Sunday, 8 October 2017

ದೊಡ್ಡವರ ದಾರಿ -22 ಉದಾರ ಹೃದಯದ ರಾಜಗೋಪಾಲ ಕನ್ಯಾನ

ದೊಡ್ಡವರ ದಾರಿ -22   ಉದಾರ ಹೃದಯದ ರಾಜಗೋಪಾಲ ಕನ್ಯಾನ
ದೂರದ ನಕ್ಷತ್ರಕ್ಕಿಂತ ಮನೆಯ ಜಗಲಿಯ ಹಣತೆ ಹೆಚ್ಚು ಬೆಳಕು ಕೊಡುತ್ತದೆ.ಮಹಾತ್ಮರನ್ನು ಎಲ್ಲೋ ಹುಡುಕುವುದರಲ್ಲಿ ನನಗೆ ನಂಬಿಕೆ ಇಲ್ಲ.ಅಂತಹವರು ನಮ್ಮ ಸುತ್ತ ಮುತ್ತ ಅನೇಕರಿರುತ್ತಾರೆ.
 ಸ್ಥಾನ ಮಾನ ಉದ್ಯೋಗ ಸಿರಿವಂತಿಕೆಯಿಂದ ದೊಡ್ಡವರು ದೊಡ್ಡವರೆಂದು ಕರೆಸಿಕೊಳ್ಳುವುದಿಲ್ಲ,,ತಮ್ಮ ಉದಾರತೆಯಿಂದ ಗಾರೆ ಕೆಸ ಮಾಡುವ ರವಿ ಹನ್ನೊಂದು ಲಕ್ಷವನ್ನು ಕಷ್ಟದಲ್ಲಿ ಇರುವವರಿಗೆ ದಾನ ಮಾಡಿ ದೊಡ್ಡವರಾಗುತ್ತಾರೆ.ಬುಟ್ಟಿಯಲ್ಲಿ ಬಾಳೆ ಹಣ್ಣು ಇಟ್ಟುಕೊಂಡು ರಸ್ತೆ ಬದಿಯ ಮರದಡಿಯಲ್ಲಿ ಕುಳಿತು ಮಾರಾಟ ಮಾಡುವ ರಾಜು ಕೂಡ ತಮ್ಮ ಔದಾರ್ಯತೆಯಿಂದಾಗಿ ದೊಡ್ಡವರಾಗಿ ಬಿಟ್ಟಿದ್ದಾರೆ.
ದೊಡ್ಡವರೆನಿಸಿಕೊಂಡವರು ಅವರದೇ ಆದ ಕಾರಣಕ್ಕಾಗಿ ದೊಡ್ಡವರೆನಿಸಿಕೊಳ್ಳುತ್ತಾರೆ.ಆ ಅಭಿವ್ಯಕ್ತಿ ಅವರಿಗೆ ಪ್ರಕೃತಿ ಸಹಜವಾದ ಸ್ವಭಾವ ಆಗಿರುತ್ತದೆ.ಪ್ರಶಸ್ತಿ ಪುರಸ್ಕಾರ ಗಳಿಗಾಗಲೀ,ದುಡ್ಡು ಹೆಸರಿಗಾಗಲೀ ಅಂತಹವರುಔದಾರ್ಯವನ್ನು ತೋರುವುದಿಲ್ಲ.
ಇಂತಹ ನಮ್ಮ ನಿಮ್ಮೊಳಗೆ ಇರುವ ಒಬ್ಬರ ಬಗ್ಗೆ ನನಗನಿಸಿದ ನನ್ನ ಅಂತರಾಳದ ಕೆಲವು ಮಾತುಗಳನ್ನು ಇಲ್ಲಿ ಬರೆಯುತ್ತೇನೆ.
ಸುಮಾರು ಹತ್ತು ವರ್ಷಗಳ ಹಿಂದಿನ ವೃತ್ತಾಂತವಿದು
 ಆಗಿನ್ನೂ ನಾನು ಸಂಶೋಧನಾ ಕ್ಷೇತ್ರಕ್ಕೆ ಕಾಲಿಟ್ಟಿದ್ದೆ.ಎಂ ಫಿಲ್ ಆಗಿದ್ದು ಪಿಎಚ್ ಡಿ ಅಧ್ಯಯನ ಆರಂಭಿಸಿದ್ದೆ.ಅದಕ್ಕಾಗಿ ಹಿರಿಯ ವಿದ್ವಾಂಸರಾದ ಡಾ.ಅಮೃತ ಸೋಮೇಶ್ವರ, ಡಾ.ಬಿಎ ವಿವೇಕ ರೈ,ಡಾ.ಚಿನ್ನಪ್ಪ ಗೌಡ,ಡಾ.ವಾಮನ ನಂದಾವರ,ಇಂದಿರಾ ಹೆಗಡೆ ಮೊದಲಾದವರ ಸಂಶೋಧನಾ ಕೃತಿಗಳನ್ನು ಓದಿ ಅರ್ಥ ಮಾಡಿಕೊಳ್ಳಲು ಯತ್ನ ಮಾಡುತ್ತಾ ಇದ್ದೆ. ನನಗೇನೋ ಪಿಎಚ್ ಡಿ ಮಾಡಬೇಕು,ಹೆಸರಿನ ಮುಂದೆ ಡಾ.ಎಂದು ಹಾಕಿಕೊಳ್ಳ ಬೇಕೆಂಬ ಕನಸಿತ್ತು .ಆದರೆ ಧೈರ್ಯ ಇರಲಿಲ್ಲ .
ಇವರೆಲ್ಲರ ಮಹಾನ್ ಗ್ರಂಥಗಳನ್ನು ಓದಿದಾಗ ಧೈರ್ಯ ಬರುವ ಬದಲು ಇಂತಹ ಗ್ರಂಥ ರಚಿಸಲು ನನ್ನಿಂದ ಆಗದೇನೋ ಎಂಬ ಆತಂಕ ಕಾಡುತ್ತಾ ಇತ್ತು.

ಇಂತಹ ಸಮಯದಲ್ಲಿ ಒಂದು ದಿನ ಸಂಜೆ ನನ್ನ ಹಳೆಯ ನೋಕಿಯಾ ಮೊಬೈಲ್ ಗೆ ಕರೆಯೊಂದು ಬಂತು.ಕರೆ ಸ್ವೀಕರಿಸಿ ಹಲೋ ಎಂದೆ,ಆ ಕಡೆಯಿಂದ ನೀವು ಲಕ್ಷ್ಮೀ ಯವರ ಎಂದು ಕೇಳಿದರು.ಯಾಕಪ್ಪಾ ದೇವರೆ ? ಯಾರಿದು ಫೋನ್ ಮಾಡಿರೋದು ? ನಾನು ವಿದ್ಯಾರ್ಥಿಗಳ ಕಲಿಕೆ ಮತ್ತು ಶಿಸ್ತಿನ ವಿಚಾರದಲ್ಲಿ ಸ್ವಲ್ಪ ಬಿಗಿಯಾಗಿದ್ದು ,ಓದಿ ಬರೆಯದೆ ಇದ್ದರೆ ಕಲಿಯದೆ ಇದ್ದರೆ ಅಶಿಸ್ತು ತೋರಿದರೆ ಮಕ್ಕಳನ್ನು ಸ್ವಲ್ಪ ಮಟ್ಟಿಗೆ ಜೋರು ಮಾಡುತ್ತಿದ್ದೆ.
‌ಹಾಗೆ ಯಾರಾದರೂ ವಿದ್ಯಾರ್ಥಿ ನನ್ನ ಮೇಲೆ ಹೆತ್ತವರಿಗೇನಾದರೂ ದೂರು ಕೊಟ್ಟರೇನೋ ? ಎಂದು ಆತಂಕವಾಯಿತು.ಆದರೂ ನನ್ನ ನಂಬರ್ ವಿದ್ಯಾರ್ಥಿಗಳಿಗೆ ಸಿಗಲು ಸಾಧ್ಯವಿಲ್ಲ, ಅಪರಿಚಿತರಿಗೆ ಯಾರಿಗೂ ನನ್ನ ಫೋನ್ ನಂಬರ್ ಸಿಗುವ ಸಾಧ್ಯತೆ ಇಲ್ಲ.ಹಾಗಿದ್ದರೂ ಇದಾರು ಅಪರಿಚಿತ ಸಂಖ್ಯೆ ಯಿಂದ ಫೋನ್ ಮಾಡಿ ನೀವು ಲಕ್ಷ್ಮೀ ಯವರ ಎಂದು ಕೇಳುತ್ತಿರುವುದು ಎಂದು ಆತಂಕ ಆಯಿತು.ಏನೊಂದು ಉತ್ತರಿಸದೆ ತಡವರಿಸಿದೆ.ಆಗ ಅವರು ನೀವು ಲಕ್ಷ್ಮೀ ಜಿ ಪ್ರಸಾದ ತಾನೇ ಎಂದು ಕೇಳಿದರು.ಆಗಿನ್ನೂ ನಾನು ಬರವಣಿಗೆಯ ಕ್ಷೇತ್ರದಲ್ಲಿ ಅಂಬೆಗಾಲಿಕ್ಕುವ ಮಗು( ಈಗಲೂ ಅಷ್ಟೇ ಮುಂದೆ ಬೆಳೆಯಲೇ‌ಇಲ್ಲ ಅದು ಬೇರೆ ವಿಚಾರ),ಹಾಗಿರುವಾಗ ನನ್ನ ಕಾವ್ಯ ನಾಮ ಕೂಡ ಇವರಿಗೆ ಗೊತ್ತಾಗಿದೆ ,ಇವರ್ಯಾರಪ್ಪ ಎಂದು ಕುತೂಹಲ ಆಯಿತು.ಹೌದು ಎಂದು ಹೇಳಿದೆ.ಸುಬ್ಬಿ ಇಂಗ್ಲಿಷ್ ಕಲ್ತದು ನಾಟಕ ನೀವೇ ಬರೆದದ್ದು ತಾನೇ ? ಎಂದು ಕೇಳಿದರು.ಓಹ್! ನಾನು ಎಷ್ಟೋ ವರ್ಷಗಳ ಹಿಂದೆ ಏಳನೇ ತರಗತಿಯಲ್ಲಿ ಓದುತ್ತಿದ್ದಾಗ ಬರೆದ ನಾಟಕದ ಬಗ್ಗೆ ಇವರಿಗೆ ಹೇಗೆ ಗೊತ್ತಾಯಿತು ಎಂದು ಆಶ್ಚರ್ಯವೂ ಆಯಿತು.ಅಷ್ಟರಲ್ಲಿ ಅವರೇ ಮುಂದುವರಿದು
ಆಗ ಅವರು ತಾನು ರಾಜಗೋಪಾಲ ಕನ್ಯಾನ,ನೀವು ಪಿಎಚ್ ಡಿ ಅಧ್ಯಯನ ಮಾಡುತ್ತಿರುವ ಬಿ ಎಂ ಶ್ರೀ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಪ್ರೊ.ಗೀತಾಚಾರ್ಯ ನಿಮ್ಮ ಫೋನ್ ನಂಬರ್ ಕೊಟ್ಟರು.ನಿಮ್ಮ ಸುಬ್ಬಿ ಇಂಗ್ಲಿಷ್ ಕಲ್ತದು ನಾಟಕ ಬಗ್ಗೆ ಮಾತಾಡಬೇಕಿತ್ತು.ನಿಮ್ಮ ಮನೆಗೆ ಬರಬಹುದಾ ಎಂದು ಕೇಳಿದರು.
‌ಗೀತಾಚಾರ್ಯರು ನಂಬರ್ ಕೊಟ್ಟ ಕಾರಣ ನಾನು ನಿರಾಳವಾದೆ.ಅವರು ಹಾಗೆಲ್ಲ ಯಾರ್ಯಾರಿಗೋ ತಮ್ಮ ಸಂಸ್ಥೆಯ ವಿದ್ಯಾರ್ಥಿನಿಯ ನಂಬರ್ ಕೊಡುವವರಲ್ಲ ,ಹಾಗಾಗಿ ಸರಿ ಮನೆಗೆ ಬನ್ನಿ ಎಂದು ಮನೆ ವಿಳಾಸ ತಿಳಿಸಿದೆ.
‌ಸ್ವಲ್ಪ ಹೊತ್ತಿನಲ್ಲಿ ನಮ್ಮ ಮನೆಗೆ ಬಂದರು.ಸುಬ್ಬಿ ಇಂಗ್ಲಿಷ್ ಕಲ್ತದು ನಾಟಕ ರಚನೆಯಾದ ಕಾಲ ,ಕಥಾ ವಸ್ತು ಬಗ್ಗೆ ಮಾಹಿತಿ ಕೇಳಿದರು. ನಾನು 1984ರಲ್ಲಿ ಏಳನೇ ತರಗತಿಯಲ್ಲಿ ಬರೆದು ಅಭಿನಯಿಸಿ ಬಹುಮಾನ ಪಡೆದ ನಾಟಕ ಅದಾಗಿತ್ತು. ಅನಂತರವೂ ಅದನ್ನು ಅಭಿನಯಿಸಿ ನಾನು ಶಾಲಾ ಕಾಲೇಜುಗಳಲ್ಲಿ ಬಹುಮಾನ ಪಡೆದಿದ್ದೆ.ನನ್ನ ಸ್ನೆಹಿತೆಯರು ಬೇರೆ ಕಡೆ ಕೂಡ ಪ್ರದರ್ಶನ ಮಾಡಿದ್ದರು. ಅದು ಹವ್ಯಕ ಕನ್ನಡದಲ್ಲಿ ಬರೆದ ನಾಟಕವಾಗಿದ್ದು ಅದನ್ನು 1997 ರಲ್ಲಿ ಮಂಗಳೂರು ಹವ್ಯಕ ಸಭಾದ ವಾರ್ಷಿಕೋತ್ಸವದಲ್ಲಿ   ರಾಜಿ ಬಾಲಕೃಷ್ಣ,ರಾಜೇಶ್ವರಿ,ಪುಷ್ಪಾ ಖಂಡಿಗೆ ನಾನುಮೊದಲಾದ ಕೆಲವು ಮಹಿಳೆಯರು ಸೇರಿಕೊಂಡು ಅಭಿನಯಿಸಿದ್ದೆವು.ಅದು ಆಗಿನ ಹವ್ಯಕ ವಾರ್ತೆ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.
‌ಹವ್ಯಕ ಅಧ್ಯಯನ ಕೇಂದ್ರದ ಮುಖ್ಯಸ್ಥರಾದ ನಾರಾಯಣ ಶಾನುಭಾಗರು ಹವ್ಯಕ ಸಾಹಿತ್ಯ ಚರಿತ್ರೆಯ ಬಗ್ಗೆ ಮಾಹಿತಿ ಸಂಗ್ರಹ ಮಾಡುತ್ತಿದ್ದು ಹಳೆಯ  ಹವ್ಯಕ ವಾರ್ತೆ ಪತ್ರಿಕೆಗಳಲ್ಲಿ ದಾಖಲೆಗಳನ್ನು ಹುಡುಕುತ್ತಾ ಇರುವಾಗ ಅಂದು ನಾವು ಅಭಿನಯಿಸಿದ ನಾಟಕದ ವರದಿಯನ್ನು ಓದಿದರು.2006 ರ ತನಕ ಹವ್ಯಕ ಮಹಿಳೆಯರು ನಾಟಕ ರಚಿಸಿದ್ದು ಆ ತನಕ ಅವರ ಗಮನಕ್ಕೆ ಬಂದಿರಲಿಲ್ಲ, ಅ ವರದಿಯನ್ನು ಓದಿದಾಗ ನಾನು ರಚಿಸಿದ ಸುಬ್ಬಿ ಇಂಗ್ಲಿಷ್ ಕಲ್ತದು ನಾಟಕ ವೇ ಮಹಿಳೆ ರಚಿಸಿದ ಮೊದಲ ಹವ್ಯಕ ನಾಟಕ ಎಂಬುದನ್ನು ಸ್ಪಷ್ಟವಾಗಿ ತಿಳಿದು ಆ ನಾಟಕವನ್ನು ಪ್ರಕಟಿಸುವ ಸಲುವಾಗಿ ಅದರ ಹಸ್ತಪ್ರತಿ ಸಂಹ್ರಹಿಸುವ ಜವಾಬ್ದಾರಿ ಯನ್ನು ರಾಜಗೋಪಾಲ ಕನ್ಯಾನ ಅವರಿಗೆ ವಹಿಸಿದ್ದರು. ಹಾಗಾಗಿ ಅವರು ಲಕ್ಷ್ಮೀ ಜಿ ಪ್ರಸಾದ ಯಾರೆಂದು ಹುಡುಕುತ್ತಾ ಇದ್ದರು.ಆ ನಾಟಕ ಮಂಗಳೂರು ಹವ್ಯಕ ಸಭೆಯಲ್ಲಿ ಪ್ರದರ್ಶನ ಮಾಡಿದ ಸಮಯದಲ್ಲಿ ನಾನು ಮಂಗಳೂರಿನಲ್ಲಿ ಇದ್ದೆ.ನಂತರ ನಾನು ಪ್ರಸಾದ ಉದ್ಯೋಗಕ್ಕಾಗಿ ಎಲ್ಲೆಲ್ಲೋ ಅಲೆದಾಡುತ್ತಾ ಬೆಂಗಳೂರು ಸೇರಿದ್ದೆವು.ಮಂಗಳೂರು ಹವ್ಯಕ ಸಭೆಯಲ್ಲಿ ವಿಚಾರಿಸಿದಾಗ ಅವರು  ಮೂಲತಃ ಹೊಸಂಗಡಿ ಸಮಿಪದ  ಮೀಯಪದವು,ಕೋಳ್ಯೂರು ಸಮೀಪದವರು.ಈಗ ಬೆಂಗಳೂರು ನಲ್ಲಿ ಎಲ್ಲೋ ಇರಬೇಕು ಎಂದು ತಿಳಿಸಿದರಂತೆ.
‌ನನ್ನ ಮನೆ ಹೆಸರು ವಿದ್ಯಾ ಎಂದು. ನಮ್ಮ ಊರ ಕಡೆ ನಮ್ಮ ಕುಟುಂಬದವರಿಗೆ ಬಿಟ್ಟು ಬೇರೆ ಯಾರಿಗೂ ನನಗೆ ಲಕ್ಷ್ಮೀ ಎಂಬ ಹೆಸರು ಇರುವುದಾಗಲೀ ,ಲಕ್ಷ್ಮೀ ಜಿ ಪ್ರಸಾದ ಎಂಬ ಹೆಸರು ಇರುವುದಾಗಲಿ ಗೊತ್ತೇ ಇಲ್ಲ.ಹಾಗಾಗಿ ನಮ್ಮ ಊರ ಕಡೆ ಲಕ್ಷ್ಮೀ ಜಿ ಪ್ರಸಾದ ಯಾರು ಎಲ್ಲಿದ್ದಾರೆ ಎಂದು ವಿಚಾರಿಸಿದಾಗ ಅಂತ ಹೆಸರಿನವರು ಇಲ್ಲಿ ಯಾರೂ ಇಲ್ಲ ಎಂದು ಹೇಳಿದರಂತೆ.
‌ ರಾಜಗೋಪಾಲ ಕನ್ಯಾನ ಅವರು ಯಕ್ಷಗಾನ ಪ್ರೇಮಿಯಾಗಿದ್ದು ಈ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದವರು.ಕಲಾ ಪೋಷಕರಾಗಿದ್ದುಹಲವಾರು ಸಂಘ ಸಂಸ್ಥೆಗಳೊಂದಿಗೆ ಕೆಲಸ ಮಾಡಿದವರು,ಸಂಪರ್ಕ ಇದ್ದವರು .ಹಾಗಾಗಿ ಅವರು ತಮ್ಮ ಪರಿಚಯದ ಜನರಲ್ಲಿ ಲಕ್ಷ್ಮೀ ಜಿ ಪ್ರಸಾದ ಯಾರು ಎಲ್ಲಿದ್ದಾರೆ ಎಂದು ವಿಚಸರಿಸುತ್ತಾ ಇದ್ದರು.
‌ಹಾಗೆಯೇ ಒಂದು ದಿನ ಬಿ ಎಂ ಶ್ರೀ ಪ್ರತಿಷ್ಠಾನ ದ ಗೌರವ ಕಾರ್ಯದರ್ಶಿಗಳಾಗಿದ್ದ ಗೀತಾಚಾರ್ಯ ಸಿಕ್ಕಾಗ ನನ್ನ ಬಗ್ಗೆ ಮಾಹಿತಿಗಾಗಿ ವಿಚಾರಿಸಿದರಂತೆ.ಆಗ ಅವರು ನಮ್ಮಲ್ಲಿ ಪಿಎಚ್ ಡಿ ಅಧ್ಯಯನ ಮಾಡುತ್ತಿರುವ ಲಕ್ಷ್ಮೀ ವಿ ಎಂಬವರು ಇದ್ದಾರೆ.ಅವರಿಗೆ ಬರವಣಿಗೆಯ ಹವ್ಯಾಸವೂ ಇದೆ.ಅವರೇ ಲಕ್ಷ್ಮೀ ಜಿ ಪ್ರಸಾದ ಇರಲೂ ಸಾಕು ಎಂದು ಹೇಳಿ ನನ್ನ ಫೋನ್ ನಂಬರ್ ನೀಡಿದ್ದರು.
‌ನಮ್ಮ ಮನೆಗೆ ಬಂದ ರಾಜಗೋಪಾಲ ಅವರು ನನ್ನ ನಾಟಕದ ಹಸ್ತ ಪ್ರತಿ ಇದೆಯಾ ,ಹವ್ಯಕ ಅಧ್ಯಯನ ಕೇಂದ್ರದ ಮೂಲಕ ಪ್ರಕಟಿಸುತ್ತೇವೆ ಎಂದು ತಿಳಿಸಿದರು..ಇದೆ,ಎಲ್ಲಿದೆ ಎಂದು ಹುಡುಕಬೇಕು  ಒಂದು ವಾರ ಸಮಯ ಕೊಡಿ ಎಂದು ಹೇಳಿದೆ.ನನ್ನ ಎಂ ಫಿಲ್ ಸಂಶೋಧನಾ ಪ್ರಬಂಧದ ಒಂದು ಪ್ರತಿ ಅಲ್ಲಿಯೇ ಮೆಜಿನ ಮೇಲೆ ಇತ್ತು.
‌ಅದನ್ನು ನೋಡಿ ತೆರೆದು ಮೇಲೆ ಮೇಲಿನಿಂದ ಓದಿ ತುಂಬಾ ಚೆನ್ನಾಗಿದೆ, ಪ್ರಕಟ ಮಾಡಿ ಎಂದು ಹೇಳಿದರು.ಏನೋ   ಎಂ ಫಿಲ್ ಪದವಿಗಾಗಿ ಒಂದಷ್ಟು ಬರೆದಿದ್ದೆ.ಅದು ಪ್ರಕಟಮಾಡಲು ಯೋಗ್ಯವಾದುದು ಎಂದು ನಾನು ಕನಸುಮನಸಿನಲ್ಲೂ ಯೋಚಿಸಿರಲಿಲ್ಲ.ರಾಜ ಗೋಪಾಲ ಕನ್ಯಾನ ತುಂಬಾ ತಿಳಿದವರು.ಅವರು ಹೇಳಿದ ಕಾರಣ ಅದು ಪ್ತಕಟ ಮಾಡಲು ಯೋಗ್ಯವಾಗಿರಬಹುದು ಎಂದು ನನಗೂ ಅನಿಸಿತು.
‌ಅದಕ್ಕೆ ಸ್ವಲ್ಪ ಮೊದಲು ಮನೆಯಂಗಳದಿ ಹೂ ಎಂಬ ಕಥಾ ಸಂಕಲನ ಮತ್ತು ಅರಿವಿನಂಗಳದ ಸುತ್ತ ಎಂಬ ಶಿಕ್ಷಣ ಸಂಬಂಧಿಸಿದ ಲೇಖನಗಳ ಸಂಕಲನವನ್ನು ಪ್ರಕಟಿಸಿ ಮಾರಾಟ ಮಾಡಲು ಅಂಗಡಿ ಅಂಗಡಿ ಅಲೆದರೂ ಅಗದೆ  ನಷ್ಟ ಮಾಡಕೊಂಡಿದ್ದೆ.( ನಂತರ ಗ್ರಂಥಾಲಯಕ್ಕೆ ಈ ಪುಸ್ತಕಗಳು ಅಯ್ಕೆ ಯಾಗಿ ಅವರು ಮುನ್ನೂರು ಮುನ್ನೂರು ಪುಸ್ತಕಗಳನ್ನು ತೆಗೆದುಕೊಂಡ ಕಾರಣ ಹಾಕಿದ ಅಸಲು ಹಿಂದೆ ಬಂದಿತ್ತು)
‌ಹಾಗಾಗಿ ನನಗೆ ಸ್ವಂತ ಪ್ರಕಟಿಸಲು ಸಾಧ್ಯವಿಲ್ಲ ಎಂದು ಹೇಳಿದೆ.ಆಗ ಅವರು ಯಾರಾದರೂ ಪ್ರಕಾಶಕರಲ್ಲಿ ಮಾತಾಡಿ ಪ್ತಕಟ ಮಾಡಿ ಕೊಡುತ್ತೇನೆ ಎಂದು ಹೇಳಿದರು.ಮತ್ತೆ ಕೆಲವೇ ತಿಂಗಳುಗಳಲ್ಲಿ ನನ್ನ ಬಳಿಯಿಂದ ಅದರ ಮುಲಪ್ರತಿಯನ್ನು ತೆಗೆದುಕೊಂಡು ಹೋಗಿ ಅವರು ಸ್ವತಃ ಮುತುವರ್ಜಿ ವಹಿಸಿ  ನನ್ನ ಈಜೋ ಮಂಜೊಟ್ಟಿಗೋಣ ಪಾಡ್ದನ- ಒಂದು ವಿಶ್ಲೇಷಣಾತ್ಮಕ ಅಧ್ಯಯನ ಎಂಬ ಎಂ ಫಿಲ್ ಪ್ರಬಂಧವನ್ನು  ದೈವಿಕ ಕಂಬಳ ಕೋಣ ಎಂಬ ಹೆಸರಿನಲ್ಲಿ ಹರೀಶ್ ಎಂಟರ್ ಪ್ರೈಸಸ್ ಎಂಬ ಪ್ರಕಾಶಕರ ಮೂಲಕ ಪ್ರಕಟಮಾಡಿ ಹವ್ಯಕ ಸಭೆಯ ಕಾರ್ಯಕ್ರಮ ಒಂದರಲ್ಲಿ ಮಲ್ಲೇಪುರಂ ವೆಂಕಟೇಶ್ ಅವರ ಕೈಯಿಂದ ಬಿಡುಗಡೆ ಕೂಡ ಮಾಡಿಕೊಟ್ಟರು.
‌ಹೀಗೆ ನನ್ನ ಸಂಶೋಧನಾ ಪ್ರಕಟನೆಗೆ ಭದ್ರವಾದ ತಳಪಾಯ ಹಾಕಿ ಕೊಟ್ಟರು  .ಈ ಕೃತಿಯನ್ನು ಓದಿದ ಅಮೃತ ಸೋಮೇಶ್ವರ ಅವರು ಇದು ಒಂದು ಮಹತ್ವದ ಸಂಶೋಧನೆ ಆಗಿದೆ.ಇದೇ ರೀತಿ ಮುಂದುವರಿಯಿರಿ ಎಂದು ಹೇಳಿ ಪ್ರೋತ್ಸಾಹ ನೀಡಿದರು.
‌ಬಹುಷ ಅದೊಂದು ಪುಸ್ತಕ ವನ್ನು ರಾಜ ಗೋಪಾಲ ಕನ್ಯಾನ ಅವರು ಪ್ತಕಟಿಸಿ ಕೊಡದೆ ಇದ್ದರೆ ನನ್ನ ಮುಂದಿನ ಯಾವುದೇ ಸಂಶೋಧನಾ ಕೃತಿಗಳು ಪ್ರಕಟವಾಗುತ್ತಿರಲಿಲ್ಲ ಹೆಚ್ಚೇಕೆ ಅ ಪುಸ್ತಕ ಓದಿ ಅಮೃತ ಸೋಮೇಶ್ವರರು ಪ್ರೋತ್ಸಾಹ ನೀಡದೆ ಇರುತ್ತಿದ್ದರೆ ನಾನು ಭೂತಾರಾಧನೆ, ತುಳು ಸಂಸ್ಕೃತಿ ಕುರಿತಾದ ಅಧ್ಯಯನ ಮುಂದುವರಿಸುತ್ತಿರಲಿಲ್ಲ ಖಂಡಿತಾ. ಈಗ ನನ್ನ ಹದಿನೇಳು ಸಂಶೋಧನಾತ್ಮಕ ಕೃತಿಗಳು  ,ಒಂದು ಕಥಾ ಸಂಕಲನ, ಒಂದು ಲೇಖನ ಸಂಕಲನ ಒಂದು ನಾಟಕ ಸಂಕಲನ ಪ್ರಕಟವಾಗಿವೆ.ಇದಕ್ಕೆಲ್ಲ ಪ್ರೇರಣೆ ರಾಜಗೋಪಾಲ ಕನ್ಯಾನ ಅವರು ಅಂದು ನನ್ನ ಪ್ರಬಂಧ ಓದಿ ಪ್ರಕಟಿಸಿಕೊಟ್ಟಿರುವುದೇ ಆಗಿದೆ.ಮತ್ತು ನನ್ನ ನಾಟಕ ಸುಬ್ಬಿ ಇಂಗ್ಲಿಷ್ ಕಲ್ತದು ನಾಟಕ ಮಹಿಳೆ ರಚಿಸಿದ ಮೊದಲ ಹವ್ಯಕ ಕನ್ನಡ ನಾಟಕ ಎಂಬ ಚಾರಿತ್ರಿಕ ಮಹತ್ವ ಪಡೆಯಲು ತನ್ಮೂಲಕ ಹವ್ಯಕ ಸಾಹಿತ್ಯ ಚರಿತ್ರೆಯಲ್ಲಿ ನನಗೊಂದು ಚಾರಿತ್ರಿಕ ದಾಖಲೆ ಸಿಗಲು ಅವರೇ ಕಾರಣರಾಗಿದ್ದಾರೆ.
‌ಇವರು ನನಗೆ ಮಾತ್ರ ಈ ರೀತಿಯ ಬೆಂಬಲ ನೀಡಿದ್ದಲ್ಲ.ನನ್ನಂತೆ ಇರುವ ಅನೇಕರ ಅಜ್ಞಾತ ಕೃತಿಗಳು ಬೆಳಕಿಗೆ ಬರುವಂತೆ ಮಾಡಿದ್ದಾರೆ.
‌ಪದ್ಯಾಣ ಗೋಪಾಲಕೃಷ್ಣ ಎಂಬ ಅಪ್ರತಿಮ ಪತ್ರಕರ್ತರ ಆತ್ಮ ಕಥನಾತ್ಮಕ ಅಂಕಣ ಬರಹಗಳನ್ನು ಸಂಗ್ರಹಿಸಿ ವಿಚಿತ್ರ ಸೃಷ್ಟಿ ಗಳ ಲೋಕದಲ್ಲಿ ಎಂಬ ಹೆಸರಿನಲ್ಲಿ ಪ್ರಕಟಿಸಿದ್ದಾರೆ. ಹಾಗೆಯೇ ಅನೇಕ ಯಕ್ಷಗಾನಪ್ರಸಂಗಗಳ ಕೃತಿಗಳನ್ನು, ಯಕ್ಷಗಾನ ಸಂಬಂಧಿಸಿದಂತೆ ಬೇರೆ ಬೇರೆಯವರು ರಚಿಸಿದ ಕೃತಿಗಳು ಬೆಳಕಿಗೆ ಬರುವಂತೆ ಮಾಡಿದ್ದಾರೆ. ಆದರೆ ಇದಕ್ಕಾಗಿ ಅವರು ಯಾವುದೇ ಪ್ರತಿಫಲ ಬಯಸಿಲ್ಲ.ನಿಷ್ಕಾಮ ಕರ್ಮ ಅವರದು.
‌ವೃತ್ತಿಯಲ್ಲಿ ಅಕೌಂಟ್ ಆಫೀಸರ್ ಅಗಿರುವ ಅವರು ಪ್ರವೃತ್ತಿಯಲ್ಲಿ ಯಕ್ಷಗಾನ ಕಲಾವಿದರು,ಅರ್ಥಧಾರಿಗಳು.ಕಲಾ ಪೋಷಕರು.ಯಕ್ಷ ಕರ್ದಮ ಎಂಬ ಸಂಸ್ಥೆಯ ಮೂಲಕ ಅನೇಕ ಕಾರ್ಯಕ್ರಮ ಗಳನ್ನು ಆಯೋಜನೆ ಮಾಡಿದ್ದಾರೆ. ಯಾವುದೇ ಹೆಸರು ದುಡ್ಡಿಗಾಗಿ ಇವನ್ನು ಮಾಡಿಲ್ಲದೇ ಇದ್ದರೂ ಅನೇಕ ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿವೆ.
ಪದ್ಯಾಣ ಗೋಪಾಲ ಕೃಷ್ಣರ ಕುರಿತಾಗಿ ಚಿದಂಬರ ಬೈಕಂಪಾಡಿ ರಚಿಸಿದ   ಪ.ಗೋ ಪ್ರಪಂಚ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಪ.ಗೋ ಅವರ ಮಕ್ಕಳು ರಾಜಗೋಪಾಲ ಕನ್ಯಾನ ಅವರನ್ನು ಗುರುತಿಸಿ ಗೌರವಿಸಿದ್ದಾರೆ.
ಗಾನ ಸೌರಭ ಯಕ್ಷಗಾನ ಶಾಲೆ ವತಿಯಿಂದ ಯಕ್ಷಾಭಿವಂದನಮ್ ಪುರಸ್ಕಾರ ವನ್ನು ನೀಡಿ ಗೌರವಿಸಿದ್ದಾರೆ.ಇನ್ನೂ ಅನೇಕ ಸಂಘ ಸಂಸ್ಥೆಗಳು ಗೌರವಿಸಿವೆ.
ಬೇರೆಯವರ ಪ್ರತಿಭೆಯನ್ನು ಗುರುತಿಸಿ ,ಪ್ರೋತ್ಸಾಹ ನೀಡುವ ಯಾವುದೇ ಪ್ರತಿಫಲದ ಅಪೇಕ್ಷೆ ಇಲ್ಲದೆ ಅವರ ಕೃತಿಗಳ ಪ್ರಕಟನೆಗೆ ಸಹಾಯ ಮಾಡುವ ,ಎಲೆಮರೆಯ ಕಾಯಿಗಳನ್ನು ಬೆಳಕಿಗೆ ತಂದು ತಾವು ತೆರೆಮರೆಯಲ್ಲಿ ನಿಲ್ಲುವ ಇವರ ಔದಾರ್ಯ,ಉದಾತ್ತ ಹೃದಯವನ್ನು ಯಾರೂ ಕೂಡ ಮೆಚ್ಚ ಬೇಕಾದ್ದೇ ಸರಿ
ಇಂತಹವರ ಸಂಖ್ಯೆ ತೀರಾ ಕಡಿಮೆ ಇದೆ.ನನಗೆ ರಾಜಗೋಪಾಲ ಕನ್ಯಾನ ಈಗ  ಸಹೋದರನ ಸ್ಥಾನದಲ್ಲಿ ನಿಂತು ಬೆಂಬಲ ನೀಡುತ್ತಿರುವ ರಾಜಗೋಪಾಲಣ್ಣ ಆಗಿದ್ದಾರೆ.
ಇಂತಹವರ ಸಂಖ್ಯೆ ಹೆಚ್ಚಾಗಲಿ ಎಂದು ಆಶಿಸುವೆ
© ಡಾ.ಲಕ್ಷ್ಮೀ ಜಿ ಪ್ರಸಾದ


No comments:

Post a Comment