ನನ್ನ ಮಗನನ್ನು ಐದನೇ ತರಗತಿಗೆ ಪ್ರಶಾಂತಿ ವಿದ್ಯಾ ಕೇಂದ್ರಕ್ಕೆ ಸೇರಿಸಿದ್ದೆವು.ಅಲ್ಲಿ ಅವನಿಗೆ ಒಂದು ಪ್ರವೇಶ ಪರೀಕ್ಷೆ ಮಾಡಿದ್ದರು.ಅದರಲ್ಲಿ ರಾಮಾಯಣ ಬರೆದವರು ಯಾರು ಎಂದು ಕೇಳಿದ್ದರು.ನನ್ನ ಮಗನಿಗೆ ಗೊತ್ತಿರಲಿಲ್ಲ. ನಂತರ ನನ್ನಲ್ಲಿ ಕೇಳಿದ.ಹೌದು ಅದರಲ್ಲಿ ಅವನ ತಪ್ಪಿರಲಿಲ್ಲ ಯಾಕೆಂದರೆ ರಾಮಾಯಣ ಕಥೆಯನ್ನು ಅವನು ಆ ತನಕ ಕೇಳಿರಲಿಲ್ಲ .ನಂತರ ನಾನು ಸಣ್ಣ ಮಕ್ಕಳು ಓದುವ ರಾಮಾಯಣ ಪುಸ್ತಕ ತಂದು ಕೊಟ್ಟೆ.ಅದು ಬೇರೆ ವಿಚಾರ.
ಆಗ ತಕ್ಷಣ ನನಗೆ ನೆನಪಿಗೆ ಬಂದದ್ದು ನಮಗೆ ರಾಮಾಯಣ ಕಥೆಯನ್ನು ಅಭಿನಯ ಸಹಿತವಾಗಿ ಹೇಳಿದ ಕೊಮ್ಮೆ ತಿಮ್ಮಣ್ಣ ಮಾಷ್ಟ್ರು.
ನನಗೆ ಐದು ವರ್ಷ ಆಗುವಾಗ ನನ್ನ ಸಣ್ಣ ತಮ್ಮ ಗಣೇಶ ಹುಟ್ಟಿದ್ದ.ಹಾಗಾಗಿ ಅಮ್ಮ ಬಾಣಂತನಕ್ಕೆ ನನ್ನ ಅಜ್ಜನ ಮನೆಗೆ ಹೋಗಿದ್ದರು.ಆದ್ದರಿಂದ ನಾನು ಒಂದನೇ ತರಗತಿಗೆ ಮೀಯಪದವು ವಿದ್ಯಾವರ್ಧಕ ಶಾಲೆಗೆ ಸೇರಿದೆ.ಅಲ್ಲಿ ನನಗೆ ಕಲಿಕೆ ಏನೂ ತೊಡಕಾಗಲಿಲ್ಲ.ವೇದವಲ್ಲಿ ಟೀಚರ್ ನಮಗೆ ತುಂಬಾ ಪ್ರೀತಿಯಿಂದ ಅ ಆ ಇ ಈ ಅಕ್ಷರ ಮಾಲೆ ,ಒಂದು ಎರಡು ನೂರರ ತನಕ ಸಂಖ್ಯೆಗಳನ್ನು ಹೇಳಿಕೊಟ್ಟಿದ್ದರು.ಬಹುಶಃ ಕಲಿಕೆಯಲ್ಲಿ ನಾನು ಮುಂದಿದ್ದೆ ಅಂತ ಕಾಣುತ್ತದೆ.ಯಾಕೆಂದರೆ ಇಡೀ ತರಗತಿಗೆ ಒಂದು ಎರಡು ನೂರರ ತನಕ ಹೇಳಿಸುವ ಜವಾಬ್ದಾರಿ ನನಗೆ ಕೊಟ್ಟಿದ್ದರು.ದಿನಾಲು ನಾನು ಒಂದು ಎರಡು ಎಮದು ತರಗತಿಯ ಸಹಪಾಠಿಗಳಲ್ಲಿ ದೊಡ್ಡದಾಗಿ ಹೇಳಿಸುತ್ತಾ ಇದ್ದೆ
ಎರಡನೇ ತರಗತಿಗಾಗುವಾಗ ನಾನು ಅಮ್ಮ ನಮ್ಮ ಕೋಳ್ಯೂರಿನಲ್ಲಿ ಕಟ್ಟಿದ ಹೊಸ( ಮಣ್ಣಿನ )ಮನೆಗೆ ಬಂದಿದ್ದರು.ನಾನು ಕೂಡ ಹಠಮಾಡಿ ಅಜ್ಜನ ಮನೆಯಲ್ಲಿ ನಿಲ್ಲದೆ ಅಮ್ಮನ ಜೊತೆ ಬಂದಿದ್ದೆಹಾಗಾಗಿ ಎರಡನೇ ತರಗತಿಗೆ ನಾನು ಕೋಳ್ಯೂರು ಶಂಕರನಾರಾಯಣ ಪ್ರಾಥಮಿಕ ಶಾಲೆಗೆ ಸೇರಿದೆ.ಇಲ್ಲಿ ಎರಡನೇ ತರಗತಿಗೆ ಮೇಷ್ಟ್ರಾಗಿದ್ದವರು ಕೊಮ್ಮೆ ತಮ್ಮಣ್ಣ ಭಟ್
ಇಲ್ಲಿ ಕೂಡ ಕಲಿಕೆಯಲ್ಲಿ ನಾನು ಹಿಂದೆ ಇರಲಿಲ್ಲ .ಆದರೆ ಯಾಕೋ ಏನೋ ನನಗೆ ನೆನಪಿಲ್ಲ .ನನಗೆ ದಿನಾಲು ಪೆಟ್ಟು ಬೀಳುತ್ತಿತ್ತಂತೆ.ನನ್ನ ಸಹಪಾಠಿಗಳಾದ ಯಶೋದೆ ಮತ್ತು ಅವಳ ತಂಗಿಮಲ್ಲಿಕಾ ನನಗೆ ಈ ವಿಚಾರವನ್ನು ನಾನು ಹೈಸ್ಕೂಲ್ ಓದುವ ಸಮಯದಲ್ಲಿ ಹೇಳಿದ್ದರು
ಅದೃಷ್ಟವಶಾತ್ ನನಗೆ ಇದು ನೆನಪಿಲ್ಲ ಮರೆವು ಕೂಡ ವರವೇ.ನನಗೆ ಯಾಕೆ ಪೆಟ್ಟು ಬೀಳುತ್ತಿತ್ತೆಂದರೆ ನಾನು ದಿನಾಲು ತಡವಾಗಿ ಶಾಲೆಗೆ ಬರುತ್ತಿದ್ದೆನಂತೆ.ದಿನಾಲು ಪೆನ್ಸಿಲ್ ಕಡ್ಡಿಗಳನ್ನು ಕಳೆದು ಹಾಕುತ್ತಿದ್ದೆನಂತೆ .ದಿನಾಲು ಪೆನ್ಸಿಲ್ ಕಳೆದು ಹೋಗುತ್ತಿದ್ದುದು ನನಗೆ ನೆನಪಿದೆ.ಆದರೆ ಎಲ್ಲಿ ಹೋಗುತ್ತಿತ್ತು? ಯಾರು ತೆಗೆಯುತ್ತಿದ್ದರು ಗೊತ್ತಿಲ್ಲ,ಶಿಸ್ತಿನ ಶಿಪಾತಯಿಯಾಗಿರುವ ಕೊಮ್ಮೆ ಮಾಷ್ಟ್ರು ಅದನ್ನು ನೀಟಾಗಿ ನನಗೆ ಇಟ್ಟುಕೊಳ್ಳುವ ಬಗ್ಗೆ ಹೇಳಿಕೊಡುತ್ತಿರಲಿಲ್ಲವಂತೆ ,ಬದಲಿಗೆ ಚೆನ್ನಾಗಿ ಹೊಡೆತುತ್ತಿದ್ದರಂತೆ.ಯಶೋದೆಯ ತಾಯಿ ಬಹಳ ಸಹೃದಯಿ. ಅವರು ನನಗೆ ದಿನಾಲು ಪೆಟ್ಟು ಬೀಳುವ ಬಗ್ಗೆ ನೊಂದುಕೊಳ್ಳುತ್ತಿದ್ದರಂತೆ.ನಾನು ದಿನಾಲು ತಡವಾಗಿ ಬರುತ್ತಿದ್ದರೆ ನಮ್ಮ ತಂದೆ ಅಥವಾ ತಾಯಿಗೆ ತಿಳಿಸದೆ ನನಗೇಕೆ ಹೊಡೆಯುತ್ತಿದ್ದರು ಕೊಮ್ಮೆ ಮಾಷ್ಟ್ರು ? ನನಗೆ ಇಂದಿಗೂ ಅರ್ಥವಾಗುತ್ತಾ ಇಲ್ಲ.ಅಥವಾ ನಾನೇಕೆ ಇದನ್ನು ನಮ್ಮ ಮನೆಯಲ್ಲಿ ತಿಳಿಸಿಲ್ಲ? ನಮ್ಮ ತಂದೆ ತಾತಿಗೆ ಮಕ್ಕಳ ಬಗ್ಗೆ ತುಂಬಾ ಕಾಳಜಿ ಇತ್ತು. ಒಂದೊಮ್ಮೆ ಶಾಲೆಯಲ್ಲಿ ವಿನಾ ಕಾರಣ ಹೊಡೆತ ಬೀಳುತ್ತದೆ ಎಂದು ಗೊತ್ತಾಗಿದ್ದರೆ ಖಂಡಿತಾ ಬಂದು ಮಾತನಾಡುತ್ತಿದ್ದರು. ನನ್ನನ್ನು ಅ ಶಾಲೆ ಬಿಡಿಸಿ ಹಿಂದಿನ ವಿದ್ಯಾವರ್ಧಕ ಶಾಲೆಗೆ ಸೇರಿಸುತ್ತಿದ್ದರು
ಆದರೆ ನನಗೆ ಅವರು ಅಷ್ಟೆಲ್ಲಾ ಹೊಡೆದಿದ್ದಾರೆಂಬುದು ನಾನು ದೊಡ್ಡವಳಾದ ಮೇಲೆ ಯಶೋದೆ ಮತ್ತು ಮಲ್ಲಿಕಾ ಹೇಳಿ ಗೊತ್ತೇ ಹೊರತು ನನಗೆ ನಿಜಕ್ಕೂ ನೆನಪಿಲ್ಲ.ಆಗ ಅವರು ಕೂಡ ಚಿಕ್ಕವರು.ಒಂದೆರಡು ಸಲ ನನ್ನ ಉಡಾಫೆಗೆ ಹೊಡೆದಿದ್ದನ್ನೇ ತುಂಬಾ ಹೊಡೆದಿದ್ದರು,(ನಾನು ಈಗಿನಂತೆ ಆಗಲೂ ಉಡಾಫೆಯೇ ಆಗಿದ್ದಿರಬಹುದು.ಅದಕ್ಕಾಗಿ ಒಂದೆರಡೇಟು ಬಿದ್ದಿರಬಹುದು) ಎಂದು ಭಾವಿಸಿ ನನಗೆ ಹೇಳಿರಲಿಕ್ಕೂ ಸಾಕು
ಅದೇನೇ ಇರಲಿ ಬಗ್ಗೆ ತುಂಬಾ ಪ್ರೀತಿಯೇ ಇದೆ .ಯಾಕೆಂದರೆ ಅವರು ತುಂಬಾ ಚಂದದ ಕಥೆಗಳನ್ನು ಹೇಳುತ್ತಿದ್ದರು.ಆ ಕಥೆಗಳನ್ನು ಕೇಳುವುದಕ್ಕಾಗಿಯೇ ನಾನು ಪೆಟ್ಟು ಬೀಳುತ್ತಿದ್ದರೂ ಶಾಲೆಗೆ ಹೋಗುತ್ತಿದ್ದಿರಬೇಕು .ನನಗೋ ಕಥೆಗಳೆಂದರೆ ಜೀವ .(ನಾನು ನಾಲ್ಕನೆಯ ತರಗತಿಗೆ ಬರುವಷ್ಟರಲ್ಲಿ ಸಾತಿಸುತೆ,ಉಷಾ ನವರತ್ನರಾಂ, ಮೊದಲಾದವರ ಕಾದಂಬರಿಗಳನ್ನು ಓದುತ್ತಾ ಇದ್ದೆ .ನಾನು ಓದಿನ ಮೊದಲ ಕಾದಂಬರಿ ಸಾಕು ಮಗ,ಯಾರು ಬರೆದದ್ದು ಎಂದು ನೆನಪಿಲ್ಲ)
ನನಗೆ ತಿಮ್ಮಣ್ಣ ಮಾಷ್ಟ್ರು ತುಂಬಾ ಇಷ್ಟವಾಗಲು ಕಾರಣ ಅವರು ಅಭಿನಯ ಸಹಿತವಾಗಿ ಹೇಳುತ್ತಿದ್ದ ಕಥೆಗಳು ಅದರಲ್ಲೂ ರಾಮಾಯಣ ಕಥೆಗಳು.
ದಶರಥ ಕಾಡಿಗೆ ಹೋದಲ್ಲಿ ಕೈಕೇಯಿಯ ಭೇಟಿ ಆಗುವುದು,ಅವರಲ್ಲಿ ಪ್ರೇಮಾಂಕುರವಾಗುವುದು,ನಂತರ ವಿವಾಹ,ಪುತ್ರ ಕಾಮೇಷ್ಠಿ ಯಾಗ ,ರಾಮಲಕ್ಷ್ಮಣ,ಭರತ ಶತ್ರುಘ್ನರ ಜನನ ವಿಶ್ವಾಮಿತ್ರರು ರಾಮ ಲಕ್ಷ್ಮಣರನ್ನು ಕಾಡಿಗೆ ಒಯ್ಯುವುದು, ತಾಟಕಿಯನ್ನು ಕೊಲ್ಲುವುದು,ಶಬರಿಯ ಪ್ರಸಂಗ ಸೀತಾ ಸ್ವಯಂವರ,ರಾಮನಿಗೆ ಪಟ್ಟಾಭಿಷೇಕಕ್ಕೆ ನಿರ್ಧರಿಸುವುದು,ಮಂಥರೆ ಬಂದು ಕೈಕೇಯಿಗೆ ದುರ್ಬೋಧನೆ ಮಾಡುವುದು,ಕೈಕೇಯಿ ಎರಡು ವರಗಳನ್ನು ಕೇಳುವುದು ,ರಾಮಲಕ್ಷ್ಮಣ ಸೀತೆಯರು ಕಾಡಿಗೆ ಹೋಗುವುದು,ಭರತನ ಭ್ರಾತೃಪ್ರೇಮ ಪಾದುಕೆಗಳನ್ನು ಸಿಂಹಾಸನದಲ್ಲಿಟ್ಟು ಆಡಳಿತ ಮಾಡುವುದು ಸೀತಾಪಹರಣ,ಹನುಮಂತ ಸಖ್ಯ,ಲಂಕಾದಹನ,ರಾಮ ರಾವಣರ ಯುದ್ಧ,ಅಯೋಧ್ಯೆಗೆ ಪುಷ್ಪಕ ವಿಮಾನದಲ್ಲಿ ಬರುವುದು ಸೇರಿದಂತೆ ರಾಮಾಯಣದ ಪೂರ್ತಿ ಕಥಾನಕವನ್ನು ನಮಗೆ ಹೇಳಿದ್ದರು. ದಿನಾಲು ಸಂಜೆ ಆಟಕ್ಕೆ ಮಾಡಿ ದಲಿನ ಅವಧಿ ಕಥೆ ಹೇಳುವುದಕ್ಕಾಗಿ ಮೀಸಲಾಗಿತ್ತು.ನಾವೆಲ್ಲಾ ಈ ಅವಧಿಯನ್ನು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದೆವು.ಬಹುಶಃ ನಾವೆಲ್ಲರೂ ಎರಡನೇ ತರಗತಿಯಲ್ಲಿ ರೆಗುಲರ್ ಆಗಿ ಶಾಲೆಗೆ ಬರಲು ಕೂಡ ಇದೇ ಆಕರ್ಷಣೆ ಆಗಿತ್ತು.
ತಿಮ್ಮಣ್ಣ ಮಾಷ್ಟ್ರಿಗೆ ಯಕ್ಷಗಾನದ ಮೇಲೆ ಅಭಿರುಚಿ ಇದೆ.ಅದರಿಂದಾಗಿ ರಾಮಾಯಣದ ಎಲ್ಲ ಪ್ರಸಂಗಗಳನ್ನು ನಮ್ಮ ಎಳೆಯ ಮನಸಿಗೆ ನಾಟುವಂತೆ ಅರ್ಥವಾಗುವಂತೆ ಹೇಳಲು ಅವರು ಸಮರ್ಥರಾಗಿದ್ದರು.ಈಗಲೂ ಅವರು ರಾಮಾಯಣದ ಕಥೆ ಹೇಳುತ್ತಿದ್ದ ಪರಿ ನನಗೆ ಕಣ್ಣಿಗೆ ಕಟ್ಟುತ್ತಿದೆ.ಸೀತಾ ಸ್ವಯಂವರಕ್ಕೆ ಬಂದ ರಾವನ ಶಿವ ಧನುಸ್ಸನ್ನು ಎತ್ತಲು ಹೋಗಿ ಅದರಡಿಯಲ್ಲಿ ಅವನ ಕೈಗಳು ಸಿಕ್ಕು ಹಾಕಿಕೊಳ್ಳುವುದು,ಅಂಗದ ಸಂಧಾನಕ್ಕೆ ಹೋದಾಗ ರಾವಣನ ಸಿಂಹಾಸನದಷ್ಟು ಎತ್ತರಕ್ಕೆ ತನ್ನ ಬಾಲವನ್ನು ಸುತ್ತಿ ಕುಳಿತುಕೊಳ್ಳುವುದು ಆಹಾ..ಇದೆಲ್ಲವನ್ನೂ ಕೊಮ್ಮೆ ಮಾಷ್ಟ್ರು ವರ್ಣಿಸುತ್ತಿದ್ದ ಪರಿಯನ್ನು ಶಬ್ದದಲ್ಲಿ ಕಟ್ಟಿಕೊಡಲಾಗದು ,ಕೇಳಿ ನೋಡಿಯೇ ಆನಂದಿಸಬೇಕು.ಅದಕ್ಕಾಗಿ ಕೋಳ್ಯೂರಿನ ಮಕ್ಕಳಾದ ನಾವುಗಳು ಅವರಿಗೆ ಆಭಾರಿಯಾಗಿರಬೇಕು.ಬಹುಶಃ ,ಮಾತಿನ ,ಅಭಿನಯ ಕೌಶಲ ನನಗೆ ಬೆಳೆಯಲು ಕೂಡ ಇದೇ ಕಾರಣವಾಗಿರಬಹುದು- ಡಾ.ಲಕ್ಷ್ಮೀ ಜಿ ಪ್ರಸಾದ
No comments:
Post a Comment