Thursday, 1 June 2017

ಬದುಕ ಬಂಡಿಯಲಿ 12 ಕಾಲೇಜಿನಲ್ಲಿ ಮೊದಲ ದಿನದ ಪೇಚಾಟ © ಡಾ ಲಕ್ಷ್ಮೀ ಜಿ ಪ್ರಸಾದ

ಮೂರು ದಶಕಗಳ ಹಿಂದೆ ನಮ್ಮ ಸಮಾಜದಲ್ಲಿ ಸ್ತ್ರೀ ಶಿಕ್ಷಣಕ್ಕೆ ಯಾವುದೇ ರೀತಿಯ ಪ್ರಾಧಾನ್ಯತೆ ಇರಲಿಲ್ಲ. ನಮ್ಮ ಹವ್ಯಕರಲ್ಲಿ ಅಂತೂ ಹುಡುಗಿಯರು ಓದುವುದು ನಿಷ್ಪ್ರಯೋಜಕ ಎಂದು ಹೇಳುವ ಬಗ್ಗೆ   ಕೂಸು ಎಂತ ಓದಿದರೆಂತ ಒಲೆ ಬೂದಿ ಒಕ್ಕುದು ತಪ್ಪ ಎಂಬ ಮಾತು ಪ್ರಚಲಿತವಿತ್ತು .ಹುಡುಗಿಯರು ಏನು ಓದಿದರೇನು ? ಒಲೆಉ ಬೂದಿ ಗೋರುವುದು ತಪ್ಪದು ಎಂದು ಈ ಮಾತಿನ ಅರ್ಥ.
ಹುಡುಗಿಯರು ಓದುವುದು ವ್ಯರ್ಥ .ಏನೇ ಓದಿದರೂ ಅವರು ಅಡುಗೆ ಮಾಡಲು ಲಾಯಕ್ಕು ಎಂಬ ರೀತಿಯ ಅವಜ್ಞೆ ಆ ಕಾಲದಲ್ಲಿ ಇತ್ತು.
ಆದರೂ ಆ ಕಾಲದಲ್ಲಿ ನನ್ನ ಅಮ್ಮ ನನ್ನ ಓದಿಗೆ ಬೆಂಬಲ ನೀಡಿದರು.ತನ್ನ ಮಗಳು ಓದಿ ಒಳ್ಳೆಯ ಉದ್ಯೋಗ ಪಡೆಯಬೇಕು ಎಂಬುದು ಅಮ್ಮನ ಆಶಯವಾಗಿತ್ತು.
ಆಗ ನಮಗೆ ಮಂಗಳೂರಿನಲ್ಲಿ ಕಾಲೇಜುಗಳು ಇರುವುದು ಗೊತ್ತಿತ್ತಾದರೂ ಸೈಂಟ್ ಅಲೋಶಿಯಸ್, ಕೆನರಾ,ಆಗ್ನೆಸ್ ಎಂಬ ಮೂರು ಪ್ರತಿಷ್ಠಿತ ಕಾಲೇಜುಗಳು ಬಿಟ್ಟರೆ ಉಳಿದವುಗಳ ಹೆಸರು ಕೂಡ ತಿಳಿದಿರಲಿಲ್ಲ .

ಫಲಿತಾಂಶಕ್ಕೆ ಮೊದಲೇ ನಾವು ಅರ್ಜಿ ತಂದಿರಿಸಬೇಕು ಇತ್ಯಾದಿ ಯಾಗಿ ಪ್ರವೇಶ ಪ್ರಕ್ರಿಯೆ ಬಗ್ಗೆ ಯೂ ತಿಳಿದಿರಲಿಲ್ಲ .ಹಾಗಾಗಿ ನನ್ನ ಫಲಿತಾಂಶ ಬರುವ ತನಕ ನಾವು ಯಾವುದೇ ಕಾಲೇಜಿನಿಂದ ಅರ್ಜಿ ತಂದು ಇಡಲಿಲ್ಲ.ಫಲಿತಾಂಶ ಬಂದ ತಕ್ಷಣವೇ ನನ್ನ ಭಾವ ( ದೊಡ್ಡಮ್ಮನ ಮಗಳ ಗಂಡ) ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು ಅವರಲ್ಲಿ ಅರ್ಜಿ ತಂದು ಕೊಡಲು ಕೇಳಿದೆವು.ಅವರು ಮಂಗಳೂರು ಸರ್ಕಾರಿ ಕಾಲೇಜಿನ( ಈಗಿನ ವಿಶ್ವವಿದ್ಯಾಲಯ ಕಾಲೇಜು) ಅರ್ಜಿ ತಂದು ಕೊಟ್ಟರು .ಉಳಿದೆಲ್ಲ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆ ಗಳು ಮುಗಿದಿದ್ದವು ( ಪ್ರವೇಶ ಪ್ರಕ್ರಿಯೆ ಗಳ ಬಗ್ಗೆ ಮುಂದೆ ಓದಬಹುದಾದ ಕೋರ್ಸ್ ಪದವಿಗಳ ಬಗ್ಗೆ ನಮಗೆ ನಾನು ಓದಿದ ಶಾಲೆಯ ಶಿಕ್ಷಕರು ಯಾವುದೇ ಒಂದು ರೀತಿಯ ಮಾಹಿತಿ ನೀಡಿರಲಿಲ್ಲ ಅದು ಯಾಕೆ ? ಈ ಹಳ್ಳಿ ಮಕ್ಕಳು ಓದಿ ಏನು ಉದ್ದಾರ ಆದಾರು ಎಂಬ ಉಪೇಕ್ಷೆ ಇತ್ತೇ ಅಥವಾ ಅವರಿಗೂ ಈ ಬಗ್ಗೆ ಮಾಹಿತಿ ಇರಲಿಲ್ಲವೇ ? ನನಗೆ ಈ ಪ್ರಶ್ನೆ ಆಗಾಗ ಕಾಡುತ್ತದೆ)
ಆದರೂ ನಾನು ತಂದೆಯವರ ಜೊತೆ ಮಂಗಳೂರಿಗೆ ಹೋಗಿ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಒಂದು ಸೀಟು ಕೊಡುವಂತೆ ,ಓದಲು ಅವಕಾಶ ಕೊಡುವಂತೆ ವಿನಂತಿ ಮಾಡಿದೆವು.ಆಗ ಅಲ್ಲಿ ನನ್ನ ಮಾರ್ಕ್ಸ್ ನೋಡಿ ಇದು ಒಳ್ಳೆಯ ಮಾರ್ಕ್ಸ್ ಆದರೂ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಇಲ್ಲಿ ಇಂಗ್ಲಿಷ್ ಮೀಡಿಯಂ ನಲ್ಲಿ ಓದುವುದು ಕಷ್ಟ ಅಲ್ಲದೆ ಅಡ್ಮಿಶನ್ ಮುಗಿದಿದೆ ಎಂದು ಹೇಳಿದರು.
ಅದೇ ದಿನ ಸರ್ಕಾರಿ ಕಾಲೇಜಿನಲ್ಲಿ ನನಗೆ ಸೀಟ್ ಸಿಕ್ಕಿತು.
ಅದಾಗಿ ಹದಿನೈದು ದಿನಗಳ ನಂತರ ಕಾಲೇಜು ಆರಂಭ.ಮೊದಲ ದಿನ ಚಿಕ್ಕಪ್ಪನ ಮಗಳು ಅಕ್ಕ ಸಂಧ್ಯಾ ಜೊತೆ ಬಹಳ ಸಂಭ್ರಮದಿಂದ ಜೊತೆ ಕಾಲೇಜಿಗೆ ಹೊರಟೆ.ತಲಪ್ಪಾಡಿ ತಲುಪಿದಾಗ ಕರ್ನಾಟಕ ದಲ್ಲಿ ಯಾವುದೋ ಕಾರಣಕ್ಕೆ ಆ ದಿನ ಬಸ್ ಸ್ಟ್ರೈಕ್ ಹಾಗಾಗಿ ಅರ್ಧ ದಾರಿ ಹೋಗಿ ಹಿಂದೆ ಬಂದೆವು.ಮರು ದಿನ ಮಂಜೇಶ್ವರದಿಂದ ರೈಲು ಹತ್ತಿ ಹೋದೆವು .ಸಂಧ್ಯಾ ಅಕ್ಕ ನನ್ನನ್ನು ಮಂಗಳೂರು ಕಾಲೇಜಿಗೆ ಹೋಗುವವರ ಜೊತೆ ಸೇರಿಸಿ ಅವಳು ಓದುವ ಗಣಪತಿ ಕಾಲೇಜಿಗೆ ಹೋದಳು.ಮತ್ತು ಸಂಜೆ ಐದಯ ಗಂಟೆಗೆ ರೈಲು ಇದೆ ಅದಕ್ಕೆ ಬಾ ಎಂದು ಹೇಳಿದಳು.

ಅಂತೂ ಕಾಲೇಜು ತಲುಪಿದೆ.ಮೊದಲ ಎರಡು ಅವಧಿ ಯಾರೂ ಕ್ಲಾಸ್ ತೆಗೆದುಕೊಳ್ಳಲಿಲ್ಲ ಮಧ್ಯಾಹ್ನ ಮೇಲೆ ಮೂವರು ತರಗತಿ ತೆಗೆದುಕೊಂಡರು .ನಮ್ಮ ತರಗತಿಯಲ್ಲಿ ಇದ್ದವರೆಲ್ಲ ಕನ್ನಡ ಮಾಧ್ಯಮ ದಲ್ಲಿ ಓದಿದವರು.ಆದರೂ ಒಂದಕ್ಷರ ಕನ್ನಡ ದಲ್ಲಿ ಯಾವುದೇ ಒಬ್ಬ ಉಪ‌್ಯಾಸಕರು ಮಾತಾಡಲಿಲ್ಲ .ಇಂಗ್ಲಿಷ್ ತರಗತಿ ತೆಗೆದು ಕೊಂಡ ಓರ್ವ ಉಪನ್ಯಾಸಕಿ " ಏನೋ ಒಂದಷ್ಟು ಹೇಳಿ ವಿದೇಶಿ ಯರು ಮಸತಾಡುವ ರೀತಿಯ ಇಂಗ್ಲಿಷ್ ನಲ್ಲಿ ಎರಡು ನಿಮಿಷ  ಮಾತಾಡಿ ಬೋರ್ಡ್ ನಲ್ಲಿ If the boys learns to cook " ಎಂದು ಬರೆದು ಇಡೀ ಅವಧಿಯಲ್ಲಿ ಬೊಂಬೆ ತರಹ ನಿಂತಿದ್ದರು.ಬಾಬ್ ಕಟ್ ಮಾಡಿದ ಕೇಶ ಶೈಲಿಯ ಅವರೂ ನನಗೆ ಒಂದು ಬೊಂಬೆಯ ಹಾಗೆ ಕಾಣುತ್ತಿದ್ದರು .ನಾನು ಅವರ ಮುಖ ನೋಡುತ್ತಾ ಕುಳಿತೆ .ಅಲ್ಲಿನ ಇಂಗ್ಲಿಷ್ ವಾತಾವರಣದಲ್ಲಿ ನನ್ನ ಸಂಭ್ರಮವೆಲ್ಲ ಆತಂಕವಾಗಿ ಮಾರ್ಪಾಡಾಗಿತ್ತು. ತರಗತಿಯಲ್ಲಿ ಇದ್ದ    ಇಂಗ್ಲಿಷ್ ಮಾಧ್ಯಮ ದಲ್ಲಿ ಓದಿದ್ದ  ಒಬ್ಬಿಬ್ಬರು ಏನೋ ಬರೆದಿದ್ದು ಗಂಟೆ ಬಾರಿಸಿದಾಗ ಅದನ್ನು ತಗೊಂಡು ಅವರು ಹೋದರು .ಅವರು ಹಾಗೆ ಬೋರ್ಡ್ ನಲ್ಲಿ ಬರೆದದ್ದು ಏನಿರಬಹುದು ಎಂದು ನಾನು ಶಿಕ್ಷಕಿ ಯಾಗುವ ತನಕ ತಿಳಿದೆ ಇರಲಿಲ್ಲ. ನಾನು ಶಿಕ್ಷಕಿಯಾದ ಮೇಲೆ ಸಾಮಾನ್ಯವಾಗಿ ಮೊದಲ ಒಂದೆರಡು ದಿನ‌ಮಕ್ಕಳಿಗೆ ನಾವು ಪರಿಚಯ ದ ನಂತರ ಸರಳವಾದ ಪ್ರಬಂಧ ಗಳನ್ನು ಬರೆಯಲು ಹೇಳುತ್ತೇವೆ.ಆಗ ನನಗೆ ತಲೆಗೆ ಹೋದದ್ದು ನಾನು ಕಾಲೆಜಿಗೆ ಹೋದ ಮೊದಲ ದಿನ ಆ ಉಪನ್ಯಾಸಕಿ ಪ್ರಬಂಧ ಬರೆಯಲು ಹೇಳಿರಬಹುದೆಂದು ತಿಳಿಯಿತು.ಅದರೆ ನೂರರಷ್ಟು ಇದ್ದ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರೂ ಅವರು ನೀಡಿದ ಪ್ರಬಂಧ ಬರೆಯದೆ ಇದ್ದಾಗಲೂ ನಮಗೆ ಸರಳವಾಗಿ ಅರ್ಥವಾಗು ರೀತಿಯಲ್ಲಿ ಹೇಳಿ ನಾಲ್ಕು ಸಾಲು ಹೇಳಿಕೊಟ್ಟು ಬರೆಯಿಸುವ ಪ್ರಯತ್ನ ಮಾಡಲೇ ಇಲ್ಲ .ಆಗ ಈಗಿನಂತೆ ಫಲಿತಾಂಶ ಕಡಿಮೆ ಬಂದರೆ ಇವರನ್ನು ಯಾರೂ ಕೇಳುವವರು ಇರಲಿಲ್ಲವೇ ? ಬಹುಶಃ ಇರಲಿಲ್ಲ ಇದ್ದರೆ ಈಗ ನಾವೆಲ್ಲಾ ಮಾಡುವಂತೆ    ಕಲಿಸುವ ಯತ್ನ ಮಾಡುತ್ತಿದ್ದರು ಖಂಡಿತಾ

 ಕೊನೆಯ ಅವಧಿ ಸಂಜೆ ನಾಲ್ಕರಿಂದ ಐದು ಗಂಟೆ ತನಕ ಇತ್ತು .ರೈಲಿಗೆ ಹೋಗುವ ವಿದ್ಯಾರ್ಥಿ ಗಳಿಗೆ ಕೇಳಿದರೆ ಐದು ನಿಮಿಷ ಮೊದಲೇ ಬಿಡುತ್ತಾರೆ ಎಂದು ನನಗೆ ಮೊದಲೇ ಆ ಕಾಲೇಜಿನ ಹಿರಿಯ ವಿದ್ಯಾರ್ಥಿನಿಯರು ತಿಳಿಸಿದ್ದರು .ಕೊನೆಯ ಅವಧಿ ಗಣಿತದ್ದು ಆಗಿತ್ತು. ಅವರೂ ಒಂದಕ್ಷರ ಕನ್ನಡ ಪದ ಹೇಳಿರಲಿಲ್ಲ .ಹಾಗಿರುವಾಗ ಅವರಲ್ಲಿ ನಾನು ರೈಲಿಗೆ ಹೋಗಲು ಐದು ನಿಮಿಷ ಬೇಗ ಬಿಡಿ ಎಂದು ಕೇಳುವುದು ಹೇಗೆ ಅಂತ ಗೊತ್ತಾಗಲಿಲ್ಲ. ಐದು ಗಂಟೆಗೆ ಐದು ನಿಮಿಷ ಇರುವಾಗ ಬೇರೆ ದಾರಿ ಇಲ್ಲದೆ ಎದ್ದು ನಿಂತು ಕನ್ನಡ ದಲ್ಲಿಯೇ ಬೇಗ ಹೋಗಲು ಅನುಮತಿ ಕೇಳಿದೆ .ನನ್ನನ್ನು ಯಾವುದೋ ಅನ್ಯ ಗ್ರಹ ಜೀವಿ ಎಂಬಂತೆ ನೋಡಿ ಗೋ ಎಂದು ಹೇಳಿ ಹೋಗಲು ಅನುಮತಿ ನೀಡಿದರು .ಅಲ್ಲಿಂದ ಒಂದೇ ಉಸಿರಿಗೆ ಓಡಿಕೊಂಡು ರೈಲ್ವೇ ಸ್ಟೇಷನ್ ಗೆ ಬಂದೆ .ಅಲ್ಲಿ ಒಂದು ರೈಲು ನಿದಾನವಾಗಿ ಚಲಿಸಲು ಆರಂಭಿಸಿತ್ತು .ಓಡಿ ಹೋಗಿ ಕೊನೆಯ ಭೋಗಿಗೆ ಹತ್ತಿದೆ .ಅದೃಷ್ಟವಶಾತ್ ಅದು ನಾನು ಹೋಗ ಬೇಕಾಗಿದ್ದ ರೈಲು ಆಗಿತ್ತು .ನಾನು ಟಿಕೆಟ್ ಕೂಡ ತೆಗೆದುಕೊಂಡು ಇರಲಿಲ್ಲ. ಒಂದೊಮ್ಮೆ ಅದು ಬೇರೆಡೆಗೆ ಹೋಗು ರೈಲಾಗಿರುತ್ತಿದ್ದರೆ ? ಅಥವಾ ನಾನು ಬರುವಷ್ಟರಲ್ಲಿ ಅದು ಹೋಗಿರುತ್ತಿದ್ದರೆ ? ನನಗೆ ನೆನೆದರೆ ಈಗಲೂ ಭಯವಾಗುತ್ತದೆ.ಯಾಕೆಂದರೆ ನನಗೆ ಮಂಗಳೂರಿನಲ್ಲಿ ಓಡಾಡಿ ಅಭ್ಯಾಸ ಇರಲಿಲ್ಲ ಯಾರ ಪರಿಚಯವೂ ಇಲ್ಲದೆ ರೈಲ್ವೆ ಸ್ಟೇಷನ್ ನಲ್ಲಿ ಏನು ಮಾಡುತ್ತಿದ್ದೆನೋ ? ದೇವರೇ ಬಲ್ಲ!
ಸದ್ಯ ಹಾಗಾಗಲಿಲ್ಲ.
ಅದರ ಮರುದಿನಕ್ಕೆ ಆಗುವಾಗ ಬಸ್ ಸ್ಟ್ರೈಕ್ ನಿಂತಿದ್ದು ನಾನು ಅಕ್ಕನ ಜೊತೆ ನನ್ನ ತಂದೆ ಮನೆ ಕಾಸರಗೋಡು ಜಿಲ್ಲೆಯ ಕೋಳ್ಯೂರಿನಿಂದ ಮಂಗಳೂರಿಗೆ ಬಂದೆ.ನನ್ನನ್ನು ಕಾಲೇಜು ತಲುಪಿಸಿ ಅಕ್ಕ ಅವಳ ಕಾಲೇಜಿಗೆ ಹೋದಳು.
ಆ ದಿನವೂ ಒಂದೆರಡು ಅವಧಿ ತರಗತಿ ಯನ್ನು ಯಾರೋ ತೆಗೆದುಕೊಂಡರು.ಯಾವ ವಿಷಯ ಅಂತ ನನಗೆ ಗೊತ್ತಾಗಲಿಲ್ಲ ಯಾಕೆಂದರೆ ಅವರೆಲ್ಲರೂ ಸಾಕ್ಷಾತ್ ಇಂಗ್ಲೆಂಡಿಂದ ಉದುರಿದವರಂತೆ ಇಂಗ್ಲಿಷ್ ಅನ್ನು ವಿದೇಶಿ ಶೈಲಿಯಲ್ಲಿ  ಬಾಯಿಯಲ್ಲಿ ಕಲ್ಲು ಇಟ್ಟುಕೊಂಡವರಂತೆ ಮಾತಾಡುತ್ತಾ ಇದ್ದರು.ಅಂತೂ ಸಂಜೆ ಐದು  ಗಂಟೆಗೆ ಎಲ್ಲರೂ ಮನೆಗೆ ಹೊರಟೆವು .
ಈಗ ಬಂತು ನನಗೆ ಪೇಚಾಟ.ಬೆಳಗ್ಗೆ ಕಾಲೇಜಿಗೆ ಬಂದ ರಸ್ತೆ ವನ್ ವೇ ಆಗಿತ್ತು. ಈಗ ಹಿಂದೆ ಹೋಗುವುದು ಹೇಗೆ ತಿಳಿಯಲಿಲ್ಲ. ಆಗ ಸಹಾಯಕ್ಕೆ ಬಂದವಳು ನನಿ ಸಹಪಾಠಿ ಶಾಲಿನಿ.ಅವಳಿಗೆ ಮಂಗಳೂರು ಸರಿಯಾಗಿ ಪರಿಚಯ ಇದ್ದು ನನ್ನನ್ನು ರಸ್ತೆ ದಾಟಿಸಿ ಲೇಡಿ ಗೋಷನ್ ಆಸ್ಪತ್ರೆ ಬಳಿ ಕರೆದುಕೊಂಡು ಬಂದು ತಲಪ್ಪಾಡಿಗೆ ಹೋಗುವ 42 ಎಂಬ ಸಂಖ್ಯೆ ಯ ಬಸ್ ಗೆ ಹತ್ತಿಸಿದಳು ಅಂತೂ ಅವಳ ಸಹಾಯದಿಂದ ಮನೆ ಸೇರಿದೆ.ಇಂದು ನಮಗೆ ಕಾಲೇಜು ಆರಂಭ .ಹಾಗಾಗಿಯೇ ನನ್ನ ಕಾಲೇಜಿನ ಮೊದಲ ದಿನದ ನೆನಪು ಆಯಿತು
ಅಂದು ನನಗೆ ಕಲಿಯಲು ಅವಕಾಶ ಸಿಗದ ಪ್ರತಿಷ್ಠಿತ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ನಾನು ನಂತರ ಸಂಸ್ಕೃತ ಉಪನ್ಯಾಸಕಿಯಾಗಿ ನಾಲ್ಕು ವರ್ಷ ಕೆಲಸ ಮಾಡಿದ್ದೇನೆ .ಕಲಿಯಲು ಅವಕಾಶ ಸಿಗದೇ ಇದ್ದರೂ ಕಲಿಸಲು ಅವಕಾಶ ಸಿಕ್ಕಿತ್ತು © ಡಾ ಲಕ್ಷ್ಮೀ ಜಿ ಪ್ರಸಾದ ಕನ್ನಡ ಉಪನ್ಯಾಸಕಿ ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ ಬೆಂಗಳೂರು ಗ್ರಾಮಾಂತರ ಜಿಲ್ಲೆ.   

No comments:

Post a Comment