Sunday, 9 December 2018

ದೊಡ್ಡವರ ದಾರಿ : 62 ಒಳಿತನ್ನು ಎಲ್ಲೆಡೆಯಿಂದ ಸ್ವೀಕರಿಸುವ ಟಿಎನ್ ಸೀತಾರಾಮ್ © ಡಾ.ಲಕ್ಷ್ಮೀ ಜಿ ಪ್ರಸಾದ

ದೊಡ್ಡವರ ದಾರಿ 63 : ಒಳಿತನ್ನು ಎಲ್ಲೆಡೆಯಿಂದ ಸ್ವೀಕರಿಸುವ ಟಿಎನ್ ಸೀತಾರಾಮ್
ದೊಡ್ಡವರು ದೊಡ್ಡವರೆಂದು ಗುರುತಿಸಲ್ಪಡಲು ಕಾರಣ ಅವರಲ್ಲಿ ಇರುವ ದೊಡ್ಡ ಗುಣವೇ ಆಗಿರುತ್ತದೆ. ನನ್ನ ಸುತ್ತಮುತ್ತಲಿನ ಪರಿಚಯದ ಮಂದಿಯಲ್ಲಿ ಇಂತಹ ಒಂದು ವಿಶಿಷ್ಟ ಗುಣ ನನ್ನ ಗಮನಕ್ಕೆ ಬಂದರೆ ಅವರ ಬಗ್ಗೆ ಬರೆಯುವುದು ನನ್ನ ಹವ್ಯಾಸ.
ಸುಮಾರು ಒಂದು ತಿಂಗಳಿನಿಂದ  ಟಿಎನ್ ಸೀತಾರಾಮ್ ಬಗ್ಗೆ ಬರೆಯಬೇಕೆಂದು ಕೊಂಡಿರುವೆ.ಬರೆಯುವ ಮೊದಲು ಅವರಲ್ಲಿ ಒಮ್ಮೆ ಮಾತನಾಡಬೇಕೆಂದು ಕೊಂಡಿದ್ದೆ.
ತಿಂಗಳ ಮೊದಲು ಮಗಳು ಜಾನಕಿ ಫೇಸ್ ಬುಕ್ ಗ್ರೂಪಿನಲ್ಲಿ ಧಾರಾವಾಹಿಯ ಒಂದು ಪಾತ್ರದ ಬಗ್ಗೆ ಜನರು ತಪ್ಪಾಗಿ ಭಾವಿಸಿ ನಿಂದನೆ ರೂಪದ ಹೇಳಿಕೆಗಳನ್ನು ನೀಡುತ್ತಾ ಇದ್ದರು.ಆಗ ನಾನು ಅದು ಸರಿಯಲ್ಲ ಎಂದು ಹೇಳಿ ಆ ಪಾತ್ರದ ಬಗೆಗಿನ ತಪ್ಪು ಗ್ರಹಿಕೆಯನ್ನು ಹೋಗಲಾಡಿಸಲು ನನ್ನ ಯತ್ನ ವಾಗಿ ಒಂದು ಹೇಳಿಕೆ ಹಾಕಿದ್ದೆ.ಆಗ ಸೀತಾರಾಮ್ ಅವರು ಮೆಸೆಂಜರ್ ನಲ್ಲಿ "ನಿಮ್ಮ ಗ್ರಹಿಕೆ ಸರಿ ಇದೆ,ಪ್ರೌಢವಾಗಿ ವಿಶ್ಲೇಷಣೆ ಮಾಡಿ ಬರೆದಿರುವಿರಿ" ಎಂದು ಮೆಸೇಜ್ ಮಾಡಿದರು. ಅರೇ..ಇವರು ನನ್ನ   ಬರಹಗಳನ್ನು ಓದುತ್ತಾರಾ ? ಎಂದು  ಆಶ್ಚರ್ಯ ಆಗಿತ್ತು.
ನಂತರ ಒಂದು ದಿನ  ದಾರಾವಾಹಿಯಲ್ಲಿ "ಜಾನಕಿಗೆ ನಿರಂಜನ ಸತ್ಯವನ್ನು ಮರುದಿನ  ಊಟದ ಸಮಯದಲ್ಲಿ ಹೇಳುತ್ತೇನೆ" ಎಂದಾಗ ಗ್ರೂಪಿನಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಾ ಇತ್ತು. ನಾನು ಆಗ ಈಗಾಗಲೇ ಜಾನಕಿಗೆ ಆನಂದ,ತಾಯಿ,ನಿರಂಜನ ಮೋಸ ಮಾಡಿದ್ದಾರೆಂದು ತಿಳಿದು ಆಘಾತ ಆಗಿದೆ.ಆನಂದ ‌ಮೋಸ ಮಾಡಿದನೆಂದು ತಿಳಿದಾಗ ಜಾನಕಿ ಒಣ ವೇದಾಂತವನ್ನು ಹೇಳುತ್ತಾ ಇಷ್ಟವಾಗದ್ದನ್ನು ಮತ್ತೆ ಮತ್ತೆ ಹಾಕಿಸಿಕೊಂಡು ತಿನ್ನುತ್ತಾ ಹೇಗೇಗೋ ವರ್ತಿಸಿದ್ದಾಳೆ.ನಂತರ ನಿರಂಜನ ಮೋಸ ಮಾಡಿದನೆಂದು ತಿಳಿದಾಗ ತೀರಾ ಆಘಾತ ಆಯಿತು. ನಂತರ ತಾಯಿ ಸತ್ಯವನ್ನು ಮುಚ್ಚಿಟ್ಟ ವಿಚಾರ ತಿಳಿದಾಗ ತಾಯಿಯಲ್ಲಿ ಮಾತು ಬಿಡುತ್ತಾಳೆ.ಈಗ ತಂದೆಯೂ ದ್ರೋಹ ಮಾಡಿದ್ದಾನೆಂದು ತಿಳಿದರೆ ಅದನ್ನು ಸ್ವೀಕರಿಸಲು ಸಹಜವಾಗಿ  ಸಾಧ್ಯವಾಗಲಾರದು.ಜಾನಕಿಯ ಪರಿಸ್ಥಿತಿಯಲ್ಲಿ ಯಾರೇ ಇದ್ದರೂ ಮಾನಸಿಕ ಸಮತೋಲನ ಕಳೆದುಹೋಗಬಹುದು ಹಾಗಾಗಿ ಈಗಲೇ ಸತ್ಯ ತಿಳಿಯುವುದು ಸರಿಯಲ್ಲ ಎಂದು ಬರೆದಿದ್ದೆ.
ಆಗ ಸೀತಾರಾಮ್ ಅವರು ನೀವು ಹೇಳಿದ್ದು ಸರಿ ಇದೆ ಈಗಾಗಲೇ ರೆಕಾರ್ಡಿಂಗ್ ಆಗಿ ಚಾನಲ್ ಗೆ ಕಳುಹಿಸಿ ಆಗಿದೆ . ಸ್ವಲ್ಪ ಮೊದಲೇ ಗೊತ್ತಾಗಿದ್ದರೆ ಕಥೆಯನ್ನು ಸ್ವಲ್ಪ ಬದಲಾಯಿಸುತ್ತಾ ಇದ್ದೆ" ಎಂದು ತಿಳಿಸಿ "ನಿರಂಜನ ಸತ್ಯವನ್ನು ಹೇಳುವ ಕಥಾಭಾಗ ಯಾವ ದಿನಾಂಕ ದಂದು ಪ್ರಸಾರವಾಗುತ್ತದೆ" ಎಂದು ತಿಳಿಸಿದ್ದರು.ನನ್ನಂತಹ ಸಾಮಾನ್ಯರ ಅಭಿಪ್ರಾಯವನ್ನು ಕೂಡ ಸಕಾರಾತ್ಮಕವಾಗಿ ಸ್ವೀಕರಿಸುವ ಅವರ  ಹಿರಿತನದ ಅರಿವು ನನಗಾಗ ಆಯಿತು.
ಆಗ ಅವರಲ್ಲಿ ಮಾತನಾಡುತ್ತಾ( ಮೆಸೆಂಜರ್ ನ ಮೂಲಕ ) ಇರುವಾಗ ತಪ್ಪಿ ಕೈತಾಗಿ ಮೆಸೆಂಜರ್ ಕಾಲರ್ ಮೂಲಕ ಅವರಿಗೆ ವೀಡಿಯೋ ಕರೆ ಹೋಯಿತು. ಅದು ತನಕ ಮೆಸೆಂಜರ್ ವೀಡಿಯೋ ಕಾಲರ್ ಅನ್ನು ಒಮ್ಮೆಯೂ ಬಳಕೆ ಮಾಡದ ನನಗೆ ಕರೆ ಹೋಗುತ್ತಾ ಇರುವುದು ಗೊತ್ತಾದರೂ ಡಿಸ್ ಕನೆಕ್ಟ್ ಮಾಡುವುದು ಹೇಗೆಂದು ತಕ್ಷಣಕ್ಕೆ ಗೊತ್ತಾಗಲಿಲ್ಲ. ಗಾಭರಿಯಾಗಿ ಹತ್ತಿರದಲ್ಲೇ ಇದ್ದ ಮಗನನ್ನು ಕರೆದು" ಮಾರಾಯ ಇಲ್ಲಿ ಸೀತಾರಾಮ್ ಗೆ ಕಾಲ್ ಹೋಗ್ತಾ ಉಂಟು ಬೇಗ ಕಟ್ ಮಾಡು " ಎಂದು ಹೇಳಿ ಡಿಸ್ ಕನೆಕ್ಟ್ ಮಾಡುವಷ್ಟರಲ್ಲಿ ಏಳೆಂಟು ಭಾರಿ ರಿಂಗಾಗಿತ್ತು."ಸೀತಾರಾಮ್ ಶಾರ್ಟ್ ಟೆಂಪರ್ಡ್ ಅಂತ ಯಾರೋ ಹೇಳುದು ಕೇಳಿದ್ದೆ.ಈಗ ನನಗೆ ಎರಡು ಬೈದರೆ ಎಂತ ಮಾಡುದು " ಎಂದು ಆತಂಕ ಆಯಿತು ಕೂಡ! ತಕ್ಷಣವೇ ತಪ್ಪಿ ಕರೆ ಹೋಗಿದೆ ಎಂದು ತಿಳಿಸಿ ಕ್ಷಮೆ ಕೋರಿದೆ.
ಅಷ್ಟರಲ್ಲಿ ಅವರು ತಮ್ಮ ಮೊಬೈಲ್ ಸಂಖ್ಯೆಯನ್ನು ಮೆಸೇಜ್ ಮಾಡಿದರು."ನಾನೇನೋ‌ ಮಾತಾಡಲು ಇಚ್ಛಿಸಿರುವೆ" ಎಂದು ಭಾವಿಸಿ ಅವರು ತಮ್ಮ ಮೊಬೈಲ್ ಸಂಖ್ಯೆ ನೀಡಿದ್ದರು.  ಅವರ ಸಜ್ಜನಿಕೆಗೆ ತಲೆಬಾಗಿತು.
ನನಗೊಮ್ಮೆ ಅವರಲ್ಲಿ ಮಾತನಾಡಬೇಕಿಂದಿದ್ದರೂ ಆ ದಿನ ಮಾತನಾಡಲು ವಿಷಯವಿರಲಿಲ್ಲ ಹಾಗಾಗಿ ಕರೆ ಮಾಡಿರಲಿಲ್ಲ.
ಇದಾಗಿ ಕೆಲ ದಿನಗಳಲ್ಲಿ ಧಾರಾವಾಹಿಯ ಮುಖ್ಯ ಪಾತ್ರವೊಂದರ ಮೂಲಕ  ಮತ್ತಷ್ಟು ಋಣಾತ್ಮಕ ಪರಿಣಾಮ ಬೀರುವ ಕಥಾನಕ ಬಂತು.ಆಗ ನಾನು ನಾನು ಸೀತಾರಾಮ್ ಅವರಲ್ಲಿ ಆ ಪಾತ್ರ ಅದೇ ರೀತಿ ಸಾಗಿದರೆ ಉಂಟಾಗುವ ದುಷ್ಪರಿಣಾಮದ ಬಗ್ಗೆ ತಿಳಿಸಿ ,"ಆ ಪಾತ್ರದ ಚಿತ್ರಣದಲ್ಲಿ ಬದಲಾವಣೆ ಮಾಡಲು ಸಾಧ್ಯವೇ ?"ಎಂದು ಮನವಿ ಮಾಡಿದೆ.ಮತ್ತೆ ಒಳಗಿಂದೊಳಗೆ ಭಯ ಇತ್ತು.ನಿಮಗೆ ಯಾಕೆ ಅಧಿಕ ಪ್ರಸಂಗ ಅಂತ ಬೈದರೆ ಎಂದು,😀
ಆದರೆ ದೊಡ್ಡವರು ಒಳ್ಳೆಯ ವಿಚಾರಗಳನ್ನು ಎಲ್ಲೆಡೆಯಿಂದ ಸ್ವೀಕರಿಸುತ್ತಾರೆ ಎಂಬುದಕ್ಕೆ ಸೀತಾರಾಮ್ ಅವರು ಪ್ರತ್ಯಕ್ಷ ನಿದರ್ಶವಾದರು. ನನ್ನ ಅಭಿಪ್ರಾಯವನ್ನು ಒಪ್ಪಿ "ಹೇಗೆ ಬದಲಾವಣೆ ಮಾಡಬಹುದು?" ಎಂದು ಕೇಳಿದರು.ಆಗ ನಾನು ಅವರಿಗೆ ಕರೆ ಮಾಡಿ ಮುಕ್ತವಾಗಿ ಮಾತನಾಡಿದೆ.ಯಾವ ರೀತಿಯಲ್ಲಿ ಬದಲಾವಣೆ ಮಾಡಬಹುದು ಎಂದು ನನ್ನ ಅಭಿಪ್ರಾಯವನ್ನು ತಿಳಿಸಿದೆ.ತುಂಬಾ ತಾಳ್ಮೆಯಿಂದ ನನ್ನಂತಹ ಸಾಮಾನ್ಯಳ ಅಭಿಪ್ರಾಯ ವನ್ನು ಆಲಿಸಿದರು.ತುಂಬಾ ಚೆನ್ನಾಗಿ ಮಾತನಾಡಿದರು.ನಂತರ ಈ ಬಗ್ಗೆ ನಮ್ಮ ತಂಡದ ಜೊತೆಯಲ್ಲಿ ಚರ್ಚಿಸುತ್ತೇನೆ ಎಂದು ಹೇಳಿದರು ‌.
ನಂತರ ಎರಡು ಮೂರು ದಿನ ಕಳೆದಾಗ "ನೀವು ಹೇಳಿದ ಕಥೆ ..ದಿನದಂದು ಬರುತ್ತದೆ" ಎಂದು ತಿಳಿಸಿದರು.
ಹೌದು,ಅವರು ಆ ಪಾತ್ರದಲ್ಲಿ  ನಾನು ಅಭಿಪ್ರಾಯಿಸಿದ ರೀತಿಯಲ್ಲಿ ಬದಲಾವಣೆ ಮಾಡಿದ್ದು ಪ್ರಸಾರವಾಯಿತು. ಅದನ್ನು ತುಂಬಾ ಸಹಜವಾಗಿ ತಂದಿದ್ದರು.  ಆಗ ಆ ಪಾತ್ರದ ಬಗ್ಗೆ ಅನೇಕರು ಒಳ್ಳೆಯ ರೀತಿಯಲ್ಲಿ ಹೇಳಿಕೆ,ಕಮೆಂಟ್ ಹಾಕಿದರು ಕೂಡ.
"ತಾನು ಮಾಡಿದ್ದೇ ಸರಿ,ಅದನ್ನು ಯಾರೂ ಪ್ರಶ್ನೆ ಮಾಡಬಾರದು ಎಂಬ ಮನೋಭಾವ ಹೆಚ್ಚಿನವರಲ್ಲಿ ಇರುತ್ತದೆ.ಇಂತಹವರ  ನಡುವೆ ಟಿಎನ್ ಸೀತಾರಾಮ್ ತುಂಬಾ ಭಿನ್ನವಾಗಿ ನಿಲ್ಲುತ್ತಾರೆ.ಅವರೇಕೆ ದೊಡ್ಡವರು ಎಂಬುದು  'ಒಳ್ಳೆಯದನ್ನು ಎಲ್ಲೆಡೆಯಿಂದ ಸ್ವೀಕರಿಸುವ' ಅವರ  ದೊಡ್ಡ ಗುಣದಿಂದ ತಿಳಿಯುತ್ತದೆ. ಒಂದೆರಡು ವರ್ಷಗಳ ಹಿಂದೆ ಒಮ್ಮೆ ಯಾವುದೋ ಕಾರ್ಯಕ್ರಮದಲ್ಲಿ ಅವರ ಪಕ್ಕವೇ ಕುಳಿತಿದ್ದೆ.ಮಾಯಾಮೃಗ ಧಾರಾವಾಹಿ ನೋಡುತ್ತಿದ್ದ ಸ್ನೇಹಿತರು ಸೀತಾರಾಮ್ ಬಗ್ಗೆ ಹೇಳುತ್ತಾ ಇದ್ದರು.ನಾನು ಕಾಲೇಜು ಮುಗಿಸಿ ಬರುವಷ್ಟರಲ್ಲಿ ಅದು ಮುಗಿಯುತ್ತಿದ್ದ ಕಾರಣ ನಾನು ನೋಡಿರಲಿಲ್ಲ.ನಂತರದ ಮನ್ವಂತರ,ಮುಕ್ತ, ಮುಕ್ತ ಧಾರಾವಾಹಿಗಳನ್ನು ನೋಡಿ ನಾನು ಸೀತಾರಾಮ್ ಅವರ ಫ್ಯಾನ್ ಆಗಿದ್ದೆ.ಅವರನ್ನು ಒಮ್ಮೆ ಭೇಟಿಯಾಗಿ ಮಾತನಾಡಬೇಕೆಂದು ಕೂಡ ಅಂದುಕೊಂಡಿದ್ದೆ .ಆದರೂ ಅವರ ಪಕ್ಕದಲ್ಲೇ ಕುಳಿತಿದ್ದರೂ  ಹಿಂಜರಿಕೆಯಿಂದ ಮಾತನಾಡಿರಲಿಲ್ಲ!  ( ನಾನು ಒಂಚೂರು ಹಾಗೆಯೇ ..ಮಂಗಳೂರಿನಲ್ಲಿ ಇದ್ದಾಗಲೇ  ಡಾ.ನಾ ಸೋಮೇಶ್ವರ, ಡಾ.ಚಂದ್ರಶೇಖರ ಕಂಬಾರ,ಹಂಪನಾ ಮೊದಲಾದವರನ್ನು ಭೆಟಿಯಾಗಿ ಮಾತನಾಡಬೇಕೆಂದು ಮನಸಿನಲ್ಲೇ ಆಶಿಸುತ್ತಾ ಇದ್ದೆ.ಆದರೆ ಬೆಂಗಳೂರಿನಲ್ಲಿ ಚಂದ್ರ ಶೇಖರ ಕಂಬಾರರ ಮನೆ ಹತ್ತಿರವೇ ಇದ್ದಾಗ ಕೂಡ ಹೋಗಿ ಮಾತನಾಡಲಿಲ್ಲ.ಒಂದೆರಡು ಭಾರಿ ಮಾತನಾಡಲೆಂದೇ ಅವರ ಮನೆ ಗೇಟ್ ತನಕ ಹೋಗಿ ಹಿಂಜರಿಕೆ ಕಾಡಿ ಹಿಂದೆ ಬಂದಿದ್ದೆ.ಡಾ.ನಾ ಸೋಮೇಶ್ವರ ಅವರನ್ನು ಅನೇಕ ಬಾರಿ ಕಂಡಿದ್ದರೂ ಮಾತನಾಡಲಯ ಹಿಂದೇಟು ಹಾಕಿರುವೆ.) ಆದರೆ ಸೀತಾರಾಮ್ ಅವರನ್ನು ಮಾತ್ರ ಖಂಡಿತಾ ಮುಖತಃ ಭೇಟಿಯಾಗಿ ಒಂದು ಸೆಲ್ಪಿ ಹಿಡಿದುಕೊಂಡು ಬರಬೇಕೆಂದು ಕೊಂಡಿರುವೆ .

No comments:

Post a Comment