯಾಯಗಳನ್ನು  ಇಂಗ್ಲಿಷ್ ಗೆ ಅವರ ವಿದೇಶೀ ಸ್ನೆಹಿತರಿಗೆ ಅನುವಾದಿಸಿ ಕೊಟ್ಟಿದ್ದು ತಿಳಿದು ಇತರರಿಗೂ ನನ್ನ ಅಧ್ಯಯನ ದ ವಿಚಾರ ತಿಳಿಯಲೆಂದಯ ಬ್ಲಾಗ್ ‌ನಲ್ಲಿ ಅನುವಾದಕರ ಹೆಸರಿನೊಂದಿಗೆ( ಅವರ ಮಗಳ) ಹಾಕುತ್ತೇನೆ,ನಮಗೆ ಅನುವಾದಿಸಿದ ನನ್ನ ಪಿಎಚ್ ಡಿ ಭಾಗವನ್ನು ಕೊಡಿ ಎಂದು ಕೇಳಿದೆ..ತಕ್ಷಣ ಅವರ ಅನುವಾದಕಿ ಮಗಳು ನೋ ನೋ ಅದನ್ನು ಕೊಡಬೇಕಾದರೆ ಆ ವಿದೇಶೀ ವಿದ್ವಾಂಸರ ಬಳಿ ಅನುಮತಿ ಕೇಳಬೇಕು ಅವರು ಒಪ್ಪಬೇಕು ಎಂದು ಹೇಳಿದರು..ನನಗೆ ಅಳಬೇಕೋ ನಗಬೇಕೋ ತಿಳಿಯಲಿಲ್ಲ.. ವಾಸ್ತವದಲ್ಲಿ ನನ್ನ ಕೃತಿಯ ಭಾಗ ಅನುವಾದಿಸಿ ಇತರರಿಗೆ ಕೊಡಲು ನನ್ನ ಅನುಮತಿಯನ್ನು ಅವರು ಕೇಳಬೇಕಾಗಿತ್ತು..ಏನು ಮಾಡುದು.
ಈಗಿನ ಯುವ ಜನಾಂಗಕ್ಕೆ ಬೌದ್ಧಿಕ ಸೊತ್ತಿನ  ಹಕ್ಕುಗಳ ಅರಿವಿರುವುದಿಲ್ಲ ಎಂದು ಸುಮ್ಮನಾದೆ ಯಾಕೆಂದರೆ ಅವರ ತಾಯಿ  ಒಳ್ಳೆಯ ಲೇಖಕರೂ ,ಪ್ರೊಫೆಸರರೂ ಅಗಿದ್ದು ನನ್ನ ಹಿತೈಷಿಗಳು  ಕೂಡಾ ಆಗಿದ್ದಾರೆ..ಬಹುಶಃ ಮಗಳು ಹೇಳಿದ್ದನ್ನು ಅವರು ಕೇಳಿಸಿಕೊಂಡಿಲ್ಲವೋ ಅಥವಾ ನಂತರ ಬುದ್ದಿ ಹೇಳಿದರೋ ಗೊತ್ತಿಲ್ಲ..ಅದೇನೇ ಇದ್ದರೂ ಅವರು ಅನುವಾದಿಸಿದ ಭಾಗ ನನ್ನ ‌ಮನವಿಗಾದರೂ ಅವರು ಕೊಟ್ಟಿಲ್ಲ..ಕೊಟ್ಟಿದ್ದರೆ ನನಗೆ ಮತ್ತು ನಮ್ಮ ಸಂಸ್ಕೃತಿಯ ಕುರಿತು ಅಧ್ಯಯನಾಸಕ್ತರಾದ ಕನ್ನಡೇತರರಿಗೆ ಸಹಾಯವಾಗುತ್ತಿತ್ತು ಖಂಡಿತಾ
ಇನ್ನೂ ನಮಗೆ ತಿಳಿಯದಂತೆ ನಮ್ಮ ಬರಹಗಳನ್ನು ನಕಲಿಸುವವರು,ಅಲ್ಪ ಸ್ವಲ್ಪ ಬದಲಾವಣೆ ಮಾಡಿ ತಮ್ಮ ಬರಹ ಎಂಬಂತೆ ಪ್ರಕಟಿಸಿ ಹಾಕಿಕೊಳ್ಳುವವರು,ಅನುವಾದಿಸುವವರೂ ಇದ್ದಾರೆ..ಏನು ಮಾಡೋಕಾಗುತ್ತದೆ ಹೇಳಿ

Friday, 21 December 2018

ದೊಡ್ಡವರದಾರಿ : ಅನಾಥ ಮಕ್ಕಳ ಪೊರೆವ ತಾಯಿ ಪದ್ಮಾ ಕೆ ಭಟ್ © ಡಾ.ಲಕ್ಷ್ಮೀ ಜಿ ಪ್ರಸಾದ


ನಮ್ಮ ನಮ್ಮ ಕನಸುಗಳ ಈಡೇರಿಕೆಗಾಗಿ ಸಾಧನೆ ಮಾಡುವವರು ನೂರಾರು ಮಂದಿ ಇದ್ದಾರೆ ಆದರೆ ತಮ್ಮ ಸರ್ವಸ್ವವನ್ನೂ ಸಮಾಜ ಸೇವೆಗೆ ಮುಡಿಪಾಗಿಡುವವರ ಸಂಖ್ಯೆ ತೀರಾ ಕಡಿಮೆ..ಹೀಗೆ ಸಮಾಜ ಸೇವೆಗಾಗಿ ಅನಾಥ ಬಡ ಮಕ್ಕಳಿಗಾಗಿ ಸ್ವಂತ ಮನೆ ಸೈಟುಗಳನ್ನು  ಮಾರಾಟ ಮಾಡಿ ತಮ್ಮನ್ನು ಸಮಾಜ ಸೇವೆಗೆ ತಮ್ಮ ಬದುಕನ್ನು ಸಮರ್ಪಿಸಿಕೊಂಡು ಹಲವರಿಗೆ ದಾರಿ ದೀಪ ವಾದವರು ಪದ್ಮಾ ಕೆ ಭಟ್  ವಿಶ್ವ ಹವ್ಯಕ ಸಮ್ಮೇಳನದಲ್ಲಿ ಕೊಡುವ ಹವ್ಯಕ ಸಾಧಕ ರತ್ನ ಪ್ರಶಸ್ತಿಗೆ  ನನ್ನ್ನುಯ ನಾಮಿನೇಟ್ ಮಾಡಿದವರು ಕೂಡ ಇವರು.ನನ್ನ ಸಾಧನೆಯ ಬಗ್ಗೆ ಮನವರಿಕೆ ಮಾಡಿಸಿದವರು ಕೂಡ ಇವರು.ವಿವಾಹಾನಂತರ ಸಮಾಜದ ಕಟ್ಟುಪಾಡುಗಳನ್ನು ಮೀರಿ ಓದಿ ಸಾಧನೆಯ ದಾರಿ ಹಿಡಿದ ನನಗೆ ಅನೇಕ ಶತ್ರು ಗಳು ಕೂಡ ಇದ್ದಾರೆ. ನನಗೆ ಬಂದಂತಹ ಒಂದು ಮಾಹಿತಿ ಪ್ರಕಾರ ಇಂತಹವರಲ್ಲಿ ಯಾರೋ ಕೆಲವರು ನನ್ನ ಪತಿ ಗೋವಿಂದ ಪ್ರಸಾದ ಹವ್ಯಕರೆಂದು ಗೊತ್ತಿದ್ದರೂ ಕೂಡ ಅವರಯ ಹವ್ಯಕರಲ್ಲವೆಂದು ಹೇಳಿ,ಪ್ರಶಸ್ತಿ ಬಾರದಂತೆ ಮಾಡಲು ಯತ್ನ ಮಾಡಿದರಂತೆ..ಆಗ ನನ್ನ ಪತಿ ಗೋವಿಂದ ಪ್ರಸಾದರು ಹವ್ಯಕರೆಂದು ತಿಳಿಸಿ ನನ್ನ ಪರ ನಿಂತವರು ಪದ್ಮಾ ಭಟ್ .
ಇವರು ನಿಜಕ್ಕೂ ನನಗಿಂತ ಹವ್ಯಕ ಸಾಧಕ ರತ್ನ ಪ್ರಶಸ್ತಿಗೆ ಹೆಚ್ಚು ಅರ್ಹರು ಎಂದು ನನ್ನ ಅಭಿಪ್ರಾಯ ಹಾಗಾಗಿ ನಾನು ಅವರ ಬಗ್ಗೆ ಮಾಹಿತಿ ಸಂಗ್ರಹಿಸಿ ಪ್ರಶಸ್ತಿಗೆ ನಾಮಿನೇಟ್ ಮಾಡಿದ್ದೆ,ಅವರು ಸಮಾಜ ಸೇವೆ ವಿಭಾಗದಲ್ಲಿ ಹವ್ಯಕ ಸಾಧಕ ರತ್ನ ಪ್ರಶಸ್ತಿ ಗೆ ಆಯ್ಕೆ ಆಗಿರುವರೋ ಇಲ್ಲವೋ ನನಗೆ ತಿಳಿಯದು . ಸಾಧನೆಯ ಹಾದಿ ಹೂ ಹಾಸಿನದು ಅಲ್ಲ.ಅಲ್ಲಿ ಕಲ್ಲು ಮುಳ್ಳುಗಳೇ ಹೆಚ್ಚಿರುತ್ತವೆ.ನನ್ನಂತೆ ಅವರು ಕೂಡ ಆರೋಪಗಳಿಗೆ ಒಳಗಾಗಿರಬಹುದು .ಆದರೆ ಅಂತಿಮವಾಗಿ ಸತ್ಯಕ್ಕೆ ಜಯ ನಿಶ್ಚಿತ  ಹಾಗಾಗಿ  ಅವರು ನಿಜಕ್ಕೂ ಹವ್ಯಕ ರತ್ನ
ಹಾಗಾಗಿ ಅವರ ಬಗ್ಗೆ ದೊಡ್ಡವರ ದಾರಿ ಅಂಕಣದಲ್ಲಿ ಒಂದು ಬರಹ ಬರೆದಿದ್ದೆ.ಅವರ ಸಂಕ್ಷಿಪ್ತ ಪರಿಚಯವನ್ನು ಇನ್ನೊಮ್ಮೆ ನೀಡಲು ನಾನು ಹೆಮ್ಮೆ ಪಡುತ್ತೇನೆ.

ಶ್ರೀ ಸತ್ಯಸಾಯಿ ಮಹಿಳಾ ಚಾರಿಟಬಲ್ ಟ್ರಸ್ಟ್ (ರಿ) ನ ಸಂಸ್ಥಾಪಕಿ ಪದ್ಮಾ ಕೆ ಭಟ್‍ರವರ ಕಿರುಪರಿಚಯ:

ಪದ್ಮಾ ಕೆ.ಭಟ್ ರವರು ಕಳೆದ ಸುಮಾರು ಹದಿನೆಂಟು ವರ್ಷಗಳಿಂದಲೂ ನಿರಂತರವಾಗಿ ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು, ಶ್ರೀ ಸತ್ಯ ಸಾಯಿ ಮಹಿಳಾ ಚಾರಿಟಬಲ್ ಟ್ರಸ್ಟ್(ರಿ) ಇದರ ಸಂಸ್ಥಾಪಕರು ಮತ್ತು ಅಧ್ಯಕ್ಷರಾಗಿ, ಅನಾಥ ಮತ್ತು ಬಡ ಮಕ್ಕಳ ಆಶ್ರಮ,  ವೃದ್ಧಾಶ್ರಮ, ಮಹಿಳಾ ಸೇವಾಶ್ರಮ, ನಿತ್ಯ ಅನ್ನದಾನ ಇತ್ತಯಾದಿ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು   "ಆಸರೆ " ಅನ್ನುವ  ಹೆಸರಿನಡಿ  ನಡೆಸುತ್ತಿದ್ದಾರೆ..ಇಲ್ಲಿ 1ರಿಂದ 10ನೇ ತರಗತಿಯತನಕ ಬಡ ಮಕ್ಕಳಿಗೆ ಉಚಿತ ಊಟ, ವಸತಿ, ವಿದ್ಯಾಭ್ಯಾಸ, ವೈದ್ಯಕೀಯ ಸೌಲಭ್ಯ ಮತ್ತು ಇನ್ನಿತರ ಮೂಲಭೂತ ಸೌಕರ್ಯಗಳ ನ್ನು ನೀಡಿದ್ದಾರೆ.. “ಶ್ರೀ ಸತ್ಯ ಭಾರತಿ ಆಶ್ರಮ ವಿದ್ಯಾಲಯ”ವನ್ನು ಮೈಸೂರು ರಸ್ತೆಯ ಚಳ್ಳಘಟ್ಟ ಎಂಬಲ್ಲಿ ಪ್ರಾರಂಭಿಸಿ,, 1ರಿಂದ 5ನೇ ತರಗತಿಯತನಕದ ಪುಟ್ಟ ಮಕ್ಕಳಿಗೆ ಆಶ್ರಮದ ಆವರಣದಲ್ಲೇ ವಿದ್ಯಾಭ್ಯಾಸದ ವ್ಯವಸ್ಥೆಯನ್ನೂ ಮಾಡಿದ್ದಾರೆ..

ಸತ್ಯ,ನ್ಯಾಯ, ಧರ್ಮಕ್ಕಾಗಿ ಹೋರಾಟ...ಮಹಿಳೆಯರ, ಬಡವರ ಮತ್ತು ನೊಂದವರ ಮುಖವಾಣಿಯಾಗಿ..ರಾಜಧಾನಿ ಎಕ್ಸ್‍ಪ್ರಸ್, ಕನ್ನಡ ಮಾಸ ಪತ್ರಿಕೆಯ ಸಂಪಾದಕರಾಗಿ, ಪ್ರಕಾಶಕರಾಗಿ ಮಾಧ್ಯಮ ಬಲಯದಲ್ಲಿಯೂ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ...
ಶ್ರೀ ನಾಗಬ್ರಹ್ಮ ದೇವಸ್ಥಾನ, ನಾಗದೇವನಹಳ್ಳಿ, ಬೆಂಗಳೂರು ಇದರ ಸಂಸ್ಥಾಪಕ ಧರ್ಮದರ್ಶಿಗಳಾಗಿ, ಮಹಿಳಾ ಉದ್ಯಮಿಯಾಗಿ ...ಹೀಗೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ.

ಪದ್ಮಾ ಕೆ.ಭಟ್ ರವರು ಶ್ರೀ ಸತ್ಯಸಾಯಿ ಮಹಿಳಾ ಚಾರಿಟಬಲ್ ಟ್ರಸ್ಟ್ (ರಿ) ಸಂಸ್ಥೆ ಮತ್ತು ಶ್ರೀ ಸತ್ಯ ಭಾರತಿ ಆಶ್ರಮ ವಿದ್ಯಾಲಯದ ಮೂಲಕ ಬಡ ಮತ್ತು ನಿರ್ಗತಿಕ ಮಕ್ಕಳಿಗೆ ಉಚಿತ ಊಟ, ವಸತಿ, ಆರೋಗ್ಯ ತಪಾಸಣೆಯ ಜೊತೆಗೆ, ನುರಿತ ಶಿಕ್ಷಕರಿಂದ ಪಾಠ, ನೃತ್ಯ, ಸಂಗೀತ, ಸಾಂಸ್ಕøತಿಕ ಕ್ರೀಡೆಗಳು ಹೀಗೆ ಹಲವು ಆಯಾಮಗಳ ಮೂಲಕ ಮಕ್ಕಳ ಸರ್ವತೋಮುಖ ಅಭಿವೃಧ್ಧಿಗೆ ಶ್ರಮಿಸುತ್ತಿದ್ದಾರೆ. ಇಷ್ಟೇ ಅಲ್ಲದೇ ಸಮಾಜದಲ್ಲಿ ಬಡ ಮಹಿಳೆಯರಿಗಾಗಿ ಸ್ವ-ಉದ್ಯೋಗ ತರಬೇತಿ ಶಿಬಿರಗಳು, ಮಹಿಳಾ ಅಬಲಾಶ್ರಮ, ಉಚಿತ ವೈದ್ಯಕೀಯ ತಪಾಸಣಾ ಶಿಬಿರಗಳನ್ನು ನಡೆಸುತ್ತಿದ್ದಾರೆ.
ಪದ್ಮಾ ಕೆ.ಭಟ್ ರವರು ನಾಗದೇವನಹಳ್ಳಿಯಲ್ಲಿ ಶ್ರೀ ನಾಗಬ್ರಹ್ಮ ದೇವಸ್ಥಾನವನ್ನು ಕಟ್ಟಿಸಿ, ನಿತ್ಯ ಪೂಜೆಯ ಜೊತೆಗೆ, ಪ್ರತೀ ತಿಂಗಳು ಕುಕ್ಕೆ ಸುಬ್ರಹ್ಮಣ್ಯದ ಮಾದರಿಯಲ್ಲಿ ಆಶ್ಲೇಷ ಬಲಿ ಪೂಜೆ,ಹೋಮ..ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಬರುವ ಭಕ್ತಾದಿಗಳಿಗೆ ಮಧ್ಯಾಹ್ನದ ಅನ್ನದಾನವನ್ನು ನಡೆಸುತ್ತಿದಾರೆ.                                                                   
ಮೂಲತಃ ದಕ್ಷಿಣ ಕನ್ನಡ  ಜಿಲ್ಲೆಯ ಪುತ್ತೂರು ತಾಲೂಕಿನ “ಕಾವು” ಎಂಬ ಹಳ್ಳಿಯವರಾದ  ಖ್ಯಾತ ಯಕ್ಷಗಾನ ಬಣ್ಣದ ವೇಷಧಾರಿ ದಿ|| ಕಾವು ಕೃಷ್ಣಾಭಟ್ ಮತ್ತು ದೇವಕಿ ದಂಪತಿಯ ಮೊದಲ ಮಗಳಾದ ಪದ್ಮಾ ಕೆ ಭಟ್, ಪುತ್ತೂರು ತಾಲೂಕಿನ ಪೆರ್ನಾಜೆಯ ಶ್ರೀ ಸೀತಾರಾಘವ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾಭ್ಯಾಸವನ್ನು  ಮುಗಿಸಿ, 2 ವರ್ಷಗಳ ಪಿ.ಯು.ಸಿ. ವಿದ್ಯಾಭ್ಯಾಸವನ್ನು ಶ್ರೀ ಕ್ಷೇತ್ರ ಕುಕ್ಕೇ ಸುಬ್ರಹ್ಮಣ್ಯ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಪೂರೈಸಿದರು. ನಂತರ ಮಂಗಳೂರಿನ ಸರಕಾರಿ ಮಹಿಳಾ ಪಾಲಿಟೆಕ್ನಿಕ್‍ನಲ್ಲಿ ಡಿಪ್ಲೊಮೊ ಇನ್ ಟೆಲಿಕಮ್ಯುನಿಕೇಷನ್ ಇಂಜನಿಯರಿಂಗ್ ಮುಗಿಸಿ, 1987 ರಲ್ಲಿ ಬೆಂಗಳೂರಿಗೆ ಬಂದವರು. ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಮೆ|| ಬಿಹೆಚ್‍ಇಎಲ್‍ನಲ್ಲಿ ಡಿಪ್ಲೊಮೊ ಅಪ್ರೆಂಟೀಸ್ ಟ್ರೈನಿಯಾಗಿ, ನಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದವರ “ಸ್ತ್ರೀ ಶಕ್ತಿ ಪ್ಯಾಕೇಜ್” ಎಂಬ ಮಹಿಳಾ ಉದ್ಯಮಶೀಲತಾ ತರಬೇತಿ ಮುಗಿಸಿ 1991ರಲ್ಲಿ ಮೈಸೂರು ರಸ್ತೆಯ ನಾಯಂಡಹಳ್ಳಿಯಲ್ಲಿ “ನಿಯೋ ಶಾರ್ಪ್ ಇಂಜಿನಿಯರಿಂಗ್ ಟೆಕ್ನಾಲಜೀಸ್” ಎಂಬ ಸಣ್ಣ ಕೈಗಾರಿಕೋದ್ದಿಮೆಯನ್ನು ಪ್ರಾರಂಭಿಸಿದರು. ಇಂದು 30ಜನ  ಕಾರ್ಮಿಕರಿಗೆ ಜೀವನೋಪಾಯ ಕಲ್ಪಿಸಿ ಯಶಸ್ವೀ ಮಹಿಳಾ ಉದ್ಯಮಿಯೆನಿಸಿಕೊಂಡಿದ್ದಾರೆ.
ಒಬ್ಬ ಮಹಿಳೆಯಾಗಿ, ಮಹಿಳಾ ಉದ್ಯಮಿಯಾಗಿ  ಸಮಾಜ ಸೇವೆಯನ್ನೇ ತಮ್ಮ ಉಸಿರನ್ನಾಗಿಸಿಕೊಂಡು, ಯಾರ ನೆರವೂ ಇಲ್ಲದೇ ಮತ್ತು ಸರ್ಕಾರದಿಂದ ಯಾವ ಸಹಾಯವನ್ನೂ ಪಡೆಯದೇ ಅನೇಕ ಬಡ ಮಕ್ಕಳ, ನಿರ್ಗತಿಕ ಮಹಿಳೆಯರ ಮತ್ತು ನೊಂದವರ ಏಳಿಗೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಾ, ನಿಸ್ವಾರ್ಥವಾಗಿ  ಶ್ರಮಿಸುತ್ತಿದ್ದಾರೆ.
ಇವರ ಸಮಾಜಸೇವೆ ಮತ್ತು ಧಾರ್ಮಿಕ ಸೇವೆಯನ್ನು ಗುರುತಿಸಿ ಇವರಿಗೆ 2005 ರಲ್ಲಿ ಅತ್ಯುತ್ತಮ ಸಮಾಜ ಸೇವೆಗಾಗಿ ರೋಟರಿ ಕ್ಲಬ್, ಮೈಸೂರು ಉತ್ತರ ಇವರಿಂದ ಸನ್ಮಾನ, ಮಾರುತಿ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘ ಕೆಂಗೇರಿ ಉಪನಗರ ಇವರಿಂದ 2009ರಲ್ಲಿ ಶ್ರೇಷ್ಠ ಸಮಾಜ ಸೇವಕಿ ಪ್ರಶಸ್ತಿ,2011ರಲ್ಲಿ ಅಭಿಮಾನಿಗಳ ಸಂಗಮ(ರಿ) ಇವರಿಂದ ಶಿರ್ಡಿ ಶ್ರೀ ಸಾಯಿಬಾಬ ನ್ಯಾಷನಲ್ ಅವಾರ್ಡ್, ಜನ್ಮಭೂಮಿ ಸಾಂಸ್ಕøತಿಕ ಮತ್ತು ನಾಗರಿಕರ ವೇದಿಕೆ(ರಿ) ಇವರಿಂದ ಆದರ್ಶ ರತ್ನ ಪ್ರಶಸ್ತಿ, ಸ್ಪಂದನಾ ಸೇವಾ ಸಂಸ್ಥೆ(ರಿ) ಇವರಿಂದ ಸಾಮಾಜಿಕ ಸೇವಾ ಸ್ಪಂದನ ಪ್ರಶಸ್ತಿ, 2012ರಲ್ಲಿ ಕರ್ನಾಟಕ ಪೊಲೀಸ್ ಪತ್ರಿಕೆಯ ವತಿಯಿಂದ ಅತ್ಯುತ್ತಮ ನಾಗರಿಕ ಪ್ರಶಸ್ತಿ, ಕರ್ನಾಟಕ ರಾಜ್ಯ ಕಲಾವಿದರ ಕಲ್ಯಾಣ ವೇದಿಕೆ(ರಿ) ಇವರಿಂದ 2012 ನೇ ಸಾಲಿನ ಕಡಲ ತೀರದ ಭಾರ್ಗವ ಡಾ|| ಕೆ.ಶಿವರಾಮ ಕಾರಂತರ ಸದ್ಭಾವನಾ ರಾಜ್ಯ ಪ್ರಶಸ್ತಿ, 2013 ರಲ್ಲಿ ಸುರಕ್ಷಾ ಸೇವಾಶ್ರಮ(ರಿ) ಇವರಿಂದ ಸುರಕ್ಷಾ ರಾಜ್ಯ ಪ್ರಶಸ್ತಿ, ಶಾರದಾ ಕಲಾನಿಕೇತನ(ರಿ) ಇವರಿಂದ ಸಮಾಜಸೇವಾ ಶ್ರೇಷ್ಠ ರತ್ನ ಪ್ರಶಸ್ತಿ ಇತ್ಯಾದಿ ಹಲವಾರು ಸಂಘ-ಸಂಸ್ಥೆಗಳು ಅಭಿನಂದನಾ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಇವರ ಸಂದರ್ಶನ ಕಾರ್ಯಕ್ರಮಗಳು ಚಂದನ(ಡಿ.ಡಿ.9), ಈ-ಟಿವಿ,(ಇಂದಿನ ಕಲರ್ಸ್) ಸುವರ್ಣವಾಹಿನಿ ಇತ್ಯಾದಿ ಹಲವಾರು ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾಗಿವೆ.
ಈ ರೀತಿ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಪದ್ಮಾ ಕೆ ಭಟ್ ರವರು ತಮ್ಮ ಬದುಕನ್ನು “ಇತರರಿಗಾಗಿ ಮೀಸಲಿಟ್ಟಿದ್ದಾರೆ” ಎಂದರೆ ಅತಿಶಯೋಕ್ತಿಯಲ್ಲ. “ಮಾನವತೆಯ ಸೇವೆಯೇ ಜೀವನದ ಅತ್ಯುತ್ತಮ ಸೇವೆ” ಎಂಬ ಜೇಸಿ ಸಂಸ್ಥೆಯ 10ನೇ ಧ್ಯೇಯ ವಾಣಿಯಂತೆ ನಂಬಿ ನಡೆಯುತ್ತಿರುವ ಎಲೆ ಮರೆಯ ಕಾಯಿ ಇವರು. ಇವರ ಈ ಎಲ್ಲಾ ಸೇವೆಯನ್ನು ಸರ್ಕಾರ,ದಾನಿಗಳು ಗುರುತಿಸಿ ಇವರ ಸಮಾಜಮುಖಿ ಕಾರ್ಯಕ್ರಮಗಳಿಗೆ ನೆರವಿನ ಹಸ್ತದೊಂದಿಗೆ ಬೆಂಬಲಿಸಿದರೆ ಇವರಿಂದ ಇನ್ನೂ ಹೆಚ್ಚಿನ ಸಾರ್ವಜನಿಕ ಸೇವೆಯನ್ನು ನಿರೀಕ್ಷಿಸಬಹುದು.
 ,ಎಲ್ಲರೂ ಈ ಸಂಸ್ಥೆಗೆ ಉದಾರವಾಗಿ ಸಹಾಯ ಮಾಡಿ ಹೇಳಿ ಪದ್ಮಕ್ಕನ ಪರವಾಗಿ ನಾನು ಕೇಳಿಗೊಳ್ಳುತ್ತೇನೆ
ಈ ಸಂಸ್ಥೆ ಗೆ ಕೊಟ್ಟ ದುಡ್ಡಿ ಗೆ ಟ್ಯಾಕ್ಸ್ ವಿನಾಯತಿ ಇದ್ದು ಇವರ ಅಕೌಂಟ್ ನಂಬರ್ ಪೋನ್ ನಂಬರ್ ಗಳನ್ನು ಇಲ್ಲಿ ಕೊಡುತ್ತೇನೆ Please send your contributions to
Sri Satya Sai Mahila charitable trust (R)

SB a/c no 559010100076216
Ifs code : UTIB0000559
Axis Bank,
Rajajinagar Branch, Bangalore-10

Regards
Padmaa Bhat
Mob: 8884572149/9844540380

Sunday, 9 December 2018

ದೊಡ್ಡವರ ದಾರಿ 64 ಮನಸ್ಸಿದ್ದರೆ ಮಾರ್ಗವಿದೆ ಎಂಬುದನ್ನು ಸಾಧಿಸಿ ತೋರಿಸಿದ ಪೋಲಿಸ್ ಇನ್ಸ್‌ಪೆಕ್ಟರ್ ಕೆಪಿ ಸತ್ಯನಾರಾಯಣ

ದೊಡ್ಡವರ ದಾರಿ 64 ಮನಸ್ಸಿದ್ದರೆ ಮಾರ್ಗವಿದೆ ಎಂಬುದನ್ನು ಸಾಧಿಸಿ ತೋರಿಸಿದ ಪೋಲಿಸ್ ಇನ್ಸ್‌ಪೆಕ್ಟರ್  ಕೆಪಿ ಸತ್ಯನಾರಾಯಣ


ನಮ್ಮ ಬ್ಯಾಡರ ಹಳ್ಳಿ ಪೋಲಿಸ್ ಸ್ಟೇಷನ್ ವ್ಯಾಪ್ತಿಯ ಮಾಗಡಿ ರಸ್ತೆ, ಉಳ್ಳಾಲು ಉಪನಗರ ಮೊದಲಾದ ಪ್ರದೇಶಗಳು ಕಳ್ಳತನ ರೌಡಿಸಂ,ದರೋಡೆಯ ಕಾರಣಗಳಿಗೆ ಕುಖ್ಯಾತಿಯನ್ನು ಪಡೆದಿದ್ದು ಈ ಪರಿಸರದಲ್ಲಿ ರಾತ್ರಿ ವೇಳೆಯಲ್ಲಿ ‌ಮಾತ್ರವಲ್ಲ ಹಗಲು ಕೂಡ ಓಡಾಡಲು ಜನ ಹಿಂಜರಿಯುತ್ತಾ ಇದ್ದರು.ಇಲ್ಲಿಗೆ ಪೋಲಿಸ್ ಇನ್ಸ್‌ಪೆಕ್ಟರ್ ಆಗಿ ಬಂದ ಕೆಪಿ ಸತ್ಯನಾರಾಯಣ ಅವರ ದಕ್ಷತೆ ಹಾಗೂ ಅವರ ನೇತೃತ್ವದಲ್ಲಿ ಅಳವಡಿಸಿಕೊಂಡ ಆಧುನಿಕ ತಂತ್ರಜ್ಞಾನದ ಸಲಕರಣೆಗಳ ಪರಿಣಾಮವಾಗಿ  ಇಲ್ಲಿ  ಅಪರಾಧಗಳ ಸಂಕ್ಯೆ ಗಣನೀಯವಾಗಿ ಕಡಿಮೆ ಆಗಿದೆ.(ಶೇಕಡಾ 70 ರಷ್ಟು) . ಬ್ಯಾಡರ ಹಳ್ಳಿ ಫೋಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಎಲ್ಲಾ ಚೌಕಗಳಲ್ಲಿ,ಆಯ ಕಟ್ಟಿನ ಪ್ರದೇಶಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಪೋಲಿಸ್ ಸ್ಟೇಷನ್ ನಿಯಂತ್ರಣ ಕೊಠಡಿಯಲ್ಲಿ  ನೋಡುವ ಮತ್ತು ನಿಯಂತ್ರಿಸುವ ವ್ಯವಸ್ಥೆ ಯನ್ನು ಇವರು ಅಳವಡಿಸಿದ್ದರು.ಕಸ ತುಂಬಿ ನಾರುತ್ತಿದ್ದ ಪೋಲಿಸ್ ಸ್ಟೇಷನ್ ನ ಪರಿಸರವನ್ನು ಸ್ವಚ್ಛ ಗೊಳಿಸಿ ಹುಲ್ಲಿನ ಹಾಸು ಗಿಡ‌ಮರ ಬೆಳೆಸಿ ಪಾರ್ಕ್ ನಂತೆ ಮಾಡಿದ್ದರು.ಮನಸಿದ್ದರೆ ಮಾರ್ಗವಿದೆ ಎಂಬುದನ್ನು ನಿರೂಪಿಸಿ ತೋರಿಸಿದ್ದಾರೆ‌.
ಇಲ್ಲಿ ಅಳವಡಿಸಿದ ತಂತ್ರಜ್ಞಾನವನ್ನು ಎಲ್ಲೆಡೆ ಅನುಸರಿಸಿದರೆ ಎಲ್ಲಾ ಕಡೆಯಲ್ಲಿ ಕೂಡ ಅಪರಾಧಗಳ ಸಂಖ್ಯೆ ಖಂಡಿತಾ ಇಳಿಮುಖವಾದೀತು .(ಈ ಬಗ್ಗೆ ನಾನು ಒಂದು ಲೇಖನ ಬರೆದು ಪ್ರಕಟಿಸಲು ಯತ್ನ ಮಾಡಿದೆನಾದರೂ ಯಾಕೋ ಏನೋ ಪತ್ರಿಕೆಗಳು ಪ್ರಕಟಿಸುವ ಮನಸ್ಸು ಮಾಡಲಿಲ್ಲ.
ಸಾಮಾನ್ಯವಾಗಿ ಶೈಕ್ಷಣಿಕ ,ವೈಚಾರಿಕ ಅಥವಾ ತುಳು ಜಾನಪದ ಸಂಸ್ಕೃತಿಗಳ ಬಗ್ಗೆ ಮಾತ್ರ ಬರೆದು ಅಭ್ಯಾಸವಿರುವ ನಾನು ಇಲ್ಲಿ   ಅಳವಡಿಸಿದ ಆಧುನಿಕ ತಂತ್ರಜ್ಞಾನದ ಬಗ್ಗೆ ಮತ್ತು ಅದರ ಪರಿಣಾಮವಾಗಿ ಅಪರಾಧಗಳ ಕುಸಿತಗಳ ಬಗ್ಗೆ ಬರೆದದ್ದು ಅರ್ಥವಾಗುವ ಹಾಗೆ ಇರಲಿಲ್ಲವೋ, ಲೇಖನ ಆಶಯ ಸ್ಪಷ್ಟವಾಗಲಿಲ್ಲವೋ ,ಪತ್ರಿಕೆಗಳಿಗೆ ಬರೆಯುವುದು ಬಿಟ್ಟು ಎರಡು ಮೂರು ವರ್ಷಗಳಾಗಿದ್ದು ನಾನು ಅಪರಿಚಿತಳಾದೆನೋ ಅಥವಾ ಇದು ಸ್ಥಳೀಯ ಸುದ್ದಿ  ಮಾತ್ರ ಎನಿಸಿತೋ ಏನೋ ಗೊತ್ತಿಲ್ಲ.ಅಂತೂ‌ ಇಂತೂ ಪ್ರಕಟವಾಗಲಿಲ್ಲ.   ಒಳ್ಳೆಯ ವಿಚಾರವನ್ನು  ಜನರಿಗೆ ತಲುಪಿಸಲು ಸಾಧ್ಯವಾಗಲಿಲ್ಲ ಎಂಬ ಬಗ್ಗೆ ನನಗೆ  ಬೇಸರವಿದೆ)
ಇರಲಿ ..
ಪ್ರಸ್ತುತ ನಮ್ಮ ಸುತ್ತಲಿನ ಪ್ರದೇಶಗಳನ್ನು ಸುರಕ್ಷಿತವಾಗಿ ಮಾಡಿದ್ದ ಕೆಪಿ ಸತ್ಯನಾರಾಯಣ ಅವರಿಗೆ ವರ್ಗಾವಣೆ ಆಗಿದೆಯಂತೆ.ಸರ್ಕಾರಿ ಉದ್ಯೋಗಿಗಳಿಗೆ ಕೆಲಸ ಮಾಡುವ ಸ್ಥಳ  ಶಾಶ್ವತವಲ್ಲ,ವರ್ಗಾವಣೆ ಇದ್ದದ್ದೇ ..ಆದರೂ ಇನ್ನೊಂದು ಎರಡು ವರ್ಷವಾದರೂ ಅವರು ಇಲ್ಲೇ ಇರಬೇಕಿತ್ತು.ಇದ್ದಿದ್ದರೆ ನಮ್ಮ ಪರಿಸರ ಸಂಪೂರ್ಣವಾಗಿ ಸುರಕ್ಷಿತವಾಗುತ್ತಿತ್ತು.ಅವರು ವರ್ಗಾವಣೆಗೊಂಡರೂ ಅವರು ಇಲ್ಲಿ ಮಾಡಿದ ಮಹತ್ಕಾರ್ಯ ವ್ಯರ್ಥವಾಗಲಾರದು.ಅದಕ್ಕಾಗಿ  ಅವರಿಗೆ ನಾವೆಲ್ಲರೂ ಆಭಾರಿಯಾಗಿದ್ದೇವೆ .ಅವರಿಂದ ಆರಂಭವಾಗಿರುವ ವ್ಯವಸ್ಥೆ ಮುಂದುವರಿದೀತು.ಜೊತೆಯಲ್ಲಿ ಅವರು ವರ್ಗಾವಣೆಗೊಂಡು ಹೋಗುವ ಪರಿಸರದಲ್ಲಿ ಕೂಡ ಅಪರಾಧಗಳ ಸಂಖ್ಯೆ ಇಳಿಮುಖವಾಗಿ ಜನರು ನೆಮ್ಮದಿಯ ಉಸಿರು ಬಿಟ್ಟಾರು.
ಒಳ್ಳೆಯ ಫೋಟೋ ಗ್ರಾಫರ್ ಕೂಡ ಆಗಿರುವ ಸತ್ಯನಾರಾಯಣ ಅವರು  ದಕ್ಷ ಪೋಲಿಸ್ ಅಧಿಕಾರಿ ಆಗಿದ್ದರೂ  ಜನಸ್ನೇಹಿ ಕೂಡ ಆಗಿದ್ದರು. ದಕ್ಷತೆ ಅವರಲ್ಲಿ ಇದೆ ಆದರೆ  ಒಂದಿನಿತೂ ದರ್ಪವಿಲ್ಲ,ಕವಿ ಹೃದಯದ ಅವರು ಕೆಟ್ಟವರಿಗೆ ದುಸ್ವಪ್ನ ಕೂಡ ಆಗಿದ್ದರು.ಸಜ್ಜನರಿಗೆ ಪ್ರಿಯರಾದವರೂ ಆಗಿದ್ದರು.
ಅವರ ಮುಂದಿನ ವೃತ್ತಿ ಜೀವನಕ್ಕೆ ಶುಭಾಶಯಗಳನ್ನು ಹೇಳುತ್ತಾ ಮುಂದೆ ಭಡ್ತಿ ಹೊಂದಿ ಇನ್ನೂ ಉನ್ನತ ಹುದ್ದೆಯನ್ನು ಪಡೆದು   ನಮ್ಮ ಪರಿಸರಕ್ಕೆ  ಮತ್ತೆ ಬರಲಿ ಎಂದು ಹಾರೈಸುವೆ
ಡಾ.ಲಕ್ಷ್ಮೀ ಜಿ ಪ್ರಸಾದ
Aravinda Bhat Govinda Prasad Manikanth Armanikanth

ದೊಡ್ಡವರ ದಾರಿ : 62 ಒಳಿತನ್ನು ಎಲ್ಲೆಡೆಯಿಂದ ಸ್ವೀಕರಿಸುವ ಟಿಎನ್ ಸೀತಾರಾಮ್ © ಡಾ.ಲಕ್ಷ್ಮೀ ಜಿ ಪ್ರಸಾದ

ದೊಡ್ಡವರ ದಾರಿ 63 : ಒಳಿತನ್ನು ಎಲ್ಲೆಡೆಯಿಂದ ಸ್ವೀಕರಿಸುವ ಟಿಎನ್ ಸೀತಾರಾಮ್
ದೊಡ್ಡವರು ದೊಡ್ಡವರೆಂದು ಗುರುತಿಸಲ್ಪಡಲು ಕಾರಣ ಅವರಲ್ಲಿ ಇರುವ ದೊಡ್ಡ ಗುಣವೇ ಆಗಿರುತ್ತದೆ. ನನ್ನ ಸುತ್ತಮುತ್ತಲಿನ ಪರಿಚಯದ ಮಂದಿಯಲ್ಲಿ ಇಂತಹ ಒಂದು ವಿಶಿಷ್ಟ ಗುಣ ನನ್ನ ಗಮನಕ್ಕೆ ಬಂದರೆ ಅವರ ಬಗ್ಗೆ ಬರೆಯುವುದು ನನ್ನ ಹವ್ಯಾಸ.
ಸುಮಾರು ಒಂದು ತಿಂಗಳಿನಿಂದ  ಟಿಎನ್ ಸೀತಾರಾಮ್ ಬಗ್ಗೆ ಬರೆಯಬೇಕೆಂದು ಕೊಂಡಿರುವೆ.ಬರೆಯುವ ಮೊದಲು ಅವರಲ್ಲಿ ಒಮ್ಮೆ ಮಾತನಾಡಬೇಕೆಂದು ಕೊಂಡಿದ್ದೆ.
ತಿಂಗಳ ಮೊದಲು ಮಗಳು ಜಾನಕಿ ಫೇಸ್ ಬುಕ್ ಗ್ರೂಪಿನಲ್ಲಿ ಧಾರಾವಾಹಿಯ ಒಂದು ಪಾತ್ರದ ಬಗ್ಗೆ ಜನರು ತಪ್ಪಾಗಿ ಭಾವಿಸಿ ನಿಂದನೆ ರೂಪದ ಹೇಳಿಕೆಗಳನ್ನು ನೀಡುತ್ತಾ ಇದ್ದರು.ಆಗ ನಾನು ಅದು ಸರಿಯಲ್ಲ ಎಂದು ಹೇಳಿ ಆ ಪಾತ್ರದ ಬಗೆಗಿನ ತಪ್ಪು ಗ್ರಹಿಕೆಯನ್ನು ಹೋಗಲಾಡಿಸಲು ನನ್ನ ಯತ್ನ ವಾಗಿ ಒಂದು ಹೇಳಿಕೆ ಹಾಕಿದ್ದೆ.ಆಗ ಸೀತಾರಾಮ್ ಅವರು ಮೆಸೆಂಜರ್ ನಲ್ಲಿ "ನಿಮ್ಮ ಗ್ರಹಿಕೆ ಸರಿ ಇದೆ,ಪ್ರೌಢವಾಗಿ ವಿಶ್ಲೇಷಣೆ ಮಾಡಿ ಬರೆದಿರುವಿರಿ" ಎಂದು ಮೆಸೇಜ್ ಮಾಡಿದರು. ಅರೇ..ಇವರು ನನ್ನ   ಬರಹಗಳನ್ನು ಓದುತ್ತಾರಾ ? ಎಂದು  ಆಶ್ಚರ್ಯ ಆಗಿತ್ತು.
ನಂತರ ಒಂದು ದಿನ  ದಾರಾವಾಹಿಯಲ್ಲಿ "ಜಾನಕಿಗೆ ನಿರಂಜನ ಸತ್ಯವನ್ನು ಮರುದಿನ  ಊಟದ ಸಮಯದಲ್ಲಿ ಹೇಳುತ್ತೇನೆ" ಎಂದಾಗ ಗ್ರೂಪಿನಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಾ ಇತ್ತು. ನಾನು ಆಗ ಈಗಾಗಲೇ ಜಾನಕಿಗೆ ಆನಂದ,ತಾಯಿ,ನಿರಂಜನ ಮೋಸ ಮಾಡಿದ್ದಾರೆಂದು ತಿಳಿದು ಆಘಾತ ಆಗಿದೆ.ಆನಂದ ‌ಮೋಸ ಮಾಡಿದನೆಂದು ತಿಳಿದಾಗ ಜಾನಕಿ ಒಣ ವೇದಾಂತವನ್ನು ಹೇಳುತ್ತಾ ಇಷ್ಟವಾಗದ್ದನ್ನು ಮತ್ತೆ ಮತ್ತೆ ಹಾಕಿಸಿಕೊಂಡು ತಿನ್ನುತ್ತಾ ಹೇಗೇಗೋ ವರ್ತಿಸಿದ್ದಾಳೆ.ನಂತರ ನಿರಂಜನ ಮೋಸ ಮಾಡಿದನೆಂದು ತಿಳಿದಾಗ ತೀರಾ ಆಘಾತ ಆಯಿತು. ನಂತರ ತಾಯಿ ಸತ್ಯವನ್ನು ಮುಚ್ಚಿಟ್ಟ ವಿಚಾರ ತಿಳಿದಾಗ ತಾಯಿಯಲ್ಲಿ ಮಾತು ಬಿಡುತ್ತಾಳೆ.ಈಗ ತಂದೆಯೂ ದ್ರೋಹ ಮಾಡಿದ್ದಾನೆಂದು ತಿಳಿದರೆ ಅದನ್ನು ಸ್ವೀಕರಿಸಲು ಸಹಜವಾಗಿ  ಸಾಧ್ಯವಾಗಲಾರದು.ಜಾನಕಿಯ ಪರಿಸ್ಥಿತಿಯಲ್ಲಿ ಯಾರೇ ಇದ್ದರೂ ಮಾನಸಿಕ ಸಮತೋಲನ ಕಳೆದುಹೋಗಬಹುದು ಹಾಗಾಗಿ ಈಗಲೇ ಸತ್ಯ ತಿಳಿಯುವುದು ಸರಿಯಲ್ಲ ಎಂದು ಬರೆದಿದ್ದೆ.
ಆಗ ಸೀತಾರಾಮ್ ಅವರು ನೀವು ಹೇಳಿದ್ದು ಸರಿ ಇದೆ ಈಗಾಗಲೇ ರೆಕಾರ್ಡಿಂಗ್ ಆಗಿ ಚಾನಲ್ ಗೆ ಕಳುಹಿಸಿ ಆಗಿದೆ . ಸ್ವಲ್ಪ ಮೊದಲೇ ಗೊತ್ತಾಗಿದ್ದರೆ ಕಥೆಯನ್ನು ಸ್ವಲ್ಪ ಬದಲಾಯಿಸುತ್ತಾ ಇದ್ದೆ" ಎಂದು ತಿಳಿಸಿ "ನಿರಂಜನ ಸತ್ಯವನ್ನು ಹೇಳುವ ಕಥಾಭಾಗ ಯಾವ ದಿನಾಂಕ ದಂದು ಪ್ರಸಾರವಾಗುತ್ತದೆ" ಎಂದು ತಿಳಿಸಿದ್ದರು.ನನ್ನಂತಹ ಸಾಮಾನ್ಯರ ಅಭಿಪ್ರಾಯವನ್ನು ಕೂಡ ಸಕಾರಾತ್ಮಕವಾಗಿ ಸ್ವೀಕರಿಸುವ ಅವರ  ಹಿರಿತನದ ಅರಿವು ನನಗಾಗ ಆಯಿತು.
ಆಗ ಅವರಲ್ಲಿ ಮಾತನಾಡುತ್ತಾ( ಮೆಸೆಂಜರ್ ನ ಮೂಲಕ ) ಇರುವಾಗ ತಪ್ಪಿ ಕೈತಾಗಿ ಮೆಸೆಂಜರ್ ಕಾಲರ್ ಮೂಲಕ ಅವರಿಗೆ ವೀಡಿಯೋ ಕರೆ ಹೋಯಿತು. ಅದು ತನಕ ಮೆಸೆಂಜರ್ ವೀಡಿಯೋ ಕಾಲರ್ ಅನ್ನು ಒಮ್ಮೆಯೂ ಬಳಕೆ ಮಾಡದ ನನಗೆ ಕರೆ ಹೋಗುತ್ತಾ ಇರುವುದು ಗೊತ್ತಾದರೂ ಡಿಸ್ ಕನೆಕ್ಟ್ ಮಾಡುವುದು ಹೇಗೆಂದು ತಕ್ಷಣಕ್ಕೆ ಗೊತ್ತಾಗಲಿಲ್ಲ. ಗಾಭರಿಯಾಗಿ ಹತ್ತಿರದಲ್ಲೇ ಇದ್ದ ಮಗನನ್ನು ಕರೆದು" ಮಾರಾಯ ಇಲ್ಲಿ ಸೀತಾರಾಮ್ ಗೆ ಕಾಲ್ ಹೋಗ್ತಾ ಉಂಟು ಬೇಗ ಕಟ್ ಮಾಡು " ಎಂದು ಹೇಳಿ ಡಿಸ್ ಕನೆಕ್ಟ್ ಮಾಡುವಷ್ಟರಲ್ಲಿ ಏಳೆಂಟು ಭಾರಿ ರಿಂಗಾಗಿತ್ತು."ಸೀತಾರಾಮ್ ಶಾರ್ಟ್ ಟೆಂಪರ್ಡ್ ಅಂತ ಯಾರೋ ಹೇಳುದು ಕೇಳಿದ್ದೆ.ಈಗ ನನಗೆ ಎರಡು ಬೈದರೆ ಎಂತ ಮಾಡುದು " ಎಂದು ಆತಂಕ ಆಯಿತು ಕೂಡ! ತಕ್ಷಣವೇ ತಪ್ಪಿ ಕರೆ ಹೋಗಿದೆ ಎಂದು ತಿಳಿಸಿ ಕ್ಷಮೆ ಕೋರಿದೆ.
ಅಷ್ಟರಲ್ಲಿ ಅವರು ತಮ್ಮ ಮೊಬೈಲ್ ಸಂಖ್ಯೆಯನ್ನು ಮೆಸೇಜ್ ಮಾಡಿದರು."ನಾನೇನೋ‌ ಮಾತಾಡಲು ಇಚ್ಛಿಸಿರುವೆ" ಎಂದು ಭಾವಿಸಿ ಅವರು ತಮ್ಮ ಮೊಬೈಲ್ ಸಂಖ್ಯೆ ನೀಡಿದ್ದರು.  ಅವರ ಸಜ್ಜನಿಕೆಗೆ ತಲೆಬಾಗಿತು.
ನನಗೊಮ್ಮೆ ಅವರಲ್ಲಿ ಮಾತನಾಡಬೇಕಿಂದಿದ್ದರೂ ಆ ದಿನ ಮಾತನಾಡಲು ವಿಷಯವಿರಲಿಲ್ಲ ಹಾಗಾಗಿ ಕರೆ ಮಾಡಿರಲಿಲ್ಲ.
ಇದಾಗಿ ಕೆಲ ದಿನಗಳಲ್ಲಿ ಧಾರಾವಾಹಿಯ ಮುಖ್ಯ ಪಾತ್ರವೊಂದರ ಮೂಲಕ  ಮತ್ತಷ್ಟು ಋಣಾತ್ಮಕ ಪರಿಣಾಮ ಬೀರುವ ಕಥಾನಕ ಬಂತು.ಆಗ ನಾನು ನಾನು ಸೀತಾರಾಮ್ ಅವರಲ್ಲಿ ಆ ಪಾತ್ರ ಅದೇ ರೀತಿ ಸಾಗಿದರೆ ಉಂಟಾಗುವ ದುಷ್ಪರಿಣಾಮದ ಬಗ್ಗೆ ತಿಳಿಸಿ ,"ಆ ಪಾತ್ರದ ಚಿತ್ರಣದಲ್ಲಿ ಬದಲಾವಣೆ ಮಾಡಲು ಸಾಧ್ಯವೇ ?"ಎಂದು ಮನವಿ ಮಾಡಿದೆ.ಮತ್ತೆ ಒಳಗಿಂದೊಳಗೆ ಭಯ ಇತ್ತು.ನಿಮಗೆ ಯಾಕೆ ಅಧಿಕ ಪ್ರಸಂಗ ಅಂತ ಬೈದರೆ ಎಂದು,😀
ಆದರೆ ದೊಡ್ಡವರು ಒಳ್ಳೆಯ ವಿಚಾರಗಳನ್ನು ಎಲ್ಲೆಡೆಯಿಂದ ಸ್ವೀಕರಿಸುತ್ತಾರೆ ಎಂಬುದಕ್ಕೆ ಸೀತಾರಾಮ್ ಅವರು ಪ್ರತ್ಯಕ್ಷ ನಿದರ್ಶವಾದರು. ನನ್ನ ಅಭಿಪ್ರಾಯವನ್ನು ಒಪ್ಪಿ "ಹೇಗೆ ಬದಲಾವಣೆ ಮಾಡಬಹುದು?" ಎಂದು ಕೇಳಿದರು.ಆಗ ನಾನು ಅವರಿಗೆ ಕರೆ ಮಾಡಿ ಮುಕ್ತವಾಗಿ ಮಾತನಾಡಿದೆ.ಯಾವ ರೀತಿಯಲ್ಲಿ ಬದಲಾವಣೆ ಮಾಡಬಹುದು ಎಂದು ನನ್ನ ಅಭಿಪ್ರಾಯವನ್ನು ತಿಳಿಸಿದೆ.ತುಂಬಾ ತಾಳ್ಮೆಯಿಂದ ನನ್ನಂತಹ ಸಾಮಾನ್ಯಳ ಅಭಿಪ್ರಾಯ ವನ್ನು ಆಲಿಸಿದರು.ತುಂಬಾ ಚೆನ್ನಾಗಿ ಮಾತನಾಡಿದರು.ನಂತರ ಈ ಬಗ್ಗೆ ನಮ್ಮ ತಂಡದ ಜೊತೆಯಲ್ಲಿ ಚರ್ಚಿಸುತ್ತೇನೆ ಎಂದು ಹೇಳಿದರು ‌.
ನಂತರ ಎರಡು ಮೂರು ದಿನ ಕಳೆದಾಗ "ನೀವು ಹೇಳಿದ ಕಥೆ ..ದಿನದಂದು ಬರುತ್ತದೆ" ಎಂದು ತಿಳಿಸಿದರು.
ಹೌದು,ಅವರು ಆ ಪಾತ್ರದಲ್ಲಿ  ನಾನು ಅಭಿಪ್ರಾಯಿಸಿದ ರೀತಿಯಲ್ಲಿ ಬದಲಾವಣೆ ಮಾಡಿದ್ದು ಪ್ರಸಾರವಾಯಿತು. ಅದನ್ನು ತುಂಬಾ ಸಹಜವಾಗಿ ತಂದಿದ್ದರು.  ಆಗ ಆ ಪಾತ್ರದ ಬಗ್ಗೆ ಅನೇಕರು ಒಳ್ಳೆಯ ರೀತಿಯಲ್ಲಿ ಹೇಳಿಕೆ,ಕಮೆಂಟ್ ಹಾಕಿದರು ಕೂಡ.
"ತಾನು ಮಾಡಿದ್ದೇ ಸರಿ,ಅದನ್ನು ಯಾರೂ ಪ್ರಶ್ನೆ ಮಾಡಬಾರದು ಎಂಬ ಮನೋಭಾವ ಹೆಚ್ಚಿನವರಲ್ಲಿ ಇರುತ್ತದೆ.ಇಂತಹವರ  ನಡುವೆ ಟಿಎನ್ ಸೀತಾರಾಮ್ ತುಂಬಾ ಭಿನ್ನವಾಗಿ ನಿಲ್ಲುತ್ತಾರೆ.ಅವರೇಕೆ ದೊಡ್ಡವರು ಎಂಬುದು  'ಒಳ್ಳೆಯದನ್ನು ಎಲ್ಲೆಡೆಯಿಂದ ಸ್ವೀಕರಿಸುವ' ಅವರ  ದೊಡ್ಡ ಗುಣದಿಂದ ತಿಳಿಯುತ್ತದೆ. ಒಂದೆರಡು ವರ್ಷಗಳ ಹಿಂದೆ ಒಮ್ಮೆ ಯಾವುದೋ ಕಾರ್ಯಕ್ರಮದಲ್ಲಿ ಅವರ ಪಕ್ಕವೇ ಕುಳಿತಿದ್ದೆ.ಮಾಯಾಮೃಗ ಧಾರಾವಾಹಿ ನೋಡುತ್ತಿದ್ದ ಸ್ನೇಹಿತರು ಸೀತಾರಾಮ್ ಬಗ್ಗೆ ಹೇಳುತ್ತಾ ಇದ್ದರು.ನಾನು ಕಾಲೇಜು ಮುಗಿಸಿ ಬರುವಷ್ಟರಲ್ಲಿ ಅದು ಮುಗಿಯುತ್ತಿದ್ದ ಕಾರಣ ನಾನು ನೋಡಿರಲಿಲ್ಲ.ನಂತರದ ಮನ್ವಂತರ,ಮುಕ್ತ, ಮುಕ್ತ ಧಾರಾವಾಹಿಗಳನ್ನು ನೋಡಿ ನಾನು ಸೀತಾರಾಮ್ ಅವರ ಫ್ಯಾನ್ ಆಗಿದ್ದೆ.ಅವರನ್ನು ಒಮ್ಮೆ ಭೇಟಿಯಾಗಿ ಮಾತನಾಡಬೇಕೆಂದು ಕೂಡ ಅಂದುಕೊಂಡಿದ್ದೆ .ಆದರೂ ಅವರ ಪಕ್ಕದಲ್ಲೇ ಕುಳಿತಿದ್ದರೂ  ಹಿಂಜರಿಕೆಯಿಂದ ಮಾತನಾಡಿರಲಿಲ್ಲ!  ( ನಾನು ಒಂಚೂರು ಹಾಗೆಯೇ ..ಮಂಗಳೂರಿನಲ್ಲಿ ಇದ್ದಾಗಲೇ  ಡಾ.ನಾ ಸೋಮೇಶ್ವರ, ಡಾ.ಚಂದ್ರಶೇಖರ ಕಂಬಾರ,ಹಂಪನಾ ಮೊದಲಾದವರನ್ನು ಭೆಟಿಯಾಗಿ ಮಾತನಾಡಬೇಕೆಂದು ಮನಸಿನಲ್ಲೇ ಆಶಿಸುತ್ತಾ ಇದ್ದೆ.ಆದರೆ ಬೆಂಗಳೂರಿನಲ್ಲಿ ಚಂದ್ರ ಶೇಖರ ಕಂಬಾರರ ಮನೆ ಹತ್ತಿರವೇ ಇದ್ದಾಗ ಕೂಡ ಹೋಗಿ ಮಾತನಾಡಲಿಲ್ಲ.ಒಂದೆರಡು ಭಾರಿ ಮಾತನಾಡಲೆಂದೇ ಅವರ ಮನೆ ಗೇಟ್ ತನಕ ಹೋಗಿ ಹಿಂಜರಿಕೆ ಕಾಡಿ ಹಿಂದೆ ಬಂದಿದ್ದೆ.ಡಾ.ನಾ ಸೋಮೇಶ್ವರ ಅವರನ್ನು ಅನೇಕ ಬಾರಿ ಕಂಡಿದ್ದರೂ ಮಾತನಾಡಲಯ ಹಿಂದೇಟು ಹಾಕಿರುವೆ.) ಆದರೆ ಸೀತಾರಾಮ್ ಅವರನ್ನು ಮಾತ್ರ ಖಂಡಿತಾ ಮುಖತಃ ಭೇಟಿಯಾಗಿ ಒಂದು ಸೆಲ್ಪಿ ಹಿಡಿದುಕೊಂಡು ಬರಬೇಕೆಂದು ಕೊಂಡಿರುವೆ .

Sunday, 2 December 2018

ದೊಡ್ಡವರ ದಾರಿ 62 ಪ್ರೀತಿಯ ಮೇಷ್ಟ್ರು ಡಾ.ಭೈರಮಂಗಲ ರಾಮೆಗೌಡ © ಡಾ.ಲಕ್ಷ್ಮೀ ಜಿ ಪ್ರಸಾದ

ವಿದ್ಯಾರ್ಥಿಗಳ ಪ್ರೀತಿಯ ಮೇಷ್ಟ್ರು - ಡಾ.ಭೈರಮಂಗಲ‌ ರಾಮೇಗೌಡ© ಡಾ.ಲಕ್ಷ್ಮೀ ಜಿ ಪ್ರಸಾದ
ತುಂಬಾ ಸಮಯದಿಂದ ಭೈರಮಂಗಲ ರಾಮೇಗೌಡರ ಬಗ್ಗೆ ಬರೆಯಬೇಕೆಂದುಕೊಂಡಿದ್ದೆ. ಸೋಮಾರಿತನ ಒಂಚೂರು ಕೆಲಸದ ಒತ್ತಡ,ಬರೆಯುವ ಮೂಡ್ ನ ಕೊರತೆಯ ಕಾರಣದಿಂದಾಗಿ ಬರೆಯಲಾಗಲಿಲ್ಲ.
ರಾಮೇಗೌಡು ಬಹಳ ಜನಪ್ರಿಯ ಕನ್ನಡ ಪ್ರಾಧ್ಯಾಕರು.ಅವರ ವಿದ್ಯಾರ್ಥಿಗಳು ಅವರನ್ನು ತುಂಬಾ ನೆಚ್ಚಕೊಂಡಿದ್ದಾರೆ.
ತುಂಬಾ ಜನ ಉಪನ್ಯಾಸಕರಿದ್ದಾರೆ.ಆದರೆ ಇವರ ವಿದ್ಯಾರ್ಥಿಗಳು ಮಾತ್ರ ಇವರನ್ನು ತುಂಬಾ ಅಭಿಮಾನದಿಂದ ಕಾಣುತ್ತಾರೆ. ಯಾರು ಕೂಡ ರಾಮೇಗೌಡರ ಬಗ್ಗೆ ಋಣಾತ್ಮಕವಾಗಿ ಮಾತನಾಡುವುದಿಲ್ಲ .ಯಾಕೆ ? ಹೆಚ್ಚು ಕಡಿಮೆ ವರ್ಷದ ‌ಮುನ್ನೂರ ಅರುವತ್ತೈದು ದಿನಗಳಲ್ಲಿ ಕೂಡ ಅವರು ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉಪನ್ಯಾಸಕಾರರಾಗಿ ಆಹ್ವಾನಿಸಲ್ಪಡುತ್ತಾರೆ .ಇಷ್ಟು ಜನರ ಪ್ರೀತಿಯನ್ನು ಹೇಗೆ ಗಳಿಸಿದರು? ಯಾರಿಗಾದರೂ ಮನದಲ್ಲಿ  ಮೂಡಬಹುದಾದ ಪ್ರಶ್ನೆ ಇದು.ಆದರೆ ನನಗೆ ಇದಕ್ಕೆ ಉತ್ತರ ಗೊತ್ತು. ಮೊದಲಿಗೆ ಅವರ ಪ್ರಗಲ್ಭ ಪಾಂಡಿತ್ಯ ಇದಕ್ಕೆ ಕಾರಣ.
ಜೊತೆಗೆ ಅವರ ಸಜ್ಜನಿಕೆ,ಉದಾತ್ತತೆ,ವಿದ್ಯಾರ್ಥಿ ಪ್ರಿಯತೆ ಕಾರಣವಾಗಿದೆ.
ಸುಮಾರು ಹನ್ನೆರಡು ವರ್ಷಗಳ ಹಿಂದೆ ಪದವಿ ಕಾಲೇಜು ಕನ್ನಡ ಉತ್ತರ ಪತ್ರಿಕೆ ‌ಮೌಲ್ಯ ಮಾಪನದಲ್ಲಿ ನನಗೆ ಅವರು ಡಿಸಿ ಆಗಿದ್ದರು. ಮೌಲ್ಯ ಮಾಪನ ಆರಂಭದಲ್ಲಿ ಅರ್ಧ ಕಾಲು ಅಂಕಗಳನ್ನು ಕೊಡಬೇಡಿ‌.ಉದಾಹರಣೆಗೆ "ಎರಡುವರೆ ಅಂಕ ಕೊಡುವ ಬದಲು ಎರಡು ಅಥವಾ ‌ಮೂರು ಕೊಡಿ. ನಾನು ಅರ್ಧ ಅಂಕವನ್ನು ಬಿಡುವ ಬದಲು ವಿದ್ಯಾರ್ಥಿಗಳಿಗೆ  ಅದನ್ನು ಕೊಡುತ್ತೇನೆ. ನಾನು‌ಮಾಡುವ ಹಾಗೆಯೇ ನೀವು‌ ಮಾಡಬೇಕೆಂದಿಲ್ಲ.ಆಯ್ಕೆ ನಿಮ್ಮದು " ಎಂದು ತಮ್ಮ ವಿದ್ಯಾರ್ಥಿ ಸ್ನೇಹಿ ನಿಲುವನ್ನು ತಿಳಿಸಿದ್ದರು.ಒಂದಿನಿತು ಕೂಡ ಅವರಲ್ಲಿ ಅಧಿಕಾರದ ಮಾತಿರಲಿಲ್ಲ.ನಾನಾಗ ಒಂದು ಕಥಾ ಸಂಕಲನ ಮತ್ತು ಒಂದು ಲೇಖನ ಹೀಗೆ ಎರಡು ಪುಸ್ತಕಗಳನ್ನು ಪ್ರಕಟಿಸಬೇಕೆಂದು ಆಲೋಚಿಸುತ್ತಾ ಇದ್ದೆ.ಈ ಬಗ್ಗೆ ಅವರಲ್ಲಿ ಸಲಹೆ ಕೇಳಿದಾಗ ‌ಲಕ್ಷ್ಮೀ‌ಪ್ರಿಂಟರ್ಸ್ ನ ವಿಳಾಸ ನೀಡಿ ಪ್ರಕಟಿಸಿ ,ಮುನ್ನೂರು ಪುಸ್ತಕಗಳನ್ನು ಪುಸ್ತಕ ಪ್ರಾಧಿಕಾರ ಗ್ರಂಥಾಯಗಳಿಗೆ ನೀಡಲು ಖರೀದಿಸುತ್ತದೆ.ಹಾಗಾಗಿ ಮಾರಾಟ ಆಗದಿದ್ದರೆ ಎಂಬ ಚಿಂತೆ ಬೇಡ,ಧೈರ್ಯವಾಗಿ ಪ್ರಕಟಿಸಿ" ಎಂದು ಬೆಂಬಲದ ಮಾತುಗಳನ್ನು ಆಡಿದ್ದರು. ಆಗಾಗಲೇ ಅವರು ತುಂಬಾ ಪ್ರಸಿದ್ಧರಾಗಿದ್ದರು.ನನ್ನಂತ ಬಾಲಂಗೋಚಿಯ ಪುಸ್ತಕ ಪ್ರಕಟನೆಯ ಕನಸನ್ನು ತಿರಸ್ಕಾರದಿಂದ ಕಾಣದೆ ಬೆಂಬಲಿಸಿದ್ದರು.ಆಗಲೇ ನನಗೆ ಅವರೇಕೆ ದೊಡ್ಡವರು ಎಂದರಿವಾಗಿತ್ತು.
ನಂತರ ಸುಮಾರು ಹನ್ನೆರಡು ವರ್ಷಗಳ ನಂತರ ನನಗೆ ಫೇಸ್ ಬುಕ್ ನಲ್ಲಿ ನನಗೆ ಕಾಣಲು ಸಿಕ್ಕಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದೆ.ಅದನ್ನು ಸ್ವೀಕರಿಸಿಯಾರೆಂಬ ನಂಬಿಕೆ ನನಗಿರಲಿಲ್ಲ .ಆದರೆ ನನ್ನ ಊಹೆ ಹುಸಿಯಾಗಿ ಅವರು ಫ್ರೆಂಡ್ ರಿಕ್ವೆಸ್ಟ್ ಅನ್ನು ಸ್ವೀಕರಿಸಿದರು.
ಫೇಸ್ ಬುಕ್ ನಲ್ಲಿ ನಾನು ಭಾಗವಹಿಸಿದ ಅತಿಥಿಯಾಗಿ ಕಾರ್ಯಕ್ರಮಗಳನ್ನು ,ಪಡೆದ ಪ್ರಶಸ್ತಿ ಪುರಸ್ಕಾರಗಳನ್ನು ಹಂಚಿಕೊಂಡಾಗ ಅವರು ಪ್ರತಿಕ್ರಿಯೆ ನೀಡಿ ಬೆಂಬಲ ನೀಡಿದರು‌.
ಪೇಸ್ ಬುಕ್ ನಲ್ಲಿ ಅನೇಕ ದೊಡ್ಡ ದೊಡ್ಡ ವಿದ್ವಾಂಸರು ಇರುತ್ತಾರೆ.ತಾವು ಪಡೆದ ಪ್ರಶಸ್ತಿ ಸನ್ಮಾನಗಳ ಬಗ್ಗೆ ಹಾಕಿಕೊಳ್ಳುತ್ತಾರೆ.ಎಲ್ಲರ ಅಭಿನಂದನೆಗಳನ್ನು ಸ್ವೀಕರಿಸುತ್ತಾರೆ‌.ಆದರೆ ಬೇರೆಯವರ ಸಾಧನೆಗಳನ್ನು ಗುರುತಿಸುವ ಅವರಿಗೆ ಒಂದು ಬೆಂಬಲದ ಮಾತನ್ನು ಹೇಳಬೇಕು ಎಂಬುದನ್ನು ಮರೆತುಬಿಡುತ್ತಾರೆ. ಹಾಗೆ ಮಾಡಿದರೆ ತಮ್ಮ ಘನತೆಗೆ ಕುಂದೆಂದು ಭಾವಿಸುತ್ತಾರೋ ಏನೋ ನನಗೆ ತಿಳಿಯದು.ಅಥವಾ ಬೇರೆಯವರ ಏಳಿಗೆ ಇವರಿಗೆ ಸಹ್ಯವಾಗುವುದಿಲ್ಲವೋ ಏನೋ ನನಗೆ ಅರ್ಥವಾಗುವುದಿಲ್ಲ.
ಇಂತಹವರ ನಡುವೆ ಭೈರಮಂಗಲ ರಾಮೇಗೌಡ ಸರ್ ತುಂಬಾ ಭಿನ್ನವಾಗಿ ಕಾಣಿಸುತ್ತಾರೆ.ತಮ್ಮ ಎಡೆಬಿಡದ ಕಾರ್ಯಗಳ ನಡುವೆಯೂ ಚಿಕ್ಕವರಿಗೆ ಪ್ರೋತ್ಸಾಹ ನೀಡುತ್ತಾರೆ‌.ಹಾಗಾಗಿಯೇ ಅವರು ದೊಡ್ಡವರು‌. ಸಮಾಜದಲ್ಲಿ ದೊಡ್ಡವರೆಂದು ಗುರುತಿಸಲ್ಪಡುವುದು ಸಣ್ಣ ವಿಚಾರವಲ್ಲ.ದೊಡ್ಡ ಗುಣ ಇದ್ದರೆ ಮಾತ್ರ ವಿದ್ವಾಂಸರು ಹಿರಿಯರು ದೊಡ್ಡವರೆಂದು ಗುರುತಿಸಲ್ಪಡುತ್ತಾರೆ .ಅದಕ್ಕೆ ಡಾ.ಭೈರಮಂಗಲ ರಾಮೆಗೌಡರು ನಿದರ್ಶನವಾಗಿದ್ದಾರೆ.
©ಡಾ.ಲಕ್ಷ್ಮೀ ಜಿ ಪ್ರಸಾದ

Thursday, 8 November 2018

ಬದುಕ ಬಂಡಿಯಲಿ ೨೭ ಸರಿಯಾದುದನ್ನು ಸರಿ ಎಂದು ಸಾಧಿಸಲೂ ಕಷ್ಟ ಪಡಬೇಕಾಯಿತು ©-ಡಾ.ಲಕ್ಷ್ಮೀ ಜಿ ಪ್ರಸಾದ

 ಬದುಕ ಬಂಡಿಯಲ್ಲಿ
ಮುಖ ಪುಟ ಸ್ನೇಹಿತರಾದ ಶ್ರೀನಿವಾಸ ಹೊಳ್ಳರು ಶುಭಾಶಯ ಎಂಬ ಪದದ ಅಪಪ್ರಯೋಗದ( ತಪ್ಪು ಬಳಕೆಯ) ಕುರಿತು ಒಂಚೂರು ತಮಾಷೆಯಾಗಿ ಒಂದು ಸಾಲಿನ ಹೇಳಿಕೆಯನ್ನು ಹಾಕಿದರು.ಆ ಬಗ್ಗೆ ಒಂದು ಸಣ್ಣ ಚರ್ಚೆ ಅಥವಾ ಅಭಿಪ್ರಾಯ ವಿನಿಮಯ ಕೂಡ ನಡೆಯಿತು. ಆಗ ನನಗೆ ನಾನು ಬಿಎಡ್ ಓದುವಾಗ ನಡೆದ ಒಂದು ಘಟನೆ ನೆನಪಾಯಿತು.
2009 ರಲ್ಲಿ ಲಿಖಿತ ಪರೀಕ್ಷೆಯ ಮೂಲಕ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಾಗಿ ಆಯ್ಕೆಯಾದ ಸುಮಾರು 2400 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡುವಾಗ ನಾಲ್ಕು ವರ್ಷಗಳ ಒಳಗೆ ಬಿಎಡ್ ಪದವಿಯನ್ನು ಪಡೆಯಬೇಕೆಂಬ ನಿಬಂಧನೆಯನ್ನು ಹಾಕಿದ್ದರು.ಕೆಲಸ ಸಿಕ್ಕ ಸಂತಸದಲ್ಲಿ ಆಗ ನಾವ್ಯಾರೂ ಆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ.ಆದರೆ ಕೆಲಸಕ್ಕೆ ಸೇರಿ ಎರಡು ವರ್ಷಗಳಾದಾಗ  ಬಿಎಡ್ ಪಡೆದಿಲ್ಲವೆಂಬ ಕಾರಣಕ್ಕೆ  ನಾನೂ  ಸೇರಿದಂತೆ ಸುಮಾರು 1400 ಉಪನ್ಯಾಸಕರ ಪರೀಕ್ಷಾರ್ಥ ಖಾಯಂ ಪೂರ್ವ ಸೇವಾವಧಿಯನ್ನು ( probationary period)  ತೃಪ್ತಿಕರವೆಂದು ಘೋಷಣೆ ಮಾಡದೆ ಭಡ್ತಿಯನ್ನು ಇಲಾಖೆ ತಡೆ ಹಿಡಿದಾಗ ನಮಗೆಲ್ಲ ಈ  ನಿರ್ಬಂಧ ಉಂಟು ಮಾಡಿ ಸಮಸ್ಯೆಯ ಗಹನತೆ ಅರ್ಥವಾಯಿತು.
ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದವು,ನಾವುಗಳು ಮುಖ್ಯಮಂತ್ರಿಗಳು, ಶಿಕ್ಷಣ ಮಂತ್ರಿಗಳು,ಶಾಸಕರುಗಳಲ್ಲಿ ನಮ್ಮ ಸಮಸ್ಯೆಯನ್ನು ಬಗೆ ಹರಿಸುವಂತೆ ವಿನಂತಿಸಿದೆವು.ಆಗ ಸದಾನಂದ ಗೌಡರು ಮತ್ತು ಕಾಗೇರಿಯವರು ಮುಖ್ಯ ಮಂತ್ರಿ,ಶಿಕ್ಷಣ ಮಂತ್ರಿಗಳಾಗಿದ್ದರೆಂದು ನೆನಪು. ಈ ಬಗ್ಗೆ ಕೋರ್ಗೆ ಮೊರೆ ಹೋಗುವ ಯತ್ನ ವೂ ನಡೆಯಿತು. ಪ್ರತಿಭಟನೆ ಹೋರಾಟವೂ ಆಯಿತು.ಅಂತೂ ಇಂತೂ ನಾವು ಕೆಲಸಕ್ಕೆ ಸೇರಿ ನಾಲ್ಕು ವರ್ಷ ಅಗುತ್ತಾ ಬಂತು.ಈ ನಡುವೆ ಚುನಾವಣೆ ಬಂದು ಸರಕಾರ ಬದಲಾಗಿ ಸಿದ್ಧ ರಾಮಯ್ಯ ಅವರು ಮುಖ್ಯಮಂತ್ರಿಗಳಾದರು.ಸಜ್ಜನ ರಾಜಕಾರಣಿ ಎಂದೇ ಖ್ಯಾತರಾದ ಕಿಮ್ಮನೆ ರತ್ನಾಕರ್ ಅವರು ಶಿಕ್ಷಣ ಸಚಿವರಾದರು.ನಮ್ಮ ಮನವಿ ,ಹೋರಾಟ,ಪ್ರತಿಭಟನೆ ಇತ್ಯಾಗಿ ನಡೆಯುತ್ತಲೇ ಇತ್ತು.ಕೊನೆಗೂ ನಮ್ಮ ಸಂಕಷ್ಟವನ್ನು ಅರ್ಥಮಾಡಿಕೊಂಡ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್ ಅವರು ನಮಗೆ ಒಂದು ವರ್ಷ  ಓದಿ ಬಿಎಡ್ ಪದವಿ ಪಡೆಯಲು ವೇತನ ಸಹಿತ ರಜೆಯನ್ನು ನೀಡಿದರು.
 ಸಂಸ್ಕೃತ, ಹಿಂದಿ,ಕನ್ನಡ ಮೂರು ಭಾಷೆಗಳ ಎಂಎ ಪದವಿ,ಎಂ ಫಿಲ್,ಹಾಗೂ ಎರಡು ಡಾಕ್ಟರೇಟ್ ಪದವಿಗಳನ್ನು ಪಡೆದ ನಂತರ ನನ್ನ ನಲುವತ್ತನೇ ವಯಸ್ಸಿನಲ್ಲಿ ಕೆಲಸವನ್ನು ಉಳಿಸಿಕೊಳ್ಳುವ ಸಲುವಾಗಿ ಬಿಎಡ್ ಪದವಿ ಓದಲು ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿಗೆ ಸೇರಿದೆ.ಇಲ್ಲಿ ನನ್ನ ಹಾಗೆ  ಹತ್ತು ಜನ ಉಪನ್ಯಾಸಕರು ಬಿಎಡ್ ಗೆ ದಾಖಲಾತಿ ಪಡೆದಿದ್ದರು.ನನ್ನ ಹಾಗೆ ಡಾಕ್ಟರೇಟ್ ಪದವಿಯನ್ನು ಪಡೆದವರೂ,ನನಗಿಂತ ಹಿರಿಯರೂ ಕೂಡ ಆಗಿರುವ ಉಪನ್ಯಾಸಕರೂ ಇದ್ದರು.
ಆಗಷ್ಟೇ ಬಿಎ ಪದವಿ ಪಡೆದು ಬಂದಿರುವ ಇಪ್ಪತ್ತು ಇಪ್ಪತ್ತೊಂದು ವರ್ಷ ವಯಸ್ಸಿನ ( ನಮ್ಮ ಅರ್ಧದಷ್ಟು ವಯಸ್ಸಿನ ) ಎಳೆಯರೊಂದಿಗೆ ಕುಳಿತು,ಅವರ ಮಟ್ಟಕ್ಕೆ ಅನುಗುಣವಾಗಿ ರಚಿತವಾದ ಪಠ್ಯಕ್ರಮವನ್ನು ಓದುವುದು ನಮಗೆ ಒಂದಿನಿತು ಇಕ್ಕಟ್ಟನ್ನು ತಂದಿಟ್ಟಿತು.ಆರಂಭದಲ್ಲಿ ಅಲ್ಲಿನ ಉಪನ್ಯಾಸಕರು ನಮ್ಮನ್ನು ಇತರ ಸಾಮಾನ್ಯ ವಿದ್ಯಾರ್ಥಿಗಳಂತೇ ಪರಿಗಣಿಸಿ ಪಾಠ ಮಾಡ ಹೊರಟಾಗ ಸಾಕಷ್ಟು ಚರ್ಚೆಗಳು ನಡೆದವು. ( ನಂತರದ ದಿನಗಳಲ್ಲಿ ನಮ್ಮ ಅಭಿಪ್ರಾಯ, ಅನುಭವ,ವಿದ್ವತ್ ಗಳಿಗೆ ಅವರೂ ಮನ್ನಣೆ ನೀಡಿದರು)
ಈ ಸಂದರ್ಭದಲ್ಲಿ ಯಾವುದೋ ಒಂದು ಕಾರ್ಯಕ್ರಮ ( ಕನ್ನಡ ರಾಜ್ಯೋತ್ಸವ ಎಂದು ನೆನಪು) ಅಯೋಜನೆ ಆಯಿತು. ನಾವುಗಳು ಕಾಲೇಜನ್ನೆಲ್ಲಾ ಸಿಂಗರಿಸಿದೆವು.ಕೆಲವು ವಿದ್ಯಾರ್ಥಿಗಳು ವೇದಿಕೆಯ ಹಿಂದಿನ  ಕಪ್ಪು ಹಲಗೆಯಲ್ಲಿ ಕಾರ್ಯಕ್ರಮದ ಬಗ್ಗೆ ಬರೆದು ಶುಭಾಷಯಗಳು ಎಂದು ಬರೆದಿದ್ದರು.ಅದನ್ನು ಗಮನಿಸಿದ ನಾನು ಅಲ್ಲಿದ್ದ ವಿದ್ಯಾರ್ಥಿಗಳಿಗೆ( ಅವರು ನಮ್ಮ ಸಹಪಾಠಗಳು ಕೂಡ ಆಗಿದ್ದರು) ಶುಭಾಷಯ ತಪ್ಪು ಬಳಕೆ,ಶುಭಾಶಯ ಎಂಬುದು ಸರಿಯಾದ ರೂಪ ಎಂದು ತಿಳಿಸಿ ಅದನ್ನು ಅಲ್ಲಿ ಶುಭಾಶಯಗಳು ಎಂದು ಸರಿ ಪಡಿಸಿಸಿದೆ.
ನಂತರ ಬೇರೆ ಕೆಲಸಕ್ಕೆ ಹೋದೆ.ಇನ್ನೇನು ಕಾರ್ಯಕ್ರಮ ನಾಲ್ಕೈದು ನಿಮಿಷಗಳಲ್ಲಿ ಶುರು ಆಗುತ್ತದೆ ಎಂದಾದಾಗ ಮತ್ತೆ ವೇದಿಕೆ ಕಡೆಗೆ ಬಂದೆ.ನೋಡಿದರೆ ಮತ್ತೆ ಶುಭಾಷಯ ಎಂಬ ತಪ್ಪು ಬಳಕೆ ಇತ್ತು.ಅರೇ,ಈಗ ಅರ್ಧ ಗಂಟೆ ಮೊದಲು ಇದನ್ನು ನ ಶುಭಾಶಯ ಎಂದು  ಸರಿ ಪಡಿಸಿ ಹೋಗಿದ್ದೆ,ಯಾರು ಬದಲಾಯಿಸಿದ್ದು ? ಎಂದು ಕೇಳಿದೆ.ಅಲ್ಲಿನ ಉಪನ್ಯಾಸಕರು ಒಬ್ಬರು ಬಂದು ನಾನು ಸರಿಪಡಿಸಿದ್ದನ್ನು ನೋಡಿ ಅದು ತಪ್ಪೆಂದು ಹೇಳಿ ಮತ್ತೆ ಶುಭಾಷಯ ಎಂದು ತಪ್ಪಾಗಿ ಬರೆಸಿದ್ದರು.ನಾನು ಅದನ್ನು ತಪ್ಪೆಂದಾಗ ವಿದ್ಯಾರ್ಥಿಗಳೆಲ್ಲ ( ಇವರುಗಳು ನನ್ನ ಸಹಪಾಠಗಳು ಕೂಡ ) ಒಂದಾಗಿ "ನಿಮಗೇನು ಗೊತ್ತು ? ನಮ್ಮ .. ಸರ್ ನಾವು ಮೊದಲು ಬರೆದಿದ್ದೇ ( ಶುಭಾಷಯ ಎಂಬುದನ್ನು) ಸರಿ ಎಂದಿದ್ದಾರೆ.ನಿಮ್ಮ ಮಾತು ಕೇಳಿ ನಾವು ಶುಭಾಶಯ ಎಂದು ಬದಲಾಯಿಸಿ ಸರ್ ಕೈಂದ ಬೈಗಳು ತಿನ್ನ ಬೇಕಾಯಿತು" ಎಂದು ನನ್ನನ್ನೇ ತರಾಟೆಗೆ ತೆಗೆದುಕೊಂಡರು. ಆಗ ನಾನು ಗ್ರಂಥಾಲಯಕ್ಕೆ ಹೋಗಿ ಕನ್ನಡ ಶಬ್ದ ಕೋಶ ತಂದು ತೋರಿಸಿ ,ಅವರ ತಪ್ಪನ್ನು ತಿಳಿಯಪಡಿಸಿ ಅದನ್ನು ತಿದ್ದಬೇಕೆಂದು ಕಾಲೇಜು ಗ್ರಂಥಾಲಯಕ್ಕೆ ಹೋದರೆ " ಈಗ ಕಾರ್ಯಕ್ರಮ ಇದೆ,ಪುಸ್ತಕ ಕೊಡಲಾಗುವುದಿಲ್ಲ " ಎಂಬ ನಿರ್ದಾಕ್ಷಿಣ್ಯವಾದ ಉತ್ತರ ಸಿಕ್ಕಿತು.
ಏನು ಮಾಡುವುದು ಗೊತ್ತಾಗಲಿಲ್ಲ.ಅಷ್ಟರಲ್ಲಿ ಸರ್ಕಾರಿ ಬಿಎಡ್ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ನಿವೃತ್ತಿ ಹೊಂದಿ ಅಲ್ಲಿ ಗೌರವ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದ ಸರ್   (ನಂಜುಂಡಪ್ಪ) ಬಂದರು.ಅವರಿಗೆ ವಿದ್ಯಾರ್ಥಿಗಳು ಶುಭಾಷಯ ಎಂದು ತಪ್ಪಾಗಿ ಬರೆದುದನ್ನು ತೋರಿಸಿ,ಅವರು ಅದನ್ನೇ ಸರಿ ಎಂದು ವಾದಿಸುತ್ತಿರುವ ಬಗ್ಗೆ ತಿಳಿಸಿದೆ‌.ಹಿರಿಯ ವಿದ್ವಾಂಸರಾಗಿದ್ದ ಅವರಿಗೆ ಶುಭಾಷಯ ಎಂಬುದು ತಪ್ಪು ಬಳಕೆ ಎಂದು ಗೊತ್ತಿತ್ತು.ಹಾಗಾಗಿ ಅಲ್ಲಿನ ವಿದ್ಯಾರ್ಥಿಗಳನ್ನು ಸ್ವಲ್ಪ ಜೋರು ಮಾಡಿ ಶುಭಾಶಯಗಳು ಎಂದು ಬರೆಸಿದರು.
ಬರೆದು ಮುಗಿಸುವಷ್ಟರಲ್ಲಿ ವೇದಿಕೆಗೆ ಅತಿಥಿಗಳು ಆಗಮಿಸಿದ್ದರು. ಅದಾಗಲೇ ತಪ್ಪನ್ನು ಸರಿ ಪಡಿಸಿ ಶುಭಾಶಯಗಳು ಎಂದು  ಸರಿಯಾದ ರೂಪವನ್ನು ಬರೆಸಿದ್ದ ಕಾರಣ ಕಾಲೇಜಿನ  ಮರ್ಯಾದೆ ಉಳಿಯಿತು ಜೊತೆಗೆ ನಮ್ಮದು ಕೂಡ.- ಡಾ.ಲಕ್ಷ್ಮೀ ಜಿ ಪ್ರಸಾದ, ಕನ್ನಡ ಉಪನ್ಯಾಸಕರು, ಸರ್ಕಾರಿ ಪದವಿ ಪೂರ್ವ ಕಾಲೇಜು, ನೆಲಮಂಗಲ