Monday, 31 March 2025

ದೊಡ್ಡವರ ದಾರಿ 98 : ಶೂನ್ಯ ಕಸ ಆವರಣದ(Zero waste campus) ಪರಿಕಲ್ಪನೆಯ ನಿತಿನ್ ಮೋಹನ್ :

 ದೊಡ್ಡವರ ದಾರಿ : ಶೂನ್ಯ ಕಸ ಆವರಣದ(Zero waste campus) ಪರಿಕಲ್ಪನೆಯ ನಿತಿನ್ ಮೋಹನ್ 



ಕಳೆದ ಹತ್ತು ದಿನಗಳಲ್ಲಿ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಕಾರ್ಯ ನಡೆಯುತ್ತಿವೆ.


ನನಗೆ DCE( Deputy chief examiner) ಆಗಿ ನಿಯೋಜನೆ ಮಾಡಿದ್ದರು.

ಕೆ ಆರ್ ಪುರಂ ನಿಂದ ಸುಮಾರು ಏಳು ಕಿಮೀ ದೂರದ ಬಸವನಪುರ ? ದಲ್ಲಿರುವ ಕೇಂಬ್ರಿಡ್ಜ್ ಪಿಯು ಕಾಲೇಜಿನಲ್ಲಿ ಕನ್ನಡ ಮೌಲ್ಯ ಮಾಪನ ನಡೆಯುದು ಎಂದು ಗೊತ್ತಾದಾಗ ತಲೆ ಮೇಲೆ ಬಂಡೆ ಕಲ್ಲು ಬಿದ್ದ ಅನುಭವ ಆಗಿತ್ತು

ನಮ್ಮ ಮನೆಯಿಂದ ಸುಮಾರು 30 ಕಿಮೀ ದೂರದಲ್ಲಿ ಈ ಸಂಸ್ಥೆ ಇದೆ

ದೂರಕ್ಕಿಂತ ಹೋಗುವ ದಾರಿಯಲ್ಲಿ ವಿಪರೀತ ಟ್ರಾಫಿಕ್ ಇರುವುದು ಬಹು ದೊಡ್ಡ ಸಮಸ್ಯೆ

ಆಟೋ ಕ್ಯಾಬ್ ಗಳು ಅಷ್ಟು ದೂರಕ್ಕೆ ಬರಲು ಒಪ್ಪುವುದಿಲ್ಲ

ಹಾಗಾಗಿ ಮೆಟ್ರೋದಲ್ಲಿ ಹೋಗುವ ದಾರಿ ಬಗ್ಗೆ ಮೊದಲು ಕೆ ಆರ್ ಪುರ ಸರ್ಕಾಪಿ ಪಿಯು ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂಪದಾ ಕೆರಿಮನಿಗೆ ಫೋನ್ ಮಾಡಿ ವಿಚಾರಿಸಿದೆ

ಅವರಿಗೂ ಮೊದಲಿಗೆ ಈ ಕೆಂಬ್ರಿಡ್ಜ್ ಕಾಲೇಜಿಗೆ ಹೋಗುವ ದಾರಿ ಗೊತ್ತಾಗಲಿಲ್ಲ.ನಂತರ ಯಾರಲ್ಲೋ ಕೇಳಿ ನನಗೆ ಮಾಹಿತಿ ನೀಡಿದರು

ಉಳ್ಳಾಲ ಮುಖ್ಯ ರಸ್ತೆಯಿಂದ ಬಸ್ ಮೂಲಕ ಜ್ಞಾನ ಭಾರತಿ ಮೆಟ್ರೋ ಸ್ಟೇಷನ್ ಗೆ ಹೋಗಿ ಮೆಟ್ರೋ ಹತ್ತಿ ಬೆನ್ನಿಗಾನಹಳ್ಳಿಯಲ್ಲಿ ಇಳಿದು ಅಲ್ಲಿಂದ ಹೊಸ ಕೋಟೆ ಕಡೆಗೆ ಹೋಗುವ ಬಸ್ ಹತ್ತಿ ಟಿ.ಸಿ ಪಾಳ್ಯದಲ್ಲಿ ಇಳಿದು ನಂತರ ಒಂದು ಒಂದೂವರೆ ಕಿಮೀ ನಷ್ಟು ನಡೆದುಕೊಂಡು ಕೇಂಬ್ರಿಡ್ಜ್ ಪಿಯು ಕಾಲೇಜು ತಲುಪಬೇಕಿತ್ತು.

ಆರಂಭದಲ್ಲಿ ಇದು ಆಗುವದ್ದಲ್ಲ ಎಂದೆನಿಸಿತು..

ಏನು ಮಾಡುದೆಂದು ಗೊತ್ತಾಗದೆ ತಲೆಬಿಸಿ ಆಯಿತು

ಆದದ್ದಾಗಲಿ ಎಂದು ಮೊದಲ ದಿನ ನಮ್ಮ ಯಾತ್ರಿ ನಲ್ಲಿ ಕಾರು ಬುಕ್ ಮಾಡಿದೆ.ಅದು 620₹ ತೋರಿಸಿತ್ತು ಆದರೂ ಬುಕ್ ಮಾಡಿದೆ 

ಅದೃಷ್ಟಕ್ಕೆ ಒಬ್ಬರು ಬರಲೊಪ್ಪಿದರು.

ಬೆಳಗ್ಗೆ ಏಳು ಗಂಟೆಗೆ ಹೊರಟವಳು ಒಂಬತ್ತೂವರೆ ಹೊತ್ತಿಗೆ ತಲುಪಿದೆ

ದೊಡ್ಡ ಕಾಲೇಜು ,ಪಿಯುಸಿ  ಇಂಜನಿಯರಿಂಗ್ ಕಾಲೇಜುಗಳ ಸ್ವಾಯತ್ತ ಸಂಸ್ಥೆ ಇದು..ದೊಡ್ಡ ಸ್ವಚ್ಛ  ಆವರಣ .ಶುದ್ಧ ಪರಿಸರ..

ಆದರೆ ಇದನ್ನೆಲ್ಲ ಗಮನಿಸುವ ಮನಸ್ಥಿತಿಯಲ್ಲಿ ನಾನಿರಲಿಲ್ಲ

ಕೇಂಬ್ರಿಡ್ಜ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಜೀವನ್  ಬಾಬು ಅವರು ಅಲ್ಲಿ ಲಭ್ಯವಿರುವ ಅಗತ್ಯ ವಾದ ಕೊಠಡಿಗಳು ,ನೀರು ,ಕ್ಯಾಂಟೀನ್ ,ವಾಶ್ ರೂಮ್ ಮೊದಲಾದವುಗಳ ಮಾಹಿತಿ ನೀಡಿದರು

ನಂತರ ಬೆಳಗ್ಗೆ ಮತ್ತು ಸಂಜೆ ಬೆನ್ನಿಗಾನ ಹಳ್ಳಿ ಮೆಟ್ರೋ ಸ್ಟೇಷನ್ ನಿಂದ ಪಿಕಪ್ ಮತ್ತು ಡ್ರಾಪ್ ಕೊಡಲು ಅವರ ಕಾಲೇಜು ಬಸ್ ಗಳ ವ್ಯವಸ್ಥೆ ಮಾಡಿರುವ ಬಗ್ಗೆ ತಿಳಿಸಿದರು

ಆಗ ಸ್ವಲ್ಪ ಸಮಾಧಾನ ಆಯಿತು

ಮೊದಲ ದಿನ ಹತ್ತೂವರೆ ಹನ್ನೊಂದು ಗಂಟೆಗೆ ಕಾಫಿ ಚಹಾ ವಿತರಿಸಿದರು

ಆಗ ಮೊದಲ ಬಾರಿಗೆ ಅಲ್ಲಿನ ಪರಿಸರ ಕಾಳಜಿ ವ್ಯವಸ್ಥೆ ಬಗ್ಗೆ ಗಮನಿಸಿದೆ

 ತೊಳೆದ ಸ್ವಚ್ಛ ಸ್ಟೀಲ್ ಲೋಟಗಳಲ್ಲಿ ಕಾಫಿ ಟೀ ನೀಡಿದ್ದರು.

ನಂತರ ಕ್ಯಾಂಟೀನ್ ನಲ್ಲಿ ಕೂಡ ಪ್ಲಾಸ್ಟಿಕ್ ಬಳಕೆ ಇರಲಿಲ್ಲ

ನಂತರ ನನಗೆ ಅಲ್ಲಿನ ಶೂನ್ಯ ಕಸ ಆವರಣದ ಪರಿಕಲ್ಪನೆ ಬಗ್ಗೆ ತಿಳಿಯಿತು

ಈ ಶೂನ್ಯ ಕಸ ಆವರಣದ( Zero waste campus) ನ ಪರಿಕಲ್ಪನೆ ಕೇಂಬ್ರಿಡ್ಜ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಮೋಹನ್  ಅವರ ಮಗ ನಿತಿನ್ ಮೋಹನ್  ಅವರದು

ಈಗಿನ ಬಹುತೇಕ ಯುವಕರಿಗೆ ಮೊಬೈಲ್ ಹೊರತಾಗಿ ಇತರ ವಿಷಯಗಳ ಬಗ್ಗೆ ಆಸಕ್ತಿ ಇಲ್ಲ

ಇಂತಹವರ ನಡುವೆ ನಿತಿನ್  ವಿಶಿಷ್ಟ ಎನಿಸಿದರು

ಕೇಂಬ್ರಿಡ್ಜ್ ವಿದ್ಯಾ ಸಂಸ್ಥೆ ಯ ಆವರಣದಲ್ಲಿ ಉಪಯೋಗಿಸಿ ಎಸೆವ ಪ್ಲಾಸ್ಟಿಕ್ ನ ಬಳಕೆ ಇಲ್ಲ.ಈ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟು ಅವರಲ್ಲಿ ಜಾಗೃತಿ ಮೂಡಿಸಿದ್ದಾರೆ ಎಂದು ತಿಳಿಯಿತು

ನಾನು ಸುಮಾರು ಇಪ್ಪತ್ತಮೂರು ವರ್ಷಗಳ ಹಿಂದೆ ಚಿನ್ಮಯ ಶಾಲೆಯಲ್ಲಿ ಶಿಕ್ಷಕಿ ಆಗಿದ್ದಾಗಲೇ ಉಪಯೋಗಿಸಿ ಎಸೆವ ಪ್ಲಾಸ್ಟಿಕ್ ನ ಬಳಕೆಯನ್ನು ಮಾಡದಂತೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ್ದೆ.ಪ್ಲಾಸ್ಟಿಕ್ ಬಳಕೆಯನ್ನು ತೀರ ಅಗತ್ಯವಾದ ಸಂದರ್ಭ ಹೊರತು ಪಡಿಸಿ ಇತರೆಡೆ ಅನಗತ್ಯವಾಗಿ ಬಳಸದಂತೆ ಜಾಗೃತಿ ಮೂಡಿಸುವ ಯತ್ನ ಮಾಡಿದ್ದೆ

ಒಂದೊಳ್ಳೆಯ ಕೆಲಸಕ್ಕೂ ಸಾವಿರಾರು ವಿಘ್ನಗಳಿದ್ದವು.ಆದರೂ ನಾನು ಅಂದಿನಿಂದ ಇಂದಿನವರೆಗೂ ವಿದ್ಯಾರ್ಥಿಗಳಲ್ಲಿ ಜಾಗೃತಿಮೂಡಿಸುವ ಯತ್ನ ಮಾಡುತ್ತಲೇ ಬಂದಿದ್ದೇನೆ

ಹಾಗಾಗಿಯೋ ಏನೋ ನನಗೆ ಕೇಂಬ್ರಿಡ್ಜ್ ವಿದ್ಯಾ ಸಂಸ್ಥೆಯ CEO ನಿತಿನ್ ಮೋಹನ್ ಅವರ Zero waste campus ಬಹಳ ಇಷ್ಟವಾಯಿತು

ಜೊತೆಗೆಜೊತೆಗೆ ಅಷ್ಟು ದೊಡ್ಡ ಕಾಲೇಜಿನ ಪ್ರಾಂಶುಪಾಲರಾಗಿದ್ದರೂ ಒಂದಿನಿತು ಅಹಂ ಇಲ್ಲದ ಬಹಳ ಸರಳ ಸಜ್ಜನಿಕೆಯ ಜೀವನ್ ಬಾಬು  ಅವರ ವ್ಯಕ್ತಿತ್ವ ಕೂಡ ಮನ ಸೆಳೆಯಿತು

ನನಗಿಷ್ಟವಾದದ್ದರ ಬಗ್ಗೆ ಬರೆಯುದು ನನ್ನ ಹವ್ಯಾಸ..ಅಂತೆಯೇ ನಿಮಗೂ ಇಷ್ಟವಾಗಬಹುದೆಂದು ಹಂಚಿಕೊಂಡಿರುವೆ 

ಚಿತ್ರ:  ಕೇಂಬ್ರಿಡ್ಜ್ ಪಿಯು ಕಾಲೇಜಿನ ಪ್ರಿನ್ಸಿಪಾಲ್ ಅರವಿಂದ ಬಾಬು ಮತ್ತು ಗಿರೀಶ್

ನಾಗ ಭೂತ - ಡಾ.ಲಕ್ಷ್ಮೀ ಜಿ ಪ್ರಸಾದ್

 ಕರಾವಳಿಯ ಸಾವಿರದೊಂದು ದೈವಗಳ/ಭೂತಗಳ ಅದ್ಭುತ ಜಗತ್ತಿನಲ್ಲಿ ಸುತ್ತಾಡಿದ ನಾನು ಅನೇಕ ರೋಮಾಂಚನಕಾರಿ ಅನುಭವಗಳನ್ನು ಪಡೆದಿದ್ದೇನೆ 

ಚೌಕಾರಿನಲ್ಲಿ ಮೂರು ಹೆಡೆಯ ನಾಗ ಭೂತದ ಫೋಟೋ ತೆಗೆದದ್ದು ಕೂಡ  ಅಂಥಹ ಒಂದು ಮೈ ನವಿರೇಳಿಸುವ ಕ್ಷಣ


ಇಲ್ಲಿ ನಾಗ ಭೂತದ ಫೋಟೋ ತೆಗೆಯಬಾರದು ,ನಾಗ ಭೂತದ ಮೇಲೆ ಕ್ಯಾಮರ ದ ಬೆಳಕು ಬಿದ್ದರೆ ಫೋಟೋ ಹಿಡಿದವರ ಕಣ್ಣು ಹೋಗುತ್ತದೆ ಎಂಬ ನಂಬಿಕೆ ಇತ್ತು .ಆಗ ನಾನು ಕ್ಯಾಮರ ದ ಫ್ಲಾಶ್ ಹಾಕದೆ ತೆಗೆಯಬಹುದೇ ಎಂದು ಭೂತದಲ್ಲಿ ಅರಿಕೆ ಮಾಡಿದೆ ,ನಾಗ ಭೂತ ಮಾತನಾಡುವುದಿಲ್ಲ ಅಲ್ಲಿದ್ದ ಅರಸಿನ ಬೂಳ್ಯವನ್ನು ನೀಡುವ ಮೂಲಕ ಸಾಂಕೇತಿಕವಾಗಿ ಅನುಮತಿ ಕೊಟ್ಟಿತು ,ಹಾಗಾಗಿ ನಾನು ಈ ಫೋಟೋ ಹಿಡಿದಿದ್ದೆ ,ದೈವದ ದಯದಿಂದ ಫ್ಲಾಶ್ ಹಾಕದೆ ಇದ್ದಾಗಲೂ ಫೋಟೋ  ಚೆನ್ನಾಗಿಯೇ ಬಂದಿದೆ .ಚೌಕಾರಿನಲ್ಲಿ ಮೂರು ದಿವಸ ಹಗಲು ರಾತ್ರಿ ಕೋಲ ಇತ್ತು ಅದಾಗಿ ಮರುದಿನವೇನಾನು ನಡಿ ಬೈಲಿಗೆ ಬಂದು ಕಂಬಳ ಕೋರಿ ನೇಮ ಎರಡು ದಿನ ಹಗಲು ರಾತ್ರಿ ರೆಕಾರ್ಡ್ ಮಾಡಿದೆ .ಅದಾದ ಮರುದಿನ ಕೈರಂಗಳ ಹತ್ತಿರ ಒಂದು ದಿವಸ ರೆಕಾರ್ಡ್ ಮಾಡಿದೆ ,ಹೀಗೆ ಸತತವಾಗಿ ಏಳು ಎಂಟು ದಿನ ಹಗಲು ರಾತ್ರಿ ಭೂತ ಕೋಲ ರೆಕಾರ್ಡ್ ಮಾಡಿದ್ದಕ್ಕೋ ಅಥವಾ ಆತಂಕಕ್ಕೋ ಗೊತ್ತಿಲ್ಲ ,ಇಲ್ಲೆಲ್ಲಾ ರೆಕಾರ್ಡ್ ಮಾಡಿ ಬರುವಷ್ಟು ಹೊತ್ತಿಗೆ ಕಣ್ಣು ಊದಿಕೊಂಡಿತ್ತು,ಜೊತೆಗೆ ನೋಟ ಅಸ್ಪಷ್ಟವಾಗಿತ್ತು ,
ಒಂದು ಕ್ಷಣ ಭಯವಾಯಿತು ,ಚೌಕಾರಿನಲ್ಲಿ ನಾಗ ಭೂತದ ಫೋಟೋ ತೆಗೆದದ್ದಕ್ಕೆ ಹೀಗೆ ಆಯಿತೇನೋ ಎಂದು !
ಮನೆಯಲ್ಲಿ ಯಾರಲ್ಲಿ ಹೇಳಲೂ ಭಯ !ಆಗದು ಎಂದಿರುವಲ್ಲಿ ಫೋಟೋ ಹಿಡಿದದ್ದು ಏಕೆ ಎಂದು ನನ್ನನ್ನೇ ಬೈದರೆ ಎಂದು !
ಆದರೆ ದೈವದ ಅನುಮತಿ ಪಡೆದೇ ಫೋಟೋ ತೆಗೆದದ್ದು ತಾನೇ ,ಹಾಗಾಗಿ ಮನದಲ್ಲೇ ನಾಗನಿಗೆ "ನನ್ನ ದೃಷ್ಟಿಯನ್ನು ಮಾತ್ರ ಕಿತ್ತುಕೊಳ್ಳ ಬೇಡ ದೇವರೇ,ನಾನೆಂದೂ ಭೂತಗಳ ಫೋಟೋಗಳನ್ನು ದುಡ್ಡು ಗಳಿಸಲು ಅಥವಾ ಇನ್ಯಾವುದೋ ಅಗ್ಗದ ಕಾರ್ಯಗಳಿಗೆ ಬಳಸುವುದಿಲ್ಲ " ಎಂದು ಬೇಡಿ ಕೊಂಡೆ !ನಂತರ ನಾಗ ಭೂತ ಕೊಟ್ಟ ಅರಸಿನ ಪ್ರಸಾದ ನನ್ನಲ್ಲಿತ್ತು ಅದನ್ನು ಹಣೆಗೆ ಹಚ್ಚಿಕೊಂಡು ಕಣ್ಣಿಗೆ ಒಂದು ತೊಟ್ಟು ತಂಬಾಲು ಬಿಟ್ಟು ನಿದ್ರೆ ಮಾಡಿದೆ ,ಮರುದಿನ ಏಳುವಾಗ ಕಣ್ಣು ಸರಿಯಾಗಿತ್ತು !

 ಚೌಕಾರು ಗುತ್ತುಗಳಲ್ಲಿ ಕಂಬಳಕೋರಿಯಂದು ಪೂಕರೆ ಹಾಕುವಾಗ ನಾಗಭೂತಕ್ಕೆ ಕೋಲವಿದೆ. ನಾಗಭೂತದ ಮುಖವರ್ಣಿಕೆ ಸರಳವಾಗಿದ್ದು, ಕಪ್ಪುಬಣ್ಣದ ಮೇಲೆ ಹಳದಿ ನಾಗಚಿಹ್ನೆಗಳನ್ನು ಬರೆಯುತ್ತಾರೆ. ತಲೆಗೆ ನಾಗನ ಹೆಡೆಯ ಆಕಾರದ ಮುಡಿಯನ್ನು ಹಿಡಿಯುತ್ತಾರೆ. ಚೌಕಾರುಗುತ್ತು ಹಾಗೂ ಅರಿಬೈಲಿನಲ್ಲಿ ನಾಗಭೂತದ ಮುಡಿಯಲ್ಲಿ ಮೂರು ಹೆಡೆಗಳಿವೆ. . ಇಚ್ಲಂಗೋಡಿನ ಕೃಷ್ಣಸರ್ಪಕೋಲದಲ್ಲಿ ಮೂರು ಹೆಡೆಯ ಮುಖವಾಡ ಧರಿಸುತ್ತಾರೆ. ಅನೇಕ ದೈವಗಳು ನಾಗ ನೊಂದಿಗೆ ಸಮೀಕರಣಗೊಂಡು ಆರಾಧಿಸಲ್ಪಡುತ್ತಿದ್ದಾರೆ ನಾಗ ಚಾಮುಂಡಿ ,ನಾಗ ರಕ್ತೇಶ್ವರಿ ನಾಗ ಪಂಜುರ್ಲಿ ಇತ್ಯಾದಿ .ಮೂವ ದೈವ ಕೂಡ ಮರಿ ನಾಗ ಎಂಬ ಅಭಿಪ್ರಾಯವಿದೆ ಆತನ ಅಭಿನಯ ಕೂಡ ನಾಗನಂತೆ ಇದೆ.ನಾಗನನ್ನು ಬೆರ್ಮೆರ್ ಜೊತೆ ಸಮೀಕರಿಸಿರುವುದು ಎಲ್ಲೆಡೆ ಕಂಡು ಬರುತ್ತಿದೆ .

 ನಾಗಬ್ರಹ್ಮ ಸಮನ್ವಯ

ನಾಗಬ್ರಹ್ಮನ ಆರಾಧನೆ ತುಳುನಾಡಿನಲ್ಲಿ ಪರಂಪರಾಗತವಾಗಿ ಬಂದ ಜಾನಪದ ನಂಬಿಕೆ. ಇಲ್ಲಿ ಸತ್ತ ನಾಗನನ್ನು ಯಾರಾದರೂ ನೋಡಿದರೆ, ಆತನು ಅದನ್ನು ಸಂಸ್ಕಾರ ಮಾಡಬೇಕೆಂಬ ನಂಬಿಕೆ ಇದೆ. ಶಾಸ್ತ್ರೋಕ್ತವಾಗಿ ಅಂತ್ಯೇಷ್ಟಿ ಸಂಸ್ಕಾರದ ಹಕ್ಕು ಸತ್ತ ವ್ಯಕ್ತಿಯ ಕುಟುಂಬ ಗೋತ್ರ ಹಾಗೂ ವಂಶದವರಿಗೆ ಇರುತ್ತದೆ. ಆದ್ದರಿಂದ ತುಳುನಾಡಿನ ಜನರು ನಾಗವಂಶದವರಿರಬೇಕು. “ಇಲ್ಲಿ ದಕ್ಷಿಣ, ಉತ್ತರ ಕನ್ನಡ, ಕರಾವಳಿ ಪ್ರದೇಶಕ್ಕೆ ನಾಗರಖಂಡವೆಂದು ಹೆಸರಿತ್ತು. ಇಲ್ಲಿ ನಾಗರೆಂಬ ಆದಿವಾಸಿಗಳು ವಾಸಿಸುತ್ತಿದ್ದರು. ಸರ್ಪಕುಲಲಾಂಛನವಾಗಿದ್ದ ಈ ಜನರಲ್ಲಿ ಸರ್ಪಾರಾಧನೆ ಒಂದು ಸ್ಥಳೀಯ ಮತಾಚಾರಣೆಯಾಗುತ್ತಿದ್ದಿರಬೇಕು” ಎಂದು ಗೋವಿಂದ ಪೈ ಹೇಳಿದ್ದಾರೆ.

ತುಳುನಾಡಿನಲ್ಲಿ ನಾಗಮಂಡಲದಲ್ಲಿ ಬಿಡಿಸಲಾಗುವ ಕೈಕಾಲುಗಳಿಲ್ಲದ ತಲೆಯ ಚಿತ್ರವನ್ನು ‘ಬ್ರಹ್ಮಯಕ್ಷ’ ಎನ್ನಲಾಗುವುದು. ಈ ಬ್ರಹ್ಮಯಕ್ಷ, ವೈದಿಕರ ಚತುರ್ಮುಖಬ್ರಹ್ಮನಲ್ಲ. ತುಳುವರು ಹೇಳುವ ಬೆರ್ಮರ್ ಇದೆಂದೂ, ಇದನ್ನು ಸಂತಾನದ ಅಧಿದೇವತೆ ಎಂದು ಹೇಳಲಾಗುತ್ತದೆ” ಎಂದು ಪ್ರೊ. ಎ.ವಿ. ನಾವಡ ಹೇಳಿದ್ದಾರೆ.

“ತುಳುನಾಡಿನ ಜನತೆ ತನ್ನ ಪೂರ್ವಜರನ್ನು ಸ್ಮರಿಸುವುದಕ್ಕೂ ನಾಗಬ್ರಹ್ಮನ ಕಲ್ಪನೆಗೂ ಸಂಬಂಧವಿದ್ದಂತಿದೆ” ಎಂದು ಬನ್ನಂಜೆ ಬಾಬು ಅಮೀನ್ ಅಭಿಪ್ರಾಯಪಟ್ಟಿದ್ದಾರೆ.34

ತುಳುನಾಡಿನ ನಾಗಬನಗಳಲ್ಲಿನ ನಾಗಶಿಲ್ಪಗಳಲ್ಲಿ ಕೆಲವು ನಾಗಬ್ರಹ್ಮನ ಪರಿಕಲ್ಪನೆಯನ್ನು ಅಭಿವ್ಯಕ್ತಿಸುತ್ತವೆ. ಎಣ್ಮೂರಿನ ಆದಿ ಗರಡಿಯ ಸಮೀಪದಲ್ಲಿರುವ ನಾಗಶಿಲ್ಪದಲ್ಲಿ ತಂಬೂರಿ ಹಿಡಿದ ನಾಗಬ್ರಹ್ಮನಿದ್ದಾನೆ. ಉಜಿರೆಯ ಕೇಲಂಗಿಮನೆಯ ಪ್ರಾಚೀನ ನಾಗಬನದಲ್ಲಿ ಸೊಂಟದ ಮೇಲ್ಭಾಗದ ಮನುಷ್ಯಾಕೃತಿಯ ತಲೆಯ ಸುತ್ತ ನಾಗಹೆಡೆಗಳಿರುವ ಸೊಂಟದ ಕೆಳಭಾಗದಲ್ಲಿ ಸರ್ಪಾಕೃತಿ ಇರುವನಾಗಶಿಲ್ಪವಿದೆ  ನಿಡಿಗಲ್ಲು ಆಲಡೆಯಲ್ಲಿ ಮೇಲ್ಭಾಗ ಮನುಷ್ಯ, ಕೆಳಭಾಗದಲ್ಲಿ ನಾಗಾಕಾರ ಶಿಲ್ಪದ ಒಂದು ಬದಿಯಲ್ಲಿದ್ದರೆ, ಹಿಂಬದಿಯಲ್ಲಿ ನಾಗಮಂಡಲದ ಪವಿತ್ರ ಬಂಧದ ರಚನೆಯಿದೆ. ಅನಂತಾಡಿ ನಾಗಬನದಲ್ಲಿ ನಾಗನಿಗೆ ಸಾಮಾನ್ಯ ಒಂದು ಕಲ್ಲು ಇದೆ. ಆದರೆ ಬ್ರಹ್ಮರೆಂದು ಹಳೆಯ ಮಣ್ಣಿನ ಮಡಿಕೆಗಳಿವೆ. ಚೌಕಾರುಗುತ್ತಿನಲ್ಲಿ ಬೆರ್ಮೆರ್ ಎಂದು ಒಂದು ಮುರಕಲ್ಲನ್ನು ಆರಾಧಿಸುತ್ತಾರೆ ಕವತ್ತಾರು ಆಲಡೆಯಲ್ಲಿ ನಾಗನಿಗೆ ಸಣ್ಣಮಂಟಪ ಇದೆ. ಇದರ ಒಳಗೆ ಹೆಡೆ ತೆರೆದ ನಾಗಶಿಲ್ಪವಿದೆ. ಅಲ್ಲಿಯೇ ಪಕ್ಕದಲ್ಲಿ ಬೆರ್ಮರ ಮಾಡ ಇದೆ. ಇದರ ಒಳಗೆ ಒಂದು ಚೌಕಾಕಾರದ ಮುರಕಲ್ಲು ಇದೆ. ಇದನ್ನೇ ‘ಬ್ರಹ್ಮ’ ಎಂದು ಹೇಳುತ್ತಾರೆ.

ಹೀಗೆ ಕೆಲವೆಡೆ ನಾಗನ ಕಲ್ಲುಗಳು, ಕೆಲವೆಡೆ ನಾಗಶಿಲ್ಪಗಳು, ಇನ್ನು ಕೆಲವೆಡೆ ನಾಗಬ್ರಹ್ಮ ಶಿಲ್ಪಗಳು ಆರಾಧನೆಗೊಳ್ಳುತ್ತವೆ. ಕೆಲವೆಡೆ ಬ್ರಹ್ಮರಿಗೆ ತೆಂಗಿನಕಾಯಿ ಮೂಲಕ ಸಂಕಲ್ಪವಿದ್ದರೆ, ಕೆಲವೆಡೆ ‘ಬ್ರಹ್ಮ’ರಿಗೆ ಕಲ್ಲುಗಳು ಇವೆ. ಗರಡಿಗಳಲ್ಲಿ ಬ್ರಹ್ಮರ ಮೂರ್ತಿಗಳಿವೆ. ಇಲ್ಲಿ ನಾಗಬೆರ್ಮೆರ್ ಎಂದು ಹೇಳುವುದಿಲ್ಲ. ಆಲಡೆಗಳಲ್ಲಿ ಬ್ರಹ್ಮಲಿಂಗೇಶ್ವರ ಎನ್ನುತ್ತಾರೆ. ಆದರೂ ಆಲಡೆಗಳಲ್ಲಿ ಆದಿ ಆಲಡೆ, ಆದಿಬ್ರಹ್ಮಸ್ಥಾನಗಳಲ್ಲಿ ಹುತ್ತದ ಬೆರ್ಮರ ಆರಾಧನೆ ಇದೆ. ಕೆಲವು ಬ್ರಹ್ಮಸ್ಥಾನಗಳಲ್ಲಿ ಹಾಗೂ ಗರಡಿಗಳಲ್ಲಿ ಕೇವಲ ಬ್ರಹ್ಮಗುಂಡ ಮಾತ್ರ ಇರುತ್ತದೆ. “ಕಲ್‍ಡ್‍ನಾಗೆ ಪುಂಚೊಡು ಸರ್ಪ ಗುಂಡೊಡು ಬೆರ್ಮೆರ್. ಕಲ್ಲಿನಲ್ಲಿ ನಾಗ, ಹುತ್ತದಲ್ಲಿ ಸರ್ಪ, ಗುಂಡದಲ್ಲಿ ಬೆರ್ಮೆರ್ ನೆಲೆಯಾಗುತ್ತಾರೆ ಎಂದು ಹೇಳಿದೆ. “ಆ ನಾಗೆರ್ಲೆನ್ ಬೆರ್ಮೆರೆನ್ ನಿರ್ಮಿಯೆರ್ ದೇವೆರ್ ಎಡದಿಕ್ಕುಡು ಬೆರ್ಮೆರ್ ಬಲದಿಕ್ಕುಡು ...” (ಆ ನಾಗಗಳನ್ನು ಬೆರ್ಮೆರನ್ನು ನಿರ್ಮಿಸಿದರು, ದೇವರ ಎಡದಿಕ್ಕಿನಲ್ಲಿ ಬೆರ್ಮರ್ ಬಲದಿಕ್ಕಿನಲ್ಲಿ ... ) ಎಂಬ ಪಾಡ್ದನದ ಹೇಳಿಕೆಯಲ್ಲಿ ನಾಗ ಮತ್ತು ಬೆರ್ಮರ್ ಬೇರೆ ಬೇರೆ ಎರಡು ಶಕ್ತಿಗಳು ಎಂದು ಹೇಳಲಾಗಿದೆ.

ಕಾಪು ಬ್ರಹ್ಮಲಿಂಗೇಶ್ವರದೇವರ ಗರ್ಭಗುಡಿಯ ಎಡಭಾಗದ ಮೂಲ ಬ್ರಹ್ಮಸ್ಥಾನವೆಂದು ಕರೆಯಲ್ಪಡುವ ಬನದಲ್ಲಿ ಬ್ರಹ್ಮನ ಉದ್ಭವ ಶಿಲೆ ಇದೆ. ಇಲ್ಲಿ ನಾಗಶಿಲೆ ಇಲ್ಲ.

ಪಡುಪೆರಾರದ ಬ್ರಹ್ಮಬಲವಾಂಡಿ ದೇವಸ್ಥಾನದ ಮೂಲಬ್ರಹ್ಮಸ್ಥಾನವೆಂದು ಹೇಳುವ ಬನದಲ್ಲಿ ಬ್ರಹ್ಮನ ಉದ್ಭವವಾದ ಕಲ್ಲು ಇದೆ. ಇಲ್ಲಿ ನಾಗನಿಗೆ ಅಸ್ತಿತ್ವವಿಲ್ಲ. ಅಲ್ಲಿ ಸ್ವಲ್ಪ ದೂರದಲ್ಲಿರುವ ನಾಗಬನ ಇತ್ತೀಚೆಗೆ ನಿರ್ಮಿಸಲ್ಪಟ್ಟುದು ಎಂದು ಅಲ್ಲಿಯವರು ಹೇಳುತ್ತಾರೆ. ಅಲ್ಲಿನ ತಂತ್ರಿಗಳ ಪ್ರಕಾರ ಅಲ್ಲಿಯ ‘ಬ್ರಹ್ಮ’ ಭೂತಬ್ರಹ್ಮ, ನಾಗಬ್ರಹ್ಮನಲ್ಲ.

ಕೋಟಿಚೆನ್ನಯರ ಪಾಡ್ದನದ ಆದಿಯಲ್ಲಿ ಬರುವ ಬೆರ್ಮರ ವರ್ಣನೆ ಅಲೌಕಿಕವಾದುದು ಆಗಿದೆ. ಆದರೆ ಆ ಬೆರ್ಮರಿಗೆ ನಾಗನ ಹೆಡೆ ಇರುವ ಬಗ್ಗೆಯಾಗಲಿ ನಾಗಬ್ರಹ್ಮ ಶಿಲ್ಪಗಳಲ್ಲಿರುವಂತೆ, ಸೊಂಟದಿಂದ ಕೆಳಭಾಗ ಸರ್ಪಾಕಾರ ಇರುವ ಬಗ್ಗೆಯಾಗಲೀ ವರ್ಣನೆ ಇಲ್ಲ. ಒಂದೆರಡು ಪಾಡ್ದನಗಳಲ್ಲಿ ಕೋಟಿಚೆನ್ನಯರಿಗೆ ಕೆಮ್ಮಲೆಯಲ್ಲಿ ಕಾಣಿಸಿದ ಬೆರ್ಮರ್ ಕುದುರೆಏರಿದ ವೀರನಾಗಿ ಚಿತ್ರಿತನಾಗಿದ್ದಾನೆ. ಹೆಚ್ಚಿನ ಪಾಡ್ದನಗಳಲ್ಲಿ ವೀಳ್ಯದೆಲೆಯಷ್ಟು ತೆಳುವಾಗಿ, ತೆಂಗಿನಮರದಷ್ಟು ಎತ್ತರವಾಗಿ, ಆಲದಷ್ಟು ಅಗಲವಾಗಿ, ಅಡಿಕೆಯಷ್ಟು ಉರುಟಾಗಿ ಕಾಣಿಸಿದ ಬ್ರಹ್ಮನ ವರ್ಣನೆ ಇದೆ. ಇಲ್ಲಿ ಬ್ರಹ್ಮನಿಗೆ ಮನುಷ್ಯನ ಆಕಾರವನ್ನು ಸೂಚಿಸಿಲ್ಲ. ಆದರೆ ಮೊದಲು ಬೆರ್ಮರ ಉದೀಪನದ ಸಂದರ್ಭದಲ್ಲಿ ವರ್ಣಿಸಲ್ಪಟ್ಟ ಬ್ರಹ್ಮನಿಗೆ ಏಳುತಲೆಯ ಸತ್ತಿಗೆ, ಹಾಗೂ ಜನಿವಾರಗಳನ್ನು ಹೇಳಿದ್ದು ಇದು ರಾಜಪುರುಷನನ್ನು ಸೂಚಿಸುತ್ತದೆ. ಎಡದಲ್ಲಿ ಕರಿಯ ಸಂಕಮಾಲ, ಬಲಬದಿಯಲ್ಲಿ ಬಿಳಿಯ ಸಂಕಮಾಲ ಇರುವ ಬಗ್ಗೆ ಹೇಳಿದೆ. ಕರಿಯ ಸಂಕಮಾಲ ಮತ್ತು ಬಿಳಿಯ ಸಂಕಮಾಲರನ್ನು ಸರ್ಪಗಳೆಂದೂ, ನಾಗರಾಜರೆಂದೂ ಪರಿಗಣಿಸಲಾಗಿದೆ. ಈ ವರ್ಣನೆಯನ್ನು ಕಪ್ಪು ಶಂಖಗಳ ಹಾಗೂ ಬಿಳಿ ಶಂಖಗಳ ಮಾಲೆ ಎಂದೂ ಕೆಲವರು ಅರ್ಥೈಸಿದ್ದಾರೆ. 

ಕಂಡೇವು ಬೀಡಿನ ಬನದಲ್ಲಿ ಕರಿಯ ಸಂಕಪಾಲ ಹಾಗೂ ಬಿಳಿಯ ಸಂಕಪಾಲರ ನಾಗಬನಗಳಿವೆ. ತುಳುನಾಡಿನ ಕೆಲವೆಡೆ ಸಂಕಪಾಲ ಸುಬ್ರಹ್ಮಣ್ಯ ದೇವಾಲಯಗಳಿವೆ. ಏನೆಕಲ್ಲು ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಗರ್ಭಗುಡಿಯಲ್ಲಿ ಒಂದು ಹುತ್ತ ಅದರ ಎದುರು ಒಂದು ನಾಗಪ್ರತಿಮೆ ಇಟ್ಟು ಶಂಖಪಾಲ ಸುಬ್ರಹ್ಮಣ್ಯನೆಂದು ಪೂಜಿಸುತ್ತಾರೆ. ಇಲ್ಲಿ ನಾಗಪ್ರತಿಮೆ ‘ಶಂಖಪಾಲ’ನನ್ನು ಪ್ರತಿನಿಧಿಸುತ್ತದೆ. (ಚಿತ್ರ 31)

ಎಡಬಲಗಳಲ್ಲಿ ಸಂಕಪಾಲರಿರುವ ವರ್ಣನೆ ಎಲ್ಲ ಪಾಡ್ದನಗಳಲ್ಲಿ ಕಾಣಿಸುವುದಿಲ್ಲ. ಸಂಕಮಾಲ/ಸಂಕಪಾಲರ ಪ್ರಸ್ತಾಪವಿರುವಲ್ಲಿ ಕೂಡ ಬೆರ್ಮೆರ್ ಮತ್ತು ಸಂಕಪಾಲರು ಬೇರೆ ಬೇರೆ ಎಂಬ ಚಿತ್ರಣವಿದೆ. ಬೆರ್ಮರ್ ಎಡಬಲದಲ್ಲಿ ಕರಿಯ ಸಂಕಪಾಲ ಮತ್ತು ಬಿಳಿಯ ಸಂಕಪಾಲರಿದ್ದಾರೆ ಎಂಬ ವರ್ಣನೆ ಇದೆಯೇ ಹೊರತು ನಾಗಬೆರ್ಮರ್ ತಾದಾತ್ಯ್ಮವಿಲ್ಲ.

ಸಿರಿಯ ಪಾಡ್ದನದಲ್ಲಿ ಬೆರ್ಮರ ಸ್ವರೂಪದ ಬಗ್ಗೆ ಮಾಹಿತಿ ಸಿಗುವುದಿಲ್ಲ. ಕಾಡಿನಲ್ಲಿರುವ ಬೆರ್ಮರನ್ನು ತಂದು ಏಳದೆ ಗುಂಡ ನಿರ್ಮಿಸುವ ಬಗ್ಗೆ ಮಾತ್ರ ಹೇಳಲಾಗಿದೆ. ಇಲ್ಲಿ ಬೆರ್ಮರಿಗೆ ರಾಜಪುರುಷನ ವರ್ಣನೆ ಕೂಡ ಇಲ್ಲ. ಬೆರ್ಮರ ಪ್ರಸ್ತಾಪವಿರುವ ಪಾಡ್ದನಗಳಲ್ಲಿ ಸಿರಿಪಾಡ್ದನ ಪ್ರಾಚೀನವಾದುದು.

ಇದರಿಂದ ಸಿರಿಪಾಡ್ದನದ ಕಾಲದಲ್ಲಿ ಬೆರ್ಮೆರಿಗೆ ಪುರುಷ ರೂಪದ ಪರಿಕಲ್ಪನೆ ಇರಲಿಲ್ಲ ಎಂದು ತಿಳಿಯುತ್ತದೆ. ಬೆರ್ಮರಿಗೆ ಗುಂಡ ಕಟ್ಟುವ ಸಂಪ್ರದಾಯ ಬಹುಶಃ ಈ ಕಾಲದಲ್ಲಿ ಆರಂಭವಾಗಿರಬೇಕು. ಕಾಡಿನಲ್ಲಿರುವ ಬೆರ್ಮೆರನ್ನು ತಂದು ಏಳದೆ ಗುಂಡ ಕಟ್ಟಿರುವ ಪ್ರಸ್ತಾಪ ಈ ಪಾಡ್ದನದಲ್ಲಿದೆ. ಕಾಡಿನಲ್ಲಿ ‘ಬೆರ್ಮೆರ್’ ಯಾವ ರೂಪದಲ್ಲಿ ಇದ್ದ? ಎಂಬ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. ಕಾಡಿನಲ್ಲಿ ಪಾಳು ಬಿದ್ದ ಬ್ರಹ್ಮಸ್ಥಾನದ ಸ್ಥಳದಿಂದ ಮಣ್ಣನ್ನು ತಂದು ಗುಂಡದೊಳಗೆ ಪ್ರತಿಷ್ಠಾಪಿಸಿರಬಹುದೇ? ಇಂದಿಗೂ ಕೋಳ್ಯೂರು ಬೈಲಿನಲ್ಲಿ ಪೂಕರೆಯ ದಿನ ಒಂದು ಮುಷ್ಠಿ ಮಣ್ಣನ್ನು ಹಿಂಗಾರದೊಂದಿಗೆ ಬಾಳೆಕುಡಿಯ ಮೇಲಿಟ್ಟು ಗಣಪತಿ ಎಂದು ಸಂಕಲ್ಪಿಸುತ್ತಾರೆ. ಇಲ್ಲಿಬ್ರಹ್ಮರನ್ನು ‘ಗಣಪತಿ’ ಎಂದು ಹೇಳುತ್ತಾರೆ ಎಂದು ಅಲ್ಲಿನ ಹಿರಿಯರಾದ ನಾರಾಯಣಭಟ್ಟರು ಹೇಳುತ್ತಾರೆ. ಕೋಳ್ಯೂರಿನ ಶಂಕರನಾರಾಯಣ ದೇವಸ್ಥಾನ ಬ್ರಹ್ಮ-ವಿಷ್ಣು-ಶಿವರೆಂಬ ತ್ರಿಮೂರ್ತಿಗಳ ದೇವಸ್ಥಾನವಾಗಿದೆ. ಇಲ್ಲಿ ಬ್ರಹ್ಮನ ಬದಲಿಗೆ ಗಣಪತಿಯನ್ನೇ ಆರಾಧಿಸುವ ಪದ್ಧತಿಯಿದೆ.

ಬ್ರಹ್ಮಸ್ಥಾನಗಳು ಕಾಡಿನಲ್ಲಿ ಇರುತ್ತವೆ. ವರ್ಷದಲ್ಲಿ ಒಂದೆರಡು ಬಾರಿ ಅಲ್ಲಿಗೆ ಹೋಗಿ ಆರಾಧಿಸುತ್ತಾರೆ. ಬೆರ್ಮೆರ ಕಲ್ಲುಗಳು ಬನದಲ್ಲಿ ಇರುತ್ತದೆ. ಕಾಲಾಂತರದಲ್ಲಿ ಕಲ್ಲುಗಳ ಮೇಲೆ ಹುತ್ತ ಬೆಳೆದಾಗ, ಹುತ್ತವನ್ನು ಕೀಳುವ ಧೈರ್ಯ ಯಾರಿಗೂ ಇರುವುದಿಲ್ಲ. ಕವತ್ತಾರು ಆಲಡೆಯಲ್ಲಿ ಬ್ರಹ್ಮಲಿಂಗೇಶ್ವರ ಗರ್ಭಗುಡಿಯ ಎದುರು ಭಾಗದಲ್ಲಿ ಬ್ರಹ್ಮದೇವರ ಸಣ್ಣಗುಡಿಯೊಂದಿದ್ದು ಅದರಲ್ಲಿ ಬ್ರಹ್ಮರ ಪ್ರತೀಕವಾಗಿ ಒಂದು ಚೌಕಾಕಾರದ ಮುರಕಲ್ಲು ಇದೆ. ಇದರ ಮೇಲೆ ಈಗ ಹುತ್ತ ಬೆಳೆಯುತ್ತಿದ್ದು, ಈ ಹುತ್ತವನ್ನು ಕೀಳಬಾರದು ಎಂದು ಅಲ್ಲಿನ ಅರ್ಚಕರು ಹೇಳುತ್ತಾರೆ. 

 

ಕಾಲಾಂತರದಲ್ಲಿ ಹೀಗೆ ಬೆಳೆದ ಹುತ್ತಗಳು ನಾಗನ ಆವಾಸಸ್ಥಳಗಳಾಗುತ್ತವೆ. ತುಳುನಾಡಿನಲ್ಲಿ ನಾಗಾರಾಧನೆ ಪ್ರಚಲಿತವಿದೆ. ಇದರ ಪ್ರಭಾವದಿಂದಾಗಿ ಬ್ರಹ್ಮಸ್ಥಾನದ ಹುತ್ತಗಳಲ್ಲಿ ಬೆರ್ಮೆರ್ ಜೊತೆಗೆ ನಾಗನ ಆರಾಧನೆ ಪ್ರಾರಂಭವಾಯಿತು. ಕಾಲಾಂತರದಲ್ಲಿ ನಾಗ ಮತ್ತು ಬೆರ್ಮೆರ್ ನಡುವಿನ ಅಂತರ ಅಳಿಸಿಹೋಗಿ ನಾಗಬ್ರಹ್ಮರಿಗೆ ಏಕಾತ್ಮತೆ ಉಂಟಾಗಿದೆ ಎನ್ನಬಹುದು.

ಆಧಾರ ಗ್ರಂಥ 

ಕರಾವಳಿಯ ಸಾವಿರದೊಂದು ದೈವಗಳು:ಡಾ.ಲಕ್ಷ್ಮೀ ಜಿ ಪ್ರಸಾದ, ಮೊಬೈಲ್ 9480516684

ತುಳು ನಾಡಿನ ನಾಗ ಬ್ರಹ್ಮ ಮತ್ತು ಕಂಬಳ -ಒಂದು ವಿಶ್ಲೇಷಣಾತ್ಮಕ ಅಧ್ಯಯನ:ಲೇ ಡಾ.ಲಕ್ಷ್ಮೀ ಜಿ ಪ್ರಸಾದ 

 

ಹೀಗೊಂದು ಮೋಸ ಪುರಾಣ -ಡಾ.ಲಕ್ಷ್ಮೀ ಜಿ ಪ್ರಸಾದ

 

ಹೀಗೊಂದು ಮೋಸ ಪುರಾಣ -ಡಾ.ಲಕ್ಷ್ಮೀ ಜಿ ಪ್ರಸಾದ

 


ವಿಷ್ಣು ಪುರಾಣ ಶಿವ ಪುರಾಣ ಗರುಡ ಪುರಾಣ ಹೆಸರು ಕೇಳಿದ್ದೀರಿ ಇದ್ಯಾವುದು ಮೋಸ ಪುರಾಣ ಅಂತ ತಿಳಿಯಬೇಕೆ ?ಹಾಗಾದರೆ ಸಾವಕಾಶ ಓದಿ ಇದನ್ನು

ಸಾಮಾನ್ಯವಾಗಿ ನಾನು ಯಾವುದೇ ಪ್ರಶಸ್ತಿ ಗಾಗಲಿ, ಪುಸ್ತಕ ಬಹುಮಾನಕ್ಕಾಗಲಿ ಫೆಲೋ ಶಿಪ್ ಗಾಗಲೀ ಅರ್ಜಿ ಸಲ್ಲಿಸುವುದಿಲ್ಲ .

 ಕೆಲವು ವರ್ಷಗಳ ಮೊದಲು ಕನ್ನಡ ಜಾನಪದ ಅಕಾಡೆಮಿ ಕೆಲವು ವಿಷಯಗಳ ಮೇಲೆ  ಅಧ್ಯಯನ ಮಾಡಲು ಫೆಲೋ ಶಿಪ್ ಗೆ ಅರ್ಜಿ ಆಹ್ವಾನಿಸಿತ್ತು .ಅದರಲ್ಲಿ ನನ್ನ ಆಸಕ್ತಿಯ ಒಂದೆರಡು ವಿಷಯಗಳೂ ಇದ್ದವು .ಆ ದಿನ ಅದನ್ನು ಓದಿದಾಗ ಅರ್ಜಿ ಸಲ್ಲಿಸಬೇಕು ಎಂದು ಕೊಂಡೆ .ಹಾಗೆ ಮಗನಲ್ಲಿ ಈ ಬಾರಿ ನಾನು ಫೆಲೋಶಿಪ್ ಗೆ ಅರ್ಜಿ ಸಲ್ಲಿಸುತ್ತೇನೆ ಎಂದು ಹೇಳಿದ್ದೆ
ದಿನ ಪಂಡು ಕಳೆದಾಗ .ಮತ್ಯಾಕೋ ಬೇಡ ಅನಿಸಿತ್ತು ಇಷ್ಟರ ತನಕ ನಾನು ಯಾವುದೇ ಸಂಘ ಸಂಸ್ಥೆ  ಅಕಾಡೆಮಿಗಳ  ಅನುದಾನ ಪಡೆಯದೇ ಸ್ವಂತ ಅಧ್ಯಯನ ಮಾಡಿದ್ದೇನೆ ಈಗ ಇನ್ನು ಇವೆಲ್ಲ ಕಿರಿ ಕಿರಿ ಬೇಡ ಎನ್ನಿಸಿತು ..ಹಾಗಾಗಿ ಅರ್ಜಿ ಸಲ್ಲಿಸುವ ವಿಚಾರ ಬಿಟ್ಟು ಬಿಟ್ಟಿದ್ದೆ ..
ಏನೋ ಮಾತಾಡುವಾಗ ಮಗ ಹೇಳಿದ "ಅಮ್ಮ ಈಗಾಗಲೇ ಅಲ್ಲಿ ಕೊಟ್ಟ ವಿಷಯಗಳ ಬಗ್ಗೆ ಸ್ಟಡಿ ಮಾಡಿದ್ದೀಯಲ್ಲ .ಇನ್ನು ಒಂದಷ್ಟು ಮಾಡಿ ಎಲ್ಲ ಒಟ್ಟಿಗೆ ಸೇರಿಸಿ ಬರೆದು ಸಲ್ಲಿಸಿದರೆ ಆಯಿತು ಅಲ್ವ ?ನೀನು ಯಾಕೆ ಫೆಲೋ ಶಿಪ್ ಸಿಗುತ್ತಾ ಅಂತ ಯತ್ನಿಸಬಾರದು ,ಒಂದು ಸಲ ಅರ್ಜಿ ಸಲ್ಲಿಸಿ ನೋಡು ಸಿಗುತ್ತಾ ಅಂತ ಹೇಳಿದ ..
ಹೌದಲ್ಲ ?ಅನಿಸಿತು ನನಗೆ .
ದಿನ ದಿನ ಕಳೆದ ಹಾಗೆ ನಾನು ಚಿಕ್ಕವಳಾಗುದಿಲ್ಲ ,ಮುಂದೆ ವಯಸ್ಸಾದಂತೆ  ಮೊದಲಿನಂತೆ ಅಧ್ಯಯನ ಮಾಡಲು ಸಾಧ್ಯವಾಗುತ್ತೋ ಇಲ್ಲವೋ ? ಈಗ ಒಂದು ಗುರಿ ಇದ್ದರೆ ಹೇಗೋ ಸಂಶೋಧನೆ ಮಾಡಿ ಬಿಡಬಹುದು ಜೊತೆಗೆ ಫೆಲೋ ಶಿಪ್ ಇರುವ ಕಾರಣ ಅಧ್ಯಯನಕ್ಕೆ ಆರ್ಥಿಕ ಹೊರೆ ಅಂತು ಬೀಳುದಿಲ್ಲ ..
ಹಾಗೆ ಆಲೋಚಿಸಿ ಇಂದು ಕನ್ನಡ ಜಾನಪದ ಅಕಾಡಮಿ ಗೆ ಹೋಗಿ ಅರ್ಜಿ ಸಲ್ಲಿಸಿ ಬಂದೆ .ಅಲ್ಲಿಗೆ ಹೋಗುವಾಗ ತುಸು ಅಳುಕಿತ್ತು ಅಲ್ಲಿನ ರಿಜಿಸ್ತ್ರರ್ ಹೇಗೋ ಏನೋ ಎಂದು ,
ಆದರೆ ಅಲ್ಲಿನ ರಿಜಿಸ್ಟ್ರಾರ್ ಅವರನ್ನು ಭೇಟಿ ಮಾಡಿ ಮಾತಾಡಿದ ಮೇಲೆ ನನಗೆ ಮನಸು ನಿರಾಳ  ಆಯಿತು ,ಬಹಳ ಸಜ್ಜನಿಕೆಯಿಂದ ಮಾತಾಡಿದರು .ನನ್ನ ಆರ್ಜಿ ಆಯ್ಕೆಯಾಗಿ ಫೆಲೋ ಶಿಪ್ ಸಿಗುತ್ತೋ ಇಲ್ಲವೋ ಅದು ಬೇರೆ ವಿಚಾರ ಆದರೆ ಅವರ ಸರಳತೆ ಸಹೃದಯ ಮಾತು ಇಷ್ಟವಾಯಿತುಇಲ್ಲೂ ನನಗೆ ಸಿಗಲಿಲ್ಲ ಅದು ಬೇರೆ ವಿಚಾರ 

ಅಲ್ಲಿ ಅರ್ಜಿ ಸಲ್ಲಿಸಿ ಬರುವಾಗ ನನಗೆ ತುಳು ಅಕಾಡೆಮಿ ಫೆಲೋಶಿಪ್  ಪುರಾಣ ನೆನಪಾಯಿತು 

ಸುಮಾರು 5- 6 ವರ್ಷಗಳ ಹಿಂದೆ ತುಳು ಅಕಾಡೆಮಿ ತುಳು ಅಧ್ಯಯನ ಆಸಕ್ತರಿಂದ ಫೆಲೋ ಶಿಪ್ ಗಾಗಿ ಅರ್ಜಿ ಆಹ್ವಾನಿಸಿತ್ತು ,ಪತ್ರಿಕೆಯಲ್ಲಿ ಈ ಬಗ್ಗೆ ಓದಿ ನಾನು ತುಳು ಅಕಾಡೆಮಿ   ರಿಜಿಸ್ಟ್ರಾರ್ ಗೆ ಫೋನ್ ಮಾಡಿದೆ ,ಈ ಬಗ್ಗೆ ಮಾಹಿತಿ ಕೇಳಿದೆ .ಸರಕಾರಿ ಉದ್ಯೋಗಿಗಳೂ ಅರ್ಜಿ ಸಲ್ಲಿಸಬಹುದೇ? ಎಂದು ಕೇಳಿದೆ .ಆಗ ಅವರು ಅಕಾಡೆಮಿ ಅಧ್ಯಕ್ಷರಾದ ಪಾಲ್ತಾಡಿಯವರಿಗೆ  ಫೋನ್ ಕೊಟ್ಟರು ,ಅವರು ಸರಕಾರಿ ಉದ್ಯೋಗಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ ಎಂದು ತಿಳಿಸಿದರು .ಇರ ಬಹುದು ಎಂದು ಕೊಂಡು ನಾನು ಸುಮ್ಮನಾದೆ .
ಸುಮಾರು ಎರಡು ಮೂರು ತಿಂಗಳ ನಂತರ ತುಳು ಅಕಾಡೆಮಿ ಫೆಲೋ ಶಿಪ್ ಗೆ ಆಯ್ಕೆ ಆದವರ ಹೆಸರುಗಳು ಪತ್ರಿಕೆಗಳಲ್ಲಿ ಬಂತು .ಅದರಲ್ಲಿ  ಬೆಳ್ಳಾರೆಸರ್ಕಾರೀ ಪ್ರಥಮ ದರ್ಜೆ ( ಶಿವರಾಮ ಕಾರಂತ) ಕಾಲೇಜ್ ನ ಹಿರಿಯ ಉಪನ್ಯಾಸಕರಾದ ಡಾ.ನರೇಂದ್ರ ರೈ ದೇರ್ಲ ಅವರ ಹೆಸರೂ ಇತ್ತು .ಅವರು ಫೆಲೋ ಶಿಪ್ ಗೆ ಅರ್ಹರೇ!ಆ ಬಗ್ಗೆ ಎರಡು ಮಾತಿಲ್ಲ ಆದರೆ ಸರ್ಕಾರೀ ಉದ್ಯೋಗಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲವೆಂದಾದ ಮೇಲೆ ಅವರಿಗೆ ಹೇಗೆ ಸಿಕ್ತು ?
ನಾನು ಎಲ್ಲೋ ಮೋಸ ಹೋದ ಬಗ್ಗೆ ತುಸು ವಾಸನೆ ಬಡಿಯಿತು .
ಮತ್ತೆ ರಿಜಿಸ್ಟ್ರಾರ್ ಚಂದ್ರ ಹಾಸ ರೈಗಳಿಗೆ ಫೋನ್ ಮಾಡಿದೆ .ಮತ್ತೆ ಯಥಾ ಪ್ರಕಾರ ಅವರು ಅಧ್ಯಕ್ಷರಾದ ಪಾಲ್ತಾಡಿ    ಕೈಗೆ ಫೋನ್ ಹಸ್ತಾಂತರಿಸಿದರು !
ಆಗ ಅವರು ಹೇಳಿದರು ಮತ್ತೆ ನಿಯಮದಲ್ಲಿ ಬದಲಾವಣೆ ಮಾಡಿದರಂತೆ !ನಾನು ಫೋನ್ ಮಾಡಿದಾಗ ಅರ್ಜಿ ಸಲ್ಲಿಸಲು ಎರಡು ದಿನ ಮಾತ್ರ ಬಾಕಿ ಇತ್ತು ಅಲ್ಲಿ ತನಕ ನಿಯಮ ಬದಲಾವಣೆ ಆಗಿರಲಿಲ್ಲ (ಮಾಡಿರಲಿಲ್ಲ !!!!!) ನಂತರ ಎರಡು ದಿನದಲ್ಲಿ ಬದಲಾವಣೆ ಆಯಿತು ಹಾಗಾದರೆ !
ಕೊಡಲು ಮನಸು ಇಲ್ಲದೇ ಇದ್ದರೆ ನಾನಾ ನೆಪಗಳು ಸಿದ್ಧವಾಗಿರುತ್ತದೆ ಇದನ್ನು ಪ್ರಶ್ನಿಸಿದರೆ ಅದು ಘೋರ ಅಪರಾದ !ಅದು ಜಗಳ ಕಂಟ ತನ ಎಂಬ ಬಿರುದು ಬೇರೆ ಸಿಗುತ್ತದೆ ಅದಕ್ಕೆ ನಾನು ಎಲ್ಲಿ ಯಾವುದೇ ಫೆಲೋಶಿಪ್ ಗೆ ಅರ್ಜಿ ಸಲ್ಲಿಸುವ ಗೋಜಿಗೆ ಹೋಗುದಿಲ್ಲ
ನನ್ನ ಮಿತಿಯಲ್ಲಿ ನನಗೆಷ್ಟು ಸಾಧ್ಯವೋ ಅಷ್ಟು ಮಾಡುತ್ತೇನೆ ..
ಆದರೆ ಜನ ಹೇಗೆಲ್ಲ ಕಾಲು ಎಳೆಯುತ್ತಾರೆ ನಮಗೆ ಗೊತ್ತಿಲ್ಲದೇ ಎಷ್ಟು ಮೋಸ ಹೋಗುತ್ತ್ತೇವೆ ಅಲ್ಲವೆ ಅಂತ ಆಶ್ಚರ್ಯ ಆಗುತ್ತದೆ .
ಇದೆ ರೀತಿ ಇನ್ನೊಂದು ವಿಷಯದಲ್ಲಿ ಮೋಸ ಹೋದದ್ದು ನನಗೆ ನೆನಪಾಗುತ್ತಿದೆ .
ಕೆಲವು ವರ್ಷಗಳ ಹಿಂದೆ ನಾನಾ ಕೆಲವು ಪುಸ್ತಕಗಳನ್ನು ನಾನೇ ಸ್ವಂತ ಪ್ರಕಟಿಸಿದ್ದೆ ,ನಂತರ 2010 ರಲ್ಲಿ ನನಗೆ ಪಿಎಚ್ ಡಿ ಪದವಿ ದೊರೆಯಿತು .
ನನ್ನ ಪಿಎಚ್ ಡಿ ಸಂಶೋಧನಾ ಪ್ರಬಂಧವನ್ನು ಯಾರಾದರೂ ಪ್ರಕಾಶಕರು ಪ್ರಕಟಿಸಿದರೆ ಒಳ್ಳೆಯದಿತ್ತು ಎಂದು ಆಲೋಚಿಸುತ್ತಿದ್ದೆ
ನನಗೆ ಈ ಕ್ಷೇತ್ರದಲ್ಲಿ ಯಾರೂ ಪರಿಚಯ ಇರಲಿಲ್ಲ ,ನನ್ನ ಪರಿಚಿತ ಸಂಶೋಧಕಿ ಒಬ್ಬರ  ಸಂಶೋಧನಾ ಮಹಾ ಪ್ರಬಂಧವನ್ನು ನವ ಕರ್ನಾಟಕ ಪಬ್ಲಿಕೇಶನ್ಸ್ ಪ್ರಕಟಿಸಿದ್ದು ನನಗೆ ತಿಳಿದಿತ್ತು
ಹಾಗೆ ಯಾವಾಗಲೋ ಅವರು ಸಿಕ್ಕಾಗ ನವಕರ್ನಾಟಕ ಪುಸ್ತಕ ಪ್ರಕಾಶಕರು ಯಾರು? ಅವರ ನಂಬರ್ ಕೊಡಲು ಸಾಧ್ಯವೇ? ಎಂದು ಕೇಳಿದೆ
ಆಗ ಅವರು ತಕ್ಷಣವೇ "ಅವರಿಗೆ ನನ್ನ ಥಿಸಿಸ್ ಪ್ರಕಟಿಸಿಯೇ ತುಂಬಾ ನಷ್ಟ ಆಯಿತಂತೆ ಅವರು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸುವುದೇ ಇಲ್ಲ ನನ್ನದನ್ನು ಏನೋ ಪ್ರಕಟಿಸಿದರು ಈಗ ನಷ್ಟ ಆಯಿತು ಇನ್ನು ಯಾರ ಸಂಶೋಧನಾ ಪ್ರಬಂಧ ವನ್ನು ಪ್ರಕಟಿಸುವುದೇ ಇಲ್ಲ ಎಂದು ಹೇಳಿದ್ದಾರೆ "ಎಂದು ಹೇಳಿದರು !ನಾನು ಸತ್ಯ ನಂಬಿದೆ ಇರಬಹುದು ಎಂದು !

ನಂತರ ನನ್ನ ಸಂಪ್ರಬಂಧವನ್ನು ಪ್ರಚೇತ ಬುಕ್ ಪಬ್ಲಿಷರ್ಸ್ ಪ್ರಕಟ ಮಾಡಿದರು ,ಅದು ಸಾಕಷ್ಟು ಯಶಸ್ವಿ ಅಯ್ತಿ ಕೂಡ .ನಷ್ಟ ಆಗಲಿಲ್ಲ ಬದಲಿಗೆ ಲಾಭ ತಂದು ಕೊಟ್ಟಿತ್ ತುಕೂಡ

ಈ ಪುಸ್ತಕವನ್ನು ಅವರು ನವಕರ್ನಾಟಕ ಮಳಿಗೆಗಳಲ್ಲೂ ಮಾರಾಟಕ್ಕೆ ಹಾಕಿದ್ದರು ಅಲ್ಲಿ ಕೂಡ ಸಾಕಷ್ಟು ಪುಸ್ತಕಗಳು ಮಾರಾಟವಾಗಿವೆ .


ಒಂದಿನ ನಾನು ಮಂಗಳೂರಿನ ನವಕರ್ನಾಟಕ ಮಳಿಗೆಗೆ ಹೋದೆ ಆಗ ನನ್ನ ಎದುರಿನಲ್ಲಿಯೇ ಇಬ್ಬರು ನನ್ನ ಪುಸ್ತಕವನ್ನು ಕೇಳಿದರು.ಅಲ್ಲಿ ಪುಸ್ತಕಪ್ರತಿ ಮುಗುದಿತ್ತು .ಆಗ ಅಲ್ಲಿನ ಮ್ಯಾನೇಜರ್ ಅವರು ಮೇಡಂ ನೀವು ಈ ಪುಸ್ತಕವನ್ನು ನಮ್ಮ          ನವ ಕರ್ನಾಟಕ ಪಬ್ಲಿಕೇಶನ್ ನಲ್ಲಿ ಪ್ರಕಟ ಮಾಡಬೇಕಿತ್ತು .ಇದಕ್ಕೆ ಇನ್ನೂ ಹೆಚ್ಚು ವ್ಯಾಲ್ಯೂ ಇರುತ್ತಿತ್ತು ನಿಮ್ಮ ಈ ಪುಸ್ತಕಕ್ಕೆತುಂಬಾ ಬೇಡಿಕೆ ಇದೆ ಎಂದು" ಹೇಳಿದರು ಆಗ ನಾನು ನವ ಕರ್ನಾಟಕ ದವರು ಪಿ ಎಚ್ ಡಿ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸುವುದಿಲ್ಲವಂತೆ !ಎಂದು ಹೇಳಿದೆ .ಹಾಗೆ ಹೇಳಿದ್ದು ಯಾರು ?ನಿಮಗೆ ಯಾರೋ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಿದ್ದಾರೆ,ನವಕರ್ನಾಟಕ ಪ್ರಕಾಶಕರು ಸಂಶೋಧನಾ ಕೃತಿಗಳಿಗೆ ಮೊದಲ ಆದ್ಯತೆ ನೀಡುತ್ತಾರೆ ಎಂದು ಹೇಳಿದರು !

ನಾನು ಮತ್ತೆ ಮೋಸ ಹೋಗಿದ್ದೆ !ಏನು ಮಾಡುದು ಹೀಗೆ ಕಾಲೆಳೆಯುವ ಮಂದಿ ಇರುತ್ತಾರೆ..ಏನುಮಾಡುವುದು !ಆದರೂ ತಕ್ಷಣಕ್ಕೆ ತೀರಾ ಸತ್ಯ ಅನಿಸುವ ಹಾಗೆ ಹೇಳಿದಾರಿ ತಪ್ಪಿಸುವ ಉಪಾಯಗಳು ಇವರಿಗೆ ಹೇಗೆ ನೆನಪಾಗುತ್ತವೆ ಅಂತ ಅಚ್ಹ್ಕಾರಿ ಆಗುತ್ತದೆ ಬಹುಶ ಇಂಥವರು ಸದಾ ಇದೆ ಮಾಡುತ್ತಿರುತ್ತಾರೆ ಹಾಗಾಗಿ ಅವರಿಗೆ ಅನಾಯಾಸವಾಗಿ ಇಂಥ ಟ್ರಿಕ್ ಗಳು ಹೊಳೆಯುತ್ತವೆ ಇರಬೇಕು
ಆಲದ ಮರ ಸೊಂಪಾಗಿ ಬೆಳೆದು ಮೃಗ ಪಕ್ಷಿಗಳಿಗೆ ಆಶ್ರಯ ನೀಡುತ್ತದೆ ನೆರಳನ್ನೂ ನೀಡುತ್ತದೆ ಆದರೆ ಬೇರೆ ಗಿಡ ಮರಗಳನ್ನು ಬೆಳೆಯಲು ಬಿಡುವುದಿಲ್ಲ ಅಂತೆಯೇ ಅನೇಕರು ಇರುತ್ತಾರೆ .ಇಂಥವರ ನಡುವೆಯೂ ಡಾ.ಅಮೃತ ಸೋಮೇಶ್ವರ ,ಡಾ,ವಾಮನ ನಂದಾವರ ,ಡಾ.ಸುಬ್ಬಣ್ಣ ರೈ ಮೊದಲಾದ ಕೆಲವು ವಿದ್ವಾಂಸರು ತಾವು ಬೆಳೆಯುವುದರೊಂದಿಗೆ ಬೇರೆಯವರನ್ನೂ ಬೆಳೆಸುತ್ತಾರೆ ಅನ್ನುವುದು ಸಂತೋಷದ ವಿಚಾರ

ಕೆಲವು ವರ್ಷಗಳ ಮೊದಲು ಬರೆದ ಬರಹವಿದು

ನನ್ನ ಪುಸ್ತಕಗಳು


 

ಭೂತಾರಾಧನೆ ದೈವಾರಾಧನೆಗೆ ಯಾರಿಂದ ಅಪಚಾರ ಆಗುತ್ತಿದೆ?

 ಭೂತಾರಾಧನೆ ದೈವಾರಾಧನೆಗೆ ಯಾರಿಂದ  ಅಪಚಾರ ಆಗುತ್ತಿದೆ?


ಮೊದಲಿಗೆ ದೈವವನ್ನು ಕಾಡಿನ ಮರದ ಕೆಳಗೆ ಕಲ್ಲು ಹಾಕಿ ನಂಬುತ್ತಿದ್ದರು.ವರ್ಷಕ್ಕೊಮ್ಮೆ ಅಲ್ಲಿಗೆ ಹೋಗಿ ಕೋಲ ಕಟ್ಟಿ ಆರಾಧನೆ ಮಾಡುತ್ತಿದ್ದರು
ದೈವಗಳಿಗೆ ಮೂರ್ತ ರೂಪ/ ಮೂರ್ತಿಗಳು ಇರಲಿಲ್ಲ
ಈಗ ಊರು ನಡುವೆ ಮನೆ ಮುಂದೆ ಕೂಡ ದೈವಸ್ಥಾನಗಳ ನಿರ್ಮಾಣ ಆಗಿದೆ, ಮೂರ್ತಿಗಳ ಪ್ರತಿಷ್ಠಾಪನೆ ಕೂಡ ಆಗಿದೆ

ಮೊದಲು ರಾತ್ರಿ ಮಾತ್ರ ಕೋಲ ಆಗುತ್ತಿತ್ತು,ಈಗ ನಡು ಮಧ್ಯಾಹ್ನ ಕೂಡ ಆಗುತ್ತಿದೆ

ಮೊದಲು ಅಡಿಕೆ ಹಾಳೆಯ ಮೊಗವನ್ನು ಸ್ಥಳದಲ್ಲಿಯೇ ತಯಾರು ಮಾಡಿ ಬಳಸುತ್ತಿದ್ದರು.ಕೇಪುಳ ಹೂ, ಪಾದೆ ಹೂವಿನಂತಹ ಕಾಡಿನಲ್ಲಿ ಸಿಗುವ ಹೂಗಳನ್ನು ಬಳಸುತ್ತಿದ್ದರು.ಆರತಿ ಮಾಡುವ ಪದ್ಧತಿ ಇರಲಿಲ್ಲ ಧೂಪ ಕರ್ಪೂರ ದ ಬಳಕೆ ಇರಲಿಲ್ಲ.ತೆಂಬರೆ ಹೊರತಾಗಿ ಬೇರೆ ವಾದ್ಯಗಳ ಬಳಕೆ ಇರಲಿಲ್ಲ .
ಸಂಪೂರ್ಣವಾಗಿ ತೆಂಗಿನ ತಿರಿಯ ಅಲಂಕಾರ ಇರುತ್ತಿತ್ತು.
ಆಯಾಯ ದೈವಗಳಿಗೆ ಅವರದ್ದೇ ಆದ ಮುಖವರ್ಣಿಕೆ ಇತ್ತು
ಯಕ್ಷಗಾನದ ನಾಟಕದ ದೇವ ದೇವತೆಗಳಂತೆ ವೇಷ ಭೂಷಣಗಳನ್ನು ಧರಿಸುತ್ತಿರಲಿಲ್ಲ.

ಈಗ ಕೆಲವು ದೈವಗಳ ಫೋಟೋ ನೋಡುವಾಗ ದೈವವಾ? ಯಕ್ಷಗಾನ/ ನಾಟಕದ ದೇವತೆಗಳು ಪಾತ್ರಗಳಾ ಎಂದು ತಿಳಿಯದಾಗಿದೆ . ಮೊದಲು ದೈವಗಳನ್ನು ಶಿವನ ಅಥವಾ ವಿಷ್ಣು ವಿನ ಅವತಾರ ಎಂದೋ ಅಂಶ ಎಂದೋ ಹೇಳುತ್ತಿರಲಿಲ್ಲ..ಈಗ ಎಲ್ಲ ದೈವಗಳೂ ಪುರಾಣ ದೇವತೆಗಳಾಗಿವೆ.ಉದಾ ತನ್ನಿ ಮಾನಿಗ ಆದಿ ಮಾಯೆಯಾಗಿ ಕೊರತಿ ಪಾರ್ವತಿ ದೇವಿಯಾಗಿ, ಉಳ್ಳಾಲ್ತಿ ದುರ್ಗೆ ಆಗಿ,ಪಿಲಿ ಭೂತ ವ್ಯಾಘ್ರ ಚಾಮುಂಡಿಯಾಗಿ, ಚಾಮುಂಡೇಶ್ವರಿ ಆಗಿ ಲೆಕ್ಕೇಸಿರಿ  ರಕ್ತೇಶ್ವರಿ ಆಗಿ  ಅಜ್ಜಿ ಭೂತ ಮಹಾ ಲಕ್ಷ್ಮೀ  ಆಗಿ
ಬೆರ್ಮೆರ್ ಬ್ರಹ್ಮ ಲಿಂಗೇಶ್ವರ ಆಗಿ ಸಮೀಕರಣಗೊಂಡಿದ್ದಾರೆ
ಇಲ್ಲಿ ಅವತಾರದ ಪರಿಕಲ್ಪನೆಯೇ ಇರಲಿಲ್ಲ..ಈಗ ಎಲ್ಲ ದೈವಗಳೂ ಅವತಾರ ಎತ್ತಿದ ಪುರಾಣ ದೇವತೆಗಳೇ ಆಗಿದ್ದಾರೆ. 
ಕಾಡಿನ ಮರದ ಅಡಿಯಲ್ಲಿ ಕಲ್ಲು ಹಾಕಿ ಆರಾಧಿಸಲ್ಪಡುತ್ತಿದ್ದ ದೈವಗಳಿಗೆ ಭವ್ಯವಾದ ಮಂದಿರಗಳು ನಿರ್ಮಾಣ ಆಗಿ  ಬ್ರಹ್ಮ ಕಲಶ ವೇದೋಕ್ತ ಹೋಮ ಹವನಗಳು ಸತ್ಯನಾರಾಯಣ ಪೂಜೆಗಳು ಆಗುತ್ತಿವೆ 
ಇವೆಲ್ಲವೂ ಬದಲಾವಣೆಯಾ ಅಥವಾ ಅಪಚಾರವಾ ?

ಈಗ ಅನೇಕ ಕಡೆ ದೈವಗಳು ಯಕ್ಷಗಾನ ಬಯಲಾಟದ ವೇಷಗಳಂತೆ ಕಾಣಿಸುತ್ತವೆ.ಪಾಡ್ದನಗಳನ್ನು ಹಾಡಲು ತಿಳಿದವರು ಸಂಖ್ಯೆ ತೀರಾ ಕಡಿಮೆ ಆಗಿದ್ದು ಬೆರಳೆಣಿಕೆಯಷ್ಟು ಮಂದಿ ಮಾತ್ರ ತಿಳಿದಿದ್ದಾರೆ
ಮೊದಲು ಪಾಡ್ದನ ಹಾಡುತ್ತಾ ಕುಣಿಯುತ್ತಿದ್ದರು ಸಿನಿಮಾ ಅಥವಾ ಇತರೆ ಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕುತ್ತಿರಲಿಲ್ಲ
ಈಗ ವಾದ್ಯಗಳಿಲ್ಲದೆ ಕೋಲವೇ ನಡೆಯುವುದಿಲ್ಲ.
ಸಾವಿರದೊಂದು ದೈವಗಳ ಕೋಲದಲ್ಲಿ ಪಾಡ್ದನ ಬಿಡಿ ಹತ್ತು ದೈವಗಳ ಹೆಸರನ್ನು ಕೂಡ ಹೇಳದೆಯೇ ಅರ್ಧ ಗಂಟೆಯಲ್ಲಿ ಮುಗಿಸುತ್ತಾರೆ

ಇವೆಲ್ಲವೂ ಬದಲಾವಣೆಯಾ ಅಥವಾ ಅಪಚಾರವಾ? ತಿಳಿದವರು ಹೇಳಬೇಕು

ಇನ್ನು ದೈವಗಳು ಯಾರೊಬ್ಬರ ಸೊತ್ತಲ್ಲ.ದೈವಗಳ ಕಥೆಯನ್ನು ದೈವಗಳ ಪಾತ್ರವನ್ನು ಸಿನಿಮಾ,ನಾಟಕ, ಯಕ್ಷಗಾನ ಬಯಲಾಟಗಳಲ್ಲಿ ತೋರಿಸಬಾರದು ಎನ್ನುವುದು ಸರಿಯಲ್ಲ.. ದೈವಗಳನ್ನು ಕೆಟ್ಟದಾಗಿ ತೋರಿಸಿ ಅವಹೇಳನ ಮಾಡಬಾರದು ಎಂದರೆ ಒಪ್ಪಿಕೊಳ್ಳಲೇ ಬೇಕಾದ ಮಾತು

ಮೊದಲು ಭಾಷಿಕವಾಗಿ ಮತ್ತು ಭೌಗೋಳಿಕವಾಗಿ ತಳುನಾಡು ದ್ವೀಪ ಸದೃಶವಾಗಿತ್ತು.ಹಾಗಾಗಿ ಇಲ್ಲಿನ ದೈವದ ಆರಾಧನೆ ಹೊರಜಗತ್ತಿಗೆ ಹೆಚ್ಚು ತೆಗೆದುಕೊಂಡಿರಲಿಲ್ಲ
ಈಗ ಪರಿಚಯ ಆಗಿದೆ
ಹಾಗಾಗಿ ದೈವಗಳು ಪಾತ್ರವಾಗಿ ಇರುವ ಸಿನಿಮಾ, ಧಾರಾವಾಹಿಗಳು ಆರಂಭವಾಗಿವೆ
ಕಾಂತಾರ ಸಿನಿಮಾಕ್ಕೆ ಮೊದಲೇ ಅನೇಕ ಸಿನಿಮಾಗಳಲ್ಲಿ,ನಾಟಕ ಯಕ್ಷಗಾನ ಬಯಲಾಟಗಳಲ್ಲಿ ದೈವಗಳು ಪಾತ್ರಗಳು ಬಂದಿವೆ
ನಾನು ಪದವಿ ಓದುತ್ತಿದ್ದ ಕಾಲದಲ್ಲಿ ಎಂದರೆ ಮೂವತ್ತು ವರ್ಷಗಳ ಹಿಂದೆಯೇ ಛದ್ಮವೇಷ ಸ್ಪರ್ಧೆಯಲ್ಲಿ ಭೂತಕೋಲವನ್ನು ಮಾಡಿದ್ದರು.ಆಗ ಈಗಿನಂತೆ ಮೊಬೈಲ್,face book , WhatsApp ಗಳು ಇರಲಿಲ್ಲ
ವಿರೋಧವೂ ಬಂದಿರಲಿಲ್ಲ

ದೈವಗಳನ್ನು ಅವಹೇಳನಕಾರಿಯಾಗಿ ದೈವದ ಪಾವಿತ್ರ್ಯಕ್ಕೆ ಧಕ್ಕೆಯಾಗದಂತೆ ಸಿನಿಮಾ ಧಾರಾವಾಹಿ, ನಾಟಕ, ಯಕ್ಷಗಾನ ಬಯಲಾಟಗಳಲ್ಲಿ ದೈವಗಳ ಪಾತ್ರವನ್ನು ತಂದರೆ ಅದು ದೈವಾರಾಧನೆಗೆ ಹೇಗೆ ಅಪಚಾರ ಆಗುತ್ತದೆ? ಎಂದು ನನಗಂತೂ ಗೊತ್ತಾಗುತ್ತಿಲ್ಲ
ಇನ್ನು ಕಾಂತಾರ ಸಿನಿಮಾಕ್ಕೆ ಸಂಬಂಧಿಸಿದಂತೆ ಶಿವನ ತಾಯಿ ಕೆಟ್ಟ ಪದಗಳನ್ನು ಬಳಸಿ ಬೈದಿದ್ದಾರೆ,ಹಿಡಿಸೂಡಿಯಲ್ಲಿ ಹೊಡೆದಿದ್ದಾರೆ.ದೈವ ಕಟ್ಟುವವರಿಗೆ ಹೀಗೆ ಮಾಡುವಂತಿಲ್ಲ‌ಇದು ಅಪಚಾರ ಎಂದು ದಯಾನಂದ ಕತ್ತಲಸಾರ್ ಹೇಳಿದ್ದು ನೋಡಿದೆ
ಕಾಂತಾರ ಸಿನಿಮಾದಲ್ಲಿ ಶಿವನ ಪಾತ್ರ ಮಾಡಿದ ರಿಷಭ್ ಶೆಟ್ಟಿಯವರು ದೈವವನ್ನು ಕಟ್ಟಿಲ್ಲ.ದೈವದ ಅಭಿನಯ ಮಾತ್ರ ಮಾಡಿದ್ದು.ಸಿನೇಮದ ಕಥೆಯಲ್ಲಿ ಕೂಡ ಶಿವ  ಬೇಜವಾಬ್ದಾರಿಯಿಂದ ಉಂಡಾಡಿ ಗುಂಡನಂತೆ ಇದ್ದಾಗ ತಾಯಿಯಿಂದ ಬೈಗುಳ ಪೆಟ್ಟು ತಿಂದಿರ್ತಾನೆ ,ಭೂತಕಟ್ಟಲು ದೀಕ್ಷೆ ಪಡೆದು ನಂತರವಲ್ಲ.ಹಾಗಾಗಿ ಇದು ಅರ್ಥ ರಹಿತ ಆರೋಪ.
ಕಾಂತಾರ ಸಿನಿಮಾದಲ್ಲಿ ಎಲ್ಲೂ  ದೈವಾರಾಧನೆಗೆ ಅಪಚಾರವಾಗಿಲ್ಲ.ಹಾಗಿರುವಾಗ ಕಾಂತಾರ ಫ್ರೀಕ್ವೆಲ್ ನಲ್ಲಿ ದೈವಾರಾಧನೆಯನ್ನು ತೋರಿಸಬಾರದು ಎನ್ನುವುದು ಸರಿಯಲ್ಲ..
ಭೂತಕೋಲದಲ್ಲಿ ಕೂಡ ಆಯಾಯ ದೈವಗಳ ಅಭಿನಯ ಇದೆ.ಇದೊಂದು ಧಾರ್ಮಿಕ ರಂಗಭೂಮಿ ಕೂಡ
ಇದನ್ನು  ಇತರ ಮಾಧ್ಯಮಗಳಲ್ಲಿ ಬಳಸಬಾರದು ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ..ದೈವಗಳ ಪಾವಿತ್ರ್ಯಕ್ಕೆ, ಘನತೆಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಬಹುದು.ಒಂದೊಮ್ಮೆ ದೈವಗಳು ಅವಹೇಳನ ಇದ್ದರೆ ವಿರೋಧಿಸಬಹು ಅಷ್ಟೇ..ಅದು ಬಿಟ್ಟು ಮಾಡಬಾರದು ಎಂದು ತಾಕೀತು ಮಾಡುವ ಹಕ್ಕು ಯಾರಿಗೂ ಇಲ್ಲ.. ಅದನ್ನು ಕೇಳುವವರೂ ಇರಲಾರರು
ಇನ್ನು ವಿತ್ತಂಡ ವಾದ ಮಾಡುವುದಾದರೆ ದೈವ ಕಟ್ಟುವವರು ಇತರ ಕೆಲಸ ಮಾಡುವುದು ಸರಿಯಲ್ಲ.. ಅಲ್ಲಿ ಮೇಲಧಿಕಾರಿಗಳು ಬೈಯುದಿಲ್ಲವೇ? ಎನ್ನಬಹುದು . ದುಡ್ಡಿಗಾಗಿ ಇತರ ಕೆಲಸ ಮಾಡುವುದು ತಪ್ಪು ಎನ್ನಬಹುದು ಅದೇ ರೀತಿಯಲ್ಲಿ ಮೈಕ್ ಹಿಡಿದು ಭಾಷಣ ಮಾಡುವುದೂ ಸರಿಯಲ್ಲ.ಸಂಘ ಸಂಸ್ಥೆ ಅಕಾಡೆಮಿಗಳ ಅಧ್ಯಕ್ಷರಾಗಿ ಅಧಿಕಾರ ಪಡೆಯುವುದು ಸರಿಯಲ್ಲ. ಎಂದು ವಿತ್ತಂಡ ವಾದ ಮಾಡಬಹುದು.

ಈ ಹಿಂದೆ 2016 ರಲ್ಲಿ  ಹಿರಿಯರಾದ ಎಚ್ ಬಿ ಎಲ್ ರಾಯರು ದೈವಗಳ ಅಣಿ ಅರದಳ ವೇಷ ಭೂಷಣಗಳ ಸಾಕ್ಷ್ಯ ಚಿತ್ರ ಮಾಡಿ ಕಾರ್ಯಾಗಾರ ಮಾಡಿ ಪುಸ್ತಕ ಪ್ರಕಟಿಸಲು ಹೊರಟಾಗ ಕೂಡ ತೀವ್ರ ವಿರೋಧ ಬಂದಿತ್ತು.ಅವರದನ್ನೆಲ್ಲ ಲೆಕ್ಕಿಸದೆ ಕಾರ್ಯಾಗಾರ ಮಾಡಿ ಭೂತಾರಾಧನೆಯ ಅಣಿ ವೈವಿಧ್ಯಗಳ ,ವೇಷ ಭೂಷಣ ಗಳು ವಿವಿಧ ರೀತಿಯ ಮುಖ ವರ್ಣಿಕೆಗಳನ್ನು ಹಾಕಿಸಿ ಫೋಟೋ ತೆಗೆದು ದಾಖಲಿಸಿ ಪ್ರಕಟಿಸಿದೆ ಗ್ರಂಥ ಅಣಿ ಅರದಳ ಸಿರಿ ಸಿಂಗಾರ ಈಗ ಭೂತಾರಾಧನೆಯ ಪರಿಕರಗಳು ಕುರಿತಾಗಿ ಸಚಿತ್ರ ಮಾಹಿತಿ ಇರುವ ರೆಫರೆನ್ಸ್ ಗ್ರಂಥವಾಗಿದೆ

ಇದು ಹೀಗೆಯೇ ಮುಂದುವರೆದರೆ ದೈವಗಳ ಕೋಲದ ವೀಡಿಯೊ ಮಾಡಬಾರದು, ಫೋಟೋ ತೆಗೆಯಬಾರದು, ಭೂತ ಕಟ್ಟುವವರ ಹೊರತಾಗಿ ಇತರರು ಅಧ್ಯಯನ ಮಾಡಬಾರದು,ಪುಸ್ತಕ ಬರೆಯಬಾರದು, ಉಪನ್ಯಾಸ ನೀಡಬಾರದು, ಕೊನೆಗೆ ಹೊರಗಿನವರು ನೋಡಲೂ ಬಾರದು ಎಂದು ಹೇಳಿಯಾರು..

ಡಾ.ಲಕ್ಷ್ಮೀ ಜಿ ಪ್ರಸಾದ
ಲೇ : ಕರಾವಳಿಯ ಸಾವಿರದೊಂದು ದೈವಗಳು

Mobile 9480516684

ಭೂತಕೋಲ ಎಂದರೇನು

 ತುಳುನಾಡಿನ ಭೂತಾರಾಧನೆ/ದೈವಾರಾಧನೆ ವಿಶಿಷ್ಟ ಆರಾಧನಾ ಪದ್ಧತಿ.

ಇಲ್ಲಿನ ತುಳು ಭೂತ ಪದಕ್ಕೆ ಕನ್ನಡ ಸಂಸ್ಕೃತ ಶಬ್ದಕೋಶದಲ್ಲಿ ಅರ್ಥ ಹುಡುಕಬಾರದು.ಅದರಲ್ಲಿ ಭೂತ ಪ್ರೇತ ಪಿಶಾಚಿ ಶಿವ ಗಣ ಇತ್ಯಾದಿ ಅರ್ಥಗಳಿವೆ
ಆದರೆ ತುಳುವರ ಭೂತಗಳು ಪ್ರೇತ ಪಿಶಾಚಿಗಳಲ್ಲ.ಇವರು ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸುವ ಮಣ್ಣಿನ ಸತ್ಯಗಳು ಎಂದು ಕರೆದುಕೊಳ್ಳುವ ಶಕ್ತಿಗಳು ಇವರು .
ಪೂತಂ ಎಂದರೆ ಪವಿತ್ರವಾದ ಶಕ್ತಿ ಎಂಬ ಪದವೇ ಕಾಲಾಂತರದಲ್ಲಿ ಬೂತ ಆಗಿ ಭೂತ ಆಗಿರುವ ಸಾಧ್ಯತೆ ಇದೆ.ಕೊಡವರಲ್ಲಿ ಭೂತಾರಾಧನೆ ಪ್ರಚಲಿತವಿದ್ದು ಅವರು ಅದನ್ನು ಪೂದ ತೆರೆ ಎನ್ನುತ್ತಾರೆ ಇಲ್ಲಿ ಬೂತ > ಪೂದ ಆಗಿದೆ
ಅಥವಾ ಈ ಆರಾಧ್ಯ ಶಕ್ತಿಗಳು ಈ ಹಿಂದೆ ಈ ಮಣ್ಣಿನಲ್ಕಿ ಹುಟ್ಟಿ ಕಾರಣಾಂತರಗಳಿಂದ ದೈವತ್ವ ಪಡೆದವರಾಗಿದ್ದಾರೆ ಹಾಗಾಗಿ ಈ ಹಿಂದೆ ಇದ್ದವರು ಎಂಬ ಅರ್ಥದಲ್ಲೂ ಭೂತ ಪದ ಬಳಕೆಗೆ ಬಂದಿರಬಹುದು ಎಂದು ಡಾ.ಅಮೃತ ಸೋಮೇಶ್ವರರು ಹೇಳಿದ್ದಾರೆ
ಭೂತ ,ದೈವ ತೆಯ್ಯಂ ,ದೇವರು ಎಲ್ಲವೂ ಒಂದೇ ಅರ್ಥವನ್ನು ಕೊಡುವ ಪದಗಳು
ಕನ್ನಡ ಪರಿಸರದಲ್ಲಿ ದೈವ ಎಂಬ ಪದ ಬಳಕೆ ಹೆಚ್ಚು ಪ್ರಚಲಿತವಿತ್ತು.ಮಲೆಯಾಳದಲ್ಲಿ ತೆಯ್ಯಂ ಎನ್ನುತ್ತಾರೆ ಕೊಡವರು ಪೂದ ಎನ್ನುತ್ತಾರೆ ತುಳವರು ಭೂತ,ದೈವ ಎರಡೂ ಪದಗಳ ಬಳಕೆ ಮಾಡಿದ್ದಾರೆ

ಆಯಾಯ ದೈವಗಳಿಗೆ ಅವರವರದ್ದೇ ಆದ ಪಾಡ್ದನ,ಸಂಧಿ ಬೀರ , ನುಡಿಗಟ್ಟು ಮುಖ ವರ್ಣಿಕೆ ,ಮೊಗ ಆಯ ಧ ವೇಷ ಭೂಷಣಗಳು ಇರುತ್ತವೆ ಇವನ್ನು ಧರಿಸಿ ನರ್ತಿಸಿ ಆಯಾಯ ದೈವಗಳಿಗೆ ಆರಾಧನೆ ಮಾಡುವುದನ್ನು ಭೂತ ಕೋಲ ಎಂದು ಕರೆಯುತ್ತಾರೆ 

ಕೋಲ ಎಂಬುದಕ್ಕೆ ಪ್ರತಿಕೃತಿ ಎಂಬ ಅರ್ಥವೂ ಇದೆ 

ಇದರಲ್ಲಿ ಹದಿನಾರು ಕಟ್ಟುಗಳು/ ರೀತಿ ರಿವಾಜುಗಳು / ಹಂತಗಳು ಇರುತ್ತವೆ

ಇದನ್ನು ಪದಿವಾಜಿ ಕಟ್ಟು ಕಟ್ಟಲೆಗಳು ಎಂದು ಕರೆಯುತ್ತಾರೆ 

ಇನ್ನು ತುಳುನಾಡಿನಲ್ಲಿ ಯಾರಿಗೆ ಯಾವಾಗ ಹೇಗೆ ಯಾಕೆ ದೈವತ್ವ ಪ್ರಾಪ್ತಿಯಾಗುತ್ತದೆ ಎಂಬುದಕ್ಕೆ ಸಿದ್ಧ ಸೂತ್ರವಿಲ್ಲ.ಸಾಮಾನ್ಯವಾಗಿ ಎಲ್ಲರಂತೆ ಮಾನವರಾಗಿ ಹುಟ್ಡಿ ಅತಿಮಾನುಷ ಸಾಹಸ ಮೆರೆದವರು ಮಾಯಕಕ್ಕೆ ಸಂದು ದೈವತ್ವ ಪಡೆದು ದೈವಗಳಾಗಿ ಆರಾಧನೆ ಪಡೆದಿದ್ದಾರೆ ,

ಕೋಟಿ -ಚೆನ್ನಯರು,ಮುದ್ದ -ಕಳಲರು ಎಣ್ಮೂರು ದೆಯ್ಯು -ಕೇಲತ್ತ ಪೆರ್ನೆ,ಕಾನದ- ಕಟದರು ಕೋಟೆದ ಬಬ್ಬು- ತನ್ನಿ ಮಾಣಿಗ ಮೊದಲಾದ ಅತಿಮಾನುಷ ಸಾಹಸಿಗಳು  ದೈವತ್ವ ಪಡೆದು ಆರಾಧಿಸಲ್ಪಡುತ್ತಾರೆ.ಕೋಟಿಚೆನ್ನಯ,ಕಾನದ ಕಟದ,ಮುದ್ದ ಕಳಲ, ಎಣ್ಮೂರು ದೆಯ್ಯು ಕೇಲತ್ತ ಪೆರ್ನೆ,ಕಾಂತಾ ಬಾರೆ ಬೂದಾಬಾರೆಮೊದಲಾದವರು ಈ ರೀತಿಯಲ್ಲಿ ದೈವತ್ವವನ್ನು ಪಡೆದ ಶೂರರು 
ಪ್ರಧಾನ ದೈವಗಳನ್ನು ನೆಲೆಗೊಳಿಸಿ, ಅನನ್ಯ ಭಕ್ತಿಯಿಂದ ಆರಾಧನೆ ಮಾಡಿದ ಅನೇಕರು ಅದೇ ದೈವದ ಸಾನ್ನಿಧ್ಯ ಸೇರಿ ದೈವತ್ವವನ್ನು ಪಡೆದು ಆರಾಧಿಸಲ್ಪಡುತ್ತಾರೆ
ವೀರಭದ್ರನನ್ನು ಹಿರಿಯಡ್ಕದಲ್ಲಿ ನೆಲೆಗೊಳಿಸಿ ಆರಾಧಿಸಿದ ಅಡ್ಕತ್ತಾಯ ಎಂಬ ಬ್ರಾಹ್ಮಣ ದೈವವಾಗಿ ಆರಾಧನೆ ಪಡೆಯುತ್ತಾರೆ
ಸುಜೀರ್ ನಲ್ಲಿ ವೈದ್ಯನಾಥ ದೈವ ಆರಾಧನೆ ಶುರು ಮಾಡಿದ ಜಾನು ಬಐದ್ಯರಉ ದೈವತ್ವವನ್ನು ಪಡೆದು ಆರಾಧಿಸಲ್ಪಡುತ್ತಾರೆ
ತನ್ನನ್ನು ಅನನ್ಯ ಭಕ್ತಿಯಿಂದ ಆರಾಧನೆ ಮಾಡಿದ ಅಕ್ಕ ಅರಸು ಎಂಬ ಸ್ತ್ರೀ ಯನ್ನು ಮಾಯ ಮಾಡಿ ಲೆಕ್ಕೇಸಿರಿ ದೈವವು ತನ್ನ ಸೇರಿಗೆಗೆ ಸೇರಿಸಿ ದೈವತ್ವವನ್ನು ದಯಪಾಲಿಸುತ್ತದೆ
ಬದಿಯಡ್ಕ ಸಮೀಪದ ಕಾರಿಂಜೇಶ್ಶರ ದೇವಾಲಯವನ್ನು ಕಟ್ಟಿದ ಕಾರಿಂಜೆತ್ತಾಯ ಎಂಬ ಬ್ರಾಹ್ಮಣ ದೈವತ್ವವನ್ನು ಪಡೆದು ಆರಾಧಿಸಲ್ಪಡುತ್ತಾರೆ
ಚಿಕ್ಕ ಮಗಳೂರಿನ ಬೈಲ ಕುಪ್ಪೆ ಎಂಬಲ್ಲಿ ದೇವರ ಪೂಜಾರಿ ಪಂಜುರ್ಲಿ ಎಂಬ ದೈವದ ಆರಾಧನೆ ಇರುವ ಬಗ್ಗೆ ರೂಪೇಶ್ ಪೂಜಾರಿಯವರು ತಿಳಿಸಿದ್ದಾರೆ.ಈ ದೈವ ಮೂಲತಃ ಓರ್ವ ಬ್ರಾಹ್ಮಣ ಅರ್ಚಕ, ಪಂಜುರ್ಲಿ ದೈವವನ್ನು ಅನನ್ಯ ಭಕ್ತಿಯಿಂದ ಆರಾಧನೆ ಮಾಡುತ್ತಿದ್ದರು.ಕಾಲಾಂತರದಲ್ಲಿ ಪಂಜುರ್ಲಿ ದೈವದ ಅನುಗ್ರಹಕ್ಕೆ ಪಾತ್ರರಾಗಿ ದೈವತ್ವ ಪಡೆದು ದೇವರ ಪೂಜಾರಿ ಪಂಜುರ್ಲಿ ಎಂಬ ಹೆಸರಿನಲ್ಲಿ ಆರಾಧಿಸಲ್ಪಡುತ್ತಾರೆ.
ಇಂತಹದ್ದೇ ಒಂದು ವಿಶಿಷ್ಟ ಕಾರಣದಿಂದ ದೈವತ್ವವನ್ನು ಪಡೆದ ದೈವ ಕೊಂಡೇಲ್ತಾಯ


ಇನ್ನು ತುಳುನಾಡಿನಲ್ಲಿ ಎಷ್ಟು ದೈವಗಳಿಗೆ ಆರಾಧನೆ ಇದೆ ಎಂಬುದೊಂದು ಪ್ರಶ್ನೆ.ಇದಕ್ಕೆ ಇದಮಿತ್ಥಂ ಎಂದು ಉತ್ತರಿಸುವುದು ಕಷ್ಟ.

ತುಳು ಸಂಸ್ಕೃತಿ‌ ಕುರಿತು ಅಧ್ಯಯನ‌ಮಾಡಿದ ಡಾ
ಬಿ ಎ ವಿವೇಕ ರೈಗಳು 260 ದೈವಗಳ ಹೆಸರನ್ನು ಸಂಗ್ರಹಿಸಿ‌ಅವರ ಪಿಎಚ್ ಡಿ ನಿಬಂಧ ತುಳು ಜನಪದ ಸಾಹಿತ್ಯ ದಲ್ಲಿ ನೀಡಿದ್ದಾರೆ.ಇದನ್ನು ಪರಿಷ್ಕರಿಸಿ ಡಾ.ಚಿನ್ನಪ್ಪ ಗೌಡರು ಅವರ ಪಿಎಚ್ ಡಿ ನಿಬಂಧ ಭೂತಾರಾಧನೆ- ಒಂದು ಜಾನಪದೀಯ ಅಧ್ಯಯನದಲ್ಲಿ ಮುನ್ನೂರು ದೈವಗಳ ಹೆಸರಿನ ಪಟ್ಟಿ ನೀಡಿದ್ದಾರೆ.ರಘುನಾಥ ವರ್ಕಾಡಿಯವರು 404 ದೈವಗಳ ಹೆಸರನ್ನು ಸಂಗ್ರಹಿಸಿದ್ದಾರೆ ಅದರಲ್ಲಿ ಡಾ.ಚಿನ್ನಪ್ಪ ಗೌಡರು ಸಂಗ್ರಹಿಸಿದ ಹೆಸರುಗಳು ಸೇರಿದೆ
ಈ 404 ಸೇರಿದಂತೆ ನನಗೆ 2364 ದೈವಗಳ ಹೆಸರುಗಳು ಸಿಕ್ಕಿವೆ ,

1253 ದೈವಗಳ ಮಾಹಿತಿಯೂ ಸಿಕ್ಕಿದ್ದು  ಕರಾವಳಿಯ ಸಾವಿರದೊಂದು ದೈವಗಳು ಕೃತಿಯಲ್ಲಿ ನನ್ನ ಅರಿವಿಗೆ ನಿಲುಕಿದಂತೆ ನೀಡಿದ್ದೇನೆ


ಇಲ್ಲಿ ಯಾರು ಹೇಗೆ ಯಾಕೆ ದೈವತ್ವವನ್ನು ಪಡೆಯುತ್ತಾರೆ ಎಂಬುದಕ್ಕೆ ಒಂದು ಸಿದ್ಧ ಸೂತ್ರವಿಲ್ಲ
.ಹಿಂದು‌,ಮುಸ್ಲಿಂ ,ಜೈನ ಕ್ರಿಶ್ಚಿಯನ್ ಸೇರಿದಂತೆ ಎಲ್ಲ ಜಾತಿ ಮತಗಳ ಜನರು ದೈವತ್ವ ಪಡೆದು ಆರಾಧಿಸಲ್ಪಡುತ್ತಿದ್ದಾರೆ.ಎಲ್ಲ ಜಾತಿ‌ಮತಗಳ ಜನರೂ  ಇಲ್ಲಿನ ದೈವಗಳ ಆರಾಧನೆ ಮಾಡುತ್ತಾರೆ.ಇಲ್ಲಿ ದೈವಗಳಾಗುವ ಮೊದಲು ಇವರು ಏನಾಗಿದ್ದರು ಯಾರಾಗಿದ್ದರು ?ಎಂಬುದು ಗಣನೆಗೆ ಬರುವುದಿಲ್ಲ.ದೈವಗಳಾದ ನಂತರ ಇವರು ನಮ್ಮನ್ನು ಕಾಯುವ ಶಕ್ತಿಗಳು.ಎಲ್ಲ ದೈವಗಳಿಗೂ ಸಮಾನ ಆದರ, ಗೌರವ ,ಭಕ್ತಿಯ ಆರಾಧನೆ‌.ಹೀಗೆ ಜಾತಿ ಮತಗಳ ಸಾಮರಸ್ಯ ತುಳು ಸಂಸ್ಕೃತಿಯ ವೈಶಿಷ್ಟ್ಯ .

ತುಳುನಾಡಿನಲ್ಲಿ  ದೈವತ್ವ ಪಡೆಯುವ ಅರ್ಹತೆಯನ್ನು ಪಡೆದವರು ಪಡೆದ ಅಂತಿಮ  ಜನ್ಮವೇ ಜೋಗ. ಜೋಗ ಬಿಟ್ಟು ನಂತರ ದೈವ ಆಗುತ್ತಾರೆ .

 


ಡಾ.ಲಕ್ಷ್ಮೀ ಜಿ ಪ್ರಸಾದ್
ಲೇಖಕರು ಕರಾವಳಿಯ ಸಾವಿರದೊಂದು ದೈವಗಳು
ಕನ್ನಡ ಉಪನ್ಯಾಸಕಿ ಸರ್ಕಾರಿ ಪಿಯು ಕಾಲೇಜು 
ಬೆಂಗಳೂರು
ಮೊಬೈಲ್ 9480516684