Saturday, 7 September 2019

ಗುಡ್ಡೆ ಅಜ್ಜನೇ ವಿಕ್ರಮನಿಗೆ ದಾರಿ ತೋರಿಸು

ದಾರಿ ತೋರಿಸುವ ಗುಡ್ಡೆ ಅಜ್ಜನೇ  ಇಲ್ಲಿಂದಲೇ ತಲೆ ಬಾಗುವೆ ..ದಾರಿ ತಪ್ಪಿದ ವಿಕ್ರಮನಿಗೆ ದಾರಿ ತೋರಿಸು..
ನನ್ನ ಅಜ್ಜನ ಮನೆ ಹತ್ತಿರ ಪೊಳ್ಳಕಜೆ( ಕಾಸರಗೋಡು ಜಿಲ್ಲೆಯ ಮೀಯಪದವು ಸಮೀಪದಲ್ಲಿ) ಎಂಬ ದುರ್ಗಾರಾಧನೆಯ ಪವಿತ್ರ ಸ್ಥಳ ಇದೆ‌.
ನನ್ನ ತಂದೆ ಮನೆ ಕೋಳ್ಯೂರಿನಿಂದ ಅಜ್ಜನ ಮನೆಗೆ ಇಲ್ಯಾಗಿಯೇ ಹೋಗಬೇಕು. ಈ ದಾರಿಯಲ್ಲಿ ಒಂದು ದೇರ ಸಿಗುತ್ತದೆ. ದೇರದ ಆರಂಭದಲ್ಲಿ ಒಂದು ದೊಡ್ಡ ಕುಂಟಾಲದ ಮರ,ಅದರಡಿಯಲ್ಲಿ ಗುಳಿಗನ ಕಲ್ಲು ಇದೆ‌.ಆ ದಾರಿಯಲ್ಲಿ ಹೋಗಿ ಬರುವವರೆಲ್ಲ ಅಲ್ಲೇ ಪೊದೆಲುಗಳಿಂದ ಹೂ ಅಥವಾ ಚಿಗುರು ಕೊಯ್ದು ಗುಳಿಗನ ಕಲ್ಲಿಗೆ ಹಾಕುವುದು ವಾಡಿಕೆ‌
ಒಂದು ದಿವಸ ನನ್ನ ಸಣ್ಣಜ್ಜಿ ಮತ್ತು ನಾನು ಈ ಕಾಡಿನ  ದಾರಿಯಲ್ಲಿ ಹೋಗುವಾಗ ದಾರಿ ತಪ್ಪಿದೆವು.ಯಾವ ಕಡೆ ಹೋಗಬೇಕೆಂದು ತಿಳಿಯಲಿಲ್ಲ.ಆಗ ನನ್ನ ಸಣ್ಣಜ್ಜಿ ನಾವು ಗುಳಿನ ಕಲ್ಲಿಗೆ ಚಿಗುರು  ಹಾಕಲಿಲ್ಲ.ಅದಕ್ಕೆ ನಮಗೆ ದಾರಿ ಗೊತ್ತಾಗುತ್ತಿಲ್ಲ ಎಂದು ಹೇಳಿ ಅಲ್ಲೇ ಸಮೀಪದ ಪೊದೆಗಳಲ್ಲಿ ಇದ್ದ ಕಿಸ್ಕಾರದ ಹೂಗಳನ್ನು ಕೊಯ್ದು ಒಂದು ಕಡೆ ಹಾಕಿ ಗುಳಿಗನಿಗೆ ಕೈ‌ಮುಗಿದರು.
ಅದು ನಿರ್ಜನ ಪ್ರದೇಶ, ಜನಸಂಚಾರ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ.ಆದರೂ ಆ ದಾರಿಯಲ್ಲಿ ಯಾರೋ ಒಬ್ಬರು ಸೊಪ್ಪಿನ ಕಟ್ಟ ಹೊತ್ತುಕೊಂಡು ಬಂದರು. ಅಜ್ಜ ಅಜ್ಜಿ ನಾವು  ದಾರಿ ತಪ್ಪಿದ ಬಗ್ಗೆ ತಿಳಿಸಿ ದಾರಿ ತೋರಿಸಲಯ ಹೇಳಿದರು. ಅವರು ನಮಗೆ ಯಾವ ಕಡೆ ಹೋಗಬೇಕೆಂದು ತಿಳಿಸಿ ಕಾಡಿನ ದಾರಿಯಲ್ಲಿ ದೇರ ಇಳಿದು ಹೋದರು.
ಅವರು ಸೂಚಿಸಿದಂತೆ ಸ್ವಲ್ಪ ದೂರ ನಡೆದಾಗ ನಾವು ಯಾವಾಗಲೂ ಓಡಾಡುತ್ತಿದ್ದ ದಾರಿ ಕಾಣಿಸಿತು ಅನಂತರ ಯಾವುದೇ ಸಮಸ್ಯೆ ಇಲ್ಲದೆ ಮನೆ ಸೇರಿದೆವು.
ನನ್ನ ಅಜ್ಜಿ ಆ ದಿನ ಅವರು ಚಿಕ್ಕಾಗಿದ್ದಾಗ ನಡೆದ ಒಂದು ವಿಚಾರ ಹೇಳಿದರು ‌.ಅವರು ಚಿಕ್ಕವರಿದ್ದಾಗ ಅವರು,ಅವರ ತಾಯಿ ಮತ್ತು  ಅಕ್ಕ ಆ ದಾರಿಯಲ್ಲಿ ಹೋಗುವಾಗ ಗುಳಿಗನ ಕಲ್ಲಿಗೆ ಹೂ ಹಾಕಲು ಮರೆತರಂತೆ.ಸ್ವಲ್ಪ ದೂರ ಹೋದಾಗ ಇವರಿಗೆ ದಾರಿ ತಪ್ಪಿತು .ದಟ್ಟ ಕಾಡಿನ ಆ ದೇರದಲ್ಲಿ ಯಾವ ಕಡೆ ಹೋಗಬೇಕೆಂದು ತಿಳಿಯಲಿಲ್ಲವಂತೆ‌.
ಆಗ ಅವರ ತಾಯಿಗೆ ತಾವು ಮಾಡಿದ ತಪ್ಪುನ ಅರಿವಾಗಿ ಅಲ್ಲೇ ಸಮೀಪದ ಗಿಡಗಳಲ್ಲಿ ಇದ್ದ ಕಿಸ್ಕಾರ ( ಕೇಪುಳ) ಹೂವನ್ನು ಕೊಯ್ದು ಒಂದು ಮರದ ಅಡಿಯಲ್ಲಿ ಇರುವ ಕಲ್ಲಿಗೆ ಹಾಕಿ ನಮ್ಮದು ತಪ್ಪಾಯಿತು ಗುಡ್ಡೆ ಅಜ್ಜ( ಆ ಗುಳಿಗನನ್ನು ಗುಡ್ಡೆ ಅಜ್ಜ ಎಂದು ಕರೆಯುತ್ತಾರೆ) ನಮಗೆ ದಾರಿ ತೋರಿಸು ಎಂದು ನಮಸ್ಕಾರ ಮಾಡಿದರಂತೆ.ನಮಸ್ಕಾರ ‌ಮಾಡಿ ತಲೆ ಎತ್ತಿ ನೋಡಿದರೆ ಅವರು ಅದೇ ಗುಳಿಗ ಬನದ ಎದುರೇ ನಿಂತಿದ್ದರಂತೆ.ಅಲ್ಲಿ ಅವರಿಗೆ ಹೋಗುವ ದಾರಿ ಇತ್ತು.ಅದರ ಮೂಲಕ ಮನೆ ಸೇರಿದರಂತೆ.ಅಲ್ಲಿಯ ಗುಳಿಗನಿಗೆ  ಪ್ರಾರ್ಥನೆ ಮಾಡಿದರೆ ದಾರಿ ತಪ್ಪಿದವರು,ದಾರಿ ತಪ್ಪಿದ ಹಸು ಕರುಗಳು ಸಿಗುತ್ತವೆ ಎಂಬ ನಂಬಿಕೆ ಇದೆ ‌.ಹಾಗಾಗಿ ನಾನು ಕೂಡ ನಮ್ಮ ಗುಡ್ಡೆ ಅಜ್ಜನಲ್ಲಿ ಚಂದ್ರನಲ್ಲಿಗೆ ಹೋಗುವಾಗ ದಾರಿ ತಪ್ಪಿದ ವಿಕ್ರಮನಿಗೆ ಸರಿ ದಾರಿ ತೋರುವಂತೆ ಪ್ರಾರ್ಥನೆ ಮಾಡಿರುವೆ‌.
ನಂಬಿಕೆಯ ಮೇಲೆ ಜಗತ್ತು ನಿಂತಿದೆ ..ಇನ್ನೇನು ಹೇಳಲಿ..

No comments:

Post a Comment