Thursday, 7 September 2017

ಬದುಕೆಂಬ ಬಂಡಿಯಲಿ ಅಚ್ಚರಿಯ ತಿರುವುಗಳು

ಇಂದು ಕಾಲೇಜಿನಿಂದ ಮನೆಗೆ ಬರುತ್ತಿರ ಬೇಕಾದರೆ ಬಸ್ಸಿನಲ್ಲಿ ನಾನು ಕುಳಿತ ಸೀಟಿಗಿಂತ ಎರಡು ಸೀಟು ಮುಂದೆ ಕುಳಿತಿದ್ದ ಯುವತಿ ಹಿಂತಿರುಗಿ ನೋಡಿ ಮುಗುಳು ನಕ್ಕರು.ನನ್ನ ಹಿಂದಿನ ಸೀಟ್ ನಲ್ಲಿ ಯಾರಾದರೂ ಅವರ ಪರಿಚಿತರು ಕುಳಿತಿರಬಹುದು.ಅವರನ್ನು ನೋಡಿ ಪರಿಚಯದ ನಗು ಬೀರಿರಬಹುದು ಎಂದು ಕೊಂಡೆ.ಅವರು ಮತ್ತೊಮ್ಮೆ ನೋಡಿ‌ಮುಗುಳು ನಕ್ಕರು ಯಾರಾದರೂ ನನ್ನ ಪರಿಚಿತರಿದ್ದು ನಾನು ಮರೆತಿರಬಹುದೇನೋ ಎಂದು ಕೊಂಡು ನಾನು ಪ್ರತಿನಗು ಬೀರಿದೆ. ಮುಂದಿನ ಸ್ಟಾಪ್ ನಲ್ಲಿ ಅವರ ಪಕ್ಕದ ಸೀಟ್ನಲ್ಲಿದ್ದವರು ಇಳಿದು ಹೋದರು.ಆಗ ಅವರು ನನ್ನನ್ನು ಇಲ್ಲಿಗೆ ಬರ್ತೀರಾ ಮೇಡಂ pls ಎಂದು ‌ಕರೆದರು.ಯಾಕೆಂದು ಗೊತ್ತಾಗದಿದ್ದರೂ ಎದ್ದು ಅವರ ಪಕ್ಕ ಕುಳಿತೆ." ನಿಮ್ಮಲ್ಲಿ ಮಾತಾಡಲು ಯುನಿವರ್ಸಿಟಿಗೆ ಬರಬೇಕೆಂದಿದ್ದೆ " ಎಂದು ಹೇಳಿದರು.ಯುನಿವರ್ಸಿಟಿಯಾ ? ಯಾವ ಯುನಿವರ್ಸಿಟಿ ? ನೀವು ನನ್ನನ್ನು ಬೇರೆ ಯಾರೋ ಎಂದು ತಪ್ಪಾಗಿ ಭಾವಿಸಿರಬೇಕು ಎಂದು ಹೇಳಿದೆ."ನೀವು ಬೆಂಗಳೂರು ಯುನಿವರ್ಸಿಟಿ ಯ ಕನ್ನಡ ಪ್ರೊಫೆಸರ್ ಅಲ್ವಾ ? ಎಂದು ಕೇಳಿದರು
ಅಲ್ಲ ನಾನು ನೆಲಮಂಗಲ ಪಿಯು ಕಾಲೇಜು ಉಪನ್ಯಾಸಕಿ ಎಂದು ಉತ್ತರಿಸಿದೆ .ನೀವು ಲಕ್ಷ್ಮೀ ಜಿ ಪ್ರಸಾದ್ ತಾನೇ ? ಎಂದು ಕೇಳಿದರು.ಹೌದು ಎಂದೆ."ಗಣೇಶಯ್ಯ ಕಾದಂಬರಿಯಲ್ಲಿನ ಲಕ್ಷ್ಮೀ ಪೋದ್ದಾರ್ ನೀವೆ ತಾನೆ ? ನಿಮ್ಮ ಫೋಟೋ ಕೂಡಾ ಅದರಲ್ಲಿ ಇದೆ" ಎಂದು ಹೇಳಿದರು.ಆಗ ನನಗೆ ವಿಷಯವೇನೆಂದು ತಲೆಗೆ ಹೋಯಿತು. ಕೆ ಎನ್ ಗಣೇಶಯ್ಯ ಅವರು ಅವರ ಬಳ್ಳಿ ಕಾಳ ಬೆಳ್ಳಿ ಕಾದಂಬರಿಯಲ್ಲಿ  ನನ್ನನ್ನು ಒಂದು ಮುಖ್ಯ ಪಾತ್ರವಾಗಿ ಚಿತ್ರಿಸಿದ್ದಾರೆ. ಅಲ್ಲಿಯೂ ತುಳು ಸಂಶೋಧಕಿಯ ಪಾತ್ರ ನನ್ನದು.ಅ ಕಾದಂಬರಿಯಲ್ಲಿ ಲಕ್ಷ್ಮೀ ಪೋದ್ದಾರ್ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಪ್ರೊಫೆಸರ್. ಆ ಕಾದಂಬರಿಯ ಕೊನೆಯಲ್ಲಿ ಡಾ.ಗಣೇಶಯ್ಯ ಅವರೊಂದಿಗಿನ ಫೋಟೋ ಹಾಕಿ ಲಕ್ಷ್ಮೀ ಜಿ ಪ್ರಸಾದ ಪೋದ್ದಾರ್ ಆದ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದ್ದರು .ಅವರ ಕಾದಂಬರಿ ಓದಿರುವ ಸುನೀತಾ ಅವರು ಅಲ್ಲಿ ಹಾಕಿರುವ ನನ್ನ ಫೋಟೋ ನೋಡಿದ್ದು ಬಸ್ ನಲ್ಲಿ ಗುರುತಿಸಿ ಮಾತನಾಡಿದರು.ಗಣೇಶಯ್ಯ ಅವರ ಕಾದಂಬತಿಗಳ ಬಗ್ಗೆ  ಮಾತನಾಡಿದರು ಭೂತಾರಾಧನೆ ತುಳು ಸಂಸ್ಕೃತಿಯ ಕುರಿತಾಗಿಯೂ ಕುತೂಹಲದಿಂದ ಹಲವಾರು ಪ್ರಶ್ನೆಗಳನ್ನು ಕೇಳಿದರು .ನನ್ನ ಪೋನ್ ನಂಬರ್ ತಗೊಂಡರು.ಅವರೊಂದಿಗೆ ಸೆಲ್ಫಿ ತಗೊಳ್ಳಬೇಕು ಅನ್ನುವಷ್ಟರಲ್ಲಿ ನಾನು ಇಳಿಯುವ ಸ್ಟಾಪ್ ಬಂತು.ಅಂದ ಹಾಗೆ ಆ ಅಂದದ ಯುವತಿ ಕಾನ್ಪುರದ ಐಐಟಿಯಲ್ಲಿ ಎಂ ಟೆಕ್ ಓದ್ತಿದ್ದಾರೆ.ಅವರಿಗೆ ಕನ್ನಡ ಕಥೆ ಕಾದಂಬರಿಗಳನ್ನು ಓದುವ ಹವ್ಯಾಸವಿದೆ.ಉತ್ತರ ಕಾಂಡ ಸೇರಿದಂತೆ ಭೈರಪ್ಪನವರ ಎಲ್ಲಾ ಕಾದಂಬರಿಗಳನ್ನು ಓದಿದ್ದಾರೆ.ಕೆ ಎನ್ ಗಣೇಶಯ್ಯ ಅವರ ಎಲ್ಲಾ ಕಾದಮಬರಿಗಳನ್ನೂ ಓದಿದ್ದಾರೆ.ವಸುಧೇಂದ್ರ ಕೂಡ ಅವರಿಗೆ ತುಂಬಾ ಅಚ್ಚುಮೆಚ್ಚು ಅಂತೆ.ಎ ಅರ್ ಮಣಿಕಾಂತ್ ಅವರ ಅಮ್ಮ ಹೇಳಿದ ಎಂಟು ಸುಳ್ಳುಗಳು ಅನ್ನು ಇಪ್ಪತ್ತು ಮೂವತ್ತು ಬಾರಿ ಓದಿದ್ದಾರಂತೆ.ಅವರ ಮಾತೃಭಾಷೆ ತೆಲುಗು ಅಂತೆ ಅದರೆ ಹುಟ್ಟಿ ಬೆಳೆದದ್ದು ಎಲ್ಲಾ ಬೆಂಗಳೂರಿನಲ್ಲಿ .ಅವರ ಸಾಹಿತ್ಯದೆಡೆಗಿನ ಒಲವು ನೋಡಿ ತುಂಬಾ ಸಂತಸವಾಯಿತು
https://www.google.co.in/amp/avadhimag.com/%3fp=173110&amp=1

No comments:

Post a Comment