Saturday, 8 August 2020

ಕಾಡಿದ ಕೊಕ್ಕಳಿಕೆ

ಕಾಡಿದ ಕೊಕ್ಕಳಿಕೆ..ಅವರ ಮಾತಿನಿಂದ ದೂರವಾಗಿತ್ತು‌ ನಾನು ಚಿಕ್ಕಂದಿನಿಂದಲೇ ನೇರವಾದ ಮಾತಿನವಳು..ಅದರ ಮಾತು ಹೇಳಿರೆ ಖಡಕ್ ಪೆಟ್ಟೊಂದು ತುಂಡೆರಡು ಅಂತ ನನ್ನ ಅಜ್ಜ ಬೇರೆಯವರಲ್ಲಿ ನನ್ನ ಬಗ್ಗೆ ಬಹಳ ಹೆಮ್ಮೆಯಿಂದ ಹೇಳುತ್ತಿದ್ದರು.ಆಗ ಹಾಗೆಂದರೇನು ? ಯಾಕೆ ಹಾಗೆ ಹೇಳ್ತಾರೆ..ನನ್ನ ಯಾವ ಮಾತಿನ ಬಗ್ಗೆ ಹಾಗೆ ಹೇಳುತ್ತಿದ್ದರು ? ನನಗೂ ಗೊತ್ತಿಲ್ಲ‌. ಇದನ್ನು ಹೊರ ಜಗತ್ತು ಕೂಡ ಗುರುತಿಸಿತ್ತು ಎಂದು ಗೊತ್ತಾದದ್ದು ನನಗೆ ಮದುವೆ ನಿಶ್ಚಿತವಾದಾಗ. ನನ್ನ ಅತ್ತೆಯವರ ತಂಗಿ ಮನೆ ಕೊಡಂಗೆ,ನನ್ನ ತಂದೆ ಮನೆ ಹತ್ತಿರ,ತಂದೆಯವ ಶಿಷ್ಯ ವರ್ಗದ ಮನೆ ಅದು,ನಮ್ಮ ಮನೆಗಳ ನಡುವೆ ತುಂಬಾ ಸ್ನೇಹ ಆತ್ಮೀಯತೆ ಇತ್ತು ಅವರು ನನ್ನ ಬಗ್ಗೆ ಹುಡುಗನ( ಪ್ರಸಾದ್) ಮನೆಯವರಲ್ಲಿ ಹುಡುಗಿ ಯಾವ ವಿಷಯದಲ್ಲೂ ತೆಗೆದು ಹಾಕುವಂತಿಲ್ಲ ಬಹಳ ಜಾಣೆ? ( ಈ ಬಗ್ಗೆ ನನಗೆ ತುಂಬಾ ಸಂಶಯ 😀) ಎಂತಹ ಪರಿಸ್ಥಿತಿ ಬಂದರೂ ನಿಬಾಯಿಸಿಕೊಂಡು ಹೋಗುವ ಸಾಮರ್ಥ್ಯ ಇರುವವಳು.ಆದರೆ ಮಾತು ಮಾತ್ರ ಖಡಕ್,ಪೆಟ್ಟೊಂದು ತುಂಡೆರಡು ಅಂತ ಅಂದಿದ್ದರಂತೆ.ಈ ವಿಚಾರ ನನಗೆ ಗೊತ್ತಾದಾಗ ಕೂಡ ಯಾಕೆ ಹೇಗೆ ಹೇಳ್ತಾರೆ ಎಂದು ನನಗೆ ಗೊತ್ತಾಗಿರಲಿಲ್ಲ. ನಾನು ಮಾತು ಬೇಗ ಕಲಿತಿದ್ದೆನಂತೆ. ಮತ್ತು ನನ್ನ ಮಾತು ಚಿಕ್ಕ ಮಗುವಿರುವಾಗಲೇ ಸ್ಪಷ್ಟ, ಕೊಂಞೆ ಇರಲಿಲ್ಲ ಎಂದು ಅಮ್ಮ ಹೇಳಿದ್ದರು ಒಮ್ಮೆ ಶಾಲಾ,ಕಾಲೇಜುಗಳಲ್ಲಿ ಭಾಷಣ ನಾಟಕ ಅದು ಇದು ಎಂದು ಭಾಗವಹಿಸಿ ಅಗೊಂದು ಈಗೊಂದು ಬಹುಮಾನ ಸಿಗುತ್ತಾ ಇತ್ತು ಕೂಡ. ನನಗೆಲ್ಲೂ ಮಾತನಾಡಲು ಕಷ್ಟವಾದದ್ದು ನೆನಪಿಲ್ಲ.ನಾನು ಮಾತಿನ ನಿರರ್ಗಳತೆ ಕಾರಣಕ್ಕಾಗಿ ಕಾರ್ಯಕ್ರಮ ನಿರೂಪಣೆಯ ಜವಾಬ್ದಾರಿ ನನಗೆ ಸಿಗುತ್ತಾ ಇತ್ತು‌ ನನ್ನ ತಂದೆ ತಾಯಿಯರು ಚೆಂದುಳ್ಳೆ ಚೆಲುವ ಚೆಲುವತಿಯರಾದ ಕಾರಣ ನಾನು ಅವರಷ್ಟು ಚಂದ ಅಲ್ಲದಿದ್ದರೂ ಸುಮಾರಾಗಿ ಇದ್ದೆ.ಅದು ನನ್ನ ತಲೆಯಲ್ಲಿ ಸ್ವಲ್ಪ ಇತ್ತು. ಹಾಗಾಗಿ ಇರುವುದರಲ್ಲಿ ಚಂದದ ಅಂಗಿ ಹಾಕಿಕೊಂಡು ನಿರೂಪಣೆ ಹಾಗೂ ಇನ್ನಿತರ ಸಂದರ್ಭದಲ್ಲಿ ವೇದಿಕೆ ಏರಿ ಸ್ವಲ್ಪ ಹೆಮ್ಮೆಯ ನಗು ಬೀರುತ್ತಿದ್ದುದು ಸತ್ಯ. ಪಿಯುಸಿ ಮತ್ತು ಡಿಗ್ರಿಯಲ್ಲಿ ನಾನು ವಿಜ್ಞಾನ ತಗೊಂಡು ಇಂಗ್ಲೀಷ್ ನಲ್ಲಿ ಬರೆಯಬೆಕಾದ ಕಾರಣ ನಾನು ಕಲಿಕೆಯಲ್ಲಿ ಸ್ವಲ್ಪ ಹಿಂದುಳಿದಿದ್ದೆ,ಮರ್ಯಾದೆಗಾಗಿ ಬಾಯಿ ಪಾಠ ಮಾಡಿ ಪಾಸಾಗಿದ್ದೆ. ನಂತರ ಎಂಎ ಓದುವಾಗ ಮತ್ತೆ ಕಲಿಕೆಯಲ್ಲಿ ಮುಂದೆ ಬಂದೆ. ಈ ಎಲ್ಲ ದಿನಗಳಲ್ಲಿ ಎಂದೂ ನನಗೆ ಯಾರಲ್ಲಿ ಮಾತನಾಡುವಾಗ ಕೂಡ ಮಾತಿನಲ್ಲಿ ತೊದಲುವಿಕೆ,ಕೊಕ್ಕಳಿಕೆ ಇರಲಿಲ್ಲ. ಸಂಸ್ಕೃತ ಎಂಎಯಲ್ಲಿ ಮೊದಲ ರ‍್ಯಾಂಕ್ ತೆಗೆದೆ.ಫಲಿತಾಂಶ ಬರುವ ಮೊದಲೇ ಶ್ರೀರಾಮ ಪ್ರಾಥಮಿಕ ಶಾಲೆಯಲ್ಲಿ ಸಂಸ್ಕೃತ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿದೆ. ನಂತರ ಅಲೋಶಿಯಸ್ ಕಾಲೇಜಿನಲ್ಲಿ ತಾತ್ಕಾಲಿಕವಾಗಿ ಸಂಸ್ಕೃತ ಉಪನ್ಯಾಸಕಿಯಾಗಿ ಕೆಲಸ ಸಿಕ್ತು. ಆದರೆ 1999 ರಲ್ಲಿ ಯುನಿಪಾರ್ಮ್ ವರ್ಕಲೊಡ್ ನಿಯಮ ಜಾರಿಯಾದಾಗ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಸೀನಿಯರ್ ಪ್ರೊಫೆಸರ್ ಗಳು ಹನ್ನೆರಡು ಅವಧಿಯ ಬದಲು ಹದಿನಾರು ಅವಧಿ ಕೆಲಸ ಮಾಡಬೇಕಾಗಿ ಬಂತು. ಅಗ ನನ್ನಂತಹ ತಾತ್ಕಾಲಿಕ ನೆಲೆಯಲ್ಲಿ ಅರೆಕಾಲಿಕವಾಗಿ ಕೆಲಸ ಮಾಡುತ್ತಿದ್ದ ಅನೇಕರು ವರ್ಕ್ ಲೋಡ್ ಇಲ್ಲದೆ ಕೆಲಸ ಕಳೆದುಕೊಳ್ಳಬೇಕಾಗಿ ಬಂತು. ಅದೇ ಸಮಯದಲ್ಲಿ ಮಂಗಳೂರಿನ ಚಿನ್ಮಯ ಹೈಸ್ಕೂಲ್ ನಲ್ಲಿ ಸಂಸ್ಕೃತ ಶಿಕ್ಷಕಿ ಹುದ್ದೆಗೆ ಅರ್ಜಿ ಆಹ್ವಾನಿಸಿದರು. ನಾನು ಅರ್ಜಿ ಸಲ್ಲಿಸಿ ಸಂದರ್ಶನಕ್ಕೆ ಆಯ್ಕೆ ಆಗಿ ಸಂಸ್ಕೃತ ಶಿಕ್ಷಕಿಯಾಗಿ ಅಲ್ಲಿ ಕೆಲಸಕ್ಕೆ ಸೇರಿದೆ. ಜೊತೆಗೆ ಸಂತ ಅಲೋಶಿಯಸ್ ಸಂದ್ಯಶಾಲೆಯಲ್ಲಿ ವಿಜ್ಞಾನ ಶಿಕ್ಷಕಿಯಾಗಿ ಕೆಲಸ ಸಿಕ್ಕಿತ್ತು. ಈ ಸಮಯದಲ್ಲಿ ಸಂಸ್ಕೃತೋತ್ಸವ ಬಂತು. ಚಿನ್ಮಯ ಶಾಲೆಯ ಮುಖ್ಯೋಪಾಧ್ಯಾಯಿನಿ ಸಂಸ್ಕೃತ ಅಭಿಮಾನಿಯಾಗಿದ್ದು ಸಂಸ್ಕೃತೋತ್ಸವದ ನಿಮಿತ್ತ ಏರ್ಪಡಿಸಿದ್ದ ಸಾಂಸ್ಕೃತಿಕ ಸ್ಪರ್ಧೆಗಳನ್ನು ನಮ್ಮ ಚಿನ್ಮಯ ಶಾಲೆಯಲ್ಲಿ ನಡೆಸಲು ಅನುಮತಿ ನೀಡಿದರು. ಸ್ಪರ್ಧೆಗಳು ಒಂದು ಅದಿತ್ಯವಾರ ನಡೆದವು.ನನಗೆ ಮುಖ್ಯೋಪಾಧ್ಯಾಯಿನಿ ಜವಾಬ್ದಾರಿ ನೀಡಿದ್ದರು. ಈ ಸಮಯದಲ್ಲಿ ಆಗ ಸಂಸ್ಕೃತ ಸಂಘದ ಅಧ್ಯಕ್ಷರಾಗಿದ್ದ ವಾಸುದೇವ ರಾವ್ ( ಎಂದು ನೆನಪು) ಡಾ.ಜಿ ಎನ್ ಭಟ್,ಡಾ.ಶಿಕಾರಿ ಪುರ ಕೃಷ್ಣ ಮೂರ್ತಿ ಮೊದಲಾದವರು ನಮ್ಮ ಶಾಲೆಗೆ ಬಂದಿದ್ದರು.ಆಗ ವಾಸುದೇವ ರಾವ್ (?) ನನ್ನಲ್ಲಿ ಯಾವುದೋ ವಿಚಾರ ಕೇಳಿದರು. ನನಗೆ ಗೊತ್ತಿರುವ ವಿಚಾರವೇ..ಆದರೆ ನನಗೆ ಸ್ಪಷ್ಟವಾಗಿ ಮಾತನಾಡಲು ಸಾಧ್ಯವಾಗಲಿಲ್ಲ..ಮೊದಲ ಬಾರಿಗೆ ತೀರಾ ಪದಗಳು ಸಿಗದೆ ಒದ್ದಾಡಿದೆ..ಕೊನೆಗೂ ನಾನು ಏನು ಹೇಳಲು ಹೊರಟಿದ್ದೆ ಎಂದವರಿಗೆ ಅರ್ಥವಾಗಲಿಲ್ಲ ಕಾಣಬೇಕು.ಆಗ ಅವರು ಯಾರೊ ಒಂದು ವಿಜ್ಞಾನಿ/ ಪ್ರೊಫೆಸರ್ ಉದಾಹರಣೆ ಕೊಟ್ಟು ಅವರು ಹೀಗೆ ಮಾತಾಡುತ್ತಾರೆ ( ಏನೇನೋ ? ) ಎಂದು ಹೇಳಿದರು. ಆ ದಿನ ಮನೆಗೆ ಬಂದು ಅಲೋಚಿಸಿದೆ..ಯಾಕೆ ಹೀಗಾಯ್ತು..ಎಂದೂ ನನಗೆ ಉಗ್ಗಳಿಗೆ/ ಕೊಕ್ಕಳಿಗೆ ,ತೊದಲುವಿಕೆ ಇರಲಿಲ್ಲವಲ್ಲ ಎಂದು.. ಅಷ್ಟೇ ಆ ಬಗ್ಗೆ ಮತ್ತೆ ತಲೆಕೆಡಿಸಿಕೊಳ್ಳಲಿಲ್ಲ. ಆ ವರ್ಷ ಸಂಸ್ಕೃತೋತ್ಸವದ ನಿರೂಪಣೆ ನನಗೆ ನೀಡಿದರು.ನಾನು ಡಾ.ಜಿ ಎನ್ ಭಟ್ ಅವರ ವಿದ್ಯಾರ್ಥಿನಿ ಅಗಿದ್ದು ಅವರಿಗೆ ನಾನು ಒಳ್ಳೆಯ ರೀತಿಯಲ್ಲಿ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದ ಬಗ್ಗೆ ಗೊತ್ತಿದ್ದು ನಂಬಿಕೆ ಮೇಲೆ ನನಗೆ ಜವಾಬ್ದಾರಿ ನೀಡಿದ್ದರು ಅ ವರ್ಷ ಸಂಸ್ಕೃತ ಸಂಘದ ರಜತಮಹೋತ್ಸವ ಅಗಿದ್ದು ತುಂಬಾ ಜನ ಕೂಡ ಬಂದಿದ್ದರು. ಓಹ್.. ನಾನು ಸಾಮಾನ್ಯವಾಗಿ ಬರೆದು ನಿರೂಪಣೆ ಮಾಡುವುದಿಲ್ಲ, ನೇರವಾಗಿ ಮಾಡುವ ಕ್ರಮ..ಆ ಬಾರಿ ಮುಂಜಾಗ್ರತಾ ಕ್ರಮವಾಗಿ ಬರೆದು ತಯಾರಾಗಿದ್ದೆ.ದೊಡ್ಡ ಕಾರ್ಯಕ್ರಮ ,ಸಂಸ್ಕೃತ ಭಾಷೆಯಲ್ಲಿ ತಪ್ಪು ಆಗಬಾರದು ಎಂಬ ಕಾರಣಕ್ಕಾಗಿ ಬಹುಶಃ ನನ್ನ ಜೀವನದಲ್ಲಿ ಅತ್ಯಂತ ಕಳಪೆಯಾಗಿ ತೊದಲಿಕೊಂಡು ಏನೇನೋ ಒದರಿ..ತಪ್ಪು ತಪ್ಪಾಗಿ ನಿರೂಪಣೆ ಮಾಡಿದ್ದು ಅದೇ ಮೊದಲು ಮತ್ತೆ ಕೊನೆ( ಇನ್ನಾಗಲಾರದು ಅಂತಹ ತಪ್ಪು ಎಮಬ ನಂಬಿಕೆಯಿಂದ) ಬರೆದು ಇರುವುದನ್ನು ಕೂಡ ನೆಟ್ಟಗೆ ಓದಲಾಗಲಿಲ್ಲ.. ಅಂತೂ ಹೇಗೋ ಮುಗಿಯಿತು. ಆ ದಿನ ಮತ್ತೆ ತಲೆಕೆಡಿಸಿಕೊಂಡೆ ..ಯಾಕೆ ಹೀಗಾಯ್ತು ಎಂದು.. ಈಗ ಶುರುವಾದ ಸಮಸ್ಯೆ ನನಗೆ ಬೇರೆ ಸಮಯದಲ್ಲಿ ಕೂಡ ಕಾಡಲಾರಂಭಿಸಿತು.. ಮಾತನಾಡುವಾಗ ಬೇಕಾದ ಪದಗಳು ಬಾಯಿಗೆ ಬಾರದೆ ಒದ್ದಾಟ ಅಗುದು,ತೊದಲುವಿಕೆ,ಕೊಕ್ಕಳಿಕೆ..ಈ ಮೂರೂ ಕೂಡ ಮಕ್ಕಳಿಗೆ ಪಾಠ ಮಾಡುವಾಗ,ಸಹೋದ್ಯೋಗಿಗಳಲ್ಲಿ ಮಾತನಾಡುವಾಗ ಇರುತ್ತಿರಲಿಲ್ಲ. ಬೇರೆಡೆ ಮಾತನಾಡುವಾಗ ಈ ಸಮಸ್ಯೆ ‌...ಆದರೂ ಯಾಕೆಂದು ಗೊತ್ತಾಗಲಿಲ್ಲ... ಆದರೆ ಈ ಸಮಸ್ಯೆ ಯಿಂದ ಹೊರಗೆ ಬರಬೇಕು ಎಂದು ಸದಾ ಯತ್ನ ಮಾಡುತ್ತಿದ್ದೆ. ಎರಡು ಮೂರು ವರ್ಷ ಈ ಸಮಸ್ಯೆ ಮುಂದುವರಿಯಿತು. ಈ ಸಮಯದಲ್ಲಿ ನಾನು ಬಜಾಜ್ ಅಲಾಯನ್ಸ್ ಇನ್ಷೂರೆನ್ಸ್ ಕಂಪೆನಿಯಲ್ಲಿ ಏಜೆಂಟ್ ಆಗಿ ಸೇರಿಕೊಂಡೆ‌ ಆಗ ಕಂಪೆನಿ ಕಡೆಯಿಂದ ನಮಗೆ ಮಾತಿನ ಕಲೆ ಬಗ್ಗೆ ತರಬೇತಿ ಕಾರ್ಯಾಗಾರ ಇತ್ತು‌ ಅಲ್ಲಿ ನನಗೆ ಮಾತಿನ ಸಮಸ್ಯೆ ಆಗಲಿಲ್ಲ. ನಂತರ ಪ್ರೀ ಸಮಯದಲ್ಲಿ ಅಲ್ಲಿಗೆ ಬಂದ ತರಬೇತು ದಾರರಲ್ಲಿ ನಾನು ನನ್ನ ಮಾತಿನ ಸಮಸ್ಯೆ ಬಗ್ಗೆ ಹೇಳಿದೆಆಗ ನನಗೆ ಮಾತಿನ ಸಮಸ್ಯೆ ಕಾಡಿತು‌.(ಅವರ ಹೆಸರು ಮರೆತು ಹೋಗಿದೆ ಈಗ ) ಅವರು ಬಹಳ ಸಹೃದಯತೆಯಿಂದ ,ತಾಳ್ಮೆಯಿಂದ ನನ್ನ ಮಾತುಗಳನ್ನು ಕೇಳಿಸಿಕೊಂಡರು. ಸಮಸ್ಯೆಯ ಮೂಲದ ಬಗ್ಗೆ ಅರ್ಥ ಮಾಡಿಕೊಂಡರು. "ಲಕ್ಷ್ಮೀ ನಿಮಗೆ ಏನೂ ಸಮಸ್ಯೆ ಇಲ್ಲ..ಜಸ್ಟ್ ನಿಮಗೆ ಕೀಳರಿಮೆ ಬಾಧಿಸುತ್ತಿದೆ ಅಷ್ಟೇ, ನಿಮ್ಮ ಬಗ್ಗೆ ಬೇರೆಯವರ ಜೊತೆಯಲ್ಲಿ ಹೋಲಿಸಿಕೊಂಡು ಕೀಳರಿಮೆಯಿಂದ ಒದ್ದಾಡುತ್ತಿದ್ದೀರಿ.ಅದರಿಂದಾಗಿ ನಿಮಗಿಂತ ದೊಡ್ಡ ಹುದ್ದೆಯಲ್ಲಿ ,ದೊಡ್ಡ ಸ್ಥಾನದಲ್ಲಿ ಇರುವವರಲ್ಲಿ ಮಾತನಾಡುವಾಗ ಈ ಸಮಸ್ಯೆ ಕಾಡುತ್ತಿದೆ. ಪ್ರತಿಯೊಬ್ಬ ವ್ಯಕ್ತಿಗೂ ಅವನದ್ದೇ ಆದ ಸ್ಥಾನ ಮಾನ ಗೌರವ ಇದೆ..ನೀವು ಯಾವ ಕೆಲಸ ಮಾಡುತ್ತೀರಿ ಎಂಬುದು ಮುಖ್ಯವಲ್ಲ..ಹೇಗೆ ಮಾಡುತ್ತೀರಿ ಎಂಬುದು ಮುಖ್ಯ.. ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ ಕೃತಿ ಬರೆದ ಗಣಪತಿ ರಾವ್ ಐಗಳು ಪ್ರಾಥಮಿಕ ಶಾಲೆ ಶಿಕ್ಷಕರಾಗಿದ್ದರು.ಇಂದು ಅವರ ಹೆಸರು ಕೃತಿ ಯನ್ನು ಉಲ್ಲೇಖಿಸದೆ ದಕ್ಷಿಣ ಕನ್ನಡದ ಇತಿಹಾಸ ಬಗ್ಗೆ ಮಾತನಾಡಲು ಬರೆಯಲು ಆಗುವುದಿಲ್ಲ. ಯುನಿವರ್ಸಿಟಿ ಗಳ ರೆಫರೆನ್ಸ್ ಪುಸ್ತಕ ಅದು. ಅದೇ ರೀತಿ ಪ್ರಸ್ತುತ ಪೂ ಶ್ರೀನಿವಾಸ ಭಟ್ ವೆಂಕಟರಾಜ ಪುಣಿಚಿತ್ತಾಯರ ಮೊದಲಾದ ಅನೇಕ ದೊಡ್ಡ ವಿದ್ವಾಂಸರು ಶಾಲಾ ಶಿಕ್ಷಕರು. ಯುನಿವರ್ಸಿಟಿ ಗಳಲ್ಲಿ ಇರುವವರು ಮಾತ್ರ ವಿದ್ವಾಂಸರಲ್ಲ.ನಿಮಗೆ ಬರೆಯುವ ಸಾಮರ್ಥ್ಯ ಇದೆ.ಹೂವಿಗೆ ಪರಿಮಳ ಇದ್ದರೆ ಅದರ ಅಸ್ತಿತ್ವ ಹೊರ ಜಗತ್ತಿಗೆ ಅರಿವಾಗಿಯೇ ಆಗುತ್ತದೆ ಅದು ಎಲ್ಲೇ ಇದ್ದರೂ..ಎಷ್ಟೋ ಜ‌ನ ರ‌್ಯಾಂಕ್ ವಿಜೇತರಿಗೆ ಕೆಲಸ ಸಿಗದೆ ಕೂಲಿ ಕೆಲಸ ಮಾಡುತ್ತಿದ್ದಾರೆ.ನಿಮಗೆ ಬಹಳ ಪ್ರತಿಷ್ಠಿತ ಚಿನ್ಮಯ ಪ್ರೌಢ ಶಾಲೆಯಲ್ಲಿ ಕೆಲಸ ಇದೆ..ಕೀಳರಿಮೆ ಯಾಕೆ..ತಲೆಯಿಂದ ಅದನ್ನು ಮೊದಲು ಹೊರಗೆ ಹಾಕಿ ಎಂದು ಅರ್ಧ ಗಂಟೆ ತಿಳುವಳಿಕೆ ಹೇಳಿದರು‌ ಹೌದು ಅಂದೇ ಕೊನೆ..ಮತ್ತೆಂದೂ ನನಗೆ ಮಾತಿನ ಸಮಸ್ಯೆ ಕಾಡಲಿಲ್ಲ..ಮುಂದೆ ಕಾಡುವುದೂ ಇಲ್ಲ.. ನಾನು ಕೀಳರಿಮೆಯಿಂದ ಹೊರಗೆ ಬಂದಿದ್ದೆ. ದೇವರು ದೊಡ್ಡವನು..ನಂತರ ನನಗೆ ಯಾವುದೇ ಕೊರತೆ ಮಾಡಲಿಲ್ಲ.. ಒಳ್ಳೆಯ ಉದ್ಯೋಗ ಮನೆ ಬದುಕು ,ಘನತೆಯ ಜೀವನ ಎಲ್ಲವನ್ನೂ ಕರುಣಿಸಿದ . ಈಗಲೂ ದೊಡ್ಡ ದೊಡ್ಡ ಸಂಘ ಸಂಸ್ಥೆಗಳ ಕಾರ್ಯಕ್ರಮಕ್ಕೆ ಅತಿಥಿಯಾಗಿ,ಉಪನ್ಯಾಸ ನೀಡಲು ಹೋದಾಗ ನನ್ನ ಜೊತೆಗೆ ಆಹ್ವಾನಿತರಾದವರಲ್ಲಿ ದೊಡ್ಡ ದೊಡ್ಡ ಇಂಜಿಯರ್ಸ್ ಡಾಕ್ಟರ್ಸ್ ಪ್ರೊಫೆಸರ್ ಗಳು ಇರ್ತಾರೆ.ಅವರು ಒಳಗೆ ಬರುವಾಗಲೇ ಓಡಿ ಹೋಗಿ ಸ್ವಾಗತಿಸುವ ಹೂ ಬುಕ್ಕೆ ಕೊಡುವ ಜನರಿರ್ತಾರೆ.ಅವರ ಸುತ್ತ ಜನರು ಇರುತ್ತಾರೆ‌ ನಾನು ಒಂದು ಮೂಲೆಯಲ್ಲಿ ಅಬ್ಬೇಪಾರಿಯಂತೆ ಕುಳಿತಿರುತ್ತೇನೆ‌ ಆದರೆ ನನಗೆ ಕೀಳರಿಮೆ ಕಾಡುವುದಿಲ್ಲ..ಇದು ವೇದಿಜೆ ಏರಿ ಸರದಿಯಲ್ಲಿ ನನ್ನ ಕೈಗೆ ಮೈಕ್ ಬರುವ ತನಕ ಮಾತ್ರ ಈ ಸ್ಥಿತಿ ಎಂದು ನನಗೆ ಆತ್ಮವಿಶ್ವಾಸ ಇರುತ್ತದೆ.ನಂತರ.ವೇದಿಕೆ ಇಳಿದು ಬರುವಷ್ಟರಲ್ಲಿ ನಾನು ನಾನೇ ಆಗಿರುತ್ತೇನೆ.ಅನೇಕೆಡೆಗಳಲ್ಲಿ ಸಮಯ ಮಿತಿಯ ಕಾರಣಕ್ಕಾಗಿ ನಾನು ಮಾತನ್ನು ಮೊಟಕು ಗೊಳಿಸಿದರೆ ಸಭಿಕರಿಂದ ಪೂರ್ಣ ಮಾಹಿತಿ ನೀಡುವಂತೆ ಒತ್ತಡ ಬಂದಿದ್ದು ಮಾತನ್ನು ಮುಂದುವರಿಸಿದ ಅನೇಕ ಸಂದರ್ಭಗಳಿವೆ‌ ಅಗೆಲ್ಲ ಉತ್ತಮ ವಾಙ್ಮಯತೆಯನ್ನು ನೀಡಿದ ವಾಗ್ದೇವಿಯನ್ನು ಸ್ಮರಿಸುತ್ತೇನೆ. ಬರವಣಿಗೆ ,ವಾಙ್ಮಯತೆ God gift ಎಲ್ಲರಿಗೂ ಒಲಿಯುವುದಿಲ್ಲ.ಪ್ರತಿಯೊಂದು ವ್ಯಕ್ತಿಯಲ್ಲಿ ಒಂದಲ್ಲ ಒಂದು ಸಾಮರ್ಥ್ಯ ಇರುತ್ತದೆ.ಇದು ದೇವರ ಕೊಡುಗೆ ಆದರೆ ವಿಷಯ ಜ್ಞಾನವನ್ನು ಪಡೆದುಕೊಂಡು ಪರಿಶ್ರಮದಿಂದ ಮುಂದುವರಿಸುದು,ಅದರಲ್ಲಿ ಪರಿಣತಿಯನ್ನು ಪಡೆಯುವುದು ನಮ್ಮ ಕೈಯಲ್ಲಿದೆ‌. ಪ್ರತಿಭೆ,ಪ್ರಾಮಾಣಿಕತೆ,ಪರಿಶ್ರಮ ಮೂರು ಇದ್ದರೆ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಹೆಸರಿಗಾಗಿ ಕೆಲಸ ಮಾಡಲು ಆಗುವುದಿಲ್ಲ ಒಳ್ಳೆಯ ಕೆಲಸ ಮಾಡಿದರೆ ಹೆಸರು ತನ್ನಿಂತಾನಾಗಿಯೇ ಬರುತ್ತದೆ. ಇಂದು ಭುವನೇಶ್ವರಿ ಮೇಡಂ ಸಂಸ್ಕೃತೋತ್ಸವದಲ್ಲಿ ಅತಿಥಿಯಾಗಿ ಆಹ್ವಾನಿಸಲ್ಪಟ್ಟ ಬಗ್ಗೆ ತಿಳಿಸಿದಾಗ ಇವೆಲ್ಲ ನೆನಪಾಯಿತು ನನಗೆ. .ಚಿಕ್ಕಂದಿನಿಂದಲೇ ನೇರ ಮಾತು ಎಂದು ಹೇಗೆ ಗುರುತಿಸಿರಬಹುದು? ನನ್ನ ಯಾವ ಮಾತುಗಳಿಂದ ನನ್ನನ್ನು ನೇರ ಮಾತು ಎಂದು ಗುರುತಿಸಿದರೋ ನನಗೆ ಗೊತ್ತಿಲ್ಲ. ನನ್ನ ಪ್ರಾಥಮಿಕ ಶಾಲೆಯ ಮೇಷ್ಟ್ರು ಕೊಮ್ಮ ತಿಮ್ಮಣ್ಣ ಮಾಸ್ಟ್ರು ನನ್ನ ತಂದೆಯವರಲ್ಲಿ ' ಅವಳನ್ನು ಮುಂದೆ ಲಾ ಓದಿಸಿ ಎಂದಿದ್ದರಂತೆ. ಯಾಕೆ ? ನಾನು ಹೇಗೆ ಮಾತಾಡುತ್ತಿದ್ದೆ ಎಂದು ನನಗೆ ಚೂರೂ ಗೊತ್ತಿಲ್ಲ.. ಈ ಬಗ್ಗೆ ಅಮ್ಮನಲ್ಲಿ ಒಂದು ದಿನ ಕೇಳಿದ್ದೆ.ಅದಕ್ಕೆ ಅಮ್ಮ ಒಂದು ಉದಾಹರಣೆ ತಿಳಿಸಿದರು. ನಾನಾಗ ಇನ್ನೂ ಚಿಕ್ಕ ಹುಡುಗಿ,ಆಗಷ್ಟೇ ಮಾತಾಡಲು ಕಲಿತಿದ್ದೆ,ಎಲ್ಲ ಅಕ್ಷರಗಳ ಉಚ್ಚಾರಣೆ ಬರುತ್ತಿರಲಿಲ್ಲವಂತೆ. ನನ್ನ ಚಿಕ್ಕಪ್ಪನ ಮಗಳ ಸಂಧ್ಯಾ ನನಗಿಂತ ಐದಾರು ತಿಂಗಳ ದೊಡ್ಡವಳು.ನಮಗೆ ಮಕ್ಕಳಿಗೆ ಕಾಫಿ ಕೊಡ್ತಿರಲಿಲ್ಲ .ಹಾಗಾಗಿ ಕಾಫಿ ಬೇಕು ಎಂದು ನಮ್ಮಿಬ್ಬರ ಹಠ ಚಿಕ್ಕಪ್ಪನ ಮಗಳ ಸಂಧ್ಯಾ ಅವಳ ಅಮ್ಮನಲ್ಲಿ ಎಂದರೆ ಚಿಕ್ಕಮ್ಮನಲ್ಲಿ ಕಾಫಿ ಬೇಕು ಎಂದು ಕೇಳಿದ್ದಕ್ಕೆ ಕೊಡಲಿಲ್ಲ. ಆಗ ಅವಳು ನನ್ನ ಅಮ್ಮನಲ್ಲಿ ಕಾಫಿ ಕೇಳಿದಳಂತೆ.ನನ್ನ ಅಮ್ಮನೂ ಖಾಲಿ ಆಗಿದೆ,ನಾಳೆ ಕೊಡ್ತೇನೆ ಎಂದು ಹಾಲು ಕೊಟ್ಟು ಪುಸಲಾಯಿಸಿದ್ದಾರೆ.ಅದಕ್ಕೆ ಅವಳು ದೊಡ್ಡಮ್ಮ ಕೊಳಕ್ಕಿ ಎಂದು ತನ್ನ ಬಾಲ ಭಾಷೆಯಲ್ಲಿ ನನ್ನ ಅಮ್ಮನಿಗೆ ಹೇಳಿದ್ದಾಳೆ.ಆಗ ಅಲ್ಲೇ ಇದ್ದ ನಾನು " ದೊಡ್ಡಮ್ಮ ಕೊಕ್ಕಿ ಅಲ್ಲ..ಇಕ್ಕಮ್ಮ ಕೊಕ್ಕಿ ' ಎಂದು ನಾನು ತಕ್ಷಣವೇ ಹೇಳಿದೆನಂತೆ.ಅಲ್ಲಿ ಇದ್ದ ನನ್ನ ತಂದೆ ,ತಾಯಿ, ಅಜ್ಜಿ ಚಿಕ್ಕಪ್ಪ ,ಚಿಕ್ಕಪ್ಪ "ಅಬ್ಬಾ ಇದು ಸಾಮನ್ಯದ ಕೊಕ್ಕೆಚ್ಚಿ ಅಲ್ಲ "ಎಂದು ನಗಾಡಿದರಂತೆ.ಸಾಮಾನ್ಯವಾಗಿ ಬೇರೆ‌ ಮಕ್ಕಳಾದರೆ ನೀನು ಕೊಳಕ್ಕಿ ಎನ್ನುತ್ತಿದ್ದರು ಎಂದು ಅಮ್ಮ ಹೇಳಿದ್ದರು. ಅಷ್ಟತಾನೇ ಎಂದು ಕೊಂಡೆ‌ ಈಗ್ಗೆ ಆರೇಳು ವರ್ಷಗಳ ಮೊದಲು ತಾಯಿ ಮನೆಗೆ ಹೋಗಿದ್ದಾಗ ಒಂದು ವಿಷಯ ಗಮನಿಸಿದೆ. ತಮ್ಮನ ಸಣ್ಣ ಮಗಳು ಅಭೀಷ್ಟಾ ಬಹಳ ಕರುಣಾಮಯಿ,ಮನುಷ್ಯ ಪ್ರೀತಿ ಇರುವ ಜಾಣೆ. ಆದರೆ ಗಟ್ಟಿ ನಿಲುವು ಸಣ್ಣಾಗಿರುವಾಗಲೇ‌.‌ ಅವಳೇನಾದರೂ ಕಂಬ ದಳಿ ಹತ್ತಿ ಉಪದ್ರ ಮಾಡುತ್ತಿದ್ದರೆ ಅವಳನ್ನು ಅವಳನ್ನು ಅದರಿಂದ ಹೊರಗೆ ತರುದು ಸಣ್ಣ ವಿಚಾರ ಅಲ್ಲ..ಬೈದು ಜೋರು ಮಾಡುವ ವಯಸ್ಸಲ್ಲ..ಇನ್ನೂ ಎರಡು ಮೂರು ವರ್ಷದ ಮಗು. ಬಾ..ನೀನು ಒಪ್ಪಕ್ಕ ಅಲ್ಲದಾ..ನಿನಗೆ ಗೊಂಬೆ ಕೊಡ್ತೆ..ಎಂದು ಮಂಗಾಡಿಸಲು ಹೋದರೆ ಆನು ಒಪ್ಪಕ್ಕ ಅಲ್ಲ ಕೊಕ್ಕಿ..ಎಂದು ಒಪ್ಪಿಕೊಂಡು ತಂಟೆ ಮುಮದುವರಿಸುತ್ತಾ ಇದ್ದಳು.ನಾನು ಒಪ್ಪಕ್ಕ ಅಲ್ಲ ಕೊಳಕ್ಕಿ ಎಂದು ಬಿಟ್ಟರೆ ಮತ್ತೆ ಪುಸಲಾಯಿಸುವ ಮಾತೇ ಇಲ್ಲವಲ್ಲ..ಅವಳನ್ನು ಹೊಗಳಿ ಪುಸಲಾಯಿಸಲು ಸಾಧ್ಯವೇ ಇಲ್ಲ..ಇದನ್ನು ನೋಡುತ್ತಿದ್ದ ಅಮ್ಮ " ನೋಡು ಹೀಗೆಯೇ ಇದ್ದೆ,ಹೊಗಳಿಯೂ ಸರಿ ಮಾಡಲು ಸಾಧ್ಯವಿಲ್ಲ, ಬೈದೂ ಮಾಡಲು ಸಾಧ್ಯವಿಲ್ಲ. ಅದಕ್ಕೆ ನಿನ್ನ ಬಗ್ಗೆ ಅಜ್ಜ ಪೆಟ್ಟೊಂದು ತುಂಡೆರಡು ಎಂದು ಅಜ್ಜ ಹೇಳ್ತಾ ಇದ್ದದ್ದು ಎಂದು ಹೇಳಿ ನಗಾಡಿದರು.. ಓ ಹಾಗಾದರೆ ನಾನು ಸಣ್ಣಾಗಿರುವಾಗ ಸುಮಾರಾಗಿ ಹೇಗೆ ಇದ್ದೆ ಎಂದು ನನಗೆ ಸ್ವಲ್ಪ ಅರ್ಥ ಆಯಿತು.

No comments:

Post a Comment