ಕನ್ನಡ ಪ್ರಭದಲ್ಲಿ ಪ್ರಕಟಿತ ಬರಹ
ಪ್ರಾಚೀನ ಕಾಲದಲ್ಲಿ ಭಾರತ ದೇಶದ ತಕ್ಷಶಿಲೆ, ನಳಂದಾ ವಿಶ್ವ ವಿದ್ಯಾಲಯಗಳು ವಿಶ್ವ ಪ್ರಸಿದ್ಧಿಯನ್ನು
ಪಡೆದಿದ್ದು ದೇಶ ವಿದೇಶಗಳ ವಿದ್ವಾಂಸರನ್ನು ಆಕರ್ಷಿಸುತ್ತಿತ್ತು .ಆದರೆ ಪ್ರಸ್ತುತ
ವಿಶ್ವದ ಮೊದಲ ನೂರು ಶ್ರೇಷ್ಠ
ವಿಶ್ವ ವಿದ್ಯಾಲಯಗಳಲ್ಲಿ ಭಾರತದ ಒಂದೇ ಒಂದು ವಿಶ್ವ ವಿದ್ಯಾಲಯ ಕೂಡಾ ಸ್ಥಾನ ಪಡೆದಿಲ್ಲ.!
ವಿಶ್ವದ ಆರನೇ ಒಂದರಷ್ಟು ಜನಸಂಖ್ಯೆ ಇರುವ
ನಮ್ಮ ದೇಶದಲ್ಲಿ ಬುದ್ಧಿ ಶಕ್ತಿ ಹಾಗೂ ಮಾನವ
ಸಂಪನ್ಮೂಲಕ್ಕೆ ಏನೊಂದೂ ಕೊರತೆ ಇಲ್ಲ.ಆದರೆ ಸಾಕಷ್ಟು ಸಂಖ್ಯೆಯಲ್ಲಿ ವಿಶ್ವ ವಿದ್ಯಾಲಯಗಳು ಇಲ್ಲ
,ಜೊತೆಗೆ ಇರುವ ವಿಶ್ವ ವಿದ್ಯಾ ಲಯಗಳ ಗುಣ ಮಟ್ಟ
ಕೂಡಾ ಜಗತ್ತಿನ ಸವಾಲುಗಳನ್ನು ಎದುರಿಸುವಷ್ಟು ಶಕ್ತವಾಗಿಲ್ಲ ಎನ್ನುವುದು ವಾಸ್ತವಕ್ಕೆ ಹಿಡಿದ ಕೈಗನ್ನಡಿ.
ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಭಾರತೀಯ ಮೂಲದ ವಿಜ್ಞಾನಿಗಳು ಇದ್ದಾರೆ. ಹೊರ ದೇಶಗಳಲ್ಲಿ ಭಾರತೀಯರು
ಮಹತ್ವದ ಶೋಧನೆಗಳನ್ನು ಮಾಡುತ್ತಿದ್ದಾರೆ . ಭಾರತೀಯರಲ್ಲಿ ಸಂಶೋಧನೆ ಮಾಡುವ ಸಾಮರ್ಥ್ಯ ಇದೆ ಎಂಬುದು
ನಿರ್ವಿವಾದ .ಹಾಗಿದ್ದರೂ ಭಾರತದ ವಿಶ್ವ ವಿದ್ಯಾಲಯಗಳು ವಿಶ್ವ ಮಟ್ಟದ ಗುಣ ಮಟ್ಟವನ್ನೇಕೆ
ಪಡೆದಿಲ್ಲ ?ಎಂಬುದು ತಿಳಿಯಬೇಕಾದರೆ ನಮ್ಮಲ್ಲಿನ ಸಂಶೋಧನೆಯ ಮೂಲವನ್ನೇ ಕೆದಕಬೇಕಾಗುತ್ತದೆ.
ಸಂಶೋಧನೆ ಎಂದರೆ ಶೋಧಿಸು ,ಶುದ್ಧ ಗೊಳಿಸು ಎಂದರ್ಥ.ಕಾಲಾಂತರದಲ್ಲಿ ಹೊಸತರ ಶೋಧನೆ ,ಅನ್ವೇಷಣೆ ಎಂಬ ವಿಶಾಲ ಅರ್ಥ ಪ್ರಾಪ್ತಿಯಾಗಿದೆ .ಅದೊಂದು ನಿರಂತರ
ಹುಡುಕಾಟ .ಅರ್ಥ ಏನೇ ಇರಲಿ ಸಂಶೋಧನೆ ಎಂಬುದು ಸುಲಭದ ಮಾತಲ್ಲ ಅನೇಕ ಸವಾಲುಗಳು ಸಂಶೋಧನೆ ಮಾಡುವವರಿಗೆ ಎದುರಾಗುತ್ತವೆ .ಸಂಶೋಧಕರಿಗೆ ಸೃಜನ ಶೀಲತೆ ಮತ್ತು ತೀಕ್ಷ್ನ ವಿಚಕ್ಷಣಾ ಗುಣ ,ಸತತ ಯತ್ನ ,ನಿರಂತರ ಅಧ್ಯಯನಶೀಲತೆ ,ಸೂಕ್ಷ್ಮತೆ,ವಿಚಾರ ಶೀಲತೆಗಳು ಇರಬೇಕಾಗುತ್ತವೆ.
ಸಂಶೋಧನೆ ಎಂದರೆ ಎಲ್ಲವೂ ಒಂದೇ ರೀತಿಯಾಗಿ ಇರುವುದಿಲ್ಲ.ಆದ್ದರಿಂದ ಸಂಶೋಧನೆಯ ವಿಧಾನಗಳು ಕೂಡಾ ಭಿನ್ನವಾಗಿರುತ್ತದೆ. ವಿಷಯ ಹಾಗೂ ಉದ್ದೇಶಗಳನ್ನು ಆಧರಿಸಿ ಅನೇಕ ವಿಧಾನಗಳು ಇರುತ್ತವೆ.ವಿಷಯ ಆಥವಾ ವಸ್ತುವನ್ನು ಆಧರಿಸಿ ಐತಿಹಾಸಿಕ ವರ್ಣಾತ್ಮಕ ವಿಧಾನ,ಮತ್ತು ಪ್ರಾಯೋಗಿಕ ಎಂದೂ,ಉದ್ದೇಶವನ್ನು ಆಧರಿಸಿ ಮೂಲ ಭೂತ ,ಆನ್ವಯಿಕ ,ಮತ್ತು ಕ್ರಿಯಾ ಸಂಶೋಧನೆ ಎಂದು ಹಲವಾರು ಅನೇಕ ಸಂಶೋಧನಾ ವಿಧಾನಗಳಿವೆ.
ಯಾವುದೇ ವಿಧದ ಸಂಶೋಧನೆ ಆಗಿದ್ದರೂ ಅವುಗಳ ವಿಷಯ ಹಾಗೂ ಉದ್ದೇಶಗಳ ಸ್ವರೂಪಕ್ಕೆಅನುಗುಣವಾಗಿವಿಶ್ಲೇಷಣೆ,ಅವಲೋಕನ,ಅಧ್ಯಯನ,ಊಹೆ,ಕ್ಷೇತ್ರಕಾರ್ಯ,ಸಂದರ್ಶನ,ಪ್ರಯೋಗ,ಪ್ರಶ್ನಾವಳಿ ,ವ್ಯಕ್ತಿತ್ವ ಪರೀಕ್ಷೆ ಈಗಾಗಲೇ ನಡೆದ ಅಧ್ಯಯನ ಮತ್ತು ಅದರ ಫಲಿತಗಳ ಸಂಗ್ರಹ ,ಮಾಹಿತಿ ಸಂಗ್ರಹ ಮೊದಲಾದ ಅನೇಕ ತಂತ್ರಗಳನ್ನು ಬಳಸಿಕೊಂಡು ಸಂಶೋಧನಾ ಅಧ್ಯಯನ ಮಾಡಬೇಕಾಗುತ್ತದೆ. ಪ್ರತಿಯೊಂದು ಸಂಶೋಧನೆಯೂ ವಿಶಿಷ್ಟವಾಗಿದ್ದು ಪ್ರತಿಯೊಂದಕ್ಕೂ ಅದರದ್ದೇ ಆದ ಪ್ರತ್ಯೇಕ ಗುಣಲಕ್ಷಣಗಳಿರುತ್ತವೆ.ಆದ್ದರಿಂದ ಈ ಎಲ್ಲ ಉಪಾಧಿಗಳ ಜೊತೆಗೆ ತನ್ನದೇ ಆದ ಒಂದು ತಂತ್ರವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ.ಹಾಗಾದಾಗ ಮಾತ್ರ ಅದು ಉತ್ತಮ ಸಂಶೋಧನೆ ಎನಿಸಿಕೊಳ್ಳುತ್ತದೆ.
ಸಂಶೋಧನೆಗೆ ನಿರಂತರ ಅಧ್ಯಯನ ಏಕಾಗ್ರತೆ ಅತ್ಯಗತ್ಯ.ನಾನಾ ಕ್ಷೇತ್ರಗಳಲ್ಲಿ ನಡೆದ ಸಂಶೋಧನೆಗಳ ತಿಳುವಳಿಕೆ ಸಂಶೋಧಕರಿಗೆ ಇರಬೇಕಾಗುತ್ತದೆ.ಅದಕ್ಕಾಗಿ ಆತನ ಸಂಶೋಧನಾ ಕ್ಷೇತ್ರಕ್ಕೆ ಸಂಬಂಧಿಸಿದ ಸಂಶೋಧನಾ ಪ್ರಬಂಧಗಳ ಅಧ್ಯಯನಮಾಡಬೇಕು . ಆ ಸಂಶೋಧನೆಗಳಿಗೆ ಸಂಬಂಧಿಸಿದ ಚರ್ಚೆ ,ವಿಶ್ಲೇಷಣೆ, ,ಶ್ರೇಷ್ಠ ಸಂಶೋಧಕರು ಅನುಸರಿಸುವ ಮಾರ್ಗ ,ಅವರ ವಿಶ್ಲೇಷಣಾ ವಿಧಾನ,ಮೊದಲಾದವುಗಳನ್ನು ಗಮನಿಸಿ ತನ್ನದೇ ಆದ ಮಾರ್ಗವನ್ನು ಗುರುತಿಸಿಕೊಳ್ಳಬೇಕು.
ಸಂಶೋಧನೆ ಎಂಬುದು ಪದವಿ ಗಳಿಕೆಗಾಗಿ ಮಾತ್ರವಲ್ಲ.ಪದವಿಯ ಹಂಗೇ ಇಲ್ಲದೆ ತಮ್ಮ ಪಾಡಿಗೆ ಸಂಶೋಧನೆಯಲ್ಲಿ ನಿರತರಾದವರು ಅನೇಕರು ನಮ್ಮ ಕಣ್ಣ ಮುಂದೆ ಇದ್ದಾರೆ. ಆದರೆ ಅವರ ಸಂಶೋಧನೆಯ ಫಲಿತಗಳಿಗೆ
ಯಾವುದೇ ಮನ್ನಣೆ ದೊರೆಯುದಿಲ್ಲ
.ಅದರ ಅನ್ವಯಕ್ಕೆ ಯಾವುದೇ ಬೆಂಬಲ
ಸಿಗುವುದಿಲ್ಲ.
ಹತ್ತು ಹನ್ನೆರಡು
ವರ್ಷಗಳ ಹಿಂದೆ ಮಂಗಳೂರಿನ
ಯುವಕನೊಬ್ಬ ಮೂರು
ಕಿಲೋ ಮೀಟರ್ ಸುತ್ತಮುತ್ತಲಿನ
ಪ್ರದೇಶದಲ್ಲಿನ ಸೊಳ್ಳೆಗಳನ್ನು
ಆಕರ್ಷಿಸಿ ಕೊಲ್ಲ ಬಲ್ಲ
ಯಂತ್ರವನ್ನು ತಯಾರಿಸಿದ್ದು ಆ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದ್ದು ಓದಿ ಆಗ ಮಂಗಳೂರಿನಲ್ಲಿದ್ದ
ನಾನೂ ಕೂಡಾ ಹೋಗಿ
ನೋಡಿದ್ದೆ .ಸೊಳ್ಳೆಗಳು ಅವಾಗಿಯೇ ಅದರ ಹತ್ತಿರ ಬಂದು
ಬಿದ್ದು ಸಾಯುತ್ತಿದ್ದುದನ್ನು ನೋಡಿದ್ದೆ.ಆಗ ಆ ಯುವಕ
ಆ ಯಂತ್ರಕ್ಕೆ ಪೇಟೆಂಟ್ ಗೆ ಯತ್ನಿಸುವುದಾಗಿ ಹೇಳಿದ್ದು ನನಗೆ
ನೆನಪಿದೆ .ಈಗ್ಗೆ ಎರಡು
ಮೂರು ವರ್ಷಗಳ ಹಿಂದೆ
ಆ ಯುವಕನ ಸಂಬಂಧಿಕರಾಗಿದ್ದ
ನನ್ನ ಪರಿಚಿತರು ಸಿಕ್ಕಿದ್ದು
ನಾನು ಆ ಹುಡುಗನ ಸಂಶೋಧನೆ ಬಗ್ಗೆ
ವಿಚಾರಿಸಿದಾಗ “ಆತನಿಗೆ ಆ ಯಂತ್ರಕ್ಕೆ ಪೇಟೆಂಟ್ ಸಿಗಲಿಲ್ಲ
.ಅವನಿಗೆ ಒಳ್ಳೆ ಕೆಲಸವೂ
ಸಿಗಲಿಲ್ಲ. ಅವನು ಮುಂದೆ
ವಿದೇಶಕ್ಕೆ ಹೋದ ಅಲ್ಲಿ ಸಂಶೋಧಕನಾಗಿದ್ದಾನೆ” ಎಂದು ತಿಳಿಸಿದರು.
ಇದೇ ರೀತಿ ಸಮುದ್ರದ
ಅಲೆಗಳನ್ನು ಉಪಯೋಗಿಸಿ ವಿದ್ಯುತ್
ತಯಾರಿ ,ಗೋಬರ್ ಗ್ಯಾಸ್
ನಿಂದ ವಾಹನವನ್ನು ಓಡಿಸುವುದೇ ಮೊದಲಾದ ವಿಚಾರಗಳ
ಬಗ್ಗೆ ಸಂಶೋಧಕರೆಂಬ ಹಣೆ ಪಟ್ಟಿ ಇಲ್ಲದ ಅನೇಕರು
ಮಹತ್ವದ ಸಂಶೋಧನೆಗಳನ್ನು ಮಾಡಿದ ಬಗ್ಗೆ
ಓದಿದ್ದೇನೆ .ಆದರೆ ಮುಂದೆ
ಅವರ ಸಂಶೋಧನೆಗಳೆನಾದವುಎಂದು ತಿಳಿದು ಬರುವುದಿಲ್ಲ
.ಅವರ ಯೋಜನೆಗಳು ಕಾರ್ಯ
ರೂಪಕ್ಕೆ ಬರುವುದೂ ಇಲ್ಲ.ಯಾಕೆಂದರೆ ನಮ್ಮಲ್ಲಿ
ಸ್ವತಂತ್ರವಾಗಿ ಸಂಶೋಧನೆ ಮಾಡಿದರೆ
ಅದಕ್ಕೆ ಕವಡೆ ಕಾಸಿನಷ್ಟೂ ಕಿಮ್ಮತ್ತಿಲ್ಲ.
ಇನ್ನು ವಿಶ್ವ ವಿದ್ಯಾಲಯಗಳಲ್ಲಿ ಡಾಕ್ಟರೇಟ್ ನಂಥ ಉನ್ನತ ಪದವಿ ಗಳಿಕೆಗೆ ಸಂಶೋಧನೆ ಅನಿವಾರ್ಯ. ತುಂಬಾ ಜನರಿಗೆ ಡಾಕ್ಟರೇಟ್ ಪದವಿಯನ್ನು ಗಳಿಸಬೇಕು ,ಸಂಶೋಧಕರಾಗಬೇಕು ಎಂಬ ಆಸೆ ಇರುತ್ತದೆ .ಆದರೆ ಸಂಶೋಧನೆ ಮಾಡಬೇಕು ಎಂಬ ಹಂಬಲ ಮಾತ್ರ ಇದ್ದರೆ ಸಾಲದು.ಪ್ರತಿಭೆ, ಅಧ್ಯಯನ ಶೀಲತೆ ಮತ್ತು ಪ್ರಾಮಾಣಿಕತೆಗಳು ಸಂಶೋಧಕರಲ್ಲಿ ಇರಲೇ ಬೇಕಾದ ಅತ್ಯಾವಶ್ಯಕ ಗುಣಗಳಾಗಿವೆ. ಈ ಮೂರರಲ್ಲಿ ಒಂದು ಇಲ್ಲದಿದ್ದರೂ ಸಂಶೋಧನೆ ಅಸಾಧ್ಯವಾಗುತ್ತದೆ.
ಪಿಎಚ್. ಡಿ (ಡಾಕ್ಟರೇಟ್ )ಒಂದು ಸಂಶೋಧನೆಗೆ ಸಿಗುವ ಉನ್ನತ ಪದವಿಯಾಗಿದ್ದು, ಇದು ಪದವಿ ಕಾಲೇಜು ಹಾಗೂ ವಿಶ್ವ ವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಲು ಇರ ಬೇಕಾದ ಕನಿಷ್ಠ ಅರ್ಹತೆಯಾಗಿದೆ. ಆದ್ದರಿಂದ ಈ ಪದವಿ ಗಳಿಕೆಗಾಗಿ ಅನೇಕರು ಸಂಶೋಧನೆಯತ್ತ ಮುಖ ಮಾಡುತ್ತಾರೆ.ಅವರಲ್ಲಿ ಹಲವರು ಸಂಶೋಧನಾ ಪ್ರಬಂಧ ಸಿದ್ಧ ಪಡಿಸಿ ಸಲ್ಲಿಸಿ ಪಿಎಚ್.ಡಿ ಪದವಿಯನ್ನು ಗಳಿಸುತ್ತಾರೆ.ಆದರೆ ಹೆಚ್ಚಿನವರು ತಮ್ಮ ಸಂಶೋಧನಾ ಕಾರ್ಯವನ್ನು ಅಲ್ಲಿಗೆ ಮೊಟಕುಗೊಳಿಸುತ್ತಾರೆ.ಕೆಲವೇ ಕೆಲವು ಮಂದಿ ಮಾತ್ರ ಸಂಶೋಧನೆಯ ರುಚಿಯನ್ನು ಕಂಡು ಕೊಂಡು ತಮ್ಮ ಸಂಶೋಧನಾ ಅಧ್ಯಯನವನ್ನು ಮುಂದುವರಿಸುತ್ತಾರೆ.ಆದರೆ ಮುಂದುವರೆಸುವವರಿಗೆ
ಯಾವುದೇ ರೀತಿಯ ಬೆಂಬಲ
ಸಿಗುವುದಿಲ್ಲ ಎನ್ನುವುದು ವಾಸ್ತವ .
ಪಿಎಚ್.ಡಿ ಪದವಿಗಾಗಿ ಮಾಡುವ ಸಂಶೋಧನೆಯೇ ಆಗಿದ್ದರೂ ಕೂಡ ಅದು ಸುಲಭದಲ್ಲಿ ಆಗುವದ್ದು ಅಲ್ಲ .ಅದಕ್ಕಾಗಿ ಪಿಎಚ್. ಡಿ ಅಧ್ಯಯನಕ್ಕೆ ಅವಕಾಶ ಕೊಡುವ ಮೊದಲೇ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನಗಳ ಮೂಲಕ ಪರೀಕ್ಷಿಸುತ್ತಾರೆ.ಪದವಿ ಮೂರು ವರ್ಷ ಹಾಗೂ ಕನಿಷ್ಠ 55% ಅಂಕಗಳೊಂದಿಗೆ ಎರಡು ವರ್ಷದ ಸ್ನಾತಕೋತ್ತರ ಪದವಿ ಗಳಿಸಿದ ಎಲ್ಲರೂ ಲಿಖಿತ ಪರೀಕ್ಷೆ ಬರೆಯಲು ಅರ್ಹರಾಗಿರುತ್ತಾರೆ.ಲಿಖಿತ ಪರೀಕ್ಷೆಯಲ್ಲಿ ಕನಿಷ್ಠ 50 % ಅಂಕಗಳನ್ನು ಗಳಿಸಿದವರು ಸಂದರ್ಶನಕ್ಕೆ ಅರ್ಹತೆಯನ್ನು ಪಡೆಯುತ್ತಾರೆ.ಸಂದರ್ಶನ ಹಾಗೂ ಲಿಖಿತ ಪರೀಕ್ಷೆಯ ಒಟ್ಟು ಅಂಕಗಳನ್ನು ಗಮನಿಸಿ ಸಂಶೋಧನೆಗೆ ಇರುವ ಅವಕಾಶಗಳಿಗೆ ಅನುಗುಣವಾಗಿ ಹೆಚ್ಚು ಅಂಕ ಗಳಿಸಿದವರಿಗೆ ಪಿಎಚ್.ಡಿ ಸಂಶೋಧನಾ ಅಧ್ಯಯನ ಮಾಡಲು ಅವಕಾಶ ದೊರೆಯುತ್ತದೆ.
ನಂತರ ಅವರಿಗೆ ಮಾರ್ಗ ದರ್ಶಕರು ಇರುತ್ತಾರೆ .ಅವರಲ್ಲಿ ಚರ್ಚಿಸಿ ಒಂದು ತಿಂಗಳಿನ ಒಳಗೆ ಅವರು ಆಯ್ಕೆ ಮಾಡಿದ ಸಂಶೋಧನಾ ವಿಷಯದ ರೂಪು ರೇಷೆಗಳನ್ನು ಒಳಗೊಂಡ
ಸಂಶೋಧನಾ ಪ್ರಬಂಧದ ಸಾರ ಲೇಖವನ್ನು ಸಿದ್ಧ ಪಡಿಸಿ ಮಾರ್ಗ ದರ್ಶಕರ ಅನುಮೊದನೆಯೊಂದಿಗೆ ನಿಗದಿ ಪಡಿಸಿದ ಶುಲ್ಕದೊಂದಿಗೆ ಸಲ್ಲಿಸಬೇಕು ಆ ಸಾರಲೇಖ ಸಂಶೋಧನೆಗೆ ಅರ್ಹವಾಗಿದ್ದರೆ ಅವರಿಗೆ ತಾತ್ಕಾಲಿಕ ದಾಖಲಾತಿ ಲಭಿಸುತ್ತದೆ .ಮತ್ತೆ ಆರು ತಿಂಗಳ ಒಳಗೆ ಹದಿನಾರು ವಾರಗಳ ಕಾಲದ ಸಂಶೋಧನಾ ತರಬೇತಿ ತರಗತಿಗಳಿಗೆ ಹಾಜರಾಗ ಬೇಕು .ನಂತರ ಒಂದು ಅಂತಿಮ ಸಾರಲೇಖವನ್ನು ಮಾರ್ಗ ದರ್ಶಕರ ಅನುಮೋದನೆಯೊಂದಿಗೆ ವಿಶ್ವ ವಿದ್ಯಾಲಯಕ್ಕೆ ಸಲ್ಲಿಸಬೇಕು. ಸಲ್ಲಿಸಿದ ಸಾರಲೇಖವು ಸಂಶೋಧನೆಗೆ ಯೋಗ್ಯವಾಗಿದ್ದು ಸಮಾಧಾನಕರವಾಗಿದ್ದರೆ ಅವರ ಪಿಎಚ್ ಡಿ ಸಂಶೋಧನಾ ಅಧ್ಯಯನದ ದಾಖಾಲಾತಿ ದೃಡೀಕರಣಗೊಂಡು ಮುಂದುವರಿಯುತ್ತದೆ.
ನಂತರ ಪ್ರತಿ ಮೂರು ತಿಂಗಳಿಗೊಮ್ಮೆ ಮಾರ್ಗ ದರ್ಶಕರ ಅನುಮೋದನೆಯೊಂದಿಗೆ ಸಂಶೋಧನಾ ವರದಿಯನ್ನು ಸಲ್ಲಿಸಬೇಕು.ನಂತರ ವಿಶ್ವ ವಿದ್ಯಾಲಯ ನಿಗದಿ ಪಡಿಸಿದ ಗರಿಷ್ಠ ಅವಧಿಯ ಒಳಗೆ ಸಂಶೋಧನಾ ಮಹಾ ಪ್ರಬಂಧವನ್ನು ಸಿದ್ಧ ಪಡಿಸಿ ಅದರ ಆರು ಪ್ರತಿಗಳನ್ನು ಮಾರ್ಗ ದರ್ಶಕರ ಅನುಮೋದನೆಯೊಂದಿಗೆ ನಿಗದಿತ ಶುಲ್ಕದೊಂದಿಗೆ ವಿಶ್ವ ವಿದ್ಯಾಲಯಕ್ಕೆ ಸಲ್ಲಿಸಬೇಕು .ಅಲ್ಲಿಂದ ಅದನ್ನು ಮೂರು ಜನ ತಜ್ಞರಿಗೆ ಮೌಲ್ಯ ಮಾಪನಕ್ಕಾಗಿ ಕಳುಹಿಸುತ್ತಾರೆ.ವಿಷಯ ತಜ್ಞರು ಅದನ್ನು ಮೌಲ್ಯ ಮಾಪನ ಮಾಡಿ ಪಿಎಚ್.ಡಿ ಪದವಿ ಕೊಡಬಹುದು ಎಂದು ವರದಿ ನೀಡಿದರೆ ನಂತರ ಅಭ್ಯರ್ಥಿಗೆ ಮೌಖಿಕ ಪರೀಕ್ಷೆಯನ್ನು ಮಾಡುತ್ತಾರೆ.ಅಲ್ಲಿ ಪರೀಕ್ಷಕರಾಗಿ ಬೇರೆ ಬೇರೆ ವಿಶ್ವ ವಿದ್ಯಾಲಯಗಳ ವಿಷಯ ಪರಿಣಿತರು ಇರುತ್ತಾರೆ .
ಅಭ್ಯರ್ಥಿಗೆ ಸಂಶೋಧನಾ ಪ್ರಬಂಧದಲ್ಲಿ ಮಂಡಿಸಿದ ವಿಚಾರದಲ್ಲಿ ನಾನಾ ಪ್ರಶ್ನೆಗಳನ್ನು ಕೇಳಿ ಅವರ ಉತ್ತರ ಸಮಾಧಾನಕರವಾಗಿದ್ದರೆ ,ಮೌಖಿಕ ಪರೀಕ್ಷೆಯ ಕೊನೆಗೆ ವಿಶ್ವ ವಿದ್ಯಾಲಯದ ಕುಲಪತಿಗಳು ಅ ಅಭ್ಯರ್ಥಿ ಮಂಡಿಸಿದ ಸಂಶೋಧನಾ ಮಹಾ ಪ್ರಬಂಧಕ್ಕೆ ಪಿಎಚ್. ಡಿ (ಡಾಕ್ಟರೇಟ್ )ಪದವಿಯನ್ನು ನೀಡ ಬಹುದು ಎಂದು ಘೋಷಣೆ ಮಾಡುತ್ತಾರೆ ನಂತರ ಒಂದು ತಿಂಗಳಿನ ಒಳಗೆ ಅದರ ಪ್ರತಿಯನ್ನು ಅಭ್ಯರ್ಥಿಗೆ ಕಳುಹಿಸಿಕೊಡುತ್ತಾರೆ ನಂತರದ ಘಟಿಕೋತ್ಸವದಲ್ಲಿ ಅವರಿಗೆ ಪಿಎಚ್.ಡಿ ಪದವಿಯನ್ನು ಪ್ರದಾನ ಮಾಡುತ್ತಾರೆ.
ಲಿಖಿತ ಪರೀಕ್ಷೆಯಿಂದ ಆರಂಭಿಸಿ ಮೌಖಿಕ ಪರೀಕ್ಷೆಯ ವರೆಗಿನ ಹಾದಿಯಲ್ಲಿ ಅನೇಕ ಅದೇ ತಡೆ ಅಡ್ಡಿ ಆತಂಕಗಳು ಎದುರಾಗುತ್ತವೆ.ವಿಷಯದ ಆಯ್ಕೆ ,ವಿನ್ಯಾಸದ ಆಯ್ಕೆ,ವಿಷಯದ ಪೂರ್ವ ಕಲ್ಪನೆ ,ಮಾಹಿತಿ ಸಂಗ್ರಹ ,ಟಿಪ್ಪಣಿ ಮಾಡಿಕೊಳ್ಳುವುದು ,ವಿಷಯ ಜೋಡಣೆ ಮತ್ತು ಪ್ರಬಂಧ ರಚನೆಯ ಸಂದರ್ಭಗಳಲ್ಲಿ ಅನೇಕ ಕ್ಲಿಷ್ಟಕರವಾದ ಸವಾಲುಗಳು ಎದುರಾಗುತ್ತವೆ.
ಈ ತನಕ ಬೇರೆಯವರು ಅಧ್ಯಯನ ಮಾಡದ ವಿಷಯವನ್ನು ಆಯ್ಕೆ ಮಾಡಬೇಕಾಗುತ್ತದೆ. ಅದಕ್ಕಾಗಿ ಮೊದಲಿಗೆ ಆ ತನಕ ನಡೆದ ಎಲ್ಲ ಸಂಶೋಧನಾ ಅಧ್ಯಯನಗಳ ಬಗ್ಗೆ ಅರಿತುಕೊಳ್ಳಬೇಕು.ವಿಷಯ ಆಯ್ಕೆಯ ನಂತರ ಅಧ್ಯಾಯಗಳ ಹಾಗೂ ವಿಷಯಗಳ ವಿಂಗಡಣೆ ಮಾಡಬೇಕು.ನಂತರ ಒಂದು ಉಹಾ ಸಿದ್ಧಾಂತದ ಪರಿಕಲ್ಪನೆ ಮಾಡಬೇಕು .ಮುಂದೆ ನಾನಾ ವಿಧವಾಗಿ ಮಾಹಿತಿ ಸಂಗ್ರಹಿಸಬೇಕು .ಟಿಪ್ಪಣಿ ಮಾಡಬೇಕು .ಮಾಹಿತಿ ಸಂಗ್ರಹ ಮಾತ್ರ ಸಾಕಾಗುವುದಿಲ್ಲ.ತುಲನೆ ,ವಿಶ್ಲೇಷಣೆ ,ಚಿಂತನೆಗಳ ಮೂಲಕ ವಿಷಯವನ್ನು ನಿರ್ಣಯಿಸಿ ಸುಸಂಬದ್ಧವಾಗಿ ಜೋಡಿಸಬೇಕು.ಕೊನೆಯಲ್ಲಿ ಪ್ರಬಂಧ ರಚನೆ ಮಾಡಬೇಕು .
ಈ ಎಲ್ಲಾ ಹಂತಗಳಲ್ಲಿ ಸಾಕಷ್ಟು ಪರಿಶ್ರಮ ಬೇಕಾಗುತ್ತದೆ ಜೊತೆಗೆ ಸೃಜನಶೀಲತೆ ,ಪ್ರತಿಭೆ ಕೂಡಾ ಅತ್ಯಗತ್ಯ.ಲಿಖಿತ ಹಾಗೂ ಮೌಖಿಕ ಪರೀಕ್ಷೆಗಳ ಮೂಲಕ ಆಯ್ಕೆಯಾಗಿಯೇ ಬಂದಿದ್ದರೂ ಕೂಡಾ ಈ ಎಲ್ಲ ಹಂತಗಳಲ್ಲಿ ಯಶಸ್ಸು ಸಿಗುತ್ತದೆ ಎಂದು ಖಂಡಿತವಾಗಿ ಹೇಳಲು ಸಾಧ್ಯವಿಲ್ಲ.
ಇದಲ್ಲದೆ ಮಾರ್ಗ ದರ್ಶಕ ಮತ್ತು ಸಂಶೋಧನಾರ್ಥಿಗಳ ನಡುವೆ ಭಿನ್ನಾಭಿಪ್ರಾಯ ಹುಟ್ಟುತ್ತದೆ. ಅನೇಕ ಸಂದರ್ಭಗಳಲ್ಲಿ ಮಾರ್ಗ ದರ್ಶಕರು ಸರಿಯಾದ ಮಾರ್ಗ ದರ್ಶನ ಮಾಡದೆ ಸಂಶೋಧನಾರ್ಥಿ ಸಂಶೋಧಿಸಿ ಬರೆದದ್ದೆಲ್ಲವನ್ನೂ ಅಲ್ಲಗೆಳೆದು ಸಂಶೋಧನಾರ್ಥಿಗಳ ಶೋಷಣೆ ಮಾಡಿರುವುದೂ ಉಂಟು! ಅನೇಕ ಮಹಿಳಾ ಸಂಶೋಧನಾರ್ಥಿಗಳು ಲೈಂಗಿಕ ಕಿರುಕುಳಕ್ಕೆ ಒಳಗಾದ ಬಗ್ಗೆಯೂ ಆಗಾಗ ಮಾತುಗಳು ಮಾಧ್ಯಮಗಳ ಮೂಲಕ
ಕೇಳಿ ಬರುತ್ತಿವೆ. ಅದೇ ರೀತಿ ಮಾರ್ಗ ದರ್ಶಕರ ಮಾರ್ಗದರ್ಶನವನ್ನು ಅನುಸರಿಸದೆ ಬೇಜವಾಬ್ದಾರಿ /ಸೋಮಾರಿತನ ಅಥವಾ
ಪ್ರತಿಭೆಯ ಕೊರತೆಯಿಂದ ಕಳಪೆ ಪ್ರಬಂಧವನ್ನು ಸಿದ್ಧ ಪಡಿಸಿ ಅದಕ್ಕೆ ಸಹಿ ಹಾಕಲು ಒಪ್ಪದೇ ಇರುವ ಮಾರ್ಗ ದರ್ಶಕರ ಮೇಲೆ ದೂರು ಹಾಕುವ ಸಂದರ್ಭಗಳೂ ಇಲ್ಲದಿಲ್ಲ!
ಈ ಎಲ್ಲ ಹಂತಗಳನ್ನು ಯಶಸ್ವಿಯಾಗಿ ದಾಟಿ ಸಂಶೋಧನಾ ಮಹಾ ಪ್ರಬಂಧವನ್ನು ವಿಶ್ವ ವಿದ್ಯಾಲಯದ ನಿಯಮಗಳಿಗನುಸಾರವಾಗಿ ಸಲ್ಲಿಸಿದ್ದರೂ ಮೌಖಿಕ ಪರೀಕ್ಷೆ ಮಾಡಿ ಪದವಿ ನೀಡದೆ ಇರುವ ಅನೇಕ ಪ್ರಕರಣಗಳೂ ಇವೆ.ಇದಕ್ಕೆ ಮುಖ್ಯ ಕಾರಣ ವಿಶ್ವ ವಿದ್ಯಾಲಯದ ಅಧಿಕಾರಿಗಳ ನಿರ್ಲಕ್ಷ್ಯ ವೇ ಆಗಿದೆ.ವಿಷಯ ತಜ್ಞರಲ್ಲಿ ಮೌಲ್ಯ ಮಾಪನ ಮಾಡಿ ಕೊಡುವ ಬಗ್ಗೆ ಒಪ್ಪಿಗೆ ಪಡೆದು ಅವರಿಗೆ ಸಂಶೋಧನಾರ್ಥಿಗಳು ಸಲ್ಲಿಸಿದ ಮಹಾ ಪ್ರಬಂಧದ ಪ್ರತಿಯನ್ನು ಮೌಲ್ಯ ಮಾಪನಕ್ಕೆ ಕಳುಹಿಸುತ್ತಾರೆ .ಮೂರು ತಿಂಗಳ ಒಳಗಡೆ ಮೌಲ್ಯ ಮಾಪನ ವರದಿಯನ್ನು ನೀಡಬೇಕು ಎಂಬ ನಿಯಮವೂ ಇದೆ .ಆದರೆ ಮೂರು ನಾಲ್ಕು ವರ್ಷ ಕಳೆದರೂ ಮೌಲ್ಯ ಮಾಪನ ವರದಿಯನ್ನು ಕೊಡದೆ ,ಯುವ ಸಂಶೋಧನಾರ್ಥಿಗಳನ್ನು ಹತಾಶೆಯ ಕೂಪಕ್ಕೆ ತಳ್ಳುವ
ಪ್ರಾಧ್ಯಾಪಕರುಗಳು ಕೂಡಾ ವಿಶ್ವ ವಿದ್ಯಾಲಯಗಳಲ್ಲಿ ಇದ್ದಾರೆ ಎನ್ನುವುದು ನಮ್ಮ ದೇಶದ ದುರಂತವೇ ಸರಿ!
ಮೂರು ತಿಂಗಳ ಒಳಗಡೆ ಮೌಲ್ಯ ಮಾಪನ ವರದಿಯನ್ನು ಕೊಡದೆ ಇದ್ದರೆ,ಅದನ್ನು ರದ್ದು ಪಡಿಸಿ ಬೇರೆ ಮೌಲ್ಯ ಮಾಪಕರಿಗೆ ಕಳುಹಿಸಿ ವರದಿ ತರಿಸಿಕೊಳ್ಳುವ ಬಗ್ಗೆ ವಿಶ್ವ ವಿದ್ಯಾಲಯಗಳಲ್ಲಿ ನಿಯಮವೇನೋ ಇದೆ.ಆದರೆ ಅದು ನಿಯಮಾವಳಿ ಪುಸ್ತಕದಲ್ಲಿ ಮಾತ್ರ ಇರುತ್ತದೆ.ಅದನ್ನು ಜಾರಿಗೆ ತಂದು ಬೇರೆಯವರಿಗೆ ಕಳುಹಿಸಿ ಮೌಲ್ಯಮಾಪನ ಮಾಡಿಸಿ ಸಂಶೋಧನಾರ್ಥಿಗಳಿಗೆ ನ್ಯಾಯ ಕೊಡಿಸುವ ಇಚ್ಚಾ ಶಕ್ತಿ ಹೆಚ್ಚಿನ ವಿಶ್ವ ವಿದ್ಯಾಲಯಗಳ ಅಧಿಕಾರಿಗಳಲ್ಲಿ ಇರುವುದಿಲ್ಲ ಎನ್ನುವುದು ವಾಸ್ತವ ವಿಚಾರ!
ಕೆಲವು ವರ್ಷಗಳ ಹಿಂದೆ ಪಿಎಚ್.ಡಿ ಸಂಶೋಧನಾ ಅಧ್ಯಯನಕ್ಕೆ ಸೇರಲು
ಲಿಖಿತ ಪರೀಕ್ಷೆ ಮೌಖಿಕ ಪರೀಕ್ಷೆ ಯಾವುದೂ ಇರಲಿಲ್ಲ.ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ಪಿಎಚ್.ಡಿ ಪಡೆದು ಮೂರು ವರ್ಷಗಳ ನಂತರ ಯಾರು ಕೂಡ ಮಾರ್ಗ ದರ್ಶಕರಾಗ ಬಹುದಿತ್ತು. ಮಾರ್ಗ ದರ್ಶಕರ ಪರಿಚಯ ಇದ್ದ ಯಾರು ಕೂಡಾ ಡಾಕ್ಟರೇಟ್ ಅಧ್ಯಯನ ಮಾಡ ಬಹುದಿತ್ತು .ಈಗ ಸಂಶೋಧನೆಯ ಗುಣ ಮಟ್ಟವನ್ನು ಹೆಚ್ಚಿಸುವ ಸಲುವಾಗಿ ಮಾರ್ಗ ದರ್ಶಕಾರಾಗ ಬೇಕಿದ್ದಲ್ಲಿ ಅವರು ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಅಥವಾ ಸಂಶೋಧನಾ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿರಬೇಕು ಎಂಬ ನಿಯಮ ಬಂದಿದೆ .ಮತ್ತು ಸಂಶೋಧನಾರ್ಥಿಗಳ ಆಯ್ಕೆಯನ್ನು ಕೂಡಾ ಲಿಖಿತ ಹಾಗೂ ಮೌಖಿಕ ಪರೀಕ್ಷೆಗಳ ಮೂಲಕ ಮಾಡಬೇಕು ಎಂಬ ನಿಯಮ ವನ್ನು ವಿಶ್ವ ವಿದ್ಯಾಲಯ ಧನ ಸಹಾಯ ಆಯೋಗ ತಂದಿದೆ.
ಆದರೂ ದುಡ್ಡಿನ ಆಮಿಷ ,ಪ್ರಭಾವ/ ವಶೀಲಿಗೊಳಗಾಗಿ ನಿಯಮಗಳ ಉಲ್ಲಂಘನೆ ಆಗುವ ಬಗೆಗಿನ ಚರ್ಚೆ, ವಿವಾದಗಳು ಆಗಾಗ ಕೇಳಿ ಬರುತ್ತವೆ. ಅನೇಕ
ಸಂದರ್ಭಗಳಲ್ಲಿ ಬೇರೆಯವರು ಮಾಡಿದ
ಸಂಶೋಧನಾ ಪ್ರಬಂಧದ ಮುಖ ಪುಟದಲ್ಲಿ ಸಂಶೋಧಕ
ಮತ್ತು ಮಾರ್ಗದರ್ಶಕರ ಹೆಸರುಗಳನ್ನು
ಮಾತ್ರ ಬದಲಾಯಿಸಿ ಸಲ್ಲಿಸಿರುವ
ಪ್ರಬಂಧಗಳಿಗೆ ಪಿಎಚ್.ಡಿ ಯಂಥ ಉನ್ನತ ಪದವಿಗಳನ್ನು
ನೀಡಿದ ನಿದರ್ಶನಗಳು ಅನೇಕ ಇವೆ.ಇಲ್ಲೆಲ್ಲಾ ಅವ್ಯವಹಾರ ನಡೆದಿದ್ದು
ಮಾರ್ಗದರ್ಶಕ ಮತ್ತು ವಿಶ್ವ
ವಿದ್ಯಾಲಯದ ಅಧಿಕಾರಿಗಳು ಶಾಮೀಲಾದ ಬಗ್ಗೆ
ಆಗಾಗ ಕೇಳಿ ಬರುತ್ತದೆ.ಈ ರೀತಿ ಪದವಿ ಪಡೆದವರು
ಮುಂದೆ ಸಂಶೋಧನೆ ಮುಂದುವರಿಸುವುದು
ಕನಸಿನ ಮಾತು .ಅಲ್ಲದೆ ಅಕ್ರಮವಾಗಿ
ಗಳಿಸಿದ ಪಿಎಚ್.ಡಿ ಪದವಿ ಆಧಾರದಲ್ಲಿ
ಉಪನ್ಯಾಸಕರಾಗಿ /ಸಂಶೋಧಕರಾಗಿ ಉದ್ಯೋಗ ಗಳಿಸಿದವರಿಂದ
ಏನನ್ನು ತಾನೇ ನಿರೀಕ್ಷಿಸಲು
ಸಾಧ್ಯ ? ವಿಶ್ವ ವಿದ್ಯಾಲಯಗಳಲ್ಲಿನ ಹುದ್ದೆಗಳನ್ನು ತುಂಬುವಾಗ ನಿಜವಾಗಿಯೂ
ಪ್ರಾಮಾಣಿಕವಾಗಿ ಸಂಶೋಧನೆ ಮಾಡಿದವರ ಸಂಶೋಧನೆಗಳನ್ನು ಗಣನೆಗೆ ತೆಗೆದುಕೊಳ್ಳದೆ ವಶೀಲಿ ಹಾಗೂ ದುಡ್ಡಿನ
ಆಮಿಷಕ್ಕೊಳಗಾಗಿ ತಮಗೆ
ಬೇಕಾದವರನ್ನು ಆಯ್ಕೆಮಾಡುವುದು ವಿಶ್ವ ವಿದ್ಯಾಲಯಗಳ ಗುಣಮಟ್ಟ ಕುಸಿಯಲು ಒಂದು ಪ್ರಧಾನ
ಕಾರಣವಾಗಿದೆ .
ಒಂದೆಡೆ ಯಾವುದೇ ನಿಯಮವನ್ನು ಅನುಸರಿಸದೆ ಕಾನೂನು ಬಾಹಿರವಾಗಿ
ಅನರ್ಹರಿಗೆ
ಪಿಎಚ್.ಡಿ ಯಂಥ ಉನ್ನತ ಸಂಶೋಧನಾ
ಪದವಿಗಳು ಕೇವಲ 7-8 ತಿಂಗಳುಗಳ ಒಳಗೆ ಸಿಗುತ್ತಿವೆ
. ಇನ್ನೊಂದೆಡೆ ಎಲ್ಲಾ ನಿಯಮಾವಳಿಗಳಿಗೆ
ಅನುಸಾರವಾಗಿ ಉತ್ತಮ ಸಂಶೋಧನಾ
ಪ್ರಬಂಧವನ್ನು ಸಿದ್ಧ ಪಡಿಸಿದ್ದರೂ ,ಮಾರ್ಗ
ದರ್ಶಕರ ಶೋಷಣೆ ,ಅಸಹಕಾರದಿಂದ ಸಲ್ಲಿಕೆಯೇ ಆಗದೆ ಅನೇಕ
ಯುವ ಸಂಶೋಧಕರು ತೊಳಲಾಡುತ್ತಿದ್ದಾರೆ.
ಒಂದೊಮ್ಮೆ ಸಲ್ಲಿಕೆಯಾಗಿಯೂ ಮಾರ್ಗ ದರ್ಶಕರ
,ವಿಶ್ವ ವಿದ್ಯಾಲಯ ಅಧಿಕಾರಿಗಳ ಹಾಗೂ ಮೌಲ್ಯ ಮಾಪಕರ
ಬೇಜವಾಬ್ದಾರಿತನದಿಂದಾಗಿ 2-3 ವರ್ಷ ಕಳೆದರೂ ಪಿಎಚ್.ಡಿ ಪದವಿ ಪಡೆಯಲು ಸಾಧ್ಯವಾಗದೆ
ಒದ್ದಾಡುತ್ತಿದ್ದಾರೆ!
ಈ ರೀತಿ ನಾನಾವಿಧ
ರೀತಿಯಲ್ಲಿ ಭಯ ಆತಂಕಕ್ಕೊಳಗಾಗಿರುವ ಯುವ ಸಂಶೋಧಕರಿಗೆ ಸಂಶೋಧನೆ ಎನ್ನುವುದು
ಸಿಂಹ ಸ್ವಪ್ನವಾಗಿ ಕಾಡಿದರೆ ಅದರಲ್ಲಿ
ಆಶ್ಚರ್ಯ ಪಡುವಂಥಹಾದ್ದು ಏನೂ ಇಲ್ಲ.ಬಹುಶ ಹಾಗಾಗಿಯೇ
ಇತ್ತೀಚಿಗೆ ಪ್ರತಿಭಾವಂತರು
ಯಾರೂ ಸಂಶೋಧನೆಯ ಉಸಾಬರಿಗೆ
ಹೋಗುತ್ತಾ ಇಲ್ಲ.ಒಳ್ಳೆ ವೇತನ
ಗಳಿಸುವ ಉದ್ಯೋಗದತ್ತ ಮನ ಮಾಡುತ್ತಾರೆ.ಒಂದೊಮ್ಮೆ ಸಂಶೋಧನೆ
ಮಾಡುವುದಾದರೂ ಬೇರೆ ದೇಶದ
ವಿಶ್ವ ವಿದ್ಯಾಲಯಗಳಲ್ಲಿ ಮಾಡಲು ಮುಂದಾಗುತ್ತಿದ್ದಾರೆ.
ಇದಕ್ಕೆಲ್ಲ ಪರಿಹಾರ ಮಾರ್ಗ ಮಾತ್ರ
ಗೋಚರವಾಗುತ್ತಿಲ್ಲ.
- ಡಾ .ಲಕ್ಷ್ಮೀ ಜಿ ಪ್ರಸಾದ , ಕನ್ನಡ ಉಪನ್ಯಾಸಕರು
No comments:
Post a Comment